ಜೀವನ ಕಥೆ
ಯೆಹೋವನ ಸೇವೆಯಲ್ಲಿ ಯಶಸ್ಸು
ನಾನು ಯುದ್ಧದಲ್ಲಿ ಸೇರಲ್ಲ ಎಂಬ ಕಾರಣಕ್ಕಾಗಿ ಈ ಮುಂಚೆ ಜೈಲಿನಲ್ಲಿದ್ದೆ ಎಂದು ಸೇನೆಯ ಅಧಿಕಾರಿಗೆ ಹೇಳಿದೆ. “ಮತ್ತೆ ನನ್ನನ್ನು ಜೈಲಿಗೆ ಹಾಕ್ತೀರಾ?” ಎಂದೆ. ಅಮೆರಿಕದ ಸೇನೆ ಸೇರಲು ಎರಡನೇ ಸಲ ಕರೆ ಸಿಕ್ಕಿದಾಗ ನಡೆದ ಮಾತುಕತೆ ಇದು.
ನಾನು 1926ರಲ್ಲಿ ಕ್ರುಕ್ಸ್‌ವಿಲ್ ಹಳ್ಳಿಯಲ್ಲಿ ಜನಿಸಿದೆ. ಇದು ಅಮೆರಿಕದ ಒಹಾಯೋದಲ್ಲಿದೆ. ನಾವು ಒಟ್ಟು ಎಂಟು ಮಕ್ಕಳು. ಅಪ್ಪಅಮ್ಮಗೆ ಧರ್ಮ ಅಂದರೆ ಅಷ್ಟಕಷ್ಟೆ. ಮಕ್ಕಳನ್ನು ಮಾತ್ರ ಚರ್ಚ್‌ಗೆ ಕಳುಹಿಸುತ್ತಿದ್ದರು. ನಾನು ಮೆಥೊಡಿಸ್ಟ್ ಚರ್ಚಿಗೆ ಹೋಗುತ್ತಿದ್ದೆ. ಒಮ್ಮೆ ಇಡೀ ವರ್ಷ ಒಂದು ಭಾನುವಾರವೂ ತಪ್ಪದೇ ಚರ್ಚಿಗೆ ಹೋದೆ. ಅದಕ್ಕಾಗಿ ಪಾದ್ರಿ ನನಗೆ ಬಹುಮಾನ ಕೊಟ್ಟರು. ನನಗಾಗ 14 ವರ್ಷ.
ಆ ಸಮಯದಷ್ಟಕ್ಕೆ ನಮ್ಮ ನೆರೆಯವರಾದ ಮಾರ್ಗರೆಟ್ ವಾಕರ್ ನಮ್ಮ ಮನೆಗೆ ಬಂದು ಬೈಬಲಿನಲ್ಲಿರುವ ವಿಷಯಗಳನ್ನು ಅಮ್ಮನಿಗೆ ತಿಳಿಸುತ್ತಿದ್ದರು. ಅವರೊಬ್ಬ ಯೆಹೋವನ ಸಾಕ್ಷಿ. ಅವರು ಹೇಳೋದನ್ನು ಕೇಳಿಸಿಕೊಳ್ಳಲು ಒಂದು ದಿನ ನಾನು ಅವರ ಜೊತೆ ಕುಳಿತುಕೊಂಡೆ. ಅಧ್ಯಯನದ ಸಮಯದಲ್ಲಿ ತೊಂದರೆ ಮಾಡುವೆನೆಂದು ನೆನಸಿ ಅಮ್ಮ ನನಗೆ ಹೊರಗೆ ಹೋಗು ಎಂದರು. ಆದರೂ ಪ್ರತಿ ಸಲ ಅವರು ಮಾತಾಡೋದನ್ನು ಕೇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಕೆಲವು ಭೇಟಿಗಳ ನಂತರ ಮಾರ್ಗರೆಟ್‌ರವರು ನನಗೆ, “ದೇವರ ಹೆಸರೇನು ನಿನಗೆ ಗೊತ್ತಾ?” ಎಂದು ಕೇಳಿದರು. “ಅದು ಎಲ್ಲರಿಗೂ ಗೊತ್ತು. ‘ದೇವರು’ ತಾನೇ?” ಎಂದೆ. ಆಗ ಅವರು, “ನಿನ್ನ ಬೈಬಲ್ ತಕ್ಕೊಂಡು ಕೀರ್ತನೆ 83:18 ಓದು” ಎಂದರು. ದೇವರ ಹೆಸರು ಯೆಹೋವ ಎಂದು ನನಗೆ ಗೊತ್ತಾಗಿದ್ದು ಆಗಲೇ. ತಕ್ಷಣ ನನ್ನ ಸ್ನೇಹಿತರ ಹತ್ತಿರ ಓಡಿ ಹೋಗಿ, “ಇವತ್ತು ನೀವು ಮನೆಗೆ ಹೋದಮೇಲೆ ಬೈಬಲಿನಿಂದ ಕೀರ್ತನೆ 83:18 ಓದಿ. ದೇವರ ಹೆಸರೇನೆಂದು ನೋಡಿ” ಎಂದು ಹೇಳಿದೆ. ನಾನು ಸಾರಲು ಶುರುಮಾಡಿದ್ದು ಆಗಲೇ ಅಂತ ಹೇಳಬಹುದು.
ನಾನು ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಂಡೆ, 1941ರಲ್ಲಿ ನನ್ನ ದೀಕ್ಷಾಸ್ನಾನವಾಯಿತು. ಸ್ವಲ್ಪ ಸಮಯದಲ್ಲೇ ನನಗೆ ಸಭಾ ಪುಸ್ತಕ ಅಭ್ಯಾಸ ನಡೆಸುವ ನೇಮಕ ಸಿಕ್ಕಿತು. ನನ್ನ ಅಮ್ಮನಿಗೆ, ಒಡಹುಟ್ಟಿದವರಿಗೆ ಕೂಟಕ್ಕೆ ಬರಲು ಪ್ರೋತ್ಸಾಹಿಸಿದೆ. ನಾನು ನಡೆಸುತ್ತಿದ್ದ ಪುಸ್ತಕ ಅಭ್ಯಾಸಕ್ಕೆ ಅವರೆಲ್ಲರು ಬರಲು ಆರಂಭಿಸಿದರು. ಅಪ್ಪ ಮಾತ್ರ ಬರಲಿಲ್ಲ. ಅವರಿಗೆ ಆಸಕ್ತಿಯಿರಲಿಲ್ಲ.
ಮನೆಯವರಿಂದ ವಿರೋಧ
ಕ್ರಮೇಣ ಸಭೆಯಲ್ಲಿ ಹೆಚ್ಚು ಜವಾಬ್ದಾರಿ ಸಿಕ್ಕಿತು. ಸಂಘಟನೆಯ ಅನೇಕ ಪುಸ್ತಕಗಳನ್ನು ಸಂಗ್ರಹಿಸಿದೆ. ಒಂದು ದಿನ ಅಪ್ಪ ಆ ಪುಸ್ತಕಗಳ ಕಡೆಗೆ ಬೆರಳು ತೋರಿಸಿ, “ಆ ಕಸವೆಲ್ಲ ನನ್ನ ಮನೆಯಲ್ಲಿ ಬೇಡ. ಈಗಲೇ ಅದನ್ನು ಹೊರಗೆ ಬಿಸಾಡು! ಅದರ ಜೊತೆ ನೀನೂ ಹೋಗು” ಎಂದರು. ಆಗ ನಾನು ಹೋಗಿ ಹತ್ತಿರದ ಜೆನಸ್‌ವಿಲ್‌ನಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ತಕ್ಕೊಂಡೆ. ಆಗಾಗ ಮನೆಗೆ ಹೋಗಿ ಅಮ್ಮ, ಒಡಹುಟ್ಟಿದವರನ್ನು ಪ್ರೋತ್ಸಾಹಿಸುತ್ತಿದ್ದೆ.
ಅಮ್ಮ ಕೂಟಕ್ಕೆ ಹೋಗದಂತೆ ತಡೆಯಲು ಅಪ್ಪ ತುಂಬ ಪ್ರಯತ್ನಿಸಿದರು. ಕೆಲವೊಮ್ಮೆ ಅಮ್ಮನನ್ನು ಅಟ್ಟಿಸಿಕೊಂಡು ಬಂದು ಮನೆಗೆ ವಾಪಸ್ಸು ಎಳೆದುಕೊಂಡು ಬರುತ್ತಿದ್ದರು. ಆದರೆ ಅಮ್ಮ ಬೇರೊಂದು ಬಾಗಿಲಿಂದ ಹೊರಗೋಡಿ ಕೂಟಕ್ಕೆ ಹೋಗುತ್ತಿದ್ದರು. ನಾನು ಅಮ್ಮನಿಗೆ, “ಚಿಂತೆ ಮಾಡಬೇಡಮ್ಮಾ, ನಿಮ್ಮ ಹಿಂದೆ ಓಡಿ ಓಡಿ ಒಂದಿನ ಅವರಿಗೇ ಸಾಕಾಗಿ ಹೋಗುತ್ತೆ” ಅಂತ ಹೇಳಿದೆ. ದಿನ ಕಳೆದಂತೆ ಅಪ್ಪ ಸುಮ್ಮನಾದರು. ಅಮ್ಮ ಯಾವುದೇ ಜಗಳ-ಜಗ್ಗಾಟವಿಲ್ಲದೆ ಕೂಟವನ್ನು ಹಾಜರಾಗತೊಡಗಿದರು.
1943ರಲ್ಲಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಪ್ರಾರಂಭವಾದಾಗ ನಾನು ವಿದ್ಯಾರ್ಥಿ ಭಾಷಣ ಕೊಡಲು ಶುರು ಮಾಡಿದೆ. ಆ ಶಾಲೆಯಲ್ಲಿ ನನಗೆ ಕೊಡಲಾದ ಸಲಹೆಗಳು ಭಾಷಣ ಕೊಡುವ ಕಲೆಯಲ್ಲಿ ಪ್ರಗತಿಮಾಡಲು ನೆರವಾಯಿತು.
ಯುದ್ಧದಲ್ಲಿ ಭಾಗವಹಿಸಲು ನಿರಾಕರಿಸಿದೆ
1944ರಲ್ಲಿ ಮಿಲಿಟರಿ ಸೇರಲು ನನಗೆ ಕರೆಬಂತು. ಎರಡನೇ ಮಹಾ ಯುದ್ಧ ನಡೆಯುತ್ತಿದ್ದ ಸಮಯ ಅದು. ಒಹಾಯೋದ ಕೊಲಂಬಸ್‌ನಲ್ಲಿ, ಫೋರ್ಟ್ ಹೇಸ್ ಮಿಲಿಟರಿ ನೆಲೆಗೆ ಹೋಗಿ ಅಧಿಕಾರಿಗಳ ಮುಂದೆ ಹಾಜರಾದೆ. ನನ್ನ ವೈದ್ಯಕೀಯ ಪರೀಕ್ಷೆಯ ನಂತರ ಕೇಳಿದ ಮಾಹಿತಿಯನ್ನೆಲ್ಲ ಬರೆದು ಕೊಟ್ಟೆ. ನಾನು ಸೈನಿಕನಾಗಲ್ಲ ಎಂದೂ ಅಧಿಕಾರಿಗಳಿಗೆ ಹೇಳಿದೆ. ಆಗ ಅವರು ನನ್ನನ್ನು ಮನೆಗೆ ಕಳುಹಿಸಿದರು. ಸ್ವಲ್ಪ ದಿನಗಳ ನಂತರ ಒಬ್ಬ ಪೊಲೀಸ್ ನನ್ನ ಮನೆಗೆ ಬಂದು, “ಕಾರ್ವಿನ್ ರಾಬಿಸನ್, ನಿನ್ನನ್ನು ಅರೆಸ್ಟ್ ಮಾಡಲು ವಾರೆಂಟ್ ತಂದಿದ್ದೇನೆ!” ಎಂದರು.
ಜೈಲಿನಲ್ಲಿ ಎರಡು ವಾರ ಕಳೆದ ನಂತರ ನನ್ನನ್ನು ಕೋರ್ಟ್‌ಗೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ನನಗೆ, “ನಾನೊಬ್ಬನೇ ತೀರ್ಪು ಕೊಡೋ ಹಾಗಿದ್ದರೆ ನಿನಗೆ ಜೀವಾವಧಿ ಶಿಕ್ಷೆ ಕೊಡುತ್ತಿದ್ದೆ. ನಿನಗೇನಾದರೂ ಹೇಳಲಿಕ್ಕಿದೆಯಾ?” ಎಂದು ಕೇಳಿದರು. ನಾನದಕ್ಕೆ ಉತ್ತರಿಸಿದ್ದು: “ಯುವರ್ ಆನರ್, ನನ್ನ ಕೆಲಸ ನೋಡಿದರೆ ನಾನೊಬ್ಬ ಪಾದ್ರಿ ಅಂತ ಹೇಳಬಹುದು. ಪ್ರತಿಯೊಬ್ಬರ ಮನೆ ಬಾಗಿಲು ನನಗೆ ವೇದಿಕೆ. ದೇವರ ರಾಜ್ಯದ ಸುವಾರ್ತೆಯನ್ನು ಅನೇಕ ಜನರ ಮನೆಗಳಲ್ಲಿ ಸಾರಿದ್ದೇನೆ.” ಆಗ ನ್ಯಾಯಾಧೀಶರು ಜೂರಿಗೆ * ಹೇಳಿದ್ದು: “ನೀವಿಲ್ಲಿ ಬಂದಿರೋದು ಇವನೊಬ್ಬ ಪಾದ್ರಿನಾ ಅಲ್ಲವಾ ಎಂದು ನಿರ್ಣಯಿಸಲಿಕ್ಕಲ್ಲ. ಸೇನೆಗೆ ಸೇರಲು ಇವನು ಒಪ್ಪಿದ್ದಾನಾ ಇಲ್ಲವಾ ಎಂದು ನೋಡಿ ತೀರ್ಪು ಕೊಡಿ.” ಅರ್ಧ ಗಂಟೆಯೊಳಗೆ ಜೂರಿಯು ನನ್ನನ್ನು ಅಪರಾಧಿ ಎಂದು ತೀರ್ಮಾನಿಸಿತು. ಕೆಂಟಕ್ಕಿ ಆ್ಯಶ್‌ಲೆಂಡ್‌ನ ಸರ್ಕಾರಿ ಜೈಲಿನಲ್ಲಿ ಐದು ವರ್ಷದ ಶಿಕ್ಷೆ ವಿಧಿಸಲಾಯಿತು.
ಜೈಲಿನಲ್ಲಿ ಯೆಹೋವನು ನನ್ನನ್ನು ಕಾಪಾಡಿದನು
ಎರಡು ವಾರ ಕೊಲಂಬಸ್ ಜೈಲಿನಲ್ಲಿದ್ದೆ. ಮೊದಲ ದಿನವಿಡೀ ಜೈಲಿನ ಕೋಣೆಯೊಳಗಿದ್ದೆ. ನಾನು ಯೆಹೋವನಿಗೆ,
“ಐದು ವರ್ಷ ಇಲ್ಲಿರಲಿಕ್ಕೆ ನನಗೆ ಆಗಲ್ಲಪ್ಪ. ಏನು ಮಾಡಬೇಕಂತ ಗೊತ್ತಾಗ್ತಿಲ್ಲ” ಎಂದು ಪ್ರಾರ್ಥಿಸಿದೆ.ಮರುದಿನ ಕಾವಲುಗಾರರು ನನ್ನನ್ನು ಆ ಕೋಣೆಯಿಂದ ಹೊರಬಿಟ್ಟರು. ಒಬ್ಬ ಎತ್ತರದ, ಗಟ್ಟಿಮುಟ್ಟಾದ ಕೈದಿಯ ಹತ್ತಿರ ಹೋದೆ. ನಾವಿಬ್ಬರು ಕಿಟಕಿಯ ಹೊರಗೆ ನೋಡುತ್ತಾ ನಿಂತಿದ್ದಾಗ ಅವನು ನನಗೆ, “ಏ ಕುಳ್ಳ, ನೀನ್ಯಾಕೆ ಇಲ್ಲಿದ್ದಿಯಾ?” ಎಂದ. ಅದಕ್ಕೆ ನಾನಂದೆ, “ನಾನೊಬ್ಬ ಯೆಹೋವನ ಸಾಕ್ಷಿ.” ತಿರುಗಿ ಅವನಂದದ್ದು, “ಓ ಹೌದಾ? ನೀನು ಏನ್ ತಪ್ಪು ಮಾಡಿದ್ದಿ?” ಆಗ ನಾನು, “ಯೆಹೋವನ ಸಾಕ್ಷಿಗಳಾದ ನಾವು ಯುದ್ಧಕ್ಕೆ ಹೋಗಲ್ಲ, ಜನರನ್ನು ಕೊಲ್ಲೋದಿಲ್ಲ” ಅಂತ ಹೇಳಿದೆ. ಅವನು, “ಕೊಲೆ ಮಾಡಿದವರನ್ನ ಇಲ್ಲಿ ಹಾಕುತ್ತಾರೆ. ಆದರೆ ಕೊಲೆ ಮಾಡೋದಿಲ್ಲ ಅನ್ನೋದಕ್ಕೆ ನಿನ್ನನ್ನು ಇಲ್ಲಿ ಹಾಕಿದ್ದಾರಾ? ಇದೆಂಥಾ ನ್ಯಾಯ?” ಎಂದು ಕೇಳಿದ. “ನ್ಯಾಯವಲ್ಲ” ಎಂದೆ ನಾನು.
ಅವನ ಹೆಸರು ಪೌಲ್. ಅವನು, “15 ವರ್ಷ ನಾನು ಬೇರೊಂದು ಜೈಲಿನಲ್ಲಿದ್ದೆ. ಅಲ್ಲಿ ನಿಮ್ಮ ಕೆಲವು ಪ್ರಕಾಶನಗಳನ್ನು ಓದಿದ್ದೆ” ಎಂದ. ಆಗ ಮನಸ್ಸಲ್ಲೇ ನಾನು, “ಯೆಹೋವನೇ ಇವನಾದರೂ ನನ್ನ ಪಕ್ಷದಲ್ಲಿರಲಿ” ಎಂದು ಬಿನ್ನಹಿಸಿದೆ. ಕೂಡಲೆ ಪೌಲ್, “ಇಲ್ಲಿ ಯಾರಾದರೂ ನಿನ್ನನ್ನು ಮುಟ್ಟಿದರೆ ಜೋರಾಗಿ ಕಿರುಚು ಸಾಕು. ಅವರನ್ನ ನಾನು ಒಂದು ಕೈ ನೋಡ್ಕೊಳ್ತೇನೆ” ಎಂದ. ಅವನಿಂದಾಗಿ, ಜೈಲಿನ ಆ ಭಾಗದಲ್ಲಿದ್ದ 50 ಕೈದಿಗಳಿಂದ ನನಗೇನೂ ತೊಂದರೆ ಆಗಲಿಲ್ಲ.
ಅಧಿಕಾರಿಗಳು ನನ್ನನ್ನು ಆ್ಯಶ್‌ಲೆಂಡ್‌ನ ಜೈಲಿಗೆ ಸ್ಥಳಾಂತರಿಸಿದರು. ಆ ಜೈಲಿನಲ್ಲಿ ಈಗಾಗಲೇ ಕೆಲವು ಪ್ರೌಢ ಸಹೋದರರಿದ್ದರು. ಅವರ ಸಹವಾಸದಿಂದ ನಾನೂ ಇತರರೂ ಸತ್ಯದಲ್ಲಿ ಗಟ್ಟಿಯಾಗಿ ನಿಲ್ಲಲಿಕ್ಕಾಯಿತು. ನಮಗೆ ವಾರದ ಬೈಬಲ್ ವಾಚನ ನೇಮಿಸಿದರು. ‘ಬೈಬಲ್ ಬೀಸ್’ ಎಂದು ಕರೆಯಲಾದ ಕೂಟಗಳಿಗೆ ಪ್ರಶ್ನೋತ್ತರಗಳನ್ನು ತಯಾರಿಸಿದೆವು. ನಾವಿದ್ದ ದೊಡ್ಡ ಕೋಣೆಯಲ್ಲಿ ಗೋಡೆಯ ಪಕ್ಕಕ್ಕೆ ಸಾಲಾಗಿ ಬೆಡ್‌ಗಳಿದ್ದವು. ಇವುಗಳನ್ನು ಒಬ್ಬ ಸಹೋದರ ಒಬ್ಬೊಬ್ಬರಿಗೆ ನೇಮಿಸುತ್ತಿದ್ದ. ಅವನು ನನಗೆ “ರಾಬಿಸನ್, ಇಂಥಿಂಥ ಸಂಖ್ಯೆಯ ಬೆಡ್‌ಗಳಿಗೆ ನೀನು ಜವಾಬ್ದಾರ. ಇದು ನಿನ್ನ ಸೇವಾ ಕ್ಷೇತ್ರ. ಆ ಬೆಡ್‌ಗಳಲ್ಲಿರುವ ವ್ಯಕ್ತಿ ಇಲ್ಲಿಂದ ಹೋಗೋ ಮುಂಚೆ ಅವನಿಗೆ ಸಾಕ್ಷಿ ಕೊಡೋದು ನಿನ್ನ ಕೆಲಸ” ಎಂದು ಹೇಳುತ್ತಿದ್ದನು. ಹೀಗೆ ಜೈಲಿನಲ್ಲೂ ವ್ಯವಸ್ಥಿತ ರೀತಿಯಲ್ಲಿ ಸಾರಿದೆವು.
ಜೈಲಿನಿಂದ ಹೊರಗೆ
ಎರಡನೇ ಮಹಾ ಯುದ್ಧ 1945ರಲ್ಲಿ ಮುಗಿಯಿತು. ಆದರೆ ಇನ್ನೂ ಸ್ವಲ್ಪ ಸಮಯ ನನ್ನನ್ನು ಜೈಲಲ್ಲೇ ಇಡಲಾಯಿತು. ಕುಟುಂಬ ಬಗ್ಗೆ ತುಂಬ ಚಿಂತಿಸುತ್ತಿದ್ದೆ ಏಕೆಂದರೆ ಒಮ್ಮೆ ಅಪ್ಪ, “ನಿನ್ನ ಕಾಟ ತಪ್ಪಿದರೆ ಸಾಕು, ಉಳಿದವರನ್ನೆಲ್ಲ ಹೇಗೊ ನೋಡ್ಕೊಳ್ತೇನೆ!!” ಎಂದಿದ್ದರು. ಬಿಡುಗಡೆಯಾಗಿ ಬಂದಾಗ ಒಂದು ಆಶ್ಚರ್ಯ ಕಾದಿತ್ತು. ಅಪ್ಪನ ವಿರೋಧವಿದ್ದರೂ ಕುಟುಂಬದಲ್ಲಿ ಏಳು ಮಂದಿ ಕೂಟಗಳಿಗೆ ಹೋಗುತ್ತಿದ್ದರು. ಒಬ್ಬ ತಂಗಿಯ ದೀಕ್ಷಾಸ್ನಾನವೂ ಆಗಿತ್ತು.
1950ರಲ್ಲಿ ಕೊರಿಯನ್ ಯುದ್ಧ ಶುರುವಾಯಿತು. ಫೋರ್ಟ್ ಹೇಸ್‌ನಲ್ಲಿ ಸೇನೆಗೆ ಸೇರಲು ನನಗೆ ಎರಡನೇ ಸಲ ಕರೆ ಬಂತು. ನಾನಲ್ಲಿಗೆ ಹೋದೆ. ನನ್ನ ಸಾಮರ್ಥ್ಯಗಳ ಪರೀಕ್ಷೆ ನಡೆಸಿದ ನಂತರ ಸೇನೆಯ ಅಧಿಕಾರಿಯೊಬ್ಬರು, “ನಿನ್ನ ಗುಂಪಿನಲ್ಲಿರೋ ಎಲ್ಲರಿಗಿಂತ ನಿನಗೆ ಹೆಚ್ಚು ಅಂಕ ಸಿಕ್ಕಿದೆ” ಎಂದರು. 2 ತಿಮೊಥೆಯ 2:3ನ್ನು ಉಲ್ಲೇಖಿಸುತ್ತಾ, “ನಾನು ಈಗಾಗಲೇ ಕ್ರಿಸ್ತನ ಸೈನಿಕ” ಎಂದೆ. ಅಧಿಕಾರಿ ತುಂಬ ಹೊತ್ತು ಸುಮ್ಮನಿದ್ದು ನಂತರ, “ನೀನೀಗ ಹೋಗಬಹುದು” ಎಂದರು.
ನಾನದಕ್ಕೆ “ಹೌದಾ ಸರ್, ಆದರೂ ಸೇನೆಗೆ ಸೇರಲ್ಲ” ಎಂದೆ. ನಂತರಸ್ವಲ್ಪ ಸಮಯದಲ್ಲೇ ನಾನು ಸಿನ್‌ಸಿನ್ಯಾಟಿ ಅಧಿವೇಶನದಲ್ಲಿ ಬೆತೆಲ್ ಕೂಟಕ್ಕೆ ಹಾಜರಾದೆ. ರಾಜ್ಯಕ್ಕಾಗಿ ಶ್ರಮಪಟ್ಟು ಕೆಲಸ ಮಾಡಲು ಮನಸ್ಸಿರುವ ಸಹೋದರರು ಬೆತೆಲ್‌ನಲ್ಲಿ ಬೇಕಾಗಿದ್ದಾರೆಂದು ಸಹೋದರ ಮಿಲ್ಟನ್ ಹೆನ್ಶೆಲ್ ಹೇಳಿದರು. ಬೆತೆಲ್ ಸೇವೆಗಾಗಿ ಅರ್ಜಿ ಹಾಕಿದೆ. ಆಮಂತ್ರಣ ಸಿಕ್ಕಿತು. 1954ರ ಆಗಸ್ಟ್‌ನಲ್ಲಿ ಬ್ರೂಕ್ಲಿನ್ ಬೆತೆಲಿನಲ್ಲಿ ಸೇವೆ ಆರಂಭಿಸಿದೆ. ಅಂದಿನಿಂದ ಇಲ್ಲೇ ಸೇವೆ ಮಾಡುತ್ತಿದ್ದೇನೆ.
ಬೆತೆಲಿನಲ್ಲಿ ನನಗೆ ಮಾಡಲು ತುಂಬ ಕೆಲಸ ಇದೆ. ಹಲವಾರು ವರ್ಷಗಳ ತನಕ ಪ್ರಿಂಟರಿ, ಆಫೀಸ್ ಕಟ್ಟಡಗಳಲ್ಲಿನ ಬಾಯ್ಲರ್‌ಗಳನ್ನು ನೋಡಿಕೊಳ್ಳುತ್ತಿದ್ದೆ. ಯಂತ್ರಗಳನ್ನು, ಬೀಗಗಳನ್ನು ರಿಪೇರಿ ಮಾಡುತ್ತಿದ್ದೆ. ನ್ಯೂ ಯಾರ್ಕ್‌ನಲ್ಲಿರುವ ಸಮ್ಮೇಳನ ಸಭಾಂಗಣಗಳಲ್ಲಿಯೂ ಕೆಲಸ ಮಾಡಿದೆ.
ಬೆತೆಲಿನಲ್ಲಿ ನಡೆಯುವ ಬೆಳಗ್ಗಿನ ಆರಾಧನೆ, ಕಾವಲಿನಬುರುಜು ಅಧ್ಯಯನ ನನಗೆ ತುಂಬ ಇಷ್ಟ. ಸಭೆಯ ಜೊತೆ ಸೇವೆ ಮಾಡುವುದು ಕೂಡ ನನಗಿಷ್ಟ. ನಿಜ ಹೇಳಬೇಕೆಂದರೆ ಈ ವಿಷಯಗಳು ಯೆಹೋವನ ಸಾಕ್ಷಿಗಳ ಪ್ರತಿಯೊಂದು ಕುಟುಂಬ ತಪ್ಪದೇ ಮಾಡಲೇಬೇಕು. ಹೆತ್ತವರು, ಮಕ್ಕಳು ಕೂಡಿ ದಿನದ ವಚನ ಚರ್ಚಿಸಿ, ತಪ್ಪದೇ ಕುಟುಂಬ ಆರಾಧನೆ ಮಾಡಿ, ಸಭಾ ಕೂಟಗಳಲ್ಲಿ ಹಾಗೂ ಸೇವೆಯಲ್ಲಿ ಪೂರ್ಣವಾಗಿ ಭಾಗವಹಿಸಿದರೆ ಎಲ್ಲರೂ ಯೆಹೋವನಿಗೆ ಆಪ್ತರಾಗಿರುತ್ತಾರೆ.
ಬೆತೆಲ್‌ನಲ್ಲಿ, ಸಭೆಯಲ್ಲಿ ನನಗೆ ಅನೇಕ ಸ್ನೇಹಿತರಿದ್ದಾರೆ. ಕೆಲವರು ಅಭಿಷಿಕ್ತರಾಗಿದ್ದು ಈಗಾಗಲೇ ಸ್ವರ್ಗಕ್ಕೆ ಹೋಗಿದ್ದಾರೆ. ಇನ್ನು ಕೆಲವರು ಅಭಿಷಿಕ್ತರಲ್ಲ. ಆದರೆ ಎಲ್ಲ ಯೆಹೋವನ ಸಾಕ್ಷಿಗಳು, ಬೆತೆಲ್‌ನಲ್ಲಿ ಇರುವವರು ಸಹ ಅಪರಿಪೂರ್ಣರು. ಯಾರೊಟ್ಟಿಗಾದರೂ ಜಗಳವಾದರೆ ಅವರ ಜೊತೆ ಶಾಂತಿಮಾಡಲು ಯಾವಾಗಲೂ ಪ್ರಯತ್ನಿಸುತ್ತೇನೆ. ಮತ್ತಾಯ 5:23, 24ರ ಬಗ್ಗೆ ಯೋಚಿಸಿ ಮನಸ್ತಾಪಗಳನ್ನು ಸರಿಪಡಿಸುತ್ತೇನೆ. ಕ್ಷಮೆ ಕೇಳೋದು ಸುಲಭವಲ್ಲವಾದರೂ ಅದರಿಂದ ಹೆಚ್ಚಿನ ಸಮಸ್ಯೆಗಳು ಬಗೆಹರಿದಿವೆ.
ಉತ್ತಮ ಫಲಿತಾಂಶಗಳು
ನನಗೀಗ ವಯಸ್ಸಾಗಿದೆ. ಮನೆಮನೆ ಸೇವೆ ತುಂಬ ಕಷ್ಟ. ಆದರೂ ಆದಷ್ಟು ಮಟ್ಟಿಗೆ ಸಾರುತ್ತೇನೆ. ಮ್ಯಾಂಡರೀನ್ ಚೈನೀಸ್ ಭಾಷೆಯನ್ನು ಸ್ವಲ್ಪ ಕಲಿತಿದ್ದೇನೆ. ಬೀದಿ ಸಾಕ್ಷಿಕಾರ್ಯದಲ್ಲಿ ಚೈನೀಸ್ ಜನರೊಟ್ಟಿಗೆ ಮಾತಾಡುವುದು ನನಗೆ ತುಂಬ ಖುಷಿ. ಕೆಲವೊಮ್ಮೆ 30-40 ಪತ್ರಿಕೆಗಳನ್ನು ಆಸಕ್ತ ಜನರಿಗೆ ನೀಡಿದ್ದೇನೆ.
ನಾನು ಚೀನಾದಲ್ಲಿ ಒಂದು ಪುನರ್ಭೇಟಿ ಸಹ ಮಾಡಿದ್ದೇನೆ! ಹೇಗೆ ಗೊತ್ತಾ? ಒಂದು ದಿನ, ಹಣ್ಣಿನಂಗಡಿಯ
ಜಾಹೀರಾತು ಪತ್ರ ಹಂಚುತ್ತಿದ್ದ ಚೈನೀಸ್ ಹುಡುಗಿ ನನ್ನ ಮುಂದಿನಿಂದ ಹೋದಳು. ನನ್ನನ್ನು ನೋಡಿ ನಸುನಗೆ ಬೀರಿದಳು. ನಾನೂ ನಗುತ್ತಾ ಚೈನೀಸ್ ಭಾಷೆಯಲ್ಲಿ ಕಾವಲಿನಬುರುಜು, ಎಚ್ಚರ! ಪತ್ರಿಕೆಗಳನ್ನು ನೀಡಿದೆ. ಅವಳು ತಕ್ಕೊಂಡಳು. ತನ್ನ ಹೆಸರು ಕೇಟಿ ಎಂದಳು. ಆಮೇಲೆ ನನ್ನನ್ನು ನೋಡಿದಾಗಲೆಲ್ಲ ಕೇಟಿ ಬಂದು ಮಾತಾಡುತ್ತಿದ್ದಳು. ಹಣ್ಣು-ತರಕಾರಿಗಳ ಹೆಸರುಗಳನ್ನು ಅವಳಿಗೆ ಇಂಗ್ಲಿಷ್‌ನಲ್ಲಿ ಹೇಳಿಕೊಟ್ಟೆ. ನಾನು ಹೇಳಿದ ಆ ಪದಗಳನ್ನೇ ಪುನರುಚ್ಚರಿಸಿ ಕಲಿಯುತ್ತಿದ್ದಳು. ಬೈಬಲ್ ವಚನಗಳನ್ನೂ ನಾನು ವಿವರಿಸಿ ಹೇಳಿದೆ. ಅವಳು ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ತಕ್ಕೊಂಡಳು. ಹೀಗೆ ಕೆಲವು ವಾರ ಮಾತಾಡಿದೆವು. ನಂತರ ಅವಳ ಪತ್ತೆಯೇ ಇರಲಿಲ್ಲ.ಕೆಲವು ತಿಂಗಳ ನಂತರ ಜಾಹೀರಾತು ಪತ್ರ ಹಂಚುತ್ತಿದ್ದ ಮತ್ತೊಂದು ಹುಡುಗಿಗೆ ಪತ್ರಿಕೆಗಳನ್ನು ಕೊಟ್ಟೆ. ಮುಂದಿನ ವಾರ ಸಿಕ್ಕಿದಾಗ ಅವಳು ತನ್ನ ಮೊಬೈಲನ್ನು ನನಗೆ ಕೊಟ್ಟು, “ಚೀನಾದಿಂದ ನಿಮಗೆ ಕರೆ ಬಂದಿದೆ” ಎಂದಳು. ನಾನು ಆಶ್ಚರ್ಯದಿಂದ, “ಚೀನಾದಲ್ಲಿ ನನಗ್ಯಾರು ಗೊತ್ತಿಲ್ಲವಲ್ಲಾ!” ಎಂದೆ. ಆದರೂ ಅವಳು ಒತ್ತಾಯಿಸಿದ್ದರಿಂದ ಫೋನ್ ತಕ್ಕೊಂಡು, “ಹಲೋ, ನಾನು ರಾಬಿಸನ್ ಮಾತಾಡೋದು” ಎಂದೆ. ಆ ಕಡೆಯಿಂದ ಧ್ವನಿಯು ಹೇಳಿದ್ದು: “ರಾಬಿ, ನಾನು ಕೇಟಿ ಮಾತಾಡೋದು. ನಾನು ಚೀನಾದಲ್ಲಿದ್ದೇನೆ ಗೊತ್ತಾ?” ನಾನದಕ್ಕೆ, “ಚೀನಾದಲ್ಲಾ?” ಅಂತ ಕೇಳಿದೆ. ಕೇಟಿ ಉತ್ತರಿಸಿದ್ದು: “ಹೌದು ರಾಬಿ. ನಿನಗೆ ಫೋನ್ ಕೊಟ್ಟವಳು ಯಾರು ಗೊತ್ತಾ? ಅವಳು ನನ್ನ ತಂಗಿ. ನೀನು ನನಗೆ ಎಷ್ಟೋ ಒಳ್ಳೇ ವಿಷಯಗಳನ್ನು ಕಲಿಸಿದ್ದಿ, ಅವಳಿಗೂ ದಯವಿಟ್ಟು ಕಲಿಸಿಕೊಡು.” ನಾನಾಗ, “ಕೇಟಿ, ನನ್ನಿಂದಾದಷ್ಟು ಕಲಿಸುತ್ತೇನೆ. ಎಲ್ಲಿದ್ದಿಯಾ ಅಂತ ಹೇಳಿದ್ದಕ್ಕೆ ತುಂಬ ಥ್ಯಾಂಕ್ಸ್” ಎಂದೆ. ನಂತರ ನಾನು ಕೇಟಿಯ ತಂಗಿಯೊಟ್ಟಿಗೆ ಮಾತನಾಡಿದೆ. ಆದರೆ ಅದೇ ಕೊನೆ ಸಲ. ಆ ಇಬ್ಬರೂ ಹುಡುಗಿಯರು ಎಲ್ಲಿದ್ದರೂ ಸರಿ ಯೆಹೋವನ ಬಗ್ಗೆ ಕಲಿಯಬೇಕೆನ್ನುವುದು ನನ್ನ ಹಾರೈಕೆ.
73 ವರ್ಷಗಳಿಂದ ಯೆಹೋವನ ಈ ಪವಿತ್ರ ಸೇವೆಯೇ ನನ್ನ ಕೆಲಸವಾಗಿದೆ. ಯುದ್ಧದಲ್ಲಿ ಭಾಗವಹಿಸದಿರಲು, ಜೈಲಿನಲ್ಲೂ ನಂಬಿಗಸ್ತನಾಗಿರಲು ಆತನು ನನಗೆ ಸಹಾಯ ಮಾಡಿದಕ್ಕಾಗಿ ತುಂಬ ಸಂತೋಷಪಡುತ್ತೇನೆ. ಅಷ್ಟೇ ಅಲ್ಲ, ನನ್ನ ಒಡಹುಟ್ಟಿದವರು ಆಗಾಗ ಏನು ಹೇಳುತ್ತಾರೆಂದರೆ ಅಪ್ಪ ವಿರೋಧಿಸಿದಾಗಲೂ ನಾನು ಬಿಟ್ಟುಕೊಡದೇ ಇದ್ದದ್ದನ್ನು ನೋಡಿ ಅವರಿಗೆ ಧೈರ್ಯ ಬಂತು. ಅಮ್ಮ ಮತ್ತು ಒಡಹುಟ್ಟಿದವರಲ್ಲಿ ಆರು ಮಂದಿ ಸಮಯಾನಂತರ ದೀಕ್ಷಾಸ್ನಾನ ಪಡೆದರು. ಅಪ್ಪ ಕೂಡ ಸ್ವಲ್ಪ ಬದಲಾದರು. ತೀರಿಹೋಗುವ ಮುಂಚೆ ಕೆಲವು ಕೂಟಗಳಿಗೂ ಬಂದರು.
ತೀರಿಹೋದ ನನ್ನ ಬಂಧುಮಿತ್ರರು ದೇವರ ಚಿತ್ತವಿದ್ದರೆ ಹೊಸ ಲೋಕದಲ್ಲಿ ಜೀವಿತರಾಗಿ ಎದ್ದುಬರುವರು. ಆಗ ನಮ್ಮ ಪ್ರಿಯ ಜನರೊಟ್ಟಿಗೆ ಯೆಹೋವನನ್ನು ಎಂದೆಂದಿಗೂ ಆರಾಧಿಸುವುದರಲ್ಲಿ ಸಿಗುವ ಸಂತೋಷವನ್ನು ಊಹಿಸಲು ಅಸಾಧ್ಯ! *
^ ಪ್ಯಾರ. 14 ಕೆಲವು ದೇಶಗಳಲ್ಲಿ ಜೂರಿ ಅಂದರೆ ತೀರ್ಪುಗಾರರ ಮಂಡಲಿ ಇದೆ. ಸಾರ್ವಜನಿಕರಲ್ಲಿ ಕೆಲವರನ್ನು ಆ ಮಂಡಲಿಗೆ ಆಯ್ಕೆಮಾಡಲಾಗುತ್ತದೆ. ಇವರು ಕೋರ್ಟಿನಲ್ಲಿ ವಾದಪ್ರತಿವಾದ ಕೇಳಿಸಿಕೊಂಡು ಆರೋಪಿಯು ಅಪರಾಧಿಯಾ ಇಲ್ಲವಾ ಎಂಬ ತಮ್ಮ ತೀರ್ಪನ್ನು ನ್ಯಾಯಾಧೀಶರಿಗೆ ತಿಳಿಸುತ್ತಾರೆ.
^ ಪ್ಯಾರ. 32 ಯೆಹೋವನಿಗೆ ನಂಬಿಗಸ್ತರಾಗಿದ್ದ ಕಾರ್ವಿನ್ ರಾಬಿಸನ್ ಈ ಲೇಖನ ಮುದ್ರಣಕ್ಕೆ ಸಿದ್ಧವಾಗುತ್ತಿದ್ದಾಗ ತೀರಿಹೋದರು.