ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 6

“ಸ್ತ್ರೀಗೆ ಪುರುಷ ಯಜಮಾನ”

“ಸ್ತ್ರೀಗೆ ಪುರುಷ ಯಜಮಾನ”

“ಸ್ತ್ರೀಗೆ ಪುರುಷ ಯಜಮಾನ.”—1 ಕೊರಿಂ. 11:3.

ಗೀತೆ 5 ನಮಗೆ ಆದರ್ಶಪ್ರಾಯನಾದ ಕ್ರಿಸ್ತನು

ಕಿರುನೋಟ *

1. ಒಬ್ಬ ಸಹೋದರಿ ಮದ್ವೆಯಾಗೋ ಮುಂಚೆ ಯಾವ ಪ್ರಶ್ನೆಗಳನ್ನ ಕೇಳಿಕೊಳ್ಳಬೇಕು?

ಎಲ್ಲಾ ಕ್ರೈಸ್ತರಿಗೆ ಪರಿಪೂರ್ಣನಾಗಿರೋ ಯೇಸು ಕ್ರಿಸ್ತ ಯಜಮಾನ ಆಗಿದ್ದಾನೆ. ಆದ್ರೆ ಒಬ್ಬ ಕ್ರೈಸ್ತ ಸ್ತ್ರೀ ಮದ್ವೆಯಾದಾಗ ಗಂಡ ಅವ್ಳಿಗೆ ಯಜಮಾನ ಆಗ್ತಾನೆ. ಅವ್ನು ಅಪರಿಪೂರ್ಣ ಆಗಿರೋದ್ರಿಂದ ಅಧೀನತೆ ತೋರಿಸೋಕೆ ಅವ್ಳಿಗೆ ಕೆಲವೊಮ್ಮೆ ಕಷ್ಟ ಆಗ್ಬಹುದು. ಹಾಗಾಗಿ ಒಬ್ಬ ಸಹೋದರಿ ಮದ್ವೆಯಾಗೋ ಮುಂಚೆ ಕೆಲವು ಪ್ರಶ್ನೆಗಳನ್ನ ಕೇಳಿಕೊಳ್ಳೋದು ಒಳ್ಳೇದು: ‘ನಾನು ಮದ್ವೆ ಆಗಬೇಕಂತಿರೋ ಸಹೋದರ ನಂಗೆ ಒಳ್ಳೇ ಯಜಮಾನ ಆಗ್ತಾನೆ ಅನ್ನೋದಕ್ಕೆ ಯಾವ ಸೂಚನೆಗಳು ಕಾಣ್ತಿದೆ? ಅವನು ತನ್ನ ಜೀವನದಲ್ಲಿ ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡ್ತಿದ್ದಾನಾ? ಮೊದಲ ಸ್ಥಾನ ಕೊಡ್ತಿಲ್ಲ ಅಂದ್ರೆ ಮದ್ವೆ ಆದ್ಮೇಲೆ ಕೊಡ್ತಾನೆ ಅಂತ ನಂಗೆ ಯಾಕೆ ಅನಿಸ್ತಿದೆ?’ ಆ ಸಹೋದರಿ ತನ್ನನ್ನೂ ಪರೀಕ್ಷಿಸಿಕೊಳ್ಬೇಕು: ‘ಮದ್ವೆ ಆದ್ಮೇಲೆ ನಾವಿಬ್ರೂ ಚೆನ್ನಾಗಿರೋಕೆ ನಾನು ಈಗಾಗ್ಲೇ ಯಾವ ಗುಣಗಳನ್ನ ಬೆಳೆಸಿಕೊಂಡಿದ್ದೀನಿ? ನನ್ನಲ್ಲಿ ತಾಳ್ಮೆ ಉದಾರತೆ ಇದ್ಯಾ? ಯೆಹೋವನ ಜೊತೆಗೆ ಒಳ್ಳೇ ಸಂಬಂಧ ಇದ್ಯಾ?’ (ಪ್ರಸಂ. 4:9, 12) ಒಬ್ಬ ಸಹೋದರಿ ಮದ್ವೆಯಾಗೋ ಮುಂಚೆ ಚೆನ್ನಾಗಿ ಯೋಚನೆ ಮಾಡಿ ನಿರ್ಧಾರಗಳನ್ನ ತಗೊಂಡ್ರೆ ಮದ್ವೆ ಆದ್ಮೇಲೆ ಸಂತೋಷವಾಗಿರ್ತಾಳೆ.

2. ಈ ಲೇಖನದಲ್ಲಿ ನಾವೇನನ್ನ ಕಲಿತೇವೆ?

2 ಲಕ್ಷಾಂತರ ಸಹೋದರಿಯರು ತಮ್ಮತಮ್ಮ ಗಂಡನಿಗೆ ಅಧೀನತೆ ತೋರಿಸೋ ವಿಷ್ಯದಲ್ಲಿ ಒಳ್ಳೇ ಮಾದರಿ ಇಟ್ಟಿದ್ದಾರೆ. ಇವರನ್ನ ನಾವು ಮನಸಾರೆ ಶ್ಲಾಘಿಸ್ತೀವಿ. ಇಂಥ ನಿಷ್ಠಾವಂತ ಸ್ತ್ರೀಯರ ಜೊತೆ ಸೇರಿ ಯೆಹೋವನ ಸೇವೆ ಮಾಡೋಕೆ ನಮ್ಗೆ ತುಂಬ ಖುಷಿಯಾಗುತ್ತೆ. ಈ ಲೇಖನದಲ್ಲಿ ನಾವು ಮೂರು ಪ್ರಶ್ನೆಗಳಿಗೆ ಉತ್ತರ ನೋಡೋಣ. (1) ಗಂಡನಿಗೆ ವಿಧೇಯತೆ ಮತ್ತು ಗೌರವ ತೋರಿಸೋಕೆ ಹೆಂಡ್ತಿಗೆ ಯಾಕೆ ಕಷ್ಟ ಆಗುತ್ತೆ? (2) ಕಷ್ಟವಾದ್ರೂ ಗಂಡನ ಅಧಿಕಾರಕ್ಕೆ ಅವಳು ಯಾಕೆ ಗೌರವ ತೋರಿಸಬೇಕು? (3) ಅಧಿಕಾರಕ್ಕೆ ಗೌರವ ತೋರಿಸೋ ವಿಷ್ಯದಲ್ಲಿ ಯೇಸು, ಅಬೀಗೈಲ್‌ ಮತ್ತು ಯೇಸುವಿನ ತಾಯಿ ಮರಿಯಳಿಂದ ಗಂಡ-ಹೆಂಡ್ತಿ ಏನು ಕಲಿಬಹುದು?

ಯಾಕೆ ಕಷ್ಟ ಆಗ್ಬಹುದು?

3. ಸಂಸಾರದಲ್ಲಿ ಯಾಕೆ ತಂಟೆ ತಕರಾರು ಇದ್ದೇ ಇರುತ್ತೆ?

3 ಮದ್ವೆ ಅನ್ನೋದು ದೇವರು ಕೊಟ್ಟಿರೋ ಉಡುಗೊರೆ. ಆದ್ರೆ ಅದು ಆಗ್ಬಹುದು ಕೆಲವೊಮ್ಮೆ ದೊಡ್ಡ ಹೊರೆ. ಯಾಕಂದ್ರೆ ಮದ್ವೆ ಆಗೋ ಇಬ್ರೂ ಅಪರಿಪೂರ್ಣರು. (1 ಯೋಹಾ. 1:8) ಅದಕ್ಕೇ ಬೈಬಲ್‌ ‘ಮದ್ವೆ ಆದವ್ರಿಗೆ ಜೀವನದಲ್ಲಿ ಕಷ್ಟಸಂಕಟ ಇರುತ್ತೆ’ ಅಂತ ಹೇಳುತ್ತೆ. (1 ಕೊರಿಂ. 7:28) ನಾವೀಗ ಹೆಂಡ್ತಿಗೆ ಬರೋ ಸವಾಲುಗಳ ಬಗ್ಗೆ ನೋಡೋಣ.

4. ಹೆಂಡ್ತಿಯರಿಗೆ ಬರೋ ಒಂದು ಸವಾಲೇನು?

4 ಒಂದು ಸವಾಲೇನಂದ್ರೆ ಗಂಡನಿಗೆ ಅಧೀನತೆ ತೋರಿಸಿದ್ರೆ ಮರ್ಯಾದೆ ಕಮ್ಮಿಯಾಗುತ್ತೆ ಅನ್ನೋ ಸಂಸ್ಕೃತಿಯಲ್ಲಿ ಕೆಲವು ಸ್ತ್ರೀಯರು ಬೆಳೆದು ಬಂದಿರಬಹುದು. ಅಮೆರಿಕದಲ್ಲಿರೋ ಮ್ಯಾರಿಸೋಲ್‌ ಹೀಗೆ ಹೇಳ್ತಾಳೆ: “ಎಲ್ಲಾ ವಿಷಯದಲ್ಲೂ ಹೆಂಗಸರು ಗಂಡಸರಿಗೆ ಸಮಾನರು ಅನ್ನೋದನ್ನೇ ಚಿಕ್ಕವಯಸ್ಸಿಂದ ನಾನು ಕೇಳ್ತಾ ಬಂದಿದ್ದೀನಿ. ಆದ್ರೆ ಸಂಸಾರದಲ್ಲಿ ಯೆಹೋವ ಗಂಡನಿಗೆ ಅಧಿಕಾರ ಕೊಟ್ಟಿದ್ದಾನೆ ಅದಕ್ಕೆ ಹೆಂಡ್ತಿ ಅಧೀನತೆ ತೋರಿಸಬೇಕು, ಅದೇ ತರ ಹೆಂಡ್ತಿಗೂ ಗಂಡ ಗೌರವ ತೋರಿಸಬೇಕು ಅಂತ ನಂಗೊತ್ತು. ಆದ್ರೂ ನಾನು ಬೆಳೆದು ಬಂದಿರೋ ರೀತಿಯಿಂದಾಗಿ ಗಂಡನ ಮಾತು ಕೇಳೋಕೆ ಕೆಲವೊಮ್ಮೆ ಕಷ್ಟ ಆಗುತ್ತೆ.”

5. (ಎ) ಕೆಲವು ಗಂಡಸರು ಹೆಂಗಸರ ಬಗ್ಗೆ ಏನಂತ ಯೋಚಿಸ್ತಾರೆ? (ಬಿ) ಆ ರೀತಿ ಯೋಚಿಸೋದು ಯಾಕೆ ತಪ್ಪು?

5 ಹೆಂಗಸರಿಗಿಂತ ತಾವೇ ಶ್ರೇಷ್ಠ ಅಂತ ಕೆಲವು ಗಂಡಸರು ಯೋಚಿಸ್ತಾರೆ. ಅಂಥವರನ್ನ ಮದ್ವೆಯಾದ್ರೆ ಅಧೀನತೆ ತೋರಿಸೋಕೆ ಹೆಂಡ್ತಿಯರಿಗೆ ಕಷ್ಟ ಆಗುತ್ತೆ. ದಕ್ಷಿಣ ಅಮೆರಿಕದಲ್ಲಿರೋ ಸಹೋದರಿ ಇವೋನ್‌ ಹೀಗೆ ಹೇಳ್ತಾರೆ: “ನಮ್ಮೂರಲ್ಲಿ ಮೊದ್ಲು ಗಂಡಸ್ರು ಊಟ ಮಾಡ್ತಾರೆ ಆಮೇಲೆ ಹೆಂಗಸ್ರು ಊಟ ಮಾಡ್ತಾರೆ. ಮನೇಲಿರೋ ಹೆಣ್ಣುಮಕ್ಕಳೇ ಅಡಿಗೆ ಮಾಡ್ತಾರೆ, ಮನೆ ಕ್ಲೀನ್‌ ಮಾಡ್ತಾರೆ. ಗಂಡು ಮಕ್ಕಳನ್ನ ರಾಜರ ತರ ನೋಡ್ತಾರೆ. ಅಮ್ಮಂದಿರು, ಅಕ್ಕಂದಿರು, ತಂಗಿಯರು ಅವರ ಸೇವೆ ಮಾಡ್ತಾರೆ.” ಏಷ್ಯಾದಲ್ಲಿರೋ ಸಹೋದರಿ ಇಂಗ್ಲಿಂಗ್‌ ಹೀಗೆ ಹೇಳ್ತಾರೆ: “ನಮ್ಮ ಭಾಷೆಯಲ್ಲಿ ಒಂದು ಗಾದೆ ಇದೆ. ಅದರ ಅರ್ಥ ಏನಂದ್ರೆ ಹೆಂಗಸರಿಗೆ ಬುದ್ಧಿ ಪ್ರತಿಭೆ ಇರಬೇಕಂತಿಲ್ಲ. ಅವ್ರ ಕೆಲಸ ಏನಿದ್ರೂ ಮನೆ ನೋಡಿಕೊಳ್ಳೋದಷ್ಟೇ. ಗಂಡ ಏನೇ ಹೇಳಿದರೂ ಬಾಯಿಮುಚ್ಚಿಕೊಂಡು ಸುಮ್ಮನಿರಬೇಕು. ಏನೂ ಹೇಳೋ ಸ್ವಾತಂತ್ರ್ಯ ಅವರಿಗಿಲ್ಲ.” ಈ ರೀತಿಯ ಯೋಚನೆಯನ್ನ ಬೈಬಲ್‌ ತಪ್ಪು ಅನ್ನುತ್ತೆ. ಇಂಥ ಯೋಚನೆಯಿರೋ ವ್ಯಕ್ತಿ ಹೆಂಡ್ತಿಯನ್ನೂ ಚೆನ್ನಾಗಿ ನೋಡ್ಕೊಳ್ಳಲ್ಲ, ಯೇಸುವನ್ನೂ ಅನುಕರಿಸಲ್ಲ, ಯೆಹೋವನನ್ನೂ ಅನುಕರಿಸೋಕಾಗಲ್ಲ.—ಎಫೆ. 5:28, 29; 1 ಪೇತ್ರ 3:7.

6. ಯೆಹೋವನ ಜೊತೆ ಒಳ್ಳೇ ಸಂಬಂಧ ಕಾಪಾಡಿಕೊಳ್ಳೋಕೆ ಹೆಂಡ್ತಿಯರು ಏನು ಮಾಡ್ಲೇಬೇಕು?

6 ಹಿಂದಿನ ಲೇಖನದಲ್ಲಿ ತಿಳಿಸಿದಂತೆ ಗಂಡನಿಗೆ ಯೆಹೋವ ಕೆಲವು ಜವಾಬ್ದಾರಿಗಳನ್ನ ಕೊಟ್ಟಿದ್ದಾನೆ. ಕುಟುಂಬದವ್ರು ಯೆಹೋವನಿಗೆ ಆಪ್ತರಾಗೋಕೆ ಅವನು ಸಹಾಯ ಮಾಡ್ಬೇಕು, ಅವ್ರನ್ನ ತಾನು ಪ್ರೀತಿಸ್ತೀನಿ ಅಂತ ತೋರಿಸಿಕೊಡ್ಬೇಕು ಮತ್ತು ಅವ್ರಿಗೆ ಬೇಕಾಗಿದ್ದನ್ನ ತಂದುಹಾಕ್ಬೇಕು. (1 ತಿಮೊ. 5:8) ಅದೇ ತರ ಹೆಂಡ್ತಿಯರು ಬೈಬಲನ್ನ ಓದಿ ಧ್ಯಾನಿಸಬೇಕು, ಯೆಹೋವನಿಗೆ ಮನಸಾರೆ ಪ್ರಾರ್ಥನೆ ಮಾಡ್ಬೇಕು. ಎಷ್ಟೇ ಕೆಲ್ಸ ಇದ್ರೂ ಇದಕ್ಕೆಲ್ಲಾ ಅವ್ರು ಸಮಯ ಮಾಡಿಕೊಳ್ಳಲೇ ಬೇಕು. ‘ಸಮಯ ಇಲ್ಲ’ ಅಥ್ವಾ ‘ಸುಸ್ತಾಗಿದೆ’ ಅಂತ ಅನಿಸ್ವಾಗಲೂ ಇದನ್ನೆಲ್ಲಾ ಮಾಡೋದು ತುಂಬ ಮುಖ್ಯ. ಯಾಕಂದ್ರೆ ಗಂಡಸರಾಗ್ಲಿ ಹೆಂಗಸರಾಗ್ಲಿ ಪ್ರತಿಯೊಬ್ಬರೂ ತನ್ನ ಜೊತೆ ಆಪ್ತತೆ ಬೆಳೆಸಿಕೊಂಡು ಉಳಿಸ್ಕೊಬೇಕು ಅನ್ನೋದೇ ಯೆಹೋವನ ಆಸೆ.—ಅ. ಕಾ. 17:27.

7. ಹೆಂಡ್ತಿ ಏನು ಮಾಡಿದ್ರೆ ಗಂಡನ ಅಧಿಕಾರಕ್ಕೆ ಗೌರವ ತೋರಿಸೋಕೆ ಸುಲಭ ಆಗುತ್ತೆ?

7 ಈ ಸವಾಲುಗಳನ್ನ ನೋಡ್ವಾಗ, ಅಪರಿಪೂರ್ಣನಾದ ಗಂಡನಿಗೆ ಅಧೀನತೆ ತೋರಿಸೋದು ಹೆಂಡ್ತಿಗೆ ಸ್ವಲ್ಪ ಕಷ್ಟ ಆಗ್ಬಹುದು ಅನ್ನೋದು ನಿಜಾನೇ. ಆದ್ರೆ ಗಂಡನ ಅಧಿಕಾರಕ್ಕೆ ಯಾಕೆ ಗೌರವ ಕೊಡಬೇಕು ಅಂತ ಯೆಹೋವ ಕೊಡೋ ಕಾರಣವನ್ನ ಅವಳು ಚೆನ್ನಾಗಿ ಅರ್ಥ ಮಾಡ್ಕೊಂಡ್ರೆ ಮತ್ತು ಅದನ್ನ ಒಪ್ಕೊಂಡ್ರೆ ಅಧೀನತೆ ತೋರಿಸೋಕೆ ಸುಲಭ ಆಗುತ್ತೆ.

ಯಾಕೆ ಗೌರವ ಕೊಡ್ಲೇಬೇಕು?

8. ಎಫೆಸ 5:22-24 ರ ಪ್ರಕಾರ ಹೆಂಡ್ತಿ ಯಾಕೆ ಗಂಡನ ಅಧಿಕಾರಕ್ಕೆ ಗೌರವ ಕೊಡ್ಬೇಕು?

8 ಎಷ್ಟೇ ಕಷ್ಟವಾದ್ರೂ ಒಬ್ಬ ಕ್ರೈಸ್ತ ಹೆಂಡ್ತಿ ತನ್ನ ಗಂಡನ ಅಧಿಕಾರಕ್ಕೆ ಗೌರವ ಕೊಡ್ತಾಳೆ. ಯಾಕಂದ್ರೆ ಆ ತರ ಮಾಡ್ಬೇಕು ಅಂತ ಹೇಳ್ತಿರೋದು ಯೆಹೋವ. (ಎಫೆಸ 5:22-24 ಓದಿ.) ತನ್ನ ಪ್ರೀತಿಯ ಅಪ್ಪ ಯೆಹೋವ ತನ್ನನ್ನ ತುಂಬ ಪ್ರೀತಿಸ್ತಾನೆ, ತನ್ನ ಒಳ್ಳೇದಕ್ಕೇ ಈ ನಿಯಮ ಕೊಟ್ಟಿದ್ದಾನೆ ಅಂತ ಅವಳಿಗೆ ಸಂಪೂರ್ಣ ನಂಬಿಕೆಯಿದೆ.—ಧರ್ಮೋ. 6:24; 1 ಯೋಹಾ. 5:3.

9. ಒಬ್ಬ ಸಹೋದರಿ ಗಂಡನ ಅಧಿಕಾರಕ್ಕೆ ಗೌರವ ತೋರಿಸಿದರೆ ಯಾವ ಪ್ರಯೋಜನ ಸಿಗುತ್ತೆ?

9 ‘ಹೆಣ್ಣು ಗಂಡಿಗೆ ಸಮಾನ, ಗಂಡಿಗೆ ಅಧೀನತೆ ತೋರಿಸಿದ್ರೆ ಅದು ಹೆಣ್ಣುಕುಲಕ್ಕೇ ಅವಮಾನ’ ಅಂತ ಲೋಕದ ಜನ ಹೇಳ್ತಾರೆ. ಆದ್ರೆ ಅಧೀನತೆ ತೋರಿಸಬೇಕು ಅಂತ ಹೇಳಿರೋದು ಪ್ರೀತಿಯ ದೇವರಾದ ಯೆಹೋವ ಅಂತ ಅವರಿಗೆ ಗೊತ್ತಿಲ್ಲ. ಕಣ್ಮಣಿಗಳಂತೆ ಇರೋ ಹೆಣ್ಮಕ್ಕಳಿಗೆ ಅವಮಾನ ಆಗುವಂಥ ನಿಯಮವನ್ನ ಯೆಹೋವ ಯಾವತ್ತೂ ಕೊಡಲ್ಲ. ಒಬ್ಬ ಸಹೋದರಿ ಗಂಡನಿಗೆ ಅಧೀನತೆ ತೋರಿಸಬೇಕು ಅನ್ನೋ ನಿಯಮಾನ ಪಾಲಿಸಿದ್ರೆ ಆಕೆಯ ಮನೆಯಲ್ಲಿ ಶಾಂತಿ ತುಂಬಿ ತುಳುಕುತ್ತೆ. (ಕೀರ್ತ. 119:165) ಅವಳು, ಅವಳ ಗಂಡ, ಮಕ್ಕಳು ಎಲ್ರೂ ಖುಷಿಯಾಗಿ ಇರ್ತಾರೆ.

10. ಕ್ಯಾರಲ್‌ ಹೇಳಿರೋ ಮಾತಿಂದ ನಾವೇನು ಕಲಿಬಹುದು?

10 ಒಬ್ಬ ಹೆಂಡ್ತಿಗೆ ಯೆಹೋವ ದೇವ್ರ ಮೇಲೆ ಪ್ರೀತಿ ಗೌರವ ಇದ್ರೆ ಗಂಡನಲ್ಲಿ ಕುಂದು ಕೊರತೆಗಳಿದ್ರೂ ಅವನ ಅಧಿಕಾರಕ್ಕೆ ಗೌರವ ತೋರಿಸೇ ತೋರಿಸ್ತಾಳೆ. ದಕ್ಷಿಣ ಅಮೆರಿಕದಲ್ಲಿರೋ ಕ್ಯಾರಲ್‌ ಏನು ಹೇಳ್ತಾಳೆ ನೋಡಿ: “ನಮ್ಮೆಜಮಾನ್ರಿಂದ ಕೆಲವೊಮ್ಮೆ ತಪ್ಪಾಗುತ್ತೆ. ಆ ಸಮಯದಲ್ಲಿ ನಾನು ದೊಡ್ಡ ರಂಪ ಮಾಡಲ್ಲ. ಅವ್ರಿಗೆ ತೋರಿಸೋ ಅಧೀನತೆಯನ್ನ ಕಡಿಮೆನೂ ಮಾಡಲ್ಲ. ಯಾಕಂದ್ರೆ ಪ್ರೀತಿಯ ಅಪ್ಪ ಯೆಹೋವನ ಜೊತೆ ಇರೋ ಸಂಬಂಧ, ಆತನ ಸಂತೋಷನೇ ನಂಗೆ ಮುಖ್ಯ.”

11. (ಎ) ಗಂಡನನ್ನ ಕ್ಷಮಿಸೋಕೆ ಸಹೋದರಿ ಆ್ಯನೀಸ್‌ಗೆ ಯಾವುದು ಸಹಾಯ ಮಾಡುತ್ತೆ? (ಬಿ) ಆ ಸಹೋದರಿಯ ಮಾತಿಂದ ನಾವೇನು ಕಲಿಬಹುದು?

11 ಗಂಡ ತನ್ನ ಭಾವನೆಗಳಿಗೆ ಬೆಲೆನೇ ಕೊಡ್ತಿಲ್ಲ, ತನ್ನ ಬಗ್ಗೆ ಚಿಂತೆನೇ ಮಾಡ್ತಿಲ್ಲ ಅಂತ ಹೆಂಡ್ತಿಗೆ ಅನಿಸಿದರೆ ಗಂಡನ ಅಧಿಕಾರಕ್ಕೆ ಗೌರವ ಕೊಡೋಕೆ ಕಷ್ಟ ಆಗುತ್ತೆ. ಆ ತರ ಅನಿಸಿದಾಗ ಸಹೋದರಿ ಆ್ಯನೀಸ್‌ ಏನು ಮಾಡ್ತಾರೆ ಅಂತ ನೋಡಿ: “ಕೋಪ ಇಟ್ಟುಕೊಳ್ಳದೇ ಇರೋಕೆ ಪ್ರಯತ್ನ ಮಾಡ್ತೀನಿ, ಎಲ್ರೂ ತಪ್ಪು ಮಾಡ್ತಾರೆ ಅನ್ನೋದನ್ನ ಮನಸ್ಸಲ್ಲಿ ಇಡ್ತೀನಿ. ಯೆಹೋವನ ತರ ಕ್ಷಮಿಸೋಕೆ ನೋಡ್ತೀನಿ. ಆ ತರ ಕ್ಷಮಿಸಿದಾಗ ನಂಗೆ ನೆಮ್ಮದಿ ಸಿಗುತ್ತೆ.” (ಕೀರ್ತ. 86:5) ಕ್ಷಮಿಸೋ ಗುಣ ಬೆಳೆಸಿಕೊಂಡಿರೋ ಹೆಂಡ್ತಿಗೆ ಅಧೀನತೆ ತೋರಿಸೋಕೆ ಕಷ್ಟ ಆಗಲ್ಲ.

ಬೈಬಲಲ್ಲಿರೋ ಉದಾಹರಣೆಯಿಂದ ನಾವೇನು ಕಲಿಬಹುದು?

12. ಬೈಬಲಿನಲ್ಲಿ ಯಾವ ವ್ಯಕ್ತಿಗಳ ಉದಾಹರಣೆ ಇದೆ?

12 ಅಧೀನತೆ ತೋರಿಸುವವನು ಬಲಹೀನ ವ್ಯಕ್ತಿ ಅಂತ ಕೆಲವರು ನೆನಸ್ತಾರೆ. ಆದ್ರೆ ಇದು ಸತ್ಯ ಅಲ್ಲ. ಬೈಬಲ್‌ ಹೇಳೋದೇ ಬೇರೆ. ತುಂಬ ಧೈರ್ಯವಿದ್ದರೂ ಅಧೀನತೆ ತೋರಿಸಿರೋ ತುಂಬ ಜನರ ಉದಾಹರಣೆ ಬೈಬಲಲ್ಲಿದೆ. ಅಂಥವ್ರಲ್ಲಿ ಮೂರು ಜನ ಯೇಸು, ಅಬೀಗೈಲ್‌ ಮತ್ತು ಯೇಸುವಿನ ತಾಯಿ ಮರಿಯ. ಇವರಿಂದ ನಾವೇನು ಕಲಿಬಹುದು ಅಂತ ನೋಡೋಣ.

13. ಯೇಸು ಯೆಹೋವನಿಗೆ ಯಾಕೆ ಅಧೀನನಾಗಿದ್ದಾನೆ? ವಿವರಿಸಿ.

13 ಯೆಹೋವನ ಅಧಿಕಾರಕ್ಕೆ ಯೇಸು ಅಧೀನನಾಗಿದ್ದಾನೆ. ಇದರರ್ಥ ಅವನಲ್ಲಿ ಬುದ್ಧಿವಂತಿಕೆ, ಪ್ರತಿಭೆ ಕಡಿಮೆ ಇದೆ ಅಂತಲ್ಲ. ಜನ್ರಿಗೆ ಸ್ಪಷ್ಟವಾಗಿ, ಸರಳವಾಗಿ ಕಲಿಸೋದ್ರಲ್ಲಿ ಅವನಿಗೆ ಇರುವಷ್ಟು ಸಾಮರ್ಥ್ಯ ಭೂಮಿ ಮೇಲಿರೋ ಯಾರಿಗೂ ಇಲ್ಲ. (ಯೋಹಾ. 7:45, 46) ಯೇಸುಗೆ ತುಂಬ ಸಾಮರ್ಥ್ಯ ಇದೆ ಅಂತ ಯೆಹೋವನಿಗೆ ಗೊತ್ತಿತ್ತು. ಅದಕ್ಕೇ ಸ್ವರ್ಗ ಮತ್ತು ಭೂಮಿಯನ್ನ ಸೃಷ್ಟಿ ಮಾಡುವಾಗ ಯೇಸುವನ್ನ ತನ್ನ ಜೊತೆ ಕರಕೊಂಡನು. (ಜ್ಞಾನೋ. 8:30; ಇಬ್ರಿ. 1:2-4) ಯೇಸುಗೆ ಮರುಜೀವ ಕೊಟ್ಟಾಗ ‘ಸ್ವರ್ಗದಲ್ಲೂ ಭೂಮಿಯಲ್ಲೂ ಎಲ್ಲ ಅಧಿಕಾರವನ್ನ ಯೆಹೋವ ಅವನಿಗೆ ಕೊಟ್ಟನು.’ (ಮತ್ತಾ. 28:18) ಯೇಸುಗೆ ಇಷ್ಟೆಲ್ಲಾ ಪ್ರತಿಭೆ ಕೌಶಲಗಳಿದ್ರೂ ಅವನು ಏನೇ ಮಾಡಿದ್ರೂ ಯೆಹೋವನನ್ನ ಕೇಳಿಯೇ ಮಾಡ್ತಾನೆ. ಯಾಕಂದ್ರೆ ಅವನಿಗೆ ತನ್ನ ಅಪ್ಪನನ್ನ ಕಂಡ್ರೆ ತುಂಬ ಇಷ್ಟ.—ಯೋಹಾ. 14:31.

14. (ಎ) ಸ್ತ್ರೀಯರ ಬಗ್ಗೆ ಯೆಹೋವನಿಗಿರೋ ದೃಷ್ಟಿಕೋನದಿಂದ ಗಂಡ ಏನು ಕಲಿಬಹುದು? (ಬಿ) ಜ್ಞಾನೋಕ್ತಿ 31 ನೇ ಅಧ್ಯಾಯದಿಂದ ಗಂಡಂದಿರು ಏನು ಕಲಿಬಹುದು?

14 ಗಂಡ ಏನು ಕಲಿಬಹುದು? ‘ಗಂಡು ಮೇಲು ಹೆಣ್ಣು ಕೀಳು’ ಅಂತ ಯೆಹೋವ ನೆನಸಿ ಹೆಂಡ್ತಿ ಗಂಡನಿಗೆ ಅಧೀನತೆ ತೋರಿಸಬೇಕು ಅಂತ ನಿಯಮ ಮಾಡಿಲ್ಲ. ಒಂದುವೇಳೆ ಆ ರೀತಿ ನೆನಸಿದ್ರೆ ಯೇಸು ಜೊತೆ ಸ್ವರ್ಗದಲ್ಲಿ ಆಳೋಕೆ ಸ್ತ್ರೀಯರನ್ನ ಆರಿಸ್ತನೇ ಇರಲಿಲ್ಲ. (ಗಲಾ. 3:26-29) ಯೆಹೋವ ಯೇಸುಗೂ ಅಧಿಕಾರ ಕೊಟ್ಟು ಅವನ ಮೇಲೆ ನಂಬಿಕೆಯಿದೆ ಅನ್ನೋದನ್ನ ತೋರಿಸಿದ್ದಾನೆ. ಅದೇ ತರ ವಿವೇಕಿ ಗಂಡ ತನ್ನ ಹೆಂಡ್ತಿಗೆ ಸ್ವಲ್ಪ ಮಟ್ಟಿಗಿನ ಅಧಿಕಾರ ಕೊಡ್ತಾನೆ. ಬುದ್ಧಿವಂತಿಕೆ ಇರೋ ಹೆಂಡ್ತಿ ಏನೇನು ಕೆಲಸ ಮಾಡ್ತಾಳೆ ಅನ್ನೋ ಒಂದು ದೊಡ್ಡ ಪಟ್ಟಿ ಬೈಬಲಲ್ಲಿದೆ. ಮನೆ ವ್ಯವಹಾರ ನೋಡಿಕೊಳ್ಳೋದು, ಹೊಲ ಮಾರೋದು ತಗೊಳೋದು, ಹಣ ವ್ಯವಹಾರ ಮಾಡೋದು ಇಂಥ ಕೆಲಸವನ್ನ ಮಾಡೋ ಸಾಮರ್ಥ್ಯ ಹೆಂಡ್ತಿಗಿದೆ ಅಂತ ಬೈಬಲ್‌ ಹೇಳುತ್ತೆ. (ಜ್ಞಾನೋಕ್ತಿ 31:15, 16, 18 ಓದಿ.) ಹೆಂಡ್ತಿಗೆ ತನ್ನ ಅಭಿಪ್ರಾಯ ಹೇಳೋ ಹಕ್ಕಿದೆ. ಗಂಡ ಅವಳನ್ನ ಆಳು ತರ ನೋಡಬಾರದು, ಅವಳ ಅಭಿಪ್ರಾಯ ಕೇಳಬೇಕು. ಅವಳ ಮೇಲೆ ನಂಬಿಕೆ ಇಡಬೇಕು. (ಜ್ಞಾನೋಕ್ತಿ 31:11, 26, 27 ಓದಿ.) ಗಂಡ ಹೆಂಡ್ತಿಗೆ ಗೌರವ ಕೊಡುವಾಗ ಅವಳು ಮನಸಾರೆ ಗಂಡನಿಗೆ ಅಧೀನತೆ ತೋರಿಸ್ತಾಳೆ.

ಯೆಹೋವನಿಗೆ ಯೇಸು ಅಧೀನತೆ ತೋರಿಸಿದ ವಿಷ್ಯದಿಂದ ಹೆಂಡ್ತಿ ಏನು ಕಲಿಬಹುದು? (ಪ್ಯಾರ 15 ನೋಡಿ)

15. ಹೆಂಡ್ತಿಯರು ಯೇಸುವಿನಿಂದ ಏನು ಕಲಿಬಹುದು?

15 ಹೆಂಡ್ತಿ ಏನು ಕಲಿಬಹುದು? ದೊಡ್ಡದೊಡ್ಡ ಸಾಧನೆ ಮಾಡಿದ ಯೇಸು ಯೆಹೋವನಿಗೆ ಅಧೀನತೆ ತೋರಿಸಿದ್ರೆ ತನ್ನ ಮರ್ಯಾದೆ ಕಮ್ಮಿ ಆಗುತ್ತೆ ಅಂತ ನೆನಸಲಿಲ್ಲ. (1 ಕೊರಿಂ. 15:28; ಫಿಲಿ. 2:5, 6) ಹೆಂಡ್ತಿಯರು ಯೇಸು ತರ ಇರಬೇಕು. ಒಳ್ಳೇ ಹೆಂಡ್ತಿ ತನ್ನ ಗಂಡನಿಗೆ ಅಧೀನತೆ ತೋರಿಸಿದರೆ ಮರ್ಯಾದೆ ಕಡಿಮೆ ಆಗುತ್ತೆ ಅಂತ ನೆನಸಲ್ಲ. ಅವಳು ತನ್ನ ಗಂಡನ ಮೇಲಿರೋ ಪ್ರೀತಿಯಿಂದ ಮಾತ್ರ ಅಲ್ಲ, ಯೆಹೋವನ ಮೇಲಿರೋ ಪ್ರೀತಿ ಗೌರವದಿಂದ ಕೂಡ ತನ್ನ ಗಂಡನ ಅಧಿಕಾರಕ್ಕೆ ಅಧೀನತೆ ತೋರಿಸ್ತಾಳೆ.

ಅಬೀಗೈಲ್‌ ದಾವೀದನಿಗೆ ಮತ್ತು ಅವನ ಗಂಡಸರಿಗೆ ಆಹಾರವನ್ನ ಕಳಿಸಿದ ಮೇಲೆ ಸ್ವತಃ ಅವಳೇ ದಾವೀದನ ಹತ್ರ ಹೋಗ್ತಾಳೆ. ಅವನ ಮುಂದೆ ಮಂಡಿಯೂರಿ ನೆಲದ ತನಕ ಬಗ್ಗಿ ನಮಸ್ಕಾರ ಮಾಡ್ತಾಳೆ. ‘ಸೇಡು ತೀರಿಸಿಕೊಂಡು ರಕ್ತಾಪರಾಧ ನಿನ್ನ ಮೇಲೆ ತಂದುಕೋಬೇಡ’ ಅಂತ ದಾವೀದನನ್ನ ಬೇಡಿಕೊಳ್ತಾಳೆ (ಪ್ಯಾರ 16 ನೋಡಿ)

16. ಒಂದನೇ ಸಮುವೇಲ 25:3, 23-28 ರ ಪ್ರಕಾರ ಅಬೀಗೈಲ್‌ ಜೀವನದಲ್ಲಿ ಯಾವ ಕಷ್ಟಗಳು ಬಂದ್ವು? (ಮುಖಪುಟ ಚಿತ್ರ ನೋಡಿ.)

16 ಈಗ ಅಬೀಗೈಲ್‌ ಉದಾಹರಣೆ ನೋಡೋಣ. ಅವಳ ಗಂಡನ ಹೆಸರು ನಾಬಾಲ. ಅವನು ಸ್ವಾರ್ಥಿ, ಅಹಂಕಾರಿ ಆಗಿದ್ದ. ಬೇರೆಯವರು ಮಾಡಿದ ಸಹಾಯಕ್ಕೆ ಒಂಚೂರೂ ಬೆಲೆ ಕೊಡ್ತಿರಲಿಲ್ಲ. ಒಂದ್ಸಲ ದಾವೀದ ಮತ್ತವನ ಗಂಡಸರು ನಾಬಾಲನನ್ನು ಕೊಲ್ಲೋಕೆ ಬಂದಾಗ ಅಬೀಗೈಲ್‌ ಬೇಕಿದ್ರೆ ಸುಮ್ಮನಾಗಬಹುದಿತ್ತು. ಹೀಗೆ ನಾಬಾಲನಿಂದ ಮುಕ್ತಿ ಪಡ್ಕೊಳ್ಳಬಹುದಿತ್ತು. ಆದ್ರೆ ಅವಳು ಹಾಗೆ ಮಾಡಲಿಲ್ಲ. ನಾಬಾಲನನ್ನ ಮತ್ತು ತನ್ನ ಮನೆಯಲ್ಲಿ ಇದ್ದವರನ್ನೆಲ್ಲಾ ಕಾಪಾಡೋಕೆ ಕೆಲವು ವಿಷಯಗಳನ್ನ ಮಾಡಿದಳು. ಆಯುಧ ಸಮೇತ ಬಂದ 400 ಗಂಡಸರ ಮುಂದೆ, ದಾವೀದನ ಮುಂದೆ ಹೋಗಿ ಧೈರ್ಯದಿಂದ ಮಾತಾಡಿದಳು. ತನ್ನ ಗಂಡ ಮಾಡಿದ ತಪ್ಪಿಗೆ ದಾವೀದನತ್ರ ಕ್ಷಮೆ ಕೇಳಿದಳು. (1 ಸಮುವೇಲ 25:3, 23-28 ಓದಿ.) ತನ್ನ ಕೈಯಿಂದ ದೊಡ್ಡ ಅಪರಾಧ ನಡೆಯದ ಹಾಗೆ ತಡಿಯೋಕಂತನೇ ಯೆಹೋವ ಧೈರ್ಯವಂತೆಯಾದ ಅಬೀಗೈಲನ್ನ ಕಳಿಸಿದ್ದಾನೆ ಅಂತ ದಾವೀದ ತಕ್ಷಣ ಅರ್ಥ ಮಾಡ್ಕೊಂಡ.

17. ದಾವೀದ ಮತ್ತು ಅಬೀಗೈಲ್‌ರ ವೃತ್ತಾಂತದಿಂದ ಗಂಡಂದಿರು ಏನು ಕಲಿಬಹುದು?

17 ಗಂಡ ಏನು ಕಲಿಬಹುದು? ಅಬೀಗೈಲ್‌ಗೆ ಯಾವಾಗ ಹೇಗೆ ನಡ್ಕೊಬೇಕು ಅಂತ ಚೆನ್ನಾಗಿ ಗೊತ್ತಿತ್ತು. ಅವಳು ಕೊಟ್ಟ ಸಲಹೆಯನ್ನ ದಾವೀದ ಕೇಳಿಸಿಕೊಂಡಿದ್ರಿಂದ ಒಳ್ಳೇದಾಯ್ತು. ಅವನ ಕೈಯಿಂದ ಅಮಾಯಕರ ಜೀವ ಹೋಗೋದು ತಪ್ಪಿತು. ಅದೇ ತರ ಒಬ್ಬ ಗಂಡ ತೀರ್ಮಾನಗಳನ್ನ ಮಾಡೋ ಮುಂಚೆ ಹೆಂಡ್ತಿಯ ಅಭಿಪ್ರಾಯವನ್ನ ಕೇಳೋದು ಒಳ್ಳೇದು. ಯಾಕಂದ್ರೆ ಅವಳು ಕೊಡೋ ಸಲಹೆ ತಪ್ಪು ನಿರ್ಧಾರ ಮಾಡದಂತೆ ಅವನನ್ನ ತಡಿಬಹುದು.

18. ಅಬೀಗೈಲ್‌ ಉದಾಹರಣೆಯಿಂದ ಹೆಂಡ್ತಿಯರು ಏನು ಕಲಿಬಹುದು?   

18 ಹೆಂಡ್ತಿ ಏನು ಕಲಿಬಹುದು? ಯೆಹೋವನ ಮೇಲೆ ಪ್ರೀತಿ ಗೌರವ ಇರೋ ಹೆಂಡ್ತಿಯಿಂದ ಇಡೀ ಕುಟುಂಬಕ್ಕೇ ಒಳ್ಳೇದಾಗುತ್ತೆ. ಗಂಡ ಯೆಹೋವನ ಆರಾಧನೆ ಮಾಡದಿದ್ರೂ ಯೆಹೋವನ ನಿಯಮಗಳಿಗೆ ಬೆಲೆ ಕೊಡದಿದ್ರೂ ಅವನಿಗೆ ಅಧೀನತೆ ತೋರಿಸ್ತಾಳೆ. ಗಂಡನಿಂದ ಮುಕ್ತಿ ಪಡಿಯೋಕೆ ಬೈಬಲಿಗೆ ವಿರುದ್ಧವಾಗಿರೋ ಮಾರ್ಗ ಹುಡುಕಲ್ಲ. ಅವಳು ಗೌರವ ಕೊಡೋದನ್ನ ನೋಡಿ ಗಂಡ ಯೆಹೋವನ ಬಗ್ಗೆ ಕಲಿಯೋಕೆ ಮನಸ್ಸು ಮಾಡಬಹುದು. (1 ಪೇತ್ರ 3:1, 2) ಅವಳ ನಡತೆ ನೋಡಿ ಗಂಡ ಸತ್ಯ ಕಲಿಯದೇ ಇದ್ರೂ ಅವಳ ನಿಷ್ಠೆ, ಅಧೀನತೆ ನೋಡಿ ಯೆಹೋವನಿಗೆ ತುಂಬ ಖುಷಿ ಆಗುತ್ತೆ.

19. ಯಾವ ಸಂದರ್ಭದಲ್ಲಿ ಹೆಂಡ್ತಿ ಗಂಡನ ಮಾತು ಕೇಳಲ್ಲ?

19 ಗಂಡನ ಮಾತು ಕೇಳಬೇಕು ಅನ್ನೋದರ ಅರ್ಥ ಬೈಬಲ್‌ ನಿಯಮನ ಮುರಿಯೋಕೆ ಗಂಡ ಹೇಳಿದಾಗ್ಲೂ ಅವನ ಮಾತು ಕೇಳಬೇಕು ಅಂತಲ್ಲ. ಉದಾಹರಣೆಗೆ ಸತ್ಯದಲ್ಲಿ ಇಲ್ಲದಿರೋ ಗಂಡ ತನ್ನ ಹೆಂಡ್ತಿಗೆ ಸುಳ್ಳು ಹೇಳೋಕೆ, ಕದಿಯೋಕೆ, ಬೈಬಲ್‌ ಒಪ್ಪದೇ ಇರೋ ವಿಷ್ಯ ಮಾಡೋಕೆ ಹೇಳಿದಾಗ ಅವಳು ಏನು ಮಾಡ್ತಾಳೆ? ಆಗ ಅವಳು ಬೈಬಲ್‌ ನಿಯಮನ ಮುರಿಯೋಕೆ ಒಪ್ಪಲ್ಲ. ತಾನ್ಯಾಕೆ ಅದನ್ನ ಮಾಡ್ತಿಲ್ಲ ಅನ್ನೋ ಕಾರಣಗಳನ್ನ ಗೌರವದಿಂದ ವಿವರಿಸ್ತಾಳೆ. (ಅ. ಕಾ. 5:29) ಯಾಕಂದ್ರೆ ಮದುವೆಯಾಗಿರೋ ಸಹೋದರಿಯರಿಗೆ ಅಷ್ಟೇ ಅಲ್ಲ ಎಲ್ಲಾ ಕ್ರೈಸ್ತರಿಗೆ ಮೊದ್ಲು ಯೆಹೋವನೇ ಯಜಮಾನ, ಆತನ ಮಾತನ್ನೇ ಮೊದ್ಲು ಕೇಳಬೇಕು.

ಪ್ಯಾರ 20 ನೋಡಿ *

20. ಯೆಹೋವನ ಜೊತೆ ಮರಿಯಳಿಗೆ ಒಳ್ಳೇ ಸಂಬಂಧ ಇತ್ತು ಅಂತ ಹೇಗೆ ಹೇಳಬಹುದು?

20 ಮರಿಯಳಿಗೆ ಯೆಹೋವನ ಜೊತೆ ಒಳ್ಳೇ ಸಂಬಂಧ ಇತ್ತು. ಪವಿತ್ರ ಗ್ರಂಥದಲ್ಲಿರೋ ವಿಷಯಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಒಮ್ಮೆ ಅವಳು ಎಲಿಸಬೆತ್‌ ಜೊತೆ ಮಾತಾಡ್ತಿದ್ದಾಗ ಹೀಬ್ರು ಪವಿತ್ರ ಗ್ರಂಥದಲ್ಲಿನ ವಚನಗಳನ್ನ 20ಕ್ಕೂ ಹೆಚ್ಚು ಸಲ ಉಲ್ಲೇಖಿಸಿದಳು. (ಲೂಕ 1:46-55) ಮರಿಯಳಿಗೆ ಯೋಸೇಫನ ಜೊತೆ ನಿಶ್ಚಿತಾರ್ಥ ಆಗಿದ್ದಾಗ ಯೆಹೋವನ ದೇವದೂತ ಯೋಸೇಫನಿಗಲ್ಲ ಮರಿಯಳಿಗೆ ಮೊದಲು ಕಾಣಿಸಿಕೊಂಡು ಅವಳು ದೇವರ ಮಗನನ್ನ ಹೆರುತ್ತಾಳೆ ಅನ್ನೋ ವಿಷಯವನ್ನ ತಿಳಿಸಿದನು. (ಲೂಕ 1:26-33) ಯೆಹೋವಗೆ ಮರಿಯ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಅವಳು ತನ್ನ ಮಗನನ್ನ ಚೆನ್ನಾಗಿ ನೋಡಿಕೊಳ್ತಾಳೆ ಅಂತ ಭರವಸೆ ಇತ್ತು. ಯೇಸು ತೀರಿಹೋದ ಮೇಲೂ ಅವನು ಸ್ವರ್ಗಕ್ಕೆ ಹೋದ ಮೇಲೂ ಮರಿಯ ಯೆಹೋವನ ಜೊತೆ ಒಳ್ಳೇ ಸಂಬಂಧ ಕಾಪಾಡಿಕೊಂಡಳು.—ಅ. ಕಾ. 1:14.

21. ಮರಿಯ ಬಗ್ಗೆ ಬೈಬಲ್‌ ಹೇಳೋ ವಿಷಯದಿಂದ ಗಂಡ ಏನು ಕಲಿಬಹುದು?

21 ಗಂಡ ಏನು ಕಲಿಬಹುದು? ಹೆಂಡ್ತಿಗೆ ಬೈಬಲ್‌ ಬಗ್ಗೆ ಒಳ್ಳೇ ಜ್ಞಾನ ಇರೋದು ನೋಡಿ ಬುದ್ಧಿವಂತ ಗಂಡ ತುಂಬ ಖುಷಿಪಡ್ತಾನೆ. ಅವಳು ತನ್ನ ಸ್ಥಾನ ಕಿತ್ತುಕೊಳ್ಳೋಕೆ ಪ್ರಯತ್ನಿಸ್ತಿದ್ದಾಳೆ ಅಂತ ಅಂದುಕೊಳ್ಳಲ್ಲ. ತನ್ನ ಹೆಂಡ್ತಿಗೆ ಬೈಬಲ್‌ ಬಗ್ಗೆ, ಬೈಬಲಲ್ಲಿರೋ ತತ್ವಗಳ, ನಿಯಮಗಳ ಬಗ್ಗೆ ಒಳ್ಳೇ ಜ್ಞಾನ ಇರೋದ್ರಿಂದ ಕುಟುಂಬಕ್ಕೆ ಒಳ್ಳೇದಾಗುತ್ತೆ ಅನ್ನೋದನ್ನ ಗಂಡ ಅರ್ಥ ಮಾಡಿಕೊಳ್ತಾನೆ. ಅವಳಿಗೆ ಜಾಸ್ತಿ ಗೊತ್ತು, ಜಾಸ್ತಿ ಓದಿದ್ದಾಳೆ ಅಂತ ಎಲ್ಲವನ್ನೂ ಅವಳ ಕೈಗೆ ಒಪ್ಪಿಸಲ್ಲ. ಆರಾಧನೆ ವಿಷ್ಯದಲ್ಲಿ ಅವನೇ ಮುಂದಾಳತ್ವ ವಹಿಸ್ತಾನೆ. ಕುಟುಂಬ ಆರಾಧನೆಯನ್ನ ಅವನೇ ನಡೆಸ್ತಾನೆ.—ಎಫೆ. 6:4.

ಅಧ್ಯಯನ ಮತ್ತು ಧ್ಯಾನಿಸೋ ವಿಷ್ಯದಲ್ಲಿ ಹೆಂಡ್ತಿ ಮರಿಯಳಿಂದ ಏನು ಕಲಿಬಹುದು? (ಪ್ಯಾರ 22 ನೋಡಿ) *

22. ಮರಿಯಳಿಂದ ಹೆಂಡ್ತಿ ಏನು ಕಲಿಬಹುದು?

22 ಹೆಂಡ್ತಿ ಏನು ಕಲಿಬಹುದು? ಯೆಹೋವನ ಜೊತೆ ತನ್ನ ಸಂಬಂಧವನ್ನ ಬಲಪಡಿಸಿಕೊಳ್ಳೋದು ಪ್ರತಿಯೊಬ್ಬ ಹೆಂಡ್ತಿಯ ಜವಾಬ್ದಾರಿ. (ಗಲಾ. 6:5) ಅದಕ್ಕಾಗಿ ಅವಳು ವೈಯಕ್ತಿಕವಾಗಿ ಬೈಬಲನ್ನ ಅಧ್ಯಯನ ಮಾಡೋಕೆ, ಧ್ಯಾನಿಸೋಕೆ ಸಾಕಷ್ಟು ಸಮಯ ಮಾಡಿಕೊಳ್ತಾಳೆ. ಇದ್ರಿಂದ ಯೆಹೋವನ ಮೇಲೆ ಪ್ರೀತಿ ಗೌರವ ಹೆಚ್ಚುತ್ತೆ. ಅಷ್ಟೇ ಅಲ್ಲ ಗಂಡನಿಗೂ ಮನಸಾರೆ ಅಧೀನತೆ ತೋರಿಸ್ತಾಳೆ.

23. ಅಧೀನತೆ ತೋರಿಸೋದ್ರಿಂದ ಸ್ವತಃ ಹೆಂಡ್ತಿಗೆ, ಅವಳ ಕುಟುಂಬಕ್ಕೆ ಮತ್ತು ಸಭೆಗೆ ಯಾವ ಪ್ರಯೋಜನ ಸಿಗುತ್ತೆ?

23 ಯೆಹೋವನ ಮೇಲೆ ಪ್ರೀತಿ ಇರೋದ್ರಿಂದ ಗಂಡನಿಗೆ ಅಧೀನತೆ ತೋರಿಸೋ ಹೆಂಡ್ತಿ ಸಂತೋಷವಾಗಿ ಇರ್ತಾಳೆ. ಅವಳು ಯೆಹೋವ ಮಾಡಿರೋ ಈ ಏರ್ಪಾಡನ್ನ ತಿರಸ್ಕರಿಸೋ ಸ್ತ್ರೀಯರಿಗಿಂತ ಹೆಚ್ಚು ಖುಷಿಯಾಗಿ ಇರ್ತಾಳೆ. ಅಧೀನತೆ ತೋರಿಸೋ ವಿಷಯದಲ್ಲಿ ಅವಳು ಯುವಕ ಯುವತಿಯರಿಗೆ ಮಾದರಿಯಾಗಿ ಇರ್ತಾಳೆ. ಕುಟುಂಬದಲ್ಲಿ ಮಾತ್ರ ಅಲ್ಲ ಸಭೆಯಲ್ಲೂ ಶಾಂತಿ, ಪ್ರೀತಿ ಕಾಪಾಡೋಕೆ ಸಹಾಯ ಮಾಡ್ತಾಳೆ. (ತೀತ 2:3-5) ಇವತ್ತು ಯೆಹೋವನಿಗೆ ನಿಷ್ಠೆಯಿಂದ ಸೇವೆ ಮಾಡ್ತಿರೋರಲ್ಲಿ ಹೆಚ್ಚಿನವರು ಸ್ತ್ರೀಯರೇ. (ಕೀರ್ತ. 68:11) ಸಹೋದರನಾಗಲಿ ಸಹೋದರಿಯಾಗಲಿ ನಮ್ಮೆಲ್ಲರಿಗೂ ಸಭೆಯಲ್ಲಿ ನಮ್ಮದೇ ಆದ ಪಾತ್ರ ಇದೆ. ಅದನ್ನ ಚೆನ್ನಾಗಿ ನಿರ್ವಹಿಸೋಕೆ ಏನು ಮಾಡಬೇಕು ಅಂತ ಮುಂದಿನ ಲೇಖನದಲ್ಲಿ ಕಲಿತೇವೆ.

ಗೀತೆ 36 “ದೇವರು ಒಟ್ಟುಗೂಡಿಸಿದ್ದನ್ನು”

^ ಪ್ಯಾರ. 5 ಮದುವೆ ಆದಮೇಲೆ ಹೆಂಡ್ತಿ ತನ್ನ ಗಂಡನ ಮಾತು ಕೇಳ್ಬೇಕು, ಅವನಿಗೆ ಗೌರವ ಕೊಡ್ಬೇಕು ಅಂತ ಯೆಹೋವ ಹೇಳಿದ್ದಾನೆ. ಅಂದ್ರೆ ಅದ್ರ ಅರ್ಥ ಏನು? ಯೇಸು ಮತ್ತು ಬೈಬಲ್‌ನಲ್ಲಿರೋ ಕೆಲವು ಸ್ತ್ರೀಯರು ಅಧಿಕಾರಕ್ಕೆ ಗೌರವ ತೋರಿಸೋ ವಿಷ್ಯದಲ್ಲಿ ಒಳ್ಳೇ ಮಾದರಿ ಇಟ್ಟಿದ್ದಾರೆ. ಇವ್ರಿಂದ ಗಂಡ-ಹೆಂಡ್ತಿ ಏನು ಕಲಿಬಹುದು ಅಂತ ಈಗ ಚರ್ಚೆ ಮಾಡೋಣ.

^ ಪ್ಯಾರ. 68 ಚಿತ್ರ ವಿವರಣೆ: ಎಲಿಸಬೆತ್‌ ಜೊತೆ ಮರಿಯ ಮಾತಾಡ್ದಾಗ ಹೀಬ್ರು ಪವಿತ್ರ ಗ್ರಂಥದಿಂದ ಅನೇಕ ವಚನಗಳನ್ನ ನೋಡದೇ ಹೇಳಿದಳು.

^ ಪ್ಯಾರ. 70 ಚಿತ್ರ ವಿವರಣೆ: ಅದೇ ತರ ಸಹೋದರಿಯರು ಯೆಹೋವನ ಜೊತೆ ಇರೋ ತಮ್ಮ ಸಂಬಂಧವನ್ನ ಬಲಪಡಿಸೋಕೆ ಸಮಯ ಮಾಡಿಕೊಂಡು ಬೈಬಲ್‌ ಅಧ್ಯಯನ ಮಾಡ್ಬೇಕು.