ಅಧ್ಯಯನ ಲೇಖನ 8
ಗೀತೆ 130 ಕ್ಷಮಿಸುತ್ತಾ ಇರೋಣ
ಯೆಹೋವನ ತರ ನೀವೂ ಬೇರೆಯವ್ರನ್ನ ಕ್ಷಮಿಸಿ
“ಯೆಹೋವ ನಿಮ್ಮನ್ನ ಉದಾರವಾಗಿ ಕ್ಷಮಿಸಿದ ತರಾನೇ ನೀವೂ ಕ್ಷಮಿಸಿ.”—ಕೊಲೊ. 3:13.
ಈ ಲೇಖನದಲ್ಲಿ ಏನಿದೆ?
ನಮ್ಮನ್ನ ನೋಯಿಸಿದವ್ರನ್ನ ಕ್ಷಮಿಸೋಕೆ ಏನೆಲ್ಲ ಮಾಡಬೇಕು ಅಂತ ಈ ಲೇಖನದಲ್ಲಿ ನೋಡೋಣ.
1-2. (ಎ) ಒಬ್ರನ್ನ ಕ್ಷಮಿಸೋಕೆ ನಮಗೆ ಯಾವಾಗ ಕಷ್ಟ ಆಗಬಹುದು? (ಬಿ) ಡೆನಿಸ್ ಹೇಗೆ ಕ್ಷಮಿಸಿದ್ರು?
ನಿಮಗೆ ಬೇರೆಯವ್ರನ್ನ ಕ್ಷಮಿಸೋಕೆ ಕಷ್ಟ ಆಗುತ್ತಾ? ಯಾರಿಗೆ ತಾನೇ ಕಷ್ಟ ಆಗಲ್ಲ ಹೇಳಿ. ಅದ್ರಲ್ಲೂ ನಮ್ಮ ಮನಸ್ಸಿಗೆ ಯಾರಾದ್ರೂ ತುಂಬಾ ನೋವಾಗೋ ತರ ಏನಾದ್ರೂ ಹೇಳಿಬಿಟ್ರೆ, ಮಾಡಿಬಿಟ್ರೆ ಅವ್ರನ್ನ ಕ್ಷಮಿಸೋದು ಅಷ್ಟು ಸುಲಭ ಅಲ್ಲ. ಆದ್ರೂ ನಾವು ಆ ನೋವಿಂದ ಹೊರಗೆ ಬರೋಕೆ ಆಗುತ್ತೆ, ಕ್ಷಮಿಸೋಕೂ ಆಗುತ್ತೆ. ಡೆನಿಸ್ a ಅನ್ನೋ ಸಹೋದರಿ ಬಗ್ಗೆ ನೋಡಿ. ಅವ್ರಿಗೆ ನೋವು ಮಾಡಿದವ್ರನ್ನ ಅವರು ಎಂಥಾ ಪರಿಸ್ಥಿತಿಯಲ್ಲಿ ಕ್ಷಮಿಸಿದ್ರು ಗೊತ್ತಾ? 2017ರಲ್ಲಿ ಡೆನಿಸ್ ಮತ್ತು ಅವ್ರ ಕುಟುಂಬ ಹೊಸದಾಗಿ ಕಟ್ಟಿದ್ದ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯ ನೋಡೋಕೆ ಹೋಗಿದ್ರು. ಅವರು ಅಲ್ಲಿಂದ ವಾಪಸ್ ಬರ್ತಿದ್ದಾಗ ಒಂದು ಕಾರ್ ಇವರ ಗಾಡಿಗೆ ಡಿಕ್ಕಿ ಹೊಡೀತು. ಆಗ ಅವರು ಪ್ರಜ್ಞೆ ಕಳ್ಕೊಂಡ್ರು. ಅವ್ರಿಗೆ ಎಚ್ಚರ ಆದಾಗ ಅವ್ರ ಮಕ್ಕಳಿಗೆ ತುಂಬಾ ಗಾಯ ಆಗಿದೆ ಮತ್ತು ಅವ್ರ ಗಂಡ ಬ್ರಾಯನ್ ತೀರಿ ಹೋಗಿದ್ದಾರೆ ಅಂತ ಗೊತ್ತಾಯ್ತು! “ನನ್ನ ಹೃದಯಾನೇ ನಿಂತುಹೋಯ್ತು. ಏನ್ ಮಾಡಬೇಕಂತಾನೇ ಗೊತ್ತಾಗಲಿಲ್ಲ” ಅಂತ ಡೆನಿಸ್ ಆ ಕ್ಷಣನ ನೆನಸ್ಕೊಂಡು ಹೇಳ್ತಾರೆ. ಆ್ಯಕ್ಸಿಡೆಂಟ್ ಮಾಡಿದ ಆ ಡ್ರೈವರ್ ಕುಡಿದಿರಲಿಲ್ಲ, ಡ್ರಗ್ಸ್ ತಗೊಂಡಿರಲಿಲ್ಲ ಅಥವಾ ಫೋನ್ ನೋಡ್ತಾ ಗಾಡಿ ಓಡಿಸ್ತಿರಲಿಲ್ಲ ಅಂತ ಅವ್ರಿಗೆ ಆಮೇಲೆ ಗೊತ್ತಾಯ್ತು. ಅದಕ್ಕೇ ‘ಅವ್ರ ಮೇಲೆ ಕೋಪ ಮಾಡ್ಕೊಳ್ಳದೆ ಇರೋಕೆ ಸಹಾಯ ಮಾಡಪ್ಪ’ ಅಂತ ಯೆಹೋವನ ಹತ್ರ ಬೇಡ್ಕೊಂಡ್ರು.
2 ಆ ಡ್ರೈವರ್ ಮೇಲೆ ಕೊಲೆ ಕೇಸ್ ಫೈಲ್ ಆಗಿತ್ತು. ಅದು ಒಂದುವೇಳೆ ಸಾಬೀತಾದ್ರೆ ಅವನನ್ನ ಜೈಲಿಗೆ ಹಾಕ್ತಿದ್ರು. ಆದ್ರೆ ಆ ವ್ಯಕ್ತಿಗೆ ಶಿಕ್ಷೆ ಸಿಗುತ್ತೋ ಇಲ್ವೋ ಅನ್ನೋದು ಡೆನಿಸ್ ಕೋರ್ಟಲ್ಲಿ ಏನು ಹೇಳ್ತಾರೋ ಅದ್ರ ಮೇಲೆ ಹೊಂದ್ಕೊಂಡಿತ್ತು. ಕೋರ್ಟಿಗೆ ಹೋಗಿ ಮಾತಾಡೋದ್ರ ಬಗ್ಗೆ ಡೆನೀಸ್‌ಗೆ ಹೇಗನಿಸ್ತು? “ನಾನು ಏನನ್ನ ಮರೀಬೇಕು ಅಂದ್ಕೊಂಡಿದ್ನೋ ಅದನ್ನ ಮತ್ತೆ ಕೆದಕಿದ ಹಾಗೆ ಅನಿಸ್ತು. ಆಗಿರೋ ಗಾಯಕ್ಕೆ ಹಾಕಿದ ಸ್ಟಿಚ್ಚನ್ನ ಮತ್ತೆ ಬಿಚ್ಚಿ ಅದ್ರ ಮೇಲೆ ಒಂದಿಷ್ಟು ಉಪ್ಪು ಸುರಿದಂಗಿತ್ತು” ಅಂತ ಅವರು ಹೇಳ್ತಾರೆ. ಆದ್ರೂ ಕೆಲವು ವಾರ ಆದ್ಮೇಲೆ ಅವರು ಕೋರ್ಟಿಗೆ ಹೋಗಬೇಕಾಯ್ತು. ಅವರು ಕೋರ್ಟಲ್ಲಿ ಹೋಗಿ ಕೂತು ತನ್ನ ಕುಟುಂಬಕ್ಕೆ ತುಂಬ ನಷ್ಟ ಮಾಡಿದ ವ್ಯಕ್ತಿ ಬಗ್ಗೆ ಜಡ್ಜ್ ಹತ್ರ ಏನು ಹೇಳಬೇಕು ಅಂತ ತಯಾರಾದ್ರು. ಅವರು ಏನು ಹೇಳಿದ್ರು ಗೊತ್ತಾ? ‘ದಯವಿಟ್ಟು ಆ ಡ್ರೈವರ್‌ನ ಬಿಟ್ಟುಬಿಡಿ, ಅವ್ರಿಗೆ ಕರುಣೆ ತೋರಿಸಿ’ ಅಂತ ಕೇಳ್ಕೊಂಡ್ರು. b ಆ ಮಾತು ಕೇಳಿ ಜಡ್ಜ್‌ಗೆ ಕಣ್ಣೀರೇ ಬಂತು. “ನನ್ನ 25 ವರ್ಷದ ಸರ್ವೀಸಲ್ಲಿ, ವಿರೋಧಿನ ಬಿಟ್ಟುಬಿಡಿ ಅಂತ ಯಾರೂ ಹೇಳಿಲ್ಲ. ಇವರೇ ಮೊದಲನೇ ಸಲ ಹೇಳ್ತಿರೋದು. ನಷ್ಟ ಆದ್ರೂ ಅಪರಾಧಿ ಪರವಾಗಿ ಮಾತಾಡಿದವ್ರನ್ನ ನಾನಂತೂ ಕೇಳೇ ಇಲ್ಲ. ಇಷ್ಟು ದೊಡ್ಡ ತಪ್ಪು ಮಾಡಿದ ಅಪರಾಧಿಗೆ ಕ್ಷಮೆ, ಕರುಣೆ ತೋರಿಸಿದವ್ರನ್ನ ನಾನು ನೋಡೇ ಇಲ್ಲ.”
3. ಡೆನಿಸ್‌ಗೆ ಕ್ಷಮಿಸೋಕೆ ಏನು ಸಹಾಯ ಮಾಡ್ತು?
3 ಆ ಡ್ರೈವರನ್ನ ಡೆನಿಸ್ ಯಾಕೆ ಕ್ಷಮಿಸಿದ್ರು? ಅವರು ಯೆಹೋವ ಹೇಗೆ ಕ್ಷಮಿಸ್ತಾನೆ ಅಂತ ಚೆನ್ನಾಗಿ ಯೋಚ್ನೆ ಮಾಡಿದ್ರು. (ಮೀಕ 7:18) ಆ ಸಹೋದರಿ ತರ ನಾವೂ ಯೆಹೋವ ನಮ್ಮನ್ನ ಹೇಗೆ ಕ್ಷಮಿಸ್ತಾನೆ ಅಂತ ಯೋಚಿಸಿದ್ರೆ ನಾವೂ ಬೇರೆಯವ್ರನ್ನ ಕ್ಷಮಿಸ್ತೀವಿ.
4. ನಾವೇನ್ ಮಾಡಬೇಕು ಅಂತ ಯೆಹೋವ ಇಷ್ಟಪಡ್ತಾನೆ? (ಎಫೆಸ 4:32)
4 ಯೆಹೋವ ನಮ್ಮನ್ನ ಉದಾರವಾಗಿ ಕ್ಷಮಿಸಿದ ತರ ನಾವೂ ಬೇರೆಯವ್ರನ್ನ ಕ್ಷಮಿಸಬೇಕು ಅಂತ ಆತನು ಇಷ್ಟಪಡ್ತಾನೆ. (ಎಫೆಸ 4:32 ಓದಿ.) ನಮ್ಮ ಮನಸ್ಸಿಗೆ ನೋವು ಮಾಡಿದ್ರೂ ಅವ್ರನ್ನ ಕ್ಷಮಿಸೋಕೆ ಯಾವಾಗ್ಲೂ ರೆಡಿ ಇರಬೇಕು ಅನ್ನೋದೇ ಯೆಹೋವನ ಆಸೆ. (ಕೀರ್ತ. 86:5; ಲೂಕ 17:4) ಹಾಗಾಗಿ ಕ್ಷಮಿಸೋಕೆ ಸಹಾಯ ಮಾಡೋ ಮೂರು ವಿಷ್ಯಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಭಾವನೆಗಳನ್ನ ಅದುಮಿ ಇಡಬೇಡಿ
5. ಯಾರಾದ್ರೂ ನಮ್ಮ ಮನಸ್ಸಿಗೆ ನೋವು ಮಾಡಿದಾಗ ನಮಗೆ ಹೇಗೆ ಅನಿಸುತ್ತೆ? (ಜ್ಞಾನೋಕ್ತಿ 12:18)
5 ಯಾರಾದ್ರೂ ಮನಸ್ಸಿಗೆ ನೋವಾಗೋ ತರ ಮಾತಾಡಿದ್ರೆ, ನಡ್ಕೊಂಡ್ರೆ ನಮಗೆ ತುಂಬ ನೋವಾಗುತ್ತೆ. ಅದ್ರಲ್ಲೂ ನಮ್ಮ ಕುಟುಂಬದವರು, ನಮ್ಮ ಸ್ನೇಹಿತರು ಏನಾದ್ರೂ ಹೇಳಿದ್ರೆ ನಮಗಾಗೋ ನೋವು ಅಷ್ಟಿಷ್ಟಲ್ಲ. (ಕೀರ್ತ. 55:12-14) ಅದು ನಮಗೆ ಕತ್ತಿ ತಿವಿದ ಹಾಗೆ ಇರುತ್ತೆ. (ಜ್ಞಾನೋಕ್ತಿ 12:18 ಓದಿ.) ಒಂದುವೇಳೆ ಈ ನೋವನ್ನ ನುಂಗಿಕೊಂಡಿದ್ರೆ, ಅದನ್ನ ಅದುಮಿ ಇಡೋಕೆ ಪ್ರಯತ್ನ ಮಾಡಿದ್ರೆ ನಮಗೆ ಚುಚ್ಚಿರೋ ಕತ್ತಿಯನ್ನ ತೆಗೀದೆ ಹಾಗೇ ಬಿಟ್ಟಂಗೆ ಇರುತ್ತೆ. ಅದ್ರಿಂದ ನೋವು ಜಾಸ್ತಿ ಆಗುತ್ತೆ ಹೊರತು ಕಮ್ಮಿ ಅಂತೂ ಆಗಲ್ಲ.
6. ಯಾರಾದ್ರೂ ನಮ್ಮ ಮನಸ್ಸಿಗೆ ನೋವು ಮಾಡಿದಾಗ ನಾವೇನ್ ಮಾಡಿಬಿಡಬಹುದು?
6 ಯಾರಾದ್ರೂ ನೋವು ಮಾಡಿದಾಗ ಕೋಪ ಬರೋದು ಸಹಜ. ಈ ತರ ಆಗುತ್ತೆ ಅಂತ ಬೈಬಲ್ ಹೇಳುತ್ತೆ. ಆದ್ರೆ ಆ ಕೋಪನ ಹಾಗೇ ಇಟ್ಕೋಬಾರದು ಅಂತಾನೂ ಎಚ್ಚರಿಕೆ ಕೊಡುತ್ತೆ. (ಕೀರ್ತ. 4:4; ಎಫೆ. 4:26) ಯಾಕಂದ್ರೆ ಮನಸ್ಸಲ್ಲಿ ಕೋಪನ ಹಾಗೇ ಇಟ್ಕೊಂಡ್ರೆ, ಆ ಕೋಪದ ಕೈಗೆ ನಮ್ಮ ಬುದ್ಧಿ ಕೊಟ್ಟು ಬಿಡ್ತೀವಿ ಅಂದ್ರೆ ಕೋಪದಲ್ಲಿ ಏನಾದ್ರೂ ಮಾಡಿಬಿಡ್ತೀವಿ. ಅಷ್ಟೇ ಅಲ್ಲ, ಕೋಪದಿಂದ ಒಳ್ಳೇದಾಗೋದು ತುಂಬಾನೇ ಕಡಿಮೆ. (ಯಾಕೋ. 1:20) ನೆನಪಿಡಿ, ಕೋಪ ಬರೋದು ತಪ್ಪಲ್ಲ, ಕೋಪ ಬಿಡದೇ ಇರೋದು ತಪ್ಪು!
ಕೋಪ ಬರೋದು ತಪ್ಪಲ್ಲ, ಕೋಪ ಬಿಡದೇ ಇರೋದು ತಪ್ಪು!
7. ಯಾರಾದ್ರೂ ನಮಗೆ ಕೆಟ್ಟದು ಮಾಡಿದಾಗ ನಮಗೆ ಹೇಗೆ ಅನಿಸುತ್ತೆ?
7 ಯಾರಾದ್ರೂ ನಮಗೆ ಮೋಸ, ಅನ್ಯಾಯ ಮಾಡಿದ್ರೆ ಆಗೋ ನೋವನ್ನ ಮಾತಲ್ಲಿ ಹೇಳೋಕಾಗಲ್ಲ. ಉದಾಹರಣೆಗೆ, ಸಹೋದರಿ ಆ್ಯನ್ ಹೇಳೋದು “ನಾನು ತುಂಬಾ ಚಿಕ್ಕವಳಿದ್ದಾಗ ನನ್ನ ಅಪ್ಪ ನನ್ನ ಅಮ್ಮನನ್ನ ಬಿಟ್ಟು ನನ್ನನ್ನ ನೋಡ್ಕೊಳ್ತಿದ್ದ ಆಯಾನ ಮದುವೆ ಆದ್ರು. ಆಗ ನನಗೆ ಯಾರೂ ಇಲ್ಲ ಅಂತ ಅನಿಸಿಬಿಡ್ತು. ಅಷ್ಟೇ ಅಲ್ಲ, ಅವ್ರಿಗೆ ಮಕ್ಕಳಾದಾಗ ನಾನು ಅವ್ರಿಗೆ ಬೇಡ್ವೇನೋ ಅಂತ ಅನಿಸಿಬಿಡ್ತು. ನಾನು ಆ ನೋವಲ್ಲೇ ಬೆಳೆದೆ.” ಸಹೋದರಿ ಜಾರ್ಜೆಟ್ ಅವ್ರ ಗಂಡ ವ್ಯಭಿಚಾರ ಮಾಡಿದ್ರು. “ಚಿಕ್ಕಂದಿನಿಂದ ನಾನೂ ನನ್ನ ಗಂಡ ಇಬ್ರೂ ಒಳ್ಳೇ ಫ್ರೆಂಡ್ಸ್ ಆಗಿದ್ವಿ. ಇಬ್ರೂ ಒಟ್ಟಿಗೆ ಪಯನೀಯರ್ ಸೇವೆ ಮಾಡ್ತಿದ್ವಿ. ಅವರು ನಂಗೆ ದ್ರೋಹ ಮಾಡಿದಾಗ ನನ್ನ ಎದೆನೇ ಒಡೆದೋಯ್ತು” ಅಂತ ಜಾರ್ಜೆಟ್ ಹೇಳ್ತಾರೆ. ನವೊಮಿ ಸಹೋದರಿ ಬಗ್ಗೆ ನೋಡಿ, “ನನ್ನ ಗಂಡ ಕದ್ದುಮುಚ್ಚಿ ಅಶ್ಲೀಲ ಚಿತ್ರಗಳನ್ನ ನೋಡ್ತಿದ್ದಾರೆ ಅಂತ ಅವ್ರೇ ಬಂದು ಹೇಳಿದ್ರು. ಇಷ್ಟು ದಿವಸ ಜೊತೆನೇ ಇದ್ದು ಬೆನ್ನಿಗೆ ಚೂರಿ ಹಾಕ್ತಿದ್ರಲ್ಲಾ” ಅಂತ ಅವ್ರಿಗೆ ಅನಿಸ್ತು.
8. (ಎ) ನಾವ್ಯಾಕೆ ಬೇರೆಯವ್ರನ್ನ ಕ್ಷಮಿಸ್ತೀವಿ? (ಬಿ) ನಾವು ಬೇರೆಯವ್ರನ್ನ ಕ್ಷಮಿಸಿದ್ರೆ ಏನು ಪ್ರಯೋಜನ ಆಗುತ್ತೆ? (“ ಯಾರಾದ್ರೂ ನಿಮ್ಮನ್ನ ತುಂಬ ನೋಯಿಸಿದಾಗ . . . ” ಅನ್ನೋ ಚೌಕ ನೋಡಿ.)
8 ಬೇರೆಯವರು ನಮ್ಮ ಜೊತೆ ಹೇಗೆ ನಡ್ಕೊಳ್ತಾರೆ, ಮಾತಾಡ್ತಾರೆ ಅನ್ನೋದು ನಮ್ಮ ಕೈಯಲ್ಲಿಲ್ಲ. ಆದ್ರೆ ಅವ್ರಿಗೆ ವಾಪಸ್ ನಾವೇನು ಮಾಡ್ತೀವಿ ಅನ್ನೋದು ನಮ್ಮ ಕೈಯಲ್ಲಿದೆ. ಹಾಗಿದ್ರೆ ನಾವೇನು ಮಾಡಬೇಕು? ಅವ್ರನ್ನ ಕ್ಷಮಿಸಬೇಕು. ಯಾಕೆ? ಯಾಕಂದ್ರೆ ನಾವು ಯೆಹೋವನನ್ನ ಪ್ರೀತಿಸ್ತೀವಿ ಮತ್ತು ನಾವು ಬೇರೆಯವ್ರನ್ನ ಕ್ಷಮಿಸಬೇಕು ಅಂತ ಆತನು ಇಷ್ಟಪಡ್ತಾನೆ. ಒಂದುವೇಳೆ ನಾವು ಕೋಪನ ಹಾಗೇ ಮನಸ್ಸಲ್ಲಿ ಇಟ್ಕೊಂಡ್ರೆ ಅಥವಾ ಕ್ಷಮಿಸದೆ ಇದ್ರೆ ಬೇರೆಯವ್ರಿಗೆ ಕೆಟ್ಟದು ಮಾಡಿಬಿಡ್ತೀವಿ ಮತ್ತು ನಮ್ಮ ಆರೋಗ್ಯನೂ ಹಾಳಾಗುತ್ತೆ. (ಜ್ಞಾನೋ. 14:17, 29, 30) ಕ್ರಿಸ್ಟೀನ್ ಅನ್ನೋ ಸಹೋದರಿ ಬಗ್ಗೆ ನೋಡಿ. “ನನ್ನ ಮನಸ್ಸಲ್ಲಿ ನೋವು ತುಂಬ್ಕೊಂಡಿದ್ರಿಂದ ನಾನು ನಗೊದನ್ನೇ ಮರೆತುಬಿಟ್ಟಿದ್ದೆ. ಸರಿಯಾಗಿ ಊಟ ಮಾಡ್ತಿರಲಿಲ್ಲ. ಕಣ್ತುಂಬ ನಿದ್ದೆ ಬರ್ತಿರಲಿಲ್ಲ. ಅಷ್ಟೇ ಅಲ್ಲ ನಾನು ನನ್ನ ಗಂಡನ ಜೊತೆ, ಬೇರೆಯವ್ರ ಜೊತೆ ಸರಿಯಾಗಿ ನಡ್ಕೊಳ್ತಾ ಇರ್ಲಿಲ್ಲ. ಅವ್ರ ಮನಸ್ಸಿಗೆ ತುಂಬಾ ನೋವು ಮಾಡಿಬಿಟ್ಟೆ” ಅಂತ ಹೇಳ್ತಾರೆ.
9. ನಮ್ಮ ಮನಸ್ಸಲ್ಲಿರೋ ಕೋಪನ ಯಾಕೆ ಬಿಟ್ಟುಬಿಡಬೇಕು?
9 ನಿಮಗೆ ನೋವು ಮಾಡಿದವರು ನಿಮ್ಮ ಹತ್ರ ಕ್ಷಮೆ ಕೇಳಿಲ್ಲ ಅಂದ್ರೂ ನಿಮಗೆ ಆಗಿರೋ ನೋವನ್ನ ಕಮ್ಮಿ ಮಾಡ್ಕೊಳ್ಳೋಕೆ ಆಗುತ್ತೆ. ಸಹೋದರಿ ಜಾರ್ಜೆಟ್ ಏನು ಹೇಳ್ತಾರೆ ನೋಡಿ: “ಡಿವೋರ್ಸ್ ಆದ್ಮೇಲೂ ನನಗೆ ನನ್ನ ಗಂಡನ ಮೇಲೆ ತುಂಬಾ ಕೋಪ ಇತ್ತು. ಆದ್ರೆ ಆ ಕೋಪನ ಬಿಟ್ಟುಬಿಡೋಕೆ ಸಮಯ ಹಿಡೀತು. ನಾನು ಹೀಗೆ ಮಾಡಿದ್ರಿಂದ ನನಗೆ ನೆಮ್ಮದಿ ಸಿಕ್ತು.” ನಾವು ಆ ಸಹೋದರಿ ತರ ನಮ್ಮ ಮನಸ್ಸಲ್ಲಿರೋ ಕೋಪನ ಬಿಟ್ಟುಬಿಟ್ರೆ ನಮಗೆ ನೋವು ಮಾಡಿದವ್ರ ಮೇಲೆ ದ್ವೇಷ ಬೆಳೆಸ್ಕೊಳ್ಳಲ್ಲ. ಅಷ್ಟೇ ಅಲ್ಲ, ನಮಗಾಗಿರೋ ನೋವಿನ ಬಗ್ಗೆ ಯೋಚಿಸ್ತಾ ಕೂರದೆ ಖುಷಿಖುಷಿಯಾಗಿ ಜೀವನ ಮಾಡ್ತೀವಿ. (ಜ್ಞಾನೋ. 11:17) ಇಷ್ಟೆಲ್ಲ ಮಾಡಿದ ಮೇಲೂ ಬೇರೆಯವ್ರನ್ನ ಕ್ಷಮಿಸೋಕೆ ಕಷ್ಟ ಆಗ್ತಿದ್ರೆ ನಾವೇನ್ ಮಾಡಬೇಕು?
ಕೋಪನ ಕಿತ್ತು ಬಿಸಾಕಿ
10. ಮನಸ್ಸಿಗೆ ಆಗಿರೋ ಗಾಯ ವಾಸಿ ಆಗೋಕೆ ನಾವು ಯಾಕೆ ಸಮಯ ಕೊಡಬೇಕು? (ಚಿತ್ರಗಳನ್ನ ನೋಡಿ.)
10 ನಾವು ಕೋಪದಿಂದ ಅಥವಾ ನೋವಿಂದ ಹೊರಗೆ ಬರೋಕೆ ಏನು ಮಾಡಬೇಕು? ಸಮಯ ಕೊಡಬೇಕು. ಒಬ್ಬ ವ್ಯಕ್ತಿಗೆ ಗಾಯ ಆದಾಗ ವಾಸಿ ಆಗೋಕೆ ಹೇಗೆ ಸಮಯ ಹಿಡಿಯುತ್ತೋ ಹಾಗೇ ಮನಸ್ಸಿಗಾದ ಗಾಯ ವಾಸಿ ಆಗೋಕೂ ಸಮಯ ಹಿಡಿಯುತ್ತೆ. ಹೀಗೆ ವಾಸಿ ಆದ್ರೇನೇ ಮನಸಾರೆ ನಮಗೆ ಕ್ಷಮಿಸೋಕೆ ಆಗುತ್ತೆ.—ಪ್ರಸಂ. 3:3; 1 ಪೇತ್ರ 1:22.
11. ಕ್ಷಮಿಸೋಕೆ ಪ್ರಾರ್ಥನೆ ಹೇಗೆ ಸಹಾಯ ಮಾಡುತ್ತೆ?
11 ಕ್ಷಮಿಸೋಕೆ ನಾವು ಇನ್ನೂ ಏನು ಮಾಡಬೇಕು? ಪ್ರಾರ್ಥನೆ ಮಾಡಬೇಕು. c ಆ್ಯನ್ ಕೂಡ ಇದನ್ನೇ ಮಾಡಿದ್ರು. “ನಾವೆಲ್ರೂ ಮಾತಾಡಿದ ರೀತಿ, ನಡ್ಕೊಂಡ ರೀತಿ ಸರಿ ಇರಲಿಲ್ಲ. ಅದಕ್ಕೇ ನಮ್ಮೆಲ್ರನ್ನ ಕ್ಷಮಿಸು ಅಂತ ಯೆಹೋವನ ಹತ್ರ ಬೇಡ್ಕೊಂಡೆ. ಆಮೇಲೆ ನಾನು ಅಪ್ಪಾಗೆ ಮತ್ತು ಅವ್ರ ಹೆಂಡತಿಗೆ ಪತ್ರ ಬರೆದು ನಿಮ್ಮನ್ನ ಕ್ಷಮಿಸಿದ್ದೀನಿ ಅಂತ ಹೇಳಿದೆ. ನಾನು ಯೆಹೋವ ದೇವರ ತರ ಕ್ಷಮಿಸೋಕೆ ಪ್ರಯತ್ನ ಮಾಡಿದ್ರಿಂದ ಇವತ್ತಲ್ಲ ನಾಳೆ ಅವರು ಯೆಹೋವನ ಬಗ್ಗೆ ಜಾಸ್ತಿ ಕಲೀತಾರೆ ಅನ್ನೋ ನಂಬಿಕೆ ನಂಗಿದೆ” ಅಂತ ಹೇಳ್ತಾರೆ. ಆ್ಯನ್‌ಗೆ ಈ ತರ ಮಾಡೋಕೆ ಕಷ್ಟ ಆಯ್ತು. ಆದ್ರೆ ಪ್ರಾರ್ಥನೆ ಮಾಡಿದ್ರಿಂದ ಇದನ್ನ ಮಾಡೋಕಾಯ್ತು.
12. ನಾವು ನಮ್ಮನ್ನಲ್ಲ, ಯೆಹೋವನನ್ನ ಯಾಕೆ ನಂಬಬೇಕು? (ಜ್ಞಾನೋಕ್ತಿ 3:5, 6)
12 ಕ್ಷಮಿಸೋಕೆ ನಾವು ಇನ್ನೇನ್ ಮಾಡಬೇಕು? ನಮ್ಮನ್ನಲ್ಲ, ಯೆಹೋವನನ್ನ ನಾವು ನಂಬಬೇಕು. (ಜ್ಞಾನೋಕ್ತಿ 3:5, 6 ಓದಿ.) ನಮಗೇನು ಒಳ್ಳೇದು ಅಂತ ನಮಗಿಂತ ಚೆನ್ನಾಗಿ ಯೆಹೋವನಿಗೆ ಗೊತ್ತು. (ಯೆಶಾ. 55:8, 9) ಅಷ್ಟೇ ಅಲ್ಲ, ನಮಗೆ ಕೆಟ್ಟದಾಗೋದನ್ನ ಮಾಡೋಕೆ ಆತನು ಯಾವತ್ತೂ ನಮ್ಮ ಹತ್ರ ಹೇಳಲ್ಲ. ಹಾಗಾಗಿ ಬೇರೆಯವ್ರನ್ನ ಕ್ಷಮಿಸು ಅಂತ ಯೆಹೋವ ಹೇಳಿದ್ದನ್ನ ನಾವು ಮಾಡಿದ್ರೆ ನಮಗೇ ಪ್ರಯೋಜನ ಆಗುತ್ತೆ ಅನ್ನೋ ನಂಬಿಕೆ ಇಡಬಹುದು. (ಕೀರ್ತ. 40:4; ಯೆಶಾ. 48:17, 18) ನಮಗೆ ಅನಿಸಿದ್ದೇ ಸರಿ ಅಂತ ಅಂದ್ಕೊಂಡ್ರೆ ನಾವು ಯಾವತ್ತೂ ಬೇರೆಯವ್ರನ್ನ ಕ್ಷಮಿಸೋಕೆ ಆಗಲ್ಲ. (ಜ್ಞಾನೋ. 14:12; ಯೆರೆ. 17:9) ನವೊಮಿ ಹೀಗೆ ಹೇಳ್ತಾರೆ: “ನನಗೆ ಮೊದಮೊದ್ಲು, ನನ್ನ ಗಂಡ ಇಷ್ಟು ದೊಡ್ಡ ತಪ್ಪು ಮಾಡಿದ ಮೇಲೆ ನಾನ್ಯಾಕೆ ಅವ್ರನ್ನ ಕ್ಷಮಿಸಬೇಕು ಅಂತ ಅನಿಸ್ತು. ಒಂದುವೇಳೆ ನಾನು ಕ್ಷಮಿಸಿದ್ರೆ ಅವರು ಮತ್ತೆ ನನ್ನ ಮನಸ್ಸನ್ನ ನೋಯಿಸಬಹುದು ಅಥವಾ ನನಗಾಗಿರೋ ನೋವನ್ನೇ ಅವರು ಮರೆತುಬಿಡಬಹುದು ಅಂತಾನೂ ಅನಿಸ್ತು. ಅಷ್ಟೇ ಅಲ್ಲ, ನಾನು ಈ ತರ ಯೋಚಿಸೋದ್ರಲ್ಲಿ ಏನೂ ತಪ್ಪಿಲ್ಲ, ಇದೆಲ್ಲ ಯೆಹೋವನಿಗೆ ಅರ್ಥ ಆಗುತ್ತೆ ಬಿಡು ಅಂತಾನೂ ಅಂದ್ಕೊಂಡಿದ್ದೆ. ಆದ್ರೆ ಯೆಹೋವ ನನ್ನ ಭಾವನೆಗಳನ್ನ ಅರ್ಥಮಾಡ್ಕೊಳ್ತಾನೆ ನಿಜ. ಹಾಗಂತ ನನ್ನ ಯೋಚ್ನೆನ ಸರಿ ಅಂತ ಒಪ್ಕೊಳ್ಳಲ್ಲ ಅಂತ ಆಮೇಲೆ ಗೊತ್ತಾಯ್ತು. ಹೌದು, ಯೆಹೋವನಿಗೆ ನಮ್ಮ ಮನಸ್ಸಿಗೆ ಆಗಿರೋ ಗಾಯ ಗೊತ್ತು, ಅದು ವಾಸಿಯಾಗೋಕೆ ಟೈಮ್ ಬೇಕು ಅಂತಾನೂ ಗೊತ್ತು, ಆದ್ರೂ ನಾನು ಕ್ಷಮಿಸಬೇಕು ಅಂತ ಆತನು ಇಷ್ಟಪಡ್ತಾನೆ.” d
ಒಳ್ಳೇ ವಿಷ್ಯಗಳ ಬಗ್ಗೆ ಯೋಚ್ನೆ ಮಾಡಿ
13. ರೋಮನ್ನರಿಗೆ 12:18-21ರಲ್ಲಿ ಹೇಳಿರೋ ತರ ನಾವೇನು ಮಾಡಬೇಕು?
13 ನಿಮಗೆ ಯಾರಾದ್ರೂ ತುಂಬಾ ನೋವು ಮಾಡಿದ್ರೆ ಅದ್ರ ಬಗ್ಗೆ ಅವ್ರತ್ರ ಮಾತಾಡೋದೇ ಬೇಡ ಅಂತ ಅನಿಸಬಹುದು. ಆಗಿರೋ ಗಾಯನ ಕೆರೆದು ಯಾಕೆ ದೊಡ್ಡದು ಮಾಡೋದು ಅಂತ ಅಂದ್ಕೊಬಹುದು. ಆದ್ರೆ ಎಲ್ಲರ ಜೊತೆ ಶಾಂತಿ, ಸಮಾಧಾನದಿಂದ ಇರೋದೇ ನಮ್ಮ ಗುರಿ ಆಗಿರಬೇಕು. ಅದ್ರಲ್ಲೂ ನಿಮ್ಮ ಮನಸ್ಸು ನೋಯಿಸಿದವರು ಒಬ್ಬ ಸಹೋದರನೋ ಅಥವಾ ಸಹೋದರಿನೋ ಆಗಿದ್ರೆ ಅವ್ರ ಜೊತೆ ಸಮಾಧಾನ ಮಾಡ್ಕೊಳ್ಳಲೇಬೇಕು. (ಮತ್ತಾ. 5:23, 24) ಅವ್ರ ಮೇಲೆ ಕೋಪ ಇಟ್ಕೊಳ್ಳೋ ಬದ್ಲು ಅವ್ರಿಗೆ ಕರುಣೆ ತೋರಿಸಬೇಕು, ಅವ್ರನ್ನ ಕ್ಷಮಿಸಬೇಕು. (ರೋಮನ್ನರಿಗೆ 12:18-21 ಓದಿ; 1 ಪೇತ್ರ 3:9) ಇದನ್ನ ಮಾಡೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?
14. ನಾವೇನು ಮಾಡಬೇಕು? ಯಾಕೆ?
14 ಯೆಹೋವ ಯಾವಾಗ್ಲೂ ಬೇರೆಯವ್ರಲ್ಲಿ ಒಳ್ಳೇದನ್ನೇ ನೋಡ್ತಾನೆ. ಅದನ್ನೇ ನಾವೂ ಮಾಡಬೇಕು. (2 ಪೂರ್ವ. 16:9; ಕೀರ್ತ. 130:3) ನಮಗೆ ನೋವು ಮಾಡಿದವ್ರಲ್ಲೂ ಒಳ್ಳೇದನ್ನೇ ನೋಡಿದ್ರೆ ನಮಗೆ ಒಳ್ಳೇದೇ ಕಾಣ್ಸುತ್ತೆ. ಕೆಟ್ಟದನ್ನ ನೋಡಿದ್ರೆ ಕೆಟ್ಟದ್ದೇ ಕಾಣ್ಸುತ್ತೆ. ಹಾಗಾಗಿ ಒಳ್ಳೇದನ್ನೇ ನೋಡೋಣ, ಆಗ ಅವ್ರನ್ನ ಕ್ಷಮಿಸೋಕೆ ಸುಲಭ ಆಗುತ್ತೆ. ಜೆರೋಡ್ ಅನ್ನೋ ಸಹೋದರನೂ ಇದನ್ನೇ ಮಾಡಿದ್ರು. “ನನಗೆ ನೋವು ಮಾಡಿದ ಸಹೋದರನಲ್ಲಿರೋ ಒಳ್ಳೇ ಗುಣಗಳನ್ನ ನಾನು ಲೆಕ್ಕ ಹಾಕಿದೆ. ಆಗ ನನಗೆ ಅವರು ಮಾಡಿದ ನೋವಿಗಿಂತ ಅವ್ರಲ್ಲಿರೋ ಒಳ್ಳೇ ಗುಣಗಳೇ ಜಾಸ್ತಿ ಅಂತ ಗೊತ್ತಾಯ್ತು. ಅದಕ್ಕೇ ನಂಗೆ ಅವ್ರನ್ನ ಕ್ಷಮಿಸೋಕೆ ಸುಲಭ ಆಯ್ತು” ಅಂತ ಅವರು ಹೇಳ್ತಾರೆ.
15. ನಮಗೆ ನೋವು ಮಾಡಿದವ್ರಿಗೆ ‘ನಿಮ್ಮನ್ನ ಕ್ಷಮಿಸಿದ್ದೀನಿ’ ಅಂತ ಹೇಳೋದು ಯಾಕೆ ಮುಖ್ಯ?
15 ನಾವು ಇನ್ನೊಂದು ಮುಖ್ಯ ವಿಷ್ಯನೂ ಮಾಡಬೇಕು? ಅದೇನಂದ್ರೆ ನಮಗೆ ನೋವು ಮಾಡಿದ ವ್ಯಕ್ತಿ ಹತ್ರ ಹೋಗಿ ‘ನಾನು ನಿನ್ನನ್ನ ಕ್ಷಮಿಸಿದ್ದೀನಿ’ ಅಂತ ಹೇಳಬೇಕು. ಅದ್ಯಾಕೆ ಮುಖ್ಯ ಅಂತ ನವೊಮಿ ಮಾತಿಂದ ಗೊತ್ತಾಗುತ್ತೆ. “ನನ್ನ ಗಂಡ ನನ್ನ ಹತ್ರ ಬಂದು ‘ನೀನು ನನ್ನನ್ನ ಕ್ಷಮಿಸಿದ್ದೀಯಾ?’ ಅಂತ ಕೇಳಿದಾಗ ‘ಹೌದು, ನಾನು ಕ್ಷಮಿಸಿದ್ದೀನಿ’ ಅಂತ ಹೇಳೋಕೆ ತಡವರಿಸಿದೆ. ಆಗ ನನಗೆ, ‘ನಾನು ಅವ್ರನ್ನ ನಿಜವಾಗ್ಲೂ ಕ್ಷಮಿಸಿಲ್ಲ’ ಅಂತ ಗೊತ್ತಾಯ್ತು. ಸ್ವಲ್ಪ ಸಮಯ ಆದ್ಮೇಲೆ ಅವ್ರ ಹತ್ರ, ‘ನಾನು ನಿಮ್ಮನ್ನ ಕ್ಷಮಿಸಿದ್ದೀನಿ’ ಅಂತ ಹೇಳಿದೆ. ಆಗ ಅವ್ರಿಗೆ ಎಷ್ಟು ಸಮಾಧಾನ ಆಯ್ತಂದ್ರೆ ಅದನ್ನ ಕೇಳಿ ಅವರು ಅತ್ತೇಬಿಟ್ರು. ನನ್ನ ಮನಸ್ಸಿನ ಭಾರನೂ ಹಗುರ ಆಯ್ತು. ಈಗ ನಾನು ಅವ್ರನ್ನ ತುಂಬಾ ನಂಬ್ತೀನಿ. ನಾವಿಬ್ರು ಒಳ್ಳೇ ಫ್ರೆಂಡ್ಸ್ ಆಗಿದ್ದೀವಿ. ‘ನಾನು ನಿನ್ನನ್ನ ಕ್ಷಮಿಸಿದ್ದೀನಿ’ ಅನ್ನೋ ಮೂರು ಪದಕ್ಕೆ ಎಷ್ಟು ಶಕ್ತಿ ಇದೆ ಅಂತ ನನಗೀಗ ಅರ್ಥ ಆಗಿದೆ.”
16. ಕ್ಷಮಿಸೋದ್ರ ಬಗ್ಗೆ ನೀವೇನು ಕಲಿತ್ರಿ?
16 ನಾವು ಕ್ಷಮಿಸಬೇಕು ಅಂತ ಯೆಹೋವ ಇಷ್ಟಪಡ್ತಾನೆ. (ಕೊಲೊ. 3:13) ಆದ್ರೆ ಕೆಲವೊಮ್ಮೆ ಕ್ಷಮಿಸೋಕೆ ಕಷ್ಟ ಆಗುತ್ತೆ. ನೋವನ್ನ ಅದುಮಿ ಇಡದೇ ಕೋಪನ ಕಿತ್ತು ಬಿಸಾಕಿದ್ರೆ ಕ್ಷಮಿಸಬಹುದು. ಆಗ ನಮಗೆ ನೋವು ಮಾಡಿದವ್ರಲ್ಲಿರೋ ಒಳ್ಳೇ ವಿಷ್ಯಗಳ ಬಗ್ಗೆ ಯೋಚ್ನೆ ಮಾಡೋಕಾಗುತ್ತೆ, ಅವ್ರ ಜೊತೆ ಒಳ್ಳೇ ಸಂಬಂಧ ಬೆಳೆಸ್ಕೊಳ್ಳೋಕೂ ಆಗುತ್ತೆ.—“ ಕ್ಷಮಿಸೋಕೆ ಮೂರು ಹೆಜ್ಜೆ” ಅನ್ನೋ ಚೌಕ ನೋಡಿ.
ಕ್ಷಮಿಸೋದ್ರಿಂದ ಸಿಗೋ ಪ್ರಯೋಜನಗಳ ಬಗ್ಗೆ ಯೋಚ್ನೆ ಮಾಡಿ
17. ಕ್ಷಮಿಸೋದ್ರಿಂದ ಏನು ಪ್ರಯೋಜನ ಆಗುತ್ತೆ?
17 ನಮಗೆ ಕ್ಷಮಿಸೋಕೆ ತುಂಬಾ ಕಾರಣಗಳಿವೆ. ಅದ್ರಲ್ಲಿ ಒಂದು, ನಮ್ಮ ಕರುಣಾಮಯಿ ಅಪ್ಪ ಆಗಿರೋ ಯೆಹೋವನನ್ನ ಅನುಕರಿಸ್ತೀವಿ, ಆತನನ್ನ ಖುಷಿಪಡಿಸ್ತೀವಿ. (ಲೂಕ 6:36) ಎರಡು, ಯೆಹೋವ ನಮ್ಮನ್ನ ಕ್ಷಮಿಸಿರೋದಕ್ಕೆ ಆತನಿಗೆ ಋಣಿಗಳಾಗಿದ್ದೀವಿ ಅಂತ ತೋರಿಸ್ತೀವಿ. (ಮತ್ತಾ. 6:12) ಮೂರು, ನಮಗೆ ಒಳ್ಳೇ ಆರೋಗ್ಯ ಇರುತ್ತೆ, ಬೇರೆಯವ್ರ ಜೊತೆ ಒಳ್ಳೇ ಸ್ನೇಹ-ಸಂಬಂಧನೂ ಇರುತ್ತೆ.
18-19. ನಾವು ಬೇರೆಯವ್ರನ್ನ ಕ್ಷಮಿಸಿದ್ರೆ ಏನು ಪ್ರಯೋಜನ ಸಿಗುತ್ತೆ?
18 ನಾವು ಬೇರೆಯವ್ರನ್ನ ಕ್ಷಮಿಸಿದ್ರೆ ನೆನಸದಿರೋ ಆಶೀರ್ವಾದ ಪಡ್ಕೊಳ್ತೀವಿ. ಮೊದಲನೇ ಪ್ಯಾರದಲ್ಲಿ ನೋಡಿದ ಸಹೋದರಿ ಡೆನಿಸ್ ಅವ್ರ ಉದಾಹರಣೆ ನೆನಪಿದ್ಯಾ? ಅವ್ರಿಗೆ ಒಂದು ವಿಷ್ಯ ಗೊತ್ತಿರಲಿಲ್ಲ. ಅದೇನಂದ್ರೆ ಅವ್ರ ಗಾಡಿಗೆ ಡಿಕ್ಕಿ ಹೊಡೆದ ಡ್ರೈವರ್ ಕೋರ್ಟ್ ವಿಚಾರಣೆ ಮುಗಿದ ಮೇಲೆ ಆತ್ಮಹತ್ಯೆ ಮಾಡ್ಕೊಬೇಕು ಅಂತ ಅಂದ್ಕೊಂಡಿದ್ರು. ಆದ್ರೆ ಈ ಸಹೋದರಿ ಅವ್ರನ್ನ ಕ್ಷಮಿಸಿದ್ರಿಂದ ಅವರು ಯೆಹೋವನ ಸಾಕ್ಷಿಗಳ ಹತ್ರ ಬೈಬಲ್ ಕಲಿಯೋಕೆ ಶುರುಮಾಡಿದ್ರು.
19 ‘ನೋವು ಮಾಡಿದವ್ರನ್ನ ಸತ್ರೂ ಕ್ಷಮಿಸಲ್ಲ’ ಅಂತ ನಾವು ಅಂದ್ಕೊಬಹುದು. ಆದ್ರೆ ನೆನಪಿಡಿ, ನಾವು ಕ್ಷಮಿಸಿದ್ರೆ ಮಾತ್ರ ನಮಗೆ ಆಶೀರ್ವಾದ ಸಿಗುತ್ತೆ. (ಮತ್ತಾ. 5:7) ಅದಕ್ಕೇ ನಾವು ನಮ್ಮ ಅಪ್ಪ ಯೆಹೋವನ ತರ ಯಾವಾಗ್ಲೂ ಬೇರೆಯವ್ರನ್ನ ಕ್ಷಮಿಸ್ತಾ ಇರೋಣ.
ಗೀತೆ 49 ಯೆಹೋವನ ಮನಸ್ಸನ್ನ ಖುಷಿಪಡಿಸುವುದು
a ಕೆಲವ್ರ ಹೆಸ್ರು ಬದಲಾಗಿದೆ.
b ಇಂಥ ಕೆಲವು ಸನ್ನಿವೇಶಗಳಲ್ಲಿ ಏನು ಮಾಡಬೇಕು ಅಂತ ಪ್ರತಿಯೊಬ್ಬ ಕ್ರೈಸ್ತ ತಾನೇ ತೀರ್ಮಾನ ತಗೊಬೇಕು.
c jw.orgನಲ್ಲಿರೋ “ಫರ್‌ಗೀವ್ ಒನ್ ಅನದರ್” (ಇಂಗ್ಲಿಷ್), “ಕ್ಷಮ್ಸೋಕೆ ಕಲ್ಸು,” “ಈ ಸ್ನೇಹವ ಕಾಪಾಡುವೆ” ಅನ್ನೋ ಹಾಡುಗಳನ್ನ ನೋಡಿ.
d ಅಶ್ಲೀಲ ವಿಷ್ಯಗಳನ್ನ ನೋಡೋದು ಪಾಪ. ಇದ್ರಿಂದ ತಪ್ಪು ಮಾಡದ ಸಂಗಾತಿಗೆ ನೋವಾಗುತ್ತೆ ನಿಜ. ಆದ್ರೆ ಇದ್ರ ಆಧಾರದ ಮೇಲೆ ವಿಚ್ಛೇದನ ಕೊಡೋದನ್ನ ಬೈಬಲ್ ಒಪ್ಪಲ್ಲ.