ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 46

ಸಂತೋಷದಿಂದ ಸಹಿಸಿಕೊಳ್ಳೋಕೆ ಯೆಹೋವ ಸಹಾಯ ಮಾಡ್ತಾನೆ

ಸಂತೋಷದಿಂದ ಸಹಿಸಿಕೊಳ್ಳೋಕೆ ಯೆಹೋವ ಸಹಾಯ ಮಾಡ್ತಾನೆ

“ನಿಮಗೆ ಕೃಪೆ ತೋರಿಸೋಕೆ ಯೆಹೋವ ತಾಳ್ಮೆಯಿಂದ ಕಾಯ್ತಿದ್ದಾನೆ, ನಿಮಗೆ ಕರುಣೆ ತೋರಿಸೋಕೆ ಆತನು ಹೆಜ್ಜೆ ತಗೊಳ್ತಾನೆ.”—ಯೆಶಾ. 30:18.

ಗೀತೆ 152 ಯೆಹೋವ ನೀನೇ ಆಶ್ರಯ

ಕಿರುನೋಟ a

1-2. (ಎ) ನಾವು ಈ ಲೇಖನದಲ್ಲಿ ಯಾವ ಪ್ರಶ್ನೆಗಳಿಗೆ ಉತ್ತರ ತಿಳ್ಕೊಳ್ತೀವಿ? (ಬಿ) ನಮಗೆ ಸಹಾಯ ಮಾಡೋಕೆ ಯೆಹೋವ ತುದಿಗಾಲಲ್ಲಿ ನಿಂತಿದ್ದಾನೆ ಅಂತ ಹೇಗೆ ಹೇಳಬಹುದು?

 ಜೀವನದಲ್ಲಿ ಎಷ್ಟೇ ಕಷ್ಟ ಬಂದ್ರೂ ಸಂತೋಷದಿಂದ ಸೇವೆ ಮಾಡ್ತಾ ಇರೋಕೆ ಯೆಹೋವ ನಮಗೆ ಸಹಾಯ ಮಾಡ್ತಾನೆ. ಆತನು ನಮಗೆ ಹೇಗೆಲ್ಲಾ ಸಹಾಯ ಮಾಡ್ತಾನೆ ಮತ್ತು ಆ ಸಹಾಯವನ್ನ ಪಡೆದುಕೊಳ್ಳಬೇಕಾದ್ರೆ ನಾವೇನು ಮಾಡಬೇಕು ಅಂತ ಈ ಲೇಖನದಲ್ಲಿ ಚರ್ಚಿಸೋಣ. ಆದ್ರೆ ಅದಕ್ಕಿಂತ ಮುಂಚೆ ನಮಗೆ ಸಹಾಯ ಮಾಡೋಕೆ ಯೆಹೋವನಿಗೆ ಎಷ್ಟು ಇಷ್ಟ ಇದೆ ಅಂತ ನೋಡೋಣ.

2 ಈ ಪ್ರಶ್ನೆಗೆ ಉತ್ತರ ಅಪೊಸ್ತಲ ಪೌಲ ಇಬ್ರಿಯರಿಗೆ ಬರೆದ ಪತ್ರದಲ್ಲಿದೆ. “ಯೆಹೋವ ನನಗೆ ಸಹಾಯ ಮಾಡ್ತಾನೆ. ನಾನು ಹೆದ್ರಲ್ಲ. ಮನುಷ್ಯ ನನಗೇನು ಮಾಡಕ್ಕಾಗುತ್ತೆ?” ಅಂತ ಅವನು ಬರೆದ. (ಇಬ್ರಿ. 13:6) ಇಲ್ಲಿ, “ಸಹಾಯ ಮಾಡ್ತಾನೆ” ಅನ್ನೋ ಪದ ಕಷ್ಟದಲ್ಲಿರೋ ಒಬ್ಬ ವ್ಯಕ್ತಿಗೆ ಸಹಾಯ ಮಾಡೋಕೆ ಓಡೋಡಿ ಬರ್ತಿರೋ ವ್ಯಕ್ತಿಯನ್ನ ಸೂಚಿಸುತ್ತೆ ಅಂತ ಒಂದು ಪುಸ್ತಕ ಹೇಳುತ್ತೆ. ಕಷ್ಟದಲ್ಲಿ ಕೂಗ್ತಾ ಇರೋ ವ್ಯಕ್ತಿಗೆ ಸಹಾಯ ಮಾಡೋಕೆ ಯೆಹೋವ ಓಡೋಡಿ ಬರೋದನ್ನ ಕಲ್ಪಿಸಿಕೊಳ್ಳಿ! ಯೆಹೋವ ಸಹಾಯ ಮಾಡೋಕೆ ಇಷ್ಟ ಪಡೋದು ಮಾತ್ರ ಅಲ್ಲ, ಅದನ್ನ ಮಾಡೋಕೆ ತುದಿಗಾಲಲ್ಲಿ ನಿಂತಿದ್ದಾನೆ ಅಂತ ಇದರಿಂದ ಗೊತ್ತಾಗುತ್ತೆ. ಈ ರೀತಿ ಯೆಹೋವ ನಮ್ಮ ಪಕ್ಕದಲ್ಲಿದ್ದು ಸಹಾಯ ಮಾಡೋದ್ರಿಂದ ಎಂಥ ಕಷ್ಟಗಳು ಬಂದ್ರೂ ಅದನ್ನ ಸಂತೋಷದಿಂದ ಸಹಿಸಿಕೊಳ್ಳೋಕೆ ನಮ್ಮಿಂದ ಆಗುತ್ತೆ.

3. ನಾವು ಕಷ್ಟಗಳನ್ನ ಸಂತೋಷದಿಂದ ಸಹಿಸಿಕೊಳ್ಳೋಕೆ ಯೆಹೋವ ಯಾವ ಮೂರು ವಿಧಗಳಲ್ಲಿ ಸಹಾಯ ಮಾಡ್ತಾನೆ?

3 ಕಷ್ಟಗಳನ್ನ ಸಂತೋಷವಾಗಿ ಸಹಿಸಿಕೊಳ್ಳೋಕೆ ಯೆಹೋವ ನಮಗೆ ಹೇಗೆಲ್ಲಾ ಸಹಾಯ ಮಾಡ್ತಾನೆ? ಇದಕ್ಕೆ ಉತ್ತರವನ್ನ ಯೆಶಾಯ ಪುಸ್ತಕದಿಂದ ನೋಡೋಣ. ಯೆಶಾಯ ಬರೆದಿರೋ ಎಷ್ಟೋ ಭವಿಷ್ಯವಾಣಿಗಳು ನಮ್ಮ ಕಾಲದಲ್ಲಿ ನಿಜ ಆಗ್ತಿದೆ. ಅಷ್ಟೇ ಅಲ್ಲ, ಅವನು ಯೆಹೋವ ದೇವರ ಬಗ್ಗೆ ನಮಗೆ ಸುಲಭವಾಗಿ ಅರ್ಥವಾಗೋ ಹಾಗೆ ವಿವರಿಸಿದ್ದಾನೆ. ಉದಾಹರಣೆಗೆ, ಯೆಶಾಯ 30ನೇ ಅಧ್ಯಾಯ ನೋಡಿ. ಅದರಲ್ಲಿ ಯೆಹೋವ ತನ್ನ ಜನರಿಗೆ ಹೇಗೆಲ್ಲಾ ಸಹಾಯ ಮಾಡ್ತಾನೆ ಅನ್ನೋದನ್ನ ಮನಮುಟ್ಟೋ ರೀತಿಯಲ್ಲಿ ವಿವರಿಸಲಾಗಿದೆ. (1) ನಮ್ಮ ಪ್ರಾರ್ಥನೆಗಳನ್ನ ಯೆಹೋವ ಕಿವಿಗೊಟ್ಟು ಕೇಳಿ ಉತ್ತರ ಕೊಡ್ತಾನೆ, (2) ಜೀವನದಲ್ಲಿ ಒಳ್ಳೇ ನಿರ್ಧಾರಗಳನ್ನ ಮಾಡೋದು ಹೇಗೆ ಅಂತ ಹೇಳಿಕೊಡ್ತಾನೆ, (3) ಈಗಲೂ ಮುಂದಕ್ಕೂ ನಮ್ಮನ್ನ ಆಶೀರ್ವದಿಸ್ತಾನೆ. ಈ ವಿಷಯಗಳನ್ನ ನಾವೀಗ ಒಂದೊಂದಾಗಿ ನೋಡೋಣ.

ಯೆಹೋವ ನಮ್ಮ ಪ್ರಾರ್ಥನೆಗಳನ್ನ ಗಮನಕೊಟ್ಟು ಕೇಳಿಸಿಕೊಳ್ತಾನೆ

4. (ಎ) ಯೆಶಾಯನ ದಿನಗಳಲ್ಲಿದ್ದ ಯೆಹೂದ್ಯರ ಬಗ್ಗೆ ಯೆಹೋವ ಏನು ಹೇಳಿದ್ದನು, ಅವರಿಗೆ ಏನಾಯ್ತು? (ಬಿ) ಆದ್ರೆ ಒಳ್ಳೇ ಜನರಿಗೆ ಆತನು ಯಾವ ಆಶ್ವಾಸನೆ ಕೊಟ್ಟನು? (ಯೆಶಾಯ 30:18, 19)

4 ಯೆಶಾಯ 30ನೇ ಅಧ್ಯಾಯದ ಆರಂಭದಲ್ಲಿ ಯೆಹೋವ ದೇವರು ಯೆಹೂದ್ಯರ ಬಗ್ಗೆ ಹೇಳ್ತಾ ಅವರು ‘ಹಠಮಾರಿ ಮಕ್ಕಳು’ ಮತ್ತು ‘ಪಾಪದ ಮೇಲೆ ಪಾಪ ಮಾಡೋ’ ಜನ್ರು ಅಂತ ಹೇಳಿದನು. ಅಷ್ಟೇ ಅಲ್ಲ ‘ಅವರು ದಂಗೆಕೋರ ಜನ, ಯೆಹೋವನ ನಿಯಮ ಪುಸ್ತಕಕ್ಕೆ ಕಿವಿಗೊಡೋಕೆ ಮನಸ್ಸಿಲ್ಲದವರು’ ಅಂತ ಹೇಳಿದನು. (ಯೆಶಾ. 30:1, 9) ಜನರು ಈ ರೀತಿ ಇದ್ದಿದ್ರಿಂದ ಬಾಬೆಲಿನವರು ಅವರನ್ನ ಕೈದಿಗಳಾಗಿ ಹಿಡುಕೊಂಡು ಹೋಗೋಕೆ ಯೆಹೋವ ದೇವರು ಬಿಟ್ಟುಬಿಟ್ಟನು. (ಯೆಶಾ. 30:5, 17; ಯೆರೆ. 25:8-11) ಆದ್ರೆ ಅವರಲ್ಲಿ ಒಳ್ಳೇ ಜನರೂ ಇದ್ರು. ಅವರನ್ನ ವಾಪಸ್‌ ಯೆರೂಸಲೇಮ್‌ಗೆ ಕರಕೊಂಡು ಬರ್ತೀನಿ ಅಂತ ಯೆಹೋವ ದೇವರು ಯೆಶಾಯನಿಗೆ ಹೇಳಿದನು. (ಯೆಶಾಯ 30:18, 19 ಓದಿ.) ಅವರು ಬಿಡುಗಡೆಯಾಗಿ ವಾಪಸ್‌ ಯೆರೂಸಲೇಮ್‌ಗೆ ಬರೋಕೆ ಕೆಲವು ವರ್ಷಗಳಾಯ್ತು. ಆದ್ರೆ ಯೆಹೋವ ಹೇಳಿದ ಒಂದೊಂದು ಮಾತೂ ನಿಜ ಆಯ್ತು. “ನಿಮಗೆ ಕೃಪೆ ತೋರಿಸೋಕೆ ಯೆಹೋವ ತಾಳ್ಮೆಯಿಂದ ಕಾಯ್ತಿದ್ದಾನೆ” ಅನ್ನೋ ಆಶ್ವಾಸನೆಯ ಮಾತುಗಳು ಯೆಹೋವನ ಮೇಲೆ ನಂಬಿಕೆ ಇಡೋಕೆ ಅವರಿಗೆ ಸಹಾಯ ಮಾಡ್ತು. ಕೊನೆಗೆ 70 ವರ್ಷಗಳಾದ ಮೇಲೆ ಬಾಬೆಲ್‌ನಲ್ಲಿದ್ದ ಕೆಲವರು ಯೆರೂಸಲೇಮ್‌ಗೆ ವಾಪಸ್‌ ಹೋದ್ರು. (ಯೆಶಾ. 10:21; ಯೆರೆ. 29:10) ಬಾಬೆಲ್‌ನಲ್ಲಿದ್ದಾಗ ಕಷ್ಟದಲ್ಲಿ ಗೋಳಾಡ್ತಿದ್ದ ಜನರು ಯೆರೂಸಲೇಮ್‌ಗೆ ಬಂದಮೇಲೆ ಖುಷಿಯಿಂದ ಕುಣಿದು ಕುಪ್ಪಳಿಸಿದ್ರು.

5. ಯೆಶಾಯ 30:19 ನಮ್ಮ ಮನಸ್ಸಿಗೆ ಹೇಗೆ ನೆಮ್ಮದಿ ಕೊಡುತ್ತೆ?

5 “ಸಹಾಯಕ್ಕಾಗಿ ನೀನಿಡೋ ಮೊರೆಗೆ ಆತನು ತಪ್ಪದೆ ನಿನಗೆ ಕೃಪೆ ತೋರಿಸ್ತಾನೆ” ಅಂತ ಯೆಶಾಯ ಬರೆದ. ಈ ಮಾತುಗಳನ್ನ ಓದುವಾಗ ನಮ್ಮ ಮನಸ್ಸಿಗೆ ಎಷ್ಟು ನೆಮ್ಮದಿ ಆಗುತ್ತೆ ಅಲ್ವಾ! (ಯೆಶಾ. 30:19) ಯಾಕಂದ್ರೆ ನಾವು ಯೆಹೋವನ ಹತ್ರ ಸಹಾಯಕ್ಕಾಗಿ ಬೇಡಿಕೊಂಡಾಗ ಆತನು ಗಮನಕೊಟ್ಟು ಕೇಳಿಸಿಕೊಳ್ತಾನೆ. ಆಮೇಲೆ ಏನು ಮಾಡ್ತಾನೆ? “ನಿನ್ನ ಬಿನ್ನಹ ಕೇಳಿಸ್ಕೊಂಡ ತಕ್ಷಣ ಆತನು ನಿನಗೆ ಉತ್ರ ಕೊಡ್ತಾನೆ” ಅಂತ ಯೆಶಾಯ ಹೇಳಿದ. ಯೆಹೋವ ಒಬ್ಬ ಪ್ರೀತಿಯ ಅಪ್ಪ ತರ ನಮಗೆ ಸಹಾಯ ಮಾಡೋಕೆ ಆಸೆ ಪಡೋದು ಮಾತ್ರ ಅಲ್ಲ, ಅದನ್ನ ಮಾಡೋಕೆ ಕಾತುರದಿಂದ ಕಾಯ್ತಾ ಇದ್ದಾನೆ ಮತ್ತು ಸಹಾಯ ಮಾಡೇ ಮಾಡ್ತಾನೆ. ಇದನ್ನ ನೆನಪಲ್ಲಿ ಇಟ್ಟುಕೊಂಡ್ರೆ ಯಾವ ಕಷ್ಟ ಬಂದ್ರೂ ನಾವು ಸಂತೋಷದಿಂದ ಸಹಿಸಿಕೊಳ್ತೀವಿ.

6. ಯೆಹೋವ ಒಬ್ಬೊಬ್ಬರ ಪ್ರಾರ್ಥನೆಯನ್ನೂ ಕೇಳ್ತಾನೆ ಅಂತ ಯೆಶಾಯನ ಮಾತುಗಳಿಂದ ನಮಗೆ ಹೇಗೆ ಗೊತ್ತಾಗುತ್ತೆ?

6 ಈ ವಚನದಿಂದ ಪ್ರಾರ್ಥನೆ ಬಗ್ಗೆ ಇನ್ನೊಂದು ವಿಷಯನೂ ಕಲಿಬಹುದು. ಯೆಹೋವ ದೇವರು ಒಬ್ಬೊಬ್ಬರ ಪ್ರಾರ್ಥನೆಯನ್ನೂ ಗಮನಕೊಟ್ಟು ಕೇಳಿಸಿಕೊಳ್ತಾನೆ. ನಾವು ಯಾಕೆ ಹಾಗೆ ಹೇಳಬಹುದು? ಯೆಶಾಯ 30ನೇ ಅಧ್ಯಾಯದ ಆರಂಭದ ವಚನಗಳಲ್ಲಿ ಇಡೀ ಇಸ್ರಾಯೇಲ್‌ ಜನಾಂಗವನ್ನ ಸೇರಿಸಿ “ನೀವು” ಅಂತ ಹೇಳಿದ್ದಾನೆ. ಆದ್ರೆ 19ನೇ ವಚನದಲ್ಲಿ “ನೀನು” “ನಿನಗೆ” ಅನ್ನೋ ಪದಗಳನ್ನ ಬಳಸಲಾಗಿದೆ. ಅಂದ್ರೆ ಇಲ್ಲಿ ಯೆಹೋವ ಒಬ್ಬೊಬ್ಬರ ಬಗ್ಗೆನೂ ಮಾತಾಡ್ತಿದ್ದಾನೆ. ಈ ವಚನದಲ್ಲಿ ‘ನೀನು ಕಣ್ಣೀರು ಹಾಕಲ್ಲ,’ ‘ನಿನಗೆ ಕೃಪೆ ತೋರಿಸ್ತಾನೆ,’ ‘ನಿನಗೆ ಉತ್ತರ ಕೊಡ್ತಾನೆ’ ಅಂತ ಇದೆ. ಅಪ್ಪನ ಹತ್ರ ಮಗ ಅಥವಾ ಮಗಳು ಅಳ್ತಾ ಬಂದು, ಏನಾದ್ರು ಹೇಳಿದ್ರೆ ‘ನಿನ್ನ ತಮ್ಮನನ್ನ, ನಿನ್ನ ಅಕ್ಕನನ್ನ ನೋಡು. ಅವರೆಷ್ಟು ಧೈರ್ಯವಾಗಿದ್ದಾರೆ. ಅವರನ್ನ ನೋಡಿ ಕಲಿ’ ಅಂತೆಲ್ಲ ಹೇಳಲ್ಲ. ಬದಲಿಗೆ ಮಗು ಅತ್ಕೊಂಡು ಏನು ಹೇಳ್ತಿದಿಯೋ ಅದನ್ನ ಮೊದಲು ಕೇಳ್ತಾರೆ. ಅದೇ ತರ ನಮ್ಮ ಪ್ರೀತಿಯ ಅಪ್ಪ ಯೆಹೋವ, ನಾವು ದುಃಖದಿಂದ ಏನಾದ್ರು ಹೇಳಿದ್ರೆ ಅದನ್ನ ಗಮನ ಕೊಟ್ಟು ಕೇಳ್ತಾನೆ ಮತ್ತು ನಮಗೆ ಸಹಾಯ ಮಾಡ್ತಾನೆ.—ಕೀರ್ತ. 116:1; ಯೆಶಾ. 57:15.

ಯೆಹೋವನಿಗೆ ಆರಾಮವಾಗಿರೋಕೆ ಬಿಡಬೇಡಿ ಅಂತ ಯೆಶಾಯ ಯಾಕೆ ಹೇಳಿದ? (ಪ್ಯಾರ 7 ನೋಡಿ)

7. ಪದೇಪದೇ ಪ್ರಾರ್ಥನೆ ಮಾಡೋದ್ರ ಬಗ್ಗೆ ಯೆಶಾಯ ಮತ್ತು ಯೇಸು ಏನು ಹೇಳಿದ್ದಾರೆ?

7 ನಾವು ನಮ್ಮ ಕಷ್ಟವನ್ನ ಯೆಹೋವನ ಹತ್ರ ಹೇಳಿಕೊಂಡಾಗ ಅದನ್ನ ಸಹಿಸಿಕೊಳ್ಳೋಕೆ ಬೇಕಾದ ಶಕ್ತಿನ ಆತನು ತಕ್ಷಣ ಕೊಡ್ತಾನೆ. ಆದ್ರೆ ನಾವು ನೆನಸಿದ ಹಾಗೆ ಆ ಸಮಸ್ಯೆ ಪರಿಹಾರ ಆಗದೇ ಇರಬಹುದು. ಆಗ ನಾವೇನು ಮಾಡಬೇಕು? ಅದರ ಬಗ್ಗೆ ಯೆಹೋವನ ಹತ್ರ ಪದೇಪದೇ ಬೇಡಿಕೊಳ್ಳಬೇಕು. ಹಾಗೆ ಮಾಡಿ ಅಂತ ಯೆಹೋವನೇ ಹೇಳಿದ್ದಾನೆ. ಇದು ನಮಗೆ ಯೆಶಾಯನ ಮಾತುಗಳಿಂದ ಗೊತ್ತಾಗುತ್ತೆ. ಯೆಹೋವನಿಗೆ “ಪ್ರಾರ್ಥಿಸ್ತಾ ಇರಿ” ಅಂತ ಅವನು ಹೇಳ್ತಾನೆ. (ಯೆಶಾ. 62:7) ಈ ವಚನವನ್ನ ಇನ್ನೊಂದು ಭಾಷಾಂತರ “[ಯೆಹೋವನಿಗೆ] ಆರಾಮವಾಗಿರೋಕೆ ಬಿಡಬೇಡಿ” ಅಂತ ಹೇಳುತ್ತೆ. ನಾವು ಪದೇಪದೇ ಪ್ರಾರ್ಥನೆ ಮಾಡುವಾಗ ಯೆಹೋವನಿಗೆ ಆರಾಮಾಗಿರೋಕೆ ಬಿಡದೇ ಇರೋ ಹಾಗೆ ಇರುತ್ತೆ. ಇದು ನಮಗೆ ಲೂಕ 11:8-10, 13ರಲ್ಲಿ ಪ್ರಾರ್ಥನೆ ಬಗ್ಗೆ ಯೇಸು ಹೇಳಿದ ಉದಾಹರಣೆಗಳನ್ನ ನೆನಪಿಸುತ್ತೆ. ಅಲ್ಲಿ ಯೇಸು ಪವಿತ್ರಶಕ್ತಿಗಾಗಿ “ಪಟ್ಟುಬಿಡದೆ ಪದೇಪದೇ ಕೇಳಿ,” “ಕೇಳ್ತಾ ಇರಿ” ಅಂತ ಹೇಳಿದನು. ಕಷ್ಟ ಬಂದಾಗ ಸಹಾಯ ಮಾಡೋದಷ್ಟೇ ಅಲ್ಲ, ಜೀವನದಲ್ಲಿ ಒಳ್ಳೇ ನಿರ್ಧಾರಗಳನ್ನ ಮಾಡೋದು ಹೇಗೆ ಅಂತನೂ ಯೆಹೋವ ಹೇಳಿಕೊಡ್ತಾನೆ. ಅದರ ಬಗ್ಗೆ ಈಗ ನೋಡೋಣ.

ಒಳ್ಳೇ ನಿರ್ಧಾರ ಮಾಡೋಕೆ ಯೆಹೋವ ಹೇಳಿಕೊಡ್ತಾನೆ

8. ಯೆಶಾಯ 30:20,21ರಲ್ಲಿ ಹೇಳಿದ ಮಾತು ಹೇಗೆ ನಿಜ ಆಯ್ತು?

8 ಯೆಶಾಯ 30:20, 21 ಓದಿ. ಬಾಬೆಲ್‌ನವರು ಯೆರೂಸಲೇಮನ್ನ ಒಂದುವರೆ ವರ್ಷ ಮುತ್ತಿಗೆ ಹಾಕಿದಾಗ ಅಲ್ಲಿದ್ದ ಯೆಹೂದ್ಯರು ಪ್ರತಿ ದಿನ ಕಷ್ಟ ಅನುಭವಿಸ್ತಿದ್ರು. ಮೂರು ಹೊತ್ತು ಕಣ್ಣೀರಲ್ಲೇ ಕೈ ತೊಳಿತಿದ್ರು. ಆದ್ರೆ ಅವರು ತಮ್ಮ ತಪ್ಪನ್ನ ತಿದ್ದಿಕೊಂಡು ಸರಿ ದಾರಿಗೆ ಬಂದ್ರೆ ಅವರನ್ನ ಕಾಪಾಡ್ತೀನಿ ಅಂತ ವಚನ 20 ಮತ್ತು 21ರಲ್ಲಿ ಯೆಹೋವ ಮಾತು ಕೊಟ್ಟನು. ಅದರ ಜೊತೆಗೆ ಆತನು ಅವರಿಗೆ ‘ಮಹಾ ಬೋಧಕನಾಗಿ’ ತನ್ನನ್ನ ಆರಾಧಿಸೋದು ಹೇಗೆ ಅನ್ನೋದನ್ನೂ ಹೇಳಿಕೊಡ್ತಾನೆ ಅಂತ ಯೆಶಾಯ ಹೇಳಿದನು. ಇದು ಇಸ್ರಾಯೇಲ್ಯರು ಬಾಬೆಲ್‌ನಿಂದ ಬಿಡುಗಡೆಯಾಗಿ ಬಂದ ಮೇಲೆ ನಡಿತು. ತನಗೆ ಇಷ್ಟ ಆಗೋ ತರ ಆರಾಧನೆ ಮಾಡೋದು ಹೇಗೆ ಅಂತ ಯೆಹೋವ ಅವರಿಗೆ ಕಲಿಸಿಕೊಟ್ಟನು. ಆತನು ಇವತ್ತು ಮಹಾ ಬೋಧಕನಾಗಿ ನಮಗೂ ಕಲಿಸ್ತಿದ್ದಾನೆ, ಇದು ನಮಗೆ ಸಿಕ್ಕಿರೋ ಒಂದು ದೊಡ್ಡ ಆಶೀರ್ವಾದ ಅಂತನೇ ಹೇಳಬಹುದು.

9. ಯೆಹೋವ ನಮಗೆ ಕಲಿಸ್ತಿರೋ ಒಂದು ವಿಧ ಯಾವುದು?

9 ಸ್ಕೂಲಲ್ಲಿ ಮಕ್ಕಳಿಗೆ ಟೀಚರ್‌ ಪಾಠ ಹೇಳಿಕೊಡೋ ತರನೇ ಮಹಾ ಬೋಧಕನಾದ ಯೆಹೋವ ನಮಗೆ ಕಲಿಸ್ತಿದ್ದಾನೆ. ಅದನ್ನ ಎರಡು ರೀತಿಯಲ್ಲಿ ಮಾಡ್ತಾನೆ. ಒಂದು, “ನೀನು ನಿನ್ನ ಮಹಾ ಬೋಧಕನನ್ನ ಕಣ್ಣಾರೆ ನೋಡ್ತೀಯ” ಅಂತ ಯೆಶಾಯ ಬರೆದಿದ್ದಾನೆ. ಇದು ಒಬ್ಬ ಟೀಚರ್‌ ತರ ಮಹಾ ಬೋಧಕನಾದ ಯೆಹೋವ ನಮ್ಮ ಮುಂದೆ ನಿಂತು ಪಾಠ ಮಾಡೋ ತರನೇ ಇದೆ. ಹೇಗಂದ್ರೆ ಆತನು ತನ್ನ ಸಂಘಟನೆಯ ಮೂಲಕ ನಾವೇನು ಮಾಡಬೇಕು, ಏನು ಮಾಡಬಾರದು ಅಂತ ನಮಗೆ ಅರ್ಥ ಆಗೋ ತರ ಬೋಧಿಸ್ತಿದ್ದಾನೆ. ಕೂಟಗಳು, ಅಧಿವೇಶನಗಳು, ಪ್ರಕಾಶನಗಳು ಮತ್ತು JW ಪ್ರಸಾರ, ಹೀಗೆ ಇನ್ನೂ ಬೇರೆ-ಬೇರೆ ರೀತಿಗಳಲ್ಲಿ ತನ್ನ ಸಂಘಟನೆಯ ಮೂಲಕ ಆತನು ನಮಗೆ ಕಲಿಸ್ತಿದ್ದಾನೆ. ಹಾಗಾಗಿ ನಮಗೆ ಎಷ್ಟೇ ಕಷ್ಟಗಳು ಬಂದ್ರು ಅದನ್ನೆಲ್ಲ ಸಂತೋಷದಿಂದ ಸಹಿಸಿಕೊಳ್ಳೋಕೆ ಆಗ್ತಿದೆ. ಆತನು ಈ ರೀತಿ ಕಲಿಸಿಕೊಡ್ತಾ ಇರೋದ್ರಿಂದ ನಾವು ಆತನಿಗೆ ಎಷ್ಟು ಥ್ಯಾಂಕ್ಸ್‌ ಹೇಳಬೇಕಲ್ವಾ!

10. ಇವತ್ತು ನಮಗೆ ದೇವರ ಮಾತು ಹೇಗೆ “ಹಿಂದಿಂದ” ಕೇಳಿಸುತ್ತೆ?

10 ಯೆಹೋವ ನಮಗೆ ಕಲಿಸೋ ಇನ್ನೊಂದು ವಿಧ ಯಾವುದು? ಯೆಹೋವನ ಮಾತು “ನಿನ್ನ ಹಿಂದಿಂದ ನಿನ್ನ ಕಿವಿಗೆ ಬೀಳುತ್ತೆ” ಅಂತ ಯೆಶಾಯ ಹೇಳಿದ. ಮಕ್ಕಳು ನಡ್ಕೊಂಡು ಹೋಗ್ತಿರುವಾಗ ಟೀಚರ್‌ ಹಿಂದೆಯಿಂದ ‘ಈ ಕಡೆ ಹೋಗು, ಆ ಕಡೆ ಹೋಗಬೇಡ’ ಅಂತ ಹೇಳೋ ತರ ಯೆಹೋವ ನಮಗೆ ಕಲಿಸಿಕೊಡ್ತಿದ್ದಾನೆ ಅಂತ ಯೆಶಾಯ ಇಲ್ಲಿ ಹೇಳ್ತಿದ್ದಾನೆ. ಇವತ್ತು ನಮಗೆ ಯೆಹೋವನ ಮಾತು ಹೇಗೆ ಹಿಂದಿನಿಂದ ಕೇಳಿಸ್ತಿದೆ? ಬೈಬಲನ್ನ ಎಷ್ಟೋ ವರ್ಷಗಳ ಹಿಂದೆ ಬರೆದಿರೋದ್ರಿಂದ ಇವತ್ತು ನಾವು ಅದನ್ನ ಓದುವಾಗ ಒಂದರ್ಥದಲ್ಲಿ ಯೆಹೋವ ನಮ್ಮ ಹಿಂದೆ ನಿಂತು ಕಲಿಸ್ತಾ ಇರೋ ಹಾಗಿದೆ.—ಯೆಶಾ. 51:4.

11. ಕಷ್ಟಗಳನ್ನ ಖುಷಿಯಿಂದ ತಾಳಿಕೊಳ್ಳೋಕೆ ನಾವು ಯಾವ ಎರಡು ವಿಷಯಗಳನ್ನ ಮಾಡಬೇಕು ಮತ್ತು ಯಾಕೆ?

11 ಯೆಹೋವ ತನ್ನ ವಾಕ್ಯದಿಂದ ಮತ್ತು ತನ್ನ ಸಂಘಟನೆಯಿಂದ ಕಲಿಸಿಕೊಡ್ತಿರೋ ವಿಷಯಗಳಿಂದ ಪ್ರಯೋಜನ ಪಡಕೊಳ್ಳಬೇಕಾದ್ರೆ ನಾವು ಏನು ಮಾಡಬೇಕು? ಅದಕ್ಕೆ ಉತ್ತರ ಯೆಶಾಯನ ಮಾತುಗಳಲ್ಲಿದೆ. ಅವನು ಮೊದಲು “ಇದೇ ದಾರಿ” ಅಂತ ಹೇಳಿದ. ಆಮೇಲೆ “ಇದ್ರಲ್ಲೇ ನಡಿ” ಅಂತ ಹೇಳಿದ. (ಯೆಶಾ. 30:21) ಅಂದ್ರೆ ಇವತ್ತು ಯೆಹೋವ ದೇವರು ತನ್ನ ವಾಕ್ಯದಿಂದ ಮತ್ತು ಸಂಘಟನೆಯಿಂದ ಯಾವುದು ಸರಿ “ದಾರಿ” ಅನ್ನೋದನ್ನ ನಮಗೆ ಕಲಿಸಿಕೊಡ್ತಿದ್ದಾನೆ. ಅದನ್ನ ನಾವು ಮೊದಲು ತಿಳಿದುಕೊಳ್ಳಬೇಕು. ಆಮೇಲೆ ಅದರಲ್ಲಿ ‘ನಡಿಬೇಕು.’ ಅಂದ್ರೆ ನಾವು ಕಲ್ತಿದ್ದನ್ನ ಜೀವನದಲ್ಲಿ ಪಾಲಿಸಬೇಕು. ಆಗ ಮಾತ್ರ ಯೆಹೋವ ನಮ್ಮನ್ನ ಆಶೀರ್ವದಿಸ್ತಾನೆ. ಹೀಗೆ ಮಾಡಿದ್ರೆ ಏನೇ ಕಷ್ಟ ಬಂದ್ರು ನಾವು ತಾಳಿಕೊಳ್ತೀವಿ ಮತ್ತು ಖುಷಿಖುಷಿಯಿಂದ ಯೆಹೋವನ ಸೇವೆ ಮಾಡ್ತೀವಿ.

ಯೆಹೋವ ನಮ್ಮನ್ನ ಆಶೀರ್ವದಿಸ್ತಾನೆ

12. ಯೆಶಾಯ 30:23-26ರಲ್ಲಿ ಹೇಳೋ ತರ ಯೆಹೋವ ತನ್ನ ಜನರನ್ನ ಹೇಗೆ ಆಶೀರ್ವದಿಸಿದನು?

12 ಯೆಶಾಯ 30:23-26 ಓದಿ. ಈ ವಚನದಲ್ಲಿರೋ ಮಾತುಗಳು ಇಸ್ರಾಯೇಲ್ಯರು ಬಾಬೆಲ್‌ನಿಂದ ಬಿಡುಗಡೆಯಾಗಿ ತಮ್ಮ ಊರಿಗೆ ಬಂದಾಗ ಹೇಗೆ ನಿಜ ಆಯ್ತು? ಯೆಹೋವ ದೇವರು ಅವರನ್ನ ಎರಡು ರೀತಿಯಲ್ಲಿ ಆಶೀರ್ವದಿಸಿದನು. ಒಂದು, ಅವರಿಗೆ ತೃಪ್ತಿಯಾಗುವಷ್ಟು ಆಹಾರ ಕೊಟ್ಟನು, ಯಾವ ಕೊರತೆನೂ ಇಲ್ಲದ ಹಾಗೆ ನೋಡಿಕೊಂಡನು. ಎರಡು, ಜನ್ರು ತನ್ನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ಳೋಕೆ ಮತ್ತು ತನಗಿಷ್ಟವಾದ ರೀತಿಯಲ್ಲಿ ಆರಾಧನೆ ಮಾಡೋಕೆ ಏನು ಮಾಡಬೇಕು ಅಂತ ಹೇಳಿಕೊಟ್ಟನು. ಇವು ಅವರಿಗೆ ಸಿಕ್ಕ ಆಶೀರ್ವಾದದ ಸುರಿಮಳೆಯಾಗಿತ್ತು! ಅಷ್ಟೇ ಅಲ್ಲ, 26ನೇ ವಚನ ಹೇಳೋ ತರ ಯೆಹೋವ ಅವರಿಗೆ ಹೆಚ್ಚು ಬೆಳಕನ್ನ ಕೊಟ್ಟನು. (ಯೆಶಾ. 60:2) ಅಂದ್ರೆ ಆತನ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ ಸಹಾಯ ಮಾಡಿದನು. ಹೀಗೆ ಆಶೀರ್ವದಿಸಿದ್ರಿಂದ ಅವರ ‘ಮನಸ್ಸು ಸಂತೋಷವಾಗಿತ್ತು’ ಮತ್ತು ಯೆಹೋವ ದೇವರನ್ನ ಹುರುಪಿಂದ ಆರಾಧಿಸಿದ್ರು.—ಯೆಶಾ. 65:14.

13. ಶುದ್ಧ ಆರಾಧನೆ ಪುನಃ ಶುರು ಆಗುತ್ತೆ ಅಂತ ಹೇಳಿರೋ ಭವಿಷ್ಯವಾಣಿ ನಮ್ಮ ಕಾಲದಲ್ಲಿ ಹೇಗೆ ನಿಜ ಆಗಿದೆ?

13 ಶುದ್ಧ ಆರಾಧನೆ ಪುನಃ ಶುರು ಆಗುತ್ತೆ ಅಂತ ಹೇಳಿರೋ ಭವಿಷ್ಯವಾಣಿ ನಮ್ಮ ಕಾಲದಲ್ಲಿ ನಿಜ ಆಗಿದ್ಯಾ? ಹೌದು. ಕ್ರಿಸ್ತಶಕ 1919ರಿಂದ ಲಕ್ಷಾಂತರ ಜನ್ರು ಸುಳ್ಳು ಧರ್ಮದ ಸಾಮ್ರಾಜ್ಯವಾಗಿರೋ ಮಹಾ ಬಾಬೆಲ್‌ನ ಬಿಟ್ಟು ಹೊರಗೆ ಬಂದಿದ್ದಾರೆ. ಅಷ್ಟೇ ಅಲ್ಲ, ಯೆಹೋವ ದೇವರು ಇಸ್ರಾಯೇಲ್ಯರಿಗೆ ಮಾತು ಕೊಟ್ಟಿದ್ದ ದೇಶಕ್ಕಿಂತ ಒಳ್ಳೇ ದೇಶಕ್ಕೆ ಅವರು ಕಾಲಿಟ್ಟಿದ್ದಾರೆ. ಅದು ಆಧ್ಯಾತ್ಮಿಕ ಪರದೈಸ್‌. (ಯೆಶಾ. 51:3; 66:8) ಆಧ್ಯಾತ್ಮಿಕ ಪರದೈಸ್‌ ಅಂದ್ರೆ ಏನು?    

14. (ಎ) ಆಧ್ಯಾತ್ಮಿಕ ಪರದೈಸ್‌ ಅಂದ್ರೆ ಏನು? (ಬಿ) ಇವತ್ತು ಅಲ್ಲಿ ಯಾರಿದ್ದಾರೆ? (ಪದವಿವರಣೆ ನೋಡಿ.)

14 ಕ್ರಿಸ್ತಶಕ 1919ರಿಂದ ಅಭಿಷಿಕ್ತರು ಈ ಆಧ್ಯಾತ್ಮಿಕ ಪರದೈಸಲ್ಲಿ ವಾಸಿಸೋಕೆ ಶುರುಮಾಡಿದ್ರು. b ಆಮೇಲೆ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಇರೋ ಜನ್ರು ಅಂದ್ರೆ “ಬೇರೆ ಕುರಿಗಳೂ” ಈ ಆಧ್ಯಾತ್ಮಿಕ ಪರದೈಸಿಗೆ ಕಾಲಿಟ್ಟರು. ಅವರೂ ಕೂಡ ಈಗ ಯೆಹೋವನ ಆಶೀರ್ವಾದಗಳನ್ನ ಪಡ್ಕೊಂಡು ಸಂತೋಷವಾಗಿದ್ದಾರೆ.—ಯೋಹಾ. 10:16; ಯೆಶಾ. 25:6; 65:13.

15. ಆಧ್ಯಾತ್ಮಿಕ ಪರದೈಸ್‌ ಎಲ್ಲಿದೆ?

15 ಇವತ್ತು ಆಧ್ಯಾತ್ಮಿಕ ಪರದೈಸ್‌ ಎಲ್ಲಿದೆ? ಯೆಹೋವನನ್ನು ಆರಾಧಿಸೋ ಜನ ಭೂಮಿ ಮೇಲೆ ಎಲ್ಲ ಕಡೆ ಇದ್ದಾರೆ. ಹಾಗಾಗಿ ಆಧ್ಯಾತ್ಮಿಕ ಪರದೈಸ್‌ ಇಡೀ ಭೂಮಿ ಮೇಲಿದೆ. ನಾವು ಎಲ್ಲೇ ಇರಲಿ, ಹೇಗೆ ಇರಲಿ, ಎಲ್ಲಿ ತನಕ ಯೆಹೋವನನ್ನು ಆರಾಧಿಸುತ್ತಾ ಇರ್ತಿವೋ ಅಲ್ಲಿ ತನಕ ನಾವು ಆಧ್ಯಾತ್ಮಿಕ ಪರದೈಸಲ್ಲಿ ಇರ್ತೀವಿ.

ಆಧ್ಯಾತ್ಮಿಕ ಪರದೈಸ್‌ನ ಸುಂದರವಾಗಿ ಇಟ್ಟುಕೊಳ್ಳೋಕೆ ನಾವೇನು ಮಾಡಬೇಕು? (ಪ್ಯಾರ 16-17 ನೋಡಿ)

16. ನಾವು ಆಧ್ಯಾತ್ಮಿಕ ಪರದೈಸಲ್ಲೇ ಇರಬೇಕಾದ್ರೆ ಏನು ಮಾಡಬೇಕು?

16 ನಾವೆಲ್ಲರೂ ಆಧ್ಯಾತ್ಮಿಕ ಪರದೈಸಲ್ಲೇ ಇರಬೇಕು ಅಂತ ಇಷ್ಟಪಡ್ತೀವಿ. ನಾವು ಅಲ್ಲಿ ಇರಬೇಕಾದ್ರೆ ನಮ್ಮ ಸಹೋದರ ಸಹೋದರಿಯರ ಮೇಲೆ ಪ್ರೀತಿ ಮತ್ತು ಗೌರವ ಬೆಳೆಸಿಕೊಳ್ಳಬೇಕು. ಅದಕ್ಕೆ ನಾವೇನು ಮಾಡಬೇಕು? ಅವರಲ್ಲಿರೋ ಒಳ್ಳೇ ಗುಣಗಳನ್ನ ನೋಡಬೇಕು, ಕುಂದು-ಕೊರತೆಗಳಿಗೆ ಗಮನ ಕೊಡಬಾರದು. (ಯೋಹಾ. 17:20, 21) ಯಾಕೆ? ಇದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಉದಾಹರಣೆ ನೋಡೋಣ. ನಾವು ಕಾಡಿಗೆ ಹೋದಾಗ ಅಲ್ಲಿರೋ ಗಿಡ-ಮರಗಳನ್ನೆಲ್ಲ ನೋಡ್ತೀವಿ. ಒಂದೊಂದೂ ಒಂದೊಂದು ತರ ಇರುತ್ತೆ, ಅದರ ಸೌಂದರ್ಯ ನೋಡಿ ನಾವು ಖುಷಿಪಡ್ತೀವಿ. ಅಲ್ಲಿ ಮುರಿದು ಹೋಗಿರೋ ಕೊಂಬೆಗಳ ಮೇಲೋ ಅಥವಾ ಒಣಗಿ ಹೋಗಿರೋ ಗಿಡಗಳ ಮೇಲೋ ಗಮನ ಕೊಡ್ತೀವಾ? ಇಲ್ಲ ಅಲ್ವಾ! ನಮ್ಮ ಸಹೋದರ-ಸಹೋದರಿಯರು ಆ ಕಾಡಲ್ಲಿರೋ ಮರಗಳ ತರ ಇದ್ದಾರೆ. (ಯೆಶಾ. 44:4; 61:3) ನಾವು ಅವರಲ್ಲಿರೋ ಒಳ್ಳೇ ಗುಣಗಳು, ಅವರು ಮಾಡ್ತಿರೋ ಒಳ್ಳೇ ವಿಷಯಗಳನ್ನ ನೋಡಬೇಕೇ ವಿನಃ ಅವರಲ್ಲಿರೋ ಕುಂದು-ಕೊರತೆಗಳನ್ನಲ್ಲ. ಹೀಗೆ ಮಾಡಿದ್ರೆ ನಾವು ಆಧ್ಯಾತ್ಮಿಕ ಪರದೈಸಿನ ಸೊಬಗನ್ನ ಆನಂದಿಸ್ತೀವಿ ಮತ್ತು ಒಗ್ಗಟ್ಟಾಗಿ ಇರ್ತೀವಿ.

17. ಸಭೆಯಲ್ಲಿ ಒಗ್ಗಟ್ಟಾಗಿ ಇರೋಕೆ ನಾವೆಲ್ಲರೂ ಏನು ಮಾಡಬೇಕು?

17 ಸಭೆಯಲ್ಲಿರೋ ಒಗ್ಗಟ್ಟನ್ನ ಕಾಪಾಡಿಕೊಳ್ಳೋಕೆ ಪ್ರತಿಯೊಬ್ಬರು ಏನು ಮಾಡಬೇಕು? ಎಲ್ಲರ ಜೊತೆ ಶಾಂತಿ ಸಮಾಧಾನದಿಂದ ಇರಬೇಕು. (ಮತ್ತಾ. 5:9; ರೋಮ. 12:18) ಯಾರಾದ್ರೂ ನಮ್ಮ ಮನಸ್ಸಿಗೆ ಬೇಜಾರಾಗೋ ತರ ನಡ್ಕೊಂಡ್ರೆ ನಾವೇ ಮುಂದೆ ಹೋಗಿ ಅದನ್ನೆಲ್ಲ ಬಗೆಹರಿಸಿಕೊಳ್ಳಬೇಕು, ಆಗ ಆಧ್ಯಾತ್ಮಿಕ ಪರದೈಸಿನ ಸೌಂದರ್ಯನ ಹೆಚ್ಚಿಸ್ತೀವಿ. ಈ ಆಧ್ಯಾತ್ಮಿಕ ಪರದೈಸಿಗೆ ಎಲ್ಲರನ್ನೂ ಯೆಹೋವ ದೇವರೇ ಕರಕೊಂಡು ಬಂದಿರೋದು ಅನ್ನೋದನ್ನ ನಾವು ಯಾವತ್ತೂ ಮರೆಯಬಾರದು. (ಯೋಹಾ. 6:44) ಅವರಲ್ಲಿ ಒಬ್ಬೊಬ್ಬರೂ ಯೆಹೋವನಿಗೆ ತುಂಬಾ ಮುಖ್ಯ. ಹಾಗಾಗಿ ನಾವು ಸಹೋದರ-ಸಹೋದರಿಯರ ಜೊತೆ ಶಾಂತಿ-ಸಮಾಧಾನದಿಂದ ಇರೋಕೆ ಮತ್ತು ಸಭೆಯಲ್ಲಿ ಒಗ್ಗಟ್ಟಾಗಿ ಇರೋಕೆ ನಮ್ಮಿಂದಾಗೋ ಪ್ರಯತ್ನವನ್ನೆಲ್ಲ ಮಾಡುವಾಗ ಯೆಹೋವನಿಗೆ ತುಂಬಾ ಖುಷಿಯಾಗುತ್ತೆ.—ಯೆಶಾ. 26:3; ಹಗ್ಗಾ. 2:7.

18. ನಾವು ಯಾವೆಲ್ಲ ವಿಷಯಗಳ ಬಗ್ಗೆ ಚೆನ್ನಾಗಿ ಯೋಚನೆ ಮಾಡಬೇಕು, ಯಾಕೆ?

18 ಯೆಹೋವ ದೇವರು ನಮಗೆ ತುಂಬ ಆಶೀರ್ವಾದಗಳನ್ನ ಕೊಟ್ಟಿದ್ದಾನೆ. ಅದರ ಬಗ್ಗೆ ಯೋಚನೆ ಮಾಡೋದ್ರಿಂದ ನಮಗೆ ತುಂಬ ಪ್ರಯೋಜನ ಆಗುತ್ತೆ. ಉದಾಹರಣೆಗೆ, ನಾವು ಬೈಬಲನ್ನ ಮತ್ತು ಪ್ರಕಾಶನಗಳನ್ನ ಓದಿ ಅದರ ಬಗ್ಗೆ ಚೆನ್ನಾಗಿ ಯೋಚನೆ ಮಾಡಿದ್ರೆ ಒಳ್ಳೇ ಗುಣಗಳನ್ನ ಬೆಳೆಸಿಕೊಳ್ತೀವಿ. ಇದ್ರಿಂದ ಸಭೆಯಲ್ಲಿ “ಒಡಹುಟ್ಟಿದವರ ತರ ಒಬ್ರಿಗೊಬ್ರು ಪ್ರೀತಿ, ಕೋಮಲ ಮಮತೆ” ತೋರಿಸ್ತೀವಿ. (ರೋಮ. 12:10) ಈ ಆಶೀರ್ವಾದಗಳ ಬಗ್ಗೆ ಯೋಚನೆ ಮಾಡುವಾಗ ಯೆಹೋವನ ಜೊತೆಗಿರೋ ನಮ್ಮ ಸಂಬಂಧನೂ ಗಟ್ಟಿಯಾಗುತ್ತೆ. ನಾವು ಮುಂದೆ ಸಿಗೋ ಆಶೀರ್ವಾದಗಳ ಬಗ್ಗೆನೂ ಧ್ಯಾನಿಸಬೇಕು. ಇದ್ರಿಂದ ಶಾಶ್ವತವಾಗಿ ಯೆಹೋವನನ್ನು ಆರಾಧಿಸೋ ಕಾಲ ಬಂದೇ ಬರುತ್ತೆ ಅನ್ನೋ ನಂಬಿಕೆ ಜಾಸ್ತಿಯಾಗುತ್ತೆ. ಹೀಗೆ ಮಾಡುವಾಗ ನಾವು ಯೆಹೋವನ ಸೇವೆನ ಸಂತೋಷದಿಂದ ಮಾಡ್ತೀವಿ.

ಸಹಿಸಿಕೊಳ್ತಾ ಇರೋಣ

19. (ಎ) ಯೆಹೋವ ಆದಷ್ಟು ಬೇಗ ಏನು ಮಾಡ್ತಾನೆ ಅಂತ ಯೆಶಾಯ 30:18 ಹೇಳುತ್ತೆ? (ಬಿ) ಕಷ್ಟಗಳನ್ನ ಖುಷಿಯಿಂದ ಸಹಿಸಿಕೊಳ್ಳೋಕೆ ಯಾವುದು ಸಹಾಯ ಮಾಡುತ್ತೆ?

19 ಈ ಭೂಮಿ ಮೇಲಿರೋ ಕೆಟ್ಟ ಜನರನ್ನ ನಾಶ ಮಾಡೋಕೆ ಯೆಹೋವ ಆದಷ್ಟು ಬೇಗ “ಹೆಜ್ಜೆ ತಗೊಳ್ತಾನೆ.” (ಯೆಶಾ. 30:18) ಅದಕ್ಕೆ ಅಂತಾನೇ ಆತನು ಒಂದು ದಿನವನ್ನ ಇಟ್ಟಿದ್ದಾನೆ. ಆತನು “ನ್ಯಾಯವಂತ ದೇವರು.” ಹಾಗಾಗಿ ಆತನು ಅಂದುಕೊಂಡ ದಿನದಲ್ಲಿ ಅದನ್ನ ಮಾಡೇ ಮಾಡ್ತಾನೆ. (ಯೆಶಾ. 25:9) ಆ ದಿನ ಬರೋ ತನಕ ನಾವೂ ಯೆಹೋವನ ತರ ತಾಳ್ಮೆಯಿಂದ ಕಾಯೋಣ. ಆತನಿಗೆ ಪ್ರಾರ್ಥನೆ ಮಾಡ್ತಾ, ಬೈಬಲ್‌ ಓದಿ ಅದರಲ್ಲಿ ಇರೋದನ್ನ ಪಾಲಿಸ್ತಾ, ಆತನು ಕೊಟ್ಟಿರೋ ಆಶೀರ್ವಾದಗಳ ಬಗ್ಗೆ ಯೋಚಿಸ್ತಾ ಇರೋಣ. ಆಗ ನಮಗೆ ಎಷ್ಟೇ ಕಷ್ಟ ಬಂದ್ರು ಸಹಿಸಿಕೊಳ್ಳೋಕೆ ಆಗುತ್ತೆ ಮತ್ತು ಯೆಹೋವನನ್ನು ಖುಷಿ-ಖುಷಿಯಿಂದ ಆರಾಧಿಸೋಕೆ ಆಗುತ್ತೆ.

ಗೀತೆ 129 ನಮ್ಮ ನಿರೀಕ್ಷೆಯನ್ನು ದೃಢವಾಗಿ ಹಿಡಿದುಕೊಳ್ಳುವುದು

a ಕಷ್ಟಗಳನ್ನ ಸಂತೋಷವಾಗಿ ಸಹಿಸಿಕೊಳ್ಳೋಕೆ ಯೆಹೋವ ಹೇಗೆ 3 ವಿಧಗಳಲ್ಲಿ ನಮಗೆ ಸಹಾಯ ಮಾಡ್ತಾನೆ ಅಂತ ಈ ಲೇಖನದಲ್ಲಿ ನೋಡ್ತೀವಿ. ಈ ವಿಧಗಳ ಬಗ್ಗೆ ಯೆಶಾಯ 30ನೇ ಅಧ್ಯಾಯದಿಂದ ಕಲಿಯೋಣ. ಯೆಹೋವನಿಗೆ ಪ್ರಾರ್ಥನೆ ಮಾಡೋದು, ಬೈಬಲ್‌ ಅಧ್ಯಯನ ಮಾಡೋದು, ಈಗ ಮತ್ತು ಮುಂದೆ ಯೆಹೋವ ಕೊಡೋ ಆಶೀರ್ವಾದಗಳ ಬಗ್ಗೆ ಯೋಚಿಸೋದು ಯಾಕೆ ಮುಖ್ಯ ಅಂತನೂ ತಿಳುಕೊಳ್ಳೋಣ.

b ಪದವಿವರಣೆ: “ಆಧ್ಯಾತ್ಮಿಕ ಪರದೈಸ್‌” ಅನ್ನೋದು ನಾವೆಲ್ಲರೂ ಯೆಹೋವನನ್ನು ಒಗ್ಗಟ್ಟಿಂದ, ಸಂತೋಷದಿಂದ ಆರಾಧಿಸೋದನ್ನ ಸೂಚಿಸುತ್ತೆ. ಇಲ್ಲಿ ದೇವರ ಬಗ್ಗೆ ಸತ್ಯ ಕಲಿತಾ ಇದ್ದೀವಿ. ಯೆಹೋವ ದೇವರೇ ಇದನ್ನೆಲ್ಲ ಕಲಿಸಿಕೊಡ್ತಿದ್ದಾನೆ. ನಾವು ಆತನ ಸರಕಾರದ ಬಗ್ಗೆ ಜನ್ರಿಗೆ ಸಿಹಿಸುದ್ದಿ ಸಾರ್ತಾ ಇದ್ದೀವಿ. ಆತನ ಜೊತೆ ಒಳ್ಳೇ ಸ್ನೇಹ ಬೆಳೆಸಿಕೊಂಡಿದ್ದೀವಿ, ಸಹೋದರ ಸಹೋದರಿಯರ ಜೊತೆಗೂ ನಮಗೆ ಒಳ್ಳೇ ಸಂಬಂಧ ಇದೆ. ಜೀವನದಲ್ಲಿ ಬರೋ ಕಷ್ಟಗಳನ್ನ ನಾವು ಸಂತೋಷದಿಂದ ಸಹಿಸಿಕೊಳ್ಳೋಕೆ ಇವರು ನಮಗೆ ಸಹಾಯ ಮಾಡ್ತಾರೆ. ನಾವು ಯೆಹೋವನಿಗೆ ಇಷ್ಟ ಆಗೋ ತರ ಆತನನ್ನ ಆರಾಧಿಸೋಕೆ ಮತ್ತು ಜೀವಿಸೋಕೆ ಶುರುಮಾಡಿದಾಗ ಈ ಆಧ್ಯಾತ್ಮಿಕ ಪರದೈಸಲ್ಲಿ ಕಾಲಿಡ್ತೀವಿ.