ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 6

ಗೀತೆ 18 ವಿಮೋಚನಾ ಬಲಿಗಾಗಿ ಚಿರಋಣಿ!

ಯೆಹೋವನ ಕ್ಷಮೆಗೆ ನಾವು ಯಾಕೆ ಕೃತಜ್ಞತೆ ತೋರಿಸಬೇಕು?

ಯೆಹೋವನ ಕ್ಷಮೆಗೆ ನಾವು ಯಾಕೆ ಕೃತಜ್ಞತೆ ತೋರಿಸಬೇಕು?

“ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ. ಅದಕ್ಕೇ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಟ್ಟನು.”ಯೋಹಾ. 3:16.

ಈ ಲೇಖನದಲ್ಲಿ ಏನಿದೆ?

ಯೆಹೋವನ ಕ್ಷಮೆಗೆ ನಾವು ಕೃತಜ್ಞತೆ ತೋರಿಸಬೇಕು ಅಂದ್ರೆ ನಮ್ಮನ್ನ ಕ್ಷಮಿಸೋಕೆ ಆತನು ನಮಗಾಗಿ ಏನೆಲ್ಲ ಮಾಡಿದ್ದಾನೆ ಅಂತ ತಿಳ್ಕೊಬೇಕು.

1-2. ಪ್ಯಾರ 1ರಲ್ಲಿ ಹೇಳಿರೋ ಆ ಯುವಕನ ಪರಿಸ್ಥಿತಿನೂ ನಮ್ಮ ಪರಿಸ್ಥಿತಿನೂ ಹೇಗೆ ಒಂದೇ ತರ ಇದೆ?

 ಈ ಘಟನೆಯನ್ನ ಕಲ್ಪಿಸ್ಕೊಳ್ಳಿ. ಒಬ್ಬ ಯುವಕ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದಾನೆ. ಒಂದಿನ ಅವನಿಗೆ ಅವನ ಅಪ್ಪಅಮ್ಮ ಆ್ಯಕ್ಸಿಡೆಂಟಲ್ಲಿ ತೀರಿಹೋದ್ರು ಅನ್ನೋ ಸುದ್ದಿ ಸಿಕ್ತು. ಇದನ್ನ ಕೇಳಿದಾಗ ಅವನ ಎದೆನೇ ಒಡೆದುಹೋಯ್ತು. ಆದ್ರೆ ಇದ್ರ ಹಿಂದೆನೇ ಅವನ ಕಿವಿಗೆ ಇನ್ನೊಂದು ಸುದ್ದಿ ಬಿತ್ತು. ಅದೇನಂದ್ರೆ ಅವನ ಅಪ್ಪಅಮ್ಮ ಅವನಿಗೆ ಆಸ್ತಿ ಮಾಡಿಟ್ಟು ಹೋಗೋ ಬದ್ಲು ಮೈತುಂಬ ಸಾಲ ಮಾಡಿಟ್ಟು ಹೋಗಿದ್ರು. ಈ ಸಾಲನೆಲ್ಲ ತಕ್ಷಣ ಅವನು ತೀರಿಸಬೇಕಿತ್ತು. ಆದ್ರೆ ಅದನ್ನ ತೀರಿಸೋಕೆ ಆಗೋದೇ ಇಲ್ಲ ಅನ್ನೋ ಪರಿಸ್ಥಿತಿಯಲ್ಲಿ ಅವನಿದ್ದ.

2 ಒಂದರ್ಥದಲ್ಲಿ ನಾವೂ ಆ ಯುವಕನ ಪರಿಸ್ಥಿತಿಯಲ್ಲೇ ಇದ್ದೀವಿ. ನಮ್ಮ ಮೊದಲನೇ ಹೆತ್ತವರಾದ ಆದಾಮ ಹವ್ವ ಪರಿಪೂರ್ಣರಾಗಿದ್ರು ಮತ್ತು ಸುಂದರವಾದ ಪರದೈಸಲ್ಲಿ ಅವರು ಜೀವಿಸ್ತಿದ್ರು. (ಆದಿ. 1:27; 2:7-9) ಅಲ್ಲಿ ಅವರು ಖುಷಿಖುಷಿಯಾಗಿ ಇದ್ರು ಮತ್ತು ಅವ್ರಿಗೆ ಶಾಶ್ವತವಾಗಿ ಜೀವಿಸೋ ಅವಕಾಶನೂ ಇತ್ತು. ಆದ್ರೆ ಇದ್ದಕ್ಕಿದ್ದ ಹಾಗೆ ಎಲ್ಲಾ ತಲೆಕೆಳಗಾಗಿಬಿಡ್ತು. ಅವರು ಪರದೈಸನ್ನೂ ಕಳ್ಕೊಂಡ್ರು, ಶಾಶ್ವತವಾಗಿ ಜೀವಿಸೋ ಅವಕಾಶನೂ ಕಳ್ಕೊಂಡ್ರು. ಈ ತರ ಮಾಡಿದ್ರಿಂದ ಅವ್ರ ಮಕ್ಕಳಾದ ನಮಗೆ ಅವರು ಏನನ್ನ ದಾಟಿಸಿದ್ರು? ಬೈಬಲ್‌ ಅದ್ರ ಬಗ್ಗೆ ಹೀಗೆ ಹೇಳುತ್ತೆ: “ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು. ಎಲ್ಲ ಮನುಷ್ಯರು ಪಾಪಮಾಡಿದ್ರಿಂದ ಎಲ್ರೂ ಸಾಯ್ತಾರೆ.” (ರೋಮ. 5:12) ಆದಾಮ ನಮ್ಮೆಲ್ರಿಗೂ ಪಾಪನ ಆಸ್ತಿಯಾಗಿ ಕೊಟ್ಟ. ಇದ್ರಿಂದ ನಾವೆಲ್ರೂ ಸಾಯ್ತಾ ಇದ್ದೀವಿ. ಹಾಗಾಗಿ ಈ ಪಾಪ ಒಂದು ದೊಡ್ಡ ಸಾಲದ ತರ ಇದೆ. ನಮ್ಮಿಂದ ಯಾರಿಗೂ ಇದನ್ನ ತೀರಿಸೋಕೆ ಆಗಲ್ಲ.—ಕೀರ್ತ. 49:8.

3. ನಾವು ಮಾಡೋ ಪಾಪ ಹೇಗೆ ‘ಸಾಲದ’ ತರ ಇದೆ?

3 ಯೇಸು ಪಾಪಗಳನ್ನ ‘ಸಾಲಕ್ಕೆ’ ಹೋಲಿಸಿದ್ದಾನೆ. (ಮತ್ತಾ. 6:12; ಲೂಕ 11:4) ನಾವು ಪಾಪ ಮಾಡಿದಾಗ ಯೆಹೋವನಿಗೆ ಸಾಲಗಾರರಾಗ್ತೀವಿ. ನಾವು ಮಾಡಿದ ಪಾಪಕ್ಕೆ ದಂಡ ಕಟ್ಟಲೇಬೇಕು. ನಾವು ಈ ಸಾಲನ ತೀರಿಸಿಲ್ಲಾಂದ್ರೆ ಕೊನೇ ತನಕ ಸಾಲಗಾರರಾಗೇ ಇರ್ತೀವಿ. ನಾವು ಸತ್ರೆ ಮಾತ್ರ ಆ ಸಾಲ ಮನ್ನಾ ಆಗುತ್ತೆ. ಇದ್ರಿಂದ ನಮಗೆ ಮತ್ತೆ ಜೀವಿಸೋ ಅವಕಾಶನೂ ಸಿಗಲ್ಲ.—ರೋಮ. 6:7, 23.

4. (ಎ) ನಾವು ಸಹಾಯ ಪಡ್ಕೊಂಡಿಲ್ಲಾಂದ್ರೆ ಪಾಪಿಗಳಾಗಿರೋ ನಮ್ಮೆಲ್ರ ಪರಿಸ್ಥಿತಿ ಏನಾಗಿಬಿಡುತ್ತೆ? (ಕೀರ್ತನೆ 49:7-9) (ಬಿ) “ಪಾಪ” ಅಂತ ಬೈಬಲಲ್ಲಿ ಹೇಳಿರೋದ್ರ ಅರ್ಥ ಏನು? (“ ಪಾಪ” ಅನ್ನೋ ಚೌಕ ನೋಡಿ.)

4 ಆದಾಮ ಹವ್ವ ಕಳ್ಕೊಂಡಿದ್ದನ್ನ ಮತ್ತೆ ಪಡ್ಕೊಳ್ಳೋಕೆ ನಮ್ಮಿಂದ ಆಗಲ್ಲ, ನಮಗೆ ಸಹಾಯ ಬೇಕು. (ಕೀರ್ತನೆ 49:7-9 ಓದಿ.) ಒಂದುವೇಳೆ ನಾವು ಆ ಸಹಾಯ ಪಡ್ಕೊಂಡಿಲ್ಲಾಂದ್ರೆ ನಮಗೆ ಶಾಶ್ವತವಾಗಿ ಜೀವಿಸೋ ನಿರೀಕ್ಷೆನೂ ಸಿಗಲ್ಲ, ಸತ್ತು ಹೋದ್ರೆ ಮತ್ತೆ ಜೀವಿಸೋ ಅವಕಾಶನೂ ಸಿಗಲ್ಲ. ಒಂದರ್ಥದಲ್ಲಿ ಹೇಳೋದಾದ್ರೆ ಪ್ರಾಣಿಗಳು ಸತ್ತು ಹೋದಾಗ ಅವುಗಳಿಗೆ ಹೇಗೆ ಮತ್ತೆ ಜೀವಿಸೋ ಅವಕಾಶ ಸಿಗಲ್ವೋ ಹಾಗೇ ನಮ್ಮ ಪರಿಸ್ಥಿತಿನೂ ಇರುತ್ತೆ.—ಪ್ರಸಂ. 3:19; 2 ಪೇತ್ರ 2:12.

5. ನಮ್ಮ ಪ್ರೀತಿಯ ಅಪ್ಪ ಯೆಹೋವ ನಮ್ಮ ಪಾಪದ ಸಾಲ ತೀರಿಸೋಕೆ ಏನು ಮಾಡಿದ್ದಾನೆ? (ಚಿತ್ರ ನೋಡಿ.)

5 ಈಗಾಗ್ಲೇ ನೋಡಿರೋ ಯುವಕನ ಬಗ್ಗೆ ಮತ್ತೆ ಯೋಚಿಸಿ. ಅವನಿಗೆ ತುಂಬ ಸಾಲ ಇದ್ದಿದ್ರಿಂದ ಅವನ ಸಾಲನ ತೀರಿಸೋಕೆ ಒಬ್ಬ ಶ್ರೀಮಂತ ವ್ಯಕ್ತಿ ಮುಂದೆ ಬರ್ತಾನೆ. ಆಗ ಆ ಯುವಕನಿಗೆ ಹೇಗನಿಸುತ್ತೆ? ಅವನು ತುಂಬ ಖುಷಿಪಡ್ತಾನೆ, ಆ ಸಹಾಯನ ಪಡ್ಕೊಳ್ತಾನೆ ಮತ್ತು ಆ ವ್ಯಕ್ತಿಗೆ ಜೀವನಪೂರ್ತಿ ಋಣಿಯಾಗಿ ಇರ್ತಾನೆ. ಆ ಶ್ರೀಮಂತ ವ್ಯಕ್ತಿ ತರನೇ ನಮ್ಮ ಪ್ರೀತಿಯ ಅಪ್ಪ ಯೆಹೋವ ಆದಾಮನಿಂದ ನಮಗೆ ಬಂದಿರೋ ಪಾಪದ ಸಾಲ ತೀರಿಸೋಕೆ ಒಂದು ಗಿಫ್ಟನ್ನ ಕೊಟ್ಟಿದ್ದಾನೆ. ಅದ್ರ ಬಗ್ಗೆ ಯೇಸು “ದೇವರು ನಮ್ಮನ್ನ ತುಂಬ ಪ್ರೀತಿಸ್ತಾನೆ. ಅದಕ್ಕೇ ತನ್ನ ಒಬ್ಬನೇ ಮಗನನ್ನ ನಮಗೋಸ್ಕರ ಕೊಟ್ಟನು. ಯಾಕಂದ್ರೆ ಆತನ ಮೇಲೆ ನಂಬಿಕೆ ಇಡೋ ಒಬ್ಬನೂ ನಾಶವಾಗದೆ ಶಾಶ್ವತ ಜೀವ ಪಡ್ಕೊಳ್ಳಬೇಕು ಅನ್ನೋದೇ ದೇವರ ಆಸೆ” ಅಂತ ಹೇಳಿದನು. (ಯೋಹಾ. 3:16) ಈ ಗಿಫ್ಟ್‌ ನಮಗೆ ಸಿಕ್ಕಿರೋದ್ರಿಂದನೇ ಯೆಹೋವ ದೇವರ ಜೊತೆ ನಮಗೆ ಒಳ್ಳೇ ಸ್ನೇಹ-ಸಂಬಂಧ ಬೆಳೆಸ್ಕೊಳ್ಳೋಕೆ ಆಗುತ್ತೆ.

ಬಿಡುಗಡೆ ಬೆಲೆಯಿಂದ ಯೆಹೋವ ದೇವರ ಕ್ಷಮೆ ಸಿಗುತ್ತೆ ಅನ್ನೋ ಸಿಹಿಸುದ್ದಿನ ಯೇಸು ಸಾರಿದನು. (ಯೋಹಾ. 3:16) ಆಮೇಲೆ ಆತನು ಆ ಬಿಡುಗಡೆ ಬೆಲೆಯನ್ನ ಕೊಡೋಕೆ ತನ್ನ ಪ್ರಾಣವನ್ನೇ ನಮಗೋಸ್ಕರ ಕೊಟ್ಟನು (ಪ್ಯಾರ 5 ನೋಡಿ)


6. ಬೈಬಲಲ್ಲಿ ಹೇಳಿರೋ ಯಾವ ಪದಗಳ ಬಗ್ಗೆ ನಾವು ಈ ಲೇಖನದಲ್ಲಿ ನೋಡ್ತೀವಿ? ಮತ್ತು ಯಾಕೆ?

6 ಸಾಲದ ತರ ಇರೋ ನಮ್ಮ ಪಾಪಗಳನ್ನ ಕ್ಷಮಿಸೋಕೆ, ಯೆಹೋವ ಕೊಟ್ಟಿರೋ ಗಿಫ್ಟಿಂದ ಪ್ರಯೋಜನ ಪಡ್ಕೊಳ್ಳೋಕೆ ನಾವೇನು ಮಾಡಬೇಕು? ಇದಕ್ಕೆ ಉತ್ರ ತಿಳ್ಕೊಳ್ಳೋಕೆ ಬೈಬಲಲ್ಲಿ ಹೇಳಿರೋ ಶಾಂತಿ ಸಂಬಂಧ, ಪ್ರಾಯಶ್ಚಿತ್ತ, ಬಿಡುಗಡೆ ಬೆಲೆ, ಬಿಡಿಸೋಕೆ ಮತ್ತು ದೇವರು ನಮ್ಮನ್ನ ನೀತಿವಂತರಾಗಿ ನೋಡ್ತಾನೆ ಅನ್ನೋ ಪದಗಳ ಬಗ್ಗೆ ಚೆನ್ನಾಗಿ ತಿಳ್ಕೊಬೇಕು. ಹಾಗಾಗಿ ಈ ಲೇಖನದಲ್ಲಿ ನಾವು ಈ ವಿಷ್ಯಗಳ ಬಗ್ಗೆ ಚರ್ಚೆ ಮಾಡ್ತೀವಿ. ಇದ್ರ ಬಗ್ಗೆ ತಿಳ್ಕೊಂಡಾಗ ಯೆಹೋವ ನಮ್ಮನ್ನ ಕ್ಷಮಿಸೋಕೆ ಏನೆಲ್ಲಾ ಮಾಡಿದ್ದಾನೋ ಅದ್ರ ಮೇಲೆ ನಮಗೆ ಗೌರವ ಜಾಸ್ತಿ ಆಗುತ್ತೆ.

ಉದ್ದೇಶ: ಶಾಂತಿ ಸಂಬಂಧ

7. (ಎ) ಆದಾಮ ಹವ್ವ ಇನ್ನೇನನ್ನ ಕಳ್ಕೊಂಡ್ರು? (ಬಿ) ಆದಾಮ ಹವ್ವರ ಮಕ್ಕಳಾಗಿರೋ ನಮಗೆ ಯಾವುದ್ರ ಅಗತ್ಯ ಇದೆ? (ರೋಮನ್ನರಿಗೆ 5:10, 11)

7 ಆದಾಮ ಹವ್ವ ಶಾಶ್ವತವಾಗಿ ಜೀವಿಸೋ ಅವಕಾಶ ಕಳ್ಕೊಂಡಿದ್ದಷ್ಟೇ ಅಲ್ಲ, ಯೆಹೋವನ ಜೊತೆ ಇದ್ದ ಅಮೂಲ್ಯ ಸಂಬಂಧನೂ ಕಳ್ಕೊಂಡ್ರು. ಮೊದ್ಲು ಆದಾಮ ಹವ್ವ ಯೆಹೋವನ ಕುಟುಂಬದ ಭಾಗ ಆಗಿದ್ರು. (ಲೂಕ 3:38) ಆದ್ರೆ ಯೆಹೋವನ ಮಾತು ಕೇಳದೇ ಇದ್ದಿದ್ರಿಂದ ಆತನು ಅವ್ರನ್ನ ತನ್ನ ಕುಟುಂಬದಿಂದ ಹೊರಗೆ ಹಾಕಿದನು. (ಆದಿ. 3:23, 24; 4:1) ಇದಾದ್ಮೇಲೆನೇ ಅವ್ರಿಗೆ ಮಕ್ಕಳಾದ್ರು. ಆ ಮಕ್ಕಳಲ್ಲಿ ನಾವೂ ಸೇರಿದ್ದೀವಿ. ಹಾಗಾಗಿ ನಾವೆಲ್ರೂ ಯೆಹೋವನ ಜೊತೆ ಶಾಂತಿ ಸಂಬಂಧ ಬೆಳೆಸ್ಕೊಬೇಕು. (ರೋಮನ್ನರಿಗೆ 5:10, 11 ಓದಿ.) ಇನ್ನೊಂದು ಮಾತಲ್ಲಿ ಹೇಳೋದಾದ್ರೆ ನಾವು ದೇವರ ಜೊತೆ ಒಳ್ಳೇ ಫ್ರೆಂಡ್‌ಶಿಪ್‌ ಬೆಳೆಸ್ಕೊಬೇಕು. “ಶಾಂತಿ ಸಂಬಂಧ” ಅನ್ನೋ ಪದಕ್ಕೆ ಗ್ರೀಕಲ್ಲಿ “ಶತ್ರುವನ್ನ ಸ್ನೇಹಿತನಾಗಿ ಮಾಡ್ಕೊಳ್ಳೋದು” ಅನ್ನೋ ಅರ್ಥನೂ ಇದೆ ಅಂತ ಒಂದು ರೆಫರೆನ್ಸ್‌ ಹೇಳುತ್ತೆ. ಆದ್ರೆ ಸಂತೋಷದ ವಿಷ್ಯ ಏನಂದ್ರೆ ಯೆಹೋವ ದೇವರೇ ಇದನ್ನ ಮಾಡೋಕೆ ಮೊದಲನೇ ಹೆಜ್ಜೆ ತಗೊಂಡಿದ್ದಾನೆ. ಅದು ಹೇಗೆ?

ಏರ್ಪಾಡು: ಪ್ರಾಯಶ್ಚಿತ್ತ

8. ಯೆಹೋವ ಯಾವ ಏರ್ಪಾಡನ್ನ ಮಾಡಿದನು?

8 ಪಾಪಿಗಳಾಗಿರೋ ಮನುಷ್ಯರು ತನ್ನ ಜೊತೆ ಮತ್ತೆ ಸ್ನೇಹ ಬೆಳೆಸ್ಕೊಳ್ಳೋಕೆ ಯೆಹೋವ ಮಾಡಿರೋ ಏರ್ಪಾಡೇ ಪ್ರಾಯಶ್ಚಿತ್ತ. ಅಂದ್ರೆ ಆದಾಮ ಕಳ್ಕೊಂಡಿದ್ದನ್ನ ಮತ್ತೆ ಪಡ್ಕೊಳ್ಳೋಕೆ ಯೆಹೋವ ಮಾಡಿದ ಏರ್ಪಾಡೇ ಇದು. ಇದಕ್ಕೆ ಆತನು ಸರಿಸಮವಾದ ಬೆಲೆ ಕೊಡಬೇಕಿತ್ತು. ಈ “ಪ್ರಾಯಶ್ಚಿತ್ತ” ಏರ್ಪಾಡನ್ನ ನಾವು ಯೆಹೋವನ ಜೊತೆ ಸಮಾಧಾನ ಮಾಡ್ಕೊಳ್ಳೋಕೆ ಆತನು ಮಾಡ್ಕೊಟ್ಟಿರೋ ಅವಕಾಶ ಅಂತನೂ ಗ್ರೀಕ್‌ ಪವಿತ್ರ ಗ್ರಂಥ ಹೇಳುತ್ತೆ.—ರೋಮ. 3:25.

9. ಇಸ್ರಾಯೇಲ್ಯರ ಪಾಪ ಕ್ಷಮಿಸೋಕೆ ಯೆಹೋವ ಯಾವ ಏರ್ಪಾಡು ಮಾಡಿದನು?

9 ಇಸ್ರಾಯೇಲ್ಯರು ತಮ್ಮ ಪಾಪಕ್ಕೆ ಕ್ಷಮೆ ಪಡ್ಕೊಳ್ಳೋಕೆ ಮತ್ತು ಯೆಹೋವನ ಜೊತೆ ಒಳ್ಳೇ ಸ್ನೇಹ-ಸಂಬಂಧ ಬೆಳೆಸ್ಕೊಳ್ಳೋಕೆ ಯೆಹೋವ ಒಂದು ತಾತ್ಕಾಲಿಕ ಏರ್ಪಾಡು ಮಾಡಿದನು. ಅದೇನಂದ್ರೆ ಇಸ್ರಾಯೇಲ್ಯರು ಪ್ರತಿ ವರ್ಷ ಒಂದು ವಿಶೇಷ ಹಬ್ಬ ಮಾಡಬೇಕಿತ್ತು. ಅದನ್ನ ಪ್ರಾಯಶ್ಚಿತ್ತ ದಿನ ಅಂತ ಕರೀತಿದ್ರು. ಆ ದಿನದಲ್ಲಿ ಮಹಾ ಪುರೋಹಿತ ಜನ್ರ ಪರವಾಗಿ ಪ್ರಾಣಿ ಬಲಿ ಕೊಡ್ತಿದ್ದ. ಆದ್ರೆ ಬರೀ ಪ್ರಾಣಿಗಳ ಬಲಿಯಿಂದ ಮನುಷ್ಯರ ಪಾಪನ ಪೂರ್ತಿಯಾಗಿ ತೆಗೆದುಹಾಕೋಕೆ ಆಗ್ತಿರಲಿಲ್ಲ. ಯಾಕಂದ್ರೆ ಪ್ರಾಣಿಗಳು ಮನುಷ್ಯರಿಗೆ ಸರಿಸಮ ಆಗಿರಲಿಲ್ಲ. ಆದ್ರೂ ಇಸ್ರಾಯೇಲ್ಯರು ಪಶ್ಚಾತ್ತಾಪಪಟ್ಟು ಯೆಹೋವ ಹೇಳಿದ ಹಾಗೇ ಬಲಿಗಳನ್ನ ಕೊಟ್ಟಾಗ ಆತನು ಅವ್ರ ಪಾಪಗಳನ್ನ ಕ್ಷಮಿಸೋಕೆ ರೆಡಿ ಇರ್ತಿದ್ದನು. (ಇಬ್ರಿ. 10:1-4) ಅಷ್ಟೇ ಅಲ್ಲ, ಈ ಏರ್ಪಾಡು ಮತ್ತು ಅವರು ಯಾವಾಗ್ಲೂ ಕೊಡ್ತಿದ್ದ ಪಾಪ ಪರಿಹಾರಕ ಬಲಿಗಳು ಇಸ್ರಾಯೇಲ್ಯರಿಗೆ ತಾವು ಪಾಪಿಗಳಾಗಿದ್ದೀವಿ ಅನ್ನೋದನ್ನ ನೆನಪು ಹುಟ್ಟಿಸ್ತಾ ಇತ್ತು ಮತ್ತು ತಮ್ಮ ಪಾಪನ ಪೂರ್ತಿಯಾಗಿ ತೆಗೆದು ಹಾಕೋಕೆ ಶಾಶ್ವತ ಪರಿಹಾರ ಬೇಕು ಅನ್ನೋದನ್ನೂ ಅರ್ಥಮಾಡಿಸ್ತಿತ್ತು.

10. ಜನ್ರ ಪಾಪಗಳನ್ನ ಕ್ಷಮಿಸೋಕೆ ಯೆಹೋವ ಶಾಶ್ವತವಾಗಿ ಯಾವ ಏರ್ಪಾಡನ್ನ ಮಾಡಿದನು?

10 ಜನ್ರ ಪಾಪ ತೆಗೆದು ಹಾಕೋಕೆ ಯೆಹೋವ ಶಾಶ್ವತವಾಗಿ ಒಂದು ಏರ್ಪಾಡನ್ನ ಮಾಡಿದನು. ಅದೇನಂದ್ರೆ ಯೆಹೋವ ತನ್ನ ಪ್ರೀತಿಯ ಮಗನಾದ ಯೇಸು ‘ತುಂಬ ಜನ್ರ ಪಾಪಗಳನ್ನ ಹೊತ್ಕೊಳ್ಳೋಕೆ ಒಂದೇ ಒಂದು ಸಲ ಅರ್ಪಿಸೋಕೆ’ ಏರ್ಪಾಡನ್ನ ಮಾಡಿದನು. (ಇಬ್ರಿ. 9:28) ಅಷ್ಟೇ ಅಲ್ಲ ಯೇಸುನೂ “ತುಂಬ ಜನ್ರಿಗಾಗಿ ತನ್ನ ಪ್ರಾಣವನ್ನ ಬಿಡುಗಡೆಯ ಬೆಲೆಯಾಗಿ” ಕೊಟ್ಟನು. (ಮತ್ತಾ. 20:28) ಹಾಗಾದ್ರೆ ಬಿಡುಗಡೆ ಬೆಲೆ ಅಂದ್ರೇನು?

ಬೆಲೆ: ಬಿಡುಗಡೆ ಬೆಲೆ

11. (ಎ) ಬಿಡುಗಡೆ ಬೆಲೆ ಯಾಕೆ ಕೊಡಬೇಕಿತ್ತು? (ಬಿ) ಯಾರಿಂದ ಮಾತ್ರ ಈ ಬಿಡುಗಡೆ ಬೆಲೆ ಕೊಡೋಕೆ ಆಗ್ತಿತ್ತು?

11 ನಮ್ಮ ಪಾಪಕ್ಕೆ ಪ್ರಾಯಶ್ಚಿತ್ತ ಆಗಬೇಕಂದ್ರೆ, ಯೆಹೋವನ ಜೊತೆ ಶಾಂತಿ ಸಂಬಂಧ ಬೆಳೆಸ್ಕೊಬೇಕಂದ್ರೆ ಬೆಲೆ ಕಟ್ಟಬೇಕಾಗಿತ್ತು. ಆ ಬೆಲೆನೇ ಬಿಡುಗಡೆ ಬೆಲೆ ಅಂತ ಬೈಬಲ್‌ ಹೇಳುತ್ತೆ. (1 ತಿಮೊ. 2:6) ಅದನ್ನ ಕೊಡೋಕೆ ಯೆಹೋವ ತೀರ್ಮಾನ ಮಾಡಿದನು. ಆದಾಮ ಕಳ್ಕೊಂಡಿದ್ದನ್ನ ಮತ್ತೆ ಮನುಷ್ಯರು ಪಡ್ಕೊಬೇಕಂದ್ರೆ ಎಂಥ ಬೆಲೆ ಕೊಡಬೇಕಿತ್ತು? ಆದಾಮ ಹವ್ವ ಏನು ಕಳ್ಕೊಂಡ್ರು ಅಂತ ಸ್ವಲ್ಪ ನೆನಪು ಮಾಡ್ಕೊಳ್ಳಿ. ಅವರು ಪರಿಪೂರ್ಣ ಜೀವವನ್ನ ಮತ್ತು ಶಾಶ್ವತವಾಗಿ ಜೀವಿಸೋ ಅವಕಾಶನ ಕಳ್ಕೊಂಡ್ರು. ಹಾಗಾಗಿ ಅವರು ಕಳ್ಕೊಂಡಿದ್ದಕ್ಕೆ ಬದಲಿಯಾಗಿ ಸರಿಸಮವಾದ ಬೆಲೆ ಕೊಡಬೇಕಿತ್ತು. ಇದನ್ನ ಕೊಡೋ ವ್ಯಕ್ತಿ 1) ಪರಿಪೂರ್ಣನಾಗಿರಬೇಕಿತ್ತು, 2) ಅವನಿಗೆ ಈ ಭೂಮಿ ಮೇಲೆ ಶಾಶ್ವತವಾಗಿ ಜೀವಿಸೋ ಸಾಮರ್ಥ್ಯ ಇರಬೇಕಿತ್ತು, 3) ಅವನು ನಮಗೋಸ್ಕರ ತನ್ನ ಜೀವವನ್ನ ತ್ಯಾಗ ಮಾಡೋಕೆ ರೆಡಿ ಇರಬೇಕಿತ್ತು. ಇಂಥ ಒಬ್ಬ ವ್ಯಕ್ತಿ ತನ್ನ ಜೀವವನ್ನ ಕೊಟ್ರೆ ಮಾತ್ರ ನಾವು ಕಳ್ಕೊಂಡಿದ್ದನ್ನ ಮತ್ತೆ ಪಡ್ಕೊಳ್ಳೋಕೆ ಆಗ್ತಿತ್ತು.

12. ಬಿಡುಗಡೆ ಬೆಲೆ ಕೊಡೋಕೆ ಯೇಸುನೇ ಸರಿಯಾದ ವ್ಯಕ್ತಿ ಅಂತ ಯಾಕೆ ಹೇಳಬಹುದು?

12 ಯೇಸುನೇ ಈ ಬಿಡುಗಡೆ ಬೆಲೆ ಸರಿಯಾದ ವ್ಯಕ್ತಿ ಅಂತ ಹೇಳೋಕೆ ಮೂರು ಕಾರಣಗಳಿವೆ. (1) ಆತನು ಪರಿಪೂರ್ಣನಾಗಿದ್ದ, “ಯಾವ ಪಾಪನೂ ಮಾಡಲಿಲ್ಲ” (1 ಪೇತ್ರ 2:22) (2) ಆತನು ಪರಿಪೂರ್ಣನಾಗಿ ಇರೋದ್ರಿಂದ ಭೂಮಿಯಲ್ಲಿ ಶಾಶ್ವತವಾಗಿ ಬದುಕೋ ಸಾಮರ್ಥ್ಯ ಆತನಿಗಿತ್ತು. (3) ಎಲ್ರಿಗೋಸ್ಕರ ತನ್ನ ಜೀವ ತ್ಯಾಗ ಮಾಡೋಕೆ ಆತನು ರೆಡಿ ಇದ್ದ. (ಇಬ್ರಿ. 10:9, 10) ಪಾಪ ಮಾಡೋ ಮುಂಚೆ ಆದಾಮ ಹೇಗೆ ಪರಿಪೂರ್ಣನಾಗಿದ್ನೋ ಅದೇ ತರ ಯೇಸುನೂ ಒಬ್ಬ ಪರಿಪೂರ್ಣ ವ್ಯಕ್ತಿ ಆಗಿದ್ದ. ಈ ಅರ್ಥದಲ್ಲಿ ಆದಾಮ ಮತ್ತು ಯೇಸು ಸಮಾನರಾಗಿದ್ರು. (1 ಕೊರಿಂ. 15:45) ಹಾಗಾಗಿ ಆದಾಮ ಏನು ಕಳ್ಕೊಂಡನೋ ಅದನ್ನ ಮತ್ತೆ ಪಡ್ಕೊಳ್ಳೋಕೆ ಯೇಸು ತನ್ನ ಜೀವ ತ್ಯಾಗ ಮಾಡಿ ಸರಿಯಾದ ಬೆಲೆ ಕೊಟ್ಟ. (ರೋಮ. 5:19) ಹೀಗೆ ಯೇಸು “ಕೊನೇ ಆದಾಮ” ಆದ. ಯೇಸು “ಎಲ್ಲ ಕಾಲಕ್ಕೂ ಒಂದೇ” ಬಲಿ ಅರ್ಪಿಸಿದ್ರಿಂದ ಆದಾಮ ಕಳ್ಕೊಂಡಿದ್ದನ್ನ ಮತ್ತೆ ಪಡ್ಕೊಳ್ಳೋಕೆ ಇನ್ನೊಬ್ಬ ಪರಿಪೂರ್ಣ ವ್ಯಕ್ತಿಯ ಅಗತ್ಯ ಇರ್ಲಿಲ್ಲ.—ಇಬ್ರಿ. 7:27; 10:12.

13. ಪ್ರಾಯಶ್ಚಿತ್ತಕ್ಕೂ ಬಿಡುಗಡೆ ಬೆಲೆಗೂ ಏನು ವ್ಯತ್ಯಾಸ?

13 ಪ್ರಾಯಶ್ಚಿತ್ತಕ್ಕೂ ಬಿಡುಗಡೆ ಬೆಲೆಗೂ ಏನು ವ್ಯತ್ಯಾಸ? ಪ್ರಾಯಶ್ಚಿತ್ತ ಅಂದ್ರೆ ಮನುಷ್ಯರು ತನ್ನ ಜೊತೆ ಮತ್ತೆ ಸ್ನೇಹ-ಸಂಬಂಧ ಬೆಳೆಸ್ಕೊಳ್ಳೋಕೆ ಯೆಹೋವ ತಗೊಂಡಿರೋ ಹೆಜ್ಜೆ. ಬಿಡುಗಡೆ ಬೆಲೆ ಅಂದ್ರೆ ಮನುಷ್ಯರ ಪಾಪಕ್ಕೆ ಪ್ರಾಯಶ್ಚಿತ್ತ ಮಾಡೋಕೆ ಕೊಟ್ಟ ಬೆಲೆ. ನಮ್ಮ ಪಾಪಗಳಿಗೋಸ್ಕರ ಬೆಲೆ ಕೊಡೋಕೆ ಯೇಸು ತನ್ನ ಪರಿಪೂರ್ಣ ಜೀವವನ್ನ ತ್ಯಾಗ ಮಾಡಿದ.—ಎಫೆ. 1:7; ಇಬ್ರಿ. 9:14.

ಪ್ರಯೋಜನ: ಯೆಹೋವ ನಮ್ಮನ್ನ ಬಿಡಿಸ್ತಾನೆ ಮತ್ತು ನೀತಿವಂತರಾಗಿ ನೋಡ್ತಾನೆ

14. ನಾವೀಗ ಯಾವುದ್ರ ಬಗ್ಗೆ ತಿಳ್ಕೊತೀವಿ ಮತ್ತು ಯಾಕೆ?

14 ನಾವೀಗ ಬೈಬಲಲ್ಲಿರೋ ಎರಡು ಪದಗಳ ಬಗ್ಗೆ ನೋಡೋಣ. ಇದನ್ನ ವಿವರವಾಗಿ ಚರ್ಚೆ ಮಾಡೋಣ. ಆಗ ಯೆಹೋವ ನಮ್ಮನ್ನ ಕ್ಷಮಿಸೋದ್ರಿಂದ ಸಿಗೋ ಪ್ರಯೋಜಗಳು ಏನು ಅಂತ ಚೆನ್ನಾಗಿ ಅರ್ಥ ಆಗುತ್ತೆ.

15-16. (ಎ) “ಬಿಡುಗಡೆ” ಬಗ್ಗೆ ಬೈಬಲ್‌ ಏನು ಹೇಳುತ್ತೆ? (ಬಿ) ಪಾಪ ಮತ್ತು ಮರಣದಿಂದ ಬಿಡುಗಡೆ ಸಿಗುತ್ತೆ ಅಂತ ಗೊತ್ತಾದಾಗ ನಿಮಗೆ ಹೇಗೆ ಅನಿಸ್ತು?

15 ಬಿಡುಗಡೆ ಬೆಲೆ ಕೊಟ್ಟಿದ್ರಿಂದ ನಮ್ಮನ್ನ ಬಿಡಿಸಕಾಯ್ತು ಅಂತ ಬೈಬಲ್‌ ಹೇಳುತ್ತೆ. ಅದಕ್ಕೇ ಅಪೊಸ್ತಲ ಪೇತ್ರ “ನಿಮ್ಮ ಪೂರ್ವಜರ ಸುಳ್ಳು ಆಚಾರವಿಚಾರಗಳನ್ನ ನೀವು ಮಾಡ್ತಾ ಇದ್ರಿ. ಆದ್ರೆ ಅದ್ರಿಂದ ನಿಮಗೆ ಬಿಡುಗಡೆ ಸಿಕ್ತು. ಆ ಬಿಡುಗಡೆ ನಾಶವಾಗೋ ಬೆಳ್ಳಿಬಂಗಾರದಿಂದ ಸಿಗಲಿಲ್ಲ ಅಂತ ನಿಮಗೆ ಗೊತ್ತು. ಬದಲಿಗೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದ ಬಿಡುಗಡೆ ಸಿಕ್ತು. ಅದು ಯಾವ ಕಳಂಕ, ಕುಂದುಕೊರತೆ ಇಲ್ಲದ ಕುರಿಮರಿಯ ರಕ್ತ” ಅಂತ ಹೇಳಿದ.—1 ಪೇತ್ರ 1:18, 19.

16 ಬಿಡುಗಡೆ ಬೆಲೆ ಕೊಟ್ಟಿದ್ರಿಂದ ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಿರೋ ಪಾಪ ಮತ್ತು ಮರಣದಿಂದ ನಮಗೆ ಬಿಡುಗಡೆ ಸಿಗುತ್ತೆ. (ರೋಮ. 5:21) ಯೇಸು ನಮಗೋಸ್ಕರ ರಕ್ತ ಸುರಿಸಿದ್ರಿಂದ ನಮಗೆ ಈ ಬಿಡುಗಡೆ ಸಿಕ್ಕಿದೆ. ಅದಕ್ಕಾಗಿ ನಾವು ಯೆಹೋವನಿಗೆ ಮತ್ತು ಯೇಸುಗೆ ಯಾವಾಗ್ಲೂ ಋಣಿಗಳಾಗಿರಬೇಕು.—1 ಕೊರಿಂ. 15:22.

17-18. (ಎ) ದೇವರು ನಮ್ಮನ್ನ ನೀತಿವಂತರಾಗಿ ನೋಡ್ತಾನೆ ಅನ್ನೋದ್ರ ಅರ್ಥ ಏನು? (ಬಿ) ಇದ್ರಿಂದ ನಮಗೆ ಏನು ಪ್ರಯೋಜನ ಆಗುತ್ತೆ?

17 ಯೆಹೋವ ತನ್ನ ಸೇವಕರನ್ನ ನೀತಿವಂತರಾಗಿ ನೋಡ್ತಾನೆ ಅಂತ ಬೈಬಲ್‌ ಹೇಳುತ್ತೆ. ಇದರರ್ಥ ಏನು? ನಾವು ಮಾಡಿರೋ ಪಾಪಕ್ಕೆ ಬೆಲೆ ಕೊಡಬೇಕು ಅಂತ ಯೆಹೋವ ನಮ್ಮಿಂದ ಕೇಳ್ಕೊಳ್ಳಲ್ಲ. ಹಾಗಂತ ಯೆಹೋವ ತನ್ನ ನೀತಿನ್ಯಾಯನ ಬಿಟ್ಟುಬಿಟ್ಟಿದ್ದಾನೆ ಅಂತನೂ ಅರ್ಥ ಅಲ್ಲ. ಯೆಹೋವ ನಮ್ಮನ್ನ ನೀತಿವಂತರು ಅಂತ ನೋಡೋದು ನಾವೇನೋ ಸಾಧನೆ ಮಾಡಿ ಅದನ್ನ ಗಳಿಸಿದ್ದೀವಿ ಅಂತನೂ ಅಲ್ಲ, ಅಥವಾ ನಮ್ಮ ಪಾಪಕ್ಕೆ ಆತನು ಒಪ್ಪಿಗೆ ಕೊಟ್ಟಿದ್ದಾನೆ, ಅದನ್ನ ಪರವಾಗಿಲ್ಲ ಅಂತ ಬಿಟ್ಟುಬಿಟ್ಟಿದ್ದಾನೆ ಅಂತನೂ ಅಲ್ಲ. ಬದ್ಲಿಗೆ ಆತನು ಮಾಡಿರೋ ಪ್ರಾಯಶ್ಚಿತ್ತದ ಏರ್ಪಾಡು ಮತ್ತು ಬಿಡುಗಡೆ ಬೆಲೆ ಮೇಲೆ ನಾವು ನಂಬಿಕೆ ಇಡುವಾಗ ನಮ್ಮ ಪಾಪಗಳನ್ನ ಕ್ಷಮಿಸ್ತಾನೆ.—ರೋಮ. 3:24; ಗಲಾ. 2:16.

18 ದೇವರು ನಮ್ಮನ್ನ ನೀತಿವಂತರು ಅಂತ ನೋಡೋದ್ರಿಂದ ಏನು ಪ್ರಯೋಜನ ಆಗುತ್ತೆ? ದೇವರು ನೀತಿವಂತರಾಗಿ ನೋಡೋ ಕೆಲವ್ರಿಗೆ ಆತನ ಮಕ್ಕಳಾಗೋ ಮತ್ತು ಯೇಸು ಜೊತೆ ಸ್ವರ್ಗದಲ್ಲಿ ಆಳೋ ಸುಯೋಗ ಸಿಕ್ಕಿದೆ. (ತೀತ 3:7; 1 ಯೋಹಾ. 3:1) ಯೆಹೋವ ಅವ್ರ ಪಾಪಗಳನ್ನೆಲ್ಲ ಕ್ಷಮಿಸಿ ಅವರು ತಪ್ಪೇ ಮಾಡಿಲ್ಲ ಅನ್ನೋ ತರ ನೋಡೋದ್ರಿಂದ ಯೇಸು ಜೊತೆ ಆಳೋಕೆ ಅವ್ರಿಗೆ ಯೋಗ್ಯತೆ ಇದೆ. (ರೋಮ. 8:1, 2, 30) ದೇವರು ನೀತಿವಂತರಾಗಿ ನೋಡೋ ಇನ್ನೂ ಕೆಲವ್ರಿಗೆ ಭೂಮಿ ಮೇಲೆ ಶಾಶ್ವತವಾಗಿ ಜೀವಿಸೋ ನಿರೀಕ್ಷೆ ಕೊಟ್ಟಿದ್ದಾನೆ. ಅವ್ರ ಪಾಪಗಳನ್ನ ಆತನು ಕ್ಷಮಿಸೋದ್ರಿಂದ ಅವರು ಆತನ ಸ್ನೇಹಿತರಾಗೋಕೆ ಆಗುತ್ತೆ. (ಯಾಕೋ. 2:21-23) ಹರ್ಮಗೆದ್ದೋನನ್ನ ಪಾರಾಗೋ ದೊಡ್ಡ ಗುಂಪಿಗೆ ಸಾವೇ ಇಲ್ಲದೆ ಶಾಶ್ವತವಾಗಿ ಜೀವಿಸೋ ಅವಕಾಶ ಸಿಗುತ್ತೆ. (ಯೋಹಾ. 11:26) ಅಷ್ಟೇ ಅಲ್ಲ ಈಗಾಗ್ಲೇ ತೀರಿಹೋಗಿರೋ “ನೀತಿವಂತರು ಮತ್ತು ಅನೀತಿವಂತರು” ಮತ್ತೆ ಜೀವಿಸೋ ಅವಕಾಶ ಪಡ್ಕೊಳ್ತಾರೆ. (ಅ. ಕಾ. 24:15; ಯೋಹಾ. 5:28, 29) ಕೊನೆಗೆ ಭೂಮಿಯಲ್ಲಿ ದೇವರ ಮಾತು ಕೇಳೋ ಎಲ್ಲಾ ಜನ್ರು “ದೇವರ ಮಕ್ಕಳಿಗೆ ಸಿಗೋ ಮಹಿಮೆಯ ಸ್ವಾತಂತ್ರ್ಯ” ಪಡಿತಾರೆ. (ರೋಮ. 8:21) ಹೀಗೆ ನಾವೆಲ್ರೂ ಪರಿಪೂರ್ಣರಾಗಿ ದೇವರ ಮಕ್ಕಳು ಅಂತ ಕರೆಸ್ಕೊಳ್ಳೋದು ಒಂದು ದೊಡ್ಡ ಸುಯೋಗ ಅಲ್ವಾ!

19. ನಮ್ಮ ಸನ್ನಿವೇಶ ಈಗ ಹೇಗೆ ಬದಲಾಗಿದೆ? (“ ಯೆಹೋವನ ಕ್ಷಮೆ” ಅನ್ನೋ ಚೌಕ ನೋಡಿ.)

19 ಒಂದನೇ ಪ್ಯಾರದಲ್ಲಿ ನೋಡಿದ ಆ ಯುವಕ ನಿಮಗೆ ನೆನಪಿದ್ದಾನಾ? ದೊಡ್ಡ ಸಾಲದ ಹೊರೆ ಅವನ ಮೇಲಿತ್ತು, ಎಲ್ಲವನ್ನ ಅವನು ಕಳ್ಕೊಂಡಿದ್ದ. ನಾವು ಒಂದು ಸಮಯದಲ್ಲಿ ಅವನ ತರಾನೇ ಇದ್ವಿ. ಆದ್ರೆ ಈ ಕಷ್ಟದಿಂದ ನಮ್ಮನ್ನ ಮೇಲೆತ್ತಿದ್ದು ಯೆಹೋವನೇ. ಹಾಗಾಗಿ ಆತನಿಗೆ ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಅದು ಕಮ್ಮಿನೇ. ಯೆಹೋವ ಪ್ರಾಯಶ್ಚಿತ್ತದ ಏರ್ಪಾಡು ಮಾಡಿದ್ರಿಂದ, ಯೇಸು ಬಿಡುಗಡೆ ಬೆಲೆ ಕೊಟ್ಟಿದ್ರಿಂದ ನಮ್ಮ ಸನ್ನಿವೇಶ ಈಗ ಬದಲಾಗಿದೆ. ನಾವು ಯೇಸು ಕ್ರಿಸ್ತನ ಮೇಲೆ ನಂಬಿಕೆ ಇಡೋದ್ರಿಂದ ನಮಗೆ ಪಾಪದಿಂದ ಮತ್ತು ಮರಣದಿಂದ ಬಿಡುಗಡೆ ಸಿಗುತ್ತೆ. ಅಷ್ಟೇ ಅಲ್ಲ, ಯೆಹೋವ ನಮ್ಮ ಪಾಪಗಳನ್ನ ಕ್ಷಮಿಸಿ ನಾವು ಪಾಪನೇ ಮಾಡಿಲ್ಲ ಅನ್ನೋ ಅನ್ನೋ ನೋಡ್ತಾನೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪ್ರೀತಿಯ ಅಪ್ಪ ಆಗಿರೋ ಯೆಹೋವನ ಜೊತೆ ಈಗ ನಮಗೆ ಒಳ್ಳೇ ಸ್ನೇಹ-ಸಂಬಂಧ ಬೆಳೆಸ್ಕೊಳ್ಳೋಕೆ ಆಗ್ತಿದೆ.

20. ಮುಂದಿನ ಲೇಖನದಲ್ಲಿ ನಾವೇನು ಕಲಿತೀವಿ?

20 ಯೆಹೋವ ಮತ್ತು ಯೇಸು ನಮಗೋಸ್ಕರ ಮಾಡಿದ್ದನ್ನ ಯೋಚಿಸುವಾಗ ನಾವು ಯಾವಾಗ್ಲೂ ಅವ್ರಿಗೆ ಋಣಿಗಳಾಗಿರಬೇಕು ಅಂತ ಅನಿಸುತ್ತೆ. (2 ಕೊರಿಂ. 5:15) ಅವ್ರ ಸಹಾಯ ಇಲ್ಲದೇ ಇದ್ದಿದ್ರೆ ನಮಗೆ ನಿರೀಕ್ಷೆನೇ ಇರ್ತಿರಲಿಲ್ಲ. ಆದ್ರೆ ಯೆಹೋವನ ಕ್ಷಮೆ ಪಡ್ಕೊಂಡಿರೋದ್ರಿಂದ ಪ್ರತಿಯೊಬ್ರಿಗೂ ಏನು ಪ್ರಯೋಜನ ಆಗುತ್ತೆ? ಅದನ್ನ ಮುಂದಿನ ಲೇಖನದಲ್ಲಿ ನೋಡೋಣ.

ಗೀತೆ 107 ಯೆಹೋವನ ಅಪ್ಪಟ ಪ್ರೀತಿ