ಅಧ್ಯಯನ ಲೇಖನ 6
ಯೆಹೋವ ನಮ್ಮನ್ನು ತುಂಬ ಪ್ರೀತಿ ಮಾಡೋ ಅಪ್ಪ
‘ನೀವು ಹೀಗೆ ಪ್ರಾರ್ಥನೆಮಾಡತಕ್ಕದ್ದು: ನಮ್ಮ ತಂದೆಯೇ.’—ಮತ್ತಾ. 6:9.
ಗೀತೆ 89 ಯೆಹೋವನ ಸೌಹಾರ್ದಯುತ ಮನವಿ: “ನನ್ನ ಮಗನೇ ವಿವೇಕಿಯಾಗಿರು”
ಕಿರುನೋಟ *
1. ಪರ್ಷಿಯದ ರಾಜನ ಹತ್ರ ಮಾತಾಡೋದಕ್ಕಿಂತ ಮುಂಚೆ ಏನು ಮಾಡ್ಬೇಕಿತ್ತು?
ನೀವು 2,500 ವರ್ಷಗಳ ಹಿಂದೆ ಪರ್ಷಿಯ ದೇಶದಲ್ಲಿ ಜೀವಿಸ್ತಿದ್ದೀರ ಅಂತ ಅಂದ್ಕೊಳ್ಳಿ. ಯಾವ್ದೋ ಒಂದು ವಿಷ್ಯದ ಬಗ್ಗೆ ನೀವು ಆ ದೇಶದ ರಾಜನ ಹತ್ರ ಹೋಗಿ ಮಾತಾಡ್ಬೇಕು. ಅದಕ್ಕೋಸ್ಕರ ಅವನ ಅರಮನೆ ಇರುವ ಶೂಷನ್ ಪಟ್ಟಣಕ್ಕೆ ಹೋಗ್ತೀರಿ. ಆದ್ರೆ ಆ ರಾಜನ ಹತ್ರ ಹೋಗೋ ಮುಂಚೆ ಅವನ ಅನುಮತಿ ಪಡ್ಕೋಬೇಕು. ಅವನ ಅನುಮತಿ ಇಲ್ದೇ ಹಾಗೇ ಹೋಗ್ಬಿಟ್ರೆ ನಿಮ್ಮ ಜೀವನೇ ಕಳ್ಕೊಳ್ಳೋ ಸಾಧ್ಯತೆ ಇದೆ.—ಎಸ್ತೇ. 4:11.
2. ನಾವು ಯೆಹೋವನ ಹತ್ರ ಮಾತಾಡೋಕೆ ಭಯಪಡ್ಬೇಕಾ? ವಿವರಿಸಿ.
2 ಆದ್ರೆ, ಯೆಹೋವನು ಪರ್ಷಿಯದ ರಾಜನ ತರ ಅಲ್ಲ. ಭೂಮಿ ಮೇಲಿರೋ ಎಲ್ಲಾ ಮಾನವ ಅಧಿಕಾರಿಗಳಿಗಿಂತ ಯೆಹೋವನು ಎಷ್ಟೋ ಉನ್ನತನಾಗಿದ್ರೂ ನಾವು ಯಾವಾಗ ಬೇಕಾದ್ರೂ ಆತನ ಹತ್ರ ಯಾವ್ದೇ ಭಯ ಇಲ್ದೇ ಮಾತಾಡ್ಬಹುದು. ಆತನಿಗಿರೋ ಬಿರುದುಗಳ ಬಗ್ಗೆ ಯೋಚ್ಸಿ. ಮಹಾನ್ ಸೃಷ್ಟಿಕರ್ತ, ಸರ್ವಶಕ್ತ, ವಿಶ್ವದ ರಾಜ ಇಂಥ ಇನ್ನೂ ದೊಡ್ಡ ಡೊಡ್ಡ ಬಿರುದುಗಳಿದ್ರೂ ನಾವು ಆತನನ್ನು ಪ್ರೀತಿಯಿಂದ ಅಪ್ಪಾ, “ತಂದೆ” ಅಂತ ಕರೆಯಬೇಕಂತ ಆತನು ಬಯಸ್ತಾನೆ. (ಮತ್ತಾ. 6:9) ನಾವು ಆತನಿಗೆ ಇಷ್ಟು ಆಪ್ತರಾಗೋದನ್ನ ಆತನು ಬಯಸ್ತಾನೆ ಅನ್ನೋದನ್ನ ನೆನಸುವಾಗ ನಮಗೆ ಎಷ್ಟು ಖುಷಿ ಆಗುತ್ತೆ ಅಲ್ವಾ? ಆತನಿಗೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲದು.
3. (ಎ) ಯೆಹೋವನನ್ನು ನಾವು “ತಂದೆ,” ಅಪ್ಪ ಅಂತ ಯಾಕೆ ಕರೆಯಬಹುದು? (ಬಿ) ಈ ಲೇಖನದಲ್ಲಿ ಏನನ್ನು ಕಲಿಯಲಿದ್ದೇವೆ?
3 ಯೆಹೋವನನ್ನು ತಂದೆ ಅಂತ ಕರೆಯೋದು ಸರಿಯಾಗೇ ಇದೆ. ಯಾಕೆಂದ್ರೆ ನಮ್ಗೆ ಜೀವ ಕೊಟ್ಟಿರೋದು ಆತನೇ. (ಕೀರ್ತ. 36:9) ಆತನು ನಮ್ಮ ತಂದೆ ಆಗಿರೋದ್ರಿಂದ ನಾವು ಆತನ ಮಾತನ್ನ ಕೇಳ್ಬೇಕು. ನಾವು ಆತನ ಮಾತಿನ ಪ್ರಕಾರ ನಡ್ಕೊಂಡ್ರೆ ನಮ್ಗೆ ಅನೇಕ ಆಶೀರ್ವಾದಗಳು ಸಿಗ್ತವೆ. (ಇಬ್ರಿ. 12:9) ಆ ಆಶೀರ್ವಾದಗಳಲ್ಲಿ ಒಂದು ಶಾಶ್ವತ ಜೀವನ. ಅದು ಸ್ವರ್ಗದಲ್ಲೇ ಇರಬಹುದು ಅಥವಾ ಭೂಮಿಯಲ್ಲಾದ್ರೂ ಇರಬಹುದು. ಮುಂದೆ ಮಾತ್ರ ಅಲ್ಲ, ಈಗಲೂ ನಮಗೆ ಪ್ರಯೋಜನಗಳು ಸಿಗ್ತವೆ. ಯೆಹೋವನು ಈಗ ನಮ್ಮತ್ರ ಒಬ್ಬ ಪ್ರೀತಿಯ ತಂದೆ ಹಾಗೆ ನಡ್ಕೊಳ್ತಾನೆ ಮತ್ತು ಮುಂದಕ್ಕೂ ಆತನು ನಮ್ಮ ಕೈಬಿಡಲ್ಲ ಅನ್ನೋದಕ್ಕಿರುವ ಆಧಾರಗಳನ್ನು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಆದ್ರೆ ಅದಕ್ಕಿಂತ ಮುಂಚೆ ನಮ್ಮ ಸ್ವರ್ಗೀಯ ತಂದೆ ನಮ್ಮನ್ನು ತುಂಬ ಪ್ರೀತಿ ಮಾಡ್ತಾನೆ, ನಮ್ಮ ಬಗ್ಗೆ ತುಂಬ ಕಾಳಜಿ ತೋರಿಸ್ತಾನೆ ಅಂತ ಕಣ್ಮುಚ್ಚಿ ಹೇಗೆ ನಂಬಬಹುದು ಅಂತ ನೋಡೋಣ.
ಪ್ರೀತಿ ಮತ್ತು ಕಾಳಜಿ ತೋರಿಸುವ ಅಪ್ಪ
4. ಕೆಲವ್ರಿಗೆ ಯೆಹೋವನನ್ನು ಅಪ್ಪನ ತರ ನೋಡೋಕೆ ಯಾಕೆ ಕಷ್ಟ ಆಗುತ್ತೆ?
4 ನಿಮಗೆ ದೇವರನ್ನ ಅಪ್ಪನ ತರ ನೋಡೋಕೆ ಕಷ್ಟ ಆಗುತ್ತಾ? ಕೆಲವರು ಯೆಹೋವನ ಮುಂದೆ ತಾವೇನೂ ಅಲ್ಲ, ಧೂಳಿಗೆ ಸಮ ಅಂತ ನೆನಸ್ತಾರೆ. ಏನು ಬೇಕಾದ್ರೂ ಮಾಡೋಕೆ ಶಕ್ತಿ ಇರುವ ದೇವರು ತಮ್ಮಲ್ಲಿ ಪ್ರತಿಯೊಬ್ಬರ ಬಗ್ಗೆನೂ ಕಾಳಜಿವಹಿಸ್ತಾನಾ ಅನ್ನೋ ಪ್ರಶ್ನೆ ಅವರಿಗಿರುತ್ತೆ. ಆದ್ರೆ ನಮ್ಮ ಪ್ರೀತಿಯ ತಂದೆ ನಾವು ಆ ರೀತಿ ಯೋಚಿಸ್ಬಾರ್ದು ಅಂತ ಬಯಸ್ತಾನೆ. ಆತನು ನಮಗೆ ಜೀವ ಕೊಟ್ಟಿದ್ದಾನೆ, ನಾವು ಆತನನ್ನು ಹುಡುಕಿ, ಆತನಿಗೆ ಆಪ್ತರಾಗಬೇಕು ಅಂತ ಬಯಸ್ತಾನೆ. ಈ ಸತ್ಯಾಂಶವನ್ನ ತಿಳ್ಸಿದ ಮೇಲೆ ಅಪೊಸ್ತಲ ಪೌಲನು ಅಥೆನ್ಸಿನಲ್ಲಿದ್ದ ಜನರಿಗೆ ಹೀಗೆ ಹೇಳಿದನು: ಯೆಹೋವನು ‘ನಮ್ಮಲ್ಲಿ ಪ್ರತಿಯೊಬ್ಬನಿಗೂ ದೂರವಾಗಿಲ್ಲ.’ (ಅ. ಕಾ. 17:24-29) ಪ್ರೀತಿ, ಕಾಳಜಿ ಇರೋ ಒಬ್ಬ ತಂದೆ ಹತ್ರ ಒಂದು ಮಗು ಹೇಗೆ ಯಾವ್ದೇ ಭಯ ಇಲ್ದೇ ಮಾತಾಡುತ್ತೋ ಅದೇರೀತಿ ಪ್ರತಿಯೊಬ್ರು ತನ್ನತ್ರ ಮಾತಾಡ್ಬೇಕಂತ ದೇವರು ಬಯಸ್ತಾನೆ.
5. ಒಬ್ಬ ಸಹೋದರಿಯ ಅನುಭವದಿಂದ ನಾವೇನು ಕಲಿಯುತ್ತೇವೆ?
5 ಇನ್ನು ಕೆಲವ್ರಿಗೆ ಯೆಹೋವನನ್ನು ಅಪ್ಪನ ತರ ನೋಡ್ಲಿಕ್ಕೆ ಯಾಕೆ ಕಷ್ಟ ಆಗುತ್ತೆ ಅಂದ್ರೆ ಅವ್ರ ಸ್ವಂತ ಅಪ್ಪಂದಿರಿಂದ್ಲೇ ಅವ್ರಿಗೆ ಪ್ರೀತಿ, ವಾತ್ಸಲ್ಯ ಸಿಕ್ಕಿರಲ್ಲ. ಒಬ್ಬ ಕ್ರೈಸ್ತ ಸಹೋದರಿ ಏನು ಹೇಳ್ತಾರೆ ನೋಡಿ: “ನನ್ನಪ್ಪ ನನ್ನತ್ರ ಪ್ರೀತಿಯಿಂದ ಮಾತಾಡಿದ್ದೇ ಇಲ್ಲ, ಯಾವಾಗ್ಲೂ ಬೈಯೋರು. ಆದ್ರಿಂದಲೇ ನಾನು ಬೈಬಲ್ ಕಲಿಯೋಕೆ ಶುರು ಮಾಡ್ದಾಗ ಯೆಹೋವನನ್ನು ಒಬ್ಬ ಆಪ್ತ ತಂದೆ ಅಂತ ನೋಡ್ಲಿಕ್ಕೆ ಕಷ್ಟ ಆಯ್ತು. ಆದ್ರೆ, ಯಾವಾಗ ನಾನು ಯೆಹೋವನನ್ನ ತಿಳ್ಕೊಂಡೆನೋ ಆಗ ಆ ಅನಿಸಿಕೆ ಬದಲಾಯ್ತು.” ನಿಮ್ಗೂ ಯೆಹೋವನನ್ನು ಅಪ್ಪನ ತರ ನೋಡೋಕೆ ಕಷ್ಟ ಆಗ್ತಿದ್ಯಾ? ಚಿಂತೆ ಮಾಡ್ಬೇಡಿ. ಯೆಹೋವನಷ್ಟು ಒಳ್ಳೇ ತಂದೆ ಯಾರೂ ಇಲ್ಲ ಅನ್ನೋದು ಇವತ್ತಲ್ಲ ನಾಳೆ ನಿಮ್ಗೇ ಅರ್ಥ ಆಗುತ್ತೆ.
6. ಮತ್ತಾಯ 11:27 ರ ಪ್ರಕಾರ ಯೆಹೋವನನ್ನು ನಮ್ಮ ಪ್ರೀತಿಯ ತಂದೆ ಎಂದು ನೋಡ್ಲಿಕ್ಕೆ ಸ್ವತಃ ಯೆಹೋವನೇ ಸಹಾಯ ಮಾಡಿರೋ ಒಂದು ವಿಧ ಯಾವುದು?
6 ಯೆಹೋವನನ್ನು ನಮ್ಮ ಪ್ರೀತಿಯ ತಂದೆಯಂತೆ ನೋಡ್ಲಿಕ್ಕೆ ಯೆಹೋವನೇ ಸಹಾಯ ಮಾಡ್ತಾನೆ. ಇದನ್ನು ಮಾಡಿರೋ ಒಂದು ವಿಧ ಯೇಸು ಹೇಳಿರೋ ಮಾತುಗಳನ್ನು ಮತ್ತು ಮಾಡಿರೋ ವಿಷಯಗಳನ್ನು ಬೈಬಲಿನಲ್ಲಿ ಬರೆಸಿಟ್ಟಿರೋದೇ ಆಗಿದೆ. (ಮತ್ತಾಯ 11:27 ಓದಿ.) ಯೇಸು ತನ್ನ ತಂದೆಯಾದ ಯೆಹೋವನನ್ನು ಎಷ್ಟು ಚೆನ್ನಾಗಿ ಅನುಕರಿಸ್ತಿದ್ದನೆಂದ್ರೆ ಸ್ವತಃ ಆತನೇ ಒಂದು ಸಲ ಹೀಗೆ ಹೇಳಿದ್ನು: “ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ.” (ಯೋಹಾ. 14:9) ಯೇಸು ಯೆಹೋವನನ್ನು ಒಬ್ಬ ತಂದೆ ಎಂದು ಆಗಾಗ ವರ್ಣಿಸ್ತಿದ್ದನು. ಬರೀ ನಾಲ್ಕು ಸುವಾರ್ತಾ ಪುಸ್ತಕಗಳಲ್ಲೇ ಯೇಸು ಯೆಹೋವನನ್ನು “ತಂದೆ” ಎಂದು ಸುಮಾರು 165 ಬಾರಿ ಕರೆದಿರುವ ದಾಖಲೆ ಇದೆ. ಯೇಸು ಯಾಕೆ ಯೆಹೋವನನ್ನು ಒಬ್ಬ ತಂದೆ ಎಂದು ಜನ್ರ ಮುಂದೆ ಅಷ್ಟು ಸಲ ಹೇಳಿದನು? ಒಂದು ಕಾರಣ ಏನಂದ್ರೆ, ಯೆಹೋವನು ಒಬ್ಬ ಪ್ರೀತಿಯ ತಂದೆ ಅನ್ನೋದನ್ನು ಜನ್ರಿಗೆ ಅರ್ಥಮಾಡಿಸ್ಲಿಕ್ಕಾಗಿಯೇ.—ಯೋಹಾ. 17:25, 26.
7. ಯೆಹೋವನು ತನ್ನ ಮಗನ ಜೊತೆ ನಡ್ಕೊಂಡ ವಿಧದಿಂದ ಆತನ ಬಗ್ಗೆ ನಾವೇನು ಕಲೀಬಹುದು?
7 ಯೆಹೋವನು ತನ್ನ ಮಗ ಯೇಸು ಜೊತೆ ನಡ್ಕೊಂಡ ವಿಧದಿಂದ ಆತನ ಬಗ್ಗೆ ನಾವೇನು ಕಲೀಬಹುದು ಅಂತ ನೋಡೋಣ. ಯೆಹೋವನು ಯೇಸುವಿನ ಪ್ರಾರ್ಥನೆಯನ್ನು ಯಾವಾಗ್ಲೂ ಕೇಳ್ತಿದ್ನು. ಬರೀ ಕೇಳಿದ್ದಷ್ಟೇ ಅಲ್ಲ, ಅದಕ್ಕೆ ಉತ್ರವನ್ನೂ ಕೊಡ್ತಿದ್ದನು. (ಯೋಹಾ. 11:41, 42) ಯೇಸುವಿನ ಎಲ್ಲಾ ಕಷ್ಟಗಳಲ್ಲೂ ಯೆಹೋವನು ತನ್ನ ಪ್ರೀತಿ ಮತ್ತು ಬೆಂಬಲ ಇದೆ ಎಂದು ತೋರಿಸಿಕೊಟ್ಟನು.—ಲೂಕ 22:42, 43.
8. ಯೆಹೋವನು ಯೇಸುಗೆ ಹೇಗೆಲ್ಲಾ ಸಹಾಯ ಮಾಡಿದನು?
8 ಯೆಹೋವನೇ ತನಗೆ ಜೀವ ಕೊಟ್ಟವನು, ತನ್ನ ಜೀವಕ್ಕೆ ಆಸರೆಯಾಗಿ ಪೋಷಿಸುತ್ತಿರುವವನು ಅಂತ ಯೇಸು ಅರ್ಥಮಾಡ್ಕೊಂಡಿದ್ದನು. ಅದಕ್ಕೇ ಆತನು ಹೀಗೆ ಹೇಳಿದನು: ‘ತಂದೆಯ ನಿಮಿತ್ತವಾಗಿ ನಾನು ಜೀವಿಸುತ್ತಿದ್ದೇನೆ.’ (ಯೋಹಾ. 6:57) ಯೇಸು ತನ್ನ ತಂದೆಯ ಮೇಲೆ ಪೂರ್ತಿ ಭರವಸೆ ಇಟ್ಟಿದ್ದನು. ಯೇಸುಗೆ ಜೀವಿಸೋಕೆ ಬೇಕಾಗಿದ್ದ ಎಲ್ಲಾ ಅವಶ್ಯಕತೆಗಳನ್ನು ಯೆಹೋವನು ಪೂರೈಸಿದನು. ಎಲ್ಲದಕ್ಕಿಂತ ಹೆಚ್ಚಾಗಿ ಯೇಸುಗೆ ಆಧ್ಯಾತ್ಮಿಕವಾಗಿಯೂ ಸಹಾಯ ಮಾಡಿದನು, ಅಂದ್ರೆ ತನಗೆ ನಂಬಿಗಸ್ತನಾಗಿ ಉಳಿಯೋಕೆ ಸಹಾಯ ಮಾಡಿದನು.—ಮತ್ತಾ. 4:4.
9. ಯೆಹೋವನು ಯೇಸು ಮೇಲೆ ತನಗೆ ಪ್ರೀತಿ ಇದೆ ಅಂತ ಹೇಗೆಲ್ಲಾ ತೋರಿಸ್ಕೊಟ್ಟನು?
9 ತನ್ನ ತಂದೆಯ ಸಹಾಯ, ಬೆಂಬಲ ಇದೆ ಅನ್ನೋದು ಯೇಸುಗೆ ಚೆನ್ನಾಗಿ ಗೊತ್ತಿತ್ತು. ಯಾಕೆಂದ್ರೆ, ಸ್ವತಃ ಯೆಹೋವನೇ ಆತನಿಗೆ ಅದನ್ನ ತೋರಿಸ್ಕೊಟ್ಟಿದ್ದನು. (ಮತ್ತಾ. 26:53; ಯೋಹಾ. 8:16) ಯೇಸುಗೆ ಒಂಚೂರೂ ನೋವಾಗದಂತೆ ಯೆಹೋವನು ಕಾಪಾಡ್ಲಿಲ್ಲ. ಆದ್ರೆ, ನೋವನ್ನ, ಕಷ್ಟನ ತಾಳಿಕೊಳ್ಳೋಕೆ ಸಹಾಯ ಮಾಡಿದನು. ತನಗೆ ಬರೋ ಕಷ್ಟಗಳು ಶಾಶ್ವತ ಅಲ್ಲ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. (ಇಬ್ರಿ. 12:2) ಯೆಹೋವನು ಯೇಸು ಮೇಲೆ ತನಗೆ ಪ್ರೀತಿ ಇದೆ ಅಂತ ಹೇಗೆಲ್ಲಾ ತೋರಿಸ್ಕೊಟ್ನು? ಯೇಸುವಿನ ಪ್ರಾರ್ಥನೆಗಳನ್ನ ಕೇಳಿಸ್ಕೊಂಡನು, ಆತನ ಅಗತ್ಯಗಳನ್ನ ಪೂರೈಸಿದನು, ತರಬೇತಿ ಕೊಟ್ಟನು ಮತ್ತು ಬೆಂಬಲನೂ ಕೊಟ್ಟನು. (ಯೋಹಾ. 5:20; 8:28) ಇದೇ ರೀತಿ ನಮ್ಮ ತಂದೆಯಾದ ಯೆಹೋವನು ನಮ್ಮ ಬಗ್ಗೆನೂ ಹೇಗೆ ಕಾಳಜಿ ತೋರಿಸ್ತಾನೆ ಅನ್ನೋದನ್ನ ಈಗ ನೋಡೋಣ.
ನಮ್ಮ ಪ್ರೀತಿಯ ಅಪ್ಪ ನಮ್ಮ ಬಗ್ಗೆ ಹೇಗೆ ಕಾಳಜಿ ತೋರಿಸ್ತಾನೆ?
10. ಕೀರ್ತನೆ 66:19, 20 ರ ಪ್ರಕಾರ ಯೆಹೋವನು ನಮ್ಮನ್ನ ಪ್ರೀತಿಸ್ತಾನೆ ಅನ್ನೋದನ್ನ ಹೇಗೆ ತೋರಿಸ್ಕೊಡ್ತಾನೆ?
10 ಯೆಹೋವನು ನಮ್ಮ ಪ್ರಾರ್ಥನೆಗಳನ್ನ ಕೇಳಿಸ್ಕೊಳ್ತಾನೆ. (ಕೀರ್ತನೆ 66:19, 20 ಓದಿ.) ನಾವು ದಿನಕ್ಕೆ ಇಂತಿಷ್ಟು ಸಲ ಮಾತ್ರ ಪ್ರಾರ್ಥನೆ ಮಾಡ್ಬೇಕು ಅಂತ ಯೆಹೋವನು ನಿಯಮ ಇಟ್ಟಿಲ್ಲ. ನಾವು ಆಗಾಗ ಅಥವಾ ಎಡೆಬಿಡದೆ ಪ್ರಾರ್ಥನೆ ಮಾಡ್ತಾ ಇರ್ಬೇಕಂತ ಆತನು ಬಯಸ್ತಾನೆ. (1 ಥೆಸ. 5:17) ನಾವು ಯಾವ್ದೇ ಸಮಯದಲ್ಲಾದ್ರೂ, ಎಲ್ಲೇ ಇದ್ರೂ ಯೆಹೋವನ ಹತ್ರ ಗೌರವದಿಂದ ಮಾತಾಡ್ಬಹುದು. ಆತನು ಎಷ್ಟೇ ಬ್ಯುಸಿ ಇದ್ರೂ ನಾವು ಪ್ರಾರ್ಥನೆ ಮಾಡುವಾಗ ಕೇಳಿಸಿಕೊಳ್ಳೋಕೆ ಸಿದ್ಧನಿರ್ತಾನೆ ಮತ್ತು ಕಿವಿಗೊಟ್ಟು ಕೇಳ್ತಾನೆ. ಯೆಹೋವನು ನಮ್ಮ ಪ್ರಾರ್ಥನೆಗಳನ್ನು ಕೇಳಿಸಿಕೊಳ್ತಾನೆ ಅನ್ನೋದು ನಮಗೆ ಗೊತ್ತಾದಾಗ ನಾವು ಆತನಿಗೆ ಇನ್ನೂ ಆಪ್ತರಾಗ್ತೇವೆ. ಒಬ್ಬ ಕೀರ್ತನೆಗಾರನು ಹೀಗೆ ಹೇಳಿದ್ದಾನೆ: “ಯೆಹೋವನನ್ನು ಪ್ರೀತಿಸುತ್ತೇನೆ.” ಯಾಕಂದ್ರೆ, ‘ಆತನು ನನ್ನ ಮೊರೆಯನ್ನು ಕೇಳುತ್ತಾನೆ.’—ಕೀರ್ತ. 116:1.
11. ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಹೇಗೆಲ್ಲಾ ಉತ್ರ ಕೊಡ್ತಾನೆ?
11 ಯೆಹೋವ ಅಪ್ಪ ನಮ್ಮ ಪ್ರಾರ್ಥನೆಗಳನ್ನ ಕೇಳೋದಷ್ಟೇ ಅಲ್ಲ, ಅದಕ್ಕೆ ಉತ್ರನೂ ಕೊಡ್ತಾನೆ. ಅಪೊಸ್ತಲ ಪೌಲನು ಈ ರೀತಿ ಭರವಸೆ ಕೊಟ್ಟಿದ್ದಾನೆ: “ಆತನ ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆ.” (1 ಯೋಹಾ. 5:14, 15) ಯೆಹೋವನು ನಾವು ನೆನ್ಸಿದ ರೀತಿಯಲ್ಲಿ ಉತ್ರ ಕೊಡ್ದೇ ಇರ್ಬಹುದು. ಆದ್ರೆ, ಆತನಿಗೆ ನಮ್ಗೇನು ಒಳ್ಳೇದಂತ ಚೆನ್ನಾಗಿ ಗೊತ್ತಿದೆ. ಅದಕ್ಕೇ, ಕೆಲವೊಮ್ಮೆ ನಾವು ಕೇಳಿದ್ದನ್ನ ಆತನು ಕೊಡ್ದೇ ಇರ್ಬಹುದು ಅಥ್ವಾ ನಾವು ನೆನ್ಸಿದ್ದಕ್ಕಿಂತ ಸ್ವಲ್ಪ ತಡವಾಗಿಯೂ ಕೊಡ್ಬಹುದು.—2 ಕೊರಿಂ. 12:7-9.
12-13. ಯೆಹೋವ ಯಾವೆಲ್ಲಾ ವಿಧಗಳಲ್ಲಿ ನಮ್ಮ ಅವಶ್ಯಕತೆಗಳನ್ನು ಪೂರೈಸ್ತಿದ್ದಾನೆ?
12 ಯೆಹೋವನು ನಮ್ಮ ಅವಶ್ಯಕತೆಗಳನ್ನ ಪೂರೈಸ್ತಾನೆ. ಆತನು ಪ್ರತಿ ಕುಟುಂಬದಲ್ಲಿ ಅಪ್ಪಂದಿರು ಏನೆಲ್ಲಾ ಮಾಡ್ಬೇಕಂತ ಹೇಳಿದ್ದಾನೋ ಅದನ್ನು ಸ್ವತಃ ಆತನೇ ಮಾಡ್ತಾನೆ. (1 ತಿಮೊ. 5:8) ತನ್ನ ಮಕ್ಕಳ ಜೀವನಕ್ಕೆ ಏನೆಲ್ಲಾ ಬೇಕೋ ಅದನ್ನ ಕೊಡ್ತಾನೆ. ನಾವು ಊಟ, ಬಟ್ಟೆ, ಮನೆ ಬಗ್ಗೆ ಚಿಂತೆ ಮಾಡೋದು ಆತನಿಗಿಷ್ಟ ಇಲ್ಲ. (ಮತ್ತಾ. 6:32, 33; 7:11) ಆತನು ಪ್ರೀತಿಯ ತಂದೆ ಆಗಿರೋದ್ರಿಂದ ಭವಿಷ್ಯದಲ್ಲಿ ನಮಗೆ ಏನೆಲ್ಲಾ ಬೇಕೋ ಅದನ್ನ ಪೂರೈಸೋ ಏರ್ಪಾಡನ್ನ ಮಾಡಿದ್ದಾನೆ.
13 ಎಲ್ಲಕ್ಕಿಂತ ಹೆಚ್ಚಾಗಿ ಆತನಿಗೆ ಆಪ್ತರಾಗೋಕೆ ಬೇಕಾದ ಎಲ್ಲಾ ವಿಷಯಗಳನ್ನ ಕೊಟ್ಟಿದ್ದಾನೆ. ತನ್ನ ವಾಕ್ಯವಾದ ಬೈಬಲ್ ಮೂಲಕ ತಾನ್ಯಾರು, ತನ್ನ ಉದ್ದೇಶ ಏನು, ನಮ್ಮನ್ಯಾಕೆ ಸೃಷ್ಟಿ ಮಾಡಿದ್ದಾನೆ ಮತ್ತು ಮುಂದೆ ಏನಾಗುತ್ತೆ ಅನ್ನೋದನ್ನ ತಿಳ್ಸಿದ್ದಾನೆ. ನಮ್ಮ ಹೆತ್ತವರಿಂದ್ಲೋ ಅಥ್ವಾ ಬೇರೆಯವರಿಂದ್ಲೋ ನಾವು ಸತ್ಯ ಕಲಿಯುವಂತೆ ಆತನೇ ನಮ್ಗೆ ಸಹಾಯ ಮಾಡಿದ್ದಾನೆ. ಹೀಗೆ ನಮ್ಮಲ್ಲಿ ಒಬ್ಬೊಬ್ರ ಬಗ್ಗೆನೂ ಆಸಕ್ತಿ ತೋರ್ಸಿದ್ದಾನೆ. ಸಭಾ ಹಿರಿಯರ ಮೂಲಕ ಅಥ್ವಾ ಸಭೆಯಲ್ಲಿರೋ ಬೇರೆ ಪ್ರೌಢ ಸಹೋದರ ಸಹೋದರಿಯರ ಮೂಲಕನೂ ನಮ್ಗೆ ಬೇಕಾದ ಸಹಾಯ ಕೊಡ್ತಾನೇ ಬಂದಿದ್ದಾನೆ. ಅಷ್ಟೇ ಅಲ್ಲ, ಒಂದೇ ಕುಟುಂಬದಂತೆ ಇರುವ ನಮ್ಮ ಸಹೋದರ ಸಹೋದರಿಯರ ಜೊತೆ ಕೂಟಗಳಿಗೆ ಕೂಡಿ ಬಂದಾಗ್ಲೂ ಯೆಹೋವನು ನಮ್ಮನ್ನು ಮಾರ್ಗದರ್ಶಿಸ್ತಿದ್ದಾನೆ. ಈ ವಿಧಗಳಲ್ಲಿ ಮತ್ತು ಇನ್ನೂ ಅನೇಕ ವಿಧಗಳಲ್ಲಿ ಯೆಹೋವನು ಒಬ್ಬ ಪ್ರೀತಿಯ ತಂದೆಯಂತೆ ನಮ್ಮೆಲ್ಲರ ಅವಶ್ಯಕತೆಗಳನ್ನು ಪೂರೈಸ್ತಿದ್ದಾನೆ.—ಕೀರ್ತ. 32:8.
14. (ಎ) ಯೆಹೋವನು ನಮಗ್ಯಾಕೆ ತರಬೇತಿ ಕೊಡ್ತಾನೆ? (ಬಿ) ಅದನ್ನು ಹೇಗೆ ಕೊಡ್ತಾನೆ?
14 ಯೆಹೋವನು ನಮ್ಗೆ ತರಬೇತಿ ಕೊಡ್ತಾನೆ. ನಾವು ಯೇಸುವಿನಂತೆ ಪರಿಪೂರ್ಣರಲ್ಲ. ಹಾಗಾಗಿ ನಮಗೆ ತರಬೇತಿ ಕೊಡೋ ಸಲುವಾಗಿ ಆತನು ನಮಗೆ ಅಗತ್ಯವಿದ್ದಾಗೆಲ್ಲಾ ಶಿಸ್ತು ಕೊಡ್ತಾನೆ. “ಯೆಹೋವನು ಯಾರನ್ನು ಪ್ರೀತಿಸುತ್ತಾನೋ ಅವರಿಗೇ ಶಿಸ್ತನ್ನು ನೀಡುತ್ತಾನೆ” ಅಂತ ಬೈಬಲ್ ಹೇಳ್ತದೆ. (ಇಬ್ರಿ. 12:6, 7) ಯೆಹೋವನು ನಮ್ಗೆ ಅನೇಕ ವಿಧಗಳಲ್ಲಿ ಶಿಸ್ತು ಕೊಡ್ಬಹುದು. ಉದಾಹರಣೆಗೆ, ನಾವು ಬೈಬಲಿಂದ ಓದಿದ ಅಥ್ವಾ ಕೂಟಗಳಲ್ಲಿ ಕೇಳಿಸ್ಕೊಂಡ ಒಂದು ವಿಷ್ಯದಿಂದ ನಮ್ಮ ಯೋಚನೆ ಅಥವಾ ನಡ್ಕೊಳ್ಳೋ ರೀತಿಯಲ್ಲಿ ಬದಲಾವಣೆ ಮಾಡ್ಕೊಬೇಕು ಅಂತ ಅರ್ಥ ಮಾಡಿಸಬಹುದು. ಕೆಲವೊಮ್ಮೆ ಹಿರಿಯರಿಂದ್ಲೂ ನಮ್ಗೆ ಸಹಾಯ ಮಾಡ್ಬಹುದು. ಯೆಹೋವನು ಕೊಡೋ ಶಿಸ್ತು ಯಾವ್ದೇ ರೀತಿಯಲ್ಲಿದ್ರೂ ನಾವೊಂದನ್ನಂತೂ ಮರೀಬಾರ್ದು. ಅದೇನಂದ್ರೆ ಆತನು ನಮ್ಮನ್ನು ಪ್ರೀತಿಸೋದ್ರಿಂದ್ಲೇ ಶಿಸ್ತು ಕೊಡ್ತಾನೆ.—ಯೆರೆ. 30:11.
15. ಯೆಹೋವನು ನಮ್ಮನ್ನು ಹೇಗೆಲ್ಲಾ ಕಾಪಾಡ್ತಾನೆ?
15 ನಾವು ಕಷ್ಟದಲ್ಲಿರುವಾಗ ಯೆಹೋವನು ನಮಗೆ ಸಹಾಯ ಮಾಡ್ತಾನೆ. ಒಬ್ಬ ಮಾನವ ತಂದೆ ತನ್ನ ಮಕ್ಳು ಕಷ್ಟದಲ್ಲಿರುವಾಗ ಹೇಗೆ ‘ನಾನು ನಿನ್ನ ಜೊತೆ ಇದ್ದೀನಿ’ ಅಂತ ಬೆಂಬಲ ಕೊಡ್ತಾನೋ ಅದೇ ರೀತಿ ನಮ್ಮ ಸ್ವರ್ಗೀಯ ತಂದೆ ಯೆಹೋವನು ನಮ್ಗೆ ಬೆಂಬಲ ಕೊಡ್ತಾನೆ. ಆತನು ತನ್ನ ಪವಿತ್ರಾತ್ಮವನ್ನು ನಮ್ಗೆ ಕೊಡ್ತಾನೆ. ಇದು ನಮ್ಗೆ ಆತನ ಜೊತೆ ಇರುವ ಸಂಬಂಧ ಹಾಳಾಗದಂತೆ ನೋಡಿಕೊಳ್ತದೆ. (ಲೂಕ 11:13) ನಾವು ನಿರುತ್ತೇಜನದಿಂದ ಕುಗ್ಗಿಹೋದಾಗ್ಲೂ ಯೆಹೋವನು ನಮಗೆ ಸಹಾಯ ಮಾಡ್ತಾನೆ. ಉದಾಹರಣೆಗೆ, ಆತನು ನಮ್ಗೆ ಅದ್ಭುತ ನಿರೀಕ್ಷೆ ಕೊಟ್ಟಿದ್ದಾನೆ. ಮುಂದೆ ನೆರವೇರಲಿಕ್ಕಿರೋ ಈ ನಿರೀಕ್ಷೆ ನಮ್ಗೆ ಈಗಿರೋ ಕಷ್ಟಗಳನ್ನ ತಾಳ್ಕೊಳ್ಳೋಕೆ ಸಹಾಯ ಮಾಡ್ತದೆ. ನಮಗೆ ಬರೋ ಕಷ್ಟಗಳಿಂದಾಗಿ ನಾವು ಯಾವ್ದೇ ಹಾನಿಯನ್ನ ಅನುಭವಿಸಿದ್ರೂ ಅದನ್ನ ನಮ್ಮ ಪ್ರೀತಿಯ ತಂದೆ ಪೂರ್ತಿಯಾಗಿ ಸರಿಮಾಡ್ತಾನೆ. ನಾವೀಗ ಅನುಭವಿಸ್ತಾ ಇರೋ ಕಷ್ಟಗಳೇನಿದ್ರೂ ಸ್ವಲ್ಪ ಸಮ್ಯಕ್ಕೆ ಮಾತ್ರ. ಆದ್ರೆ ಯೆಹೋವನು ಕೊಡೋ ಆಶೀರ್ವಾದ ನಿತ್ಯ ನಿರಂತರ.—2 ಕೊರಿಂ. 4:16-18.
ನಮ್ಮ ಅಪ್ಪ ಯಾವತ್ತಿಗೂ ನಮ್ಮ ಕೈಬಿಡಲ್ಲ
16. ಆದಾಮನು ತನ್ನ ಅಪ್ಪ ಯೆಹೋವನಿಗೆ ಅವಿಧೇಯನಾದಾಗ ಏನಾಯ್ತು?
16 ಆದಾಮನು ಅವಿಧೇಯನಾದಾಗ ಯೆಹೋವನು ನಡ್ಕೊಂಡ ವಿಧದಿಂದ ಆತನಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ ಅನ್ನೋದು ಗೊತ್ತಾಗುತ್ತೆ. ಆದಾಮ ಅವಿಧೇಯನಾದಾಗ ಅವನಿಗಾಗಲಿ, ಅವನ ಮಕ್ಕಳಿಗಾಗ್ಲಿ ಯೆಹೋವನ ಕುಟುಂಬದ ಭಾಗವಾಗಿ ಮುಂದುವರಿಯೋ ಸುಯೋಗ ಕೈತಪ್ಪಿ ಹೋಯ್ತು. (ರೋಮ. 5:12; 7:14) ಆದ್ರೆ ಯೆಹೋವನು ಆದಾಮನ ಮಕ್ಕಳ ಕೈಬಿಡ್ಲಿಲ್ಲ.
17. ಆದಾಮ ದಂಗೆ ಎದ್ದ ಕೂಡ್ಲೇ ಯೆಹೋವನು ಏನು ಮಾಡಿದನು?
17 ಯೆಹೋವನು ಆದಾಮನಿಗೆ ಶಿಕ್ಷೆ ಕೊಟ್ಟನು. ಆದ್ರೆ ಅವನ ಮಕ್ಕಳಿಗೆ ಅನ್ಯಾಯ ಆಗೋಕೆ ಬಿಡ್ಲಿಲ್ಲ. ಯಾರೆಲ್ಲಾ ತನ್ನ ಮಾತಿನಂತೆ ನಡ್ಕೊಳ್ತಾರೋ ಅವ್ರಿಗೆಲ್ಲಾ ತನ್ನ ಕುಟುಂಬದ ಭಾಗವಾಗಿರೋ ಅವಕಾಶ ಕೊಡ್ತೀನಿ ಅಂತ ಆಗಲೇ ಮಾತುಕೊಟ್ಟನು. (ಆದಿ. 3:15; ರೋಮ. 8:20, 21) ಇದಕ್ಕೋಸ್ಕರ ತನ್ನ ಪ್ರೀತಿಯ ಮಗನಾದ ಯೇಸುವಿನ ಪ್ರಾಣವನ್ನು ಯಜ್ಞವಾಗಿ ಕೊಟ್ಟನು. ತನ್ನ ಪ್ರೀತಿಯ ಮಗನನ್ನ ನಮ್ಗೋಸ್ಕರ ಕೊಟ್ಟಿರೋದನ್ನ ನೋಡುವಾಗ ಯೆಹೋವನಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ ಅನ್ನೋದು ಗೊತ್ತಾಗುತ್ತೆ.—ಯೋಹಾ. 3:16.
18. ಒಂದ್ವೇಳೆ ನಾವು ಯೆಹೋವನಿಂದ ದೂರ ಹೋಗಿದ್ರೂ ಆತನು ನಮ್ಮನ್ನ ಮಕ್ಕಳಂತೆ ಸೇರಿಸಿಕೊಳ್ಳೋಕೆ ಬಯಸ್ತಾನೆ ಅಂತ ಯಾಕೆ ಹೇಳ್ಬಹುದು?
ಲೂಕ 15:11-32) ಆ ದೃಷ್ಟಾಂತದಲ್ಲಿದ್ದ ತಂದೆ ತನ್ನ ಮಗ ಬಂದೇ ಬರ್ತಾನೆ ಅಂತ ನಿರೀಕ್ಷೆ ಇಟ್ಟಿದ್ದನು. ಅವನ ಮಗ ವಾಪಸ್ ಬಂದಾಗ ಸಂತೋಷದಿಂದ ಮನೆಗೆ ಬರಮಾಡಿಕೊಂಡನು. ನಾವು ಒಂದು ವೇಳೆ ಯೆಹೋವನಿಂದ ದೂರ ಹೋಗಿ ಈಗ ಪಶ್ಚಾತ್ತಾಪಪಡ್ತಿದ್ರೆ ನಮ್ಮ ಪ್ರೀತಿಯ ಅಪ್ಪ ಯೆಹೋವ ನಮ್ಮನ್ನು ಖಂಡಿತ ಪ್ರೀತಿಯಿಂದ ಬರಮಾಡಿಕೊಳ್ತಾನೆ.
18 ನಾವು ಅಪರಿಪೂರ್ಣರಾಗಿದ್ರೂ ತನ್ನ ಕುಟುಂಬದ ಭಾಗವಾಗಿರ್ಬೇಕು ಅಂತ ಯೆಹೋವನು ಬಯಸ್ತಾನೆ. ಆತನು ನಮ್ಮನ್ನ ಯಾವತ್ತೂ ಒಂದು ಹೊರೆ ತರ ನೋಡಲ್ಲ. ನಾವು ಆತನಿಗೆ ಬೇಜಾರು ಮಾಡ್ದಾಗ ಅಥ್ವಾ ಆತನಿಂದ ದೂರ ಹೋದಾಗ ನಮ್ಮ ಮೇಲಿರೋ ನಂಬಿಕೇನ ಕಳ್ಕೊಳ್ಳಲ್ಲ. ನಾವು ಪುನಃ ಆತನ ಬಳಿ ವಾಪಸ್ ಬರ್ತೇವೆ ಅಂತ ನೆನಸ್ತಾನೆ. ಯೆಹೋವನು ನಮ್ಮೆಲ್ರನ್ನೂ ಎಷ್ಟು ಪ್ರೀತಿ ಮಾಡ್ತಾನೆ ಅನ್ನೋದನ್ನ ಯೇಸು ಹೇಳಿದ ಪೋಲಿಹೋದ ಮಗನ ಕಥೆಯಿಂದ ತಿಳ್ಕೋಬಹ್ದು. (19. ಆದಾಮನಿಂದ ಆಗಿರೋ ಹಾನಿಯನ್ನ ಯೆಹೋವನು ಹೇಗೆ ಸರಿಮಾಡ್ತಾನೆ?
19 ಆದಾಮನಿಂದಾದ ಎಲ್ಲಾ ಹಾನಿಯನ್ನ ಯೆಹೋವನು ಸರಿಮಾಡ್ತಾನೆ. ಆದಾಮ ದಂಗೆ ಎದ್ದಾಗಲೇ ಯೆಹೋವನು ಮನುಷ್ಯರಲ್ಲಿ 1,44,000 ಮಂದಿಯನ್ನ ದತ್ತು ತಗೊಳ್ಳೋಕೆ ನಿರ್ಧರಿಸಿದನು. ಅವ್ರು ಯೇಸು ಜೊತೆ ಸ್ವರ್ಗದಲ್ಲಿ ರಾಜರಾಗಿ ಮತ್ತು ಯಾಜಕರಾಗಿ ಆಳಲಿದ್ದಾರೆ. ದೇವರ ಮಾತಿಗೆ ವಿಧೇಯರಾಗೋ ಮನುಷ್ಯರು ಹೊಸ ಲೋಕದಲ್ಲಿ ಪರಿಪೂರ್ಣರಾಗಲು ಯೇಸು ಮತ್ತು ಆತನ ಸಹರಾಜರು ಸಹಾಯ ಮಾಡ್ತಾರೆ. ಕೊನೆ ಪರೀಕ್ಷೆಯಲ್ಲಿ ಯಾರು ದೇವ್ರಿಗೆ ನಂಬಿಗಸ್ತರಾಗಿರುತ್ತಾರೋ ಅವ್ರಿಗೆ ದೇವ್ರು ಶಾಶ್ವತ ಜೀವನ ಕೊಡ್ತಾನೆ. ಇಡೀ ಭೂಮಿ ತನ್ನ ಪರಿಪೂರ್ಣ ಮಕ್ಕಳಿಂದ ತುಂಬಿರೋದನ್ನ ನೋಡೋವಾಗ ನಮ್ಮ ಪ್ರೀತಿಯ ಅಪ್ಪ ಯೆಹೋವನಿಗೆ ತುಂಬ ಸಂತೋಷ ಆಗುತ್ತೆ. ಆ ಸಮ್ಯ ಎಷ್ಟು ಚೆನ್ನಾಗಿರುತ್ತಲ್ವಾ?
20. (ಎ) ಯೆಹೋವನು ನಮ್ಮನ್ನ ತುಂಬ ಪ್ರೀತಿಸ್ತಾನಂತ ಹೇಗೆ ತೋರಿಸ್ಕೊಟ್ಟಿದ್ದಾನೆ? (ಬಿ) ಮುಂದಿನ ಲೇಖನದಲ್ಲಿ ಏನನ್ನ ನೋಡ್ಲಿಕ್ಕಿದ್ದೇವೆ?
20 ಯೆಹೋವನು ನಮ್ಮನ್ನ ತುಂಬ ಪ್ರೀತಿಸ್ತಾನೆ ಅಂತ ತೋರಿಸ್ಕೊಟ್ಟಿದ್ದಾನೆ. ಆತನಂಥ ಅಪ್ಪ ಬೇರೆ ಯಾರೂ ಇಲ್ಲ. ಆತನು ನಮ್ಮ ಪ್ರಾರ್ಥನೆ ಕೇಳ್ತಾನೆ, ನಮ್ಮ ಜೀವ್ನಕ್ಕೆ ಬೇಕಾಗಿರೋ ಎಲ್ಲನೂ ಕೊಡ್ತಾನೆ, ಮಾತ್ರವಲ್ಲ ಆತನಿಗೆ ಆಪ್ತರಾಗೋಕೆ ಬೇಕಿರೋ ವಿಷ್ಯಗಳನ್ನೂ ಕೊಡ್ತಾನೆ. ಆತನು ನಮಗೆ ತರಬೇತಿ ಕೊಡ್ತಿದ್ದಾನೆ ಮತ್ತು ‘ನಿನ್ನ ಜೊತೆ ನಾನಿದ್ದೇನೆ’ ಅಂತ ಬೆಂಬಲ ಕೊಡ್ತಿದ್ದಾನೆ. ಮುಂದೆ ಆತನು ನಮಗೆ ಅದ್ಭುತ ಆಶೀರ್ವಾದಗಳನ್ನು ಸಹ ಕೊಡ್ತಾನೆ. ಯೆಹೋವನು ನಮ್ಮನ್ನ ಪ್ರೀತಿಸ್ತಾನೆ, ನಮ್ಮ ಬಗ್ಗೆ ಕಾಳಜಿವಹಿಸ್ತಾನೆ ಅಂತ ತಿಳ್ಕೊಳ್ಳುವಾಗ ನಮಗೆಷ್ಟೋ ಖುಷಿ ಆಗುತ್ತೆ. ಇಷ್ಟೊಂದು ಪ್ರೀತಿ ತೋರ್ಸೋ ಯೆಹೋವನನ್ನ ನಾವು ಪ್ರೀತಿಸ್ತೇವೆ ಅಂತ ಹೇಗೆ ತೋರಿಸ್ಬಹುದು ಅನ್ನೋದನ್ನ ಮುಂದಿನ ಲೇಖನದಲ್ಲಿ ನೋಡ್ಲಿಕ್ಕಿದ್ದೇವೆ.
ಗೀತೆ 18 ದೇವರ ನಿಷ್ಠಾ ಪ್ರೀತಿ
^ ಪ್ಯಾರ. 5 ನಾವು ಯೆಹೋವನ ಬಗ್ಗೆ ಯೋಚಿಸಿದಾಗೆಲ್ಲಾ ಆತನೊಬ್ಬ ಸೃಷ್ಟಿಕರ್ತ, ವಿಶ್ವದ ರಾಜ ಅನ್ನೋದಷ್ಟೇ ಮನ್ಸಿಗೆ ಬರುತ್ತೆ. ಆದ್ರೆ ಆತನು ನಮ್ಮನ್ನು ತುಂಬ ಪ್ರೀತಿ ಮಾಡುವ, ನಮ್ಮ ಬಗ್ಗೆ ತುಂಬ ಕಾಳಜಿವಹಿಸುವ ಒಬ್ಬ ತಂದೆ ಅಂತನೂ ಯೋಚಿಸೋಕೆ ನಮಗೆ ತುಂಬ ಕಾರಣಗಳಿವೆ. ಆ ಎಲ್ಲಾ ಕಾರಣಗಳನ್ನು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ಅಷ್ಟೇ ಅಲ್ಲ, ಯೆಹೋವ ಯಾವತ್ತಿಗೂ ನಮ್ಮ ಕೈಬಿಡಲ್ಲ ಅಂತ ನಾವು ಯಾಕೆ ನಂಬಬಹುದು ಅನ್ನೋದ್ರ ಬಗ್ಗೆನೂ ತಿಳಿಯಲಿದ್ದೇವೆ.
^ ಪ್ಯಾರ. 59 ಚಿತ್ರ ವಿವರಣೆ: ತಂದೆ ತನ್ನ ಮಗುವಿಗೆ ಪ್ರೀತಿ ತೋರಿಸುತ್ತಿರುವ ಚಿತ್ರಗಳು: ಅಪ್ಪ ತನ್ನ ಮಗ ಹೇಳ್ತಿರೋದನ್ನ ಚೆನ್ನಾಗಿ ಕೇಳಿಸ್ಕೊಳ್ತಿದ್ದಾನೆ. ಅಪ್ಪ ತನ್ನ ಮಗಳ ಅವಶ್ಯಕತೆಗಳನ್ನು ಪೂರೈಸ್ತಿದ್ದಾನೆ. ಅಪ್ಪ ತನ್ನ ಮಗನಿಗೆ ತರಬೇತಿ ಕೊಡ್ತಿದ್ದಾನೆ. ಅಪ್ಪ ತನ್ನ ಮಗನಿಗೆ ಸಮಾಧಾನ ಮಾಡ್ತಿದ್ದಾನೆ. ಇದೇ ರೀತಿ ಯೆಹೋವನು ಸಹ ಪ್ರೀತಿಯ ತಂದೆಯಂತೆ ನಮ್ಮ ಕಾಳಜಿವಹಿಸ್ತಾನೆ ಎಂದು ಈ ಚಿತ್ರಗಳ ಹಿಂದೆ ಮಸುಕಾಗಿ ಕಾಣಿಸುತ್ತಿರುವ ಯೆಹೋವನ ಕೈ ಸೂಚಿಸುತ್ತದೆ.