ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೀಕ್ಷಾಸ್ನಾನ—ಕ್ರೈಸ್ತರು ತೆಗೆದುಕೊಳ್ಳಬೇಕಾದ ಪ್ರಾಮುಖ್ಯ ಹೆಜ್ಜೆ

ದೀಕ್ಷಾಸ್ನಾನ—ಕ್ರೈಸ್ತರು ತೆಗೆದುಕೊಳ್ಳಬೇಕಾದ ಪ್ರಾಮುಖ್ಯ ಹೆಜ್ಜೆ

“ದೀಕ್ಷಾಸ್ನಾನವು ಸಹ . . . ಈಗ ನಿಮ್ಮನ್ನು ರಕ್ಷಿಸುತ್ತಿದೆ.”—1 ಪೇತ್ರ 3:21.

ಗೀತೆಗಳು: 7, 56

1, 2. (ಎ) ಮಕ್ಕಳು ದೀಕ್ಷಾಸ್ನಾನ ಪಡೆಯುವ ಆಸೆ ವ್ಯಕ್ತಪಡಿಸಿದಾಗ ಕೆಲವು ಹೆತ್ತವರಿಗೆ ಹೇಗನಿಸುತ್ತದೆ? (ಬಿ) ಯೆಹೋವನಿಗೆ ನಿಮ್ಮನ್ನು ಸಮರ್ಪಿಸಿಕೊಂಡಿದ್ದೀರಾ ಎಂದು ದೀಕ್ಷಾಸ್ನಾನದ ಅಭ್ಯರ್ಥಿಗಳನ್ನು ಯಾಕೆ ಕೇಳಲಾಗುತ್ತದೆ? (ಲೇಖನದ ಆರಂಭದ ಚಿತ್ರ ನೋಡಿ.)

ಮರಿಯಳ ಹೆತ್ತವರು ಅವಳನ್ನೇ ನೋಡುತ್ತಿದ್ದರು. ಅವಳಿಗೆ ಒಂಬತ್ತು ವರ್ಷ. ದೀಕ್ಷಾಸ್ನಾನ ಪಡೆಯಲಿರುವ ಅಭ್ಯರ್ಥಿಗಳ ಸಾಲಿನಲ್ಲಿ ಅವಳೂ ನಿಂತಿದ್ದಳು. ಭಾಷಣಗಾರ ಎರಡು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಮರಿಯ ಗಟ್ಟಿಯಾಗಿ ಸ್ಪಷ್ಟವಾಗಿ ಉತ್ತರ ಕೊಟ್ಟಳು. ಇದಾಗಿ ಸ್ವಲ್ಪ ಸಮಯದ ನಂತರ ಅವಳಿಗೆ ದೀಕ್ಷಾಸ್ನಾನವಾಯಿತು.

2 ಮರಿಯ ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡಕೊಂಡದ್ದನ್ನು ನೋಡಿ ಅವಳ ಹೆತ್ತವರು ತುಂಬ ಹೆಮ್ಮೆಪಟ್ಟರು. ಆದರೆ ಇದಕ್ಕೆ ಮುಂಚೆ ಮರಿಯಳ ತಾಯಿಗೆ ಒಂದು ಚಿಂತೆ ಇತ್ತು. ‘ಮರಿಯ ತುಂಬ ಚಿಕ್ಕ ವಯಸ್ಸಿನಲ್ಲೇ ದೀಕ್ಷಾಸ್ನಾನ ಪಡಕೊಂಡುಬಿಟ್ಟಳಾ? ಯೆಹೋವನಿಗೆ ಸಮರ್ಪಿಸಿಕೊಳ್ಳುವುದು ತುಂಬ ಗಂಭೀರವಾದ ವಿಷಯ ಅಂತ ಅವಳಿಗೆ ನಿಜವಾಗಲೂ ಅರ್ಥ ಆಗಿದೆಯಾ? ಅವಳು ಇನ್ನೂ ಸ್ವಲ್ಪ ಕಾದು ಆಮೇಲೆ ದೀಕ್ಷಾಸ್ನಾನ ಪಡೆಯಬೇಕಿತ್ತಾ?’ ಎನ್ನುವಂಥ ಪ್ರಶ್ನೆಗಳು ಅವರನ್ನು ಕಾಡುತ್ತಿತ್ತು. ತಮ್ಮ ಮಗ ಅಥವಾ ಮಗಳು ದೀಕ್ಷಾಸ್ನಾನ ಪಡೆಯುವ ಆಸೆಯನ್ನು ವ್ಯಕ್ತಪಡಿಸಿದಾಗ ಇಂಥದ್ದೇ ಪ್ರಶ್ನೆಗಳು ಅನೇಕ ಹೆತ್ತವರನ್ನು ಕಾಡುತ್ತವೆ. (ಪ್ರಸಂ. 5:5) ಯಾಕೆಂದರೆ, ಒಬ್ಬ ವ್ಯಕ್ತಿ ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡಕೊಳ್ಳುವುದೇ ತನ್ನ ಜೀವನದಲ್ಲಿ ತೆಗೆದುಕೊಳ್ಳುವಂಥ ಅತಿ ಪ್ರಾಮುಖ್ಯ ಹೆಜ್ಜೆಯಾಗಿದೆ.—“ ಯೆಹೋವನಿಗೆ ನಿಮ್ಮನ್ನು ಸಮರ್ಪಿಸಿಕೊಂಡಿದ್ದೀರಾ?” ಎಂಬ ಚೌಕ ನೋಡಿ.

3, 4. (ಎ) ಅಪೊಸ್ತಲ ಪೇತ್ರನು ದೀಕ್ಷಾಸ್ನಾನವನ್ನು ಯಾವುದಕ್ಕೆ ಹೋಲಿಸಿದ್ದಾನೆ? (ಬಿ) ಯಾಕೆ ಹೋಲಿಸಿದ್ದಾನೆ?

3 ಅಪೊಸ್ತಲ ಪೇತ್ರನು ದೀಕ್ಷಾಸ್ನಾನವನ್ನು ನೋಹನು ನಾವೆ ಕಟ್ಟಿದ್ದಕ್ಕೆ ಹೋಲಿಸಿದನು. “ಇದಕ್ಕೆ ಅನುರೂಪವಾದದ್ದು, ಅಂದರೆ ದೀಕ್ಷಾಸ್ನಾನವು ಸಹ . . . ಈಗ ನಿಮ್ಮನ್ನು ರಕ್ಷಿಸುತ್ತಿದೆ” ಎಂದು ಅವನು ಹೇಳಿದನು. (1 ಪೇತ್ರ 3:20, 21 ಓದಿ.) ನೋಹ ದೇವರ ಚಿತ್ತವನ್ನು ಪೂರ್ಣ ಹೃದಯದಿಂದ ಮಾಡಲು ಬಯಸುತ್ತಾನೆ ಎನ್ನುವುದಕ್ಕೆ ಅವನು ಕಟ್ಟುತ್ತಿದ್ದ ನಾವೆ ಸಾಕ್ಷಿಯಾಗಿತ್ತು. ಯೆಹೋವನು ಕೊಟ್ಟ ಕೆಲಸವನ್ನು ಅವನು ಚಾಚೂತಪ್ಪದೆ ಮಾಡಿ ಮುಗಿಸಿದನು. ಅವನ ನಂಬಿಕೆಯನ್ನು ನೋಡಿ ದೇವರು ಅವನನ್ನೂ ಅವನ ಕುಟುಂಬವನ್ನೂ ಜಲಪ್ರಳಯದಿಂದ ಕಾಪಾಡಿದನು. ಈ ಉದಾಹರಣೆಯನ್ನು ಕೊಟ್ಟು ಪೇತ್ರ ನಮಗೆ ಏನು ಕಲಿಸುತ್ತಿದ್ದಾನೆ?

4 ಜನ ನಾವೆಯನ್ನು ನೋಡಿದಾಗ ನೋಹನಿಗೆ ದೇವರ ಮೇಲೆ ನಂಬಿಕೆ ಇದೆ ಎಂದು ಅವರಿಗೆ ಗೊತ್ತಾಯಿತು. ಅದೇ ರೀತಿ ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡಕೊಳ್ಳುವುದನ್ನು ನೋಡಿದಾಗ ಬೇರೆಯವರಿಗೆ ಏನು ತಿಳಿದುಬರುತ್ತದೆ? ಪುನರುತ್ಥಾನಗೊಂಡ ಯೇಸುವಿನ ಮೇಲೆ ನಂಬಿಕೆ ಇರುವುದರಿಂದ ಆ ವ್ಯಕ್ತಿ ತನ್ನನ್ನು ದೇವರಿಗೆ ಸಮರ್ಪಿಸಿಕೊಂಡಿದ್ದಾನೆ ಎಂದು ತಿಳಿದುಕೊಳ್ಳುತ್ತಾರೆ. ದೀಕ್ಷಾಸ್ನಾನ ಪಡೆಯುವವರು ನೋಹನಂತೆ ದೇವರಿಗೆ ವಿಧೇಯರಾಗುತ್ತಾರೆ ಮತ್ತು ದೇವರು ಕೊಟ್ಟ ಕೆಲಸವನ್ನು ಮಾಡುತ್ತಾರೆ. ಯೆಹೋವನು ಜಲಪ್ರಳಯ ತಂದಾಗ ನೋಹನನ್ನು ಕಾಪಾಡಿದಂತೆ, ಈ ದುಷ್ಟ ಲೋಕವನ್ನು ನಾಶಮಾಡುವಾಗ ದೀಕ್ಷಾಸ್ನಾನ ಪಡಕೊಂಡಿರುವ ತನ್ನ ನಿಷ್ಠಾವಂತ ಸೇವಕರನ್ನು ಕಾಪಾಡುತ್ತಾನೆ. (ಮಾರ್ಕ 13:10; ಪ್ರಕ. 7:9, 10) ಆದ್ದರಿಂದ ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡಕೊಳ್ಳುವುದು ತುಂಬ ಪ್ರಾಮುಖ್ಯ. ಯಾರು ತಮ್ಮ ದೀಕ್ಷಾಸ್ನಾನವನ್ನು ಅನಾವಶ್ಯಕವಾಗಿ ಮುಂದೂಡುತ್ತಾರೋ ಅಂಥವರು ನಿತ್ಯಜೀವವನ್ನೇ ಕಳೆದುಕೊಳ್ಳುವ ಸಾಧ್ಯತೆಯಿದೆ.

5. ಈ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

5 ದೀಕ್ಷಾಸ್ನಾನ ಇಷ್ಟು ಪ್ರಾಮುಖ್ಯವಾಗಿ ಇರುವುದರಿಂದ ನಾವು ಈ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಬೇಕು. ದೀಕ್ಷಾಸ್ನಾನದ ಬಗ್ಗೆ ಬೈಬಲ್‌ ಏನು ಹೇಳುತ್ತದೆ? ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡಕೊಳ್ಳುವ ಮುಂಚೆ ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು? ನಾವು ಬೈಬಲ್‌ ವಿದ್ಯಾರ್ಥಿಗಳಿಗೆ ಅಥವಾ ನಮ್ಮ ಮಕ್ಕಳಿಗೆ ಕಲಿಸುವಾಗ ದೀಕ್ಷಾಸ್ನಾನದ ಪ್ರಾಮುಖ್ಯತೆಯನ್ನು ಯಾಕೆ ಸದಾ ನಮ್ಮ ಮನಸ್ಸಲ್ಲಿಟ್ಟಿರಬೇಕು?

ದೀಕ್ಷಾಸ್ನಾನದ ಬಗ್ಗೆ ಬೈಬಲ್‌ ಏನು ಕಲಿಸುತ್ತದೆ?

6, 7. (ಎ) ಸ್ನಾನಿಕನಾದ ಯೋಹಾನನ ಹತ್ತಿರ ಜನರು ಯಾಕೆ ದೀಕ್ಷಾಸ್ನಾನ ಪಡಕೊಳ್ಳುತ್ತಿದ್ದರು? (ಬಿ) ಯಾರ ದೀಕ್ಷಾಸ್ನಾನ ಬೇರೆಲ್ಲರ ದೀಕ್ಷಾಸ್ನಾನಕ್ಕಿಂತ ಭಿನ್ನವಾಗಿತ್ತು? (ಸಿ) ಯಾಕೆ ಭಿನ್ನವಾಗಿತ್ತು?

6 ನಾವು ಬೈಬಲಲ್ಲಿ ಮೊಟ್ಟಮೊದಲು ದೀಕ್ಷಾಸ್ನಾನದ ಬಗ್ಗೆ ಓದುವುದು ಮತ್ತಾಯ 3ನೇ ಅಧ್ಯಾಯದಲ್ಲಿ. ಅದು ಸ್ನಾನಿಕನಾದ ಯೋಹಾನನು ಜನರಿಗೆ ಕೊಡುತ್ತಿದ್ದ ದೀಕ್ಷಾಸ್ನಾನದ ಬಗ್ಗೆ ಮಾತಾಡುತ್ತದೆ. (ಮತ್ತಾ. 3:1-6) ಜನರು ಯಾಕೆ ಅವನ ಹತ್ತಿರ ದೀಕ್ಷಾಸ್ನಾನ ಪಡಕೊಳ್ಳುತ್ತಿದ್ದರು? ತಾವು ಮೋಶೆಯ ಧರ್ಮಶಾಸ್ತ್ರದ ನಿಯಮಗಳನ್ನು ಮುರಿದು ಪಾಪಮಾಡಿದ್ದೇವೆ ಮತ್ತು ಅದಕ್ಕಾಗಿ ಪಶ್ಚಾತ್ತಾಪಪಟ್ಟಿದ್ದೇವೆ ಎಂದು ತೋರಿಸಲು ದೀಕ್ಷಾಸ್ನಾನ ಪಡೆಯುತ್ತಿದ್ದರು. ಆದರೆ ಯೋಹಾನನು ಕೊಟ್ಟ ಒಂದು ದೀಕ್ಷಾಸ್ನಾನ ಇವೆಲ್ಲದಕ್ಕಿಂತ ಭಿನ್ನವಾಗಿತ್ತು. ಅದು ತುಂಬ ಪ್ರಾಮುಖ್ಯವಾದ ದೀಕ್ಷಾಸ್ನಾನವೂ ಆಗಿತ್ತು. ಅದು ದೇವರ ಪರಿಪೂರ್ಣ ಮಗನಾದ ಯೇಸುವಿನ ದೀಕ್ಷಾಸ್ನಾನವಾಗಿತ್ತು. ಇದು ಯೋಹಾನನಿಗೆ ಸಿಕ್ಕಿದಂಥ ದೊಡ್ಡ ಸುಯೋಗ. (ಮತ್ತಾ. 3:13-17) ಯೇಸು ಯಾವತ್ತೂ ಪಾಪ ಮಾಡದ ಕಾರಣ ಪಶ್ಚಾತ್ತಾಪ ತೋರಿಸುವ ಅಗತ್ಯವೇ ಇರಲಿಲ್ಲ. (1 ಪೇತ್ರ 2:22) ಹಾಗಿದ್ದರೂ ಯೇಸು ಯಾಕೆ ದೀಕ್ಷಾಸ್ನಾನ ಪಡಕೊಂಡನು? ತಾನು ದೇವರ ಚಿತ್ತವನ್ನು ಮಾಡಲು ಸಿದ್ಧನಾಗಿದ್ದೇನೆ ಎಂದು ತೋರಿಸಲಿಕ್ಕಾಗಿ ದೀಕ್ಷಾಸ್ನಾನ ಪಡಕೊಂಡನು.—ಇಬ್ರಿ. 10:7.

7 ಯೇಸು ಸಾರುವ ಕೆಲಸವನ್ನು ಆರಂಭಿಸಿದ ಮೇಲೆ ಆತನ ಶಿಷ್ಯರು ಜನರಿಗೆ ದೀಕ್ಷಾಸ್ನಾನ ಕೊಡಲು ಆರಂಭಿಸಿದರು. (ಯೋಹಾ. 3:22; 4:1, 2) ಆ ಜನರು ಕೂಡ ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸದೇ ಪಾಪಮಾಡಿದ್ದಕ್ಕಾಗಿ ಪಶ್ಚಾತ್ತಾಪಪಟ್ಟು ದೀಕ್ಷಾಸ್ನಾನ ಪಡಕೊಳ್ಳುತ್ತಿದ್ದರು. ಆದರೆ ಯೇಸು ತೀರಿಹೋಗಿ ಪುನರುತ್ಥಾನವಾದ ಮೇಲೆ ಆತನ ಶಿಷ್ಯರಾಗಲು ಬಯಸುವವರು ಬೇರೊಂದು ಕಾರಣಕ್ಕಾಗಿ ದೀಕ್ಷಾಸ್ನಾನ ಪಡಕೊಳ್ಳಬೇಕಿತ್ತು.

8. (ಎ) ತನ್ನ ಪುನರುತ್ಥಾನವಾದ ಮೇಲೆ ಯೇಸು ಯಾವ ಆಜ್ಞೆ ಕೊಟ್ಟನು? (ಬಿ) ಕ್ರೈಸ್ತರು ಯಾಕೆ ದೀಕ್ಷಾಸ್ನಾನ ಪಡಕೊಳ್ಳಬೇಕು?

8 ಕ್ರಿ.ಶ. 33​ರಲ್ಲಿ ಯೇಸುವಿನ ಪುನರುತ್ಥಾನವಾದ ಸ್ವಲ್ಪದರಲ್ಲೇ ಆತನು 500ಕ್ಕೂ ಹೆಚ್ಚು ಜನರಿಗೆ ಕಾಣಿಸಿಕೊಂಡನು. ಅವರಲ್ಲಿ ಗಂಡಸರು, ಹೆಂಗಸರು, ಬಹುಶಃ ಮಕ್ಕಳು ಸಹ ಇದ್ದರು. ಆಗ ಯೇಸು “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ, ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ” ಎಂದು ಹೇಳಿರಬಹುದು. (ಮತ್ತಾ. 28:19, 20; 1 ಕೊರಿಂ. 15:6) ಜನರನ್ನು ಶಿಷ್ಯರನ್ನಾಗಿ ಮಾಡುವಂತೆ ಯೇಸು ತನ್ನ ಹಿಂಬಾಲಕರಿಗೆ ಹೇಳಿದನು. ಆತನ ಶಿಷ್ಯರಾಗಲು ಬಯಸುವವರು ಅಥವಾ ಆತನ “ನೊಗವನ್ನು” ತೆಗೆದುಕೊಳ್ಳಲು ಬಯಸುವವರು ದೀಕ್ಷಾಸ್ನಾನ ಪಡಕೊಳ್ಳಬೇಕು. (ಮತ್ತಾ. 11:29, 30) ದೇವರು ಒಬ್ಬ ವ್ಯಕ್ತಿಯ ಆರಾಧನೆಯನ್ನು ಸ್ವೀಕರಿಸಬೇಕಾದರೆ, ಆತನು ತನ್ನ ಚಿತ್ತವನ್ನು ನೆರವೇರಿಸಲು ಯೇಸುವನ್ನು ಬಳಸುತ್ತಿದ್ದಾನೆ ಎಂದು ಆ ವ್ಯಕ್ತಿ ನಂಬಬೇಕು. ನಂತರ ಅವನು ದೀಕ್ಷಾಸ್ನಾನ ಪಡಕೊಳ್ಳಬಹುದು. ಈ ರೀತಿಯ ದೀಕ್ಷಾಸ್ನಾನವನ್ನು ಮಾತ್ರ ದೇವರು ಸ್ವೀಕರಿಸುತ್ತಾನೆ. ಮೊದಲನೇ ಶತಮಾನದಲ್ಲಿ ಯೇಸುವಿನ ಹಿಂಬಾಲಕರು ದೀಕ್ಷಾಸ್ನಾನ ಪಡಕೊಳ್ಳುವುದಕ್ಕೆ ತುಂಬ ಪ್ರಾಮುಖ್ಯತೆ ಕೊಟ್ಟರು ಎನ್ನುವುದಕ್ಕೆ ಬೈಬಲಲ್ಲಿ ಅನೇಕ ಪುರಾವೆಗಳಿವೆ. ಅವರು ದೀಕ್ಷಾಸ್ನಾನ ಪಡಕೊಳ್ಳುವುದನ್ನು ವಿನಾಕಾರಣ ಮುಂದೂಡಲಿಲ್ಲ.—ಅ. ಕಾ. 2:41; 9:18; 16:14, 15, 32, 33.

ದೀಕ್ಷಾಸ್ನಾನವನ್ನು ಮುಂದೂಡಬೇಡಿ

9, 10. ನಾವು ದೀಕ್ಷಾಸ್ನಾನದ ಬಗ್ಗೆ ಇಥಿಯೋಪ್ಯದವನಿಂದ ಮತ್ತು ಸೌಲನಿಂದ ಏನು ಕಲಿಯುತ್ತೇವೆ?

9 ಅಪೊಸ್ತಲರ ಕಾರ್ಯಗಳು 8:35, 36 ಓದಿ. ಯೆಹೂದಿ ಮತವನ್ನು ಸ್ವೀಕರಿಸಿದ್ದ ಇಥಿಯೋಪ್ಯದ ಒಬ್ಬ ವ್ಯಕ್ತಿ ಯೆರೂಸಲೇಮ್‌ ದೇವಾಲಯಕ್ಕೆ ಹೋಗಿ ಆರಾಧನೆ ಮಾಡಿ ವಾಪಸ್‌ ಹೋಗುತ್ತಿದ್ದನು. ಆಗ ಯೆಹೋವನ ದೂತನು ಫಿಲಿಪ್ಪನನ್ನು ಅವನ ಬಳಿ ಕಳುಹಿಸಿದನು. ಫಿಲಿಪ್ಪನು ಅವನಿಗೆ “ಯೇಸುವಿನ ವಿಷಯವಾದ ಸುವಾರ್ತೆಯನ್ನು” ತಿಳಿಸಿದನು. ಆಗ ಅವನು, ಯೇಸುವನ್ನು ಕರ್ತನಾಗಿ ಸ್ವೀಕರಿಸಿದವರು ದೀಕ್ಷಾಸ್ನಾನ ಪಡಕೊಳ್ಳಬೇಕು ಎಂದು ಅರ್ಥಮಾಡಿಕೊಂಡು ಕೂಡಲೆ ದೀಕ್ಷಾಸ್ನಾನ ಪಡಕೊಂಡನು.

10 ತಡಮಾಡದೆ ದೀಕ್ಷಾಸ್ನಾನ ಪಡಕೊಂಡ ಇನ್ನೊಬ್ಬ ವ್ಯಕ್ತಿ ಯೆಹೂದ್ಯನಾಗಿದ್ದ ಸೌಲ. ಮತಾಭಿಮಾನಿಯಾಗಿದ್ದ ಇವನು ಕ್ರೈಸ್ತರಿಗೆ ಹಿಂಸೆ ಕೊಡುತ್ತಿದ್ದನು. ಆದರೆ ಯೆಹೋವ ದೇವರು ಯೆಹೂದಿ ಜನಾಂಗವನ್ನು ಅವರ ಅವಿಧೇಯತೆಯ ಕಾರಣ ತಿರಸ್ಕರಿಸಿದ್ದಾನೆ ಎನ್ನುವ ವಿಷಯ ಇವನಿಗೆ ಗೊತ್ತಿರಲಿಲ್ಲ. ಕೊನೆಗೊಂದು ದಿನ ತನ್ನ ದೃಷ್ಟಿಕೋನವನ್ನು ಬದಲಾಯಿಸುವ ಪರಿಸ್ಥಿತಿ ಅವನಿಗೆ ಬಂತು. ಪುನರುತ್ಥಾನಗೊಂಡು ಮಹಿಮೆಗೇರಿಸಲ್ಪಟ್ಟ ಯೇಸು ಕ್ರಿಸ್ತನು ಅವನ ಹತ್ತಿರ ನೇರವಾಗಿ ಮಾತಾಡಿದನು. ಸೌಲನು ಇದಕ್ಕೆ ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯಿಸಿ ಕ್ರಿಸ್ತನ ಹಿಂಬಾಲಕನಾಗಿದ್ದ ಅನನೀಯನ ಸಹಾಯವನ್ನು ಸಂತೋಷದಿಂದ ಸ್ವೀಕರಿಸಿದನು. ಆಮೇಲೆ ಅವನು “ದೀಕ್ಷಾಸ್ನಾನ ಪಡೆದುಕೊಂಡನು” ಎಂದು ಬೈಬಲ್‌ ಹೇಳುತ್ತದೆ. (ಅ. ಕಾ. 9:17, 18; ಗಲಾ. 1:14) ನಂತರ ಅವನು ಅಪೊಸ್ತಲ ಪೌಲನೆಂದು ಪ್ರಸಿದ್ಧನಾದನು. ದೇವರು ತನ್ನ ಚಿತ್ತವನ್ನು ನೆರವೇರಿಸಲು ಯೇಸುವನ್ನು ಬಳಸುತ್ತಿದ್ದಾನೆ ಎಂದು ಅರ್ಥಮಾಡಿಕೊಂಡ ಕೂಡಲೇ ಸೌಲನು ದೀಕ್ಷಾಸ್ನಾನ ಪಡಕೊಂಡನು ಎನ್ನುವುದನ್ನು ಗಮನಿಸಿ.—ಅ. ಕಾರ್ಯಗಳು 22:12-16 ಓದಿ.

11. (ಎ) ಇಂದು ದೀಕ್ಷಾಸ್ನಾನ ತೆಗೆದುಕೊಳ್ಳುವಂತೆ ಬೈಬಲ್‌ ವಿದ್ಯಾರ್ಥಿಗಳನ್ನು ಯಾವುದು ಪ್ರೇರಿಸುತ್ತದೆ? (ಬಿ) ಬೇರೆಯವರು ದೀಕ್ಷಾಸ್ನಾನ ಪಡಕೊಳ್ಳುವಾಗ ನಮಗೆ ಹೇಗನಿಸುತ್ತದೆ?

11 ಇಂದು ಕೂಡ ಬೈಬಲ್‌ ವಿದ್ಯಾರ್ಥಿಗಳು ಚಿಕ್ಕವರಿರಲಿ ದೊಡ್ಡವರಿರಲಿ ತಡಮಾಡದೆ ದೀಕ್ಷಾಸ್ನಾನ ಪಡಕೊಳ್ಳುತ್ತಿದ್ದಾರೆ. ಅವರು ಬೈಬಲ್‌ ಸತ್ಯವನ್ನು ನಂಬಿ ಅದನ್ನು ಮಾನ್ಯಮಾಡುವುದರಿಂದ ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡಕೊಳ್ಳಲು ಹಂಬಲಿಸುತ್ತಾರೆ. ಪ್ರತಿ ಸಮ್ಮೇಳನ, ಅಧಿವೇಶನದಲ್ಲಿ ದೀಕ್ಷಾಸ್ನಾನದ ಭಾಷಣವು ಮುಖ್ಯ ಆಕರ್ಷಣೆಯಾಗಿರುತ್ತದೆ. ಬೈಬಲ್‌ ವಿದ್ಯಾರ್ಥಿಗಳು ಸತ್ಯವನ್ನು ಸ್ವೀಕರಿಸಿ, ದೀಕ್ಷಾಸ್ನಾನ ಪಡೆಯಲು ಮುಂದೆ ಬಂದಾಗ ಯೆಹೋವನ ಸಾಕ್ಷಿಗಳು ತುಂಬ ಸಂತೋಷಪಡುತ್ತಾರೆ. ಅದರಲ್ಲೂ ಹೆತ್ತವರಿಗೆ ತಮ್ಮ ಮಕ್ಕಳು ಇಂಥ ಹೆಜ್ಜೆಯನ್ನು ತೆಗೆದುಕೊಂಡಾಗ ಅವರಿಗಾಗುವ ಸಂತೋಷಕ್ಕೆ ಎಲ್ಲೆಯೇ ಇರುವುದಿಲ್ಲ. 2017​ರ ಸೇವಾವರ್ಷದಲ್ಲಿ 2,84,000ಕ್ಕೂ ಹೆಚ್ಚು ಜನರು ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿದ್ದೇವೆಂದು ತೋರಿಸಲು ದೀಕ್ಷಾಸ್ನಾನ ಪಡಕೊಂಡರು. (ಅ. ಕಾ. 13:48) ಕ್ರೈಸ್ತರಾಗಬೇಕಾದರೆ ತಾವು ದೀಕ್ಷಾಸ್ನಾನ ಪಡೆಯಬೇಕು ಎಂದು ಅವರೆಲ್ಲರೂ ಅರ್ಥಮಾಡಿಕೊಂಡರು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ದೀಕ್ಷಾಸ್ನಾನ ಪಡೆಯುವ ಮುಂಚೆ ಅವರು ಬೇರೆ ಯಾವ ಹೆಜ್ಜೆಗಳನ್ನು ತೆಗೆದುಕೊಂಡರು?

12. ದೀಕ್ಷಾಸ್ನಾನ ಪಡೆಯುವ ಮುಂಚೆ ಬೈಬಲ್‌ ವಿದ್ಯಾರ್ಥಿಗಳು ಏನು ಮಾಡಬೇಕು?

12 ಬೈಬಲ್‌ ವಿದ್ಯಾರ್ಥಿಗಳು ದೀಕ್ಷಾಸ್ನಾನ ಪಡೆಯುವ ಮುಂಚೆ ದೇವರ ಕುರಿತ ಸತ್ಯವನ್ನು, ದೇವರು ಮನುಷ್ಯನಿಗಾಗಿ ಮತ್ತು ಈ ಭೂಮಿಗಾಗಿ ಹೊಂದಿರುವ ಉದ್ದೇಶವನ್ನು, ಮಾನವಕುಲವನ್ನು ರಕ್ಷಿಸಲು ಆತನು ಮಾಡಿರುವ ಏರ್ಪಾಡನ್ನು ತಿಳಿದುಕೊಳ್ಳಬೇಕು. (1 ತಿಮೊ. 2:3-6) ಆಮೇಲೆ ಅವರು ನಂಬಿಕೆ ಬೆಳೆಸಿಕೊಳ್ಳಬೇಕು. ಇದು ಅವರಿಗೆ ದೇವರ ನಿಯಮಗಳನ್ನು ಪಾಲಿಸಲು ಮತ್ತು ದೇವರು ದ್ವೇಷಿಸುವ ವಿಷಯಗಳಿಂದ ದೂರವಿರಲು ಸಹಾಯ ಮಾಡುತ್ತದೆ. (ಅ. ಕಾ. 3:19) ಇದು ತುಂಬ ಪ್ರಾಮುಖ್ಯ. ಯಾಕೆಂದರೆ ದೇವರು ಹಗೆಮಾಡುವ ವಿಷಯಗಳನ್ನು ಮಾಡುತ್ತಾ ಹೋಗುವ ವ್ಯಕ್ತಿಯ ಸಮರ್ಪಣೆಯನ್ನು ಆತನು ಸ್ವೀಕರಿಸುವುದಿಲ್ಲ. (1 ಕೊರಿಂ. 6:9, 10) ಅಷ್ಟೇ ಅಲ್ಲ, ಬೈಬಲ್‌ ವಿದ್ಯಾರ್ಥಿಗಳು ಇನ್ನೂ ಕೆಲವು ವಿಷಯಗಳನ್ನು ಮಾಡಬೇಕು. ಯೆಹೋವನಿಗೆ ತಮ್ಮ ಜೀವನವನ್ನು ಸಮರ್ಪಿಸಿಕೊಳ್ಳಲು ಬಯಸುವವರು ಕೂಟಗಳಿಗೆ ಹಾಜರಾಗಬೇಕು ಮತ್ತು ತಪ್ಪದೆ ಸುವಾರ್ತೆ ಸಾರಬೇಕು, ಇತರರಿಗೆ ಸತ್ಯವನ್ನು ಕಲಿಸಬೇಕು. ಕ್ರಿಸ್ತನ ಹಿಂಬಾಲಕರಾಗಲು ಇಷ್ಟಪಡುವ ಪ್ರತಿಯೊಬ್ಬರು ಇದನ್ನು ಮಾಡಲೇಬೇಕು. (ಅ. ಕಾ. 1:8) ಇದನ್ನೆಲ್ಲ ಒಬ್ಬ ವಿದ್ಯಾರ್ಥಿ ಮಾಡಿದ ಮೇಲೆ ಪ್ರಾರ್ಥನೆಯಲ್ಲಿ ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡಕೊಳ್ಳಬಹುದು.

ದೀಕ್ಷಾಸ್ನಾನ ಪಡೆಯಲು ಪ್ರೋತ್ಸಾಹಿಸಿ

13. ಬೈಬಲ್‌ ವಿದ್ಯಾರ್ಥಿಗಳು ನಿಜ ಕ್ರೈಸ್ತರಾಗಲು ದೀಕ್ಷಾಸ್ನಾನ ಪಡೆಯಬೇಕು ಎನ್ನುವುದನ್ನು ನಾವು ಯಾಕೆ ನೆನಪಲ್ಲಿಡಬೇಕು?

13 ಈ ಎಲ್ಲ ವಿಷಯಗಳನ್ನು ಮಾಡಲು ನಮ್ಮ ಮಕ್ಕಳಿಗೆ ಮತ್ತು ಬೈಬಲ್‌ ವಿದ್ಯಾರ್ಥಿಗಳಿಗೆ ನಾವು ಸಹಾಯ ಮಾಡುತ್ತೇವೆ. ಆದರೆ ಅವರು ಯೇಸುವಿನ ನಿಜ ಹಿಂಬಾಲಕರಾಗಲು ದೀಕ್ಷಾಸ್ನಾನ ಪಡೆಯುವುದೂ ತುಂಬ ಮುಖ್ಯ ಎನ್ನುವುದನ್ನು ನಾವು ನೆನಪಲ್ಲಿಡಬೇಕು. ಆಗ ಮಾತ್ರ ಸಮರ್ಪಣೆ ಮತ್ತು ದೀಕ್ಷಾಸ್ನಾನ ಎಷ್ಟು ಪ್ರಾಮುಖ್ಯ ಎಂದು ಸೂಕ್ತವಾದ ಸಮಯದಲ್ಲೆಲ್ಲ ಅವರೊಂದಿಗೆ ಮಾತಾಡಲು ನಾವು ಹಿಂಜರಿಯುವುದಿಲ್ಲ. ಅವರು ಪ್ರಗತಿ ಮಾಡಲು ಮತ್ತು ದೀಕ್ಷಾಸ್ನಾನ ಪಡೆಯಲು ಬೇಕಾದ ಎಲ್ಲ ಸಹಾಯ ಮಾಡುತ್ತೇವೆ.

ದೀಕ್ಷಾಸ್ನಾನ ಎಷ್ಟು ಮುಖ್ಯ ಎಂದು ವಿದ್ಯಾರ್ಥಿಗೆ ಸೂಕ್ತವಾದ ಸಮಯದಲ್ಲೆಲ್ಲ ನೀವು ಅರ್ಥಮಾಡಿಸುತ್ತೀರಾ? (ಪ್ಯಾರ 13 ನೋಡಿ)

14. ದೀಕ್ಷಾಸ್ನಾನ ಪಡೆಯಲು ನಾವು ಯಾರನ್ನೂ ಒತ್ತಾಯ ಮಾಡಬಾರದು ಯಾಕೆ?

14 ದೀಕ್ಷಾಸ್ನಾನ ಪಡೆಯುವಂತೆ ತಮ್ಮ ಮಕ್ಕಳನ್ನಾಗಲಿ ಬೈಬಲ್‌ ವಿದ್ಯಾರ್ಥಿಗಳನ್ನಾಗಲಿ ಯಾರೂ ಒತ್ತಾಯ ಮಾಡಬಾರದು. ತನ್ನನ್ನು ಆರಾಧಿಸುವಂತೆ ಯೆಹೋವ ದೇವರೇ ಯಾರನ್ನೂ ಒತ್ತಾಯ ಮಾಡುವುದಿಲ್ಲ. (1 ಯೋಹಾ. 4:8) ಆದ್ದರಿಂದ ಬೈಬಲ್‌ ಬಗ್ಗೆ ಬೇರೆಯವರಿಗೆ ಕಲಿಸುವಾಗ ಅವರು ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವುದು ಎಷ್ಟು ಮುಖ್ಯ ಎಂದು ಅರ್ಥಮಾಡಿಕೊಳ್ಳಲು ನಾವು ಸಹಾಯ ಮಾಡಬೇಕು. ಒಂದುವೇಳೆ ವಿದ್ಯಾರ್ಥಿಯು ದೇವರ ಕುರಿತು ಕಲಿತ ಸತ್ಯದ ಬಗ್ಗೆ ಗಣ್ಯತೆ ಬೆಳೆಸಿಕೊಂಡರೆ ಮತ್ತು ನಿಜ ಕ್ರೈಸ್ತನಾಗಲು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಮಾಡಲು ನಿಜವಾಗಲು ಬಯಸಿದರೆ ದೀಕ್ಷಾಸ್ನಾನ ಪಡೆಯಲು ತಾನಾಗಿಯೇ ಮುಂದೆ ಬರುತ್ತಾನೆ.—2 ಕೊರಿಂ. 5:14, 15.

15, 16. (ಎ) ಇಂತಿಷ್ಟೇ ವಯಸ್ಸಲ್ಲಿ ದೀಕ್ಷಾಸ್ನಾನ ಪಡೆಯಬೇಕು ಅಂತ ಇದೆಯಾ? ವಿವರಿಸಿ. (ಬಿ) ಒಬ್ಬ ಬೈಬಲ್‌ ವಿದ್ಯಾರ್ಥಿ ಬೇರೆ ಧರ್ಮದಲ್ಲಿ ದೀಕ್ಷಾಸ್ನಾನ ಪಡೆದಿದ್ದರೂ ಯೆಹೋವನ ಸಾಕ್ಷಿಯಾಗಲು ಪುನಃ ದೀಕ್ಷಾಸ್ನಾನ ಪಡೆಯಬೇಕು ಯಾಕೆ?

15 ಇಂತಿಷ್ಟೇ ವಯಸ್ಸಲ್ಲಿ ದೀಕ್ಷಾಸ್ನಾನ ಪಡೆಯಬೇಕು ಎಂದೇನಿಲ್ಲ. ಕೆಲವು ಬೈಬಲ್‌ ವಿದ್ಯಾರ್ಥಿಗಳು ಬೇಗ ಪ್ರಗತಿ ಮಾಡುತ್ತಾರೆ, ಇನ್ನು ಕೆಲವರು ಸ್ವಲ್ಪ ನಿಧಾನವಾಗಿ ಪ್ರಗತಿ ಮಾಡುತ್ತಾರೆ. ಅನೇಕರು ಚಿಕ್ಕ ವಯಸ್ಸಿನಲ್ಲೇ ದೀಕ್ಷಾಸ್ನಾನ ಪಡಕೊಂಡು ದೊಡ್ಡವರಾದ ಮೇಲೂ ಯೆಹೋವನಿಗೆ ನಂಬಿಗಸ್ತರಾಗಿ ಇರುತ್ತಾರೆ. ಆದರೆ ಕೆಲವರು ವಯಸ್ಸಾದ ಮೇಲೆ ಬೈಬಲ್‌ ಸತ್ಯ ಕಲಿತು ದೀಕ್ಷಾಸ್ನಾನ ಪಡಕೊಳ್ಳುತ್ತಾರೆ. ಅವರಲ್ಲಿ 100 ವಯಸ್ಸು ದಾಟಿದ ಮೇಲೂ ದೀಕ್ಷಾಸ್ನಾನ ಪಡೆದವರಿದ್ದಾರೆ!

16 ಮಹಿಳೆಯೊಬ್ಬರು ಬೈಬಲ್‌ ಸತ್ಯ ಕಲಿಯುವ ಮುಂಚೆ ಬೇರೆ ಕೆಲವು ಧರ್ಮಗಳಲ್ಲಿ ಈಗಾಗಲೇ ದೀಕ್ಷಾಸ್ನಾನ ಪಡಕೊಂಡಿದ್ದರು. ಹಾಗಾಗಿ ಅವರು ತಮಗೆ ಬೈಬಲ್‌ ಕಲಿಸುತ್ತಿದ್ದವರ ಹತ್ತಿರ ತಾನು ಇನ್ನೊಂದು ಸಾರಿ ದೀಕ್ಷಾಸ್ನಾನ ಪಡೆಯಲೇಬೇಕಾ ಎಂದು ಕೇಳಿದರು. ಅವರಿಗೆ ಬೈಬಲ್‌ ಕಲಿಸುತ್ತಿದ್ದವರು ಕೆಲವು ವಚನಗಳನ್ನು ತೋರಿಸಿ ಉತ್ತರ ಕೊಟ್ಟರು. ಆಗ ದೀಕ್ಷಾಸ್ನಾನ ಪಡೆಯಬೇಕು ಎಂದು ಆ ಮಹಿಳೆ ಅರ್ಥಮಾಡಿಕೊಂಡರು. ಅವರಿಗೆ 80 ವರ್ಷ ವಯಸ್ಸಾಗಿದ್ದರೂ ದೀಕ್ಷಾಸ್ನಾನ ಪಡೆದರು! ಈ ಉದಾಹರಣೆಯಿಂದ ನಾವೇನು ಕಲಿಯುತ್ತೇವೆ? ಯೆಹೋವನ ಚಿತ್ತದ ಬಗ್ಗೆ ಕಲಿತ ಮೇಲೆ ನಾವು ತೆಗೆದುಕೊಳ್ಳುವ ದೀಕ್ಷಾಸ್ನಾನವನ್ನು ಮಾತ್ರ ಯೆಹೋವನು ಸ್ವೀಕರಿಸುತ್ತಾನೆ. ನಾವು ಬೇರೆ ಧರ್ಮದಲ್ಲಿ ದೀಕ್ಷಾಸ್ನಾನ ಪಡಕೊಂಡಿದ್ದರೂ ಒಬ್ಬ ಯೆಹೋವನ ಸಾಕ್ಷಿಯಾಗಲು ದೀಕ್ಷಾಸ್ನಾನ ಪಡೆಯಲೇಬೇಕು.—ಅ. ಕಾರ್ಯಗಳು 19:3-5 ಓದಿ.

17. ಬೈಬಲ್‌ ವಿದ್ಯಾರ್ಥಿಗಳು ತಮ್ಮ ದೀಕ್ಷಾಸ್ನಾನದ ದಿನದಂದು ಯಾವುದರ ಬಗ್ಗೆ ಧ್ಯಾನಿಸಬೇಕು?

17 ಬೈಬಲ್‌ ವಿದ್ಯಾರ್ಥಿಗೆ ದೀಕ್ಷಾಸ್ನಾನ ಆಗುವ ದಿನ ತುಂಬ ಸಂತೋಷದ ದಿನ. ಅಂದು ಅವನು ತನ್ನ ಸಮರ್ಪಣೆ ಮತ್ತು ದೀಕ್ಷಾಸ್ನಾನದ ಬಗ್ಗೆ ಚೆನ್ನಾಗಿ ಧ್ಯಾನಿಸಬೇಕು. ತಾನು ಮಾಡಿರುವ ಸಮರ್ಪಣೆಗೆ ತಕ್ಕಂತೆ ಜೀವಿಸಲು ತುಂಬ ಶ್ರಮಪಡಬೇಕು. ಅದಕ್ಕೇ ಯೇಸು ನಿಜ ಕ್ರೈಸ್ತನಾಗಿರುವುದನ್ನು ಒಂದು ನೊಗಕ್ಕೆ ಹೋಲಿಸಿದನು. ಯೇಸುವಿನ ಹಿಂಬಾಲಕರು “ಇನ್ನು ಮುಂದೆ ಸ್ವತಃ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎಬ್ಬಿಸಲ್ಪಟ್ಟವನಿಗಾಗಿ” ಜೀವಿಸಬೇಕು.—2 ಕೊರಿಂ. 5:15; ಮತ್ತಾ. 16:24.

18. ಮುಂದಿನ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?

18 ಈ ಲೇಖನದಲ್ಲಿ ನಾವು ಕಲಿತಂತೆ ನಿಜ ಕ್ರೈಸ್ತನಾಗುವ ನಿರ್ಧಾರ ಅಂದರೆ ದೀಕ್ಷಾಸ್ನಾನ ಪಡೆಯುವ ನಿರ್ಧಾರ ತುಂಬ ಗಂಭೀರವಾದ ವಿಷಯ. ಆದ್ದರಿಂದಲೇ ಮರಿಯಳ ತಾಯಿಗೆ ಈ ಲೇಖನದ ಆರಂಭದಲ್ಲಿ ಕೊಡಲಾಗಿರುವ ಪ್ರಶ್ನೆಗಳು ಕಾಡಿದವು. ನಿಮ್ಮ ಮಗ ಅಥವಾ ಮಗಳ ಬಗ್ಗೆ ಕೂಡ ನಿಮಗೆ ಕೆಲವು ಪ್ರಶ್ನೆಗಳು ಕಾಡಿರಬಹುದು: ‘ನನ್ನ ಮಗ ಅಥವಾ ಮಗಳಿಗೆ ದೀಕ್ಷಾಸ್ನಾನ ಪಡೆಯುವಷ್ಟು ಪ್ರೌಢತೆ ಬಂದಿದೆಯಾ? ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳಲು ಆತನ ಬಗ್ಗೆ ಬೇಕಾದಷ್ಟು ವಿಷಯಗಳನ್ನು ನನ್ನ ಮಗ ಅಥವಾ ಮಗಳು ತಿಳಿದುಕೊಂಡಿದ್ದಾರಾ? ನನ್ನ ಮಗ/ಮಗಳು ಚೆನ್ನಾಗಿ ಓದಿ ಒಳ್ಳೇ ಕೆಲಸ ಸಿಕ್ಕಿದ ಮೇಲೆ ದೀಕ್ಷಾಸ್ನಾನ ಪಡೆಯಬೇಕಾ? ದೀಕ್ಷಾಸ್ನಾನ ಆದಮೇಲೆ ಏನಾದರೂ ದೊಡ್ಡ ತಪ್ಪು ಮಾಡಿಬಿಟ್ಟರೆ ಏನು ಮಾಡೋದು?’ ಈ ಪ್ರಶ್ನೆಗಳ ಬಗ್ಗೆ ನಾವು ಮುಂದಿನ ಲೇಖನದಲ್ಲಿ ಚರ್ಚಿಸೋಣ. ದೀಕ್ಷಾಸ್ನಾನದ ಬಗ್ಗೆ ಹೆತ್ತವರು ಹೇಗೆ ಸರಿಯಾದ ದೃಷ್ಟಿಕೋನ ಬೆಳೆಸಿಕೊಳ್ಳಬಹುದು ಎಂದು ಕಲಿಯೋಣ.