ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅತಿಥಿಸತ್ಕಾರ—ಆನಂದಕರ, ಆವಶ್ಯಕ

ಅತಿಥಿಸತ್ಕಾರ—ಆನಂದಕರ, ಆವಶ್ಯಕ

“ಗುಣುಗುಟ್ಟದೆ ಒಬ್ಬರಿಗೊಬ್ಬರು ಅತಿಥಿಸತ್ಕಾರಮಾಡಿರಿ.”—1 ಪೇತ್ರ 4:9.

ಗೀತೆಗಳು: 124, 119

1. ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಯಾವ ಕಷ್ಟಗಳನ್ನು ಎದುರಿಸಿದರು?

ಕ್ರಿಸ್ತ ಶಕ 62​ರಿಂದ 64​ರ ಮಧ್ಯೆ ಅಪೊಸ್ತಲ ಪೇತ್ರನು ‘ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷ್ಯಾ, ಬಿಥೂನ್ಯ ಎಂಬ ಸ್ಥಳಗಳಲ್ಲಿ ಚದುರಿದ್ದ ತಾತ್ಕಾಲಿಕ ನಿವಾಸಿಗಳಿಗೆ’ ಪತ್ರ ಬರೆದನು. (1 ಪೇತ್ರ 1:1) ಆ ಸಹೋದರ ಸಹೋದರಿಯರು ಬೇರೆ ಬೇರೆ ಸ್ಥಳಗಳಿಂದ ಬಂದವರಾಗಿದ್ದರು. ಅವರಿಗೆ ಉತ್ತೇಜನ ಮತ್ತು ಮಾರ್ಗದರ್ಶನ ಬೇಕಿತ್ತು. ಯಾಕೆಂದರೆ ಅವರು ತುಂಬ ಹಿಂಸೆಯನ್ನು ಎದುರಿಸುತ್ತಿದ್ದರು ಮತ್ತು ಅವರ ಬಗ್ಗೆ ಜನರು ದೂಷಣಾತ್ಮಕ ಮಾತುಗಳನ್ನು ಆಡುತ್ತಿದ್ದರು. ಅಷ್ಟೇ ಅಲ್ಲ, ಅವರು ಅಪಾಯಕರ ಸಮಯದಲ್ಲಿ ಜೀವಿಸುತ್ತಿದ್ದರು. ಅವರಿದ್ದ ಸಮಯವನ್ನು ಸೂಚಿಸುತ್ತಾ ಪೇತ್ರನು “ಎಲ್ಲವುಗಳ ಅಂತ್ಯವು ಸಮೀಪಿಸಿದೆ” ಎಂದು ಬರೆದನು. ಪೇತ್ರನು ಇದನ್ನು ಬರೆದು 10 ವರ್ಷಗಳೊಳಗೆ ಯೆರೂಸಲೇಮ್‌ ನಾಶವಾಗಲಿತ್ತು. ಅಂಥ ಒತ್ತಡಭರಿತ ಸಮಯವನ್ನು ನಿಭಾಯಿಸಲು ಆ ಎಲ್ಲ ಕ್ರೈಸ್ತರಿಗೆ ಯಾವುದು ಸಹಾಯ ಮಾಡಿತು?—1 ಪೇತ್ರ 4:4, 7, 12.

2, 3. ಅತಿಥಿಸತ್ಕಾರ ಮಾಡುವಂತೆ ಪೇತ್ರನು ಯಾಕೆ ಸಹೋದರರನ್ನು ಉತ್ತೇಜಿಸಿದನು? (ಲೇಖನದ ಆರಂಭದ ಚಿತ್ರ ನೋಡಿ.)

2 ಆ ಸಹೋದರರಿಗೆ ಸಹಾಯ ಮಾಡಿದ ಒಂದು ವಿಷಯ ಅತಿಥಿಸತ್ಕಾರ. ಪೇತ್ರನು ಅವರಿಗೆ, “ಒಬ್ಬರಿಗೊಬ್ಬರು ಅತಿಥಿಸತ್ಕಾರಮಾಡಿರಿ” ಎಂದು ಉತ್ತೇಜಿಸಿದನು. (1 ಪೇತ್ರ 4:9) ಅತಿಥಿಸತ್ಕಾರ ಎಂದು ಭಾಷಾಂತರವಾಗಿರುವ ಗ್ರೀಕ್‌ ಪದದ ಅರ್ಥ “ಅಪರಿಚಿತರಿಗೆ ಪ್ರೀತಿ ಅಥವಾ ದಯೆ ತೋರಿಸುವುದು” ಎಂದಾಗಿದೆ. ಆದರೆ ಪೇತ್ರನು, ಪರಿಚಯವಿದ್ದ ಮತ್ತು ಒಟ್ಟಿಗೆ ಸಹವಾಸ ಮಾಡುತ್ತಿದ್ದ ಸಹೋದರ ಸಹೋದರಿಯರಿಗೆ “ಒಬ್ಬರಿಗೊಬ್ಬರು” ಅತಿಥಿಸತ್ಕಾರ ಮಾಡಿ ಎಂದು ಉತ್ತೇಜಿಸಿದನು. ಅತಿಥಿಸತ್ಕಾರದಿಂದ ಅವರಿಗೆ ಯಾವ ಸಹಾಯ ಸಿಕ್ಕಿತು?

3 ಅತಿಥಿಸತ್ಕಾರ ಮಾಡುವುದರಿಂದ ಅವರು ಒಬ್ಬರಿಗೊಬ್ಬರು ಆಪ್ತರಾಗಬಹುದಿತ್ತು. ನಿಮಗೂ ಇದೇ ಅನುಭವ ಆಗಿದೆಯಾ? ನಿಮ್ಮನ್ನು ಯಾರಾದರೂ ಮನೆಗೆ ಕರೆದಾಗ ನೀವು ಅಲ್ಲಿ ಹೋಗಿ ಸಮಯ ಕಳೆದಿದ್ದು ನಿಮಗೆ ಸಂತೋಷವಾಗಿರಬೇಕಲ್ವಾ? ಅಥವಾ ನಿಮ್ಮ ಮನೆಗೆ ಯಾರನ್ನಾದರೂ ಕರೆದಾಗ ಅವರು ನಿಮಗೆ ಆಪ್ತರಾಗಿರಬೇಕಲ್ವಾ? ನಮ್ಮ ಸಹೋದರ ಸಹೋದರಿಯರನ್ನು ಚೆನ್ನಾಗಿ ತಿಳಿದುಕೊಳ್ಳುವಂಥ ಅತ್ಯುತ್ತಮ ವಿಧ ಅತಿಥಿಸತ್ಕಾರ ಆಗಿದೆ. ಪೇತ್ರನ ಸಮಯದಲ್ಲಿದ್ದ ಕ್ರೈಸ್ತರು ಒಬ್ಬರಿಗೊಬ್ಬರು ಆಪ್ತರಾಗಬೇಕಿತ್ತು. ಯಾಕೆಂದರೆ ಅವರಿಗೆ ಮುಂದೆ ಹೆಚ್ಚು ಕಷ್ಟಗಳು ಬರಲಿದ್ದವು. “ಕಡೇ ದಿವಸಗಳಲ್ಲಿ” ಜೀವಿಸುತ್ತಿರುವ ನಾವು ಸಹ ಒಬ್ಬರಿಗೊಬ್ಬರು ಆಪ್ತರಾಗಲೇಬೇಕು.—2 ತಿಮೊ. 3:1.

4. ಈ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

4 ಯಾವ ವಿಧಗಳಲ್ಲಿ ನಾವು “ಒಬ್ಬರಿಗೊಬ್ಬರು” ಅತಿಥಿಸತ್ಕಾರ ಮಾಡಬಹುದು? ಅತಿಥಿಸತ್ಕಾರ ಮಾಡದಂತೆ ನಮ್ಮನ್ನು ಯಾವುದು ತಡೆಯಬಹುದು? ಆ ಅಡೆತಡೆಗಳನ್ನು ನಾವು ಹೇಗೆ ಜಯಿಸಬಹುದು? ಒಳ್ಳೇ ಅತಿಥಿಗಳಾಗಿರಲು ನಮಗೆ ಯಾವುದು ಸಹಾಯ ಮಾಡುತ್ತದೆ?

ಅತಿಥಿಸತ್ಕಾರ ಮಾಡಲು ಅವಕಾಶಗಳು

5. ಕ್ರೈಸ್ತ ಕೂಟಗಳಲ್ಲಿ ನಾವು ಹೇಗೆ ಅತಿಥಿಸತ್ಕಾರ ಮಾಡಬಹುದು?

5 ಕೂಟಗಳಲ್ಲಿ: ಯೆಹೋವನು ತನ್ನ ಸಂಘಟನೆಯ ಮೂಲಕ ನಮ್ಮನ್ನು ಕೂಟಗಳಿಗೆ ಆಮಂತ್ರಿಸುತ್ತಿದ್ದಾನೆ. ಅದೇ ರೀತಿ ನಾವು ಸಹ ಕೂಟಗಳಿಗೆ ಹಾಜರಾಗುವ ಎಲ್ಲರನ್ನೂ, ಮುಖ್ಯವಾಗಿ ಹೊಸಬರನ್ನು ಸ್ವಾಗತಿಸಬೇಕು. (ರೋಮ. 15:7) ಹೊಸಬರು ಸಹ ಯೆಹೋವನ ಅತಿಥಿಗಳೇ. ಹಾಗಾಗಿ ಅವರು ನೋಡುವುದಕ್ಕೆ ಹೇಗೇ ಇರಲಿ, ಎಂಥದ್ದೇ ಬಟ್ಟೆ ಹಾಕಿರಲಿ ನಾವು ಅವರನ್ನು ಪ್ರೀತಿಯಿಂದ ಸ್ವಾಗತಿಸಬೇಕು. (ಯಾಕೋ. 2:1-4) ಕೂಟಕ್ಕೆ ಬಂದಿರುವ ವ್ಯಕ್ತಿಯನ್ನು ಬರಮಾಡಿಕೊಳ್ಳಲು, ಅವರ ಜೊತೆ ಕೂತುಕೊಳ್ಳಲು ಯಾರೂ ಇಲ್ಲ ಎಂದು ಗೊತ್ತಾದರೆ ನೀವು ಅವರ ಜೊತೆ ಕೂತುಕೊಳ್ಳುತ್ತೀರಾ? ಕೂಟದಲ್ಲಿ ನಡೆಯಲಿರುವ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅಥವಾ ಬೈಬಲ್‌ ವಚನಗಳನ್ನು ತೆರೆಯಲು ನೀವು ಸಹಾಯ ಮಾಡುವಾಗ ಅವರಿಗೆ ಸಂತೋಷವಾಗಬಹುದು. ‘ಅತಿಥಿಸತ್ಕಾರದ ಪಥವನ್ನು ಅನುಸರಿಸಲು’ ಇದೊಂದು ಅತ್ಯುತ್ತಮ ವಿಧ.—ರೋಮ. 12:13.

6. ನಾವು ಯಾರಿಗೆ ಹೆಚ್ಚು ಅತಿಥಿಸತ್ಕಾರ ಮಾಡಬೇಕು?

6 ಟೀ-ಕಾಫಿ ಅಥವಾ ಊಟಕ್ಕೆ ಆಮಂತ್ರಿಸಿ: ಬೈಬಲ್‌ ಸಮಯದಲ್ಲಿ ಜನರು ಸಾಮಾನ್ಯವಾಗಿ ಅತಿಥಿಗಳನ್ನು ತಮ್ಮ ಮನೆಗೆ ಕರೆದು ಊಟ ಕೊಟ್ಟು ಉಪಚರಿಸುತ್ತಿದ್ದರು. ಹೀಗೆ ಮಾಡುವ ಮೂಲಕ ಅವರೊಟ್ಟಿಗೆ ಸ್ನೇಹವನ್ನು ಬೆಳೆಸಲು ಮತ್ತು ಶಾಂತಿ ಸಂಬಂಧ ಇಟ್ಟುಕೊಳ್ಳಲು ಸಾಧ್ಯವಾಗುತ್ತಿತ್ತು. (ಆದಿ. 18:1-8; ನ್ಯಾಯ. 13:15; ಲೂಕ 24:28-30) ನಾವು ಯಾರಿಗೆ ಹೆಚ್ಚು ಅತಿಥಿಸತ್ಕಾರ ಮಾಡಬೇಕು? ನಮ್ಮ ಸಭೆಯಲ್ಲಿರುವ ನಮ್ಮ ಸಹೋದರ ಸಹೋದರಿಯರಿಗೆ ಮಾಡಬೇಕು. ಕಷ್ಟಕಾಲದಲ್ಲಿ ನಮಗೆ ಆಸರೆಯಾಗಿ ನಿಲ್ಲುವವರು ಈ ಸಹೋದರ ಸಹೋದರಿಯರು ತಾನೇ? ಹಾಗಾಗಿ ನಾವು ಅವರ ನಿಷ್ಠಾವಂತ ಸ್ನೇಹಿತರಾಗಬೇಕು ಮತ್ತು ಅವರೊಂದಿಗೆ ಶಾಂತಿ ಕಾಪಾಡಿಕೊಳ್ಳಬೇಕು. 2011​ರಲ್ಲಿ ಅಮೆರಿಕದ ಬೆತೆಲ್‌ ಕುಟುಂಬ ಮಾಡುತ್ತಿದ್ದ ಕಾವಲಿನಬುರುಜು ಅಧ್ಯಯನದ ಸಮಯವನ್ನು ಆಡಳಿತ ಮಂಡಲಿ ಸಂಜೆ 6:45​ರಿಂದ 6:15​ಕ್ಕೆ ಬದಲಾಯಿಸಿತು. ಯಾಕೆ? ಕೂಟ ಬೇಗ ಮುಗಿದರೆ ಬೆತೆಲ್‌ನಲ್ಲಿರುವ ಸಹೋದರ ಸಹೋದರಿಯರಿಗೆ ಅತಿಥಿಸತ್ಕಾರ ಮಾಡಲು ಸಮಯ ಸಿಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಯಿತು. ಅದೇ ರೀತಿ ಬೇರೆ ಶಾಖೆಗಳಲ್ಲಿ ಸಹ ಬದಲಾವಣೆ ಮಾಡಲಾಯಿತು. ಒಬ್ಬರನ್ನೊಬ್ಬರು ಚೆನ್ನಾಗಿ ಪರಿಚಯ ಮಾಡಿಕೊಳ್ಳಲು ಬೆತೆಲ್‌ ಕುಟುಂಬಕ್ಕೆ ಇದೊಂದು ಸದವಕಾಶವಾಗಿತ್ತು.

7, 8. ನಮ್ಮ ಸಭೆಗೆ ಭಾಷಣ ಕೊಡಲು ಬರುವ ಸಹೋದರರಿಗೆ ನಾವು ಹೇಗೆ ಅತಿಥಿಸತ್ಕಾರ ಮಾಡಬಹುದು?

7 ಕೆಲವೊಮ್ಮೆ ಬೇರೆ ಸಭೆಯ ಸಹೋದರರು, ಸಂಚರಣ ಮೇಲ್ವಿಚಾರಕರು ಅಥವಾ ಬೆತೆಲಿನ ಪ್ರತಿನಿಧಿಗಳು ನಮ್ಮ ಸಭೆಗೆ ಭಾಷಣ ಕೊಡಲು ಬರಬಹುದು. ಈ ಸಹೋದರರಿಗೂ ನಾವು ಅತಿಥಿಸತ್ಕಾರ ಮಾಡಲು ಮುಂದೆ ಬರುತ್ತೇವಾ? (3 ಯೋಹಾನ 5-8 ಓದಿ.) ನಾವು ಅವರನ್ನು ನಮ್ಮ ಮನೆಗೆ ಟೀ-ಕಾಫಿಗೆ ಅಥವಾ ಊಟಕ್ಕೆ ಕರೆಯಬಹುದು.

8 ಅಮೆರಿಕದಲ್ಲಿರುವ ಒಬ್ಬ ಸಹೋದರಿ ಹೀಗೆ ಹೇಳುತ್ತಾರೆ: “ಅನೇಕ ವರ್ಷಗಳಿಂದ ನನ್ನ ಗಂಡ ಮತ್ತು ನಾನು ನಮ್ಮ ಸಭೆಗೆ ಭಾಷಣ ಕೊಡಲು ಬಂದ ಸಹೋದರರನ್ನು ಮತ್ತವರ ಪತ್ನಿಯರನ್ನು ನಮ್ಮ ಮನೆಗೆ ಊಟಕ್ಕೆ ಕರೆದಿದ್ದೇವೆ. ಹೀಗೆ ನಮ್ಮ ಮನೆಗೆ ಬಂದ ಪ್ರತಿಯೊಬ್ಬರಿಂದಲೂ ನಮ್ಮ ನಂಬಿಕೆ ಬಲವಾಗಿದೆ ಮತ್ತು ನಾವು ತುಂಬ ಆನಂದಿಸಿದ್ದೇವೆ. ನಾವು ಯಾವತ್ತೂ ಇದಕ್ಕಾಗಿ ವಿಷಾದಿಸಲಿಲ್ಲ.”

9, 10. (ಎ) ನಮ್ಮ ಮನೆಯಲ್ಲಿ ಯಾರನ್ನು ಉಳಿಸಿಕೊಳ್ಳುವ ಅವಕಾಶ ಸಿಗುತ್ತದೆ? (ಬಿ) ನಿಮ್ಮ ಮನೆ ಚಿಕ್ಕದಿದ್ದರೂ ನೀವೇನು ಮಾಡಬಹುದು? ಉದಾಹರಣೆ ಕೊಡಿ.

9 ಮನೆಯಲ್ಲಿ ಉಳುಕೊಳ್ಳುವ ಅತಿಥಿಗಳು: ಬೈಬಲ್‌ ಸಮಯದಲ್ಲಿ, ಮನೆಗೆ ಬಂದವರಿಗೆ ಉಳುಕೊಳ್ಳಲು ಏರ್ಪಾಡು ಮಾಡಲಾಗುತ್ತಿತ್ತು. (ಯೋಬ 31:32; ಫಿಲೆ. 22) ಇಂದು ನಾವು ಸಹ ಅದನ್ನೇ ಮಾಡಬೇಕಾಗಿ ಬರಬಹುದು. ಸಭೆಯನ್ನು ಭೇಟಿಮಾಡಲು ಬರುವ ಸಂಚರಣ ಮೇಲ್ವಿಚಾರಕರಿಗೆ, ದೇವಪ್ರಭುತ್ವಾತ್ಮಕ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ಅಥವಾ ನಿರ್ಮಾಣ ಕೆಲಸ ಮಾಡುವ ಸ್ವಯಂಸೇವಕರಿಗೆ ಉಳುಕೊಳ್ಳಲು ಸ್ಥಳ ಬೇಕಾಗುತ್ತದೆ. ನೈಸರ್ಗಿಕ ವಿಪತ್ತುಗಳಿಂದಾಗಿ ಮನೆಯನ್ನು ಕಳೆದುಕೊಂಡವರಿಗೂ ಉಳುಕೊಳ್ಳಲು ಮನೆ ಬೇಕಾಗುತ್ತದೆ. ಏಕೆಂದರೆ ಅವರ ಮನೆಯನ್ನು ಪುನಃ ಕಟ್ಟಲು ಸ್ವಲ್ಪ ಸಮಯ ಹಿಡಿಯುತ್ತದೆ. ದೊಡ್ಡ ಮನೆ ಇರುವವರು ಮಾತ್ರ ಅಂಥವರಿಗೆ ಸಹಾಯ ಮಾಡಲು ಆಗುತ್ತದೆ ಎಂದು ನಾವು ನೆನಸಬಾರದು. ಈ ಹಿಂದೆ ಅವರು ಅನೇಕ ಸಲ ಹಾಗೆ ಸಹಾಯ ಮಾಡಿರಬಹುದು. ನಿಮ್ಮ ಮನೆ ಚಿಕ್ಕದಾಗಿದ್ದರೂ ಇಂಥವರನ್ನು ನಿಮ್ಮ ಮನೆಯಲ್ಲಿ ಇರಿಸಿಕೊಳ್ಳುವಿರಾ?

10 ದಕ್ಷಿಣ ಕೊರಿಯದಲ್ಲಿರುವ ಒಬ್ಬ ಸಹೋದರ ದೇವಪ್ರಭುತ್ವಾತ್ಮಕ ಶಾಲೆಗಳಿಗೆ ಬರುತ್ತಿದ್ದ ವಿದ್ಯಾರ್ಥಿಗಳನ್ನು ತಮ್ಮ ಮನೆಯಲ್ಲಿ ಉಳಿಸಿಕೊಳ್ಳುತ್ತಿದ್ದರು. ಅವರು ಬರೆಯುವುದು: “ನಮಗೆ ಆಗತಾನೇ ಮದುವೆ ಆಗಿತ್ತು ಮತ್ತು ನಮ್ಮ ಮನೆ ಕೂಡ ಚಿಕ್ಕದಿತ್ತು. ಹಾಗಾಗಿ ಆರಂಭದಲ್ಲಿ ನಾನು ಸ್ವಲ್ಪ ಹಿಂಜರಿದೆ. ಆದರೆ ವಿದ್ಯಾರ್ಥಿಗಳು ನಮ್ಮ ಜೊತೆ ಇದ್ದದರಿಂದ ನಮಗೆ ತುಂಬ ಸಂತೋಷವಾಯಿತು. ಗಂಡಹೆಂಡತಿ ಒಟ್ಟಿಗೆ ಯೆಹೋವನ ಸೇವೆ ಮಾಡುವಾಗ ಮತ್ತು ಜೊತೆಯಾಗಿ ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲು ಪ್ರಯತ್ನಿಸುವಾಗ ಎಷ್ಟು ಸಂತೋಷ ಸಿಗುತ್ತದೆ ಎಂದು ನವದಂಪತಿಗಳಾದ ನಮಗೆ ನೋಡಲು ಸಾಧ್ಯವಾಯಿತು.”

11. ಹೊಸದಾಗಿ ನಿಮ್ಮ ಸಭೆಗೆ ಬಂದ ಸಹೋದರರಿಗೆ ಯಾಕೆ ಅತಿಥಿಸತ್ಕಾರ ಮಾಡಬೇಕು?

11 ಸಭೆಗೆ ಬರುವ ಹೊಸ ಸಹೋದರ ಸಹೋದರಿಯರು: ಬೇರೆ ಸಭೆಯಿಂದ ಕೆಲವು ಸಹೋದರ ಸಹೋದರಿಯರು ಅಥವಾ ಕುಟುಂಬಗಳು ನೀವಿರುವ ಸ್ಥಳಕ್ಕೆ ಸ್ಥಳಾಂತರಿಸಬಹುದು. ನಿಮ್ಮ ಸಭೆಯಲ್ಲಿ ಸಹಾಯದ ಅಗತ್ಯವಿರುವುದರಿಂದ ಅವರು ಬಂದಿರಬಹುದು. ಅಥವಾ ನಿಮ್ಮ ಸಭೆಗೆ ಅವರನ್ನು ಪಯನೀಯರರಾಗಿ ನೇಮಿಸಿರಬಹುದು. ಅವರಿಗೆ ಇದೊಂದು ದೊಡ್ಡ ಬದಲಾವಣೆ ಆಗಿರುತ್ತದೆ. ಅವರು ಹೊಸ ಸ್ಥಳಕ್ಕೆ, ಹೊಸ ಸಭೆಗೆ ಹೊಂದಿಕೊಳ್ಳಬೇಕಾಗುತ್ತದೆ. ಭಾಷೆ ಮತ್ತು ಸಂಸ್ಕೃತಿ ಕೂಡ ಅವರಿಗೆ ಹೊಸದಿರಬಹುದು. ನೀವು ಅವರನ್ನು ಟೀ-ಕಾಫಿಗೆ ಅಥವಾ ಊಟಕ್ಕೆ ಕರೆಯಬಹುದಾ? ಹೊರಗೆಲ್ಲಾದರೂ ಸುತ್ತಾಡಲು ಹೋಗುವಾಗ ಅವರನ್ನೂ ಜೊತೆಯಲ್ಲಿ ಕರಕೊಂಡು ಹೋಗಬಹುದಾ? ಹೀಗೆ ಮಾಡಿದರೆ ಅವರಿಗೆ ಹೊಸ ಸ್ನೇಹಿತರು ಸಿಕ್ಕಿದಂತಾಗುತ್ತದೆ ಮತ್ತು ಬದಲಾದ ಸನ್ನಿವೇಶಗಳಿಗೆ ಹೊಂದಿಕೊಳ್ಳಲು ಸಹಾಯವಾಗುತ್ತದೆ.

12. ಅತಿಥಿಸತ್ಕಾರ ಮಾಡಬೇಕೆಂದು ಬಗೆ-ಬಗೆಯ ಅಡಿಗೆ ಮಾಡುವ ಅವಶ್ಯಕತೆ ಇಲ್ಲ ಎಂದು ಈ ಅನುಭವದಿಂದ ಹೇಗೆ ಗೊತ್ತಾಗುತ್ತದೆ?

12 ಅತಿಥಿಸತ್ಕಾರ ಮಾಡಬೇಕೆಂದು ಬಗೆ-ಬಗೆಯ ಅಡಿಗೆ ಮಾಡುವ ಅವಶ್ಯಕತೆ ಇಲ್ಲ. (ಲೂಕ 10:41, 42 ಓದಿ.) ಒಬ್ಬ ಸಹೋದರನು ಮತ್ತವನ ಪತ್ನಿ ಮಿಷನರಿಗಳಾದ ಹೊಸದರಲ್ಲಿ ನಡೆದ ವಿಷಯವನ್ನು ನೆನಪಿಸಿಕೊಳ್ಳುತ್ತಾರೆ. ಆ ಸಹೋದರನು ಹೇಳುವುದು: “ನಮಗಾಗ ಇನ್ನೂ ಚಿಕ್ಕ ವಯಸ್ಸು, ಅನುಭವ ಇರಲಿಲ್ಲ, ಮನೆ ನೆನಪು ಕಾಡುತ್ತಿತ್ತು. ಒಂದು ಸಂಜೆ ನನ್ನ ಹೆಂಡತಿಗೆ ಮನೆ ನೆನಪು ಎಷ್ಟು ಬಂತೆಂದರೆ ನಾನು ಅದೆಷ್ಟೇ ಪ್ರಯತ್ನಿಸಿದರೂ ಅವಳಿಗೆ ಸಮಾಧಾನ ಮಾಡಲು ಆಗಲಿಲ್ಲ. ಸುಮಾರು 7:30​ಕ್ಕೆ ನಮ್ಮ ಮನೆ ಬಾಗಿಲನ್ನು ಯಾರೋ ತಟ್ಟಿದರು. ಒಬ್ಬ ಬೈಬಲ್‌ ವಿದ್ಯಾರ್ಥಿನಿ ಬಂದಿದ್ದಳು. ಅವಳ ಕೈಯಲ್ಲಿ ಮೂರು ಕಿತ್ತಳೆ ಹಣ್ಣಿತ್ತು. ಹೊಸ ಮಿಷನರಿಗಳಾಗಿ ಬಂದಿದ್ದ ನಮ್ಮನ್ನು ಸ್ವಾಗತಿಸಲು ಅವಳು ಬಂದಿದ್ದಳು. ನಾವು ಅವಳನ್ನು ಒಳಗೆ ಕರೆದು ಒಂದು ಲೋಟ ನೀರು ಕೊಟ್ಟೆವು. ನಂತರ ಟೀ ಮತ್ತು ಬಿಸಿ ಚಾಕಲೇಟ್‌ ಪಾನೀಯ ಮಾಡಿಕೊಟ್ಟೆವು. ನಮಗಾಗ ಸ್ವಾಹೀಲಿ ಭಾಷೆ ಬರುತ್ತಿರಲಿಲ್ಲ, ಆಕೆಗೆ ಇಂಗ್ಲಿಷ್‌ ಭಾಷೆ ಗೊತ್ತಿರಲಿಲ್ಲ. ಈ ಅನುಭವ ಆದ ಮೇಲೆ ನಾವು ಸ್ಥಳೀಯ ಸಹೋದರರನ್ನು ಸ್ನೇಹಿತರಾಗಿ ಮಾಡಿಕೊಳ್ಳಲು ಆರಂಭಿಸಿದೆವು. ಇದರಿಂದ ನಮ್ಮ ಸಂತೋಷ ಹೆಚ್ಚಾಯಿತು.”

ಅತಿಥಿಸತ್ಕಾರ ಮಾಡದಂತೆ ತಡೆಯುವ ಕಾರಣಗಳು

13. ಅತಿಥಿಸತ್ಕಾರ ಮಾಡಿದರೆ ನಿಮಗೆ ಯಾವ ಪ್ರಯೋಜನಗಳು ಸಿಗುತ್ತವೆ?

13 ಅತಿಥಿಸತ್ಕಾರ ಮಾಡಲು ನೀವು ಯಾವತ್ತಾದರೂ ಹಿಂಜರಿದಿದ್ದೀರಾ? ಹಾಗಾದರೆ ಅತಿಥಿಗಳ ಜೊತೆ ಖುಷಿಯಾಗಿ ಸಮಯ ಕಳೆಯುವ ಮತ್ತು ಸದಾಕಾಲ ಬಾಳುವ ಸ್ನೇಹವನ್ನು ಮಾಡಿಕೊಳ್ಳುವ ಅವಕಾಶವನ್ನು ಕಳಕೊಂಡಿರಿ. ಒಂಟಿತನದಿಂದ ಹೊರಬರಲು ನಮಗೆ ಸಹಾಯ ಮಾಡುವ ಅತ್ಯುತ್ತಮ ವಿಧಾನ ಅತಿಥಿಸತ್ಕಾರ. ಹಾಗಾದರೆ ನಾವು ಯಾಕೆ ಕೆಲವೊಮ್ಮೆ ಅತಿಥಿಸತ್ಕಾರ ಮಾಡಲು ಹಿಂಜರಿಯುತ್ತೇವೆ? ಅದಕ್ಕೆ ಕೆಲವು ಕಾರಣಗಳಿರಬಹುದು.

14. ಅತಿಥಿಸತ್ಕಾರ ಮಾಡಲು ಅಥವಾ ಅತಿಥಿಗಳಾಗಿ ಬೇರೆಯವರ ಮನೆಗೆ ಹೋಗಲು ನಮಗೆ ಸಮಯ, ಶಕ್ತಿ ಇಲ್ಲದಿದ್ದರೆ ಏನು ಮಾಡಬೇಕು?

14 ಸಮಯ ಮತ್ತು ಶಕ್ತಿ: ಯೆಹೋವನ ಜನರು ತುಂಬ ಕಾರ್ಯಮಗ್ನರು ಮತ್ತು ಅವರಿಗೆ ಅನೇಕ ಜವಾಬ್ದಾರಿಗಳು ಇರುತ್ತವೆ. ಆದ್ದರಿಂದ ‘ಅತಿಥಿಸತ್ಕಾರಕ್ಕೆಲ್ಲ ಸಮಯ, ಶಕ್ತಿ ಇಲ್ಲ’ ಎಂದು ಕೆಲವರಿಗೆ ಅನಿಸಬಹುದು. ನಿಮಗೂ ಹಾಗೆ ಅನಿಸುತ್ತಿದ್ದರೆ, ನೀವು ನಿಮ್ಮ ಸಮಯವನ್ನು ಹೊಂದಿಸಿಕೊಂಡು ಅತಿಥಿಸತ್ಕಾರ ಮಾಡಬೇಕು ಅಥವಾ ಯಾರಾದರೂ ನಿಮ್ಮನ್ನು ಕರೆದಾಗ ಅವರ ಮನೆಗೆ ಹೋಗಬೇಕು. ಇದು ತುಂಬ ಪ್ರಾಮುಖ್ಯ. ಯಾಕೆಂದರೆ ನಾವು ಅತಿಥಿಸತ್ಕಾರ ಮಾಡಬೇಕೆಂದು ಬೈಬಲ್‌ ಹೇಳುತ್ತದೆ. (ಇಬ್ರಿ. 13:2) ಹಾಗಾಗಿ ಅತಿಥಿಸತ್ಕಾರಕ್ಕೆಂದು ಸಮಯ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ಇದನ್ನು ಮಾಡಲು ನೀವು ಅಷ್ಟು ಮುಖ್ಯವಲ್ಲದ ಚಟುವಟಿಕೆಗಳಲ್ಲಿ ಕಳೆಯುತ್ತಿರುವ ಸಮಯವನ್ನು ಕಡಿಮೆ ಮಾಡಬೇಕು.

15. ಅತಿಥಿಸತ್ಕಾರ ಮಾಡಲು ತಮಗೆ ಸಾಧ್ಯವಿಲ್ಲ ಎಂದು ಕೆಲವರಿಗೆ ಯಾಕೆ ಅನಿಸುತ್ತದೆ?

15 ನಿಮ್ಮ ಬಗ್ಗೆ ನಿಮಗಿರುವ ಅಭಿಪ್ರಾಯ: ನಿಮಗೆ ಅತಿಥಿಸತ್ಕಾರ ಮಾಡಲು ಮನಸ್ಸಿದ್ದರೂ ಅದನ್ನು ಮಾಡಕ್ಕಾಗಲ್ಲ ಎಂದು ಯಾವಾಗಾದರೂ ಅನಿಸಿದೆಯಾ? ಕೆಲವರಿಗೆ ನಾಚಿಕೆ ಸ್ವಭಾವ ಇರುತ್ತದೆ. ಇದರಿಂದ ಮನೆಗೆ ಬಂದ ಅತಿಥಿಗಳಿಗೆ ಬೋರ್‌ ಹೊಡೆಯಬಹುದು ಅಂತ ಅವರಿಗೆ ಅನಿಸಬಹುದು. ಇನ್ನು ಕೆಲವರ ಹತ್ತಿರ ಹೆಚ್ಚು ಹಣ ಇರುವುದಿಲ್ಲ. ಆದ್ದರಿಂದ ಬೇರೆ ಸಹೋದರ ಸಹೋದರಿಯರು ಉಪಚಾರ ಮಾಡಿದಷ್ಟು ತಮ್ಮಿಂದಾಗಲ್ಲ ಎಂದು ಯೋಚಿಸಬಹುದು. ಆದರೆ ನೆನಪಿಡಿ, ನಿಮ್ಮ ಮನೆ ತುಂಬ ಆಡಂಬರವಾಗಿರಬೇಕು ಅಂತೇನಿಲ್ಲ. ನಿಮ್ಮ ಮನೆ ಸ್ವಚ್ಛವಾಗಿ ಅಚ್ಚುಕಟ್ಟಾಗಿದ್ದರೆ ಮತ್ತು ನೀವು ಸ್ನೇಹದಿಂದ ಮಾತಾಡಿದರೆ ಸಾಕು, ಅತಿಥಿಗಳು ಆನಂದಿಸುತ್ತಾರೆ.

16, 17. ಅತಿಥಿಸತ್ಕಾರ ಮಾಡುವುದರ ಬಗ್ಗೆ ಚಿಂತೆ ಇದ್ದರೆ ಏನು ಮಾಡಬಹುದು?

16 ಅತಿಥಿಸತ್ಕಾರ ಮಾಡಲು ತಮ್ಮಿಂದಾಗಲ್ಲ ಎಂದು ಬೇರೆಯವರಿಗೂ ಅನಿಸಿದೆ. ಬ್ರಿಟನ್‌ನಲ್ಲಿರುವ ಒಬ್ಬ ಹಿರಿಯನು ಹೇಳಿದ್ದು: “ಅತಿಥಿಗಳಿಗೆ ಬೇಕಾದ ಏರ್ಪಾಡುಗಳನ್ನು ಮಾಡುವಾಗ ಸ್ವಲ್ಪ ಚಿಂತೆ ಆಗುವುದು ಸತ್ಯ. ಆದರೆ ಯೆಹೋವನ ಸೇವೆಗೆ ಸಂಬಂಧಪಟ್ಟ ಯಾವುದೇ ವಿಷಯವನ್ನು ಮಾಡಿದರೂ ಅದರಿಂದ ಸಿಗುವ ಆಶೀರ್ವಾದಗಳು ಮತ್ತು ತೃಪ್ತಿಯ ಮುಂದೆ ನಮ್ಮ ಚಿಂತೆ ಏನೇನೂ ಅಲ್ಲ. ಅತಿಥಿಗಳ ಜೊತೆ ಕೂತು ಕಾಫಿ ಕುಡಿಯುತ್ತಾ ಅವರ ಜೊತೆ ಮಾತಾಡುತ್ತಿದ್ದರೂ ಎಷ್ಟೋ ಸಂತೋಷ ಸಿಗುತ್ತದೆ.” ಮನೆಗೆ ಬಂದ ಅತಿಥಿಗಳಿಗೆ ವೈಯಕ್ತಿಕ ಆಸಕ್ತಿ ತೋರಿಸುವುದು ತುಂಬ ಪ್ರಾಮುಖ್ಯ. (ಫಿಲಿ. 2:4) ಅನೇಕರಿಗೆ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳಲು ಸಂತೋಷವಾಗುತ್ತದೆ. ನಾವು ಒಟ್ಟಿಗೆ ಸೇರಿದಾಗಲೇ ಅವರ ಅನುಭವಗಳನ್ನು ಕೇಳಲು ಸಾಧ್ಯವಾಗುತ್ತದೆ. ಇನ್ನೊಬ್ಬ ಹಿರಿಯನು ಬರೆದಿದ್ದು: “ಸಭೆಯಲ್ಲಿರುವವರನ್ನು ಮನೆಗೆ ಕರೆಯುವುದರಿಂದ ನಾನು ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ಒಳ್ಳೇ ಪರಿಚಯ ಮಾಡಿಕೊಳ್ಳಲು, ಅವರು ಹೇಗೆ ಸತ್ಯಕ್ಕೆ ಬಂದರು ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.” ಹೀಗೆ ನಿಮ್ಮ ಅತಿಥಿಗಳಿಗೆ ವೈಯಕ್ತಿಕ ಆಸಕ್ತಿ ತೋರಿಸಿದರೆ ಎಲ್ಲರೂ ಆನಂದಿಸಲು ಸಾಧ್ಯವಾಗುತ್ತದೆ.

17 ಒಬ್ಬ ಪಯನೀಯರ್‌ ಸಹೋದರಿ ದೇವಪ್ರಭುತ್ವಾತ್ಮಕ ಶಾಲೆಗಳಿಗೆ ಹಾಜರಾಗುತ್ತಿದ್ದ ವಿದ್ಯಾರ್ಥಿಗಳನ್ನು ತುಂಬ ಸಲ ತನ್ನ ಮನೆಯಲ್ಲಿ ಉಳಿಸಿಕೊಂಡಿದ್ದಾರೆ. ಅವರು ಹೇಳುವುದು: “ಜೀವನ ಮಾಡಿಕೊಂಡು ಹೋಗಲು ಏನು ಬೇಕಿತ್ತೋ ಅದು ಮಾತ್ರ ನನ್ನ ಮನೆಯಲ್ಲಿ ಇತ್ತು. ಮನೆಯಲ್ಲಿದ್ದ ಪೀಠೋಪಕರಣಗಳು ಸಹ ನಾನು ಹೊಸದಾಗಿ ಖರೀದಿ ಮಾಡಿದ್ದಲ್ಲ. ಆದ್ದರಿಂದ, ಬಂದವರಿಗೆ ಕಷ್ಟ ಆಗಬಹುದು ಎನ್ನುವ ಚಿಂತೆ ಇತ್ತು. ಆದರೆ ಶಾಲೆಯ ಶಿಕ್ಷಕರ ಪತ್ನಿಯೊಬ್ಬರು ನನ್ನ ಚಿಂತೆಯನ್ನು ಕಡಿಮೆಮಾಡಿಬಿಟ್ಟರು. ಅವರು ಮತ್ತು ಅವರ ಪತಿ ಸಂಚರಣ ಕೆಲಸಮಾಡುತ್ತಾರೆ. ಅವರಂತೆ ಯಾರು ಆಧ್ಯಾತ್ಮಿಕ ವಿಷಯಗಳ ಕಡೆಗೆ ಹೆಚ್ಚು ಗಮನ ಕೊಟ್ಟು ತಮ್ಮ ಜೀವನವನ್ನು ಸರಳವಾಗಿಡುತ್ತಾರೋ ಅಂಥವರ ಜೊತೆ ಉಳಿಯಲು ಇಷ್ಟಪಡುತ್ತಾರೆ, ಆ ವಾರಗಳೇ ಅವರು ತುಂಬ ಆನಂದಿಸುವ ವಾರಗಳು ಅಂತ ಹೇಳಿದರು. ಇದನ್ನು ಕೇಳಿದಾಗ ನಮ್ಮಮ್ಮ ನಾವು ಚಿಕ್ಕವರಿದ್ದಾಗ ‘ಪ್ರೀತಿಯಿರುವಲ್ಲಿ ಸೊಪ್ಪಿನ ಊಟವೇ ಉತ್ತಮ’ ಅಂತ ಹೇಳುತ್ತಿದ್ದ ಮಾತು ನೆನಪಾಯಿತು.” (ಜ್ಞಾನೋ. 15:17) ಹಾಗಾಗಿ ಹೆಚ್ಚು ಚಿಂತೆ ಮಾಡುವ ಬದಲು ಅತಿಥಿಗಳನ್ನು ಪ್ರೀತಿಯಿಂದ ನೋಡಿಕೊಂಡರೆ ಸಾಕು.

18, 19. ಇತರರ ಬಗ್ಗೆ ನಮಗಿರುವ ನಕಾರಾತ್ಮಕ ಭಾವನೆಗಳಿಂದ ಹೊರಬರಲು ಅತಿಥಿಸತ್ಕಾರ ಹೇಗೆ ಸಹಾಯ ಮಾಡುತ್ತದೆ?

18 ಬೇರೆಯವರ ಬಗ್ಗೆ ನಿಮಗಿರುವ ಅಭಿಪ್ರಾಯ: ನಿಮಗೆ ತುಂಬ ಕಿರಿಕಿರಿ ಮಾಡುವಂಥವರು ನಿಮ್ಮ ಸಭೆಯಲ್ಲಿದ್ದಾರಾ? ಅವರ ಬಗ್ಗೆ ನಿಮಗಿರುವ ಭಾವನೆಗಳನ್ನು ನೀವು ಸರಿಮಾಡಿಕೊಳ್ಳದೇ ಹೋದಲ್ಲಿ ಆ ಭಾವನೆಗಳು ಹಾಗೆಯೇ ಉಳಿದುಬಿಡುತ್ತವೆ. ನಿಮಗೆ ಕೆಲವರ ವ್ಯಕ್ತಿತ್ವ ಇಷ್ಟವಾಗದೇ ಇರಬಹುದು ಅಥವಾ ಹಿಂದೆ ನಿಮಗೆ ನೋವು ಮಾಡಿದವರನ್ನು ಕ್ಷಮಿಸುವುದಕ್ಕೆ ನಿಮಗೆ ಕಷ್ಟ ಆಗುತ್ತಿರಬಹುದು. ಇಂಥವರನ್ನು ಮನೆಗೆ ಕರೆಯುವುದಕ್ಕೆ ನಿಮಗೆ ಮನಸ್ಸಿರುವುದಿಲ್ಲ.

19 ನೀವು ಅತಿಥಿಸತ್ಕಾರ ಮಾಡಿದರೆ ನಿಮ್ಮ ವೈರಿಗಳ ಹೃದಯ ಕೂಡ ಗೆಲ್ಲಬಹುದು ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 25:21, 22 ಓದಿ.) ನೀವು ಯಾರನ್ನಾದರೂ ಮನೆಗೆ ಕರೆದರೆ ಅವರ ಬಗ್ಗೆ ನಿಮಗಿರುವ ನಕಾರಾತ್ಮಕ ಭಾವನೆಗಳು ಹೋಗಿ ಅವರ ಜೊತೆ ಶಾಂತಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಆ ವ್ಯಕ್ತಿಯಲ್ಲಿರುವ ಯಾವ ಗುಣಗಳನ್ನು ನೋಡಿ ಯೆಹೋವ ದೇವರು ಅವರನ್ನು ಸತ್ಯಕ್ಕೆ ಸೆಳೆದನೋ ಆ ಗುಣಗಳನ್ನು ನೀವೂ ನೋಡುವುದಕ್ಕೆ ಶುರುಮಾಡುತ್ತೀರಿ. (ಯೋಹಾ. 6:44) ‘ಅವ್ರು ನಮ್ಮನ್ನೆಲ್ಲಿ ಕರೀತಾರೆ?’ ಅಂತ ಯಾರು ನಿಮ್ಮ ಬಗ್ಗೆ ಅಂದುಕೊಳ್ಳುತ್ತಾರೋ ಅಂಥವರನ್ನು ಪ್ರೀತಿಯಿಂದ ಕರೆಯಿರಿ. ಆಗ ನಿಮ್ಮ ಮೇಲಿರುವ ಕೋಪ ಎಲ್ಲ ಕರಗಿ ನಿಮ್ಮ ಸ್ನೇಹ ಮಾಡಲು ಬಯಸುತ್ತಾರೆ. ನಿಮಗೆ ಯಾರ ಮೇಲೆ ನಕಾರಾತ್ಮಕ ಭಾವನೆಗಳಿವೆಯೋ ಅವರ ಮೇಲೆ ನೀವು ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಬಹುದು? ಫಿಲಿಪ್ಪಿ 2:3​ರಲ್ಲಿರುವ ಸಲಹೆಯನ್ನು ಅನ್ವಯಿಸಿಕೊಳ್ಳುವ ಮೂಲಕವೇ. ಅದು ಹೇಳುವುದು “ದೀನಮನಸ್ಸಿನಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸಿರಿ.” ನಮಗಿಂತ ಯಾವ ವಿಷಯಗಳಲ್ಲಿ ನಮ್ಮ ಸಹೋದರ ಸಹೋದರಿಯರು ಶ್ರೇಷ್ಠರಾಗಿದ್ದಾರೆ ಎಂದು ನಾವು ಯೋಚಿಸಬೇಕು. ನಂಬಿಕೆ, ತಾಳ್ಮೆ ಅಥವಾ ಇನ್ನಿತರ ಕ್ರೈಸ್ತ ಗುಣಗಳನ್ನು ಅವರು ನಮಗಿಂತ ಚೆನ್ನಾಗಿ ತೋರಿಸುತ್ತಿರಬಹುದು. ಹಾಗಾಗಿ, ಅವರಲ್ಲಿರುವ ಒಳ್ಳೇ ಗುಣಗಳ ಬಗ್ಗೆ ನಾವು ಯೋಚಿಸುವಾಗ ಅವರ ಮೇಲಿರುವ ನಮ್ಮ ಪ್ರೀತಿ ಹೆಚ್ಚಾಗುತ್ತದೆ ಮತ್ತು ಅವರಿಗೆ ನಾವು ಅತಿಥಿಸತ್ಕಾರ ಮಾಡಲು ಸುಲಭವಾಗುತ್ತದೆ.

ಒಳ್ಳೇ ಅತಿಥಿಗಳಾಗಿರಲು ಸಲಹೆಗಳು

ಅತಿಥಿಗಳನ್ನು ಕರೆದವರು ಸಾಮಾನ್ಯವಾಗಿ ಒಳ್ಳೇ ತಯಾರಿ ಮಾಡುತ್ತಾರೆ (ಪ್ಯಾರ 20 ನೋಡಿ)

20. ನಾವು ಯಾರಿಗಾದರೂ ಬರುತ್ತೇವೆಂದು ಮಾತು ಕೊಟ್ಟರೆ ಅದನ್ನು ಯಾಕೆ ಉಳಿಸಿಕೊಳ್ಳಬೇಕು?

20 ಕೀರ್ತನೆಗಾರನಾದ ದಾವೀದನು “ಯೆಹೋವನೇ, ನಿನ್ನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾವನು?” ಎಂದು ಕೇಳಿದನು. (ಕೀರ್ತ. 15:1) ನಂತರ ಯೆಹೋವನ ಗುಡಾರದಲ್ಲಿ ಇಳುಕೊಳ್ಳುವವರಲ್ಲಿ ಅಥವಾ ಅತಿಥಿಗಳಲ್ಲಿ ಯಾವ್ಯಾವ ಗುಣಗಳಿರಬೇಕೆಂದು ದೇವರು ಬಯಸುತ್ತಾನೆಂದು ತಿಳಿಸಿದನು. ಅದರಲ್ಲಿ ಒಂದು ಗುಣವು ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು. “ನಷ್ಟವಾದರೂ ಪ್ರಮಾಣತಪ್ಪದವನು ಆಗಿರಬೇಕು” ಎಂದು ದಾವೀದನು ಹೇಳಿದನು. (ಕೀರ್ತ. 15:4) ನಾವು ಮನೆಗೆ ಬರುತ್ತೇವೆ ಎಂದು ಒಬ್ಬರಿಗೆ ಮಾತು ಕೊಟ್ಟ ಮೇಲೆ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಏಕೆಂದರೆ ಅವರು ನಮಗೋಸ್ಕರ ಈಗಾಗಲೇ ಕೆಲವು ತಯಾರಿಗಳನ್ನು ಮಾಡಿಕೊಂಡಿರುತ್ತಾರೆ. ಒಂದುವೇಳೆ ನಾವು ಹೋಗದಿದ್ದರೆ ಅವರು ಪಟ್ಟ ಶ್ರಮವೆಲ್ಲ ವ್ಯರ್ಥವಾಗುತ್ತದೆ. ಅನಿವಾರ್ಯ ಪರಿಸ್ಥಿತಿಗಳು ಬಂದಾಗ ಮಾತ್ರ ಹೋಗದೇ ಇರಬಹುದು. (ಮತ್ತಾ. 5:37) ಕೆಲವರು ಮೊದಲು ಕರೆದವರ ಆಮಂತ್ರಣವನ್ನು ರದ್ದುಮಾಡಿ ಅವರಿಗಿಂತ ಒಳ್ಳೇ ಸ್ಥಿತಿಯಲ್ಲಿರುವವರ ಆಮಂತ್ರಣವನ್ನು ಸ್ವೀಕರಿಸುತ್ತಾರೆ. ಹಾಗೆ ಮಾಡಿದರೆ ಪ್ರೀತಿ, ಗೌರವ ತೋರಿಸಿದ ಹಾಗೆ ಇರುತ್ತದಾ? ನಮ್ಮನ್ನು ಕರೆದವರು ನಮಗೋಸ್ಕರ ಏನನ್ನು ಮಾಡಿದರೂ ನಾವು ಅದಕ್ಕೆ ಗಣ್ಯತೆ ತೋರಿಸಬೇಕು. (ಲೂಕ 10:7) ನಮಗೆ ಹೋಗಲು ಸಾಧ್ಯವಾಗದೇ ಇದ್ದಲ್ಲಿ ಅವರಿಗೆ ಆದಷ್ಟು ಬೇಗ ತಿಳಿಸಬೇಕು. ಅದನ್ನೂ ಪ್ರೀತಿಯಿಂದ, ಸೂಕ್ತ ಕಾರಣಗಳನ್ನು ಕೊಟ್ಟು ತಿಳಿಸಬೇಕು.

21. ನಾವು ಸ್ಥಳೀಯ ಆಚಾರ-ವಿಚಾರಗಳನ್ನು ತಿಳಿದುಕೊಂಡರೆ ಒಳ್ಳೇ ಅತಿಥಿಗಳಾಗಿರಲು ಹೇಗೆ ಸಾಧ್ಯವಾಗುತ್ತದೆ?

21 ಸ್ಥಳೀಯ ಆಚಾರ-ವಿಚಾರಗಳನ್ನು ಸಹ ನಾವು ತಿಳಿದುಕೊಳ್ಳಬೇಕು. ಕೆಲವು ಸಂಸ್ಕೃತಿಗಳಲ್ಲಿ, ಅತಿಥಿಗಳು ಅನಿರೀಕ್ಷಿತವಾಗಿ ಬಂದರೂ ಸಂತೋಷದಿಂದ ಬರಮಾಡಿಕೊಳ್ಳುತ್ತಾರೆ. ಆದರೆ ಬೇರೆ ಕಡೆ, ಮುಂಚಿತವಾಗಿಯೇ ತಿಳಿಸಬೇಕು. ಕೆಲವು ಕಡೆ, ಅತಿಥಿಗಳಿಗೆ ಮೊದಲು ಊಟ ಬಡಿಸುತ್ತಾರೆ. ಆಮೇಲೆ ಮನೆಯಲ್ಲಿರುವವರು ಇರುವುದನ್ನು ತಿನ್ನುತ್ತಾರೆ. ಆದರೆ ಇನ್ನು ಕೆಲವು ಕಡೆ ಅತಿಥಿಗಳು, ಮನೆಯವರು ಎಲ್ಲ ಒಟ್ಟಿಗೆ ಕೂತು ಊಟ ಮಾಡುತ್ತಾರೆ. ಕೆಲವೊಂದು ಸ್ಥಳಗಳಲ್ಲಿ ಅತಿಥಿಗಳು ಸಹ ಏನಾದರೂ ತರುತ್ತಾರೆ. ಆದರೆ ಬೇರೆ ಕಡೆ, ‘ನೀವು ಬಂದರೆ ಸಾಕು, ಏನೂ ತರೋದು ಬೇಡ’ ಎಂದು ಅತಿಥಿಗಳಿಗೆ ಹೇಳುತ್ತಾರೆ. ಕೆಲವು ಸಂಸ್ಕೃತಿಗಳಲ್ಲಿ ಮೊದಲೆರಡು ಸಾರಿ ಕರೆದಾಗ ಅತಿಥಿಗಳು ‘ಇರ್ಲಿ ಪರವಾಗಿಲ್ಲ’ ಎಂದು ವಿನಯದಿಂದ ಹೇಳುತ್ತಾರೆ. ಆದರೆ, ಇನ್ನು ಕೆಲವು ಸಂಸ್ಕೃತಿಗಳಲ್ಲಿ ಮೊದಲನೇ ಸಲ ಕರೆದಾಗಲೇ ಒಪ್ಪದಿದ್ದರೆ ಗೌರವ ತೋರಿಸುತ್ತಿಲ್ಲ ಅಂದುಕೊಳ್ಳುತ್ತಾರೆ. ನಿಮ್ಮನ್ನು ಮನೆಗೆ ಕರೆದವರು ಸಂತೋಷಪಡುವಂತೆ ಮಾಡಲು ನಿಮ್ಮ ಕೈಲಾದದ್ದೆಲ್ಲವನ್ನು ಮಾಡಿ.

22. ‘ಒಬ್ಬರಿಗೊಬ್ಬರು ಅತಿಥಿಸತ್ಕಾರ ಮಾಡುವುದು’ ಯಾಕೆ ಪ್ರಾಮುಖ್ಯ?

22 “ಎಲ್ಲವುಗಳ ಅಂತ್ಯವು ಸಮೀಪಿಸಿದೆ” ಎಂದು ಪೇತ್ರನು ಬರೆದನು. (1 ಪೇತ್ರ 4:7) ಇಂದು ಈ ಲೋಕ ಹಿಂದೆಂದೂ ಕಂಡಿರದಂಥ ಭಯಾನಕ ಸಂಕಟವನ್ನು ಎದುರಿಸುತ್ತಿದೆ. ಈ ವ್ಯವಸ್ಥೆ ತೀರ ಕೆಟ್ಟದ್ದಕ್ಕೆ ಇಳಿಯುತ್ತಿರುವ ಈ ಸಮಯದಲ್ಲಿ ನಮ್ಮ ಸಹೋದರ ಸಹೋದರಿಯರ ಮೇಲೆ ನಮ್ಮ ಪ್ರೀತಿ ಹೆಚ್ಚಾಗಬೇಕು. ಅದಕ್ಕಾಗಿ “ಒಬ್ಬರಿಗೊಬ್ಬರು ಅತಿಥಿಸತ್ಕಾರಮಾಡಿರಿ” ಎಂದು ಪೇತ್ರನು ಕೊಟ್ಟ ಸಲಹೆಯನ್ನು ನಾವು ಈಗ ಹೆಚ್ಚು ಅನ್ವಯಿಸಿಕೊಳ್ಳಬೇಕು. (1 ಪೇತ್ರ 4:9) ಅತಿಥಿಸತ್ಕಾರ ಆವಶ್ಯಕ ಅನ್ನುವುದನ್ನು ಮನಸ್ಸಲ್ಲಿಟ್ಟು ಇಂದೂ ಎಂದೆಂದೂ ಅದನ್ನು ಮಾಡುತ್ತಾ ಆನಂದಿಸೋಣ.