ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವ ಜನರೇ, ದೀಕ್ಷಾಸ್ನಾನಕ್ಕೆ ತಯಾರಾಗಲು ನೀವೇನು ಮಾಡಬೇಕು?

ಯುವ ಜನರೇ, ದೀಕ್ಷಾಸ್ನಾನಕ್ಕೆ ತಯಾರಾಗಲು ನೀವೇನು ಮಾಡಬೇಕು?

“ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷ.”—ಕೀರ್ತ. 40:8.

ಗೀತೆಗಳು: 51, 58

1, 2. (ಎ) ದೀಕ್ಷಾಸ್ನಾನ ಯಾಕೆ ಗಂಭೀರ ನಿರ್ಣಯವೆಂದು ವಿವರಿಸಿ. (ಬಿ) ದೀಕ್ಷಾಸ್ನಾನ ಆಗುವ ಮುಂಚೆ ಒಬ್ಬ ವ್ಯಕ್ತಿ ಏನನ್ನು ತಿಳಿದಿರಬೇಕು?

ದೀಕ್ಷಾಸ್ನಾನ ಪಡೆಯಲು ಬಯಸುವ ಯುವ ವ್ಯಕ್ತಿ ನೀವಾಗಿದ್ದೀರಾ? ಹೌದಾದರೆ ಅದು ಒಳ್ಳೆಯದೇ. ದೀಕ್ಷಾಸ್ನಾನ ಪಡೆಯುವುದಕ್ಕಿಂತ ದೊಡ್ಡ ಸೌಭಾಗ್ಯ ಬೇರೊಂದಿಲ್ಲ. ಕಳೆದ ಲೇಖನದಲ್ಲಿ ಕಲಿತಂತೆ ದೀಕ್ಷಾಸ್ನಾನ ಒಂದು ಗಂಭೀರ ನಿರ್ಣಯ. ಆ ಮೂಲಕ ನೀವು ದೇವರಿಗೆ ಸಮರ್ಪಣೆ ಮಾಡಿಕೊಂಡಿದ್ದೀರೆಂದು ಎಲ್ಲರಿಗೆ ತೋರಿಸಿಕೊಡುತ್ತೀರಿ. ಸಮರ್ಪಣೆ ಅಂದರೆ ‘ಎಂದೆಂದಿಗೂ ನಿನ್ನ ಸೇವೆಮಾಡ್ತೇನೆ, ನಿನ್ನ ಚಿತ್ತ ಮಾಡುವುದೇ ನನ್ನ ಜೀವನದಲ್ಲಿ ಎಲ್ಲಕ್ಕಿಂತ ಮುಖ್ಯ’ ಎಂದು ಪ್ರಾರ್ಥನೆಯಲ್ಲಿ ದೇವರಿಗೆ ಮಾತುಕೊಡುವುದೇ. ಇದೊಂದು ಗಂಭೀರ ವಿಷಯ. ಹಾಗಾಗಿ ನೀವು ಪ್ರೌಢರಾದಾಗ, ಸಮರ್ಪಣೆ ಮಾಡುವುದರ ಅರ್ಥವೇನೆಂದು ತಿಳಿದಾಗ ಮಾತ್ರ ದೀಕ್ಷಾಸ್ನಾನ ಪಡೆಯಬೇಕು. ಇದು ನಿಮ್ಮ ಸ್ವಂತ ನಿರ್ಣಯವಾಗಿರಬೇಕು.

2 ‘ನಾನಿನ್ನೂ ದೀಕ್ಷಾಸ್ನಾನ ತಕ್ಕೊಳ್ಳಲು ಸಿದ್ಧನಾಗಿಲ್ಲ’ ಎಂದು ನಿಮಗನಿಸುತ್ತದಾ? ಅಥವಾ ಸಿದ್ಧರಾಗಿದ್ದೀರೆಂದು ನಿಮಗನಿಸಿದರೂ ಹೆತ್ತವರು ‘ನೀನಿನ್ನೂ ದೊಡ್ಡವನಾಗಬೇಕು, ಜೀವನದಲ್ಲಿ ಇನ್ನೂ ಸ್ವಲ್ಪ ಅನುಭವ ಪಡೆಯಬೇಕು’ ಎಂದು ಹೇಳುತ್ತಿದ್ದಾರಾ? ನಿರಾಶರಾಗಬೇಡಿ. ನಿಮಗಿರುವ ಈ ಸಮಯವನ್ನು ಪ್ರಗತಿಮಾಡಲು ಬಳಸಿದರೆ ಬೇಗನೆ ದೀಕ್ಷಾಸ್ನಾನಕ್ಕೆ ಅರ್ಹರಾಗುವಿರಿ. ಈ ಮೂರು ವಿಷಯಗಳನ್ನು ಮಾಡಿ: (1) ನಿಮ್ಮ ನಂಬಿಕೆಗಳನ್ನು ಪರೀಕ್ಷಿಸಿ ತಿಳಿದುಕೊಳ್ಳಿ, (2) ಕ್ರಿಯೆಗಳಲ್ಲಿ ನಂಬಿಕೆ ತೋರಿಸಿ ಮತ್ತು (3) ಯೆಹೋವನಿಗಾಗಿ ನಿಮ್ಮ ಕೃತಜ್ಞತೆ ಹೆಚ್ಚಿಸಿ.

ನಿಮ್ಮ ನಂಬಿಕೆಗಳನ್ನು ಪರೀಕ್ಷಿಸಿ ತಿಳಿದುಕೊಳ್ಳಿ

3, 4. ತಿಮೊಥೆಯನ ಮಾದರಿಯಿಂದ ಯುವ ಜನರು ಏನು ಕಲಿಯಬಹುದು?

3 ನಿಮಗೆ ನೀವೇ ಈ ಮುಂದಿನ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರಗಳ ಬಗ್ಗೆ ಯೋಚಿಸಿ: ‘ದೇವರಿದ್ದಾನೆ ಅಂತ ನಾನ್ಯಾಕೆ ನಂಬುತ್ತೇನೆ? ಬೈಬಲ್‌ ದೇವರು ಬರೆಯಿಸಿದ ಪುಸ್ತಕ ಅಂತ ಯಾಕೆ ನಂಬುತ್ತೇನೆ? ಲೋಕದ ನೈತಿಕ ಮಟ್ಟಗಳನ್ನು ಅನುಸರಿಸದೆ ದೇವರ ಆಜ್ಞೆಗಳನ್ನು ಯಾಕೆ ಪಾಲಿಸುತ್ತೇನೆ?’ ಇಂಥ ಪ್ರಶ್ನೆಗಳನ್ನು ಕೇಳಿಕೊಂಡರೆ ಅಪೊಸ್ತಲ ಪೌಲನ ಸಲಹೆಯಂತೆ ‘ದೇವರ ಉತ್ತಮವಾದ, ಸ್ವೀಕೃತವಾದ, ಪರಿಪೂರ್ಣವಾದ ಚಿತ್ತವು ಯಾವುದೆಂದು ಪರಿಶೋಧಿಸಿ ತಿಳಿದುಕೊಳ್ಳುವಿರಿ.’ (ರೋಮ. 12:2) ನೀವಿದನ್ನು ಯಾಕೆ ಮಾಡಬೇಕು?

4 ತಿಮೊಥೆಯನ ಮಾದರಿಯನ್ನು ಗಮನಿಸಿ. ಅವನಿಗೆ ಶಾಸ್ತ್ರಗ್ರಂಥದ ಒಳ್ಳೆಯ ಜ್ಞಾನವಿತ್ತು ಯಾಕೆಂದರೆ ಅವನ ತಾಯಿ ಮತ್ತು ಅಜ್ಜಿ ಅದನ್ನು ಕಲಿಸಿದ್ದರು. ಆದರೆ ಪೌಲನು ತಿಮೊಥೆಯನಿಗೆ, “ನೀನಾದರೋ ಕಲಿತ ವಿಷಯಗಳಲ್ಲಿಯೂ ನಂಬುವಂತೆ ಒಡಂಬಡಿಸಲ್ಪಟ್ಟ ವಿಷಯಗಳಲ್ಲಿಯೂ ಮುಂದುವರಿಯುತ್ತಾ ಇರು” ಎಂದು ಹೇಳಿದನು. (2 ತಿಮೊ. 3:14, 15) ಇಲ್ಲಿ “ಒಡಂಬಡಿಸಲ್ಪಟ್ಟ” ಎಂಬ ಪದದ ಅರ್ಥ “ಒಂದು ವಿಷಯ ಸತ್ಯವೆಂದು ಮನವರಿಕೆಯಾಗಿರುವುದು ಹಾಗೂ ದೃಢನಿಶ್ಚಯ ಇರುವುದು” ಎಂದಾಗಿದೆ. ತಿಮೊಥೆಯನಿಗೆ ಶಾಸ್ತ್ರಗ್ರಂಥದಲ್ಲಿರುವುದು ಸತ್ಯವೆಂದು ಸ್ವತಃ ಮನವರಿಕೆ ಆಗಬೇಕಿತ್ತು. ತಾಯಿ ಮತ್ತು ಅಜ್ಜಿ ಹೇಳಿಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಅವನು ಸತ್ಯವನ್ನು ಸ್ವೀಕರಿಸಲಿಲ್ಲ, ಅದು ಸತ್ಯ ಎಂದು ಅವನೇ ಪರೀಕ್ಷಿಸಿ ತಿಳಿದುಕೊಂಡನು ಮತ್ತು ನಂಬಿದನು.1 ಥೆಸಲೊನೀಕ 5:21 ಓದಿ.

5, 6. ಚಿಕ್ಕ ವಯಸ್ಸಲ್ಲೇ ‘ಎಲ್ಲ ವಿಷಯಗಳನ್ನು ಪರಿಶೋಧಿಸಿ ಖಚಿತಪಡಿಸಲು’ ನೀವೇಕೆ ಕಲಿಯಬೇಕು?

5 ಬೈಬಲ್‌ ಸತ್ಯದ ಬಗ್ಗೆ ನಿಮಗೆ ಸಹ ತುಂಬ ಸಮಯದಿಂದ ಗೊತ್ತಿರಬಹುದು. ಆದರೂ ಅದು ಸತ್ಯವೆಂದು ನೀವು ನಂಬಲು ಕಾರಣಗಳೇನು ಎಂದು ತಿಳಿದುಕೊಳ್ಳಿ. ಇದನ್ನು ಒಂದು ಗುರಿಯಾಗಿಡಿ. ಇದರಿಂದ ನಿಮ್ಮ ನಂಬಿಕೆ ದೃಢವಾಗುತ್ತದೆ. ಆಗ ಸಮಪ್ರಾಯದವರ ಒತ್ತಡ, ಲೋಕದ ಯೋಚನಾ ರೀತಿ ಅಥವಾ ನಿಮ್ಮ ಸ್ವಂತ ಇಚ್ಛೆಗಳಿಗನುಸಾರ ನೀವು ತಪ್ಪು ನಿರ್ಣಯ ಮಾಡುವುದಿಲ್ಲ.

6 ಈ ಚಿಕ್ಕ ವಯಸ್ಸಲ್ಲೇ ನೀವು ‘ಎಲ್ಲ ವಿಷಯಗಳನ್ನು ಪರಿಶೋಧಿಸಿ ಖಚಿತಪಡಿಸಲು’ ಕಲಿತರೆ, ನಿಮ್ಮ ಸಮಪ್ರಾಯದವರು ಕೇಳುವ ಪ್ರಶ್ನೆಗಳಿಗೆ ತಕ್ಕಮಟ್ಟಿಗೆ ಉತ್ತರಕೊಡಲು ನಿಮ್ಮಿಂದ ಆಗುತ್ತದೆ. “ದೇವರಿದ್ದಾನೆ ಅಂತ ನಿನಗೆ ಹೇಗೆ ಗೊತ್ತು? ದೇವರಿಗೆ ನಮ್ಮ ಮೇಲೆ ಪ್ರೀತಿಯಿದ್ದರೆ ಕೆಟ್ಟ ವಿಷಯಗಳೆಲ್ಲ ನಡೆಯುವಂತೆ ಯಾಕೆ ಬಿಟ್ಟಿದ್ದಾನೆ? ಎಲ್ಲದಕ್ಕೂ ಆರಂಭ ಇದ್ದೇ ಇರುತ್ತೆ, ದೇವರಿಗೆ ಆರಂಭ ಇಲ್ಲ ಅಂದ್ರೆ ಅದು ಹೇಗೆ?” ಎಂದೆಲ್ಲಾ ಅವರು ಕೇಳಬಹುದು. ನೀವು ಮುಂಚೆಯೇ ತಯಾರಿದ್ದರೆ ಇಂಥ ಪ್ರಶ್ನೆಗಳು ನಿಮ್ಮ ಮನಸ್ಸಲ್ಲಿ ಸಂಶಯ ಹುಟ್ಟಿಸುವುದಿಲ್ಲ ಬದಲಾಗಿ ಬೈಬಲನ್ನು ಇನ್ನೂ ಹೆಚ್ಚಾಗಿ ಅಧ್ಯಯನ ಮಾಡುವಂತೆ ಪ್ರೇರಿಸುವವು.

7-9. ಬೈಬಲ್‌ ಬೋಧಿಸುತ್ತದೆ ಪುಸ್ತಕವು ನಿಮ್ಮ ನಂಬಿಕೆಯನ್ನು ಬಲಗೊಳಿಸಲು ಹೇಗೆ ಸಹಾಯಮಾಡುತ್ತದೆಂದು ವಿವರಿಸಿ.

7 ಬೇರೆಯವರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಲು, ನಿಮಗಿರುವ ಸಂಶಯಗಳನ್ನು ನಿವಾರಿಸಲು, ನಿಮ್ಮ ನಂಬಿಕೆಗಳ ಬಗ್ಗೆ ನಿಮಗಿರುವ ಭರವಸೆಯನ್ನು ಬಲಗೊಳಿಸಲು ನೀವೇ ಬೈಬಲನ್ನು ಜಾಗ್ರತೆಯಿಂದ ಅಧ್ಯಯನ ಮಾಡಿ. (ಅ. ಕಾ. 17:11) ಈ ಅಧ್ಯಯನಕ್ಕೆ ನಮ್ಮ ಹಲವಾರು ಪ್ರಕಾಶನಗಳು ನೆರವಾಗುತ್ತವೆ. ನಮ್ಮ ಮಹಾನ್‌ ನಿರ್ಮಾಣಿಕನ ಕುರಿತು, ಆತನ ಸೃಷ್ಟಿಕಾರ್ಯಗಳ ಕುರಿತು ವಿವರಿಸುವ ಪ್ರಕಾಶನಗಳನ್ನು ಓದಿ ಅಧ್ಯಯನ ಮಾಡುವುದರಿಂದ ಅನೇಕ ಯುವ ಜನರಿಗೆ ಸಹಾಯ ಸಿಕ್ಕಿದೆ. ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕ ಸಹ ಬೈಬಲ್‌ ವಿಷಯವೊಂದರ ಬಗ್ಗೆ ನಿಮ್ಮ ಭರವಸೆಯನ್ನು ಬಲಗೊಳಿಸುವುದು.

8 ಬೈಬಲಿನಲ್ಲಿರುವ ವಿಷಯಗಳು ನಿಮಗೆ ಗೊತ್ತಿರುವುದರಿಂದ ಬೈಬಲ್‌ ಬೋಧಿಸುತ್ತದೆ ಪುಸ್ತಕದಲ್ಲಿರುವ ಪ್ರಶ್ನೆಗಳಿಗೆ ಉತ್ತರಗಳು ಕೂಡ ಈಗಾಗಲೇ ತಿಳಿದಿರಬಹುದು. ಆದರೆ ಆ ಉತ್ತರಗಳು ಸತ್ಯವೆಂಬ ಖಾತ್ರಿ ನಿಮಗಿದೆಯಾ? ಈ ಪುಸ್ತಕದ ಅಧ್ಯಾಯಗಳ ಶೀರ್ಷಿಕೆಗಳನ್ನು ಮತ್ತು ಅದರ ಕೆಳಗಿರುವ ಪ್ರಶ್ನೆಗಳನ್ನು ಪುನಃ ಓದಿ. ನಿಮ್ಮ ಉತ್ತರಗಳಿಗೆ ಯಾವ ಬೈಬಲ್‌ ವಚನಗಳನ್ನು ಆಧಾರವಾಗಿ ಬಳಸುವಿರೆಂದು ಜಾಗ್ರತೆಯಿಂದ ಯೋಚಿಸಿ. ಅವನ್ನು ನೀವೇಕೆ ನಂಬುತ್ತೀರಿ ಎಂಬುದಕ್ಕೆ ಕಾರಣಗಳನ್ನು ತಿಳಿದುಕೊಳ್ಳಿ. ಅವುಗಳನ್ನು ಬರೆದಿಡಲೂಬಹುದು. ನಿಮ್ಮ ವೈಯಕ್ತಿಕ ಅಧ್ಯಯನದಲ್ಲಿ ಇದನ್ನು ಮಾಡುವುದರಿಂದ ನಿಮ್ಮ ನಂಬಿಕೆ ದೃಢಗೊಳ್ಳುವುದು. ಅಲ್ಲದೆ, ಅದನ್ನು ಬೇರೆಯವರಿಗೆ ವಿವರಿಸಲು ಸಹಾಯವಾಗುವುದು.

9 ನೀವು ಕಲಿತಿರುವ ಬೈಬಲ್‌ ವಿಷಯ ಸತ್ಯವೆಂದು ನಿಮಗೆ ಮನವರಿಕೆಯಾಗಬೇಕು. ಆಗ ನೀವು ದೀಕ್ಷಾಸ್ನಾನಕ್ಕೆ ತಯಾರಾಗಿರುವಿರಿ. ಹದಿವಯಸ್ಸಿನ ಒಬ್ಬ ಸಹೋದರಿ ಹೇಳುವುದು: “ನಾನು ದೀಕ್ಷಾಸ್ನಾನ ಪಡೆಯುವ ನಿರ್ಧಾರ ಮಾಡುವ ಮುಂಚೆ ಬೈಬಲಿನ ಅಧ್ಯಯನ ಮಾಡಿದ್ದೆ. ಇದೇ ಸತ್ಯ ಎಂದು ನನಗೆ ಮನವರಿಕೆ ಆಗಿತ್ತು. ಈ ನಂಬಿಕೆ ದಿನದಿಂದ ದಿನಕ್ಕೆ ನನ್ನಲ್ಲಿ ಹೆಚ್ಚಾಗುತ್ತಿದೆ.”

ಕ್ರಿಯೆಗಳಲ್ಲಿ ನಂಬಿಕೆ ತೋರಿಸಿ

10. ದೀಕ್ಷಾಸ್ನಾನವಾದವನು ತನ್ನ ನಂಬಿಕೆಯನ್ನು ಕ್ರಿಯೆಗಳಲ್ಲಿ ತೋರಿಸುತ್ತಾನೆ ಯಾಕೆ?

10 ಕ್ರಿಯೆಗಳಿಲ್ಲದ ನಂಬಿಕೆ ಸತ್ತದ್ದೇ ಎಂದು ಬೈಬಲ್‌ ಹೇಳುತ್ತದೆ. (ಯಾಕೋ. 2:17) ನಿಮ್ಮಲ್ಲಿ ದೃಢವಾದ ನಂಬಿಕೆಯಿದ್ದರೆ ಅದನ್ನು ನಿಮ್ಮ ಕ್ರಿಯೆಗಳಿಂದ ತೋರಿಸುವಿರಿ. ಎಂಥ ಕ್ರಿಯೆಗಳು? ‘ಪವಿತ್ರ ನಡತೆ ಹಾಗೂ ದೇವಭಕ್ತಿಯ ಕ್ರಿಯೆಗಳು.’—2 ಪೇತ್ರ 3:11 ಓದಿ.

11. “ಪವಿತ್ರ ನಡತೆ” ಅಂದರೇನು?

11 “ಪವಿತ್ರ ನಡತೆ” ಅಂದರೆ ನೈತಿಕವಾಗಿ ಶುದ್ಧರಾಗಿರುವುದು. ಉದಾಹರಣೆಗೆ ಕಳೆದ ಆರು ತಿಂಗಳಲ್ಲಿ ನಿಮ್ಮ ನಡತೆ ಹೇಗಿತ್ತೆಂದು ಯೋಚಿಸಿ. ತಪ್ಪು ಮಾಡುವ ಒತ್ತಡ ಬಂದಾಗ ಅಥವಾ ಆಲೋಚನೆ ಬಂದಾಗ ಸರಿ ಯಾವುದು, ತಪ್ಪು ಯಾವುದು ಎಂದು ಜಾಗ್ರತೆಯಿಂದ ಯೋಚಿಸಿ ಸರಿಯಾದದ್ದನ್ನೇ ಮಾಡಿದ್ದೀರಾ? (ಇಬ್ರಿ. 5:14) ಸಮಪ್ರಾಯದವರ ಒತ್ತಡ ಅಥವಾ ತಪ್ಪು ಮಾಡುವ ಯೋಚನೆಗಳನ್ನು ಜಯಿಸಿದ ನಿರ್ದಿಷ್ಟ ಸಂದರ್ಭಗಳು ನಿಮಗೆ ನೆನಪಿವೆಯಾ? ಶಾಲಾಕಾಲೇಜಿನಲ್ಲಿ ನೀವು ಬೇರೆಯವರಿಗೆ ಒಳ್ಳೇ ಮಾದರಿಯಾಗಿದ್ದೀರಾ? ಯೆಹೋವನಿಗೆ ನಂಬಿಗಸ್ತರಾಗಿದ್ದಿರಾ ಅಥವಾ ನಿಮ್ಮ ಸಹಪಾಠಿಗಳು ಗೇಲಿಮಾಡುತ್ತಾರೆ ಅಂತ ಅವರಂತಿರಲು ಪ್ರಯತ್ನಿಸಿದ್ದಿರಾ? (1 ಪೇತ್ರ 4:3, 4) ಯಾರೂ ಪರಿಪೂರ್ಣರಲ್ಲ ನಿಜ. ಅನೇಕ ವರ್ಷಗಳಿಂದ ಯೆಹೋವನ ಸೇವಕರಾಗಿರುವ ಕೆಲವರಿಗೂ ಎಲ್ಲರ ಮುಂದೆ ತಮ್ಮ ನಂಬಿಕೆಯ ಪರವಾಗಿ ದೃಢವಾಗಿ ನಿಲ್ಲಲು ಕಷ್ಟವಾಗುತ್ತದೆ. ಹಾಗೆ ನಿಮಗೂ ಆಗಬಹುದು. ಆದರೆ ಒಂದು ವಿಷಯ ನೆನಪಿಡಿ: ದೇವರಿಗೆ ಸಮರ್ಪಿಸಿಕೊಂಡವರು ಯೆಹೋವನ ಸಾಕ್ಷಿಗಳಾಗಿರಲು ನಾಚಿಕೆಪಡಬಾರದು, ಹೆಮ್ಮೆಪಡಬೇಕು. ಅದನ್ನು ಅವರು ತಮ್ಮ ಶುದ್ಧ ನಡತೆಯಿಂದ ತೋರಿಸಬೇಕು.

12. (ಎ) ‘ದೇವಭಕ್ತಿಯ ಕ್ರಿಯೆಗಳಲ್ಲಿ’ ಕೆಲವು ಯಾವುವು? (ಬಿ) ಅವುಗಳನ್ನು ನೀವು ಹೇಗೆ ಕಾಣಬೇಕು?

12 “ದೇವಭಕ್ತಿಯ ಕ್ರಿಯೆಗಳು” ಯಾವುವು? ಇವು, ಸಭೆಗೆ ಸಂಬಂಧಿಸಿ ನೀವು ಮಾಡುವ ಕೆಲಸಗಳನ್ನು ಸೂಚಿಸುತ್ತವೆ. ಉದಾಹರಣೆಗೆ ಕೂಟಕ್ಕೆ ಹೋಗುವುದು, ಸೇವೆಗೆ ಹೋಗುವುದು ಇತ್ಯಾದಿ. ಯಾರೂ ನೋಡದ ವಿಷಯಗಳನ್ನೂ ಅವು ಸೂಚಿಸುತ್ತವೆ. ನಿಮ್ಮ ವೈಯಕ್ತಿಕ ಪ್ರಾರ್ಥನೆಗಳು, ನಿಮ್ಮ ವೈಯಕ್ತಿಕ ಬೈಬಲ್‌ ಅಧ್ಯಯನ ಮುಂತಾದವು. ಯೆಹೋವನಿಗೆ ಸಮರ್ಪಿಸಿಕೊಂಡ ವ್ಯಕ್ತಿಗೆ ಈ ಕೆಲಸಗಳೆಲ್ಲ ದೊಡ್ಡ ಭಾರವೆನಿಸುವುದಿಲ್ಲ. ಅವನ ಅನಿಸಿಕೆ ರಾಜ ದಾವೀದನಂತೆ ಇರುತ್ತದೆ: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.”—ಕೀರ್ತ. 40:8.

13, 14. (ಎ) ‘ದೇವಭಕ್ತಿಯ ಕ್ರಿಯೆಗಳನ್ನು’ ಮಾಡಲು ಯಾವುದು ಸಹಾಯಮಾಡುತ್ತದೆ? (ಬಿ) ಇದರಿಂದ ಕೆಲವು ಯುವ ಜನರಿಗೆ ಹೇಗೆ ಸಹಾಯವಾಗಿದೆ?

13 ದೇವಭಕ್ತಿಯ ಕ್ರಿಯೆಗಳನ್ನು ನಡೆಸಲು ಕೆಲವೊಂದು ಪ್ರಶ್ನೆಗಳ ಬಗ್ಗೆ ಯೋಚಿಸಿ. ಉದಾಹರಣೆಗೆ: “ನಿಮ್ಮ ಪ್ರಾರ್ಥನೆಯಲ್ಲಿ ವಿಷಯಗಳನ್ನು ನಿರ್ದಿಷ್ಟವಾಗಿ ಹೇಳ್ತಿರಾ? ಯೆಹೋವನನ್ನು ತುಂಬ ಪ್ರೀತಿಸುತ್ತೀರೆಂದು ನಿಮ್ಮ ಪ್ರಾರ್ಥನೆ ತೋರಿಸುತ್ತದಾ? ನಿಮ್ಮ ವೈಯಕ್ತಿಕ ಅಧ್ಯಯನದಲ್ಲಿ ಯಾವೆಲ್ಲ ವಿಷಯಗಳನ್ನು ಒಳಗೂಡಿಸುತ್ತೀರಿ? ಅಪ್ಪಅಮ್ಮ ಸೇವೆಗೆ ಹೋಗದೇ ಇದ್ದಾಗಲೂ ನೀವು ಹೋಗುತ್ತೀರಾ?”  [1] ಇಂಥ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದಿಡಿ. ಇವು ನಿಮ್ಮ ಪ್ರಾರ್ಥನೆ, ವೈಯಕ್ತಿಕ ಬೈಬಲ್‌ ಅಧ್ಯಯನ, ಸೇವೆಯಲ್ಲಿ ಪ್ರಗತಿಮಾಡಲಿಕ್ಕಾಗಿ ಗುರಿಗಳನ್ನಿಡಲು ನಿಮಗೆ ಸಹಾಯಮಾಡುವವು.

14 ಅಂಥ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವುದರಿಂದ ದೀಕ್ಷಾಸ್ನಾನ ಪಡೆಯಲು ಬಯಸುವ ಕೆಲವು ಯುವ ಜನರಿಗೆ ತುಂಬ ಸಹಾಯವಾಗಿದೆ. ಹಾಗೆ ಮಾಡಿದ್ದರಿಂದ ಗುರಿಗಳನ್ನಿಡಲು ತುಂಬ ಸಹಾಯವಾಯಿತೆಂದು ಟಿಲ್ಡಾ ಎಂಬ ಯುವ ಸಹೋದರಿ ಹೇಳುತ್ತಾಳೆ. ಅವಳು ಆ ಗುರಿಗಳನ್ನು ಒಂದೊಂದಾಗಿ ಮುಟ್ಟಿದಳು. ಸುಮಾರು ಒಂದು ವರ್ಷದ ನಂತರ ದೀಕ್ಷಾಸ್ನಾನಕ್ಕೆ ತಯಾರಾದಳು. ಯುವ ಸಹೋದರ ಪ್ಯಾಟ್ರಿಕ್‌ ಕೂಡ ಹೀಗೆಯೇ ಪ್ರಯೋಜನ ಪಡೆದ. ಅವನಂದದ್ದು: “ನನ್ನ ಗುರಿಗಳು ಏನು ಅಂತ ನನಗೆ ಗೊತ್ತಿತ್ತು. ಆದರೆ ಅವುಗಳನ್ನು ಬರೆದಿಟ್ಟಿದ್ದರಿಂದ ಅವುಗಳನ್ನು ಮುಟ್ಟಲು ಜಾಸ್ತಿ ಪ್ರಯತ್ನಿಸಿದೆ.”

ಅಪ್ಪಅಮ್ಮ ಯೆಹೋವನ ಸೇವೆ ಮಾಡುವುದನ್ನು ನಿಲ್ಲಿಸಿಬಿಟ್ಟರೂ ನೀವು ಮುಂದುವರಿಸುವಿರಾ? (ಪ್ಯಾರ 15 ನೋಡಿ)

15. ಸಮರ್ಪಣೆ ಯಾಕೆ ನಿಮ್ಮ ಸ್ವಂತ ನಿರ್ಣಯವಾಗಿರಬೇಕು ಎಂದು ವಿವರಿಸಿ.

15 ಅಂಥ ಮುಖ್ಯವಾದ ಪ್ರಶ್ನೆಗಳಲ್ಲಿ ಒಂದು ಹೀಗಿದೆ: “ನಿಮ್ಮ ಅಪ್ಪಅಮ್ಮ ಮತ್ತು ಸ್ನೇಹಿತರು ಯೆಹೋವನ ಸೇವೆ ಮಾಡುವುದನ್ನು ನಿಲ್ಲಿಸಿಬಿಟ್ಟರೂ ನೀವು ಮುಂದುವರಿಸುವಿರಾ?” ನೀವು ಸಮರ್ಪಣೆ ಮಾಡಿ ದೀಕ್ಷಾಸ್ನಾನ ಪಡೆಯುವಾಗ ಯೆಹೋವನೊಂದಿಗೆ ನಿಮ್ಮದೇ ಆದ ಸ್ವಂತ ಸಂಬಂಧ ಶುರುವಾಗುತ್ತದೆ. ಹಾಗಾಗಿ ನೀವು ಯೆಹೋವನ ಸೇವೆಯನ್ನು ನಿಮ್ಮ ಹೆತ್ತವರಿಗೋಸ್ಕರ ಅಥವಾ ಬೇರೆ ಯಾರಿಗೋಸ್ಕರವೂ ಮಾಡಬೇಡಿ. ಬದಲಾಗಿ ಸತ್ಯವನ್ನು ಕಲಿತಿದ್ದೀರೆಂಬ ಮನವರಿಕೆ ನಿಮಗಿರುವುದರಿಂದ, ಅದಕ್ಕನುಸಾರ ಜೀವಿಸಲು ಬಯಸುವುದರಿಂದ ಪವಿತ್ರ ನಡತೆ ಹಾಗೂ ದೇವಭಕ್ತಿಯ ಕ್ರಿಯೆಗಳನ್ನು ಮಾಡಿ. ಆಗ ನೀವು ಬೇಗನೆ ದೀಕ್ಷಾಸ್ನಾನಕ್ಕೆ ಅರ್ಹರಾಗುವಿರಿ.

ಯೆಹೋವನಿಗಾಗಿ ನಿಮ್ಮ ಕೃತಜ್ಞತೆ ಹೆಚ್ಚಿಸಿ

16, 17. (ಎ) ಕ್ರೈಸ್ತನಾಗಲು ಒಬ್ಬನನ್ನು ಯಾವುದು ಪ್ರೇರಿಸಬೇಕು? (ಬಿ) ವಿಮೋಚನಾ ಮೌಲ್ಯಕ್ಕೆ ನೀವೇಕೆ ಕೃತಜ್ಞರಾಗಿರಬೇಕು ಎಂಬುದಕ್ಕೆ ಉದಾಹರಣೆ ಕೊಡಿ.

16 ಧರ್ಮಶಾಸ್ತ್ರದ ಬಗ್ಗೆ ಚೆನ್ನಾಗಿ ಗೊತ್ತಿದ್ದ ಒಬ್ಬ ಮನುಷ್ಯನು ಒಮ್ಮೆ ಯೇಸುವಿಗೆ, “ಧರ್ಮಶಾಸ್ತ್ರದಲ್ಲಿ ಅತಿ ದೊಡ್ಡ ಆಜ್ಞೆ ಯಾವುದು?” ಎಂದು ಕೇಳಿದನು. ಅದಕ್ಕೆ ಯೇಸು, “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು” ಎಂದನು. (ಮತ್ತಾ. 22:35-37) ಯೇಸು ಇಲ್ಲಿ, ಒಬ್ಬ ಕ್ರೈಸ್ತನು ಮಾಡಬೇಕಾದ ಕೆಲಸಗಳಿಗೆ ಯೆಹೋವನ ಮೇಲಿನ ಪ್ರೀತಿಯೇ ಪ್ರೇರಣೆಯಾಗಿರಬೇಕು ಎಂದು ವಿವರಿಸಿದನು. ಈ ಕೆಲಸಗಳಲ್ಲಿ ದೀಕ್ಷಾಸ್ನಾನವೂ ಸೇರಿದೆ. ಯೆಹೋವನ ಮೇಲಿನ ನಮ್ಮ ಪ್ರೀತಿಯನ್ನು ಹೆಚ್ಚಿಸುವ ಒಂದು ಉತ್ತಮ ವಿಧ ಆತನ ಅತೀ ಶ್ರೇಷ್ಠ ಉಡುಗೊರೆಯಾದ ವಿಮೋಚನಾ ಮೌಲ್ಯದ ಬಗ್ಗೆ ಗಾಢವಾಗಿ ಯೋಚಿಸುವುದೇ ಆಗಿದೆ. (2 ಕೊರಿಂಥ 5:14, 15; 1 ಯೋಹಾನ 4:9, 19 ಓದಿ.) ಇದು, ಆ ದೊಡ್ಡ ಉಡುಗೊರೆಗಾಗಿ ನೀವು ಕೃತಜ್ಞತೆ ತೋರಿಸುವಂತೆ ನಡೆಸುವುದು.

17 ವಿಮೋಚನಾ ಮೌಲ್ಯಕ್ಕೆ ಯಾಕೆ ಕೃತಜ್ಞತೆ ತೋರಿಸಬೇಕು? ಈ ಉದಾಹರಣೆ ಬಗ್ಗೆ ಯೋಚಿಸಿ: ನೀವು ನದಿಯಲ್ಲಿ ಮುಳುಗುತ್ತಿದ್ದೀರಿ. ನಿಮ್ಮ ಜೀವ ಅಪಾಯದಲ್ಲಿದೆ. ಆಗ ಒಬ್ಬ ವ್ಯಕ್ತಿ ಬಂದು ನಿಮ್ಮನ್ನು ಕಾಪಾಡುತ್ತಾನೆ. ನೀವೇನು ಮಾಡುವಿರಿ? ಮನೆಗೆ ಹೋಗಿ, ಮೈ ಒರೆಸಿಕೊಂಡು, ಆ ವ್ಯಕ್ತಿಯನ್ನು ಮರೆತು ಸುಮ್ಮನಾಗಿ ಬಿಡುತ್ತೀರಾ? ಇಲ್ಲ. ನಿಮ್ಮ ಜೀವ ಉಳಿಸಿದ ವ್ಯಕ್ತಿಗೆ ನೀವು ಯಾವಾಗಲೂ ಕೃತಜ್ಞರಾಗಿರುತ್ತೀರಿ! ಅದೇ ರೀತಿ, ವಿಮೋಚನಾ ಮೌಲ್ಯಕ್ಕಾಗಿ ನಾವು ಯೆಹೋವ ಮತ್ತು ಯೇಸುವಿಗೆ ತುಂಬ ತುಂಬ ಕೃತಜ್ಞರಾಗಿರಬೇಕು. ನಮ್ಮ ಜೀವಕ್ಕಾಗಿ ನಾವು ಅವರಿಗೆ ಋಣಿಗಳು! ಅವರು ನಮ್ಮನ್ನು ಪಾಪ ಮರಣದಿಂದ ರಕ್ಷಿಸಿದ್ದಾರೆ. ಅವರು ನಮಗೆ ತೋರಿಸಿದ ಪ್ರೀತಿಯಿಂದಾಗಿಯೇ ನಮಗೆ ಪರದೈಸ್‌ ಭೂಮಿಯಲ್ಲಿ ಸದಾ ಜೀವಿಸುವ ನಿರೀಕ್ಷೆ ಇದೆ.

18, 19. (ಎ) ಸಮರ್ಪಣೆಯಲ್ಲಿ ಯೆಹೋವನಿಗೆ ಮಾತುಕೊಡಲು ನೀವು ಯಾಕೆ ಹೆದರಬಾರದು? (ಬಿ) ಯೆಹೋವನ ಸೇವೆಯಿಂದಾಗಿ ನಿಮ್ಮ ಜೀವನ ಹೇಗೆ ಉತ್ತಮವಾಗುತ್ತದೆ?

18 ಯೆಹೋವನು ನಿಮಗಾಗಿ ಮಾಡಿರುವ ವಿಷಯಗಳಿಗಾಗಿ ನೀವು ಕೃತಜ್ಞರಾಗಿದ್ದೀರಾ? ಹಾಗಿದ್ದರೆ ನೀವು ಸಮರ್ಪಣೆ ಮಾಡಿ ದೀಕ್ಷಾಸ್ನಾನ ತೆಗೆದುಕೊಳ್ಳುವುದು ಸೂಕ್ತ. ನೀವು ಆತನ ಚಿತ್ತವನ್ನು ಎಂದೆಂದಿಗೂ ಮಾಡುವಿರಿ ಎಂದು ಯೆಹೋವನಿಗೆ ಮಾತುಕೊಡುವುದೇ ಸಮರ್ಪಣೆ. ಯೆಹೋವನಿಗೆ ಹೀಗೆ ಮಾತು ಕೊಡಲು ನೀವು ಹೆದರಬೇಕಾ? ಇಲ್ಲ. ನಿಮಗೆ ಒಳ್ಳೆಯದಾಗಬೇಕೆಂದು ಆತನು ಬಯಸುತ್ತಾನೆ ಮತ್ತು ಆತನ ಚಿತ್ತವನ್ನು ಮಾಡುವವರಿಗೆ ಬಹುಮಾನ ಕೊಡುತ್ತಾನೆ. (ಇಬ್ರಿ. 11:6) ನೀವು ದೇವರಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದಾಗ ನಿಮ್ಮ ಜೀವನ ಹಾಳಾಗದು, ಬದಲಾಗಿ ಇನ್ನೂ ಒಳ್ಳೆಯದಾಗುತ್ತದೆ. ಒಬ್ಬ ಸಹೋದರ ಹದಿವಯಸ್ಸಿಗೆ ಮುಂಚೆಯೇ ದೀಕ್ಷಾಸ್ನಾನ ಪಡೆದ. ಈಗ 24 ವರ್ಷದವನಾಗಿರುವ ಅವನು ಹೇಳುವುದು: “ಸ್ವಲ್ಪ ದೊಡ್ಡವನಾದ ನಂತರ ದೀಕ್ಷಾಸ್ನಾನ ತಕ್ಕೊಳ್ಳುತ್ತಿದ್ದರೆ ಬೈಬಲಿನ ಹೆಚ್ಚಿನ ತಿಳುವಳಿಕೆ ಸಿಗುತ್ತಿತ್ತು ನಿಜ. ಆದರೆ ಚಿಕ್ಕ ವಯಸ್ಸಿನಲ್ಲೇ ಯೆಹೋವನಿಗೆ ಸಮರ್ಪಣೆ ಮಾಡಿದ್ದು ನಾನು ಲೋಕದ ಆಶೆಗಳ ಹಿಂದೆ ಹೋಗದಂತೆ ತಡೆಯಿತು.”

19 ನಿಮಗೆ ಏನು ಒಳ್ಳೆಯದೋ ಅದನ್ನೇ ಯೆಹೋವನು ನಿಮಗಾಗಿ ಬಯಸುತ್ತಾನೆ. ಆದರೆ ಸೈತಾನನು ಸ್ವಾರ್ಥಿ. ನಿಮ್ಮ ಬಗ್ಗೆ ಅವನಿಗೆ ಸ್ವಲ್ಪವೂ ಚಿಂತೆ ಇಲ್ಲ. ಅವನ ಹಿಂದೆ ಹೋದರೆ ನಿಮಗೆ ಒಳ್ಳೆಯದೇನೂ ಸಿಗುವುದಿಲ್ಲ. ಅವನ ಹತ್ತಿರ ಒಳ್ಳೇದಿದ್ದರೆ ತಾನೇ ಕೊಡಲಿಕ್ಕಾಗುವುದು?! ಸುವಾರ್ತೆ ಅವನಲ್ಲಿಲ್ಲ, ನಿರೀಕ್ಷೆ ಅವನಿಗಿಲ್ಲ. ನಿಮಗೆ ಕೊಡಲಿಕ್ಕೆ ಅವನಿಂದಾಗುವುದು ಒಂದೇ—ಕೆಟ್ಟ ಭವಿಷ್ಯ. ಯಾಕೆಂದರೆ ಅವನ ಭವಿಷ್ಯವೂ ಅಂಥದ್ದೇ!—ಪ್ರಕ. 20:10.

20. ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕೆ ತಯಾರಾಗಲು ಯುವ ವ್ಯಕ್ತಿಯೊಬ್ಬನು ಏನು ಮಾಡಬೇಕು? (“ ಪ್ರಗತಿ ಮಾಡಲು ನಿಮಗೆ ಸಹಾಯ” ಚೌಕ ಸಹ ನೋಡಿ.)

20 ಯೆಹೋವನಿಗೆ ನಿಮ್ಮ ಜೀವನವನ್ನು ಸಮರ್ಪಿಸುವುದು ನೀವು ಮಾಡುವ ಅತೀ ಒಳ್ಳೆಯ ನಿರ್ಣಯ. ಅದನ್ನು ಮಾಡಲು ಸಿದ್ಧರಾಗಿದ್ದೀರಾ? ಹಾಗಿದ್ದರೆ ಭಯಪಡಬೇಡಿ. ಆದರೆ ನೀವಿನ್ನೂ ತಯಾರಿಲ್ಲ ಅಂತ ಅನಿಸಿದರೆ ಈ ಲೇಖನದಲ್ಲಿರುವ ಸಲಹೆಗಳಂತೆ ಮಾಡಿ. ಪೌಲನು ಫಿಲಿಪ್ಪಿ ಸಭೆಯವರಿಗೆ ಹೇಳಿದಂತೆ ಪ್ರಗತಿ ಮಾಡುತ್ತಾ ಇರಿ. (ಫಿಲಿ. 3:16) ಆಗ ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯಲು ಬೇಗನೆ ಸಿದ್ಧರಾಗುವಿರಿ.

^ [1] (ಪ್ಯಾರ 13) ಯುವ ಜನರ ಪ್ರಶ್ನೆಗಳು ಪುಸ್ತಕದ ಸಂಪುಟ 2 (ಇಂಗ್ಲಿಷ್‌) ಪುಟ 308-309⁠ರಲ್ಲಿರುವ ವರ್ಕ್‌ಶೀಟ್‌ನಿಂದ ಕೆಲವು ಯುವ ಜನರು ಪ್ರಯೋಜನ ಪಡೆದಿದ್ದಾರೆ.