ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಆಪ್ತ ಸ್ನೇಹಿತರನ್ನು ಅನುಕರಿಸಿ

ಯೆಹೋವನ ಆಪ್ತ ಸ್ನೇಹಿತರನ್ನು ಅನುಕರಿಸಿ

“ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು.” —ಕೀರ್ತ. 25:14.

ಗೀತೆಗಳು: 106, 118

1-3. (ಎ) ದೇವರ ಸ್ನೇಹಿತರಾಗಲು ಸಾಧ್ಯ ಎಂಬ ಖಾತ್ರಿ ನಮಗಿರುವುದೇಕೆ? (ಬಿ) ಈ ಲೇಖನದಲ್ಲಿ ಯಾರ ಕುರಿತು ಚರ್ಚಿಸಲಿದ್ದೇವೆ?

ಬೈಬಲಿನಲ್ಲಿ ಅಬ್ರಹಾಮನನ್ನು ಮೂರು ಸಲ ದೇವರ ಸ್ನೇಹಿತ ಎಂದು ಕರೆಯಲಾಗಿದೆ. (2 ಪೂರ್ವ. 20:7; ಯೆಶಾ. 41:8; ಯಾಕೋ. 2:23) ಇಡೀ ಬೈಬಲಿನಲ್ಲಿ ನೇರವಾಗಿ ಅವನನ್ನು ಮಾತ್ರ ಹಾಗೆ ಕರೆಯಲಾಗಿದೆ. ಹಾಗಾದರೆ ಬೇರೆ ಯಾರೂ ದೇವರ ಸ್ನೇಹಿತರಾಗಿಲ್ಲ ಎಂದಿದರ ಅರ್ಥವಾ? ಇಲ್ಲ. ನಮಗೆಲ್ಲರಿಗೂ ಆ ಸುಯೋಗವಿದೆ ಎಂದು ಬೈಬಲ್‌ ತೋರಿಸುತ್ತದೆ.

2 ಅನೇಕ ನಂಬಿಗಸ್ತ ಸ್ತ್ರೀಪುರುಷರ ವೃತ್ತಾಂತಗಳು ಬೈಬಲಿನಲ್ಲಿವೆ. ಅವರು ಯೆಹೋವನಿಗೆ ಭಯಭಕ್ತಿ ತೋರಿಸಿದರು, ಆತನಲ್ಲಿ ನಂಬಿಕೆಯಿಟ್ಟರು. ಹಾಗಾಗಿ ಆತನ ಆಪ್ತ ಸ್ನೇಹಿತರಾದರು. (ಕೀರ್ತನೆ 25:14 ಓದಿ.) ಇವರೆಲ್ಲರೂ ಪೌಲನು ತಿಳಿಸಿದ ‘ಸಾಕ್ಷಿಗಳ ದೊಡ್ಡ ಮೇಘ’ ಆಗಿದ್ದಾರೆ. ಇವರು ವಿವಿಧ ರೀತಿಯ ಜನರಾಗಿದ್ದರು.—ಇಬ್ರಿ. 12:1.

3 ನಾವೀಗ ಯೆಹೋವನ ಸ್ನೇಹಿತರಲ್ಲಿ ಮೂವರನ್ನು ಸೂಕ್ಷ್ಮವಾಗಿ ತಿಳಿಯೋಣ. (1) ರೂತ್‌—ಮೋವಾಬ್‌ ದೇಶದ ನಿಷ್ಠಾವಂತ ಯುವ ವಿಧವೆ. (2) ಹಿಜ್ಕೀಯ—ಯೆಹೂದದ ನಂಬಿಗಸ್ತ ರಾಜ. (3) ಮರಿಯ—ಯೇಸುವಿನ ದೀನ ತಾಯಿ. ಇವರಲ್ಲಿ ಪ್ರತಿಯೊಬ್ಬರು ದೇವರ ಸ್ನೇಹಿತರಾದ ರೀತಿಯಿಂದ ನಾವೇನು ಕಲಿಯುತ್ತೇವೆ?

ನಿಷ್ಠಾವಂತ ಪ್ರೀತಿ ತೋರಿಸಿದಳು

4, 5. (ಎ) ರೂತಳಿಗೆ ಯಾವ ನಿರ್ಣಯ ಮಾಡಲಿಕ್ಕಿತ್ತು? (ಬಿ) ಆ ನಿರ್ಣಯ ಮಾಡುವುದು ತುಂಬ ಕಷ್ಟವಾಗಿತ್ತು ಏಕೆ? (ಲೇಖನದ ಆರಂಭದ ಚಿತ್ರ ನೋಡಿ.)

4 ನೊವೊಮಿಯು ತನ್ನ ಸೊಸೆಯರಾದ ರೂತ್‌ ಮತ್ತು ಒರ್ಫಳೊಂದಿಗೆ ಮೋವಾಬ್‌ ದೇಶದಿಂದ ದೂರದ ಇಸ್ರಾಯೇಲಿಗೆ ಕಾಲ್ನಡಿಗೆಯಾಗಿ ಹೊರಟಿದ್ದಳು. ಮಧ್ಯ ದಾರಿಯಲ್ಲಿ ಒರ್ಫಾ ತನ್ನ ದೇಶವಾದ ಮೋವಾಬಿಗೆ ಹಿಂದಿರುಗಿದಳು. ಆದರೆ ನೊವೊಮಿಯು ತನ್ನ ನಿರ್ಣಯದಂತೆ ಸ್ವದೇಶಕ್ಕೇ ಪ್ರಯಾಣ ಮುಂದುವರಿಸಬೇಕೆಂದಿದ್ದಳು. ಆಗ ರೂತಳಿಗೆ ಒಂದು ಕಷ್ಟದ ನಿರ್ಣಯ ಮಾಡಲಿಕ್ಕಿತ್ತು. ಅದೇನೆಂದರೆ ತನ್ನ ಕುಟುಂಬವಿದ್ದ ಮೋವಾಬಿಗೆ ಹಿಂದಿರುಗಬೇಕಾ? ಅಥವಾ ತನ್ನ ಅತ್ತೆಯಾದ ನೊವೊಮಿಯ ಜೊತೆಯಲ್ಲೇ ಇದ್ದು ಬೇತ್ಲೆಹೇಮಿಗೆ ಪ್ರಯಾಣಿಸಬೇಕಾ?—ರೂತ. 1:1-8, 14.

5 ರೂತಳ ಕುಟುಂಬ ಮೋವಾಬಿನಲ್ಲಿ ನೆಲೆಸಿತ್ತು. ಅವರ ಹತ್ತಿರ ಅವಳು ಹೋಗಬಹುದಿತ್ತು. ಬಹುಶಃ ಅವರು ಅವಳನ್ನು ನೋಡಿಕೊಳ್ಳುತ್ತಿದ್ದರು. ಮೋವಾಬಿನ ಜನರು, ಅಲ್ಲಿನ ಭಾಷೆ, ಸಂಸ್ಕೃತಿ ಎಲ್ಲ ಅವಳಿಗೆ ಚೆನ್ನಾಗಿ ತಿಳಿದಿತ್ತು. ಅಲ್ಲಿದ್ದಂತೆ ಬೇತ್ಲೆಹೇಮಿನಲ್ಲೂ ಇರುತ್ತದೆಂದು ನೊವೊಮಿ ಅವಳಿಗೆ ಧೈರ್ಯ ತುಂಬಿಸಲಿಕ್ಕೆ ಸಹ ಆಗಲಿಲ್ಲ. ರೂತಳಿಗೆ ಇನ್ನೊಂದು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಲು ತನ್ನಿಂದ ಆಗುವುದಿಲ್ಲವೇನೋ ಎಂದು ನೊವೊಮಿ ನೆನಸಿದಳು. ಹಾಗಾಗಿ ಮೋವಾಬ್‌ಗೆ ಹಿಂದಿರುಗುವಂತೆ ರೂತಳನ್ನು ಒತ್ತಾಯಿಸಿದಳು. ಒರ್ಫಳು “ತನ್ನ ಜನರ ಬಳಿಗೂ ದೇವತೆಗಳ ಬಳಿಗೂ” ಹೋಗಿ ಆಗಿತ್ತು. (ರೂತ. 1:9-15) ರೂತಳು ಸಹ ಅವಳ ಜನರ ಬಳಿಗೆ ಮತ್ತು ಸುಳ್ಳು ದೇವರುಗಳ ಆರಾಧನೆಗೆ ಹಿಂದಿರುಗಿದಳಾ? ಖಂಡಿತ ಇಲ್ಲ.

6. (ಎ) ರೂತಳು ವಿವೇಕದಿಂದ ಯಾವ ಆಯ್ಕೆಯನ್ನು ಮಾಡಿದಳು? (ಬಿ) ರೂತಳು ಯೆಹೋವನ ರೆಕ್ಕೆಗಳ ಮರೆಯನ್ನು ಆಶ್ರಯಿಸಿದವಳೆಂದು ಬೋವಜನು ಹೇಳಿದ್ದೇಕೆ?

6 ರೂತಳು ತನ್ನ ಗಂಡ ಅಥವಾ ಅತ್ತೆಯಿಂದ ಯೆಹೋವನ ಕುರಿತು ಕಲಿತಿರಬೇಕು. ಯೆಹೋವನು ಮೋವಾಬ್ಯರ ದೇವದೇವತೆಗಳಂತೆ ಇಲ್ಲವೆಂದು ಕಲಿತಿದ್ದಳು. ಅವಳು ಯೆಹೋವನನ್ನು ಪ್ರೀತಿಸಿದಳು. ತನ್ನ ಪ್ರೀತಿ ಮತ್ತು ಆರಾಧನೆಗೆ ಆತನು ಅರ್ಹನೆಂದು ತಿಳಿದಿದ್ದಳು. ಆದ್ದರಿಂದ ರೂತಳು ಒಂದು ವಿವೇಕದ ನಿರ್ಣಯ ಮಾಡಿದಳು. “ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು” ಎಂದು ನೊವೊಮಿಗೆ ಹೇಳಿದಳು. (ರೂತ. 1:16) ರೂತಳಿಗೆ ನೊವೊಮಿಯ ಮೇಲಿದ್ದ ಪ್ರೀತಿಯ ಕುರಿತು ಯೋಚಿಸುವಾಗ ನಮ್ಮ ಹೃದಯವು ತುಂಬಿಬರುತ್ತದೆ. ಇದಕ್ಕಿಂತಲೂ ಹೆಚ್ಚಾಗಿ ನಮ್ಮ ಮನಸ್ಸನ್ನು ಸ್ಪರ್ಶಿಸುವಂಥದ್ದು ಯೆಹೋವನ ಮೇಲೆ ರೂತಳಿಗಿದ್ದ ಪ್ರೀತಿಯೇ. ಮುಂದಕ್ಕೆ ಬೋವಜನು ಸಹ ಇದನ್ನೇ ಮೆಚ್ಚಿದನು. ‘ಯೆಹೋವನ ರೆಕ್ಕೆಗಳ ಮರೆಯನ್ನು ಆಶ್ರಯಿಸಿದ್ದಕ್ಕಾಗಿ’ ಆಕೆಯನ್ನು ಹೊಗಳಿದನು. (ರೂತಳು 2:12 ಓದಿ.) ಬೋವಜನ ಈ ಮಾತುಗಳು, ಒಂದು ಮರಿಹಕ್ಕಿಯು ತನ್ನ ತಾಯಿಯ ರೆಕ್ಕೆಗಳ ಮರೆಯಲ್ಲಿ ಆಶ್ರಯ ಪಡೆಯುವುದನ್ನು ನೆನಪಿಗೆ ತರುತ್ತದೆ. (ಕೀರ್ತ. 36:7; 91:1-4) ಅದೇ ರೀತಿ ಯೆಹೋವನು ರೂತಳಿಗೆ ಪ್ರೀತಿಯಿಂದ ಆಶ್ರಯ ಕೊಟ್ಟನು. ಅವಳ ನಂಬಿಕೆಗೆ ಪ್ರತಿಫಲ ಕೊಟ್ಟನು. ಯೆಹೋವನನ್ನು ಆರಾಧಿಸಲು ಮಾಡಿದ ನಿರ್ಣಯಕ್ಕಾಗಿ ರೂತಳು ಎಂದೂ ವಿಷಾದಿಸಲಿಲ್ಲ.

7. ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಲು ಹಿಂಜರಿಯುವವರಿಗೆ ಯಾವುದು ಸಹಾಯ ಮಾಡಬಲ್ಲದು?

7 ಅನೇಕ ಜನರು ಯೆಹೋವನ ಕುರಿತು ಕಲಿಯುತ್ತಾರೆ. ಆದರೆ ಆತನ ಮರೆಯಲ್ಲಿ ಆಶ್ರಯವನ್ನು ಪಡೆಯಲು ಬಯಸುವುದಿಲ್ಲ. ತಮ್ಮ ಜೀವನವನ್ನು ಆತನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯಲು ಹಿಂಜರಿಯುತ್ತಾರೆ. ನಿಮಗೂ ಹಾಗೆ ಅನಿಸುತ್ತದಾ? ಹಾಗಿದ್ದರೆ ಹಿಂಜರಿಯಲು ಕಾರಣ ಏನೆಂದು ಯೋಚಿಸಿ. ಪ್ರತಿಯೊಬ್ಬರು ಒಂದಲ್ಲ ಒಂದು ದೇವರನ್ನು ಆರಾಧಿಸುತ್ತಾರೆ ನಿಜ. (ಯೆಹೋ. 24:15) ಆದರೆ ವಿವೇಕದ ಮಾರ್ಗ ಯಾವುದೆಂದರೆ ಸತ್ಯ ದೇವರನ್ನು ಆರಾಧಿಸುವುದೇ. ನೀವು ಯೆಹೋವನಿಗೆ ನಿಮ್ಮನ್ನು ಸಮರ್ಪಿಸಿಕೊಂಡರೆ ಆತನೇ ನಿಮ್ಮ ಆಶ್ರಯ ಸ್ಥಾನ ಎಂಬ ನಂಬಿಕೆ ನಿಮಗಿದೆಯೆಂದು ತೋರಿಸುತ್ತೀರಿ. ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಆತನನ್ನು ಆರಾಧಿಸುತ್ತಾ ಇರುವಂತೆ ಬೇಕಾದ ಸಹಾಯವನ್ನು ಆತನು ಕೊಡುವನು. ರೂತಳಿಗೂ ಹಾಗೆ ಸಹಾಯ ಮಾಡಿದನು.

‘ಅವನು ಯೆಹೋವನನ್ನೇ ಹೊಂದಿಕೊಂಡನು’

8. ಹಿಜ್ಕೀಯನು ಯಾವ ಸನ್ನಿವೇಶದಲ್ಲಿ ಬೆಳೆದು ಬಂದನು?

8 ಹಿಜ್ಕೀಯನು ಬೆಳೆದು ಬಂದ ವಿಧ ರೂತಳಿಗಿಂತ ತುಂಬ ಭಿನ್ನವಾಗಿತ್ತು. ದೇವರಿಗೆ ಸಮರ್ಪಿತವಾದ ಇಸ್ರಾಯೇಲ್‌ ಜನಾಂಗಕ್ಕೆ ಅವನು ಸೇರಿದವನಾಗಿದ್ದನು. ಆದರೆ ಹೆಚ್ಚಿನ ಇಸ್ರಾಯೇಲ್ಯರು ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಹಿಜ್ಕೀಯನ ತಂದೆಯಾದ ರಾಜ ಆಹಾಜ ದುಷ್ಟನಾಗಿದ್ದನು. ದೇವರ ಆಲಯವನ್ನು ಅಪವಿತ್ರ ಮಾಡಿದನು. ಮಾತ್ರವಲ್ಲ ಬೇರೆ ದೇವರುಗಳನ್ನು ಆರಾಧಿಸುವಂತೆ ಜನರ ಮನಸ್ಸನ್ನು ತಿರುಗಿಸಿದನು. ಆಹಾಜನು ತನ್ನ ಗಂಡುಮಕ್ಕಳನ್ನು ಅಂದರೆ ಹಿಜ್ಕೀಯನ ಕೆಲವು ಸಹೋದರರನ್ನು ಸುಳ್ಳು ದೇವರುಗಳಿಗೆ ಜೀವಂತವಾಗಿ ಆಹುತಿ ಕೊಟ್ಟನು. ಹಿಜ್ಕೀಯನ ಬಾಲ್ಯದ ದಿನಗಳು ತೀರಾ ಕೆಟ್ಟದ್ದಾಗಿದ್ದವು.—2 ಅರ. 16:2-4, 10-17; 2 ಪೂರ್ವ. 28:1-3.

9, 10. (ಎ) ಹಿಜ್ಕೀಯನು ಯೆಹೋವನಿಗೆ ತಿರುಗಿಬೀಳಬಹುದಿತ್ತು ಏಕೆ? (ಬಿ) ಯೆಹೋವನ ಮೇಲೆ ನಾವೇಕೆ ಕೋಪಿಸಿಕೊಳ್ಳಬಾರದು? (ಸಿ) ನಾವು ಯಾವ ರೀತಿಯ ವ್ಯಕ್ತಿಯಾಗುತ್ತೇವೆ ಎನ್ನುವುದಕ್ಕೆ ಕುಟುಂಬದ ಹಿನ್ನೆಲೆಯೇ ಕಾರಣವೆಂದು ಏಕೆ ನೆನಸಬಾರದು?

9 ತಂದೆಯ ಕೆಟ್ಟ ಮಾದರಿಯಿಂದ ಮಗ ಹಿಜ್ಕೀಯನು ಯೆಹೋವನ ಮೇಲೆ ಸಿಟ್ಟು ಮಾಡಿಕೊಂಡು ತನ್ನ ತಂದೆಯಂತೆಯೇ ದುಷ್ಟನಾಗಬಹುದಿತ್ತು. ಇಂದು ಕೆಲವರು ಹಿಜ್ಕೀಯನಷ್ಟು ಕಷ್ಟವನ್ನು ಅನುಭವಿಸಿಲ್ಲ. ಆದರೂ ‘ಯೆಹೋವನ ಮೇಲೆ ಕುದಿಯಲು’ ಅಥವಾ ಆತನ ಸಂಘಟನೆಯ ವಿರುದ್ಧ ಮಾತಾಡಲು ತಮಗೆ ಕಾರಣವಿದೆ ಎಂದು ನೆನಸುತ್ತಾರೆ. (ಜ್ಞಾನೋ. 19:3) ಇನ್ನೂ ಕೆಲವರು ತಮ್ಮ ಕುಟುಂಬ ಕೆಟ್ಟದ್ದು ಹಾಗಾಗಿ ತಾವು ಕೂಡ ಕೆಟ್ಟವರಾಗಿದ್ದೇವೆ ಅಥವಾ ತಮ್ಮ ಅಪ್ಪಅಮ್ಮ ತಪ್ಪು ಮಾಡಿದ್ದರಿಂದಲೇ ತಾವೂ ತಪ್ಪು ಮಾಡುತ್ತಿದ್ದೇವೆ ಎಂದು ಭಾವಿಸುತ್ತಾರೆ. (ಯೆಹೆ. 18:2, 3) ಆದರೆ ಈ ರೀತಿ ಯೋಚಿಸುವುದು ಸರಿಯಾ?

10 ‘ಸರಿಯಲ್ಲ’ ಎಂದು ಹಿಜ್ಕೀಯನ ಜೀವನವು ತೋರಿಸುತ್ತದೆ. ಯೆಹೋವನ ಮೇಲೆ ಕೋಪಗೊಳ್ಳಲು ಅಥವಾ ಕುದಿಯಲು ಯಾರಿಗೂ ಕಾರಣವೇ ಇಲ್ಲ. ಏಕೆಂದರೆ ಆತನು ಎಂದಿಗೂ ಜನರಿಗೆ ಕೆಟ್ಟದ್ದನ್ನು ಮಾಡುವುದೇ ಇಲ್ಲ. (ಯೋಬ 34:10) ಒಳ್ಳೇದನ್ನು ಅಥವಾ ಕೆಟ್ಟದ್ದನ್ನು ಮಾಡಲು ಹೆತ್ತವರು ತಮ್ಮ ಮಕ್ಕಳಿಗೆ ಕಲಿಸಬಹುದು ನಿಜ. (ಜ್ಞಾನೋ. 22:6; ಕೊಲೊ. 3:21) ಆದರೆ ನಾವು ಯಾವ ರೀತಿಯ ವ್ಯಕ್ತಿಯಾಗುತ್ತೇವೆ ಎನ್ನುವುದಕ್ಕೆ ಕುಟುಂಬದ ಹಿನ್ನೆಲೆಯೇ ಕಾರಣವೆಂದು ಇದರ ಅರ್ಥವಲ್ಲ. ಏಕೆ? ಏಕೆಂದರೆ ಯೆಹೋವನು ನಮಗೆ ಇಚ್ಛಾಸ್ವಾತಂತ್ರ್ಯ ಎಂಬ ವರವನ್ನು ಕೊಟ್ಟಿದ್ದಾನೆ ಅಂದರೆ ಒಳ್ಳೇದನ್ನು ಅಥವಾ ಕೆಟ್ಟದನ್ನು ಮಾಡಲು ನಾವು ಆರಿಸಿಕೊಳ್ಳಬಹುದು. (ಧರ್ಮೋ. 30:19) ಹಿಜ್ಕೀಯನು ಆ ಅಮೂಲ್ಯ ಸಾಮರ್ಥ್ಯವನ್ನು ಹೇಗೆ ಬಳಸಿದನು?

11. ಹಿಜ್ಕೀಯನು ಯೆಹೂದದ ಒಬ್ಬ ಒಳ್ಳೇ ರಾಜನಾದದ್ದು ಹೇಗೆ?

11 ಆಹಾಜ ಯೆಹೂದದ ಅತಿ ಕೆಟ್ಟ ರಾಜನಾಗಿದ್ದರೂ ಅವನ ಮಗ ಹಿಜ್ಕೀಯನು ತುಂಬ ಒಳ್ಳೆಯ ರಾಜನಾದನು. (2 ಅರಸುಗಳು 18:5, 6 ಓದಿ.) ತನ್ನ ತಂದೆಯ ಕೆಟ್ಟ ಮಾದರಿಯನ್ನು ಅವನು ಅನುಸರಿಸಲಿಲ್ಲ. ಬದಲಾಗಿ ಯೆಹೋವನ ಪ್ರವಾದಿಗಳಾದ ಯೆಶಾಯ, ಮೀಕ, ಹೋಶೇಯರ ಮಾತನ್ನು ಕೇಳಿದನು. ಅವರ ಸೂಚನೆ ಮತ್ತು ಬುದ್ಧಿವಾದಕ್ಕೆ ಗಮನಕೊಟ್ಟನು. ಇದು ಅವನ ತಂದೆ ಮಾಡಿದ ಅನೇಕ ಕೆಟ್ಟ ಕೃತ್ಯಗಳನ್ನು ಸರಿಪಡಿಸಲು ಅವನನ್ನು ಪ್ರಚೋದಿಸಿತು. ಉದಾಹರಣೆಗೆ, ತಂದೆ ಅಪವಿತ್ರ ಮಾಡಿದ ಆಲಯವನ್ನು ಹಿಜ್ಕೀಯ ಶುದ್ಧೀಕರಿಸಿದನು. ಜನರು ಮಾಡಿದ ಪಾಪಗಳನ್ನು ಕ್ಷಮಿಸುವಂತೆ ದೇವರಲ್ಲಿ ಬೇಡಿಕೊಂಡನು. ದೇಶದಲ್ಲೆಲ್ಲಾ ಇದ್ದ ಸುಳ್ಳು ದೇವರ ವಿಗ್ರಹಗಳನ್ನು ನಾಶಮಾಡಿದನು. (2 ಪೂರ್ವ. 29:1-11, 18-24; 31:1) ಅಶ್ಶೂರ ರಾಜನಾದ ಸನ್ಹೇರೀಬನು ಯೆರೂಸಲೇಮನ್ನು ಆಕ್ರಮಿಸುವ ಬೆದರಿಕೆ ಹಾಕಿದಾಗ ಹಿಜ್ಕೀಯ ಬಹಳ ಧೈರ್ಯ ಮತ್ತು ನಂಬಿಕೆ ತೋರಿಸಿದನು. ಯೆಹೋವನು ಕೊಡುವ ರಕ್ಷಣೆಯಲ್ಲಿ ಭರವಸೆ ಇಟ್ಟು ಜನರಲ್ಲಿ ಧೈರ್ಯ ತುಂಬಿದನು. (2 ಪೂರ್ವ. 32:7, 8) ಒಂದು ಸಂದರ್ಭದಲ್ಲಿ ಹಿಜ್ಕೀಯನು ಅಹಂಕಾರಿಯಾದನು ನಿಜ. ಆದರೆ ಯೆಹೋವನು ಅವನನ್ನು ತಿದ್ದಿದಾಗ ತನ್ನನ್ನು ತಗ್ಗಿಸಿಕೊಂಡನು. (2 ಪೂರ್ವ. 32:24-26) ಹಿಜ್ಕೀಯನು ನಿಜವಾಗಿಯೂ ನಮಗೆ ಒಳ್ಳೆಯ ಮಾದರಿ. ತನ್ನ ಕುಟುಂಬ ಮಾಡಿದ ತಪ್ಪುಗಳು ತನ್ನ ಜೀವನವನ್ನು ಹಾಳುಮಾಡುವಂತೆ ಅವನು ಬಿಡಲಿಲ್ಲ. ಅವನು ಯೆಹೋವನ ಸ್ನೇಹಿತನೆಂದು ತೋರಿಸಿಕೊಟ್ಟನು.

12. ಹಿಜ್ಕೀಯನಂತೆ ಇಂದು ಅನೇಕರು ಯೆಹೋವನ ಸ್ನೇಹಿತರಾಗಿರುವುದು ಹೇಗೆ?

12 ಇಂದು ಲೋಕವು ಕ್ರೂರವೂ ಪ್ರೀತಿರಹಿತವೂ ಆಗಿದೆ. ಎಷ್ಟೋ ಮಕ್ಕಳು ಹೆತ್ತವರ ಪ್ರೀತಿ, ವಾತ್ಸಲ್ಯ, ಆರೈಕೆ ಇಲ್ಲದೆ ಬೆಳೆಯುತ್ತಿದ್ದಾರೆ. (2 ತಿಮೊ. 3:1-5) ತಮ್ಮ ಕುಟುಂಬ ಹಿನ್ನೆಲೆ ಕೆಟ್ಟದ್ದಾಗಿದ್ದರೂ ಇಂದು ಅನೇಕ ಕ್ರೈಸ್ತರು ಯೆಹೋವನೊಂದಿಗೆ ಸ್ನೇಹ ಬೆಳೆಸಲು ಆಯ್ಕೆಮಾಡಿದ್ದಾರೆ. ಕುಟುಂಬದ ಹಿನ್ನೆಲೆ ಸರಿಯಿಲ್ಲ ಎಂಬ ಕಾರಣಕ್ಕೆ ತಾವು ಹಾಗಿರಬೇಕೆಂದಿಲ್ಲ ಎಂದು ಹಿಜ್ಕೀಯನಂತೆ ಅವರು ತೋರಿಸುತ್ತಾರೆ. ದೇವರು ನಮಗೆ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ. ಆತನನ್ನು ಆರಾಧಿಸಲು ಮತ್ತು ಗೌರವಿಸಲು ಹಿಜ್ಕೀಯನಂತೆ ಆರಿಸಿಕೊಳ್ಳುವುದು ನಮ್ಮನಮ್ಮ ಕೈಯಲ್ಲಿದೆ.

“ಇಗೋ, ನಾನು ಯೆಹೋವನ ದಾಸಿ!”

13, 14. (ಎ) ಮರಿಯಳಿಗೆ ಸಿಕ್ಕಿದ ನೇಮಕವು ತುಂಬ ಕಷ್ಟಕರವಾಗಿ ಕಂಡಿರಬಹುದು ಏಕೆ? (ಬಿ) ಆದರೂ ಅವಳು ಗಬ್ರಿಯೇಲನ ಮಾತುಗಳಿಗೆ ಹೇಗೆ ಪ್ರತಿಕ್ರಿಯಿಸಿದಳು?

13 ಹಿಜ್ಕೀಯನ ಕಾಲದ ಬಳಿಕ ನೂರಾರು ವರ್ಷಗಳಾದ ಮೇಲೆ ಜೀವಿಸಿದ ಮರಿಯಳೆಂಬ ದೀನ ಯುವತಿಯೂ ಯೆಹೋವನೊಂದಿಗೆ ವಿಶೇಷ ಸ್ನೇಹವನ್ನು ಬೆಳೆಸಿಕೊಂಡಳು. ಅವಳಿಗೆ ಆತನಿಂದ ಅಸಾಮಾನ್ಯ ನೇಮಕವೂ ಸಿಕ್ಕಿತು. ಅದೇನು? ಅವಳು ದೇವರ ಮಗನಿಗೆ ಜನ್ಮಕೊಟ್ಟು, ಅವನನ್ನು ಸಾಕಿಸಲಹಬೇಕಿತ್ತು. ಅಂಥ ದೊಡ್ಡ ಜವಾಬ್ದಾರಿಯನ್ನು ಯೆಹೋವನು ಅವಳಿಗೆ ಕೊಟ್ಟದ್ದು ಆತನು ಅವಳನ್ನು ಎಷ್ಟು ಪ್ರೀತಿಸಿದನೆಂದು, ನಂಬಿದನೆಂದು ತೋರಿಸುತ್ತದೆ. ಆದರೆ ಆ ನೇಮಕದ ಬಗ್ಗೆ ಮೊದಲು ಕೇಳಿದಾಗ ಅವಳ ಪ್ರತಿಕ್ರಿಯೆ ಹೇಗಿತ್ತು?

14 ಮರಿಯಳಿಗೆ ಸಿಕ್ಕಿದ ದೊಡ್ಡ ಗೌರವದ ಕುರಿತು ನಾವು ಅನೇಕ ಬಾರಿ ಮಾತಾಡುತ್ತೇವೆ. ಆದರೆ ಆ ನೇಮಕದ ಬಗ್ಗೆ ಕೇಳಿದಾಗ ಅವಳ ಮನಸ್ಸಲ್ಲಿ ಏನೆಲ್ಲ ಭಯ, ಸಂದೇಹಗಳು ಎದ್ದಿರಬಹುದೆಂದು ಯೋಚಿಸಿದ್ದೇವಾ? ಇದಕ್ಕೊಂದು ಉದಾಹರಣೆ ನೋಡೋಣ. ಪುರುಷನ ಸಂಬಂಧವಿಲ್ಲದೆ ಗರ್ಭಿಣಿಯಾಗುವಳೆಂದು ಗಬ್ರಿಯೇಲ ದೇವದೂತನು ಮರಿಯಳಿಗೆ ಹೇಳಿದನಾದರೂ ಅದನ್ನು ಅವಳ ಕುಟುಂಬಕ್ಕೆ, ನೆರೆಯವರಿಗೆ ಹೋಗಿ ಹೇಳಬೇಕಾ ಎಂದು ಕೇಳಲಿಲ್ಲ. ಈ ವಿಷಯ ಅವರಿಗೆ ಗೊತ್ತಾದರೆ ಅವರೆಲ್ಲ ಏನು ನೆನಸಬಹುದು? ತಾನು ಮದುವೆಯಾಗಲಿದ್ದ ಯೋಸೇಫನಿಗೆ ದ್ರೋಹ ಮಾಡಿಲ್ಲವೆಂದು ಅವನಿಗೆ ಮನವರಿಕೆ ಮಾಡುವುದು ಹೇಗೆ? ಎಂದು ಮರಿಯ ಯೋಚಿಸಿರಬಹುದು. ಅಲ್ಲದೆ, ಮನುಷ್ಯನಾಗಿ ಹುಟ್ಟಲಿದ್ದ ದೇವರ ಮಗನನ್ನು ಸಾಕಿಸಲಹುವ ದೊಡ್ಡ ಜವಾಬ್ದಾರಿಯೂ ಅವಳಿಗಿತ್ತು. ಮರಿಯಳಿಗೆ ಯಾವೆಲ್ಲ ಚಿಂತೆಗಳಿದ್ದವೊ ಗೊತ್ತಿಲ್ಲ. ಆದರೆ ಗಬ್ರಿಯೇಲ ಅವಳೊಂದಿಗೆ ಮಾತಾಡಿದ ನಂತರ ಅವಳು ಹೀಗಂದದ್ದು ಮಾತ್ರ ನಿಜ: “ಇಗೋ, ನಾನು ಯೆಹೋವನ ದಾಸಿ! ನೀನು ಹೇಳಿದಂತೆಯೇ ನನಗೆ ಸಂಭವಿಸಲಿ.”—ಲೂಕ 1:26-38.

15. ಮರಿಯಳ ನಂಬಿಕೆ ಏಕೆ ಅಸಾಧಾರಣವಾಗಿತ್ತು?

15 ಮರಿಯಳ ನಂಬಿಕೆಯು ನಿಜವಾಗಿಯೂ ಅಸಾಧಾರಣ! ಒಬ್ಬ ದಾಸಿ ಹೇಗೆ ತನಗೆ ಹೇಳಿದ್ದೆಲ್ಲವನ್ನು ಮಾಡುತ್ತಾಳೊ ಹಾಗೆಯೇ ತನಗೆ ಹೇಳಿದ್ದೆಲ್ಲವನ್ನೂ ಮಾಡಲು ಮರಿಯ ಸಿದ್ಧಳಿದ್ದಳು. ಯೆಹೋವನು ತನ್ನನ್ನು ಕಾಪಾಡಿ ನಡೆಸುವನು ಎಂಬ ದೃಢ ನಂಬಿಕೆ ಅವಳಿಗಿತ್ತು. ಅಂಥ ಬಲವಾದ ನಂಬಿಕೆ ಅವಳಿಗೆ ಹೇಗೆ ಬಂತು? ನಂಬಿಕೆ ಅನ್ನೋದು ನಾವು ಹುಟ್ಟುವಾಗಲೇ ಬರುವುದಿಲ್ಲ. ಆದರೆ ನಾವದನ್ನು ಬೆಳೆಸಿಕೊಳ್ಳಬಹುದು ಮತ್ತು ಅದಕ್ಕಾಗಿ ದೇವರ ಸಹಾಯವನ್ನು ಪಡೆದುಕೊಳ್ಳಬಹುದು. (ಗಲಾ. 5:22; ಎಫೆ. 2:8) ಮರಿಯಳು ತನ್ನ ನಂಬಿಕೆಯನ್ನು ದೃಢಗೊಳಿಸಲು ಶ್ರಮಪಟ್ಟಳು. ಅದು ನಮಗೆ ಹೇಗೆ ಗೊತ್ತು? ಅವಳು ಕಿವಿಗೊಟ್ಟ ವಿಧ ಮತ್ತು ಮಾತಾಡಿದ ವಿಷಯದ ಬಗ್ಗೆ ನಾವೀಗ ನೋಡೋಣ.

16. ಮರಿಯಳು ಚೆನ್ನಾಗಿ ಕಿವಿಗೊಡುತ್ತಿದ್ದಳೆಂದು ಹೇಗೆ ಗೊತ್ತಾಗುತ್ತದೆ?

16 ಮರಿಯಳು ಕಿವಿಗೊಟ್ಟ ವಿಧ. “ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ . . . ಆಗಿರಬೇಕು” ಎಂದು ಬೈಬಲ್‌ ಹೇಳುತ್ತದೆ. (ಯಾಕೋ. 1:19) ಮರಿಯಳು ಚೆನ್ನಾಗಿ ಕಿವಿಗೊಡುತ್ತಿದ್ದಳು. ವಿಶೇಷವಾಗಿ ಯೆಹೋವನ ಕುರಿತ ವಿಷಯಗಳನ್ನು ಜಾಗ್ರತೆಯಿಂದ ಆಲಿಸಿದಳು ಮತ್ತು ಧ್ಯಾನಿಸಲು ಸಮಯ ಕೊಟ್ಟಳೆಂದು ಬೈಬಲ್‌ ತೋರಿಸುತ್ತದೆ. ಉದಾಹರಣೆಗಾಗಿ, ಯೇಸುವಿನ ಜನನದ ಬಗ್ಗೆ ದೇವದೂತರು ಹೇಳಿದ ಮಾತುಗಳನ್ನು ಕುರುಬರು ಬಂದು ಮರಿಯಳಿಗೆ ತಿಳಿಸಿದರು. ಅನಂತರ ಯೇಸು 12 ವರ್ಷದವನಾಗಿದ್ದಾಗ ಹೇಳಿದ ಮಾತು ಅವಳನ್ನು ಆಶ್ಚರ್ಯಗೊಳಿಸಿತು. ಈ ಎರಡೂ ಸಂದರ್ಭಗಳಲ್ಲಿ ಮರಿಯಳು ಚೆನ್ನಾಗಿ ಕಿವಿಗೊಟ್ಟಳು, ನೆನಪಿನಲ್ಲಿಟ್ಟಳು ಮತ್ತು ಧ್ಯಾನಿಸಿದಳು.—ಲೂಕ 2:16-19, 49, 51 ಓದಿ.

17. ಮರಿಯಳು ಆಡಿದ ಮಾತುಗಳಿಂದ ಅವಳ ಕುರಿತು ನಾವೇನು ಕಲಿಯಬಹುದು?

17 ಮರಿಯಳು ಮಾತಾಡಿದ ವಿಷಯ. ಮರಿಯಳು ಆಡಿದ ಮಾತುಗಳಲ್ಲಿ ಹೆಚ್ಚಿನದ್ದು ಬೈಬಲಿನಲ್ಲಿಲ್ಲ. ಅವಳು ಅನೇಕ ಮಾತುಗಳನ್ನಾಡಿದ ಒಂದೇ ಒಂದು ಸಂದರ್ಭ ಲೂಕ 1:46-55 ರಲ್ಲಿದೆ. ಇದು ಹೀಬ್ರು ಶಾಸ್ತ್ರಗ್ರಂಥದ ಬಗ್ಗೆ ಅವಳಿಗೆ ಚೆನ್ನಾಗಿ ಗೊತ್ತಿತ್ತೆಂದು ತೋರಿಸುತ್ತದೆ. ಹೇಗೆ? ಅವಳ ಮಾತುಗಳು ಸಮುವೇಲನ ತಾಯಿ ಹನ್ನಳು ಪ್ರಾರ್ಥನೆಯಲ್ಲಿ ಹೇಳಿದ ಮಾತುಗಳನ್ನು ಹೋಲುತ್ತವೆ. (1 ಸಮು. 2:1-10) ಮರಿಯಳು ಆ ಸಂದರ್ಭದಲ್ಲಿ ಶಾಸ್ತ್ರಗ್ರಂಥದಿಂದ ಸುಮಾರು 20 ಬಾರಿ ಉಲ್ಲೇಖಿಸಿರಬಹುದು. ತನ್ನ ಆಪ್ತ ಸ್ನೇಹಿತನಾದ ಯೆಹೋವನಿಂದ ಕಲಿತ ಸತ್ಯಗಳ ಬಗ್ಗೆ ಮಾತಾಡಲು ಆಕೆ ಇಷ್ಟಪಟ್ಟಳು ಎಂಬುದು ಸ್ಪಷ್ಟ.

18. ಯಾವ ವಿಧಗಳಲ್ಲಿ ನಾವು ಮರಿಯಳ ನಂಬಿಕೆಯನ್ನು ಅನುಕರಿಸಬಹುದು?

18 ಮರಿಯಳಂತೆ ನಮಗೂ ತೀರಾ ಕಷ್ಟಕರವೆಂದು ತೋರುವ ನೇಮಕಗಳು ಯೆಹೋವನಿಂದ ಸಿಗಬಹುದು. ಅಂಥ ಸಂದರ್ಭದಲ್ಲಿ ಆಕೆಯ ಮಾದರಿಯನ್ನು ಅನುಕರಿಸಿ ಆ ನೇಮಕಗಳನ್ನು ದೀನತೆಯಿಂದ ಸ್ವೀಕರಿಸೋಣ. ಬೇಕಾದ ಸಹಾಯವನ್ನು ಯೆಹೋವನು ಕೊಡುವನೆಂದು ಭರವಸೆಯಿಡೋಣ. ಯೆಹೋವನು ಹೇಳುವುದನ್ನು ಜಾಗ್ರತೆಯಿಂದ ಕಿವಿಗೊಡುವ ಮೂಲಕ, ಆತನ ಹಾಗೂ ಆತನ ಉದ್ದೇಶಗಳ ಕುರಿತು ಕಲಿಯುವ ವಿಷಯಗಳನ್ನು ಧ್ಯಾನಿಸುವ ಮೂಲಕ ಸಹ ಮರಿಯಳ ನಂಬಿಕೆಯನ್ನು ಅನುಕರಿಸೋಣ. ಆಗ ನಾವು ಆ ವಿಷಯಗಳನ್ನು ಸಂತೋಷದಿಂದ ಇತರರಿಗೆ ತಿಳಿಸಲಿಕ್ಕಾಗುತ್ತದೆ.—ಕೀರ್ತ. 77:11, 12; ಲೂಕ 8:18; ರೋಮ. 10:15.

19. ನಂಬಿಕೆಯ ಅತ್ಯುತ್ತಮ ಮಾದರಿಗಳನ್ನು ಅನುಕರಿಸುವಾಗ ನಮಗೇನು ಸಿಗಲಿದೆ?

19 ಅಬ್ರಹಾಮನಂತೆ ರೂತ್‌, ಹಿಜ್ಕೀಯ, ಮರಿಯ ಸಹ ಯೆಹೋವನ ಸ್ನೇಹಿತರಾಗಿದ್ದರು. ಅದಲ್ಲದೆ, ‘ಸಾಕ್ಷಿಗಳ ದೊಡ್ಡ ಮೇಘವಾಗಿರುವ’ ನಂಬಿಗಸ್ತ ಸ್ತ್ರೀಪುರುಷರೂ ಯೆಹೋವನ ಸ್ನೇಹಿತರಾಗಿದ್ದರು. ನಂಬಿಕೆಯ ವಿಷಯದಲ್ಲಿ ಆ ಅತ್ಯುತ್ತಮ ಮಾದರಿಗಳನ್ನು ಅನುಸರಿಸುತ್ತಾ ಇರೋಣ. (ಇಬ್ರಿ. 6:11, 12) ಹಾಗೆ ಮಾಡುವಲ್ಲಿ ನಾವು ಎಂದೆಂದಿಗೂ ಯೆಹೋವನ ಸ್ನೇಹಿತರಾಗಿರುವೆವು. ಇದು ನಿಜಕ್ಕೂ ದೊಡ್ಡ ಬಹುಮಾನವೇ!