ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತನ್ನ ಜನರನ್ನು ಜೀವದ ದಾರಿಯಲ್ಲಿ ಮಾರ್ಗದರ್ಶಿಸುತ್ತಾನೆ

ಯೆಹೋವನು ತನ್ನ ಜನರನ್ನು ಜೀವದ ದಾರಿಯಲ್ಲಿ ಮಾರ್ಗದರ್ಶಿಸುತ್ತಾನೆ

“ಇದೇ ಮಾರ್ಗ, ಇದರಲ್ಲೇ ನಡೆಯಿರಿ.”—ಯೆಶಾ. 30:21.

ಗೀತೆಗಳು: 65, 48

1, 2. (ಎ) ಯಾವ ಎಚ್ಚರಿಕೆ ಅನೇಕರ ಜೀವ ಉಳಿಸಿತು? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಜೀವ ಉಳಿಸುವ ಯಾವ ಮಾರ್ಗದರ್ಶನ ದೇವಜನರಿಗಿದೆ?

“ನಿಲ್ಲಿ, ನೋಡಿ, ಕಿವಿಗೊಡಿ.” ಈ ಎಚ್ಚರಿಕೆಯ ಪದಗಳಿದ್ದ ದೊಡ್ಡ ಬೋರ್ಡುಗಳು 100ಕ್ಕೂ ಹೆಚ್ಚು ವರ್ಷಗಳ ವರೆಗೆ ಉತ್ತರ ಅಮೆರಿಕದ ರೈಲ್ವೇ ಕ್ರಾಸಿಂಗ್‌ಗಳ ಬಳಿ ಇದ್ದವು. ಏಕೆ? ವಾಹನಗಳು ರೈಲ್ವೇ ಪಟ್ಟಿಯನ್ನು ದಾಟುವಾಗ ಶರವೇಗದಲ್ಲಿ ಚಲಿಸುವ ರೈಲಿಗೆ ಸಿಕ್ಕಿ ಅಪಘಾತ ಆಗಬಾರದೆಂದೇ. ಆ ಎಚ್ಚರಿಕೆಯ ಪದಗಳಿಗೆ ಗಮನ ಕೊಟ್ಟದ್ದರಿಂದ ಅನೇಕ ಜನರ ಜೀವ ಉಳಿಯಿತು.

2 ಯೆಹೋವನು ತನ್ನ ಜನರ ಸುರಕ್ಷೆಗಾಗಿ ಅಂಥ ಎಚ್ಚರಿಕೆಯ ಬೋರ್ಡುಗಳನ್ನು ಇಟ್ಟಿಲ್ಲ. ಬದಲಾಗಿ ಅವರು ನಿತ್ಯಜೀವ ಪಡೆಯಲು, ಅಪಾಯಗಳಿಂದ ಅವರನ್ನು ತಪ್ಪಿಸಲು ಮಾರ್ಗ ತೋರಿಸುತ್ತಾನೆ. ಯೆಹೋವನು ಪ್ರೀತಿಯ ಕುರುಬನಂತಿದ್ದು ಕುರಿಗಳಂತಿರುವ ತನ್ನ ಜನರು ಅಪಾಯದ ದಾರಿಗಳಲ್ಲಿ ಹೋಗದಂತೆ ಮಾರ್ಗದರ್ಶನ, ಎಚ್ಚರಿಕೆಗಳನ್ನು ನೀಡುತ್ತಾನೆ.ಯೆಶಾಯ 30:20, 21 ಓದಿ.

ಯೆಹೋವನು ಆರಂಭದಿಂದಲೇ ತನ್ನ ಜನರನ್ನು ಮಾರ್ಗದರ್ಶಿಸಿದ್ದಾನೆ

3. ಮಾನವ ಕುಟುಂಬವು ಮರಣಕ್ಕೆ ನಡೆಸುವ ದಾರಿಗೆ ಹೇಗೆ ಬಂತು?

3 ಮಾನವ ಇತಿಹಾಸದ ಆರಂಭದಿಂದಲೂ ಯೆಹೋವನು ತನ್ನ ಜನರಿಗೆ ನಿರ್ದಿಷ್ಟ ಮಾರ್ಗದರ್ಶನ ಕೊಟ್ಟನು. ಉದಾಹರಣೆಗೆ, ಪ್ರೀತಿಯ ತಂದೆಯಾದ ಆತನು ಇಡೀ ಮಾನವ ಕುಟುಂಬ ಶಾಶ್ವತವಾಗಿ ಜೀವಿಸಲು ಮತ್ತು ಆನಂದಿಸಲು ಸಹಾಯಮಾಡುವ ಮಾರ್ಗದರ್ಶನವನ್ನು ಏದೆನ್‌ ತೋಟದಲ್ಲಿ ಕೊಟ್ಟನು. (ಆದಿ. 2:15-17) ಆದರೆ ಆದಾಮಹವ್ವರು ಅದನ್ನು ತಿರಸ್ಕರಿಸಿದರು. ಒಂದು ಸರ್ಪ ಹೇಳಿದಂತೆ ತೋರಿದ ಸಲಹೆಗೆ ಹವ್ವ ಕಿವಿಗೊಟ್ಟಳು ಮತ್ತು ಅವಳ ಮಾತನ್ನು ಆದಾಮ ಕೇಳಿದನು. ಪರಿಣಾಮ? ಅವರಿಬ್ಬರು ತುಂಬ ಕಷ್ಟಗಳನ್ನು ಅನುಭವಿಸಿದರು ಮಾತ್ರವಲ್ಲ ಯಾವುದೇ ನಿರೀಕ್ಷೆಯಿಲ್ಲದೆ ಸತ್ತರು. ಅವರ ಅವಿಧೇಯತೆಯಿಂದ ಇಡೀ ಮಾನವ ಕುಟುಂಬವು ಮರಣಕ್ಕೆ ನಡೆಸುವ ದಾರಿಗೆ ಬಂತು.

4. (ಎ) ಜಲಪ್ರಳಯದ ನಂತರ ಹೊಸ ಮಾರ್ಗದರ್ಶನ ಏಕೆ ಬೇಕಿತ್ತು? (ಬಿ) ಹೊಸ ಸನ್ನಿವೇಶದಿಂದಾಗಿ ಯಾವ ವಿಷಯದ ಬಗ್ಗೆ ದೇವರ ನೋಟ ಗೊತ್ತಾಯಿತು?

4 ಸಮಯಾನಂತರ ದೇವರು ನೋಹನಿಗೆ ಮಾರ್ಗದರ್ಶನ ಕೊಟ್ಟನು. ಅದು ನೋಹ ಮತ್ತು ಅವನ ಕುಟುಂಬದ ಜೀವ ಉಳಿಸಿತು. ಜಲಪ್ರಳಯದ ನಂತರ ಒಂದು ಹೊಸ ಸನ್ನಿವೇಶ ಬಂತು. ಅದೇನೆಂದರೆ ಮನುಷ್ಯರಿಗೆ ಮಾಂಸ ತಿನ್ನಲು ದೇವರು ಅನುಮತಿ ನೀಡಿದನು. ಹಾಗಾಗಿ ಒಂದು ಹೊಸ ಮಾರ್ಗದರ್ಶನ ಕೊಟ್ಟನು. “ರಕ್ತದಿಂದ ಕೂಡಿರುವ ಮಾಂಸವನ್ನು ನೀವು ತಿನ್ನಬಾರದು; ರಕ್ತವು ಜೀವವಷ್ಟೆ” ಎಂದು ಹೇಳಿದನು. ಮನುಷ್ಯರು ರಕ್ತವನ್ನು ಕುಡಿಯಬಾರದಿತ್ತು, ತಿನ್ನಬಾರದಿತ್ತು. (ಆದಿ. 9:1-4) ಈ ಆಜ್ಞೆಯಿಂದ ಜೀವದ ಬಗ್ಗೆ ದೇವರ ನೋಟವೇನೆಂದು ಗೊತ್ತಾಗುತ್ತದೆ. ಆತನು ಸೃಷ್ಟಿಕರ್ತ, ನಮಗೆ ಜೀವ ಕೊಟ್ಟಾತ. ಆದ್ದರಿಂದ ಜೀವದ ವಿಷಯದಲ್ಲಿ ನಿಯಮಗಳನ್ನು ಕೊಡುವ ಹಕ್ಕು ಆತನಿಗಿದೆ. ಕೊಲೆ ಮಾಡಬಾರದೆಂದು ಆತನು ಹೇಳಿದ್ದು ಈ ಕಾರಣಕ್ಕೇ. ಜೀವ ಮತ್ತು ರಕ್ತವನ್ನು ಯೆಹೋವನು ಪವಿತ್ರವಾಗಿ ಕಾಣುತ್ತಾನೆ. ಹಾಗಾಗಿ ಜೀವ ಮತ್ತು ರಕ್ತದ ವಿಷಯದಲ್ಲಿ ತನ್ನ ನಿಯಮಗಳಿಗೆ ಅವಿಧೇಯರಾಗುವವರಿಗೆ ಆತನು ಶಿಕ್ಷೆ ಕೊಡುತ್ತಾನೆ.—ಆದಿ. 9:5, 6.

5. ನಾವೀಗ ಏನನ್ನು ಕಲಿಯಲಿದ್ದೇವೆ? ಏಕೆ?

5 ನೋಹನ ಸಮಯದ ನಂತರವೂ ದೇವರು ತನ್ನ ಜನರನ್ನು ಮಾರ್ಗದರ್ಶಿಸಿದನು. ಕೆಲವು ಉದಾಹರಣೆಗಳನ್ನು ಈ ಲೇಖನದಲ್ಲಿ ನೋಡೋಣ. ಈ ಚರ್ಚೆಯು ಈಗ ಮತ್ತು ಹೊಸ ಲೋಕದಲ್ಲಿ ಯೆಹೋವನ ಮಾರ್ಗದರ್ಶನಕ್ಕೆ ವಿಧೇಯರಾಗಲು ನಾವು ದೃಢಸಂಕಲ್ಪ ಮಾಡುವಂತೆ ನೆರವಾಗುವುದು.

ಹೊಸ ಜನಾಂಗ, ಹೊಸ ಮಾರ್ಗದರ್ಶನ

6. (ಎ) ದೇವರು ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ನಿಯಮಗಳನ್ನು ಕೊಡುವ ಅಗತ್ಯ ಏಕಿತ್ತು? (ಬಿ) ಅವರಲ್ಲಿ ಎಂಥ ಮನೋಭಾವ ಇರಬೇಕಿತ್ತು?

6 ಮೋಶೆಯ ಸಮಯದಲ್ಲಿ ಯೆಹೋವನು ತನ್ನ ಜನರಾದ ಇಸ್ರಾಯೇಲ್ಯರಿಗೆ ಆರಾಧನೆ ಮತ್ತು ನಡತೆಯ ವಿಷಯದಲ್ಲಿ ಸ್ಪಷ್ಟ ಮಾರ್ಗದರ್ಶನ ಕೊಟ್ಟನು. ಅದರ ಅಗತ್ಯ ಏಕಿತ್ತು? ಏಕೆಂದರೆ ಇಸ್ರಾಯೇಲ್ಯರ ಸನ್ನಿವೇಶ ಬದಲಾಯಿತು. ಮೊದಲು ಅವರು 200ಕ್ಕಿಂತಲೂ ಹೆಚ್ಚು ವರ್ಷ ಐಗುಪ್ತದಲ್ಲಿ ಗುಲಾಮರಾಗಿದ್ದರು. ಸತ್ತವರನ್ನು, ವಿಗ್ರಹಗಳನ್ನು ಆರಾಧಿಸುತ್ತಿದ್ದ ಮತ್ತು ದೇವರಿಗೆ ಅಗೌರವ ತರುವ ಇನ್ನೂ ಅನೇಕ ವಿಷಯಗಳನ್ನು ಮಾಡುತ್ತಿದ್ದ ಜನರ ಮಧ್ಯೆ ಅವರು ಜೀವಿಸುತ್ತಿದ್ದರು. ಐಗುಪ್ತದಿಂದ ಬಿಡುಗಡೆಯಾಗಿ ಬಂದ ಮೇಲೆ ಅವರಿಗೆ ಹೊಸ ಮಾರ್ಗದರ್ಶನದ ಅಗತ್ಯವಿತ್ತು. ಅವರೊಂದು ಜನಾಂಗ ಆಗಲಿದ್ದರು. ಯೆಹೋವನ ಧರ್ಮಶಾಸ್ತ್ರ ಅಂದರೆ ಆತನ ನಿಯಮಗಳನ್ನು ಮಾತ್ರ ಅನುಸರಿಸಲಿದ್ದರು. “ಧರ್ಮಶಾಸ್ತ್ರ” ಎಂಬುದಕ್ಕೆ ಹೀಬ್ರು ಭಾಷೆಯಲ್ಲಿರುವ ಪದವು “ನಿರ್ದೇಶಿಸು, ಮಾರ್ಗದರ್ಶಿಸು, ಬೋಧಿಸು” ಎಂಬ ಅರ್ಥವಿರುವ ಪದದಿಂದ ಬಂದಿದೆ ಎಂದು ಕೆಲವು ಪುಸ್ತಕಗಳು ಹೇಳುತ್ತವೆ. ಧರ್ಮಶಾಸ್ತ್ರ ಇದ್ದ ಕಾರಣ ಇಸ್ರಾಯೇಲ್ಯರು ತಮ್ಮ ಸುತ್ತಲಿದ್ದ ಬೇರೆ ಜನಾಂಗಗಳ ಸುಳ್ಳು ಧರ್ಮದಿಂದ, ಅನೈತಿಕತೆಯಿಂದ ದೂರವಿರಲು ಆಯಿತು. ದೇವರಿಗೆ ವಿಧೇಯರಾದಾಗ ಇಸ್ರಾಯೇಲ್ಯರು ಆಶೀರ್ವಾದಗಳನ್ನು ಪಡೆದುಕೊಂಡರು. ಅವಿಧೇಯರಾದಾಗ ತುಂಬ ಕಷ್ಟಗಳನ್ನು ಅನುಭವಿಸಿದರು.—ಧರ್ಮೋಪದೇಶಕಾಂಡ 28:1, 2, 15 ಓದಿ.

7. (ಎ) ಯೆಹೋವನು ತನ್ನ ಜನರಿಗೆ ಹೊಸ ಮಾರ್ಗದರ್ಶನ ಕೊಡಲು ಬೇರಾವ ಕಾರಣವಿತ್ತು? ವಿವರಿಸಿ. (ಬಿ) ಧರ್ಮಶಾಸ್ತ್ರವು ಇಸ್ರಾಯೇಲ್ಯರಿಗೆ ಹೇಗೆ ಪಾಲಕನಂತಿತ್ತು?

7 ಯೆಹೋವನು ಹೊಸ ಮಾರ್ಗದರ್ಶನ ಅಂದರೆ ಧರ್ಮಶಾಸ್ತ್ರ ಕೊಡಲು ಇನ್ನೊಂದು ಕಾರಣವೂ ಇತ್ತು. ಏನದು? ಯೆಹೋವನ ಉದ್ದೇಶದ ಒಂದು ಮುಖ್ಯ ಭಾಗವಾಗಿದ್ದ ಮೆಸ್ಸೀಯನ ಬರೋಣಕ್ಕಾಗಿ ಅದು ಇಸ್ರಾಯೇಲ್ಯರನ್ನು ಸಿದ್ಧಪಡಿಸಿತು. ಹೇಗೆ? ಅವರು ಅಪರಿಪೂರ್ಣರು ಎಂಬ ವಿಷಯವನ್ನು ಮನಸ್ಸಿಗೆ ತಂದಿತು. ಪಾಪಗಳನ್ನು ಪೂರ್ತಿಯಾಗಿ ತೆಗೆದುಹಾಕಲು ತಮಗೆ ಒಂದು ಪರಿಪೂರ್ಣ ಯಜ್ಞ ಬೇಕಿದೆ ಎಂದು ಅರ್ಥಮಾಡಿಸಿತು. (ಗಲಾ. 3:19; ಇಬ್ರಿ. 10:1-10) ಅಲ್ಲದೆ, ಮೆಸ್ಸೀಯನು ಬರಲಿದ್ದ ವಂಶವನ್ನು ಸಂರಕ್ಷಿಸಿತು ಮತ್ತು ಅವನು ಬಂದಾಗ ಯಾರೆಂದು ಗುರುತು ಹಿಡಿಯಲು ಇಸ್ರಾಯೇಲ್ಯರಿಗೆ ಸಹಾಯಮಾಡಿತು. ನಿಜಕ್ಕೂ ಧರ್ಮಶಾಸ್ತ್ರವು ಸ್ವಲ್ಪಕಾಲಕ್ಕೆ ಮಾರ್ಗದರ್ಶಿಯಂತೆ ಇತ್ತು ಅಂದರೆ ಕ್ರಿಸ್ತನ ಬಳಿಗೆ ನಡಿಸುವ ‘ಪಾಲಕನಂತೆ’ ಇತ್ತು.—ಗಲಾ. 3:23, 24.

8. ಧರ್ಮಶಾಸ್ತ್ರದಲ್ಲಿರುವ ತತ್ವಗಳನ್ನು ನಾವೇಕೆ ಪಾಲಿಸಬೇಕು?

8 ಯೆಹೋವನು ಧರ್ಮಶಾಸ್ತ್ರದಲ್ಲಿ ಕೊಟ್ಟ ಮಾರ್ಗದರ್ಶನದಿಂದ ಕ್ರೈಸ್ತರಾದ ನಾವು ಕೂಡ ಪ್ರಯೋಜನ ಪಡೆಯುತ್ತೇವೆ. ಪ್ರಯೋಜನ ಸಿಗಬೇಕಾದರೆ ನಾವೇನು ಮಾಡಬೇಕು? ಧರ್ಮಶಾಸ್ತ್ರವು ಯಾವ ತತ್ವಗಳ ಮೇಲೆ ಆಧರಿತವಾಗಿದೆ ಎಂದು ಯೋಚಿಸಬೇಕು. ಇದು ಒಂದರ್ಥದಲ್ಲಿ ರೈಲ್ವೇ ಕ್ರಾಸಿಂಗ್‌ ಬಳಿ ಬೋರ್ಡ್‌ ಮೇಲಿರುವ ಸೂಚನೆಯನ್ನು ನಾವು ನಿಂತು, ನೋಡುವುದಕ್ಕೆ ಸಮ. ನಾವೀಗ ಧರ್ಮಶಾಸ್ತ್ರದ ನಿಯಮಗಳನ್ನು ಪಾಲಿಸಬೇಕಿಲ್ಲ ನಿಜ. ಆದರೂ ಅವು ನಮ್ಮ ದಿನನಿತ್ಯದ ಜೀವನದಲ್ಲಿ ಮತ್ತು ಯೆಹೋವನಿಗೆ ಸಲ್ಲಿಸುವ ಆರಾಧನೆಯಲ್ಲಿ ಮಾರ್ಗದರ್ಶಿಯಾಗಿವೆ. ಯೆಹೋವನು ಆ ನಿಯಮಗಳನ್ನು ಒಂದು ಉದ್ದೇಶಕ್ಕಾಗಿ ದಾಖಲಿಸಿಟ್ಟಿದ್ದಾನೆ. ಅದೇನೆಂದರೆ ನಾವು ಅವನ್ನು ನೋಡಿ ಕಲಿಯಬೇಕು, ಅವುಗಳ ತತ್ವಗಳಿಂದ ಮಾರ್ಗದರ್ಶಿಸಲ್ಪಡಬೇಕು, ಧರ್ಮಶಾಸ್ತ್ರಕ್ಕಿಂತ ಶ್ರೇಷ್ಠವಾದದ್ದನ್ನು ಯೇಸು ಕಲಿಸಿದ್ದಕ್ಕಾಗಿ ಕೃತಜ್ಞರಾಗಿರಬೇಕು ಎಂಬದಕ್ಕೇ. ಉದಾಹರಣೆಗಾಗಿ ಯೇಸುವಿನ ಈ ಮಾತಿಗೆ ಕಿವಿಗೊಡಿ: “‘ವ್ಯಭಿಚಾರ ಮಾಡಬಾರದು’ ಎಂದು ಹೇಳಿರುವುದನ್ನು ನೀವು ಕೇಳಿಸಿಕೊಂಡಿದ್ದೀರಿ. ಆದರೆ ನಾನು ನಿಮಗೆ ಹೇಳುವುದೇನೆಂದರೆ, ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.” ಹಾಗಾದರೆ ನಾವು ವ್ಯಭಿಚಾರವನ್ನು ಮಾಡಬಾರದು ಮಾತ್ರವಲ್ಲ ಅನೈತಿಕ ಯೋಚನೆ, ಅನೈತಿಕ ಆಸೆಗಳು ಸಹ ನಮ್ಮಲ್ಲಿ ಇರಬಾರದು.—ಮತ್ತಾ. 5:27, 28.

9. ಯಾವ ಹೊಸ ಸನ್ನಿವೇಶದಿಂದಾಗಿ ದೇವರು ಹೊಸ ಮಾರ್ಗದರ್ಶನ ಕೊಡಬೇಕಾಯಿತು?

9 ಯೇಸು ಮೆಸ್ಸೀಯನಾಗಿ ಬಂದ ಬಳಿಕ ಯೆಹೋವನು ತನ್ನ ಉದ್ದೇಶದ ಬಗ್ಗೆ ಹೆಚ್ಚು ವಿವರಗಳನ್ನು ಪ್ರಕಟಪಡಿಸುತ್ತಾ ಹೊಸ ಮಾರ್ಗದರ್ಶನ ಕೊಟ್ಟನು. ಅದು ಏಕೆ ಅಗತ್ಯವಾಗಿತ್ತು? ಕ್ರಿ.ಶ. 33⁠ರಲ್ಲಿ ಯೆಹೋವನು ಇಸ್ರಾಯೇಲ್‌ ಜನಾಂಗವನ್ನು ತಿರಸ್ಕರಿಸಿ ಕ್ರೈಸ್ತ ಸಭೆಯನ್ನು ತನ್ನ ಜನರನ್ನಾಗಿ ಆರಿಸಿಕೊಂಡನು. ಹೀಗೆ ದೇವಜನರ ಸನ್ನಿವೇಶ ಮತ್ತೊಮ್ಮೆ ಬದಲಾಯಿತು.

ದೇವರ ಇಸ್ರಾಯೇಲಿಗೆ ಮಾರ್ಗದರ್ಶನ

10. (ಎ) ಕ್ರೈಸ್ತ ಸಭೆಗೆ ಏಕೆ ಹೊಸ ನಿಯಮವನ್ನು ಕೊಡಲಾಯಿತು? (ಬಿ) ಈ ನಿಯಮ ಇಸ್ರಾಯೇಲ್ಯರಿಗೆ ಕೊಟ್ಟಿದ್ದ ನಿಯಮಕ್ಕಿಂತ ಹೇಗೆ ಭಿನ್ನವಾಗಿತ್ತು?

10 ಇಸ್ರಾಯೇಲ್‌ ಜನಾಂಗ ಹೇಗೆ ಜೀವಿಸಬೇಕು, ಹೇಗೆ ಆರಾಧನೆ ಮಾಡಬೇಕೆಂದು ಕಲಿಸಲಿಕ್ಕಾಗಿ ಯೆಹೋವನು ಧರ್ಮಶಾಸ್ತ್ರವನ್ನು ಕೊಟ್ಟಿದ್ದನು. ಆದರೆ ಒಂದನೇ ಶತಮಾನದಿಂದ ಆರಂಭಿಸಿ ದೇವಜನರು ಕೇವಲ ಒಂದು ಜನಾಂಗದಿಂದಲ್ಲ ಅನೇಕಾನೇಕ ದೇಶ, ಹಿನ್ನೆಲೆಗಳಿಂದ ಬಂದವರಾಗಿದ್ದರು. ಅವರಿಗೆ ದೇವರ ಇಸ್ರಾಯೇಲ್ಯರು ಎಂಬ ಹೆಸರು ಬಂತು. ಅವರು ಕ್ರೈಸ್ತ ಸಭೆಯ ಸದಸ್ಯರಾಗಿದ್ದು ಹೊಸ ಒಡಂಬಡಿಕೆಗೆ ಅಧೀನರಾಗಿದ್ದರು. ಆರಾಧನೆ ಮತ್ತು ಜೀವನಕ್ಕೆ ಸಂಬಂಧಿಸಿದ ಹೊಸ ಅಥವಾ ವಿವರವಾದ ಮಾರ್ಗದರ್ಶನವನ್ನು ಯೆಹೋವನು ಅವರಿಗೆ ಕೊಟ್ಟನು. ನಿಜಕ್ಕೂ “ದೇವರು ಪಕ್ಷಪಾತಿಯಲ್ಲ . . . ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ.” (ಅ. ಕಾ. 10:34, 35) ದೇವರ ಇಸ್ರಾಯೇಲ್ಯರು “ಕ್ರಿಸ್ತನ ನಿಯಮವನ್ನು” ಅನುಸರಿಸಿದರು. ಆ ನಿಯಮ ಕಲ್ಲುಗಳ ಮೇಲಲ್ಲ, ಅವರ ಹೃದಯದ ಮೇಲೆ ಬರೆಯಲಾಗಿದೆ. ಅದು ತತ್ವಗಳ ಮೇಲೆ ಆಧರಿತವಾಗಿದೆ. ಹಾಗಾಗಿ ಕ್ರೈಸ್ತರು ಎಲ್ಲೇ ಜೀವಿಸಿದ್ದರೂ ಆ ನಿಯಮ ಅವರನ್ನು ಮಾರ್ಗದರ್ಶಿಸಿತು ಮತ್ತು ಅವರಿಗೆ ಪ್ರಯೋಜನ ತಂದಿತು.—ಗಲಾ. 6:2.

11. “ಕ್ರಿಸ್ತನ ನಿಯಮ” ಯಾವ ಎರಡು ವಿಷಯಗಳಿಗೆ ಸಂಬಂಧಿಸಿದೆ?

11 ಯೇಸುವಿನ ಮೂಲಕ ಯೆಹೋವನು ಕೊಟ್ಟ ಮಾರ್ಗದರ್ಶನದಿಂದ ದೇವರ ಇಸ್ರಾಯೇಲ್ಯರಿಗೆ ತುಂಬ ಪ್ರಯೋಜನವಾಯಿತು. ಹೊಸ ಒಡಂಬಡಿಕೆ ಜಾರಿಗೆ ಬರುವ ಸ್ವಲ್ಪ ಮುಂಚೆ ಯೇಸು ಎರಡು ಮಹತ್ವದ ಆಜ್ಞೆಗಳನ್ನು ಕೊಟ್ಟನು. ಅದರಲ್ಲಿ ಒಂದು ಆಜ್ಞೆ ಸಾರುವ ಕೆಲಸಕ್ಕೆ ಸಂಬಂಧಿಸಿದೆ. ಇನ್ನೊಂದು ಆಜ್ಞೆ ಕ್ರೈಸ್ತರ ನಡತೆ ಹೇಗಿರಬೇಕು ಮತ್ತು ಅವರು ಇತರರೊಂದಿಗೆ ಹೇಗೆ ವರ್ತಿಸಬೇಕು ಎಂದು ತೋರಿಸುತ್ತದೆ. ಈ ಮಾರ್ಗದರ್ಶನ ಎಲ್ಲ ಕ್ರೈಸ್ತರಿಗಾಗಿತ್ತು. ಹಾಗಾಗಿ ಸ್ವರ್ಗದಲ್ಲಿ ಜೀವಿಸುವ ನಿರೀಕ್ಷೆಯಿರಲಿ ಭೂಮಿಯಲ್ಲಿ ಜೀವಿಸುವ ನಿರೀಕ್ಷೆಯಿರಲಿ ನಮ್ಮೆಲ್ಲರಿಗೂ ಇಂದು ಅದು ಅನ್ವಯ.

12. ಸಾರುವ ಕೆಲಸ ಯಾಕೆ ಒಂದು ಹೊಸ ವಿಷಯವಾಗಿತ್ತು?

12 ಸಾರುವ ಕೆಲಸದ ಬಗ್ಗೆ ಗಮನಿಸಿ. ಹಿಂದೆ ಬೇರೆ ದೇಶಗಳ ಜನರು ಯೆಹೋವನನ್ನು ಆರಾಧಿಸಲು ಇಸ್ರಾಯೇಲಿಗೆ ಬರಬೇಕಿತ್ತು. (1 ಅರ. 8:41-43) ಆದರೆ ಮತ್ತಾಯ 28:19, 20⁠ರಲ್ಲಿ (ಓದಿ.) ಯೇಸು ತನ್ನ ಶಿಷ್ಯರಿಗೆ ಎಲ್ಲ ಜನರ ಬಳಿ “ಹೋಗಿ” ಎಂದು ಹೇಳಿದನು. ಸುವಾರ್ತೆಯು ಜಗತ್ತಿನಲ್ಲೆಲ್ಲ ಸಾರಲ್ಪಡಬೇಕು ಎನ್ನುವುದು ತನ್ನ ಇಷ್ಟವೆಂದು ಯೆಹೋವನು ತೋರಿಸಿಕೊಟ್ಟದ್ದು ಕ್ರಿ.ಶ. 33⁠ರ ಪಂಚಾಶತ್ತಮ ಹಬ್ಬದಂದು. ಹೇಗೆ? ಅಂದು ಹೊಸ ಸಭೆಯ ಸುಮಾರು 120 ಮಂದಿ ಸದಸ್ಯರ ಮೇಲೆ ಪವಿತ್ರಾತ್ಮ ಸುರಿಸಿ ಅವರು ಯೆಹೂದ್ಯರೊಂದಿಗೆ ಮತ್ತು ಯೆಹೂದಿ ಮತಕ್ಕೆ ಸೇರಿದವರೊಂದಿಗೆ ಬೇರೆಬೇರೆ ಭಾಷೆಗಳಲ್ಲಿ ಮಾತಾಡುವಂತೆ ಸಾಧ್ಯಮಾಡುವ ಮೂಲಕ. (ಅ. ಕಾ. 2:4-11) ಬಳಿಕ ಸಮಾರ್ಯದವರಿಗೂ ಸುವಾರ್ತೆ ಸಾರಲಾಯಿತು. ಸುನ್ನತಿಯಾಗದ ಅನ್ಯ ಜನಾಂಗದವರಿಗೂ ಕ್ರಿ.ಶ. 36⁠ರಿಂದ ಸುವಾರ್ತೆ ಸಾರುವುದನ್ನು ಆರಂಭಿಸಲಾಯಿತು. ಇದರರ್ಥ ಕ್ರೈಸ್ತರು ಜಗತ್ತಿನಲ್ಲಿ ಎಲ್ಲರಿಗೆ ಸಾರಬೇಕಿತ್ತು. ಹೀಗೆ ಒಂದು ಕೊಳದಂತಿದ್ದ ಸಾರುವ ಕ್ಷೇತ್ರ ಸಾಗರದಷ್ಟು ವಿಶಾಲವಾಗಲಿತ್ತು!

13, 14. (ಎ) ಯೇಸು ಕೊಟ್ಟ ‘ಹೊಸ ಆಜ್ಞೆಗನುಸಾರ’ ನಾವೇನು ಮಾಡಬೇಕು? (ಬಿ) ಯೇಸುವಿನ ಮಾದರಿಯಿಂದ ನಾವೇನು ಕಲಿಯುತ್ತೇವೆ?

13 ನಮ್ಮ ಸಹೋದರ ಸಹೋದರಿಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ವಿಷಯದಲ್ಲೂ ಯೇಸು “ಹೊಸ ಆಜ್ಞೆ” ಕೊಟ್ಟನು. (ಯೋಹಾನ 13:34, 35 ಓದಿ.) ಪ್ರತಿ ದಿನವೂ ನಾವು ಅವರಿಗೆ ಪ್ರೀತಿ ತೋರಿಸಬೇಕು ಮಾತ್ರವಲ್ಲ ಅವರಿಗಾಗಿ ಜೀವ ಕೊಡಲಿಕ್ಕೂ ಸಿದ್ಧರಿರಬೇಕು. ಆದರೆ ಈ ರೀತಿಯ ಪ್ರೀತಿ ತೋರಿಸಬೇಕೆಂದು ಧರ್ಮಶಾಸ್ತ್ರ ಅವಶ್ಯಪಡಿಸಿರಲಿಲ್ಲ.—ಮತ್ತಾ. 22:39; 1 ಯೋಹಾ. 3:16.

14 ಅಂಥ ನಿಸ್ವಾರ್ಥ ಪ್ರೀತಿ ತೋರಿಸಿದ್ದರಲ್ಲಿ ಯೇಸುವೇ ಅತಿ ಶ್ರೇಷ್ಠ ಮಾದರಿ. ಅವನು ತನ್ನ ಶಿಷ್ಯರನ್ನು ಎಷ್ಟು ಪ್ರೀತಿಸಿದನೆಂದರೆ ಅವರಿಗಾಗಿ ಮನಃಪೂರ್ವಕವಾಗಿ ತನ್ನ ಜೀವವನ್ನೇ ಕೊಟ್ಟನು. ತನ್ನ ಶಿಷ್ಯರೆಲ್ಲರೂ ಅಂಥ ಪ್ರೀತಿ ತೋರಿಸಬೇಕೆಂದು ಯೇಸು ಬಯಸುತ್ತಾನೆ. ಹಾಗಾಗಿ ಜೊತೆ ಕ್ರೈಸ್ತರಿಗಾಗಿ ನಾವು ಕಷ್ಟಗಳನ್ನು ತಾಳಿಕೊಳ್ಳಲು ಮತ್ತು ಅಗತ್ಯಬಿದ್ದರೆ ಸಾಯಲೂ ಸಿದ್ಧರಿರಬೇಕು.—1 ಥೆಸ. 2:8.

ಇವತ್ತಿಗೂ ಭವಿಷ್ಯಕ್ಕೂ ಮಾರ್ಗದರ್ಶನ

15, 16. (ಎ) ನಾವಿಂದು ಯಾವ ಹೊಸ ಸನ್ನಿವೇಶಗಳಲ್ಲಿ ಇದ್ದೇವೆ? (ಬಿ) ದೇವರು ನಮ್ಮನ್ನು ಹೇಗೆ ಮಾರ್ಗದರ್ಶಿಸುತ್ತಿದ್ದಾನೆ?

15 ಯೇಸು ತನ್ನ ಶಿಷ್ಯರಿಗೆ ‘ತಕ್ಕ ಸಮಯಕ್ಕೆ ಆಹಾರ ಕೊಡಲಿಕ್ಕಾಗಿ ನಂಬಿಗಸ್ತ, ವಿವೇಚನೆಯುಳ್ಳ ಆಳನ್ನು’ ನೇಮಿಸಿದ್ದಾನೆ. (ಮತ್ತಾ. 24:45-47) ದೇವಜನರಿಗೆ ಹೊಸ ಸನ್ನಿವೇಶಗಳಲ್ಲಿ ಕೊಡಲಾಗುವ ಪ್ರಾಮುಖ್ಯ ಮಾರ್ಗದರ್ಶನವೂ ಆ ಆಹಾರದಲ್ಲಿ ಸೇರಿದೆ. ನಮ್ಮೀ ದಿನದಲ್ಲಿ ಯಾವ ಹೊಸ ಸನ್ನಿವೇಶಗಳು ಎದ್ದಿವೆ?

16 ನಾವೀಗ “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆ. ಹಿಂದೆಂದೂ ಸಂಭವಿಸದಂಥ ಸಂಕಟವನ್ನು ಅತಿ ಬೇಗನೆ ಅನುಭವಿಸಲಿದ್ದೇವೆ. (2 ತಿಮೊ. 3:1; ಮಾರ್ಕ 13:19) ಅಷ್ಟೇ ಅಲ್ಲ ಸ್ವರ್ಗದಿಂದ ಭೂಮಿಗೆ ದೊಬ್ಬಲ್ಪಟ್ಟಿರುವ ಸೈತಾನ ಮತ್ತು ಅವನ ದೆವ್ವಗಳಿಂದಾಗಿ ಮಾನವರು ತುಂಬ ಕಷ್ಟನೋವು ಅನುಭವಿಸುತ್ತಿದ್ದಾರೆ. (ಪ್ರಕ. 12:9, 12) ಹಾಗಿದ್ದರೂ ನಾವಿಂದು ಯೇಸುವಿನ ಆಜ್ಞೆಗೆ ವಿಧೇಯರಾಗಿ ಹಿಂದೆಂದಿಗಿಂತ ಹೆಚ್ಚು ಜನರಿಗೆ ಹೆಚ್ಚು ಭಾಷೆಗಳಲ್ಲಿ ಪ್ರಪಂಚದ ಎಲ್ಲ ಕಡೆಗಳಲ್ಲಿ ಸಾರುತ್ತಿದ್ದೇವೆ.

17, 18. ನಮಗೆ ಈಗ ಕೊಡಲಾಗುವ ಮಾರ್ಗದರ್ಶನಕ್ಕೆ ಹೇಗೆ ಪ್ರತಿಕ್ರಿಯಿಸಬೇಕು?

17 ಸಾರುವ ಕೆಲಸದಲ್ಲಿ ನಮಗೆ ಸಹಾಯವಾಗಲು ದೇವರ ಸಂಘಟನೆ ಅನೇಕ ಸಾಧನಗಳನ್ನು ಕೊಡುತ್ತಿದೆ. ನೀವು ಅವುಗಳನ್ನು ಬಳಸುತ್ತೀರಾ? ಆ ಸಾಧನಗಳನ್ನು ಉತ್ತಮವಾಗಿ ಬಳಸುವುದು ಹೇಗೆಂದು ನಮ್ಮ ಕೂಟಗಳಲ್ಲಿ ಮಾರ್ಗದರ್ಶನ ಸಿಗುತ್ತದೆ. ಈ ಮಾರ್ಗದರ್ಶನ ಯೆಹೋವನೇ ಕೊಡುತ್ತಿದ್ದಾನೆಂದು ನೀವು ನಂಬುತ್ತೀರಾ?

18 ನಾವು ದೇವರ ಆಶೀರ್ವಾದಗಳನ್ನು ಪಡೆಯಬೇಕಾದರೆ ಕ್ರೈಸ್ತ ಸಭೆಯ ಮೂಲಕ ಆತನು ಕೊಡುವ ಎಲ್ಲ ಮಾರ್ಗದರ್ಶನಕ್ಕೆ ಗಮನಕೊಡಬೇಕು. ನಾವೀಗಲೇ ವಿಧೇಯತೆ ತೋರಿಸಿದರೆ ಸೈತಾನನ ಇಡೀ ದುಷ್ಟ ಲೋಕವು ನಾಶವಾಗುವ ‘ಮಹಾ ಸಂಕಟದ’ ಸಮಯದಲ್ಲಿ ನಮಗೆ ಸಿಗುವ ಮಾರ್ಗದರ್ಶನವನ್ನು ಪಾಲಿಸಲು ಹೆಚ್ಚು ಸುಲಭವಾಗುವುದು. (ಮತ್ತಾ. 24:21) ಮುಂದಕ್ಕೆ ಸೈತಾನನ ಪ್ರಭಾವದಿಂದ ಪೂರ್ಣ ಮುಕ್ತವಾಗಿರುವ ನೀತಿಯ ಹೊಸ ಲೋಕದಲ್ಲಿ ಸದಾ ಜೀವಿಸಲು ನಮಗೆ ಹೊಸ ಮಾರ್ಗದರ್ಶನ ಬೇಕಾಗುತ್ತದೆ.

ಹೊಸ ಲೋಕದಲ್ಲಿನ ಜೀವನಕ್ಕಾಗಿ ಅಲ್ಲಿ ನಮಗೆ ಹೊಸ ಮಾರ್ಗದರ್ಶನ ಸಿಗಲಿದೆ (ಪ್ಯಾರ 19, 20 ನೋಡಿ)

19, 20. (ಎ) ಯಾವ ಸುರುಳಿಗಳು ತೆರೆಯಲ್ಪಡುವವು? (ಬಿ) ಅದರ ಫಲಿತಾಂಶವೇನು?

19 ಮೋಶೆಯ ಸಮಯದಲ್ಲಿ ಇಸ್ರಾಯೇಲ್‌ ಜನಾಂಗಕ್ಕೆ ಹೊಸ ಮಾರ್ಗದರ್ಶನ ಬೇಕಿತ್ತು. ಆದ್ದರಿಂದ ದೇವರು ಅವರಿಗೆ ಧರ್ಮಶಾಸ್ತ್ರ ಕೊಟ್ಟನು. ಅನಂತರ ಕ್ರೈಸ್ತ ಸಭೆಗೂ ಹೊಸ ಮಾರ್ಗದರ್ಶನ ಸಿಕ್ಕಿತು. ಅವರು ‘ಕ್ರಿಸ್ತನ ನಿಯಮಕ್ಕೆ’ ವಿಧೇಯರಾಗಬೇಕಿತ್ತು. ಅದೇ ರೀತಿ ಹೊಸ ಲೋಕದಲ್ಲಿ ನಮಗೂ ಹೊಸ ಮಾರ್ಗದರ್ಶನ ಕೊಡುವಂಥ ಸುರುಳಿಗಳಿರುತ್ತವೆಂದು ಬೈಬಲ್‌ ಹೇಳುತ್ತದೆ. (ಪ್ರಕಟನೆ 20:12 ಓದಿ.) ಹೊಸ ಲೋಕದಲ್ಲಿ ಮಾನವರು ಹೇಗೆ ಜೀವಿಸಬೇಕು, ಏನು ಮಾಡಬೇಕೆಂದು ಈ ಸುರುಳಿಗಳು ಬಹುಶಃ ವಿವರಿಸುವವು. ಪುನರುತ್ಥಾನವಾದವರನ್ನು ಸೇರಿಸಿ ಎಲ್ಲ ಜನರು ಆ ಸುರುಳಿಗಳನ್ನು ಓದಿ ಅಧ್ಯಯನ ಮಾಡುವ ಮೂಲಕ ತಮಗಾಗಿ ದೇವರ ಚಿತ್ತವೇನೆಂದು ತಿಳಿದುಕೊಳ್ಳುವರು. ಅವು ಯೆಹೋವನ ಆಲೋಚನಾ ರೀತಿಯ ಬಗ್ಗೆ ಇನ್ನೂ ಹೆಚ್ಚನ್ನು ಕಲಿಯಲು ನಮಗೆ ಸಹಾಯ ಮಾಡುವವು. ಬೈಬಲನ್ನು ಸಹ ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುವೆವು. ಇದರಿಂದ ಒಬ್ಬರನ್ನೊಬ್ಬರು ಪ್ರೀತಿ, ಗೌರವದಿಂದ ಕಾಣುವೆವು. (ಯೆಶಾ. 26:9) ನಮ್ಮ ರಾಜನಾದ ಯೇಸು ಕ್ರಿಸ್ತನ ಮಾರ್ಗದರ್ಶನದ ಕೆಳಗೆ ನಾವು ಕಲಿಯುವ ವಿಷಯಕ್ಕಾಗಲಿ ಇತರರಿಗೆ ಕಲಿಸುವ ವಿಷಯಕ್ಕಾಗಲಿ ಎಲ್ಲೆಯೇ ಇರುವುದಿಲ್ಲ!

20 ‘ಸುರುಳಿಗಳಲ್ಲಿರುವ’ ಮಾರ್ಗದರ್ಶನಕ್ಕೆ ನಾವು ವಿಧೇಯರಾದರೆ ಮತ್ತು ಕೊನೆಯ ಪರೀಕ್ಷೆಯಲ್ಲಿ ಯೆಹೋವನಿಗೆ ನಂಬಿಗಸ್ತರಾಗಿ ಉಳಿದರೆ ಆತನು ನಮ್ಮ ಹೆಸರನ್ನು “ಜೀವದ ಸುರುಳಿ”ಯಲ್ಲಿ ಖಾಯಂ ಆಗಿ ಬರೆಯುವನು. ನಾವು ನಿತ್ಯಜೀವವನ್ನು ಪಡೆಯುವೆವು. ಆದ್ದರಿಂದ ಬೈಬಲನ್ನು ಓದಿ, ಅದರಲ್ಲಿರುವ ವಿಷಯಗಳನ್ನು ಅರ್ಥಮಾಡಿಕೊಂಡು, ದೇವರ ಮಾರ್ಗದರ್ಶನಕ್ಕೆ ಈಗ ವಿಧೇಯರಾಗಬೇಕು. ಇದು ಒಂದರ್ಥದಲ್ಲಿ, “ನಿಲ್ಲಿ, ನೋಡಿ, ಕಿವಿಗೊಡಿ” ಎಂಬ ಎಚ್ಚರಿಕೆಯನ್ನು ಪಾಲಿಸಿದಂತಿದೆ. ಹೀಗೆ ಮಾಡಿದರೆ ನಾವು ಮಹಾ ಸಂಕಟವನ್ನು ಪಾರಾಗುವೆವು ಮತ್ತು ವಿವೇಕಿಯೂ ಪ್ರೀತಿಪೂರ್ಣನೂ ಆದ ನಮ್ಮ ಯೆಹೋವ ದೇವರ ಕುರಿತು ನಿತ್ಯನಿರಂತರಕ್ಕೂ ಕಲಿಯುವುದರಲ್ಲಿ ಆನಂದಿಸುವೆವು.—ಪ್ರಸಂ. 3:11; ರೋಮ. 11:33.