ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗೆ ಸದಾ ನಿಷ್ಠೆ ತೋರಿಸಿ

ಯೆಹೋವನಿಗೆ ಸದಾ ನಿಷ್ಠೆ ತೋರಿಸಿ

‘ನನಗೂ ನಿನಗೂ ನನ್ನ ಸಂತಾನಕ್ಕೂ ನಿನ್ನ ಸಂತಾನಕ್ಕೂ ಯೆಹೋವನು ಸದಾ ಸಂಬಂಧಸಾಕ್ಷಿಯಾಗಿರಲಿ.’—1 ಸಮು. 20:42.

ಗೀತೆಗಳು: 125, 62

1, 2. ದಾವೀದನೊಟ್ಟಿಗೆ ಯೋನಾತಾನನ ಸ್ನೇಹವು ನಿಷ್ಠೆಗೆ ಒಂದು ವಿಶೇಷ ಉದಾಹರಣೆಯಾಗಿದೆ ಯಾಕೆ?

ಯೋನಾತಾನನು ಯುವಕ ದಾವೀದನ ಧೈರ್ಯ ನೋಡಿ ಬೆರಗಾಗಿರಬೇಕು. ಏಕೆಂದರೆ ದಾವೀದನು ಫಿಲಿಷ್ಟಿಯದ ದೈತ್ಯ ಗೊಲ್ಯಾತನನ್ನು ಕೊಂದು ಅವನ ತಲೆ ಕಡಿದು, ಯೋನಾತಾನನ ತಂದೆಯಾದ ರಾಜ ಸೌಲನ ಮುಂದೆ ತಂದಿಟ್ಟಿದ್ದನು. (1 ಸಮು. 17:57) ಹಾಗಾಗಿ ದೇವರು ದಾವೀದನೊಟ್ಟಿಗೆ ಇದ್ದಾನೆಂದು ಯೋನಾತಾನನಿಗೆ ಸಂದೇಹವೇ ಇರಲಿಲ್ಲ. ಅಂದಿನಿಂದ ಯೋನಾತಾನ ಮತ್ತು ದಾವೀದ ಆಪ್ತ ಗೆಳೆಯರಾದರು. ಒಬ್ಬರಿಗೊಬ್ಬರು ಸದಾ ನಿಷ್ಠರಾಗಿ ಉಳಿಯುತ್ತೇವೆಂದು ಮಾತು ಕೊಟ್ಟರು. (1 ಸಮು. 18:1-3) ಕೊಟ್ಟ ಮಾತಿನಂತೆಯೇ ಯೋನಾತಾನನು ಸಾಯುವ ವರೆಗೂ ದಾವೀದನಿಗೆ ನಿಷ್ಠನಾಗಿ ಉಳಿದನು.

2 ಇಸ್ರಾಯೇಲಿನ ಮುಂದಿನ ರಾಜನಾಗಲು ತನ್ನನ್ನಲ್ಲ ದಾವೀದನನ್ನು ಯೆಹೋವನು ಆಯ್ಕೆಮಾಡಿದ್ದಾನೆಂದು ಯೋನಾತಾನನಿಗೆ ಗೊತ್ತಿದ್ದರೂ ಅವನು ದಾವೀದನಿಗೆ ನಿಷ್ಠನಾಗಿ ಉಳಿದನು. ಗೆಳೆಯ ದಾವೀದನನ್ನು ತನ್ನ ತಂದೆ ಕೊಲ್ಲಲು ಪ್ರಯತ್ನಿಸುತ್ತಿದ್ದಾಗ ಅವನಿಗೆ ತುಂಬ ಚಿಂತೆಹತ್ತಿತು. ದಾವೀದನು ಹೋರೆಷ್‌ನಲ್ಲಿದ್ದ ಅರಣ್ಯದಲ್ಲಿದ್ದನು. ಯೋನಾತಾನ ಅಲ್ಲಿಗೆ ಹೋಗಿ ದಾವೀದನಿಗೆ ಯೆಹೋವನ ಮೇಲೆ ಭರವಸೆಯಿಡಲು ಪ್ರೋತ್ಸಾಹಿಸಿದನು. ಅವನು ಹೇಳಿದ್ದು: “ಭಯಪಡಬೇಡ; ನೀನು ನನ್ನ ತಂದೆಯಾದ ಸೌಲನ ಕೈಗೆ ಸಿಕ್ಕಿಬೀಳುವದಿಲ್ಲ; ನೀನು ಇಸ್ರಾಯೇಲ್ಯರ ಅರಸನಾಗುವಿ; ನಾನು ನಿನಗೆ ಎರಡನೆಯವನಾಗಿರುವೆನು.”—1 ಸಮು. 23:16, 17.

3. (ಎ) ದಾವೀದನಿಗಿಂತಲೂ ಹೆಚ್ಚಾಗಿ ಯಾರಿಗೆ ನಿಷ್ಠೆ ತೋರಿಸುವುದು ಯೋನಾತಾನನಿಗೆ ಪ್ರಾಮುಖ್ಯವಾಗಿತ್ತು? (ಬಿ) ಇದು ನಮಗೆ ಹೇಗೆ ಗೊತ್ತು? (ಲೇಖನದ ಆರಂಭದ ಚಿತ್ರ ನೋಡಿ.)

3 ನಿಷ್ಠೆಯುಳ್ಳ ಅಥವಾ ನಿಯತ್ತಿನ ವ್ಯಕ್ತಿಗಳನ್ನು ನಾವು ಸಾಮಾನ್ಯವಾಗಿ ಮೆಚ್ಚುತ್ತೇವೆ. ಆದರೆ ನಾವು ಯೋನಾತಾನನನ್ನು ಮೆಚ್ಚುವುದು ಅವನು ದಾವೀದನಿಗೆ ನಿಷ್ಠನಾಗಿದ್ದನೆಂಬ ಒಂದೇ ಕಾರಣಕ್ಕಾ? ಅಲ್ಲ. ದೇವರಿಗೆ ನಿಷ್ಠೆ ತೋರಿಸಲು ಅವನು ಮೊದಲ ಸ್ಥಾನ ಕೊಟ್ಟ. ಇದೇ ಅವನ ಜೀವನದಲ್ಲಿ ಮುಖ್ಯವಾಗಿತ್ತು. ದಾವೀದ ರಾಜನಾಗಲಿಕ್ಕಿದ್ದರೂ ಯೋನಾತಾನ ಹೊಟ್ಟೆಕಿಚ್ಚುಪಡದಿರಲು, ಅವನಿಗೆ ನಿಷ್ಠೆ ತೋರಿಸಲು ಇದೇ ಕಾರಣವಾಗಿತ್ತು. ಯೆಹೋವನ ಮೇಲೆ ಭರವಸೆಯಿಡಲು ದಾವೀದನಿಗೆ ಸಹಾಯವನ್ನೂ ಮಾಡಿದ. ದಾವೀದ ಯೋನಾತಾನ ಇಬ್ಬರೂ ಯೆಹೋವನಿಗೆ ನಿಷ್ಠರಾಗಿ ಉಳಿದರು. ಒಬ್ಬರಿಗೊಬ್ಬರೂ ನಿಷ್ಠರಾಗಿದ್ದರು. ‘ನನಗೂ ನಿನಗೂ ನನ್ನ ಸಂತಾನಕ್ಕೂ ನಿನ್ನ ಸಂತಾನಕ್ಕೂ ಯೆಹೋವನು ಸದಾ ಸಂಬಂಧಸಾಕ್ಷಿಯಾಗಿರಲಿ’ ಎಂದು ಅವರು ಪರಸ್ಪರ ಮಾತು ಕೊಟ್ಟಂತೆ ನಡೆದರು.—1 ಸಮು. 20:42.

4. (ಎ) ನಾವು ನಿಜ ಸಂತೋಷ, ತೃಪ್ತಿ ಹೇಗೆ ಪಡೆಯಬಲ್ಲೆವು? (ಬಿ) ಈ ಲೇಖನದಲ್ಲಿ ಏನು ನೋಡಲಿದ್ದೇವೆ?

4 ನಾವು ಸಹ ಅವರಂತೆ ನಿಷ್ಠೆ ತೋರಿಸಬೇಕು. ನಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ, ಸಹೋದರ ಸಹೋದರಿಯರಿಗೆ ನಿಷ್ಠೆ ತೋರಿಸಬೇಕು. (1 ಥೆಸ. 2:10, 11) ಆದರೆ ಎಲ್ಲಕ್ಕಿಂತ ಹೆಚ್ಚಾಗಿ ನಾವು ಯೆಹೋವನಿಗೆ ನಿಷ್ಠೆ ತೋರಿಸಬೇಕು. ನಮಗೆ ಜೀವಕೊಟ್ಟಾತನು ಆತನೇ ಅಲ್ಲವೇ? (ಪ್ರಕ. 4:11) ನಾವಾತನಿಗೆ ನಿಷ್ಠೆ ತೋರಿಸುವಾಗ ನಿಜ ಸಂತೋಷ, ತೃಪ್ತಿ ಪಡೆಯುತ್ತೇವೆ. ಆದರೆ ನೆನಪಿಡಬೇಕಾದ ವಿಷಯವೇನೆಂದರೆ ಕಷ್ಟದ ಸನ್ನಿವೇಶಗಳಲ್ಲೂ ನಾವು ದೇವರಿಗೆ ನಿಷ್ಠರಾಗಿ ಉಳಿಯಬೇಕು. ಈ ಮುಂದಿನ ನಾಲ್ಕು ಸನ್ನಿವೇಶಗಳಲ್ಲಿ ಯೆಹೋವನಿಗೆ ನಿಷ್ಠರಾಗಿರುವುದು ಹೇಗೆಂದು ಯೋನಾತಾನನ ಮಾದರಿಯಿಂದ ಕಲಿಯೋಣ: (1) ಅಧಿಕಾರದಲ್ಲಿರುವ ಒಬ್ಬರು ಗೌರವಕ್ಕೆ ಯೋಗ್ಯರಲ್ಲವೆಂದು ಅನಿಸುವಾಗ, (2) ಇಬ್ಬರಲ್ಲಿ ಒಬ್ಬರಿಗೆ ನಿಷ್ಠೆ ತೋರಿಸುವ ಆಯ್ಕೆ ನಮ್ಮ ಮುಂದಿರುವಾಗ, (3) ಮುಂದಾಳತ್ವ ವಹಿಸುತ್ತಿರುವ ಸಹೋದರನೊಬ್ಬ ನಮ್ಮನ್ನು ತಪ್ಪುತಿಳುಕೊಂಡಾಗ ಅಥವಾ ನೋವಾಗುವ ಹಾಗೆ ನಡಕೊಳ್ಳುವಾಗ, (4) ಕೊಟ್ಟ ಮಾತನ್ನು ಪಾಲಿಸಲು ಆಗುವುದಿಲ್ಲ ಎಂದು ನಮಗನಿಸುವಾಗ.

ಅಧಿಕಾರದಲ್ಲಿರುವ ಒಬ್ಬರು ಗೌರವಕ್ಕೆ ಯೋಗ್ಯರಲ್ಲವೆಂದು ಅನಿಸಿದಾಗ . . .

5. ಸೌಲನು ರಾಜನಾಗಿದ್ದಾಗ ದೇವರಿಗೆ ನಿಷ್ಠೆ ತೋರಿಸಲು ಜನರಿಗೆ ಏಕೆ ಕಷ್ಟವಾಯಿತು?

5 ಇಸ್ರಾಯೇಲಿನ ಜನರು ಮತ್ತು ಯೋನಾತಾನ ತುಂಬ ಕಷ್ಟದಲ್ಲಿದ್ದರು. ಅವನ ತಂದೆ ರಾಜ ಸೌಲ ಅವಿಧೇಯನಾದ ಕಾರಣ ಯೆಹೋವನು ಸೌಲನನ್ನು ತಿರಸ್ಕರಿಸಿದನು. (1 ಸಮು. 15:17-23) ಆದರೂ ಸೌಲನು ಅನೇಕ ವರ್ಷಗಳ ತನಕ ಆಳುವಂತೆ ದೇವರು ಬಿಟ್ಟನು. “ಯೆಹೋವನ ಸಿಂಹಾಸನದಲ್ಲಿ” ಕೂತು ಆಳುತ್ತಿದ್ದ ಅವನೇ ತುಂಬ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದ ಕಾರಣ ದೇವರಿಗೆ ನಿಷ್ಠರಾಗಿರಲು ಜನರಿಗೆ ಕಷ್ಟವಾಯಿತು.—1 ಪೂರ್ವ. 29:23.

6. ಯೋನಾತಾನನು ಯೆಹೋವನಿಗೆ ನಿಷ್ಠನಾಗಿ ಉಳಿದನೆಂದು ಹೇಗೆ ಗೊತ್ತಾಗುತ್ತದೆ?

6 ಸೌಲನು ದೇವರಿಗೆ ಅವಿಧೇಯನಾಗಲು ಆರಂಭಿಸಿದ ಮೇಲೂ ಯೋನಾತಾನನು ಯೆಹೋವನಿಗೆ ನಿಷ್ಠನಾಗಿ ಉಳಿದನು. (1 ಸಮು. 13:13, 14) ಉದಾಹರಣೆಗೆ, ಒಮ್ಮೆ ಫಿಲಿಷ್ಟಿಯರ ಒಂದು ದೊಡ್ಡ ಸೇನೆ ಇಸ್ರಾಯೇಲಿನ ಮೇಲೆ ಆಕ್ರಮಣ ಮಾಡಲು ಬಂತು. ಅವರ ಹತ್ತಿರ 30,000 ಯುದ್ಧರಥಗಳಿದ್ದವು. ಸೌಲನ ಜೊತೆ ಬರೀ 600 ಸೈನಿಕರಿದ್ದರು. ಸೌಲ ಮತ್ತು ಯೋನಾತಾನನನ್ನು ಬಿಟ್ಟರೆ ಬೇರೆ ಯಾರ ಹತ್ತಿರವೂ ಆಯುಧಗಳಿರಲಿಲ್ಲ. ಆದರೂ ಯೋನಾತಾನ ಸ್ವಲ್ಪವೂ ಹೆದರಲಿಲ್ಲ. ಪ್ರವಾದಿ ಸಮುವೇಲನ ಈ ಮಾತು ಅವನ ಮನಸ್ಸಿಗೆ ಬಂತು. “ಯೆಹೋವನು . . . ತನ್ನ ಮಹೋನ್ನತ ನಾಮದ ನಿಮಿತ್ತವಾಗಿ ನಿಮ್ಮನ್ನು ಕೈಬಿಡುವದೇ ಇಲ್ಲ.” (1 ಸಮು. 12:22) ಹಾಗಾಗಿ ಯೋನಾತಾನ ಇನ್ನೊಬ್ಬ ಸೈನಿಕನಿಗೆ, “ಬಹುಜನರಿಂದಾದರೂ ಸ್ವಲ್ಪ ಜನರಿಂದಾದರೂ ರಕ್ಷಿಸುವದು ಯೆಹೋವನಿಗೆ ಅಸಾಧ್ಯವಲ್ಲ” ಎಂದು ಧೈರ್ಯ ತುಂಬಿದನು. ಅವನು ಆ ಸೈನಿಕನ ಜೊತೆ ಸೇರಿ ಫಿಲಿಷ್ಟಿಯರ ಒಂದು ಗುಂಪಿನ ಮೇಲೆ ದಾಳಿ ಮಾಡಿ, ಅವರಲ್ಲಿ 20 ಮಂದಿಯನ್ನು ಕೊಂದು ಹಾಕಿದನು. ಯೋನಾತಾನ ಯೆಹೋವನ ಮೇಲೆ ನಂಬಿಕೆಯಿಟ್ಟು ಹಾಗೆ ಮಾಡಿದ್ದರಿಂದ ಯೆಹೋವನು ಅವನನ್ನು ಆಶೀರ್ವದಿಸಿದನು. ಒಂದು ಭೂಕಂಪ ಆಗುವಂತೆ ಮಾಡಿ ಫಿಲಿಷ್ಟಿಯರಲ್ಲಿ ಭಯಹುಟ್ಟಿಸಿದನು. ಆಗ ಅವರು ತಮ್ಮತಮ್ಮಲ್ಲೇ ಹೊಡೆದಾಡಿಕೊಂಡು ಒಬ್ಬರನ್ನೊಬ್ಬರು ಸಾಯಿಸಿದರು. ಹೀಗೆ ಇಸ್ರಾಯೇಲ್ಯರಿಗೆ ಜಯ ಸಿಕ್ಕಿತು.—1 ಸಮು. 13:5, 15, 22; 14:1, 2, 6, 14, 15, 20.

7. ಯೋನಾತಾನನು ತನ್ನ ತಂದೆ ಜೊತೆ ಹೇಗೆ ನಡಕೊಂಡನು?

7 ಸೌಲ ಯೆಹೋವನಿಗೆ ಅವಿಧೇಯನಾಗಿದ್ದರೂ ಯೋನಾತಾನನು ತನ್ನ ತಂದೆಯಾಗಿದ್ದ ಅವನಿಗೆ ಸಾಧ್ಯವಿರುವಾಗೆಲ್ಲ ವಿಧೇಯನಾದನು. ಉದಾಹರಣೆಗೆ, ಯೆಹೋವನ ಜನರನ್ನು ಸಂರಕ್ಷಿಸಲಿಕ್ಕಾಗಿ ತಂದೆ ಜೊತೆ ಸೇರಿ ಶತ್ರುಗಳ ವಿರುದ್ಧ ಹೋರಾಡಿದನು.—1 ಸಮು. 31:1, 2.

8, 9. ಅಧಿಕಾರವಿರುವವರಿಗೆ ನಾವು ಗೌರವ ತೋರಿಸುವಾಗ ದೇವರಿಗೆ ನಿಷ್ಠೆ ತೋರಿಸುತ್ತೇವೆ ಹೇಗೆ?

8 ಯೋನಾತಾನನಂತೆ ನಾವು ಯೆಹೋವನಿಗೆ ನಿಷ್ಠೆ ತೋರಿಸುವ ಒಂದು ವಿಧ ನಾವು ವಾಸಿಸುವ ದೇಶದ ಸರ್ಕಾರಕ್ಕೆ ಬೈಬಲಿಗನುಸಾರ ವಿಧೇಯರಾಗುವ ಮೂಲಕವೇ. ಈ ‘ಮೇಲಧಿಕಾರಿಗಳು’ ನಮ್ಮ ಮೇಲೆ ಅಧಿಕಾರ ಹೊಂದಿರುವಂತೆ ಯೆಹೋವನು ಅನುಮತಿಸಿದ್ದಾನೆ. ಅಲ್ಲದೆ, ನಾವು ಅವರಿಗೆ ಗೌರವ ತೋರಿಸಬೇಕೆಂದು ಅಪೇಕ್ಷಿಸುತ್ತಾನೆ. (ರೋಮನ್ನರಿಗೆ 13:1, 2 ಓದಿ.) ಆದ್ದರಿಂದ ಸರ್ಕಾರಿ ಅಧಿಕಾರಿಯೊಬ್ಬರು ಪ್ರಾಮಾಣಿಕರಲ್ಲದಿದ್ದರೂ, ಗೌರವಕ್ಕೆ ಯೋಗ್ಯರಲ್ಲ ಎಂದು ಅನಿಸುವಾಗಲೂ ನಾವು ಅವರಿಗೆ ಗೌರವ ತೋರಿಸಬೇಕು. ನಿಜವೇನೆಂದರೆ, ಯೆಹೋವನು ಯಾರಿಗೆಲ್ಲ ಅಧಿಕಾರ ಕೊಟ್ಟಿದ್ದಾನೊ ಅವರೆಲ್ಲರಿಗೆ, ಕುಟುಂಬ ಮತ್ತು ಸಭೆಯಲ್ಲಿ ಅಧಿಕಾರ ಕೊಟ್ಟಿರುವವರಿಗೂ ನಾವು ಗೌರವ ತೋರಿಸಬೇಕು.—1 ಕೊರಿಂ. 11:3; ಇಬ್ರಿ. 13:17.

9 ದಕ್ಷಿಣ ಅಮೆರಿಕದ ಓಲ್ಗಾ ಎಂಬ ಸಹೋದರಿ ಗಂಡನಿಗೆ ಗೌರವ ತೋರಿಸುವ ಮೂಲಕ ಯೆಹೋವನಿಗೆ ಹೇಗೆ ನಿಷ್ಠೆಯಿಂದ ಉಳಿದಳೆಂದು ಗಮನಿಸಿ. ಗಂಡ ಅವಳ ಜೊತೆ ತುಂಬ ಕೆಟ್ಟದ್ದಾಗಿ ನಡೆದುಕೊಳ್ಳುತ್ತಿದ್ದ. [1] ಒಮ್ಮೊಮ್ಮೆ ಮಾತೇ ಬಿಟ್ಟುಬಿಡುತ್ತಿದ್ದ. ಆಕೆ ಯೆಹೋವನ ಸಾಕ್ಷಿಯಾಗಿದ್ದಾಳೆಂಬ ಕಾರಣಕ್ಕೆ ಕೆಟ್ಟಕೆಟ್ಟದ್ದಾಗಿ ಬೈಯುತ್ತಿದ್ದ. ‘ನಿನ್ನನ್ನು ಬಿಟ್ಟು ಹೋಗ್ತೇನೆ, ಮಕ್ಕಳನ್ನು ನಿನ್ನ ಹತ್ರ ಬಿಡಲ್ಲ’ ಎಂದು ಸಹ ಬೆದರಿಸಿದ. ಇಷ್ಟೆಲ್ಲಾ ಆದರೂ ಓಲ್ಗಾ ‘ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಲಿಲ್ಲ.’ ಒಳ್ಳೇ ಪತ್ನಿಯಾಗಿ ತನ್ನೆಲ್ಲ ಕರ್ತವ್ಯಗಳನ್ನು ಮಾಡಿದಳು. ಅಡುಗೆ ಮಾಡಿಡುತ್ತಿದ್ದಳು, ಬಟ್ಟೆ ಒಗೆಯುತ್ತಿದ್ದಳು, ಗಂಡನ ಕುಟುಂಬದವರನ್ನೆಲ್ಲ ಚೆನ್ನಾಗಿ ಉಪಚರಿಸುತ್ತಿದ್ದಳು. (ರೋಮ. 12:17) ತನ್ನಿಂದ ಆದಾಗಲೆಲ್ಲ ಗಂಡನ ಜೊತೆಯಲ್ಲಿ ಅವನ ಬಂಧುಮಿತ್ರರ ಮನೆಗೆ ಹೋಗುತ್ತಿದ್ದಳು. ಉದಾಹರಣೆಗೆ, ಅವನ ತಂದೆ ತೀರಿಹೋದಾಗ ಅಂತ್ಯಕ್ರಿಯೆಗೆ ಅವರು ಬೇರೊಂದು ನಗರಕ್ಕೆ ಹೋಗಬೇಕಾಯಿತು. ಆಗ ಪ್ರಯಾಣಕ್ಕೆ ಬೇಕಾದ ಎಲ್ಲ ತಯಾರಿಯನ್ನು ಓಲ್ಗಾ ಮಾಡಿದಳು. ಚರ್ಚಿನಲ್ಲಿ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಗಂಡನಿಗಾಗಿ ಹೊರಗೆ ಕಾದುನಿಂತಳು. ಹಲವಾರು ವರ್ಷಗಳ ನಂತರ ಅವನು ಅವಳ ಜೊತೆ ಚೆನ್ನಾಗಿ ನಡಕೊಳ್ಳಲು ಆರಂಭಿಸಿದ. ಕಾರಣ? ಅವಳು ತೋರಿಸಿದ ತಾಳ್ಮೆ ಮತ್ತು ಗೌರವವೇ. ಈಗ ಅವನೇ ಅವಳಿಗೆ ಕೂಟಗಳಿಗೆ ಹೋಗಲು ಪ್ರೋತ್ಸಾಹಿಸುತ್ತಾನೆ, ಹೋಗಿ ಬಿಟ್ಟುಬರುತ್ತಾನೆ ಕೂಡ. ಒಮ್ಮೊಮ್ಮೆ ಅವಳ ಜೊತೆ ಕೂಟಕ್ಕೂ ಹಾಜರಾಗುತ್ತಾನೆ.—1 ಪೇತ್ರ 3:1.

ಇಬ್ಬರಲ್ಲಿ ಒಬ್ಬರಿಗೆ ನಿಷ್ಠೆ ತೋರಿಸಬೇಕಾಗಿ ಬಂದಾಗ . . .

10. ಇಬ್ಬರಲ್ಲಿ ಯಾರಿಗೆ ನಿಷ್ಠೆತೋರಿಸಬೇಕೆಂದು ಯೋನಾತಾನನಿಗೆ ಹೇಗೆ ಗೊತ್ತಾಯಿತು?

10 ದಾವೀದನನ್ನು ಕೊಲ್ಲಬೇಕೆಂದು ಸೌಲ ಆಜ್ಞಾಪಿಸಿದಾಗ ಯೋನಾತಾನನು ತುಂಬ ಕಷ್ಟದ ನಿರ್ಣಯವನ್ನು ಮಾಡಬೇಕಾಗಿ ಬಂತು. ತಂದೆಗೆ ನಿಷ್ಠೆ ತೋರಿಸಬೇಕಾ? ದಾವೀದನಿಗೆ ನಿಷ್ಠೆ ತೋರಿಸಬೇಕಾ? ಇಬ್ಬರಿಗೂ ನಿಷ್ಠೆ ತೋರಿಸಲು ಅವನಿಗೆ ಮನಸ್ಸಿತ್ತು. ಆದರೆ ದೇವರು ದಾವೀದನೊಂದಿಗೆ ಇದ್ದಾನೆ, ತನ್ನ ತಂದೆಯೊಂದಿಗೆ ಇಲ್ಲ ಎಂದು ಯೋನಾತಾನನಿಗೆ ಗೊತ್ತಿತ್ತು. ಹಾಗಾಗಿ ಅವನು ದಾವೀದನಿಗೆ ನಿಷ್ಠೆ ತೋರಿಸಲು ಆಯ್ಕೆಮಾಡಿದನು. ದಾವೀದ ತನ್ನ ಜೀವ ಉಳಿಸಿಕೊಳ್ಳಲು ಅಡಗಿಕೊಳ್ಳುವಂತೆ ಎಚ್ಚರಿಸಿದನು. ಮಾತ್ರವಲ್ಲ ತಂದೆ ಬಳಿ ಮಾತಾಡಿ, ದಾವೀದನನ್ನು ಕೊಲ್ಲುವುದು ಯಾಕೆ ಸರಿಯಲ್ಲವೆಂದು ಧೈರ್ಯದಿಂದ ಹೇಳಿದನು.—1 ಸಮುವೇಲ 19:1-6 ಓದಿ.

11, 12. ದೇವರ ಮೇಲೆ ನಮಗಿರುವ ಪ್ರೀತಿ ನಾವಾತನಿಗೆ ನಿಷ್ಠೆ ತೋರಿಸಲು ಹೇಗೆ ಸಹಾಯಮಾಡುತ್ತದೆ?

11 ಆಸ್ಟ್ರೇಲಿಯದ ಸಹೋದರಿ ಆ್ಯಲಿಸ್‌ ಸಹ ಯಾರಿಗೆ ನಿಷ್ಠೆ ತೋರಿಸಬೇಕೆಂದು ನಿರ್ಣಯಿಸಬೇಕಾಗಿ ಬಂತು. ಅವಳು ಬೈಬಲ್‌ ಅಧ್ಯಯನದಲ್ಲಿ ಕಲಿತ ವಿಷಯಗಳನ್ನು ಕುಟುಂಬದವರಿಗೆಲ್ಲ ಹೇಳುತ್ತಿದ್ದಳು. ಇನ್ನು ಮುಂದೆ ಅವರ ಜೊತೆ ಕ್ರಿಸ್‌ಮಸ್‌ ಆಚರಿಸುವುದಿಲ್ಲ, ಕಾರಣ ಏನೆಂದೂ ಹೇಳಿದಳು. ಮೊದಮೊದಲು ಎಲ್ಲರಿಗೆ ಬೇಸರವಾಯಿತು. ನಂತರ ಅವಳ ಮೇಲೆ ತುಂಬ ಸಿಟ್ಟು ಮಾಡಿಕೊಂಡರು. ಕುಟುಂಬದ ಮೇಲೆ ಎಳ್ಳಷ್ಟೂ ಚಿಂತೆ ಇಲ್ಲವೆಂದು ತಪ್ಪುತಿಳುಕೊಂಡರು. ತಾಯಿ ಕೂಡ ‘ಇನ್ನು ಯಾವತ್ತೂ ನನ್ನ ಕಣ್ಮುಂದೆ ಬರಬೇಡ’ ಎಂದರು. “ಆಗ ನನಗೆ ದಿಕ್ಕೇ ತೋಚಲಿಲ್ಲ. ಮನಸ್ಸಿಗೆ ತುಂಬ ನೋವಾಯಿತು. ಏಕೆಂದರೆ ನನಗೆ ಕುಟುಂಬದವರೆಂದರೆ ಪ್ರಾಣ. ಹಾಗಿದ್ದರೂ ಎಲ್ಲರಿಗಿಂತ ಯೆಹೋವ ಮತ್ತು ಯೇಸುವೇ ನನಗೆ ಮುಖ್ಯವೆಂದು ನಿರ್ಣಯಿಸಿದೆ. ಮುಂದಿನ ಸಮ್ಮೇಳನದಲ್ಲಿ ದೀಕ್ಷಾಸ್ನಾನ ಪಡೆದೆ” ಎಂದಳು ಆ್ಯಲಿಸ್‌.—ಮತ್ತಾ. 10:37.

12 ಯೆಹೋವನಿಗೆ ನಿಷ್ಠೆ ತೋರಿಸುವುದಕ್ಕಿಂತ ದೇಶ, ಶಾಲೆ, ಕ್ರೀಡಾ ತಂಡಕ್ಕೆ ಅಥವಾ ಬೇರಾವುದಕ್ಕೂ ನಿಷ್ಠೆ ತೋರಿಸುವುದು ನಮಗೆ ಮುಖ್ಯವಾಗಬಾರದು. ಉದಾಹರಣೆಗೆ, ಹೆನ್ರಿ ಎಂಬ ಸಹೋದರನಿಗೆ ತನ್ನ ಶಾಲಾ ತಂಡದಲ್ಲಿ ಚೆಸ್‌ ಆಟ ಆಡಿ ಶಾಲೆಗಾಗಿ ಒಂದು ಪದಕ ಗಳಿಸಲು ಇಷ್ಟವಿತ್ತು. ಇದಕ್ಕಾಗಿ ಅವನು ಪ್ರತಿ ವಾರದ ಕೊನೆಯಲ್ಲಿ ಚೆಸ್‌ ಪ್ರ್ಯಾಕ್ಟಿಸ್‌ ಮಾಡುತ್ತಿದ್ದ. “ಸೇವೆಗಾಗಲಿ ಕೂಟಕ್ಕಾಗಲಿ ನನಗೆ ಸಮಯವೇ ಸಿಗುತ್ತಿರಲಿಲ್ಲ. ದೇವರಿಗಿಂತ ಶಾಲೆಗೆ ನಿಷ್ಠೆ ತೋರಿಸುವುದು ಹೆಚ್ಚು ಮುಖ್ಯವಾಗುತ್ತಾ ಹೋಯಿತು. ಆದ್ದರಿಂದ ನನ್ನ ಶಾಲೆಗಾಗಿ ಚೆಸ್‌ ಆಡುವುದನ್ನು ಬಿಟ್ಟುಬಿಟ್ಟೆ” ಎನ್ನುತ್ತಾನೆ ಹೆನ್ರಿ.—ಮತ್ತಾ. 6:33.

13. ನಾವು ದೇವರಿಗೆ ತೋರಿಸುವ ನಿಷ್ಠೆ ಕುಟುಂಬದ ಸಮಸ್ಯೆಗಳನ್ನು ನಿಭಾಯಿಸಲು ಹೇಗೆ ನೆರವಾಗುತ್ತದೆ?

13 ಕೆಲವೊಮ್ಮೆ ಒಂದೇ ಸಮಯದಲ್ಲಿ ಕುಟುಂಬದ ಎಲ್ಲರಿಗೆ ನಿಷ್ಠೆ ತೋರಿಸುವುದು ನಮಗೆ ಕಷ್ಟವಾಗಬಹುದು. ಉದಾಹರಣೆಗೆ ಕೆನ್‌ ಹೇಳುವುದು: “ನನ್ನ ವಯಸ್ಸಾದ ಅಮ್ಮನನ್ನು ಆಗಾಗ ಹೋಗಿ ನೋಡಬೇಕು, ಕೆಲವೊಮ್ಮೆ ಅವರೂ ನಮ್ಮ ಮನೆಗೆ ಬಂದು ಉಳುಕೊಳ್ಳಬೇಕು ಎಂಬ ಆಸೆ ನನಗಿತ್ತು. ಆದರೆ ನನ್ನ ಅಮ್ಮನಿಗೂ ಹೆಂಡತಿಗೂ ಸರಿಬೀಳುತ್ತಿರಲಿಲ್ಲ. ಒಬ್ಬರನ್ನು ಮೆಚ್ಚಿಸಲಿಕ್ಕೆ ಹೋದರೆ ಇನ್ನೊಬ್ಬರಿಗೆ ಕೋಪ ಬರುತ್ತಿತ್ತು. ಒಂದು ರೀತಿ ಸಂಕಟದಲ್ಲಿ ಸಿಲುಕಿದ್ದೆ.” ಬೈಬಲ್‌ ಈ ಬಗ್ಗೆ ಏನು ಹೇಳುತ್ತದೆಂದು ಕೆನ್‌ ಯೋಚಿಸಿದ. ಈ ಸನ್ನಿವೇಶದಲ್ಲಿ ಹೆಂಡತಿಯನ್ನು ಮೆಚ್ಚಿಸಬೇಕು, ಆಕೆಗೆ ನಿಷ್ಠೆ ತೋರಿಸಬೇಕೆಂದು ತಿಳಿದುಕೊಂಡ. ಆದ್ದರಿಂದ ತನ್ನ ಹೆಂಡತಿಗೆ ಸಂತೋಷವಾಗುವ ಪರಿಹಾರವನ್ನು ಕಂಡುಹಿಡಿದ. ಆಮೇಲೆ ತನ್ನ ಹೆಂಡತಿಗೆ ಅಮ್ಮನ ಜೊತೆ ಏಕೆ ದಯೆಯಿಂದ ವರ್ತಿಸಬೇಕೆಂದು ವಿವರಿಸಿದ. ಅಲ್ಲದೆ, ತನ್ನ ಹೆಂಡತಿಗೆ ಏಕೆ ಗೌರವ ಕೊಡಬೇಕೆಂದು ಅಮ್ಮನಿಗೂ ವಿವರಿಸಿದ.ಆದಿಕಾಂಡ 2:24; 1 ಕೊರಿಂಥ 13:4, 5 ಓದಿ.

ಸಹೋದರನೊಬ್ಬನು ನೋವಾಗುವಂತೆ ನಡಕೊಂಡರೆ, ತಪ್ಪುತಿಳುಕೊಂಡರೆ . . .

14. ಸೌಲನು ಯೋನಾತಾನನ ಜೊತೆ ಹೇಗೆ ನಿರ್ದಯವಾಗಿ ನಡಕೊಂಡನು?

14 ಮುಂದಾಳತ್ವ ವಹಿಸುತ್ತಿರುವ ಸಹೋದರನೊಬ್ಬನು ನಮಗೆ ನೋವಾಗುವಂತೆ ನಡಕೊಂಡರೂ ನಾವು ಯೆಹೋವನಿಗೆ ನಿಷ್ಠರಾಗಿರಲು ಸಾಧ್ಯ. ಸೌಲನು ದೇವರಿಂದ ನೇಮಿತನಾದ ರಾಜನಾಗಿದ್ದರೂ ತನ್ನ ಸ್ವಂತ ಮಗನೊಂದಿಗೆ ನಿರ್ದಯವಾಗಿ ವರ್ತಿಸಿದ. ಯೋನಾತಾನನಿಗೆ ದಾವೀದನ ಮೇಲೆ ಯಾಕೆ ಅಷ್ಟೊಂದು ಪ್ರೀತಿ ಎಂದು ಅವನಿಗೆ ಅರ್ಥವಾಗಲಿಲ್ಲ. ದಾವೀದನಿಗೆ ಸಹಾಯಮಾಡಲು ಯೋನಾತಾನ ಪ್ರಯತ್ನಿಸಿದಾಗ ಸೌಲನಿಗೆ ತುಂಬ ಸಿಟ್ಟು ಬಂತು. ಅನೇಕ ಜನರ ಮುಂದೆ ಅವನನ್ನು ಅವಮಾನಿಸಿದ. ಆದರೂ ಯೋನಾತಾನ ತಂದೆಗೆ ಗೌರವ ತೋರಿಸಿದ. ಅದೇ ಸಮಯದಲ್ಲಿ ಯೆಹೋವನಿಗೆ ಮತ್ತು ಇಸ್ರಾಯೇಲಿನ ರಾಜನಾಗಲು ಆತನು ಆರಿಸಿಕೊಂಡ ದಾವೀದನಿಗೆ ನಿಷ್ಠನಾಗಿ ಉಳಿದ.—1 ಸಮು. 20:30-41.

15. ಸಹೋದರನೊಬ್ಬನು ನಮ್ಮನ್ನು ತಪ್ಪುತಿಳುಕೊಂಡರೆ, ಮನನೋಯಿಸಿದರೆ ನಾವು ಹೇಗೆ ಪ್ರತಿಕ್ರಿಯಿಸಬೇಕು?

15 ಇಂದು ನಮ್ಮ ಸಭೆಗಳಲ್ಲಿ ಮುಂದಾಳತ್ವ ವಹಿಸುವ ಸಹೋದರರು ಎಲ್ಲರ ಜೊತೆ ನ್ಯಾಯವಾಗಿ ನಡಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಈ ಸಹೋದರರು ಅಪರಿಪೂರ್ಣರು. ಆದಕಾರಣ ನಾವು ಮಾಡಿರುವ ಒಂದು ವಿಷಯದ ಬಗ್ಗೆ ಅವರು ತಪ್ಪುತಿಳುಕೊಳ್ಳುವ ಸಾಧ್ಯತೆ ಇದೆ. (1 ಸಮು. 1:13-17) ಹಾಗಾಗಿ ಅವರು ನಮ್ಮನ್ನು ತಪ್ಪುತಿಳುಕೊಂಡರೂ ಅಥವಾ ನಮ್ಮ ಮನನೋಯಿಸಿದರೂ ಅವರಿಗೆ ಗೌರವ ತೋರಿಸುವ ಮೂಲಕ ಯೆಹೋವನಿಗೆ ನಿಷ್ಠರಾಗಿ ಉಳಿಯೋಣ.

ಕೊಟ್ಟ ಮಾತನ್ನು ಪಾಲಿಸಲು ತುಂಬ ಕಷ್ಟವಾಗುವಾಗ . . .

16. ಯಾವೆಲ್ಲ ಸನ್ನಿವೇಶಗಳಲ್ಲಿ ನಾವು ಸ್ವಾರ್ಥ ನೋಡದೆ ದೇವರಿಗೆ ನಿಷ್ಠೆ ತೋರಿಸಬೇಕು?

16 ದಾವೀದನ ಬದಲಿಗೆ ಯೋನಾತಾನನೇ ತನ್ನ ನಂತರ ರಾಜನಾಗಬೇಕೆಂಬ ಆಸೆ ಸೌಲನಿಗಿತ್ತು. (1 ಸಮು. 20:31) ಆದರೆ ಯೋನಾತಾನ ತನ್ನ ಸ್ವಾರ್ಥವನ್ನು ನೋಡಲಿಲ್ಲ. ಅವನು ಯೆಹೋವನನ್ನು ಪ್ರೀತಿಸಿದನು, ಆತನಿಗೆ ನಿಷ್ಠನಾಗಿದ್ದನು. ಹಾಗಾಗಿ ದಾವೀದನ ಮಿತ್ರನಾದನು ಮತ್ತು ಅವನಿಗೆ ಕೊಟ್ಟ ಮಾತನ್ನು ಪಾಲಿಸಿದನು. ಯೆಹೋವನನ್ನು ಪ್ರೀತಿಸುವ ಮತ್ತು ಆತನಿಗೆ ನಿಷ್ಠೆಯಿಂದಿರುವ ವ್ಯಕ್ತಿ ‘ನಷ್ಟವಾದರೂ ಪ್ರಮಾಣತಪ್ಪುವುದಿಲ್ಲ’ ಅಂದರೆ ಕಷ್ಟವಾದರೂ ಕೊಟ್ಟ ಮಾತಿಗೆ ತಪ್ಪುವುದಿಲ್ಲ. (ಕೀರ್ತ. 15:4) ನಾವು ಯೆಹೋವನಿಗೆ ನಿಷ್ಠೆಯಿಂದಿರುವ ಕಾರಣ ಕೊಟ್ಟ ಮಾತನ್ನು ಪಾಲಿಸಬೇಕು. ಉದಾಹರಣೆಗೆ, ವ್ಯಾಪಾರ-ವಹಿವಾಟುಗಳಲ್ಲಿ ಮಾಡಿರುವ ಒಪ್ಪಂದಕ್ಕೆ ತಪ್ಪಬಾರದು. ಕಷ್ಟವಾದರೂ ಸರಿ, ಆ ಮಾತನ್ನು ಉಳಿಸಿಕೊಳ್ಳಬೇಕು. ಒಂದುವೇಳೆ ವಿವಾಹ ಜೀವನದಲ್ಲಿ ಸಮಸ್ಯೆಗಳು ಎದ್ದರೆ ಗಂಡಹೆಂಡತಿ ಒಬ್ಬರಿಗೊಬ್ಬರು ನಿಷ್ಠರಾಗಿ ಉಳಿಯಬೇಕು. ಹೀಗೆ ಯೆಹೋವನ ಮೇಲೆ ಎಷ್ಟು ಪ್ರೀತಿಯಿದೆ ಎಂದು ತೋರಿಸಬೇಕು.ಮಲಾಕಿಯ 2:13-16 ಓದಿ.

17. ಈ ಅಧ್ಯಯನ ನಿಮಗೆ ಹೇಗೆ ಸಹಾಯಮಾಡಿದೆ?

17 ನಾವು ಯೋನಾತಾನನಂತೆ ಕಷ್ಟದ ಸನ್ನಿವೇಶಗಳಲ್ಲೂ ದೇವರಿಗೆ ನಿಷ್ಠೆ ತೋರಿಸೋಣ. ನಮ್ಮ ಸಹೋದರ ಸಹೋದರಿಯರು ನಮ್ಮ ಮನನೋಯಿಸಿದರೂ ಅವರಿಗೆ ನಿಷ್ಠರಾಗಿ ಉಳಿಯೋಣ. ಆಗ ಯೆಹೋವನ ಮನಸ್ಸನ್ನು ಸಂತೋಷಪಡಿಸುತ್ತೇವೆ. ಇದು ನಮಗೆ ಎಲ್ಲಕ್ಕಿಂತ ಹೆಚ್ಚಿನ ಸಂತೋಷ ತರುತ್ತದೆ. (ಜ್ಞಾನೋ. 27:11) ನಾವು ಯೆಹೋವನಿಗೆ ನಿಷ್ಠೆ ತೋರಿಸಿದರೆ ಆತನು ಯಾವಾಗಲೂ ನಮಗೆ ಒಳ್ಳೆಯದನ್ನೇ ಮಾಡುತ್ತಾನೆ, ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ದಾವೀದನ ಸಮಯದಲ್ಲಿ ನಿಷ್ಠೆ ತೋರಿಸಿದ ಮತ್ತು ತೋರಿಸದಿದ್ದ ಕೆಲವು ವ್ಯಕ್ತಿಗಳಿದ್ದರು. ಅವರಿಂದ ನಾವೇನು ಕಲಿಯಬಹುದೆಂದು ಮುಂದಿನ ಲೇಖನದಲ್ಲಿ ನೋಡೋಣ.

^ [1] (ಪ್ಯಾರ 9) ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.