ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 48

ನಿಷ್ಠೆ ತೋರಿಸೋಕೆ ಕಷ್ಟ ಆದಾಗ ದುಡುಕಬೇಡಿ

ನಿಷ್ಠೆ ತೋರಿಸೋಕೆ ಕಷ್ಟ ಆದಾಗ ದುಡುಕಬೇಡಿ

“ನೀನು ಏನೇ ಮಾಡಿದ್ರೂ ಯೋಚಿಸಿ ಕೆಲಸಮಾಡು.”—2 ತಿಮೊ. 4:5.

ಗೀತೆ 125 ದೇವಪ್ರಭುತ್ವಾತ್ಮಕ ಕ್ರಮಕ್ಕೆ ನಿಷ್ಠೆಯ ಅಧೀನತೆ

ಕಿರುನೋಟ a

1. ನಮಗೆ ಬೇಜಾರಾದಾಗಲೂ ಸರಿಯಾಗಿ ಯೋಚನೆ ಮಾಡೋದು ಹೇಗೆ? (2 ತಿಮೊತಿ 4:5)

 ನಮ್ಮ ಮನಸ್ಸಿಗೆ ನೋವಾದಾಗ ಅಥವಾ ಬೇಜಾರಾದಾಗ ಯೆಹೋವನಿಗೆ ಮತ್ತು ಆತನ ಸಂಘಟನೆಗೆ ನಿಷ್ಠೆ ತೋರಿಸೋಕೆ ಕೆಲವೊಮ್ಮೆ ಕಷ್ಟ ಆಗುತ್ತೆ. ಆಗ ನಾವೇನು ಮಾಡಬೇಕು? ನಾವು ಸರಿಯಾಗಿ ಯೋಚನೆ ಮಾಡಬೇಕು ಮತ್ತು ನಮ್ಮ ನಂಬಿಕೆ ಕಾಪಾಡಿಕೊಳ್ಳಬೇಕು. (2 ತಿಮೊತಿ 4:5 ಓದಿ.) ಇಂಥ ಸಮಯದಲ್ಲೂ ಸರಿಯಾಗಿ ಯೋಚನೆ ಮಾಡೋದು ಹೇಗೆ? ಒಂದು ವಿಷಯ ನಡೆದ ತಕ್ಷಣ ಅದನ್ನ ಮನಸ್ಸಿಗೆ ಹಚ್ಚಿಕೊಂಡು ತಲೆ ಕೆಡಿಸಿಕೊಳ್ಳಬಾರದು. ನಿಜವಾಗಲೂ ಏನು ನಡಿತು, ಯಾಕೆ ಹಾಗಾಯ್ತು ಅನ್ನೋದಕ್ಕೆ ಗಮನ ಕೊಡಬೇಕು. ಯೆಹೋವ ದೇವರ ತರ ಯೋಚನೆ ಮಾಡೋಕೆ ಪ್ರಯತ್ನ ಮಾಡಬೇಕು. ಹೀಗೆ ಮಾಡಿದ್ರೆ ನಾವು ಕೋಪದಿಂದ ಅಥವಾ ಬೇಜಾರಿಂದ ದುಡುಕಲ್ಲ.

2. ಈ ಲೇಖನದಲ್ಲಿ ಏನು ಚರ್ಚೆ ಮಾಡ್ತಿವಿ?

2 ಯೆಹೋವನಿಗೆ ಮತ್ತು ಆತನ ಸಂಘಟನೆಗೆ ನಿಷ್ಠೆಯಿಂದ ಇರೋಕೆ ಕಷ್ಟ ಆಗೋ ಮೂರು ಸನ್ನಿವೇಶಗಳ ಬಗ್ಗೆ ನಾವು ಹಿಂದಿನ ಲೇಖನದಲ್ಲಿ ಕಲಿತ್ವಿ. ಅವು ಸಭೆಯ ಹೊರಗಿಂದ ಬರೋ ಸಮಸ್ಯೆಗಳಾಗಿತ್ತು. ಆದ್ರೆ ಈಗ ಸಭೆ ಒಳಗಿಂದ ಬರೋ ಮೂರು ಸನ್ನಿವೇಶಗಳನ್ನ ನೋಡೋಣ. (1) ಸಭೆಯಲ್ಲಿ ನಮಗೆ ಅನ್ಯಾಯ ಆಗ್ತಿದೆ ಅಂತ ಅನಿಸಿದಾಗ (2) ನಮಗೆ ಶಿಸ್ತು ಸಿಕ್ಕಾಗ (3) ಸಂಘಟನೆಯಲ್ಲಿ ಆದ ಬದಲಾವಣೆಗಳಿಗೆ ಹೊಂದ್ಕೊಳ್ಳೋಕೆ ನಮಗೆ ಕಷ್ಟ ಆದಾಗ. ಇಂಥ ಸಂದರ್ಭಗಳಲ್ಲಿ ನಾವು ದುಡುಕದೆ ಸರಿಯಾಗಿ ಯೋಚನೆ ಮಾಡೋದು ಹೇಗೆ ಮತ್ತು ಯೆಹೋವನನ್ನು, ಆತನ ಸಂಘಟನೆಯನ್ನು ಬಿಟ್ಟು ಹೋಗದೆ ಇರೋಕೆ ಅಥವಾ ನಿಷ್ಠೆಯಿಂದ ಇರೋಕೆ ಏನು ಮಾಡಬೇಕು ಅಂತ ನೋಡೋಣ.

ಸಭೆಯಲ್ಲಿ ನಮಗೆ ಅನ್ಯಾಯ ಆಗ್ತಿದೆ ಅಂತ ಅನಿಸಿದಾಗ

3. ಸಭೆಯಲ್ಲಿರೋ ಯಾರಾದ್ರು ನಮಗೆ ಅನ್ಯಾಯ ಮಾಡ್ತಿದ್ದಾರೆ ಅಂತ ಅನಿಸಿದಾಗ ನಾವು ಏನು ಮಾಡಿಬಿಡ್ತೀವಿ?

3 ನಿಮ್ಮ ಸಭೆಯಲ್ಲಿರೋ ಹಿರಿಯರು ಅಥವಾ ಬೇರೆ ಯಾರಾದ್ರು ನಿಮಗೆ ಅನ್ಯಾಯ ಮಾಡಿದ್ದಾರೆ ಅಂತ ಯಾವತ್ತಾದ್ರೂ ಅನಿಸಿದ್ಯಾ? ಅವರು ಬೇಕು-ಬೇಕು ಅಂತ ಆ ರೀತಿ ಮಾಡಿರಲ್ಲ. (ರೋಮ. 3:23; ಯಾಕೋ. 3:2) ಆದ್ರೆ ಅವರು ನಡ್ಕೊಂಡ ರೀತಿಯಿಂದ ನಿಮಗೆ ನೋವಾಗಿರಬಹುದು. ಅದನ್ನ ಯೋಚನೆ ಮಾಡ್ತಾ ನೀವು ಎಷ್ಟೋ ರಾತ್ರಿ ನಿದ್ದೆಗೆಟ್ಟಿರಬಹುದು. ‘ನಮ್ಮ ಸಹೋದರ ಸಹೋದರಿಯರು ಈ ತರ ನಡ್ಕೊಳ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ, ಇದು ನಿಜವಾಗ್ಲೂ ದೇವರ ಸಂಘಟನೆನಾ’ ಅಂತನೂ ನಿಮಗೆ ಅನಿಸಿರುತ್ತೆ. ನೀವು ಈ ತರ ಯೋಚಿಸಬೇಕು ಅನ್ನೋದೇ ಸೈತಾನನ ಆಸೆ. (2 ಕೊರಿಂ. 2:11) ಇಂಥ ಯೋಚನೆಗಳು ನಮ್ಮ ತಲೆಯಲ್ಲಿ ತುಂಬಿಕೊಂಡ್ರೆ ನಾವು ಯೆಹೋವನನ್ನು ಮತ್ತು ಆತನ ಸಂಘಟನೆಯನ್ನು ಬಿಟ್ಟು ದೂರ ಹೋಗಿಬಿಡ್ತೀವಿ. ಹಾಗಾಗಿ ಸಭೆಯಲ್ಲಿ ಇರೋರು ಯಾರಾದ್ರೂ ನಮಗೆ ಅನ್ಯಾಯ ಮಾಡ್ತಿದ್ದಾರೆ ಅಂತ ಅನಿಸಿದ್ರೆ ದುಡುಕದೆ, ಸರಿಯಾಗಿ ಯೋಚನೆ ಮಾಡೋಕೆ ಏನು ಮಾಡಬೇಕು?

4. (ಎ) ಅನ್ಯಾಯ ಆದಾಗ ಸರಿಯಾಗಿ ಯೋಚನೆ ಮಾಡೋಕೆ ಯೋಸೇಫನಿಗೆ ಯಾವುದು ಸಹಾಯ ಮಾಡ್ತು? (ಬಿ) ಅವನಿಂದ ನಾವೇನು ಕಲಿಬಹುದು? (ಆದಿಕಾಂಡ 50:19-21)

4 ಮನಸ್ಸಲ್ಲಿ ಕೋಪ ಇಟ್ಕೊಬೇಡಿ. ಯೋಸೇಫನ ಉದಾಹರಣೆ ನೋಡಿ. ಅವನು ಹದಿವಯಸ್ಸಲ್ಲಿ ಇದ್ದಾಗ ಅವನ ಅಣ್ಣಂದಿರು ತುಂಬಾ ಅನ್ಯಾಯ ಮಾಡಿದ್ರು, ಅವನನ್ನ ದ್ವೇಷಿಸಿದ್ರು, ಅವರಲ್ಲಿ ಕೆಲವರು ಅವನನ್ನ ಕೊಲ್ಲೋಕೂ ನೋಡಿದ್ರು. (ಆದಿ. 37:4, 18-22) ಕೊನೇಲಿ ಅವನನ್ನ ಗುರುತು ಪರಿಚಯ ಇಲ್ಲದವರಿಗೆ ಗುಲಾಮನಾಗಿ ಮಾರಿಬಿಟ್ರು. ಇದರಿಂದ ಅವನು ಒಂದಲ್ಲ ಎರಡಲ್ಲ ಹದಿಮೂರು ವರ್ಷ ಕಷ್ಟ ಅನುಭವಿಸಬೇಕಾಯ್ತು. ಆದ್ರೂ ಯೋಸೇಫ ‘ಯೆಹೋವ ದೇವರು ನನ್ನನ್ನ ಪ್ರೀತಿಸ್ತಿಲ್ಲ, ನನಗೆ ಕಷ್ಟ ಬಂದಾಗಲೇ ಕೈ ಬಿಟ್ಟುಬಿಟ್ಟನು’ ಅಂತ ಯೋಚಿಸಲಿಲ್ಲ. ಅವನು ಯೆಹೋವನ ಮೇಲಾಗಲಿ ಅಣ್ಣಂದಿರ ಮೇಲಾಗಲಿ ಕೋಪ ಮಾಡಿಕೊಳ್ಳಲಿಲ್ಲ. ಅವನಿಗಾದ ಅನ್ಯಾಯನ ನೆನಸಿಕೊಂಡು ತಲೆ ಕೆಡಿಸಿಕೊಳ್ಳದೆ ಇದ್ದಿದ್ರಿಂದ ಸರಿಯಾಗಿ ಯೋಚನೆ ಮಾಡೋಕಾಯ್ತು. ಅದಕ್ಕೆ ಅಣ್ಣಂದಿರ ಮೇಲೆ ಸೇಡು ತೀರಿಸಿಕೊಳ್ಳೋಕೆ ಅವಕಾಶ ಸಿಕ್ಕಿದ್ರೂ ಅವನು ಹಾಗೆ ಮಾಡ್ಲಿಲ್ಲ, ಅವರನ್ನ ಕ್ಷಮಿಸಿಬಿಟ್ಟ. ಅವರಿಗೆ ಪ್ರೀತಿ ತೋರಿಸಿದ. (ಆದಿ. 45:4, 5) ಯೋಸೇಫನಿಗೆ ಇದನ್ನೆಲ್ಲ ಮಾಡೋಕೆ ಯಾವುದು ಸಹಾಯ ಮಾಡ್ತು? ಅವನು ತನ್ನ ಕಷ್ಟಗಳ ಬಗ್ಗೆನೇ ಯೋಚನೆ ಮಾಡ್ತಿರ್ಲಿಲ್ಲ, ಯೆಹೋವನ ಉದ್ದೇಶ ಏನು ಅನ್ನೋದ್ರ ಬಗ್ಗೆ ಯೋಚನೆ ಮಾಡ್ತಿದ್ದ. (ಆದಿಕಾಂಡ 50:19-21 ಓದಿ.) ಇದರಿಂದ ನಾವೇನು ಕಲಿತೀವಿ? ಯಾರಾದ್ರೂ ನಮಗೆ ಅನ್ಯಾಯ ಮಾಡ್ದಾಗ ಯೆಹೋವನ ಮೇಲೆ ಕೋಪ ಮಾಡ್ಕೊಬಾರದು, ಯೆಹೋವ ನನ್ನ ಕೈ ಬಿಟ್ಟುಬಿಟ್ಟಿದ್ದಾನೆ ಅಂತನೂ ಅಂದುಕೊಳ್ಳಬಾರದು. ಬದಲಿಗೆ ಆ ಕಷ್ಟನ ಸಹಿಸಿಕೊಳ್ಳೋಕೆ ಯೆಹೋವ ಹೇಗೆಲ್ಲ ಸಹಾಯ ಮಾಡ್ತಿದ್ದಾನೆ ಅಂತ ಯೋಚಿಸಬೇಕು. ಅಷ್ಟೇ ಅಲ್ಲ ನಮಗೆ ಅನ್ಯಾಯ ಮಾಡಿದವರ ಮೇಲೆನೂ ನಾವು ಕೋಪ ಮಾಡ್ಕೊಬಾರದು. ಅವರಿಗೆ ಪ್ರೀತಿ ತೋರಿಸ್ತಾ ಅವರ ತಪ್ಪುಗಳನ್ನ ಮರೆತುಬಿಡಬೇಕು.—1 ಪೇತ್ರ 4:8.

5. ತನಗೆ ಅನ್ಯಾಯ ಆಗ್ತಿದೆ ಅಂತ ಅನಿಸಿದ್ರೂ ಸಹೋದರ ಮೈಕಲ್‌ ಸರಿಯಾಗಿ ಯೋಚನೆ ಮಾಡೋಕೆ ಏನು ಮಾಡಿದ್ರು?

5 ದಕ್ಷಿಣ ಅಮೇರಿಕಾದಲ್ಲಿರೋ ಮೈಕಲ್‌ b ಅನ್ನೋ ಒಬ್ಬ ಹಿರಿಯನ ಉದಾಹರಣೆ ನೋಡಿ. ಸಭೆಯಲ್ಲಿ ಜವಾಬ್ದಾರಿ ಸ್ಥಾನದಲ್ಲಿದ್ದ ಸಹೋದರರು ನಡ್ಕೊಂಡ ರೀತಿಯಿಂದ ಅವರಿಗೆ ತುಂಬಾ ನೋವಾಯ್ತು. ಇದರಿಂದ ತನಗೆ ಅನ್ಯಾಯ ಆಗ್ತಿದೆ ಅಂತ ಆ ಸಹೋದರನಿಗೆ ಅನಿಸ್ತು. “ಈ ಮುಂಚೆ ನನಗೆ ಯಾವತ್ತೂ ಅಷ್ಟು ನೋವಾಗಿರಲಿಲ್ಲ, ನನಗೆ ಆ ನೋವನ್ನ ಮರೆಯೋಕೆ ಆಗ್ತಿರಲಿಲ್ಲ, ರಾತ್ರಿಯೆಲ್ಲ ನಿದ್ದೆನೇ ಬರ್ತಿರಲಿಲ್ಲ. ಇದನ್ನ ನೆನಸಿಕೊಂಡು ಎಷ್ಟೋ ಸಲ ಅತ್ತಿದ್ದೀನಿ” ಅಂತ ಆ ಸಹೋದರ ಹೇಳ್ತಾರೆ. ಇಷ್ಟೆಲ್ಲ ಆದ್ರೂ ಸಹೋದರ ಮೈಕಲ್‌ ಕೋಪ ಮಾಡ್ಕೊಳ್ಳದೇ ಸರಿಯಾಗಿ ಯೋಚನೆ ಮಾಡೋಕೆ ಪ್ರಯತ್ನ ಮಾಡಿದ್ರು. ಆಗಿರೋ ಅನ್ಯಾಯನ ಸಹಿಸಿಕೊಳ್ಳೋಕೆ ಪವಿತ್ರಶಕ್ತಿ ಕೊಡಪ್ಪಾ ಅಂತ ಯೆಹೋವನ ಹತ್ರ ಪದೇಪದೇ ಬೇಡ್ತಾ ಇದ್ದರು. ಅಷ್ಟೇ ಅಲ್ಲ ಅದರ ಬಗ್ಗೆ ನಮ್ಮ ಪ್ರಕಾಶನಗಳಲ್ಲಿ ಹುಡುಕಿ ಓದ್ತಿದ್ರು. ಸಹೋದರ ಮೈಕಲ್‌ನಿಂದ ನಾವೇನು ಕಲಿಬಹುದು? ಸಭೆಯಲ್ಲಿ ಯಾರಾದ್ರೂ ನಮಗೆ ಅನ್ಯಾಯ ಮಾಡ್ತಿದ್ದಾರೆ ಅಂತ ಅನಿಸಿದಾಗ ನಾವು ದುಡುಕಬಾರದು, ಅವರ ಮೇಲೆ ಕೋಪ ಮಾಡ್ಕೊಳ್ಳಬಾರದು. ಅವರ ಪರಿಸ್ಥಿತಿ ಹೇಗಿತ್ತೋ ಏನೋ ನಮಗೆ ಗೊತ್ತಿಲ್ಲ. ಅವರು ಹಾಗೆ ಹೇಳಿದ್ದಕ್ಕೆ ಅಥವಾ ಹಾಗೆ ನಡಕೊಂಡಿದ್ದಕ್ಕೆ ಕಾರಣ ಏನು ಅಂತನೂ ನಮಗೆ ಗೊತ್ತಿಲ್ಲ. ಹಾಗಾಗಿ ನಾವು ಯೆಹೋವನ ಹತ್ರ ಪ್ರಾರ್ಥನೆ ಮಾಡಬೇಕು. ಅವರ ಜಾಗದಲ್ಲಿ ನಿಂತು ಯೋಚನೆ ಮಾಡೋಕೆ ಸಹಾಯ ಮಾಡಪ್ಪ ಅಂತ ಬೇಡಿಕೊಳ್ಳಬೇಕು. ಹೀಗೆ ಮಾಡಿದಾಗ ಅವರು ಬೇಕುಬೇಕು ಅಂತ ನಿಮ್ಮ ಮನಸ್ಸು ನೋಯಿಸಿಲ್ಲ ಅಂತ ಅರ್ಥ ಮಾಡ್ಕೊಳ್ಳೋಕೆ ಮತ್ತು ಅವರನ್ನ ಕ್ಷಮಿಸೋಕೆ ಆಗುತ್ತೆ. (ಜ್ಞಾನೋ. 19:11) ಅಷ್ಟೇ ಅಲ್ಲ ನಿಮಗೆ ಎಷ್ಟು ನೋವಿದೆ ಅಂತ ಯೆಹೋವನಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಅದನ್ನ ಸಹಿಸಿಕೊಳ್ಳೋಕೆ ಬೇಕಾದ ಶಕ್ತಿಯನ್ನ ಆತನು ನಿಮಗೆ ಕೊಟ್ಟೇ ಕೊಡ್ತಾನೆ.—2 ಪೂರ್ವ. 16:9; ಪ್ರಸಂ. 5:8.

ನಮಗೆ ಶಿಸ್ತು ಸಿಕ್ಕಾಗ

6. ಯೆಹೋವ ನಮಗೆ ಶಿಸ್ತು ಕೊಡ್ತಾ ಇರೋದು ಆತನಿಗೆ ನಮ್ಮ ಮೇಲೆ ಪ್ರೀತಿ ಇರೋದ್ರಿಂದನೇ ಅಂತ ಯಾಕೆ ಅರ್ಥ ಮಾಡ್ಕೊಳ್ಳಬೇಕು? (ಇಬ್ರಿಯ 12:5, 6, 11)

6 ನಮಗೆ ಶಿಸ್ತು ಸಿಕ್ಕಿದಾಗ ಬೇಜಾರಾಗುತ್ತೆ, ನೋವಾಗುತ್ತೆ. ಆದ್ರೆ ನಾವು ಆ ನೋವಲ್ಲೇ ಮುಳುಗಿ ಹೋಗಬಾರದು. ಯಾಕಂದ್ರೆ ಆ ರೀತಿ ಆದ್ರೆ ‘ನಮಗೆ ಶಿಸ್ತು ಸಿಕ್ಕಿದ್ದು ಸರಿಯಲ್ಲ. ಇದು ತುಂಬಾ ದೊಡ್ಡ ಅನ್ಯಾಯ’ ಅಂತ ಅನಿಸುತ್ತೆ. ಆಗ ಯೆಹೋವ ನಮಗೆ ಶಿಸ್ತು ಕೊಡೋದು ಯಾವಾಗಲೂ ನಮ್ಮ ಮೇಲಿರೋ ಪ್ರೀತಿಯಿಂದನೇ ಅನ್ನೋದನ್ನ ನಾವು ಮರೆತುಬಿಡ್ತೀವಿ. (ಇಬ್ರಿಯ 12:5, 6, 11 ಓದಿ.) ನಮಗೆ ಶಿಸ್ತು ಸಿಕ್ಕಾಗ ಬೇಜಾರು ಮಾಡಿಕೊಂಡು ಕುಗ್ಗಿ ಹೋದ್ರೆ ಯೆಹೋವನನ್ನು, ಆತನ ಸಂಘಟನೆಯನ್ನು ಬಿಟ್ಟು ದೂರ ಹೋಗಿಬಿಡ್ತೀವಿ. ಸೈತಾನನಿಗೆ ಬೇಕಾಗಿರೋದು ಇದೇ. ಹಾಗಾದ್ರೆ ಶಿಸ್ತು ಸಿಕ್ಕಿದಾಗ ನಾವು ಬೇಜಾರು ಮಾಡಿಕೊಳ್ಳದೆ ಇರೋಕೆ, ಸರಿಯಾಗಿ ಯೋಚನೆ ಮಾಡೋಕೆ ಏನು ಮಾಡಬೇಕು?

ಶಿಸ್ತು ಸಿಕ್ಕಿದಾಗ ಪೇತ್ರ ತಿದ್ದಿಕೊಂಡಿದ್ರಿಂದ ಯೆಹೋವ ಅವನಿಗೆ ದೊಡ್ಡ ಜವಾಬ್ದಾರಿಗಳನ್ನ ಕೊಟ್ಟನು (ಪ್ಯಾರ 7 ನೋಡಿ)

7. (ಎ) ಚಿತ್ರದಲ್ಲಿ ನೋಡೋ ಹಾಗೆ ಪೇತ್ರ ಶಿಸ್ತನ್ನ ಒಪ್ಪಿಕೊಂಡಿದ್ದಕ್ಕೆ ಯೆಹೋವ ಅವನನ್ನ ಹೇಗೆಲ್ಲಾ ಆಶೀರ್ವದಿಸಿದನು? (ಬಿ) ಪೇತ್ರನಿಂದ ನಾವೇನು ಕಲಿತೀವಿ?

7 ಶಿಸ್ತು ಸಿಕ್ಕಿದಾಗ ಒಪ್ಕೊಂಡು ತಿದ್ದಿಕೊಳ್ಳಿ. ಪೇತ್ರನ ಉದಾಹರಣೆ ನೋಡಿ. ಯೇಸು ಅವನನ್ನ ಎಷ್ಟೋ ಸಲ ಅಪೊಸ್ತಲರ ಮುಂದೆ ತಿದ್ದಿದನು. (ಮಾರ್ಕ 8:33; ಲೂಕ 22:31-34) ಆಗ ಪೇತ್ರನಿಗೆ ಎಷ್ಟು ಅವಮಾನ ಆಗಿರಬೇಕಲ್ವಾ? ಆದ್ರೂ ಪೇತ್ರ ಯೇಸುನ ಬಿಟ್ಟು ಹೋಗಲಿಲ್ಲ, ಆತನ ಜೊತೆನೇ ಇದ್ದ. ಯೇಸು ಕೊಟ್ಟ ಶಿಸ್ತನ್ನ ಒಪ್ಪಿಕೊಂಡು ತಿದ್ದಿಕೊಂಡ. ಇದರಿಂದ ಯೆಹೋವ ಅವನನ್ನ ಆಶೀರ್ವದಿಸಿದನು. ಸಭೆಯಲ್ಲಿ ಅವನಿಗೆ ದೊಡ್ಡದೊಡ್ಡ ಜವಾಬ್ದಾರಿಗಳನ್ನ ಕೊಟ್ಟನು. (ಯೋಹಾ. 21:15-17; ಅ. ಕಾ. 10:24-33; 1 ಪೇತ್ರ 1:1) ಪೇತ್ರನಿಂದ ನಾವೇನು ಕಲಿಬಹುದು? ನಮಗೆ ಶಿಸ್ತು ಸಿಕ್ಕಿದಾಗ ‘ಬೇರೆಯವರ ಮುಂದೆ ನನ್ನ ಮಾನ ಮರ್ಯಾದೆ ಎಲ್ಲ ಹೋಯ್ತಲ್ಲಾ’ ಅಂತ ಯೋಚನೆ ಮಾಡಬಾರದು. ಬದಲಿಗೆ ಆ ಶಿಸ್ತನ್ನ ಒಪ್ಪಿಕೊಂಡು ತಿದ್ಕೊಬೇಕು. ಇದ್ರಿಂದ ನಮಗೂ ಬೇರೆಯವರಿಗೂ ಪ್ರಯೋಜನ ಆಗುತ್ತೆ. ಯೆಹೋವ ನಮ್ಮನ್ನ ಆಶೀರ್ವದಿಸ್ತಾನೆ ಮತ್ತು ಸುಯೋಗಗಳನ್ನೂ ಕೊಡ್ತಾನೆ.

8-9. ಶಿಸ್ತು ಸಿಕ್ಕಾಗ ಬರ್ನಾಡೋ ಅವರಿಗೆ ಹೇಗನಿಸ್ತು? ಆದ್ರೆ ಅಮೇಲೆ ಸರಿಯಾಗಿ ಯೋಚಿಸೋಕೆ ಅವರಿಗೆ ಯಾವುದು ಸಹಾಯ ಮಾಡ್ತು?

8 ಮೊಜಾಂಬಿಕ್‌ನಲ್ಲಿರೋ ಸಹೋದರ ಬರ್ನಾಡೋ ಅವರ ಅನುಭವ ನೋಡಿ. ಅವರು ಹಿರಿಯನಾಗಿ ಸೇವೆ ಮಾಡ್ತಿದ್ದ ಸುಯೋಗ ಕಳ್ಕೊಂಡ್ರು. ಆಗ ಅವರಿಗೆ ಹೇಗನಿಸ್ತು? “ನನಗೆ ತುಂಬಾ ಬೇಜಾರಾಯ್ತು, ಕೋಪನೂ ಬಂತು” ಅಂತ ಅವರು ಹೇಳ್ತಾರೆ. ಸಭೆಯಲ್ಲಿರೋರು ತನ್ನ ಬಗ್ಗೆ ಏನು ಅಂದುಕೊಳ್ತಾರೋ ಅನ್ನೋದ್ರ ಬಗ್ಗೆನೇ ಅವರಿಗೆ ಚಿಂತೆಯಾಗಿಬಿಟ್ಟಿತ್ತು. “ನನಗ್ಯಾಕೆ ಶಿಸ್ತು ಕೊಟ್ಟರು ಅಂತ ಅರ್ಥ ಮಾಡಿಕೊಳ್ಳೋಕೆ ತುಂಬ ಕಷ್ಟ ಆಯ್ತು. ಯೆಹೋವ ಹಾಗೂ ಆತನ ಸಂಘಟನೆ ಮೇಲೆ ಮತ್ತೆ ನಂಬಿಕೆ ಬೆಳೆಸಿಕೊಳ್ಳೋಕೆ ಕೆಲವು ತಿಂಗಳುಗಳೇ ಹಿಡಿತು” ಅಂತ ಆ ಸಹೋದರ ಹೇಳ್ತಾರೆ. ಸರಿಯಾಗಿ ಯೋಚಿಸೋಕೆ ಅವರಿಗೆ ಯಾವುದು ಸಹಾಯ ಮಾಡ್ತು?

9 ಸಹೋದರ ಬರ್ನಾಡೋ ಯೋಚನೆ ಮಾಡೋ ರೀತಿಯನ್ನ ತಿದ್ದಿಕೊಂಡ್ರು. “ನಾನು ಹಿರಿಯನಾಗಿದ್ದಾಗ ಬೇರೆಯವರಿಗೆ ಶಿಸ್ತು ಕೊಡುವಾಗೆಲ್ಲಾ ಇಬ್ರಿಯ 12:7ನ್ನ ತೋರಿಸ್ತಿದ್ದೆ. ಯೆಹೋವ ಯಾಕೆ ಅವರಿಗೆ ಶಿಸ್ತು ಕೊಡ್ತಿದ್ದಾರೆ ಅಂತ ಅರ್ಥ ಮಾಡಿಸೋಕೆ ಅವರಿಗೆ ಸಹಾಯ ಮಾಡ್ತಿದ್ದೆ. ಈಗ ಈ ವಚನವನ್ನ ನಾನು ಅನ್ವಯಿಸಿಕೊಳ್ಳಬೇಕು” ಅಂತ ಸಹೋದರ ಹೇಳ್ತಾರೆ. ಹಾಗಾಗಿ ಬರ್ನಾಡೋ ಯೆಹೋವನ ಮೇಲೆ, ಆತನ ಸಂಘಟನೆಯ ಮೇಲೆ ಮತ್ತೆ ನಂಬಿಕೆ ಬೆಳೆಸಿಕೊಳ್ಳೋಕೆ ಪ್ರಯತ್ನ ಹಾಕಿದ್ರು. ಬೈಬಲ್‌ನ ಇನ್ನೂ ಜಾಸ್ತಿ ಓದೋಕೆ ಶುರುಮಾಡಿದ್ರು ಮತ್ತು ಓದಿದ್ದರ ಬಗ್ಗೆ ಚೆನ್ನಾಗಿ ಯೋಚನೆ ಮಾಡ್ತಿದ್ರು. ಸಹೋದರ ಸಹೋದರಿಯರು ತನ್ನ ಬಗ್ಗೆ ಏನು ಅಂದುಕೊಳ್ತಾರೋ ಅನ್ನೋದು ಅವರ ಮನಸ್ಸಲ್ಲಿದ್ದರೂ ಅವರ ಜೊತೆ ಸೇವೆ ಮಾಡ್ತಿದ್ರು, ತಪ್ಪದೇ ಕೂಟಗಳಿಗೆ ಹೋಗ್ತಿದ್ರು. ಇದೆಲ್ಲ ಆಗಿ ಸ್ವಲ್ಪ ದಿನಗಳಾದ ಮೇಲೆ ಸಹೋದರ ಬರ್ನಾಡೋಗೆ ಮತ್ತೆ ಹಿರಿಯನಾಗಿ ಸೇವೆ ಮಾಡೋ ಸುಯೋಗ ಸಿಕ್ಕಿತು. ಈ ಸಹೋದರನಿಂದ ನಮಗೇನು ಪಾಠ? ನಮಗೂ ಶಿಸ್ತು ಸಿಕ್ಕಾಗ ಮರ್ಯಾದೆ ಹೋಯ್ತಲ್ಲಾ ಅಂತ ಯೋಚನೆ ಮಾಡೋದಕ್ಕಿಂತ ಅದನ್ನ ನಾವು ಒಪ್ಪಿಕೊಂಡು ನಮ್ಮನ್ನ ನಾವು ತಿದ್ದಿಕೊಳ್ಳಬೇಕು. c (ಜ್ಞಾನೋ. 8:33; 22:4) ಹೀಗೆ ನಾವು ಯೆಹೋವನಿಗೆ ಮತ್ತು ಆತನ ಸಂಘಟನೆಗೆ ನಿಷ್ಠೆ ತೋರಿಸಬೇಕು ಆಗ ಯೆಹೋವ ನಮ್ಮನ್ನ ಆಶೀರ್ವದಿಸ್ತಾನೆ.

ಸಂಘಟನೆಯಲ್ಲಾದ ಬದಲಾವಣೆಗಳಿಗೆ ಹೊಂದಿಕೊಳ್ಳೋಕೆ ಕಷ್ಟ ಆದಾಗ

10. ಕೆಲವು ಇಸ್ರಾಯೇಲ್ಯರಿಗೆ ನಿಷ್ಠೆ ತೋರಿಸೋಕೆ ಯಾಕೆ ಕಷ್ಟ ಆಯ್ತು?

10 ಸಂಘಟನೆಯಲ್ಲಿ ಕೆಲವು ಬದಲಾವಣೆಗಳಾದಾಗ ಅದು ನಮಗೆ ಇಷ್ಟ ಆಗದೆ ಇರಬಹುದು. ಹಾಗಂತ ಆ ಬದಲಾವಣೆಗಳನ್ನ ಒಪ್ಪಿಕೊಳ್ಳದಿದ್ರೆ ಯೆಹೋವನಿಂದ ನಾವು ದೂರ ಆಗಿಬಿಡ್ತೀವಿ. ಇದಕ್ಕೊಂದು ಉದಾಹರಣೆ ನೋಡೋಣ. ಮುಂಚೆ ಇಸ್ರಾಯೇಲ್ಯರ ಕಾಲದಲ್ಲಿ ಪ್ರತಿಯೊಂದು ಕುಟುಂಬದಲ್ಲೂ ಮನೆ ಯಜಮಾನ ಪುರೋಹಿತನ ಕೆಲಸ ಮಾಡ್ತಿದ್ದ. ಅವನೇ ಯಜ್ಞವೇದಿಗಳನ್ನ ಕಟ್ಟಿ ಕುಟುಂಬದ ಪರವಾಗಿ ಬಲಿ ಅರ್ಪಿಸುತ್ತಿದ್ದ. (ಆದಿ. 8:20, 21; 12:7; 26:25; 35:1, 6, 7; ಯೋಬ 1:5) ಆದ್ರೆ ಮೋಶೆಯ ನಿಯಮ ಪುಸ್ತಕ ಬಂದ ಮೇಲೆ ಒಂದು ಬದಲಾವಣೆ ಆಯ್ತು. ಇನ್ಮೇಲೆ ಆ ಬಲಿಗಳನ್ನ ಕುಟುಂಬದ ಯಜಮಾನ ಅಲ್ಲ ಆರೋನನ ಕುಟುಂಬದವರು ಕೊಡಬೇಕಿತ್ತು. ಒಂದುವೇಳೆ ಯಾರಾದ್ರೂ ಈ ನಿಯಮನ ಪಾಲಿಸಲಿಲ್ಲ ಅಂದ್ರೆ ಅವರಿಗೆ ಮರಣ ಶಿಕ್ಷೆ ಸಿಗ್ತಿತ್ತು. d (ಯಾಜ. 17:3-6, 8, 9) ಈ ಬದಲಾವಣೆ ಕೋರಹ, ದಾತಾನ್‌, ಅಬೀರಾಮ್‌ ಮತ್ತು ಅವರ ಜೊತೆ ಇದ್ದ 250 ಪ್ರಧಾನರಿಗೆ ಇಷ್ಟ ಆಗಲಿಲ್ಲ ಅಂತ ಅನಿಸುತ್ತೆ. (ಅರ. 16:1-3) ಅವರು ಮೋಶೆ ಮತ್ತು ಆರೋನನ ಅಧಿಕಾರನ ಒಪ್ಪಿಕೊಳ್ಳದೆ ಇದ್ದಿದ್ದಕ್ಕೆ ಇದೊಂದು ಕಾರಣ ಆಗಿದ್ದಿರಬಹುದು. ಅದೇನೇ ಆಗಿರಲಿ ಸಂಘಟನೆಯಲ್ಲಿ ಬದಲಾವಣೆ ಆದಾಗ ಅವರು ಯೆಹೋವನಿಗೆ ನಿಷ್ಠೆ ತೋರಿಸಲಿಲ್ಲ. ಇವತ್ತು ಸಂಘಟನೆಯಲ್ಲಿ ಬದಲಾವಣೆಗಳಾದಾಗ ಕೆಲವೊಮ್ಮೆ ನಿಷ್ಠೆ ತೋರಿಸೋಕೆ ನಮಗೂ ಕಷ್ಟ ಆಗಬಹುದು. ಆಗ ನಾವೇನು ಮಾಡಬೇಕು?

ಕೆಹಾತ್ಯರಿಗೆ ಬೇರೆ ನೇಮಕಗಳು ಸಿಕ್ಕಿದಾಗಲೂ ಅವರು ಬೇಜಾರು ಮಾಡಿಕೊಳ್ಳದೆ ಅದನ್ನ ಮನಸಾರೆ ಮಾಡಿದ್ರು (ಪ್ಯಾರ 11 ನೋಡಿ)

11. ಕೆಹಾತ್ಯರಿಂದ ನಾವೇನು ಕಲಿಬಹುದು?

11 ಸಂಘಟನೆ ಬದಲಾವಣೆಗಳನ್ನ ಮಾಡಿದಾಗ ಮನಸಾರೆ ಸಹಕಾರ ಕೊಡಿ. ಇಸ್ರಾಯೇಲ್ಯರು ಕಾಡಲ್ಲಿ ಪ್ರಯಾಣಿಸ್ತಿದ್ದಾಗ ಕೆಹಾತ್ಯರಿಗೆ ಒಂದು ವಿಶೇಷ ಕೆಲಸ ಇತ್ತು. ಇಸ್ರಾಯೇಲ್ಯರು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವಾಗೆಲ್ಲ ಕೆಹಾತ್ಯರು ಒಪ್ಪಂದದ ಮಂಜೂಷವನ್ನ ಹೊತ್ಕೊಂಡು ಹೋಗ್ತಿದ್ರು. (ಅರ. 3:29, 31; 10:33; ಯೆಹೋ. 3:2-4) ಆದ್ರೆ ಯೆಹೋವ ದೇವರು ಮಾತು ಕೊಟ್ಟ ದೇಶಕ್ಕೆ ಅವರು ಹೋದ ಮೇಲೆ ಮಂಜೂಷವನ್ನ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಗೊಂಡು ಹೋಗೋ ಅವಶ್ಯಕತೆ ಇರಲಿಲ್ಲ. ಇದ್ರಿಂದ ಕೆಹಾತ್ಯರ ನೇಮಕ ಬದಲಾಯ್ತು. ಸೊಲೊಮೋನನ ಆಳ್ವಿಕೆಯ ಸಮಯದಲ್ಲಿ ಈ ಕೆಹಾತ್ಯರಲ್ಲಿ ಕೆಲವರನ್ನ ಹಾಡು ಹೇಳೋಕೆ, ಬಾಗಿಲು ಕಾಯೋಕೆ ಮತ್ತು ಕಣಜಗಳನ್ನ ನೋಡ್ಕೊಳ್ಳೋಕೆ ನೇಮಿಸಲಾಯ್ತು. (1 ಪೂರ್ವ. 6:31-33; 26:1, 24) ಈ ತರ ನೇಮಕಗಳು ಬದಲಾದಾಗ ಕೆಹಾತ್ಯರು ‘ನಾನು ಆ ಮನೆತನದಿಂದ ಬಂದವನು, ನನಗೆ ಈ ಕೆಲಸ ಬೇಡ ಆ ಕೆಲಸ ಕೊಡಿ’ ಅಂತೆಲ್ಲ ಹೇಳಲಿಲ್ಲ. ಅವರಿಂದ ನಾವೇನು ಕಲಿತೀವಿ? ಸಂಘಟನೆಯಲ್ಲಿ ಕೆಲವು ಬದಲಾವಣೆಗಳಾದಾಗ ನಮ್ಮ ನೇಮಕಗಳಲ್ಲೂ ಬದಲಾವಣೆಗಳು ಆಗಬಹುದು. ನಮಗೆ ಯಾವ ನೇಮಕ ಸಿಕ್ಕಿದ್ರೂ ಅದನ್ನ ಖುಷಿಯಿಂದ ಮಾಡಬೇಕು. ಯೆಹೋವ ದೇವರು ನಾವು ಯಾವ ನೇಮಕ ಮಾಡ್ತಿದ್ದೀವಿ ಅನ್ನೋದನ್ನ ಅಲ್ಲ, ನಾವು ಆತನ ಮಾತು ಕೇಳ್ತಿವಾ ಇಲ್ವಾ ಅನ್ನೋದನ್ನ ನೋಡ್ತಾನೆ. ಅದರಿಂದ ನಾವು ನಮ್ಮ ನೇಮಕದ ಬಗ್ಗೆ ಯೋಚನೆ ಮಾಡೋದಕ್ಕಿಂತ ಯೆಹೋವನ ಮಾತು ಕೇಳೋದು ಮುಖ್ಯ ಅನ್ನೋದನ್ನ ಮನಸ್ಸಲ್ಲಿಡಬೇಕು.—1 ಸಮು. 15:22.

12. ಜೈ಼ನಾ ಅವರ ನೇಮಕ ಬದಲಾದಾಗ ಅವರಿಗೆ ಹೇಗನಿಸ್ತು?

12 ಜೈ಼ನಾ ಅನ್ನೋ ಸಹೋದರಿಯ ಉದಾಹರಣೆ ನೋಡಿ. ಅವರು ಬೆತೆಲ್‌ನಲ್ಲಿ 23 ವರ್ಷ ಸೇವೆ ಮಾಡಿದ್ರು. ಅವರಿಗೆ ಆ ನೇಮಕ ತುಂಬಾ ಇಷ್ಟ ಆಗಿತ್ತು. ಆದ್ರೆ ಅವರಿಗೆ ವಿಶೇಷ ಪಯನೀಯರ್‌ ಆಗಿ ನೇಮಕ ಬದಲಾದಾಗ ತುಂಬಾ ನೋವಾಯ್ತು. ಅವರು ಹೇಳಿದ್ದು: “ನೇಮಕ ಬದಲಾದ ತಕ್ಷಣ ನನಗೆ ಬೇಜಾರಾಯ್ತು. ನಾನು ಯಾವುದಕ್ಕೂ ಲಾಯಕ್ಕಿಲ್ಲ ಅಂತ ಅನಿಸ್ತು. ನಾನೇನು ತಪ್ಪು ಮಾಡಿದೆ ಅಂತ ನನ್ನ ನೇಮಕವನ್ನ ಬದಲಾಯಿಸಿದ್ರು ಅಂತ ಯೋಚನೆ ಮಾಡ್ತಿದ್ದೆ.” ಅಷ್ಟೇ ಅಲ್ಲ, ಅವರ ಸಭೆಯವರು ಕೂಡ “ನೀನು ಅಲ್ಲಿ ಸರಿಯಾಗಿ ಕೆಲಸ ಮಾಡ್ತಿರಲಿಲ್ಲ ಅನಿಸುತ್ತೆ, ಅದಕ್ಕೆ ನಿನ್ನ ಕಳಿಸಿಬಿಟ್ಟಿದ್ದಾರೆ” ಅಂತೆಲ್ಲ ಮಾತಾಡಿಬಿಟ್ರು. ಆಗ ಜೈ಼ನಾಗೆ ತುಂಬಾ ಬೇಜಾರಾಗೋಯ್ತು, ಕುಗ್ಗಿಹೋದ್ರು. ಅವರು ರಾತ್ರಿಯೆಲ್ಲ ಅಳ್ತಾ ಇದ್ರು. ಆದ್ರೂ ಅವರು ಸರಿಯಾಗಿ ಯೋಚನೆ ಮಾಡೋಕೆ ಪ್ರಯತ್ನ ಮಾಡಿದ್ರು. ಅವರು ಹೇಳಿದ್ದು: “ಯೆಹೋವ ನನ್ನನ್ನ ಪ್ರೀತಿಸ್ತಿಲ್ಲ, ನಾನು ಇಷ್ಟು ವರ್ಷ ಮಾಡಿದ ಸೇವೆಗೆ ಸಂಘಟನೆ ಬೆಲೆನೇ ಕೊಡ್ಲಿಲ್ಲ ಅಂತ ನಾನು ಅಂದುಕೊಳ್ಳಲಿಲ್ಲ.” ಜೈ಼ನಾಗೆ ಈ ರೀತಿ ಸರಿಯಾಗಿ ಯೋಚನೆ ಮಾಡೋಕೆ ಯಾವುದು ಸಹಾಯ ಮಾಡ್ತು?

13. ತನಗಾದ ನೋವಿಂದ ಜೈ಼ನಾ ಹೇಗೆ ಹೊರಗೆ ಬಂದ್ರು?

13 ಜೈ಼ನಾ ಅವರಿಗಾದ ನೋವಿಂದ ಹೇಗೆ ಹೊರಗೆ ಬಂದ್ರು? ಈ ತರ ನೇಮಕಗಳು ಬದಲಾದಾಗ ಏನು ಮಾಡಬೇಕು ಅಂತ ಹೇಳೋ ಲೇಖನಗಳನ್ನ ಅವರು ಓದಿದ್ರು. ಫೆಬ್ರವರಿ 1, 2001ರ ಕಾವಲಿನಬುರುಜುವಿನಲ್ಲಿ “ನಿರುತ್ಸಾಹವನ್ನ ನಿಭಾಯಿಸಲು ಸಾಧ್ಯವಿದೆ” ಅನ್ನೋ ಲೇಖನ ಅವರಿಗೆ ಸಿಕ್ತು. ಅವರಿಗೆ ಆ ಲೇಖನ ತುಂಬಾ ಸಹಾಯ ಮಾಡ್ತು. ಅದರಲ್ಲಿ ಅಪೊಸ್ತಲ ಮಾರ್ಕನಿಗೆ ನೇಮಕ ಬದಲಾದಾಗ ತುಂಬಾ ಕಷ್ಟ ಆಗಿರಬಹುದು ಅಂತ ಇತ್ತು. “ಮಾರ್ಕನ ಉದಾಹರಣೆ ನನಗೆ ಮದ್ದಿನ ತರ ಇತ್ತು, ನನ್ನ ಮನಸ್ಸಿಗಾದ ನೋವು ವಾಸಿಯಾಗೋಕೆ ಅದು ಸಹಾಯ ಮಾಡ್ತು” ಅಂತ ಜೈ಼ನಾ ಹೇಳ್ತಾರೆ. ಅಷ್ಟೇ ಅಲ್ಲ, ಅವರು ಹೀಗೆ ಆಗೋಯ್ತಲ್ಲ ಅಂತ ತನ್ನ ಬಗ್ಗೆನೇ ಯೋಚನೆ ಮಾಡ್ತಾ ಯಾರ ಜೊತೆನೂ ಬೆರೆಯದೆ ಒಂಟಿಯಾಗಿ ಇರ್ತಿರಲಿಲ್ಲ, ಫ್ರೆಂಡ್ಸ್‌ ಜೊತೆ ಯಾವಾಗಲೂ ಮಾತಾಡ್ತಿದ್ರು. ಸಂಘಟನೆ ಯಾವುದೇ ಬದಲಾವಣೆ ಮಾಡಿದ್ರೂ ಪವಿತ್ರಶಕ್ತಿಯ ಸಹಾಯದಿಂದನೇ ಮಾಡುತ್ತೆ ಮತ್ತು ಸಂಘಟನೆಗೆ ತನ್ನ ಮೇಲೆ ಪ್ರೀತಿ ಇರೋದ್ರಿಂದನೇ ಈ ನೇಮಕ ಕೊಡ್ತು ಅಂತ ಅವರು ಅರ್ಥ ಮಾಡಿಕೊಂಡ್ರು. ಯೆಹೋವನ ಕೆಲಸನ ಚೆನ್ನಾಗಿ ಮಾಡಿ ಮುಗಿಸೋದೇ ಸಂಘಟನೆಯ ಗುರಿ ಅನ್ನೋದನ್ನ ಅವರು ಮನಸ್ಸಲ್ಲಿಟ್ರು.

14. (ಎ) ಸಹೋದರ ಜೇಮ್ಸ್‌ಗೆ ಯಾಕೆ ಕಷ್ಟ ಆಯ್ತು? (ಬಿ) ಆದ್ರೂ ಸಂಘಟನೆಯಿಂದ ಬಂದ ನಿರ್ದೇಶನವನ್ನ ಅವರು ಯಾಕೆ ಪಾಲಿಸಿದ್ರು?

14 ಸ್ಲೊವೇನಿಯದಲ್ಲಿರೋ 73 ವರ್ಷದ ಜೇಮ್ಸ್‌ ಅನ್ನೋ ಹಿರಿಯನ ಉದಾಹರಣೆ ನೋಡಿ. ಅವರಿದ್ದ ರಾಜ್ಯ ಸಭಾಗೃಹವನ್ನ ಮುಚ್ಚಿಬಿಟ್ರು ಮತ್ತು ಅಲ್ಲಿದ್ದವರೆಲ್ಲರೂ ಇನ್ನೊಂದು ಸಭೆಗೆ ಹೋಗಬೇಕು ಅಂತ ಹೇಳಿದ್ರು. “ಇಷ್ಟು ಚೆನ್ನಾಗಿರೋ ರಾಜ್ಯ ಸಭಾಗೃಹನ ಯಾಕೆ ಮುಚ್ಚುತ್ತಿದ್ದಾರೋ ನನಗಂತೂ ಅರ್ಥ ಆಗ್ತಿಲ್ಲ, ಇತ್ತೀಚೆಗಷ್ಟೇ ನಾವಲ್ಲಿ ತುಂಬ ರಿಪೇರಿಗಳನ್ನ ಮಾಡಿದ್ವಿ. ನಾನು ಬಡಗಿಯಾಗಿ ಅಲ್ಲಿ ಎಷ್ಟೋ ಕೆಲಸಗಳನ್ನ ಮಾಡಿದ್ದೆ. ಆದ್ರೆ ಈಗ ವಯಸ್ಸಾಗಿರೋ ನನ್ನಂಥವರು ಹೊಸ ಸಭೆಗೆ ಹೋಗಿ ಅಲ್ಲಿ ಹೊಂದಿಕೊಳ್ಳೋದು ತುಂಬಾ ಕಷ್ಟ ಆಗುತ್ತೆ” ಅಂತ ಸಹೋದರ ಹೇಳ್ತಾರೆ. ಆದ್ರೆ ಅವರು ಆಮೇಲೆ ತಮ್ಮ ಯೋಚನೆಯನ್ನ ಬದಲಾಯಿಸಿಕೊಂಡ್ರು. ಇದರಿಂದ ಸಂಘಟನೆ ಕೊಟ್ಟ ನಿರ್ದೇಶನ ಪಾಲಿಸೋಕೆ ಅವರಿಗಾಯ್ತು. “ಯೆಹೋವನ ಸಂಘಟನೆ ಏನೇ ಬದಲಾವಣೆ ಮಾಡಿದ್ರೂ ಅದರಿಂದ ಒಳ್ಳೇದೇ ಆಗುತ್ತೆ. ಈ ಬದಲಾವಣೆಗಳಿಗೆ ನಾವು ಈಗ ಹೊಂದಿಕೊಂಡರೆ, ಮುಂದೆ ದೊಡ್ಡದೊಡ್ಡ ಬದಲಾವಣೆಗಳಾದಾಗ ಹೊಂದಿಕೊಳ್ಳೋಕೆ ಸುಲಭ ಆಗುತ್ತೆ. ಅದಕ್ಕೆ ಯೆಹೋವನ ಸಂಘಟನೆ ನಮ್ಮನ್ನ ತಯಾರಿ ಮಾಡ್ತಿದೆ” ಅಂತ ಸಹೋದರ ಹೇಳ್ತಾರೆ. ಇವತ್ತು ನಿಮಗೆ ನೇಮಕಗಳು ಬದಲಾದಾಗ ಅಥವಾ ಬೇರೆ ಸಭೆಗೆ ಹೋಗಬೇಕಾಗಿ ಬಂದಾಗ ಮೊದಮೊದಲು ಅದಕ್ಕೆ ಹೊಂದಿಕೊಳ್ಳೋಕೆ ಕಷ್ಟ ಆಗಬಹುದು. ಆದ್ರೂ ಯೆಹೋವ ನಿಮ್ಮ ಭಾವನೆಗಳನ್ನ ಅರ್ಥ ಮಾಡ್ಕೊಳ್ತಾನೆ ಅನ್ನೋದನ್ನ ಮರೆಯಬೇಡಿ. ಎಷ್ಟೇ ಕಷ್ಟ ಆದ್ರೂ ನೀವು ಯೆಹೋವನಿಗೆ ಮತ್ತು ಆತನ ಸಂಘಟನೆಗೆ ನಿಷ್ಠೆ ತೋರಿಸಿದ್ರೆ ಆತನು ಖಂಡಿತವಾಗ್ಲೂ ನಿಮ್ಮನ್ನ ಆಶೀರ್ವದಿಸ್ತಾನೆ.—ಕೀರ್ತ. 18:25.

ಯಾವಾಗಲೂ ಸರಿಯಾಗಿ ಯೋಚಿಸಿ

15. ಸಭೆ ಒಳಗಿಂದ ಸಮಸ್ಯೆಗಳು ಬಂದಾಗಲೂ ನಾವು ಸರಿಯಾಗಿ ಯೋಚನೆ ಮಾಡೋಕೆ ಏನು ಮಾಡಬೇಕು?

15 ಅಂತ್ಯ ಹತ್ರ ಆಗ್ತಿರುವಾಗ ಸಭೆಯಿಂದಾನೇ ನಮಗೆ ಸಮಸ್ಯೆಗಳು ಬರಬಹುದು. ಆಗ ನಾವು ದುಡುಕದೇ ಚೆನ್ನಾಗಿ ಯೋಚನೆ ಮಾಡಿದ್ರೆ ಯೆಹೋವನಿಗೆ ನಿಷ್ಠೆ ತೋರಿಸೋಕೆ ಆಗುತ್ತೆ. ಸಭೆಯಲ್ಲಿ ಯಾರಾದ್ರೂ ನಮಗೆ ಬೇಜಾರಾಗೋ ತರ ನಡ್ಕೊಂಡ್ರೆ ನಾವು ಕೋಪ ಮಾಡ್ಕೊಂಡು ಅದನ್ನ ಮನಸ್ಸಲ್ಲೇ ಇಟ್ಕೊಳ್ಳಬಾರದು. ನಮಗೆ ಶಿಸ್ತು ಸಿಕ್ಕಿದಾಗ ‘ನನಗೆ ಅವಮಾನ ಆಗೋಯ್ತಲ್ಲಾ’ ಅಂತ ಯೋಚನೆ ಮಾಡದೇ ಶಿಸ್ತನ್ನ ಒಪ್ಪಿಕೊಂಡು ತಿದ್ದಿಕೊಳ್ಳಬೇಕು. ಸಂಘಟನೆ ಏನಾದ್ರೂ ಬದಲಾವಣೆಗಳನ್ನ ಮಾಡಿದಾಗ ಅದಕ್ಕೆ ಹೊಂದಿಕೊಳ್ಳೋಕೆ ಕಷ್ಟ ಆದ್ರೂ ಅದನ್ನ ಯಾಕೆ ಮಾಡಿದೆ ಅಂತ ಅರ್ಥ ಮಾಡಿಕೊಂಡು ಈಗಿರೋ ನಿರ್ದೇಶನಗಳನ್ನ ಮನಸಾರೆ ಪಾಲಿಸಬೇಕು.

16. ನಾವು ಯೆಹೋವನ ಮೇಲೆ, ಆತನ ಸಂಘಟನೆ ಮೇಲೆ ನಂಬಿಕೆ ಕಳಕೊಳ್ಳದೇ ಇರೋಕೆ ಏನು ಮಾಡಬೇಕು?

16 ನಮಗೆ ಏನೇ ಕಷ್ಟ ಬಂದ್ರೂ ಯೆಹೋವನ ಮೇಲೆ ಆತನ ಸಂಘಟನೆ ಮೇಲೆ ನಂಬಿಕೆ ಕಳೆದುಕೊಳ್ಳಬಾರದು, ನಿಷ್ಠೆಯಿಂದ ಇರಬೇಕು. ಅದಕ್ಕೆ ನಾವು ಏನು ಮಾಡಬೇಕು? ಕಷ್ಟ ಬಂದಾಗ ದುಡುಕದೇ ಸರಿಯಾಗಿ ಯೋಚನೆ ಮಾಡಬೇಕು. ಅಂದ್ರೆ ಒಂದು ವಿಷಯ ನಡೆದ ತಕ್ಷಣ ಅದನ್ನ ಮನಸ್ಸಿಗೆ ಹಚ್ಚಿಕೊಂಡು ತಲೆ ಕೆಡಿಸಿಕೊಳ್ಳಬಾರದು. ನಿಜವಾಗಲೂ ಏನು ನಡಿತು, ಯಾಕೆ ಹಾಗಾಯ್ತು ಅನ್ನೋದಕ್ಕೆ ಗಮನ ಕೊಡಬೇಕು. ಯೆಹೋವ ದೇವರ ತರ ಯೋಚನೆ ಮಾಡೋಕೆ ಪ್ರಯತ್ನ ಮಾಡಬೇಕು. ನಮ್ಮ ತರಾನೇ ಸಮಸ್ಯೆಗಳನ್ನ ಅನುಭವಿಸಿ, ಜಯಿಸಿದವರ ಬಗ್ಗೆ ಬೈಬಲಲ್ಲಿ ಓದಬೇಕು, ಆಮೇಲೆ ಅದರ ಬಗ್ಗೆ ಚೆನ್ನಾಗಿ ಯೋಚನೆ ಮಾಡಬೇಕು. ಸಹಾಯ ಮಾಡಪ್ಪ ಅಂತ ಯೆಹೋವನ ಹತ್ತಿರ ಬೇಡಿಕೊಳ್ಳಬೇಕು, ಸಭೆಯವರ ಜೊತೆ ಬೆರೆಯಬೇಕು. ಇದನ್ನೆಲ್ಲ ನಾವು ಮಾಡಿದ್ರೆ ಸೈತಾನ ತಲೆ ಕೆಳಗೆ ಮಾಡಿ ನಿಂತ್ರೂ ನಮ್ಮನ್ನ ಯೆಹೋವನಿಂದ, ಆತನ ಸಂಘಟನೆಯಿಂದ ದೂರ ಮಾಡೋಕಾಗಲ್ಲ.—ಯಾಕೋ. 4:7.

ಗೀತೆ 43 ಎಚ್ಚರವಾಗಿರಿ, ದೃಢರಾಗಿ ನಿಲ್ಲಿರಿ, ಬಲಿಷ್ಠರಾಗಿ ಬೆಳೆಯಿರಿ

a ಸಭೆ ಅಥವಾ ಸಂಘಟನೆಯಲ್ಲಿ ನಡೆಯೋ ಕೆಲವು ವಿಷಯಗಳಿಂದ ಕೆಲವೊಮ್ಮೆ ನಮಗೆ ಬೇಜಾರಾಗಬಹುದು. ಆಗ ಯೆಹೋವನಿಗೆ ಮತ್ತು ಆತನ ಸಂಘಟನೆಗೆ ನಿಷ್ಠೆಯಿಂದ ಇರೋಕೆ ನಮಗೆ ಕಷ್ಟ ಆಗಬಹುದು. ಅಂಥ ಮೂರು ಸನ್ನಿವೇಶಗಳ ಬಗ್ಗೆ ಈ ಲೇಖನದಲ್ಲಿ ಚರ್ಚೆ ಮಾಡೋಣ. ಯೆಹೋವನಿಗೆ ಮತ್ತು ಆತನ ಸಂಘಟನೆಗೆ ನಿಷ್ಠೆಯಿಂದ ಇರೋದು ಹೇಗೆ ಅಂತನೂ ನೋಡೋಣ.

b ಕೆಲವರ ಹೆಸರು ಬದಲಾಗಿದೆ.

c ಆಗಸ್ಟ್‌ 15, 2009ರ ಕಾವಲಿನಬುರುಜುವಿನ ಪುಟ 30ರಲ್ಲಿರೋ “ನೀವು ಹಿಂದೊಮ್ಮೆ ಸೇವೆ ಮಾಡಿದ್ದೀರೋ, ಅದನ್ನ ಪುನಃ ಮಾಡಬಲ್ಲಿರೋ” ಅನ್ನೋ ಲೇಖನದಲ್ಲಿ ಒಳ್ಳೊಳ್ಳೇ ಸಲಹೆಗಳಿವೆ.

d ಇಸ್ರಾಯೇಲ್ಯರಿಗೆ ಮಾಂಸ ತಿನ್ನಬೇಕು ಅಂತ ಅನಿಸಿದಾಗೆಲ್ಲ ಕುಟುಂಬದ ಯಜಮಾನ ಪವಿತ್ರ ಡೇರೆಗೆ ಹೋಗಿನೇ ಆ ಪ್ರಾಣಿನ ಕಡಿಬೇಕು ಅಂತ ನಿಯಮ ಪುಸ್ತಕ ಹೇಳಿತ್ತು. ಆದ್ರೆ ಯಾರಾದ್ರೂ ಪವಿತ್ರ ಡೇರೆಯಿಂದ ತುಂಬಾ ದೂರದಲ್ಲಿ ವಾಸ ಮಾಡ್ತಿದ್ರೆ ಅಲ್ಲಿಗೆ ಕಡ್ಡಾಯವಾಗಿ ಹೋಗಲೇಬೇಕು ಅಂತೇನಿರಲಿಲ್ಲ.—ಧರ್ಮೋ. 12:21.