ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಪತ್ಕಾಲಕ್ಕೆ ಆದವನೇ ನಿಜವಾದ ಸ್ನೇಹಿತ

ಆಪತ್ಕಾಲಕ್ಕೆ ಆದವನೇ ನಿಜವಾದ ಸ್ನೇಹಿತ

ಜ್ಯಾನಿ ಮತ್ತು ಮೌರೀಟ್‌ಸ್ಯೊ 50 ವರ್ಷಗಳಿಂದ ಒಳ್ಳೇ ಸ್ನೇಹಿತರು. ಆದರೆ ಅವರಿಬ್ಬರೂ ದೂರ ಆಗುವ ಪರಿಸ್ಥಿತಿ ಒಮ್ಮೆ ಎದುರಾಗಿತ್ತು. “ನಾನು ಯಾವುದೋ ಕಷ್ಟದಲ್ಲಿದ್ದಾಗ ಕೆಲವೊಂದು ಗಂಭೀರ ತಪ್ಪುಗಳನ್ನು ಮಾಡಿದೆ. ಇದರಿಂದ ನಾವಿಬ್ಬರೂ ಸ್ವಲ್ಪಸ್ವಲ್ಪ ದೂರ ಆಗುತ್ತಾ ಇದ್ದೆವು” ಎಂದು ಮೌರೀಟ್‌ಸ್ಯೊ ಹೇಳುತ್ತಾರೆ. ಜ್ಯಾನಿ ಹೇಳುವುದು: “ನನಗೆ ಬೈಬಲನ್ನು ಕಲಿಸಿದ್ದೇ ಮೌರೀಟ್‌ಸ್ಯೊ. ಏನೇ ವಿಷಯ ಇದ್ದರೂ ಅವರ ಹತ್ತಿರ ಹೇಳುತ್ತಿದ್ದೆ. ಎಲ್ಲದಕ್ಕೂ ಬೈಬಲಿಂದ ಮಾರ್ಗದರ್ಶನ ಕೊಡುತ್ತಿದ್ದರು. ಅವರೇ ತಪ್ಪುಮಾಡಿದಾಗ ನನ್ನಿಂದ ಅರಗಿಸಿಕೊಳ್ಳಲು ಆಗಲಿಲ್ಲ. ನಮ್ಮಿಬ್ಬರ ಸ್ನೇಹ ಉಳಿಯಲ್ಲ ಅಂತ ಅನಿಸಿತು. ನನಗೆ ಏನು ಮಾಡಬೇಕು ಅಂತ ಗೊತ್ತಾಗಲಿಲ್ಲ.”

ಒಳ್ಳೇ ಸ್ನೇಹಕ್ಕೆ ಬೆಲೆಕಟ್ಟಲು ಆಗೋದಿಲ್ಲ. ಸ್ನೇಹಸೇತುವೆ ಶಾಶ್ವತವಾಗಿ ಇರಬೇಕಾದರೆ ತುಂಬ ಶ್ರಮಪಡಬೇಕಾಗುತ್ತದೆ. ಆ ಸೇತುವೆ ಮುರಿದುಹೋಗುವ ಸನ್ನಿವೇಶ ಎದುರಾದರೆ ಏನು ಮಾಡಬೇಕು? ಬೈಬಲಿನಲ್ಲಿ ಒಳ್ಳೇ ಸ್ನೇಹಿತರಾಗಿದ್ದವರ ಉದಾಹರಣೆಗಳಿವೆ. ಅವರಿಗೆ ಇಂಥ ಸನ್ನಿವೇಶ ಎದುರಾದಾಗ ಏನು ಮಾಡಿದರು ಎಂದು ತಿಳಿದುಕೊಳ್ಳೋಣ.

ಸ್ನೇಹಿತರು ತಪ್ಪುಮಾಡಿದಾಗ

ದಾವೀದ ಕುರುಬನಾಗಿದ್ದಾಗ ಮತ್ತು ಮುಂದೆ ರಾಜನಾದಾಗ ಕೂಡ ಅವನಿಗೆ ಹಲವಾರು ಒಳ್ಳೇ ಸ್ನೇಹಿತರಿದ್ದರು. ಅವರಲ್ಲಿ ನಮ್ಮ ಮನಸ್ಸಿಗೆ ಮೊದಲು ಬರುವುದು ಯೋನಾತಾನ. (1 ಸಮು. 18:1) ಆದರೆ ದಾವೀದನಿಗೆ ಇನ್ನೂ ಬೇರೆ ಸ್ನೇಹಿತರಿದ್ದರು. ಅಂಥವರಲ್ಲಿ ಒಬ್ಬ ನಾತಾನ. ಇವರಿಬ್ಬರ ಸ್ನೇಹ ಯಾವಾಗ ಶುರುವಾಯಿತು ಅಂತ ಬೈಬಲ್‌ ಹೇಳುವುದಿಲ್ಲ. ಆದರೆ ಅವರಿಬ್ಬರ ನಡುವೆ ನಡೆದ ಸಂಭಾಷಣೆಯಿಂದ ಅವರು ಒಳ್ಳೇ ಸ್ನೇಹಿತರಾಗಿದ್ದರು ಎಂದು ಗೊತ್ತಾಗುತ್ತದೆ. ನೀವು ಹೇಗೆ ನಿಮ್ಮ ಸ್ನೇಹಿತನ ಹತ್ತಿರ ಮನಬಿಚ್ಚಿ ಮಾತಾಡುತ್ತೀರೋ ಹಾಗೆ ದಾವೀದ ನಾತಾನನ ಹತ್ತಿರ ಒಂದು ವಿಷಯ ಹೇಳಿದನು. ಯೆಹೋವನಿಗೆ ಒಂದು ಆಲಯವನ್ನು ಕಟ್ಟಲು ಬಯಸುತ್ತೇನೆಂದು ಹೇಳಿದನು. ದಾವೀದನ ಸ್ನೇಹಿತನೂ ಯೆಹೋವನ ಪ್ರವಾದಿಯೂ ಆಗಿದ್ದ ನಾತಾನನ ಮಾತಿಗೆ ದಾವೀದ ಖಂಡಿತ ಬೆಲೆಕೊಟ್ಟನು.—2 ಸಮು. 7:2, 3.

ಮುಂದೆ ನಡೆದ ಒಂದು ಘಟನೆಯಿಂದ ಅವರ ಸ್ನೇಹ ಮುರಿದುಹೋಗುವ ಸಾಧ್ಯತೆ ಇತ್ತು. ದಾವೀದ ಬತ್ಷೆಬೆಯ ಜೊತೆ ವ್ಯಭಿಚಾರ ಮಾಡಿ ನಂತರ ಅವಳ ಗಂಡ ಊರೀಯನನ್ನು ಕೊಲ್ಲಿಸಿದನು. (2 ಸಮು. 11:2-21) ಎಷ್ಟೋ ವರ್ಷಗಳಿಂದ ದಾವೀದ ಯೆಹೋವನಿಗೆ ನಿಷ್ಠನಾಗಿದ್ದನು ಮತ್ತು ಯಾವತ್ತೂ ಅನ್ಯಾಯ ಮಾಡಿರಲಿಲ್ಲ. ಆದರೆ ಈಗ ಇಂಥ ದೊಡ್ಡ ಪಾಪ ಮಾಡಿಬಿಟ್ಟನು! ಇಷ್ಟು ಒಳ್ಳೇ ರಾಜ ಯಾಕೆ ಹೀಗೆ ಮಾಡಿದನು? ಅವನು ಎಷ್ಟು ದೊಡ್ಡ ತಪ್ಪು ಮಾಡಿದ್ದಾನೆ ಅಂತ ಗೊತ್ತಾಗಲಿಲ್ಲವಾ? ದೇವರಿಂದ ತಪ್ಪನ್ನು ಮುಚ್ಚಿಡಬಹುದು ಅಂತ ನೆನಸಿದನಾ?

ಆಗ ನಾತಾನ ಏನು ಮಾಡಿದನು? ದಾವೀದನ ತಪ್ಪನ್ನು ಅವನಿಗೆ ಬೇರೆ ಯಾರಾದರೂ ಹೇಳಲಿ ಅಂತ ಸುಮ್ಮನಿದ್ದನಾ? ದಾವೀದ ಹೇಗೆ ಸಂಚುಹೂಡಿ ಊರೀಯನನ್ನು ಕೊಂದನು ಎನ್ನುವುದು ಬೇರೆಯವರಿಗೂ ಗೊತ್ತಿತ್ತು. ತಾನು ಅದರ ಬಗ್ಗೆ ಹೇಳಿ ದಾವೀದನ ಸ್ನೇಹವನ್ನು ಯಾಕೆ ಕಳಕೊಳ್ಳಬೇಕು ಅಂತ ನಾತಾನ ಯೋಚಿಸಿದನಾ? ದಾವೀದ ಅಮಾಯಕನಾದ ಊರೀಯನ ಪ್ರಾಣವನ್ನೇ ತೆಗೆದಿದ್ದನು. ಹೀಗಿರುವಾಗ ಅವನ ತಪ್ಪನ್ನು ಹೇಳಿ ನಾತಾನ ತನ್ನ ಪ್ರಾಣವನ್ನೂ ಕಳಕೊಳ್ಳುವ ಅಪಾಯವಿತ್ತು!

ನಾತಾನನು ದೇವರ ಪ್ರತಿನಿಧಿಯಾಗಿದ್ದನು. ದಾವೀದನ ತಪ್ಪನ್ನು ತಿಳಿಸದೇ ಹೋದರೆ ಅವನ ಜೊತೆ ಮುಂಚಿನಂತೆ ಇರಲಿಕ್ಕೆ ಆಗುವುದಿಲ್ಲ, ತನ್ನ ಮನಸ್ಸಾಕ್ಷಿ ಚುಚ್ಚುತ್ತಾ ಇರುತ್ತದೆ ಎಂದು ನಾತಾನನಿಗೆ ಗೊತ್ತಿತ್ತು. ಅವನ ಮಿತ್ರನಾದ ದಾವೀದ ದಾರಿ ತಪ್ಪಿದ್ದನು, ಯೆಹೋವನು ಮೆಚ್ಚದ ದಾರಿಯಲ್ಲಿ ಹೋಗುತ್ತಿದ್ದನು. ಅವನು ಮತ್ತೆ ಸರಿದಾರಿಗೆ ಬರಬೇಕೆಂದರೆ ಅವನಿಗೆ ಸಹಾಯ ಬೇಕಾಗಿತ್ತು. ಒಬ್ಬ ಒಳ್ಳೇ ಸ್ನೇಹಿತನ ಸಹಾಯ ಅವನಿಗೆ ನಿಜವಾಗಲೂ ಅಗತ್ಯವಿತ್ತು. ಆ ಜವಾಬ್ದಾರಿ ಈಗ ನಾತಾನನ ಹೆಗಲೇರಿತ್ತು. ನಾತಾನ ಪರಿಸ್ಥಿತಿಯನ್ನು ತುಂಬ ನಾಜೂಕಿನಿಂದ ನಿಭಾಯಿಸಿದನು. ಹಿಂದೆ ಕುರುಬನಾಗಿದ್ದ ದಾವೀದನ ಮನಸ್ಸಿಗೆ ನಾಟುವಂಥ ಉದಾಹರಣೆಯೊಂದನ್ನು ಹೇಳಿದ ಮೇಲೆ ದೇವರ ಮಾತನ್ನು ತಿಳಿಸಿದನು. ಅವನು ಎಷ್ಟು ದೊಡ್ಡ ತಪ್ಪುಗಳನ್ನು ಮಾಡಿದ್ದಾನೆ ಎಂದು ಮನಗಾಣಿಸಿದನು. ಇದು ತಪ್ಪನ್ನು ಒಪ್ಪಿಕೊಳ್ಳಲು ಮತ್ತು ಪಶ್ಚಾತ್ತಾಪಪಡಲು ದಾವೀದನನ್ನು ಪ್ರೇರಿಸಿತು.—2 ಸಮು. 12:1-14.

ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆ ದೊಡ್ಡ ತಪ್ಪನ್ನೋ ಗಂಭೀರ ಪಾಪವನ್ನೋ ಮಾಡಿದರೆ ನೀವೇನು ಮಾಡುತ್ತೀರಾ? ಅವರು ಮಾಡಿದ್ದು ತಪ್ಪು ಅಂತ ಅವರಿಗೆ ಹೇಳಿದರೆ ಸ್ನೇಹ ಹಾಳಾಗಬಹುದು ಎನ್ನುವ ಭಯದಿಂದ ಸುಮ್ಮನಿರುತ್ತೀರಾ? ಹಿರಿಯರ ಹತ್ತಿರ ಹೇಳಿದರೆ ನಿಮ್ಮ ಸ್ನೇಹಿತನಿಗೆ ಆಧ್ಯಾತ್ಮಿಕ ಸಹಾಯ ಸಿಗುತ್ತದೆ ಅಂತ ನಿಮಗೆ ಗೊತ್ತು. ಆದರೆ ಹಿರಿಯರಿಗೆ ಹೇಳಿದರೆ ನಿಮ್ಮ ಸ್ನೇಹಿತರಿಗೆ ಮೋಸ ಮಾಡಿದ ಹಾಗೆ ಆಗಬಹುದು ಅಂತ ನೆನಸಿ ಸುಮ್ಮನಿರುತ್ತೀರಾ? ಆದರೆ ನೀವು ನಿಜವಾಗಲೂ ಏನು ಮಾಡಬೇಕು?

ಲೇಖನದ ಆರಂಭದಲ್ಲಿ ತಿಳಿಸಲಾದ ಜ್ಯಾನಿ ಏನು ಮಾಡಿದರು ಎಂದು ನೋಡಿ. “ಮೌರೀಟ್‌ಸ್ಯೊ ಮುಂಚಿನ ಥರ ನನ್ನ ಹತ್ತಿರ ಮನಸ್ಸು ಬಿಚ್ಚಿ ಮಾತಾಡುತ್ತಿರಲಿಲ್ಲ. ಇದನ್ನು ಗಮನಿಸಿದಾಗ ನಾನೇ ಅವರ ಹತ್ತಿರ ಹೋಗಿ ಮಾತಾಡಬೇಕು ಅಂತ ನಿರ್ಧರಿಸಿದೆ. ಆದರೆ ಅದು ತುಂಬಾ ಕಷ್ಟವಾಗಿತ್ತು. ಅವರು ಮಾಡಿದ ತಪ್ಪು ಏನಂತ ಅವರಿಗೇ ಗೊತ್ತಿರುತ್ತದಲ್ವಾ? ನಾನು ಹೋಗಿ ಏನು ಹೇಳಲಿ? ಅವರ ಪ್ರತಿಕ್ರಿಯೆ ಹೇಗಿರುತ್ತೋ ಏನೋ ಅಂತ ಭಯವಿತ್ತು. ಆದರೆ ನಾವಿಬ್ಬರೂ ಒಟ್ಟಿಗೆ ಸೇರಿ ಬೈಬಲಿನಿಂದ ಹಲವಾರು ವಿಷಯಗಳನ್ನು ಕಲಿತಿದ್ದನ್ನು ನೆನಪಿಸಿಕೊಂಡೆ. ಇದು ನನಗೆ ಧೈರ್ಯ ಕೊಟ್ಟಿತು. ನನಗೆ ಸಹಾಯ ಬೇಕಿದ್ದಾಗೆಲ್ಲಾ ಮೌರೀಟ್‌ಸ್ಯೊ ನನ್ನ ಜೊತೆ ಮಾತಾಡುತ್ತಿದ್ದರು. ಅವರ ಸ್ನೇಹ ಕಳಕೊಳ್ಳುವುದು ನನಗಿಷ್ಟ ಇರಲಿಲ್ಲ. ಆದರೆ ಅವರ ಬಗ್ಗೆ ಚಿಂತೆ ಇದ್ದದರಿಂದ ಹೇಗಾದರೂ ಅವರಿಗೆ ಸಹಾಯ ಮಾಡಬೇಕು ಅಂತ ತೀರ್ಮಾನ ಮಾಡಿದೆ” ಎಂದು ಜ್ಯಾನಿ ಹೇಳುತ್ತಾರೆ.

ಮೌರೀಟ್‌ಸ್ಯೊ ಹೇಳುವುದು: “ನನಗೆ ಒಳ್ಳೇದಾಗಬೇಕು ಅಂತಾನೇ ಜ್ಯಾನಿ ನನ್ನ ತಪ್ಪನ್ನು ನನಗೆ ಹೇಳಿದ. ಅವನು ಹೇಳಿದ್ದೆಲ್ಲ ಸರಿಯಾಗಿತ್ತು. ನಾನು ತಪ್ಪು ಮಾಡಿದ್ದರಿಂದಲೇ ಕಷ್ಟಪಡುತ್ತಿದ್ದೆ. ಅದಕ್ಕೆ ಕಾರಣ ಜ್ಯಾನಿನೂ ಅಲ್ಲ, ಯೆಹೋವನೂ ಅಲ್ಲ. ಹಾಗಾಗಿ ಹಿರಿಯರು ಬುದ್ಧಿವಾದ ಕೊಟ್ಟಾಗ ಅದನ್ನು ಸ್ವೀಕರಿಸಿದೆ. ಹೋಗುತ್ತಾ ಹೋಗುತ್ತಾ ಯೆಹೋವನ ಜೊತೆ ಪುನಃ ಒಳ್ಳೇ ಸಂಬಂಧ ಬೆಳೆಸಿಕೊಂಡೆ.”

ಸ್ನೇಹಿತರು ಸಮಸ್ಯೆಯಲ್ಲಿ ಸಿಕ್ಕಿಕೊಂಡಾಗ

ದಾವೀದ ಕಷ್ಟದಲ್ಲಿದ್ದಾಗ ಬೇರೆ ಸ್ನೇಹಿತರೂ ಸಹಾಯಮಾಡಿದರು, ಅವನಿಗೆ ನಿಷ್ಠೆ ತೋರಿಸಿದರು. ಅವರಲ್ಲಿ ಒಬ್ಬ ಹೂಷೈ. ಅವನನ್ನು “ದಾವೀದನ ಸ್ನೇಹಿತ” ಎಂದು ಬೈಬಲ್‌ ಕರೆಯುತ್ತದೆ. (2 ಸಮು. 16:16; 1 ಪೂರ್ವ. 27:33) ಅವನು ಆಸ್ಥಾನದ ಅಧಿಕಾರಿಯೂ ಆಗಿದ್ದಿರಬಹುದು. ದಾವೀದನ ಆಪ್ತ ಸ್ನೇಹಿತನಾಗಿದ್ದು ಅವನ ಜೊತೆಯಲ್ಲೇ ಇರುತ್ತಿದ್ದನು. ಕೆಲವೊಮ್ಮೆ ದಾವೀದ ಅವನಿಗೆ ಗುಟ್ಟಾಗಿ ಕೊಡುತ್ತಿದ್ದ ಕೆಲಸಗಳನ್ನು ನಿಷ್ಠೆಯಿಂದ ಮಾಡುತ್ತಿದ್ದನು.

ಅಬ್ಷಾಲೋಮನು ದಾವೀದನ ಸಿಂಹಾಸನವನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಅನೇಕ ಇಸ್ರಾಯೇಲ್ಯರು ಅವನ ಪಕ್ಷ ಸೇರಿಕೊಂಡರು. ಆದರೆ ಹೂಷೈ ಹಾಗೆ ಮಾಡಲಿಲ್ಲ. ಅಬ್ಷಾಲೋಮನಿಂದ ದಾವೀದ ತಪ್ಪಿಸಿಕೊಂಡು ಹೋಗುತ್ತಿದ್ದಾಗ ಹೂಷೈ ಅವನನ್ನು ಭೇಟಿಯಾಗಲು ಹೋದನು. ದಾವೀದನು ತನ್ನ ಸ್ವಂತ ಮಗ ಮತ್ತು ಆಪ್ತ ಸ್ನೇಹಿತರೇ ದ್ರೋಹ ಮಾಡುತ್ತಿದ್ದಾರಲ್ಲಾ ಎಂದು ತುಂಬ ನೊಂದುಕೊಂಡಿದ್ದನು. ಇಂಥ ಸಮಯದಲ್ಲಿ ಹೂಷೈ ಅವನಿಗೆ ನಿಷ್ಠನಾಗಿದ್ದನು. ದಾವೀದನ ವಿರುದ್ಧ ನಡೆಯುತ್ತಿದ್ದ ಸಂಚನ್ನು ವಿಫಲಮಾಡಲು ತನ್ನ ಪ್ರಾಣವನ್ನು ಅಪಾಯಕ್ಕೊಡ್ಡಿದನು. ತಾನೊಬ್ಬ ಆಸ್ಥಾನ ಅಧಿಕಾರಿ ಎಂದು ಬರೀ ಕರ್ತವ್ಯ ಪ್ರಜ್ಞೆಯಿಂದ ಇದನ್ನು ಮಾಡಲಿಲ್ಲ. ಒಬ್ಬ ನಿಷ್ಠಾವಂತ ಸ್ನೇಹಿತನಾಗಿ ಇದನ್ನೆಲ್ಲ ಮಾಡಿದನು.—2 ಸಮು. 15:13-17, 32-37; 16:15–17:16.

ಇಂದು ಸಭೆಯಲ್ಲಿ ಸಹೋದರ ಸಹೋದರಿಯರು ಸ್ಥಾನಮಾನಗಳ ಬಗ್ಗೆ ಯೋಚಿಸದೆ ಅನ್ಯೋನ್ಯವಾಗಿ ಇದ್ದಾರೆ. ಇಂಥ ಐಕ್ಯತೆ ನೋಡುವಾಗ ಹೃದಯ ತುಂಬಿಬರುವುದಿಲ್ಲವೇ? ಅವರು ತಮ್ಮ ಕ್ರಿಯೆಗಳ ಮೂಲಕ “ನಾನು ನಿನ್ನ ಸ್ನೇಹಿತ. ಬೇರೆ ದಾರಿ ಇಲ್ಲ ಅಂತಲ್ಲ, ನೀನು ನನಗೆ ಮುಖ್ಯ ಅದಕ್ಕೇ” ಎಂದು ಒಬ್ಬರಿಗೊಬ್ಬರು ಹೇಳಿದಂತಿದೆ.

ಇಂಥ ಪ್ರೀತಿ-ಸ್ನೇಹವನ್ನು ಫೆಡರಿಕೊ ಎಂಬ ಸಹೋದರ ಅನುಭವಿಸಿದನು. ಅವನಿಗೆ ಆಂಟೊನ್ಯೊ ಎಂಬ ಸ್ನೇಹಿತನಿದ್ದನು. ಫೆಡರಿಕೊ ಹೇಳುವುದು: “ಬೇರೆ ಸಭೆಯಲ್ಲಿದ್ದ ಆಂಟೊನ್ಯೊ ನಮ್ಮ ಸಭೆಗೆ ಬಂದಾಗ ನಾವು ಸ್ನೇಹಿತರಾದೆವು. ಆಗ ನಾವಿಬ್ಬರೂ ಸಹಾಯಕ ಸೇವಕರು. ಜೊತೆಜೊತೆಯಾಗಿ ಖುಷಿಖುಷಿಯಾಗಿ ಕೆಲಸ ಮಾಡುತ್ತಿದ್ದೆವು. ಸ್ವಲ್ಪ ಸಮಯದಲ್ಲೇ ಅವನು ಹಿರಿಯನಾದ. ಅವನು ನನಗೆ ಬರೀ ಫ್ರೆಂಡ್‌ ಮಾತ್ರವಲ್ಲ ಆಧ್ಯಾತ್ಮಿಕ ವಿಷಯಗಳಲ್ಲಿ ಆದರ್ಶ ವ್ಯಕ್ತಿಯೂ ಆಗಿದ್ದ.” ಆದರೆ ಫೆಡರಿಕೊ ಒಂದು ತಪ್ಪು ಹೆಜ್ಜೆ ಇಟ್ಟುಬಿಟ್ಟನು. ತಡಮಾಡದೇ ಆಧ್ಯಾತ್ಮಿಕ ಸಹಾಯ ಪಡೆದುಕೊಂಡನಾದರೂ ಸಹಾಯಕ ಸೇವಕ ಮತ್ತು ಪಯನೀಯರ್‌ ಆಗಿರುವ ಸುಯೋಗ ಕಳೆದುಕೊಂಡನು. ಇಂಥ ಕಷ್ಟದ ಸಮಯದಲ್ಲಿ ಆಂಟೊನ್ಯೊ ಏನು ಮಾಡಿದನು?

ಫೆಡರಿಕೊ ಸಮಸ್ಯೆಯಲ್ಲಿ ಸಿಲುಕಿದ್ದಾಗ ಅವನ ಸ್ನೇಹಿತ ಆಂಟೊನ್ಯೊ ಅವನು ಹೇಳುವುದನ್ನು ಗಮನಕೊಟ್ಟು ಕೇಳಿ ಪ್ರೋತ್ಸಾಹ ನೀಡಿದ

ಫೆಡರಿಕೊ ಹೇಳುವುದು: “ನನಗೆ ಆಗುತ್ತಿದ್ದ ನೋವನ್ನು ಆಂಟೊನ್ಯೊ ಅರ್ಥಮಾಡಿಕೊಂಡ. ನನಗೆ ಸಹಾಯಮಾಡೋಕೆ ಅವನ ಕೈಯಿಂದ ಏನೆಲ್ಲ ಆಗುತ್ತೋ ಎಲ್ಲ ಮಾಡಿದ. ನಾನು ಮತ್ತೆ ಆಧ್ಯಾತ್ಮಿಕವಾಗಿ ಮುಂದೆ ಬರಬೇಕು ಅಂತ ತುಂಬ ಶ್ರಮಪಡುತ್ತಿದ್ದ. ಆಧ್ಯಾತ್ಮಿಕ ಬಲವನ್ನು ಪುನಃ ಪಡೆದುಕೊಳ್ಳೋಕೆ ಪ್ರಯತ್ನ ಮಾಡುತ್ತಾ ಇರು, ಬಿಟ್ಟುಬಿಡಬೇಡ ಅಂತ ಪ್ರೋತ್ಸಾಹಿಸುತ್ತಾ ಇದ್ದ.” ಆಂಟೊನ್ಯೊ ಹೇಳುವುದು: “ಫೆಡರಿಕೊ ಜೊತೆ ನಾನು ಮುಂಚೆಗಿಂತ ಹೆಚ್ಚು ಸಮಯ ಕಳೆದೆ. ಅವನು ಯಾವುದೇ ವಿಷಯದ ಬಗ್ಗೆ, ತನ್ನ ನೋವಿನ ಬಗ್ಗೆ ಕೂಡ ನನ್ನ ಹತ್ತಿರ ಹೇಳಿಕೊಳ್ಳಬೇಕು ಅನ್ನೋದು ನನ್ನ ಉದ್ದೇಶವಾಗಿತ್ತು.” ಸ್ವಲ್ಪ ಸಮಯ ಹೋದ ಮೇಲೆ ಫೆಡರಿಕೊ ಆಧ್ಯಾತ್ಮಿಕ ಬಲ ಪಡೆದುಕೊಂಡು ಪುನಃ ಪಯನೀಯರ್‌ ಆದನು, ಸಹಾಯಕ ಸೇವಕನಾದನು. “ನಾವೀಗ ಬೇರೆಬೇರೆ ಸಭೆಯಲ್ಲಿದ್ದರೂ ಇನ್ನಷ್ಟು ಆಪ್ತರಾಗಿದ್ದೇವೆ” ಎಂದು ಆಂಟೊನ್ಯೊ ಹೇಳುತ್ತಾನೆ.

ದ್ರೋಹ ಮಾಡಿಬಿಟ್ಟರು ಅಂತ ಅನಿಸುತ್ತಾ?

ನಿಮಗೆ ನಿಮ್ಮ ಸ್ನೇಹಿತರಿಂದ ಸಹಾಯ ಬೇಕಿದ್ದಾಗಲೇ ಅವರು ನಿಮ್ಮನ್ನು ದೂರ ಮಾಡಿದರೆ ನಿಮಗೆ ಹೇಗನಿಸುತ್ತದೆ? ಹೃದಯಕ್ಕೆ ಇರಿದಂತೆ ಆಗುತ್ತದೆ ನಿಜ. ಆದರೆ ಅವರನ್ನು ನೀವು ಕ್ಷಮಿಸುವಿರಾ? ನಿಮ್ಮ ಮತ್ತು ಅವರ ಸ್ನೇಹಬಂಧ ಮುಂಚೆ ಇದ್ದ ಹಾಗೆ ಇರುತ್ತಾ?

ಇಂಥ ಒಂದು ಸನ್ನಿವೇಶ ಯೇಸುವಿಗೂ ಬಂತು. ಆಗ ಅವನು ಏನು ಮಾಡಿದನು? ಅವನು ನಂಬಿಗಸ್ತ ಅಪೊಸ್ತಲರ ಜೊತೆ ತುಂಬ ಸಮಯ ಕಳೆದದ್ದರಿಂದ ಅವರ ನಡುವೆ ಅನ್ಯೋನ್ಯ ಸಂಬಂಧ ಬೆಳೆದಿತ್ತು. ಅದಕ್ಕೇ ಯೇಸು ಅವರನ್ನು ತನ್ನ ಸ್ನೇಹಿತರು ಎಂದು ಕರೆದನು. (ಯೋಹಾ. 15:15) ಆದರೆ ಅವನು ಭೂಮಿಯಲ್ಲಿದ್ದ ಕೊನೇ ದಿನಗಳಂದು ಏನಾಯಿತೆಂದು ನೋಡಿ. ಅವನನ್ನು ಸೈನಿಕರು ಬಂಧಿಸಿದಾಗ ಅಪೊಸ್ತಲರು ಅವನನ್ನು ಬಿಟ್ಟು ಓಡಿಹೋದರು. ಅದೇನೇ ಆದರೂ ತನ್ನ ಗುರುವನ್ನು ಬಿಟ್ಟು ಹೋಗುವುದೇ ಇಲ್ಲ ಎಂದು ಎಲ್ಲರ ಮುಂದೆ ಹೇಳಿದ್ದ ಪೇತ್ರನೂ ಓಡಿಹೋದನು. ಯೇಸು ಯಾರು ಅಂತ ತನಗೆ ಗೊತ್ತೇ ಇಲ್ಲ ಅಂತ ಅದೇ ರಾತ್ರಿ ಹೇಳಿದನು!—ಮತ್ತಾ. 26:31-33, 56, 69-75.

ಸಾಯುವ ಮುಂಚೆ ತಾನು ಎದುರಿಸುವ ಕೊನೇ ಪರೀಕ್ಷೆಯ ಸಮಯದಲ್ಲಿ ತನ್ನ ಜೊತೆ ಯಾರೂ ಇರುವುದಿಲ್ಲ ಅಂತ ಯೇಸುವಿಗೆ ಮೊದಲೇ ಗೊತ್ತಿತ್ತು. ಶಿಷ್ಯರು ಹೀಗೆ ಮಾಡಿಬಿಟ್ಟರಲ್ಲಾ ಎಂದು ಅವನಿಗೆ ನೋವು, ನಿರಾಶೆ ಆಗಿರಬಹುದು. ಆಗಿದ್ದರೂ ಯೇಸು ಪುನರುತ್ಥಾನ ಆದ ಕೆಲವು ದಿನಗಳ ನಂತರ ಶಿಷ್ಯರೊಟ್ಟಿಗೆ ಮಾತಾಡುತ್ತಿದ್ದಾಗ ಆ ನೋವು, ನಿರಾಶೆಯ ಸುಳಿವೇ ಇರಲಿಲ್ಲ. ಶಿಷ್ಯರು ಮಾಡಿದ ತಪ್ಪುಗಳನ್ನು ಒಂದೊಂದಾಗಿ ಹೇಳುತ್ತಾ ಹೋಗಲಿಲ್ಲ, ತಾನು ಸಾಯುವ ಹಿಂದಿನ ರಾತ್ರಿ ಅವರು ಮಾಡಿದ್ದನ್ನೂ ಹೇಳಲಿಲ್ಲ.

ಬದಲಿಗೆ ಪೇತ್ರ ಮತ್ತು ಇತರ ಅಪೊಸ್ತಲರಲ್ಲಿ ಯೇಸು ಧೈರ್ಯ ತುಂಬಿಸಿದನು. ಅತಿ ಪ್ರಾಮುಖ್ಯವಾದ ಶೈಕ್ಷಣಿಕ ಕೆಲಸವನ್ನು ಮಾಡಲು ಬೇಕಾದ ನಿರ್ದೇಶನಗಳನ್ನು ಕೊಡುವ ಮೂಲಕ ಅವರ ಮೇಲೆ ತನಗೆ ಇನ್ನೂ ನಂಬಿಕೆಯಿದೆ ಎಂದು ತೋರಿಸಿದನು. ಯೇಸು ಅವರ ಜೊತೆಗಿನ ಸ್ನೇಹಸಂಬಂಧವನ್ನು ಕಡಿದುಹಾಕಲಿಲ್ಲ. ಅವನು ಅಪೊಸ್ತಲರಿಗೆ ತೋರಿಸಿದ ಈ ಪ್ರೀತಿ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು. ಮುಂದಕ್ಕೆ ಅವನನ್ನು ನೋಯಿಸದಿರಲು ತಮ್ಮಿಂದಾದ ಎಲ್ಲ ಪ್ರಯತ್ನ ಮಾಡಿದರು. ಅವರಿಗೆ ಯೇಸು ಕೊಟ್ಟ ಕೆಲಸವನ್ನು ಮಾಡಿ ಮುಗಿಸಿದರು.—ಅ. ಕಾ. 1:8; ಕೊಲೊ. 1:23.

ಜೂಲಿಯಾನ ಎಂಬ ಸಹೋದರಿಗೆ ತನ್ನ ಗೆಳತಿ ಎಲ್ವೀರಾ ಮಾಡಿದ ಯಾವುದೋ ವಿಷಯದಿಂದ ಬೇಜಾರಾಯಿತು. ಆ ಸಮಯದ ಬಗ್ಗೆ ನೆನಪಿಸಿಕೊಳ್ಳುತ್ತಾ ಎಲ್ವೀರಾ ಹೇಳುವುದು: “ನನ್ನಿಂದಾಗಿ ತುಂಬ ನೋವಾಯಿತು ಅಂತ ಅವಳು ಹೇಳಿದಾಗ ನನಗೆ ಒಂಥರಾ ಅನಿಸಿತು. ಅವಳಿಗೆ ನನ್ನ ಮೇಲೆ ಕೋಪ ಮಾಡಿಕೊಳ್ಳಲು ಕಾರಣನೂ ಇತ್ತು. ಆದರೆ ಅವಳಿಗೆ ನನ್ನ ಬಗ್ಗೆ ಚಿಂತೆ ಇತ್ತು, ನನ್ನ ವರ್ತನೆ ಹೀಗೇ ಇದ್ದರೆ ಏನಾಗಬಹುದೆಂಬ ಚಿಂತೆ ಇತ್ತು. ನನ್ನಿಂದಾಗಿ ಅವಳಿಗಾದ ನೋವಿನ ಬಗ್ಗೆನೇ ಹೇಳುವ ಬದಲು ನನಗೆ ನಾನೇ ಮಾಡಿಕೊಳ್ಳುತ್ತಿದ್ದ ಹಾನಿಯ ಬಗ್ಗೆ ಹೇಳಿದ್ದನ್ನು ನಾನು ಯಾವತ್ತೂ ಮರೆಯಲ್ಲ. ತನಗಿಂತ ನನ್ನ ಒಳಿತನ್ನು ಬಯಸುವ ಗೆಳತಿಯನ್ನು ಕೊಟ್ಟದ್ದಕ್ಕಾಗಿ ನಾನು ಯೆಹೋವನಿಗೆ ಧನ್ಯವಾದ ಹೇಳಿದೆ.”

ಸ್ನೇಹ ಮುರಿದುಹೋಗುವ ಸನ್ನಿವೇಶ ಬಂದಾಗ ಒಬ್ಬ ಒಳ್ಳೇ ಸ್ನೇಹಿತ ಏನು ಮಾಡುತ್ತಾನೆ? ಅವನೇ ಮುಂದೆ ಹೋಗಿ ಪ್ರೀತಿಯಿಂದ ಮಾತಾಡುತ್ತಾನೆ. ತನಗೆ ಅನಿಸಿದ್ದನ್ನು ನಾತಾನನಂತೆ ನೇರವಾಗಿ ಹೇಳುತ್ತಾನೆ. ಕಷ್ಟದಲ್ಲಿರುವ ತನ್ನ ಸ್ನೇಹಿತನಿಗೆ ಹೂಷೈ ಹಾಗೆ ನಿಷ್ಠೆ ತೋರಿಸುತ್ತಾನೆ. ಮನನೋಯಿಸಿದ ಸ್ನೇಹಿತನನ್ನು ಯೇಸುವಿನಂತೆ ಕ್ಷಮಿಸುತ್ತಾನೆ. ನೀವು ಇಂಥ ಸ್ನೇಹಿತರಾ?