ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ನಿಷ್ಠಾವಂತ ಸೇವಕರಿಂದ ಕಲಿಯೋಣ

ಯೆಹೋವನ ನಿಷ್ಠಾವಂತ ಸೇವಕರಿಂದ ಕಲಿಯೋಣ

“ದೇವರ ಚಿತ್ತಕ್ಕನುಸಾರ ಸತ್ಯಾನುಗುಣವಾದ ನೀತಿಯಲ್ಲಿಯೂ ನಿಷ್ಠೆಯಲ್ಲಿಯೂ ಸೃಷ್ಟಿಸಲ್ಪಟ್ಟ ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳಬೇಕು.”—ಎಫೆ. 4:24.

ಗೀತೆಗಳು: 63, 43

1, 2. ದಾವೀದನು ಯೆಹೋವನಿಗೆ ಹೇಗೆ ನಿಷ್ಠೆ ತೋರಿಸಿದನು? (ಲೇಖನದ ಆರಂಭದ ಚಿತ್ರ ನೋಡಿ.)

ಸೌಲ ಮತ್ತು ಅವನ 3,000 ಸೈನಿಕರು ಯೆಹೂದದ ಅರಣ್ಯದಲ್ಲಿ ದಾವೀದನನ್ನು ಕೊಲ್ಲಲು ಹುಡುಕುತ್ತಿದ್ದರು. ಆದರೆ ಒಂದು ರಾತ್ರಿ ದಾವೀದನು ಮತ್ತು ಅವನ ಜನರೇ ಸೌಲ ಮತ್ತು ಅವನ ಸೈನಿಕರು ತಂಗಿದ್ದ ಸ್ಥಳವನ್ನು ಕಂಡುಹಿಡಿದರು. ಅಲ್ಲಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ದಾವೀದ ಮತ್ತು ಅಬೀಷೈ ಮೆಲ್ಲಮೆಲ್ಲನೆ ಹೆಜ್ಜೆ ಹಾಕುತ್ತಾ ಸೈನಿಕರನ್ನು ದಾಟಿ ಸೌಲನ ಹತ್ತಿರ ಬಂದರು. ಅಬೀಷೈ ದಾವೀದನಿಗೆ “ಅಪ್ಪಣೆಯಾಗಲಿ, ನಾನು ಬರ್ಜಿಯಿಂದ ಒಂದೇ ಪೆಟ್ಟಿನಲ್ಲಿ ಅವನನ್ನು ನೆಲಕ್ಕೆ ಹತ್ತಿಕೊಳ್ಳುವಂತೆ ತಿವಿಯುವೆನು; ಎರಡನೆಯ ಸಾರಿ ಹೊಡೆಯುವದು ಅವಶ್ಯವಿಲ್ಲ” ಎಂದು ಪಿಸುಗುಟ್ಟಿದನು. ಆದರೆ ದಾವೀದ ಒಪ್ಪಲಿಲ್ಲ. “ಅವನನ್ನು ಕೊಲ್ಲಬೇಡ; ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತುವ ಯಾವನಾದರೂ ನಿರಪರಾಧಿಯೆಂದು ಎಣಿಸಲ್ಪಡುವನೋ” ಎಂದು ಹೇಳಿದನು. ಅವನು ಮುಂದುವರಿಸಿ ಅಂದದ್ದು: “ತನ್ನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಯೆಹೋವನೇ ನನ್ನನ್ನು ತಡೆಯಲಿ.”—1 ಸಮು. 26:8-12.

2 ಯೆಹೋವನಿಗೆ ನಿಷ್ಠೆ ತೋರಿಸಬೇಕಾದರೆ ಆತನು ರಾಜನಾಗಿ ಆರಿಸಿದ್ದ ಸೌಲನಿಗೆ ಗೌರವ ತೋರಿಸಬೇಕೆಂದು ದಾವೀದ ಅರ್ಥಮಾಡಿಕೊಂಡನು. ಹಾಗಾಗಿ ಅವನು ಸೌಲನಿಗೆ ಹಾನಿಮಾಡಲು ಯೋಚಿಸಲೂ ಇಲ್ಲ. ಇಂದು ನಾವು ಯೆಹೋವನಿಗೆ “ನಿಷ್ಠೆ” ತೋರಿಸಬೇಕಾದರೆ ಆತನು ಅಧಿಕಾರದಲ್ಲಿರಲು ನೇಮಿಸಿದವರಿಗೆ ಗೌರವ ತೋರಿಸಬೇಕು. ನಾವೆಲ್ಲರೂ ನಿಷ್ಠೆ ತೋರಿಸಲಬೇಕೆಂದು ಯೆಹೋವನು ಬಯಸುತ್ತಾನೆ.—ಎಫೆಸ 4:24 ಓದಿ.

3. ಅಬೀಷೈ ದಾವೀದನಿಗೆ ಹೇಗೆ ನಿಷ್ಠೆ ತೋರಿಸಿದನು?

3 ಅಬೀಷೈ ದಾವೀದನಿಗೆ ಗೌರವ ತೋರಿಸಿದನು. ಯಾಕೆಂದರೆ ಅವನನ್ನು ರಾಜನಾಗಿ ಆರಿಸಿದ್ದು ಯೆಹೋವನೇ ಎಂದು ಅಬೀಷೈಗೆ ಗೊತ್ತಿತ್ತು. ಆದರೆ ರಾಜನಾದ ಮೇಲೆ ದಾವೀದನು ಗಂಭೀರ ಪಾಪಗಳನ್ನು ಮಾಡಿದನು. ಊರೀಯನ ಹೆಂಡತಿಯ ಜೊತೆ ವ್ಯಭಿಚಾರ ಮಾಡಿದ. ಅಷ್ಟೇ ಅಲ್ಲ, ಯುದ್ಧದಲ್ಲಿ ಊರೀಯನನ್ನು ಯೋವಾಬನ ಸಹಾಯದಿಂದ ಕೊಲ್ಲಿಸಿದನು. (2 ಸಮು. 11:2-4, 14, 15; 1 ಪೂರ್ವ. 2:16, ಪಾದಟಿಪ್ಪಣಿ) ಈ ವಿಷಯ ಅಬೀಷೈಗೆ ಗೊತ್ತಿದ್ದಿರಬಹುದು ಏಕೆಂದರೆ ಅವನು ಯೋವಾಬನ ಅಣ್ಣ. ಆದರೂ ದಾವೀದನ ಕಡೆಗೆ ಅವನಿಗಿದ್ದ ಗೌರವ ಕಡಿಮೆಯಾಗಲಿಲ್ಲ. ಮತ್ತೊಂದು ವಿಷಯವೇನೆಂದರೆ, ಅಬೀಷೈ ಸೇನಾ ನಾಯಕನಾಗಿದ್ದನು. ಬೇಕಿದ್ದರೆ ಅವನು ತನ್ನ ಅಧಿಕಾರ ಬಳಸಿ ರಾಜನಾಗುವ ಪ್ರಯತ್ನ ಮಾಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ದಾವೀದನ ಸೇವೆ ಮಾಡುವುದನ್ನು ಮುಂದುವರಿಸಿದನು. ಶತ್ರುಗಳಿಂದ ಕೂಡ ಅವನನ್ನು ಕಾಪಾಡಿದನು.—2 ಸಮು. 10:10; 20:6; 21:15-17.

4. (ಎ) ದೇವರಿಗೆ ನಿಷ್ಠೆ ತೋರಿಸುವ ವಿಷಯದಲ್ಲಿ ದಾವೀದನು ಹೇಗೆ ಒಂದು ಮಾದರಿಯಾಗಿದ್ದಾನೆ? (ಬಿ) ಬೇರೆ ಯಾರ ಉದಾಹರಣೆಗಳನ್ನು ಗಮನಿಸಲಿದ್ದೇವೆ?

4 ದಾವೀದನು ಜೀವನಪೂರ್ತಿ ಯೆಹೋವನಿಗೆ ನಿಷ್ಠನಾಗಿ ಉಳಿದನು. ಅವನು ಯುವಕನಾಗಿದ್ದಾಗ ಯೆಹೋವನನ್ನು ಮತ್ತು ಇಸ್ರಾಯೇಲ್ಯರನ್ನು ಹೀಯಾಳಿಸುತ್ತಿದ್ದ ದೈತ್ಯ ಗೊಲ್ಯಾತನನ್ನು ಕೊಂದನು. (1 ಸಮು. 17:23, 26, 48-51) ದಾವೀದನು ರಾಜನಾಗಿದ್ದಾಗ ಮಾಡಿದ ಪಾಪಗಳಿಗಾಗಿ ಪ್ರವಾದಿ ನಾತಾನನು ತಿದ್ದುಪಾಟನ್ನು ಕೊಟ್ಟನು. ತಕ್ಷಣ ದಾವೀದನು ತನ್ನ ತಪ್ಪನ್ನು ಒಪ್ಪಿಕೊಂಡು ಪಶ್ಚಾತ್ತಾಪಪಟ್ಟನು. (2 ಸಮು. 12:1-5, 13) ತನ್ನ ಇಳಿವಯಸ್ಸಿನಲ್ಲಿ ಯೆಹೋವನ ಮಂದಿರಕ್ಕೆ ಅನೇಕ ಬೆಲೆಬಾಳುವ ವಸ್ತುಗಳನ್ನು ಕಾಣಿಕೆಯಾಗಿ ಕೊಟ್ಟನು. (1 ಪೂರ್ವ. 29:1-5) ದಾವೀದನು ಗಂಭೀರ ಪಾಪಗಳನ್ನು ಮಾಡಿದನಾದರೂ ದೇವರ “ಭಕ್ತ”ನಾಗಿರುವುದನ್ನು ಅಂದರೆ ಆತನಿಗೆ ನಿಷ್ಠೆ ತೋರಿಸುವುದನ್ನು ಬಿಟ್ಟುಬಿಡಲಿಲ್ಲ. (ಕೀರ್ತ. 51:4, 10; 86:2) ಈ ಲೇಖನದಲ್ಲಿ ದಾವೀದ ಮತ್ತು ಅವನ ಸಮಯದಲ್ಲಿ ಜೀವಿಸಿದ ಇತರರ ಉದಾಹರಣೆಗಳನ್ನು ಚರ್ಚಿಸೋಣ. ಎಲ್ಲರಿಗಿಂತ ಹೆಚ್ಚಾಗಿ ಯೆಹೋವನಿಗೆ ಹೇಗೆ ನಿಷ್ಠೆ ತೋರಿಸಬಹುದು, ಅದಕ್ಕೆ ಬೇರೆ ಯಾವೆಲ್ಲ ಗುಣಗಳು ಬೇಕೆಂದು ಕಲಿಯೋಣ.

ಮೊದಲು ಯೆಹೋವನಿಗೆ ನಿಷ್ಠೆ ತೋರಿಸುತ್ತೀರಾ?

5. ಅಬೀಷೈಯ ತಪ್ಪಿನಿಂದ ಯಾವ ಪಾಠ ಕಲಿಯುತ್ತೇವೆ?

5 ರಾಜ ಸೌಲನನ್ನು ಅಬೀಷೈ ಕೊಲ್ಲಬೇಕೆಂದಿದ್ದದ್ದು ದಾವೀದನಿಗೆ ನಿಷ್ಠೆ ತೋರಿಸಲಿಕ್ಕಾಗಿ. ಆದರೆ ‘ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತುವುದು’ ತಪ್ಪೆಂದು ದಾವೀದನಿಗೆ ಗೊತ್ತಿದ್ದ ಕಾರಣ ಅವನು ಅಬೀಷೈಯನ್ನು ತಡೆದನು. (1 ಸಮು. 26:8-11) ಇದರಿಂದ ನಾವೊಂದು ಮುಖ್ಯ ಪಾಠ ಕಲಿಯುತ್ತೇವೆ. ಅದೇನೆಂದರೆ ಯಾರಿಗೆ ಮೊದಲು ನಿಷ್ಠೆ ತೋರಿಸಬೇಕೆಂಬ ನಿರ್ಣಯ ಮಾಡಬೇಕಾದಾಗ, ಯಾವ ಬೈಬಲ್‌ ತತ್ವಗಳು ಅನ್ವಯಿಸುತ್ತವೆ ಎಂದು ಯೋಚಿಸಬೇಕು.

6. ನಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ನಿಷ್ಠೆ ತೋರಿಸುವುದು ಸಹಜವಾದರೂ ನಾವು ಯಾಕೆ ಜಾಗರೂಕರಾಗಿರಬೇಕು?

6 ನಮಗೆ ತುಂಬ ಇಷ್ಟವಾದವರಿಗೆ ಅಂದರೆ ನಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ನಿಷ್ಠೆ ತೋರಿಸುವುದು ಸಹಜ. ಆದರೆ ನಾವು ಅಪರಿಪೂರ್ಣರಾದ ಕಾರಣ ನಮ್ಮ ಹೃದಯದ ಭಾವನೆಗಳು ನಮ್ಮನ್ನು ತಪ್ಪು ದಾರಿಗೆ ನಡೆಸಬಹುದು. (ಯೆರೆ. 17:9) ಅಂದರೆ ನಮಗೆ ಇಷ್ಟವಾದವರು ತಪ್ಪು ಮಾಡುತ್ತಿದ್ದರೆ, ಸತ್ಯ ಬಿಟ್ಟು ಹೋದರೆ ಆಗಲೂ ಅವರಿಗೆ ನಿಷ್ಠೆ ತೋರಿಸಬೇಕು ಅಂತ ನಮಗನಿಸಬಹುದು. ಆದರೆ ನೆನಪಿಡಿ, ನಾವು ಎಲ್ಲರಿಗಿಂತ ಹೆಚ್ಚಾಗಿ ಯೆಹೋವನಿಗೆ ನಿಷ್ಠೆ ತೋರಿಸಬೇಕು.ಮತ್ತಾಯ 22:37 ಓದಿ.

7. ಒಬ್ಬ ಸಹೋದರಿ ಕಷ್ಟದ ಸನ್ನಿವೇಶದಲ್ಲೂ ದೇವರಿಗೆ ನಿಷ್ಠೆ ತೋರಿಸಿದ್ದು ಹೇಗೆ?

7 ನಮ್ಮ ಕುಟುಂಬದವರಲ್ಲಿ ಯಾರಾದರೂ ಸಭೆಯಿಂದ ಬಹಿಷ್ಕಾರವಾದರೆ ನಾವು ಯಾರಿಗೆ ನಿಷ್ಠೆ ತೋರಿಸಬೇಕು? ಯೆಹೋವನಿಗೆ ಖಂಡಿತ. ಆ್ಯನಿಯ ಉದಾಹರಣೆ ಗಮನಿಸಿ. ಅವಳ ತಾಯಿಗೆ ಬಹಿಷ್ಕಾರವಾಗಿತ್ತು. ಒಂದು ದಿನ ಅವರು ಆ್ಯನಿಗೆ ಫೋನ್‌ ಮಾಡಿ ಅವಳನ್ನು ಭೇಟಿ ಮಾಡಿ ಮಾತಾಡಬೇಕು ಎಂದರು. [1] ಕುಟುಂಬದಲ್ಲಿ ಯಾರೂ ತನ್ನ ಜೊತೆ ಮಾತಾಡುತ್ತಿಲ್ಲ, ಹಾಗಾಗಿ ಮನಸ್ಸಿಗೆ ತುಂಬ ನೋವಾಗಿದೆ ಎಂದು ಹೇಳಿದರು. ಇದನ್ನು ಕೇಳಿ ಆ್ಯನಿಗೆ ದುಃಖವಾಯಿತು. ಪತ್ರ ಬರೆಯುತ್ತೇನೆಂದು ಮಾತು ಕೊಟ್ಟಳು. ಪತ್ರ ಬರೆಯುವ ಮುಂಚೆ ಕೆಲವು ಬೈಬಲ್‌ ತತ್ವಗಳ ಬಗ್ಗೆ ಧ್ಯಾನಿಸಿದಳು. (1 ಕೊರಿಂ. 5:11; 2 ಯೋಹಾ. 9-11) ತಪ್ಪು ಮಾಡಿ ಪಶ್ಚಾತ್ತಾಪಪಡದೆ ಕುಟುಂಬದಿಂದ ದೂರಹೋದವರು ಅವರೇ ಎಂದು ಪತ್ರದಲ್ಲಿ ದಯೆಯಿಂದ ತನ್ನ ತಾಯಿಗೆ ವಿವರಿಸಿದಳು. ಪುನಃ ಸಂತೋಷ ಪಡೆಯಲು ಒಂದೇ ಒಂದು ದಾರಿ ಯೆಹೋವನ ಕಡೆಗೆ ತಿರುಗಿ ಬರುವುದೇ ಆಗಿದೆ ಎಂದೂ ಹೇಳಿದಳು.—ಯಾಕೋ. 4:8.

8. ದೇವರಿಗೆ ನಿಷ್ಠರಾಗಿ ಉಳಿಯಲು ಯಾವ ಗುಣಗಳು ಸಹಾಯ ಮಾಡುತ್ತವೆ?

8 ದಾವೀದನ ಸಮಯದಲ್ಲಿದ್ದ ಯೆಹೋವನ ನಿಷ್ಠಾವಂತ ಸೇವಕರಲ್ಲಿ ದೀನತೆ, ದಯೆ, ಧೈರ್ಯ ಇತ್ತು. ಯೆಹೋವನಿಗೆ ನಿಷ್ಠರಾಗಿ ಉಳಿಯಲು ಈ ಗುಣಗಳು ಹೇಗೆ ಸಹಾಯ ಮಾಡುತ್ತವೆಂದು ನೋಡೋಣ.

ನಾವು ದೀನರಾಗಿರಬೇಕು

9. ಅಬ್ನೇರನು ದಾವೀದನನ್ನು ಕೊಲ್ಲಲು ಪ್ರಯತ್ನಿಸಿದ್ದೇಕೆ?

9 ದಾವೀದನು ಗೊಲಾತ್ಯನ ತಲೆಯನ್ನು ಸೌಲನ ಬಳಿಗೆ ತರುವುದನ್ನು ಸೌಲನ ಮಗ ಯೋನಾತಾನ ಮತ್ತು ಇಸ್ರಾಯೇಲ್‌ ಸೇನಾಧಿಪತಿ ಅಬ್ನೇರ ಇಬ್ಬರೂ ನೋಡಿದರು. ಅಂದಿನಿಂದಲೇ ಯೋನಾತಾನನು ದಾವೀದನ ಸ್ನೇಹಿತನಾದನು. ಅವನಿಗೆ ನಿಷ್ಠನಾಗಿ ಉಳಿದನು. (1 ಸಮು. 17:57–18:3) ಆದರೆ ಅಬ್ನೇರನು ಹಾಗೆ ಮಾಡಲಿಲ್ಲ. ದಾವೀದನನ್ನು ಕೊಲ್ಲಲು ಯೋಚಿಸಿದ್ದ ಸೌಲನಿಗೆ ಸಹಾಯವನ್ನೂ ಮಾಡಿದನು. (ಕೀರ್ತ. 54:3; 1 ಸಮು. 26:1-5) ದಾವೀದನನ್ನೇ ಇಸ್ರಾಯೇಲಿನ ಮುಂದಿನ ರಾಜನಾಗಿ ದೇವರು ಆಯ್ಕೆ ಮಾಡಿದ್ದಾನೆಂದು ಯೋನಾತಾನ ಅಬ್ನೇರ ಇಬ್ಬರಿಗೂ ಗೊತ್ತಿತ್ತು. ಸೌಲನು ಸತ್ತ ಮೇಲಾದರೂ ಅಬ್ನೇರನು ದೀನನಾಗಿ ದಾವೀದನ ಪಕ್ಷ ವಹಿಸಬಹುದಿತ್ತು. ಅದಕ್ಕೆ ಬದಲಾಗಿ ಅವನು ಸೌಲನ ಮಗ ಈಷ್ಬೋಶೆತನನ್ನು ರಾಜನಾಗಿ ಮಾಡಲು ಪ್ರಯತ್ನಿಸಿದನು. ನಂತರ, ತಾನೇ ರಾಜನಾಗಬೇಕೆಂಬ ಆಸೆಯೂ ಅವನಲ್ಲಿ ಹುಟ್ಟಿರಬಹುದು. ಬಹುಶಃ ಈ ಕಾರಣಕ್ಕಾಗಿಯೇ ರಾಜ ಸೌಲನ ಉಪಪತ್ನಿಯೊಂದಿಗೆ ಅವನು ಲೈಂಗಿಕ ಸಂಬಂಧ ಇಟ್ಟನು. (2 ಸಮು. 2:8-10; 3:6-11) ದಾವೀದನ ಬಗ್ಗೆ ಯೋನಾತಾನ ಮತ್ತು ಅಬ್ನೇರನಿಗಿದ್ದ ಮನೋಭಾವದಲ್ಲಿ ಯಾಕೆ ಅಷ್ಟು ವ್ಯತ್ಯಾಸವಿತ್ತು? ಏಕೆಂದರೆ ಯೋನಾತಾನ ದೀನನಾಗಿದ್ದನು, ಯೆಹೋವನಿಗೆ ನಿಷ್ಠನಾಗಿದ್ದನು. ಆದರೆ ಅಬ್ನೇರನು ಹಾಗಿರಲಿಲ್ಲ.

10. ಅಬ್ಷಾಲೋಮನು ಯೆಹೋವನಿಗೆ ಯಾಕೆ ನಿಷ್ಠನಾಗಿರಲಿಲ್ಲ?

10 ರಾಜ ದಾವೀದನ ಮಗ ಅಬ್ಷಾಲೋಮ ಸಹ ದೇವರಿಗೆ ನಿಷ್ಠನಾಗಿರಲಿಲ್ಲ. ಏಕೆಂದರೆ ಅವನಲ್ಲಿ ದೀನತೆಯಿರಲಿಲ್ಲ. ತನ್ನ ತಂದೆಯ ಸ್ಥಾನ ಕಸಿದುಕೊಳ್ಳಲು ಅವನು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಆದ್ದರಿಂದಲೇ “ತನಗೋಸ್ಕರ ಒಂದು ರಥವನ್ನೂ ಕುದುರೆಗಳನ್ನೂ ತೆಗೆದುಕೊಂಡು ತನ್ನ ಮುಂದೆ ಮೈಗಾವಲಾಗಿ ಓಡುವದಕ್ಕೆ ಐವತ್ತು ಮಂದಿಯನ್ನು ನೇಮಿಸಿದನು.” (2 ಸಮು. 15:1) ತನಗೆ ನಿಷ್ಠೆ ತೋರಿಸುವಂತೆ ಅನೇಕ ಮಂದಿ ಇಸ್ರಾಯೇಲ್ಯರ ಮನಸ್ಸನ್ನೂ ತನ್ನ ಕಡೆಗೆ ತಿರುಗಿಸಿದನು. ತಂದೆ ದಾವೀದನನ್ನು ರಾಜನಾಗಿ ನೇಮಿಸಿದ್ದು ಯೆಹೋವನೇ ಎಂದು ಗೊತ್ತಿದ್ದರೂ ಅವನನ್ನು ಕೊಲ್ಲಲು ಪ್ರಯತ್ನಿಸಿದನು.—2 ಸಮು. 15:13, 14; 17:1-4.

11. ಅಬ್ನೇರ, ಅಬ್ಷಾಲೋಮ, ಬಾರೂಕ ಕುರಿತ ಬೈಬಲ್‌ ದಾಖಲೆಗಳಿಂದ ನಾವೇನು ಕಲಿಯುತ್ತೇವೆ?

11 ಅಬ್ಷಾಲೋಮ ಮತ್ತು ಅಬ್ನೇರರಿಂದ ಈ ವಿಷಯ ಸ್ಪಷ್ಟವಾಗುತ್ತದೆ: ಒಬ್ಬ ವ್ಯಕ್ತಿಯಲ್ಲಿ ದೀನತೆ ಇಲ್ಲದಿದ್ದರೆ ಅಥವಾ ಹೆಚ್ಚು ಅಧಿಕಾರ ಪಡೆಯಬೇಕೆಂಬ ಆಶೆಯಿದ್ದರೆ ಯೆಹೋವನಿಗೆ ನಿಷ್ಠನಾಗಿ ಉಳಿಯುವುದು ತುಂಬ ಕಷ್ಟ. ನಾವ್ಯಾರೂ ಅಬ್ಷಾಲೋಮ ಅಬ್ನೇರರಂತೆ ಸ್ವಾರ್ಥರು, ದುಷ್ಟರು ಆಗಲಿಕ್ಕಿಲ್ಲ. ಏಕೆಂದರೆ ಖಂಡಿತ ನಾವೆಲ್ಲರೂ ಯೆಹೋವನನ್ನು ಪ್ರೀತಿಸುತ್ತೇವೆ. ಆದರೆ ತುಂಬ ಹಣ ಮಾಡುವ, ದೊಡ್ಡ ಸ್ಥಾನಮಾನದ ಕೆಲಸದ ವಿಷಯದಲ್ಲಿ ನಾವು ಜಾಗ್ರತೆ ವಹಿಸಬೇಕು. ಏಕೆಂದರೆ ಅದರ ಹಿಂದೆ ಬಿದ್ದರೆ ಯೆಹೋವನ ಜೊತೆ ನಮಗಿರುವ ಸಂಬಂಧ ಹಾಳಾಗುತ್ತದೆ. ಇದಕ್ಕೊಂದು ಉದಾಹರಣೆ ಯೆರೆಮೀಯನ ಕಾರ್ಯದರ್ಶಿ ಬಾರೂಕನದು. ಅವನ ಹತ್ತಿರ ಇಲ್ಲದಿರುವ ವಿಷಯಗಳಿಗಾಗಿ ಆಶಿಸಿದನು. ಯೆಹೋವನ ಸೇವೆಯಲ್ಲಿ ತನಗಿದ್ದ ಆನಂದ ಕಳೆದುಕೊಂಡನು. ಆಗ ಯೆಹೋವನು ಬಾರೂಕನಿಗೆ ಎಚ್ಚರಿಸಿದ್ದು: “ಇಗೋ, ನಾನು ಕಟ್ಟಿದ್ದನ್ನು ನಾನೇ ಕೆಡವುವೆನು, ನಾನು ನೆಟ್ಟದ್ದನ್ನು ನಾನೇ ಕಿತ್ತುಹಾಕುವೆನು; ಹೌದು, ಭೂಮಂಡಲದಲ್ಲೆಲ್ಲಾ ಹಾಗೆ ಮಾಡುವೆನು. ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳುತ್ತೀಯೋ? ನಿರೀಕ್ಷಿಸಬೇಡ.” (ಯೆರೆ. 45:4, 5) ಬಾರೂಕನು ಯೆಹೋವನ ಮಾತಿಗೆ ಕಿವಿಗೊಟ್ಟನು. ನಾವೂ ಆತನ ಮಾತಿಗೆ ಕಿವಿಗೊಡಬೇಕು ಯಾಕೆಂದರೆ ಬೇಗನೆ ಯೆಹೋವನು ಈ ದುಷ್ಟ ಲೋಕವನ್ನು ನಾಶಮಾಡಲಿದ್ದಾನೆ.

12. ನಮ್ಮಲ್ಲಿ ಸ್ವಾರ್ಥವಿದ್ದರೆ ಯೆಹೋವನಿಗೆ ನಿಷ್ಠರಾಗಿರಲು ಸಾಧ್ಯವಿಲ್ಲವೆಂದು ತೋರಿಸಲು ಉದಾಹರಣೆ ಕೊಡಿ.

12 ಮೆಕ್ಸಿಕೊ ದೇಶದಲ್ಲಿರುವ ಸಹೋದರ ಡ್ಯಾನಿಯೆಲ್‌ ಯಾರಿಗೆ ನಿಷ್ಠೆ ತೋರಿಸಬೇಕೆಂದು ನಿರ್ಣಯಿಸಬೇಕಾಗಿ ಬಂತು. ಯೆಹೋವನನ್ನು ಆರಾಧಿಸದಿದ್ದ ಹುಡುಗಿಯೊಬ್ಬಳನ್ನು ಅವನು ಪ್ರೀತಿಸುತ್ತಿದ್ದ. ಅವನು ಹೇಳುವುದು: “ನಾನು ಪಯನೀಯರ್‌ ಸೇವೆ ಆರಂಭಿಸಿದ ಮೇಲೂ ಅವಳಿಗೆ ಪತ್ರ ಬರೆಯುತ್ತಾ ಇದ್ದೆ.” ಆದರೆ ಇದು ಸ್ವಾರ್ಥ, ತನಗೇನು ಬೇಕೊ ಅದನ್ನೇ ಮಾಡುತ್ತಿದ್ದೇನೆಂದು ಅವನು ನಂತರ ತಿಳಿದುಕೊಂಡನು. ಅವನು ಯೆಹೋವನಿಗೆ ನಿಷ್ಠನಾಗಿರಲಿಲ್ಲ. ಹಾಗಾಗಿ ಅವನು ದೀನತೆ ತೋರಿಸಿ ಒಬ್ಬ ಅನುಭವಿ ಹಿರಿಯರಿಗೆ ಆ ಹುಡುಗಿಯ ಬಗ್ಗೆ ಹೇಳಿದನು. ಮುಂದೆ ಏನಾಯಿತೆಂದು ಡ್ಯಾನಿಯೆಲ್‌ ವಿವರಿಸಿದ್ದು: “ದೇವರಿಗೆ ನಿಷ್ಠನಾಗಿ ಉಳಿಯಬೇಕಾದರೆ ಅವಳಿಗೆ ಪತ್ರ ಬರೆಯೋದನ್ನು ಬಿಟ್ಟುಬಿಡಬೇಕೆಂದು ಆ ಹಿರಿಯ ಅರ್ಥಮಾಡಿಸಿದರು. ತುಂಬ ಸಲ ಪ್ರಾರ್ಥಿಸಿದೆ, ಎಷ್ಟೋ ಸಲ ಅತ್ತೆ. ಕೊನೆಗೆ ಅವಳನ್ನು ಬಿಟ್ಟುಬಿಟ್ಟೆ. ಸ್ವಲ್ಪ ಸಮಯದಲ್ಲೇ ಸೇವೆಯಲ್ಲಿ ನನ್ನ ಆನಂದ ಹೆಚ್ಚಾಯಿತು.” ಯೆಹೋವನನ್ನು ಪ್ರೀತಿಸುವ ಹುಡುಗಿಯನ್ನು ಡ್ಯಾನಿಯೆಲ್‌ ಮದುವೆಯಾದನು. ಈಗ ಸಂಚರಣ ಮೇಲ್ವಿಚಾರಕನಾಗಿ ಸೇವೆ ಮಾಡುತ್ತಿದ್ದಾನೆ.

ನಮ್ಮಲ್ಲಿ ದಯೆ ಇರಬೇಕು

13. ನಾತಾನನು ದಾವೀದನಿಗೆ ಮತ್ತು ಯೆಹೋವನಿಗೆ ನಿಷ್ಠನಾಗಿ ಉಳಿದದ್ದು ಹೇಗೆ?

13 ನಾವು ಯೆಹೋವನಿಗೆ ನಿಷ್ಠರಾಗಿದ್ದರೆ ಬೇರೆಯವರಿಗೂ ನಿಷ್ಠೆ ತೋರಿಸುತ್ತೇವೆ. ಉದಾಹರಣೆಗೆ, ಪ್ರವಾದಿ ನಾತಾನನು ಯೆಹೋವನಿಗೆ ಮತ್ತು ದಾವೀದನಿಗೆ ಹೇಗೆ ನಿಷ್ಠನಾಗಿದ್ದನೆಂದು ಗಮನಿಸಿ. ವ್ಯಭಿಚಾರ ಮಾಡಿ ಊರೀಯನನ್ನು ಕೊಲ್ಲಿಸಿದ ದಾವೀದನನ್ನು ತಿದ್ದಲು ಯೆಹೋವನು ನಾತಾನನನ್ನು ಕಳುಹಿಸಿದನು. ಈ ಕೆಲಸವನ್ನು ಅವನು ಧೈರ್ಯದಿಂದ ಮಾಡಿದನು. ಅದೇ ಸಮಯದಲ್ಲಿ ದಾವೀದನೊಂದಿಗೆ ದಯೆಯಿಂದ, ವಿವೇಕದಿಂದ ಮಾತಾಡಿದನು. ಅವನು ಮಾಡಿದ ಪಾಪ ಎಷ್ಟು ಗಂಭೀರವೆಂದು ಅರ್ಥಮಾಡಿಸಲು ಒಂದು ಕಥೆ ಹೇಳಿದನು. ಆ ಕಥೆಯಲ್ಲಿ ಒಬ್ಬ ಶ್ರೀಮಂತನು ಬಡ ವ್ಯಕ್ತಿಯೊಬ್ಬನ ಒಂದೇ ಒಂದು ಕುರಿಮರಿಯನ್ನು ಕಸಿದುಕೊಂಡನೆಂದು ಕೇಳಿದಾಗ ದಾವೀದನಿಗೆ ತುಂಬ ಸಿಟ್ಟು ಬಂತು. ಆಗ ನಾತಾನನು “ಆ ಮನುಷ್ಯನು ನೀನೇ” ಅಂದನು. ತಾನು ಯೆಹೋವನ ವಿರುದ್ಧ ಮಾಡಿದ ಪಾಪ ಎಷ್ಟು ಗಂಭೀರವೆಂದು ದಾವೀದನಿಗೆ ಆಗ ಮನದಟ್ಟಾಯಿತು.—2 ಸಮು. 12:1-7, 13.

14. ಯೆಹೋವನಿಗೆ ಮತ್ತು ಅದೇ ಸಮಯದಲ್ಲಿ ನಿಮ್ಮ ಸ್ನೇಹಿತ ಅಥವಾ ಕುಟುಂಬದವನಿಗೆ ಹೇಗೆ ನಿಷ್ಠೆ ತೋರಿಸಬಹುದು?

14 ನೀವು ಮೊದಲು ಯೆಹೋವನಿಗೆ, ನಂತರ ಇತರರಿಗೆ ನಿಷ್ಠರಾಗಿ ಉಳಿಯಬೇಕು. ಇದನ್ನು ಮಾಡಲು ದಯೆ ಅವಶ್ಯಕ. ಒಂದು ಸನ್ನಿವೇಶ ಗಮನಿಸಿ. ಒಬ್ಬ ಸಹೋದರ ಗಂಭೀರ ತಪ್ಪು ಮಾಡಿರುವ ಪುರಾವೆ ನಿಮ್ಮ ಹತ್ತಿರವಿರಬಹುದು. ಆ ವ್ಯಕ್ತಿಗೆ, ವಿಶೇಷವಾಗಿ ಅವರು ನಿಮ್ಮ ಆಪ್ತ ಸ್ನೇಹಿತ ಅಥವಾ ಕುಟುಂಬದವರು ಆಗಿದ್ದರೆ ನಿಷ್ಠರಾಗಿ ಉಳಿಯಲು ನಿಮಗೆ ಮನಸ್ಸಿದೆ. ಆದರೆ ಅವರಿಗಿಂತಲೂ ಹೆಚ್ಚಾಗಿ ಯೆಹೋವನಿಗೆ ನಿಷ್ಠೆ ತೋರಿಸಬೇಕೆಂದು ನಿಮಗೆ ಗೊತ್ತು. ಹಾಗಾಗಿ ನಾತಾನನಂತೆ ಯೆಹೋವನಿಗೆ ವಿಧೇಯರಾಗಿರಿ. ಅದೇ ಸಮಯದಲ್ಲಿ ನಿಮ್ಮ ಸಹೋದರನೊಟ್ಟಿಗೆ ದಯೆಯಿಂದ ವರ್ತಿಸಿರಿ. ಹಿರಿಯರ ಜೊತೆ ಆದಷ್ಟು ಬೇಗನೆ ಮಾತಾಡಿ ಅವರ ಸಹಾಯ ಪಡೆಯಲು ಹೇಳಿರಿ. ಆ ವ್ಯಕ್ತಿ ಹಾಗೆ ಮಾಡದಿದ್ದರೆ ನೀವೇ ಹೋಗಿ ಹಿರಿಯರಿಗೆ ತಿಳಿಸಿ. ಹೀಗೆ ಯೆಹೋವನಿಗೆ ನಿಷ್ಠರಾಗಿ ಉಳಿಯುತ್ತೀರಿ. ಅಷ್ಟೇ ಅಲ್ಲ, ಆ ಸಹೋದರನಿಗೂ ದಯೆ ತೋರಿಸುತ್ತಿದ್ದೀರಿ. ಯಾಕೆಂದರೆ ಆ ವ್ಯಕ್ತಿ ಮತ್ತೆ ಯೆಹೋವನೊಟ್ಟಿಗೆ ಒಳ್ಳೇ ಸಂಬಂಧ ಇಟ್ಟುಕೊಳ್ಳಲು ಹಿರಿಯರು ಅವನಿಗೆ ಸಹಾಯ ಮಾಡುತ್ತಾರೆ. ಅವರು ಅವನನ್ನು ದಯೆಯಿಂದ ಮತ್ತು ಕೋಮಲಭಾವದಿಂದ ತಿದ್ದುತ್ತಾರೆ.ಯಾಜಕಕಾಂಡ 5:1; ಗಲಾತ್ಯ 6:1 ಓದಿ.

ನಮ್ಮಲ್ಲಿ ಧೈರ್ಯ ಇರಬೇಕು

15, 16. ದೇವರಿಗೆ ನಿಷ್ಠನಾಗಿ ಉಳಿಯಲು ಹೂಷೈಗೆ ಯಾಕೆ ಧೈರ್ಯ ಬೇಕಿತ್ತು?

15 ರಾಜ ದಾವೀದನ ನಿಷ್ಠಾವಂತ ಸ್ನೇಹಿತರಲ್ಲಿ ಒಬ್ಬನು ಹೂಷೈ. ದಾವೀದನ ಮಗ ಅಬ್ಷಾಲೋಮನನ್ನು ಜನರು ರಾಜನಾಗಿ ಮಾಡಲು ಪ್ರಯತ್ನಿಸುತ್ತಿದ್ದಾಗ ಯೆಹೋವನಿಗೆ ಮತ್ತು ದಾವೀದನಿಗೆ ನಿಷ್ಠೆ ತೋರಿಸಲು ಹೂಷೈಗೆ ಧೈರ್ಯ ಬೇಕಿತ್ತು. ಏಕೆಂದು ಗಮನಿಸಿ. ಅಬ್ಷಾಲೋಮನು ತನ್ನ ಸೈನಿಕರೊಡನೆ ಯೆರೂಸಲೇಮಿಗೆ ಬಂದಿದ್ದನು. ದಾವೀದನು ಅಲ್ಲಿಂದ ಓಡಿ ಹೋಗಿದ್ದನು. (2 ಸಮು. 15:13; 16:15) ಅವನಿಗೆ ವಯಸ್ಸಾಗಿತ್ತು, ಎಷ್ಟೋ ಜನರು ಅವನನ್ನು ಕೊಲ್ಲಲು ಹುಡುಕುತ್ತಿದ್ದರು. ಇಂಥ ಸಂದರ್ಭದಲ್ಲಿ ಹೂಷೈ ಹೆದರಿ ದಾವೀದನನ್ನು ತೊರೆದು ಅಬ್ಷಾಲೋಮನ ಪಕ್ಷ ಸೇರಿದನಾ? ಇಲ್ಲ. ಯೆಹೋವನೇ ದಾವೀದನನ್ನು ರಾಜನಾಗಿ ಆರಿಸಿದ್ದರಿಂದ ಹೂಷೈ ಅವನಿಗೆ ನಿಷ್ಠನಾಗಿ ಉಳಿದನು. ಹಾಗಾಗಿ ಎಣ್ಣೇ ಮರಗಳ ಗುಡ್ಡಕ್ಕೆ ಹೋಗಿ ಅವನನ್ನು ಭೇಟಿಮಾಡಿದನು.—2 ಸಮು. 15:30, 32.

16 ಹೂಷೈ ಯೆರೂಸಲೇಮಿಗೆ ಮರಳಿ, ಅಬ್ಷಾಲೋಮನ ಸ್ನೇಹಿತನಂತೆ ನಟಿಸಲು ದಾವೀದನು ಹೇಳಿದನು. ಇದರ ಉದ್ದೇಶ, ಅಬ್ಷಾಲೋಮನು ಅಹೀತೊಫೇಲನ ಸಲಹೆ ನಿರಾಕರಿಸಿ ಹೂಷೈಯ ಸಲಹೆ ಪಾಲಿಸುವಂತೆ ಮಾಡುವುದೇ ಆಗಿತ್ತು. ಹೂಷೈ ತುಂಬ ಧೈರ್ಯ ತೋರಿಸಿ, ತನ್ನ ಪ್ರಾಣ ಕೈಯಲ್ಲಿ ಹಿಡಿದು ದಾವೀದನು ಹೇಳಿದಂತೆ ಮಾಡಿದನು. ಹೀಗೆ ಯೆಹೋವನಿಗೆ ನಿಷ್ಠನಾಗಿ ಉಳಿದನು. ಯೆಹೋವನು ಹೂಷೈಗೆ ಸಹಾಯಮಾಡಲಿ ಎಂದು ದಾವೀದ ಪ್ರಾರ್ಥಿಸಿದನು. ಆ ಪ್ರಾರ್ಥನೆಗೆ ಉತ್ತರ ಸಿಕ್ಕಿತು. ಅಬ್ಷಾಲೋಮನು ಅಹೀತೊಫೇಲನ ಸಲಹೆ ತಿರಸ್ಕರಿಸಿ ಹೂಷೈಯ ಸಲಹೆಯಂತೆ ಮಾಡಿದನು.—2 ಸಮು. 15:31; 17:14.

17. ನಿಷ್ಠರಾಗಿರಲು ನಮಗೇಕೆ ಧೈರ್ಯ ಬೇಕು?

17 ನಮಗೆ ಕೂಡ ಧೈರ್ಯ ಬೇಕು. ನಮ್ಮ ಕುಟುಂಬದವರು, ಜೊತೆ ಕೆಲಸದವರು, ಸರ್ಕಾರಿ ಅಧಿಕಾರಿಗಳು ನಾವು ಯೆಹೋವನ ಮಾತು ಮೀರಿ ನಡೆಯುವಂತೆ ಹೇಳುವಾಗ ಆತನಿಗೆ ನಿಷ್ಠರಾಗಿ ಉಳಿದು ವಿಧೇಯರಾಗಿರಲು ನಮಗೆ ಧೈರ್ಯ ಬೇಕು. ಜಪಾನಿನಲ್ಲಿರುವ ಸಹೋದರ ಟಾರೋ ಎಂಬವನ ಉದಾಹರಣೆ ಗಮನಿಸಿ. ಚಿಕ್ಕಂದಿನಿಂದ ಅವನು ಅಪ್ಪಅಮ್ಮನನ್ನು ಖುಷಿಪಡಿಸಲು ಆದದ್ದೆಲ್ಲ ಮಾಡುತ್ತಿದ್ದ. ಅವರ ಮಾತು ಕೇಳುತ್ತಿದ್ದ, ಅವರಿಗೆ ನಿಷ್ಠನಾಗಿದ್ದ. ಮಾಡಬೇಕಲ್ಲ ಅಂತ ಮಾಡಲಿಲ್ಲ. ಪ್ರೀತಿಯಿಂದ ಹಾಗೆ ಮಾಡುತ್ತಿದ್ದ. ಆದರೆ ಅವನು ಯೆಹೋವನ ಸಾಕ್ಷಿಗಳಿಂದ ಬೈಬಲ್‌ ಕಲಿಯಲು ಆರಂಭಿಸಿದಾಗ ಅವನ ಹೆತ್ತವರು ಅದನ್ನು ನಿಲ್ಲಿಸಬೇಕೆಂದಿದ್ದರು. ಇದರಿಂದ ಅವನಿಗೆ ತುಂಬ ಬೇಸರವಾಯಿತು. ಕೂಟಕ್ಕೆ ಹೋಗಲು ನಿರ್ಣಯಿಸಿದಾಗ ಅದನ್ನು ಹೆತ್ತವರಿಗೆ ಹೇಳುವುದು ಅವನಿಗೆ ತುಂಬ ಕಷ್ಟವಾಯಿತು. ಟಾರೋ ಹೇಳುವುದು: “ನನ್ನ ಮೇಲೆ ಅವರಿಗೆಷ್ಟು ಸಿಟ್ಟಿತ್ತೆಂದರೆ ಎಷ್ಟೋ ವರ್ಷ ಅವರ ಮನೆಗೆ ಕಾಲಿಡಲು ಬಿಡಲಿಲ್ಲ. ಧೈರ್ಯಕ್ಕಾಗಿ ಪ್ರಾರ್ಥಿಸಿದೆ. ನನ್ನ ನಿರ್ಣಯಕ್ಕೆ ಅಂಟಿಕೊಳ್ಳಲು ಬೇಡಿಕೊಂಡೆ. ಈಗ ಅವರ ಹೃದಯ ಕರಗಿದೆ ಮತ್ತು ನಾನು ಆಗಾಗ ಅವರ ಮನೆಗೆ ಹೋಗಿ ಅವರನ್ನು ನೋಡಿ ಬರುತ್ತೇನೆ.”ಜ್ಞಾನೋಕ್ತಿ 29:25 ಓದಿ.

18. ಈ ಲೇಖನದ ಅಧ್ಯಯನದಿಂದ ನೀವು ಹೇಗೆ ಪ್ರಯೋಜನ ಪಡೆದಿದ್ದೀರಿ?

18 ದಾವೀದ, ಯೋನಾತಾನ, ನಾತಾನ ಮತ್ತು ಹೂಷೈಯಂತೆ ನಾವೂ ಯೆಹೋವನಿಗೆ ನಿಷ್ಠರಾಗಿ ಉಳಿದು ಅದರಿಂದ ಸಿಗುವ ತೃಪ್ತಿಯನ್ನು ಆನಂದಿಸೋಣ. ಅಬ್ನೇರನಂತೆ ಅಬ್ಷಾಲೋಮನಂತೆ ಇರಬಾರದೆಂದು ನಿಶ್ಚಯಿಸೋಣ. ನಾವು ಅಪರಿಪೂರ್ಣರು, ತಪ್ಪು ಮಾಡುತ್ತೇವೆ ನಿಜ. ಆದರೆ ನಮ್ಮ ಜೀವನದಲ್ಲಿ ಎಲ್ಲಕ್ಕಿಂತಲೂ ಎಲ್ಲರಿಗಿಂತಲೂ ಯೆಹೋವನಿಗೆ ನಿಷ್ಠೆ ತೋರಿಸುವುದೇ ಮುಖ್ಯ ಎಂದು ತೋರಿಸೋಣ.

^ [1] (ಪ್ಯಾರ 7) ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.