ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಸಂತೋಷದ ಜೀವನಕ್ಕಾಗಿ ಹುಡುಕಾಟ

ಸಂತೋಷದ ಜೀವನಕ್ಕಾಗಿ ಹುಡುಕಾಟ

ಬಿರುಗಾಳಿ ಜೋರಾಗಿ ಬೀಸ್ತಿತ್ತು. ನನ್ನ ದೋಣಿಗೆ ತೂತು ಬಿದ್ದು ನೀರು ತುಂಬಿಕೊಳ್ತು. ನಾನು ಮೆಡಿಟರೇನಿಯನ್‌ ಸಮುದ್ರದ ಮಧ್ಯೆ ಸಿಕ್ಕಿಹಾಕಿಕೊಂಡಿದ್ದೆ. ತುಂಬ ಭಯ ಆಯ್ತು, ತಕ್ಷಣ ಪ್ರಾರ್ಥನೆ ಮಾಡ್ದೆ. ಪ್ರಾರ್ಥನೆ ಮಾಡಿ ವರ್ಷಗಳೇ ಆಗಿತ್ತು. ನಾನು ಯಾಕೆ ಸಿಕ್ಕಿಹಾಕಿಕೊಂಡೆ ಅಂತ ಯೋಚನೆ ಮಾಡ್ತಿದ್ದೀರಾ? ಬನ್ನಿ ಹೇಳ್ತೀನಿ.

ನನಗೆ ಏಳು ವರ್ಷ ಇದ್ದಾಗ ನಾವು ಬ್ರೆಜಿಲ್‌ನಲ್ಲಿ ಇದ್ವಿ

ನಾನು 1948ರಲ್ಲಿ ನೆದೆರ್‌ಲ್ಯಾಂಡ್‌ನಲ್ಲಿ ಹುಟ್ಟಿದೆ. 1949ರಲ್ಲಿ ಅಪ್ಪ ಅಮ್ಮ ನಮ್ಮನ್ನ ಬ್ರೆಜಿಲ್‌ಗೆ ಕರ್ಕೊಂಡು ಬಂದು ಸಾವೊ ಪೌಲೊ ನಗರದಲ್ಲಿ ಮನೆ ಮಾಡ್ಕೊಂಡ್ರು. ಅವರು ತಪ್ಪದೇ ಚರ್ಚಿಗೆ ಹೋಗ್ತಿದ್ರು. ರಾತ್ರಿ ಊಟ ಆದಮೇಲೆ ಕುಟುಂಬವಾಗಿ ಬೈಬಲ್‌ ಓದುತ್ತಿದ್ವಿ. 1959ರಲ್ಲಿ ಅಮೇರಿಕಾಗೆ ಬಂದು ಮ್ಯಾಸಚೂಸೆಟ್ಸ್‌ ರಾಜ್ಯದಲ್ಲಿ ಮನೆ ಮಾಡ್ಕೊಂಡ್ವಿ.

ನಮ್ಮ ಮನೇಲಿ ಎಂಟು ಜನ. ಅದಕ್ಕೆ ಅಪ್ಪ ಕಷ್ಟಪಟ್ಟು ಕೆಲಸ ಮಾಡಬೇಕಿತ್ತು. ಅಪ್ಪ ಬೇರೆ-ಬೇರೆ ಕೆಲಸ ಮಾಡ್ತಿದ್ರು. ಸೇಲ್ಸ್‌ಮ್ಯಾನ್‌ ಆಗಿ ಕೆಲಸ ಮಾಡಿದ್ದಾರೆ, ರೋಡ್‌ ರಿಪೇರಿ ಕೆಲಸನೂ ಮಾಡಿದ್ದಾರೆ. ಆಮೇಲೆ ಅವರಿಗೆ ಅಂತರಾಷ್ಟ್ರೀಯ ವಿಮಾನ ಕಂಪನಿಯಲ್ಲಿ ಕೆಲಸ ಸಿಕ್ತು. ಅಪ್ಪಾಗೆ ಈ ಕೆಲಸ ಸಿಕ್ಕಿದಕ್ಕೆ ನಮಗೆ ತುಂಬಾ ಖುಷಿಯಾಯ್ತು. ಅಪ್ಪ ಜೊತೆ ಬೇರೆ-ಬೇರೆ ಊರಿಗೆ ಹೋಗಕ್ಕೆ ಅವಕಾಶ ಸಿಕ್ತು.

ನಾನು ಸ್ಕೂಲಲ್ಲಿ ಇದ್ದಾಗ ದೊಡ್ಡವನಾದ ಮೇಲೆ ಏನು ಮಾಡೋದು ಅಂತ ಯೋಚಿಸ್ತಿದ್ದೆ. ನನ್ನ ಸ್ನೇಹಿತರಲ್ಲಿ ಕೆಲವರು ಕಾಲೇಜಿಗೆ ಸೇರ್ಕೊಂಡ್ರು, ಇನ್ನು ಕೆಲವರು ಮಿಲ್ಟ್ರಿಗೆ ಸೇರ್ಕೊಂಡ್ರು. ಆದ್ರೆ ನನಗೆ ಮಿಲ್ಟ್ರಿಗೆ ಸೇರಕ್ಕೆ ಇಷ್ಟ ಇರಲಿಲ್ಲ ಯಾಕಂದ್ರೆ ಯುದ್ಧ ಮಾಡೋದು ಬಿಡಿ ಜಗಳ ಮಾಡೋದನ್ನ ನೋಡಕ್ಕೂ ನನಗೆ ಇಷ್ಟ ಆಗ್ತಿರಲಿಲ್ಲ. ಅದಕ್ಕೆ ನಾನು ಕಾಲೇಜಿಗೆ ಸೇರ್ಕೊಂಡೆ. ಆದ್ರೆ ಅಲ್ಲೂ ಖುಷಿ ಸಿಗಲಿಲ್ಲ. ಸಮಾಜ ಸೇವೆ ಮಾಡಿದ್ರೆ ನನ್ನ ಜೀವನದಲ್ಲಿ ಖುಷಿಯಾಗಿ ಇರ್ತೀನಿ ಅಂತ ನನ್ನ ಮನಸ್ಸು ಹೇಳ್ತಿತ್ತು.

ಕಾಲೇಜ್‌ ಜೀವನ

ಜೀವನದಲ್ಲಿ ಖುಷಿಯಾಗಿರೋಕೆ ಏನು ಮಾಡಬೇಕು ಅಂತ ತುಂಬ ವರ್ಷ ಹುಡುಕಿದೆ

ನಾನು ಕಾಲೇಜಲ್ಲಿ ಮಾನವಶಾಸ್ತ್ರ ತಗೊಂಡೆ. ಯಾಕಂದ್ರೆ ನನಗೆ ಜೀವದ ಹುಟ್ಟು ಹೇಗಾಯ್ತು ಅಂತ ತಿಳ್ಕೊಳಕ್ಕೆ ತುಂಬ ಆಸಕ್ತಿ ಇತ್ತು. ಆದ್ರೆ ಜೀವ ವಿಕಾಸ ಆಯ್ತು ಅಂತ ಟೀಚರ್‌ ಕಲಿಸ್ತಿದ್ರು. ಇದನ್ನ ನಂಬೋಕೆ ತುಂಬ ಕಷ್ಟ ಆಯ್ತು. ಯಾಕಂದ್ರೆ ಅವರು ಹೇಳ್ತಿದ್ದ ಕೆಲವು ವಿಷಯಗಳಿಗೆ ಲಾಜಿಕ್‌ ಇರುತ್ತಿರಲಿಲ್ಲ, ಆಧಾರಗಳೂ ಇರುತ್ತಿರಲಿಲ್ಲ.

ಕಾಲೇಜಲ್ಲಿ ನಮಗೆ ಒಳ್ಳೆ ಗುಣಗಳನ್ನ ಕಲಿಸುತ್ತಿರಲಿಲ್ಲ. ಏನು ಬೇಕಾದ್ರೂ ಮಾಡಿ, ಒಳ್ಳೆ ಮಾರ್ಕ್ಸ್‌ ಮಾತ್ರ ತಗೊಳ್ಳಿ ಅಂತ ಕಲಿಸ್ತಿದ್ರು. ನನ್ನ ಸ್ನೇಹಿತರ ಜೊತೆ ಪಾರ್ಟಿಗೆ ಹೋಗ್ತಿದ್ದೆ, ಡ್ರಗ್ಸ್‌ ತಗೊತಿದ್ದೆ. ಆಗೆಲ್ಲಾ ಒಂಥರಾ ಖುಷಿ ಸಿಗ್ತಿತ್ತು. ಆದ್ರೆ ಅದು ನೀರಿನ ಮೇಲಿರೋ ಗುಳ್ಳೆ ತರ ಇತ್ತು, ಜಾಸ್ತಿ ದಿನ ಇರಲಿಲ್ಲ.

ಸ್ವಲ್ಪ ಸಮಯ ಆದಮೇಲೆ ನಾನು ಅಮೆರಿಕದ ಬೋಸ್ಟನ್‌ ನಗರಕ್ಕೆ ಹೋಗಿ ಕಾಲೇಜಿಗೆ ಸೇರ್ಕೊಂಡೆ, ಎಕ್ಸಾಮ್‌ ಆದಮೇಲೆ ರಜೆಯಲ್ಲಿ ಕೆಲಸಕ್ಕೆ ಸೇರ್ಕೊಂಡೆ. ಆಗ ಮೊದಲನೇ ಸಲ ಒಬ್ಬ ಯೆಹೋವನ ಸಾಕ್ಷಿ ಪರಿಚಯ ಆದ್ರು. ಅವರು ನನಗೆ ದಾನಿಯೇಲ 4ನೇ ಅಧ್ಯಾಯದಲ್ಲಿರೋ “ಏಳು ಕಾಲಗಳ” ಭವಿಷ್ಯವಾಣಿ ಬಗ್ಗೆ ತಿಳಿಸಿದ್ರು. ನಾವೀಗ ಕೊನೇ ದಿನಗಳಲ್ಲಿ ಜೀವಿಸ್ತಾ ಇದ್ದೀವಿ ಅಂತಾನೂ ಹೇಳಿದ್ರು. (ದಾನಿ. 4:13-17) ಅವರ ಜೊತೆ ಬೈಬಲ್‌ ವಿಷಯಗಳನ್ನ ತಿಳಿದುಕೊಳ್ತಾ ಹೋದ್ರೆ ಎಲ್ಲಿ ನನ್ನ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕಾಗುತ್ತೋ ಅನ್ನೋ ಭಯ ಆಯ್ತು. ಅದಕ್ಕೆ ಅವರ ಕೈಯಿಂದ ತಪ್ಪಿಸಿಕೊಳ್ತಿದ್ದೆ.

ಆ ಕಾಲೇಜಲ್ಲಿ ಬೇರೆ ಕೋರ್ಸ್‌ ತಗೊಂಡೆ. ಅದರಿಂದ ನನಗೆ ದಕ್ಷಿಣ ಅಮೆರಿಕದಲ್ಲಿ ಸ್ವಯಂಸೇವೆ ಮಾಡೋಕೆ ಸಹಾಯ ಆಗುತ್ತೆ ಅಂದುಕೊಂಡೆ. ಜನರ ಸೇವೆ ಮಾಡಿದ್ರೆ ನಾನು ಖುಷಿಯಾಗಿ ಇರ್ತೀನಿ ಅಂದುಕೊಂಡೆ. ಆದ್ರೆ ಸ್ವಲ್ಪ ಸಮಯದಲ್ಲೇ ನಾನು ಅಂದ್ಕೊಂಡಿದ್ದೆಲ್ಲ ಸುಳ್ಳಾಯ್ತು. ಅದಕ್ಕೆ ಬೇಜಾರಾಗಿ ಕಾಲೇಜಿಗೆ ಹೋಗೋದನ್ನ ಬಿಟ್ಟುಬಿಟ್ಟೆ.

ಬೇರೆಬೇರೆ ದೇಶಕ್ಕೆ ಹೋಗಿ ಹುಡುಕಿದೆ

1970ರ ಮೇ ತಿಂಗಳಲ್ಲಿ ನೆದೆರ್‌ಲ್ಯಾಂಡ್‌ನಲ್ಲಿರೋ ಆ್ಯಮ್‌ಸ್ಟರ್‌ಡ್ಯಾಮ್‌ ಅನ್ನೋ ಜಾಗಕ್ಕೆ ಹೋದೆ, ಅಲ್ಲಿ ನಮ್ಮಪ್ಪನ ತರಾನೇ ವಿಮಾನ ಕಂಪನಿಯಲ್ಲಿ ಕೆಲಸಕ್ಕೆ ಸೇರ್ಕೊಂಡೆ. ಇದರಿಂದ ದೂರದೂರ ಪ್ರಯಾಣ ಮಾಡ್ತಿದ್ದೆ. ಆಫ್ರಿಕಾ, ಅಮೇರಿಕಾ, ಯುರೋಪ್‌ ಮತ್ತು ಏಷ್ಯಾಗೆಲ್ಲ ಹೋಗಿದ್ದೆ. ಆ ದೇಶಗಳಲ್ಲೂ ಜನರಿಗೆ ದೊಡ್ಡದೊಡ್ಡ ಸಮಸ್ಯೆಗಳು ಇದ್ದವು, ಅದನ್ನ ಯಾರಿಗೂ ಸರಿ ಮಾಡೋಕೆ ಆಗ್ತಿರಲಿಲ್ಲ. ಅದಕ್ಕೆ ಜೀವನದಲ್ಲಿ ನಾನು ಏನಾದ್ರು ಒಂದು ಸಾಧನೆ ಮಾಡಬೇಕು ಅಂದುಕೊಂಡು ಅಮೇರಿಕಾಗೆ ವಾಪಸ್‌ ಬಂದೆ. ಬೋಸ್ಟನ್‌ನಲ್ಲಿ ಮತ್ತೆ ಅದೇ ಕಾಲೇಜಿಗೆ ಸೇರ್ಕೊಂಡೆ.

ಜೀವದ ಹುಟ್ಟು ಹೇಗಾಯ್ತು ಅನ್ನೋ ಪ್ರಶ್ನೆಗೆ ನನಗಿನ್ನೂ ಉತ್ತರ ಸಿಕ್ಕಿರಲಿಲ್ಲ. ಅದಕ್ಕೆ ಏನು ಮಾಡೋದು ಅಂತ ಗೊತ್ತಾಗದೆ ನನ್ನ ಟೀಚರ್‌ ಹತ್ರ ಮಾತಾಡಿದೆ. ಆಗ ಅವರು ‘ಯಾಕೆ ಇನ್ನೂ ಓದುತ್ತಿದ್ದೀಯಾ? ಕಾಲೇಜ್‌ ಬಿಟ್ಟುಬಿಡು’ ಅಂದ್ರು. ಆಗ ನನಗೆ ಆಶ್ಚರ್ಯ ಆಯ್ತು, ಖುಷಿನೂ ಆಯ್ತು. ಅದಕ್ಕೆ ಕಾಲೇಜ್‌ ಬಿಟ್ಟುಬಿಟ್ಟೆ. ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಜೀವನದಲ್ಲಿ ಏನೇ ಮಾಡಿದ್ರೂ ಸಂತೋಷನೇ ಇಲ್ವಲ್ಲಾ ಅಂತ ಬೇಜಾರಾಯ್ತು. ಅದಕ್ಕೆ ಸಂಪ್ರದಾಯಗಳನ್ನ ವಿರೋಧಿಸೋ ಜನರ ಜೊತೆ ಸೇರ್ಕೊಂಡೆ. ಅವರು ಸಮಾಜದಲ್ಲಿ ಶಾಂತಿ, ಪ್ರೀತಿಯನ್ನ ಕಾಪಾಡ್ತಿದ್ದಾರೆ ಅನಿಸ್ತು. ನಾನು ನನ್ನ ಕೆಲವು ಸ್ನೇಹಿತರು ಮೆಕ್ಸಿಕೋ ದೇಶದ ಅಕಾಪುಲ್ಕೋ ನಗರಕ್ಕೆ ಬಂದ್ವಿ. ನಾವು ಹಿಪ್ಪಿ ಜನರ ಜೊತೆ ಇದ್ವಿ, ಆ ಹಿಪ್ಪಿಗಳು ಅವರಿಗೆ ಇಷ್ಟ ಬಂದ ಹಾಗೆ ಜೀವನ ಮಾಡ್ತಿದ್ರು. ಅವರಿಗೆ ಜೀವನದಲ್ಲಿ ಏನೂ ತೊಂದ್ರೆ ಇಲ್ಲ, ಸಂತೋಷವಾಗಿ ಇದ್ದಾರೆ ಅನಿಸ್ತು. ಅವರ ಜೊತೆ ಇದ್ದ ಸ್ವಲ್ಪ ದಿನದಲ್ಲೇ ಅವರು ಸಂತೋಷವಾಗಿಲ್ಲ, ಪ್ರಾಮಾಣಿಕರಲ್ಲ, ನಿಯತ್ತಾಗಿಲ್ಲ ಅಂತ ಗೊತ್ತಾಯ್ತು.

ದೋಣಿಯಲ್ಲಿ ಪ್ರಯಾಣ ಮಾಡ್ತಾ ಹುಡುಕಿದೆ

ನಾನು ನನ್ನ ಸ್ನೇಹಿತ ಪರದೈಸ್‌ ತರ ಇರೋ ದ್ವೀಪಕ್ಕಾಗಿ ಹುಡುಕಿದ್ವಿ

ನನ್ನ ಚಿಕ್ಕ ವಯಸ್ಸಿನ ಕನಸನ್ನಾದ್ರೂ ನೆರವೇರಿಸೋಣ ಅಂದ್ಕೊಂಡೆ. ನನಗೆ ಚಿಕ್ಕ ವಯಸ್ಸಲ್ಲಿ ಒಂದು ಹಡಗಿನ ಕ್ಯಾಪ್ಟನ್‌ ಆಗಿ ಇಡೀ ಪ್ರಪಂಚ ಸುತ್ತಾಡಬೇಕು ಅಂತ ಆಸೆ ಇತ್ತು. ನನ್ನ ಸ್ನೇಹಿತ ಟಾಮ್‌ಗೂ ಇದೇ ಆಸೆ ಇತ್ತು. ಅದಕ್ಕೆ ನಾವಿಬ್ಬರು ಸೇರಿ ಒಂದು ಸುಂದರವಾದ ದ್ವೀಪ ಹುಡುಕಿ ಅಲ್ಲಿ ಸಮಾಜದ ಕಟ್ಟುಪಾಡು ಇಲ್ಲದೆ ಜೀವನ ಮಾಡಬೇಕು ಅಂದುಕೊಂಡ್ವಿ. ನನ್ನ ಕನಸು ನನಸಾಗಬೇಕಂದ್ರೆ ಒಂದು ಹಾಯಿದೋಣಿ ತಗೋಬೇಕಿತ್ತು.

ನಾವು ಸ್ಪೇನ್‌ ದೇಶದ ಬಾರ್ಸಲೋನ ನಗರದ ಹತ್ರ ಇರೋ ಆ್ಯರ್‌ನಿಸ್‌ ಡಿ ಮಾರ್‌ ಅನ್ನೋ ಜಾಗಕ್ಕೆ ಬಂದ್ವಿ. ಇಲ್ಲಿ 9.4 ಮೀಟರ್‌ ದೊಡ್ಡದಿರೋ ಒಂದು ಹಾಯಿದೋಣಿ ತಗೊಂಡ್ವಿ. ಅದರ ಹೆಸರು ಲಿಗ್ರಾ. ಅದನ್ನ ನಮಗೆ ಬೇಕಾದ ಹಾಗೆ ರೆಡಿ ಮಾಡ್ಕೊಂಡ್ವಿ. ಏನೂ ಅವಸರ ಇಲ್ಲದೆ ಆರಾಮಾಗಿ ಪ್ರಯಾಣ ಮಾಡೋಣ ಅಂದುಕೊಂಡ್ವಿ. ಅದಕ್ಕೆ ದೋಣಿಯಿಂದ ಇಂಜಿನ್‌ ತೆಗೆದು ಅಲ್ಲಿ ಕುಡಿಯೋ ನೀರು ಇಟ್ಟುಕೊಂಡ್ವಿ. ಚಿಕ್ಕಚಿಕ್ಕ ಬಂದರುಗಳಲ್ಲಿ ದೋಣಿ ನಡಿಸೋಕೆ 5 ಮೀಟರ್‌ ಉದ್ದದ ಎರಡು ಹುಟ್ಟುಗಳನ್ನ ದೋಣಿಗೆ ಜೋಡಿಸಿಕೊಂಡ್ವಿ. ಕೊನೆಗೂ ದೋಣಿ ರೆಡಿಯಾಯ್ತು. ನಾವು ಹಿಂದೂ ಮಹಾಸಾಗರದಲ್ಲಿರೋ ಸೇಶೆಲ್ಸ್‌ಗೆ ಹೋಗಬೇಕು ಅಂತ ತೀರ್ಮಾನ ಮಾಡ್ಕೊಂಡ್ವಿ. ಆಫ್ರಿಕಾದ ಪಶ್ಚಿಮದ ಕರಾವಳಿಯಲ್ಲಿ ಪ್ರಯಾಣ ಮಾಡ್ತಾ ದಕ್ಷಿಣ ಆಫ್ರಿಕಾದ ಕೇಪ್‌ ಆಫ್‌ ಗುಡ್‌ ಹೋಪ್‌ ಅನ್ನೋ ಜಾಗಕ್ಕೆ ತಲುಪಿದ್ವಿ, ಅಲ್ಲಿಂದ ನಾವು ಸೇಶೆಲ್ಸ್‌ಗೆ ಹೋದ್ವಿ. ನಮ್ಮ ಹತ್ರ ದಿಕ್ಕು ತೋರಿಸೋ ಒಂದು ಸಾಧನ ಇತ್ತು, ಭೂಪಟಗಳಿದ್ವು. ಇದನ್ನ ನೋಡ್ಕೊಂಡು ನಕ್ಷತ್ರಗಳನ್ನ ನೋಡ್ಕೊಂಡು ಪ್ರಯಾಣ ಮಾಡಿದ್ವಿ. ನಾವು ಸರಿಯಾದ ಜಾಗಕ್ಕೆ ತಲುಪಿದ್ದನ್ನ ನೋಡಿ ನನಗೆ ನನ್ನ ಕಣ್ಣನ್ನೇ ನಂಬಕ್ಕಾಗಿಲ್ಲ.

ಪ್ರಯಾಣ ಮಾಡ್ತಿದ್ದಾಗ ಜೋರಾಗಿ ಬಿರುಗಾಳಿ ಬೀಸ್ತು. ಆಗ ದೋಣಿ ಒಳಗೆ ಒಂದು ತಾಸಲ್ಲೇ 22 ಲೀಟರ್‌ ನೀರು ತುಂಬಿಕೊಳ್ತು. ಆಗ ಈ ದೋಣಿನ ನಂಬಿ ಪ್ರಯಾಣ ಮಾಡಕ್ಕಾಗಲ್ಲ ಅನಿಸ್ತು. ಈ ಘಟನೆ ಬಗ್ಗೆನೇ ಲೇಖನದ ಆರಂಭದಲ್ಲಿ ಹೇಳಿದ್ದು. ನನಗೆ ತುಂಬ ಭಯ ಆಯ್ತು. ತಕ್ಷಣ ದೇವರಿಗೆ ಪ್ರಾರ್ಥನೆ ಮಾಡ್ದೆ. ಈ ತರ ಪ್ರಾರ್ಥನೆ ಮಾಡಿ ವರ್ಷಗಳೇ ಆಗಿತ್ತು. “ದೇವರೇ, ನನ್ನ ಪ್ರಾಣ ಕಾಪಾಡಿದ್ರೆ ನಿಮ್ಮ ಬಗ್ಗೆ ಜಾಸ್ತಿ ತಿಳ್ಕೊಳ್ತೀನಿ” ಅಂತ ಮಾತು ಕೊಟ್ಟೆ. ಬಿರುಗಾಳಿ ನಿಂತುಹೋಯ್ತು, ನಾನು ಕೊಟ್ಟ ಮಾತನ್ನ ಉಳಿಸಿಕೊಂಡೆ.

ಮೆಡಿಟರೇನಿಯನ್‌ ಸಮುದ್ರದಲ್ಲಿ ಪ್ರಯಾಣ ಮಾಡ್ತಿದ್ದಾಗ ದೋಣಿಯಲ್ಲೇ ಬೈಬಲನ್ನ ಓದಕ್ಕೆ ಶುರು ಮಾಡ್ದೆ. ಆಗ ಹಾರಾಡುವ ಮೀನುಗಳು, ಡಾಲ್ಫಿನ್‌ಗಳು ಮತ್ತು ವಿಶಾಲವಾಗಿ ಹರಡಿರೋ ಸಮುದ್ರನ ನೋಡಿದಾಗ ನನ್ನ ಮನಸ್ಸು ಖುಷಿಯಿಂದ ತೇಲಾಡುತ್ತಿತ್ತು. ರಾತ್ರಿ ಆಕಾಶದಲ್ಲಿ ಮಿನುಗುವ ನಕ್ಷತ್ರಗಳನ್ನ ನೋಡಿದಾಗ ನನ್ನ ಮೈ ಜುಮ್‌ ಅಂತಿತ್ತು. ಆಗ ಮನುಷ್ಯರನ್ನ ಪ್ರೀತಿಸೋ ಒಬ್ಬ ದೇವರು ಇರಲೇಬೇಕು ಅಂತ ಅನಿಸ್ತು.

ಸಮುದ್ರದಲ್ಲೇ ಕೆಲವು ವಾರ ಪ್ರಯಾಣ ಮಾಡಿ ಸ್ಪೇನ್‌ ದೇಶದ ಅಲಿಕ್ಯಾಂಟಿ ಅನ್ನೋ ಬಂದರಿಗೆ ತಲುಪಿದ್ವಿ. ಅಲ್ಲಿ ನಮ್ಮ ದೋಣಿ ಮಾರಿ, ಚೆನ್ನಾಗಿರೋ ಇನ್ನೊಂದು ದೋಣಿ ತಗೊಳ್ಳೋಣ ಅಂದುಕೊಂಡ್ವಿ. ಆದ್ರೆ ಇಂಜಿನ್‌ ಇಲ್ಲದಿರೋ, ತೂತು ಬಿದ್ದಿರೋ ನಮ್ಮ ಹಳೇ ದೋಣಿನ ತಗೊಳಕ್ಕೆ ಯಾರೂ ಮುಂದೆ ಬರ್ತಿರಲಿಲ್ಲ. ಹಾಗಾಗಿ ನನಗೆ ತುಂಬ ಸಮಯ ಸಿಕ್ತು, ಬೈಬಲನ್ನ ಚೆನ್ನಾಗಿ ಓದಿದೆ.

ನಾವು ಜೀವನದಲ್ಲಿ ಸಂತೋಷವಾಗಿರೋಕೆ ಏನು ಮಾಡಬೇಕು ಅಂತ ಬೈಬಲ್‌ ಸ್ಪಷ್ಟವಾಗಿ ಹೇಳುತ್ತೆ ಅಂತ ಅರ್ಥ ಮಾಡಿಕೊಂಡೆ. ನಮ್ಮ ನಡತೆ ಹೇಗಿರಬೇಕು ಅನ್ನೋದ್ರ ಬಗ್ಗೆ ಬೈಬಲಲ್ಲಿ ಎಷ್ಟೋ ನೀತಿ ನಿಯಮಗಳಿವೆ. ಆದ್ರೆ ಕ್ರೈಸ್ತರು ಅಂತ ಹೇಳಿಕೊಳ್ಳೋ ತುಂಬ ಜನ ಅದನ್ನ ಪಾಲಿಸ್ತಿರಲಿಲ್ಲ, ನಾನೂ ಪಾಲಿಸ್ತಿರಲಿಲ್ಲ.

ಅದಕ್ಕೆ ನಾನು ಜೀವನದಲ್ಲಿ ದೊಡ್ಡ ಬದಲಾವಣೆ ಮಾಡಬೇಕಂತ ನಿರ್ಧರಿಸಿದೆ. ಮೊದಲು ಡ್ರಗ್ಸ್‌ ಬಿಟ್ಟೆ. ಬೈಬಲಲ್ಲಿರೋ ನೀತಿ ನಿಯಮಗಳನ್ನ ಪಾಲಿಸೋ ಜನರು ಖಂಡಿತ ಇರಲೇಬೇಕು ಅಂತ ನನ್ನ ಮನಸ್ಸು ಹೇಳ್ತಿತ್ತು. ಆಗ ಎರಡನೇ ಸಲ ದೇವರ ಹತ್ರ ಪ್ರಾರ್ಥನೆ ಮಾಡ್ದೆ. ಅಂಥ ಜನರನ್ನ ಕಂಡುಹಿಡಿಯೋಕೆ ಸಹಾಯ ಮಾಡಪ್ಪಾ ಅಂತ ಬೇಡಿಕೊಂಡೆ.

ಸತ್ಯ ಧರ್ಮಕ್ಕಾಗಿ ಹುಡುಕಾಟ

ಸತ್ಯ ಧರ್ಮ ಯಾವುದು ಅಂತ ಹುಡುಕೋಕೆ ತೀರ್ಮಾನಿಸಿದೆ. ಅಲಿಕ್ಯಾಂಟಿಯಲ್ಲಿ ತುಂಬ ಧಾರ್ಮಿಕ ಕಟ್ಟಡಗಳಿತ್ತು. ಒಂದೊಂದು ಕಟ್ಟಡಕ್ಕೆ ಹೋಗಿ ನೋಡಿದಾಗ ಅಲ್ಲೆಲ್ಲಾ ಬರೀ ಮೂರ್ತಿಗಳೇ ಇತ್ತು. ಇದೆಲ್ಲ ಸತ್ಯ ಧರ್ಮ ಅಲ್ಲ ಅಂತ ನನಗೆ ಗೊತ್ತಾಯ್ತು.

ಒಂದು ದಿನ ಭಾನುವಾರ ಮಧ್ಯಾಹ್ನ ಬಂದರಿನ ಹತ್ರ ಇದ್ದ ಬೆಟ್ಟದ ಮೇಲೆ ಕೂತು ಬೈಬಲ್‌ ಓದುತ್ತಿದ್ದೆ. ಯಾಕೋಬ 2:1-5ರಲ್ಲಿ ಶ್ರೀಮಂತ ಬಡವ ಅನ್ನೋ ಭೇದಭಾವ ಮಾಡಬಾರದು ಅಂತ ಇತ್ತು. ದೋಣಿ ಇದ್ದ ಜಾಗಕ್ಕೆ ನಡ್ಕೊಂಡು ಬರ್ತಿದ್ದಾಗ ದಾರಿಯಲ್ಲಿ ಒಂದು ಧಾರ್ಮಿಕ ಕೂಟ ನಡಿತಾ ಇರೋದನ್ನ ನೋಡ್ದೆ. ಹೊರಗಡೆ “ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹ” ಅನ್ನೋ ಬೋರ್ಡ್‌ ಇತ್ತು.

‘ಈ ಜನರು ಬೈಬಲಲ್ಲಿ ಹೇಳೋ ತರ ನನ್ನ ಜೊತೆ ನಡ್ಕೊಳ್ತಾರಾ?’ ಅಂತ ಪರೀಕ್ಷೆ ಮಾಡೋಣ ಅಂದುಕೊಂಡೆ. ಚಪ್ಪಲಿ ಹಾಕದೆ, ಗಡ್ಡ ಶೇವ್‌ ಮಾಡದೆ, ಕಿತ್ತೋಗಿರೋ ಪ್ಯಾಂಟ್‌ ಹಾಕೊಂಡು ಹಾಲ್‌ ಒಳಗೆ ಹೋದೆ. ಆಗ ಅಟೆಂಡರ್‌ ನನ್ನನ್ನ ಒಬ್ಬ ಅಜ್ಜಿ ಪಕ್ಕ ಕೂರಿಸಿದ್ರು. ಅಲ್ಲಿ ಒಬ್ರು ಭಾಷಣ ಕೊಡ್ತಿದ್ರು, ಆಗ ಅಜ್ಜಿ ಬೈಬಲಲ್ಲಿರೋ ವಚನಗಳನ್ನ ತೆಗಿಯೋಕೆ ಸಹಾಯ ಮಾಡಿದ್ರು. ಕೂಟ ಮುಗಿದ ಮೇಲೆ ಎಲ್ರೂ ನನ್ನ ಜೊತೆ ಪ್ರೀತಿಯಿಂದ ನಡ್ಕೊಂಡ್ರು. ಅವರಲ್ಲಿ ಒಬ್ರು ನನಗೆ, “ಮನೆಗೆ ಬನ್ನಿ ಬೈಬಲ್‌ ಬಗ್ಗೆ ಚರ್ಚೆ ಮಾಡೋಣ” ಅಂತ ಹೇಳಿದ್ರು. ಅದಕ್ಕೆ ನಾನು “ಬೈಬಲ್‌ನ ಇನ್ನೂ ಓದಿ ಮುಗಿಸಿಲ್ಲ, ಮುಗಿಸಿದ ಮೇಲೆ ಸ್ಟಡಿ ಮಾಡೋಣ” ಅಂತ ಹೇಳ್ದೆ. ಅಷ್ಟರ ತನಕ ನಾನು ಎಲ್ಲಾ ಕೂಟಗಳಿಗೆ ಹೋಗ್ತಿದ್ದೆ.

ಕೆಲವು ವಾರಗಳ ನಂತರ ಆ ಸಹೋದರನ ಮನೆಗೆ ಹೋದೆ. ಬೈಬಲ್‌ ಬಗ್ಗೆ ನನಗಿದ್ದ ಪ್ರಶ್ನೆಗಳಿಗೆ ಅವರು ಉತ್ತರ ಕೊಟ್ರು. ಒಂದು ವಾರ ಆದಮೇಲೆ ಆ ಸಹೋದರ ಒಂದು ಬ್ಯಾಗಲ್ಲಿ ಒಳ್ಳೆ ಬಟ್ಟೆಗಳನ್ನ ಇಟ್ಟು ನಂಗೆ ಕೊಟ್ರು. ‘ಈ ಬಟ್ಟೆ ನನ್ನದಲ್ಲ, ಒಬ್ಬ ಸಹೋದರನದ್ದು. ಅವರೀಗ ಜೈಲಲ್ಲಿ ಇದ್ದಾರೆ. ಬೇರೆಯವರನ್ನ ಪ್ರೀತಿಸಬೇಕು, ಯುದ್ಧ ಮಾಡಬಾರದು ಅಂತ ಬೈಬಲ್‌ ಹೇಳಿದ್ದನ್ನ ಅವರು ಪಾಲಿಸಿದ್ದಕ್ಕೆ ಅವರನ್ನ ಜೈಲಿಗೆ ಹಾಕಿದ್ದಾರೆ’ ಅಂತ ಆ ಸಹೋದರ ಹೇಳಿದ್ರು. (ಯೆಶಾ. 2:4; ಯೋಹಾ. 13:34, 35) ಆಗ ಬೈಬಲ್‌ ಹೇಳೋ ತರ ಜೀವನ ಮಾಡೋ ಜನರು ಇವ್ರೇ ಅಂತ ನನಗೆ ಗೊತ್ತಾಯ್ತು. ಈ ಜನರನ್ನೇ ನಾನು ಹುಡುಕ್ತಾ ಇದ್ದಿದ್ದು. ದ್ವೀಪ ಹುಡುಕೋದನ್ನ ಬಿಟ್ಟು ಬೈಬಲನ್ನ ಇನ್ನೂ ಚೆನ್ನಾಗಿ ಕಲಿಬೇಕು ಅಂತ ತೀರ್ಮಾನ ಮಾಡ್ದೆ. ಅದಕ್ಕೆ ನಾನು ನೆದೆರ್‌ಲ್ಯಾಂಡ್‌ಗೆ ವಾಪಸ್‌ ಬಂದೆ.

ಕೆಲಸಕ್ಕಾಗಿ ಹುಡುಕಾಟ

ನಾಲ್ಕು ದಿನ ಪ್ರಯಾಣ ಮಾಡಿ ನೆದೆರ್‌ಲ್ಯಾಂಡಿನ ಗ್ರಾನಿಂಗನ್‌ ಪಟ್ಟಣಕ್ಕೆ ತಲುಪಿದೆ. ನನ್ನ ಹೊಟ್ಟೆಪಾಡಿಗಾಗಿ ಒಂದು ಕೆಲಸ ಹುಡುಕಬೇಕಾಗಿತ್ತು. ಅದಕ್ಕೆ ಮರ ಕೆಲಸದ ಅಂಗಡಿಗೆ ಹೋದೆ. ಅಲ್ಲಿ ನನಗೆ ಒಂದು ಅರ್ಜಿ ಕೊಟ್ರು. ಅದರಲ್ಲಿ ‘ನೀವು ಯಾವ ಧರ್ಮಕ್ಕೆ ಸೇರಿದವರು?’ ಅಂತ ಪ್ರಶ್ನೆಯಿತ್ತು. ಅದಕ್ಕೆ ‘ನಾನೊಬ್ಬ ಯೆಹೋವನ ಸಾಕ್ಷಿ’ ಅಂತ ಬರೆದೆ. ಅದನ್ನ ನೋಡಿದ ತಕ್ಷಣ ಓನರ್‌ ಮುಖಭಾವ ಬದಲಾಯ್ತು. ‘ಆಮೇಲೆ ಕರಿತೀನಿ’ ಅಂತ ಹೇಳಿದ್ರು, ಆದ್ರೆ ಕರೆಯಲಿಲ್ಲ.

ನಾನು ಇನ್ನೊಂದು ಮರಕೆಲಸದ ಅಂಗಡಿಗೆ ಹೋದೆ, ಅಲ್ಲಿ ಓನರ್‌ ಹತ್ರ ‘ನನಗೆ ಒಂದು ಕೆಲಸ ಕೊಡ್ತೀರಾ?’ ಅಂತ ಕೇಳ್ದೆ. ಅದಕ್ಕೆ ಅವರು ಕಾಲೇಜ್‌ ಸರ್ಟಿಫಿಕೇಟ್‌, ಬೇರೆ ಕಡೆ ಕೆಲಸ ಮಾಡಿರೋ ಸರ್ಟಿಫಿಕೇಟ್‌ನ ಕೇಳಿದ್ರು. ಅದಕ್ಕೆ ನಾನು, ‘ಹಾಯಿದೋಣಿಯಲ್ಲಿ ಕೆಲವು ರಿಪೇರಿ ಕೆಲಸ ಮಾಡಿರೋ ಅನುಭವ ಇದೆ’ ಅಂತ ಹೇಳ್ದೆ. ಅದಕ್ಕೆ ಓನರ್‌, ‘ಇವತ್ತು ಮಧ್ಯಾಹ್ನನೇ ಕೆಲಸಕ್ಕೆ ಸೇರ್ಕೊಳಿ’ ಅಂತ ಹೇಳ್ದಾಗ ನನಗೆ ತುಂಬಾ ಖುಷಿಯಾಯ್ತು. ಅವರು, ‘ನಾನೊಬ್ಬ ಯೆಹೋವನ ಸಾಕ್ಷಿ. ನಾನು ಬೈಬಲ್‌ನಲ್ಲಿ ಇರೋದನ್ನ ಪಾಲಿಸ್ತೀನಿ. ನಿನ್ನಿಂದ ಯಾವ ತೊಂದ್ರೆನೂ ಆಗಬಾರದು’ ಅಂತ ಹೇಳಿದ್ರು. ಆಗ ‘ನಾನೂ ಒಬ್ಬ ಯೆಹೋವನ ಸಾಕ್ಷಿ’ ಅಂತ ಹೇಳ್ದೆ. ಅವರಿಗೆ ನನ್ನ ಉದ್ದ ಕೂದಲು, ಗಡ್ಡ ನೋಡಿ ನಾನು ಒಬ್ಬ ಯೆಹೋವನ ಸಾಕ್ಷಿ ಅಲ್ಲ ಅಂತ ಗೊತ್ತಾಯ್ತು. ಆಗ ಅವರು ‘ನಾನು ನಿನಗೆ ಸ್ಟಡಿ ಮಾಡ್ತೀನಿ’ ಅಂತ ಹೇಳ್ದಾಗ ಖುಷಿಯಿಂದ ಒಪ್ಪಿಕೊಂಡೆ. ಯೆಹೋವ ದೇವರೇ ಆ ಓನರ್‌ ಹತ್ರ ನನಗೆ ಕೆಲಸ ಸಿಗದ ಹಾಗೆ ಮಾಡಿ ಈ ಓನರ್‌ ಹತ್ರ ಕೆಲಸ ಸಿಗೋ ತರ ಮಾಡಿರಬೇಕು ಅಂದ್ಕೊಂಡೆ. ಯಾಕಂದ್ರೆ ನನ್ನ ಮನಸ್ಸಿನ ಆಸೆ ಯೆಹೋವ ದೇವರಿಗೆ ಚೆನ್ನಾಗಿ ಗೊತ್ತಿತ್ತು. (ಕೀರ್ತ. 37:4) ಹೀಗೆ ಬ್ರದರ್‌ ಜೊತೆ ಒಂದು ವರ್ಷ ಕೆಲಸ ಮಾಡ್ದೆ. ಹಾಗೇ ಬೈಬಲ್‌ ಸ್ಟಡಿನೂ ತಗೊಂಡೆ. 1974ರ ಜನವರಿ ತಿಂಗಳಲ್ಲಿ ದೀಕ್ಷಾಸ್ನಾನ ತಗೊಂಡೆ.

ಸಂತೋಷವಾಗಿರೋಕೆ ಏನು ಮಾಡಬೇಕು ಅಂತ ತಿಳ್ಕೊಂಡೆ!

ಫೆಬ್ರವರಿಯಲ್ಲೇ ನಾನು ಪಯನೀಯರಿಂಗ್‌ ಶುರು ಮಾಡ್ದೆ. ಆ ಸೇವೆಯಿಂದ ತುಂಬ ಖುಷಿ ಸಿಕ್ತಿತ್ತು. ಮಾರ್ಚ್‌ನಲ್ಲಿ ಆ್ಯಮ್‌ಸ್ಟರ್‌ಡ್ಯಾಮ್‌ಗೆ ಹೋಗಿ ಸೇವೆ ಶುರು ಮಾಡ್ದೆ. ಅಲ್ಲಿ ಸ್ಪ್ಯಾನಿಷ್‌ ಭಾಷೆಯ ಹೊಸ ಗುಂಪು ಶುರುವಾಗಿತ್ತು. ಈ ಸ್ಪ್ಯಾನಿಷ್‌ ಮತ್ತು ಪೋರ್ಚುಗೀಸ್‌ ಭಾಷೆಯಲ್ಲಿ ಬೈಬಲ್‌ ಸ್ಟಡಿಗಳನ್ನ ಮಾಡ್ತಾ ಇದ್ದೆ, ತುಂಬ ಚೆನ್ನಾಗಿತ್ತು. 1975ರ ಮೇ ತಿಂಗಳಲ್ಲಿ ನನಗೆ ವಿಶೇಷ ಪಯನೀಯರ್‌ ನೇಮಕ ಸಿಕ್ತು.

ಒಂದು ದಿನ ಇನೀಕಿ ಅನ್ನೋ ವಿಶೇಷ ಪಯನೀಯರ್‌ ಸಿಸ್ಟರ್‌ ನಮ್ಮ ಸಭೆಗೆ ಬಂದ್ರು. ಅವರಿಗೆ ಬೊಲಿವಿಯನ್‌ ಭಾಷೆಯ ಒಬ್ಬ ಬೈಬಲ್‌ ವಿದ್ಯಾರ್ಥಿ ಇದ್ರು. ಅವರನ್ನ ಕರ್ಕೊಂಡು ಇನೀಕಿ ನಮ್ಮ ಸ್ಪ್ಯಾನಿಷ್‌ ಸಭೆಗೆ ಬಂದ್ರು. ಆಮೇಲೆ ನಾನು ಮತ್ತು ಇನೀಕಿ ಪತ್ರ ಬರೆದು ಮಾತಾಡಿಕೊಳ್ತಿದ್ವಿ. ನಮ್ಮಿಬ್ಬರ ಜೀವನದ ಗುರಿ ಒಂದೇ ಆಗಿತ್ತು. 1976ರಲ್ಲಿ ನಾವು ಮದುವೆಯಾದ್ವಿ. ಆಮೇಲೆ ವಿಶೇಷ ಪಯನೀಯರ್‌ ಸೇವೆಯನ್ನ ಮುಂದುವರಿಸಿದ್ವಿ. 1982ರಲ್ಲಿ 73ನೇ ಗಿಲ್ಯಡ್‌ ಶಾಲೆಗೆ ಆಮಂತ್ರಣ ಸಿಕ್ತು. ಗಿಲ್ಯಡ್‌ ಶಾಲೆ ಮುಗಿದ ಮೇಲೆ ಪೂರ್ವ ಆಫ್ರಿಕಾದಲ್ಲಿ ನಮಗೆ ನೇಮಕ ಸಿಕ್ತು. ನಮಗೆ ಎಷ್ಟು ಖುಷಿಯಾಯ್ತು ಅಂದ್ರೆ ಆ ಖುಷಿಯಲ್ಲಿ ಏನು ಮಾಡಬೇಕು ಅಂತಾನೇ ಗೊತ್ತಾಗಲಿಲ್ಲ. ಕೀನ್ಯಾದ ಮೊಂಬಾಸದಲ್ಲಿ 5 ವರ್ಷ ಸೇವೆ ಮಾಡಿದ್ವಿ. ಆಮೇಲೆ ಟಾಂಜಾನೀಯ ದೇಶದಲ್ಲಿ ಸರ್ಕಾರ ಹಾಕಿದ ನಿಷೇಧವನ್ನ ತೆಗೆದಿದ್ರಿಂದ ನಮ್ಮನ್ನ ಆ ದೇಶಕ್ಕೆ 1987ರಲ್ಲಿ ನೇಮಿಸಿದ್ರು. ಅಲ್ಲಿ ನಾವು 26 ವರ್ಷ ಸೇವೆ ಮಾಡಿದ್ವಿ. ಆಮೇಲೆ ಕೀನ್ಯಾಗೆ ಬಂದ್ವಿ.

ಪೂರ್ವ ಆಫ್ರಿಕಾದಲ್ಲಿರೋ ಜನರಿಗೆ ಬೈಬಲ್‌ ಕಲಿಸುವಾಗ ನನಗೆ ಮತ್ತು ನನ್ನ ಹೆಂಡತಿಗೆ ತುಂಬಾ ಖುಷಿ ಆಯ್ತು

ದೀನತೆ ಇರೋ ಜನರಿಗೆ ಬೈಬಲ್‌ ಸತ್ಯವನ್ನ ಕಲಿಸಿದ್ರಿಂದ ನಾನು ಜೀವನದಲ್ಲಿ ತುಂಬ ಸಂತೋಷವಾಗಿದ್ದೀನಿ. ಮೊಂಬಾಸದಲ್ಲಿ ಸೇವೆ ಮಾಡ್ತಿದ್ದಾಗ ಸಾರ್ವಜನಿಕ ಸಾಕ್ಷಿ ಕಾರ್ಯದಲ್ಲಿ ನನಗೆ ಒಬ್ಬ ವ್ಯಕ್ತಿ ಸಿಕ್ಕಿದ್ರು. ಅವರೇ ನನ್ನ ಮೊದಲನೇ ಬೈಬಲ್‌ ಸ್ಟಡಿ. ಅವರಿಗೆ ಎರಡು ಪತ್ರಿಕೆಗಳನ್ನ ಕೊಟ್ಟೆ. ಅವರು ಅದನ್ನ ತಗೊಂಡು ಇದನ್ನ ಓದಿದ ಮೇಲೆ ಏನು ಮಾಡಬೇಕು ಅಂತ ಕೇಳಿದ್ರು. ಮುಂದಿನ ವಾರನೇ ನಾವು ಅವರಿಗೆ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಅನ್ನೋ ಪುಸ್ತಕದಿಂದ ಅಧ್ಯಯನ ಶುರು ಮಾಡಿದ್ವಿ. ಆ ಪುಸ್ತಕ ಆಗಷ್ಟೇ ಸ್ವಾಹೀಲಿ ಭಾಷೆಯಲ್ಲಿ ಬಿಡುಗಡೆ ಆಗಿತ್ತು. ಒಂದು ವರ್ಷ ಸ್ಟಡಿ ತಗೊಂಡ ಮೇಲೆ ಅವರು ದೀಕ್ಷಾಸ್ನಾನ ಪಡ್ಕೊಂಡು ರೆಗ್ಯುಲರ್‌ ಪಯನೀಯರ್‌ ಸೇವೆ ಶುರು ಮಾಡಿದ್ರು. ಅವರು ಮತ್ತು ಅವರ ಹೆಂಡತಿಯ ಸಹಾಯದಿಂದ ಇಲ್ಲಿ ತನಕ ಸುಮಾರು ನೂರು ಜನ ದೀಕ್ಷಾಸ್ನಾನ ತಗೊಂಡಿದ್ದಾರೆ.

ತನ್ನ ಜನರು ಖುಷಿಯಾಗಿರೋಕೆ ಯೆಹೋವ ಸಹಾಯ ಮಾಡ್ತಾನೆ ಅನ್ನೋದನ್ನ ನಾವಿಬ್ರೂ ಕಣ್ಣಾರೆ ನೋಡಿದ್ವಿ

“ಬೆಲೆಬಾಳೋ ಒಂದು ಮುತ್ತು ಕಣ್ಣಿಗೆ ಬಿದ್ದಾಗ” ಅದನ್ನ ತಗೊಳ್ಳೋಕೆ ತನ್ನಿಂದ ಆಗೋದನ್ನೆಲ್ಲ ಮಾಡೋ ವ್ಯಾಪಾರಿ ಬಗ್ಗೆ ಬೈಬಲ್‌ ಹೇಳುತ್ತೆ. ಅದೇ ತರ, ನಾನೂ ಜೀವನದಲ್ಲಿ ಖುಷಿಯಾಗಿರೋಕೆ ಏನು ಮಾಡಬೇಕು ಅಂತ ಗೊತ್ತಾದಾಗ ಅದನ್ನ ಪಡಿಯೋಕೆ ನನ್ನಿಂದ ಆಗಿದ್ದನ್ನೆಲ್ಲ ಮಾಡ್ದೆ. (ಮತ್ತಾ. 13:45, 46) ಅಷ್ಟೇ ಅಲ್ಲ, ಸಂತೋಷಕ್ಕಾಗಿ ಹುಡುಕಾಡೋ ಜನರಿಗೆ ಸಹಾಯ ಮಾಡೋಕೆ ನನ್ನ ಜೀವನವನ್ನೇ ಮುಡಿಪಾಗಿಟ್ಟೆ. ಜೀವನದಲ್ಲಿ ಸಂತೋಷವಾಗಿರೋಕೆ ಯೆಹೋವ ತನ್ನ ಜನರಿಗೆ ಸಹಾಯ ಮಾಡೇ ಮಾಡ್ತಾನೆ ಅನ್ನೋದನ್ನ ನಾನು ನನ್ನ ಹೆಂಡತಿ ಕಣ್ಣಾರೆ ನೋಡಿದ್ವಿ.