ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ನನಗಿಂತ ಒಳ್ಳೇ ಡಾಕ್ಟರನ್ನ ನೋಡಿದೆ

ನನಗಿಂತ ಒಳ್ಳೇ ಡಾಕ್ಟರನ್ನ ನೋಡಿದೆ

ನಾನು 1971ರಲ್ಲಿ ಡಾಕ್ಟರ್‌ ಆದೆ. ಆಗಷ್ಟೇ ಹೊಸ ಕ್ಲಿನಿಕ್‌ ತೆರೆದೆ. ನನ್ನ ಹತ್ರ ಚಿಕಿತ್ಸೆ ಪಡ್ಕೊಳ್ಳೋಕೆ ಒಂದು ದಂಪತಿ ಬಂದ್ರು. ಅವರ ಹತ್ರ “ನಾನು ಚಿಕ್ಕ ವಯಸ್ಸಲ್ಲಿ ಕಂಡ ಕನಸು ನನಸಾಯ್ತು!” ಅಂದೆ. ಆ ದಂಪತಿಗಳು ಯಾರು? ಅವರ ಹತ್ರ ನಾನು ಯಾಕೆ ಹಾಗೆ ಹೇಳಿದೆ? ಅವರ ಜೊತೆ ಮಾತಾಡಿದ ವಿಷಯ ನನ್ನ ಜೀವನವನ್ನೇ ಹೇಗೆ ಬದಲಾಯಿಸ್ತು? ಅದನ್ನೆಲ್ಲ ನಿಮಗೆ ಹೇಳ್ತೀನಿ ಬನ್ನಿ.

ನಾನು 1941ರಲ್ಲಿ ಫ್ರಾನ್ಸ್‌ನಲ್ಲಿರೋ ಪ್ಯಾರಿಸ್‌ನಲ್ಲಿ ಹುಟ್ಟಿದೆ. ಸ್ಕೂಲ್‌ಗೆ ಹೋಗೋದು ಅಂದ್ರೆ ನನಗೆ ತುಂಬ ಇಷ್ಟ. ಆದ್ರೆ ನನಗೆ 10 ವರ್ಷ ಇದ್ದಾಗ ಟಿ.ಬಿ ಕಾಯಿಲೆ ಬಂದಿದ್ರಿಂದ ಸ್ಕೂಲ್‌ನ ಬಿಡಬೇಕಾಯ್ತು. ನನ್ನ ಉಸಿರಾಟಕ್ಕೆ ಸಮಸ್ಯೆ ಆಗಬಾರದು ಅಂತ ತುಂಬ ದಿನಗಳ ತನಕ ಮಲಗಿಕೊಂಡೇ ಇರೋಕೆ ಡಾಕ್ಟರ್‌ ಹೇಳಿದ್ರು. ಆಗ ನಾನು ಡಿಕ್ಷನರಿಗಳನ್ನ ಓದುತ್ತಾ, ಫ್ರಾನ್ಸ್‌ನ ಯೂನಿವರ್ಸಿಟಿಯವರು ಪ್ರಸಾರ ಮಾಡುತ್ತಿದ್ದ ಕಾರ್ಯಕ್ರಮಗಳನ್ನ ರೇಡಿಯೋದಲ್ಲಿ ಕೇಳಿಸಿಕೊಳ್ತಿದ್ದೆ. ಆದ್ರೆ ಒಂದಿನ ಡಾಕ್ಟರ್‌ ಬಂದು ‘ನೀನು ಹುಷಾರಾದೆ, ಇನ್ಮೇಲೆ ನೀನು ಸ್ಕೂಲ್‌ಗೆ ಹೋಗಬಹುದು’ ಅಂತ ಹೇಳಿದಾಗ ನಾನು ಖುಷಿಯಿಂದ ಕುಪ್ಪಳಿಸಿದೆ. ಡಾಕ್ಟರ್‌ಗಳು ಮಾಡೋ ಕೆಲಸ ಎಷ್ಟು ಒಳ್ಳೇದು! ಅಂತ ಅವತ್ತು ನನಗನಿಸ್ತು. ಹಾಗಾಗಿ ಅವತ್ತೇ ‘ನಾನೂ ಡಾಕ್ಟರ್‌ ಆಗಬೇಕು’ ಅಂತ ಕನಸು ಕಟ್ಟಿಕೊಂಡೆ. ನನ್ನ ಡ್ಯಾಡಿ ‘ನೀನು ಮುಂದೆ ಏನಾಗ್ತೀಯಾ?’ ಅಂತ ಕೇಳಿದಾಗೆಲ್ಲ ‘ಡಾಕ್ಟರ್‌ ಆಗ್ತೀನಿ’ ಅಂತನೇ ಹೇಳ್ತಿದ್ದೆ.

ವಿಜ್ಞಾನ ದೇವರ ಬಗ್ಗೆ ತಿಳಿದುಕೊಳ್ಳೋಕೆ ದಾರಿ ಮಾಡಿಕೊಡ್ತು

ನಾವು ಕ್ಯಾಥೊಲಿಕ್‌ ಧರ್ಮದವರಾಗಿದ್ವಿ. ಆದ್ರೂ ದೇವರ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ನನಗಿದ್ದ ಪ್ರಶ್ನೆಗಳೆಲ್ಲ ಪ್ರಶ್ನೆಗಳಾಗೇ ಉಳಿದುಬಿಟ್ಟಿತ್ತು. ಆದ್ರೆ ನಾನು ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗ ನಮ್ಮನ್ನ ಯಾರೋ ಸೃಷ್ಟಿ ಮಾಡಿದ್ದಾರೆ ಅಂತ ಅರ್ಥ ಮಾಡಿಕೊಂಡೆ.

ಸೂಕ್ಷ್ಮದರ್ಶಕದಿಂದ (ಮೈಕ್ರೋಸ್ಕೋಪ್‌) ಹೂವನ್ನ ನೋಡಿದ್ದು ನನಗಿನ್ನೂ ನೆನಪಿದೆ. ಅದರ ಜೀವಕೋಶಗಳು ಬಿಸಿ ಮತ್ತು ಚಳಿಯಿಂದ ಹೇಗೆ ತಮ್ಮನ್ನೇ ಕಾಪಾಡಿಕೊಳ್ತವೆ ಅಂತ ನೋಡಿ ನನಗೆ ಆಶ್ಚರ್ಯ ಆಯ್ತು. ಆ ಜೀವಕೋಶದಲ್ಲಿರೋ ಕೋಶದ್ರವ್ಯದ (ಸೈಟೋಪ್ಲಾಸಂ) ಮೇಲೆ ಉಪ್ಪು ಬಿದ್ದಾಗ ಅದು ಹೇಗೆ ಮುದುರಿಕೊಳ್ಳುತ್ತೆ, ಶುದ್ಧ ನೀರಲ್ಲಿ ಹಾಕಿದಾಗ ಹೇಗೆ ಅರಳುತ್ತೆ ಅಂತನೂ ನೋಡಿದೆ. ಈ ತರ ಇನ್ನೂ ಬೇರೆ-ಬೇರೆ ಸಾಮರ್ಥ್ಯಗಳು ಜೀವಕೋಶಕ್ಕಿದೆ. ಇದ್ರಿಂದ ಎಷ್ಟೋ ಚಿಕ್ಕ-ಚಿಕ್ಕ ಜೀವಿಗಳು ವಾತಾವರಣದಲ್ಲಿ ಆಗೋ ಬದಲಾವಣೆಗಳಿಗೆ ತಕ್ಕ ಹಾಗೆ ತಮ್ಮನ್ನ ಹೊಂದಿಸಿಕೊಳ್ತವೆ. ಇದನ್ನೆಲ್ಲ ನೋಡಿದಾಗ ಜೀವ ಅದಾಗದೇ ಬಂದಿಲ್ಲ, ಯಾರೋ ಸೃಷ್ಟಿ ಮಾಡಿದ್ದಾರೆ ಅಂತ ಅರ್ಥ ಆಯ್ತು.

ನಾನು ಮೆಡಿಕಲ್‌ ಕಾಲೇಜಿನಲ್ಲಿ 2ನೇ ವರ್ಷ ಓದ್ತಿದ್ದಾಗ ಅಂಗರಚನೆ ಬಗ್ಗೆ ತಿಳ್ಕೊಂಡೆ. ಆಗ ಎಲ್ಲವನ್ನೂ ದೇವರೇ ಸೃಷ್ಟಿ ಮಾಡಿದ್ದಾನೆ ಅನ್ನೋಕೆ ಇನ್ನೊಂದು ಆಧಾರ ಸಿಕ್ತು. ನಮ್ಮ ಬೆರಳುಗಳನ್ನ ಮಡಚೋಕೆ, ತೆಗೆಯೋಕೆ ಮುಂಗೈ ಸಹಾಯ ಮಾಡುತ್ತೆ. ಆ ಮುಂಗೈಯಲ್ಲಿರೋ ಮಾಂಸ ಖಂಡಗಳು ಮೂಳೆ ಜೊತೆ ಕೂಡಿಕೊಂಡು ಒಟ್ಟಿಗೆ ಕೆಲಸ ಮಾಡೋದನ್ನ ನೋಡುವಾಗ ಅದ್ಭುತ ಅನಿಸುತ್ತೆ. ಮುಂಗೈಯಿಂದ ಬೆರಳಿನ ಮಧ್ಯ ಭಾಗದ ತನಕ ಒಂದು ಸ್ನಾಯುರಜ್ಜು (ಟೆಂಡನ್ಸ್‌) ಹಾದುಹೋಗುತ್ತೆ. ಆದ್ರೆ ಅದು 2 ಭಾಗ ಆಗಿ ಸೇತುವೆ ತರ ಆಗುತ್ತೆ ಅದರ ಮಧ್ಯ ಇನ್ನೊಂದು ಸ್ನಾಯುರಜ್ಜು ಬೆರಳಿನ ತುದಿ ತನಕ ತೂರಿಕೊಂಡು ಹೋಗುತ್ತೆ. ಬೆರಳಿನ ಮೂಳೆಗಳಿಗೆ ಸ್ನಾಯುರಜ್ಜು ಅಂಟಿಕೊಂಡು ಇರೋಕೆ ಅಂಗಾಂಶಗಳು (ಟಿಶ್ಯೂಸ್‌) ಸಹಾಯ ಮಾಡುತ್ತೆ. ನಮ್ಮ ಬೆರಳುಗಳು ಈ ರೀತಿ ರಚನೆಯಾಗಿರಲಿಲ್ಲ ಅಂದಿದ್ರೆ ಆ ಸ್ನಾಯುರಜ್ಜುಗಳು ನೆಟ್ಟಗೆ ನಿಂತುಬಿಡ್ತಿದ್ವು. ಆಗ ನಮ್ಮ ಬೆರಳುಗಳನ್ನ ಮಡಚೋಕೆ ಆಗ್ತಿರಲಿಲ್ಲ ಮತ್ತು ಬೇರೆ ಕೆಲಸಗಳನ್ನ ಮಾಡೋಕೆ ಆಗ್ತಿರಲಿಲ್ಲ. ಈ ರಚನೆಯನ್ನ ನಾನು ನೋಡಿದಾಗ ಇದನ್ನೆಲ್ಲ ಸೃಷ್ಟಿ ಮಾಡಿರುವವನು ತುಂಬ ಬುದ್ಧಿವಂತ ಅಂತ ಅರ್ಥ ಮಾಡಿಕೊಂಡೆ.

ಹುಟ್ಟಿದ ತಕ್ಷಣ ಮಗು ಹೇಗೆ ಉಸಿರಾಡೋಕೆ ಶುರುಮಾಡುತ್ತೆ ಅಂತ ತಿಳ್ಕೊಂಡಾಗ ಸೃಷ್ಟಿಕರ್ತ ಇದನ್ನೆಲ್ಲ ಎಷ್ಟು ಅದ್ಭುತವಾಗಿ ಮಾಡಿದ್ದಾನೆ ಅಂತ ಅರ್ಥ ಆಯ್ತು. ಹೊಟ್ಟೆಲಿರೋ ಮಗು ಉಸಿರಾಡೋಕೆ ಕರುಳುಬಳ್ಳಿ ಸಹಾಯ ಮಾಡುತ್ತೆ. ಆಗ ಮಗುವಿನ ಶ್ವಾಸಕೋಶಗಳು ಇನ್ನೂ ಕೆಲಸ ಮಾಡೋಕೆ ಆರಂಭಿಸಿರಲ್ಲ. ಯಾಕಂದ್ರೆ ಶ್ವಾಸಕೋಶದಲ್ಲಿ ಬಲೂನ್‌ ತರ ಇರೋ ಅಲ್ವೆಯೋಲಿ ಮುದುರಿಕೊಂಡಿರುತ್ತೆ. ಅದರೊಳಗೆ ಗಾಳಿ ತುಂಬಿರಲ್ಲ. ಮಗು ಹುಟ್ಟೋಕೆ ಕೆಲವು ವಾರಗಳ ಮುಂಚೆ ಸರ್ಫೆಕ್ಟೆಂಟ್‌ ಅನ್ನೋ ದ್ರವ್ಯ ಅಲ್ವೆಯೋಲಿಯ ಒಳಗೆ ಹೋಗಿ ಅದು ಕೆಲಸ ಮಾಡೋಕೆ ಸಹಾಯ ಮಾಡುತ್ತೆ. ಮಗು ಹುಟ್ಟೋ ಸಮಯದಲ್ಲಿ ಅದರ ಹೃದಯದಲ್ಲಿರೋ ರಂಧ್ರ ಮುಚ್ಚಿಹೋಗುತ್ತೆ. ಇದ್ರಿಂದ ರಕ್ತವೆಲ್ಲ ಶ್ವಾಸಕೋಶಕ್ಕೆ ಹೋಗುತ್ತೆ. ಆಗ ಶ್ವಾಸಕೋಶದಲ್ಲಿರೋ ಅಲ್ವೆಯೋಲಿಯೊಳಗೆ ಗಾಳಿ ತುಂಬಿಕೊಳ್ಳುತ್ತೆ. ಇದ್ರಿಂದ ಮಗು ತನ್ನಷ್ಟಕ್ಕೆ ತಾನೆ ಉಸಿರಾಡೋಕೆ ಶುರುಮಾಡುತ್ತೆ.

ಇಷ್ಟೆಲ್ಲ ಅದ್ಭುತಗಳನ್ನ ಮಾಡಿರೋ ಸೃಷ್ಟಿಕರ್ತನ ಬಗ್ಗೆ ತಿಳಿದುಕೊಳ್ಳಲೇಬೇಕು ಅಂತ ಬೈಬಲ್‌ ಓದೋಕೆ ಶುರು ಮಾಡಿದೆ. 3,000 ವರ್ಷಗಳ ಹಿಂದೆ ಇಸ್ರಾಯೇಲ್ಯರಿಗೆ ಶುದ್ಧತೆಯ ಬಗ್ಗೆ ದೇವರು ಕೊಟ್ಟ ನಿಯಮಗಳನ್ನ ಓದಿದಾಗ ನನಗೆ ಆಶ್ಚರ್ಯ ಆಯ್ತು. ಇಸ್ರಾಯೇಲ್ಯರು ಬಯಲಿಗೆ ಹೋದಾಗ ಮಲವನ್ನ ಮಣ್ಣಿಂದ ಮುಚ್ಚಬೇಕಿತ್ತು, ಆಗಾಗ ಸ್ನಾನ ಮಾಡಬೇಕಿತ್ತು, ಯಾರಿಗಾದ್ರೂ ಸಾಂಕ್ರಾಮಿಕ ಕಾಯಿಲೆಯ ಲಕ್ಷಣಗಳು ಕಾಣಿಸಿದ್ರೆ ಅಂಥವರನ್ನ ದೂರ ಇಡಬೇಕಿತ್ತು. (ಯಾಜ. 13:50; 15:11; ಧರ್ಮೋ. 23:13) ಕಾಯಿಲೆಗಳು ಹರಡೋದ್ರ ಬಗ್ಗೆ ಈಗೀಗ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಆದ್ರೆ ಬೈಬಲಲ್ಲಿ ಎಷ್ಟೋ ವರ್ಷಗಳ ಹಿಂದೆನೇ ಇದ್ರ ಬಗ್ಗೆ ಬರೆದಿದೆ. ಯಾಜಕಕಾಂಡ ಪುಸ್ತಕದಲ್ಲಿ ಲೈಂಗಿಕ ಶುದ್ಧತೆ ಬಗ್ಗೆ ಇರೋ ನಿಯಮ ಜನರು ಆರೋಗ್ಯವಾಗಿ ಇರೋಕೆ ಸಹಾಯ ಮಾಡ್ತು ಅಂತ ಅರ್ಥ ಮಾಡ್ಕೊಂಡೆ. (ಯಾಜ. 12:1-6; 15:16-24) ದೇವರಿಗೆ ಇಸ್ರಾಯೇಲ್ಯರ ಮೇಲೆ ಪ್ರೀತಿ ಇದ್ದಿದ್ರಿಂದಾನೆ ಈ ನಿಯಮಗಳನ್ನ ಕೊಟ್ಟಿದ್ದನು. ಇದನ್ನ ಪಾಲಿಸಿದವರನ್ನ ಆಶೀರ್ವದಿಸಿದನು. ಇದ್ರಿಂದ ಬೈಬಲನ್ನ ದೇವರೇ ಬರೆಸಿದ್ದಾರೆ ಅಂತ ನನಗೆ ಗ್ಯಾರಂಟಿ ಸಿಕ್ತು. ಆದ್ರೆ ಆ ದೇವರ ಹೆಸರು ನನಗೆ ಗೊತ್ತಿರಲಿಲ್ಲ.

ನನ್ನ ಹೆಂಡತಿಯನ್ನ ಭೇಟಿಮಾಡಿದ್ದು ಯೆಹೋವನ ಬಗ್ಗೆ ತಿಳ್ಕೊಂಡಿದ್ದು

ಮದುವೆಯ ದಿನದಂದು ನಾನು ಮತ್ತು ಲಿಡಿ, ಏಪ್ರಿಲ್‌ 3, 1965

ನಾನು ಡಾಕ್ಟರ್‌ ಓದುತ್ತಿದ್ದಾಗ ಲಿಡಿ ಪರಿಚಯ ಆದಳು. ನಾವು ಒಬ್ಬರನ್ನೊಬ್ಬರು ಪ್ರೀತಿಸೋಕೆ ಶುರುಮಾಡಿದ್ವಿ. ಆಮೇಲೆ 1965ರಲ್ಲಿ ನಾನಿನ್ನೂ ಓದುತ್ತಿರುವಾಗಲೇ ನಮ್ಮ ಮದುವೆ ಆಯ್ತು. 1971ರಷ್ಟಕ್ಕೆ ನಮಗೆ 3 ಮಕ್ಕಳಾದ್ರು. ಕೆಲಸದಲ್ಲಿ, ಕುಟುಂಬದಲ್ಲಿ ಎಲ್ಲಾ ವಿಷಯದಲ್ಲೂ ನನ್ನ ಹೆಂಡತಿ ನನಗೆ ಸಹಕಾರ ಕೊಡ್ತಿದ್ದಳು.

ನಾನು ಓದು ಮುಗಿಸಿದ ಮೇಲೆ 3 ವರ್ಷ ಒಂದು ಆಸ್ಪತ್ರೆಯಲ್ಲಿ ಕೆಲಸ ಮಾಡಿದೆ. ಆಮೇಲೆ ಕ್ಲಿನಿಕ್‌ ತೆರೆದೆ. ಇದಾಗಿ ಸ್ವಲ್ಪ ದಿನಗಳಲ್ಲೇ ಒಂದು ದಂಪತಿ ಚಿಕಿತ್ಸೆಗೆ ಬಂದ್ರು. ಇವರ ಬಗ್ಗೆನೇ ನಾನು ಆಗಲೇ ಹೇಳಿದ್ದು. ಅವರಿಗೆ ಚಿಕಿತ್ಸೆಯೆಲ್ಲ ಮುಗಿದು ಇನ್ನೇನು ಔಷಧಿ ಬರೆದು ಕೊಡಬೇಕಂತಿದ್ದಾಗ ಅವರ ಹೆಂಡತಿ “ಡಾಕ್ಟ್ರೇ, ಈ ಔಷಧಿಯಲ್ಲಿ ರಕ್ತ ಸೇರಿಲ್ಲ ತಾನೇ?” ಅಂತ ಕೇಳಿದ್ರು. ಆಗ ನಾನು “ಯಾಕೆ” ಅಂತ ಕೇಳಿದೆ. ಅದಕ್ಕವರು “ನಾವು ಯೆಹೋವನ ಸಾಕ್ಷಿಗಳು” ಅಂದ್ರು. ನಾನು ಅಲ್ಲಿ ತನಕ ಯೆಹೋವನ ಸಾಕ್ಷಿಗಳ ಬಗ್ಗೆನೂ ಕೇಳಿರಲಿಲ್ಲ, ಅವರು ರಕ್ತ ತಗೊಳ್ಳಲ್ಲ ಅನ್ನೋದೂ ನನಗೆ ಗೊತ್ತಿರಲಿಲ್ಲ. ಆಗ ಅವರು ಯಾಕೆ ರಕ್ತ ತಗೊಳಲ್ಲ ಅಂತ ಆ ಸ್ತ್ರೀ ಬೈಬಲಿಂದ ತೋರಿಸಿದ್ರು. (ಅ. ಕಾ. 15:28, 29) ಅಷ್ಟೇ ಅಲ್ಲ, ಭೂಮಿ ಮೇಲೆ ದೇವರ ಸರ್ಕಾರ ಬಂದಾಗ ಕಾಯಿಲೆ ಇರಲ್ಲ, ಸಾವು-ನೋವು ಇರಲ್ಲ ಅಂತ ಬೈಬಲಿಂದ ತೋರಿಸಿದ್ರು. (ಪ್ರಕ. 21:3, 4) “ನಾನು ಜನರಿಗೆ ಸಹಾಯ ಮಾಡಬೇಕು, ಅವರ ಕಾಯಿಲೆ ವಾಸಿಮಾಡಬೇಕು ಅಂತಾನೇ ಡಾಕ್ಟರ್‌ ಆದೆ. ಆದ್ರೆ ನಾನು ಚಿಕ್ಕವಯಸ್ಸಲ್ಲಿ ಕಂಡ ಕನಸು ನನಸಾಯ್ತು!” ಅಂತ ಖುಷಿಯಿಂದ ಹೇಳಿದೆ. ಹೀಗೆ ಮಾತಾಡ್ತಾ ಮಾತಾಡ್ತಾ ಒಂದುವರೆ ತಾಸು ಹೇಗೆ ಹೋಯ್ತು ಅಂತಾನೇ ಗೊತ್ತಾಗಲಿಲ್ಲ. ಅವರು ಅಲ್ಲಿಂದ ಹೋದಮೇಲೆ ನಾನು ಇನ್ಮೇಲೆ ಕ್ಯಾಥೊಲಿಕ್‌ ಆಗಿರಬಾರದು ಅಂತ ತೀರ್ಮಾನ ಮಾಡಿದೆ. ಕೊನೆಗೂ ನಮ್ಮನ್ನ ಸೃಷ್ಟಿ ಮಾಡಿದ ದೇವರ ಹೆಸರು ಯೆಹೋವ ಅಂತ ಗೊತ್ತಾಯ್ತು!

ಈ ದಂಪತಿಗಳು ನನ್ನ ಕ್ಲಿನಿಕ್‌ಗೆ 3 ಸಲ ಬಂದಿದ್ರು. ಅವರು ಬಂದಾಗೆಲ್ಲ ಗಂಟೆಗಟ್ಟಲೆ ಮಾತಾಡ್ತಿದ್ವಿ. ಬೈಬಲಿಂದ ಇನ್ನೂ ಜಾಸ್ತಿ ಕಲಿಯೋಕೆ ನನಗೆ ಆಸೆಯಿತ್ತು. ಅದಕ್ಕೆ ನಾನು ಅವರನ್ನ ಮನೆಗೆ ಕರೆದೆ. ಅವರು ಬಂದಾಗ ಲಿಡಿನೂ ಬೈಬಲ್‌ ಸ್ಟಡಿಗೆ ನಮ್ಮ ಜೊತೆ ಕೂತ್ಕೊಳ್ತಿದ್ದಳು, ಆದ್ರೆ ಕ್ಯಾಥೊಲಿಕ್‌ ಚರ್ಚ್‌ನಲ್ಲಿ ಅವಳು ಕಲ್ತಿದ್ದ ವಿಷಯಗಳು ತಪ್ಪು ಅಂತ ಅವಳಿಗೆ ಒಪ್ಪಿಕೊಳ್ಳೋಕೇ ಆಗ್ತಿರಲಿಲ್ಲ. ಅದಕ್ಕೆ ಬೈಬಲಿಂದ ಚರ್ಚೆ ಮಾಡೋಕೆ ನಾನು ಒಬ್ಬ ಪಾದ್ರಿನ ಮನೆಗೆ ಕರೆದೆ. ರಾತ್ರಿ ತುಂಬ ಹೊತ್ತಾದ್ರೂ ನಾವು ಚರ್ಚೆ ಮಾಡ್ತಿದ್ವಿ. ಆದ್ರೆ ಚರ್ಚಲ್ಲಿ ಕಲಿಸ್ತಿರೋ ಎಷ್ಟೋ ವಿಷಯಗಳು ಬೈಬಲಲ್ಲಿ ಇಲ್ಲ ಅಂತ ಸಾಬೀತು ಆಯ್ತು. ಆಗ ಲಿಡಿಗೆ ಯೆಹೋವ ಸಾಕ್ಷಿಗಳು ಕಲಿಸ್ತಿರೋದೇ ಸತ್ಯ ಅಂತ ಗ್ಯಾರಂಟಿ ಆಯ್ತು. ನಾವು ಬೈಬಲ್‌ ಸ್ಟಡಿಯನ್ನ ಮುಂದುವರಿಸಿದ್ವಿ. 1974ರಲ್ಲಿ ದೀಕ್ಷಾಸ್ನಾನ ತಗೊಂಡ್ವಿ.

ಯೆಹೋವನ ಸೇವೆನೇ ನಮ್ಮ ಜೀವನದಲ್ಲಿ ಮುಖ್ಯ ಆಯ್ತು

ದೇವರು ಮನುಷ್ಯರಿಗೋಸ್ಕರ ಏನೆಲ್ಲಾ ಮಾಡ್ತಾರೆ ಅಂತ ತಿಳ್ಕೊಂಡಾಗ ನನ್ನ ಜೀವನದಲ್ಲಿ ಬದಲಾವಣೆಗಳನ್ನ ಮಾಡಿಕೊಂಡೆ. ನನಗೆ ಮತ್ತು ಲಿಡಿಗೆ ದೇವರ ಸೇವೆ ಮಾಡೋದೇ ಮುಖ್ಯ ಆಯ್ತು. ದೇವರು ಇಷ್ಟ ಪಡೋ ತರ ನಮ್ಮ ಮಕ್ಕಳನ್ನ ಬೆಳೆಸೋಕೆ ನಿರ್ಧಾರ ಮಾಡಿದ್ವಿ. ಅವರಿಗೆ ಯೆಹೋವನನ್ನು ಮತ್ತು ಜನರನ್ನು ಪ್ರೀತಿಸೋಕೆ ಕಲಿಸಿದ್ವಿ. ಇದ್ರಿಂದ ನಮ್ಮ ಕುಟುಂಬದಲ್ಲಿ ಎಲ್ರೂ ಒಂದಾಗಿರೋಕೆ ಆಯ್ತು.—ಮತ್ತಾ. 22:37-39.

“ನಿಮ್ಮ ಮಾತು ‘ಹೌದು’ ಅಂದ್ರೆ ಹೌದು, ‘ಇಲ್ಲ’ ಅಂದ್ರೆ ಇಲ್ಲ ಅಂತಿರಲಿ” ಅಂತ ಯೇಸು ಹೇಳಿದ್ದನ್ನ ಮನೆಯಲ್ಲಿ ಎಲ್ರೂ ಪಾಲಿಸ್ತಿದ್ವಿ. (ಮತ್ತಾ. 5:37) ನನ್ನ ಮತ್ತು ನನ್ನ ಹೆಂಡತಿಯ ಯೋಚನೆ ಯಾವಾಗಲೂ ಒಂದೇ ತರ ಇರ್ತಿತ್ತು. ಇದು ನಮ್ಮ ಮಕ್ಕಳಿಗೂ ಗೊತ್ತಿತ್ತು. ಒಂದು ಸಲ ನಡೆದ ವಿಷಯನ ನೆನಸಿಕೊಂಡ್ರೆ ನಮಗೆ ಈಗಲೂ ನಗು ಬರುತ್ತೆ. ನನ್ನ ಮಗಳಿಗೆ ಆಗ 17 ವರ್ಷ. ಅವಳು ಫ್ರೆಂಡ್ಸ್‌ ಜೊತೆ ಹೊರಗೆ ಹೋಗಬೇಕು ಅಂತ ಅಂದ್ಕೊಡಿದ್ದಳು. ಲಿಡಿ ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಆಗ ಅವಳ ಫ್ರೆಂಡ್‌ “ನಿಮ್ಮ ಮಮ್ಮಿ ಬಿಡಲಿಲ್ಲ ಅಂದ್ರೇನು, ಡ್ಯಾಡಿನ ಕೇಳು” ಅಂದಳು. ಆದ್ರೆ ನನ್ನ ಮಗಳು “ಅದ್ರಿಂದ ಏನೂ ಪ್ರಯೋಜನ ಇಲ್ಲ, ನಮ್ಮ ಡ್ಯಾಡಿನೂ ಅದನ್ನೇ ಹೇಳ್ತಾರೆ. ಅವರಿಬ್ಬರು ಯಾವಾಗಲೂ ಒಂದೇ” ಅಂತ ಹೇಳಿದಳು. ಬೈಬಲಲ್ಲಿ ಇರೋ ತರಾನೇ ನಾವಿಬ್ರೂ ನಡ್ಕೊಳ್ಳೋಕೆ ಪ್ರಯತ್ನ ಮಾಡ್ತಿದ್ವಿ ಅಂತ ನಮ್ಮ 6 ಮಕ್ಕಳಿಗೂ ಗೊತ್ತಿತ್ತು. ಇವತ್ತು ನನ್ನ ಕುಟುಂಬದಲ್ಲಿ ಎಲ್ಲರೂ ಯೆಹೋವನ ಸೇವೆ ಮಾಡ್ತಿದ್ದಾರೆ. ಅದಕ್ಕೆ ನಾನು ಯೆಹೋವ ದೇವರಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ.

ಯೆಹೋವನ ಸೇವೆ ಮಾಡೋದೇ ನಮ್ಮ ಜೀವನದಲ್ಲಿ ಮುಖ್ಯ ಆಗಿತ್ತು. ಅದರ ಜೊತೆಗೆ ಡಾಕ್ಟರ್‌ ಆಗಿ ನಮ್ಮ ಸಹೋದರ ಸಹೋದರಿಯರಿಗೆ ಏನಾದ್ರೂ ಸಹಾಯ ಮಾಡಕ್ಕಾಗುತ್ತಾ ಅಂತ ಯೋಚನೆ ಮಾಡ್ತಿದ್ದೆ. ಅದಕ್ಕೆ ನಾನು ಪ್ಯಾರಿಸ್‌ನಲ್ಲಿರೋ ಬೆತೆಲ್‌ನಲ್ಲಿ ಸ್ವಲ್ಪ ದಿನ ಸ್ವಯಂಸೇವಕನಾಗಿ ಕೆಲಸ ಮಾಡಿದೆ. ಲೂವ್ಯೇನಲ್ಲಿರೋ ಹೊಸ ಬ್ರಾಂಚ್‌ ಆಫೀಸ್‌ನಲ್ಲೂ ನಾನು ಹೋಗಿ ಸೇವೆ ಮಾಡಿದೆ. ಸುಮಾರು 50 ವರ್ಷಗಳಿಂದ ಬೆತೆಲಲ್ಲಿ ಸೇವೆ ಮಾಡೋ ಅವಕಾಶ ನನಗೆ ಸಿಕ್ತು. ಇಲ್ಲಿ ತನಕ ನಾನು ಬೆತೆಲಲ್ಲಿ ತುಂಬ ಫ್ರೆಂಡ್ಸ್‌ ಮಾಡ್ಕೊಂಡಿದ್ದೀನಿ. ಅವರಲ್ಲಿ ಕೆಲವರಿಗೆ ಈಗ 90ಕ್ಕಿಂತ ಜಾಸ್ತಿ ವಯಸ್ಸಾಗಿದೆ. ಇನ್ನೊಂದು ಆಶ್ಚರ್ಯದ ವಿಷಯ ಏನಂದ್ರೆ 20 ವರ್ಷಗಳ ಹಿಂದೆ ಒಂದು ಸ್ತ್ರೀಗೆ ನಾನು ಹೆರಿಗೆ ಮಾಡಿಸಿದ್ದೆ. ಈಗ ಅವರ ಮಗ ಬೆತೆಲ್‌ನಲ್ಲಿ ಇದ್ದಾನೆ!

ಯೆಹೋವ ತನ್ನ ಜನರನ್ನ ಚೆನ್ನಾಗಿ ನೋಡಿಕೊಳ್ತಾನೆ

ಯೆಹೋವ ತನ್ನ ಜನರಿಗೆ ಸಹಾಯ ಮಾಡೋಕೆ, ನಿರ್ದೇಶನಗಳನ್ನ ಕೊಡೋಕೆ ತನ್ನ ಸಂಘಟನೆಯನ್ನ ಉಪಯೋಗಿಸ್ತಿದ್ದಾನೆ. ಇದನ್ನ ನೋಡಿ ಆತನ ಮೇಲೆ ನನಗಿರೋ ಪ್ರೀತಿ ಇನ್ನೂ ಜಾಸ್ತಿಯಾಗಿದೆ. ಯೆಹೋವನ ಸಾಕ್ಷಿಗಳು ಯಾಕೆ ರಕ್ತ ತಗೊಳಲ್ಲ ಅನ್ನೋದನ್ನ ಸಹೋದರರು ಡಾಕ್ಟರ್‌ಗಳಿಗೆ ಅರ್ಥ ಮಾಡಿಸಬೇಕಿತ್ತು. ಅದಕ್ಕೆ ಆಡಳಿತ ಮಂಡಲಿ 1980ರ ನಂತರ ಅಮೆರಿಕಾದಲ್ಲಿ ಒಂದು ಕಾರ್ಯಕ್ರಮವನ್ನ ಏರ್ಪಾಡು ಮಾಡಿತು.

1988ರಲ್ಲಿ ಹಾಸ್ಪಿಟಲ್‌ ಇನ್ಫರ್ಮೇಷನ್‌ ಸರ್ವಿಸಸ್‌ ಅನ್ನೋ ಡಿಪಾರ್ಟ್‌ಮೆಂಟನ್ನ ಆಡಳಿತ ಮಂಡಲಿ ಮಾಡಿತು. ಮೊದಮೊದಲು ಅಮೆರಿಕಾದಲ್ಲಿದ್ದ ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಯನ್ನ (ಹೆಚ್‌.ಎಲ್‌.ಸಿ) ಈ ಡಿಪಾರ್ಟ್‌ಮೆಂಟೇ ನೋಡಿಕೊಳ್ತಿತ್ತು. ರಕ್ತ ಕೊಡದೆ ಚಿಕಿತ್ಸೆ ಮಾಡೋ ಡಾಕ್ಟರ್‌ಗಳು ಎಲ್ಲಿದ್ದಾರೆ ಅಂತ ಈ ಹೆಚ್‌.ಎಲ್‌.ಸಿ ಡಿಪಾರ್ಟ್‌ಮೆಂಟ್‌ನವರು ಸಹೋದರರಿಗೆ ತಿಳಿಸ್ತಿದ್ರು. ಸ್ವಲ್ಪ ದಿನ ಆದಮೇಲೆ ಎಲ್ಲಾ ಬ್ರಾಂಚ್‌ಗಳಲ್ಲೂ ಹೆಚ್‌.ಎಲ್‌.ಸಿ ಡಿಪಾರ್ಟ್‌ಮೆಂಟ್‌ ಆಯ್ತು. ಫ್ರಾನ್ಸ್‌ನಲ್ಲೂ ಈ ಡಿಪಾರ್ಟ್‌ಮೆಂಟ್‌ ಮಾಡಿದ್ರು. ಹುಷಾರಿಲ್ಲದಿರೋ ನಮ್ಮ ಸಹೋದರ ಸಹೋದರಿಯರಿಗೆ ನಮ್ಮ ಸಂಘಟನೆ ಎಷ್ಟೆಲ್ಲಾ ಸಹಾಯ ಮಾಡ್ತಿದೆ ಅಂತ ನೋಡಿದಾಗ ನನಗೆ ತುಂಬಾ ಖುಷಿಯಾಯ್ತು.

ನನ್ನ ಕನಸು ನನಸಾಯ್ತು

ಸಿಹಿಸುದ್ದಿ ಸಾರುತ್ತಾ ನಾವು ಖುಷಿಯಾಗಿದ್ದೀವಿ

ಡಾಕ್ಟರಾಗಿ ಜನರ ಸೇವೆ ಮಾಡೋದೇ ನನ್ನ ಜೀವನದಲ್ಲಿ ಮುಖ್ಯ ಗುರಿಯಾಗಿತ್ತು. ಆದ್ರೆ ಆಮೇಲೆ ನನ್ನ ಗುರಿ ಬದಲಾಯ್ತು. ಯಾಕಂದ್ರೆ ಕಾಯಿಲೆ ವಾಸಿ ಮಾಡೋದಕ್ಕಿಂತ ದೊಡ್ಡ ಕೆಲಸ ಒಂದಿದೆ ಅಂತ ನನಗೆ ಗೊತ್ತಾಯ್ತು. ಅದು ಜೀವ ಕೊಡೋ ಯೆಹೋವ ದೇವರ ಬಗ್ಗೆ ಜನರಿಗೆ ತಿಳಿಸೋದು. ಅದಕ್ಕೆ ನನ್ನ ರಿಟೈರ್‌ಮೆಂಟ್‌ ಆದ್ಮೇಲೆ ನಾನು ಮತ್ತು ಲಿಡಿ ರೆಗ್ಯುಲರ್‌ ಪಯನೀಯರಿಂಗ್‌ ಶುರುಮಾಡಿದ್ವಿ. ಹೀಗೆ ಜನರಿಗೆ ಸಿಹಿಸುದ್ದಿ ಸಾರುತ್ತಾ ಅದರಲ್ಲೇ ಸಮಯ ಕಳೆಯುತ್ತಾ ಇದ್ದೀವಿ. ಈಗಲೂ ಜನರ ಜೀವ ಕಾಪಾಡೋ ಈ ಸೇವೆಯನ್ನ ನಮ್ಮಿಂದ ಆದಷ್ಟು ಜಾಸ್ತಿ ಮಾಡ್ತಿದ್ದೀವಿ.

2021ರಲ್ಲಿ ನಾನು ಮತ್ತು ಲಿಡಿ

ನಾನು ಈಗಲೂ ಜನರಿಗೆ ಡಾಕ್ಟರಾಗಿ ಸಹಾಯ ಮಾಡ್ತಿದ್ದೀನಿ. ಆದ್ರೆ ಎಂಥ ದೊಡ್ಡ ಡಾಕ್ಟರೇ ಆದ್ರೂ ಎಲ್ಲಾ ಕಾಯಿಲೆನೂ ವಾಸಿ ಮಾಡೋಕೂ ಆಗಲ್ಲ, ಜನರಿಗೆ ಸಾವೇ ಬರದಿರೋ ತರ ಮಾಡಕ್ಕಾಗಲ್ಲ. ಹಾಗಾಗಿ ಕಾಯಿಲೆ, ಸಾವು-ನೋವು ಯಾವುದೂ ಇಲ್ಲದಿರೋ ದಿನ ಬರಲಿ ಅಂತ ಕಾಯ್ತಾ ಇದ್ದೀನಿ. ಹೊಸ ಲೋಕದಲ್ಲಿ ನನ್ನನ್ನ ಸೃಷ್ಟಿ ಮಾಡಿರೋ ದೇವರ ಬಗ್ಗೆ ತಿಳ್ಕೊಳ್ಳೋಕೆ ಬೇಕಾದಷ್ಟು ಸಮಯ ಇರುತ್ತೆ. ಅಷ್ಟೇ ಅಲ್ಲ, ಆತನು ಸೃಷ್ಟಿ ಮಾಡಿರೋ ಮಾನವ ದೇಹದ ರಚನೆ ಬಗ್ಗೆ ತಿಳ್ಕೊಳ್ಳೋಕೆ ಸಾವಿರಾರು ವರ್ಷಗಳಿರುತ್ತೆ. ಆಗ ನನ್ನ ಚಿಕ್ಕ ವಯಸ್ಸಿನ ಕನಸು ಪೂರ್ತಿಯಾಗಿ ನನಸಾಗುತ್ತೆ. ಅದಕ್ಕೋಸ್ಕರ ನಾನು ಕಾಯ್ತಾ ಇದ್ದೀನಿ!