ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಯೆಹೋವ ನಂಗೆ ‘ಸರಿ ದಾರಿ ತೋರಿಸಿದ್ದಾನೆ’

ಯೆಹೋವ ನಂಗೆ ‘ಸರಿ ದಾರಿ ತೋರಿಸಿದ್ದಾನೆ’

ಒಂದ್ಸಲ ಒಬ್ಬ ಯುವ ಸಹೋದರ “ನಿಮಗಿಷ್ಟವಾದ ವಚನ ಯಾವ್ದು?” ಅಂತ ಕೇಳ್ದ. ಆಗ ನಾನು ತಕ್ಷಣ ಜ್ಞಾನೋಕ್ತಿ 3:5, 6 ರಲ್ಲಿರೋ “ಪೂರ್ಣ ಹೃದಯದಿಂದ ಯೆಹೋವನ ಮೇಲೆ ನಂಬಿಕೆ ಇಡು, ನಿನ್ನ ಸ್ವಂತ ಬುದ್ಧಿ ಮೇಲೆ ಆತ್ಕೊಳ್ಳಬೇಡ. ಅದನ್ನ ಮನಸ್ಸಲ್ಲಿ ಇಟ್ಕೊಂಡು ಎಲ್ಲ ಕೆಲಸ ಮಾಡು, ಆಗ ದೇವರು ನಿನಗೆ ಸರಿ ದಾರಿ ತೋರಿಸ್ತಾನೆ” ಅನ್ನೋ ವಚನ ಹೇಳ್ದೆ. ಹೌದು ಆ ವಚನದಲ್ಲಿ ಇರೋ ತರ ಯೆಹೋವ ನನ್ಗೆ ಸರಿ ದಾರಿ ತೋರಿಸ್ತಾ ಬಂದಿದ್ದಾನೆ. ಅದ್ಹೇಗೆ ಅಂತ ಹೇಳ್ತೀನಿ.

ಸರಿ ದಾರಿಯಲ್ಲಿ ಅಪ್ಪಅಮ್ಮ ನಡಿಸಿದ್ರು

1920 ರ ದಶಕದಲ್ಲಿ ಅಂದ್ರೆ ಅಪ್ಪಅಮ್ಮಗೆ ಮದ್ವೆ ಆಗೋ ಮುಂಚೆನೇ ಅವ್ರಿಬ್ರಿಗೆ ಸತ್ಯ ಸಿಕ್ತು. ನಾನು 1939 ರಲ್ಲಿ ಹುಟ್ಟಿದೆ. ಚಿಕ್ಕವನಿದ್ದಾಗ ಇಂಗ್ಲೆಂಡಿನಲ್ಲಿ ಇದ್ವಿ. ಅಪ್ಪಅಮ್ಮ ಜೊತೆ ಕೂಟಗಳಿಗೆ ಹೋಗ್ತಿದ್ದೆ. ನಂತ್ರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಗೆ ಹೆಸ್ರು ಕೊಟ್ಟೆ. ಮೊದಲ ಸಲ ನೇಮಕ ಮಾಡಿದ್ದು ಈಗ್ಲೂ ನೆನಪಿದೆ. ಪೋಡಿಯಂ ತುಂಬಾ ಎತ್ರ ಇದ್ದಿದ್ರಿಂದ ಬಾಕ್ಸ್‌ ಮೇಲೆ ಹತ್ತಿ ನಿಲ್ಲಬೇಕಾಗಿತ್ತು. ಆಗ ನನ್ಗೆ ಆರು ವರ್ಷ. ದೊಡ್ಡವ್ರ ಮುಂದೆ ನಿಂತ್ಕೊಂಡು ನೇಮಕ ಮಾಡೋಕೆ ನನ್ಗೆ ಭಯ ಆಗಿತ್ತು.

ಅಪ್ಪಅಮ್ಮನ ಜೊತೆ ಬೀದಿ ಸಾಕ್ಷಿಕಾರ್ಯ

ನಾನು ಸೇವೆಗೆ ಹೋಗೋಕೆ ಶುರು ಮಾಡ್ದಾಗ ಅಪ್ಪ ಒಂದು ಕಾರ್ಡಲ್ಲಿ ಚಿಕ್ಕ ನಿರೂಪಣೆಯನ್ನ ಟೈಪ್‌ ಮಾಡಿ ಕೊಡ್ತಿದ್ರು. ಮೊದಲ್ನೇ ಸಲ ನಾನು ಒಬ್ನೇ ಮನೆಮನೆ ಸೇವೆ ಮಾಡೋಕೆ ಹೋಗಿದ್ದು ನೆನಪಿದೆ. ಆಗ ನನ್ಗೆ 8 ವರ್ಷ. ಮನೆಯವ್ರಿಗೆ ಕಾರ್ಡಲ್ಲಿ ಇರೋದನ್ನ ಓದಿದಾಗ ಅವ್ರು ತಕ್ಷಣನೇ “ದೇವರು ಸತ್ಯವಂತನೇ ಸರಿ” ಅನ್ನೋ ಪುಸ್ತಕನ ತಗೊಂಡ್ರು. ನಂಗೆಷ್ಟು ಖುಷಿ ಆಯ್ತು ಅಂದ್ರೆ ಅದನ್ನ ಹೇಳೋಕೆ ಅಪ್ಪ ಹತ್ರ ಓಡಿ ಬಂದಿದ್ದೆ. ಹೀಗೆ ಸೇವೆಗೆ, ಕೂಟಕ್ಕೆ ಹೋಗೋದು ನನ್ಗೆ ತುಂಬ ಖುಷಿ ಕೊಡ್ತಿತ್ತು. ಪೂರ್ಣ ಸಮಯ ಯೆಹೋವನ ಸೇವೆ ಮಾಡಬೇಕು ಅನ್ನೋ ಆಸೆಯನ್ನ ಹುಟ್ಟಿಸ್ತು.

ಅಪ್ಪ ನನಗೋಸ್ಕರನೂ ಕಾವಲಿನಬುರುಜುವಿನ ಒಂದು ಪ್ರತಿಯನ್ನ ತರಿಸೋಕೆ ಶುರು ಮಾಡಿದ್ರು. ಇದ್ರಿಂದ ಮನಸ್ಸಿಗೆ ಬೈಬಲ್‌ ಸತ್ಯ ಇನ್ನಷ್ಟು ಹೆಚ್ಚು ನಾಟಿತು. ಅದು ಪೋಸ್ಟಲ್ಲಿ ಬರೋದೇ ತಡ ಆ ಇಡೀ ಪತ್ರಿಕೆಯನ್ನ ಓದಿ ಮುಗಿಸ್ತಿದ್ದೆ. ಯೆಹೋವನ ಮೇಲಿರೋ ನಂಬಿಕೆ ಇನ್ನೂ ಹೆಚ್ಚಾಯ್ತು. ಸ್ವಲ್ಪದರಲ್ಲೇ ನಾನು ಯೆಹೋವನಿಗೆ ಸಮರ್ಪಣೆ ಮಾಡ್ಕೊಂಡೆ.

1950 ರಲ್ಲಿ ನ್ಯೂಯಾರ್ಕಿನಲ್ಲಿ ನಡೆದ ದೇವಪ್ರಭುತ್ವದ ಅಭಿವೃದ್ಧಿ ಸಮ್ಮೇಳನಕ್ಕೆ ನಾನು, ಅಪ್ಪಅಮ್ಮ ಮೂರೂ ಜನ ಹಾಜರಾದ್ವಿ. ಆಗಸ್ಟ್‌ 3, ಗುರುವಾರದಂದು ಸಮ್ಮೇಳನ ದಿನದ ಮುಖ್ಯ ವಿಷ್ಯ “ಮಿಷನರಿ ದಿನ” ಅಂತಾಗಿತ್ತು. ಆ ದಿನ ಸಹೋದರ ಕ್ಯಾರಿ ಬಾರ್ಬರ್‌ ದೀಕ್ಷಾಸ್ನಾನ ಭಾಷಣ ಕೊಟ್ರು. ಇವ್ರು ಮುಂದೆ ಆಡಳಿತ ಮಂಡಲಿಯ ಸದಸ್ಯರಾದ್ರು. ಸಹೋದರ ಭಾಷಣದ ಕೊನೇಲಿ ದೀಕ್ಷಾಸ್ನಾನದ ಅಭ್ಯರ್ಥಿಗಳಿಗೆ ಎರಡು ಪ್ರಶ್ನೆ ಕೇಳಿದ್ರು. ಆಗ ನಾನೂ ಎದ್ದು ನಿಂತು “ಹೌದು” ಅಂತ ಉತ್ರ ಕೊಟ್ಟೆ. ಆಗ ನಂಗೆ 11 ವರ್ಷ. ಆದ್ರೆ ದೀಕ್ಷಾಸ್ನಾನ ಅನ್ನೋದು ಹುಡುಗಾಟ ಅಲ್ಲ, ಅದೊಂದು ದೊಡ್ಡ ಜವಾಬ್ದಾರಿ ಅಂತ ಅರ್ಥ ಮಾಡ್ಕೊಂಡಿದ್ದೆ. ನೀರಿಗೆ ಇಳಿಯೋಕೆ ಭಯ ಆಯ್ತು. ಈಜೋಕೆ ನಾನಿನ್ನೂ ಕಲ್ತಿರಲಿಲ್ಲ. ನಮ್ಮ ಚಿಕ್ಕಪ್ಪ ಈಜುಕೊಳದ ವರೆಗೂ ಕರ್ಕೊಂಡು ಬಂದು ಬಿಟ್ಟು ‘ಏನೂ ಆಗಲ್ಲ ಭಯ ಪಡಬೇಡ’ ಅಂತ ಹೇಳಿದ್ರು. ನಾನು ಈಜುಕೊಳಕ್ಕೆ ಇಳ್ದೆ. ಆದ್ರೆ ಕಾಲು ತಳ ಮುಟ್ಟಲಿಲ್ಲ, ಅಷ್ಟೊಂದು ನೀರಿತ್ತು. ಅದಕ್ಕೆ ಸಹೋದರರು ನನ್ನನ್ನ ಒಬ್ರಿಂದ ಒಬ್ರಿಗೆ ದಾಟಿಸಿದ್ರು. ಆಮೇಲೆ ಒಬ್ಬ ಸಹೋದರ ನನ್ಗೆ ದೀಕ್ಷಾಸ್ನಾನ ಮಾಡಿಸಿದ್ರು. ಇನ್ನೊಬ್ರು ನನ್ನನ್ನ ನೀರಿಂದ ಎತ್ತಿದ್ರು. ಆ ದಿನ ನನ್ನ ಜೀವನದಲ್ಲಿ ತುಂಬ ವಿಶೇಷವಾದ ದಿನ. ಅವತ್ತಿಂದ ಯೆಹೋವ ನನ್ಗೆ ಸರಿಯಾದ ದಾರಿ ತೋರಿಸ್ತಾ ಬಂದಿದ್ದಾನೆ.

ಯೆಹೋವನ ಮೇಲೆ ಭರವಸೆ ಇಟ್ಟೆ

ನಾನು ಶಾಲೆ ಮುಗಿಸಿದಾಗ ಪಯನೀಯರಿಂಗ್‌ ಮಾಡ್ಬೇಕು ಅಂತ ಆಸೆ ಇತ್ತು. ಆದ್ರೆ ನನ್ನ ಶಿಕ್ಷಕರು ‘ಕಾಲೇಜಿಗೆ ಹೋಗು’ ಅಂತ ತುಂಬ ಒತ್ತಾಯ ಮಾಡಿದ್ರು. ಕೊನೆಗೆ ಅವ್ರ ಒತ್ತಾಯಕ್ಕೆ ಮಣಿದು ಕಾಲೇಜಿಗೆ ಹೋದೆ. ಆದ್ರೆ ಓದೋದ್ರಲ್ಲೂ ಗಮನ ಕೊಡ್ತಾ ಸತ್ಯದಲ್ಲಿ ದೃಢವಾಗಿ ನಿಲ್ಲೋಕೆ ಸಾಧ್ಯನೇ ಇಲ್ಲ ಅಂತ ನನ್ಗೆ ಅರ್ಥ ಆಯ್ತು. ಅದಕ್ಕೆ ಓದು ನಿಲ್ಲಿಸಿಬಿಡೋಣ ಅಂತ ತೀರ್ಮಾನ ಮಾಡ್ದೆ. ಅದ್ರ ಬಗ್ಗೆ ಯೆಹೋವನಿಗೆ ಪ್ರಾರ್ಥನೆ ಮಾಡ್ದೆ. ಆಮೇಲೆ ಶಿಕ್ಷಕರಿಗೆ ಮೊದಲ್ನೇ ವರ್ಷದ ಕೊನೇಲಿ ಕಾಲೇಜ್‌ ಬಿಟ್ಟುಬಿಡ್ತೀನಿ ಅಂತ ಪತ್ರ ಬರೆದುಕೊಟ್ಟೆ. ಯೆಹೋವನ ಮೇಲೆ ಪೂರ್ತಿ ಭರವಸೆ ಇಟ್ಟು ತಕ್ಷಣನೇ ಪಯನೀಯರ್‌ ಸೇವೆ ಆರಂಭಿಸ್ದೆ.

1957 ರ ಜುಲೈನಲ್ಲಿ ನನ್ಗೆ ವೆಲ್ಲಿಂಗ್‌ಬೊರೊ ಅನ್ನೋ ಪಟ್ಟಣದಲ್ಲಿ ಪಯನೀಯರ್‌ ಸೇವೆ ಮಾಡೋ ನೇಮಕ ಸಿಕ್ತು. ಒಬ್ಬ ಅನುಭವಸ್ಥ ಪಯನೀಯರ್‌ ಸಹೋದರನ ಜೊತೆ ಸೇವೆ ಮಾಡ್ಬೇಕು ಅಂತ ಲಂಡನ್‌ ಬೆತೆಲಿಗೆ ಪತ್ರ ಬರೆದೆ. ಆಗ ಅವ್ರು ಬರ್ಟ್‌ ವೈಸಿ ಅನ್ನೋ ಸಹೋದರನನ್ನ ಕಳಿಸಿದ್ರು. ಆ ಸಹೋದರ ನನ್ಗೆ ತುಂಬ ವಿಷ್ಯಗಳನ್ನ ಹೇಳ್ಕೊಟ್ರು. ಅವ್ರಿಗೆ ಸೇವೇಲಿ ತುಂಬ ಹುರುಪಿತ್ತು. ಸೇವೆಗಾಗಿ ಒಳ್ಳೇ ಶೆಡ್ಯೂಲ್‌ ಹಾಕೋದು ಹೇಗೆ ಅಂತ ನನ್ಗೆ ಹೇಳ್ಕೊಟ್ರು. ನಮ್ಮ ಸಭೇಲಿ ನಾವಿಬ್ರು ಮತ್ತು ವಯಸ್ಸಾದ 6 ಸಹೋದರಿಯರು ಇದ್ವಿ. ನಾನು ಎಲ್ಲಾ ಕೂಟಗಳಿಗೆ ತಯಾರಿ ಮಾಡಿ ಭಾಗವಹಿಸ್ತಾ ಇದ್ದಿದ್ರಿಂದ ಯೆಹೋವನ ಮೇಲಿದ್ದ ನಂಬಿಕೆಯನ್ನ ಇನ್ನೂ ಬೆಳೆಸ್ಕೊಳ್ಳೋಕೆ ಮತ್ತು ಅದನ್ನ ಹೇಳ್ಕೋಳ್ಳೋಕೆ ತುಂಬ ಅವಕಾಶಗಳು ಸಿಕ್ಕಿದ್ವು.

ಮಿಲಿಟರಿಗೆ ಸೇರದೆ ಇದ್ದಿದ್ರಿಂದ ಸ್ವಲ್ಪ ಸಮಯ ಜೈಲಲ್ಲಿ ಇರಬೇಕಾಗಿ ಬಂತು. ನಂತ್ರ ಬಿಡುಗಡೆ ಆಯ್ತು. ಹೀಗೆ ಒಂದ್ಸಲ ಬಾರ್ಬರ ಅನ್ನೋ ವಿಶೇಷ ಪಯನೀಯರ್‌ ಸಹೋದರಿಯನ್ನ ಭೇಟಿಯಾದೆ. ನಾವು 1959 ರಲ್ಲಿ ಮದ್ವೆ ಆದ್ವಿ. ಸೇವೆ ಮಾಡೋಕೆ ಎಲ್ಲಿ ಕಳಿಸಿದ್ರೂ ಹೋಗೋಕೆ ತಯಾರಿದ್ವಿ. ಮೊದ್ಲಿಗೆ ಇಂಗ್ಲೆಂಡಿನ ವಾಯುವ್ಯ ದಿಕ್ಕಿನಲ್ಲಿದ್ದ ಲ್ಯಾಂಕ್‌ಶೇರಿಗೆ ಹೋಗಿ ಸೇವೆ ಮಾಡಿದ್ವಿ. ನಂತ್ರ 1961 ರ ಜನವರಿಯಲ್ಲಿ ಲಂಡನ್‌ ಬೆತೆಲಿನಲ್ಲಿ ನಡಿತಿದ್ದ ಒಂದು ತಿಂಗಳ ರಾಜ್ಯ ಶುಶ್ರೂಷಾ ಶಾಲೆಗೆ ಹಾಜರಾಗೋಕೆ ನನ್ಗೆ ಆಮಂತ್ರಣ ಸಿಕ್ತು. ಆ ಶಾಲೆ ಮುಗಿಯೋ ಸಮಯ ಬಂದಾಗ ನನ್ಗೆ ಸಂಚರಣ ಸೇವೆ ಮಾಡೋ ನೇಮಕ ಸಿಗುತ್ತೆ ಅಂತ ಗೊತ್ತಾಯ್ತು. ನಾನು ಅದನ್ನ ನಿರೀಕ್ಷಿಸೇ ಇರ್ಲಿಲ್ಲ. ಅದಾದ ನಂತ್ರ ಬರ್ಮಿಂಗ್‌ಹ್ಯಾಮ್‌ ಅನ್ನೋ ಪಟ್ಟಣದಲ್ಲಿ ಒಬ್ಬ ಅನುಭವಸ್ಥ ಸಂಚರಣ ಮೇಲ್ವಿಚಾರಕನಿಂದ ಎರಡು ವಾರ ತರಬೇತಿ ಸಿಕ್ತು. ಬಾರ್ಬರಗೂ ನನ್ನ ಜೊತೆ ಇರೋಕೆ ಅನುಮತಿ ಸಿಕ್ತು. ತರಬೇತಿ ಮುಗಿದ ನಂತ್ರ ನಾವು ಪುನಃ ನಮ್ಮ ನೇಮಕ ಇದ್ದ ಲ್ಯಾಂಕ್‌ಶೇರ್‌ ಮತ್ತು ಷೇಶರ್‌ ಪ್ರದೇಶಗಳಿಗೆ ಹೋಗಿ ಸೇವೆ ಮಾಡಿದ್ವಿ.

ಯೆಹೋವನ ಮೇಲೆ ಭರವಸೆ ಇಡೋದು ಯಾವಾಗ್ಲೂ ಸರಿಯಾದ ವಿಷ್ಯ

1962 ರ ಆಗಸ್ಟಲ್ಲಿ ನಾವು ರಜೆಯಲ್ಲಿದ್ದಾಗ ಶಾಖಾ ಕಚೇರಿಯಿಂದ ನಮ್ಗೊಂದು ಪತ್ರ ಬಂತು. ಆ ಪತ್ರದ ಜೊತೆಗೆ ಗಿಲ್ಯಡ್‌ ಶಾಲೆಯ ಅಪ್ಲಿಕೇಶನ್‌ ಫಾರ್ಮ್‌ ಕೂಡ ಇತ್ತು. ಅದನ್ನ ತುಂಬಿ ಬೇಗ ಕಳಿಸಬೇಕು ಅಂತ ಬ್ರಾಂಚ್‌ ಆಫೀಸ್‌ ಹೇಳಿತ್ತು. ಚೆನ್ನಾಗಿ ಪ್ರಾರ್ಥನೆ ಮಾಡಿ ನಾವಿಬ್ರು ಆ ಫಾರ್ಮನ್ನ ತುಂಬಿದ್ವಿ. ಐದು ತಿಂಗಳ ನಂತ್ರ ಗಿಲ್ಯಡ್‌ ಶಾಲೆ ಶುರು ಆಯ್ತು. 38 ನೇ ಗಿಲ್ಯಡ್‌ ಶಾಲೆಗೆ ಹಾಜರಾಗೋಕೆ ನಾವು ನ್ಯೂಯಾರ್ಕಿನ ಬ್ರೂಕ್ಲಿನ್‌ಗೆ ಹೊರಟ್ವಿ. ಆ ಬೈಬಲ್‌ ಶಾಲೆ 10 ತಿಂಗಳು ನಡಿತಿತ್ತು.

ಗಿಲ್ಯಡ್‌ ಶಾಲೆಯಲ್ಲಿ ನಾವು ಬೈಬಲ್‌ ಬಗ್ಗೆ, ಯೆಹೋವನ ಸಂಘಟನೆ ಬಗ್ಗೆ ಅಷ್ಟೇ ಅಲ್ಲ ಲೋಕದಲ್ಲಿರೋ ನಮ್ಮ ಸಹೋದರ ಸಹೋದರಿಯರ ಬಗ್ಗೆನೂ ಕಲಿತ್ವಿ. ಆಗ ನನ್ಗೆ 24 ವರ್ಷ, ಬಾರ್ಬರಗೆ 23 ವರ್ಷ. ನಮ್ಮ ಕ್ಲಾಸಲ್ಲಿದ್ದ ಬೇರೆ ಸಹೋದರ ಸಹೋದರಿಯರಿಂದನೂ ತುಂಬ ವಿಷ್ಯ ಕಲಿತ್ವಿ. ನನ್ಗೆ ಸಹೋದರ ಫ್ರೆಡ್‌ ರಸ್ಕ್‌ ಜೊತೆ ಸೆಕ್ರೆಟರಿ ಕೆಲ್ಸ ಮಾಡೋ ಅವಕಾಶ ಸಿಕ್ತು. ಆ ಸಹೋದರ ಗಿಲ್ಯಡ್‌ ಶಾಲೆಯ ಶಿಕ್ಷಕರಾಗಿದ್ರು. ನಾನು ಅವ್ರಿಂದ ಒಂದು ಮುಖ್ಯ ಪಾಠ ಕಲಿತೆ. ಅದೇನಂದ್ರೆ, ನಾವು ಯಾರಿಗಾದ್ರೂ ಬುದ್ಧಿವಾದ ಹೇಳ್ವಾಗ ಬೈಬಲ್‌ ಆಧರಿತವಾಗಿನೇ ಹೇಳಬೇಕು. ನೇತನ್‌ ನಾರ್‌, ಫ್ರೆಡ್ರಿಕ್‌ ಫ್ರಾನ್ಸ್‌ ಮತ್ತು ಕಾರ್ಲ್‌ ಕ್ಲೇನ್‌ರಂಥ ಅನುಭವಸ್ಥ ಸಹೋದರರ ಭಾಷಣ ಕೇಳುವಂಥ ಸುಯೋಗನೂ ಸಿಕ್ತು. ದೀನತೆಗೆ ಉತ್ತಮ ಮಾದರಿಯಾಗಿದ್ದ ಸಹೋದರ ಎ.ಎಚ್‌. ಮ್ಯಾಕ್‌ಮಿಲನ್‌ರಿಂದ ಅಂತೂ ಎಲ್ರೂ ತುಂಬ ವಿಷ್ಯ ಕಲಿಯೋಕ್ಕಾಯ್ತು. 1914 ರಿಂದ 1919 ರಲ್ಲಿ ನಮ್ಮ ಸಹೋದರರಿಗೆ ನಂಬಿಕೆ ಪರೀಕ್ಷೆ ಎದುರಾದಾಗ ಯೆಹೋವ ಹೇಗೆ ಮಾರ್ಗದರ್ಶನ ಕೊಟ್ಟನು ಅಂತ ಅವ್ರಿಂದಾನೇ ಕೇಳಿಸ್ಕೊಂಡ್ವಿ.

ನೇಮಕ ಬದಲಾಯ್ತು

ಶಾಲೆ ಮುಗಿತಾ ಬಂದ ಹಾಗೆ ಸಹೋದರ ನಾರ್‌ ನನ್ನನ್ನ ಮತ್ತು ಬಾರ್ಬರಳನ್ನ ಕರೆದು ನಮ್ಗೆ ಆಫ್ರಿಕಾದ ಬುರುಂಡಿಯಲ್ಲಿ ಸೇವೆ ಮಾಡೋ ನೇಮಕ ಸಿಕ್ಕಿದೆ ಅಂತ ಹೇಳಿದ್ರು. ನಾವು ತಕ್ಷಣ ಬೆತೆಲಿನ ಲೈಬ್ರರಿಗೆ ಓಡಿದ್ವಿ. ವರ್ಷಪುಸ್ತಕ ತೆಗೆದು ಆ ಸಮ್ಯದಲ್ಲಿ ಬುರುಂಡಿಯಲ್ಲಿ ಎಷ್ಟು ಪ್ರಚಾರಕರಿದ್ದಾರೆ ಅಂತ ಹುಡುಕಿದ್ವಿ. ನೋಡಿದ್ರೆ ಆ ದೇಶದಲ್ಲಿ ಪ್ರಚಾರಕರೇ ಇರ್ಲಿಲ್ಲ! ಸಿಹಿಸುದ್ದಿನೇ ಸಾರದಿರೋ ದೇಶಕ್ಕೆ ಹೋಗ್ತಾ ಇದ್ದೀವಿ ಅಂತ ಆಗ ನಮ್ಗೆ ಗೊತ್ತಾಯ್ತು. ಆ ದೇಶ ಇದ್ದ ಆಫ್ರಿಕಾ ಖಂಡದ ಬಗ್ಗೆನೂ ಸರಿಯಾಗಿ ಗೊತ್ತಿರಲಿಲ್ಲ. ನಮ್ಗಂತೂ ಗಾಬರಿಗೆ ಬೆವರು ಕಿತ್ಕೊಂಡು ಬಂತು. ಆದ್ರೆ ಪ್ರಾರ್ಥನೆ ಮಾಡಿದ ಮೇಲೆ ಸ್ವಲ್ಪ ಸಮಾಧಾನ ಆಯ್ತು.

ನಮ್ಮ ಹೊಸ ನೇಮಕದಲ್ಲಿ ಎಲ್ಲಾ ಹೊಸದೇ. ಅಲ್ಲಿನ ಹವಾಮಾನ, ಸಂಸ್ಕೃತಿ, ಭಾಷೆ ಎಲ್ಲ ಹೊಸದಾಗಿತ್ತು ನಮ್ಗೆ. ನಾವು ಫ್ರೆಂಚ್‌ ಭಾಷೆ ಕಲಿಬೇಕಿತ್ತು. ಉಳ್ಕೊಳ್ಳೋಕೆ ಒಂದು ಮನೆನೂ ಹುಡುಕಬೇಕಿತ್ತು. ನಾವು ಬುರುಂಡಿಗೆ ಬಂದು ಎರಡು ದಿನ ಆದ್ಮೇಲೆ ಹ್ಯಾರಿ ಅರ್ನಾಟ್‌ ನಮ್ಗೆ ಸಿಕ್ಕಿದ್ರು. ಈ ಸಹೋದರ ನಮ್‌ ಜೊತೆ ಗಿಲ್ಯಡ್‌ ಶಾಲೆಯಲ್ಲಿ ಇದ್ರು. ಅವ್ರು ವಾಪಸ್‌ ಜಾಂಬಿಯ ದೇಶಕ್ಕೆ ಸೇವೆ ಮಾಡೋಕೆ ಹೋಗ್ತಿದ್ರು. ಹಾಗೆ ಹೋಗ್ತಿದ್ದಾಗ ಮಧ್ಯದಲ್ಲಿ ನಮ್ಗೆ ಸಿಕ್ಕಿದ್ರು. ಒಂದು ಮನೆ ಹುಡುಕಿ ಕೊಟ್ರು. ಅದೇ ಮೊದಲ ಮಿಷನರಿ ಮನೆ ಆಯ್ತು. ಸ್ವಲ್ಪದ್ರಲ್ಲೇ ಸರ್ಕಾರಿ ಅಧಿಕಾರಿಗಳಿಂದ ನಮ್ಗೆ ವಿರೋಧ ಬಂತು. ಅವ್ರಿಗೆ ಯೆಹೋವನ ಸಾಕ್ಷಿಗಳು ಯಾರಂತನೇ ಗೊತ್ತಿರಲಿಲ್ಲ. ನಮ್ಮ ನೇಮಕವನ್ನ ಆಗಷ್ಟೇ ಎಂಜಾಯ್‌ ಮಾಡೋಕೆ ಶುರುಮಾಡಿದ್ವಿ. ಅಷ್ಟರಲ್ಲಿ ಅಧಿಕಾರಿಗಳು ‘ಕೆಲ್ಸ ಮಾಡೋ ಲೈಸೆನ್ಸ್‌ ಇಲ್ದೆ ನೀವಿಲ್ಲಿ ಇರಕ್ಕಾಗಲ್ಲ’ ಅಂತ ನಮ್ಗೆ ಹೇಳಿಬಿಟ್ರು. ಹಾಗಾಗಿ ಬುರುಂಡಿ ಬಿಟ್ಟು ಇನ್ನೊಂದು ಹೊಸ ದೇಶಕ್ಕೆ ಬಂದ್ವಿ. ಅದು ಉಗಾಂಡ ದೇಶ.

ವೀಸಾ ಇಲ್ದೆ ಉಗಾಂಡಕ್ಕೆ ಹೋಗೋಕೆ ನಮ್ಗೆ ಭಯ ಆಯ್ತು. ಆದ್ರೆ ನಾವು ಯೆಹೋವನ ಮೇಲೆ ಭರವಸೆ ಇಟ್ಟು ಹೋದ್ವಿ. ಅಲ್ಲಿ ಕೆನಡದ ಒಬ್ಬ ಸಹೋದರ ಇದ್ರು. ಅವ್ರು ಅಗತ್ಯ ಇರೋ ಕಡೆ ಸೇವೆ ಮಾಡೋಕೆ ಅಂತ ಬಂದಿದ್ರು. ವಲಸೆ ವಿಭಾಗದ ಅಧಿಕಾರಿಗೆ ಅವ್ರು ನಮ್ಮ ಪರಿಸ್ಥಿತಿಯನ್ನ ವಿವರಿಸಿದ್ರು. ಆಗ ಆ ಅಧಿಕಾರಿ ‘ಸರ್ಕಾರಕ್ಕೆ ಅರ್ಜಿ ಹಾಕಿ ಅನುಮತಿ ಸಿಗೋ ವರೆಗೂ ಕೆಲ್ವು ತಿಂಗಳು ಇರಬಹುದು’ ಅಂದ್ರು. ಇದ್ರಿಂದ ಯೆಹೋವ ನಮ್ಗೆ ಸಹಾಯ ಮಾಡ್ತಿದ್ದಾನೆ ಅಂತ ಗೊತ್ತಾಯ್ತು.

ಬುರುಂಡಿಯಲ್ಲಿದ್ದ ಸನ್ನಿವೇಶಕ್ಕೂ ಉಗಾಂಡದಲ್ಲಿ ಇರೋ ಸನ್ನಿವೇಶಕ್ಕೂ ತುಂಬ ವ್ಯತ್ಯಾಸ ಇತ್ತು. ಆ ದೇಶದಲ್ಲಿ ಈಗಾಗ್ಲೇ ಸಿಹಿಸುದ್ದಿ ಸಾರಲಾಗಿತ್ತು. ಆದ್ರೆ ಇಡೀ ದೇಶದಲ್ಲಿ ಬರೀ 28 ಪ್ರಚಾರಕರು ಮಾತ್ರ ಇದ್ರು. ಆ ಟೆರಿಟೊರಿಯಲ್ಲಿ ಇಂಗ್ಲಿಷ್‌ ಮಾತಾಡೋ ಜನ ತುಂಬ ಇದ್ರು. ಆದ್ರೂ ಸತ್ಯ ಕಲಿತಿದ್ದ ಹೊಸಬರು ಪ್ರಗತಿ ಮಾಡಬೇಕಂದ್ರೆ ನಾವು ಒಂದಾದ್ರೂ ಸ್ಥಳೀಯ ಭಾಷೆಯನ್ನ ಕಲಿಬೇಕಾಗಿತ್ತು. ನಾವು ಕಂಪಾಲ ಪಟ್ಟಣ ಮತ್ತು ಅದ್ರ ಸುತ್ತಮುತ್ತ ಸಾರ್ತಾ ಇದ್ವಿ. ಅಲ್ಲಿ ಹೆಚ್ಚಿನ ಜನ ಲುಗಾಂಡ ಭಾಷೆ ಮಾತಾಡ್ತಾ ಇದ್ದಿದ್ದನ್ನ ನೋಡಿ ಆ ಭಾಷೆ ಕಲಿಯೋಕೆ ತೀರ್ಮಾನ ಮಾಡಿದ್ವಿ. ಆ ಭಾಷೆಯನ್ನ ಚೆನ್ನಾಗಿ ಕಲಿಯೋಕೆ ವರ್ಷಗಳೇ ಹಿಡೀತು. ಆ ಭಾಷೆ ಕಲಿತಿದ್ದು ಒಳ್ಳೇದೇ ಆಯ್ತು. ನಮ್ಮ ಬೈಬಲ್‌ ವಿದ್ಯಾರ್ಥಿಗಳು ಯೆಹೋವನಿಗೆ ಆಪ್ತರಾಗೋಕೆ ನಾವೇನು ಮಾಡಬೇಕು ಅಂತ ತಿಳ್ಕೊಳ್ಳೋಕೆ ಸಾಧ್ಯ ಆಯ್ತು. ನಾವು ಅವ್ರ ಬಗ್ಗೆ ಆಸಕ್ತಿ ವಹಿಸೋದನ್ನ ನೋಡಿ ಅವ್ರು ಮನಸ್ಸು ಬಿಚ್ಚಿ ಮಾತಾಡ್ತಿದ್ರು. ಅಷ್ಟೇ ಅಲ್ಲ ಅವ್ರು ಕಲಿತಿದ್ದ ಸತ್ಯಗಳ ಬಗ್ಗೆ ಅವ್ರ ಅನಿಸಿಕೆಗಳನ್ನ ಮುಕ್ತವಾಗಿ ಹೇಳ್ತಿದ್ರು.

ಆಫ್ರಿಕಾದಲ್ಲಿ ಮಾಡಿದ ಪ್ರಯಾಣ

ಉಗಾಂಡದಲ್ಲಿ ನಮ್ಮ ಸವಾರಿ

ಜನ್ರಿಗೆ ಸತ್ಯ ಕಲಿಸೋದ್ರಲ್ಲಿ ನಮ್ಗೆ ತುಂಬ ಖುಷಿ ಸಿಕ್ತಿತ್ತು. ಉಗಾಂಡದಲ್ಲೇ ನನ್ಗೆ ಸಂಚರಣ ಮೇಲ್ವಿಚಾರಕನಾಗಿ ನೇಮಕ ಸಿಕ್ಕಿದಾಗ ನಮ್ಮ ಖುಷಿ ಇಮ್ಮಡಿ ಆಯ್ತು. ಆ ದೇಶದಲ್ಲಿ ವಿಶೇಷ ಪಯನೀಯರರ ಅಗತ್ಯ ಇರೋ ಟೆರಿಟೊರಿಗಳು ಯಾವುದು ಅಂತ ನೋಡ್ಕೊಂಡು ಬರೋಕೆ ಕೀನ್ಯಾ ಶಾಖಾ ಕಚೇರಿ ನಮ್ಗೆ ಹೇಳ್ತು. ಹಾಗಾಗಿ ಅಂಥ ಟೆರಿಟೊರಿಗಳನ್ನ ಹುಡುಕ್ತಾ ಇಡೀ ದೇಶ ಸುತ್ತಿದ್ವಿ. ಅಲ್ಲಿನ ಜನ್ರಿಗೆ ಯೆಹೋವನ ಸಾಕ್ಷಿಗಳು ಅಂದ್ರೆ ಯಾರಂತಾನೇ ಗೊತ್ತಿರಲಿಲ್ಲ. ಆದ್ರೂ ಅವರು ನಮ್ಮನ್ನ ಮನೆಗೆ ಕರೆದು ಒಳ್ಳೇ ಅಡಿಗೆ ಮಾಡಿ ಕೊಡ್ತಿದ್ರು. ನಮ್ಮನ್ನ ತುಂಬ ಪ್ರೀತಿಯಿಂದ ನೋಡ್ಕೊಂಡ್ರು.

ಅದ್ರ ನಂತ್ರ ನಾವು ಉಗಾಂಡ ಬಿಟ್ಟು ಬೇರೆಬೇರೆ ಕಡೆ ಪ್ರಯಾಣ ಮಾಡಿದ್ವಿ. 1965 ರಿಂದ 1972 ರ ತನಕ ಹಿಂದೂ ಮಹಾಸಾಗರದಲ್ಲಿ ಇರೋ ದ್ವೀಪ ಸಮೂಹವಾದ ಸೀಶೆಲ್ಸ್‌ನಲ್ಲಿ ಸಂಚರಣ ಕೆಲ್ಸ ಮಾಡ್ದೆ. ನನ್ನ ಜೊತೆ ಬಾರ್ಬರನೂ ಇರ್ತಿದ್ಲು. ನಾವು ಕಂಪಾಲದಿಂದ 2 ದಿನ ರೈಲಲ್ಲಿ ಪ್ರಯಾಣ ಮಾಡಿ ಕೀನ್ಯಾದ ಬಂದರು ಪಟ್ಟಣವಾದ ಮೊಂಬಾಸಗೆ ಹೋಗ್ತಿದ್ವಿ. ಅಲ್ಲಿಂದ ಹಡಗಲ್ಲಿ ಸೀಶೆಲ್ಸ್‌ಗೆ ಹೋಗ್ತಿದ್ವಿ. ಆರಂಭದಲ್ಲಿ ಅಲ್ಲಿ ಎರಡೇ ಪ್ರಚಾರಕರಿದ್ರು, ಆಮೇಲೆ ಒಂದು ಚಿಕ್ಕ ಗುಂಪು ಆಯ್ತು. ಅದು ಬೆಳೆದು ಎರಡು ದೊಡ್ಡ ಸಭೆ ಆಯ್ತು. ಸಂಚರಣ ಕೆಲ್ಸದಲ್ಲಿ ಮುಂದಕ್ಕೆ ಎರಿಟ್ರಿಯ, ಇಥಿಯೋಪಿಯ, ಸೂಡನ್‌ನಲ್ಲಿರೋ ಸಹೋದರರನ್ನ ಭೇಟಿ ಮಾಡೋ ಸುಯೋಗನೂ ಸಿಕ್ತು.

ಅಲ್ಲಿಂದ ಮರಳಿ ಉಗಾಂಡಕ್ಕೆ ಬಂದಾಗ ಅಲ್ಲಿನ ರಾಜಕೀಯ ಸ್ಥಿತಿಗತಿಗಳು ತುಂಬ ಬದ್ಲಾಗಿತ್ತು. ಅಲ್ಲಿ ಮಿಲಿಟರಿ ಆಡಳಿತ ಶುರುವಾಗಿತ್ತು. ಅದು ಕಷ್ಟದ ಸಮ್ಯ ಆಗಿತ್ತು. ಆದ್ರೆ “ರಾಜಂದು ರಾಜನಿಗೆ ಕೊಡಿ” ಅನ್ನೋ ಬೈಬಲ್‌ ಸಲಹೆಯನ್ನ ಪಾಲಿಸೋದು ಒಳ್ಳೇದು ಅನ್ನೋದನ್ನ ಕಲಿತೆ. (ಮಾರ್ಕ 12:17) ಒಂದು ಟೈಮಲ್ಲಿ ಉಗಾಂಡದಲ್ಲಿರೋ ಎಲ್ಲ ವಿದೇಶಿಗಳು ತಮ್ಮ ಮನೆ ಹತ್ರ ಇರೋ ಪೊಲೀಸ್‌ ಸ್ಟೇಶನಿಗೆ ಹೋಗಿ ನೋಂದಣಿ ಮಾಡಿಸ್ಕೊಬೇಕಿತ್ತು. ನಾವದನ್ನ ತಕ್ಷಣ ಮಾಡಿದ್ವಿ. ಸ್ವಲ್ಪ ದಿನಗಳಾದ ಮೇಲೆ ಕಂಪಾಲ ದಾಟಿ ಹೋಗ್ವಾಗ ರಹಸ್ಯ ಪೊಲೀಸ್‌ ಅಧಿಕಾರಿಗಳು ನಮ್ಮ ಕಾರನ್ನ ತಡೆದ್ರು. ಅದ್ರಲ್ಲಿ ನಾನು ಮತ್ತೆ ಇನ್ನೊಬ್ರು ಮಿಷನರಿ ಇದ್ವಿ. ಆಗ ಎಷ್ಟು ಭಯ ಆಯ್ತಂದ್ರೆ ನಮ್ಮ ಹೃದಯ ಬಡಿತ ನಮ್ಗೇ ಕೇಳಿಸೋ ತರ ಇತ್ತು. ನಾವು ಗೂಢಚಾರರು ಅಂತ ನಮ್ಮ ಮೇಲೆ ಆರೋಪ ಹಾಕಿದ್ರು. ಮುಖ್ಯ ಪೊಲೀಸ್‌ ಠಾಣೆಗೆ ಎಳ್ಕೊಂಡು ಹೋದ್ರು. ನಾವು ಮಿಷನರಿಗಳು, ಯಾರಿಗೂ ಏನೂ ಹಾನಿ ಮಾಡಲ್ಲ ಅಂತ ಅಲ್ಲಿ ವಿವರಿಸಿದ್ವಿ. ಈಗಾಗ್ಲೇ ನೋಂದಣಿ ಮಾಡಿದ್ದೀವಿ ಅಂತ ಎಷ್ಟು ಹೇಳಿದ್ರೂ ಪೊಲೀಸರು ಕೇಳೋಕೆ ರೆಡಿನೇ ಇರ್ಲಿಲ್ಲ. ಕೊನೆಗೆ ಸೈನಿಕರ ಸರ್ಪಗಾವಲಿನಲ್ಲಿ ನಮ್ಮನ್ನ ಮಿಷನರಿ ಮನೆಗೆ ಹತ್ರ ಇದ್ದ ಪೊಲೀಸ್‌ ಸ್ಟೇಶನಿಗೆ ಕರ್ಕೊಂಡು ಹೋದ್ರು. ಅಲ್ಲಿ ಮುಂಚೆ ನಾವು ನೋಂದಣಿ ಮಾಡಿಸೋಕೆ ಹೋದಾಗ ಇದ್ದ ಅಧಿಕಾರಿ ಇದ್ರು. ಅವರು ನಮ್ಮನ್ನ ನೋಡಿ ಗುರುತು ಹಿಡಿದ್ರು. ನಮ್ಮನ್ನ ಬಿಡುಗಡೆ ಮಾಡೋಕೆ ಪೊಲೀಸರಿಗೆ ಹೇಳಿದ್ರು. ನಮ್ಗೆ ತುಂಬ ಸಮಾಧಾನ ಆಯ್ತು.

ಆ ಸಮ್ಯದಲ್ಲಿ ಸೈನಿಕರು ಅಲ್ಲಲ್ಲಿ ಚೆಕ್ಕಿಂಗ್‌ಗೆ ಅಂತ ನಿಲ್ತಿದ್ರು. ನಮ್ಗೆ ತುಂಬ ಭಯ ಆಗ್ತಿತ್ತು. ಅದ್ರಲ್ಲೂ ಕಂಠಪೂರ್ತಿ ಕುಡಿದಿದ್ದ ಸೈನಿಕರು ಬಂದ್ರಂತೂ ನಮ್ಗೆ ನಡುಕನೇ ಶುರುವಾಗ್ತಿತ್ತು. ಆದ್ರೂ ಪ್ರತಿಸಲ ಪ್ರಾರ್ಥನೆ ಮಾಡ್ತಿದ್ವಿ. ಹಾಗಾಗಿ ಸಮಾಧಾನವಾಗಿ ಇರೋಕೆ ಆಗ್ತಿತ್ತು. ಅವರೂ ನಮಗೇನೂ ಮಾಡ್ದೆ ಬಿಟ್ಟುಬಿಡ್ತಿದ್ರು. ದುಃಖದ ವಿಷ್ಯ ಏನಂದ್ರೆ 1973 ರಲ್ಲಿ ಎಲ್ಲ ವಿದೇಶಿ ಮಿಷನರಿಗಳು ಉಗಾಂಡ ಬಿಟ್ಟು ಹೋಗಬೇಕು ಅಂತ ಸರ್ಕಾರ ಆದೇಶ ಹೊರಡಿಸ್ತು.

ಕೋಟ್‌ಡಿವಾರ್‌ನ ಅಬಿಜಾನ್‌ನಲ್ಲಿ ನಮ್ಮ ರಾಜ್ಯ ಸೇವೆಯ ಪ್ರತಿಗಳನ್ನ ಮಾಡ್ತಿರೋದು

ನಂತ್ರ ನಮ್ಗೆ ಪಶ್ಚಿಮ ಆಫ್ರಿಕಾದ ಕೋಟ್‌ ಡಿವಾರ್‌ನಲ್ಲಿ ನೇಮಕ ಸಿಕ್ತು. ಅಲ್ಲಿ ನಾವು ದೊಡ್ಡ ಬದ್ಲಾವಣೆಗಳಿಗೆ ಹೊಂದ್ಕೊಬೇಕಾಗಿತ್ತು. ಅಲ್ಲಿನ ಸಂಸ್ಕೃತಿ ನಮ್ಗೆ ತುಂಬ ಹೊಸದಾಗಿತ್ತು. ಬರೀ ಫ್ರೆಂಚ್‌ ಭಾಷೆಯನ್ನೇ ಮಾತಾಡಬೇಕಿತ್ತು. ಬೇರೆಬೇರೆ ದೇಶದಿಂದ ಬಂದ ಮಿಷನರಿಗಳ ಜೊತೆ ಹೊಂದ್ಕೊಂಡು ಹೋಗಬೇಕಾಗಿತ್ತು. ಇಲ್ಲೂ ನಮ್ಮನ್ನ ಯೆಹೋವ ಆಶೀರ್ವದಿಸಿದನು. ದೀನತೆ ಇದ್ದ ಮುಗ್ಧ ಜನ್ರು ನಾವು ಸಿಹಿಸುದ್ದಿ ಸಾರಿದಾಗ ಅದನ್ನ ಚೆನ್ನಾಗಿ ಕೇಳಿಸ್ಕೊಳ್ತಾ ಇದ್ರು. ಯೆಹೋವ ನಮ್ಗೆ ಸರಿಯಾದ ದಾರಿ ತೋರಿಸಿದ್ದಾನೆ ಅನ್ನೋದನ್ನ ನಾವಿಬ್ರು ಕಣ್ಣಾರೆ ನೋಡಿದ್ವಿ.

ಇದ್ದಕ್ಕಿದ್ದ ಹಾಗೆ ಬಾರ್ಬರಗೆ ಕ್ಯಾನ್ಸರ್‌ ಬಂತು. ಚಿಕಿತ್ಸೆಗೆ ಆಗಾಗ ನಮ್ಮ ಮನೆಗೆ ಅಂದ್ರೆ ಯೂರೋಪಿಗೆ ಹೋಗಬೇಕಾಗ್ತಿತ್ತು. 1983 ರಲ್ಲಿ ಇನ್ನು ನಾವು ಆಫ್ರಿಕದಲ್ಲಿ ಸೇವೆ ಮಾಡಕ್ಕಾಗಲ್ಲ ಅಂತ ಅರ್ಥ ಆಗಿ ವಾಪಸ್‌ ಬಂದುಬಿಟ್ವಿ. ಆಗ ನಮ್ಗೆ ತುಂಬ ಬೇಜಾರಾಯ್ತು.

ಎಲ್ಲ ಬದ್ಲಾಯ್ತು

ನಾವು ಲಂಡನ್‌ ಬೆತೆಲಲ್ಲಿ ಸೇವೆ ಮಾಡ್ತಿದ್ದಾಗ ಬಾರ್ಬರಗೆ ಕ್ಯಾನ್ಸರ್‌ ಜಾಸ್ತಿ ಆಗಿ ತೀರಿಹೋದ್ಳು. ಆಗ ಬೆತೆಲ್‌ ಕುಟುಂಬ ನನ್ಗೆ ಬೆನ್ನೆಲುಬಾಗಿ ನಿಲ್ತು. ಅದ್ರಲ್ಲೂ ಒಂದು ದಂಪತಿ ನನ್ಗೆ ಈ ಪರಿಸ್ಥಿತಿಗೆ ಹೊಂದ್ಕೊಳ್ಳೋಕೆ ಮತ್ತು ಯೆಹೋವನ ಮೇಲೆ ಭರವಸೆ ಇಟ್ಟು ಮುಂದೆ ಹೋಗೋಕೆ ಸಹಾಯ ಮಾಡಿದ್ರು. ನಂತ್ರ ಆ್ಯನ್‌ ಅನ್ನೋ ಸಹೋದರಿಯನ್ನ ಭೇಟಿ ಮಾಡ್ದೆ. ಆಕೆ ಮನೆಯಿಂದ ಬೆತೆಲಿಗೆ ಬಂದು ಸೇವೆ ಮಾಡ್ತಿದ್ಳು. ಮುಂಚೆ ವಿಶೇಷ ಪಯನೀಯರ್‌ ಆಗಿ ಸೇವೆ ಮಾಡಿದ್ಳು. ಆಕೆಗೆ ಯೆಹೋವನ ಮೇಲೆ ತುಂಬ ಪ್ರೀತಿ ಇತ್ತು. ಅದು ನನ್ಗೆ ತುಂಬ ಇಷ್ಟ ಆಯ್ತು. 1989 ರಲ್ಲಿ ನಾವಿಬ್ರು ಮದ್ವೆ ಆದ್ವಿ. ಆಗಿಂದ ನಾವಿಬ್ರು ಲಂಡನ್‌ ಬೆತೆಲಲ್ಲಿ ಸೇವೆ ಮಾಡ್ತಾ ಇದ್ದೀವಿ.

ಹೊಸ ಬ್ರಿಟನ್‌ ಬ್ರಾಂಚ್‌ ಮುಂದೆ ನಾನು ಮತ್ತು ಆ್ಯನ್‌

1995 ರಿಂದ 2018 ರ ತನಕ ಮುಖ್ಯ ಕಾರ್ಯಾಲಯದ ಪ್ರತಿನಿಧಿಯಾಗಿ (ಜೋ಼ನ್‌ ಮೇಲ್ವಿಚಾರಕ) ಕೆಲ್ಸ ಮಾಡೋ ಸುಯೋಗ ನನ್ಗೆ ಸಿಕ್ತು. ಹೆಚ್ಚು ಕಡಿಮೆ 60 ದೇಶಗಳಿಗೆ ಹೋಗಿದ್ದೀನಿ. ತನ್ನ ಸೇವಕರು ಯಾವ್ದೇ ಸನ್ನಿವೇಶದಲ್ಲಿದ್ರೂ ಯೆಹೋವ ಅವ್ರನ್ನ ಆಶೀರ್ವಾದ ಮಾಡ್ತಾನೆ ಅನ್ನೋದನ್ನ ನಾನು ಪ್ರತಿ ಭೇಟಿಯಲ್ಲೂ ಕಣ್ಣಾರೆ ನೋಡ್ದೆ.

ಹೀಗೆ ಭೇಟಿ ಮಾಡ್ವಾಗ ನನ್ಗೆ 2017 ರಲ್ಲಿ ಆಫ್ರಿಕಾಗೆ ಹೋಗೋ ಅವಕಾಶ ಸಿಕ್ತು. ಮೊದಲ್ನೇ ಸಲ ಆ್ಯನ್‌ನ ಬುರುಂಡಿಗೆ ಕರ್ಕೊಂಡು ಹೋಗೋಕೆ ನನ್ಗೆ ತುಂಬ ಖುಷಿ ಆಯ್ತು. ಅಲ್ಲಿ ತುಂಬ ಜನ ಸತ್ಯಕ್ಕೆ ಬಂದಿರೋದನ್ನ ನೋಡಿ ನಮ್ಗೆ ಸಖತ್‌ ಆಶ್ಚರ್ಯ ಆಯ್ತು. 1964 ರಲ್ಲಿ ನಾನು ಯಾವ ಜಾಗದಲ್ಲಿ ಮನೆಮನೆ ಸೇವೆ ಮಾಡಿದ್ನೋ ಅಲ್ಲಿ ಇವತ್ತು ಸುಂದರ ಬೆತೆಲ್‌ ಇದೆ. ಆ ಇಡೀ ದೇಶದಲ್ಲಿ 15,500ಕ್ಕೂ ಹೆಚ್ಚು ಪ್ರಚಾರಕರು ಸೇವೆ ಮಾಡ್ತಿದ್ದಾರೆ.

2018 ರಲ್ಲಿ ಯಾವ್ಯಾವ ದೇಶಗಳಿಗೆ ಭೇಟಿ ಮಾಡಬೇಕು ಅನ್ನೋ ಲಿಸ್ಟ್‌ ನಮ್ಗೆ ಸಿಕ್ದಾಗ ಅದನ್ನ ನೋಡಿ ನನ್ಗೆ ತುಂಬ ಖುಷಿ ಆಯ್ತು. ಆ ಲಿಸ್ಟಲ್ಲಿ ಕೋಟ್‌ ಡೀವಾರ್‌ ದೇಶನೂ ಇತ್ತು. ಅದ್ರ ರಾಜಧಾನಿ ಅಬಿಜಾನ್‌ಗೆ ನಾವು ತಲಪಿದಾಗ ನನ್ನ ಮನೆಗೇ ಬಂದ ತರ ಅನಿಸ್ತು. ನಾವು ಬೆತೆಲ್‌ ಗೆಸ್ಟ್‌ ರೂಮಲ್ಲಿ ಇದ್ವಿ. ಹೀಗೆ ಟೆಲಿಫೋನ್‌ ಲಿಸ್ಟ್‌ ನೋಡ್ತಾ ಇದ್ದಾಗ ನಮ್ಮ ಪಕ್ಕದ ರೂಮಲ್ಲಿ ಸಹೋದರ ಸೋಸು ಇದ್ದಾರೆ ಅಂತ ಗೊತ್ತಾಯ್ತು. ನಾನು ಮುಂಚೆ ಇಲ್ಲಿದ್ದಾಗ ಅವ್ರು ಸಿಟಿ ಮೇಲ್ವಿಚಾರಕ ಆಗಿ ಸೇವೆ ಮಾಡ್ತಿದ್ರು. ಬಹುಶಃ ಅವ್ರೇ ಇರ್ಬೇಕು ಅಂದ್ಕೊಂಡೆ. ಆದ್ರೆ ಅವ್ರಲ್ಲ ಅವ್ರ ಮಗ ಅಂತ ಆಮೇಲೆ ಗೊತ್ತಾಯ್ತು.

ಯೆಹೋವ ಕೊಟ್ಟ ಮಾತನ್ನ ಉಳಿಸ್ಕೊಂಡಿದ್ದಾನೆ. ಕಷ್ಟ ಬಂದಾಗ ನಾವು ಯೆಹೋವನ ಮೇಲೆ ಭರವಸೆ ಇಟ್ರೆ ಆತ ನಮ್ಗೆ ಸರಿಯಾದ ದಾರಿ ತೋರಿಸ್ತಾನೆ ಅನ್ನೋದನ್ನ ಅರ್ಥ ಮಾಡ್ಕೊಂಡಿದ್ದೇನೆ. ಯೆಹೋವ ನಮ್ಮನ್ನ ಹೊಸ ಲೋಕಕ್ಕೆ ಕರ್ಕೊಂಡು ಹೋಗೋ ತನಕ ಇದೇ ದಾರೀಲಿ ನಡಿತೀವಿ. ಅಲ್ಲಿ ನಮ್ಮ ಬಾಳು ಪೂರ್ತಿ ಬೆಳಗುತ್ತೆ.—ಜ್ಞಾನೋ. 4:18.