ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ನಾವು ದೇವರ ಅಪಾತ್ರ ದಯೆಯನ್ನು ಅನೇಕ ವಿಧಗಳಲ್ಲಿ ಅನುಭವಿಸಿದೆವು

ನಾವು ದೇವರ ಅಪಾತ್ರ ದಯೆಯನ್ನು ಅನೇಕ ವಿಧಗಳಲ್ಲಿ ಅನುಭವಿಸಿದೆವು

ನನ್ನ ತಂದೆ ಆರ್ತರ್‌ಗೆ ದೇವರ ಮೇಲೆ ತುಂಬ ಪ್ರೀತಿ ಇತ್ತು. ಹಾಗಾಗಿ ಮೆತೊಡಿಸ್ಟ್‌ ಪಾದ್ರಿ ಆಗಬೇಕಂತ ಯುವಕರಾಗಿದ್ದಾಗ ಆಸೆ ಇಟ್ಟುಕೊಂಡಿದ್ದರು. ಆದರೆ ಬೈಬಲ್‌ ವಿದ್ಯಾರ್ಥಿಗಳ ಕೆಲವೊಂದು ಸಾಹಿತ್ಯವನ್ನು ಓದಿದ ನಂತರ ಮನಸ್ಸು ಬದಲಾಯಿಸಿಕೊಂಡರು. ಆ ಗುಂಪಿನ ಜೊತೆ ಸೇರಿದರು. 1914⁠ರಲ್ಲಿ 17 ವರ್ಷ ಪ್ರಾಯದಲ್ಲಿ ದೀಕ್ಷಾಸ್ನಾನ ಪಡೆದರು. ಒಂದನೇ ಮಹಾ ಯುದ್ಧದ ಸಮಯದಲ್ಲಿ ಅವರಿಗೆ ಮಿಲಿಟರಿ ಸೇರುವಂತೆ ಅಪ್ಪಣೆ ಬಂತು. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ಹಾಗಾಗಿ ಅವರನ್ನು ಕೆನಡದ ಆಂಟೇರಿಯೋದಲ್ಲಿನ ಕಿಂಗ್ಸ್‌ಟನ್‌ ಕಾರಾಗೃಹದಲ್ಲಿ ಹತ್ತು ತಿಂಗಳ ಸೆರೆವಾಸದ ಶಿಕ್ಷೆ ಕೊಡಲಾಯಿತು. ಅವರು ಅಲ್ಲಿಂದ ಬಿಡುಗಡೆಯಾಗಿ ಬಂದ ಮೇಲೆ ಕಾಲ್ಪೋರ್ಟರ್‌ (ಪಯನೀಯರ್‌) ಆದರು.

1926⁠ರಲ್ಲಿ ನನ್ನ ತಂದೆ ಹೇಜಲ್‌ ವಿಲ್ಕಿನ್ಸನ್‌ ಎಂಬವರನ್ನು ಮದುವೆಯಾದರು. ಇವರ ತಾಯಿ 1908⁠ರಲ್ಲೇ ಸತ್ಯವನ್ನು ಕಲಿತಿದ್ದರು. ನನ್ನ ತಂದೆತಾಯಿಗೆ ನಾಲ್ಕು ಮಂದಿ ಮಕ್ಕಳು. ನಾನು ಎರಡನೆಯವನು. ನಾನು ಹುಟ್ಟಿದ್ದು 1931 ಏಪ್ರಿಲ್‌ 24⁠ರಂದು. ನನ್ನ ತಂದೆಗೆ ಬೈಬಲ್‌ ಬಗ್ಗೆ ತುಂಬ ಪ್ರೀತಿಗೌರವ ಇತ್ತು. ಅದೇ ಭಾವನೆಯನ್ನು ನಮ್ಮಲ್ಲೂ ಬೆಳೆಸಿದರು. ನಮ್ಮ ಬದುಕಲ್ಲಿ ಯೆಹೋವನ ಆರಾಧನೆಯೇ ಎಲ್ಲಕ್ಕಿಂತ ಮುಖ್ಯವಾಗಿತ್ತು. ನಾವು ಕುಟುಂಬವಾಗಿ ಮನೆಯಿಂದ ಮನೆಗೆ ಸಾರಲು ತಪ್ಪದೇ ಹೋಗುತ್ತಿದ್ದೆವು.—ಅ. ಕಾ. 20:20.

ತಂದೆ ಹಾಗೆ ತಟಸ್ಥನಾಗಿದ್ದೆ, ಪಯನೀಯರನೂ ಆದೆ

1939⁠ರಲ್ಲಿ ಎರಡನೇ ಮಹಾ ಯುದ್ಧ ಶುರುವಾಯಿತು. ಮುಂದಿನ ವರ್ಷ ಕೆನಡದಲ್ಲಿ ಯೆಹೋವನ ಸಾಕ್ಷಿಗಳ ಕೆಲಸದ ಮೇಲೆ ಸರ್ಕಾರ ನಿಷೇಧ ಹಾಕಿತು. ಶಾಲಾ ಮಕ್ಕಳು ತರಗತಿಯಲ್ಲಿ ಧ್ವಜವಂದನೆ ಮಾಡಬೇಕಿತ್ತು, ರಾಷ್ಟ್ರಗೀತೆ ಹಾಡಬೇಕಿತ್ತು. ಇಂಥ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಶಿಕ್ಷಕರು ನನ್ನನ್ನೂ ನನ್ನ ಅಕ್ಕ ಡಾರಥಿಯನ್ನೂ ತರಗತಿಯಿಂದ ಹೊರಗೆ ಹೋಗುವಂತೆ ಹೇಳುತ್ತಿದ್ದರು. ಆದರೆ ಒಂದು ದಿನ ನನ್ನ ಶಿಕ್ಷಕಿ ತಟ್ಟನೆ ಎಲ್ಲರ ಮುಂದೆ ನನ್ನನ್ನು ಹೇಡಿ ಅಂತ ಕರೆದು ಅವಮಾನಿಸಲು ಪ್ರಯತ್ನಿಸಿದರು. ನನ್ನ ಜೊತೆ ಓದುತ್ತಿದ್ದ ಮಕ್ಕಳು ಆ ದಿನ ಶಾಲೆ ಮುಗಿದ ನಂತರ ನನ್ನನ್ನು ಹೊಡೆದು ನೆಲಕ್ಕೆ ದೂಡಿದರು. ನಾನು ಇದಕ್ಕೆಲ್ಲ ಹೆದರಲಿಲ್ಲ. ‘ಮನುಷ್ಯರಿಗಿಂತ ಹೆಚ್ಚಾಗಿ ದೇವರಿಗೆ ವಿಧೇಯರಾಗಬೇಕು’ ಎಂಬ ನನ್ನ ನಿರ್ಧಾರ ಇನ್ನಷ್ಟು ಗಟ್ಟಿಯಾಯಿತು.—ಅ. ಕಾ. 5:29.

1942⁠ರ ಜುಲೈ ತಿಂಗಳಲ್ಲಿ ನನ್ನ ದೀಕ್ಷಾಸ್ನಾನವಾಯಿತು. ಒಂದು ಫಾರ್ಮ್‌ನಲ್ಲಿದ್ದ ನೀರಿನ ತೊಟ್ಟಿಯಲ್ಲಿ ಇದನ್ನು ಕೊಡಲಾಯಿತು. ನನಗಾಗ 11 ವರ್ಷ. ಪ್ರತಿ ವರ್ಷ ಶಾಲೆಗೆ ರಜೆ ಸಿಕ್ಕಿದಾಗೆಲ್ಲ ನಾನು ‘ವೆಕೇಷನ್‌ ಪಯನೀಯರ್‌’ (ಈಗ ಸಹಾಯಕ ಪಯನೀಯರ್‌) ಸೇವೆ ಮಾಡುತ್ತಿದ್ದೆ. ಹೀಗೆ ಒಂದು ಸಲ ನಾನು ಮೂವರು ಸಹೋದರರ ಜೊತೆ ಸೇರಿ ಆಂಟೇರಿಯೋವಿನ ಉತ್ತರ ಭಾಗದಲ್ಲಿ ಪಯನೀಯರ್‌ ಸೇವೆ ಮಾಡಿದೆ. ಅಲ್ಲಿ ಮರ ಕಡಿಯುವ ಕೆಲಸಮಾಡುತ್ತಿದ್ದವರಿಗೆ ಸಾರಿದೆವು.

1949 ಮೇ 1⁠ರಂದು ಪಯನೀಯರನಾದೆ. ನಂತರ ನನ್ನನ್ನು ಕೆನಡದ ಶಾಖೆಯಲ್ಲಿ ನಡೆಯುತ್ತಿದ್ದ ನಿರ್ಮಾಣ ಕೆಲಸದಲ್ಲಿ ಸಹಾಯಮಾಡಲು ಕರೆಯಲಾಯಿತು. ಆಮೇಲೆ ಅಲ್ಲೇ ಬೆತೆಲ್‌ ಕುಟುಂಬದ ಸದಸ್ಯನಾದೆ. ನನ್ನನ್ನು ಮುದ್ರಣ ಇಲಾಖೆಗೆ ನೇಮಿಸಲಾಯಿತು. ಅಲ್ಲಿದ್ದ ಫ್ಲ್ಯಾಟ್‌ಬೆಡ್‌ ಮುದ್ರಣಯಂತ್ರ ಬಳಸಿ ಮುದ್ರಣ ಮಾಡಲು ಕಲಿತೆ. ಕೆನಡದಲ್ಲಿ ಯೆಹೋವನ ಜನರು ಎದುರಿಸುತ್ತಿದ್ದ ಹಿಂಸೆ, ವಿರೋಧದ ಕುರಿತ ಕರಪತ್ರಗಳನ್ನು ಮುದ್ರಿಸಲು ಎಷ್ಟೋ ವಾರಗಳ ವರೆಗೆ ರಾತ್ರಿಯಿಡೀ ಕೆಲಸಮಾಡಿದ್ದು ನನಗೀಗಲೂ ನೆನಪಿದೆ.

ಮುಂದೆ ನಾನು ಸರ್ವಿಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸಮಾಡಿದೆ. ಒಮ್ಮೆ ನನಗೆ ಕೆನಡದ ಶಾಖೆಯನ್ನು ನೋಡಲು ಬಂದಿದ್ದ ಕೆಲವು ಪಯನೀಯರರೊಟ್ಟಿಗೆ ಮಾತಾಡುವಂತೆ ಹೇಳಲಾಯಿತು. ಇವರು ಕಠಿನ ವಿರೋಧ, ಹಿಂಸೆಯಿದ್ದ ಕ್ವಿಬೆಕ್‌ನಲ್ಲಿ ಸೇವೆಮಾಡಲು ಹೋಗಲಿದ್ದರು. ಇವರಲ್ಲಿ ಮೇರಿ ಜಾಜುಲ ಎಂಬ ಸಹೋದರಿ ಇದ್ದಳು. ಅವಳು ಆಲ್ಬರ್ಟಾ ಪ್ರಾಂತ್ಯದ ಎಡ್ಮಂಟನ್‌ ನಗರದವಳು. ಅವಳ ಹೆತ್ತವರು ಆರ್ತೊಡಾಕ್ಸ್‌ ಚರ್ಚಿನ ಸದಸ್ಯರು. ಮೇರಿ ಮತ್ತವಳ ಅಣ್ಣ ಬೈಬಲ್‌ ಅಧ್ಯಯನ ಮಾಡುವುದನ್ನು ನಿಲ್ಲಿಸದಿದ್ದಾಗ ಅವರ ಹೆತ್ತವರು ಅವರಿಬ್ಬರನ್ನೂ ಮನೆಯಿಂದ ಹೊರಗೆ ಹಾಕಿದ್ದರು. ಇಬ್ಬರೂ 1951⁠ರ ಜೂನ್‌ ತಿಂಗಳಲ್ಲಿ ದೀಕ್ಷಾಸ್ನಾನಪಡೆದು ಆರು ತಿಂಗಳ ನಂತರ ಪಯನೀಯರ್‌ ಸೇವೆ ಆರಂಭಿಸಿದ್ದರು. ಮೇರಿಗೆ ಯೆಹೋವನ ಮೇಲೆ ತುಂಬ ಪ್ರೀತಿಯಿದೆಯೆಂದು ಸಂದರ್ಶನ ಮಾಡಿದಾಗ ನನಗೆ ಗೊತ್ತಾಯಿತು. ಅವಳನ್ನು ಮದುವೆಯಾಗಬೇಕು ಎಂಬ ಯೋಚನೆ ಬಂತು. ಒಂಬತ್ತು ತಿಂಗಳ ನಂತರ ಅಂದರೆ 1954 ಜನವರಿ 30⁠ರಂದು ಮದುವೆಯಾದೆವು! ನಮ್ಮ ಮದುವೆಯಾಗಿ ಒಂದು ವಾರವಾದ ನಂತರ ನಮ್ಮಿಬ್ಬರನ್ನು ಸರ್ಕಿಟ್‌ ಕೆಲಸದ ತರಬೇತಿ ಪಡೆಯಲು ಕರೆಯಲಾಯಿತು. ಮುಂದಿನ ಎರಡು ವರ್ಷ ನಾವು ಆಂಟೇರಿಯೋವಿನ ಉತ್ತರ ಭಾಗದಲ್ಲಿ ಸರ್ಕಿಟ್‌ ಕೆಲಸ ಮಾಡಿದೆವು.

ಲೋಕದಲ್ಲೆಲ್ಲಾ ಸಾರುವ ಕೆಲಸ ಹೆಚ್ಚಾಗುತ್ತಾ ಹೋದಂತೆ ಹೆಚ್ಚೆಚ್ಚು ಮಿಷನರಿಗಳ ಅಗತ್ಯಬಿತ್ತು. ಕೆನಡದ ಕೊರೆಯುವ ಚಳಿಗಾಲವನ್ನು, ಬೇಸಗೆಕಾಲದಲ್ಲಿನ ಸೊಳ್ಳೆಗಳ ಕಾಟವನ್ನು ಸಹಿಸಿರುವ ನಾವು ಲೋಕದ ಯಾವುದೇ ಪ್ರದೇಶಕ್ಕೆ ಹೋಗಿ ಜೀವಿಸಸಾಧ್ಯವೆಂದು ನೆನಸಿದೆವು. ಗಿಲ್ಯಡ್‌ ಶಾಲೆಯ 27⁠ನೇ ತರಗತಿಗೆ ಹಾಜರಾದೆವು. 1956⁠ರ ಜುಲೈ ತಿಂಗಳಲ್ಲಿ ನಮ್ಮ ಪದವಿಪ್ರಾಪ್ತಿಯಾಯಿತು. ನವೆಂಬರ್‌ ತಿಂಗಳೊಳಗೆ ಬ್ರೆಜಿಲ್‌ನಲ್ಲಿದ್ದೆವು. ಇದೇ ನಮ್ಮ ಹೊಸ ನೇಮಕದ ಕ್ಷೇತ್ರವಾಗಿತ್ತು.

ಬ್ರೆಜಿಲ್‌ನಲ್ಲಿ ಮಿಷನರಿ ಸೇವೆ

ನಾವು ಬ್ರೆಜಿಲ್‌ ತಲಪಿದ ಮೇಲೆ ಪೋರ್ಚುಗೀಸ್‌ ಭಾಷೆ ಕಲಿಯಲಾರಂಭಿಸಿದೆವು. ಮೊದಲು ನಾವು ಜನರೊಟ್ಟಿಗೆ ಸಂಭಾಷಣೆ ಆರಂಭಿಸುವ ಸರಳ ವಿಧಾನಗಳನ್ನು ಕಲಿತೆವು. ಪತ್ರಿಕೆ ನೀಡಲಿಕ್ಕಾಗಿ ಒಂದು ಪುಟ್ಟ ನಿರೂಪಣೆಯನ್ನು ಬಾಯಿಪಾಠ ಮಾಡಿದೆವು. ಯಾರಾದರೂ ಆಸಕ್ತಿ ತೋರಿಸಿದರೆ ದೇವರ ರಾಜ್ಯದಲ್ಲಿ ಜೀವನ ಹೇಗಿರುತ್ತದೆ ಅಂತ ತೋರಿಸುವ ಒಂದು ವಚನ ಓದಲು ನಿರ್ಧರಿಸಿದೆವು. ಆಮೇಲೆ ಮೊದಲ ಬಾರಿ ಸೇವೆಗೆ ಹೋದೆವು. ಆಗ ನಮಗೆ ಭೇಟಿಯಾದ ಒಬ್ಬ ಮಹಿಳೆ ನಾವು ಹೇಳುತ್ತಿದ್ದ ವಿಷಯದಲ್ಲಿ ಆಸಕ್ತಿ ತೋರಿಸಿದಳು. ಅವಳಿಗೆ ಪ್ರಕಟನೆ 21:3, 4 ಓದಿ ಹೇಳಿದೆ. ನಂತರ ಅಲ್ಲೇ ಪ್ರಜ್ಞೆತಪ್ಪಿ ಬಿದ್ದೆ! ಅಲ್ಲಿನ ಬೆವರಿಳಿಸುವಂಥ ಸೆಕೆಗೆ ನಾನಿನ್ನೂ ಒಗ್ಗಿಹೋಗಿರಲಿಲ್ಲ! ಮುಂದಕ್ಕೂ ಅಲ್ಲಿನ ಹವಾಮಾನ ನನಗೆ ಒಂದು ಸಮಸ್ಯೆ ಆಗಿಯೇ ಉಳಿಯಿತು.

ಬ್ರೆಜಿಲ್‌ನಲ್ಲಿ ನಮ್ಮನ್ನು ಕಾಂಪಸ್‌ ಎಂಬ ನಗರಕ್ಕೆ ನೇಮಿಸಲಾಯಿತು. ಅಲ್ಲಿ ಈಗ 15 ಸಭೆಗಳಿವೆ! ಆದರೆ ನಾವು ಮೊದಲ ಬಾರಿ ಅಲ್ಲಿ ಹೋದಾಗ ಒಂದೇ ಒಂದು ಚಿಕ್ಕ ಗುಂಪಿತ್ತು ಮತ್ತು ಮಿಷನರಿ ಗೃಹದಲ್ಲಿ ಎಸ್ತೇರ್‌ ಟ್ರೇಸಿ, ರಮೋನಾ ಬೌರ್‌, ಲೂಯಿಸಾ ಶ್ವಾರ್ಸ್‌, ಲೊರೆನ್‌ ಬ್ರೂಕ್ಸ್‌ (ಮದುವೆ ನಂತರ ವಾಲೆನ್‌) ಎಂಬ ನಾಲ್ಕು ಸಹೋದರಿಯರಿದ್ದರು. ಮಿಷನರಿ ಗೃಹದಲ್ಲಿ ನನಗೆ ಬಟ್ಟೆ ಒಗೆಯುವ, ಇಸ್ತ್ರಿಮಾಡುವ ಮತ್ತು ಸೌದೆ ತರುವ ಕೆಲಸವಿತ್ತು. ಒಮ್ಮೆ ಸೋಮವಾರ ರಾತ್ರಿ, ಕಾವಲಿನಬುರುಜು ಅಧ್ಯಯನದ ನಂತರ ಮೇರಿ ಸೋಫಾದಲ್ಲಿ ದಿಂಬಿನ ಮೇಲೆ ತಲೆಯಿಟ್ಟು ಹಾಗೆಯೇ ಸುಮ್ಮನೆ ಮಲಗಿದ್ದಳು. ದಿನವೆಲ್ಲ ಏನೆಲ್ಲ ನಡೆಯಿತೆಂದು ನಾವಿಬ್ಬರೂ ಮಾತಾಡುತ್ತಾ ಇದ್ದೆವು. ಮೇರಿ ಅಲ್ಲಿಂದ ಎದ್ದಾಗ ಆ ದಿಂಬಿನ ಕೆಳಗಿಂದ ಒಂದು ಹಾವು ಹೊರಗೆ ಬಂತು!! ಇಡೀ ಮನೆಯಲ್ಲಿ ಗದ್ದಲವೊ ಗದ್ದಲ! ಕೊನೆಗೆ ಹೇಗೊ ಅದನ್ನು ಕೊಂದುಬಿಟ್ಟೆ.

ಒಂದು ವರ್ಷದ ವರೆಗೆ ಪೋರ್ಚುಗೀಸ್‌ ಭಾಷೆ ಕಲಿತ ನಂತರ ಸರ್ಕಿಟ್‌ ಕೆಲಸ ಶುರುಮಾಡಿದೆವು. ನಾವು ಹೋದಂಥ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುಚ್ಛಕ್ತಿ ಇರುತ್ತಿರಲಿಲ್ಲ. ಚಾಪೆಗಳಲ್ಲಿ ಮಲಗುತ್ತಿದ್ದೆವು. ಕುದುರೆಬಂಡಿಯಲ್ಲಿ ಪ್ರಯಾಣಿಸುತ್ತಿದ್ದೆವು. ಒಮ್ಮೆ ನಾವು ರೈಲಿನಲ್ಲಿ ತುಂಬ ದೂರ ಪ್ರಯಾಣಮಾಡಿ ಪರ್ವತಪ್ರದೇಶದಲ್ಲಿದ್ದ ಒಂದು ಪಟ್ಟಣಕ್ಕೆ ಹೋಗಿ ಸಾರಿದೆವು. ಅಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ತೆಗೆದುಕೊಂಡೆವು. ಸೇವೆಯಲ್ಲಿ ವಿತರಿಸಲಿಕ್ಕೆಂದು ಶಾಖಾ ಕಚೇರಿ ನಮಗೆ 800 ಪತ್ರಿಕೆಗಳನ್ನು ಕಳುಹಿಸಿಕೊಟ್ಟಿತು. ಬಾಕ್ಸ್‌ಗಳಲ್ಲಿ ಬಂದಿದ್ದ ಈ ಪತ್ರಿಕೆಗಳನ್ನು ತರಲು ನಾವು ತುಂಬ ಸಲ ಅಂಚೆ ಕಛೇರಿಗೆ ಹೋಗಿ ಬರಬೇಕಾಯಿತು.

1962⁠ರಲ್ಲಿ ಬ್ರೆಜಿಲ್‌ ದೇಶದಲ್ಲೆಲ್ಲಾ ಸಹೋದರರು ಮತ್ತು ಮಿಷನರಿ ಸಹೋದರಿಯರಿಗಾಗಿ ‘ರಾಜ್ಯ ಶುಶ್ರೂಷಾ ಶಾಲೆ’ ನಡೆಯಿತು. ಆರು ತಿಂಗಳ ವರೆಗೆ ಮನೌಸ್‌, ಬೆಲೇಮ್‌, ಫೊರ್ಟಾಲಿಸ, ರೆಸಿಫೆ ಮತ್ತು ಸಾಲ್ವಡಾರ್‌ ಎಂಬ ಸ್ಥಳಗಳಲ್ಲಿ ನಡೆದ ಶಾಲೆಗಳಲ್ಲಿ ನಾನು ಕಲಿಸಿದೆ. ಈ ನೇಮಕವನ್ನು ಪೂರೈಸಲಿಕ್ಕಾಗಿ ನಾನು ಒಬ್ಬನೇ ಪ್ರಯಾಣಿಸಬೇಕಾಯಿತು. ಮನೌಸ್‌ನಲ್ಲಿದ್ದಾಗ ಒಂದು ಪ್ರಸಿದ್ಧ ಆಪೇರಾ ಹೌಸ್‌ನಲ್ಲಿ (ಸಂಗೀತನಾಟಕದ ಕಟ್ಟಡದಲ್ಲಿ) ಜಿಲ್ಲಾ ಅಧಿವೇಶನ ನಡೆಸಲಿಕ್ಕೂ ಏರ್ಪಾಡು ಮಾಡಿದೆ. ಭಾರೀ ಮಳೆಯಿಂದಾಗಿ ಕುಡಿಯಲಿಕ್ಕೆ ಶುದ್ಧ ನೀರು ಸಿಗಲಿಲ್ಲ. ಅಷ್ಟುಮಾತ್ರವಲ್ಲ ಅಧಿವೇಶನಕ್ಕೆ ಬಂದ ಸಹೋದರ ಸಹೋದರಿಯರು ಊಟಮಾಡಲಿಕ್ಕಾಗಿ (ಆ ಕಾಲದಲ್ಲಿ ಅಧಿವೇಶನಗಳಲ್ಲಿ ಊಟದ ವ್ಯವಸ್ಥೆ ಇರುತ್ತಿತ್ತು) ಒಳ್ಳೇ ಸ್ಥಳವೂ ಇರಲಿಲ್ಲ. ನಾನೊಬ್ಬ ಮಿಲಿಟರಿ ಆಫೀಸರ್‌ ಜೊತೆ ಮಾತಾಡಿ ನಮಗಿರುವ ಸಮಸ್ಯೆಯನ್ನು ವಿವರಿಸಿದೆ. ಅವರು ದಯೆ ತೋರಿಸಿ, ನಮ್ಮ ಇಡೀ ಅಧಿವೇಶನದ ಸಮಯದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು. ಕೆಲವು ಸೈನಿಕರನ್ನು ಕಳುಹಿಸಿ ಎರಡು ದೊಡ್ಡ ಡೇರೆಗಳನ್ನು ಅಲ್ಲಿ ಹಾಕಿಸಿದರು. ಅದನ್ನು ನಾವು ಅಡಿಗೆಕೋಣೆ ಮತ್ತು ಊಟಮಾಡುವ ಕೋಣೆಯಂತೆ ಬಳಸಿದೆವು.

ನಾನು ಹೀಗೆ ಬೇರೆ ಸ್ಥಳಗಳಿಗೆ ಹೋಗಿದ್ದಾಗ ಮೇರಿ ಒಂದು ವ್ಯಾಪಾರ ಕ್ಷೇತ್ರದಲ್ಲಿ ಸಾರಿದಳು. ಅಲ್ಲಿದ್ದ ಜನರು ಹಣ ಮಾಡಲಿಕ್ಕೆಂದು ಪೋರ್ಚುಗಲ್‌ನಿಂದ ಬ್ರೆಜಿಲ್‌ಗೆ ಬಂದಿದ್ದರು. ಯಾರಿಗೂ ಬೈಬಲ್‌ ಬಗ್ಗೆ ಮಾತಾಡಲು ಆಸಕ್ತಿಯೇ ಇರಲಿಲ್ಲ. ಮೇರಿಗೆ ಇದರಿಂದ ಎಷ್ಟು ಬೇಜಾರಾಯಿತೆಂದರೆ ತನ್ನ ಮಿತ್ರರಿಗೆ, “ಭೂಮಿಯಲ್ಲಿ ಯಾವ ಸ್ಥಳಕ್ಕೆ ಬೇಕಾದರೂ ಹೋಗ್ತೇನೆ, ಪೋರ್ಚುಗಲ್‌ಗಂತೂ ಹೋಗುವುದೇ ಇಲ್ಲ!” ಎಂದು ಹೇಳಿದಳು. ಇದಾಗಿ ಸ್ವಲ್ಪ ಸಮಯದಲ್ಲೇ ನಮಗೊಂದು ಹೊಸ ನೇಮಕದ ಪತ್ರ ಬಂತು. ನಮಗೆ ಪೋರ್ಚುಗಲ್‌ಗೆ ಹೋಗುವಂತೆ ಹೇಳಲಾಯಿತು. ಮೇರಿಗಂತೂ ದೊಡ್ಡ ಆಘಾತ! ಹಾಗಿದ್ದರೂ ಆ ನೇಮಕವನ್ನು ಸ್ವೀಕರಿಸಿ ಪೋರ್ಚುಗಲ್‌ಗೆ ಹೋದೆವು. ಅಲ್ಲಿ ನಮ್ಮ ಸಾರುವ ಕೆಲಸಕ್ಕೆ ನಿಷೇಧವಿತ್ತು.

ಪೋರ್ಚುಗಲ್‌ನಲ್ಲಿ ನಮ್ಮ ನೇಮಕ

1964⁠ರ ಆಗಸ್ಟ್‌ ತಿಂಗಳಲ್ಲಿ ನಾವು ಪೋರ್ಚುಗಲ್‌ನ ಲಿಸ್ಬನ್‌ ತಲಪಿದೆವು. ಅಲ್ಲಿದ್ದ ಗುಪ್ತ ಪೊಲೀಸರು ನಮ್ಮ ಸಹೋದರರಿಗೆ ತುಂಬ ತೊಂದರೆ ಕೊಡುತ್ತಿದ್ದರು. ಆದ್ದರಿಂದ ನಾವು ತಲಪಿದ ಕೂಡಲೇ ಅಲ್ಲಿನ ಸಾಕ್ಷಿಗಳನ್ನು ಸಂಪರ್ಕಿಸಲಿಲ್ಲ. ಮೊದಲು ನಾವು ಒಂದು ಕೋಣೆಯನ್ನು ಬಾಡಿಗೆಗೆ ತೆಗೆದುಕೊಂಡೆವು. ನಮ್ಮ ವೀಸಾ ಸಿಕ್ಕಿದ ನಂತರ ಒಂದು ಅಪಾರ್ಟ್‌ಮೆಂಟ್‌ ಅನ್ನು ಬಾಡಿಗೆಗೆ ತಕ್ಕೊಂಡೆವು. ಐದು ತಿಂಗಳು ಕಳೆದ ನಂತರ ಶಾಖಾ ಕಚೇರಿಯಲ್ಲಿದ್ದ ಸಹೋದರರನ್ನು ಸಂಪರ್ಕಿಸಿದೆವು. ಕೊನೆಗೂ ನಾವೊಂದು ಕೂಟಕ್ಕೆ ಹೋಗಲು ಸಾಧ್ಯವಾಯಿತು. ಆಗ ನಮಗಾದ ಸಂತೋಷ ಅಷ್ಟಿಷ್ಟಲ್ಲ!

ನಮ್ಮ ಕೆಲಸದ ಮೇಲೆ ನಿಷೇಧ ಇದ್ದದರಿಂದ ರಾಜ್ಯ ಸಭಾಗೃಹಗಳನ್ನು ಮುಚ್ಚಿಹಾಕಲಾಗಿತ್ತು. ಸಹೋದರರ ಮನೆಗಳಲ್ಲಿ ಸಭಾ ಕೂಟಗಳನ್ನು ನಡೆಸಲಾಗುತ್ತಿತ್ತು. ಹಾಗಾಗಿ ಪ್ರತಿದಿನ ಪೊಲೀಸರು ಸಹೋದರರ ಮನೆಗಳ ಶೋಧ ನಡೆಸುತ್ತಿದ್ದರು. ನೂರಾರು ಸಹೋದರ ಸಹೋದರಿಯರನ್ನು ವಿಚಾರಣೆಗೆಂದು ಪೊಲೀಸ್‌ ಠಾಣೆಗೆ ಒಯ್ಯಲಾಗುತ್ತಿತ್ತು. ಪೊಲೀಸರು ಅವರಿಗೆ ತುಂಬ ಹಿಂಸೆ ಕೊಡುತ್ತಿದ್ದರು. ಹೀಗೆ ಬಲವಂತಮಾಡಿ ಅವರು ಜವಾಬ್ದಾರಿಯುತ ಸ್ಥಾನಗಳಲ್ಲಿರುವ ಸಹೋದರರ ಹೆಸರುಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಹಾಗಾಗಿ ಸಹೋದರರು ಒಬ್ಬರನ್ನೊಬ್ಬರು ಕರೆಯುವಾಗ ಹೋಸೆ, ಪೌಲೊ ಎಂಬಂಥ ಅವರ ಮೊದಲ ಹೆಸರುಗಳನ್ನು ಮಾತ್ರ ಬಳಸುತ್ತಿದ್ದರು.

ಹೇಗಾದರೂ ಮಾಡಿ ಸಹೋದರರ ಕೈಗಳಿಗೆ ಸಾಹಿತ್ಯ ತಲಪಿಸುವುದೇ ನಮ್ಮ ಮುಖ್ಯ ಗುರಿಯಾಗಿತ್ತು. ಏಕೆಂದರೆ ಈ ಸಾಹಿತ್ಯ ಅವರಿಗೆ ಕಷ್ಟಗಳನ್ನು ತಾಳಿಕೊಳ್ಳಲು ಸಹಾಯಮಾಡುತ್ತಿತ್ತು. ಕಾವಲಿನಬುರುಜುವಿನ ಅಧ್ಯಯನ ಲೇಖನಗಳನ್ನು ಮತ್ತು ಬೇರೆ ಸಾಹಿತ್ಯವನ್ನು ಮೇರಿ ಒಂದು ವಿಶೇಷ ರೀತಿಯ ಕಾಗದದ (ಸ್ಟೆನ್ಸಿಲ್‌) ಮೇಲೆ ಟೈಪ್‌ ಮಾಡುತ್ತಿದ್ದಳು. ಇದನ್ನು ಬಳಸಿ ಹಲವಾರು ಪ್ರತಿಗಳನ್ನು ತಯಾರಿಸಿ ಸಹೋದರರಿಗೆ ತಲಪಿಸಲಾಗುತ್ತಿತ್ತು.

ಕೋರ್ಟಿನಲ್ಲಿ ಸುವಾರ್ತೆಯ ಪರವಹಿಸಿ ವಾದಿಸುವುದು

1966⁠ರ ಜೂನ್‌ ತಿಂಗಳಲ್ಲಿ ಲಿಸ್ಬನ್‌ನಲ್ಲಿ ಒಂದು ಪ್ರಾಮುಖ್ಯ ಕೋರ್ಟ್‌ ಕೇಸ್‌ ನಡೆಯಿತು. ಫೇಜು ಸಭೆಯಲ್ಲಿದ್ದ ಎಲ್ಲ 49 ಸದಸ್ಯರು ಯಾರದೋ ಮನೆಯಲ್ಲಿ ಕಾನೂನುಬಾಹಿರ ಕೂಟವೊಂದಕ್ಕೆ ಹಾಜರಾಗಿದ್ದರೆಂದು ಆರೋಪಿಸಲಾಗಿತ್ತು. ಕೋರ್ಟ್‌ನಲ್ಲಿ ನಡೆಯಲಿದ್ದ ವಿಚಾರಣೆಗಾಗಿ ಸಹೋದರರನ್ನು ತಯಾರಿಸಲು ನಾನೊಬ್ಬ ವಕೀಲನಂತೆ ನಟಿಸಿ ಪ್ರಶ್ನೆಗಳನ್ನು ಕೇಳಿದೆ. ಈ ಕೇಸ್‌ನಲ್ಲಿ ನಮಗೆ ಜಯ ಸಿಗುವುದಿಲ್ಲ ಅಂತ ನಮಗೆ ಗೊತ್ತಿತ್ತು. ಹಾಗೆಯೇ ಆಯಿತು. ಆ ಎಲ್ಲ 49 ಮಂದಿ ಸಹೋದರ ಸಹೋದರಿಯರಿಗೆ ಜೈಲುವಾಸದ ಶಿಕ್ಷೆ ಸಿಕ್ಕಿತು. ಕೆಲವರು ಜೈಲಲ್ಲಿ 45 ದಿನ, ಕೆಲವರು ಐದೂವರೆ ತಿಂಗಳು, ಇನ್ನಿತರರು ಈ ಎರಡೂ ಅವಧಿಗಳ ನಡುವಿನ ಬೇರೆಬೇರೆ ಅವಧಿಯ ವರೆಗೆ ಇದ್ದರು. ಆದರೆ ಆ ಕೇಸ್‌ನಿಂದಾಗಿ ಎಲ್ಲ ಜನರಿಗೆ ಒಂದು ದೊಡ್ಡ ಸಾಕ್ಷಿ ಸಿಕ್ಕಿತು. ವಿಚಾರಣೆಯ ಸಮಯದಲ್ಲಿ ನಮ್ಮ ವಕೀಲ ಬೈಬಲಿನಲ್ಲಿರುವ ಗಮಲಿಯೇಲನ ಮಾತುಗಳನ್ನೂ ಉಲ್ಲೇಖಿಸಿ ಹೇಳಿದರು. (ಅ. ಕಾ. 5:33-39) ವಾರ್ತಾ ಮಾಧ್ಯಮದವರು ಈ ಕೇಸ್‌ ಬಗ್ಗೆ ವರದಿಸಿದರು. ಇನ್ನೂ ಸಂತೋಷದ ವಿಷಯವೇನೆಂದರೆ ನಮ್ಮ ಆ ವಕೀಲ ಬೈಬಲ್‌ ಅಧ್ಯಯನ ಮಾಡಲು ಮತ್ತು ನಮ್ಮ ಕೂಟಗಳಿಗೂ ಹಾಜರಾಗಲು ಆರಂಭಿಸಿದರು!

1966⁠ರ ಡಿಸೆಂಬರ್‌ ತಿಂಗಳಲ್ಲಿ ನನ್ನನ್ನು ಪೋರ್ಚುಗಲ್‌ನಲ್ಲಿನ ಶಾಖಾ ಮೇಲ್ವಿಚಾರಕನಾಗಿ ನೇಮಿಸಲಾಯಿತು. ಕಾನೂನು ಸಂಬಂಧಿತ ವಿಷಯಗಳಿಗೆ ನಾನು ತುಂಬ ಸಮಯ ಕೊಟ್ಟೆ. ಈ ದೇಶದಲ್ಲಿ ಯೆಹೋವನ ಸಾಕ್ಷಿಗಳಿಗೆ ಏಕೆ ಆರಾಧನಾ ಸ್ವಾತಂತ್ರ್ಯ ಸಿಗಬೇಕೆಂಬ ಕಾನೂನುಬದ್ಧ ಕಾರಣಗಳನ್ನು ಸ್ಥಾಪಿಸಲು ಸರ್ವಪ್ರಯತ್ನ ಮಾಡಿದೆವು. (ಫಿಲಿ. 1:7) ಕೊನೆಗೆ 1974 ಡಿಸೆಂಬರ್‌ 18⁠ರಂದು ನಮಗೆ ಕಾನೂನುಬದ್ಧ ಮನ್ನಣೆ ಸಿಕ್ಕಿತು. ನಮ್ಮ ಆನಂದದಲ್ಲಿ ಪಾಲ್ಗೊಳ್ಳಲು ಜಾಗತಿಕ ಮುಖ್ಯಕಾರ್ಯಾಲಯದಿಂದ ಸಹೋದರ ನೇತನ್‌ ನಾರ್‌ ಮತ್ತು ಸಹೋದರ ಫ್ರೆಡ್ರಿಕ್‌ ಫ್ರಾನ್ಸ್‌ ಬಂದರು. ಆಗ ಓಪೊರ್ಟು ಮತ್ತು ಲಿಸ್ಬನ್‌ನಲ್ಲಿ ಒಂದು ಐತಿಹಾಸಿಕ ಕೂಟ ನಡೆಸಿದೆವು. ಒಟ್ಟು 46,870 ಮಂದಿ ಹಾಜರಿದ್ದರು.

ಪೋರ್ಚುಗೀಸ್‌ ಭಾಷೆಯನ್ನಾಡುವ ಜನರಿರುವ ದ್ವೀಪಗಳಿಗೂ ಸಾರುವ ಕೆಲಸ ವಿಸ್ತರಿಸುವಂತೆ ಯೆಹೋವನು ಮಾಡಿದ್ದಾನೆ. ಉದಾಹರಣೆಗೆ, ಏಸೋರ್ಸ್‌, ಕೇಪ್‌ ವರ್ಡ್‌, ಮಡೀರ, ಸಾವೊ ಟೊಮೆ ಮತ್ತು ಪ್ರಿನ್ಸಿಪೆ ಎಂಬಲ್ಲಿ ಈ ಕೆಲಸ ಶುರುವಾಯಿತು. ಈ ಸ್ಥಳಗಳಲ್ಲಿ ಸಾಕ್ಷಿಗಳ ಸಂಖ್ಯೆ ಹೆಚ್ಚಾಯಿತು. ಹಾಗಾಗಿ ನಮ್ಮ ಶಾಖೆಯನ್ನು ದೊಡ್ಡದು ಮಾಡಬೇಕಾಯಿತು. ಈ ಹೊಸ ಕಟ್ಟಡಗಳ ನಿರ್ಮಾಣವಾದ ಬಳಿಕ 1988 ಏಪ್ರಿಲ್‌ 23⁠ರಂದು ಸಹೋದರ ಮಿಲ್ಟನ್‌ ಹೆನ್ಷಲ್‌ ಸಮರ್ಪಣೆಯ ಭಾಷಣ ಕೊಟ್ಟರು. 45,522 ಸಹೋದರ ಸಹೋದರಿಯರು ಇದಕ್ಕೆ ಹಾಜರಿದ್ದರು. ಇವರಲ್ಲಿ 20 ಮಂದಿ ಹಿಂದೆ ಪೋರ್ಚುಗಲ್‌ನಲ್ಲಿ ಮಿಷನರಿಗಳಾಗಿದ್ದರು. ಈ ಕಾರ್ಯಕ್ರಮಕ್ಕಾಗಿ ಮತ್ತೆ ಇಲ್ಲಿಗೆ ಬಂದಿದ್ದರು.

ನಂಬಿಗಸ್ತರ ಮಾದರಿಯಿಂದ ಕಲಿತೆವು

ಈ ಎಲ್ಲಾ ವರ್ಷಗಳಲ್ಲಿ ನಾನು ಮತ್ತು ಮೇರಿ ನಂಬಿಗಸ್ತ ಸಹೋದರರಿಂದ ನಿಜವಾಗಿಯೂ ತುಂಬ ವಿಷಯಗಳನ್ನು ಕಲಿತಿದ್ದೇವೆ. ಉದಾಹರಣೆಗೆ, ಸಹೋದರ ಥಿಯೊಡರ್‌ ಜಾರಸ್‌ರೊಂದಿಗೆ ಜೋನ್‌ ಮೇಲ್ವಿಚಾರಕರ ಭೇಟಿಗೆಂದು ಹೋದಾಗ ಒಂದು ಅಮೂಲ್ಯ ಪಾಠ ಕಲಿತೆ. ನಾವು ಭೇಟಿಮಾಡುತ್ತಿದ್ದ ಬ್ರಾಂಚ್‌ನಲ್ಲಿ ಒಂದು ದೊಡ್ಡ ಸಮಸ್ಯೆಯಿತ್ತು. ಅಲ್ಲಿನ ಶಾಖಾ ಸಮಿತಿ ಈ ಸಮಸ್ಯೆ ಬಗೆಹರಿಸಲು ಎಲ್ಲ ಪ್ರಯತ್ನ ಮಾಡಿದ್ದರು. ಇನ್ನೇನೂ ಮಾಡಲಿಕ್ಕೆ ಆಗೋದಿಲ್ಲವೆಂದು ನಿರಾಶರಾಗಿದ್ದರು. ಅವರನ್ನು ಸಂತೈಸುತ್ತಾ ಸಹೋದರ ಜಾರಸ್‌ ಹೀಗಂದರು: “ಈಗ ಪವಿತ್ರಾತ್ಮವು ಕೆಲಸಮಾಡಲು ನೀವು ಅವಕಾಶ ಕೊಡಬೇಕು.” ಹಲವಾರು ವರ್ಷ ಹಿಂದೆ ನಾನು ಮತ್ತು ಮೇರಿ ಬ್ರೂಕ್ಲಿನ್‌ಗೆ ಹೋಗಿದ್ದಾಗ ಸಹೋದರ ಫ್ರಾನ್ಸ್‌ರೊಟ್ಟಿಗೆ ಸ್ವಲ್ಪ ಸಮಯ ಕಳೆದೆವು. ಆಗ ನಮ್ಮೊಟ್ಟಿಗಿದ್ದವರು ಅವರಿಗೆ ಕೊನೆಯಲ್ಲಿ ಒಂದೆರಡು ಮಾತು ಹೇಳುವಂತೆ ಕೇಳಿದರು. ಅವರು ಹೀಗಂದರು: “ನಾನು ಕೊಡುವ ಸಲಹೆ ಇಷ್ಟೇ: ಕಷ್ಟವಿರಲಿ, ಸುಖವಿರಲಿ ಎಲ್ಲ ಸಮಯ ಯೆಹೋವನ ದೃಶ್ಯ ಸಂಘಟನೆಗೆ ಅಂಟಿಕೊಂಡೇ ಇರಿ. ಏಕೆಂದರೆ ಯೇಸು ತನ್ನ ಶಿಷ್ಯರಿಗೆ ಹೇಳಿದಂತೆ ದೇವರ ರಾಜ್ಯದ ಸುವಾರ್ತೆ ಸಾರುತ್ತಿರುವ ಒಂದೇ ಒಂದು ಸಂಘಟನೆ ಇದಾಗಿದೆ!”

ಅವರು ಹೇಳಿದಂತೆ ಮಾಡಿದ್ದರಿಂದ ನನಗೂ ಮೇರಿಗೂ ತುಂಬ ಸಂತೋಷ ಸಿಕ್ಕಿದೆ. ಲೋಕದಲ್ಲಿರುವ ಬೇರೆಬೇರೆ ಬ್ರಾಂಚ್‌ಗಳಿಗೆ ಜೋನ್‌ ಮೇಲ್ವಿಚಾರಕನಾಗಿ ಭೇಟಿಮಾಡಿದ ಸವಿನೆನಪುಗಳು ನಮಗಿವೆ. ಯೆಹೋವನ ಸೇವಕರಲ್ಲಿ ಎಲ್ಲ ವಯಸ್ಸಿನವರನ್ನು ಭೇಟಿಯಾಗುವ ಆನಂದ ಸಿಕ್ಕಿದೆ. ಯೆಹೋವನು ಅವರ ಸೇವೆಯನ್ನು ಅಮೂಲ್ಯವಾಗಿ ಎಣಿಸುತ್ತಾನೆಂದು ಭರವಸೆ ಮೂಡಿಸುವ ಮಾತುಗಳನ್ನಾಡಿದ್ದೇವೆ. ಆತನ ಸೇವೆ ಮಾಡುತ್ತಾ ಮುಂದುವರಿಯುವಂತೆ ಉತ್ತೇಜಿಸಿದ್ದೇವೆ.

ಹೀಗೆಯೇ ವರ್ಷಗಳು ಉರುಳುತ್ತಾ ಹೋಗಿ ನಾವಿಬ್ಬರೂ ಈಗ 80 ದಾಟಿದ್ದೇವೆ. ಮೇರಿಗೆ ಅನೇಕ ಆರೋಗ್ಯ ಸಮಸ್ಯೆಗಳಿವೆ. (2 ಕೊರಿಂ. 12:9) ನಾವು ಬೇರೆ ರೀತಿಯ ಕಷ್ಟಪರೀಕ್ಷೆಗಳನ್ನೂ ಎದುರಿಸಿದ್ದೇವೆ. ಆದರೆ ಇವುಗಳಿಂದ ನಮ್ಮ ನಂಬಿಕೆ ಇನ್ನಷ್ಟು ಬಲವಾಗಿದೆ. ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಬೇಕೆಂಬ ನಮ್ಮ ನಿರ್ಧಾರ ಇನ್ನಷ್ಟು ದೃಢವಾಗಿದೆ. ಯೆಹೋವನ ಸೇವೆಯಲ್ಲಿ ಕಳೆದಿರುವ ವರ್ಷಗಳ ಬಗ್ಗೆ ಯೋಚಿಸುವಾಗ ಆತನು ನಮಗೆ ಅನೇಕಾನೇಕ ವಿಧಗಳಲ್ಲಿ ಅಪಾತ್ರ ದಯೆ ತೋರಿಸಿ ಆಶೀರ್ವದಿಸಿದ್ದಾನೆಂದು ಖಂಡಿತವಾಗಿ ಹೇಳಬಹುದು. *

^ ಪ್ಯಾರ. 29 ಈ ಲೇಖನ ತಯಾರಾಗುತ್ತಿದ್ದ ಸಮಯದಲ್ಲಿ ಸಹೋದರ ಡಗ್ಲಸ್‌ ಗೆಸ್ಟ್‌ 2015 ಅಕ್ಟೋಬರ್‌ 25⁠ರಂದು ತೀರಿಹೋದರು. ಕೊನೆವರೆಗೂ ಯೆಹೋವನಿಗೆ ನಂಬಿಗಸ್ತರಾಗಿದ್ದರು.