ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 47

ಯಾವುದೂ ನಿಮ್ಮನ್ನ ಯೆಹೋವನಿಂದ ದೂರ ಮಾಡದಿರಲಿ

ಯಾವುದೂ ನಿಮ್ಮನ್ನ ಯೆಹೋವನಿಂದ ದೂರ ಮಾಡದಿರಲಿ

“ಯೆಹೋವನೇ, ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ.”—ಕೀರ್ತ. 31:14.

ಗೀತೆ 32 ಸ್ಥಿರಚಿತ್ತರೂ ನಿಶ್ಚಲರೂ ಆಗಿರಿ!

ಕಿರುನೋಟ a

1. ನಾವು ಆತನಿಗೆ ಹತ್ರ ಆಗಬೇಕು ಅಂತ ಯೆಹೋವ ಇಷ್ಟ ಪಡ್ತಾನೆ ಅನ್ನೋದು ನಮಗೆ ಹೇಗೆ ಗೊತ್ತು?

 ನಾವು ಆತನಿಗೆ ಹತ್ರ ಆಗಬೇಕು ಅಂತ ಯೆಹೋವ ದೇವರು ಆಸೆಪಡ್ತಾನೆ. (ಯಾಕೋ. 4:8) ನಾವು ಆತನನ್ನು ಪ್ರೀತಿಯ ಅಪ್ಪನಾಗಿ, ದೇವರಾಗಿ, ಸ್ನೇಹಿತನಾಗಿ ನೋಡಬೇಕು ಅಂತ ಆತನು ಇಷ್ಟಪಡ್ತಾನೆ. ನಾವು ಕಷ್ಟದಲ್ಲಿರುವಾಗ ಪ್ರಾರ್ಥನೆ ಮಾಡಿದ್ರೆ ಆತನು ಕೇಳ್ತಾನೆ ಮತ್ತು ನಮಗೆ ಬೇಕಾದ ಸಹಾಯ ಮಾಡ್ತಾನೆ. ತನ್ನ ಸಂಘಟನೆಯ ಮೂಲಕ ನಮಗೆ ಕಲಿಸ್ತಾನೆ ಮತ್ತು ಕಾಪಾಡ್ತಾನೆ. ಹಾಗಾದ್ರೆ ನಾವು ಆತನಿಗೆ ಹೇಗೆ ಹತ್ರ ಆಗಬಹುದು?

2. ನಾವು ಯೆಹೋವನಿಗೆ ಹತ್ರ ಆಗೋಕೆ ಏನು ಮಾಡಬೇಕು?

2 ನಾವು ಯೆಹೋವ ದೇವರಿಗೆ ಹತ್ರ ಆಗಬೇಕಾದ್ರೆ ಆತನಿಗೆ ಪ್ರಾರ್ಥನೆ ಮಾಡಬೇಕು. ಆತನ ವಾಕ್ಯವನ್ನ ಓದಬೇಕು ಮತ್ತು ಓದಿದರ ಬಗ್ಗೆ ಚೆನ್ನಾಗಿ ಯೋಚನೆ ಮಾಡಬೇಕು. ಆಗ ನಮಗೆ ಯೆಹೋವನ ಮೇಲಿರೋ ಪ್ರೀತಿ ಇನ್ನೂ ಜಾಸ್ತಿಯಾಗುತ್ತೆ. ಅಷ್ಟೇ ಅಲ್ಲ ಆತನ ಮಾತನ್ನ ಕೇಳೋದು ಎಷ್ಟು ಪ್ರಾಮುಖ್ಯ ಅನ್ನೋದು ಅರ್ಥ ಆಗುತ್ತೆ ಮತ್ತು ಆತನನ್ನ ಹೊಗಳಬೇಕು ಅಂತ ಅನಿಸುತ್ತೆ. ಯಾಕಂದ್ರೆ ನಮ್ಮ ಆರಾಧನೆ ಮತ್ತು ಹೊಗಳಿಕೆನ ಪಡಕೊಳ್ಳೋ ಅರ್ಹತೆ ಆತನಿಗಿದೆ. (ಪ್ರಕ. 4:11) ಹಾಗಾಗಿ ನಾವು ಯೆಹೋವನ ಬಗ್ಗೆ ಜಾಸ್ತಿ ತಿಳುಕೊಂಡಷ್ಟು ಆತನ ಮೇಲೆ ಮತ್ತು ಆತನ ಸಂಘಟನೆ ಮೇಲೆ ನಂಬಿಕೆ ಜಾಸ್ತಿ ಆಗುತ್ತೆ.

3. (ಎ) ನಮ್ಮನ್ನ ಯೆಹೋವನಿಂದ ದೂರ ಮಾಡೋಕೆ ಸೈತಾನ ಏನು ಮಾಡ್ತಾನೆ? (ಬಿ) ಆದ್ರೆ ಯೆಹೋವನನ್ನು ಮತ್ತು ಆತನ ಸಂಘಟನೆಯನ್ನು ಬಿಟ್ಟುಹೋಗದೆ ಇರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? (ಕೀರ್ತನೆ 31:13, 14)

3 ನಾವು ಸಮಸ್ಯೆಗಳಲ್ಲಿ ಮುಳುಗಿ ಹೋದಾಗ ನಮ್ಮನ್ನ ಯೆಹೋವನಿಂದ ದೂರ ಮಾಡೋಕೆ ಸೈತಾನ ಎಲ್ಲ ರೀತಿಯ ಪ್ರಯತ್ನಗಳನ್ನ ಮಾಡ್ತಾನೆ. ಹೇಗಂದ್ರೆ ಯೆಹೋವನ ಮೇಲೆ ಮತ್ತು ಆತನ ಸಂಘಟನೆ ಮೇಲೆ ನಮಗಿರೋ ನಂಬಿಕೆನ ನಿಧಾನವಾಗಿ ಕಡಿಮೆ ಮಾಡೋಕೆ ಪ್ರಯತ್ನ ಮಾಡ್ತಾನೆ. ಆದ್ರೆ ಅವನ ಪ್ರಯತ್ನ ಎಲ್ಲ ಮಣ್ಣುಪಾಲು ಮಾಡೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? ಯೆಹೋವನ ಮೇಲೆ ನಮಗಿರೋ ನಂಬಿಕೆ ಮತ್ತು ಭರವಸೆ ಬೆಟ್ಟದ ತರ ಸ್ಥಿರವಾಗಿ ಇದ್ರೆ ಏನೇ ಆದರೂ ಯೆಹೋವನನ್ನು ಮತ್ತು ಆತನ ಸಂಘಟನೆಯನ್ನು ನಾವು ಬಿಟ್ಟು ಹೋಗಲ್ಲ.ಕೀರ್ತನೆ 31:13, 14 ಓದಿ.

4. ನಾವು ಈ ಲೇಖನದಲ್ಲಿ ಏನು ಕಲಿತೀವಿ?

4 ನಾವು ಯೆಹೋವ ಮತ್ತು ಆತನ ಸಂಘಟನೆಯ ಮೇಲೆ ಇಟ್ಟಿರೋ ನಂಬಿಕೆನ ಕಳಕೊಳ್ಳೋ ಹಾಗೆ ಮಾಡೋ ಮೂರು ಸನ್ನಿವೇಶಗಳನ್ನ ಈ ಲೇಖನದಲ್ಲಿ ನೋಡೋಣ. ಇವು ನಮಗೆ ಸಂಘಟನೆಯ ಹೊರಗಿನಿಂದ ಬರೋ ಸಮಸ್ಯೆಗಳು. ಈ ಸನ್ನಿವೇಶಗಳು ನಮ್ಮನ್ನ ಯೆಹೋವನಿಂದ ಹೇಗೆ ದೂರ ಮಾಡಬಹುದು, ಆದ್ರೆ ನಾವು ದೂರ ಆಗದೆ ಇರೋಕೆ ಏನು ಮಾಡಬೇಕು ಅಂತ ನೋಡೋಣ.

ಕಷ್ಟಗಳು ಬಂದಾಗ

5. ನಮಗೆ ಕಷ್ಟಗಳು ಬಂದಾಗ ಯೆಹೋವ ಮತ್ತು ಆತನ ಸಂಘಟನೆ ಮೇಲಿರೋ ನಮ್ಮ ಭರವಸೆ ಹೇಗೆ ಕಡಿಮೆ ಆಗುತ್ತೆ?

5 ಕೆಲವು ಕಷ್ಟಗಳು ತುಂಬ ಸಮಯದವರೆಗೆ ನಮ್ಮನ್ನ ಕಾಡುತ್ತಿರಬಹುದು. ಉದಾಹರಣೆಗೆ, ಯೆಹೋವನನ್ನು ಆರಾಧಿಸದ ನಮ್ಮ ಕುಟುಂಬದವರು ನಮ್ಮನ್ನ ವಿರೋಧಿಸಬಹುದು ಅಥವಾ ನಾವು ಕೆಲಸ ಕಳೆದುಕೊಳ್ಳಬಹುದು. ಅಂಥ ಸಮಯದಲ್ಲಿ ನಾವು ಏನು ಮಾಡಿದ್ರೂ ಸರಿಹೋಗ್ತಾ ಇಲ್ವಲ್ಲಾ ಅಂತ ಬೇಜಾರಾಗುತ್ತೆ ಮತ್ತು ಕುಗ್ಗಿಹೋಗ್ತೀವಿ. ಈ ತರ ಆದಾಗ ಯೆಹೋವ ನಮ್ಮನ್ನ ಪ್ರೀತಿಸಲ್ಲ ಅಂತ ನಂಬೋ ತರ ಸೈತಾನ ಮಾಡ್ತಾನೆ. ಆಗ ಸಂಘಟನೆ ಮೇಲೆ ನಮಗಿರೋ ನಂಬಿಕೆನ ಕಳಕೊಳ್ಳಬಹುದು. ನಮ್ಮ ಕಷ್ಟಗಳಿಗೆ ಯೆಹೋವ ಮತ್ತು ಸಂಘಟನೆನೇ ಕಾರಣ ಅಂತ ನಾವು ಯೋಚನೆ ಮಾಡೋಕೆ ಶುರುಮಾಡಬಹುದು. ಇಸ್ರಾಯೇಲ್ಯರು ಇದೇ ತರ ಯೋಚನೆ ಮಾಡಿದ್ರು. ಮೋಶೆ ಮತ್ತು ಆರೋನ ಅವರನ್ನ ಬಿಡಿಸಿಕೊಂಡು ಬರೋಕೆ ಈಜಿಪ್ಟಿಗೆ ಹೋದಾಗ ಯೆಹೋವನೇ ಅವರನ್ನ ಕಳಿಸಿರೋದು ಅಂತ ಅವರು ಮೊದಲು ಒಪ್ಪಿಕೊಂಡ್ರು. (ವಿಮೋ. 4:29-31) ಆದರೆ ಆಮೇಲೆ ಫರೋಹ ಅವರಿಗೆ ಕಷ್ಟ ಕೊಟ್ಟಾಗ ಅದಕ್ಕೆಲ್ಲ ಮೋಶೆ ಮತ್ತು ಆರೋನನೇ ಕಾರಣ ಅಂತ ಅವರನ್ನ ದೂರೋಕೆ ಶುರುಮಾಡಿದ್ರು. “ಫರೋಹ ಮತ್ತು ಅವನ ಸೇವಕರು ನಮ್ಮನ್ನ ನೋಡಿ ಅಸಹ್ಯಪಡ್ತಾರೆ. ಇದಕ್ಕೆ ನೀವೇ ಕಾರಣ. ನಮ್ಮನ್ನ ಕೊಲ್ಲೋಕೆ ನೀವೇ ಅವರ ಕೈಗೆ ಕತ್ತಿ ಕೊಟ್ಟ ಹಾಗಿದೆ” ಅಂದ್ರು. (ವಿಮೋ. 5:19-21) ಇದನ್ನ ಕೇಳಿ ಮೋಶೆ ಮತ್ತು ಆರೋನನಿಗೆ ಎಷ್ಟು ದುಃಖ ಆಗಿರಬೇಕಲ್ವಾ? ಹಾಗಾದ್ರೆ ನಮ್ಮ ಸಮಸ್ಯೆಗಳು ಬೇಗ ಪರಿಹಾರ ಆಗದೆ ಇದ್ದಾಗ ಯೆಹೋವನ ಮೇಲೆ ಮತ್ತು ಆತನ ಸಂಘಟನೆ ಮೇಲೆ ನಮಗಿರೋ ಭರವಸೆನ ನಾವು ಹೇಗೆ ಕಾಪಾಡಿಕೊಳ್ಳೋದು?

6. ಕಷ್ಟಗಳು ಬಂದಾಗ ಹಬಕ್ಕೂಕನ ತರ ನಾವೇನು ಮಾಡಬೇಕು? (ಹಬಕ್ಕೂಕ 3:17-19)

6 ಯೆಹೋವನ ಹತ್ರ ನೋವನ್ನೆಲ್ಲಾ ಹೇಳಿಕೊಳ್ಳಿ, ಆತನ ಸಹಾಯಕ್ಕಾಗಿ ಬೇಡಿಕೊಳ್ಳಿ. ಪ್ರವಾದಿ ಹಬಕ್ಕೂಕನಿಗೆ ತುಂಬ ಕಷ್ಟಗಳು ಬಂತು. ಒಂದು ಸಮಯದಲ್ಲಂತೂ ದೇವರು ಅವನ ಕಷ್ಟಗಳನ್ನ ನೋಡ್ತಾನೇ ಇಲ್ಲ ಅಂತ ಅವನಿಗೆ ಅನಿಸ್ತು. ಆಗ ಅವನು ತನಗೆ ಅನಿಸಿದ್ದನ್ನೆಲ್ಲ ಯೆಹೋವ ದೇವರ ಹತ್ರ ಹೇಳಿಕೊಂಡ. “ಯೆಹೋವನೇ, ಇನ್ನೂ ಎಷ್ಟು ದಿನ ನಾನು ನಿನ್ನ ಹತ್ರ ಸಹಾಯಕ್ಕಾಗಿ ಬೇಡಬೇಕು? . . . ಯಾಕೆ ದೌರ್ಜನ್ಯ ನೋಡಿನೂ ನೋಡದ ಹಾಗಿದ್ದೀಯ?” ಅಂತ ಯೆಹೋವ ದೇವರ ಹತ್ರ ಕೇಳಿದ. (ಹಬ. 1:2, 3) ಈ ರೀತಿ ಹಬಕ್ಕೂಕ ಮನಸ್ಸುಬಿಚ್ಚಿ ಮಾಡಿದ ಪ್ರಾರ್ಥನೆಯನ್ನ ಯೆಹೋವ ಕೇಳಿದನು. (ಹಬ. 2:2, 3) ಆಮೇಲೆ ಯೆಹೋವ ದೇವರು ತನ್ನನ್ನ ಮತ್ತು ತನ್ನ ಜನರನ್ನ ಹೇಗೆಲ್ಲ ಕಾಪಾಡಿದನು ಅಂತ ಹಬಕ್ಕೂಕ ಯೋಚನೆ ಮಾಡಿದ. ಆಗ ಯೆಹೋವ ತನ್ನ ಬಗ್ಗೆ ಚಿಂತೆ ಮಾಡ್ತಾನೆ, ಸಹಾಯ ಮಾಡೇ ಮಾಡ್ತಾನೆ ಅಂತ ಅವನಿಗೆ ಪೂರ್ತಿ ನಂಬಿಕೆ ಬಂತು. ಇದರಿಂದ ಅವನ ಸೇವೆನ ಮುಂದುವರಿಸಿಕೊಂಡು ಹೋಗೋಕೆ ಅವನಿಗೆ ಹೊಸ ಬಲನೂ ಸಿಕ್ತು. (ಹಬಕ್ಕೂಕ 3:17-19 ಓದಿ.) ಇದ್ರಿಂದ ನಾವೇನು ಕಲಿತೀವಿ? ಕಷ್ಟಗಳು ಬಂದಾಗ ನಾವು ಯೆಹೋವನ ಹತ್ರ ಮನಸ್ಸುಬಿಚ್ಚಿ ಪ್ರಾರ್ಥನೆ ಮಾಡಬೇಕು. ನಾವು ನಮ್ಮ ನೋವನ್ನೆಲ್ಲಾ ಆತನ ಹತ್ರ ಹೇಳಿಕೊಳ್ಳಬೇಕು, ಆತನ ಸಹಾಯಕ್ಕಾಗಿ ಬೇಡಿಕೊಳ್ಳಬೇಕು. ಹೀಗೆ ಮಾಡಿದಾಗ ನಮಗಿರೋ ಕಷ್ಟಗಳನ್ನ ತಾಳಿಕೊಳ್ಳೋಕೆ ಯೆಹೋವ ಶಕ್ತಿ ಕೊಟ್ಟೇ ಕೊಡ್ತಾನೆ ಅನ್ನೋದನ್ನ ನಾವು ಅರ್ಥ ಮಾಡಿಕೊಳ್ತೀವಿ. ಆಮೇಲೆ ನಮಗೆ ಯೆಹೋವನ ಸಹಾಯ ಸಿಕ್ಕಿದಾಗ ಆತನ ಮೇಲಿರೋ ನಂಬಿಕೆನೂ ಜಾಸ್ತಿಯಾಗುತ್ತೆ.

7. (ಎ) ಶರ್ಲಿಯ ಸಂಬಂಧಿಕರು ಏನು ಮಾಡೋಕೆ ಪ್ರಯತ್ನಿಸಿದ್ರು? (ಬಿ) ಆದ್ರೆ ಯೆಹೋವ ದೇವರ ಮೇಲೆ ನಂಬಿಕೆ ಕಳಕೊಳ್ಳದೆ ಇರೋಕೆ ಶರ್ಲಿ ಏನು ಮಾಡಿದ್ರು?

7 ಯೆಹೋವ ದೇವರಿಗೆ ಹತ್ರ ಆಗೋಕೆ ಸಹಾಯ ಮಾಡೋ ವಿಷಯಗಳನ್ನ ಮಾಡ್ತಾ ಇರಿ. ಪಾಪುವ ನ್ಯೂ ಗಿನಿಯಲ್ಲಿರೋ ಸಹೋದರಿ ಶರ್ಲಿಗೆ ಕಷ್ಟಗಳು ಬಂದಾಗ ಅವರು ಇದನ್ನೇ ಮಾಡಿದ್ರು. b ಅವರು ತುಂಬ ಬಡವರಾಗಿದ್ರು. ಕೆಲವು ಸಲ ಊಟಕ್ಕೂ ಕಷ್ಟ ಆಗ್ತಿತ್ತು. ಆಗ ಅವರ ಸಂಬಂಧಿಕರಲ್ಲಿ ಒಬ್ರು ‘ನಿಮ್ಮ ದೇವರು ಶಕ್ತಿ ಕೊಡ್ತಾರೆ, ಸಹಾಯ ಮಾಡ್ತಾರೆ ಅಂತ ಹೇಳ್ತಿದ್ರಿ, ಇವಾಗ ಏನಾಯ್ತು? ನಿಮ್ಮ ಕುಟುಂಬ ಇನ್ನೂ ಬಡತನದಲ್ಲೇ ಇದೆ. ಮನೆಮನೆಗೆ ಹೋಗಿ ಸಾರ್ತೀವಿ ಅಂತ ಹೇಳಿ ಸುಮ್ನೆ ಸಮಯ ಹಾಳುಮಾಡಿಕೊಂಡ್ರಿ. ನಿಮ್ಮ ದೇವರ ಮೇಲೆ ನಂಬಿಕೆ ಇಟ್ಟಿರೋದೆಲ್ಲ ವ್ಯರ್ಥ’ ಅಂತ ಚುಚ್ಚಿ-ಚುಚ್ಚಿ ಮಾತಾಡ್ತಿದ್ರು. ಆಗ ಶರ್ಲಿ, ‘ಯೆಹೋವ ನನ್ನನ್ನ ನೋಡಿಕೊಳ್ತಿದ್ದಾನಾ ಇಲ್ವಾ ಅಂತ ಸಂಶಯ ಬಂದುಬಿಡ್ತು. ತಕ್ಷಣ ಆತನಿಗೆ ಪ್ರಾರ್ಥನೆ ಮಾಡಿ ನನ್ನ ಮನಸ್ಸಲ್ಲಿ ಇರೋದನ್ನೆಲ್ಲ ಹೇಳಿಕೊಂಡೆ. ಬೈಬಲನ್ನ, ಬೇರೆ ಪ್ರಕಾಶನಗಳನ್ನ ಓದುತ್ತಾ ಇದ್ದೆ. ಸಾರೋದನ್ನ ಮತ್ತು ಕೂಟಗಳಿಗೆ ಹೋಗೋದನ್ನ ಬಿಡಲಿಲ್ಲ’ ಅಂತ ಹೇಳ್ತಾರೆ. ಯೆಹೋವ ದೇವರು ಅವಳ ಕುಟುಂಬನ ನೋಡಿಕೊಳ್ತಿದ್ದಾರೆ ಅಂತ ಅವಳಿಗೆ ಅರ್ಥ ಆಯ್ತು. ಯಾಕಂದ್ರೆ ಅವರ ಕುಟುಂಬ ಒಂದು ಹೊತ್ತೂ ಉಪವಾಸ ಇರಲಿಲ್ಲ. ಯಾವಾಗಲೂ ಖುಷಿಯಾಗಿರೋ ಹಾಗೆ ಯೆಹೋವ ನೋಡಿಕೊಂಡನು. ‘ನನ್ನ ಪ್ರಾರ್ಥನೆಗಳಿಗೆ ಯೆಹೋವ ಉತ್ತರ ಕೊಟ್ರು’ ಅಂತ ಶರ್ಲಿ ಹೇಳ್ತಾರೆ. (1 ತಿಮೊ. 6:6-8) ನೀವು ಕೂಡ ಯೆಹೋವ ದೇವರಿಗೆ ಹತ್ರ ಆಗೋ ವಿಷಯಗಳನ್ನ ಮಾಡ್ತಾ ಇದ್ರೆ ನಿಮಗೆ ಏನೇ ಕಷ್ಟಗಳು ಬಂದ್ರೂ, ಏನೇ ಸಂಶಯಗಳು ಬಂದ್ರೂ ನೀವು ಯೆಹೋವನನ್ನು ಬಿಟ್ಟು ಹೋಗಲ್ಲ.    

ಮುಂದೆ ನಿಂತು ನಮ್ಮನ್ನ ನಡೆಸುತ್ತಿರೋ ಸಹೋದರರಿಗೆ ವಿರೋಧ ಬಂದಾಗ

8. ಮುಂದೆ ನಿಂತು ನಮ್ಮನ್ನ ನಡೆಸ್ತಿರೋ ಸಹೋದರರಿಗೆ ಏನಾಗಬಹುದು?

8 ಮುಂದೆ ನಿಂತು ನಮ್ಮನ್ನ ನಡೆಸ್ತಿರೋ ಸಹೋದರರ ಬಗ್ಗೆ ಕೆಲವರು ಸುಳ್ಳುಗಳನ್ನ ಅಥವಾ ತಪ್ಪಾದ ವಿಷಯಗಳನ್ನ ನ್ಯೂಸ್‌ಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸ್ತಾರೆ. (ಕೀರ್ತ. 31:13) ಕೆಲವು ಸಲ ನಮ್ಮ ಸಹೋದರರನ್ನ ಬಂಧಿಸಿ ಅಪರಾಧಿಗಳು ಅಂತ ಪಟ್ಟ ಕಟ್ತಾರೆ. ಒಂದನೇ ಶತಮಾನದಲ್ಲಿ ಅಪೊಸ್ತಲ ಪೌಲನಿಗೂ ಹೀಗೇ ಆಯ್ತು. ಅವನ ಮೇಲೆ ತಪ್ಪಾದ ಆರೋಪ ಹಾಕಿ ಅವನನ್ನ ಬಂಧಿಸಿ ಜೈಲಿಗೆ ಹಾಕಿದ್ರು. ಆಗ ಅಲ್ಲಿದ್ದ ಕ್ರೈಸ್ತರು ಏನು ಮಾಡಿದ್ರು?

9. ಅಪೊಸ್ತಲ ಪೌಲನನ್ನ ಜೈಲಿಗೆ ಹಾಕಿದಾಗ ಕೆಲವು ಕ್ರೈಸ್ತರು ಏನು ಮಾಡಿದ್ರು?

9 ಅಪೊಸ್ತಲ ಪೌಲನನ್ನ ರೋಮ್‌ನಲ್ಲಿ ಜೈಲಿಗೆ ಹಾಕಿದಾಗ ಅಲ್ಲಿದ್ದ ಕೆಲವು ಕ್ರೈಸ್ತರು ಅವನಿಗೆ ಸಹಾಯ ಮಾಡೋಕೆ ಮುಂದೆ ಬರಲಿಲ್ಲ. (2 ತಿಮೊ. 1:8, 15) ಯಾಕೆ? ಪೌಲನಿಗೆ ನಾವು ಸಹಾಯ ಮಾಡಿದ್ರೆ, ಜನ ನಮ್ಮ ಬಗ್ಗೆ ಏನು ಅಂದುಕೊಳ್ತಾರೋ ಅಂತ ಅವರು ಯೋಚನೆ ಮಾಡಿದ್ರಾ? (2 ತಿಮೊ. 2:8, 9) ಅಥವಾ ಪೌಲನಿಗೆ ಸಹಾಯ ಮಾಡಿದ್ರೆ ನಾಳೆ ನಮಗೂ ಜನ ಇದೇ ರೀತಿ ಹಿಂಸೆ ಮಾಡ್ತಾರೆ ಅನ್ನೋ ಭಯ ಅವರಿಗೆ ಇತ್ತಾ? ಕಾರಣ ಏನೇ ಇರಲಿ ಪೌಲ ಅವನ ಜೀವನದಲ್ಲಿ ತುಂಬ ಕಷ್ಟ ಅನುಭವಿಸಿದ್ದ. ಸಹೋದರ ಸಹೋದರಿಯರಿಗಾಗಿ ತನ್ನ ಪ್ರಾಣನೇ ಒತ್ತೆಯಿಟ್ಟಿದ್ದ. (ಅ. ಕಾ. 20:18-21; 2 ಕೊರಿಂ. 1:8) ಇಂಥ ಸಮಯದಲ್ಲಿ ಅವನಿಗೆ ಸಹಾಯ ಮಾಡೋಕೆ ಅವರು ಬರದೇ ಇದ್ದಾಗ ಪೌಲನಿಗೆ ಹೇಗೆ ಅನಿಸಿರಬೇಕು ಅಂತ ಸ್ವಲ್ಪ ಯೋಚನೆ ಮಾಡಿ. ನಾವು ಆ ಕ್ರೈಸ್ತರ ತರ ಇರಬಾರದು. ಮುಂದೆ ನಿಂತು ನಮ್ಮನ್ನ ನಡೆಸುತ್ತಿರೋ ಸಹೋದರರಿಗೆ ವಿರೋಧಗಳು ಬಂದಾಗ ನಾವೇನು ಮಾಡಬೇಕು ಅಂತ ಈಗ ನೋಡೋಣ.

10. ಮುಂದೆ ನಿಂತು ನಮ್ಮನ್ನ ನಡೆಸುತ್ತಿರುವ ಸಹೋದರರಿಗೆ ವಿರೋಧ ಬಂದಾಗ ನಾವು ಏನನ್ನ ಮನಸ್ಸಲ್ಲಿ ಇಡಬೇಕು? ಯಾಕೆ?

10 ನಮಗೆ ಯಾಕೆ ಮತ್ತು ಯಾರಿಂದ ವಿರೋಧ ಬರುತ್ತೆ ಅಂತ ಮನಸ್ಸಲ್ಲಿ ಇಡಬೇಕು. ಎರಡನೇ ತಿಮೊತಿ 3:12ರಲ್ಲಿ ಹೀಗಿದೆ: “ನಿಜ ಹೇಳಬೇಕಂದ್ರೆ, ಕ್ರಿಸ್ತ ಯೇಸುವಿನ ಶಿಷ್ಯರಾಗಿ ದೇವರನ್ನ ಆರಾಧಿಸ್ತಾ ಜೀವಿಸೋಕೆ ಬಯಸೋ ಎಲ್ರಿಗೂ ಹಿಂಸೆ ಬರುತ್ತೆ.” ಅದಕ್ಕೇ ಮುಂದೆ ನಿಂತು ನಮ್ಮನ್ನ ನಡೆಸುತ್ತಿರುವ ಸಹೋದರರಿಗೆ ಸೈತಾನ ಇವತ್ತು ವಿರೋಧ ತರ್ತಿದ್ದಾನೆ. ಅವರನ್ನ ಯೆಹೋವನಿಂದ ದೂರ ಮಾಡೋಕೆ ಮತ್ತು ನಮ್ಮನ್ನ ಹೆದರಿಸೋಕೆ ಇದನ್ನೆಲ್ಲ ಮಾಡ್ತಿದ್ದಾನೆ.—1 ಪೇತ್ರ 5:8.

ಪೌಲ ಜೈಲಲ್ಲಿದ್ದಾಗ ಒನೇಸಿಫೊರ ಧೈರ್ಯವಾಗಿ ಅವನಿಗೆ ಸಹಾಯ ಮಾಡಿದ. ಅದೇ ತರ ಈಗಲೂ ಸಹೋದರರು ಜೈಲಿಗೆ ಹೋದಾಗ ಸಭೆಯವರು ಅವರಿಗೆ ಧೈರ್ಯ ತುಂಬುತ್ತಾರೆ (ಪ್ಯಾರ 11-12 ನೋಡಿ)

11. ಒನೇಸಿಫೊರನಿಂದ ನಾವೇನು ಕಲಿತೀವಿ? (2 ತಿಮೊತಿ 1:16-18)

11 ನಾವು ನಮ್ಮ ಸಹೋದರರಿಗೆ ಯಾವಾಗಲೂ ಸಹಾಯ ಮಾಡಬೇಕು ಅವರ ಕೈ ಬಿಡಬಾರದು. (2 ತಿಮೊತಿ 1:16-18 ಓದಿ.) ಒಂದನೇ ಶತಮಾನದಲ್ಲಿದ್ದ ಒನೇಸಿಫೊರ ಈ ವಿಷಯದಲ್ಲಿ ನಮಗೆ ಒಳ್ಳೇ ಮಾದರಿ. ಪೌಲನಿಗೆ ‘ಬೇಡಿ ಹಾಕಿದ್ದಾರೆ ಅಂತ ಕೇಳಿ ಅವನು ನಾಚಿಕೆ ಪಡಲಿಲ್ಲ.’ ಬದಲಿಗೆ ಪೌಲ ಎಲ್ಲಿದ್ದಾನೆ ಅಂತ ಹುಡುಕಿಕೊಂಡು ಹೋಗಿ ತನ್ನಿಂದಾದ ಎಲ್ಲ ಸಹಾಯ ಮಾಡಿದ. ತನ್ನ ಪ್ರಾಣಕ್ಕೆ ಅಪಾಯ ಇದ್ರೂ ಇದನ್ನ ಮಾಡೋಕೆ ಒನೇಸಿಫೊರ ಹಿಂದೆ ಮುಂದೆ ನೋಡಲಿಲ್ಲ. ಅವನಿಂದ ನಾವೇನು ಕಲಿಬಹುದು? ನಮ್ಮ ಸಹೋದರರಿಗೆ ಹಿಂಸೆ, ವಿರೋಧ ಬಂದಾಗ ಅಥವಾ ಅವರನ್ನ ಜೈಲಿಗೆ ಹಾಕಿದಾಗ ನಾವು ಭಯಪಡಬಾರದು. ಅವರಿಗೆ ಸಹಾಯ ಮಾಡೋಕೆ ಹಿಂದೆಮುಂದೆ ನೋಡಬಾರದು. ನಾವು ಧೈರ್ಯವಾಗಿ ಅವರಿಗೆ ಬೇಕಾದ ಸಹಾಯ ಮಾಡಬೇಕು. (ಜ್ಞಾನೋ. 17:17) ಯಾಕಂದ್ರೆ ಆ ಸಮಯದಲ್ಲೇ ಅವರಿಗೆ ನಮ್ಮ ಪ್ರೀತಿ, ಬೆಂಬಲ ಜಾಸ್ತಿ ಬೇಕು.

12. ರಷ್ಯದಲ್ಲಿರೋ ಸಹೋದರ ಸಹೋದರಿಯರಿಂದ ನಾವೇನು ಕಲಿತೀವಿ?

12 ರಷ್ಯದಲ್ಲಿದ್ದ ಕೆಲವು ಸಹೋದರರನ್ನ ಜೈಲಿಗೆ ಹಾಕಿದಾಗ ಸಭೆಯವರು ಅವರಿಗೆ ಸಹಾಯ ಮಾಡಿದ್ರು. ಕೋರ್ಟ್‌ನಲ್ಲಿ ವಿಚಾರಣೆ ನಡಿತಾ ಇದ್ದಾಗ ಅವರೂ ಅಲ್ಲಿಗೆ ಹೋಗಿ ಸಹೋದರರಿಗೆ ಬೆಂಬಲ ಕೊಟ್ರು ಮತ್ತು ಧೈರ್ಯ ತುಂಬಿದ್ರು. ಅವರಿಂದ ನಾವೇನು ಕಲಿಬಹುದು? ಮುಂದೆ ನಿಂತು ನಮ್ಮನ್ನ ನಡೆಸ್ತಿರೋ ಸಹೋದರರಿಗೆ ಅವಮಾನ ಮಾಡಿದಾಗ, ಹಿಂಸೆ ಕೊಟ್ಟಾಗ, ಅವರನ್ನ ಜೈಲಿಗೆ ಹಾಕಿದಾಗ ನಾವು ಹೆದರಬಾರದು. ಅವರಿಗಾಗಿ ಪ್ರಾರ್ಥನೆ ಮಾಡಬೇಕು. ಅವರ ಕುಟುಂಬದವರನ್ನ ಚೆನ್ನಾಗಿ ನೋಡಿಕೊಳ್ಳಬೇಕು. ಅಷ್ಟೇ ಅಲ್ಲ ಇನ್ನೂ ಹೇಗೆಲ್ಲಾ ಸಹಾಯ ಮಾಡಬಹುದು ಅಂತ ಯೋಚನೆ ಮಾಡಬೇಕು.—ಅ. ಕಾ. 12:5; 2 ಕೊರಿಂ. 1:10, 11.

ನಮಗೆ ಅವಮಾನ ಮಾಡಿದಾಗ

13. ಯಾರಾದರೂ ನಮಗೆ ಅವಮಾನ ಮಾಡಿದಾಗ ಯೆಹೋವನ ಮೇಲೆ ಮತ್ತು ಸಂಘಟನೆ ಮೇಲಿರೋ ನಂಬಿಕೆ ಹೇಗೆ ಕಡಿಮೆ ಆಗಬಹುದು?

13 ನಾವು ಸಿಹಿಸುದ್ದಿ ಸಾರೋದ್ರಿಂದ ಅಥವಾ ಬೈಬಲಲ್ಲಿರೋ ನೀತಿ ನಿಯಮಗಳನ್ನ ಪಾಲಿಸೋದ್ರಿಂದ ಸತ್ಯದಲ್ಲಿ ಇಲ್ಲದ ನಮ್ಮ ಸಂಬಂಧಿಕರು, ನಮ್ಮ ಜೊತೆ ಕೆಲಸ ಮಾಡುವವರು ಮತ್ತು ಸ್ಕೂಲ್‌ನಲ್ಲಿ ಫ್ರೆಂಡ್ಸ್‌ ನಮಗೆ ಅವಮಾನ ಮಾಡಬಹುದು. (1 ಪೇತ್ರ 4:4) ಕೆಲವರು ನಮಗೆ “ನೀವು ಒಳ್ಳೇ ಜನನೇ, ಆದ್ರೆ ನಿಮ್ಮ ಧರ್ಮ ತುಂಬ ಕಟ್ಟುನಿಟ್ಟು. ನಿಮ್ಮ ಆಚಾರ-ವಿಚಾರಗಳೆಲ್ಲ ಓಬೀರಾಯನ ಕಾಲದ್ದು” ಅಂತ ಹೇಳಬಹುದು. ಬಹಿಷ್ಕಾರ ಆದವರ ಜೊತೆ ನಾವು ನಡೆದುಕೊಳ್ಳೋ ರೀತಿಯನ್ನ ನೋಡಿ ಕೆಲವರು, “ಪ್ರೀತಿಯಿದೆ ಅಂತ ಹೇಳಿಕೊಳ್ತೀರ, ಆದ್ರೆ ನಿಮಗೆ ಕರುಣೆ ಅನ್ನೋದೇ ಇಲ್ಲ” ಅಂತ ಬೈಬಹುದು. ಜನರು ಈ ತರ ಮಾತಾಡುವಾಗ ಯೆಹೋವ ದೇವರ ನೀತಿ ನಿಯಮಗಳು ಸರಿಯಾಗಿದ್ಯಾ ಅಂತ ನಮಗೆ ಸಂಶಯ ಬರಬಹುದು. ‘ಯೆಹೋವ ನಮ್ಮಿಂದ ಆಗದೆ ಇರೋದನ್ನ ಕೇಳ್ತಿದ್ದಾನಾ? ನಮ್ಮ ಸಂಘಟನೆ ತುಂಬ ಕಟ್ಟುನಿಟ್ಟು ಮಾಡ್ತಿದ್ಯಾ?’ ಅಂತನೂ ಅನಿಸಬಹುದು. ಈ ತರ ಅನಿಸಿದಾಗ ನಾವು ಯೆಹೋವನಿಂದ ಮತ್ತು ನಮ್ಮ ಸಂಘಟನೆಯಿಂದ ದೂರ ಹೋಗದೆ ಇರೋಕೆ ಏನು ಮಾಡಬೇಕು?

ಸ್ನೇಹಿತರು ಅಂತ ಹೇಳಿಕೊಂಡು ಬಂದವರು ಸುಳ್ಳುಗಳನ್ನ ಹೇಳಿದಾಗ ಯೋಬ ಅವರ ಮಾತುಗಳನ್ನ ನಂಬಲಿಲ್ಲ. ಅವನು ಯೆಹೋವನನ್ನು ಬಿಟ್ಟುಹೋಗಲಿಲ್ಲ (ಪ್ಯಾರ 14 ನೋಡಿ)

14. ಯೆಹೋವನ ನೀತಿ ನಿಯಮಗಳನ್ನ ಪಾಲಿಸಿದ್ರಿಂದ ಬೇರೆಯವರು ನಮಗೆ ಅವಮಾನ ಮಾಡಿದ್ರೆ ನಾವೇನು ಮಾಡಬೇಕು? (ಕೀರ್ತನೆ 119:50-52)

14 ಯೆಹೋವ ಯಾವುದನ್ನ ಸರಿ ಅಂತ ಹೇಳಿಕೊಟ್ಟಿದ್ದಾನೋ ಅದನ್ನ ಮಾಡ್ತಾ ಇರೋಣ. ಯೋಬ ಕೂಡ ಅದನ್ನೇ ಮಾಡಿದ. ಅವನಿಗೆ ಬೇರೆಯವರು ಗೇಲಿ ಮಾಡಿದ್ರೂ, ಅವಮಾನ ಮಾಡಿದ್ರೂ ಯೆಹೋವ ಯಾವುದು ಸರಿ ಅಂತ ಹೇಳಿ ಕೊಟ್ಟಿದ್ದನೋ ಅದನ್ನೇ ಮಾಡಿದ. ಸ್ನೇಹಿತರು ಅಂತ ಹೇಳಿಕೊಂಡು ಅವನನ್ನ ನೋಡೋಕೆ ಮೂರು ಜನ ಬಂದ್ರು. ಅವರಲ್ಲಿ ಒಬ್ಬ, ದೇವರು ಹೇಳಿರೋ ತರ ನಡಕೊಂಡ್ರೂ ಅದರಿಂದ ಏನೂ ಪ್ರಯೋಜನ ಇಲ್ಲ ಅಂತ ಯೋಬನನ್ನ ನಂಬಿಸೋಕೆ ಪ್ರಯತ್ನ ಮಾಡಿದ. (ಯೋಬ 4:17, 18; 22:3) ಆದ್ರೆ ಯೋಬ ಅದನ್ನ ನಂಬಲಿಲ್ಲ. ಯಾವುದು ಸರಿ ಯಾವುದು ತಪ್ಪು ಅನ್ನೋದು ಯೆಹೋವನಿಗೆ ಚೆನ್ನಾಗಿ ಗೊತ್ತು ಅಂತ ಯೋಬ ನಂಬಿದ ಮತ್ತು ಯೆಹೋವನಿಗೆ ನಿಯತ್ತಾಗಿದ್ದ. (ಯೋಬ 27:5, 6) ಯೋಬನಿಂದ ನಮಗೇನು ಪಾಠ? ಯಾರಾದರು ನಮಗೆ ಅವಮಾನ ಮಾಡಿದಾಗ ಯೆಹೋವನ ನೀತಿ ನಿಯಮಗಳೆಲ್ಲಾ ಸರಿನಾ? ಅಂತ ಯಾವತ್ತೂ ಸಂಶಯ ಪಡಬಾರದು. ಯೆಹೋವ ಹೇಳಿರೋ ತರ ನಡಕೊಂಡಿದ್ದಕ್ಕೆ ನಮ್ಮ ಜೀವನದಲ್ಲಿ ಕಷ್ಟಗಳು ಬಂದಿದೆ ಅಂತ ಬೇರೆಯವರು ನಮಗೆ ಹೇಳಿದ್ರೆ ಅದನ್ನ ನಂಬಬಾರದು. ಯೆಹೋವನ ನೀತಿ ನಿಯಮಗಳನ್ನ ಪಾಲಿಸಿದ್ರಿಂದ ನಮ್ಮ ಜೀವನದಲ್ಲಿ ಏನೆಲ್ಲಾ ಒಳ್ಳೇದಾಗಿದೆ ಅಂತ ನಾವು ಯೋಚಿಸಬೇಕು. ಹೀಗೆ ಮಾಡಿದ್ರೆ ಯೆಹೋವನ ಸಂಘಟನೆ ಹೇಳಿಕೊಡೋ ವಿಷಯಗಳನ್ನ ನಾವು ಯಾವಾಗಲೂ ಪಾಲಿಸ್ತೀವಿ. ಇದ್ರಿಂದ ಯಾರು ಎಷ್ಟೇ ಅವಮಾನ ಮಾಡಲಿ ಯೆಹೋವನನ್ನು ಬಿಟ್ಟು ನಾವು ಯಾವತ್ತೂ ದೂರ ಹೋಗಲ್ಲ.ಕೀರ್ತನೆ 119:50-52 ಓದಿ.

15. ಸಹೋದರಿ ಬ್ರಿಜಿತ್‌ಗೆ ಅವಳ ಸಂಬಂಧಿಕರು ಯಾಕೆ ಅವಮಾನ ಮಾಡಿದ್ರು?

15 ನಾವೀಗ ಭಾರತದಲ್ಲಿರೋ ಸಹೋದರಿ ಬ್ರಿಜಿತ್‌ ಅವರ ಅನುಭವ ನೋಡೋಣ. ಅವರು ಸತ್ಯಕ್ಕೆ ಬಂದಮೇಲೆ ಸಂಬಂಧಿಕರಿಂದ ತುಂಬ ಅವಮಾನ ಅನುಭವಿಸಬೇಕಾಯ್ತು. ಅವರಿಗೆ 1997ರಲ್ಲಿ ದೀಕ್ಷಾಸ್ನಾನ ಆಯ್ತು. ಇದಾದ ಸ್ವಲ್ಪದರಲ್ಲೇ ಅವರ ಗಂಡ ಕೆಲಸ ಕಳಕೊಂಡ್ರು. ಅದಕ್ಕೆ ಅವರು ಮನೆ ಖಾಲಿಮಾಡಿ ತಮ್ಮ ಹೆಣ್ಣು ಮಕ್ಕಳ ಜೊತೆ ಅವರ ಅತ್ತೆ ಮಾವನ ಮನೆಗೆ ಅಂದ್ರೆ ಬೇರೆ ಊರಿಗೆ ಹೋದ್ರು. ಆದ್ರೆ ಅಲ್ಲಿ ಹೋದಮೇಲೆ ಅವರ ಕಷ್ಟಗಳೇನೂ ಕಡಿಮೆ ಆಗಲಿಲ್ಲ ಇನ್ನೂ ಜಾಸ್ತಿನೇ ಆಯ್ತು. ಗಂಡನಿಗೆ ಕೆಲಸ ಇಲ್ಲದೆ ಇದ್ದಿದ್ರಿಂದ ಅವರು ಕೆಲಸಕ್ಕೆ ಹೋಗಬೇಕಾಯ್ತು. 350 ಕಿ.ಮೀ ದೂರದಲ್ಲಿ ಸಭೆ ಇದ್ದಿದ್ರಿಂದ ಅವರಿಗೆ ಕೂಟಗಳಿಗೆ ಹೋಗೋಕೂ ಕಷ್ಟ ಆಗ್ತಿತ್ತು. ಇವರು ಯೆಹೋವನ ಸಾಕ್ಷಿಯಾಗಿರೋದು, ಅವರ ಗಂಡನ ಮನೆಯವರಿಗೆ ಇಷ್ಟ ಇರಲಿಲ್ಲ. ಹಾಗಾಗಿ ಬ್ರಿಜಿತ್‌ ತುಂಬ ವಿರೋಧ ಎದುರಿಸಿದ್ರು. ಅದಕ್ಕೆ ಅವರು ಮನೆ ಖಾಲಿ ಮಾಡಿಕೊಂಡು ಬೇರೆ ಕಡೆ ಹೋಗಬೇಕಾಯ್ತು. ಅವರ ಕಷ್ಟ ಇಷ್ಟಕ್ಕೇ ನಿಲ್ಲಲಿಲ್ಲ. ಇದ್ದಕ್ಕಿದ್ದ ಹಾಗೆ ಅವರ ಗಂಡ ತೀರಿಹೋದ್ರು. ಅದಾದ ಸ್ವಲ್ಪ ದಿನದಲ್ಲೇ ಅವರ ಮೂರನೇ ಮಗಳು ಕ್ಯಾನ್ಸರ್‌ ಬಂದು ತೀರಿಹೋದಳು. ಅವಳಿಗಾಗ ಬರೀ 12 ವರ್ಷ. ಇದೆಲ್ಲ ಸಾಲದು ಅಂತ ಅವರ ಸಂಬಂಧಿಕರು ಗಾಯದ ಮೇಲೆ ಬರೆ ಎಳೆಯೋ ತರ “ಇದಕ್ಕೆಲ್ಲ ನೀನೇ ಕಾರಣ. ನೀನು ಯೆಹೋವನ ಸಾಕ್ಷಿ ಆಗದೆ ಇದ್ದಿದ್ರೆ ಈ ತರ ಎಲ್ಲ ಆಗ್ತಿರಲಿಲ್ಲ” ಅಂತ ದೂರೋಕೆ ಶುರುಮಾಡಿದ್ರು. ಇಷ್ಟೆಲ್ಲ ಆದ್ರೂ ಸಹೋದರಿ ಬ್ರಿಜಿತ್‌ ಯೆಹೋವನನ್ನಾಗಲಿ ಆತನ ಸಂಘಟನೆಯನ್ನಾಗಲಿ ಬಿಟ್ಟು ಹೋಗಲಿಲ್ಲ.

16. ಯೆಹೋವನನ್ನು ಮತ್ತು ಆತನ ಸಂಘಟನೆಯನ್ನು ಬಿಟ್ಟು ಹೋಗದೆ ಇದ್ದಿದ್ದಕ್ಕೆ ಬ್ರಿಜಿತ್‌ಗೆ ಯಾವ ಆಶೀರ್ವಾದಗಳು ಸಿಕ್ತು?

16 ಸಹೋದರಿ ಬ್ರಿಜಿತ್‌ಗೆ ಸರ್ಕಿಟ್‌ ಮೇಲ್ವಿಚಾರಕರು ನಿಮ್ಮ ಮನೆಯ ಅಕ್ಕಪಕ್ಕದಲ್ಲೇ ಸಿಹಿಸುದ್ದಿ ಸಾರಿ, ನಿಮ್ಮ ಮನೆಯಲ್ಲೇ ಕೂಟಗಳನ್ನ ನಡೆಸಿ ಅಂತ ಹೇಳಿದ್ರು. ಇದನ್ನ ಕೇಳಿದಾಗ ಸಹೋದರಿ ಬ್ರಿಜಿತ್‌ಗೆ ‘ನಾನು ಇದನ್ನೆಲ್ಲ ಹೇಗಪ್ಪಾ ಮಾಡಲಿ’ ಅಂತ ಅನಿಸ್ತು. ಹಾಗಿದ್ರೂ ಅವರು ಕೊಟ್ಟ ಸಲಹೆನ ಪಾಲಿಸಿದ್ರು. ಸಿಹಿಸುದ್ದಿ ಸಾರಿದ್ರು ಮನೆಯಲ್ಲೇ ಕೂಟಗಳನ್ನ ನಡೆಸಿದ್ರು. ತಮ್ಮ ಮಕ್ಕಳ ಜೊತೆ ಕುಟುಂಬ ಆರಾಧನೆಯನ್ನ ಮಾಡಿದ್ರು. ಇದ್ರಿಂದ ಏನಾಯ್ತು ಗೊತ್ತಾ? ಅವರಿಗೆ ತುಂಬ ಬೈಬಲ್‌ ಸ್ಟಡಿ ಸಿಕ್ತು. ಅವರಲ್ಲಿ ತುಂಬ ಜನ ಬೈಬಲ್‌ ಕಲಿತು ದೀಕ್ಷಾಸ್ನಾನನೂ ತಗೊಂಡ್ರು. 2005ರಲ್ಲಿ ಸಹೋದರಿ ಬ್ರಿಜಿತ್‌ ಪಯನೀಯರ್‌ ಆದ್ರು. ಅವರು ಯೆಹೋವನಿಗೆ ಮತ್ತು ಆತನ ಸಂಘಟನೆಗೆ ನಂಬಿಗಸ್ತರಾಗಿ ಇದ್ದಿದ್ರಿಂದ ತುಂಬ ಆಶೀರ್ವಾದಗಳನ್ನ ಪಡಕೊಂಡ್ರು. ಅವರ ಹೆಣ್ಣು ಮಕ್ಕಳು ಸಂತೋಷದಿಂದ ಯೆಹೋವನ ಸೇವೆ ಮಾಡ್ತಿದ್ದಾರೆ. ಅವರಿರೋ ಜಾಗದಲ್ಲಿ ಈಗ ಎರಡು ಸಭೆಗಳಿವೆ. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದ್ರೂ, ಅವರ ಸಂಬಂಧಿಕರು ಅವಮಾನ ಮಾಡಿದ್ರೂ ಅವನ್ನೆಲ್ಲ ಸಹಿಸಿಕೊಳ್ಳೋಕೆ ಯೆಹೋವ ತನಗೆ ಶಕ್ತಿ ಕೊಟ್ಟನು ಅಂತ ಬ್ರಿಜಿತ್‌ ಅರ್ಥ ಮಾಡಿಕೊಂಡ್ರು.

ಯೆಹೋವ ಮತ್ತು ಆತನ ಸಂಘಟನೆಯನ್ನ ಬಿಟ್ಟುಹೋಗಬೇಡಿ

17. ಯೆಹೋವನಿಂದ ಯಾವತ್ತೂ ದೂರ ಹೋಗದೆ ಇರೋಕೆ ನಾವು ಏನು ಮಾಡಬೇಕು?

17 ಇವತ್ತು ಸೈತಾನ, ಕಷ್ಟಗಳು ಬಂದಾಗ ಯೆಹೋವ ನಮ್ಮ ಕೈ ಬಿಡ್ತಾನೆ ಮತ್ತು ಆತನ ಸಂಘಟನೆ ಜೊತೆ ಇದ್ರೆ ಬರೀ ಕಷ್ಟಗಳನ್ನೇ ಅನುಭವಿಸಬೇಕಾಗುತ್ತೆ ಅಂತ ನಂಬೋ ತರ ಮಾಡ್ತಾನೆ. ನಮ್ಮನ್ನ ಮುಂದೆ ನಿಂತು ನಡೆಸೋ ಸಹೋದರರಿಗೆ ಹಿಂಸೆ ಬಂದಾಗ, ಅವರ ಹೆಸರು ಹಾಳು ಮಾಡಿ, ಅವರಿಗೆ ಅವಮಾನ ಮಾಡಿದಾಗ ಮತ್ತು ಅವರನ್ನ ಜೈಲಿಗೆ ಹಾಕಿದಾಗ ನಾವೆಲ್ಲ ಭಯಪಡಬೇಕು ಅಂತ ಅವನು ಆಸೆಪಡ್ತಾನೆ. ಬೇರೆಯವರು ನಮ್ಮನ್ನ ಅವಮಾನ ಮಾಡಿದಾಗ ಯೆಹೋವನ ನೀತಿ ನಿಯಮಗಳ ಮೇಲೆ ನಾವು ಸಂಶಯಪಡೋ ತರ ಮತ್ತು ಯೆಹೋವನ ಸಂಘಟನೆ ಮೇಲೆ ನಮಗಿರೋ ಭರವಸೆನ ಕಳಕೊಳ್ಳೋ ತರ ಮಾಡ್ತಾನೆ. ಇವೆಲ್ಲಾ ಸೈತಾನನ ಕುತಂತ್ರಗಳು ಅಂತ ನಮಗೆ ಚೆನ್ನಾಗಿ ಗೊತ್ತು. (2 ಕೊರಿಂ. 2:11) ಅದಕ್ಕೆ ಅವನು ಹಬ್ಬಿಸಿರೋ ಸುಳ್ಳುಗಳನ್ನ ನಂಬಿ ಮೋಸ ಹೋಗಬಾರದು. ಯೆಹೋವನನ್ನು ಮತ್ತು ಆತನ ಸಂಘಟನೆಯನ್ನು ಯಾವತ್ತೂ ಬಿಟ್ಟುಹೋಗಬಾರದು. ಯಾಕಂದ್ರೆ ಯೆಹೋವ ಯಾವತ್ತೂ ನಮ್ಮ ಕೈ ಬಿಡಲ್ಲ. (ಕೀರ್ತ. 28:7) ಇದನ್ನ ಮನಸ್ಸಲ್ಲಿಟ್ರೆ ಯಾವುದೂ ನಮ್ಮನ್ನ ಯೆಹೋವನಿಂದ ದೂರ ಮಾಡೋಕೆ ಆಗಲ್ಲ!—ರೋಮ. 8:35-39.

18. ಮುಂದಿನ ಲೇಖನದಲ್ಲಿ ಏನು ಕಲಿತೀವಿ?

18 ಇಲ್ಲಿ ತನಕ ನಾವು ಸಂಘಟನೆಯ ಹೊರಗಿನಿಂದ ಬರುವ ಮೂರು ಸಮಸ್ಯೆಗಳು ಹೇಗೆಲ್ಲಾ ನಮ್ಮ ನಂಬಿಕೆನ ಕಡಿಮೆ ಮಾಡಿಬಿಡಬಹುದು ಅಂತ ಈ ಲೇಖನದಲ್ಲಿ ಕಲಿತ್ವಿ. ಕೆಲವೊಮ್ಮ ಸಭೆಯೊಳಗಿಂದ ಬರೋ ಸಮಸ್ಯೆಗಳು ಯೆಹೋವನ ಮೇಲೆ ಆತನ ಸಂಘಟನೆ ಮೇಲೆ ನಮಗಿರುವ ನಂಬಿಕೆನ ಕಡಿಮೆ ಮಾಡಿಬಿಡಬಹುದು. ಆಗ ನಾವು ಏನು ಮಾಡಬೇಕು? ಇದರ ಬಗ್ಗೆ ಮುಂದಿನ ಲೇಖನದಲ್ಲಿ ನೋಡೋಣ.

ಗೀತೆ 81 “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು”

a ನಾವು ಯೆಹೋವನನ್ನು ಮತ್ತು ಆತನ ಸಂಘಟನೆಯನ್ನು ನಂಬಿದ್ರೆ ಈ ಕೊನೇ ದಿನಗಳಲ್ಲಿ ನಮಗೆ ಬರುವ ಕಷ್ಟಗಳನ್ನ ಸಹಿಸಿಕೊಳ್ಳೋಕೆ ಆಗುತ್ತೆ. ಸೈತಾನ ನಮ್ಮ ನಂಬಿಕೆನ ಕಡಿಮೆ ಮಾಡೋಕೆ ತುಂಬ ವಿಧಗಳಲ್ಲಿ ಪ್ರಯತ್ನ ಮಾಡ್ತಾನೆ. ಅದರಲ್ಲಿ ಮೂರು ವಿಧಗಳನ್ನ ನಾವೀಗ ನೋಡೋಣ. ಅಷ್ಟೇ ಅಲ್ಲ, ಅದನ್ನ ಜಯಿಸೋಕೆ ಏನು ಮಾಡಬೇಕು ಅಂತನೂ ನೋಡೋಣ.

b ಕೆಲವರ ಹೆಸರು ಬದಲಾಗಿದೆ.