ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

“ನನಗೆ ಯೆಹೋವನ ಸೇವೆ ಮಾಡೋ ಆಸೆ ಇತ್ತು”

“ನನಗೆ ಯೆಹೋವನ ಸೇವೆ ಮಾಡೋ ಆಸೆ ಇತ್ತು”

ಸುರಿನಾಮ್‌ನ ದಟ್ಟ ಕಾಡುಗಳಲ್ಲಿರೋ ಗ್ರಾನ್‌ಬುರಿ ಹಳ್ಳಿಯಲ್ಲಿರೋ ಸಹೋದರ ಸಹೋದರಿಯರ ಒಂದು ಚಿಕ್ಕ ಗುಂಪನ್ನ ಭೇಟಿ ಮಾಡಿ ನಾವು ವಾಪಸ್‌ ಬರ್ತಾ ಇದ್ವಿ. ತಪನಾಹೋನಿ ನದಿಯಲ್ಲಿ ಒಂದು ದೋಣಿಯಲ್ಲಿ ಕೂತುಕೊಂಡು ನಾವು ಹೊರಟ್ವಿ. ನದಿಯ ಒಂದು ಕಡೆ ನೀರು ತುಂಬ ರಭಸವಾಗಿ ಹರೀತಾ ಇತ್ತು. ನಮ್ಮ ದೋಣಿ ಹೋಗುತ್ತಿರುವಾಗ ಮೋಟರಿಗೆ ಕಲ್ಲು ತಾಗಿ ದೋಣಿಯ ಮುಂಭಾಗ ಒಡೆದುಹೋಗಿ ನೀರು ಒಳಗೆ ಬರೋಕೆ ಶುರು ಆಯ್ತು. ನಾವೆಲ್ಲ ಮುಳುಗೋ ಪರಿಸ್ಥಿತಿ ಬಂತು. ಆಗ ನನಗೆ ತುಂಬ ಭಯ ಆಯ್ತು, ಎದೆ ಡವಡವ ಅಂತ ಹೊಡ್ಕೊಳ್ತಿತ್ತು. ನಾನು ದೋಣಿಯಲ್ಲಿ ಪ್ರಯಾಣ ಮಾಡಿನೇ ಎಷ್ಟೋ ವರ್ಷಗಳಿಂದ ಸರ್ಕಿಟ್‌ ಕೆಲಸ ಮಾಡ್ತಿದ್ದೆ. ಆದ್ರೂ ನನಗೆ ಈಜೋಕೆ ಬರ್ತಿರಲಿಲ್ಲ.

ಮುಂದೆ ಏನಾಯ್ತು ಅಂತ ಹೇಳೋ ಮುಂಚೆ ನಾನು ಹೇಗೆ ಪೂರ್ಣ ಸಮಯದ ಸೇವೆ ಶುರು ಮಾಡಿದೆ ಅಂತ ಹೇಳ್ತೀನಿ ಬನ್ನಿ.

ನಾನು 1942ರಲ್ಲಿ ಕ್ಯುರೆಸೋ ಅನ್ನೋ ಸುಂದರವಾದ ದ್ವೀಪದಲ್ಲಿ ಹುಟ್ಟಿದೆ. ಈ ದ್ವೀಪ ಕೆರೀಬಿಯನ್‌ ದ್ವೀಪಗಳಲ್ಲಿ ಒಂದು. ನನ್ನ ಅಪ್ಪ ಹುಟ್ಟಿ ಬೆಳೆದ ದೇಶ ಸುರಿನಾಮ್‌. ಆದರೆ ಕೆಲಸಕೋಸ್ಕರ ಅವರು ಕ್ಯುರೆಸೋ ದ್ವೀಪಕ್ಕೆ ಬಂದ್ರು. ನಾನು ಹುಟ್ಟೋಕೆ ಸ್ವಲ್ಪ ವರ್ಷಗಳ ಮುಂಚೆ, ಅಪ್ಪ ದೀಕ್ಷಾಸ್ನಾನ ತಗೊಂಡಿದ್ರು. ನಮ್ಮ ದ್ವೀಪದಲ್ಲಿ ಮೊದಲು ದೀಕ್ಷಾಸ್ನಾನ ತಗೊಂಡ ಯೆಹೋವನ ಸಾಕ್ಷಿಗಳಲ್ಲಿ ನಮ್ಮ ಅಪ್ಪನೂ ಒಬ್ಬರಾಗಿದ್ರು. a ನಾವು ಒಟ್ಟು ಐದು ಮಕ್ಕಳು. ಅಪ್ಪ ನಮ್ಮೆಲ್ಲರ ಜೊತೆನೂ ಪ್ರತಿವಾರ ಬೈಬಲ್‌ ಅಧ್ಯಯನ ಮಾಡ್ತಿದ್ದರು. ಕೆಲವೊಂದು ಸಲ ನಾವು ಅಧ್ಯಯನದಿಂದ ತಪ್ಪಿಸಿಕೊಳ್ಳೋಕೆ ಪ್ರಯತ್ನ ಮಾಡ್ತಿದ್ವಿ. ಆದರೂ ಅಪ್ಪ ಬಿಡ್ತಿರಲಿಲ್ಲ. ನನಗೆ 14 ವರ್ಷ ಆದಾಗ, ಅಜ್ಜಿನ ನೋಡಿಕೊಳ್ಳೋಕೆ ನಾವೆಲ್ಲ ವಾಪಸ್‌ ಸುರಿನಾಮ್‌ಗೆ ಹೋದ್ವಿ.

ಒಳ್ಳೇ ಸ್ನೇಹಿತರಿಂದ ಸಹಾಯ ಸಿಕ್ತು

ಸುರಿನಾಮ್‌ ಸಭೆಯಲ್ಲಿ, ಯುವ ಸಹೋದರ ಸಹೋದರಿಯರು ನನ್ನ ಸ್ನೇಹಿತರಾದ್ರು. ಅವರು ನನಗಿಂತ ವಯಸ್ಸಲ್ಲಿ ಸ್ವಲ್ಪ ದೊಡ್ಡವರಾಗಿದ್ರು, ಪಯನೀಯರಾಗಿ ಹುರುಪಿನಿಂದ ಯೆಹೋವನ ಸೇವೆ ಮಾಡ್ತಿದ್ರು. ಸೇವೆಯಲ್ಲಿ ಸಿಕ್ಕಿದ ಒಳ್ಳೇ ಅನುಭವಗಳನ್ನ ಹೇಳ್ತಿದ್ದಾಗ ಅವರು ಎಷ್ಟು ಖುಷಿಯಾಗಿ ಇದ್ದಾರೆ ಅಂತ ಗೊತ್ತಾಯ್ತು. ಎಷ್ಟೋ ಸಲ ಮೀಟಿಂಗ್‌ ಆದಮೇಲೆ ನಾವು ರಾತ್ರಿ ಬೆಳದಿಂಗಳಲ್ಲಿ ಕೂತುಕೊಂಡು ಮಿನುಗೋ ನಕ್ಷತ್ರಗಳನ್ನ ನೋಡ್ತಾ ಬೈಬಲ್‌ ಬಗ್ಗೆ ಮಾತಾಡ್ತಾ ಇದ್ವಿ. ಈ ಸ್ನೇಹಿತರಿಂದಾನೇ ಯೆಹೋವನ ಸೇವೆ ಮಾಡಬೇಕು ಅನ್ನೋ ಆಸೆ ನನ್ನಲ್ಲಿ ಹುಟ್ಟಿತು. ಅದಕ್ಕೆ ನಾನು 16ನೇ ವಯಸ್ಸಲ್ಲಿ ದೀಕ್ಷಾಸ್ನಾನ ತಗೊಂಡೆ, 18ನೇ ವಯಸ್ಸಲ್ಲಿ ಪಯನೀಯರ್‌ ಸೇವೆ ಶುರು ಮಾಡಿದೆ.

ಮುಖ್ಯವಾದ ವಿಷಯಗಳನ್ನ ಕಲಿತೆ

ಪರಮಾರಿಬೋದಲ್ಲಿ ಪಯನೀಯರ್‌ ಸೇವೆ

ನಾನು ಪಯನೀಯರ್‌ ಆಗಿದ್ದಾಗ ಕಲಿತ ವಿಷಯಗಳು ಮುಂದೆ ತುಂಬ ಸಹಾಯ ಮಾಡಿತು. ಉದಾಹರಣೆಗೆ, ಬೇರೆಯವರಿಗೆ ತರಬೇತಿ ಕೊಡೋದು ಎಷ್ಟು ಮುಖ್ಯ ಅಂತ ನಾನು ಕಲಿತೆ. ನಾನು ಪಯನೀಯರ್‌ ಸೇವೆ ಶುರು ಮಾಡಿದಾಗ, ಸಹೋದರ ವಿಲಮ್‌ ವಾನ್‌ ಸೇಅಲ್‌ ನನಗೆ ತುಂಬ ವಿಷಯಗಳನ್ನ ಕಲಿಸಿದ್ರು. b ಅವರು ಮಿಷನರಿಯಾಗಿದ್ರು. ಸಭೆಯ ಜವಾಬ್ದಾರಿಗಳನ್ನ ಚೆನ್ನಾಗಿ ಮಾಡೋದು ಹೇಗೆ ಅಂತ ಅವರು ನನಗೆ ಕಲಿಸಿದ್ರು. ಬ್ರದರ್‌ ಕೊಟ್ಟ ತರಬೇತಿಯಿಂದ ಮುಂದೆ ನನಗೆ ಸಹಾಯ ಆಗುತ್ತೆ ಅಂತ ಆಗ ನನಗೆ ಗೊತ್ತಿರಲಿಲ್ಲ. ಆದರೆ ಮುಂದಿನ ವರ್ಷ ನನ್ನನ್ನ ಸುರಿನಾಮ್‌ನ ದಟ್ಟ ಕಾಡಿನ ಮಧ್ಯ ಇರೋ ಒಂದು ಜಾಗಕ್ಕೆ ವಿಶೇಷ ಪಯನೀಯರಾಗಿ ಕಳಿಸಿದ್ರು. ಆಗ ನನಗೆ ಆ ತರಬೇತಿಯಿಂದ ಸಹಾಯ ಆಯ್ತು. ಅಲ್ಲಿನ ಸಹೋದರ ಸಹೋದರಿಯರು ಚಿಕ್ಕಚಿಕ್ಕ ಗುಂಪುಗಳಾಗಿ ಸೇರಿ ಬರ್ತಿದ್ರು. ಅವರಿಗೆ ನಾನು ಸಹಾಯ ಮಾಡ್ತಿದ್ದೆ. ನನಗೆ ತರಬೇತಿ ಕೊಟ್ಟ ಸಹೋದರ ವಿಲಮ್‌ ಮತ್ತು ಬೇರೆ ಸಹೋದರರಿಗೆ ನಾನು ಥ್ಯಾಂಕ್ಸ್‌ ಹೇಳೋಕೆ ಇಷ್ಟಪಡ್ತೀನಿ. ಅವರ ತರನೇ ನಾನೂ ಬೇರೆಯವರಿಗೆ ಈಗಲೂ ತರಬೇತಿ ಕೊಡ್ತಾ ಇದ್ದೀನಿ.

ನಾನು ಕಲಿತ ಎರಡನೇ ವಿಷಯ ಏನಂದ್ರೆ, ಸರಳವಾಗಿ ಜೀವಿಸಬೇಕು ಮತ್ತು ಮುಂಚೆನೇ ಎಲ್ಲಾ ಯೋಜನೆ ಮಾಡಬೇಕು. ನಮ್ಮ ಖರ್ಚಿಗೆ ಶಾಖಾ ಕಚೇರಿ ಪ್ರತಿ ತಿಂಗಳು ಸ್ವಲ್ಪ ಹಣ ಕೊಡ್ತಿತ್ತು. ನಾನು ಮತ್ತು ನನ್ನ ಪಯನೀಯರ್‌ ಪಾರ್ಟ್‌ನರ್‌ ತಿಂಗಳ ಶುರುವಿನಲ್ಲೇ ನಮಗೆ ಯಾವೆಲ್ಲ ವಸ್ತುಗಳು ಬೇಕಂತ ಪಟ್ಟಿ ಮಾಡ್ತಿದ್ವಿ. ನಂತರ ನಮ್ಮಲ್ಲಿ ಒಬ್ಬರು ದಟ್ಟವಾದ ಕಾಡಿನಿಂದ ಪೇಟೆ ತನಕ ಹೋಗಿ ಬೇಕಾದ ಎಲ್ಲಾ ವಸ್ತುಗಳನ್ನ ಖರೀದಿಸುತ್ತಿದ್ವಿ. ನಮ್ಮ ಹತ್ರ ಇರೋ ದುಡ್ಡನ್ನ ಹುಷಾರಾಗಿ ಖರ್ಚು ಮಾಡ್ತಿದ್ವಿ. ತಿಂಗಳಿಗೆ ಬೇಕಾದಷ್ಟು ದಿನಸಿಯನ್ನ ನೋಡಿಕೊಂಡು ತರುತ್ತಿದ್ವಿ. ಯಾಕಂದ್ರೆ ಏನಾದ್ರು ಖಾಲಿ ಆಗಿಬಿಟ್ಟರೆ ಅದು ಕಾಡಲ್ಲಿ ಸಿಗ್ತಿರಲಿಲ್ಲ. ಹೀಗೆ ಸರಿಯಾಗಿ ಯೋಜನೆ ಮಾಡ್ತಾ, ಸರಳ ಜೀವನ ನಡಿಸಿದ್ದರಿಂದ ಯೆಹೋವನ ಸೇವೆಗೆ ಪೂರ್ತಿ ಗಮನ ಕೊಡೋಕೆ ಆಯ್ತು.    

ನಾನು ಕಲಿತ ಮೂರನೇ ವಿಷಯ ಏನಂದ್ರೆ, ಜನರಿಗೆ ಅವರ ಭಾಷೆಯಲ್ಲಿ ಸಿಹಿಸುದ್ದಿ ಸಾರಿದಾಗ ಅದು ಅವರ ಹೃದಯ ಮುಟ್ಟುತ್ತೆ. ನನಗೆ ಡಚ್‌, ಇಂಗ್ಲಿಷ್‌, ಪಾಪಿಯಮೆಂಟೊ ಮತ್ತು ಸ್ರನನ್‌ಟನ್‌ಗೋ (ಸ್ರನಾನ್‌) ಭಾಷೆಗಳು ಮಾತಾಡೋಕೆ ಬರ್ತಿತ್ತು. ಈ ಭಾಷೆಗಳನ್ನ ಸುರಿನಾಮ್‌ನಲ್ಲಿ ಮಾತಾಡ್ತಾರೆ. ಆದ್ರೆ ನಾನು ಗಮನಿಸಿದ ಒಂದು ವಿಷಯ ಏನಂದ್ರೆ, ಕಾಡಲ್ಲಿ ನಾನು ಅವರ ಸ್ವಂತ ಭಾಷೆಯಲ್ಲಿ ಸಾರಿದಾಗ ಜನ ಅದನ್ನ ಇನ್ನೂ ಚೆನ್ನಾಗಿ ಕೇಳ್ತಿದ್ರು. ಆದ್ರೆ ನನಗೆ ಕಾಡಲ್ಲಿ ಮಾತಾಡೋ ಸಾರಾಮಕ್ಕನ್‌ ಭಾಷೆಯನ್ನ ಕಲಿಯೋದು ಕಷ್ಟ ಆಯ್ತು. ಯಾಕಂದ್ರೆ ಈ ಭಾಷೆಯಲ್ಲಿ ಸ್ವರ ಹೆಚ್ಚಿಸಿದಾಗ ಅಥವಾ ಕಡಿಮೆ ಮಾಡಿದಾಗ ಪದಗಳ ಅರ್ಥನೇ ಬದಲಾಗುತ್ತಿತ್ತು. ಆದರೂ ನಾನು ಶ್ರಮಪಟ್ಟು ಈ ಭಾಷೆಯನ್ನ ಚೆನ್ನಾಗಿ ಕಲಿತೆ. ಇದ್ರಿಂದ ಸತ್ಯವನ್ನ ಕಲಿಸೋಕೆ ಮತ್ತು ಜನರಿಗೆ ಸಹಾಯ ಮಾಡೋಕೆ ಆಯ್ತು.

ಈ ಭಾಷೆ ಕಲಿತಾ ಇರುವಾಗ ನಾನು ತಪ್ಪುತಪ್ಪಾಗಿ ಮಾತಾಡ್ತಿದ್ದೆ. ಉದಾಹರಣೆಗೆ, ಸಾರಾಮಕ್ಕನ್‌ ಭಾಷೆ ಮಾತಾಡೋ ಒಬ್ಬ ಬೈಬಲ್‌ ವಿದ್ಯಾರ್ಥಿಗೆ ಆರೋಗ್ಯ ಸರಿ ಇರಲಿಲ್ಲ. ಅವಳಿಗೆ ತುಂಬ ಹೊಟ್ಟೆ ನೋವಿತ್ತು. ನಾನು ‘ನಿಮ್ಮ ಹೊಟ್ಟೆ ನೋವು ಕಡಿಮೆ ಆಯ್ತಾ’ ಅಂತ ಕೇಳೋ ಬದಲು ‘ನೀವು ಬಸುರಿನಾ’ ಅಂತ ಕೇಳಿಬಿಟ್ಟೆ. ಆ ವಿದ್ಯಾರ್ಥಿಗೆ ಎಷ್ಟು ನಾಚಿಕೆ ಆಗಿರಬಹುದು ಅಂತ ಯೋಚನೆ ಮಾಡಿ. ಇಂಥ ಸಣ್ಣಪುಟ್ಟ ತಪ್ಪುಗಳು ಆದ್ರೂ ನಾನು ಪ್ರಯತ್ನನ ಬಿಟ್ಟುಬಿಡಲಿಲ್ಲ. ಎಲ್ಲೇ ಹೋದ್ರು ಜನರ ಹತ್ರ ಅವರ ಭಾಷೆಯಲ್ಲೇ ಮಾತಾಡೋಕೆ ಪ್ರಯತ್ನ ಮಾಡ್ತಾ ಇದ್ದೆ.

ಇನ್ನು ಜಾಸ್ತಿ ಜವಾಬ್ದಾರಿಗಳು ಸಿಕ್ತು

1970ರಲ್ಲಿ ನಾನು ಸರ್ಕಿಟ್‌ ಮೇಲ್ವಿಚಾರಕನಾದೆ. ಸುರಿನಾಮ್‌ನ ದಟ್ಟ ಕಾಡುಗಳಲ್ಲಿರೋ ಚಿಕ್ಕ-ಚಿಕ್ಕ ಗುಂಪುಗಳನ್ನ ಭೇಟಿಮಾಡಿ ಅವರಿಗೆ “ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯಕ್ಕೆ ಒಂದು ಭೇಟಿ” ಅನ್ನೋ ವಿಡಿಯೋ ತೋರಿಸ್ತಿದ್ದೆ. ಅದರಲ್ಲಿ ಚಿಕ್ಕಚಿಕ್ಕ ಚಿತ್ರಗಳಿರುತ್ತಿತ್ತು, ಅದನ್ನ ಸ್ಲೈಡ್‌ ಪ್ರೋಗ್ರಾಮ್‌ ಅಂತ ಕರೀತಿದ್ವಿ. ಅಲ್ಲಿಗೆ, ನಾನು ಮತ್ತು ಕೆಲವು ಸಹೋದರರು ಮರದಿಂದ ಮಾಡಿರೋ ಒಂದು ಚಿಕ್ಕ ದೋಣಿಯಲ್ಲಿ ಹೋಗ್ತಿದ್ವಿ. ಆ ಪ್ರೋಗ್ರಾಮ್‌ ತೋರಿಸೋಕೆ ಪ್ರೊಜೆಕ್ಟರ್‌, ಜನರೇಟರ್‌, ಚಿಮಣಿ ದೀಪ ಮತ್ತು ಪೆಟ್ರೋಲ್‌ ತುಂಬಿದ ಕ್ಯಾನ್‌ ತಗೊಂಡು ಹೋಗ್ತಿದ್ವಿ. ಇದೆಲ್ಲ ಅಷ್ಟು ಸುಲಭ ಆಗಿರಲಿಲ್ಲ. ಆದ್ರೆ ಈ ಪ್ರೋಗ್ರಾಮ್‌ನ ನೋಡಿದಾಗ ಅಲ್ಲಿನ ಜನರು ಎಷ್ಟು ಖುಷಿಪಡ್ತಿದ್ರು ಅನ್ನೋದನ್ನ ನಾನು ಯಾವತ್ತೂ ಮರೆಯೋಕಾಗಲ್ಲ. ಯೆಹೋವನ ಬಗ್ಗೆ, ಆತನ ಸಂಘಟನೆ ಬಗ್ಗೆ ಜನರಿಗೆ ತಿಳಿಸೋ ಅವಕಾಶ ನನಗೆ ಸಿಕ್ಕಿದ್ದಕ್ಕೆ ನಾನು ಚಿರಋಣಿ. ಆಗಾಗ ಸಮಸ್ಯೆಗಳು ಬರ್ತಿದ್ವು ನಿಜ, ಆದ್ರೆ ನನಗೆ ಸಿಕ್ಕಿದ ಆಶೀರ್ವಾದಗಳ ಬಗ್ಗೆ ಯೋಚನೆ ಮಾಡಿದ್ರೆ ಆ ಸಮಸ್ಯೆಗಳು ಯಾವ ಲೆಕ್ಕಕ್ಕೂ ಇಲ್ಲ ಅಂತ ಅನಿಸುತ್ತಿತ್ತು.

ಮೂರು ಎಳೆಗಳ ಹಗ್ಗ

1971ರ ಸೆಪ್ಟೆಂಬರ್‌ನಲ್ಲಿ ನಾನು ಮತ್ತು ಎತಲ್‌ ಮದುವೆಯಾದ್ವಿ

ನಾನು ಅವಿವಾಹಿತನಾಗಿ ಯೆಹೋವನಿಗೆ ಚೆನ್ನಾಗಿ ಸೇವೆ ಮಾಡ್ತಿದ್ದೆ. ಆದ್ರೂ ನನಗೆ ಜೀವನ ಸಂಗಾತಿ ಬೇಕು ಅಂತ ಅನಿಸ್ತು. ಅದಕ್ಕೆ ನಾನು, ಸುರಿನಾಮ್‌ನ ದಟ್ಟ ಕಾಡುಗಳ ಮಧ್ಯನೂ ಸಂತೋಷವಾಗಿ ಪೂರ್ಣ ಸಮಯ ಸೇವೆ ಮಾಡೋ ಸಂಗಾತಿ ಬೇಕಂತ ಯೆಹೋವನ ಹತ್ರ ಪ್ರಾರ್ಥಿಸಿದೆ. ಒಂದು ವರ್ಷ ಆದಮೇಲೆ, ಎತಲ್‌ ಅನ್ನೋ ವಿಶೇಷ ಪಯನೀಯರ್‌ ಸಹೋದರಿಯನ್ನ ನಾನು ಭೇಟಿಯಾದೆ. ಅವಳು ನನಗೆ ತುಂಬ ಇಷ್ಟ ಆದಳು. ನಾವು ಒಬ್ಬರನ್ನೊಬ್ಬರು ತಿಳ್ಕೊಳ್ಳೋಕೆ ಶುರು ಮಾಡಿದ್ವಿ. ಎತಲ್‌ ತುಂಬ ಹುರುಪಿನಿಂದ ಯೆಹೋವನ ಸೇವೆ ಮಾಡ್ತಿದ್ದಳು. ಅವಳಿಗೆ ಅಪೊಸ್ತಲ ಪೌಲನ ತರ ಆಗಬೇಕಂತ ಚಿಕ್ಕ ವಯಸ್ಸಿಂದನೂ ಆಸೆ ಇತ್ತು. ಸೆಪ್ಟೆಂಬರ್‌ 1971ರಲ್ಲಿ ನಾವು ಮದ್ವೆಯಾದ್ವಿ ಮತ್ತು ಸರ್ಕಿಟ್‌ ಕೆಲಸವನ್ನ ಮುಂದುವರಿಸಿದ್ವಿ.

ಎತಲ್‌ ಬಡ ಕುಟುಂಬದಿಂದ ಬಂದಿದ್ದರಿಂದ ಇರೋದರಲ್ಲೇ ಜೀವನ ಮಾಡೋದು ಹೇಗೆ ಅಂತ ಅವಳಿಗೆ ಗೊತ್ತಿತ್ತು. ನಾವು ದಟ್ಟ ಕಾಡಿನಲ್ಲಿ ಸಭೆಗಳನ್ನ ಭೇಟಿ ಮಾಡೋಕೆ ಹೋದಾಗ, ಜಾಸ್ತಿ ವಸ್ತುಗಳನ್ನ ತಗೊಂಡು ಹೋಗ್ತಿರಲಿಲ್ಲ. ನದಿಯಲ್ಲೇ ಸ್ನಾನ ಮಾಡ್ತಿದ್ವಿ, ಬಟ್ಟೆನೂ ಒಗಿತಿದ್ವಿ. ಸಹೋದರರು ಕಾಡಿನಿಂದ ಏನನ್ನ ಬೇಟೆಯಾಡಿ ತರುತ್ತಿದ್ದರೋ ಅದನ್ನೇ ತಿಂತಿದ್ವಿ. ಇಗುವಾನಾ ಪ್ರಾಣಿ ಮತ್ತು ಪಿರಾನಾ ಮೀನನ್ನ ತುಂಬ ಸಲ ತಿಂದಿದ್ದೀವಿ. ಊಟ ಮಾಡೋಕೆ ತಟ್ಟೆ ಇಲ್ಲ ಅಂದ್ರೆ ಬಾಳೆ ಎಲೆಯಲ್ಲಿ ಊಟ ಮಾಡ್ತಿದ್ವಿ. ಚಮಚ ಇಲ್ಲ ಅಂದ್ರೆ, ಕೈಯಿಂದ ಊಟ ಮಾಡ್ತಿದ್ವಿ. ಈ ತರ ನಾವಿಬ್ರೂ ತ್ಯಾಗ ಮಾಡಿದ್ದರಿಂದ ಒಬ್ಬರನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡ್ವಿ ಮತ್ತು ಯೆಹೋವನಿಗೂ ಹತ್ತಿರ ಆದ್ವಿ. ಹೀಗೆ ನಮ್ಮ ಮೂರು ಎಳೆಗಳ ಹಗ್ಗ ಅಂದ್ರೆ ನಮ್ಮ ಜೀವನ ತುಂಬ ಬಲವಾಯ್ತು. (ಪ್ರಸಂ. 4:12) ಎಷ್ಟೇ ಕಾಸು ಕೊಟ್ಟರೂ ಇಂಥ ಖುಷಿ ಸಿಗಲ್ಲ.

ಒಂದಿನ ನಾವು ಕಾಡಿನಿಂದ ವಾಪಸ್‌ ಬರ್ತಿರುವಾಗ, ಆರಂಭದಲ್ಲಿ ಹೇಳಿದ ಘಟನೆ ನಡಿತು. ನದಿಯಲ್ಲಿ ನೀರು ರಭಸವಾಗಿ ಹರಿತಾ ಇದ್ದಿದ್ರಿಂದ ದೋಣಿಯೊಳಗೆ ನೀರು ಬಂದುಬಿಡ್ತು. ನಾವು ಲೈಫ್‌ ಜಾಕೆಟ್‌ ಹಾಕೊಂಡಿದ್ರಿಂದ ನಮಗೇನೂ ತೊಂದ್ರೆ ಆಗಲಿಲ್ಲ. ನಾವು ತಕ್ಷಣ ನಮ್ಮ ಡಬ್ಬದಲ್ಲಿದ್ದ ಊಟನೆಲ್ಲ ನದಿಯಲ್ಲಿ ಹಾಕಿಬಿಟ್ವಿ, ಆ ಡಬ್ಬಗಳಿಂದ ದೋಣಿಯಲ್ಲಿದ್ದ ನೀರನ್ನ ಹೊರಗೆ ಚೆಲ್ಲೋಕೆ ಶುರು ಮಾಡಿದ್ವಿ.

ಈಗ ನಮ್ಮ ಹತ್ರ ಊಟ ಮಾಡೋಕೆ ಏನೂ ಇಲ್ದೆ ಇದ್ದಿದ್ರಿಂದ ನಾವು ಮೀನು ಹಿಡಿಯೋಕೆ ಶುರು ಮಾಡಿದ್ವಿ. ಎಷ್ಟು ಹೊತ್ತಾದ್ರೂ ಒಂದು ಮೀನೂ ಸಿಗಲಿಲ್ಲ. ಆಗ ನಾವು ಯೆಹೋವನಿಗೆ ಪ್ರಾರ್ಥನೆ ಮಾಡ್ತಾ ‘ಈ ದಿನದ ಊಟವನ್ನ ಕೊಡಪ್ಪಾ’ ಅಂತ ಕೇಳಿಕೊಂಡ್ವಿ. ಸ್ವಲ್ಪ ಹೊತ್ತಲ್ಲೇ, ನಮ್ಮ ಜೊತೆ ಇದ್ದ ಸಹೋದರ ಮೀನು ಹಿಡಿಯೋಕೆ ಬಲೆ ಬೀಸಿದ್ರು. ಆಗ ಅವರಿಗೆ ಒಂದು ದೊಡ್ಡ ಮೀನು ಸಿಕ್ತು. ಅದು ಎಷ್ಟು ದೊಡ್ಡದಿತ್ತು ಅಂದ್ರೆ ನಾವು ಐದು ಜನ ಹೊಟ್ಟೆ ತುಂಬ ಊಟ ಮಾಡಿದ್ವಿ.

ಗಂಡ, ಅಪ್ಪ ಮತ್ತು ಸರ್ಕಿಟ್‌ ಮೇಲ್ವಿಚಾರಕನಾಗಿ ಜವಾಬ್ದಾರಿಗಳು

ಸರ್ಕಿಟ್‌ ಸೇವೆಯಲ್ಲಿ 5 ವರ್ಷ ಕಳೆದ ಮೇಲೆ, ನಮಗೆ ಇನ್ನೊಂದು ಆಶೀರ್ವಾದ ಸಿಕ್ತು. ನಮಗೆ ಮಗು ಆಗುತ್ತೆ ಅಂತ ಗೊತ್ತಾಯ್ತು. ಇದ್ರಿಂದ ನಮಗೆ ತುಂಬ ಖುಷಿ ಆಯ್ತು. ಆದ್ರೆ ನನಗೆ ಮತ್ತು ಎತಲ್‌ಗೆ ಪೂರ್ಣ ಸಮಯದ ಸೇವೆಯನ್ನ ಮುಂದುವರಿಸಬೇಕು ಅನ್ನೋ ಆಸೆ ಇದ್ದಿದ್ರಿಂದ ಮುಂದೆ ಹೇಗಪ್ಪಾ ಅನ್ನೋ ಚಿಂತೆನೂ ಇತ್ತು. 1976ರಲ್ಲಿ, ನಮ್ಮ ಮೊದಲನೇ ಮಗ ಎತನಿಯೇಲ್‌ ಹುಟ್ಟಿದ, ಎರಡುವರೆ ವರ್ಷ ಆದಮೇಲೆ ಎರಡನೇ ಮಗ ಜೊವಾನೀ ಹುಟ್ಟಿದ.

1983ರಲ್ಲಿ ತಪನಾಹೋನಿ ನದಿಯಲ್ಲಿ ಸಹೋದರರು ದೀಕ್ಷಾಸ್ನಾನ ತಗೊಳ್ತಿದ್ದಾರೆ. ಈ ನದಿ ಪೂರ್ವ ಸುರಿನಾಮ್‌ನ ಗೊಡೊ ಹೊಲೋ ಹತ್ರ ಇದೆ

ಆಗ ಸುರಿನಾಮ್‌ನಲ್ಲಿ ತುಂಬ ಸಹೋದರರು ಬೇಕಾಗಿದ್ರಿಂದ ಸರ್ಕಿಟ್‌ ಕೆಲಸವನ್ನ ಮುಂದುವರಿಸಿಕೊಂಡು ಹೋಗೋಕೆ ಬ್ರಾಂಚ್‌ನಲ್ಲಿರೋ ಸಹೋದರರು ಹೇಳಿದ್ರು. ಮಕ್ಕಳು ತುಂಬ ಚಿಕ್ಕವರಾಗಿದ್ರಿಂದ ಕಡಿಮೆ ಸಭೆಗಳಿರುವ ಸರ್ಕಿಟ್‌ನಲ್ಲಿ ನನಗೆ ನೇಮಕ ಸಿಕ್ತು. ಕೆಲವು ವಾರ ನಾನು ಸರ್ಕಿಟ್‌ ಕೆಲಸ ಮಾಡ್ತಿದ್ದೆ. ಇನ್ನು ಕೆಲವು ವಾರ ನಮ್ಮ ಸಭೆಯಲ್ಲಿ ಪಯನೀಯರಾಗಿ ಸೇವೆ ಮಾಡ್ತಿದ್ದೆ. ಕೆಲವು ಸಲ ಮನೆ ಹತ್ರ ಇದ್ದ ಸಭೆಗಳನ್ನ ಭೇಟಿ ಮಾಡ್ತಿದ್ದಾಗ ಎತಲ್‌ ಮತ್ತು ಮಕ್ಕಳೂ ನನ್ನ ಜೊತೆ ಬರ್ತಿದ್ರು. ಆದರೆ ಸುರಿನಾಮ್‌ನ ದಟ್ಟವಾದ ಕಾಡಿನಲ್ಲಿರೋ ಸಭೆಗಳಿಗೆ ಮತ್ತು ಸಮ್ಮೇಳನಗಳಿಗೆ ಹೋಗಬೇಕಾದಾಗ ನಾನೊಬ್ಬನೇ ಹೋಗ್ತಿದ್ದೆ.

ನಾನು ಸರ್ಕಿಟ್‌ ಮೇಲ್ವಿಚಾರಕನಾಗಿದ್ದಾಗ, ತುಂಬ ಸಲ ದೋಣಿಯಲ್ಲಿ ದೂರದ ಸಭೆಗಳಿಗೆ ಭೇಟಿ ಮಾಡ್ತಿದ್ದೆ

ನನ್ನ ಜವಾಬ್ದಾರಿಗಳನ್ನ ಸರಿಯಾಗಿ ಮಾಡೋಕೆ ಒಳ್ಳೇ ಯೋಜನೆಯನ್ನೂ ಮಾಡಬೇಕಾಗಿತ್ತು. ಪ್ರತಿ ವಾರ ತಪ್ಪದೇ ಕುಟುಂಬ ಅಧ್ಯಯನ ಮಾಡೋಕೆ ನಾವು ಪ್ರಯತ್ನಿಸ್ತಿದ್ವಿ. ನಾನು ಕಾಡಿನಲ್ಲಿದ್ದ ಬೇರೆ ಸಭೆಗಳಿಗೆ ಭೇಟಿ ಮಾಡೋಕೆ ಹೋದಾಗ ಎತಲ್‌, ಮಕ್ಕಳ ಜೊತೆ ಕುಟುಂಬ ಅಧ್ಯಯನವನ್ನ ಮಾಡ್ತಿದ್ದಳು. ನಾವೇನೇ ಮಾಡಿದ್ರೂ ಕುಟುಂಬವಾಗಿ ಮಾಡ್ತಿದ್ವಿ. ನಾನು ಮತ್ತು ಎತಲ್‌ ಮಕ್ಕಳ ಜೊತೆ ಆಟ ಆಡ್ತಿದ್ವಿ, ಎಲ್ಲಾದ್ರೂ ಸುತ್ತಾಡೋಕೆ ಹೋಗ್ತಿದ್ವಿ. ನಾನು ಎಷ್ಟೋ ಸಲ ಮಧ್ಯರಾತ್ರಿ ತನಕ ಎಚ್ಚರ ಇದ್ದು ಭಾಷಣಗಳನ್ನ ಮತ್ತು ಬೇರೆ ನೇಮಕಗಳನ್ನ ತಯಾರಿಸ್ತಿದ್ದೆ. ಜ್ಞಾನೋಕ್ತಿ 31:15ರಲ್ಲಿ ಹೇಳಿರೋ ಹಾಗೇ, ಎತಲ್‌ ಬೆಳಿಗ್ಗೆ ಬೇಗ ಎದ್ದೇಳ್ತಿದ್ದಳು, ಮನೆ ಕೆಲಸಗಳನ್ನ ನೋಡ್ಕೊಳ್ತಿದ್ದಳು. ಮಕ್ಕಳನ್ನ ಶಾಲೆಗೆ ಕಳಿಸೋ ಮುಂಚೆ ನಾವು ದಿನದ ವಚನವನ್ನ ಓದಿ, ತಿಂಡಿ ತಿಂತಿದ್ವಿ. ಹೀಗೆ ಎತಲ್‌ ಸಹಾಯ ಮಾಡಿದ್ರಿಂದ ನಾನು ನನ್ನ ಜವಾಬ್ದಾರಿಯನ್ನ ಸರಿಯಾಗಿ ನಿರ್ವಹಿಸೋಕೆ ಆಯ್ತು. ಇಂಥ ಹೆಂಡತಿ ಸಿಕ್ಕಿದ್ದಕ್ಕೆ ನಾನು ತುಂಬ ಖುಷಿಪಡ್ತೀನಿ.

ನಮ್ಮ ಮಕ್ಕಳು ತಮ್ಮ ಜೀವನದಲ್ಲಿ ಪೂರ್ಣ ಸಮಯದ ಸೇವೆಯನ್ನ ಆಯ್ಕೆ ಮಾಡಬೇಕು ಅನ್ನೋದು ನಮ್ಮ ಆಸೆ ಆಗಿತ್ತು. ನಾವು ಹೇಳ್ತಿದ್ವಿ ಅಂತ ಅಲ್ಲ, ಬದಲಿಗೆ ಅವರೇ ಅದನ್ನ ಆಯ್ಕೆ ಮಾಡಬೇಕಿತ್ತು. ಅಪ್ಪ-ಅಮ್ಮ ಆಗಿ ನಾವು ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳೋಕೆ ಅವರಿಗೆ ಸಹಾಯ ಮಾಡಿದ್ವಿ. ಜೊತೆಗೆ ಸಾರೋ ಕೆಲಸದ ಮೇಲೂ ಆಸೆ ಬೆಳೆಯೋ ತರ ನೋಡಿಕೊಂಡ್ವಿ. ನಾವು ಪೂರ್ಣ ಸಮಯದ ಸೇವೆಯನ್ನ ಮಾಡುವಾಗ ಕಷ್ಟಗಳು ಬಂದ್ರು ಎಷ್ಟು ಸಂತೋಷವಾಗಿ ಇದ್ವಿ ಅಂತ ಮಕ್ಕಳಿಗೆ ಹೇಳ್ತಿದ್ವಿ. ಹೀಗೆ ಯೆಹೋವ ದೇವರು ನಮ್ಮ ಕುಟುಂಬವನ್ನ ಚೆನ್ನಾಗಿ ನೋಡಿಕೊಂಡಿದ್ದಾರೆ, ಸಹಾಯ ಮಾಡಿದ್ದಾರೆ, ಆಶೀರ್ವಾದಗಳನ್ನ ಕೊಟ್ಟಿದ್ದಾರೆ ಅಂತನೂ ಹೇಳ್ತಿದ್ವಿ. ನಮ್ಮ ಮಕ್ಕಳು ಸಹೋದರ ಸಹೋದರಿಯರ ಜೊತೆ ಜಾಸ್ತಿ ಸಮಯ ಕಳಿತಾ ಯಾವಾಗ್ಲೂ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡಬೇಕಂತ ಪ್ರೋತ್ಸಾಹಿಸ್ತಿದ್ವಿ.

ಕುಟುಂಬವನ್ನ ನೋಡಿಕೊಳ್ಳೋದು ಅಷ್ಟು ಸುಲಭ ಅಲ್ಲ. ಆದ್ರೆ ನಮ್ಮ ಕುಟುಂಬವನ್ನ ಆದಷ್ಟು ಚೆನ್ನಾಗಿ ನೋಡಿಕೊಳ್ಳೋಕೆ ನನ್ನಿಂದಾದ ಎಲ್ಲಾ ಪ್ರಯತ್ನ ಹಾಕಿದೆ. ಸುರಿನಾಮ್‌ನ ದಟ್ಟ ಕಾಡುಗಳಲ್ಲಿ ಮದುವೆ ಮುಂಚೆ ವಿಶೇಷ ಪಯನೀಯರಾಗಿ ಕೆಲಸ ಮಾಡ್ತಿದ್ದಾಗ ಹಣ ಉಳಿಸೋದ್ರ ಬಗ್ಗೆ ನಾನು ಕಲಿತಿದ್ದೆ. ಆಗ ಕಲಿತ ವಿಷಯಗಳು ಈಗ ನನಗೆ ಸಹಾಯ ಮಾಡ್ತಿತ್ತು. ನಮಗೆ ಅಗತ್ಯವಿರೋ ಎಲ್ಲಾ ವಸ್ತುಗಳು ನಮ್ಮ ಹತ್ರ ಯಾವಾಗ್ಲೂ ಇರ್ತಾ ಇರಲಿಲ್ಲ. ಹಾಗಿದ್ರೂ ಯೆಹೋವ ದೇವರು ಹೇಗೆ ನಮ್ಮ ಕೈ ಹಿಡಿದು ನಡಿಸಿದ್ರು ಅಂತ ನಾವೆಲ್ಲರು ಕಣ್ಣಾರೆ ನೋಡಿದ್ವಿ. ಉದಾಹರಣೆಗೆ, 1986ರಿಂದ 1992ರ ತನಕ ಸುರಿನಾಮ್‌ನಲ್ಲಿ ಅಂತರ್ಯುದ್ಧ ನಡಿತಿತ್ತು. ಆಗ ಜೀವನ ನಡೆಸೋಕೆ ಬೇಕಾದ ವಸ್ತುಗಳು ಸಿಗೋದು ತುಂಬ ಕಷ್ಟ ಆಗ್ತಿತ್ತು. ಅಂಥ ಸಂದರ್ಭದಲ್ಲೂ, ಯೆಹೋವ ನಮಗೇನು ಬೇಕೋ ಅದನ್ನ ಕೊಟ್ಟು ಏನೂ ಕಡಿಮೆ ಆಗದೇ ಇರೋ ತರ ನೋಡಿಕೊಂಡರು.—ಮತ್ತಾ. 6:32.

ಯೆಹೋವನ ಸೇವೆಗಿಂತ ಒಳ್ಳೇ ಕೆಲಸ ಬೇರೊಂದಿಲ್ಲ

ಎಡದಿಂದ ಬಲಕ್ಕೆ: ನಾನು ಮತ್ತು ನನ್ನ ಹೆಂಡತಿ ಎತಲ್‌

ನನ್ನ ದೊಡ್ಡ ಮಗ ಎತನಿಯೇಲ್‌ ಮತ್ತು ಅವನ ಹೆಂಡತಿ ನಟಾಲಿ

ನನ್ನ ಎರಡನೇ ಮಗ ಜೊವಾನೀ ಮತ್ತು ಅವನ ಹೆಂಡತಿ ಕ್ರಿಸ್ಟಲ್‌

ಯೆಹೋವ ಯಾವಾಗಲೂ ನಮ್ಮನ್ನ ಚೆನ್ನಾಗಿ ನೋಡಿಕೊಂಡನು. ಆತನ ಸೇವೆ ಮಾಡಿದ್ರಿಂದ ನಮಗೆ ತುಂಬ ಸಂತೃಪ್ತಿ ಸಿಕ್ಕಿದೆ. ಆತನ ಸಹಾಯದಿಂದನೇ ನಮ್ಮ ಮಕ್ಕಳನ್ನ ಚೆನ್ನಾಗಿ ಬೆಳೆಸೋಕೆ ಮತ್ತು ಆತನ ಬಗ್ಗೆ ಕಲಿಸೋಕೆ ಆಯ್ತು. ಈಗ ನಮ್ಮ ಮಕ್ಕಳನ್ನ ನೋಡುವಾಗ ನಮಗೆ ತುಂಬಾ ಖುಷಿ ಆಗುತ್ತೆ. ಅವರು ತಮ್ಮ ಜೀವನದಲ್ಲಿ ಪೂರ್ಣ ಸಮಯದ ಸೇವೆಯನ್ನೇ ಆಯ್ಕೆ ಮಾಡಿದ್ರು. ಎತನಿಯೇಲ್‌ ಮತ್ತು ಜೊವಾನೀ ರಾಜ್ಯ ಪ್ರಚಾರಕರ ಶಾಲೆಯಿಂದ ಪದವಿ ಪಡೆದಿದ್ದಾರೆ. ಅವರಿಬ್ಬರು ತಮ್ಮ ಹೆಂಡತಿಯರ ಜೊತೆ ಸುರಿನಾಮ್‌ನ ಬ್ರಾಂಚ್‌ ಆಫೀಸ್‌ನಲ್ಲಿ ಸೇವೆ ಮಾಡ್ತಿದ್ದಾರೆ.

ಈಗ ನನಗೆ ಮತ್ತು ಎತಲ್‌ಗೆ ವಯಸ್ಸಾಗಿದೆ. ನಾವಿಬ್ಬರು ವಿಶೇಷ ಪಯನೀಯರಾಗಿ ಯೆಹೋವನ ಸೇವೆಯನ್ನ ಮಾಡ್ತಾ ಇದ್ದೀವಿ. ನಮ್ಮಿಬ್ಬರಿಗೆ ಮಾಡೋಕೆ ಎಷ್ಟು ಕೆಲಸ ಇರುತ್ತೆ ಅಂದ್ರೆ ಈಗಲೂ ನನಗೆ ಈಜು ಕಲಿಯೋಕೆ ಸಮಯನೇ ಸಿಕ್ಕಿಲ್ಲ. ನನ್ನ ಜೀವನದ ಬಗ್ಗೆ ಒಂದು ಕ್ಷಣ ಕೂತು ಯೋಚನೆ ಮಾಡುವಾಗ, ನನಗೆ ಸ್ವಲ್ಪನೂ ಬೇಜಾರಾಗಲ್ಲ. ನಾನು ಯೌವನದಲ್ಲೇ ಪೂರ್ಣ ಸಮಯದ ಸೇವೆಯನ್ನ ಆಯ್ಕೆ ಮಾಡಿದಕ್ಕೆ ನನಗೆ ತುಂಬ ಸಂತೋಷ ಆಗುತ್ತೆ, ಹೆಮ್ಮೆ ಅನಿಸುತ್ತೆ. ಇದು ನನ್ನ ಇಡೀ ಜೀವನದಲ್ಲೇ ಮಾಡಿದ ಒಳ್ಳೇ ನಿರ್ಧಾರ ಆಗಿತ್ತು. ನಿಜವಾಗ್ಲೂ, ಯೆಹೋವನ ಸೇವೆ ಮಾಡೋದಕ್ಕಿಂತ ಒಳ್ಳೇ ಕೆಲಸ ಬೇರೊಂದಿಲ್ಲ.

b ವಿಲಮ್‌ ವಾನ್‌ ಸೇಅಲ್‌ರವರ ಜೀವನ ಕಥೆ ನವೆಂಬರ್‌ 8, 1999ರ ಎಚ್ಚರ! ಪತ್ರಿಕೆಯಲ್ಲಿರೋ “ನಿಜಸ್ಥಿತಿಯು ನನ್ನ ನಿರೀಕ್ಷಣೆಗಳನ್ನು ಮೀರಿಸಿದೆ” ಅನ್ನೋ ಲೇಖನದಲ್ಲಿದೆ.