ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 8

ಕಷ್ಟ ಬಂದಾಗ್ಲೂ ಖುಷಿ ಕಳ್ಕೊಬೇಡಿ

ಕಷ್ಟ ಬಂದಾಗ್ಲೂ ಖುಷಿ ಕಳ್ಕೊಬೇಡಿ

“ನನ್ನ ಸಹೋದರರೇ, ನಿಮಗೆ ಬೇರೆ ಬೇರೆ ಕಷ್ಟಗಳು ಬಂದಾಗ ಖುಷಿಪಡಿ.”—ಯಾಕೋ. 1:2.

ಗೀತೆ 75 ನಮ್ಮ ಅತ್ಯಾನಂದಕ್ಕೆ ಕಾರಣಗಳು

ಕಿರುನೋಟ *

1-2. ಮತ್ತಾಯ 5:11 ರ ಪ್ರಕಾರ, ಕಷ್ಟ ಬಂದಾಗ್ಲೂ ನಾವು ಹೇಗಿರಬೇಕು?

ಯೇಸು ತನ್ನ ಹಿಂಬಾಲಕರಿಗೆ ನಿಜವಾದ ಸಂತೋಷ ಇರುತ್ತೆ ಅಂತ ಮಾತು ಕೊಟ್ಟ. ಆದ್ರೆ ಅವ್ರಿಗೆ ಕಷ್ಟನೂ ಬರುತ್ತೆ ಅಂತ ಎಚ್ಚರಿಸಿದ. (ಮತ್ತಾ. 10:22, 23; ಲೂಕ 6:20-23) ಕ್ರಿಸ್ತನ ಶಿಷ್ಯರಾಗಿ ಇರೋದ್ರಿಂದ ನಾವು ಸಂತೋಷವಾಗಿ ಇದ್ದೀವಿ. ಆದ್ರೆ ಯೆಹೋವನನ್ನ ಆರಾಧಿಸಬಾರದು ಅಂತ ನಮ್ಮ ಕುಟುಂಬದವರು ವಿರೋಧಿಸಬಹುದು, ಸರ್ಕಾರದಿಂದ ಹಿಂಸೆ ಬರಬಹುದು, ಕೆಲ್ಸದ ಸ್ಥಳದಲ್ಲಿ ಇರೋರು, ಸ್ಕೂಲಲ್ಲಿ ಇರೋರು ತಪ್ಪು ಮಾಡುವಂತೆ ನಮ್ಗೆ ಒತ್ತಡ ಹಾಕಬಹುದು. ಇಂಥ ಸನ್ನಿವೇಶಗಳ ಬಗ್ಗೆ ಯೋಚಿಸಿದಾಗ ನಮ್ಗೆ ಚಿಂತೆ ಆಗ್ಬಹುದು, ಗಾಬರಿ ಆಗ್ಬಹುದು.

2 ಸಾಮಾನ್ಯವಾಗಿ ಕಷ್ಟ ಬಂದಾಗ ಜನ ಸಂತೋಷವಾಗಿ ಇರಲ್ಲ. ಆದ್ರೆ ಕಷ್ಟ ಬಂದಾಗ್ಲೂ ಖುಷಿಯಾಗಿ ಇರ್ಬೇಕು ಅಂತ ಬೈಬಲ್‌ ಹೇಳುತ್ತೆ. ಉದಾಹರಣೆಗೆ, ಕಷ್ಟ ಬಂದಾಗ ದಿಕ್ಕೇ ತೋಚದಿರೋ ತರ ಇರೋ ಬದ್ಲಿಗೆ ನಾವು ಖುಷಿಖುಷಿಯಾಗಿ ಇರ್ಬೇಕು ಅಂತ ಯೇಸು ಶಿಷ್ಯ ಯಾಕೋಬ ಬರೆದ. (ಯಾಕೋ. 1:2, 12) ಯೇಸು ಸಹ ನಮ್ಗೆ ಹಿಂಸೆ ಬಂದಾಗ ನಾವು ಖುಷಿಯಾಗಿ ಇರ್ಬೇಕು ಅಂತ ಹೇಳಿದ. (ಮತ್ತಾಯ 5:11 ಓದಿ.) ಕಷ್ಟ ಬಂದಾಗ್ಲೂ ನಾವು ಹೇಗೆ ಖುಷಿಯಾಗಿ ಇರಬಹುದು? ಈ ಪ್ರಶ್ನೆಗೆ ಉತ್ರ ಒಂದನೇ ಶತಮಾನದ ಕ್ರೈಸ್ತರಿಗೆ ಯಾಕೋಬ ಬರೆದ ಪತ್ರದಲ್ಲಿದೆ. ನಾವೀಗ ಆಗಿನ ಕಾಲದ ಕ್ರೈಸ್ತರಿಗೆ ಯಾವ ಕಷ್ಟಗಳು ಬಂತು ಅಂತ ನೋಡೋಣ.

ಒಂದನೇ ಶತಮಾನದಲ್ಲಿದ್ದ ಕ್ರೈಸ್ತರಿಗೆ ಯಾವ ಕಷ್ಟಗಳು ಬಂತು?

3. ಯಾಕೋಬ ಯೇಸುವಿನ ಶಿಷ್ಯನಾದ ಸ್ವಲ್ಪದ್ರಲ್ಲೇ ಏನಾಯ್ತು?

3 ಯೇಸು ತೀರಿಹೋದ ಸ್ವಲ್ಪದ್ರಲ್ಲೇ ಅವನ ತಮ್ಮ ಯಾಕೋಬ ಕ್ರೈಸ್ತನಾದ. ಅದೇ ಸಮಯದಲ್ಲಿ ಯೆರೂಸಲೇಮಿನಲ್ಲಿದ್ದ ಕ್ರೈಸ್ತರ ಮೇಲೆ ಹಿಂಸೆ ಬಂತು. (ಅ. ಕಾ. 1:14; 5:17, 18) ಶಿಷ್ಯನಾದ ಸ್ತೆಫನನನ್ನ ಕೊಂದಾಗಂತೂ ತುಂಬ ಕ್ರೈಸ್ತರು ಯೆರೂಸಲೇಮನ್ನ ಬಿಟ್ಟು “ಯೂದಾಯ, ಸಮಾರ್ಯದಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿ ಹೋದ್ರು.” ದೂರದೂರದ ಪ್ರದೇಶಕ್ಕೆ ಅಂದ್ರೆ ಸೈಪ್ರಸ್‌, ಅಂತಿಯೋಕ್ಯಕ್ಕೆ ಓಡಿಹೋದ್ರು. (ಅ. ಕಾ. 7:58–8:1; 11:19) ಆಗ ಅವ್ರಿಗೆ ಖಂಡಿತ ಕಷ್ಟ ಆಗಿರುತ್ತೆ. ಆದ್ರೂ ಅವ್ರು ಹೋದ ಕಡೆಯೆಲ್ಲಾ ಸಿಹಿಸುದ್ದಿ ಸಾರೋದನ್ನ ಮುಂದುವರಿಸಿದ್ರು. ಇಡೀ ರೋಮನ್‌ ಸಾಮ್ರಾಜ್ಯದಲ್ಲಿ ಅನೇಕ ಕ್ರೈಸ್ತ ಸಭೆಗಳನ್ನ ಸ್ಥಾಪಿಸಿದ್ರು. (1 ಪೇತ್ರ 1:1) ಅವ್ರಿಗೆ ಮುಂದೆ ಇನ್ನೂ ಹೆಚ್ಚಿನ ಕಷ್ಟಗಳು ಕಾದಿತ್ತು.

4. ಒಂದನೇ ಶತಮಾನದ ಕ್ರೈಸ್ತರಿಗೆ ಇನ್ನೂ ಯಾವ ಕಷ್ಟಗಳು ಬಂತು?

4 ಒಂದನೇ ಶತಮಾನದ ಕ್ರೈಸ್ತರಿಗೆ ಬೇರೆ ರೀತಿಯ ಕಷ್ಟಗಳೂ ಬಂತು. ಉದಾಹರಣೆಗೆ ಕ್ರಿಸ್ತ ಶಕ 50 ರಲ್ಲಿ, ಎಲ್ಲ ಯೆಹೂದ್ಯರು ರೋಮ್‌ ಬಿಟ್ಟು ಹೋಗಬೇಕು ಅಂತ ರೋಮಿನ ಚಕ್ರವರ್ತಿಯಾದ ಕ್ಲೌದಿಯ ಆಜ್ಞೆ ಹೊರಡಿಸಿದ. ಕ್ರೈಸ್ತರಾಗಿದ್ದ ಯೆಹೂದಿಗಳೆಲ್ಲ ತಮ್ಮ ಮನೆ ಬಿಟ್ಟು ಬೇರೆ ಕಡೆ ಹೋಗಬೇಕಾಗಿ ಬಂತು. (ಅ. ಕಾ. 18:1-3) ಸುಮಾರು ಕ್ರಿಸ್ತ ಶಕ 61 ರಲ್ಲಿ ಅಪೊಸ್ತಲ ಪೌಲ ಇಬ್ರಿಯರಿಗೆ ಬರೆದ ಪತ್ರದಲ್ಲಿ, ಸಹೋದರರನ್ನ ಎಲ್ರ ಮುಂದೆ ಜನ ಅವಮಾನ ಮಾಡಿದ್ರು, ಜೈಲಿಗೆ ಹಾಕಿದ್ರು, ಅವ್ರ ಆಸ್ತಿಪಾಸ್ತಿ ಲೂಟಿ ಮಾಡಿದ್ರು ಅಂತ ಹೇಳಿದ. (ಇಬ್ರಿ. 10:32-34) ಇದ್ರ ಜೊತೆಗೆ, ಸಾಮಾನ್ಯವಾಗಿ ಬೇರೆ ಜನ್ರಿಗೆ ಬರುವಂಥ ಬಡತನ, ಕಾಯಿಲೆನೂ ಕ್ರೈಸ್ತರಿಗೆ ಬಂತು.—ರೋಮ. 15:26; ಫಿಲಿ. 2:25-27.

5. ಯಾವ ಪ್ರಶ್ನೆಗಳಿಗೆ ನಾವು ಉತ್ರ ತಿಳ್ಕೊಳ್ತೇವೆ?

5 ಕ್ರಿಸ್ತ ಶಕ 62 ಕ್ಕೆ ಮುಂಚೆ ಯಾಕೋಬ ಪತ್ರ ಬರೆದಾಗ ಸಹೋದರ ಸಹೋದರಿಯರು ಅನುಭವಿಸ್ತಿದ್ದ ಕಷ್ಟಗಳ ಬಗ್ಗೆ ಅವ್ನಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಕಷ್ಟ ಬಂದಾಗ್ಲೂ ಖುಷಿ ಕಳ್ಕೊಳ್ಳದೇ ಇರೋಕೆ ಸಹಾಯ ಮಾಡುವಂಥ ಸಲಹೆಗಳನ್ನ ಅವನು ಯೆಹೋವನ ಪ್ರೇರಣೆಯಿಂದ ತನ್ನ ಪತ್ರದಲ್ಲಿ ಬರೆದ. ಈಗ ನಾವು ಯಾಕೋಬನ ಪತ್ರದಲ್ಲಿರೋ ಆ ಕೆಲವು ಸಲಹೆಗಳನ್ನ ಚರ್ಚಿಸ್ತಾ ಮುಂದಿನ ಪ್ರಶ್ನೆಗಳಿಗೆ ಉತ್ರ ತಿಳ್ಕೊಳ್ಳೋಣ. ಯಾಕೋಬ ಯಾವ ಖುಷಿ ಬಗ್ಗೆ ಬರೆದ? ಯಾವ ಕಾರಣದಿಂದ ಒಬ್ಬ ಕ್ರೈಸ್ತ ಖುಷಿ ಕಳ್ಕೊಬಹುದು? ನಮ್ಗೆ ಕಷ್ಟ ಬಂದಾಗ್ಲೂ ಖುಷಿ ಕಳ್ಕೊಳ್ಳದೇ ಇರೋಕೆ ವಿವೇಕ, ನಂಬಿಕೆ, ಧೈರ್ಯ ಹೇಗೆ ಸಹಾಯ ಮಾಡುತ್ತೆ?

ಒಬ್ಬ ಕ್ರೈಸ್ತನಿಗೆ ಯಾವುದ್ರಿಂದ ಖುಷಿ ಸಿಗುತ್ತೆ?

ಲಾಟೀನು ದೀಪದ ಒಳಗಿರೋ ಬೆಂಕಿ ಉರಿತಾ ಇರೋ ತರನೇ ಯೆಹೋವನಿಂದ ಸಿಗೋ ಸಂತೋಷ ಒಬ್ಬ ಕ್ರೈಸ್ತನ ಹೃದಯದಲ್ಲಿ ಉರಿತಾ ಇರುತ್ತೆ (ಪ್ಯಾರ 6 ನೋಡಿ)

6. ಲೂಕ 6:22, 23 ರ ಪ್ರಕಾರ, ಒಬ್ಬ ಕ್ರೈಸ್ತನಿಗೆ ಕಷ್ಟ ಬಂದಾಗ್ಲೂ ಆನಂದವಾಗಿ ಇರೋಕೆ ಕಾರಣವೇನು?

6 ಒಳ್ಳೇ ಆರೋಗ್ಯ ಇದ್ರೆ, ತುಂಬ ಹಣ ಇದ್ರೆ, ಕುಟುಂಬದಲ್ಲಿ ನೆಮ್ಮದಿ ಇದ್ರೆ ಸಂತೋಷವಾಗಿ ಇರ್ತೀವಿ ಅಂತ ಜನ ನೆನಸ್ತಾರೆ. ಆದ್ರೆ ಯಾಕೋಬ ಈ ಆನಂದದ ಬಗ್ಗೆ ಬರಿಲಿಲ್ಲ. ಪವಿತ್ರಶಕ್ತಿಯಿಂದ ಸಿಗೋ ಆನಂದದ ಬಗ್ಗೆ ಬರೆದ. (ಗಲಾ. 5:22) ನಾವು ಜೀವನದಲ್ಲಿ ಚೆನ್ನಾಗಿದ್ದಾಗ ಮಾತ್ರ ಅಲ್ಲ ಕಷ್ಟ ಬಂದಾಗ್ಲೂ ಈ ಆನಂದ ಇದ್ದೇ ಇರುತ್ತೆ. ಒಬ್ಬ ಕ್ರೈಸ್ತನು ಯೆಹೋವ ಮೆಚ್ಚುವಂಥ ವಿಷ್ಯಗಳನ್ನ ಮಾಡ್ದಾಗ ಮತ್ತು ಯೇಸು ಕ್ರಿಸ್ತನ ತರ ನಡ್ಕೊಂಡಾಗ ಈ ಆನಂದವನ್ನ ಪಡ್ಕೊಳ್ತಾನೆ. (ಲೂಕ 6:22, 23 ಓದಿ; ಕೊಲೊ. 1:10, 11) ಹೃದಯದಲ್ಲಿರೋ ಈ ಆನಂದವನ್ನ ಲಾಟೀನು ದೀಪದ ಒಳಗಿರೋ ಬೆಂಕಿಗೆ ಹೋಲಿಸಬಹುದು. ಮಳೆ ಬಂದ್ರೂ ಗಾಳಿ ಬಂದ್ರೂ ಆ ಬೆಂಕಿ ಆರಿಹೋಗಲ್ಲ, ಉರೀತಾ ಇರುತ್ತೆ. ಅದೇ ತರ, ನಮ್ಮ ಆರೋಗ್ಯ ಹಾಳಾದಾಗ್ಲೂ ಕೈಯಲ್ಲಿ ಕಾಸು ಇಲ್ಲದಾಗ್ಲೂ ಕುಟುಂಬದವ್ರು ನಮ್ಮನ್ನ ನೋಡಿ ಆಡ್ಕೊಂಡು ನಕ್ಕಾಗ್ಲೂ ತುಂಬಾ ವಿರೋಧ ಬಂದಾಗ್ಲೂ ಆ ಬೆಂಕಿ ತರಾನೇ ನಮ್ಮ ಹೃದಯದಲ್ಲಿರೋ ಆನಂದನೂ ಆರಿಹೋಗಲ್ಲ. ಜನ್ರ ಕೈಯಿಂದಾನೂ ಆ ಆನಂದವನ್ನ ನಂದಿಸೋಕೆ ಆಗಲ್ಲ. ಬದ್ಲಿಗೆ ಇನ್ನೂ ಹೆಚ್ಚಾಗ್ತಾ ಹೋಗುತ್ತೆ. ಕಷ್ಟ ಬಂದಾಗೆಲ್ಲ ನಮ್ಮ ನಂಬಿಕೆ ಗಟ್ಟಿಯಾಗುತ್ತೆ. ಹೀಗೆ ನಾವು ಕ್ರಿಸ್ತನ ನಿಜ ಶಿಷ್ಯರು ಅನ್ನೋದನ್ನ ತೋರಿಸಿಕೊಡ್ತೀವಿ. (ಮತ್ತಾ. 10:22; 24:9; ಯೋಹಾ. 15:20) ಅದಕ್ಕೇ ಯಾಕೋಬ “ನನ್ನ ಸಹೋದರರೇ, ನಿಮಗೆ ಬೇರೆ ಬೇರೆ ಕಷ್ಟಗಳು ಬಂದಾಗ ಖುಷಿಪಡಿ” ಅಂತ ಬರೆದ.—ಯಾಕೋ. 1:2.

ಕತ್ತಿ ತಯಾರು ಮಾಡುವಾಗ ಉಪಯೋಗಿಸೋ ಕುಲುಮೆ ಬೆಂಕಿಗೆ ನಮ್ಮ ಕಷ್ಟಗಳನ್ನ ಯಾಕೆ ಹೋಲಿಸಬಹುದು? (ಪ್ಯಾರ 7 ನೋಡಿ) *

7-8. ನಮ್ಗೆ ಕಷ್ಟಗಳು ಬಂದಾಗ ನಮ್ಮ ನಂಬಿಕೆ ಹೇಗೆ ಗಟ್ಟಿ ಆಗುತ್ತೆ?

7 ಕ್ರೈಸ್ತರು ಕಷ್ಟವನ್ನ ಯಾಕೆ ಸಹಿಸ್ಕೊಳ್ತಾರೆ ಅನ್ನೋದಕ್ಕೆ ಯಾಕೋಬ ಇನ್ನೊಂದು ಕಾರಣ ಹೇಳಿದ್ದಾನೆ. “ನಂಬಿಕೆ ಸಹಿಸ್ಕೊಳ್ಳೋಕೆ ಶಕ್ತಿ ಕೊಡುತ್ತೆ” ಅಂತ ಅವನು ಹೇಳಿದ. (ಯಾಕೋ. 1:3) ಹೇಗೆ? ನಮ್ಮ ಕಷ್ಟಗಳನ್ನ ಕತ್ತಿ ತಯಾರು ಮಾಡುವಾಗ ಉಪಯೋಗಿಸೋ ಕುಲುಮೆಯ ಬೆಂಕಿಗೆ ಹೋಲಿಸಬಹುದು. ಒಂದು ಕತ್ತಿ ತಯಾರು ಮಾಡ್ವಾಗ ಅದನ್ನ ಕುಲುಮೆಗೆ ಹಾಕಿ ಕಾಯಿಸಿ ಆಮೇಲೆ ತಣ್ಣಗೆ ಮಾಡ್ತಾರೆ. ಆಗ ಅದು ಗಟ್ಟಿಮುಟ್ಟಾಗುತ್ತೆ. ಅದೇ ತರ ನಾವು ಕಷ್ಟಗಳನ್ನ ಸಹಿಸ್ಕೊಂಡ್ರೆ ನಮ್ಮ ನಂಬಿಕೆ ಗಟ್ಟಿ ಆಗುತ್ತೆ. ಅದಕ್ಕೇ ಯಾಕೋಬ ಹೀಗೆ ಬರೆದ “ಹೀಗೆ ಸಹಿಸ್ಕೊಳ್ತಾ ಇದ್ರೆ ನಿಮ್ಮನ್ನ ನೀವೇ ತರಬೇತಿ ಮಾಡ್ಕೊಳ್ತೀರ. ಆಗ ನೀವು ಎಲ್ಲಾ ವಿಷ್ಯಗಳನ್ನ ಚೆನ್ನಾಗಿ ಮಾಡಕ್ಕಾಗುತ್ತೆ.” (ಯಾಕೋ. 1:4) ಕಷ್ಟಗಳು ಬಂದಾಗ ನಮ್ಮ ನಂಬಿಕೆ ಇನ್ನೂ ಗಟ್ಟಿಯಾದ್ರೆ ಆ ಕಷ್ಟಗಳನ್ನ ಸಂತೋಷದಿಂದ ತಾಳ್ಕೊಳ್ತೀವಿ.

8 ಯಾಕೋಬ ತನ್ನ ಪತ್ರದಲ್ಲಿ, ನಮ್ಮ ಸಂತೋಷವನ್ನ ಕಿತ್ಕೊಳ್ಳುವಂಥ ಕೆಲವು ವಿಷ್ಯಗಳ ಬಗ್ಗೆನೂ ಬರೆದಿದ್ದಾನೆ. ಆ ವಿಷ್ಯಗಳು ಯಾವುದು? ನಾವು ಪುನಃ ಸಂತೋಷವನ್ನ ಹೇಗೆ ಪಡ್ಕೊಳ್ಳಬಹುದು?

ಖುಷಿ ಕಳ್ಕೊಳ್ಳದೇ ಇರೋಕೆ ಏನು ಮಾಡಬೇಕು?

9. ನಮಗೆ ವಿವೇಕ ಯಾಕೆ ಬೇಕು?

9 ಯಾವಾಗ ಖುಷಿ ಕಳ್ಕೊಳ್ತೀವಿ? ಏನು ಮಾಡ್ಬೇಕು ಅಂತ ಗೊತ್ತಾಗದೇ ಇದ್ದಾಗ. ನಮ್ಗೆ ಕಷ್ಟಗಳು ಬಂದಾಗ ಯೆಹೋವ ಮೆಚ್ಚುವಂಥ, ನಮ್ಮ ಸಹೋದರ ಸಹೋದರಿಯರಿಗೆ ಪ್ರೋತ್ಸಾಹ ಸಿಗುವಂಥ ಮತ್ತು ನಮ್ಮ ಸ್ವಂತ ನಿಷ್ಠೆಯನ್ನ ಕಳ್ಕೊಳ್ಳದೇ ಇರುವಂಥ ನಿರ್ಧಾರಗಳನ್ನ ನಾವು ಮಾಡಬೇಕು. ಆದ್ರೆ ಕೆಲವೊಮ್ಮೆ ಏನು ಮಾಡ್ಬೇಕು ಅಂತಾನೇ ಗೊತ್ತಾಗಲ್ಲ. (ಯೆರೆ. 10:23) ಅಂಥ ಸಮಯದಲ್ಲಿ ಒಳ್ಳೇ ನಿರ್ಧಾರಗಳನ್ನ ಮಾಡೋಕೆ ಮತ್ತು ವಿರೋಧ ಮಾಡುವವ್ರಿಗೆ ಒಳ್ಳೇ ಉತ್ರ ಕೊಡೋಕೆ ನಮ್ಗೆ ವಿವೇಕ ಬೇಕು. ಒಂದುವೇಳೆ ಏನು ಮಾಡಬೇಕು ಅಂತ ಗೊತ್ತಾಗ್ದೇ ಇದ್ರೆ ನಾವು ಅಸಹಾಯಕರು ಆಗ್ತೀವಿ ಮತ್ತು ಸಂತೋಷ ಕಳ್ಕೊಳ್ತೀವಿ.

10. ನಮ್ಗೆ ವಿವೇಕ ಬೇಕಂದ್ರೆ ಏನು ಮಾಡಬೇಕು ಅಂತ ಯಾಕೋಬ 1:5 ಹೇಳುತ್ತೆ?

10 ಆಗ ನಾವೇನು ಮಾಡಬೇಕು? ವಿವೇಕ ಕೊಡಪ್ಪಾ ಅಂತ ಯೆಹೋವನ ಹತ್ರ ಬೇಡ್ಕೋಬೇಕು. ನಮ್ಗೆ ಕಷ್ಟಗಳು ಬಂದಾಗ ಖುಷಿ ಕಳ್ಕೊಳ್ಳದೇ ಇರೋಕೆ ಮೊದ್ಲು ಯೆಹೋವನಿಗೆ ಪ್ರಾರ್ಥಿಸಬೇಕು. ಆಗ ಆತ ನಮ್ಗೆ ಸರಿಯಾದ ನಿರ್ಧಾರ ಮಾಡೋಕೆ ಸಹಾಯ ಮಾಡ್ತಾನೆ. (ಯಾಕೋಬ 1:5 ಓದಿ.) ಒಂದುವೇಳೆ ನಾವು ಪ್ರಾರ್ಥನೆ ಮಾಡಿದ ತಕ್ಷಣನೇ ಯೆಹೋವ ಉತ್ರ ಕೊಟ್ಟಿಲ್ಲಾಂದ್ರೆ ನಾವೇನು ಮಾಡಬೇಕು? ‘ದೇವರ ಹತ್ರ ಕೇಳ್ತಾ ಇರಿ’ ಅಂತ ಯಾಕೋಬ ನಮ್ಗೆ ಹೇಳಿದ್ದಾನೆ. ನಾವು ಪದೇಪದೇ ವಿವೇಕಕ್ಕಾಗಿ ಯೆಹೋವನ ಹತ್ರ ಕೇಳ್ತಾ ಇದ್ರೆ ಆತನಿಗೆ ಕಿರಿಕಿರಿ ಆಗಲ್ಲ, ನಮ್ಮ ಮೇಲೆ ಕೋಪನೂ ಮಾಡ್ಕೊಳ್ಳಲ್ಲ. ಬದ್ಲಿಗೆ ಕಷ್ಟವನ್ನ ತಾಳ್ಕೊಳ್ಳೋಕೆ ಬೇಕಾದ ವಿವೇಕವನ್ನ ನಮ್ಮ ಪ್ರೀತಿಯ ಅಪ್ಪಾ ‘ಉದಾರವಾಗಿ ಕೊಡ್ತಾನೆ.’ (ಕೀರ್ತ. 25:12, 13) ದೇವರು ನಮ್ಮ ಕಷ್ಟಗಳನ್ನ ನೋಡ್ತಾನೆ, ನಮ್ಮನ್ನ ಅರ್ಥ ಮಾಡ್ಕೊಳ್ತಾನೆ, ನಮ್ಗೆ ಸಹಾಯ ಮಾಡೋಕೆ ಹಂಬಲಿಸ್ತಾನೆ. ಈ ವಿಷ್ಯಾನೇ ನಮ್ಗೆ ಎಷ್ಟು ಖುಷಿ ಕೊಡುತ್ತೆ ಅಲ್ವಾ? ಯೆಹೋವ ನಮ್ಗೆ ವಿವೇಕ ಕೊಡ್ತಾನೆ ಅಂತ ತಿಳ್ಕೊಂಡ್ವಿ. ಆದ್ರೆ ಅದನ್ನ ಹೇಗೆ ಕೊಡ್ತಾನೆ?

11. ವಿವೇಕ ಪಡ್ಕೊಳ್ಳೋಕೆ ನಾವೇನು ಮಾಡ್ಲೇಬೇಕು?

11 ಯೆಹೋವ ತನ್ನ ವಿವೇಕವನ್ನ ತಾನು ಬರೆಸಿರೋ ಬೈಬಲಿಂದ ಕೊಡ್ತಾನೆ. (ಜ್ಞಾನೋ. 2:6) ಆ ವಿವೇಕವನ್ನ ನಾವು ಪಡ್ಕೋಬೇಕಂದ್ರೆ ಬೈಬಲನ್ನ, ಬೈಬಲಾಧಾರಿತ ಪ್ರಕಾಶನಗಳನ್ನ ಓದ್ಲೇಬೇಕು. ಆದ್ರೆ ಅದನ್ನ ಓದಿದ್ರಷ್ಟೇ ಸಾಕಾಗಲ್ಲ. ಅದ್ರಲ್ಲಿರೋ ಸಲಹೆಗಳನ್ನ ನಮ್ಮ ಜೀವನದಲ್ಲಿ ಪಾಲಿಸಬೇಕು. ಆಗ ನಾವು ವಿವೇಕಿಗಳಾಗ್ತೀವಿ. “ದೇವರ ಮಾತಿನ ಪ್ರಕಾರ ನಡೀರಿ” ಅಂತ ಯಾಕೋಬ ಸಲಹೆ ಕೊಟ್ಟಿದ್ದಾನೆ. (ಯಾಕೋ. 1:22) ನಾವು ದೇವರು ಹೇಳಿದ ಮಾತಿನ ಪ್ರಕಾರ ನಡ್ಕೊಂಡ್ರೆ ಸಮಾಧಾನವಾಗಿ ಇರೋಕೆ ಕಲಿತೀವಿ, ನಾವು ಹೇಳಿದ್ದೇ ನಡಿಬೇಕು ಅನ್ನೋ ಸ್ವಭಾವವನ್ನ ತೆಗೆದು ಹಾಕ್ತೀವಿ ಮತ್ತು ಕರುಣಾಮಯಿ ಆಗ್ತೀವಿ. (ಯಾಕೋ. 3:17) ಏನೇ ಕಷ್ಟ ಬಂದ್ರೂ ಸಂತೋಷ ಕಳ್ಕೊಳ್ಳದೇ ಇರೋಕೆ ಈ ಗುಣಗಳು ನಮ್ಗೆ ಸಹಾಯ ಮಾಡುತ್ತೆ.

12. ಬೈಬಲನ್ನ ಓದಿ ಅಧ್ಯಯನ ಮಾಡೋದು ಯಾಕೆ ಮುಖ್ಯ?

12 ಬೈಬಲ್‌ ಕನ್ನಡಿ ತರ ಇದೆ. ಅದು ನಮ್ಮಲ್ಲಿರೋ ಕೊರತೆಯನ್ನ, ಆ ಕೊರತೆ ಹೇಗೆ ಸರಿಮಾಡ್ಕೋಬೇಕು ಅನ್ನೋದನ್ನ ತೋರಿಸಿಕೊಡುತ್ತೆ. (ಯಾಕೋ. 1:23-25) ಉದಾಹರಣೆಗೆ ಬೈಬಲನ್ನ ಓದಿದಾಗ, ನಿಮ್ಮ ಕೋಪನ ಕಂಟ್ರೋಲಲ್ಲಿ ಇಡಬೇಕು ಅಂತ ಗೊತ್ತಾಗುತ್ತೆ. ನೀವು ಯೆಹೋವನ ಸಹಾಯದಿಂದ ಶಾಂತರಾಗಿ ಇರೋಕೆ ಕಲಿತೀರಿ. ಆಗ ಕಷ್ಟಗಳಿಂದ ನಿಮ್ಗೆ ಒತ್ತಡ ಆದ್ರೂ ಜನ ನಿಮ್ಗೆ ಕಿರಿಕಿರಿ ಮಾಡಿದ್ರೂ ಶಾಂತವಾಗಿ ಇರ್ತೀರಿ. ಅಷ್ಟೇ ಅಲ್ಲ, ಸರಿಯಾಗಿ ಯೋಚ್ನೆ ಮಾಡ್ತೀರಿ ಮತ್ತು ಒಳ್ಳೇ ನಿರ್ಧಾರಗಳನ್ನ ತಗೊಳ್ತೀರಿ. (ಯಾಕೋ. 3:13) ಬೈಬಲನ್ನ ಓದಿ ಅಧ್ಯಯನ ಮಾಡೋದು ಎಷ್ಟು ಮುಖ್ಯ ಅಂತ ಇದ್ರಿಂದ ಗೊತ್ತಾಗುತ್ತೆ ಅಲ್ವಾ?

13. ಬೈಬಲಲ್ಲಿ ತಿಳಿಸಿರೋ ವ್ಯಕ್ತಿಗಳ ಬಗ್ಗೆ ಕಲಿಯೋದ್ರಿಂದ ನಮ್ಗೆ ಯಾವ ಪ್ರಯೋಜನ ಸಿಗುತ್ತೆ?

13 ಕೆಲವೊಮ್ಮೆ ತಪ್ಪು ಮಾಡಿದ ಮೇಲೆನೇ ಆ ತರ ಮಾಡ್ಬಾರದಾಗಿತ್ತು ಅಂತ ನಮ್ಗೆ ಗೊತ್ತಾಗುತ್ತೆ. ಆದ್ರೆ ಕೆಟ್ಟ ಮೇಲೆನೇ ಬುದ್ಧಿ ಕಲಿಬೇಕು ಅಂತೇನಿಲ್ಲ. ಏನು ಮಾಡಿದ್ರೆ ಒಳ್ಳೇದಾಗುತ್ತೆ, ಏನು ಮಾಡಿದ್ರೆ ಕೆಟ್ಟದಾಗುತ್ತೆ ಅಂತ ಬೇರೆಯವ್ರನ್ನ ನೋಡಿನೂ ಕಲಿಬಹುದು. ಅದಕ್ಕೇ ಯಾಕೋಬನು ಅಬ್ರಹಾಮ, ರಾಹಾಬ, ಯೋಬ ಮತ್ತು ಎಲೀಯನಂಥ ಒಳ್ಳೇ ವ್ಯಕ್ತಿಗಳಿಂದ ಕಲಿರಿ ಅಂತ ಉತ್ತೇಜನ ಕೊಟ್ಟಿದ್ದಾನೆ. (ಯಾಕೋ. 2:21-26; 5:10, 11, 17, 18) ಯೆಹೋವನ ಈ ನಿಷ್ಠಾವಂತ ಸೇವಕರು ಸಂತೋಷ ಕಿತ್ಕೊಳ್ಳುವಂಥ ಕಷ್ಟ ಬಂದಾಗ್ಲೂ ಅದನ್ನೆಲ್ಲ ಸಹಿಸ್ಕೊಂಡು ಸಂತೋಷವಾಗಿ ಇದ್ರು. ಇವ್ರ ಉದಾಹರಣೆಗಳ ಬಗ್ಗೆ ಕಲಿತ್ರೆ, ನಮ್ಗೂ ಕಷ್ಟ ಬಂದಾಗ ಯೆಹೋವನ ಸಹಾಯದಿಂದ ಸಹಿಸ್ಕೊಳ್ಳೋಕೆ ಆಗುತ್ತೆ.

14-15. ನಮ್ಗೆ ಬರೋ ಸಂಶಯಗಳನ್ನ ನಾವ್ಯಾಕೆ ಬಗೆಹರಿಸ್ಕೊಬೇಕು?

14 ಯಾವಾಗ ಖುಷಿ ಕಳ್ಕೊಳ್ತೀವಿ? ನಮ್ಮ ನಂಬಿಕೆ ಬಗ್ಗೆನೇ ಸಂಶಯ ಬಂದಾಗ. ಕೆಲವೊಮ್ಮೆ ಬೈಬಲಲ್ಲಿರೋ ಒಂದು ವಿಷ್ಯ ನಮ್ಗೆ ಅರ್ಥ ಮಾಡ್ಕೊಳ್ಳೋಕೆ ಕಷ್ಟ ಆಗ್ಬಹುದು ಅಥ್ವಾ ನಮ್ಮ ಪ್ರಾರ್ಥನೆಗೆ ನಮಗಿಷ್ಟ ಆಗೋ ತರ ಯೆಹೋವ ಉತ್ರ ಕೊಟ್ಟಿಲ್ಲ ಅಂತ ಅನಿಸಬಹುದು. ಆಗ ನಮ್ಮ ಮನಸ್ಸಲ್ಲಿ ಸಂಶಯಗಳು ಹುಟ್ಕೊಳ್ಳುತ್ತೆ. ಆ ಸಂಶಯಗಳನ್ನ ಬಗೆಹರಿಸ್ಕೊಳ್ಳದೆ ಹಾಗೇ ಬಿಟ್ಟುಬಿಟ್ರೆ ಅದ್ರಿಂದ ನಮ್ಮ ನಂಬಿಕೆ ಕಡಿಮೆ ಆಗುತ್ತೆ, ಯೆಹೋವನ ಜೊತೆ ಇರೋ ಸಂಬಂಧನೂ ಹಾಳಾಗುತ್ತೆ. (ಯಾಕೋ. 1:7, 8) ಅಷ್ಟೇ ಅಲ್ಲ, ಭವಿಷ್ಯದ ಬಗ್ಗೆ ಇರೋ ನಮ್ಮ ನಿರೀಕ್ಷೆನೂ ಕಳ್ಕೊಂಡು ಬಿಡ್ತೀವಿ.

15 ಅಪೊಸ್ತಲ ಪೌಲ ಭವಿಷ್ಯದ ಬಗ್ಗೆ ನಮಗಿರೋ ನಿರೀಕ್ಷೆಯನ್ನ ಲಂಗರಿಗೆ ಹೋಲಿಸಿದ್ದಾನೆ. (ಇಬ್ರಿ. 6:19) ಹಡಗಿನ ಒಂದು ತುದಿಗೆ ಕಬ್ಬಿಣದ ಚೈನ್‌ ಹಾಕಿ ಲಂಗರವನ್ನ ಸಿಕ್ಕಿಸಿರ್ತಾರೆ. ಅದು ಬಿರುಗಾಳಿ ಬಂದಾಗ್ಲೂ ಹಡಗು ಅಲುಗಾಡದೆ ಇರುವಂತೆ, ದೊಡ್ಡ ದೊಡ್ಡ ಬಂಡೆಗಳಿಗೆ ಬಡಿಯದಂತೆ ತಡಿಯುತ್ತೆ. ಆದ್ರೆ ತುಕ್ಕು ಹಿಡಿಯದೆ ಆ ಚೈನ್‌ ಗಟ್ಟಿಯಾಗಿ ಇದ್ರಷ್ಟೇ ಲಂಗರ ಕೆಲ್ಸಕ್ಕೆ ಬರುತ್ತೆ. ತುಕ್ಕು ಚೈನಿನ ಶಕ್ತಿಯನ್ನ ಕಡಿಮೆ ಮಾಡೋ ತರ ಸಂಶಯಗಳು ನಮ್ಮ ನಂಬಿಕೆಯನ್ನ ಕಡಿಮೆ ಮಾಡುತ್ತೆ. ಒಬ್ಬ ವ್ಯಕ್ತಿ ಸಂಶಯ ಬೆಳೆಸ್ಕೊಂಡ್ರೆ ಕಷ್ಟ ಬಂದಾಗ ‘ಮುಂದೆ ಎಲ್ಲ ಸರಿ ಮಾಡ್ತೀನಿ’ ಅಂತ ಯೆಹೋವ ಕೊಟ್ಟಿರೋ ಮಾತಿನ ಬಗ್ಗೆ ಅವನು ನಂಬಿಕೆ ಕಳ್ಕೊಂಡು ಬಿಡ್ತಾನೆ. ನಾವು ನಂಬಿಕೆ ಕಳ್ಕೊಂಡ್ರೆ ನಮಗಿರೋ ನಿರೀಕ್ಷೆನೂ ಕಳ್ಕೊಳ್ತೀವಿ. ಸಂಶಯ ಪಡುವವನು “ಗಾಳಿಗೆ ಆಕಡೆ ಈಕಡೆ ಹೋಗೋ ಸಮುದ್ರದ ಅಲೆಗಳ ತರ” ಇದ್ದಾನೆ ಅಂತ ಯಾಕೋಬ ಹೇಳಿದ್ದಾನೆ. (ಯಾಕೋ. 1:6) ಈ ತರ ಸಂಶಯಪಡೋ ವ್ಯಕ್ತಿ ಬಹುಶಃ ಯಾವತ್ತಿಗೂ ಸಂತೋಷವಾಗಿ ಇರಲ್ಲ!

16. ಸಂಶಯ ಬಂದ್ರೆ ನಾವೇನು ಮಾಡಬೇಕು?

16 ಆಗ ನಾವೇನು ಮಾಡಬೇಕು? ಸಂಶಯ ಬಗೆಹರಿಸ್ಕೊಬೇಕು, ನಂಬಿಕೆ ಬಲಪಡಿಸ್ಕೊಬೇಕು. ಸಂಶಯ ಬಂದ್ರೆ ತಕ್ಷಣ ಬಗೆಹರಿಸ್ಕೊಳ್ಳಿ, ತಡಮಾಡ್ಬೇಡಿ. ಎಲೀಯನ ಕಾಲದಲ್ಲಿ ಜನ್ರು ತಮ್ಮ ಸಂಶಯವನ್ನ ಬಗೆಹರಿಸ್ಕೊಳ್ಳದೇ ಹಾಗೇ ಇದ್ದುಬಿಟ್ರು. ಆಗ ಎಲೀಯ ಅವ್ರಿಗೆ “ಎಷ್ಟರ ತನಕ ನೀವು ಎರಡು ಮನಸ್ಸಿನವರಾಗಿ ಇರ್ತಿರಾ? ಯೆಹೋವ ಸತ್ಯ ದೇವರಾಗಿದ್ರೆ ಆತನ ಮಾತು ಕೇಳಿ, ಬಾಳ ಸತ್ಯ ದೇವರಾಗಿದ್ರೆ ಅವನ ಹಿಂದೆ ಹೋಗಿ” ಅಂದ. (1 ಅರ. 18:21) ಇವತ್ತು ನಾವು ಸಹ ಸಂಶಯ ಬಂದಾಗ ಹಾಗೇ ಇದ್ದು ಬಿಡ್ತೀವಿ. ಹಾಗೆ ಮಾಡ್ಬಾರದು. ಯಾವುದ್ರ ಬಗ್ಗೆ ಸಂಶಯ ಇದ್ಯೋ ಅದ್ರ ಬಗ್ಗೆ ಸಂಶೋಧನೆ ಮಾಡ್ಬೇಕು. ಯೆಹೋವನೇ ಸತ್ಯ ದೇವರು, ಆತನೇ ಬೈಬಲನ್ನ ಬರೆಸಿದ್ದಾನೆ, ಯೆಹೋವನ ಸಾಕ್ಷಿಗಳು ಆತನ ಜನ್ರು ಅನ್ನೋದ್ರ ಮೇಲೆ ಪೂರ್ತಿ ನಂಬಿಕೆ ಬೆಳೆಸ್ಕೊಳ್ಳಬೇಕು. (1 ಥೆಸ. 5:21) ಇದನ್ನೆಲ್ಲ ಮಾಡಿದ್ರೆ ನಮ್ಮ ಸಂಶಯ ದೂರ ಆಗುತ್ತೆ. ನಂಬಿಕೆನೂ ಬಲವಾಗುತ್ತೆ. ನಮ್ಗೆ ಇನ್ನೂ ಸಹಾಯ ಬೇಕಿದ್ರೆ ಹಿರಿಯರ ಹತ್ರ ಕೇಳಬೇಕು. ಸಂಶಯ ಬಂದ ತಕ್ಷಣ ಬಗೆಹರಿಸ್ಕೊಂಡ್ರೆ ಸಂತೋಷದಿಂದ ಯೆಹೋವನ ಸೇವೆ ಮಾಡಕ್ಕಾಗುತ್ತೆ.

17. ನಾವು ಧೈರ್ಯ ಕಳ್ಕೊಂಡ್ರೆ ಏನಾಗುತ್ತೆ?

17 ಯಾವಾಗ ಖುಷಿ ಕಳ್ಕೊಳ್ತೀವಿ? ನಿರುತ್ಸಾಹ ಆದಾಗ. “ಕಷ್ಟ ಬಂದಾಗ ಧೈರ್ಯ ಕಳ್ಕೊಂಡ್ರೆ ಇರೋ ಬಲನೂ ಹೋಗುತ್ತೆ” ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋ. 24:10) ನಿರುತ್ಸಾಹ ಅನ್ನೋ ಪದಕ್ಕೆ “ಧೈರ್ಯ ಕಳ್ಕೊಳ್ಳೋದು” ಅನ್ನೋ ಅರ್ಥನೂ ಇದೆ. ನಾವು ಧೈರ್ಯ ಕಳ್ಕೊಂಡ್ರೆ ನಮ್ಮಲ್ಲಿರೋ ಖುಷಿನೂ ಬತ್ತಿಹೋಗುತ್ತೆ.

18. ತಾಳ್ಕೊಳ್ಳೋದು ಅನ್ನೋದಕ್ಕೆ ಏನರ್ಥ ಇದೆ?

18 ಆಗ ನಾವೇನು ಮಾಡಬೇಕು? ಯೆಹೋವನ ಸಹಾಯದಿಂದ ಧೈರ್ಯ ಬೆಳೆಸ್ಕೊಬೇಕು. ಬರೋ ಕಷ್ಟಗಳನ್ನ ತಾಳ್ಕೊಬೇಕಂದ್ರೆ ನಮ್ಗೆ ಧೈರ್ಯ ಬೇಕು. (ಯಾಕೋ. 5:11) “ತಾಳ್ಕೊಳ್ಳೋದು” ಅನ್ನೋದಕ್ಕೆ ಇಲ್ಲಿ ಯಾಕೋಬ ಬಳಸಿರೋ ಪದ ಒಬ್ಬ ವ್ಯಕ್ತಿ ಒಂಚೂರೂ ಕದಲದೆ ನಿಂತಲ್ಲೇ ನಿಲ್ಲೋದನ್ನ ಸೂಚಿಸುತ್ತೆ. ಯುದ್ಧದಲ್ಲಿ ಶತ್ರು ದಾಳಿ ಮಾಡೋಕೆ ಬಂದಾಗ್ಲೂ ಸೈನಿಕ ಹಿಂದೆ ಸರಿಯದೆ ಧೈರ್ಯವಾಗಿ ನಿಲ್ತಾನೆ. ಕಷ್ಟ ಬಂದಾಗ ನಾವೂ ಅದೇ ತರ ಇರ್ಬೇಕು.

19. ಅಪೊಸ್ತಲ ಪೌಲನಿಂದ ನಾವೇನು ಕಲಿಬಹುದು?

19 ಧೈರ್ಯ ತೋರಿಸೋದ್ರಲ್ಲಿ ಕಷ್ಟ ತಾಳಿಕೊಳ್ಳೋದ್ರಲ್ಲಿ ಅಪೊಸ್ತಲ ಪೌಲ ನಮ್ಗೆ ಒಳ್ಳೇ ಮಾದರಿ. ಅವ್ನಿಗೂ ಕೆಲವೊಮ್ಮೆ ಇನ್ನು ತನ್ನಿಂದ ಸಹಿಸ್ಕೊಳ್ಳೋಕೆ ಆಗಲ್ಲ ಅಂತ ಅನಿಸ್ತು. ಆಗ ಯೆಹೋವನಿಂದ ಶಕ್ತಿ ಪಡ್ಕೊಂಡ. ಇದ್ರಿಂದ ಕಷ್ಟಗಳನ್ನೆಲ್ಲ ಸಹಿಸ್ಕೊಳ್ಳೋಕೆ ಸಾಧ್ಯ ಆಯ್ತು. (2 ಕೊರಿಂ. 12:8-10; ಫಿಲಿ. 4:13) ನಾವೂ ಯೆಹೋವನ ಸಹಾಯ ಪಡ್ಕೊಬೇಕು. ಆಗ ನಮ್ಗೆ ಕಷ್ಟಗಳನ್ನ ಎದುರಿಸೋಕೆ ಬೇಕಾದ ಶಕ್ತಿ, ಧೈರ್ಯ ಸಿಗುತ್ತೆ.—ಯಾಕೋ. 4:10.

ದೇವ್ರಿಗೆ ಆಪ್ತರಾಗಿ ಖುಷಿಯಾಗಿರಿ

20-21. ನಾವು ಯಾವುದನ್ನ ನಂಬಬಹುದು?

20 ನಮ್ಗೆ ಬರೋ ಕಷ್ಟಗಳು ಯೆಹೋವ ಕೊಡೋ ಶಿಕ್ಷೆಯಲ್ಲ ಅನ್ನೋದನ್ನ ನಾವು ಕಣ್ಮುಚ್ಚಿ ನಂಬಬಹುದು. ಯಾಕಂದ್ರೆ ಯಾಕೋಬ “ಕಷ್ಟ ಬಂದಾಗ ‘ದೇವರು ನನ್ನನ್ನ ಪರೀಕ್ಷೆ ಮಾಡ್ತಾ ಇದ್ದಾನೆ’ ಅಂತ ಯಾರೂ ಹೇಳಬಾರದು. ಯಾಕಂದ್ರೆ ಕೆಟ್ಟ ವಿಷ್ಯಗಳಿಂದ ದೇವರನ್ನ ಯಾರೂ ಪರೀಕ್ಷಿಸಕ್ಕಾಗಲ್ಲ. ದೇವರೂ ಯಾರಿಗೂ ಕಷ್ಟ ಕೊಟ್ಟು ಪರೀಕ್ಷೆ ಮಾಡಲ್ಲ” ಅಂತ ಹೇಳಿದ್ದಾನೆ. (ಯಾಕೋ. 1:13) ಈ ವಿಷ್ಯದಲ್ಲಿ ನಮ್ಗೆ ಸಂಪೂರ್ಣ ನಂಬಿಕೆ ಇದ್ರೆ ನಮ್ಮ ಪ್ರೀತಿಯ ಅಪ್ಪ ಯೆಹೋವಗೆ ನಾವು ಆಪ್ತರಾಗ್ತೀವಿ.—ಯಾಕೋ. 4:8.

21 ಯೆಹೋವ “ಬದಲಾಗ್ತಾ ಇರಲ್ಲ.” (ಯಾಕೋ. 1:17) ಕಷ್ಟದಲ್ಲಿದ್ದ ಒಂದನೇ ಶತಮಾನದ ಕ್ರೈಸ್ತರಿಗೆ ಸಹಾಯ ಮಾಡಿದ ಹಾಗೆ ದೇವರು ಇವತ್ತು ನಮ್ಮಲ್ಲಿ ಪ್ರತಿಯೊಬ್ರಿಗೂ ಸಹಾಯ ಮಾಡ್ತಾನೆ. ನಮ್ಗೆ ಬೇಕಾದ ವಿವೇಕ, ನಂಬಿಕೆ, ಧೈರ್ಯ ಕೊಡಪ್ಪಾ ಅಂತ ಯೆಹೋವನ ಹತ್ರ ಬೇಡ್ತಾ ಇರೋಣ. ಆತನು ನಮ್ಮ ಪ್ರಾರ್ಥನೆಗಳಿಗೆ ಖಂಡಿತ ಉತ್ರ ಕೊಡ್ತಾನೆ. ಆಗ ಕಷ್ಟ ಬಂದ್ರೂ ಖುಷಿ ಕಳ್ಕೊಳ್ಳದೇ ಇರೋಕೆ ದೇವರು ಸಹಾಯ ಮಾಡ್ತಾನೆ ಅನ್ನೋ ಭರವಸೆ ಇರುತ್ತೆ.

ಗೀತೆ 135 ಕಡೇ ವರೆಗೆ ತಾಳಿಕೊಳ್ಳುವುದು

^ ಪ್ಯಾರ. 5 ಕಷ್ಟ ಬಂದಾಗ ಏನು ಮಾಡ್ಬೇಕು ಅನ್ನೋದಕ್ಕೆ ಒಳ್ಳೇ ಸಲಹೆಗಳು ಯಾಕೋಬ ಪುಸ್ತಕದಲ್ಲಿದೆ. ಆ ಪುಸ್ತಕದಲ್ಲಿ ಯಾಕೋಬ ಬರೆದಿರೋ ಕೆಲವು ಸಲಹೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಕಷ್ಟ ಬಂದಾಗ್ಲೂ ಯೆಹೋವನ ಸೇವೆಯನ್ನ ಸಂತೋಷದಿಂದ ಮಾಡ್ತಾ ಇರೋಕೆ ಈ ಸಲಹೆಗಳು ನಮ್ಗೆ ಸಹಾಯ ಮಾಡುತ್ತೆ.

^ ಪ್ಯಾರ. 59 ಚಿತ್ರ ವಿವರಣೆ: ಒಬ್ಬ ಸಹೋದರನನ್ನ ಪೊಲೀಸರು ಮನೆಯಿಂದ ಅರೆಸ್ಟ್‌ ಮಾಡ್ಕೊಂಡು ಹೋಗ್ತಿದ್ದಾರೆ. ಅದನ್ನ ಅವನ ಪತ್ನಿ ಮತ್ತು ಮಗಳು ನೋಡ್ತಾ ನಿಂತಿದ್ದಾರೆ. ಆ ಸಹೋದರ ಜೈಲಲ್ಲಿ ಇರುವಾಗ ಅವನ ಪತ್ನಿ ಮತ್ತು ಮಗಳನ್ನ ಸಹೋದರ ಸಹೋದರಿಯರು ಭೇಟಿ ಮಾಡಿ ಕುಟುಂಬ ಆರಾಧನೆ ಮಾಡ್ತಿದ್ದಾರೆ. ಕಷ್ಟಗಳನ್ನ ತಾಳ್ಕೊಳ್ಳೋಕೆ ಬಲ ಕೊಡಪ್ಪಾ ಅಂತ ಯೆಹೋವನ ಹತ್ರ ತಾಯಿ ಮಗಳು ಬೇಡ್ತಿದ್ದಾರೆ. ಯೆಹೋವ ಅವ್ರ ಮನಸ್ಸಿಗೆ ನೆಮ್ಮದಿ ಕೊಟ್ಟು ಧೈರ್ಯ ತುಂಬಿಸಿದ್ದಾನೆ. ಇದ್ರಿಂದ ಅವ್ರಿಬ್ರ ನಂಬಿಕೆ ಇನ್ನೂ ಗಟ್ಟಿ ಆಗಿದೆ ಮತ್ತು ಕಷ್ಟಗಳನ್ನ ಸಂತೋಷದಿಂದ ತಾಳ್ಕೊಳ್ಳೋಕೆ ಸಾಧ್ಯವಾಗಿದೆ.