ಅಧ್ಯಯನ ಲೇಖನ 7
ಗೀತೆ 17 “ನನಗೆ ಮನಸ್ಸಿದೆ”
ಯೆಹೋವನ ಕ್ಷಮೆಯಿಂದ ಸಿಗೋ ಪ್ರಯೋಜನ
“ನೀನು . . . ನಿಜವಾಗ್ಲೂ ಕ್ಷಮಿಸ್ತೀಯ.”—ಕೀರ್ತ. 130:4.
ಈ ಲೇಖನದಲ್ಲಿ ಏನಿದೆ?
ಯೆಹೋವ ನಮ್ಮನ್ನ ಹೇಗೆ ಕ್ಷಮಿಸ್ತಾನೆ ಅಂತ ಅರ್ಥ ಮಾಡ್ಕೊಳ್ಳೋಕೆ ಬೈಬಲಲ್ಲಿ ಚಿಕ್ಕ ಚಿಕ್ಕ ಉದಾಹರಣೆಗಳನ್ನ ಕೊಡಲಾಗಿದೆ. ಅದನ್ನ ಅರ್ಥ ಮಾಡ್ಕೊಂಡಾಗ ನಾವು ಯೆಹೋವನಿಗೆ ಇನ್ನೂ ಋಣಿಗಳಾಗಿ ಇರ್ತೀವಿ.
1. ಜನ್ರು ‘ನಾನ್ ನಿನ್ನನ್ನ ಕ್ಷಮಿಸಿದ್ದೀನಿ’ ಅಂತ ಹೇಳುವಾಗ ಅದನ್ನ ಅರ್ಥ ಮಾಡ್ಕೊಳ್ಳೋಕೆ ಯಾಕೆ ಕಷ್ಟ ಆಗುತ್ತೆ?
ನೀವು ಯಾರಿಗೆ ನೋವು ಮಾಡಿದ್ರೋ ಅವ್ರೇ ನಿಮ್ಮ ಹತ್ರ ಬಂದು ‘ನಾನ್ ನಿಮ್ಮನ್ನ ಕ್ಷಮಿಸಿದ್ದೀನಿ’ ಅಂತ ಹೇಳಿದಾಗ ನಿಮಗೆಷ್ಟು ನೆಮ್ಮದಿ ಆಗುತ್ತೆ ಅಲ್ವಾ! ಆದ್ರೆ ‘ನಾನ್ ನಿಮ್ಮನ್ನ ಕ್ಷಮಿಸಿದ್ದೀನಿ’ ಅಂತ ಅವರು ಹೇಳಿದ್ರ ಅರ್ಥ ಏನು? ‘ನಾವು ಈಗ್ಲೂ ಒಳ್ಳೇ ಫ್ರೆಂಡ್ಸ್ ಆಗಿ ಇರ್ತೀವಿ’ ಅನ್ನೋ ಅರ್ಥದಲ್ಲಿ ಹೇಳ್ತಿದ್ದಾರಾ? ಅಥವಾ ‘ಈ ವಿಷ್ಯನ ನಾವಿನ್ನು ಮಾತಾಡೋದೇ ಬೇಡ’ ಅನ್ನೋ ಅರ್ಥದಲ್ಲಿ ಹೇಳ್ತಿದ್ದಾರಾ? ಜನ್ರು ‘ಕ್ಷಮಿಸಿದ್ದೀನಿ’ ಅಂತ ಹೇಳುವಾಗ ಅದಕ್ಕೆ ಬೇರೆ ಬೇರೆ ಅರ್ಥ ಇರುತ್ತೆ. ಹಾಗಾಗಿ ಅದನ್ನ ಅರ್ಥ ಮಾಡ್ಕೊಳ್ಳೋಕೆ ನಮಗೆ ಕಷ್ಟ ಆಗುತ್ತೆ.
2. ಯೆಹೋವ ನಮ್ಮನ್ನ ಕ್ಷಮಿಸೋದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ? (ಪಾದಟಿಪ್ಪಣಿ ನೋಡಿ.)
2 ಅಪರಿಪೂರ್ಣರಾಗಿರೋ ನಮ್ಮನ್ನ ಯೆಹೋವ ಕ್ಷಮಿಸೋದಕ್ಕೂ ನಾವು ಬೇರೆಯವ್ರನ್ನ ಕ್ಷಮಿಸೋದಕ್ಕೂ ತುಂಬಾನೇ ವ್ಯತ್ಯಾಸ ಇದೆ. ಯೆಹೋವ ಕ್ಷಮಿಸೋ ತರ ನಾವ್ಯಾರೂ ಕ್ಷಮಿಸೋಕೆ ಆಗಲ್ಲ. ಅದಕ್ಕೆ ಕೀರ್ತನೆಗಾರ “ನೀನು ಜನ್ರನ್ನ ನಿಜವಾಗ್ಲೂ ಕ್ಷಮಿಸ್ತೀಯ, ಹಾಗಾಗಿ ಅವ್ರ ಭಯಭಕ್ತಿಗೆ ಯೋಗ್ಯನಾಗಿದ್ದೀಯ” ಅಂತ ಹೇಳಿದ. a (ಕೀರ್ತ. 130:4) ಹೌದು ಯೆಹೋವ ದೇವರು ನಮ್ಮನ್ನ ‘ನಿಜವಾಗ್ಲೂ ಕ್ಷಮಿಸ್ತಾನೆ’. ನಿಜವಾಗ್ಲೂ ಕ್ಷಮಿಸೋದು ಅಂದ್ರೆ ಏನು ಅಂತಾನೂ ನಮಗೆ ತೋರಿಸ್ಕೊಟ್ಟಿದ್ದಾನೆ. ಹಾಗಾಗಿ ಬೈಬಲ್ ಬರಹಗಾರರು ಕೆಲವು ವಚನಗಳಲ್ಲಿ ಕ್ಷಮಿಸೋದು ಅನ್ನೋದಕ್ಕೆ ಒಂದು ಹೀಬ್ರು ಪದವನ್ನ ಬಳಸಿದ್ದಾರೆ. ಇದನ್ನ, ಮನುಷ್ಯರು ಕ್ಷಮಿಸೋದಕ್ಕಲ್ಲ ಯೆಹೋವ ಕ್ಷಮಿಸೋದಕ್ಕೆ ಮಾತ್ರ ಬಳಸಿದ್ದಾರೆ.
3. ನಾವು ಕ್ಷಮಿಸೋದಕ್ಕೂ ಯೆಹೋವ ಕ್ಷಮಿಸೋದಕ್ಕೂ ಏನು ವ್ಯತ್ಯಾಸ? (ಯೆಶಾಯ 55:6, 7)
3 ಯೆಹೋವ ಒಬ್ಬ ವ್ಯಕ್ತಿಯ ಪಾಪನ ಕ್ಷಮಿಸಿದಾಗ ಆ ಪಾಪನ ಆತನು ಪೂರ್ತಿಯಾಗಿ ಅಳಿಸಿಹಾಕ್ತಾನೆ. ಅಷ್ಟೇ ಅಲ್ಲ, ಆತನ ಜೊತೆ ಒಳ್ಳೇ ಸಂಬಂಧನ ಮತ್ತೆ ಬೆಳೆಸ್ಕೊಳ್ಳೋಕೆ ಸಹಾಯ ಮಾಡ್ತಾನೆ. ಈ ತರ ಯೆಹೋವ ನಮ್ಮನ್ನ ಪೂರ್ತಿಯಾಗಿ ಮತ್ತು ಉದಾರವಾಗಿ ಕ್ಷಮಿಸ್ತಾನೆ. (ಯೆಶಾಯ 55:6, 7 ಓದಿ) ಇದಕ್ಕೆ ನಾವು ಆತನಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ.
4. ಕ್ಷಮಿಸೋದು ಹೇಗೆ ಅಂತ ಅರ್ಥ ಮಾಡ್ಕೊಳ್ಳೋಕೆ ಯೆಹೋವ ನಮಗೆ ಹೇಗೆ ಸಹಾಯ ಮಾಡ್ತಾನೆ?
4 ಯೆಹೋವ ನಮ್ಮನ್ನ ಕ್ಷಮಿಸೋ ರೀತಿ ಬೇರೆ ಆಗಿದ್ರೂ ಅಪರಿಪೂರ್ಣರಾಗಿರೋ ನಮಗೆ ಅದನ್ನ ಅರ್ಥ ಮಾಡ್ಕೊಳ್ಳೋಕೆ ಆಗುತ್ತೆ. ಅದಕ್ಕಂತಾನೇ ಚಿಕ್ಕ ಚಿಕ್ಕ ಉದಾಹರಣೆಗಳನ್ನ ಬೈಬಲಲ್ಲಿ ಬಳಸಲಾಗಿದೆ. ಅದ್ರಲ್ಲಿ ಕೆಲವು ಉದಾಹರಣೆಗಳ ಬಗ್ಗೆ ಈ ಲೇಖನದಲ್ಲಿ ನಾವು ಕಲಿತೀವಿ. ನಾವು ಅದ್ರ ಬಗ್ಗೆ ತಿಳ್ಕೊಳ್ಳುವಾಗ ಯೆಹೋವ ಹೇಗೆ ನಮ್ಮ ಪಾಪನ ತೆಗೆದುಹಾಕ್ತಾನೆ ಮತ್ತು ಪಾಪದಿಂದ ಆತನ ಜೊತೆ ಹಾಳಾಗಿರೋ ಸಂಬಂಧನ ಹೇಗೆ ಸರಿ ಮಾಡ್ತಾನೆ ಅಂತ ಗೊತ್ತಾಗುತ್ತೆ. ಆಗ ನಮ್ಮ ಪ್ರೀತಿಯ ಅಪ್ಪ ಯೆಹೋವನಿಗೆ ನಾವಿನ್ನೂ ಹತ್ರ ಆಗಬೇಕು ಅಂತ ಅನಿಸುತ್ತೆ.
ಯೆಹೋವ ನಮ್ಮ ಪಾಪನ ತೆಗೆದುಹಾಕ್ತಾನೆ
5. ಯೆಹೋವ ನಮ್ಮ ಪಾಪಗಳನ್ನ ಕ್ಷಮಿಸಿದಾಗ ಏನಾಗುತ್ತೆ?
5 ನಮ್ಮ ಪಾಪ ಭಾರವಾದ ಹೊರೆ ತರ ಇದೆ ಅಂತ ಬೈಬಲ್ ಹೇಳುತ್ತೆ. ಅದಕ್ಕೆ ದಾವೀದ ತಾನು ಮಾಡಿದ ಪಾಪದ ಬಗ್ಗೆ “ನನ್ನ ತಪ್ಪುಗಳು ನನ್ನನ್ನ ಮುಳುಗಿಸಿಬಿಟ್ಟಿದೆ, ಅದು ಭಾರವಾದ ಹೊರೆ ತರ ಇದೆ, ನನ್ನಿಂದ ಹೊರಕ್ಕಾಗ್ತಿಲ್ಲ” ಅಂತ ಹೇಳಿದ. (ಕೀರ್ತ. 38:4) ಆದ್ರೆ ತಪ್ಪು ಮಾಡಿದ ವ್ಯಕ್ತಿ ಪಶ್ಚಾತ್ತಾಪ ಪಟ್ಟಾಗ ಯೆಹೋವ ಅವನ ಪಾಪನ ಕ್ಷಮಿಸ್ತಾನೆ. (ಕೀರ್ತ. 25:18; 32:5) ಇಲ್ಲಿ “ಕ್ಷಮಿಸ್ತಾನೆ” ಅಂತ ಹೇಳಿರೋದಕ್ಕೆ ಬಳಸಿರೋ ಹೀಬ್ರು ಪದದ ಅರ್ಥ “ಎತ್ತುತ್ತಾನೆ” ಅಥವಾ “ಹೊತ್ಕೊಳ್ತಾನೆ.” ಹಾಗಾಗಿ ಯೆಹೋವ ನಮ್ಮ ಪಾಪಗಳನ್ನ ಹೊತ್ಕೊಳ್ತಾನೆ ಅಂದ್ರೆ ಅದರರ್ಥ ನಮ್ಮ ಪಾಪಗಳನ್ನ ಕ್ಷಮಿಸ್ತಾನೆ. ‘ತಪ್ಪು ಮಾಡಿಬಿಟ್ನಲ್ಲಾ’ ಅನ್ನೋ ಕೊರಗನ್ನ ಕೂಡ ನಮ್ಮ ಮನಸ್ಸಿಂದ ತೆಗೆದುಹಾಕ್ತಾನೆ.
6. ಯೆಹೋವ ನಮ್ಮ ಪಾಪಗಳನ್ನ ಎಷ್ಟು ದೂರ ಹೊತ್ಕೊಂಡು ಹೋಗ್ತಾನೆ?
6 ಹಾಗಾದ್ರೆ ಯೆಹೋವ ನಮ್ಮ ಪಾಪಗಳನ್ನ ಎಷ್ಟು ದೂರ ಹೊತ್ಕೊಂಡು ಹೋಗ್ತಾನೆ? ಅದನ್ನ ತಿಳ್ಕೊಳ್ಳೋಕೆ ಕೀರ್ತನೆ 103:12ರಲ್ಲಿ ಇರೋ ಉದಾಹರಣೆ ನಮಗೆ ಸಹಾಯ ಮಾಡುತ್ತೆ. ಅಲ್ಲಿ “ಪೂರ್ವಕ್ಕೂ ಪಶ್ಚಿಮಕ್ಕೂ ಎಷ್ಟು ದೂರ ಇದೆಯೋ, ಆತನು ನಮ್ಮ ಅಪರಾಧಗಳನ್ನ ನಮ್ಮಿಂದ ಅಷ್ಟೇ ದೂರ ಎಸಿತಾನೆ” ಅಂತ ಹೇಳುತ್ತೆ. ಪೂರ್ವಕ್ಕೂ ಪಶ್ಚಿಮಕ್ಕೂ ತುಂಬಾ ದೂರ ಇದೆ. ಅವೆರಡು ಸೇರೋಕೆ ಚ್ಯಾನ್ಸೇ ಇಲ್ಲ. ಅದೇ ತರ ಯೆಹೋವ ನಮ್ಮ ಪಾಪಗಳನ್ನ ಅಷ್ಟು ದೂರಕ್ಕೆ ಎಸೆದು ಬಿಡ್ತಾನೆ. ಇದನ್ನ ಅರ್ಥ ಮಾಡ್ಕೊಂಡಾಗ ನಮಗೆ ಎಷ್ಟು ಸಮಾಧಾನ ಆಗುತ್ತೆ ಅಲ್ವಾ?
7. ಯೆಹೋವ ನಮ್ಮ ಪಾಪಗಳನ್ನ ದೂರ ತಗೊಂಡು ಹೋದ್ಮೇಲೆ ಏನು ಮಾಡ್ತಾನೆ? (ಮೀಕ 7:18, 19)
7 ಯೆಹೋವ ನಮ್ಮ ಪಾಪಗಳನ್ನ ನಮ್ಮಿಂದ ದೂರ ತಗೊಂಡು ಹೋದ್ಮೇಲೆ ಏನು ಮಾಡ್ತಾನೆ? ಅದನ್ನ ತನ್ನ ಹತ್ರಾನೇ ಇಟ್ಕೊಂಡು ಇರ್ತಾನಾ? ಇಲ್ಲ. ರಾಜ ಹಿಜ್ಕೀಯ ಯೆಹೋವನಿಗೆ “ನೀನು ನನ್ನ ಪಾಪಗಳನ್ನ ನಿನ್ನ ಕಣ್ಣ ಮುಂದಿಂದ ತೆಗೆದುಹಾಕಿದ್ದೀಯ” ಅಂತ ಹೇಳಿದ. ಪಾದಟಿಪ್ಪಣಿಯಲ್ಲಿ “ನೀನು ನನ್ನ ಪಾಪಗಳನ್ನ ನಿನ್ನ ಬೆನ್ನ ಹಿಂದೆ ಹಾಕಿದ್ದೀಯ” ಅಂತ ಹೇಳುತ್ತೆ. (ಯೆಶಾ. 38:9, 17, ಪಾದಟಿಪ್ಪಣಿ) ಅಂದ್ರೆ ನಾವು ಪಶ್ಚಾತ್ತಾಪ ಪಟ್ಟಾಗ ಯೆಹೋವ ನಮ್ಮ ಪಾಪನ ದೂರಕ್ಕೆ ಎಸೆದುಬಿಡ್ತಾನೆ. ಆತನು ಅದನ್ನ ಯಾವತ್ತೂ ನೋಡೋಕೆ ಹೋಗಲ್ಲ. ಇದೇ ವಚನನ “ನಾನು ತಪ್ಪೇ ಮಾಡಿಲ್ಲ ಅನ್ನೋ ತರ ನೀನು ನನ್ನನ್ನ ನೋಡ್ತೀಯ” ಅಂತ ಒಂದು ರೆಫರೆನ್ಸ್ ಹೇಳುತ್ತೆ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಮೀಕ 7:18, 19 (ಓದಿ.) ನಮಗೆ ಸಹಾಯ ಮಾಡುತ್ತೆ. ಅಲ್ಲಿ ಯೆಹೋವ ದೇವರು ನಮ್ಮ ಪಾಪಗಳನ್ನ ಸಮುದ್ರದಾಳಕ್ಕೆ ಬಿಸಾಡಿಬಿಡ್ತಾನೆ ಅಂತ ಹೇಳುತ್ತೆ. ಹಿಂದಿನ ಕಾಲದಲ್ಲಿ ಸಮುದ್ರದ ಆಳದಲ್ಲಿ ಯಾವುದಾದ್ರೂ ಒಂದು ವಸ್ತು ಬಿದ್ರೆ ಅದು ಮತ್ತೆ ಸಿಕ್ತಾ ಇರಲಿಲ್ಲ. ಅದೇ ತರ ಯೆಹೋವ ನಮ್ಮ ಪಾಪಗಳನ್ನ ಬಿಸಾಡಿಬಿಡ್ತಾನೆ.
8. ನಾವೇನು ಕಲಿತ್ವಿ?
8 ಈ ಉದಾಹರಣೆಗಳಿಂದ ನಾವೇನು ಕಲಿತ್ವಿ? ಯೆಹೋವ ನಮ್ಮನ್ನ ಕ್ಷಮಿಸ್ತಾನೆ ನಮ್ಮ ಪಾಪದ ಹೊರೆಯನ್ನ ಹೊತ್ಕೊಳ್ತಾನೆ. ಅಷ್ಟೇ ಅಲ್ಲ ‘ಪಾಪ ಮಾಡಿಬಿಟ್ನಲ್ಲಾ’ ಅನ್ನೋ ಕೊರಗನ್ನ ನಮ್ಮ ಮನಸ್ಸಿಂದ ಪೂರ್ತಿಯಾಗಿ ತೆಗೆದುಹಾಕ್ತಾನೆ. ಅದಕ್ಕೆ ದಾವೀದ “ಯಾರ ಕೆಟ್ಟ ಕೆಲಸಗಳನ್ನ, ಪಾಪಗಳನ್ನ ದೇವರು ಕ್ಷಮಿಸಿದ್ದಾನೋ [ಮುಚ್ಚಿದ್ದಾನೋ] ಅವರು ಖುಷಿಯಾಗಿ ಇರ್ತಾರೆ. ಯಾರ ಪಾಪವನ್ನ ಯೆಹೋವ ಲೆಕ್ಕ ಇಡಲ್ವೋ ಅವನು ಸಂತೋಷವಾಗಿ ಇರ್ತಾನೆ” ಅಂತ ಹೇಳಿದ. (ರೋಮ. 4:7, 8, ಪಾದಟಿಪ್ಪಣಿ) ನಮ್ಮ ಪ್ರೀತಿಯ ಯೆಹೋವ ಅಪ್ಪ ನಮ್ಮನ್ನ ಈ ತರ ಕ್ಷಮಿಸ್ತಾನೆ ಅಂತ ಗೊತ್ತಾದಾಗ ಆತನ ಮೇಲೆ ಪ್ರೀತಿ ಉಕ್ಕಿ ಬರುತ್ತೆ ಅಲ್ವಾ?
ಯೆಹೋವ ನಮ್ಮ ಪಾಪನ ಅಳಿಸಿಹಾಕ್ತಾನೆ
9. ಯೆಹೋವ ನಮ್ಮ ಪಾಪನ ಪೂರ್ತಿಯಾಗಿ ಅಳಿಸಿಹಾಕ್ತಾನೆ ಅಂತ ಅರ್ಥ ಮಾಡ್ಕೊಳ್ಳೋಕೆ ಯಾವ ಉದಾಹರಣೆ ಸಹಾಯ ಮಾಡುತ್ತೆ?
9 ನಾವು ಪಾಪ ಮಾಡಿ ಪಶ್ಚಾತ್ತಾಪ ಪಟ್ಟಾಗ ಯೆಹೋವ ತನ್ನ ಮಗ ಕೊಟ್ಟ ಬಿಡುಗಡೆ ಬೆಲೆಯ ಆಧಾರದ ಮೇಲೆ ನಮ್ಮ ಪಾಪಗಳನ್ನ ಅಳಿಸಿಹಾಕ್ತಾನೆ ಅಂದ್ರೆ ಕ್ಷಮಿಸ್ತಾನೆ. ಬೈಬಲ್ ಕ್ಷಮಿಸೋದನ್ನ ತೊಳಿಯೋದಕ್ಕೆ ಮತ್ತು ಸ್ವಚ್ಛ ಮಾಡೋದಕ್ಕೆ ಹೋಲಿಸುತ್ತೆ. ಹಾಗಾಗಿ ಒಬ್ಬ ವ್ಯಕ್ತಿ ಪಶ್ಚಾತ್ತಾಪ ಪಟ್ಟಾಗ ಯೆಹೋವ ಅವನ ಪಾಪಗಳನ್ನ ತೊಳೆದು ಶುದ್ಧ ಮಾಡ್ತಾನೆ. (ಕೀರ್ತ. 51:7; ಯೆಶಾ. 4:4; ಯೆರೆ. 33:8) ಇದನ್ನ ಆತನು ಹೇಗೆ ಮಾಡ್ತಾನೆ? “ನಿಮ್ಮ ಪಾಪಗಳು ಕಡುಗೆಂಪಾಗಿದ್ರೂ ಅವನ್ನ ಹಿಮದ ತರ ಬೆಳ್ಳಗೆ ಮಾಡ್ತೀನಿ. ತುಂಬ ಕೆಂಪಗೆ ಇರೋ ಬಟ್ಟೆ ತರ ಇದ್ರೂ ಉಣ್ಣೆ ತರ ಬೆಳ್ಳಗೆ ಮಾಡ್ತೀನಿ” ಅಂತ ಆತನೇ ಹೇಳಿದ್ದಾನೆ. (ಯೆಶಾ. 1:18) ಒಂದು ಬಟ್ಟೆ ಮೇಲೆ ಕಡುಗೆಂಪು ಕಲೆ ಇದ್ರೆ ಅದನ್ನ ತೆಗೆಯೋಕೆ ತುಂಬಾನೇ ಕಷ್ಟ. ಬೈಬಲ್ ನಮ್ಮ ಪಾಪನ ಕಡುಗೆಂಪು ಬಣ್ಣಕ್ಕೆ ಹೋಲಿಸಿದೆ. ಯೆಹೋವ ಇಂಥ ಕಲೆಯನ್ನ ಕಣ್ಣಿಗೆ ಕಾಣದ ಹಾಗೆ ತೆಗೆದುಬಿಡ್ತಾನೆ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಯೆಹೋವ ಈ ಉದಾಹರಣೆ ಬಳಸಿದ್ದಾನೆ.
10. ಯೆಹೋವ ನಮ್ಮನ್ನ ಉದಾರವಾಗಿ ಕ್ಷಮಿಸ್ತಾನೆ ಅನ್ನೋದನ್ನ ಅರ್ಥ ಮಾಡ್ಕೊಳ್ಳೋಕೆ ನಮಗೆ ಯಾವ ಉದಾಹರಣೆ ಸಹಾಯ ಮಾಡುತ್ತೆ?
10 ನಾವು ಹಿಂದಿನ ಲೇಖನದಲ್ಲಿ ಪಾಪನ ಸಾಲಕ್ಕೆ ಹೋಲಿಸಿದ್ದರ ಬಗ್ಗೆ ನೋಡಿದ್ವಿ. (ಮತ್ತಾ. 6:12; ಲೂಕ 11:4) ನಾವು ಪ್ರತಿಸಲ ಪಾಪ ಮಾಡಿದಾಗ ನಮ್ಮ ಸಾಲ ಜಾಸ್ತಿ ಆಗ್ತಾನೇ ಇರುತ್ತೆ. ಹಾಗಾದ್ರೆ ನಾವು ಯೆಹೋವನಿಗೆ ಎಷ್ಟು ಸಾಲ ತೀರಿಸಬೇಕಲ್ವಾ? ಆದ್ರೆ ಯೆಹೋವ ನಮ್ಮ ಸಾಲನ್ನೆಲ್ಲ ಮನ್ನಾ ಮಾಡ್ತಾನೆ. ಅಂದ್ರೆ ನಮ್ಮ ಪಾಪಗಳನ್ನ ಪೂರ್ತಿಯಾಗಿ ಕ್ಷಮಿಸ್ತಾನೆ. ಒಂದು ಸಲ ಕ್ಷಮಿಸಿದ ಮೇಲೆ ಆತನು ಮತ್ತೆ ಯಾವತ್ತೂ ಅದಕ್ಕೆ ಲೆಕ್ಕ ಕೇಳಲ್ಲ. ಸಾಲದ ಹೊರೆಯಲ್ಲಿ ಮುಳುಗಿ ಹೋಗಿರೋ ನಮ್ಮನ್ನ ಯೆಹೋವ ಹೀಗೆ ಕೈಹಿಡಿದು ಎತ್ತಿದಾಗ ನಮಗೆ ಅಬ್ಬಾ ಅಂತ ಅನ್ಸುತ್ತೆ ಅಲ್ವಾ!
11. ದೇವರು ಪಾಪಗಳನ್ನ ಅಳಿಸಿಹಾಕ್ತಾನೆ ಅಂದ್ರೆ ಅದರರ್ಥ ಏನು? (ಅಪೊಸ್ತಲರ ಕಾರ್ಯ 3:19)
11 ಯೆಹೋವ ನಮ್ಮ ಪಾಪಗಳನ್ನ ಮನ್ನಾ ಮಾಡೋದಷ್ಟೇ ಅಲ್ಲ, ಅದನ್ನ ಅಳಿಸಿಹಾಕ್ತಾನೆ. (ಅಪೊಸ್ತಲರ ಕಾರ್ಯ 3:19 ಓದಿ.) ಇದನ್ನ ಅರ್ಥ ಮಾಡ್ಕೊಳ್ಕೋಕೆ ಒಂದು ಉದಾಹರಣೆ ನೋಡಿ. ನಾವು ಸಾಲ ತಗೊಂಡಾಗ ಕೊಟ್ಟವರು ಅದನ್ನ ಬರೆದಿಟ್ಟಿರ್ತಾರೆ. ಅವರು ಸ್ವಲ್ಪ ದಿನ ಆದ್ಮೇಲೆ ‘ನೀವು ಸಾಲ ಕಟ್ಟೋದು ಬೇಡ’ ಅಂತ ಹೇಳ್ತಾರೆ ಅಂದ್ಕೊಳ್ಳಿ. ಆಗ ಬರೆದಿಟ್ಟಿರೋದ್ರ ಮೇಲೆ ಗೀಟು ಹಾಕ್ತಾರೆ. ಆದ್ರೂ ನೀವು ಎಷ್ಟು ಸಾಲ ಮಾಡಿದ್ರಿ ಅಂತ ಅಲ್ಲಿ ಇನ್ನೂ ಕಾಣಿಸ್ತಾ ಇರುತ್ತೆ. ಆ ವ್ಯಕ್ತಿ ನಿಮ್ಮ ಸಾಲನ ಮನ್ನಾ ಮಾಡಿರಬಹುದು. ಆದ್ರೆ ಅಳಿಸಿಹಾಕಿರಲ್ಲ. ಹಾಗಾದ್ರೆ ಅಳಿಸಿಹಾಕೋದು ಅಂದ್ರೇನು? ಹಿಂದಿನ ಕಾಲದಲ್ಲಿ ಇಂಕನ್ನ ಮಸಿ, ಅಂಟು ಮತ್ತು ನೀರಿಂದ ತಯಾರಿ ಮಾಡ್ತಿದ್ರು. ಈ ಇಂಕಿಂದ ಬರೆದಿದ್ದನ್ನ ಒದ್ದೆ ಬಟ್ಟೆಯಿಂದ ಒರೆಸಿದ್ರೆ ಅದು ಪೂರ್ತಿ ಅಳಿಸಿಹೋಗ್ತಿತ್ತು. ನೀವು ಮಾಡಿದ ಸಾಲನ ಈ ತರ ‘ಅಳಿಸಿಹಾಕಿದ್ರೆ’ ಅದು ಯಾರ ಕಣ್ಣಿಗೂ ಕಾಣಿಸಲ್ಲ, ನೀವು ಸಾಲ ಮಾಡಿದ್ರಿ ಅನ್ನೋ ದಾಖಲೆನೇ ಇರಲ್ಲ. ಇದೇ ತರ ಯೆಹೋವ ನಿಮ್ಮ ಪಾಪನ ಅಳಿಸಿಹಾಕ್ತಾನೆ ಅನ್ನೋ ವಿಷ್ಯ ನಿಮ್ಮ ಮನಸ್ಸು ಮುಟ್ಟಿತಲ್ವಾ!—ಕೀರ್ತ. 51:9.
12. ದಟ್ಟವಾದ ಮೋಡಗಳ ಉದಾಹರಣೆಯಿಂದ ನಾವೇನು ಕಲಿತೀವಿ?
12 ಯೆಹೋವ ನಮ್ಮ ಪಾಪಗಳನ್ನ ಅಳಿಸಿಹಾಕ್ತಾನೆ ಅನ್ನೋದಕ್ಕೆ ಇನ್ನೊಂದು ಚಿಕ್ಕ ಉದಾಹರಣೆ ಕೊಟ್ಟಿದ್ದಾನೆ. “ನಾನು ನಿನ್ನ ಅಪರಾಧಗಳನ್ನ ಅಳಿಸಿಹಾಕ್ತೀನಿ, ನಿನ್ನ ಪಾಪಗಳನ್ನ ದಟ್ಟವಾದ ಮೋಡಗಳಿಂದ ಮುಚ್ಚಿಹಾಕ್ತೀನಿ” ಅಂತ ದೇವರು ಹೇಳಿದ್ದಾನೆ. (ಯೆಶಾ. 44:22) ಯೆಹೋವ ನಮ್ಮ ಪಾಪಗಳನ್ನ ದಟ್ಟವಾದ ಮೋಡದಿಂದ ಮುಚ್ತಾನೆ ಅಂತ ಹೇಳ್ತಿದ್ದಾನೆ. ಅಂದ್ರೆ ಅದರರ್ಥ ಆ ಪಾಪಗಳನ್ನ ನಾವೂ ನೋಡಕ್ಕಾಗಲ್ಲ, ಯೆಹೋವ ಕೂಡ ನೋಡೋಕೆ ಹೋಗಲ್ಲ.
13. ಯೆಹೋವ ನಿಮ್ಮನ್ನ ಇಷ್ಟರ ಮಟ್ಟಿಗೆ ಕ್ಷಮಿಸ್ತಾನೆ ಅಂತ ಗೊತ್ತಾದಾಗ ನಿಮಗೆ ಹೇಗನಿಸ್ತು?
13 ನಾವು ಇಲ್ಲಿ ತನಕ ಏನು ಕಲಿತ್ವಿ? ಯೆಹೋವ ನಮ್ಮ ತಪ್ಪನ್ನ ಒಂದುಸಲ ಕ್ಷಮಿಸಿದ ಮೇಲೆ ಆ ತಪ್ಪಿನ ಬಗ್ಗೆ ನಾವು ಜೀವನಪೂರ್ತಿ ಕೊರಗಬೇಕಾಗಿಲ್ಲ. ಯಾಕಂದ್ರೆ ಯೆಹೋವ ತನ್ನ ಒಬ್ಬನೇ ಮಗನನ್ನ ಕೊಟ್ಟು ನಮ್ಮ ಪಾಪಗಳನ್ನ ಪೂರ್ತಿ ಅಳಿಸಿಹಾಕಿದ್ದಾನೆ. ಹಾಗಾಗಿ ನಾವು ಯಾವತ್ತೂ ಆ ತಪ್ಪುಗಳನ್ನ ಮಾಡೇ ಇಲ್ಲ ಅನ್ನೋ ರೀತೀಲಿ ನಮ್ಮನ್ನ ನೋಡ್ತಾನೆ. ನಾವು ಪಶ್ಚಾತ್ತಾಪ ಪಟ್ರೆ ಈ ತರ ನಮ್ಮನ್ನ ನಿಜವಾಗ್ಲೂ ಕ್ಷಮಿಸ್ತಾನೆ.
ಯೆಹೋವ ಮತ್ತೆ ನಮ್ಮ ಫ್ರೆಂಡ್ ಆಗ್ತಾನೆ
14. ಯೆಹೋವ ನಮ್ಮನ್ನ ಪೂರ್ತಿ ಕ್ಷಮಿಸ್ತಾನೆ ಅಂತ ಯಾಕೆ ನಂಬಬಹುದು? (ಚಿತ್ರಗಳನ್ನ ನೋಡಿ.)
14 ಯೆಹೋವ ನಮ್ಮನ್ನ ನಿಜವಾಗ್ಲೂ ಕ್ಷಮಿಸಿದಾಗ ನಾವು ಆತನ ಜೊತೆ ಮತ್ತೆ ಫ್ರೆಂಡ್ಸ್ ಆಗಬಹುದು. ಇದನ್ನ ಅರ್ಥ ಮಾಡ್ಕೊಂಡ್ರೆ ನಾವು ಮಾಡಿದ ಪಾಪಕ್ಕೆ ಕೊರಗ್ತಾ ಕೂರಲ್ಲ. ಅಷ್ಟೇ ಅಲ್ಲ ‘ಯೆಹೋವನಿಗೆ ನಮ್ಮ ಮೇಲೆ ಇನ್ನೂ ಕೋಪ ಇದೆ, ಆತನು ನಮಗೆ ಶಿಕ್ಷೆ ಕೊಡೋಕೆ ಕಾಯ್ತಾ ಇದ್ದಾನೆ’ ಅಂತನೂ ಅಂದ್ಕೊಬೇಕಿಲ್ಲ. ಒಂದು ವಿಷ್ಯ ನೆನಪಿಡಿ, ಯೆಹೋವ ಯಾವತ್ತೂ ಈ ರೀತಿ ಮಾಡೋದೇ ಇಲ್ಲ. ಇದನ್ನ ನಾವು ಹೇಗೆ ನಂಬಬಹುದು? ಪ್ರವಾದಿ ಯೆರೆಮೀಯನಿಗೆ ಯೆಹೋವ ಏನು ಹೇಳಿದನು ಅಂತ ನೋಡಿ: “ನಾನು ಅವ್ರ ತಪ್ಪುಗಳನ್ನ ಕ್ಷಮಿಸ್ತೀನಿ. ಅವ್ರ ಪಾಪಗಳನ್ನ ಇನ್ನು ಯಾವತ್ತೂ ನೆನಪಿಸ್ಕೊಳ್ಳಲ್ಲ.” (ಯೆರೆ. 31:34) ಪೌಲ ಕೂಡ ಇಬ್ರಿಯ 8:12ರಲ್ಲಿ ಇದನ್ನೇ ಹೇಳಿದ.
15. ನಿಮ್ಮ ತಪ್ಪುಗಳನ್ನ ಯಾವತ್ತೂ ನೆನಪಿಸ್ಕೊಳ್ಳಲ್ಲ ಅಂತ ಯೆಹೋವ ಹೇಳಿದ ಮಾತಿನ ಅರ್ಥ ಏನು?
15 “ನೆನಪಿಸ್ಕೊಳ್ಳಲ್ಲ” ಅಂತ ಹೇಳಿರೋದ್ರ ಅರ್ಥ ಏನು? ಬೈಬಲಲ್ಲಿ ‘ನೆನಪಿಸ್ಕೊಳ್ಳೋದು’ ಅಂದ್ರೆ ಜ್ಞಾಪಿಸ್ಕೊಳ್ಳೋದು, ಯೋಚಿಸೋದು ಅಷ್ಟೇ ಅಲ್ಲ, ಒಂದು ವಿಷ್ಯದ ಬಗ್ಗೆ ಏನಾದ್ರೂ ಮಾಡಬೇಕು, ಹೆಜ್ಜೆ ತಗೊಬೇಕು ಅನ್ನೋ ಅರ್ಥನೂ ಇದೆ. ಉದಾಹರಣೆಗೆ ಯೇಸುನ ಕಂಬಕ್ಕೆ ಜಡಿದಾಗ ಪಕ್ಕದಲ್ಲಿದ್ದ ಅಪರಾಧಿ “ನೀನು ರಾಜನಾದಾಗ ನನ್ನನ್ನ ನೆನಪು ಮಾಡ್ಕೊ” ಅಂತ ಯೇಸುಗೆ ಹೇಳಿದ. (ಲೂಕ 23:42, 43) ಯೇಸು ರಾಜನಾದಾಗ ತನ್ನನ್ನ ಬರೀ ನೆನಪಿಸ್ಕೊಳ್ಳೋಕೆ ಅವನು ಹೇಳ್ತಿದ್ದಾನಾ? ಇಲ್ಲ. ಏನೋ ಹೆಜ್ಜೆ ತಗೊಬೇಕು ಅಂತನೂ ಯೇಸುಗೆ ಹೇಳ್ತಿದ್ದಾನೆ. ಇದು ನಮಗೆ ಹೇಗೆ ಗೊತ್ತಾಗುತ್ತೆ? ಅ ಅಪರಾಧಿಗೆ ಯೇಸು ‘ನಾನು ನಿನ್ನನ್ನ ಮತ್ತೆ ಜೀವಂತವಾಗಿ ಎಬ್ಬಿಸ್ತೀನಿ’ ಅಂತ ಕೊಟ್ಟ ಮಾತಿಂದ ಗೊತ್ತಾಗುತ್ತೆ. ಹಾಗಾದ್ರೆ ನಿಮ್ಮ ತಪ್ಪುಗಳನ್ನ ಇನ್ನು ಯಾವತ್ತೂ ನೆನಪಿಸ್ಕೊಳ್ಳಲ್ಲ ಅಂದ್ರೆ ಅದರರ್ಥ ಏನು? ಯೆಹೋವ ನಿಮ್ಮ ತಪ್ಪನ್ನ ಕ್ಷಮಿಸಿದ ಮೇಲೆ ಆ ತಪ್ಪಿಗೆ ಮುಂದೆ ಯಾವತ್ತೂ ಶಿಕ್ಷೆ ಕೊಡಲ್ಲ.
16. ಯೆಹೋವ ನಮ್ಮನ್ನ ಕ್ಷಮಿಸಿದ್ರಿಂದ ನಮಗೆ ಯಾವುದ್ರಿಂದ ಬಿಡುಗಡೆ ಸಿಕ್ಕಿದೆ?
16 ಯೆಹೋವ ನಮ್ಮನ್ನ ಕ್ಷಮಿಸೋದ್ರಿಂದ ನಮಗೆ ಪಾಪದಿಂದ ಬಿಡುಗಡೆ ಸಿಕ್ಕಿದೆ. ಅದೇಗೆ? ನಾವು ಅಪರಿಪೂರ್ಣರು ಆಗಿರೋದ್ರಿಂದ ಒಂದು ರೀತೀಲಿ “ಪಾಪಕ್ಕೆ ದಾಸರಾಗಿ” ಇದ್ದೀವಿ. ಆದ್ರೆ ನಮಗೆ ‘ಪಾಪದಿಂದ ಬಿಡುಗಡೆ’ ಸಿಕ್ಕಿದೆ. (ರೋಮ. 6:17, 18; ಪ್ರಕ. 1:5) ಯಾಕಂದ್ರೆ ಯೆಹೋವ ನಮ್ಮನ್ನ ಕ್ಷಮಿಸಿದ್ದಾನೆ. ಇದಕ್ಕೆ ನಾವು ಯೆಹೋವನಿಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಕಾಗಲ್ಲ. ನೀವು ಇನ್ಮುಂದೆ ದಾಸರಾಗಿಲ್ಲ ಅಂತ ಕೇಳಿಸ್ಕೊಂಡಾಗ ನಿಮಗೆ ಹೇಗನಿಸ್ತು?
17. ಯೆಹೋವ ನಮ್ಮನ್ನ ಕ್ಷಮಿಸೋದ್ರಿಂದ ನಾವು ಹೇಗೆ ವಾಸಿ ಆಗ್ತೀವಿ? (ಯೆಶಾಯ 53:5)
17 ಯೆಶಾಯ 53:5 ಓದಿ. ನಾವು ಪಾಪಿಗಳಾಗಿ ಇರೋದ್ರಿಂದ ದೊಡ್ಡ ಕಾಯಿಲೆ ಇರೋ ಜನ್ರ ತರ ಇದ್ದೀವಿ ಅಂತ ಬೈಬಲ್ ಹೇಳುತ್ತೆ. ಆದ್ರೆ ಯೆಹೋವ ತನ್ನ ಮಗನನ್ನ ಬಿಡುಗಡೆ ಬೆಲೆಯಾಗಿ ಕೊಟ್ಟು ನಮ್ಮನ್ನ ವಾಸಿ ಮಾಡಿದ್ದಾನೆ. (1 ಪೇತ್ರ 2:24) ಹೇಗೆ? ನಾವು ಪಾಪ ಮಾಡಿದಾಗ ನಮಗೆ ಯೆಹೋವನ ಜೊತೆ ಇರೋ ಸಂಬಂಧ ಹಾಳಾಗುತ್ತೆ. ಆದ್ರೆ ನಮಗೆ ಬಿಡುಗಡೆ ಬೆಲೆ ಸಿಕ್ಕಿರೋದ್ರಿಂದ ಯೆಹೋವ ನಮ್ಮನ್ನ ಕ್ಷಮಿಸ್ತಾನೆ. ಆತನ ಜೊತೆ ಮತ್ತೆ ಫ್ರೆಂಡ್ ಆಗೋಕೆ ಸಹಾಯ ಮಾಡ್ತಾನೆ. ಇದ್ರಿಂದ, ಕಾಯಿಲೆ ಇದ್ದ ವ್ಯಕ್ತಿಗೆ ವಾಸಿ ಆದಾಗ ಹೇಗೆ ಖುಷಿ ಆಗುತ್ತೋ ನಮಗೂ ಹಾಗೆ ಖುಷಿ ಆಗುತ್ತೆ. ಯಾಕಂದ್ರೆ ನಾವು ಮತ್ತೆ ಯೆಹೋವನ ಜೊತೆ ಫ್ರೆಂಡ್ ಆಗಬಹುದು ಮತ್ತು ಆತನ ಮೆಚ್ಚಿಗೆ ಪಡ್ಕೊಬಹುದು.
ಯೆಹೋವ ನಮ್ಮನ್ನ ನಿಜವಾಗ್ಲೂ ಕ್ಷಮಿಸೋದ್ರಿಂದ ಸಿಗೋ ಪ್ರಯೋಜನ
18. ಯೆಹೋವ ನಮ್ಮನ್ನ ಕ್ಷಮಿಸೋದ್ರ ಬಗ್ಗೆ ನಾವೇನು ಕಲಿತ್ವಿ? (“ಯೆಹೋವ ನಮ್ಮನ್ನ ಹೇಗೆ ಕ್ಷಮಿಸ್ತಾನೆ” ಅನ್ನೋ ಚೌಕ ನೋಡಿ.)
18 ಯೆಹೋವ ನಮ್ಮನ್ನ ಕ್ಷಮಿಸೋದ್ರ ಬಗ್ಗೆ ನಾವೇನು ಕಲಿತ್ವಿ? ಯೆಹೋವ ನಮ್ಮನ್ನ ಪೂರ್ತಿಯಾಗಿ, ಶಾಶ್ವತವಾಗಿ ಕ್ಷಮಿಸ್ತಾನೆ ಅಂತ ಕಲಿತ್ವಿ. ಇದ್ರಿಂದ ನಮ್ಮ ಪ್ರೀತಿಯ ಅಪ್ಪ ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸ್ಕೊಳ್ಳೋಕೆ ಆಗಿದೆ. ಹಾಗಾಗಿ ನಾವು ಮಾಡಿರೋ ಪಾಪಕ್ಕೆ ಜೀವನಪೂರ್ತಿ ಕೊರಗ್ತಾ ಕೂರಬೇಕಂತಿಲ್ಲ. ಯೆಹೋವ ನಮಗೆ ಕೊಟ್ಟಿರೋ ಕ್ಷಮೆ ಗಿಫ್ಟ್ ತರ, ಅದನ್ನ ಪಡ್ಕೊಳ್ಳೋ ಅರ್ಹತೆ ನಮಗಿಲ್ಲ. ಆದ್ರೂ ಯೆಹೋವ ನಮ್ಮನ್ನ ಪ್ರೀತಿಸೋದ್ರಿಂದ ಮತ್ತು ಅಪಾರ ಕೃಪೆ ತೋರಿಸೋದ್ರಿಂದ ಅದನ್ನ ನಮಗೆ ಕೊಟ್ಟಿದ್ದಾನೆ.—ರೋಮ. 3:24.
19. (ಎ) ನಾವು ಯಾಕೆ ಯೆಹೋವನಿಗೆ ಋಣಿಗಳಾಗಿ ಇರಬೇಕು? (ರೋಮನ್ನರಿಗೆ 4:8) (ಬಿ) ಮುಂದಿನ ಲೇಖನದಲ್ಲಿ ಏನು ಕಲಿತೀವಿ?
19 ರೋಮನ್ನರಿಗೆ 4:8 ಓದಿ. ಯೆಹೋವ ನಮ್ಮನ್ನ “ನಿಜವಾಗ್ಲೂ,” ಮನಸಾರೆ ಕ್ಷಮಿಸೋದ್ರಿಂದ ನಾವು ಆತನಿಗೆ ಋಣಿಗಳಾಗಿ ಇರಬೇಕು. (ಕೀರ್ತ. 130:4) ಆದ್ರೆ ಯೆಹೋವ ನಮ್ಮನ್ನ ಕ್ಷಮಿಸಬೇಕಂದ್ರೆ ನಾವು ಒಂದು ಮುಖ್ಯವಾದ ವಿಷ್ಯನ ಮಾಡಬೇಕು. ಅದ್ರ ಬಗ್ಗೆ ಯೇಸು “ನೀವು ಬೇರೆಯವರ ತಪ್ಪನ್ನ ಕ್ಷಮಿಸಿಲ್ಲ ಅಂದ್ರೆ ಸ್ವರ್ಗದಲ್ಲಿರೋ ನಿಮ್ಮ ತಂದೆನೂ ನಿಮ್ಮನ್ನ ಕ್ಷಮಿಸಲ್ಲ” ಅಂತ ಹೇಳಿದ. (ಮತ್ತಾ. 6:14, 15) ಹಾಗಾದ್ರೆ ಯೆಹೋವ ನಮ್ಮನ್ನ ಹೇಗೆ ಕ್ಷಮಿಸ್ತಾನೋ ಅದೇ ತರ ನಾವು ಬೇರೆಯವ್ರನ್ನ ಕ್ಷಮಿಸೋಕೆ ಕಲಿಬೇಕು. ನಾವು ಅದನ್ನ ಮಾಡೋದು ಹೇಗೆ? ಇದನ್ನ ನಾವು ಮುಂದಿನ ಲೇಖನದಲ್ಲಿ ಕಲಿಯೋಣ.
ಗೀತೆ 115 ಯೆಹೋವನ ತಾಳ್ಮೆಗೆ ಕೃತಜ್ಞತೆ
a ಮನುಷ್ಯರಾದ ನಾವು ಒಬ್ರು ಇನ್ನೊಬ್ರನ್ನ ಕ್ಷಮಿಸ್ತೀವಿ ನಿಜ. ಆದ್ರೆ ಯೆಹೋವ ದೇವರು ನಮ್ಮನ್ನ ಕ್ಷಮಿಸೋ ರೀತಿನೇ ಬೇರೆ. ಆತನು ನಮ್ಮ ಪಾಪಗಳನ್ನ ಪೂರ್ತಿಯಾಗಿ ಕ್ಷಮಿಸ್ತಾನೆ. “ಕ್ಷಮಿಸೋದು” ಅನ್ನೋದಕ್ಕಿರೋ ಹೀಬ್ರು ಪದದ ಅರ್ಥ ‘ನಿಜವಾಗ್ಲೂ ಕ್ಷಮಿಸೋದು.’ ಅದಕ್ಕೇ ಪವಿತ್ರ ಬೈಬಲ್ ಹೊಸ ಲೋಕ ಭಾಷಾಂತರ ಕೀರ್ತನೆ 130:4ರಲ್ಲಿ ಇದೇ ಪದಗಳನ್ನ ಬಳಸಲಾಗಿದೆ. ಆದ್ರೆ ಎಷ್ಟೋ ಬೈಬಲ್ ಭಾಷಾಂತರಗಳಲ್ಲಿ ಈ ಅರ್ಥ ಇಲ್ಲ.