ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 45

ಸಿಹಿಸುದ್ದಿ ಸಾರೋಕೆ ಯೆಹೋವ ಸಹಾಯ ಮಾಡ್ತಾನೆ

ಸಿಹಿಸುದ್ದಿ ಸಾರೋಕೆ ಯೆಹೋವ ಸಹಾಯ ಮಾಡ್ತಾನೆ

“ತಮ್ಮ ಮಧ್ಯ ಒಬ್ಬ ಪ್ರವಾದಿ ಇದ್ದ ಅನ್ನೋದಂತೂ ನಿಜವಾಗ್ಲೂ ತಿಳ್ಕೊಳ್ತಾರೆ.”—ಯೆಹೆ. 2:5.

ಗೀತೆ 92 “ವಾಕ್ಯವನ್ನು ಸಾರು”

ಕಿರುನೋಟ a

1. ಮುಂದೆ ನಮಗೆ ಏನಾಗಬಹುದು? ಆದ್ರೆ ಯಾವ ವಿಷಯದಲ್ಲಿ ನಾವು ಗ್ಯಾರಂಟಿಯಾಗಿ ಇರಬಹುದು?

 ಸಿಹಿಸುದ್ದಿ ಸಾರುವಾಗ ವಿರೋಧಗಳು ಬಂದೇ ಬರುತ್ತೆ ಅಂತ ನಮಗೆ ಚೆನ್ನಾಗಿ ಗೊತ್ತು. ಮುಂದೆ ಈ ವಿರೋಧಗಳು ಇನ್ನೂ ಜಾಸ್ತಿಯಾಗಬಹುದು. (ದಾನಿ. 11:44; 2 ತಿಮೊ. 3:12; ಪ್ರಕ. 16:21) ಆದ್ರೆ ಯೆಹೋವ ನಮಗೆ ಸಹಾಯ ಮಾಡೇ ಮಾಡ್ತಾನೆ. ಯಾಕಂದ್ರೆ ಇದಕ್ಕಿಂತ ಮುಂಚೆ ಯೆಹೋವ ಯಾರಿಗೆಲ್ಲಾ ಈ ತರ ನೇಮಕಗಳನ್ನ ಕೊಟ್ಟನೋ ಅದನ್ನ ಮಾಡೋಕೆ ಅವರಿಗೆ ಕಷ್ಟ ಆದ್ರೂ ಆತನು ಅವರ ಕೈ ಬಿಟ್ಟಿಲ್ಲ, ಸಹಾಯ ಮಾಡಿದ್ದಾನೆ. ಅವರಲ್ಲಿ ಒಬ್ಬ ಪ್ರವಾದಿ ಯೆಹೆಜ್ಕೇಲ. ಅವನು ಬಾಬೆಲಿಗೆ ಕೈದಿಗಳಾಗಿ ಹೋಗಿದ್ದ ಯೆಹೂದ್ಯರಿಗೆ ಯೆಹೋವನ ಸಂದೇಶವನ್ನ ಸಾರಬೇಕಿತ್ತು. ಅದನ್ನ ಮಾಡೋಕೆ ಯೆಹೋವ ಅವನಿಗೆ ಹೇಗೆ ಸಹಾಯ ಮಾಡಿದನು ಅಂತ ನೋಡೋಣ.

2. (ಎ) ಯೆಹೆಜ್ಕೇಲ ಎಂಥ ಜನರಿಗೆ ಸಾರಬೇಕಿತ್ತು? (ಬಿ) ಈ ಲೇಖನದಲ್ಲಿ ನಾವೇನು ಕಲಿತೀವಿ? (ಯೆಹೆಜ್ಕೇಲ 2:3-6)

2 ಯೆಹೋವ ದೇವರು ಯೆಹೆಜ್ಕೇಲನಿಗೆ ಪದೇಪದೇ “ಭಯಪಡಬೇಡ” ಅಂತ ಹೇಳ್ತಿದ್ದನು. ಯಾಕಂದ್ರೆ ಅವನು ಸಾರಬೇಕಾಗಿದ್ದ ಜನರು “ದಂಗೆಕೋರರು,” ‘ತಿರಿಗಿಬೀಳೋರು,’ ‘ಕಲ್ಲೆದೆಯವರು’ ಆಗಿದ್ರು. ಅಷ್ಟೇ ಅಲ್ಲ, ಅವರು ಮುಳ್ಳುಗಳ ತರ ಚುಚ್ಚುವ ಮತ್ತು ಚೇಳುಗಳ ಹಾಗೆ ಕಚ್ಚುವವರಾಗಿದ್ರು. (ಯೆಹೆಜ್ಕೇಲ 2:3-6 ಓದಿ.) ಆದ್ರೂ ಯೆಹೆಜ್ಕೇಲ ತನಗೆ ಕೊಟ್ಟಿದ್ದ ಕೆಲಸನ ಮಾಡಿ ಮುಗಿಸಿದ. ಅದಕ್ಕೆ ಅವನಿಗೆ 3 ವಿಷಯಗಳು ಸಹಾಯ ಮಾಡಿತು. (1) ಯೆಹೋವನೇ ಅವನನ್ನ ಕಳಿಸಿದ್ದನು, (2) ಪವಿತ್ರಶಕ್ತಿ ಅವನಿಗೆ ಬಲ ಕೊಡ್ತು, (3) ದೇವರ ಮಾತುಗಳು ಅವನ ನಂಬಿಕೆಯನ್ನ ಜಾಸ್ತಿ ಮಾಡ್ತು. ಈ ಮೂರು ವಿಷಯಗಳು ಯೆಹೆಜ್ಕೇಲನಿಗೆ ಹೇಗೆ ಸಹಾಯ ಮಾಡ್ತು ಮತ್ತು ನಮಗೆ ಹೇಗೆ ಸಹಾಯ ಮಾಡುತ್ತೆ ಅಂತ ಈಗ ನೋಡೋಣ.

ಯೆಹೋವನೇ ಯೆಹೆಜ್ಕೇಲನನ್ನ ಕಳಿಸಿದ್ದು

3. ಯೆಹೋವ ಯೆಹೆಜ್ಕೇಲನಿಗೆ ಏನು ಹೇಳಿದನು ಮತ್ತು ಯಾವ ಮಾತುಗಳು ಅವನಿಗೆ ಧೈರ್ಯ ತುಂಬಿರುತ್ತೆ?

3 ಯೆಹೋವ ದೇವರು ಯೆಹೆಜ್ಕೇಲನಿಗೆ “ನಾನು ನಿನ್ನನ್ನ . . . ಕಳಿಸ್ತಿದ್ದೀನಿ” ಅಂತ ಹೇಳಿದನು. (ಯೆಹೆ. 2:3, 4) ಈ ಮಾತುಗಳು ಯೆಹೆಜ್ಕೇಲನಿಗೆ ಖಂಡಿತ ಧೈರ್ಯ ತುಂಬಿರುತ್ತೆ. ಯಾಕಂದ್ರೆ ಯೆಹೋವ ದೇವರು ಮೋಶೆ ಮತ್ತು ಯೆಶಾಯನನ್ನ ಪ್ರವಾದಿಗಳಾಗಿ ನೇಮಿಸಿದಾಗ ಇದೇ ಮಾತುಗಳನ್ನ ಹೇಳಿದ್ದನು. (ವಿಮೋ. 3:10; ಯೆಶಾ. 6:8) ಅವರಿಗೆ ಸಿಕ್ಕ ಕಷ್ಟವಾದ ನೇಮಕನ ಮಾಡಿ ಮುಗಿಸೋಕೆ ಸಹಾಯ ಮಾಡಿದನು. ಇದು ಯೆಹೆಜ್ಕೇಲನಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಯೆಹೋವ ದೇವರು “ನಾನು ನಿನ್ನನ್ನ . . . ಕಳಿಸ್ತಿದ್ದೀನಿ” ಅಂತ ಎರಡು ಸಲ ಯೆಹೆಜ್ಕೇಲನಿಗೆ ಹೇಳಿದಾಗ ಅವನಿಗೂ ಯೆಹೋವನ ಮೇಲೆ ನಂಬಿಕೆ ಬಂದಿರುತ್ತೆ. ಅಷ್ಟೇ ಅಲ್ಲ, ಯೆಹೆಜ್ಕೇಲ ಪುಸ್ತಕದಲ್ಲಿ “ಯೆಹೋವ ನನಗೆ ಹೀಗಂದನು,” ‘ಯೆಹೋವ ಮತ್ತೆ ನನಗೆ ಹೀಗಂದನು’ ಅಂತ ತುಂಬ ಸಲ ಇದೆ. (ಯೆಹೆ. 3:16; 6:1) ಇದ್ರಿಂದ ಯೆಹೋವನೇ ತನ್ನನ್ನ ಕಳಿಸಿರೋದು ಅಂತ ಯೆಹೆಜ್ಕೇಲನಿಗೆ ಅರ್ಥ ಆಗಿರುತ್ತೆ. ಜೊತೆಗೆ, ಯೆಹೆಜ್ಕೇಲನ ಅಪ್ಪ ಒಬ್ಬ ಪುರೋಹಿತನಾಗಿ ಇದ್ದಿದ್ರಿಂದ ಯೆಹೋವ ದೇವರು ತನ್ನ ಸೇವಕರಿಗೆ ಅದರಲ್ಲೂ ಮುಖ್ಯವಾಗಿ ಪ್ರವಾದಿಗಳಿಗೆ ಹೇಗೆಲ್ಲಾ ಸಹಾಯ ಮಾಡಿದ್ದನು ಅನ್ನೋದನ್ನ ಖಂಡಿತ ಹೇಳಿಕೊಟ್ಟಿರುತ್ತಾನೆ. ಹಾಗಾಗಿ ಇಸಾಕ, ಯಾಕೋಬ ಮತ್ತು ಯೆರೆಮೀಯನಿಗೆ ಯೆಹೋವ “ನಾನು ನಿನ್ನ ಜೊತೆ ಇರ್ತಿನಿ” ಅಂತ ಹೇಳಿದ ಮಾತು ಯೆಹೆಜ್ಕೇಲನ ನೆನಪಿಗೆ ಬಂದಿರುತ್ತೆ.—ಆದಿ. 26:24; 28:15; ಯೆರೆ. 1:8.

4. ಯೆಹೋವ ಹೇಳಿದ ಯಾವ ಮಾತುಗಳು ಯೆಹೆಜ್ಕೇಲನಿಗೆ ಧೈರ್ಯ ತುಂಬಿತು?

4 ಯೆಹೆಜ್ಕೇಲನ ಸಂದೇಶವನ್ನ ಜನರು ಕೇಳಿದ್ರಾ? “ಇಸ್ರಾಯೇಲ್ಯರು ನೀನು ಹೇಳೋದನ್ನ ಕಿವಿಗೆ ಹಾಕೊಳ್ಳೋದೇ ಇಲ್ಲ, ಯಾಕಂದ್ರೆ ನನ್ನ ಮಾತನ್ನ ಕೇಳೋಕೆ ಅವ್ರಿಗೆ ಇಷ್ಟ ಇಲ್ಲ” ಅಂತ ಯೆಹೋವ ಯೆಹೆಜ್ಕೇಲನಿಗೆ ಹೇಳಿದನು. (ಯೆಹೆ. 3:7) ಇದು ಒಂದರ್ಥದಲ್ಲಿ ಯೆಹೋವ ದೇವರು ಯೆಹೆಜ್ಕೇಲನಿಗೆ, ‘ಜನ್ರು ನಿನ್ನ ಮಾತನ್ನ ಕೇಳಿ ತಿದ್ದಿಕೊಳ್ಳದೆ ಇದ್ರೆ ನೀನು ಬೇಜಾರು ಮಾಡಿಕೊಳ್ಳಬೇಡ. ಅವರು ನಿನ್ನನ್ನ ಅಲ್ಲ ನನ್ನನ್ನ ಬೇಡ ಅಂತಿದ್ದಾರೆ’ ಅಂತ ಹೇಳಿದ ಹಾಗಿತ್ತು. ಅಷ್ಟೇ ಅಲ್ಲ, ಯೆಹೆಜ್ಕೇಲ ಹೇಳಿದ ಹಾಗೆ ಜನರಿಗೆ ನ್ಯಾಯತೀರ್ಪಾಗುವಾಗ “ತಮ್ಮ ಮಧ್ಯ ಒಬ್ಬ ಪ್ರವಾದಿ ಇದ್ದ” ಅನ್ನೋದು ಅವ್ರಿಗೆ ಗೊತ್ತಾಗುತ್ತೆ ಅಂತ ಯೆಹೋವ ಅವನಿಗೆ ಹೇಳಿದನು. (ಯೆಹೆ. 2:5; 33:33) ಈ ಮಾತುಗಳು ಯೆಹೆಜ್ಕೇಲನಿಗೆ ತನ್ನ ಸೇವೆನ ಪೂರ್ತಿಯಾಗಿ ಮಾಡಿ ಮುಗಿಸೋಕೆ ಧೈರ್ಯ ತುಂಬಿರುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

ನಮ್ಮನ್ನೂ ಯೆಹೋವನೇ ಕಳಿಸಿದ್ದಾನೆ

ಸಾರುವಾಗ ಯೆಹೆಜ್ಕೇಲನ ತರ ನಮಗೂ ಹಿಂಸೆ, ವಿರೋಧಗಳು ಬರಬಹುದು. ಆದ್ರೆ ಯೆಹೋವ ನಮ್ಮ ಜೊತೆ ಇರ್ತಾನೆ (ಪ್ಯಾರ 5-6 ನೋಡಿ)

5. ಯೆಶಾಯ 44:8ರಲ್ಲಿರೋ ಮಾತು ನಮಗೆ ಹೇಗೆ ಧೈರ್ಯ ತುಂಬುತ್ತೆ?

5 ಇವತ್ತು ಕೂಡ ನಮ್ಮನ್ನ ಸಿಹಿಸುದ್ದಿ ಸಾರೋಕೆ ಕಳಿಸಿರೋದು ಯೆಹೋವನೇ. ಯಾಕಂದ್ರೆ ಆತನೇ ನಮ್ಮನ್ನ ತನ್ನ “ಸಾಕ್ಷಿಗಳು” ಅಂತ ಕರೆದಿದ್ದಾನೆ. (ಯೆಶಾ. 43:10) ಈ ಮಾತುಗಳು ನಮಗೆ ಎಷ್ಟು ಧೈರ್ಯ ಕೊಡುತ್ತೆ ಅಲ್ವಾ? ಯೆಹೋವ ಯೆಹೆಜ್ಕೇಲನಿಗೆ ಸಿಹಿಸುದ್ದಿ ಸಾರೋಕೆ “ಭಯಪಡಬೇಡ” ಅಂತ ಹೇಳಿದ ಹಾಗೆ ನಮಗೂ, “ಭಯದಲ್ಲಿ ಮುಳುಗಿ ಹೋಗಬೇಡಿ” ಅಂತ ಹೇಳ್ತಿದ್ದಾನೆ. ನಮ್ಮ ವಿರೋಧಿಗಳನ್ನ ನೋಡಿ ನಾವು ಭಯಪಡೋ ಅವಶ್ಯಕತೆ ಇಲ್ಲ. ಯಾಕಂದ್ರೆ ಯೆಹೋವ ಯೆಹೆಜ್ಕೇಲನ ಜೊತೆ ಇದ್ದ ಹಾಗೆ ನಮ್ಮ ಜೊತೆನೂ ಇದ್ದಾನೆ. ನಮ್ಮನ್ನೂ ಕಳಿಸಿರೋದು ಆತನೇ.—ಯೆಶಾಯ 44:8 ಓದಿ.

6. (ಎ) ಯೆಹೋವ ನಮಗೆ ಯಾವ ಭರವಸೆ ಕೊಡ್ತಿದ್ದಾನೆ? (ಬಿ) ಏನನ್ನ ಮನಸ್ಸಲ್ಲಿ ಇಟ್ಟುಕೊಂಡ್ರೆ ನಾವು ಸೇವೆನ ಖುಷಿಯಾಗಿ ಮಾಡ್ತೀವಿ?

6 ಯೆಹೋವ ನಮ್ಮ ಜೊತೆನೂ ಇರ್ತಾನೆ ಅಂತ ಮಾತು ಕೊಟ್ಟಿದ್ದಾನೆ. “ನೀವು ನನ್ನ ಸಾಕ್ಷಿಗಳು” ಅಂತ ಹೇಳೋ ಮುಂಚೆ ಆತನು, “ನೀನು ನೀರನ್ನ ದಾಟಿಹೋಗುವಾಗ, ನಾನು ನಿನ್ನ ಜೊತೆ ಇರ್ತಿನಿ. ನೀನು ನದಿಗಳನ್ನ ದಾಟುವಾಗ ಅದ್ರ ನೀರು ನಿನ್ನನ್ನ ಮುಳುಗಿಸಲ್ಲ. ಬೆಂಕಿಯಲ್ಲಿ ನೀನು ನಡಿಯೋವಾಗ ಅದು ನಿನ್ನನ್ನ ದಹಿಸಲ್ಲ, ಅದ್ರ ಜ್ವಾಲೆ ನಿನ್ನನ್ನ ಸುಡಲ್ಲ” ಅಂತ ಹೇಳಿದ್ದಾನೆ. (ಯೆಶಾ. 43:2) ನಾವು ಸಿಹಿಸುದ್ದಿ ಸಾರುವಾಗ ನೀರಿನ ಅಲೆಗಳ ತರ ಒಂದಾದ ಮೇಲೆ ಒಂದು ಕಷ್ಟಗಳು ಬರಬಹುದು ಮತ್ತು ಬೆಂಕಿಯಂಥ ವಿರೋಧಗಳು ಬರಬಹುದು. ಆದ್ರೂ ನಾವು ನಮ್ಮ ನೇಮಕವನ್ನ ಮಾಡಕ್ಕಾಗುತ್ತೆ. ಯಾಕಂದ್ರೆ ಯೆಹೋವ ನಮಗೆ ಸಹಾಯ ಮಾಡ್ತಾನೆ. (ಯೆಶಾ. 41:13) ಯೆಹೆಜ್ಕೇಲನ ಕಾಲದಲ್ಲೂ ಜನರು ಅವನ ಮಾತನ್ನ ಕೇಳಲಿಲ್ಲ. ಈಗಲೂ ನಾವು ಸಿಹಿಸುದ್ದಿಯನ್ನ ಸಾರುವಾಗ ಜನರು ನಮ್ಮ ಮಾತನ್ನ ಕೇಳಲ್ಲ. ಇದರ ಅರ್ಥ ಯೆಹೋವನ ಸಾಕ್ಷಿಗಳಾಗಿ ನಾವು ನಮ್ಮ ಕೆಲಸನ ಸರಿಯಾಗಿ ಮಾಡ್ತಿಲ್ಲ ಅಂತಲ್ಲ. ನಾವು ಯೆಹೋವ ಕೊಟ್ಟ ಕೆಲಸನ ನಂಬಿಕೆಯಿಂದ ಮಾಡುವಾಗ ಆತ ನಮ್ಮನ್ನ ನೋಡಿ ತುಂಬ ಖುಷಿಪಡ್ತಾನೆ. ಯಾಕಂದ್ರೆ “ಪ್ರತಿಯೊಬ್ಬನಿಗೂ ಅವನು ಪಟ್ಟ ಶ್ರಮಕ್ಕೆ ತಕ್ಕ ಹಾಗೆ ಪ್ರತಿಫಲ ಸಿಗುತ್ತೆ” ಅಂತ ಅಪೊಸ್ತಲ ಪೌಲ ಹೇಳಿದ್ದಾನೆ. (1 ಕೊರಿಂ. 3:8; 4:1, 2) “ಯೆಹೋವ ನಮ್ಮ ಪ್ರಯತ್ನನ ನೋಡಿ ಆಶೀರ್ವದಿಸ್ತಾನೆ ಅನ್ನೋದನ್ನ ನೆನಸಿಕೊಂಡಾಗ ನನಗೆ ತುಂಬ ಖುಷಿಯಾಗುತ್ತೆ” ಅಂತ ಅನೇಕ ವರ್ಷಗಳಿಂದ ಪಯನೀಯರ್‌ ಸೇವೆ ಮಾಡ್ತಿರೋ ಒಬ್ಬ ಸಹೋದರಿ ಹೇಳ್ತಾರೆ.

ಪವಿತ್ರಶಕ್ತಿಯಿಂದ ಯೆಹೆಜ್ಕೇಲನಿಗೆ ಬಲ ಸಿಕ್ತು

ಯೆಹೆಜ್ಕೇಲ ಯೆಹೋವನ ಸ್ವರ್ಗೀಯ ರಥದ ದರ್ಶನವನ್ನ ನೋಡಿದ. ಆಗ, ಸೇವೆ ಮಾಡೋಕೆ ಯೆಹೋವ ಖಂಡಿತ ಸಹಾಯ ಮಾಡ್ತಾನೆ ಅನ್ನೋ ನಂಬಿಕೆ ಅವನಿಗೆ ಬಂತು (ಪ್ಯಾರ 7 ನೋಡಿ)

7. ಯೆಹೆಜ್ಕೇಲ ದರ್ಶನದ ಬಗ್ಗೆ ನೆನಪಿಸಿಕೊಂಡಾಗೆಲ್ಲಾ ಅವನಿಗೆ ಹೇಗೆ ಸಹಾಯ ಸಿಕ್ತು? (ಮುಖಪುಟ ಚಿತ್ರ ನೋಡಿ.)

7 ಪವಿತ್ರಶಕ್ತಿಗೆ ಎಷ್ಟು ಬಲ ಇದೆ ಅಂತ ಯೆಹೆಜ್ಕೇಲ ಅರ್ಥ ಮಾಡಿಕೊಂಡ. ಅವನಿಗೆ ದರ್ಶನದಲ್ಲಿ ಒಂದು ದೊಡ್ಡ ಸ್ವರ್ಗೀಯ ರಥ ಕಾಣಿಸ್ತು. ಅದರ ಚಕ್ರಗಳು ಚಲಿಸೋಕೆ ಮತ್ತು ಅಲ್ಲಿದ್ದ ದೇವದೂತರಿಗೆ, ಪವಿತ್ರಶಕ್ತಿ ಸಹಾಯ ಮಾಡಿದ್ದನ್ನ ನೋಡಿದ. (ಯೆಹೆ. 1:20, 21) ಆಗ ಯೆಹೆಜ್ಕೇಲನಿಗೆ ಹೇಗೆ ಅನಿಸ್ತು? “ಅದನ್ನ ನೋಡ್ದಾಗ ನಾನು ಅಡ್ಡಬಿದ್ದೆ” ಅಂತ ಹೇಳಿದ. (ಯೆಹೆ. 1:28) ಮೊದಲು ಈ ದರ್ಶನವನ್ನ ನೋಡಿದಾಗ ಅವನಿಗೆ ಭಯ ಆಯ್ತು ನಿಜ. ಆದ್ರೆ ಆ ದರ್ಶನವನ್ನ ನೆನಸಿಕೊಂಡಾಗೆಲ್ಲಾ ಯೆಹೋವ ತನಗೆ ಕೊಟ್ಟಿರೋ ಕೆಲಸನ ಮಾಡಿ ಮುಗಿಸೋಕೆ ಪವಿತ್ರಶಕ್ತಿ ಸಹಾಯ ಮಾಡುತ್ತೆ ಅನ್ನೋ ಭರವಸೆ ಅವನಿಗೆ ಸಿಕ್ತು.

8-9. (ಎ) ಯೆಹೋವ ಯೆಹೆಜ್ಕೇಲನಿಗೆ “ಎದ್ದು ನಿಂತ್ಕೊ” ಅಂತ ಹೇಳಿದಾಗ ಏನಾಯ್ತು? (ಬಿ) ಹಠಮಾರಿ ಜನರಿಗೆ ಸಾರೋಕೆ ಯೆಹೋವ ದೇವರು ಅವನನ್ನ ಹೇಗೆ ಬಲಪಡಿಸಿದನು?

8 ಯೆಹೆಜ್ಕೇಲ ಅಡ್ಡಬಿದ್ದಾಗ ಯೆಹೋವ ಅವನಿಗೆ “ಮನುಷ್ಯಕುಮಾರನೇ, ಎದ್ದು ನಿಂತ್ಕೊ. ನಾನು ನಿನ್ನ ಜೊತೆ ಮಾತಾಡಬೇಕು” ಅಂದನು. ಯೆಹೋವ ಹೇಳಿದ ಈ ಮಾತು ಮತ್ತು ಪವಿತ್ರಶಕ್ತಿ ಯೆಹೆಜ್ಕೇಲನಿಗೆ ಎದ್ದು ನಿಲ್ಲೋಕೆ ಸಹಾಯ ಮಾಡ್ತು. “ಪವಿತ್ರಶಕ್ತಿ ನನ್ನೊಳಗೆ ಬಂದು ನಾನು ಎದ್ದು ನಿಲ್ಲೋ ಹಾಗೆ ಮಾಡ್ತು” ಅಂತ ಅವನು ಹೇಳಿದ. (ಯೆಹೆ. 2:1, 2) ಕೊಟ್ಟ ಕೆಲಸನ ಮುಗಿಸೋ ತನಕ ಮತ್ತು ಅದರ ನಂತರನೂ ಯೆಹೋವನ “ಕೈ” ಅಂದ್ರೆ “ಪವಿತ್ರಶಕ್ತಿ” ಯೆಹೆಜ್ಕೇಲನ ಜೊತೆನೇ ಇತ್ತು. (ಯೆಹೆ. 3:22, ಪಾದಟಿಪ್ಪಣಿ; 8:1; 33:22; 37:1; 40:1) “ಹಠಮಾರಿಗಳು, ಕಲ್ಲೆದೆಯವರು” ಆಗಿದ್ದ ಜನರ ಮುಂದೆ ಸಾರೋಕೆ ಯೆಹೋವನ ಪವಿತ್ರಶಕ್ತಿ ಅವನಿಗೆ ಧೈರ್ಯ ತುಂಬಿತು. (ಯೆಹೆ. 3:7) ಅಷ್ಟೇ ಅಲ್ಲ, ಯೆಹೋವ ದೇವರು ಕೂಡ ಯೆಹೆಜ್ಕೇಲನಿಗೆ “ನಾನು ನಿನ್ನ ಮುಖವನ್ನ ಅವ್ರ ಮುಖಗಳಷ್ಟೇ ಕಠಿಣವಾಗಿ ಮಾಡಿದ್ದೀನಿ, ನಿನ್ನ ಹಣೆಯನ್ನ ಅವ್ರ ಹಣೆಗಳಷ್ಟೇ ಗಟ್ಟಿಯಾಗಿ ಮಾಡಿದ್ದೀನಿ. ನಾನು ನಿನ್ನ ಹಣೆಯನ್ನ ವಜ್ರದಷ್ಟು ಗಟ್ಟಿಯಾಗಿ, ಗಡುಸು ಕಲ್ಲಿಗಿಂತ ಗಟ್ಟಿಯಾಗಿ ಮಾಡಿದ್ದೀನಿ. ನೀನು ಅವ್ರಿಗೆ ಹೆದರಬೇಡ, ಅವ್ರ ಮುಖ ನೋಡಿ ಗಾಬರಿ ಆಗಬೇಡ” ಅಂತ ಹೇಳಿದನು. (ಯೆಹೆ. 3:8, 9) ಇದು ಒಂದರ್ಥದಲ್ಲಿ ಯೆಹೋವ ಅವನಿಗೆ ‘ಜನರು ನೀನು ಹೇಳೋ ಮಾತನ್ನ ಕೇಳಲಿಲ್ಲ ಅಂದ್ರೂ ನೀನು ಬೇಜಾರು ಮಾಡಿಕೊಳ್ಳಬೇಡ. ನಾನು ನಿನ್ನ ಜೊತೆ ಇರ್ತೀನಿ, ನಿನಗೆ ಬಲ ಕೊಡ್ತೀನಿ’ ಅಂತ ಹೇಳಿದ ಹಾಗಿತ್ತು.

9 ಆಮೇಲೆ ಪವಿತ್ರಶಕ್ತಿ ಯೆಹೆಜ್ಕೇಲನನ್ನ ಅವನು ಸಾರಬೇಕಿದ್ದ ಜಾಗಕ್ಕೆ ಕರಕೊಂಡು ಹೋಯ್ತು. ಅಲ್ಲಿ “ಯೆಹೋವನ ಕೈ” ಅಂದ್ರೆ “ಪವಿತ್ರಶಕ್ತಿ” ತನ್ನೊಳಗೆ ಕೆಲಸ ಮಾಡ್ತಿದೆ ಅಂತ ಅವನಿಗೆ ಗೊತ್ತಾಯ್ತು. ಆದ್ರೆ ದೇವರ ಸಂದೇಶನ ಅವನು ಧೈರ್ಯವಾಗಿ ಸಾರಬೇಕಾದ್ರೆ ಮೊದಲು ಅವನು ಆ ಸಂದೇಶನ ಅರ್ಥ ಮಾಡಿಕೊಳ್ಳಬೇಕಿತ್ತು. ಅದಕ್ಕೆ ಅವನಿಗೆ ಒಂದು ವಾರ ಹಿಡಿಯಿತು. (ಯೆಹೆ. 3:14, 15, ಪಾದಟಿಪ್ಪಣಿ) ಆಮೇಲೆ ಯೆಹೋವ ದೇವರು ಅವನನ್ನ ಕಣಿವೆ ಬೈಲಿಗೆ ಕರಕೊಂಡು ಹೋದನು. ಅಲ್ಲಿ “ಪವಿತ್ರಶಕ್ತಿ [ಅವನೊಳಗೆ]” ಹೋಯ್ತು. (ಯೆಹೆ. 3:23, 24) ಆಗ ದೇವರ ಸಂದೇಶ ಸಾರೋಕೆ ಅವನು ರೆಡಿಯಾದ.

ಪವಿತ್ರಶಕ್ತಿಯಿಂದ ನಮಗೂ ಬಲ ಸಿಗುತ್ತೆ

ದೇವರ ಸಂದೇಶ ಸಾರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? (ಪ್ಯಾರ 10 ನೋಡಿ)

10. ಸಿಹಿಸುದ್ದಿ ಸಾರೋಕೆ ನಮಗೆ ಯಾವ ಸಹಾಯ ಬೇಕು ಮತ್ತು ಯಾಕೆ?

10 ಸಿಹಿಸುದ್ದಿ ಸಾರೋಕೆ ನಮಗೆ ಇವತ್ತು ಯಾವುದು ಸಹಾಯ ಮಾಡುತ್ತೆ? ಯೆಹೆಜ್ಕೇಲನಿಗೆ ಯಾವುದು ಸಹಾಯ ಮಾಡಿತು ಅಂತ ನೋಡಿ. ಅವನು ಸಾರೋ ಕೆಲಸನ ಶುರುಮಾಡೋಕೆ ಮುಂಚೆನೇ ಪವಿತ್ರಶಕ್ತಿ ಅವನಿಗೆ ಬಲ ಕೊಡ್ತು. ಇವತ್ತು ನಮಗೂ ಪವಿತ್ರಶಕ್ತಿ ಬಲ ಕೊಡುತ್ತೆ. ಪವಿತ್ರಶಕ್ತಿ ಇಲ್ಲದಿದ್ರೆ ಸಾರೋಕೆ ಆಗಲ್ಲ. ಯಾಕಂದ್ರೆ ಸೈತಾನ ನಮ್ಮ ವಿರುದ್ಧ ಯುದ್ಧ ಮಾಡ್ತಿದ್ದಾನೆ. ಸಾರೋ ಕೆಲಸನ ನಿಲ್ಲಿಸೋಕೆ ಪ್ರಯತ್ನ ಮಾಡ್ತಿದ್ದಾನೆ. (ಪ್ರಕ. 12:17) ಸೈತಾನನನ್ನ ನಮ್ಮಿಂದ ಸೋಲಿಸೋಕೆ ಆಗಲ್ಲ ಅಂತ ನಮಗೆ ಅನಿಸಬಹುದು. ಆದ್ರೆ ಸಿಹಿಸುದ್ದಿ ಸಾರುತ್ತಿರೋದ್ರಿಂದ ನಾವು ಈಗಾಗಲೇ ಅವನನ್ನ ಸೋಲಿಸ್ತಾ ಇದ್ದೀವಿ. (ಪ್ರಕ. 12:9-11) ಅದನ್ನ ಹೇಗೆ ಹೇಳಬಹುದು? ಸಾರೋ ಕೆಲಸನ ನಿಲ್ಲಿಸೋಕೆ ಸೈತಾನ ತುಂಬ ಅಡ್ಡಿತಡೆಗಳನ್ನ ತರ್ತಿದ್ದಾನೆ, ಬೆದರಿಕೆ ಹಾಕ್ತಿದ್ದಾನೆ. ಆದ್ರೂ ನಾವು ಅದನ್ನ ಮೆಟ್ಟಿನಿಂತು ಪ್ರತಿದಿನ ಸಾರಿದಾಗ ಅವನ ಪ್ರಯತ್ನವನ್ನೆಲ್ಲ ಮಣ್ಣುಪಾಲು ಮಾಡ್ತಿದ್ದೀವಿ, ಅವನ ವಿರುದ್ಧ ಗೆದ್ದಿದ್ದೀವಿ. ಇದ್ರಿಂದ ನಮಗೆ ಏನು ಗೊತ್ತಾಗುತ್ತೆ? ಜನರಿಗೆ ಸಾರೋಕೆ ಯೆಹೋವ ನಮಗೆ ಪವಿತ್ರಶಕ್ತಿ ಕೊಡ್ತಿದ್ದಾನೆ ಮತ್ತು ಆತನು ನಮ್ಮ ಜೊತೆ ಇದ್ದಾನೆ ಅಂತ ಗೊತ್ತಾಗುತ್ತೆ.—ಮತ್ತಾ. 5:10-12; 1 ಪೇತ್ರ 4:14.

11. (ಎ) ನಮಗೆ ಪವಿತ್ರಶಕ್ತಿ ಹೇಗೆ ಸಹಾಯ ಮಾಡುತ್ತೆ? (ಬಿ) ಅದನ್ನ ಪಡಕೊಳ್ಳೋಕೆ ನಾವೇನು ಮಾಡ್ತಾ ಇರಬೇಕು?

11 ಸಂದೇಶ ಸಾರೋಕೆ ಯೆಹೋವ ಯೆಹೆಜ್ಕೇಲನಿಗೆ ಬಲ ಕೊಟ್ಟನು. ಅಷ್ಟೇ ಅಲ್ಲ, ಅವನ ಮುಖ ಮತ್ತು ಹಣೆಯನ್ನ ಸಾಂಕೇತಿಕವಾಗಿ ಗಟ್ಟಿಮಾಡಿದನು ಅಂತ ನಾವು ಕಲಿತ್ವಿ. ಇದ್ರಿಂದ ನಮಗೆ ಯಾವ ಆಶ್ವಾಸನೆ ಸಿಗುತ್ತೆ? ಸಾರೋಕೆ ನಮಗೆ ಎಷ್ಟೇ ಹಿಂಸೆ ವಿರೋಧ ಬಂದ್ರೂ ಅದನ್ನೆಲ್ಲ ಜಯಿಸೋಕೆ ಯೆಹೋವನ ಪವಿತ್ರಶಕ್ತಿ ನಮಗೆ ಬಲ ಕೊಡುತ್ತೆ. (2 ಕೊರಿಂ. 4:7-9) ಹಾಗಾಗಿ ಪವಿತ್ರಶಕ್ತಿ ಸಿಗಬೇಕಾದ್ರೆ ನಾವೇನು ಮಾಡಬೇಕು? ಯೆಹೋವ ನಮಗೆ ಪವಿತ್ರಶಕ್ತಿ ಕೊಟ್ಟೇ ಕೊಡ್ತಾನೆ ಅನ್ನೋ ಭರವಸೆಯಿಂದ ಆತನಿಗೆ ಪ್ರಾರ್ಥನೆ ಮಾಡಬೇಕು. ಯೇಸು ತನ್ನ ಶಿಷ್ಯರಿಗೆ “ಕೇಳ್ತಾ ಇರಿ . . . ಹುಡುಕ್ತಾ ಇರಿ . . . ತಟ್ಟುತ್ತಾ ಇರಿ” ಅಂತ ಹೇಳಿದನು. ಹಾಗಾದ್ರೆ ನಾವು ಪವಿತ್ರಶಕ್ತಿ ಬೇಕು ಅಂತ ಯೆಹೋವ ದೇವರ ಹತ್ರ ಬೇಡಿಕೊಂಡಾಗ ಆತನು ಕೊಟ್ಟೇ ಕೊಡ್ತಾನೆ.—ಲೂಕ 11:9, 13; ಅ. ಕಾ. 1:14; 2:4.

ದೇವರ ಮಾತುಗಳು ಯೆಹೆಜ್ಕೇಲನ ನಂಬಿಕೆನ ಜಾಸ್ತಿ ಮಾಡ್ತು

12. ಯೆಹೆಜ್ಕೇಲ 2:9–3:3ರಲ್ಲಿ ಹೇಳೋ ತರ ಸುರುಳಿ ಎಲ್ಲಿಂದ ಬಂತು ಮತ್ತು ಅದರಲ್ಲಿ ಏನಿತ್ತು?

12 ಯೆಹೆಜ್ಕೇಲ ನೋಡಿದ ದರ್ಶನದಲ್ಲಿ ಒಂದು ಕೈ, ಸುರುಳಿಯನ್ನ ಹಿಡುಕೊಂಡಿತ್ತು. (ಯೆಹೆಜ್ಕೇಲ 2:9–3:3 ಓದಿ.) ಆ ಸುರುಳಿ ಎಲ್ಲಿಂದ ಬಂತು? ಅದರಲ್ಲಿ ಏನಿತ್ತು? ಅದರಿಂದ ಯೆಹೆಜ್ಕೇಲನ ನಂಬಿಕೆ ಹೇಗೆ ಜಾಸ್ತಿಯಾಯ್ತು? ಅನ್ನೋದನ್ನ ಈಗ ನೋಡೋಣ. ಆ ಸುರುಳಿ ದೇವರ ಸಿಂಹಾಸನದಿಂದ ಬಂತು. ಅದನ್ನ ಅವನಿಗೆ ಯಾರು ಕೊಟ್ರು? ಯೆಹೆಜ್ಕೇಲ ಮೊದಲು ನೋಡಿದ ದರ್ಶನದಲ್ಲಿ ನಾಲ್ಕು ದೇವದೂತರು ಇದ್ರು. ಅವರಲ್ಲಿ ಒಬ್ಬ ಆ ಸುರುಳಿಯನ್ನ ಅವನಿಗೆ ತಂದುಕೊಟ್ಟ. (ಯೆಹೆ. 1:8; 10:7, 20) ಕೈದಿಗಳಾಗಿದ್ದ ಇಸ್ರಾಯೇಲ್ಯರು ದಂಗೆ ಎದ್ದಿದ್ರಿಂದ ಅವರಿಗೆ ನ್ಯಾಯತೀರ್ಪಿನ ಸಂದೇಶವನ್ನ ಯೆಹೋವ ಅದರಲ್ಲಿ ಕೊಟ್ಟಿದ್ದನು. (ಯೆಹೆ. 2:7) ಆ ಸಂದೇಶ ಎಷ್ಟು ದೊಡ್ಡದಾಗಿ ಇತ್ತಂದ್ರೆ ಅದನ್ನ ಆ ಸುರುಳಿಯ ಹಿಂದೆ ಮುಂದೆ ಎರಡು ಕಡೆನೂ ಬರೆದಿತ್ತು.

13. (ಎ) ಯೆಹೋವ ಆ ಸುರುಳಿಯನ್ನ ಏನು ಮಾಡೋಕೆ ಯೆಹೆಜ್ಕೇಲನಿಗೆ ಹೇಳಿದನು? (ಬಿ) ಅದು ಯಾಕೆ ಸಿಹಿಯಾಗಿತ್ತು?

13 ಯೆಹೋವ ಯೆಹೆಜ್ಕೇಲನಿಗೆ “ಸುರುಳಿಯನ್ನ ತಿಂದು ಹೊಟ್ಟೆ ತುಂಬಿಸ್ಕೊ” ಅಂತ ಹೇಳಿದನು. ಅವನು ಯೆಹೋವ ಹೇಳಿದ ತರನೇ ಮಾಡಿದ. ಈ ದರ್ಶನದ ಅರ್ಥ ಏನು? ಅವನು ಆ ಸಂದೇಶನ ಬೇರೆಯವರಿಗೆ ಸಾರೋಕೂ ಮುಂಚೆ ಪೂರ್ತಿಯಾಗಿ ಅರ್ಥಮಾಡಿಕೊಳ್ಳಬೇಕಿತ್ತು. ಎಷ್ಟರಮಟ್ಟಿಗಂದ್ರೆ ಈ ಸಂದೇಶನ ಬೇರೆಯವರಿಗೆ ಹೋಗಿ ಸಾರಲೇಬೇಕು ಅನ್ನೋ ಆಸೆಯನ್ನ ಅದು ಅವನಲ್ಲಿ ಹುಟ್ಟಿಸಬೇಕಿತ್ತು. ಯೆಹೆಜ್ಕೇಲ ಆ ಸುರುಳಿಯನ್ನ ತಿಂದ ಮೇಲೆ ಅದು “ಜೇನಿನಷ್ಟು ಸಿಹಿಯಾಗಿತ್ತು” ಅಂತ ಅನಿಸ್ತು. (ಯೆಹೆ. 3:3) ಯಾಕೆ? ಯಾಕಂದ್ರೆ ಯೆಹೋವನ ಪ್ರತಿನಿಧಿಯಾಗಿ ಜನರಿಗೆ ಆತನ ಸಂದೇಶನ ಸಾರೋದು ಯೆಹೆಜ್ಕೇಲನಿಗೆ ಸಂತೋಷದ ವಿಷಯ ಆಗಿತ್ತು. (ಕೀರ್ತ. 19:8-11) ಅಷ್ಟೇ ಅಲ್ಲ ಅವನನ್ನ ಯೆಹೋವ ಪ್ರವಾದಿಯಾಗಿ ಆರಿಸಿಕೊಂಡಿರೋದು ಅವನಿಗೆ ಹೆಮ್ಮೆಯ ವಿಷಯವಾಗಿತ್ತು.

14. ಯೆಹೆಜ್ಕೇಲನಿಗೆ ಅವನ ನೇಮಕ ಮಾಡಿ ಮುಗಿಸೋಕೆ ಯಾವುದು ಸಹಾಯ ಮಾಡ್ತು?

14 ಆಮೇಲೆ ಯೆಹೋವ ಯೆಹೆಜ್ಕೇಲನಿಗೆ “ನಾನು ನಿನಗೆ ಹೇಳೋದನ್ನೆಲ್ಲ ಗಮನಕೊಟ್ಟು ಕೇಳು, ಅದನ್ನ ಮನಸ್ಸಲ್ಲಿ ಇಟ್ಕೊ” ಅಂತ ಹೇಳಿದನು. (ಯೆಹೆ. 3:10) ಈಗ ಯೆಹೆಜ್ಕೇಲ ಏನು ಮಾಡಬೇಕಿತ್ತು? ಸುರುಳಿಯಲ್ಲಿದ್ದ ಮಾತುಗಳನ್ನ ಅವನು ನೆನಪಲ್ಲಿಟ್ಟು ಅದರ ಬಗ್ಗೆ ಚೆನ್ನಾಗಿ ಯೋಚನೆ ಮಾಡಬೇಕಿತ್ತು. ಹೀಗೆ ಮಾಡಿದ್ರಿಂದ ಅವನು ನ್ಯಾಯತೀರ್ಪಿನ ಸಂದೇಶನ ಜನರಿಗೆ ಧೈರ್ಯವಾಗಿ ಹೇಳೋಕಾಯ್ತು. (ಯೆಹೆ. 3:11) ಹೀಗೆ ದೇವರ ಮಾತುಗಳು ಅವನ ಮನಸಲ್ಲೂ ಬಾಯಲ್ಲೂ ಇದ್ದಿದ್ರಿಂದ ದೇವರು ಕೊಟ್ಟ ಕೆಲಸನ ಮಾಡಿ ಮುಗಿಸೋಕೆ ಅವನು ರೆಡಿಯಾಗಿದ್ದ.—ಕೀರ್ತನೆ 19:14 ಹೋಲಿಸಿ.

ದೇವರ ಮಾತುಗಳು ನಮ್ಮ ನಂಬಿಕೆಯನ್ನೂ ಜಾಸ್ತಿ ಮಾಡುತ್ತೆ

15. ಏನೇ ಆದ್ರೂ ನಾವು ಸಿಹಿಸುದ್ದಿ ಸಾರುತ್ತಾ ಇರೋಕೆ ಏನನ್ನ ‘ಮನಸ್ಸಲ್ಲಿ ಇಟ್ಕೊಬೇಕು?’

15 ಏನೇ ಆದ್ರೂ ನಾವು ದೇವರ ಸೇವೆನ ಮಾಡ್ತಾ ಇರೋಕೆ ದೇವರ ಮಾತುಗಳು ನಮಗೆ ಸಹಾಯ ಮಾಡುತ್ತೆ. ಹಾಗಾಗಿ ಯೆಹೋವನ ಮಾತುಗಳನ್ನ ನಮ್ಮ ‘ಮನಸ್ಸಲ್ಲಿ ಇಟ್ಕೊಬೇಕು.’ ಇವತ್ತು ಯೆಹೋವ ನಮ್ಮ ಜೊತೆ ಬೈಬಲ್‌ನಿಂದ ಮಾತಾಡ್ತಾನೆ. ಹಾಗಾಗಿ ಆತನ ಮಾತುಗಳು ನಮ್ಮ ನಂಬಿಕೆನ ಜಾಸ್ತಿ ಮಾಡ್ತಾ ಇರೋಕೆ ನಾವು ಬಿಟ್ಟುಕೊಡಬೇಕು. ಅದು ಹೇಗೆ ಅಂತ ಈಗ ನೋಡೋಣ.

16. ನಮ್ಮ ನಂಬಿಕೆ ಜಾಸ್ತಿಯಾಗಬೇಕಾದ್ರೆ ಏನು ಮಾಡಬೇಕು?

16 ನಮಗೆ ಬಲ ಸಿಗಬೇಕಂದ್ರೆ ಚೆನ್ನಾಗಿ ಊಟ ಮಾಡಬೇಕು ಮತ್ತು ಜೀರ್ಣಿಸಿಕೊಳ್ಳಬೇಕು. ಅದೇ ತರ ನಮ್ಮ ನಂಬಿಕೆ ಜಾಸ್ತಿಯಾಗಬೇಕು ಅಂದ್ರೆ ದೇವರ ವಾಕ್ಯವನ್ನ ಓದಬೇಕು ಮತ್ತು ಓದಿದ ವಿಷಯದ ಬಗ್ಗೆ ಚೆನ್ನಾಗಿ ಯೋಚನೆ ಮಾಡಬೇಕು. ಯೆಹೆಜ್ಕೇಲ ‘ಸುರುಳಿಯನ್ನ ತಿಂದು ಹೊಟ್ಟೆ ತುಂಬಿಸ್ಕೊಬೇಕಿತ್ತು.’ ಅದೇ ತರ ನಾವೂ ಮಾಡಬೇಕು. ಅಂದ್ರೆ ಬೈಬಲ್‌ನಲ್ಲಿರೋ ವಿಷಯಗಳನ್ನ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಅದಕ್ಕೆ ಮೂರು ವಿಷಯ ಸಹಾಯ ಮಾಡುತ್ತೆ. ಬೈಬಲ್‌ ಓದೋ ಮುಂಚೆ ಪ್ರಾರ್ಥನೆ ಮಾಡಬೇಕು. ಆಗ ನಮ್ಮ ಮನಸ್ಸನ್ನ ಸಿದ್ಧ ಮಾಡಿಕೊಳ್ಳೋಕೆ ಆಗುತ್ತೆ. ಆಮೇಲೆ ಬೈಬಲ್‌ನ ಓದಬೇಕು. ಓದುವಾಗ ಆಗಾಗ ನಿಲ್ಲಿಸಿ ಅದರ ಬಗ್ಗೆ ಚೆನ್ನಾಗಿ ಯೋಚನೆ ಮಾಡಬೇಕು. ಆಗ ನಮ್ಮ ನಂಬಿಕೆ ಜಾಸ್ತಿಯಾಗುತ್ತೆ.

17. ನಾವು ಬೈಬಲನ್ನ ಓದುವುದು ಮತ್ತು ಓದಿದ ವಿಷ್ಯದ ಬಗ್ಗೆ ಧ್ಯಾನಿಸೋದು ಯಾಕೆ ಅಷ್ಟು ಮುಖ್ಯ?

17 ನಾವು ಬೈಬಲನ್ನ ಓದೋದು ಮತ್ತು ಓದಿದ ವಿಷಯದ ಬಗ್ಗೆ ಧ್ಯಾನಿಸೋದು ಯಾಕೆ ಅಷ್ಟು ಮುಖ್ಯ? ಯಾಕಂದ್ರೆ ಅದ್ರಿಂದ ನಮಗೆ ಬಲ ಸಿಗುತ್ತೆ. ಆಗ ನಾವು ಸಿಹಿಸುದ್ದಿನ ಬಿಡದೆ ಸಾರ್ತೀವಿ. ಮುಂದೆ ದೇವರ ನ್ಯಾಯತೀರ್ಪಿನ ಸಂದೇಶನ ಭಯ ಪಡದೆ ಹೇಳ್ತೀವಿ. ಅಷ್ಟೇ ಅಲ್ಲ ದೇವರ ಗುಣಗಳ ಬಗ್ಗೆ ನಾವು ಚೆನ್ನಾಗಿ ಯೋಚನೆ ಮಾಡಿದ್ರೆ ಆತನಿಗೆ ಇನ್ನೂ ಹತ್ರ ಆಗ್ತೀವಿ. ಹೀಗೆ ಮಾಡಿದಾಗ ಯೆಹೋವನ ಸೇವೆ ನಮಗೆ ಸಿಹಿಯಾಗಿರುತ್ತೆ. ಅಂದ್ರೆ ನಾವು ಮಾಡೋ ಸೇವೆಯಿಂದ ನಮಗೆ ನೆಮ್ಮದಿ, ತೃಪ್ತಿ ಸಿಗುತ್ತೆ.—ಕೀರ್ತ. 119:103.

ಸೇವೆ ಮಾಡ್ತಾ ಇರೋಣ

18. ಮುಂದೆ ಜನರಿಗೆ ಏನು ಗೊತ್ತಾಗುತ್ತೆ ಮತ್ತು ಯಾಕೆ?

18 ನಾವು ಯೆಹೆಜ್ಕೇಲನ ತರ ಯೆಹೋವ ದೇವರ ಪ್ರವಾದಿಗಳಾಗಿ ಸೇವೆ ಮಾಡ್ತಿಲ್ಲ. ಆದ್ರೆ ಬೈಬಲಿನಲ್ಲಿರೋ ಸಂದೇಶನ ಜನರಿಗೆ ಸಾರುತ್ತಿದ್ದೀವಿ. ಯೆಹೋವ ಈ ಕೆಲಸನ ಸಾಕು ಅಂತ ಹೇಳೋ ತನಕ ಮಾಡ್ತಾ ಇರೋಣ. ಹೀಗೆ ಮಾಡಿದ್ರೆ ಯೆಹೋವ ನ್ಯಾಯತೀರ್ಪು ಮಾಡುವಾಗ, ನಮಗೆ ದೇವರು ಎಚ್ಚರಿಕೆನೇ ಕೊಡಲಿಲ್ಲ, ಇದರ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ ಅಂತ ಜನರು ಹೇಳೋಕೆ ಅವಕಾಶನೇ ಇರಲ್ಲ. (ಯೆಹೆ. 3:19; 18:23) ಅಷ್ಟೇ ಅಲ್ಲ ನಾವು ಸಾರುತ್ತಾ ಇದ್ದಿದ್ದು ದೇವರ ಸಂದೇಶನೇ ಅಂತ ಆಗ ಅವರಿಗೆ ಗೊತ್ತಾಗುತ್ತೆ.

19. ದೇವರ ಸೇವೆ ಮಾಡಿ ಮುಗಿಸೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?

19 ದೇವರ ಸೇವೆ ಮಾಡಿ ಮುಗಿಸೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? ಯೆಹೆಜ್ಕೇಲನಿಗೆ ಸಹಾಯ ಮಾಡಿದ ಮೂರು ವಿಷಯಗಳು ಸಹಾಯ ಮಾಡುತ್ತೆ. (1) ಸಿಹಿಸುದ್ದಿ ಸಾರೋಕೆ ಯೆಹೋವನೇ ನಮ್ಮನ್ನ ಕಳಿಸಿದ್ದಾನೆ, (2) ಪವಿತ್ರಶಕ್ತಿ ನಮಗೆ ಬಲ ತುಂಬುತ್ತೆ, (3) ದೇವರ ಮಾತುಗಳು ನಮ್ಮ ನಂಬಿಕೆನ ಜಾಸ್ತಿ ಮಾಡುತ್ತೆ. ಹೀಗೆ ಯೆಹೋವ ದೇವರ ಸಹಾಯದಿಂದ “ಕೊನೇ ತನಕ” ಸಾರುತ್ತಾ ಇರೋಣ. ಆತನು ಕೊಟ್ಟಿರೋ ಕೆಲಸನ ಮಾಡಿ ಮುಗಿಸೋಣ.—ಮತ್ತಾ. 24:13.

ಗೀತೆ 45 ಮುನ್ನಡೆ!

a ಯೆಹೆಜ್ಕೇಲನಿಗೆ ಸಾರೋಕೆ ಯಾವ ಮೂರು ವಿಷಯಗಳು ಸಹಾಯ ಮಾಡಿತು ಅನ್ನೋದನ್ನ ಈ ಲೇಖನದಲ್ಲಿ ನೋಡೋಣ. ಯೆಹೋವ ಅವನಿಗೆ ಹೇಗೆಲ್ಲಾ ಸಹಾಯ ಮಾಡಿದನು ಅನ್ನೋದನ್ನ ನೋಡುವಾಗ ಇವತ್ತು ನಮಗೂ ಸಿಹಿಸುದ್ದಿ ಸಾರೋಕೆ ಸಹಾಯ ಮಾಡ್ತಾನೆ ಅನ್ನೋ ಭರವಸೆ ಜಾಸ್ತಿಯಾಗುತ್ತೆ.