ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 8

ಹೊಟ್ಟೆಕಿಚ್ಚು ಹೊಡೆದೋಡಿಸಿ, ಶಾಂತಿ ಸ್ಥಾಪಿಸಿ

ಹೊಟ್ಟೆಕಿಚ್ಚು ಹೊಡೆದೋಡಿಸಿ, ಶಾಂತಿ ಸ್ಥಾಪಿಸಿ

“ನಾವು ಶಾಂತಿಯನ್ನು ಉಂಟುಮಾಡುವ ಮತ್ತು ಪರಸ್ಪರ ಭಕ್ತಿವೃದ್ಧಿಮಾಡುವ ವಿಷಯಗಳನ್ನು ಬೆನ್ನಟ್ಟೋಣ.”—ರೋಮ. 14:19.

ಗೀತೆ 39 ನಮ್ಮ ಶಾಂತಿ ಸಂಪತ್ತು

ಕಿರುನೋಟ *

1. ಹೊಟ್ಟೆಕಿಚ್ಚಿಂದಾಗಿ ಯೋಸೇಫನ ಕುಟುಂಬದ ಮೇಲೆ ಯಾವ ಪರಿಣಾಮವಾಯಿತು?

ಯಾಕೋಬನು ತನ್ನ ಎಲ್ಲಾ ಮಕ್ಕಳನ್ನ ಪ್ರೀತಿಸ್ತಿದ್ನು. ಅದ್ರಲ್ಲೂ 17 ವಯಸ್ಸಿನ ಯೋಸೇಫನನ್ನ ಕಂಡ್ರೆ ಸ್ವಲ್ಪ ಜಾಸ್ತಿನೇ ಪ್ರೀತಿ ಇತ್ತು. ಇದನ್ನ ನೋಡಿದ ಯೋಸೇಫನ ಅಣ್ಣಂದಿರು ಅವನ ಮೇಲೆ ಹೊಟ್ಟೆಕಿಚ್ಚು ಪಟ್ರು ಮತ್ತು ಅವನನ್ನ ದ್ವೇಷಿಸಲು ಶುರುಮಾಡಿದ್ರು. ಆದ್ರೆ ಯೋಸೇಫ ಅವ್ರಿಗೇನೂ ದ್ರೋಹ ಮಾಡಿರ್ಲಿಲ್ಲ. ಹಾಗಿದ್ರೂ ಯೋಸೇಫನನ್ನ ಅವ್ರ ಅಣ್ಣಂದಿರು ಗುಲಾಮನಾಗಿ ಮಾರಿಬಿಟ್ರು. ನಂತ್ರ ಅವರು ಅಪ್ಪನ ಹತ್ರ ಬಂದು ಯೋಸೇಫನನ್ನ ಯಾವುದೋ ಕ್ರೂರ ಪ್ರಾಣಿ ಕೊಂದುಬಿಡ್ತು ಅಂತ ಸುಳ್ಳು ಹೇಳಿದ್ರು. ಅವ್ರು ಹೊಟ್ಟೆಕಿಚ್ಚು ಪಟ್ಟಿದ್ರಿಂದ ತಮ್ಮ ಅಪ್ಪನಿಗೆ ತುಂಬ ನೋವು ಕೊಟ್ರು ಮತ್ತು ಅವ್ರ ಕುಟುಂಬದ ಶಾಂತಿಯನ್ನೂ ಹಾಳುಮಾಡಿದ್ರು.—ಆದಿ. 37:3, 4, 27-34.

2. ಗಲಾತ್ಯ 5:19-21 ರಲ್ಲಿ ತಿಳಿಸಿರೋ ಪ್ರಕಾರ ಹೊಟ್ಟೆಕಿಚ್ಚು ಯಾಕೆ ಅಪಾಯಕಾರಿಯಾಗಿದೆ?

2 “ಶರೀರಭಾವದ ಕಾರ್ಯಗಳು” ನಮ್ಮಲ್ಲಿದ್ರೆ ನಾವು ದೇವ್ರ ರಾಜ್ಯಕ್ಕೆ ಹೋಗಲ್ಲ ಅಂತ ಬೈಬಲ್‌ ಹೇಳುತ್ತೆ. ಅಂಥ ಅಪಾಯಕಾರಿ ಕಾರ್ಯಗಳಲ್ಲಿ ಹೊಟ್ಟೆಕಿಚ್ಚು * ಕೂಡ ಒಂದು. (ಗಲಾತ್ಯ 5:19-21 ಓದಿ.) ಹೊಟ್ಟೆಕಿಚ್ಚಿಂದಾಗಿ ದ್ವೇಷ, ಜಗಳ, ಕೋಪಗಳಂತಹ ಕೆಟ್ಟ ಗುಣಗಳು ಹುಟ್ಟಿಕೊಳ್ಳುತ್ತವೆ.

3. ಈ ಲೇಖನದಲ್ಲಿ ನಾವೇನನ್ನ ಚರ್ಚಿಸಲಿದ್ದೇವೆ?

3 ಹೊಟ್ಟೆಕಿಚ್ಚಿಂದಾಗಿ ಒಂದು ಕುಟುಂಬದಲ್ಲಿ ಹೇಗೆ ಶಾಂತಿ ಹಾಳಾಗುತ್ತೆ, ಸಂಬಂಧಗಳು ಹಾಳಾಗುತ್ತೆ ಅನ್ನೋದನ್ನ ಯೋಸೇಫನ ಅಣ್ಣಂದಿರ ಉದಾಹರಣೆಯಿಂದ ಕಲಿತ್ವಿ. ನಾವು ಯೋಸೇಫನ ಅಣ್ಣಂದಿರ ತರ ಮಾಡ್ದೇ ಇರಬಹುದು. ಆದ್ರೆ ನಾವು ಅಪರಿಪೂರ್ಣರು, ನಮ್ಮ ಹೃದಯನೂ ನಮ್ಮನ್ನು ವಂಚಿಸುತ್ತೆ. (ಯೆರೆ. 17:9) ಹಾಗಾಗಿ ಕೆಲವೊಮ್ಮೆ ನಮ್ಗೂ ಬೇರೆಯವ್ರನ್ನ ನೋಡ್ದಾಗ ಹೊಟ್ಟೆಕಿಚ್ಚಾಗಬಹುದು. ಬೈಬಲ್ನಲ್ಲಿ ದಾಖಲಾಗಿರೋ ಹೊಟ್ಟೆಕಿಚ್ಚು ಪಟ್ಟವ್ರ ಉದಾಹರಣೆಗಳನ್ನ ಈಗ ನೋಡೋಣ. ಯಾವ ಕಾರಣಗಳಿಂದಾಗಿ ನಮ್ಮ ಹೃದಯದಲ್ಲಿ ಹೊಟ್ಟೆಕಿಚ್ಚು ಬೆಳೆಯುತ್ತೆ ಅನ್ನೋದನ್ನ ಅರ್ಥಮಾಡಿಕೊಳ್ಳಲು ಈ ಉದಾಹರಣೆಗಳು ಸಹಾಯ ಮಾಡುತ್ತವೆ. ನಂತ್ರ ಹೊಟ್ಟೆಕಿಚ್ಚನ್ನ ಹೊಡೆದೋಡಿಸಿ ಶಾಂತಿಯನ್ನು ಸ್ಥಾಪಿಸಲು ನಾವೇನೆಲ್ಲಾ ಮಾಡಬಹುದು ಅನ್ನೋದನ್ನ ಚರ್ಚಿಸೋಣ.

ಹೊಟ್ಟೆಕಿಚ್ಚು ಬರಲು ಕಾರಣಗಳೇನು?

4. ಇಸಾಕನ ಮೇಲೆ ಫಿಲಿಷ್ಟಿಯರು ಯಾಕೆ ಹೊಟ್ಟೆಕಿಚ್ಚುಪಟ್ಟರು?

4 ಸಿರಿಸಂಪತ್ತು. ಇಸಾಕನು ಶ್ರೀಮಂತನಾಗಿದ್ದನು. ಹಾಗಾಗಿ ಫಿಲಿಷ್ಟಿಯರಿಗೆ ಅವನ ಮೇಲೆ ಹೊಟ್ಟೆಕಿಚ್ಚಾಯಿತು. (ಆದಿ. 26:12-14) ಇಸಾಕನು ತನ್ನ ಪ್ರಾಣಿಗಳಿಗೆ ನೀರು ಕುಡಿಸೋಕೆ ಉಪಯೋಗಿಸುತ್ತಿದ್ದ ಬಾವಿಗಳನ್ನ ಅವ್ರು ಮಣ್ಣು ಹಾಕಿ ಮುಚ್ಚಿಬಿಟ್ರು. (ಆದಿ. 26:15, 16, 27) ಫಿಲಿಷ್ಟಿಯರಂತೆ ಇಂದು ಸಹ ಕೆಲವ್ರು ತಮಗಿಂತ ಬೇರೆಯವ್ರಲ್ಲಿ ಹೆಚ್ಚಿನ ಸಿರಿಸಂಪತ್ತಿದ್ರೆ ಅದನ್ನ ನೋಡಿ ಹೊಟ್ಟೆಕಿಚ್ಚುಪಡ್ತಾರೆ. ಇಂಥವ್ರು ಬೇರಯವ್ರತ್ರ ಏನೆಲ್ಲಾ ಇದೆಯೋ ಅದು ತಮಗೂ ಬೇಕು ಅಂತ ಯೋಚಿಸೋದು ಮಾತ್ರವಲ್ಲ ಅವ್ರತ್ರ ಇರೋದು ಹಾಳಾಗಿ ಹೋಗ್ಲಿ ಅಂತಾನೂ ಯೋಚಿಸ್ತಾರೆ.

5. ಧಾರ್ಮಿಕ ಮುಖಂಡ್ರು ಯೇಸು ಮೇಲೆ ಯಾಕೆ ಹೊಟ್ಟೆಕಿಚ್ಚುಪಟ್ಟರು?

5 ಜನ್ರ ಮೆಚ್ಚುಗೆ. ಜನ್ರೆಲ್ಲರೂ ಯೇಸುವನ್ನು ಇಷ್ಟಪಡ್ತಿರೋದನ್ನ ನೋಡಿ ಆಗಿನ ಧಾರ್ಮಿಕ ಮುಖಂಡರಿಗೆ ಹೊಟ್ಟೆಕಿಚ್ಚಾಯಿತು. (ಮತ್ತಾ. 7:28, 29) ಯೇಸು ಯೆಹೋವನ ಪ್ರತಿನಿಧಿಯಾಗಿದ್ನು ಮತ್ತು ಸತ್ಯವನ್ನೇ ಕಲಿಸುತ್ತಿದ್ನು. ಆದ್ರೂ ಯೇಸುವಿನ ಹೆಸ್ರನ್ನು ಹಾಳುಮಾಡೋಕೆ ಧಾರ್ಮಿಕ ಮುಖಂಡ್ರು ಆತನ ಬಗ್ಗೆ ಸುಳ್ಳನ್ನ ಹಬ್ಬಿಸಿದ್ರು. (ಮಾರ್ಕ 15:10; ಯೋಹಾ. 11:47, 48; 12:12, 13, 19) ಈ ಘಟನೆಯಿಂದ ನಾವು ಯಾವ ಪಾಠ ಕಲೀಬಹುದು? ಸಭೆಯಲ್ಲಿರೋ ಯಾರಾದರೊಬ್ರ ಒಳ್ಳೇ ಗುಣಗಳನ್ನ ನೋಡಿ ಸಹೋದರ ಸಹೋದರಿಯರು ಅವ್ರನ್ನ ಇಷ್ಟಪಟ್ರೆ ಅವ್ರ ಬಗ್ಗೆ ನಾವು ಹೊಟ್ಟೆಕಿಚ್ಚುಪಡಬಾರದು. ಬದ್ಲಿಗೆ ಅವ್ರಲ್ಲಿರೋ ಒಳ್ಳೇ ಗುಣಗಳನ್ನ ನಾವೂ ತೋರಿಸೋಕೆ ಪ್ರಯತ್ನಿಸಬೇಕು.—1 ಕೊರಿಂ. 11:1; 3 ಯೋಹಾ. 11.

6. ದಿಯೊತ್ರೇಫನು ಹೊಟ್ಟೆಕಿಚ್ಚಿನಿಂದ ಏನು ಮಾಡಿದ?

6 ಸೇವಾಸುಯೋಗಗಳು. ಒಂದನೇ ಶತಮಾನದಲ್ಲಿ ದಿಯೊತ್ರೇಫನು ಸಭೆಯಲ್ಲಿ ಮುಂದಾಳತ್ವ ವಹಿಸುತ್ತಿದ್ದ ಸಹೋದರರ ಬಗ್ಗೆ ಹೊಟ್ಟೆಕಿಚ್ಚುಪಟ್ನು. ತನಗೆ ಪ್ರಥಮಸ್ಥಾನ ಸಿಗಬೇಕು ಅಂತ ಬಯಸಿದ್ನು. ಹಾಗಾಗಿ ಅಪೊಸ್ತಲ ಯೋಹಾನ ಮತ್ತು ಇನ್ನಿತರ ಜವಾಬ್ದಾರಿಯುತ ಸಹೋದರರ ಹೆಸ್ರನ್ನು ಹಾಳುಮಾಡುವ ಉದ್ದೇಶದಿಂದ ಅವ್ರ ಬಗ್ಗೆ ಕೆಟ್ಟ ಮಾತನ್ನ ಹಬ್ಬಿಸಿದ್ನು. (3 ಯೋಹಾ. 9, 10) ನಾವು ದಿಯೊತ್ರೇಫನಷ್ಟು ಕೆಳಗಿಳಿಯದೇ ಇರಬಹುದು, ಆದ್ರೆ ನಮ್ಗೆ ಇಷ್ಟವಾದ ನೇಮಕ ಬೇರೆ ಸಹೋದರ ಸಹೋದರಿಯರಿಗೆ ಸಿಕ್ದಾಗ ನಮ್ಗೆ ಹೊಟ್ಟೆಕಿಚ್ಚಾಗಬಹುದು. ಅದ್ರಲ್ಲೂ ‘ಆ ನೇಮಕವನ್ನ ನಾನು ಚೆನ್ನಾಗಿ ಮಾಡ್ತಿದ್ದೆ’ ಅಥವಾ ‘ಅವ್ರಿಗಿಂತ ಸೂಪರ್‌ ಆಗಿ ಮಾಡ್ತಿದ್ದೆ’ ಅಂತ ಅನಿಸಿದಾಗ ಇನ್ನೂ ಹೊಟ್ಟೆಕಿಚ್ಚಾಗಬಹುದು.

ನಮ್ಮ ಹೃದಯ ಮಣ್ಣಿನಂತೆ ಮತ್ತು ನಮ್ಮಲ್ಲಿರೋ ಒಳ್ಳೇ ಗುಣಗಳು ಸುಂದರ ಹೂಗಳಂತೆ. ಆದ್ರೆ ಹೊಟ್ಟೆಕಿಚ್ಚು ಅನ್ನೋದು ವಿಷಕಾರಿ ಕಳೆ ತರ. ಪ್ರೀತಿ, ಅನುಕಂಪ, ದಯೆಯಂಥ ಒಳ್ಳೇ ಗುಣಗಳು ಬೆಳೆಯದಂತೆ ಹೊಟ್ಟೆಕಿಚ್ಚು ತಡೆಯುತ್ತೆ (ಪ್ಯಾರ 7 ನೋಡಿ)

7. ಹೊಟ್ಟೆಕಿಚ್ಚು ನಮ್ಮ ಮೇಲೆ ಯಾವ ಪ್ರಭಾವ ಬೀರುತ್ತೆ?

7 ಹೊಟ್ಟೆಕಿಚ್ಚು ಒಂದು ರೀತಿ ವಿಷಪೂರಿತ ಕಳೆ ಆಗಿದೆ. ಒಂದ್ಸಲ ಅದು ಹೃದಯದೊಳಗೆ ಬೇರೂರಿಬಿಟ್ರೆ ಅದನ್ನ ಕಿತ್ತುಹಾಕೋದು ತುಂಬ ಕಷ್ಟ. ನಮ್ಮಲ್ಲಿ ಅಹಂಕಾರ, ಮತ್ಸರ ಮತ್ತು ಸ್ವಾರ್ಥದಂಥ ಕೆಟ್ಟ ಗುಣಗಳಿದ್ರೆ ಹೊಟ್ಟೆಕಿಚ್ಚೆಂಬ ಕಳೆ ಇನ್ನೂ ಚೆನ್ನಾಗಿ ಬೆಳೆದುಬಿಡುತ್ತೆ. ಹೊಟ್ಟೆಕಿಚ್ಚು ಪ್ರೀತಿ, ಕನಿಕರ ಮತ್ತು ದಯೆಯಂಥ ಒಳ್ಳೇ ಗುಣಗಳು ಬೆಳೆಯದಂತೆ ತಡೆಯುತ್ತೆ. ಆದ್ರಿಂದ ಹೊಟ್ಟೆಕಿಚ್ಚೆಂಬ ಕಳೆ ನಮ್ಮ ಹೃದಯದಲ್ಲಿ ಮೊಳಕೆಯೊಡೆಯುತ್ತಿದೆ ಅನ್ನೋದು ಗೊತ್ತಾದ ಕೂಡ್ಲೇ ಅದನ್ನ ಬೇರು ಸಮೇತ ಕಿತ್ತು ಬಿಸಾಕಬೇಕು. ಹಾಗಾದ್ರೆ ಹೊಟ್ಟೆಕಿಚ್ಚನ್ನ ಹೊಡೆದೋಡಿಸೋಕೆ ನಾವೇನು ಮಾಡಬೇಕು?

ದೀನತೆ ಬೆಳೆಸಿಕೊಳ್ಳಿ ಮತ್ತು ಇರೋದ್ರಲ್ಲೇ ತೃಪ್ತರಾಗಿರಿ

ಹೊಟ್ಟೆಕಿಚ್ಚೆಂಬ ಕಳೆಯನ್ನ ಕಿತ್ತೆಸೆಯೋದು ಹೇಗೆ? ದೇವರ ಪವಿತ್ರಾತ್ಮದ ಸಹಾಯದಿಂದ ಹೊಟ್ಟೆಕಿಚ್ಚನ್ನ ಬೇರುಸಮೇತ ಕಿತ್ತುಹಾಕ್ಬಹುದು ಮತ್ತು ಅದ್ರ ಜಾಗದಲ್ಲಿ ದೀನತೆ, ಇರೋದ್ರಲ್ಲೇ ತೃಪ್ತರಾಗಿರೋ ಗುಣವನ್ನ ಬೆಳೆಸ್ಬಹುದು (ಪ್ಯಾರ 8-9 ನೋಡಿ)

8. ಹೊಟ್ಟೆಕಿಚ್ಚನ್ನ ಹೊಡೆದೋಡಿಸಲು ಯಾವ ಗುಣಗಳು ಸಹಾಯಮಾಡುತ್ತವೆ?

8 ನಾವು ದೀನತೆಯನ್ನ ಬೆಳೆಸಿಕೊಂಡ್ರೆ ಮತ್ತು ಇರೋದ್ರಲ್ಲೇ ತೃಪ್ತರಾಗಿದ್ರೆ ಹೊಟ್ಟೆಕಿಚ್ಚನ್ನ ಹೊಡೆದೋಡಿಸಬಹುದು. ಈ ಒಳ್ಳೇ ಗುಣಗಳನ್ನ ನಮ್ಮ ಹೃದಯದಲ್ಲಿ ಬೆಳೆಸಿಕೊಂಡ್ರೆ ಹೊಟ್ಟೆಕಿಚ್ಚೆಂಬ ಕಳೆ ಬೆಳೆಯಲು ಸ್ಥಳವಿರೋದಿಲ್ಲ. ದೀನತೆಯಿದ್ರೆ ನಾವು ಯಾವತ್ತೂ ‘ನಾನೇ ಶ್ರೇಷ್ಠ ‘ ಅಂತ ಅಂದ್ಕೊಳ್ಳಲ್ಲ ಮತ್ತು ‘ಬೇರೆಯವ್ರಿಗಿಂತ ನನಗೇ ಹೆಚ್ಚು ಸಿಗಬೇಕು’ ಅಂತ ಯೋಚಿಸೋದೂ ಇಲ್ಲ. (ಗಲಾ. 6:3, 4) ಇರೋದ್ರಲ್ಲೇ ತೃಪ್ತಿಪಡೋ ವ್ಯಕ್ತಿ ಯಾವತ್ತಿಗೂ ತನ್ನನ್ನು ಬೇರೆಯವ್ರ ಜೊತೆ ಹೋಲಿಸಿ ನೋಡಲ್ಲ. (1 ತಿಮೊ. 6:7, 8) ದೀನತೆ ಇರೋ ಮತ್ತು ಇರೋದ್ರಲ್ಲೇ ತೃಪ್ತನಾಗಿರೋ ವ್ಯಕ್ತಿ ಬೇರೆಯವ್ರಿಗೆ ಏನಾದ್ರೂ ಒಳ್ಳೆಯದಾದ್ರೆ ಖುಷಿಪಡ್ತಾನೆ.

9. ಗಲಾತ್ಯ 5:16 ಮತ್ತು ಫಿಲಿಪ್ಪಿ 2:3, 4 ರಲ್ಲಿ ತಿಳಿಸಿರೋ ಪ್ರಕಾರ ಪವಿತ್ರಾತ್ಮ ನಮಗೆ ಹೇಗೆ ಸಹಾಯ ಮಾಡುತ್ತೆ?

9 ನಮ್ಮಲ್ಲಿ ಹೊಟ್ಟೆಕಿಚ್ಚು ಬೆಳೆಯದಿರೋಕೆ, ದೀನತೆ ಮತ್ತು ಇರೋದ್ರಲ್ಲೇ ತೃಪ್ತರಾಗಿರೋ ಗುಣವನ್ನ ಬೆಳೆಸಿಕೊಳ್ಳೋಕೆ ದೇವ್ರ ಪವಿತ್ರಾತ್ಮದ ಸಹಾಯ ಬೇಕು. (ಗಲಾತ್ಯ 5:16; ಫಿಲಿಪ್ಪಿ 2:3, 4 ಓದಿ.) ನಮ್ಮ ಮನಸ್ಸಲ್ಲಿ ಎಂಥ ಯೋಚನೆಗಳಿವೆ ಅನ್ನೋದನ್ನ ಪರೀಕ್ಷಿಸೋಕೆ ಯೆಹೋವನ ಪವಿತ್ರಾತ್ಮ ಸಹಾಯ ಮಾಡುತ್ತೆ. ಆತನ ಸಹಾಯದಿಂದ ನಾವು ಹೊಟ್ಟೆಕಿಚ್ಚಂಥ ಕೆಟ್ಟ ಯೋಚನೆಗಳನ್ನ ನಮ್ಮ ಮನಸ್ಸಿನಿಂದ ತೆಗೆದುಹಾಕಿ ಒಳ್ಳೆಯ ಗುಣಗಳನ್ನ ಬೆಳೆಸಿಕೊಳ್ಳೋಕೆ ಆಗುತ್ತೆ. (ಕೀರ್ತ. 26:2; 51:10) ಈಗ ನಾವು, ಹೊಟ್ಟೆಕಿಚ್ಚು ತಮ್ಮ ಹತ್ರ ಸುಳಿಯೋಕೂ ಬಿಡದಿದ್ದ ಮೋಶೆ ಮತ್ತು ಪೌಲರ ಉದಾಹರಣೆ ನೋಡೋಣ.

ಇಸ್ರಾಯೇಲ್‌ ಹುಡುಗನೊಬ್ಬನು ಮೋಶೆ ಮತ್ತು ಯೆಹೋ ಶುವನ ಹತ್ತಿರ ಓಡಿಬಂದು ಪಾಳೆಯದೊಳಗಿರುವ ಇಬ್ರು ಪುರುಷರು ಪ್ರವಾದಿಗಳ ತರ ನಡಕೊಳ್ತಿದ್ದಾರೆ ಅಂತ ಹೇಳಿದ್ದಾನೆ. ಅದಕ್ಕೆ, ಯೆಹೋಶುವನು ಅವರಿಬ್ರನ್ನು ತಡಿಬೇಕಂತ ಮೋಶೆ ಹತ್ರ ಕೇಳ್ಕೊಳ್ತಿದ್ದಾನೆ. ಆದ್ರೆ ಮೋಶೆ ಅದಕ್ಕೆ ಒಪ್ತಿಲ್ಲ. ಯೆಹೋವನು ತನ್ನ ಆತ್ಮವನ್ನು ಆ ಇಬ್ರು ಪುರುಷರಿಗೆ ಕೊಟ್ಟಿರೋದ್ರಿಂದ ತನಗೆ ಖುಷಿಯಾಗಿದೆ ಅಂತ ಮೋಶೆ ಯೆಹೋಶುವನಿಗೆ ಹೇಳ್ತಿದ್ದಾನೆ. (ಪ್ಯಾರ 10 ನೋಡಿ)

10. ಮೋಶೆಗೆ ಹೊಟ್ಟೆಕಿಚ್ಚು ಇರ್ಲಿಲ್ಲ ಅಂತ ಯಾವ ಉದಾಹರಣೆ ತೋರಿಸಿಕೊಡುತ್ತೆ? (ಮುಖಪುಟ ಚಿತ್ರ ನೋಡಿ.)

10 ಮೋಶೆಗೆ ದೇವಜನ್ರ ಮೇಲೆ ಸಾಕಷ್ಟು ಅಧಿಕಾರವಿತ್ತು. ಆದ್ರೆ ಆ ಅಧಿಕಾರ ಬೇರೆಯವ್ರಿಗೆ ಸಿಗದಂತೆ ಅವ್ನು ತಡೆಯಲಿಲ್ಲ. ಉದಾಹರಣೆಗೆ, ಒಂದ್ಸಲ ಯೆಹೋವನು ಮೋಶೆಗೆ ಕೊಟ್ಟ ಪವಿತ್ರಾತ್ಮ ಶಕ್ತಿಯಿಂದ ಸ್ವಲ್ಪ ತೆಗೆದುಕೊಂಡು ದೇವದರ್ಶನ ಗುಡಾರದ ಹತ್ರ ಕೂಡಿಬಂದಿದ್ದ ಇಸ್ರಾಯೇಲ್ಯ ಹಿರೀಪುರುಷರಿಗೆ ಕೊಟ್ನು. ಇದಾಗಿ ಸ್ವಲ್ಪದರಲ್ಲೇ ದೇವದರ್ಶನ ಗುಡಾರಕ್ಕೆ ಬರದೇ ಇದ್ದಂಥ ಇಬ್ಬರು ಹಿರಿಯರು ಕೂಡ ಪವಿತ್ರಾತ್ಮ ಪಡಕೊಂಡಿದ್ದಾರೆ ಮತ್ತು ಪ್ರವಾದಿಸುತ್ತಿದ್ದಾರೆ ಅನ್ನೋದು ಮೋಶೆಗೆ ಗೊತ್ತಾಯಿತು. ಪ್ರವಾದಿಸೋದನ್ನ ನಿಲ್ಸೋಕೆ ಆ ಇಬ್ರು ಹಿರಿಯರಿಗೆ ಹೇಳುವಂತೆ ಯೆಹೋಶುವನು ಮೋಶೆಗೆ ಹೇಳಿದಾಗ ಮೋಶೆ ಏನು ಮಾಡಿದನು? ಯೆಹೋವನು ಇವ್ರಿಗೂ ಆಶೀರ್ವಾದ ಮಾಡಿದ್ನು ಅಂತ ಮೋಶೆ ಹೊಟ್ಟೆಕಿಚ್ಚುಪಡ್ಲಿಲ್ಲ. ಬದ್ಲಿಗೆ ಅವ್ರಿಗೆ ಸಿಕ್ಕಿದ ಸುಯೋಗವನ್ನ ನೋಡಿ ಸಂತೋಷಪಟ್ನು. (ಅರ. 11:24-29) ಮೋಶೆಯಿಂದ ನಾವು ಯಾವ ಪಾಠ ಕಲೀಬಹುದು?

ಹಿರಿಯರು ಹೇಗೆ ಮೋಶೆಯ ತರ ದೀನತೆ ತೋರಿಸ್ಬಹುದು? (ಪ್ಯಾರ 11-12 ನೋಡಿ) *

11. ಹಿರಿಯರು ಮೋಶೆಯನ್ನು ಹೇಗೆ ಅನುಕರಿಸಬಹುದು?

11 ನೀವು ಹಿರಿಯರಾ? ನೀವು ಇಷ್ಟಪಡೋ ನೇಮಕವನ್ನ ಬೇರೊಬ್ರಿಗೆ ವಹಿಸಿಕೊಟ್ಟು, ಅದನ್ನ ಅವ್ರಿಗೆ ಕಲಿಸಿ ಅಂತ ಯಾರಾದ್ರೂ ನಿಮ್ಗೆ ಹೇಳಿದ್ದಾರಾ? ಉದಾಹರಣೆಗೆ, ಪ್ರತಿವಾರ ಕಾವಲಿನಬುರುಜು ಅಧ್ಯಯನ ನಡೆಸೋದು ನಿಮ್ಗೆ ತುಂಬ ಇಷ್ಟ ಅಂತ ನೆನಸಿ. ಈ ನೇಮಕವನ್ನ ಮಾಡಲು ಒಬ್ಬ ಸಹೋದರನಿಗೆ ತರಬೇತಿ ಕೊಡಿ ಅಂತ ನಿಮ್ಗೆ ಹೇಳಿದ್ದಾರೆ. ಮುಂದೊಂದು ದಿನ ಈ ನೇಮಕವನ್ನ ಆ ಸಹೋದರನೇ ನಡೆಸಲಿದ್ದಾನೆ ಅನ್ನೋದು ನಿಮ್ಗೆ ಗೊತ್ತು. ನೀವು ಮೋಶೆ ತರ ದೀನರಾಗಿದ್ರೆ, ‘ಇದ್ರಿಂದ ನನ್ನ ಗೌರವ ಕಡಿಮೆಯಾಗುತ್ತೆ’ ಅಂತ ಅಂದ್ಕೊಳ್ಳಲ್ಲ. ಬದ್ಲಿಗೆ ಸಂತೋಷದಿಂದ ಆ ಸಹೋದರನಿಗೆ ತರಬೇತಿ ಕೊಡ್ತೀರಿ.

12. ಇಂದು ಅನೇಕ ಕ್ರೈಸ್ತರು ಇರೋದ್ರಲ್ಲೇ ತೃಪ್ತರಾಗಿರೋ ಗುಣಾನ ಮತ್ತು ದೀನತೆಯನ್ನ ಹೇಗೆ ತೋರಿಸಿದ್ದಾರೆ?

12 ವೃದ್ಧ ಸಹೋದರರು ಎದುರಿಸುವ ಒಂದು ಸನ್ನಿವೇಶವನ್ನು ಗಮನಿಸಿ. ಅವ್ರು ಎಷ್ಟೋ ವರ್ಷಗಳಿಂದ ಹಿರಿಯರ ಮಂಡಳಿಯ ಸಂಯೋಜಕರಾಗಿ ಕೆಲ್ಸ ಮಾಡಿರುತ್ತಾರೆ. ಆದ್ರೆ ಅವ್ರಿಗೆ 80 ವರ್ಷವಾದಾಗ ತಮ್ಮ ನೇಮಕವನ್ನ ಬೇರೆಯವ್ರಿಗೆ ಮನಸಾರೆ ಬಿಟ್ಟುಕೊಡುತ್ತಾರೆ. ಸಂಚರಣ ಮೇಲ್ವಿಚಾರಕರಿಗೆ 70 ವರ್ಷವಾದಾಗ ದೀನತೆಯಿಂದ ತಮ್ಮ ನೇಮಕವನ್ನ ಬಿಟ್ಟುಬಿಟ್ಟು ಹೊಸ ನೇಮಕವನ್ನ ಸ್ವೀಕರಿಸ್ತಾರೆ. ಇತ್ತೀಚೆಗೆ ಅನೇಕ ಬೆತೆಲ್‌ ಸದಸ್ಯರು ತಮ್ಮ ಬೆತೆಲ್‌ ನೇಮಕವನ್ನ ಬಿಟ್ಟು ಹೊಸ ನೇಮಕವನ್ನ ಸ್ವೀಕರಿಸಿದ್ದಾರೆ. ಈ ಎಲ್ಲಾ ನಂಬಿಗಸ್ತ ಸಹೋದರ ಸಹೋದರಿಯರು ತಮಗಿದ್ದ ನೇಮಕವನ್ನು ಈಗ ಯಾರು ನಿರ್ವಹಿಸುತ್ತಿದ್ದಾರೋ ಅವ್ರ ಮೇಲೆ ಬೇಜಾರು ಮಾಡ್ಕೊಂಡಿಲ್ಲ.

13. ಯಾವ ಕಾರಣದಿಂದ ಅಪೊಸ್ತಲ ಪೌಲನು 12 ಮಂದಿ ಶಿಷ್ಯರ ಮೇಲೆ ಹೊಟ್ಟೆಕಿಚ್ಚುಪಡೋ ಸಾಧ್ಯತೆ ಇತ್ತು?

13 ಇರೋದ್ರಲ್ಲೇ ತೃಪ್ತಿಪಡೋ ಗುಣ ಮತ್ತು ದೀನತೆ ತೋರಿಸಿದ ಇನ್ನೊಬ್ಬ ವ್ಯಕ್ತಿ ಅಪೊಸ್ತಲ ಪೌಲನಾಗಿದ್ದಾನೆ. ಪೌಲನು ಹೊಟ್ಟೆಕಿಚ್ಚನ್ನ ಬೆಳೆಸಿಕೊಳ್ಳಲಿಲ್ಲ. ಆತನು ಶಕ್ತಿಮೀರಿ ಸೇವೆ ಮಾಡಿದ್ರೂ ದೀನತೆಯಿಂದ ಹೀಗೆ ಹೇಳಿದ್ನು: “ನಾನು ಅಪೊಸ್ತಲರಲ್ಲಿ ಅತಿ ಕನಿಷ್ಠನು; . . . ಅಪೊಸ್ತಲನೆಂದು ಕರೆಸಿಕೊಳ್ಳಲು ಯೋಗ್ಯನಲ್ಲ.” (1 ಕೊರಿಂ. 15:9, 10) ಹನ್ನೆರಡು ಅಪೊಸ್ತಲರಿಗಾದ್ರೋ ಯೇಸು ಭೂಮಿಯಲ್ಲಿದ್ದು ಸೇವೆ ಮಾಡುತ್ತಿದ್ದಾಗ ಆತನನ್ನ ಹಿಂಬಾಲಿಸಲು ಅವಕಾಶ ಸಿಕ್ತು. ಆದ್ರೆ ಪೌಲನು ಕ್ರೈಸ್ತನಾಗಿದ್ದು ಯೇಸು ತೀರಿಹೋಗಿ ಪುನರುತ್ಥಾನವಾದ ಮೇಲೆನೇ. ಕೊನೆಗೂ ಆತನು ‘ಅನ್ಯಜನಾಂಗಗಳಿಗೆ ಅಪೊಸ್ತಲನಾದನು.’ ಆದ್ರೂ ಆ 12 ಅಪೊಸ್ತಲರಲ್ಲಿ ಒಬ್ಬನಾಗೋ ವಿಶೇಷ ಸುಯೋಗ ಆತನಿಗೆ ಸಿಗಲಿಲ್ಲ. (ರೋಮ. 11:13; ಅ. ಕಾ. 1:21-26) ಪೌಲನು ಆ 12 ಶಿಷ್ಯರ ಬಗ್ಗೆನೋ ಅವ್ರಿಗೆ ಯೇಸುವಿನ ಜೊತೆಗಿದ್ದ ಸ್ನೇಹದ ಬಗ್ಗೆನೋ ಹೊಟ್ಟೆಕಿಚ್ಚುಪಡೋ ಬದ್ಲು ತನಗಿದ್ದ ಸುಯೋಗದಲ್ಲೇ ತೃಪ್ತಿಪಟ್ಟುಕೊಂಡ್ನು.

14. ನಾವು ಇರೋದ್ರಲ್ಲೇ ತೃಪ್ತರಾಗಿದ್ರೆ, ದೀನರಾಗಿದ್ರೆ ಏನು ಮಾಡ್ತೇವೆ?

14 ನಾವು ಇರೋದ್ರಲ್ಲೇ ತೃಪ್ತರಾಗಿದ್ರೆ, ದೀನರಾಗಿದ್ರೆ ಪೌಲನಂತೆ ಇರ್ತೇವೆ. ಯೆಹೋವನು ಯಾರಿಗೆ ಜವಾಬ್ದಾರಿಯನ್ನ ಕೊಟ್ಟಿದ್ದಾನೋ ಅವ್ರಿಗೆ ಗೌರವ ತೋರಿಸ್ತೇವೆ. (ಅ. ಕಾ. 21:20-26) ಕ್ರೈಸ್ತ ಸಭೆಯಲ್ಲಿ ಮುಂದಾಳತ್ವ ವಹಿಸಲು ಯೆಹೋವನು ಹಿರಿಯರನ್ನು ನೇಮಿಸಿದ್ದಾನೆ. ಅವ್ರು ಅಪರಿಪೂರ್ಣರಾಗಿದ್ರೂ ಯೆಹೋವನು ಅವ್ರನ್ನು ‘ಮನುಷ್ಯರಲ್ಲಿ ದಾನಗಳೆಂದು’ ನೆನಸುತ್ತಾನೆ. (ಎಫೆ. 4:8, 11) ನಾವು ಹಿರಿಯರನ್ನ ಗೌರವಿಸಿದ್ರೆ, ಅವ್ರು ಕೊಡೋ ನಿರ್ದೇಶನವನ್ನ ದೀನತೆಯಿಂದ ಪಾಲಿಸಿದ್ರೆ ಯೆಹೋವನಿಗೆ ಹತ್ರವಾಗುತ್ತೇವೆ ಮತ್ತು ಸಹೋದರ-ಸಹೋದರಿಯರ ಜೊತೆ ಶಾಂತಿ-ಸಮಾಧಾನದಿಂದ ಇರ್ತೇವೆ.

‘ಶಾಂತಿಯನ್ನು ಉಂಟುಮಾಡುವ ವಿಷಯಗಳನ್ನು ಬೆನ್ನಟ್ಟೋಣ’

15. ನಾವು ಏನು ಮಾಡಬೇಕು?

15 ಹೊಟ್ಟೆಕಿಚ್ಚು ಇದ್ದ ಕಡೆ ಶಾಂತಿ ಇರಲ್ಲ. ಹೊಟ್ಟೆಕಿಚ್ಚೆಂಬ ಕಳೆಯನ್ನ ನಮ್ಮ ಹೃದಯದಿಂದ ಕಿತ್ತು ಬಿಸಾಕಬೇಕು. ಅಷ್ಟೇ ಅಲ್ಲ, ಬೇರೆಯವ್ರು ನಮ್ಮ ಬಗ್ಗೆ ಹೊಟ್ಟೆಕಿಚ್ಚುಪಡದಂತೆ ನಾವು ನಡ್ಕೊಳ್ಳಬೇಕು. ‘ನಾವು ಶಾಂತಿಯನ್ನು ಉಂಟುಮಾಡುವ ಮತ್ತು ಪರಸ್ಪರ ಭಕ್ತಿವೃದ್ಧಿ ಮಾಡುವ ವಿಷಯಗಳನ್ನು ಬೆನ್ನಟ್ಟಬೇಕು’ ಎಂದು ಯೆಹೋವನು ಕೊಟ್ಟಿರೋ ಆಜ್ಞೆಯನ್ನ ಪಾಲಿಸಬೇಕಂದ್ರೆ ಈ ಪ್ರಾಮುಖ್ಯ ಹೆಜ್ಜೆಗಳನ್ನ ತಗೊಳ್ಳಲೇಬೇಕು. (ರೋಮ. 14:19) ಬೇರೆಯವ್ರು ನಮ್ಮ ಬಗ್ಗೆ ಹೊಟ್ಟೆಕಿಚ್ಚುಪಡದಂತೆ ನಾವು ಏನು ಮಾಡಬಹುದು ಮತ್ತು ಶಾಂತಿಯನ್ನು ಹೇಗೆ ಸ್ಥಾಪಿಸಬಹುದು?

16. ಬೇರೆಯವ್ರು ನಮ್ಮ ಬಗ್ಗೆ ಹೊಟ್ಟೆಕಿಚ್ಚುಪಡದಂತೆ ನಾವೇನು ಮಾಡ್ಬಹುದು?

16 ನಮ್ಮ ಮನೋಭಾವ, ನಮ್ಮ ನಡೆನುಡಿ ಬೇರೆಯವ್ರ ಮೇಲೆ ತುಂಬ ಪ್ರಭಾವ ಬೀರುತ್ತೆ. ನಮ್ಮತ್ರ ಇರೋ ವಸ್ತುಗಳನ್ನ ಪ್ರದರ್ಶನ ಮಾಡೋಕೆ ಈ ಲೋಕ ಕುಮ್ಮಕ್ಕು ಕೊಡುತ್ತೆ. (1 ಯೋಹಾ. 2:16) ಆದ್ರೆ ನಾವು ಹೀಗೆ ಮಾಡಿದ್ರೆ ಬೇರೆಯವ್ರಿಗೆ ನಮ್ಮ ಮೇಲೆ ಹೊಟ್ಟೆಕಿಚ್ಚು ಆಗ್ಬಹುದು. ನಮ್ಮತ್ರ ಇರೋ ವಸ್ತುಗಳ ಬಗ್ಗೆ ಅಥವಾ ನಾವು ತಗೋಬೇಕು ಅಂದ್ಕೊಂಡಿರೋ ವಸ್ತುಗಳ ಬಗ್ಗೆ ಇನ್ನೊಬ್ರತ್ರ ಕೊಚ್ಚಿಕೊಳ್ಳದೇ ಇದ್ರೆ ನಾವು ಅವ್ರಿಗೆ ಹೊಟ್ಟೆಕಿಚ್ಚು ಬರದಂತೆ ತಡೀತೇವೆ. ನಮಗೆ ಸಭೆಯಲ್ಲಿ ಸೇವಾಸುಯೋಗ ಸಿಕ್ಕಿದಾಗ್ಲೂ ಅದ್ರ ಬಗ್ಗೆ ಜಂಬಕೊಚ್ಚಿಕೊಳ್ಳದೆ ತಗ್ಗಿಸಿಕೊಂಡು ನಡೆದರೆ ಜನ್ರು ನಮ್ಮ ಬಗ್ಗೆ ಹೊಟ್ಟೆಕಿಚ್ಚುಪಡಲ್ಲ. ‘ನನ್ಗೆ ಆ ನೇಮಕ ಸಿಕ್ಕಿದೆ ಈ ನೇಮಕ ಸಿಕ್ಕಿದೆ’ ಅಂತ ಜನ್ರತ್ರ ಡಂಗುರ ಸಾರ್ಕೊಂಡು ಬಂದ್ರೆ ಅವ್ರ ಹೃದಯದಲ್ಲಿ ಹೊಟ್ಟೆಕಿಚ್ಚೆಂಬ ಕಳೆ ಬೆಳೆಯೋಕೆ ಗೊಬ್ಬರ ಹಾಕಿದಂತೆ ಇರುತ್ತೆ. ಅದ್ರ ಬದ್ಲಿಗೆ ಪ್ರತಿಯೊಬ್ರ ಬಗ್ಗೇನೂ ನಿಜವಾದ ಆಸಕ್ತಿ ತೋರಿಸ್ಬೇಕು ಮತ್ತು ಅವ್ರಲ್ಲಿರೋ ಒಳ್ಳೇದನ್ನ ಗುರುತಿಸಿ ಅವ್ರಿಗೆ ಅದನ್ನು ಹೇಳ್ಬೇಕು. ಹೀಗೆ ಮಾಡಿದ್ರೆ, ಇರೋದ್ರಲ್ಲೇ ತೃಪ್ತರಾಗಿರೋಕೆ ಅವ್ರಿಗೆ ನಾವು ಸಹಾಯ ಮಾಡ್ತೇವೆ. ಅಷ್ಟೇ ಅಲ್ಲ, ಸಭೆಯಲ್ಲಿ ಶಾಂತಿ ಮತ್ತು ಐಕ್ಯತೆಯನ್ನ ಕಾಪಾಡ್ತೇವೆ.

17. ಯೋಸೇಫನ ಅಣ್ಣಂದಿರಿಗೆ ಕುಟುಂಬದಲ್ಲಿ ಏನು ಸ್ಥಾಪಿಸೋಕೆ ಸಾಧ್ಯವಾಯಿತು ಮತ್ತು ಯಾಕೆ?

17 ಹೊಟ್ಟೆಕಿಚ್ಚನ್ನ ಹೊಡೆದೋಡಿಸಲು ನಮ್ಮಿಂದ ಖಂಡಿತ ಸಾಧ್ಯ. ಯೋಸೇಫನ ಅಣ್ಣಂದಿರ ಉದಾಹರಣೆಯನ್ನ ಪುನಃ ನೋಡಿ. ಯೋಸೇಫನಿಗೆ ಅವ್ರು ಅನ್ಯಾಯ ಮಾಡಿದ ಸುಮಾರು ವರ್ಷಗಳ ನಂತ್ರ ಅವ್ನನ್ನ ಈಜಿಪ್ಟ್‌ನಲ್ಲಿ ಭೇಟಿ ಮಾಡಿದ್ರು. ಯೋಸೇಫನು ಅವ್ರಿಗೆ ತಾನು ಯಾರಾಗಿದ್ದೇನೆ ಅಂತ ತಿಳಿಸೋ ಮುಂಚೆ ಅವ್ರು ಬದ್ಲಾಗಿದ್ದಾರಾ ಇಲ್ಲವಾ ಅಂತ ಪರೀಕ್ಷೆ ಮಾಡಿದ್ನು. ಯೋಸೇಫನು ಅವ್ರಿಗೆಲ್ಲಾ ಊಟದ ಏರ್ಪಾಡನ್ನ ಮಾಡಿ ಬೆನ್ಯಾಮೀನನಿಗೆ ಮಾತ್ರ ಬೇರೆಲ್ರಿಗಿಂತ ಹೆಚ್ಚು ಬಡಿಸಿದ್ನು. (ಆದಿ. 43:33, 34) ಆದ್ರೂ ಬೆನ್ಯಾಮೀನನ ಮೇಲೆ ಅವ್ನ ಅಣ್ಣಂದಿರು ಹೊಟ್ಟೆಕಿಚ್ಚುಪಡ್ಲಿಲ್ಲ. ಬದ್ಲಿಗೆ ಅವ್ನ ಮೇಲೆ, ಅವ್ರ ತಂದೆಯಾದ ಯಾಕೋಬನ ಮೇಲೆ ತಮ್ಗೆ ಪ್ರೀತಿ, ಕಾಳಜಿ ಇದೆ ಅಂತ ತೋರ್ಸಿಕೊಟ್ರು. (ಆದಿ. 44:30-34) ಯೋಸೇಫನ ಅಣ್ಣಂದಿರು ಹೊಟ್ಟೆಕಿಚ್ಚು ಪಡೋದನ್ನ ಬಿಟ್ಟುಬಿಟ್ಟಿದ್ರಿಂದ ತಮ್ಮ ಕುಟುಂಬದಲ್ಲಿ ಪುನಃ ಶಾಂತಿಯನ್ನು ಸ್ಥಾಪಿಸೋಕೆ ಸಾಧ್ಯವಾಯಿತು. (ಆದಿ. 45:4, 15) ಅದೇ ರೀತಿಯಲ್ಲಿ ನಮ್ಮ ಹೃದಯದಿಂದ ಹೊಟ್ಟೆಕಿಚ್ಚನ್ನು ಬೇರು ಸಮೇತ ಕಿತ್ತು ಹಾಕಿದ್ರೆ ನಮ್ಮ ಕುಟುಂಬದಲ್ಲಿ ಮತ್ತು ಸಭೆಯಲ್ಲಿ ಶಾಂತಿಯನ್ನು ಕಾಪಾಡುತ್ತೇವೆ.

18. ಯಾಕೋಬ 3:17, 18 ಕ್ಕನುಸಾರ ನಾವು ಬೇರೆಯವ್ರ ಜೊತೆ ಶಾಂತಿಯಿಂದ ಇದ್ರೆ ಏನಾಗುತ್ತೆ?

18 ನಾವು ಹೊಟ್ಟೆಕಿಚ್ಚನ್ನು ಹೊಡೆದೋಡಿಸಿ ಶಾಂತಿಯನ್ನು ಕಾಪಾಡಬೇಕು ಅಂತ ಯೆಹೋವನು ಬಯಸುತ್ತಾನೆ. ಈ ಎರಡೂ ವಿಷಯಗಳನ್ನು ಮಾಡೋಕೆ ನಾವು ತುಂಬ ಪ್ರಯತ್ನ ಮಾಡಬೇಕು. ನಾವೀ ಲೇಖನದಲ್ಲಿ ಚರ್ಚಿಸಿದಂತೆ ಹೊಟ್ಟೆಕಿಚ್ಚುಪಡೋದು ನಮ್ಮ ಸಹಜ ಸ್ವಭಾವ ಆಗಿಬಿಟ್ಟಿದೆ. (ಯಾಕೋ. 4:5) ನಾವಿರೋ ಈ ಲೋಕನೂ ಹೊಟ್ಟೆಕಿಚ್ಚಿಗೆ ತುಂಬ ಕುಮ್ಮಕ್ಕು ನೀಡುತ್ತೆ. ಆದ್ರೆ ನಾವು ದೀನತೆ, ಇರೋದ್ರಲ್ಲೇ ತೃಪ್ತಿ ಮತ್ತು ಗಣ್ಯತೆಯನ್ನ ಬೆಳೆಸಿಕೊಂಡ್ರೆ ಹೊಟ್ಟೆಕಿಚ್ಚನ್ನು ಪೂರ್ತಿಯಾಗಿ ಹೊಡೆದೋಡಿಸುತ್ತೇವೆ. ಅಷ್ಟೇ ಅಲ್ಲ, ಬೇರೆಯವ್ರ ಜೊತೆನೂ ಶಾಂತಿಯಿಂದ ಇರ್ತೇವೆ ಮತ್ತು ಹೆಚ್ಚು ಪ್ರೀತಿ, ಅನುಕಂಪ, ದಯೆ ತೋರಿಸೋ ವ್ಯಕ್ತಿಗಳಾಗ್ತೇವೆ.—ಯಾಕೋಬ 3:17, 18 ಓದಿ.

ಗೀತೆ 77 ಕ್ಷಮಿಸುವವರಾಗಿರಿ

^ ಪ್ಯಾರ. 5 ಯೆಹೋವನ ಸಂಘಟನೆ ಶಾಂತಿಗೆ ಹೆಸ್ರುವಾಸಿ. ನಮಗೇನಾದ್ರೂ ಸಹೋದರ ಸಹೋದರಿಯರ ಮೇಲೆ ಹೊಟ್ಟೆಕಿಚ್ಚು ಬಂದ್ರೆ ಆ ಶಾಂತಿ ಹಾಳಾಗಿಬಿಡುತ್ತೆ. ಈ ಲೇಖನದಲ್ಲಿ ಯಾವ ಕಾರಣಗಳಿಂದ ನಮ್ಗೆ ಹೊಟ್ಟೆಕಿಚ್ಚು ಬರಬಹುದು ಅನ್ನೋದನ್ನ ತಿಳಿಯಲಿದ್ದೇವೆ. ಈ ಕೆಟ್ಟ ಸ್ವಭಾವವನ್ನ ಹೇಗೆ ತೆಗೆದುಹಾಕ್ಬಹುದು ಮತ್ತು ಶಾಂತಿಯನ್ನು ಹೇಗೆ ಸ್ಥಾಪಿಸಬಹುದು ಅನ್ನೋದನ್ನ ಕಲಿಯಲಿದ್ದೇವೆ.

^ ಪ್ಯಾರ. 2 ಪದ ವಿವರಣೆ: ಬೈಬಲ್ನಲ್ಲಿ ಹೇಳಿರೋ ಪ್ರಕಾರ ನಮ್ಗೆ ಹೊಟ್ಟೆಕಿಚ್ಚು ಇದ್ರೆ ಬೇರೆಯವರತ್ರ ಏನಿದೆಯೋ ಅದು ನಮ್ಗೆ ಬೇಕು ಅಂತ ಯೋಚಿಸೋದು ಮಾತ್ರವಲ್ಲ, ಅವ್ರ ಹತ್ರ ಇರೋದು ಹಾಳಾಗಿ ಹೋಗ್ಬೇಕು, ಅವ್ರದನ್ನ ಕಳ್ಕೋಬೇಕು ಅಂತಾನೂ ಯೋಚಿಸ್ತೀವಿ.

^ ಪ್ಯಾರ. 61 ಚಿತ್ರ ವಿವರಣೆ: ಒಬ್ಬ ಯುವ ಹಿರಿಯನಿಗೆ ಕಾವಲಿನಬುರುಜು ಅಧ್ಯಯನ ನಡೆಸುವುದು ಹೇಗೆಂದು ತರಬೇತಿ ಕೊಡುವಂತೆ ಹಿರಿಯರ ಕೂಟದಲ್ಲಿ ಒಬ್ಬ ವೃದ್ಧ ಸಹೋದರನನ್ನು ಕೇಳಿಕೊಳ್ಳಲಾಗುತ್ತಿದೆ. ಇಷ್ಟರವರೆಗೂ ಆ ವೃದ್ಧ ಸಹೋದರನು ಈ ನೇಮಕವನ್ನ ಮಾಡ್ತಾ ಇದ್ದಿದ್ರಿಂದ ಅದು ಅವ್ರಿಗೆ ತುಂಬ ಇಷ್ಟವಾಗಿತ್ತು. ಆದ್ರಿಂದ ಅವ್ರಿಗೆ ಮೊದ್ಲು ಸ್ವಲ್ಪ ಕಷ್ಟವಾದ್ರೂ ಹಿರಿಯರ ನಿರ್ಣಯವನ್ನ ಮನಸಾರೆ ಬೆಂಬಲಿಸುತ್ತಾ ಆ ಯುವ ಹಿರಿಯನು ಕಾವಲಿನಬುರುಜು ಅಧ್ಯಯನ ನಡೆಸಿದ ಮೇಲೆ ಅವನನ್ನು ಶ್ಲಾಘಿಸಿ ಕೆಲವು ಸಲಹೆಗಳನ್ನು ಕೊಡುತ್ತಿದ್ದಾರೆ.