ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಯೆಹೋವನ ಸಾಕ್ಷಿಗಳ ಪ್ರಕಾಶನಗಳಲ್ಲಿ ಅಪೊಸ್ತಲ ಪೌಲನಿಗೆ ಬೊಕ್ಕತಲೆ ಇರುವಂತೆ ಯಾಕೆ ಚಿತ್ರಿಸಲಾಗುತ್ತದೆ?

ನಿಜವಾಗಿ ಹೇಳುವುದಾದರೆ, ಇಂದು ಯಾರಿಂದಲೂ ಪೌಲ ನೋಡಲು ಹೀಗೇ ಇದ್ದನು ಎಂದು ಹೇಳಲು ಸಾಧ್ಯವಿಲ್ಲ. ಆತನ ಬಗ್ಗೆ ನಮ್ಮ ಪ್ರಕಾಶನಗಳಲ್ಲಿ ಬರುವ ಚಿತ್ರಗಳು ಅಗೆತಶಾಸ್ತ್ರಜ್ಞರಿಂದ ಪಡೆದುಕೊಂಡ ಯಾವುದೇ ಸಾಕ್ಷ್ಯಗಳ ಮೇಲೆ ಆಧರಿಸಿದ ನೈಜ ಚಿತ್ರಗಳಲ್ಲ.

ಆದರೆ ಪೌಲ ನೋಡಲು ಹೇಗಿದ್ದನು ಎನ್ನುವುದಕ್ಕೆ ಕೆಲವು ಸುಳಿವುಗಳಿವೆ. ಉದಾಹರಣೆಗೆ, 1902 ಮಾರ್ಚ್‌ 1​ರ ಝಯನ್ಸ್‌ ವಾಚ್‌ ಟವರ್‌ ಅಪೊಸ್ತಲ ಪೌಲನ ಹೊರತೋರಿಕೆ ಬಗ್ಗೆ ಹೀಗೆ ಹೇಳಿತ್ತು: “ಸುಮಾರು ಕ್ರಿ.ಶ. 150​ರಲ್ಲಿ ಬರೆಯಲಾದ ‘ಆ್ಯಕ್ಟ್ಸ್‌ ಆಫ್‌ ಪಾಲ್‌ ಆ್ಯಂಡ್‌ ಥೆಕ್ಲಾ’ ಎಂಬ ಪುಸ್ತಕದಲ್ಲಿರುವ ವರ್ಣನೆಯಂತೆಯೇ ತಕ್ಕಮಟ್ಟಿಗೆ ಪೌಲನು ಇದ್ದಿರಬಹುದು. ಆ ವರ್ಣನೆ ಆಗಿನ ಕಾಲದಿಂದ ಜನರು ನಂಬಿಕೊಂಡು ಬಂದಿರುವಂತೆಯೇ ಇದೆ. ಅದರಲ್ಲಿ ಅವನ ಬಗ್ಗೆ ಹೀಗೆ ಹೇಳಲಾಗಿತ್ತು: ‘ಸಾಮಾನ್ಯ ಎತ್ತರ, ಬೊಕ್ಕತಲೆ, ಸ್ವಲ್ಪ ಬೆಂಡಾದ ಕಾಲುಗಳು, ಕಟ್ಟುಮಸ್ತಿನ ದೇಹ, ಕೂಡಿಕೊಂಡಿದ್ದ ಹುಬ್ಬುಗಳು, ಉದ್ದ ಮೂಗು ಅವನಿಗಿತ್ತು.’”

ಈ ಪುಸ್ತಕದ ಬಗ್ಗೆ ದಿ ಆಕ್ಸ್‌ಫರ್ಡ್‌ ಡಿಕ್ಷನೆರಿ ಆಫ್‌ ದ ಕ್ರಿಶ್ಚಿಯನ್‌ ಚರ್ಚ್‌ (1997​ರ ಆವೃತ್ತಿ) ಹೀಗೆ ಹೇಳುತ್ತದೆ: “‘ಆ್ಯಕ್ಟ್ಸ್‌ ಆಫ್‌ ಪಾಲ್‌ ಆ್ಯಂಡ್‌ ಥೆಕ್ಲಾ’ದಲ್ಲಿ ಐತಿಹಾಸಿಕ ಸತ್ಯಗಳೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.” ಈ ಪುಸ್ತಕ ಕೆಲವು ಶತಮಾನಗಳ ವರೆಗೆ ತುಂಬ ಪ್ರಾಧಾನ್ಯತೆ ಪಡೆದಿತ್ತು. ಯಾಕೆಂದರೆ ಇದರ 80 ಗ್ರೀಕ್‌ ಹಸ್ತಪ್ರತಿಗಳಿದ್ದವು ಮತ್ತು ಬೇರೆ ಭಾಷೆಗಳಲ್ಲಿ ಇದರ ಆವೃತ್ತಿಗಳು ಲಭ್ಯವಿದ್ದವು. ಆದ್ದರಿಂದ ಇಂಥ ಐತಿಹಾಸಿಕ ಮಾಹಿತಿಯನ್ನು ಆಧರಿಸಿ ಅಲ್ಲಿರುವ ವರ್ಣನೆಗೆ ತಕ್ಕಂತೆ ನಮ್ಮ ಪ್ರಕಾಶನಗಳಲ್ಲಿ ಪೌಲನ ಚಿತ್ರಗಳನ್ನು ಬಿಡಿಸಲಾಗುತ್ತಿದೆ.

ಆದರೆ ನೆನಪಿಡಿ, ಪೌಲನ ಹೊರತೋರಿಕೆಗಿಂತ ಮುಖ್ಯವಾದ ಬೇರೆ ವಿಷಯಗಳಿವೆ. ಪೌಲ ಸೇವೆ ಮಾಡುತ್ತಿದ್ದಾಗಲೂ ಕೆಲವು ಟೀಕಾಕಾರರು ‘ಅವನು ಸಾಕ್ಷಾತ್ತಾಗಿ ಬಂದರೆ ನಿರ್ಬಲನೂ ಅವನ ಮಾತುಗಳು ಗಣನೆಗೆ ಬಾರದವುಗಳೂ ಆಗಿವೆ’ ಎಂದು ಹೇಳಿದ್ದರು. (2 ಕೊರಿಂ. 10:10) ಆದರೆ ಅವನು ಯೇಸುವಿನ ಅದ್ಭುತಕಾರ್ಯದಿಂದಾಗಿ ಕ್ರೈಸ್ತನಾದನು ಎನ್ನುವುದನ್ನು ನಾವು ಮರೆಯಬಾರದು. ‘ಅನ್ಯಜನಾಂಗಗಳಿಗೆ ಯೇಸುವಿನ ಹೆಸರನ್ನು ತಿಳಿಯಪಡಿಸಲು ಆತನ ಆರಿಸಿಕೊಂಡ ಸಾಧನವಾಗಿ’ ಪೌಲ ಏನೆಲ್ಲ ಸಾಧಿಸಿದನು ಎಂದು ನೆನಪಿಸಿಕೊಳ್ಳಿ. (ಅ. ಕಾ. 9:3-5, 15; 22:6-8) ಅಷ್ಟೇ ಅಲ್ಲ, ಯೆಹೋವನಿಂದ ಪ್ರೇರಿತನಾಗಿ ಅವನು ಬರೆದಿರುವ ಬೈಬಲ್‌ ಪುಸ್ತಕಗಳಿಂದ ಇಂದು ನಾವೆಷ್ಟು ಪ್ರಯೋಜನ ಪಡೆಯುತ್ತಿದ್ದೇವೆ ಎಂದು ಯೋಚಿಸಿ.

ಪೌಲ ಕ್ರೈಸ್ತನಾಗುವ ಮುಂಚೆ ತಾನು ಸಾಧಿಸಿದ ವಿಷಯಗಳ ಬಗ್ಗೆ ಕೊಚ್ಚಿಕೊಂಡದ್ದಾಗಲಿ ತನ್ನ ಹೊರತೋರಿಕೆ ಬಗ್ಗೆ ಹೇಳಿಕೊಂಡದ್ದಾಗಲಿ ಬೈಬಲಿನಲ್ಲಿ ಇಲ್ಲ. (ಅ. ಕಾ. 26:4, 5; ಫಿಲಿ. 3:4-6) ಆದರೆ “ನಾನು ಅಪೊಸ್ತಲರಲ್ಲಿ ಅತಿ ಕನಿಷ್ಠನು; ನಾನು . . . ಅಪೊಸ್ತಲನೆಂದು ಕರೆಸಿಕೊಳ್ಳಲು ಯೋಗ್ಯನಲ್ಲ” ಎಂದು ಹೇಳಿದ್ದಾನೆ. (1 ಕೊರಿಂ. 15:9) “ಪವಿತ್ರ ಜನರೆಲ್ಲರಲ್ಲಿ ಅತ್ಯಲ್ಪನಾದವನಿಗಿಂತಲೂ ಕಡಮೆಯವನಾದ ನನಗೆ, ಕ್ರಿಸ್ತನ ಅಗಾಧವಾದ ಐಶ್ವರ್ಯದ ಕುರಿತಾದ ಸುವಾರ್ತೆಯನ್ನು ಅನ್ಯಜನಾಂಗಗಳಿಗೆ ಪ್ರಕಟಿಸಲಿಕ್ಕಾಗಿ . . . ಅಪಾತ್ರ ದಯೆಯು ಕೊಡಲ್ಪಟ್ಟಿತು” ಎಂದು ಬರೆದಿದ್ದಾನೆ. (ಎಫೆ. 3:8, 9) ಹೀಗಿರುವಾಗ ಅವನು ಸಾರಿದ ಆ ಸುವಾರ್ತೆ ಮುಖ್ಯವೇ ಹೊರತು ಅವನು ನೋಡಲು ಹೇಗಿದ್ದನು ಎನ್ನುವುದಲ್ಲ.