ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

“ಒಬ್ಬನೇ ಇದ್ರೂ ಒಬ್ಬಂಟಿ ಆಗಿರಲಿಲ್ಲ”

“ಒಬ್ಬನೇ ಇದ್ರೂ ಒಬ್ಬಂಟಿ ಆಗಿರಲಿಲ್ಲ”

ನಮ್ಮವ್ರನ್ನ ಕಳ್ಕೊಂಡಾಗ, ಹೊಸ ಜಾಗಕ್ಕೆ ಹೋದಾಗ ಅಥವಾ ಒಬ್ರೇ ಇದ್ದಾಗ ನಮ್ಮೆಲ್ರಿಗೂ ಒಬ್ಬಂಟಿ ಅನ್ಸುತ್ತೆ. ನನ್ನ ಜೀವನದಲ್ಲಿ ಇದನ್ನೆಲ್ಲ ನೋಡಿದ್ದೀನಿ. ಆದ್ರೆ ನಾನು ಒಬ್ಬನೇ ಇದ್ರು ಯಾವತ್ತೂ ಒಬ್ಬಂಟಿ ಅಂತ ಅನಿಸಿಲ್ಲ. ಯಾಕೆ ಅಂತ ನನ್ನ ಕಥೆ ಹೇಳ್ತೀನಿ ಬನ್ನಿ.

ಅಪ್ಪಅಮ್ಮನ ಮಾದರಿ

ನಮ್ಮೂರು ಸಾನ್‌ ವಾನ್‌ ಡೆಲ್‌ ಮಾಂಟೆ. ಇದು ಫಿಲಿಪ್ಪೀನ್ಸ್‌ನ ಮನಿಲಾದಲ್ಲಿದೆ. ನಮ್ಮ ಅಪ್ಪಅಮ್ಮ ಇಬ್ರೂ ಕ್ಯಾಥೋಲಿಕ್‌ ಧರ್ಮಕ್ಕೆ ಸೇರಿದವರು. ಆದರೆ ದೇವರ ಹೆಸ್ರು ಯೆಹೋವ ಅಂತ ಬೈಬಲ್‌ನಿಂದ ಗೊತ್ತಾದ ಮೇಲೆ ಅವರು ಯೆಹೋವನ ಸಾಕ್ಷಿಗಳಾದ್ರು, ಚೆನ್ನಾಗಿ ಸೇವೆ ಮಾಡಿದ್ರು. ನಮ್ಮ ಅಪ್ಪ ಮರೆಗೆಲ್ಸ ಮಾಡ್ತಿದ್ರು. ಇಷ್ಟು ದಿನ ನಮ್ಮಪ್ಪ ಯೇಸುವಿನ ಮೂರ್ತಿಗಳನ್ನ ಮಾಡ್ತಿದ್ರು. ಆದ್ರೆ ಸತ್ಯ ಕಲಿತ ಮೇಲೆ ಅದನ್ನೆಲ್ಲ ಬಿಟ್ಟು ನಮ್ಮ ಮನೆ ಕೆಳಗಿನ ಫ್ಲೋರಲ್ಲಿ ರಾಜ್ಯ ಸಭಾಗೃಹ ಮಾಡಿದ್ರು. ನಮ್ಮೂರಲ್ಲಿ ಇದೇ ಮೊದಲ ರಾಜ್ಯ ಸಭಾಗೃಹ!

ನಾನು, ಅಪ್ಪಅಮ್ಮ ಮತ್ತು ನಮ್ಮ ಕುಟುಂಬ

ನಾನು ಹುಟ್ಟಿದ್ದು 1952ರಲ್ಲಿ. ನಾವು ಒಟ್ಟು ಎಂಟು ಜನ ಮಕ್ಕಳು. ನನಗೆ ನಾಲ್ಕು ಜನ ಅಣ್ಣಂದಿರು, ಮೂರು ಜನ ಅಕ್ಕಂದಿರು. ನಾನೇ ಕೊನೆಯವನು. ಅಪ್ಪಅಮ್ಮ ನಮಗೆಲ್ಲ ತುಂಬಾ ಚೆನ್ನಾಗಿ ಬೈಬಲ್‌ ಸ್ಟಡಿ ಮಾಡ್ತಿದ್ರು. ಅಪ್ಪ ದಿನಾ ಬೈಬಲ್‌ ಓದೋಕೆ ಪ್ರೋತ್ಸಾಹ ಕೊಟ್ರು. ಅವರು ನನ್ನ ಜೊತೆ ನಮ್ಮ ಸಂಘಟನೆಯ ಬೇರೆಬೇರೆ ಪುಸ್ತಕಗಳನ್ನ ಓದ್ತಿದ್ರು. ಆಗಾಗ ಸಂಚರಣ ಮೇಲ್ವಿಚಾರಕರನ್ನ, ಬೆತೆಲಿಂದ ಬಂದ ಸಹೋದರರನ್ನ ನಮ್ಮ ಮನೇಲಿ ಉಳಿಸ್ಕೊಳ್ತಿದ್ರು. ಇವ್ರೆಲ್ಲ ಒಳ್ಳೊಳ್ಳೆ ಅನುಭವಗಳನ್ನ ಹೇಳ್ತಿದ್ರು. ಇದೆಲ್ಲ ನಮಗೆ ಬಲ ಪ್ರೋತ್ಸಾಹ ಕೊಡ್ತು. ಅದನ್ನೆಲ್ಲಾ ಕೇಳ್ತಾ ಕೇಳ್ತಾ ನಾವು ಬೆಳೆದಿದ್ರಿಂದ ಮುಂದೆ ನಾವೂ ಚೆನ್ನಾಗಿ ಸೇವೆ ಮಾಡ್ಬೇಕು ಅಂದ್ಕೊಂಡ್ವಿ.

ಅಪ್ಪಅಮ್ಮ ಇಬ್ರೂ ಯೆಹೋವನಿಗೆ ನಿಯತ್ತಾಗಿ ಸೇವೆ ಮಾಡ್ತಿದ್ರು. ನನಗೆ ಒಳ್ಳೆ ಮಾದರಿ ಇಟ್ರು. ಹೀಗೆ ನಾವು ಖುಷಿಖುಷಿಯಾಗಿ ಇದ್ವಿ. ಆದ್ರೆ ಒಂದಿನ ಅಮ್ಮ ಹುಷಾರಿಲ್ಲದೇ ತೀರಿ ಹೋದ್ರು. 1971ರಲ್ಲಿ ನಾನು ಅಪ್ಪ ಪಯನೀಯರ್‌ ಸೇವೆ ಶುರು ಮಾಡಿದ್ವಿ. ಆದ್ರೆ 1973ರಲ್ಲಿ ಅಪ್ಪ ತೀರಿ ಹೋದ್ರು. ಆಗ ನನಗಿನ್ನೂ 20 ವರ್ಷ ಅಷ್ಟೇ. ಮುಂದೆ ಏನ್‌ ಮಾಡಬೇಕು ಅಂತಾನೇ ತೋಚಲಿಲ್ಲ. ಆದ್ರೆ ಬೈಬಲ್‌ ಕೊಡೋ ನಿರೀಕ್ಷೆ ನನಗೆ ಲಂಗರದ ತರ ಇತ್ತು. ನಾನು “ದೃಢವಾಗಿರೋಕೆ” ನೋವನ್ನ ಸಹಿಸ್ಕೊಳೋಕೆ ಯೆಹೋವನಿಗೆ ನಿಯತ್ತಾಗಿರೋಕೆ ಸಹಾಯ ಮಾಡ್ತು. (ಇಬ್ರಿ. 6:19) ಅದಕ್ಕೆ ಸ್ವಲ್ಪದ್ರಲ್ಲೇ ನಾನು ವಿಶೇಷ ಪಯನೀಯರ್‌ ಸೇವೆ ಶುರು ಮಾಡ್ದೆ. ನನ್ನ ಮೊದಲ ನೇಮಕ ಪಲಾವನ್‌ ಪ್ರಾಂತ್ಯದಲ್ಲಿದ್ದ ಕೊರೊನ್‌ ಅನ್ನೋ ಒಂಟಿ ದ್ವೀಪದಲ್ಲಿತ್ತು.

ಕಷ್ಟದ ನೇಮಕ ಮಾಡುವಾಗ್ಲೂ ಒಬ್ಬನೇ ಇದ್ದೆ

ಕೊರೊನ್‌ ದ್ವೀಪಕ್ಕೆ ಬಂದಾಗ ನನಗೆ 21 ವಯಸ್ಸು. ಸಿಟಿಲಿ ಬೆಳೆದ ನನಗೆ ಈ ದ್ವೀಪ ನೋಡಿ ತುಂಬ ಆಶ್ಚರ್ಯ ಆಯ್ತು! ಮಿಂಚುಳದಂತೆ ಬಂದೋಗೋ ಕರೆಂಟು, ಬರಬೇಕೋ ಬೇಡ್ವೋ ಅಂತ ಬರೋ ನಲ್ಲಿ ನೀರು, ಅಲ್ಲಲ್ಲಿ ಕಾಣ್ಸೋ ಒಂದೆರಡು ಗಾಡಿಗಳಷ್ಟೇ ಈ ಊರಲ್ಲಿ ಇದ್ದಿದ್ದು. ಸಭೆಲೂ ಜಾಸ್ತಿ ಸಹೋದರರು ಇರ್ಲಿಲ್ಲ. ಇಲ್ಲಿ ನಾನೊಬ್ಬನೇ ಪಯನೀಯರ್‌. ಒಂದೊಂದ್ಸಲ ನಾನೊಬ್ಬನೇ ಸೇವೆ ಮಾಡಬೇಕಾಗ್ತಿತ್ತು. ಇಲ್ಲಿಗೆ ಬಂದ ಮೊದಲನೇ ತಿಂಗಳಲ್ಲೇ ನನ್ನ ಕುಟುಂಬನ, ಫ್ರೆಂಡ್ಸ್‌ನ ತುಂಬಾ ಮಿಸ್‌ ಮಾಡ್ಕೊಂಡೆ. ರಾತ್ರಿ ಹೊತ್ತಲ್ಲಿ ಆಕಾಶ ನೋಡ್ತಾ ನಿಂತುಬಿಡ್ತಿದ್ದೆ. ನನಗೇ ಗೊತ್ತಿಲ್ದೆ ಕಣ್ಣಿಂದ ಜುಳುಜುಳು ಅಂತ ಕಣ್ಣೀರು ಹರಿತಿತ್ತು. ‘ಸಾಕಪ್ಪ ಸಾಕು ಈ ನೇಮಕ, ಮನೆಗೆ ಹೋಗ್ಬಿಡೋಣ’ ಅನಿಸ್ತಿತ್ತು.

ಒಂಟಿ ಅನಿಸಿದಾಗೆಲ್ಲ ಯೆಹೋವನ ಹತ್ರ ಮನಸ್ಸು ಬಿಚ್ಚಿ ಮಾತಾಡ್ತಿದ್ದೆ. ಬೈಬಲಲ್ಲಿ, ಪುಸ್ತಕಗಳಲ್ಲಿ ಓದಿದ್ದನ್ನೆಲ್ಲ ನೆನಪು ಮಾಡ್ಕೊಳ್ತಿದ್ದೆ. ಆಗ ಕೀರ್ತನೆ 19:14 ನೆನಪಿಗೆ ಬರ್ತಿತ್ತು. ನಾನು ಯೆಹೋವ ಮಾಡಿರೋ ಕೆಲಸಗಳ ಬಗ್ಗೆ, ಆತನ ಗುಣಗಳ ಬಗ್ಗೆ ಯೋಚನೆ ಮಾಡಿದಾಗ ಆತನು‘ನನಗೆ ಬಂಡೆ ಆಗಿರ್ತಾನೆ,’ ‘ನನ್ನನ್ನ ಬಿಡಿಸ್ತಾನೆ’ ಅಂತ ಅರ್ಥ ಆಯ್ತು. ಅಷ್ಟೇ ಅಲ್ಲ “ಯು ಆರ್‌ ನೆವರ್‌ ಅಲೋನ್‌” a ಅನ್ನೋ ಲೇಖನನ ನಾನು ಆಗಾಗ ಓದ್ತಿದ್ದೆ. ಅದು ನನಗೆ ತುಂಬಾ ಸಹಾಯ ಮಾಡ್ತಿತ್ತು. ನಾನೊಬ್ಬನೇ ಇದ್ದಿದ್ರಿಂದ ಪ್ರಾರ್ಥನೆ ಮಾಡೋಕೆ, ಬೈಬಲ್‌ ಓದೋಕೆ, ಅದ್ರ ಬಗ್ಗೆ ಯೋಚನೆ ಮಾಡೋಕೆ ತುಂಬಾ ಸಮಯ ಸಿಗ್ತಿತ್ತು. ಅದಕ್ಕೇ ನಾನೊಬ್ಬನೇ ಇದ್ರೂನೂ ಯೆಹೋವ ದೇವರು ನನ್ನ ಜೊತೆಲಿದ್ದಾರೆ ಅನಿಸ್ತಿತ್ತು.

ನಾನು ಕೊರೊನ್‌ ದ್ವೀಪಕ್ಕೆ ಬಂದ ಸ್ವಲ್ಪದ್ರಲ್ಲೇ ನನ್ನನ್ನ ಹಿರಿಯನಾಗಿ ನೇಮಿಸಿದ್ರು. ಸಭೆಯಲ್ಲಿ ನಾನೊಬ್ಬನೇ ಹಿರಿಯನಾಗಿದ್ದೆ. ಅದಕ್ಕೇ ಪ್ರತಿವಾರನೂ ನಾನೇ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ, ಸೇವಾ ಕೂಟ, ಸಭಾ ಪುಸ್ತಕ ಅಭ್ಯಾಸ ಮತ್ತು ಕಾವಲಿನಬುರುಜು ಅಧ್ಯಯನ ನಡೆಸಬೇಕಿತ್ತು. ಇದ್ರ ಜೊತೇಲಿ ವಾರವಾರನೂ ನಾನೇ ಸಾರ್ವಜನಿಕ ಭಾಷಣ ಕೊಡ್ತಿದ್ದೆ. ಇಷ್ಟೆಲ್ಲಾ ನಾನು ತಯಾರಿ ಮಾಡಬೇಕಾಗ್ತಿತ್ತು. ಅದಕ್ಕೆ ನಾನು ಒಬ್ಬಂಟಿ ಅಂತ ಯೋಚ್ನೆ ಮಾಡೋಕೆ ನನ್ನತ್ರ ಟೈಮೇ ಇರ್ತಿರಲಿಲ್ಲ.

ಕೊರೊನ್‌ ದ್ವೀಪದಲ್ಲಿ ಸೇವೆ ಚೆನ್ನಾಗಿ ನಡೀತಿತ್ತು. ನನ್ನ ಕೆಲವು ಬೈಬಲ್‌ ವಿದ್ಯಾರ್ಥಿಗಳು ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಂಡ್ರು. ಹಾಗಂತ ಅಲ್ಲಿ ಕಷ್ಟಗಳೇ ಇರ್ಲಿಲ್ಲ ಅಂತಲ್ಲ. ಒಂದೊಂದು ಸಲ ನಾನು ಟೆರಿಟೊರಿಗೆ ಹೋಗೋಕೆ ಅರ್ಧ ದಿನ ನಡೀಬೇಕಾಗ್ತಿತ್ತು. ಅಲ್ಲಿ ರಾತ್ರಿ ಎಲ್ಲಿ ಮಲಗ್ತೀನಿ ಅಂತಾನೂ ಗೊತ್ತಿರಲಿಲ್ಲ. ನಮ್ಮ ಟೆರಿಟೊರಿಯಲ್ಲಿ ಚಿಕ್ಕಚಿಕ್ಕ ದ್ವೀಪಗಳಿತ್ತು, ಅವು ತುಂಬ ದೂರದಲ್ಲಿತ್ತು. ಅಲ್ಲಿಗೆ ನಾನು ಬಿರುಗಾಳಿ ಬೀಸೋ ಸಮುದ್ರದಲ್ಲಿ ಮೋಟರ್‌ ಬೋಟ್‌ನಲ್ಲಿ ಹೋಗಬೇಕಾಗ್ತಿತ್ತು. ನನಗೆ ಈಜು ಹೊಡೆಯೋಕೂ ಬರಲ್ಲ! ಆದ್ರೂ ಈ ಎಲ್ಲ ಕಷ್ಟಗಳನ್ನ ನಿಭಾಯಿಸೋಕೆ ಯೆಹೋವನೇ ಸಹಾಯ ಮಾಡಿದ್ದು. ನನ್ನ ಮುಂದಿನ ನೇಮಕಗಳಲ್ಲಿ ಇದಕ್ಕಿಂತ ದೊಡ್ಡ ಸಮಸ್ಯೆಗಳನ್ನ ನಿಭಾಯಿಸೋಕೆ ಯೆಹೋವ ನನಗೆ ತರಬೇತಿ ಕೊಡ್ತಿದ್ದ ಅಂತ ಆಮೇಲೆ ಅರ್ಥ ಮಾಡ್ಕೊಂಡೆ.

ಪಾಪುವ ನ್ಯೂ ಗಿನಿಯಲ್ಲಿ ಸೇವೆ

1978ರಲ್ಲಿ ಆಸ್ಟ್ರೇಲಿಯದ ಉತ್ತರ ದಿಕ್ಕಿನಲ್ಲಿರೋ ಪಾಪುವ ನ್ಯೂ ಗಿನಿ ಜಾಗಕ್ಕೆ ನನ್ನ ನೇಮಿಸಿದ್ರು. ಎಲ್ಲಿ ನೋಡಿದ್ರು ಬೆಟ್ಟಗುಡ್ಡಗಳೇ ಕಾಣಿಸ್ತಿತ್ತು. ಅಲ್ಲಿ ಇದ್ದಿದ್ದು ಬರೀ 30 ಲಕ್ಷ ಜನ, ಆದ್ರೆ ಮಾತಾಡ್ತಿದಿದ್ದು 800ಕ್ಕಿಂತ ಜಾಸ್ತಿ ಭಾಷೆ! ಸಾಮಾನ್ಯವಾಗಿ ಜನ ಮೆಲನೇಷಿಯನ್‌ ಪಿಜಿನ್‌ ಅನ್ನೋ ಭಾಷೆ ಮಾತಾಡ್ತಿದ್ರು. ಅದನ್ನ ಟೋಕ್‌ ಪಿಸನ್‌ ಅಂತಾನೂ ಕರಿತಿದ್ರು.

ಸ್ವಲ್ಪ ದಿನ ನನ್ನನ್ನ ಪೊರ್ಟ್‌ ಮೋರ್ಸ್‌ಬಿ ಅನ್ನೋ ಜಾಗದ ಇಂಗ್ಲಿಷ್‌ ಸಭೆಗೆ ಕಳಿಸಿದ್ರು. ಆಮೇಲೆ ಟೋಕ್‌ ಪಿಸಿನ್‌ ಭಾಷೆಯ ಸಭೆಗೆ ಹೋದೆ. ಅಲ್ಲಿ ಭಾಷೆ ಕಲಿಯೋಕೆ ಟ್ರೇನಿಂಗ್‌ ತಗೊಂಡೆ. ಕಲಿತಾ ಇದ್ದ ಅಲ್ಪ ಸ್ವಲ್ಪ ಭಾಷೆನ ಸೇವೆಲಿ ಬಳಸ್ತಿದ್ದೆ. ಇದ್ರಿಂದ ಆ ಭಾಷೆನ ಬೇಗ ಕಲಿತೆ, ಸ್ವಲ್ಪ ಟೈಮಲ್ಲೇ ಆ ಭಾಷೆಲಿ ಸಾರ್ವಜನಿಕ ಭಾಷಣನೂ ಕೊಟ್ಟೆ. ನನ್ನನ್ನ ಸಂಚರಣ ಮೇಲ್ವಿಚಾರಕರಾಗಿ ನೇಮಿಸಿದ್ರು, ಆಗ ನಾನು ಪಾಪುವ ನ್ಯೂ ಗಿನಿಗೆ ಬಂದು ಒಂದು ವರ್ಷನೂ ಆಗಿರಲಿಲ್ಲ! ಈ ನೇಮಕದಲ್ಲಿ ನಾನು ಟೋಕ್‌ ಪಿಸಿನ್‌ ಸಭೆಗಳನ್ನ ಭೇಟಿ ಮಾಡಬೇಕಿತ್ತು. ಈ ಸಭೆಗಳು ಒಂದ್ರಿಂದ ಒಂದು ದೂರ ದೂರದಲ್ಲಿತ್ತು.

ಅದಕ್ಕೆ ನಾನು ತುಂಬ ಸಮ್ಮೇಳನಗಳನ್ನ ಏರ್ಪಾಡು ಮಾಡ್ತಿದ್ದೆ. ನಾನೂ ತುಂಬಾ ಓಡಾಡ್ತಿದ್ದೆ. ಮೊದಮೊದ್ಲು ನನಗೆ ಒಂಟಿತನ ಕಾಡ್ತಿತ್ತು. ಯಾಕಂದ್ರೆ ಹೊಸ ದೇಶ, ಹೊಸ ಭಾಷೆ ಮತ್ತು ಹೊಸ ಪದ್ಧತಿಗಳಿದ್ದ ಜನ್ರ ಜೊತೆ ಜೀವನ ಮಾಡಬೇಕಿತ್ತು. ಒಂದು ಸಭೆಯಿಂದ ಇನ್ನೊಂದು ಸಭೆಗೆ ನಾನು ರೋಡಲ್ಲಿ ಪ್ರಯಾಣ ಮಾಡೋಕೆ ಆಗ್ತಿರಲಿಲ್ಲ. ಯಾಕಂದ್ರೆ ಅಲ್ಲಿ ತುಂಬಾ ಬೆಟ್ಟಗಳಿತ್ತು. ರೋಡ್‌ ಕೂಡ ಸ್ವಲ್ಪನೂ ಚೆನ್ನಾಗಿರಲಿಲ್ಲ. ಹಾಗಾಗಿ ಹೆಚ್ಚು ಕಡಿಮೆ ಪ್ರತಿ ವಾರ ಏರೋಪ್ಲೇನಲ್ಲೇ ಓಡಾಡ್ತಿದ್ದೆ. ಕೆಲವೊಂದು ಸಾರಿ ನಾನು ಹೋಗ್ತಿದ್ದ ರಿಕೆಟಿ ಸಿಂಗಲ್‌ ಎಂಜಿನ್‌ ಪ್ಲೇನ್‌ ಅಷ್ಟೇನೂ ಸೇಫಾಗಿ ಇರ್ತಿರಲಿಲ್ಲ. ಎಷ್ಟೋ ಸಲ ಅದ್ರಲ್ಲಿ ನಾನು ಒಬ್ಬನೇ ಪ್ಯಾಸೆಂಜರ್‌ ಆಗಿರ್ತಿದ್ದೆ. ಬೋಟಲ್ಲಿ ಹೋಗುವಾಗ ಹೇಗೆ ಭಯಪಡ್ತಿದ್ನೋ, ಹಾಗೇ ಏರೋಪ್ಲೇನಲ್ಲೂ ಜೀವ ಕೈಯಲ್ಲಿ ಹಿಡ್ಕೊಂಡು ಹೋಗ್ತಿದ್ದೆ.

ಆಗೆಲ್ಲ ಫೋನ್‌ ತುಂಬಾ ಅಪರೂಪ. ಹಾಗಾಗಿ ನನ್ನ ಭೇಟಿ ಬಗ್ಗೆ ಸಭೆಗಳಿಗೆ ನಾನು ಪತ್ರ ಕಳಿಸ್ತಿದ್ದೆ. ಆದ್ರೆ ಎಷ್ಟೋ ಸಲ ಆ ಪತ್ರ ಹೋಗಿ ತಲುಪೋಕ್ಕಿಂತ ಮುಂಚೆ ನಾನೇ ಹೋಗಿ ತಲುಪ್ತಿದ್ದೆ! ಹಾಗಾಗಿ ನನ್ನನ್ನ ಕರ್ಕೊಂಡು ಹೋಗೋಕೆ ನಮ್ಮವರು ಯಾರೂ ಇರ್ತಿರಲಿಲ್ಲ. ಅದಕ್ಕೇ ‘ಇಲ್ಲಿ ಯೆಹೋವನ ಸಾಕ್ಷಿಗಳು ಎಲ್ಲಿದ್ದಾರೆ’ ಅಂತ ಕೇಳಿ ಹುಡ್ಕೊಂಡು ಹೋಗ್ತಿದ್ದೆ. ನಮ್ಮ ಸಹೋದರರು ಸಿಕ್ಕಿದ್ಮೇಲೆ, ಅವರು ತೋರಿಸೋ ಪ್ರೀತಿನ ನೋಡಿದ ಮೇಲೆ ನಾನು ಇಲ್ಲಿ ಬರೋಕೆ ಪಟ್ಟ ಕಷ್ಟ ಎಲ್ಲ ಸಾರ್ಥಕ ಅಂತ ಅನಿಸ್ತಿತ್ತು. ಯೆಹೋವ ನನಗೆ ಮಾಡಿರೋ ಸಹಾಯನೆಲ್ಲ ನೋಡಿ ಆತನಿಗೆ ತುಂಬ ಹತ್ರ ಆಗಿದ್ದೀನಿ.

ಬೋಗನ್‌ವಿಲ್‌ ದ್ವೀಪದಲ್ಲಿ ನಾನು ಮೊದ್ಲು ಮೀಟಿಂಗ್‌ ಅಟೆಂಡ್‌ ಮಾಡಿದಾಗ ಒಂದು ದಂಪತಿ ನಗ್‌ನಗ್ತಾ ನನ್ನತ್ರ ಬಂದು “ನಾವು ನಿನಗೆ ನೆನಪಿದಿವಾ?” ಅಂತ ಕೇಳಿದ್ರು. ನಾನು ಮೊದಲನೇ ಸಲ ಪೊರ್ಟ್‌ ಮೋರ್ಸ್‌ಬಿ ದ್ವೀಪಕ್ಕೆ ಬಂದಾಗ ಇವ್ರಿಗೆ ಸಾಕ್ಷಿ ಕೊಟ್ಟು ಬೈಬಲ್‌ ಸ್ಟಡಿ ಶುರು ಮಾಡಿದ್ದೆ. ಬೇರೆ ಕಡೆ ಹೋಗೋ ಮುಂಚೆ ಅಲ್ಲಿದ್ದ ಒಬ್ಬ ಸಹೋದರನಿಗೆ ಇವ್ರ ಸ್ಟಡಿನ ಕೊಟ್ಟಿದ್ದೆ. ಈ ದಂಪತಿಗೆ ಈಗ ದೀಕ್ಷಾಸ್ನಾನ ಆಗಿತ್ತು! ಇದು ನನಗೆ ಸಿಕ್ಕಿದ ಆಶೀರ್ವಾದನೇ ಅಂತ ಹೇಳಬಹುದು. ನಾನು ಪಾಪುವ ನ್ಯೂ ಗಿನಿಯಲ್ಲಿ ಒಟ್ಟು ಮೂರು ವರ್ಷ ಸೇವೆ ಮಾಡಿದ್ದೆ!

ನನಗೂ ಒಂದು ಕುಟುಂಬ ಸಿಕ್ತು!

ನಾನೂ ನನ್ನ ಹೆಂಡ್ತಿ ಅಡೆಲಾ

ನಾನು 1978ರಲ್ಲಿ ಕೊರೊನ್‌ನಿಂದ ಹೋಗೋ ಮುಂಚೆ ಅಡೆಲಾ ಅನ್ನೋ ಸಹೋದರಿನ ಭೇಟಿಯಾಗಿದ್ದೆ. ಅವ್ರಲ್ಲಿದ್ದ ಹುರುಪು, ತ್ಯಾಗ ನನಗೆ ತುಂಬ ಇಷ್ಟ ಆಯ್ತು. ಅವರು ರೆಗುಲರ್‌ ಪಯನೀಯರ್‌ ಮಾಡ್ಕೊಂಡೇ ಸ್ಯಾಮ್ಯೆಲ್‌ ಮತ್ತೆ ಶರ್ಲಿ ಅನ್ನೋ ಇಬ್ರು ಮಕ್ಕಳನ್ನ ತುಂಬಾ ಚೆನ್ನಾಗಿ ಬೆಳೆಸ್ತಿದ್ರು. ಅಷ್ಟೇ ಅಲ್ಲ ಅವ್ರ ವಯಸ್ಸಾದ ಅಮ್ಮನ್ನನ್ನೂ ನೋಡ್ಕೊಳ್ತಿದ್ರು. ಮೇ 1981ರಲ್ಲಿ ನಾನು ಫಿಲಿಪ್ಪೀನ್ಸ್‌ಗೆ ವಾಪಸ್‌ ಬಂದು ಅಡೆಲಾನ ಮದುವೆ ಆದೆ. ನಾವು ಮದುವೆ ಆದ್ಮೇಲೆ ಕೆಲ್ಸ ಮಾಡ್ಕೊಂಡು ಇಬ್ರೂ ರೆಗುಲರ್‌ ಪಯನೀಯರ್‌ ಮಾಡ್ತಾ ನಮ್ಮ ಕುಟುಂಬನ ಚೆನ್ನಾಗಿ ನೋಡ್ಕೊಂಡ್ವಿ.

ಅಡೆಲಾ ಮತ್ತು ನಮ್ಮ ಮಕ್ಕಳು ಶರ್ಲಿ, ಸ್ಯಾಮ್ಯೆಲ್‌ ಜೊತೆ ಪಲಾವನ್‌ನಲ್ಲಿ ಸೇವೆ ಮಾಡ್ತಿರೋವಾಗ

ನನಗೆ ಕುಟುಂಬ ಇದ್ರೂ 1983ರಲ್ಲಿ ನನ್ನನ್ನ ವಿಶೇಷ ಪಯನೀಯರ್‌ ಆಗಿ ನೇಮಿಸಿದ್ರು! ಈ ಸಲ ಪಲಾವನ್‌ ಅನ್ನೋ ಜಾಗದಲ್ಲಿರೋ ಲೀನಾಪಾಕನ್‌ ಅನ್ನೋ ದ್ವೀಪದಲ್ಲಿ ಸೇವೆ ಮಾಡೋ ಅವಕಾಶ ಸಿಕ್ತು. ನಾವು ಇಡೀ ಕುಟುಂಬ ಈ ಜಾಗಕ್ಕೆ ಬಂದ್ವಿ. ಇಲ್ಲಿ, ಒಬ್ಬ ಯೆಹೋವನ ಸಾಕ್ಷಿನೂ ಇರ್ಲಿಲ್ಲ. ಇಲ್ಲಿ ಬಂದ ಒಂದು ವರ್ಷಕ್ಕೆ ಅಡೆಲಾ ಅವ್ರ ಅಮ್ಮ ತೀರಿಹೋದ್ರು. ಸೇವೆ ಮಾಡ್ತಾ ನಾವು ಬ್ಯುಸಿ ಇದಿದ್ರಿಂದ ಆ ನೋವನ್ನ ಹೆಂಗೋ ಸಹಿಸ್ಕೊಂಡ್ವಿ. ಲೀನಾಪಾಕನ್‌ನಲ್ಲಿ ನಮಗೆ ತುಂಬಾ ಬೈಬಲ್‌ ಸ್ಟಡಿ ಸಿಕ್ತು. ಅವ್ರೆಲ್ಲ ಚೆನ್ನಾಗಿ ಪ್ರಗತಿ ಮಾಡ್ತಾ ಇದ್ದಿದ್ರಿಂದ ನಮಗೊಂದು ರಾಜ್ಯ ಸಭಾಗೃಹ ಬೇಕಿತ್ತು. ಅದಕ್ಕೆ ನಾವೇ ಒಂದು ರಾಜ್ಯ ಸಭಾಗೃಹ ಕಟ್ಟಿದ್ವಿ. ನಾವಲ್ಲಿ ಬಂದು ಮೂರು ವರ್ಷ ಆದ್ಮೇಲೆ ನಡೆದ ಸ್ಮರಣೆಗೆ ಸುಮಾರು 110 ಜನ ಬಂದಿದ್ರು. ಇವ್ರಲ್ಲಿ ಎಷ್ಟೋ ಜನ ನಾವು ಅಲ್ಲಿಂದ ಹೋದ್ಮೇಲೆ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಂಡ್ರು.

1986ರಲ್ಲಿ ನಮ್ಮನ್ನ ಕ್ಯೂಲಿಯೊನ್‌ನಲ್ಲಿರೋ ಒಂದು ದ್ವೀಪಕ್ಕೆ ಕಳಿಸಿದ್ರು. ಇಲ್ಲಿ ಕುಷ್ಠ ರೋಗಿಗಳ ಒಂದು ಕಾಲೋನಿನೇ ಇತ್ತು! ನಾವು ಅಲ್ಲಿ ಬಂದ್ಮೇಲೆ ನನ್ನ ಹೆಂಡ್ತಿ ಅಡೆಲಾನನ್ನೂ ವಿಶೇಷ ಪಯನೀಯರ್‌ ಆಗಿ ನೇಮಿಸಿದ್ರು. ಮೊದಮೊದ್ಲು ನಮಗೆ ಈ ಕುಷ್ಠ ರೋಗಿಗಳಿಗೆ ಸಿಹಿಸುದ್ದಿ ಸಾರೋಕೆ ತುಂಬಾ ಭಯ ಆಗ್ತಿತ್ತು. ಆದ್ರೆ ಅಲ್ಲಿದ್ದ ಬೇರೆ ಪ್ರಚಾರಕರು ‘ಇವರಿಗೆಲ್ಲ ಟ್ರೀಟ್ಮೆಂಟ್‌ ಸಿಕ್ಕಿದೆ. ಹಾಗಾಗಿ ಇವ್ರಿಂದ ನಮಗೆ ಈ ಕಾಯಿಲೆ ಹರಡೋ ಚಾನ್ಸ್‌ ಕಮ್ಮಿ’ ಅಂತ ಹೇಳಿ ಧೈರ್ಯ ಕೊಟ್ರು. ಈ ತರ ಟ್ರೀಟ್ಮೆಂಟ್‌ ತಗೊಂಡಿದ್ದ ಕೆಲವು ರೋಗಿಗಳು ನಮ್ಮ ಸಿಸ್ಟರ್‌ ಮನೆಗೆ ಬಂದು ಕೂಟಗಳನ್ನ ಅಟೆಂಡ್‌ ಮಾಡ್ತಿದ್ರು. ‘ನಮ್ಮನ್ನ ಆ ದೇವರೂ ದೂರ ಇಟ್ಟಿದ್ದಾನೆ’ ಅಂತ ಈ ಜನ ಕುಗ್ಗಿ ಹೋಗಿದ್ರು. ಇಂಥವ್ರಿಗೆ ಬೈಬಲ್‌ ಕೊಡೋ ನಿರೀಕ್ಷೆ ಬಗ್ಗೆ ಹೇಳೋದು ನಿಜಕ್ಕೂ ತುಂಬಾ ಒಳ್ಳೇದು ಅಂತ ನಮಗನಿಸ್ತು. ಅದಕ್ಕೇ ಇವ್ರಿಗೆ ಬೈಬಲ್‌ ವಿಷ್ಯನ ಸಾರಿದ್ವಿ. ಮುಂದೆ ಒಂದಿನ ಪರಿಪೂರ್ಣ ಆರೋಗ್ಯ ಸಿಗುತ್ತೆ ಅಂತ ತಿಳ್ಕೊಂಡಾಗ ಈ ಕಾಯಿಲೆಯಿಂದ ನರಳ್ತಿದ್ದವರು ತುಂಬ ಖುಷಿ ಪಡ್ತಿದ್ರು. ಅದನ್ನ ನೋಡಿದಾಗ ನಮಗೂ ತುಂಬಾ ಖುಷಿ ಆಗ್ತಿತ್ತು.—ಲೂಕ 5:12, 13.

ಕ್ಯುಲಿಯೊನ್‌ನಲ್ಲಿ ನಮ್ಮ ಮಕ್ಕಳಿಗೆ ಒಂಟಿತನ ಕಾಡಬಾರದು ಅಂತ ಕೊರೊನ್‌ನಿಂದ ಇಬ್ರು ಯುವ ಸಹೋದರಿಯರನ್ನ ನಮ್ಮ ಜೊತೆ ಕರ್ಕೊಂಡು ಬಂದಿದ್ವಿ. ನಮ್ಮ ಮಕ್ಕಳು ಸ್ಯಾಮ್ಯೆಲ್‌, ಶರ್ಲಿ ಮತ್ತೆ ಈ ಇಬ್ರು ಸಹೋದರಿಯರು ತುಂಬಾ ಚೆನ್ನಾಗಿ ಸೇವೆ ಮಾಡ್ತಾ ಬೇರೆಯವ್ರಿಗೆ ಬೈಬಲ್‌ ಕಲಿಸ್ತಿದ್ರು. ಇಲ್ಲಿದ್ದ ಎಷ್ಟೋ ಮಕ್ಕಳಿಗೆ ಇವರು ಬೈಬಲ್‌ ಸ್ಟಡಿ ಮಾಡ್ತಿದ್ರು. ಆ ಮಕ್ಕಳ ಹೆತ್ತವರಿಗೆ ನಾನು ಮತ್ತೆ ಅಡೆಲಾ ಬೈಬಲ್‌ ಕಲಿಸ್ತಿದ್ವಿ. ಹೀಗೆ ಸುಮಾರು 11 ಕುಟುಂಬಕ್ಕೆ ನಾವೆಲ್ರೂ ಸೇರಿ ಬೈಬಲ್‌ ಅಧ್ಯಯನ ಮಾಡ್ತಿದ್ವಿ. ಇವ್ರೆಲ್ಲ ತುಂಬಾ ಚೆನ್ನಾಗಿ ಪ್ರಗತಿ ಮಾಡಿದ್ರಿಂದ ನಾವಲ್ಲಿ ಹೊಸ ಸಭೆನೇ ಶುರು ಮಾಡ್ಬೇಕಾಯ್ತು!

ಮೊದ್ಲು ಇಲ್ಲಿ ನಾನೊಬ್ಬನೇ ಹಿರಿಯನಾಗಿದ್ದೆ. ಬ್ರಾಂಚ್‌ ಆಫೀಸ್‌ ಕ್ಯೂಲಿಯೊನ್‌ನಲ್ಲಿರೋ 8 ಜನ ಪ್ರಚಾರಕರಿಗೋಸ್ಕರ ವಾರಾಂತ್ಯದ ಕೂಟ ನಡೆಸೋಕೆ ಹೇಳ್ತು. ಅದೇ ತರ ಮರಿಲೀ ಅನ್ನೋ ಒಂದು ಹಳ್ಳಿಗೆ ಹೋಗಿ ಅಲ್ಲಿರೋ ಒಂಬತ್ತು ಜನ ಪ್ರಚಾರಕರಿಗೋಸ್ಕರನೂ ಕೂಟ ನಡೆಸಿ ಅಂತ ಹೇಳ್ತು. ಅಲ್ಲಿಗೆ ಹೋಗೋಕೆ ದೋಣಿಲಿ ಮೂರು ಗಂಟೆ ನಾವು ಪ್ರಯಾಣ ಮಾಡಬೇಕಿತ್ತು. ಅಲ್ಲಿ ಮೀಟಿಂಗ್‌ ಮುಗಿದ ಮೇಲೆ ನಾವು ಕುಟುಂಬವಾಗಿ ಹಲವಾರು ಗಂಟೆ ಬೆಟ್ಟ ಹತ್ಕೊಂಡು ಹಲ್ಸೀ ಅನ್ನೋ ಹಳ್ಳಿಗೆ ಬಂದು ಬೈಬಲ್‌ ಸ್ಟಡಿ ಮಾಡ್ತಿದ್ವಿ.

ಹೋಗ್ತಾ ಹೋಗ್ತಾ ಈ ಎರಡು ಜಾಗದಲ್ಲೂ ತುಂಬಾ ಜನ ಸತ್ಯಕ್ಕೆ ಬಂದ್ರು. ಅದಕ್ಕೆ ಅಲ್ಲಿ ರಾಜ್ಯ ಸಭಾಗೃಹಗಳನ್ನ ಕಟ್ಟಿದ್ವಿ. ರಾಜ್ಯ ಸಭಾಗೃಹ ಕಟ್ಟೋಕೆ ಲೀನಾಪಾಕನ್‌ನಲ್ಲಿ ಸಹಾಯ ಮಾಡಿದ ತರಾನೇ ಇಲ್ಲೂ ಸಹೋದರರು ಮತ್ತು ಆಸಕ್ತ ಜನರು ಬೇಕಾದ ವಸ್ತುಗಳನ್ನ ಕೊಟ್ರು, ನಮ್‌ ಜೊತೆ ಕೈ ಜೋಡಿಸಿ ಕೆಲ್ಸ ಮಾಡಿದ್ರು. ಮರಿಲೀ ಜಾಗದಲ್ಲಿದ್ದ ರಾಜ್ಯ ಸಭಾಗೃಹದಲ್ಲಿ ಸುಮಾರು 200 ಜನ ಕೂತ್ಕೊಳೊಕೆ ಆಗ್ತಿತ್ತು. ಅಷ್ಟೇ ಅಲ್ಲ ಅಗತ್ಯ ಬಂದಾಗ ಅದನ್ನ ದೊಡ್ಡ ಹಾಲ್‌ ಆಗಿ ಕನ್ವರ್ಟ್‌ ಮಾಡಬಹುದಿತ್ತು. ಅದಕ್ಕೆ ಇಲ್ಲಿ ಆಗಾಗ ನಾವು ಸಮ್ಮೇಳನಗಳನ್ನ ಕೂಡ ನಡೆಸಿದ್ವಿ!

ನೋವಿನ ಮಧ್ಯೆನೂ ಅರಳಿದ ಆನಂದ

1993ರಷ್ಟರಲ್ಲಿ ನಮ್ಮ ಮಕ್ಕಳು ಬೆಳೆದು ದೊಡ್ಡವರಾಗಿದ್ರು. ಅದಕ್ಕೆ ನಾನೂ ನನ್ನ ಹೆಂಡ್ತಿ ಫಿಲಿಪ್ಪೀನ್ಸ್‌ನಲ್ಲಿ ಸಂಚರಣ ಕೆಲ್ಸ ಶುರು ಮಾಡಿದ್ವಿ. 2000ದಲ್ಲಿ ನಾನು ಶುಶ್ರೂಷಾ ತರಬೇತಿ ಶಾಲೆಗೆ (MTS) ಹಾಜರಾದೆ. ಅಲ್ಲಿ ನನಗೆ ಬೈಬಲ್‌ ಶಾಲೆಗಳಲ್ಲಿ ಬೋಧಿಸೋ ತರಬೇತಿ ಕೊಟ್ರು. ಈ ನೇಮಕಕ್ಕೆ ನಾನು ಅರ್ಹನಲ್ಲ ಅಂತ ನನಗನಿಸ್ತು. ಆದ್ರೆ ಈ ನೇಮಕನ ಮಾಡೋಕೆ ಬೇಕಾಗಿರೋ ಬಲ, ಶಕ್ತಿನ ಯೆಹೋವ ಕೊಡ್ತಾನೆ ಅಂತ ನನ್ನ ಹೆಂಡ್ತಿ ಆಗಾಗ ನೆನಪಿಸ್ತಿದ್ದಳು. (ಫಿಲಿ. 4:13) ಯಾಕಂದ್ರೆ ಅವಳಿಗೆ ತುಂಬಾ ಆರೋಗ್ಯ ಸಮಸ್ಯೆ ಇದ್ರೂ ತನ್ನ ಸೇವೆನ ಮಾಡೋಕೆ ಯೆಹೋವ ಸಹಾಯ ಮಾಡ್ತಿರೋದನ್ನ ಅವಳು ನೋಡ್ತಿದ್ದಳು.

2006ರಲ್ಲಿ ನಾನೊಂದು ಬೈಬಲ್‌ ಶಾಲೆ ನಡೆಸ್ತಿರುವಾಗ ನನ್ನ ಹೆಂಡ್ತಿಗೆ ಪಾರ್ಕಿನ್ಸನ್‌ (ನಡುಕ ಕಾಯಿಲೆ) ಇದೆ ಅಂತ ಗೊತ್ತಾಯ್ತು. ಇದನ್ನ ಕೇಳ್ದಾಗ ದಿಕ್ಕೇ ತೋಚಲಿಲ್ಲ. ‘ಇನ್ಮೇಲೆ ಈ ನೇಮಕನೆಲ್ಲ ನಿಲ್ಲಿಸಿ ಬಿಡೋಣ’ ಅಂತ ಅವಳಿಗೆ ಹೇಳಿದೆ. ಅದಕ್ಕೆ ಅಡೆಲಾ ‘ಇಲ್ಲ ರೀ, ಒಬ್ಬ ಒಳ್ಳೇ ಡಾಕ್ಟರ್‌ ಇದ್ರೆ ಹುಡುಕಿ, ಯೆಹೋವ ನಮಗೆ ಸಹಾಯ ಮಾಡ್ತಾನೆ. ನಾವಿನ್ನೂ ಸೇವೆ ಮಾಡಬಹುದು’ ಅಂದ್ಳು. ಕಾಯಿಲೆ ಇದ್ರೂ ಯಾರನ್ನೂ ದೂರದೇ ಮುಂದಿನ ಆರು ವರ್ಷ ಯೆಹೋವನ ಸೇವೆ ಮಾಡಿದಳು. ನಡಿಯೋಕೆ ಶಕ್ತಿನೇ ಇಲ್ಲದಿದ್ರೂ ವೀಲ್‌ ಚೇರಲ್ಲಾದ್ರೂ ಸೇವೆಗೆ ಬರ್ತಿದ್ದಳು. ಪಟ್‌ ಪಟಾ ಅಂತ ಮಾತಾಡ್ತಿದ್ದವಳಿಗೆ ಈಗ ಬಾಯೇ ಬರ್ತಿರಲಿಲ್ಲ. ಆದ್ರೂ ತಪ್ಪದೇ ಮೀಟಿಂಗಲ್ಲಿ ಒಂದೆರಡು ಮಾತಲ್ಲಾದ್ರೂ ಉತ್ರ ಹೇಳ್ತಿದ್ದಳು. ಅವಳತಾಳ್ಮೆನ ಸಹೋದರ ಸಹೋದರಿಯರು ಮೆಚ್ಕೊಂಡು 2013ರಲ್ಲಿ ಅವಳು ತೀರಿ ಹೋಗೋವರೆಗೂ ಪ್ರೋತ್ಸಾಹಿಸೋಕೆ ಅವಳಿಗೆ ಯಾವಾಗ್ಲೂ ಮೆಸೇಜ್‌ ಮಾಡ್ತಿದ್ರು. ನನ್ನ ಹೆಂಡ್ತಿ ತುಂಬಾ ನಿಯತ್ತಾಗಿದ್ದಳು. ನನ್ನನ್ನ ತುಂಬಾ ಪ್ರೀತಿಸ್ತಿದ್ದಳು. ನಾನೂ ಅವಳೂ ಜೊತೇಲಿ 30 ವರ್ಷ ಜೀವನ ಮಾಡಿದ್ವಿ. ಆದ್ರೆ ಈಗ ಅವಳು ನನಗೆ ಬರೀ ನೆನಪಷ್ಟೇ! ಅವಳು ನನ್‌ ಜೊತೇಲಿಲ್ಲ, ನಾನ್‌ ಮತ್ತೆ ಒಬ್ಬನೇ ಆಗೋದೆ!

‘ಕಷ್ಟ ಬಂದ್ರೂ ನಾನು ಬಿಡದೇ ಸೇವೆ ಮಾಡ್ಬೇಕು’ ಅನ್ನೋದು ನನ್‌ ಹೆಂಡ್ತಿ ಆಸೆ. ಅದಕ್ಕೆ ಏನೇ ಆದ್ರೂ ನಾನು ನನ್ನ ಸೇವೆನ ನಿಲ್ಲಿಸದೇ ಮಾಡ್ತಾ ಇದ್ದೀನಿ. ನಾನು ಸೇವೆಲಿ ಬ್ಯುಸಿ ಇದ್ರೆ ನನಗೆ ಒಂಟಿ ಅಂತ ಅನಿಸಲ್ಲ. 2014ರಿಂದ 2017ರಲ್ಲಿ ನಾನು ಯೆಹೋವನ ಸಾಕ್ಷಿಗಳಿಗೆ ನಿರ್ಬಂಧ ಇದ್ದ ದೇಶಗಳಲ್ಲಿ ಟಗಲಾಗ್‌ ಭಾಷೆಯ ಸಭೆಗಳನ್ನ ಭೇಟಿ ಮಾಡ್ದೆ. ಅದಾದ್ಮೇಲೆ ನಾನು ತೈವಾನ್‌, ಅಮೆರಿಕ, ಕೆನಡಾದಲ್ಲಿ ಇದ್ದ ಟಗಾಲಗ್‌ ಸಭೆಗಳನ್ನ ಭೇಟಿ ಮಾಡ್ದೆ. 2019ರಲ್ಲಿ ಭಾರತ ಮತ್ತು ಥೈಲ್ಯಾಂಡ್‌ನಲ್ಲಿ ಇಂಗ್ಲಿಷ್‌ ಭಾಷೆಯ ರಾಜ್ಯ ಪ್ರಚಾರಕರ ಶಾಲೆ ನಡೆಸಿದೆ. ಈ ಎಲ್ಲ ನೇಮಕಗಳಲ್ಲಿ ನನಗೆ ತುಂಬಾ ಸಂತೋಷ ಸಿಕ್ಕಿದೆ. ಯೆಹೋವನ ಸೇವೆಲಿ ಮುಳುಗಿದ್ದಾಗ ಸಿಗೋ ಸಂತೋಷಕ್ಕಿಂತ ಬೇರೆ ಸಂತೋಷ ಇನ್ನೊಂದಿಲ್ಲ!

ಒಬ್ರೇ ಅನಿಸಿದ್ರೂ ನಾವು ಒಬ್ಬಂಟಿ ಅಲ್ಲ!

ನನಗೆ ಸಹೋದರ ಸಹೋದರಿಯರು ಅಂದ್ರೆ ತುಂಬಾ ಇಷ್ಟ. ಅವ್ರ ಮೇಲೆ ನನಗೆ ಬೆಟ್ಟದಷ್ಟು ಪ್ರೀತಿ. ಅದಕ್ಕೇ ಪ್ರತಿ ನೇಮಕದಲ್ಲೂ ಅವ್ರನ್ನ ಬಿಟ್ಟು ಬರುವಾಗ ತುಂಬಾ ಕಷ್ಟ ಆಗ್ತಿತ್ತು. ಆದ್ರೆ ಯೆಹೋವನ ಮೇಲೆ ಪೂರ್ತಿ ಭರವಸೆ ಇಡೋದನ್ನ ಕಲ್ತಿದ್ರಿಂದ ಈಗ ನಾನು ಹೊಂದಾಣಿಕೆ ಮಾಡ್ಕೊಳ್ತಿದ್ದೀನಿ. ಯೆಹೋವ ನನಗೆ ಯಾವಾಗ್ಲೂ ಸಹಾಯ ಮಾಡ್ತಾ ಬಂದಿದ್ದಾನೆ. ಅದಕ್ಕೇ ಜೀವನದಲ್ಲಿ ಏನೇ ಬದಲಾವಣೆ ಆದ್ರೂ ಅದನ್ನ ಮನಸ್ಪೂರ್ತಿಯಾಗಿ ಒಪ್ಕೊಳ್ತಾ ಇದ್ದೀನಿ. ಈಗ ನಾನು ಫಿಲಿಪ್ಪೀನ್ಸ್‌ನಲ್ಲಿ ವಿಶೇಷ ಪಯನೀಯರ್‌ ಆಗಿ ಒಂದು ಹೊಸ ಸಭೆಲಿ ಸೇವೆ ಮಾಡ್ತಿದ್ದೀನಿ. ಇಲ್ಲಿರೋರು ನನ್ನನ್ನ ತುಂಬಾ ಚೆನ್ನಾಗಿ ನೋಡ್ಕೊಳ್ತಾರೆ. ನಾವೆಲ್ಲ ಒಂದೇ ಕುಟುಂಬದ ತರ ಇದೀವಿ. ಸ್ಯಾಮ್ಯೆಲ್‌ ಮತ್ತು ಶರ್ಲಿ ಅವ್ರ ಅಮ್ಮನ ತರನೇ ಯೆಹೋವನ ಸೇವೆ ಮಾಡೋದನ್ನ ನೋಡಿದಾಗ ಹೆಮ್ಮೆ ಆಗುತ್ತೆ.—3 ಯೋಹಾ. 4.

ಈಗ ಸಭೆನೇ ನನ್ನ ಕುಟುಂಬ

ನಿಜ, ನನ್‌ ಜೀವನದಲ್ಲಿ ತುಂಬಾ ಕಷ್ಟಗಳನ್ನ ನೋಡಿದ್ದೀನಿ. ನನ್ನ ಹೆಂಡ್ತಿ ನರಳ್ತಾ ಸಾಯ್ತಿದ್ದನ್ನ ನೋಡಿದಾಗಂತೂ ತುಂಬಾ ನೋವಾಯ್ತು. ನಾನು ಹೊಸ ಹೊಸ ಜಾಗಗಳಿಗೆ ಹೋಗಿ ಅಲ್ಲಿ ಹೊಂದ್ಕೊಳ್ಳಬೇಕಾಯ್ತು. ಆದ್ರೆ ಆಗೆಲ್ಲ ಯೆಹೋವ “ನಮ್ಮಲ್ಲಿ ಒಬ್ರಿಗೂ ದೂರವಾಗಿಲ್ಲ” ಅಂತ ನಾನು ಅರ್ಥ ಮಾಡ್ಕೊಂಡಿದ್ದೀನಿ. (ಅ. ಕಾ. 17:27) ನಾವು ದೂರ ಇರ್ಲಿ, ಹತ್ರ ಇರ್ಲಿ, ದ್ವೀಪದಲ್ಲಿ ಇರ್ಲಿ, ಎಲ್ಲೇ ಇರ್ಲಿ “ಯೆಹೋವನ ಕೈ [ನಮ್ಮನ್ನ] ರಕ್ಷಿಸೋಕೆ ಆಗದಷ್ಟು ಚಿಕ್ಕದಲ್ಲ” ಅನ್ನೋದು ನನಗೆ ಚೆನ್ನಾಗಿ ಗೊತ್ತಾಗಿದೆ. (ಯೆಶಾ. 59:1) ಯೆಹೋವ ಒಂದು ಬಂಡೆ ತರ ನನ್ನ ಜೀವನ ಪೂರ್ತಿ ನನ್ನ ಜೊತೇನೇ ಇದ್ದ. ಆತನಿಗೆ ನಾನು ಯಾವಾಗ್ಲೂ ಋಣಿಯಾಗಿರುತ್ತೀನಿ. ಯಾಕಂದ್ರೆ ನಾನು ಒಬ್ಬನೇ ಇದ್ರೂ ಒಬ್ಬಂಟಿ ಆಗಿರಲಿಲ್ಲ!

a ಕಾವಲಿನಬುರುಜು (ಇಂಗ್ಲಿಷ್‌) ಸೆಪ್ಟೆಂಬರ್‌ 1, 1972ರ ಪುಟ 521-527 ನೋಡಿ.