ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 7

‘ವಿವೇಕಿಯ ಮಾತುಗಳನ್ನು ಕೇಳು’

‘ವಿವೇಕಿಯ ಮಾತುಗಳನ್ನು ಕೇಳು’

“ವಿವೇಕಿಯ ಮಾತುಗಳನ್ನ ಕಿವಿಗೆ ಹಾಕೊ.”—ಜ್ಞಾನೋ. 22:17.

ಗೀತೆ 125 ದೇವಪ್ರಭುತ್ವಾತ್ಮಕ ಕ್ರಮಕ್ಕೆ ನಿಷ್ಠೆಯ ಅಧೀನತೆ

ಕಿರುನೋಟ *

1. (ಎ) ಬೇರೆಯವರು ನಮಗೆ ಯಾವಾಗ ಸಲಹೆ ಕೊಡ್ತಾರೆ? (ಬಿ) ಅದನ್ನ ನಾವು ಯಾಕೆ ಕೇಳಬೇಕು?

 ನಮಗೆ ಆಗಾಗ ಯಾರಾದ್ರು ಬುದ್ಧಿವಾದ ಹೇಳ್ತಾ ಇರಬೇಕು. ಕೆಲವೊಂದು ಸಲ ನಾವೇ ಗೊತ್ತಿರುವವರ ಹತ್ರ ಹೋಗಿ ಸಲಹೆ ಕೇಳ್ತೀವಿ. ಇನ್ನು ಕೆಲವೊಮ್ಮೆ ಬೇರೆಯವರೇ ಬಂದು ನಮಗೆ ಸಲಹೆ ಕೊಡ್ತಾರೆ. ನಾವು “ತಪ್ಪು ದಾರಿ” ಹಿಡಿಯೋಕೆ ಹೋಗ್ತಿದ್ರೆ ಮುಂಚೆನೇ ಬಂದು ಎಚ್ಚರಿಸ್ತಾರೆ. (ಗಲಾ. 6:1) ನಾವು ತಪ್ಪು ಮಾಡಿದ್ರೆ ಅದನ್ನ ತಿದ್ದಿಕೊಳ್ಳೋಕೆ ಹೇಳ್ತಾರೆ. ನಮಗೆ ಸಲಹೆ ಹೇಗೇ ಸಿಕ್ಕಿದ್ರೂ ಅದನ್ನ ಪಾಲಿಸೋದು ಒಳ್ಳೇದು. ಅದ್ರಿಂದ ನಮ್ಮ ಜೀವ ಉಳಿಯುತ್ತೆ!—ಜ್ಞಾನೋ. 6:23.

2. ನಾವು ಯಾಕೆ ಸಲಹೆಯನ್ನ ಕೇಳಬೇಕು? (ಜ್ಞಾನೋಕ್ತಿ 12:15 ಮತ್ತು ಪಾದಟಿಪ್ಪಣಿ)

2 “ವಿವೇಕಿಯ ಮಾತುಗಳನ್ನ ಕಿವಿಗೆ ಹಾಕೊ” ಅಂತ ಈ ಲೇಖನದ ಮುಖ್ಯವಚನ ಹೇಳುತ್ತೆ. (ಜ್ಞಾನೋ. 22:17) ಈ ಭೂಮಿಯಲ್ಲಿ ಎಲ್ಲಾ ಗೊತ್ತಿರುವವರು ಯಾರೂ ಇಲ್ಲ. ನಮಗಿಂತ ಜಾಸ್ತಿ ಗೊತ್ತಿರುವವರು, ಅನುಭವ ಇರುವವರು ಯಾರಾದ್ರೂ ಇದ್ದೇ ಇರ್ತಾರೆ. (ಜ್ಞಾನೋಕ್ತಿ 12:15 ಮತ್ತು ಪಾದಟಿಪ್ಪಣಿ ಓದಿ.) ಹಾಗಾಗಿ ಬೇರೆಯವರು ಕೊಡೋ ಸಲಹೆಯನ್ನ ನಾವು ಪಾಲಿಸಿದ್ರೆ, ನಮಗೆ ದೀನತೆಯಿದೆ, ನಮ್ಮ ಇತಿಮಿತಿಗಳನ್ನ ಅರ್ಥ ಮಾಡಿಕೊಂಡಿದ್ದೀವಿ ಮತ್ತು ನಮ್ಮ ಗುರಿಗಳನ್ನ ಮುಟ್ಟೋಕೆ ಬೇರೆಯವರ ಸಹಾಯ ಬೇಕಂತ ಒಪ್ಪಿಕೊಳ್ತೀವಿ ಅಂತ ಅರ್ಥ. ಅದಕ್ಕೇ “ತುಂಬ ಸಲಹೆಗಾರರು ಇದ್ರೆ ಸಾಧನೆ ಮಾಡಕ್ಕಾಗುತ್ತೆ” ಅಂತ ಯೆಹೋವ ದೇವರು ರಾಜ ಸೊಲೊಮೋನನಿಂದ ಬರೆಸಿದನು.—ಜ್ಞಾನೋ. 15:22.

ಇವುಗಳಲ್ಲಿ ಯಾವ ರೀತಿಯಲ್ಲಿ ಸಲಹೆ ಸಿಕ್ಕಿದ್ರೆ ನಿಮಗೆ ಇಷ್ಟ ಆಗಲ್ಲ? (ಪ್ಯಾರ 3-4 ನೋಡಿ)

3. ಯಾವ ವಿಧಗಳಲ್ಲಿ ನಮಗೆ ಸಲಹೆ ಸಿಗುತ್ತೆ?

3 ನಮಗೆ 2 ವಿಧಗಳಲ್ಲಿ ಬುದ್ಧಿವಾದ ಅಥವಾ ಸಲಹೆ ಸಿಗುತ್ತೆ. ಒಂದು, ಬೈಬಲ್‌ ಅಥವಾ ಪ್ರಕಾಶನಗಳಿಂದ. ಇದ್ರಿಂದ ನಾವು ನಮ್ಮ ಯೋಚನೆಯನ್ನ ಸರಿ ಮಾಡಿಕೊಳ್ಳೋಕೆ ಆಗುತ್ತೆ. (ಇಬ್ರಿ. 4:12) ಎರಡು, ಹಿರಿಯರು ಮತ್ತು ಬೇರೆ ಸಹೋದರ ಸಹೋದರಿಯರಿಂದ. ಅವರು ಬುದ್ಧಿವಾದ ಕೊಟ್ಟಾಗ ನಮಗೆ ತಿದ್ದಿಕೊಳ್ಳೋಕೆ ಆಗುತ್ತೆ. ಅವರು ಹೇಳೋದು ನಮ್ಮ ಮೇಲಿರೋ ಪ್ರೀತಿಯಿಂದಾನೇ. ಅದಕ್ಕೆ ನಾವು ಅವರಿಗೆ ಥ್ಯಾಂಕ್ಸ್‌ ಹೇಳಬೇಕು ಮತ್ತು ಅವರು ಕೊಡೋ ಸಲಹೆಯನ್ನ ಮನಸ್ಸಿಗೆ ತಗೊಂಡು ಪಾಲಿಸಬೇಕು.

4. ಪ್ರಸಂಗಿ 7:9ರಲ್ಲಿ ಹೇಳೋ ತರ ಯಾರಾದ್ರೂ ನಮಗೆ ಸಲಹೆ ಕೊಟ್ರೆ ಏನು ಮಾಡಬಾರದು?

4 ಬೇರೆಯವರಿಂದ ಸಲಹೆ ಸಿಕ್ಕಾಗ ಅದನ್ನ ಒಪ್ಪಿಕೊಳ್ಳೋಕೆ, ಪಾಲಿಸೋಕೆ ನಮಗೆ ಕಷ್ಟ ಆಗುತ್ತೆ. ಯಾಕಂದ್ರೆ ನಾವು ಅಪರಿಪೂರ್ಣರು, ನಮ್ಮಿಂದ ತಪ್ಪಾಗುತ್ತೆ ಅಂತ ನಾವು ಒಪ್ಪಿಕೊಂಡರೂ ಆ ತಪ್ಪನ್ನ ತಿದ್ದಿಕೊಳ್ಳೋಕೆ ಯಾರಾದ್ರೂ ಹೇಳಿದಾಗ ನಮಗೆ ಇಷ್ಟ ಆಗಲ್ಲ.​​ (ಪ್ರಸಂಗಿ 7:9 ಓದಿ.) ‘ನಾನು ಬೇಕುಬೇಕಂತ ಇದನ್ನ ಮಾಡಲಿಲ್ಲ’ ಅಂತ ಕಾರಣಗಳನ್ನ ಕೊಡಬಹುದು. ಅಥವಾ ಸಲಹೆ ಕೊಟ್ಟವರ ಬಗ್ಗೆ ‘ಅವರು ಯಾವಾಗಲೂ ಹೀಗೇ ಹೇಳ್ತಾರೆ,’ ‘ಅವರು ಸಲಹೆ ಕೊಟ್ಟ ರೀತಿ ಸರಿಯಿಲ್ಲ’ ಅಂತೆಲ್ಲಾ ಹೇಳಬಹುದು. ಇನ್ನು ಕೆಲವೊಮ್ಮೆ ನಾವು ಅವರಲ್ಲಿ ತಪ್ಪು ಹುಡುಕ್ತಾ ‘ಇವರೇನು ದೊಡ್ಡ ಸಾಚಾನಾ? ಇವರು ಯಾರು ನಂಗೆ ಹೇಳೋಕೆ?’ ಅಂತ ಅಂದುಕೊಳ್ಳಬಹುದು. ಇದ್ರಿಂದ ನಾವು ಅವರ ಸಲಹೆಯನ್ನ ಕಿವಿಗೇ ಹಾಕಿಕೊಳ್ಳಲ್ಲ ಮತ್ತು ನಾವು ಹೇಳೋದಕ್ಕೆಲ್ಲ ತಲೆ ಆಡಿಸುವವರ ಹತ್ರ ಹೋಗಿ ಸಲಹೆ ಕೇಳ್ತೀವಿ.

5. ಈ ಲೇಖನದಲ್ಲಿ ನಾವೇನು ಕಲಿತೀವಿ?

5 ಬೇರೆಯವರು ಸಲಹೆ ಕೊಟ್ಟಾಗ ಕೆಲವರು ಅದನ್ನ ಕೇಳಿ ಪಾಲಿಸಿದ್ರು. ಇನ್ನು ಕೆಲವರು ಅದನ್ನ ಒಪ್ಪಿಕೊಳ್ಳಲಿಲ್ಲ. ಇಂಥವರ ಬಗ್ಗೆ ಬೈಬಲ್‌ನಲ್ಲಿರೋ ಉದಾಹರಣೆಗಳನ್ನ ನೋಡೋಣ. ಅಷ್ಟೇ ಅಲ್ಲ, ನಮಗೆ ಸಲಹೆ ಸಿಕ್ಕಾಗ ಅದನ್ನ ಕೇಳಿ ಪಾಲಿಸೋಕೆ ಯಾವುದು ಸಹಾಯ ಮಾಡುತ್ತೆ ಮತ್ತು ಅದನ್ನ ಪಾಲಿಸೋದ್ರಿಂದ ನಮಗೆ ಹೇಗೆ ಒಳ್ಳೇದಾಗುತ್ತೆ ಅಂತ ಈ ಲೇಖನದಲ್ಲಿ ನೋಡೋಣ.

ಬುದ್ಧಿವಾದವನ್ನ ಕೇಳದಿದ್ದವರು

6. ರಾಜ ರೆಹಬ್ಬಾಮನಿಂದ ನಾವೇನು ಕಲಿತೀವಿ?

6 ರಾಜ ರೆಹಬ್ಬಾಮನ ಉದಾಹರಣೆ ನೋಡಿ. ಅವನು ರಾಜನಾದಾಗ ಪ್ರಜೆಗಳು ಬಂದು ‘ನಿಮ್ಮ ತಂದೆ ನಮಗೆ ತುಂಬ ಕಷ್ಟವಾದ ಕೆಲಸಗಳನ್ನ ಕೊಟ್ಟಿದ್ದ, ಅದನ್ನ ಕಡಿಮೆ ಮಾಡು’ ಅಂತ ಕೇಳಿಕೊಂಡರು. ಆಗ ರೆಹಬ್ಬಾಮ ಹಿರಿಯರ ಹತ್ರ ‘ಈಗ ನಾನು ಜನರಿಗೆ ಏನು ಹೇಳಬೇಕು?’ ಅಂತ ಸಲಹೆ ಕೇಳಿದ. ಅವರು ‘ಪ್ರಜೆಗಳು ಹೇಳೋ ತರ ಮಾಡು, ಆಗ ಅವರು ನಿನ್ನ ಸೇವೆ ಮಾಡ್ತಾರೆ’ ಅಂತ ಹೇಳಿದ್ರು. (1 ಅರ. 12:3-7) ಆದ್ರೆ ರಾಜನಿಗೆ ಈ ಸಲಹೆ ಇಷ್ಟ ಆಗಲಿಲ್ಲ. ಅವನು ತನ್ನ ಜೊತೆ ಬೆಳೆದು ಬಂದ ಯುವಕರ ಹತ್ರ ಹೋಗಿ ಸಲಹೆ ಕೇಳಿದ. ಅವರಿಗೆ ಅಷ್ಟು ಅನುಭವ ಇರಲಿಲ್ಲ ಅವರಿಗೆಲ್ಲ 40 ವರ್ಷ ಆಗಿದ್ದಿರಬೇಕು. (2 ಪೂರ್ವ. 12:13) ಅವರು ಅವನಿಗೆ ತಪ್ಪು ಸಲಹೆ ಕೊಟ್ರು. ‘ನೀನು ಜನರ ಕಷ್ಟವನ್ನ ಕಡಿಮೆ ಮಾಡಬೇಡ’ ಅಂತ ಹೇಳಿದ್ರು. (1 ಅರ. 12:8-11) ಆಗ ರಾಜನಿಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ. ಅವನು ಯೆಹೋವ ಹತ್ರ ಪ್ರಾರ್ಥನೆ ಮಾಡಿ ‘ಏನು ಮಾಡಬೇಕು’ ಅಂತ ಕೇಳಬಹುದಿತ್ತು. ಆದ್ರೆ ಅವನು ಅದನ್ನೂ ಮಾಡಲಿಲ್ಲ. ಯುವಕರು ಹೇಳಿದ ಸಲಹೆನೇ ಅವನಿಗೆ ಇಷ್ಟ ಆಯ್ತು. ಅದಕ್ಕೆ ಅವರು ಹೇಳಿದ ತರಾನೇ ಮಾಡಿದ. ಅವನ ತಲೆ ಮೇಲೆ ಅವನೇ ಚಪ್ಪಡಿಕಲ್ಲು ಎಳಕೊಂಡ, ಪ್ರಜೆಗಳಿಗೂ ಕಷ್ಟ ಆಯ್ತು. ನಮಗಿರೋ ಪಾಠ ಏನಂದ್ರೆ, ಕೆಲವೊಮ್ಮೆ ನಮಗೆ ಸಲಹೆ ಸಿಕ್ಕಾಗ ಅದು ನಮಗೆ ಇಷ್ಟ ಆಗದೇ ಇರಬಹುದು. ಆದ್ರೂ ದೇವರ ವಾಕ್ಯದಿಂದ ಸಲಹೆ ಕೊಟ್ಟಾಗ ಅದನ್ನ ನಾವು ಕೇಳಬೇಕು.

7. ರಾಜ ಉಜ್ಜೀಯನಿಂದ ನಮಗೇನು ಪಾಠ?

7 ರಾಜ ಉಜ್ಜೀಯನ ಉದಾಹರಣೆ ನೋಡಿ. ಅವನು ಯೆಹೋವನ ಆಲಯದ ಒಳಗೆ ಹೋಗಿ ಧೂಪ ಹಾಕೋಕೆ ಪ್ರಯತ್ನಿಸಿದ. ಅಲ್ಲಿ ಪುರೋಹಿತರು ಬಿಟ್ರೆ ಬೇರೆ ಯಾರೂ ಹೋಗೋ ಹಾಗಿರಲಿಲ್ಲ. ಅದಕ್ಕೆ ಪುರೋಹಿತರು ಅವನಿಗೆ “ಉಜ್ಜೀಯನೇ, ಯೆಹೋವನಿಗೆ ಧೂಪ ಹಾಕೋದು ನಿನ್ನ ಕೆಲಸ ಅಲ್ಲ! ಅದು ಪುರೋಹಿತರ ಕೆಲಸ. ಅವರು ಮಾತ್ರ ಧೂಪ ಹಾಕಬೇಕು” ಅಂತ ಹೇಳಿದ್ರು. ಅವನು ಅವರ ಮಾತು ಕೇಳಿ ಅಲ್ಲಿಂದ ಹೊರಗೆ ಬಂದಿದ್ರೆ ಯೆಹೋವ ಅವನನ್ನ ಕ್ಷಮಿಸುತ್ತಿದ್ದನು. ಆದ್ರೆ ಉಜ್ಜೀಯ ಪುರೋಹಿತರ ಮೇಲೆ ‘ಕೋಪ ಮಾಡಿಕೊಂಡ.’ ಅವರು ಕೊಟ್ಟ ಸಲಹೆಯನ್ನ ಕೇಳಲಿಲ್ಲ. ‘ನಾನು ರಾಜ, ನನಗೆ ಏನು ಬೇಕಾದ್ರೂ ಮಾಡೋ ಅಧಿಕಾರ ಇದೆ’ ಅಂತ ಅವನು ಅಂದುಕೊಂಡ. ಆದ್ರೆ ಯೆಹೋವನಿಗೆ ಅದು ಇಷ್ಟ ಆಗಲಿಲ್ಲ. ಅವನು ಹೀಗೆ ದುರಹಂಕಾರ ತೋರಿಸಿದ್ರಿಂದ ಯೆಹೋವ ಅವನಿಗೆ ಕುಷ್ಠರೋಗ ಬರೋ ತರ ಮಾಡಿದನು. ಅವನು “ಸಾಯೋ ತನಕ” ಕುಷ್ಠರೋಗಿಯಾಗೇ ಇದ್ದ. (2 ಪೂರ್ವ. 26:16-21) ಉಜ್ಜೀಯನಿಂದ ನಮಗೇನು ಪಾಠ? ನಾವು ಯಾರೇ ಆಗಿದ್ರೂ ಬೈಬಲಿಂದ ಯಾರಾದ್ರೂ ನಮಗೆ ಸಲಹೆ ಕೊಟ್ಟಾಗ ಅದನ್ನ ಪಾಲಿಸಬೇಕು. ಇಲ್ಲಾಂದ್ರೆ ಯೆಹೋವ ನಮ್ಮನ್ನ ಇಷ್ಟಪಡಲ್ಲ.

ಬುದ್ಧಿವಾದ ಕೇಳಿದವರು

8. ಸಲಹೆ ಸಿಕ್ಕಾಗ ಯೋಬ ಏನು ಮಾಡಿದ?

8 ಸಲಹೆ ಸಿಕ್ಕಾಗ ಅದನ್ನ ಕೇಳಿ ತಿದ್ದಿಕೊಂಡವರ ಉದಾಹರಣೆ ಕೂಡ ಬೈಬಲಲ್ಲಿದೆ. ಅವರಲ್ಲಿ ಒಬ್ಬ ಯೋಬ. ಅವನು ಯೆಹೋವನನ್ನ ತುಂಬ ಪ್ರೀತಿಸ್ತಿದ್ದ. ಆದ್ರೆ ಅವನೂ ಅಪರಿಪೂರ್ಣನಾಗಿದ್ರಿಂದ ಒಂದು ತಪ್ಪು ಮಾಡಿದ. ಅವನಿಗೆ ತುಂಬ ಕಷ್ಟಗಳು ಬಂದಾಗ ಯೆಹೋವನ ಬಗ್ಗೆ ತಪ್ಪಾಗಿ ಮಾತಾಡಿಬಿಟ್ಟ. ಆಗ ಎಲೀಹು ಮತ್ತು ಯೆಹೋವ ದೇವರು ಅವನನ್ನ ತಿದ್ದಿದರು. ಅದನ್ನ ಯೋಬ ದೀನತೆಯಿಂದ ಒಪ್ಪಿಕೊಂಡು “ಹೌದು, ನಾನು ಯೋಚ್ನೆ ಮಾಡದೆ ಮಾತಾಡಿಬಿಟ್ಟೆ, . . . ನಾ ಹೇಳಿದ ಮಾತನ್ನ ವಾಪಸ್‌ ತಗೋತೀನಿ, ಮಣ್ಣಲ್ಲೂ ಬೂದಿಯಲ್ಲೂ ಕೂತು ಪಶ್ಚಾತ್ತಾಪಪಡ್ತೀನಿ” ಅಂದ. ಅವನು ದೀನತೆ ತೋರಿಸಿದ್ದಕ್ಕೆ ಯೆಹೋವ ಅವನನ್ನ ಆಶೀರ್ವದಿಸಿದನು.—ಯೋಬ 42:3-6, 12-17.

9. (ಎ) ಸಲಹೆ ಸಿಕ್ಕಾಗ ಮೋಶೆ ಏನು ಮಾಡಿದ? (ಬಿ) ಅವನಿಂದ ನಾವೇನು ಕಲಿತೀವಿ?

9 ಒಂದು ತಪ್ಪು ಮಾಡಿದ ಮೇಲೆ ಸಲಹೆ ಸಿಕ್ಕಾಗ ಅದನ್ನ ತಿದ್ದಿಕೊಳ್ಳಬೇಕು. ಮೋಶೆಯಿಂದ ನಾವಿದನ್ನೇ ಕಲಿತೀವಿ. ಒಂದು ಸಲ ಅವನಿಗೆ ಇಸ್ರಾಯೇಲ್ಯರ ಮೇಲೆ ಸಿಟ್ಟು ನೆತ್ತಿಗೇರಿಬಿಟ್ಟಿತ್ತು. ಆಗ ಯೆಹೋವನಿಗೆ ಅಗೌರವ ತರೋ ತರ ನಡೆದುಕೊಂಡುಬಿಟ್ಟ. ಇದ್ರಿಂದ ಅವನು ದೇವರು ಮಾತುಕೊಟ್ಟಿದ್ದ ದೇಶಕ್ಕೆ ಹೋಗೋ ಅವಕಾಶ ಕಳಕೊಂಡ. (ಅರ. 20:1-13) ಇದರ ಬಗ್ಗೆ ಮೋಶೆ ಯೆಹೋವ ಹತ್ರ ಮಾತಾಡಿದಾಗ ಆತನು, “ಸಾಕು! ಈ ವಿಷ್ಯದ ಬಗ್ಗೆ ಇನ್ನು ಯಾವತ್ತೂ ನನ್ನ ಹತ್ರ ಮಾತಾಡಬೇಡ” ಅಂದನು. (ಧರ್ಮೋ. 3:23-27) ಆಗ ಮೋಶೆ ಯೆಹೋವನ ಮೇಲೆ ಕೋಪಿಸಿಕೊಳ್ಳಲಿಲ್ಲ. ಆತನು ತಗೊಂಡ ತೀರ್ಮಾನವನ್ನ ಒಪ್ಪಿಕೊಂಡ. ಹಾಗಾಗಿ ಯೆಹೋವ ಅವನನ್ನ ಜವಾಬ್ದಾರಿ ಸ್ಥಾನದಿಂದ ಕೆಳಗೆ ಇಳಿಸಲಿಲ್ಲ, ಇಸ್ರಾಯೇಲ್ಯರ ನಾಯಕನಾಗೇ ಇದ್ದ. (ಧರ್ಮೋ. 4:1) ಯೋಬ ಮತ್ತು ಮೋಶೆ ತರ ನಾವಿರಬೇಕು. ಸಲಹೆ ಕೊಟ್ಟಾಗ ಯೋಬ ತನ್ನ ತಪ್ಪನ್ನ ಒಪ್ಪಿಕೊಂಡು ತಿದ್ದಿಕೊಂಡ. ಕಾನಾನ್‌ ದೇಶಕ್ಕೆ ಹೋಗೋಕೆ ಮೋಶೆಗೆ ಆಸೆಯಿದ್ರೂ ಯೆಹೋವನ ತೀರ್ಮಾನವನ್ನ ಒಪ್ಪಿಕೊಂಡ, ಸಾಯೋ ತನಕ ಆತನಿಗೆ ನಿಯತ್ತಾಗಿದ್ದು ಸೇವೆ ಮಾಡಿದ.

10. (ಎ) ಜ್ಞಾನೋಕ್ತಿ 4:10-13ರಲ್ಲಿ ಹೇಳೋ ಹಾಗೆ ಸಲಹೆಯನ್ನ ಕೇಳೋದ್ರಿಂದ ನಮಗೆ ಹೇಗೆ ಒಳ್ಳೇದಾಗುತ್ತೆ? (ಬಿ) ಸಲಹೆ ಸಿಕ್ಕಾಗ ಕೆಲವು ಸಹೋದರ ಸಹೋದರಿಯರು ಏನು ಮಾಡಿದ್ರು?

10 ಯೋಬ ಮತ್ತು ಮೋಶೆ ತರ ಇದ್ರೆ ನಮಗೇ ಒಳ್ಳೇದು! (ಜ್ಞಾನೋಕ್ತಿ 4:10-13 ಓದಿ.) ಎಷ್ಟೋ ಸಹೋದರ ಸಹೋದರಿಯರು ಅವರ ತರ ದೀನತೆ ತೋರಿಸಿದ್ದಾರೆ. ಉದಾಹರಣೆಗೆ ಕಾಂಗೋದಲ್ಲಿರೋ ಸಹೋದರ ಇಮ್ಯಾನುವೇಲ್‌ಗೆ ಸಲಹೆ ಸಿಕ್ಕಾಗ ಅವರು ಹೇಳಿದ್ದು, “ಯೆಹೋವನ ಜೊತೆಯಿರೋ ನನ್ನ ಸ್ನೇಹ ಇನ್ನೇನು ಮುರಿದುಹೋಗ್ತಿದೆ ಅನ್ನುವಾಗ ಕೆಲವು ಸಹೋದರರು ಎಚ್ಚರಿಸಿದ್ರು. ಆಗ ಅಪಾಯದಿಂದ ತಪ್ಪಿಸಿಕೊಳ್ಳೋಕೆ ಆಯ್ತು.” * ಕೆನಡಾದಲ್ಲಿರೋ ಮೇಗನ್‌ ಅನ್ನೋ ಪಯನೀಯರ್‌ ಸಹೋದರಿಗೆ ಸಲಹೆ ಸಿಕ್ಕಾಗ “ಬೇರೆಯವರಿಂದ ಹೇಳಿಸಿಕೊಳ್ಳೋದು ನನಗೆ ಅಷ್ಟು ಇಷ್ಟ ಆಗಲ್ಲ. ಆದ್ರೆ ಅದನ್ನ ಕೇಳಿದ್ರಿಂದ ನನಗೆ ಒಳ್ಳೇದಾಗಿದೆ!” ಅಂತ ಹೇಳಿದ್ರು. ಕ್ರೊಯೆಶಿಯದಲ್ಲಿರೋ ಸಹೋದರ ಮಾರ್ಕೋ “ನಾನು ಕೆಲವು ಜವಾಬ್ದಾರಿಗಳನ್ನ ಕಳಕೊಂಡೆ ನಿಜ, ಆದ್ರೆ ಸಲಹೆಯನ್ನ ಕೇಳಿದ್ರಿಂದ ಯೆಹೋವನ ಹತ್ರ ವಾಪಸ್‌ ಬರೋಕೆ ಆಯ್ತು” ಅಂದರು.

11. ಬುದ್ಧಿವಾದ ಕೇಳೋದರ ಬಗ್ಗೆ ಸಹೋದರ ಕಾರ್ಲ್‌ ಏನು ಹೇಳಿದ್ರು?

11 ಆಡಳಿತ ಮಂಡಲಿಯ ಸದಸ್ಯರಾಗಿದ್ದ ಸಹೋದರ ಕಾರ್ಲ್‌ ಕ್ಲೇನ್‌ ಅವರ ಅನುಭವ ನೋಡಿ. ಒಂದು ಸಲ ಇವರ ಫ್ರೆಂಡ್‌ ಜೋಸೆಫ್‌ ಎಫ್‌. ರದರ್‌ಫರ್ಡ್‌ ಇವರಿಗೆ ಸಲಹೆ ಕೊಟ್ರು. ಆಗ ಕಾರ್ಲ್‌ಗೆ ಬೇಜಾರಾಯ್ತು. ಕಾರ್ಲ್‌ ಹೇಳಿದ್ದು, “ಮಾರನೇ ದಿನ ಬ್ರದರ್‌ ರದರ್‌ಫಾರ್ಡ್‌ ನನಗೆ ‘ಹಲೋ ಕಾರ್ಲ್‌’ ಅಂದ್ರು. ಆಗ ನಾನು ಬೇಜಾರಿಂದ ‘ಹಲೋ’ ಅಂದೆ. ಆಗ ರದರ್‌ಫಾರ್ಡ್‌ ‘ಕಾರ್ಲ್‌, ಹುಷಾರು! ಸೈತಾನ ನಿನ್ನ ಹಿಂದೆನೇ ಇದ್ದಾನೆ!’ ಅಂದ್ರು. ಅದಕ್ಕೆ ನಾನು ‘ನನಗೆ ನಿಮ್ಮ ಮೇಲೆ ಬೇಜಾರಿಲ್ಲ ಬ್ರದರ್‌’ ಅಂದೆ. ಆದ್ರೆ ನಾನು ಅವರ ಮೇಲೆ ಬೇಜಾರು ಮಾಡಿಕೊಂಡಿದ್ದೀನಿ ಅಂತ ರದರ್‌ಫಾರ್ಡ್‌ಗೆ ಗೊತ್ತಿತ್ತು. ಅದಕ್ಕೆ ಅವರು ‘ಪರ್ವಾಗಿಲ್ಲ ಕಾರ್ಲ್‌, ಆದ್ರೂ ಸ್ವಲ್ಪ ಹುಷಾರಾಗಿರು, ಸೈತಾನ ನಿನ್ನ ಹಿಂದೆನೇ ಇದ್ದಾನೆ’ ಅಂದ್ರು. ಅವರು ಹೇಳಿದ್ದು ಸರಿಯಾಗಿತ್ತು. ಬೇರೆಯವರ ಮೇಲೆ ನಾವು ಕೋಪ ಮಾಡಿಕೊಂಡ್ರೆ ಅದ್ರಲ್ಲೂ ನಮಗೆ ಸಲಹೆ ಕೊಡೋ ಅಧಿಕಾರ ಇರುವವರ ಮೇಲೆ ಕೋಪ ಮಾಡಿಕೊಂಡ್ರೆ . . . ಸೈತಾನನ ಬಲೆಗೆ ಸಿಕ್ಕಿಹಾಕಿಕೊಳ್ತೀವಿ.” * (ಎಫೆ. 4:25-27) ರದರ್‌ಫಾರ್ಡ್‌ ಕೊಟ್ಟ ಸಲಹೆಯನ್ನ ಸಹೋದರ ಕಾರ್ಲ್‌ ಕೇಳಿ ತಿದ್ದಿಕೊಂಡ್ರು. ಇದ್ರಿಂದ ಅವರ ದೋಸ್ತಿ ಹಾಗೇ ಉಳೀತು.

ಸಲಹೆಯನ್ನ ಪಾಲಿಸೋಕೆ ಯಾವುದು ಸಹಾಯ ಮಾಡುತ್ತೆ?

12. ಕೀರ್ತನೆ 141:5ರಲ್ಲಿ ಹೇಳಿರೋ ಹಾಗೆ ನಮಗೆ ದೀನತೆಯಿದ್ರೆ ಏನು ಮಾಡ್ತೀವಿ?

12 ಯಾರಾದ್ರೂ ನಮಗೆ ಬುದ್ಧಿ ಹೇಳಿದಾಗ ಅದನ್ನ ಕೇಳೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? ದೀನತೆ ಸಹಾಯ ಮಾಡುತ್ತೆ. ನಾವು ಕೆಲವೊಮ್ಮೆ ತಪ್ಪು ಮಾಡ್ತೀವಿ, ಬುದ್ಧಿನೇ ಇಲ್ಲದಿರುವವರ ತರ ನಡೆದುಕೊಂಡುಬಿಡ್ತೀವಿ ಅನ್ನೋದನ್ನ ಒಪ್ಪಿಕೊಂಡು ದೀನತೆ ತೋರಿಸಬೇಕು. ನಾವು ಈಗಾಗಲೇ ಯೋಬನ ಬಗ್ಗೆ ನೋಡಿದ್ವಿ. ಯೋಬ ಒಂದು ಸಲ ತಪ್ಪಾಗಿ ಯೋಚನೆ ಮಾಡಿದ. ಆದ್ರೆ ಅವನನ್ನ ತಿದ್ದಿದಾಗ ಅದನ್ನ ಸರಿ ಮಾಡಿಕೊಂಡ. ಇದ್ರಿಂದ ಅವನಿಗೆ ಯೆಹೋವನ ಆಶೀರ್ವಾದನೂ ಸಿಕ್ತು. ಎಲೀಹು ಯೋಬನಿಗಿಂತ ವಯಸ್ಸಲ್ಲಿ ಚಿಕ್ಕವನಾಗಿದ್ರೂ ಅವನು ಕೊಟ್ಟ ಸಲಹೆಯನ್ನ ಯೋಬ ಕೇಳಿದ. ಹೀಗೆ ಯೋಬ ತನಗೆ ದೀನತೆಯಿದೆ ಅಂತ ತೋರಿಸಿದ. (ಯೋಬ 32:6, 7) ಅದೇ ತರ ನಮಗಿಂತ ವಯಸ್ಸಲ್ಲಿ ಚಿಕ್ಕವರು ನಮಗೆ ಸಲಹೆ ಕೊಟ್ಟಾಗ ಅಥವಾ ಯಾರಾದ್ರೂ ನಮಗೆ ಅನಾವಶ್ಯಕವಾಗಿ ಸಲಹೆ ಕೊಡ್ತಿದ್ದಾರೆ ಅಂತ ಅನಿಸುವಾಗಲೂ ನಾವು ದೀನರಾಗಿದ್ರೆ ಅದನ್ನ ಕೇಳಿ, ಪಾಲಿಸ್ತೀವಿ. “ನಮ್ಮ ಬೆನ್ನು ನಮಗೆ ಹೇಗೆ ಕಾಣಲ್ವೋ ಹಾಗೇ ನಮ್ಮಲ್ಲಿರೋ ಕುಂದುಕೊರತೆಗಳು ನಮಗೆ ಗೊತ್ತಾಗಲ್ಲ. ಅದನ್ನ ಯಾರಾದ್ರೂ ಹೇಳಿದಾಗ ಮಾತ್ರ ಅದನ್ನ ತಿದ್ದಿಕೊಳ್ಳೋಕೆ ಆಗುತ್ತೆ” ಅಂತ ಕೆನಡಾದಲ್ಲಿರೋ ಒಬ್ಬ ಹಿರಿಯ ಹೇಳ್ತಾರೆ. ಒಳ್ಳೇ ಗುಣಗಳನ್ನ ಬೆಳೆಸಿಕೊಳ್ಳೋಕೆ, ಚೆನ್ನಾಗಿ ಸೇವೆ ಮಾಡೋಕೆ ನಮಗೆ ಬೇರೆಯವರ ಸಹಾಯ ಬೇಕು ಅನ್ನೋದರಲ್ಲಿ ಎರಡು ಮಾತಿಲ್ಲ.—ಕೀರ್ತನೆ 141:5 ಓದಿ.

13. ಸಲಹೆ ಸಿಕ್ಕಾಗ ನಮಗೆ ಹೇಗನಿಸಬೇಕು?

13 ಬುದ್ಧಿಮಾತಲ್ಲಿ ಯೆಹೋವನ ಪ್ರೀತಿ ನೋಡಿ. ನಾವೆಲ್ಲ ಚೆನ್ನಾಗಿರಬೇಕು ಅಂತ ಯೆಹೋವ ಆಸೆ ಪಡ್ತಾನೆ. (ಜ್ಞಾನೋ. 4:20-22) ಬೈಬಲಿಂದ, ಪುಸ್ತಕ-ಪತ್ರಿಕೆಗಳಿಂದ ಅಥವಾ ಅನುಭವ ಇರೋ ಸಹೋದರ ಸಹೋದರಿಯರಿಂದ ನಮಗೆ ಸಲಹೆ ಸಿಕ್ಕಾಗ ಯೆಹೋವನಿಗೆ ನಮ್ಮ ಮೇಲೆ ಪ್ರೀತಿಯಿದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು. ಯಾಕಂದ್ರೆ ಆತನು “ನಮ್ಮ ಒಳ್ಳೇದಕ್ಕೇ ಶಿಸ್ತು ಕೊಡ್ತಾನೆ” ಅಂತ ಇಬ್ರಿಯ 12:9, 10 ಹೇಳುತ್ತೆ.

14. ಯಾರಾದ್ರೂ ಬುದ್ಧಿವಾದ ಹೇಳಿದಾಗ ನಾವೇನು ಮಾಡಬೇಕು?

14 ಹೇಗೆ ಹೇಳ್ತಿದ್ದಾರೆ ಅಂತ ಅಲ್ಲ, ಏನು ಹೇಳ್ತಿದ್ದಾರೆ ಅನ್ನೋದನ್ನ ನೋಡಿ. ಕೆಲವೊಮ್ಮೆ ಯಾರಾದ್ರೂ ಸಲಹೆ ಕೊಟ್ಟಾಗ ‘ಅವರು ಹೇಳಿದ ವಿಷಯ ಸರಿ, ಆದ್ರೆ ಅವರು ಹೇಳಿದ ರೀತಿ ನನಗೆ ಒಂಚೂರು ಇಷ್ಟ ಆಗಲಿಲ್ಲ’ ಅಂತ ಅನಿಸಬಹುದು. ನಿಜ, ಸಲಹೆ ಕೊಡುವವರು ಅದನ್ನ ಬೇರೆಯವರಿಗೆ ನೋವಾಗದ ತರ ಕೊಡೋಕೆ ಪ್ರಯತ್ನ ಮಾಡಬೇಕು. * (ಗಲಾ. 6:1) ಆದ್ರೆ ನಿಮಗೆ ಯಾರಾದ್ರೂ ಸಲಹೆ ಕೊಟ್ಟಾಗ ಅವರು ಏನು ಹೇಳ್ತಿದ್ದಾರೆ ಅನ್ನೋದನ್ನ ಗಮನಿಸಿ, ಹೇಗೆ ಹೇಳ್ತಿದ್ದಾರೆ ಅನ್ನೋದರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ‘ಅವರು ಸಲಹೆ ಕೊಟ್ಟ ರೀತಿ ನಮಗೆ ಇಷ್ಟ ಆಗಲಿಲ್ಲ ಅಂದ್ರೂ ಅವರು ಹೇಳಿದ ಹಾಗೆ ನಾನೇನಾದ್ರೂ ತಿದ್ದಿಕೊಳ್ಳಬೇಕಾ? ನಾನು ಅವರ ತಪ್ಪನ್ನ ನೋಡದೆ ನಾನೇನು ಸರಿ ಮಾಡಿಕೊಳ್ಳಬೇಕು ಅಂತ ಯೋಚಿಸ್ತಿದ್ದೀನಾ?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ. ಯಾರು ಹೇಗೆ ಸಲಹೆ ಕೊಟ್ರೂ ನಾವು ಅದನ್ನ ಕೇಳಿದಾಗ ವಿವೇಕಿಗಳು ಅಂತ ತೋರಿಸಿಕೊಡ್ತೀವಿ.—ಜ್ಞಾನೋ. 15:31.

ಸಲಹೆ ಕೇಳಿ ಆಶೀರ್ವಾದ ಪಡ್ಕೊಳ್ಳಿ

15. ಬೇರೆಯವರ ಹತ್ರ ನಾವೇ ಹೋಗಿ ಯಾಕೆ ಸಲಹೆ ಪಡೆದುಕೊಳ್ಳಬೇಕು?

15 ಸಲಹೆಯನ್ನ ಕೇಳಿ ಪಡ್ಕೊಳ್ಳಿ ಅಂತ ಬೈಬಲ್‌ ಹೇಳುತ್ತೆ. “ಸಲಹೆ ಕೇಳುವವನಿಗೆ ವಿವೇಕ ಸಿಗುತ್ತೆ” ಅಂತ ಜ್ಞಾನೋಕ್ತಿ 13:10 ಹೇಳುತ್ತೆ. ಇದನ್ನ ನೀವು ಒಪ್ಪುತ್ತೀರಾ? ಯಾರಾದ್ರೂ ಬಂದು ನಮಗೆ ಬುದ್ಧಿ ಹೇಳಿದ್ರೆ ಅದನ್ನ ನಾವು ಕೇಳ್ತೀವಿ ಅಂತ ಹೇಳೋದಕ್ಕಿಂತ, ತಾವಾಗೇ ಹೋಗಿ ಬೇರೆಯವರ ಹತ್ರ ಸಲಹೆ ಕೇಳುವವರು ವಿವೇಕಿಗಳಾಗ್ತಾರೆ. ಹಾಗಾಗಿ ನಾವೇ ಮುಂದೆ ಹೋಗಿ ಸಲಹೆ ಕೇಳೋಣ!

ಈ ಸಹೋದರಿ ದೊಡ್ಡವರ ಹತ್ರ ಯಾಕೆ ಸಲಹೆ ಕೇಳ್ತಿದ್ದಾರೆ? (ಪ್ಯಾರ 16 ನೋಡಿ)

16. ನಾವು ಯಾವಾಗೆಲ್ಲ ಬೇರೆಯವರ ಹತ್ರ ಸಲಹೆ ಕೇಳಬಹುದು?

16 ನಾವು ಯಾವಾಗ ಸಹೋದರ ಸಹೋದರಿಯರ ಹತ್ರ ಸಲಹೆ ಕೇಳಬಹುದು? ಉದಾಹರಣೆಗೆ, ಒಬ್ಬ ಸಹೋದರಿ, ಅನುಭವ ಇರೋ ಸಹೋದರಿಯನ್ನ ಬೈಬಲ್‌ ಸ್ಟಡಿಗೆ ಕರ್ಕೊಂಡು ಹೋಗ್ತಾರೆ ಅಂದ್ಕೊಳ್ಳಿ. ಸ್ಟಡಿ ಮುಗಿದ ಮೇಲೆ ಅವರು ‘ನಾನು ಸ್ಟಡಿನ ಚೆನ್ನಾಗಿ ಮಾಡಿದ್ನಾ? ಇನ್ನೂ ಚೆನ್ನಾಗಿ ಮಾಡೋಕೆ ಏನು ಮಾಡಬಹುದು?’ ಅಂತ ಕೇಳಬಹುದು. ಒಬ್ಬ ಯುವ ಸಹೋದರಿ ಬಟ್ಟೆ ತಗೊಳ್ಳುವಾಗ ‘ಇದನ್ನ ನಾನು ತಗೊಳ್ಳಾ? ಇದನ್ನ ನೋಡಿದವರಿಗೆ ಹೇಗನಿಸುತ್ತೆ’ ಅಂತ ದೊಡ್ಡವರ ಹತ್ರ ಕೇಳಬಹುದು. ಒಬ್ಬ ಸಹೋದರ ಮೊದಲನೇ ಸಲ ಸಾರ್ವಜನಿಕ ಭಾಷಣ ಕೊಡ್ತಿದ್ದಾನೆ ಅಂದ್ಕೊಳ್ಳಿ. ಅವನು ಭಾಷಣ ಕೊಡೋ ಮುಂಚೆ ಅನುಭವ ಇರೋ ಸಹೋದರನ ಹತ್ರ ಹೋಗಿ ‘ನನ್ನ ಭಾಷಣವನ್ನ ಗಮನಿಸಿ ಇನ್ನೂ ಚೆನ್ನಾಗಿ ಮಾಡೋದು ಹೇಗೆ ಅಂತ ಹೇಳಿ’ ಅಂತ ಕೇಳಬಹುದು. ತುಂಬ ವರ್ಷಗಳಿಂದ ಭಾಷಣ ಕೊಡ್ತಿರೋ ಸಹೋದರರು ಇದನ್ನೇ ಮಾಡ್ತಾರೆ.

17. ಸಲಹೆ ಕೇಳೋದು ಯಾಕೆ ಒಳ್ಳೇದು?

17 ನಿಮಗೆ ಬೈಬಲಿಂದ, ಪುಸ್ತಕ-ಪತ್ರಿಕೆಗಳಿಂದ ಅಥವಾ ವಿಡಿಯೋಗಳಿಂದ ಸಲಹೆ ಸಿಗಬಹುದು. ಅಥವಾ ಯಾರಾದ್ರೂ ನೇರವಾಗಿ ಬಂದು ಸಲಹೆ ಕೊಡಬಹುದು. ಆಗ ಇಷ್ಟು ಹೊತ್ತು ಕಲ್ತಿದ್ದನ್ನ ನೆನಪಿಸಿಕೊಳ್ಳಿ. ದೀನತೆ ತೋರಿಸಿ, ಅವರು ಹೇಗೆ ಹೇಳ್ತಿದ್ದಾರೆ ಅಂತ ಅಲ್ಲ, ಏನು ಹೇಳ್ತಿದ್ದಾರೆ ಅಂತ ಗಮನಿಸಿ. ಸಿಕ್ಕಿದ ಸಲಹೆಯನ್ನ ಪಾಲಿಸಿ. ನಾವ್ಯಾರೂ ಹುಟ್ಟುತ್ತಾನೇ ಎಲ್ಲ ಕಲಿತುಕೊಂಡು ಬಂದಿರಲ್ಲ. ಅದಕ್ಕೇ “ಸಲಹೆಗೆ ಕಿವಿಗೊಡು, ಶಿಸ್ತನ್ನ ಪಡ್ಕೊ” ಅಂತ ಬೈಬಲ್‌ ಹೇಳುತ್ತೆ. ಆಗ ನಾವು ‘ವಿವೇಕಿಗಳಾಗ್ತೀವಿ.’—ಜ್ಞಾನೋ. 19:20.

ಗೀತೆ 63 ಸದಾ ನಿಷ್ಠರು

^ ಪ್ಯಾರ. 5 ಯೆಹೋವನ ಜನರಿಗೆ ಬೈಬಲಲ್ಲಿರೋ ಸಲಹೆಯನ್ನ ಪಾಲಿಸೋದು ಎಷ್ಟು ಮುಖ್ಯ ಅಂತ ಗೊತ್ತಿದೆ. ಆದ್ರೆ ಕೆಲವೊಮ್ಮೆ ಸಲಹೆಯನ್ನ ಪಾಲಿಸೋಕೆ ನಮಗೆ ಯಾಕೆ ಕಷ್ಟ ಆಗಬಹುದು? ಬೈಬಲ್‌ ಕೊಡೋ ಬುದ್ಧಿವಾದವನ್ನ ಕೇಳೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? ಅದಕ್ಕೆ ಉತ್ತರ ಈ ಲೇಖನದಲ್ಲಿದೆ.

^ ಪ್ಯಾರ. 10 ಕೆಲವು ಹೆಸರು ಬದಲಾಗಿವೆ.

^ ಪ್ಯಾರ. 14 ಬೇರೆಯವರಿಗೆ ಬೇಜಾರಾಗದೆ ಇರೋ ತರ ಸಲಹೆ ಕೊಡೋದು ಹೇಗೆ ಅಂತ ಮುಂದಿನ ಲೇಖನದಲ್ಲಿ ನೋಡ್ತೀವಿ.