ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವನ ಕಥೆ

ಯೆಹೋವನು ಯಾವತ್ತೂ ನನ್ನ ಕೈಬಿಡಲಿಲ್ಲ!

ಯೆಹೋವನು ಯಾವತ್ತೂ ನನ್ನ ಕೈಬಿಡಲಿಲ್ಲ!

ಒಮ್ಮೆ ಅಡಾಲ್ಫ್‌ ಹಿಟ್ಲರ್‌ ಭಾಷಣ ಕೊಟ್ಟ ಮೇಲೆ ಅವನಿಗೆ ಹೂ ಕೊಡಲು ನಾಲ್ಕು ಚಿಕ್ಕ ಹುಡುಗಿಯರನ್ನು ಆರಿಸಲಾಯಿತು. ಆ ಚಿಕ್ಕ ಹುಡುಗಿಯರಲ್ಲಿ ನಾನೂ ಒಬ್ಬಳು. ನನ್ನನ್ನು ಯಾಕೆ ಆರಿಸಿಕೊಂಡರು? ನನ್ನ ತಂದೆ ನಾಜಿ ಚಟುವಟಿಕೆ ಗಳಲ್ಲಿ ಕ್ರಿಯಾಶೀಲರಾಗಿದ್ದರು ಮತ್ತು ಆ ಪಕ್ಷದ ಸ್ಥಳೀಯ ನಾಯಕನ ಕಾರುಚಾಲಕ ಸಹ ಆಗಿದ್ದರು. ನನ್ನ ತಾಯಿ ಕಟ್ಟಾ ಕ್ಯಾಥೊಲಿಕರಾಗಿದ್ದರು. ನನ್ನನ್ನು ಕ್ಯಾಥೊಲಿಕ್‌ ಸಂನ್ಯಾಸಿನಿ ಮಾಡಬೇಕೆಂದಿದ್ದರು. ಇಂಥ ಪ್ರಭಾವಗಳಿದ್ದರೂ ನಾನು ನಾಜಿಯೂ ಆಗಲಿಲ್ಲ, ಸಂನ್ಯಾಸಿನಿಯೂ ಆಗಲಿಲ್ಲ. ಯಾಕೆ ಅಂತ ಹೇಳುತ್ತೇನೆ.

ನಾನು ಹುಟ್ಟಿ ಬೆಳೆದಿದ್ದು ಆಸ್ಟ್ರಿಯದ ಗ್ರೇಜ್‌ ಪಟ್ಟಣದಲ್ಲಿ. ನನಗೆ ಏಳು ವರ್ಷ ಆದಾಗ ನನ್ನನ್ನು ಧಾರ್ಮಿಕ ತರಬೇತಿ ಕೊಡುವ ಶಾಲೆಗೆ ಸೇರಿಸಲಾಯಿತು. ಅಲ್ಲಿ ಪಾದ್ರಿಗಳ ಮತ್ತು ಸಂನ್ಯಾಸಿನಿಯರ ಮಧ್ಯೆ ನಡೆಯುತ್ತಿದ್ದ ಘೋರವಾದ ಲೈಂಗಿಕ ಅನೈತಿಕತೆಯನ್ನು ನೋಡಿ ನನಗೆ ಆಘಾತವಾಯಿತು. ಹಾಗಾಗಿ ಒಂದು ವರ್ಷದೊಳಗೆ ನನ್ನ ತಾಯಿ ನನ್ನನ್ನು ಆ ಶಾಲೆಯಿಂದ ಬಿಡಿಸಿಬಿಟ್ಟರು.

ಮಿಲಿಟರಿ ಸಮವಸ್ತ್ರದಲ್ಲಿರುವ ನಮ್ಮ ತಂದೆಯೊಂದಿಗೆ ನಮ್ಮ ಕುಟುಂಬ

ನಂತರ ನಾನು ಬೋರ್ಡಿಂಗ್‌ ಶಾಲೆಗೆ ಸೇರಿದೆ. ಒಂದು ರಾತ್ರಿ ತಂದೆ ಬಂದು ನನ್ನನ್ನು ಅಲ್ಲಿಂದ ಬೇಗಬೇಗ ಕರೆದುಕೊಂಡು ಹೋದರು. ಯಾಕೆಂದರೆ ಗ್ರೇಜ್‌ ಪಟ್ಟಣದ ಮೇಲೆ ತುಂಬ ಬಾಂಬ್‌ ದಾಳಿಯಾಗುತ್ತಿತ್ತು. ನಮ್ಮ ಜೀವ ಉಳಿಸಿಕೊಳ್ಳಲು ನಾವು ಅಲ್ಲಿಂದ ಸ್‌ಕ್ಲಾಡ್‌ಮಿನ್‌ ಪಟ್ಟಣಕ್ಕೆ ಬಂದೆವು. ಅಲ್ಲಿದ್ದ ಒಂದು ಸೇತುವೆಯನ್ನು ನಾವು ದಾಟಿದ ಕೂಡಲೇ ಅದು ಸಿಡಿದು ನುಚ್ಚುನೂರಾಯಿತು. ಇನ್ನೊಂದು ಸಲ, ತುಂಬ ಕೆಳಗಡೆ ಹಾರುತ್ತಿದ್ದ ಯುದ್ಧ ವಿಮಾನಗಳಿಂದ ನಮ್ಮ ಮನೆಯಂಗಳದಲ್ಲಿದ್ದ ನನ್ನ ಮೇಲೆ ಮತ್ತು ನನ್ನ ಅಜ್ಜಿಯ ಮೇಲೆ ಗುಂಡು ಹಾರಿಸಲಾಯಿತು. ಯುದ್ಧ ಮುಗಿಯುವಷ್ಟರೊಳಗೆ, ಚರ್ಚನ್ನಾಗಲಿ ಸರ್ಕಾರವನ್ನಾಗಲಿ ನಂಬಕ್ಕಾಗಲ್ಲ ಅಂತ ಗೊತ್ತಾಯಿತು.

ಯಾರನ್ನು ನಂಬಬಹುದೆಂದು ಕಲಿತೆ

ಯೆಹೋವನ ಸಾಕ್ಷಿಯಾಗಿದ್ದ ಸಹೋದರಿಯೊಬ್ಬರು 1950​ರಲ್ಲಿ ನನ್ನ ತಾಯಿಗೆ ಬೈಬಲ್‌ ಬಗ್ಗೆ ಕಲಿಸಲು ಆರಂಭಿಸಿದರು. ನಾನು ಅವರಿಬ್ಬರ ಚರ್ಚೆಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ನನ್ನ ತಾಯಿ ಜೊತೆ ಕೆಲವೊಮ್ಮೆ ಕೂಟಗಳಿಗೂ ಹೋಗುತ್ತಿದ್ದೆ. ನನ್ನ ತಾಯಿ ಯೆಹೋವನ ಸಾಕ್ಷಿಗಳು ತಿಳಿಸುವಂಥ ವಿಷಯಗಳು ಸತ್ಯ ಎಂದು ಗ್ರಹಿಸಿದರು ಮತ್ತು 1952​ರಲ್ಲಿ ದೀಕ್ಷಾಸ್ನಾನ ತೆಗೆದುಕೊಂಡರು.

ನನಗೆ ಆಗೆಲ್ಲ ನಾನು ಹೋಗುತ್ತಿದ್ದ ಸಭೆ ವಯಸ್ಸಾದ ಹೆಂಗಸರ ಒಂದು ಕ್ಲಬ್‌ ತರ ಅನಿಸುತ್ತಿತ್ತು. ಆದರೆ ಒಮ್ಮೆ ನಾವು ಬೇರೊಂದು ಸಭೆಗೆ ಭೇಟಿ ನೀಡಿದೆವು. ಅಲ್ಲಿ ನೋಡಿದರೆ ವಯಸ್ಸಾದವರಿಗಿಂತ ಯುವ ಜನರೇ ಹೆಚ್ಚಿದ್ದರು! ನಾನು ಗ್ರೇಜ್‌ಗೆ ವಾಪಸ್‌ ಬಂದಾಗ ಎಲ್ಲ ಕೂಟಗಳಿಗೂ ಹಾಜರಾಗಲು ಆರಂಭಿಸಿದೆ. ಸ್ವಲ್ಪದರಲ್ಲೇ ನಾನು ಕಲಿಯುತ್ತಿದ್ದ ವಿಷಯಗಳು ಸತ್ಯ ಅಂತ ನನಗೂ ಅನಿಸಿತು. ಯೆಹೋವ ದೇವರು ಯಾವತ್ತೂ ತನ್ನ ಸೇವಕರ ಕೈಬಿಡಲ್ಲ ಅನ್ನೋದನ್ನು ಸಹ ಕಲಿತೆ. ನಮ್ಮಿಂದ ಎದುರಿಸಲು ಸಾಧ್ಯವಾಗದ ಸನ್ನಿವೇಶಗಳಲ್ಲೂ ಆತನು ನಮ್ಮನ್ನು ಕೈಬಿಡದೆ ಕಾಪಾಡುತ್ತಾನೆ.—ಕೀರ್ತ. 3:5, 6.

ಇತರರಿಗೂ ಸತ್ಯವನ್ನು ತಿಳಿಸಬೇಕು ಅಂತ ಇಷ್ಟಪಟ್ಟೆ. ಮೊದಲಿಗೆ ನನ್ನ ಒಡಹುಟ್ಟಿದವರಿಗೆ ತಿಳಿಸಲು ಪ್ರಯತ್ನಿಸಿದೆ. ಆದರೆ ಅಷ್ಟರಲ್ಲಾಗಲೇ ನನ್ನ ನಾಲ್ಕು ಅಕ್ಕಂದಿರು ನಮ್ಮ ಜೊತೆ ಇರಲಿಲ್ಲ. ಬೇರೆ ಬೇರೆ ಹಳ್ಳಿಗಳಲ್ಲಿ ಶಾಲಾ ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದರು. ನಾನು ಅವರಿದ್ದ ಹಳ್ಳಿಗಳಿಗೆ ಹೋಗಿ ಬೈಬಲ್‌ ಅಧ್ಯಯನ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದೆ. ಮುಂದೆ, ನನ್ನ ಒಡಹುಟ್ಟಿದವರೆಲ್ಲರೂ ಸತ್ಯ ಕಲಿತು ಯೆಹೋವನ ಸಾಕ್ಷಿಯಾದರು.

ನಾನು ಮನೆ-ಮನೆ ಸೇವೆ ಆರಂಭಿಸಿದ ಎರಡನೇ ವಾರದಲ್ಲಿ 30​ರ ಆಸುಪಾಸಿನ ಒಬ್ಬ ಸ್ತ್ರೀಯನ್ನು ಭೇಟಿ ಮಾಡಿದೆ. ಅವರೊಂದಿಗೆ ಬೈಬಲ್‌ ಅಧ್ಯಯನ ಆರಂಭಿಸಿದೆ. ನಂತರ ಆಕೆ ದೀಕ್ಷಾಸ್ನಾನ ತೆಗೆದುಕೊಂಡರು. ಅವರ ಪತಿ ಮತ್ತು ಇಬ್ಬರು ಗಂಡುಮಕ್ಕಳು ಸಹ ದೀಕ್ಷಾಸ್ನಾನ ತೆಗೆದುಕೊಂಡರು. ಅವರಿಗೆ ಅಧ್ಯಯನ ಮಾಡುತ್ತಿದ್ದಾಗ ನನ್ನ ನಂಬಿಕೆಯೂ ಬಲವಾಯಿತು. ಯಾಕೆ? ಯಾಕೆಂದರೆ, ನನಗೆ ಈ ಮುಂಚೆ ಯಾರೂ ಬೈಬಲ್‌ ಅಧ್ಯಯನ ಅಂತ ಮಾಡಿರಲಿಲ್ಲ. ಹಾಗಾಗಿ ನಾನು ಚೆನ್ನಾಗಿ ತಯಾರಿ ಮಾಡಬೇಕಿತ್ತು. ಒಂದರ್ಥದಲ್ಲಿ, ಮೊದಲು ನನಗೇ ನಾನು ಪಾಠ ಮಾಡಿಕೊಂಡು, ನಂತರ ನನ್ನ ವಿದ್ಯಾರ್ಥಿಗೆ ಅದರ ಬಗ್ಗೆ ಕಲಿಸುತ್ತಿದ್ದೆ. ಆ ರೀತಿ ಮಾಡಿದ್ದರಿಂದ ಸತ್ಯದ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಂಡೆ. 1954​ರ ಏಪ್ರಿಲ್‌ನಲ್ಲಿ ನನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದುಕೊಂಡೆ.

ಹಿಂಸೆ ಬಂದರೂ ದೇವರು ನಮ್ಮ ‘ಕೈಬಿಡಲಿಲ್ಲ’!

ನಾನು 1955​ರಲ್ಲಿ ಜರ್ಮನಿ, ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಅಧಿವೇಶನಗಳಿಗೆ ಹಾಜರಾದೆ. ನಾನು ಲಂಡನ್‌ಗೆ ಹೋಗಿದ್ದಾಗ ಆಲ್ಬರ್ಟ್‌ ಶ್ರೋಡರ್‌ರನ್ನು ಭೇಟಿ ಮಾಡಿದೆ. ಅವರು ಗಿಲ್ಯಡ್‌ ಶಾಲೆಯ ಶಿಕ್ಷಕರಾಗಿದ್ದರು, ನಂತರ ಆಡಳಿತ ಮಂಡಲಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಬ್ರಿಟಿಷ್‌ ಸಂಗ್ರಹಾಲಯವನ್ನು ನೋಡಲು ಹೋಗಿದ್ದಾಗ ಸಹೋದರ ಶ್ರೋಡರ್‌ ಅಲ್ಲಿದ್ದ ಬೈಬಲಿನ ಕೆಲವು ಹಸ್ತಪ್ರತಿಗಳನ್ನು ನಮಗೆ ತೋರಿಸಿದರು. ಅವುಗಳಲ್ಲಿ ದೇವರ ಹೆಸರು ಹೀಬ್ರು ಅಕ್ಷರಗಳಲ್ಲಿತ್ತು. ಆ ಹಸ್ತಪ್ರತಿಗಳು ಎಷ್ಟು ಪ್ರಾಮುಖ್ಯವಾಗಿವೆ ಎಂದವರು ನಮಗೆ ವಿವರಿಸಿದರು. ಆಗ ಯೆಹೋವನ ಮೇಲೆ ಮತ್ತು ಸತ್ಯದ ಮೇಲೆ ನನಗಿದ್ದ ಪ್ರೀತಿ ಹೆಚ್ಚಾಯಿತು ಮತ್ತು ದೇವರ ವಾಕ್ಯದಲ್ಲಿರುವ ಸತ್ಯವನ್ನು ಇನ್ನೂ ಹೆಚ್ಚು ಜನರಿಗೆ ತಿಳಿಸಬೇಕೆಂದು ತೀರ್ಮಾನಿಸಿದೆ.

ಮಿಸ್ಟಲ್‌ಬಾಕ್‌ನಲ್ಲಿ ವಿಶೇಷ ಪಯನೀಯರರಾಗಿ ಸೇವೆ ಮಾಡುತ್ತಿದ್ದಾಗ ನನ್ನ ಪಯನೀಯರ್‌ ಜೊತೆಗಾರ್ತಿ (ಬಲಗಡೆ) ಒಟ್ಟಿಗೆ

1956​ರ ಜನವರಿ 1​ರಿಂದ ನಾನು ಪಯನೀಯರ್‌ ಸೇವೆ ಆರಂಭಿಸಿದೆ. ನಾಲ್ಕು ತಿಂಗಳ ನಂತರ ಆಸ್ಟ್ರಿಯದಲ್ಲೇ ವಿಶೇಷ ಪಯನೀಯರ್‌ ಆಗಿ ಸೇವೆ ಮಾಡುವ ನೇಮಕ ಸಿಕ್ಕಿತು. ನಾನು ಸೇವೆ ಮಾಡಲಿದ್ದ ಪಟ್ಟಣವಾದ ಮಿಸ್ಟಲ್‌ಬಾಕ್‌ನಲ್ಲಿ ಒಬ್ಬ ಯೆಹೋವನ ಸಾಕ್ಷಿಯೂ ಇರಲಿಲ್ಲ. ನನಗೆ ಇನ್ನೊಂದು ಸವಾಲೂ ಇತ್ತು. ನನ್ನ ಜೊತೆ ನೇಮಕಗೊಂಡಿದ್ದ ಪಯನೀಯರ್‌ ಸಹೋದರಿಗೂ ನನಗೂ ಅಜಗಜಾಂತರವಿತ್ತು! ನಾನು ಹತ್ತಿರತ್ತಿರ 19 ವರ್ಷದ ಹುಡುಗಿ, ಪಟ್ಟಣದಿಂದ ಬಂದವಳು; ಆಕೆ 25 ವರ್ಷದವರು, ಹಳ್ಳಿಯಿಂದ ಬಂದವರು. ಬೆಳಿಗ್ಗೆ ತಡವಾಗಿ ಏಳುವುದು ನನಗಿಷ್ಟ; ಬೇಗ ಏಳುವುದು ಅವರಿಗಿಷ್ಟ. ರಾತ್ರಿಯಲ್ಲಿ ಸ್ವಲ್ಪ ಲೇಟಾಗಿ ಮಲಗಬೇಕು ಅಂತ ನಾನು; ಬೇಗ ಮಲಗಬೇಕು ಅಂತ ಅವರು. ಆದರೂ ನಾವಿಬ್ಬರೂ ಬೈಬಲ್‌ ಸಲಹೆಯನ್ನು ಅನ್ವಯಿಸಿ ನಮ್ಮಿಬ್ಬರಲ್ಲಿದ್ದ ಭಿನ್ನತೆಗಳನ್ನು ಜಯಿಸಿದೆವು ಮತ್ತು ನಮ್ಮ ಪಯನೀಯರ್‌ ಸೇವೆಯನ್ನು ಆನಂದಿಸಿದೆವು.

ಇದಕ್ಕಿಂತ ದೊಡ್ಡ ಸವಾಲುಗಳೂ ಬಂದವು. ಕೆಲವು ಹಿಂಸೆಗಳೂ ನಮಗೆ ಎದುರಾದವು. ಆದರೆ ಯೆಹೋವನು ನಮ್ಮ ‘ಕೈಬಿಡಲಿಲ್ಲ.’ (2 ಕೊರಿಂ. 4:7-9) ಒಂದು ಸಲ, ಒಂದು ಹಳ್ಳಿಯಲ್ಲಿ ನಾವು ಸುವಾರ್ತೆ ಸಾರುತ್ತಿದ್ದಾಗ ಅಲ್ಲಿದ್ದ ಜನರು ತಮ್ಮ ನಾಯಿಗಳನ್ನು ನಮ್ಮ ಮೇಲೆ ಛೂ ಬಿಟ್ಟರು! ನಾಯಿಗಳು ಜೋರಾಗಿ ಬೊಗಳುತ್ತಾ ಚೂಪಾದ ಹಲ್ಲುಗಳನ್ನು ಮಸೆಯುತ್ತಾ ನಮ್ಮ ಕಡೆಗೆ ಓಡಿಬಂದವು. ಆಗ ನಾವಿಬ್ಬರೂ ಕೈಯನ್ನು ಗಟ್ಟಿಯಾಗಿ ಹಿಡುಕೊಂಡೆವು. ನಾನಂತೂ “ಯೆಹೋವನೇ, ಈ ನಾಯಿಗಳು ನನ್ನನ್ನು ಕಚ್ಚುವ ಮುಂಚೆ ನನ್ನ ಜೀವ ತೆಗೆದುಬಿಡಪ್ಪಾ” ಅಂತ ಜೋರಾಗಿ ಪ್ರಾರ್ಥನೆ ಮಾಡಿಬಿಟ್ಟೆ. ನಮ್ಮ ಹತ್ತಿರಹತ್ತಿರಕ್ಕೆ ಬಂದ ನಾಯಿಗಳು ಥಟ್ಟನೆ ನಿಂತುಬಿಟ್ಟವು. ಬಾಲಗಳನ್ನು ಅಲ್ಲಾಡಿಸಿಕೊಂಡು ವಾಪಸ್‌ ಹೋದವು. ಯೆಹೋವನೇ ನಮ್ಮನ್ನು ಕಾಪಾಡಿದನೆಂದು ನಮಗನಿಸಿತು. ಆಮೇಲೆ ಆ ಹಳ್ಳಿ ಪೂರ್ತಿ ಸುವಾರ್ತೆ ಸಾರಿದೆವು. ಆಶ್ಚರ್ಯ ಅಂದರೆ, ಜನರು ನಾವು ಹೇಳಿದ್ದನ್ನು ಚೆನ್ನಾಗಿ ಕೇಳಿಸಿಕೊಂಡರು. ನಾಯಿಗಳು ನಮಗೆ ಏನೂ ಮಾಡದೇ ಇದ್ದದ್ದು ಮತ್ತು ಅಂಥ ಭಯಾನಕ ಪರಿಸ್ಥಿತಿ ಬಂದರೂ ನಾವು ಓಡಿಹೋಗದೆ ಅಲ್ಲೇ ಸುವಾರ್ತೆ ಸಾರಿದ್ದು ನೋಡಿ ಅವರಿಗೆ ತುಂಬ ಆಶ್ಚರ್ಯ ಆಯಿತು. ಸ್ವಲ್ಪ ಸಮಯದ ನಂತರ ಅವರಲ್ಲಿ ಕೆಲವರು ಯೆಹೋವನ ಸಾಕ್ಷಿಗಳಾದರು.

ಇನ್ನೊಂದು ಭಯಾನಕ ಪರಿಸ್ಥಿತಿಯನ್ನೂ ಎದುರಿಸಿದೆವು. ಒಂದು ದಿನ ನಮ್ಮ ಮನೆ ಮಾಲೀಕ ತುಂಬ ಕುಡಿದು ಬಂದು ನಾವು ನಮ್ಮ ನೆರೆಯವರಿಗೆ ತೊಂದರೆ ಕೊಡುತ್ತೇವೆಂದು ದೂರುತ್ತಾ ನಮ್ಮನ್ನು ಸಾಯಿಸುತ್ತೇನೆಂದು ಬೆದರಿಕೆ ಹಾಕುತ್ತಾ ಇದ್ದ. ಅವನ ಪತ್ನಿ ಎಷ್ಟು ಸಮಾಧಾನ ಮಾಡಿದರೂ ಅವನು ಕೂಗಾಡುತ್ತನೇ ಇದ್ದ. ಇದೆಲ್ಲ ಮೇಲೆ ನಮ್ಮ ಕೋಣೆಯಲ್ಲಿ ಕೇಳಿಸುತ್ತಾ ಇತ್ತು. ಆಗ ನಾವು ಬಾಗಿಲಿಗೆ ಕುರ್ಚಿಗಳನ್ನು ಅಡ್ಡ ಇಟ್ಟು ನಮ್ಮ ಸೂಟ್‌ಕೇಸ್‌ಗಳನ್ನು ತುಂಬಿಸಲು ಆರಂಭಿಸಿದೆವು. ಬಾಗಿಲು ತೆಗೆದಾಗ ಮನೆ ಮಾಲೀಕ ಕೈಯಲ್ಲಿ ದೊಡ್ಡ ಚಾಕು ಹಿಡುಕೊಂಡು ಮೆಟ್ಟಿಲಲ್ಲಿ ನಿಂತಿದ್ದ. ಆಗ ನಾವು ನಮ್ಮ ಸಾಮಾನುಗಳನ್ನು ಹೊತ್ತುಕೊಂಡು ಹಿಂದಿನ ಬಾಗಿಲಿನಿಂದ ಓಡಿದೆವು. ತೋಟದ ದಾರಿ ಹಿಡಿದು ಹೊರಗೆ ಹೋದೆವು. ಮತ್ತೆ ಆ ಕಡೆ ತಲೆನೇ ಹಾಕಲಿಲ್ಲ.

ಒಂದು ಹೋಟೆಲ್‌ಗೆ ಹೋಗಿ ರೂಮ್‌ ಮಾಡಿಕೊಂಡೆವು. ಅಲ್ಲಿಯೇ ಹತ್ತಿರತ್ತಿರ ಒಂದು ವರ್ಷ ಇದ್ದೆವು. ಇದರಿಂದ ನಮ್ಮ ಸೇವೆ ತುಂಬ ಚೆನ್ನಾಗಿ ಆಯಿತು. ಯಾಕೆಂದರೆ, ಹೋಟೆಲ್‌ ಆ ಪಟ್ಟಣದ ಮಧ್ಯಭಾಗದಲ್ಲಿತ್ತು. ನಮ್ಮ ಕೆಲವು ಬೈಬಲ್‌ ವಿದ್ಯಾರ್ಥಿಗಳು ಅಲ್ಲಿಗೇ ಬಂದು ಅಧ್ಯಯನ ಮಾಡಲು ಇಷ್ಟಪಡುತ್ತಿದ್ದರು. ಸ್ವಲ್ಪದರಲ್ಲೇ, ಆ ಹೋಟೆಲ್‌ ರೂಮ್‌ನಲ್ಲೇ ಪುಸ್ತಕ ಅಧ್ಯಯನ ಮತ್ತು ಕಾವಲಿನಬುರುಜು ಅಧ್ಯಯನವನ್ನು ಆರಂಭಿಸಿದೆವು. ಸುಮಾರು 15 ಜನರು ಹಾಜರಾಗುತ್ತಿದ್ದರು.

ಮಿಸ್ಟಲ್‌ಬಾಕ್‌ನಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಇದ್ದೆವು. ನಂತರ ನನ್ನನ್ನು ಗ್ರೇಜ್‌ ಪಟ್ಟಣದ ಆಗ್ನೇಯ ದಿಕ್ಕಿನಲ್ಲಿದ್ದ ಫೆಲ್ಟ್‌ಬಾಕ್‌ ಪಟ್ಟಣಕ್ಕೆ ನೇಮಿಸಲಾಯಿತು. ಅಲ್ಲಿ ಬೇರೆ ಪಯನೀಯರ್‌ ಸಹೋದರಿ ಜೊತೆ ಸೇವೆ ಮಾಡಿದೆ. ಅಲ್ಲಿಯೂ ಸಭೆ ಇರಲಿಲ್ಲ. ಮರದ ದಿಮ್ಮಿಗಳಿಂದ ಮಾಡಲಾಗಿದ್ದ ಮನೆಯ ಎರಡನೇ ಅಂತಸ್ತಿನಲ್ಲಿದ್ದ ಒಂದು ಚಿಕ್ಕ ಕೋಣೆಯಲ್ಲಿ ನಾವು ವಾಸಮಾಡಿದೆವು. ದಿಮ್ಮಿಯ ಸಂದುಗಳಿಂದ ಗಾಳಿ ನಮ್ಮ ಕೋಣೆಯೊಳಗೆ ತೂರಿಕೊಂಡು ಬರುತ್ತಿತ್ತು. ಆ ಸಂದುಗಳನ್ನೆಲ್ಲ ಪೇಪರಿಂದ ಮುಚ್ಚಲು ಪ್ರಯತ್ನಿಸಿದೆವು. ಬಾವಿಯಿಂದ ನಾವೇ ನೀರು ಸೇದಬೇಕಿತ್ತು. ಆದರೆ ಈ ಕಷ್ಟಗಳಿಗೆಲ್ಲ ಒಳ್ಳೇ ಪ್ರತಿಫಲ ಸಿಕ್ಕಿತು. ಕೆಲವು ತಿಂಗಳಲ್ಲೇ, ಅಲ್ಲಿ ಒಂದು ಚಿಕ್ಕ ಗುಂಪನ್ನು ಸ್ಥಾಪಿಸಲಾಯಿತು. ನಾವು ಅಧ್ಯಯನ ಮಾಡುತ್ತಿದ್ದ ಒಂದು ಕುಟುಂಬದ ಸುಮಾರು 30 ಸದಸ್ಯರು ಆಮೇಲೆ ಸತ್ಯಕ್ಕೆ ಬಂದರು!

ದೇವರ ರಾಜ್ಯಕ್ಕೆ ಪ್ರಾಮುಖ್ಯತೆ ಕೊಡುವವರನ್ನು ಯೆಹೋವನು ಯಾವತ್ತೂ ಕೈಬಿಡಲ್ಲ ಎಂದು ಇಂಥ ಅನುಭವಗಳಿಂದ ಕಲಿತೆ. ಇದರಿಂದ ಯೆಹೋವನ ಮೇಲೆ ನನಗಿದ್ದ ಗಣ್ಯತೆ ಹೆಚ್ಚಾಯಿತು. ನಮಗೆ ಸಮಸ್ಯೆಗಳು ಬಂದಾಗ ಮನುಷ್ಯನಿಂದ ಸಹಾಯ ಮಾಡಲು ಆಗದೇ ಇರಬಹುದು. ಆದರೆ ಯೆಹೋವನು ಖಂಡಿತ ಸಹಾಯ ಮಾಡುತ್ತಾನೆ.—ಕೀರ್ತ. 121:1-3.

ದೇವರ ನೀತಿಯ ‘ಬಲಗೈಯಿಂದ’ ಸಿಕ್ಕಿದ ಸಹಾಯ

1958​ರಲ್ಲಿ ನ್ಯೂಯಾರ್ಕಿನ ಯಾಂಕೀ ಸ್ಟೇಡಿಯಂ ಮತ್ತು ಪೋಲೋ ಗ್ರೌಂಡ್ಸ್‌ ಎರಡರಲ್ಲೂ ಅಂತರರಾಷ್ಟ್ರೀಯ ಅಧಿವೇಶನ ನಡೆಯಲಿತ್ತು. ನಾನು ಅದಕ್ಕೆ ಹಾಜರಾಗಲು ಅರ್ಜಿ ಹಾಕಿದೆ. ಆಗ ಆಸ್ಟ್ರಿಯ ಶಾಖೆಯು 32​ನೇ ಗಿಲ್ಯಡ್‌ ಶಾಲೆಗೆ ಹೋಗಲು ಇಷ್ಟ ಇದೆಯಾ ಎಂದು ನನ್ನನ್ನು ಕೇಳಿತು. ಅಂಥ ಸುಯೋಗ ನಾನು ಬಿಡುತ್ತೇನಾ? ನಾನು ತಕ್ಷಣವೇ “ಖಂಡಿತ ಹೋಗುತ್ತೇನೆ!” ಅಂತ ತಿಳಿಸಿದೆ.

ಗಿಲ್ಯಡ್‌ ಶಾಲೆಯಲ್ಲಿ ನನ್ನ ಪಕ್ಕ ಕೂತಿದ್ದವರ ಹೆಸರು ಮಾರ್ಟಿನ್‌ ಪೋಯೆಟ್‌ಸಿಂಗರ್‌. ನಾಜಿ ಸೆರೆಶಿಬಿರಗಳಲ್ಲಿ ಇವರು ಭಯಂಕರವಾದ ಹಿಂಸೆಯನ್ನು ಅನುಭವಿಸಿದ್ದರು. ನಂತರ ಈ ಸಹೋದರ ಕೂಡ ಆಡಳಿತ ಮಂಡಲಿಯ ಸದಸ್ಯರಾದರು. ತರಗತಿ ನಡೆಯುತ್ತಿದ್ದ ಸಮಯದಲ್ಲಿ ಅವರು ಕೆಲವೊಮ್ಮೆ “ಏರೀಕಾ, ಜರ್ಮನ್‌ ಭಾಷೆಯಲ್ಲಿ ಇದರ ಅರ್ಥವೇನು?” ಎಂದು ಪಿಸುದನಿಯಲ್ಲಿ ಕೇಳುತ್ತಿದ್ದರು.

ಶಾಲೆ ಅರ್ಧ ಮುಗಿದಿತ್ತು. ಅಷ್ಟರಲ್ಲೇ, ನೇತನ್‌ ನಾರ್‌ ನಮ್ಮ ನೇಮಕಗಳನ್ನು ಪ್ರಕಟಿಸಿದರು. ನನಗೆ ಪರಾಗ್ವೆಯಲ್ಲಿ ಸೇವೆ ಮಾಡಲು ನೇಮಕ ಸಿಕ್ಕಿತು. ನನಗಾಗ ತುಂಬ ಚಿಕ್ಕ ವಯಸ್ಸಾಗಿದ್ದರಿಂದ ಆ ದೇಶಕ್ಕೆ ಹೋಗಲು ನಮ್ಮ ತಂದೆಯ ಅನುಮತಿ ಕೇಳಬೇಕಿತ್ತು. ಅನುಮತಿ ಸಿಕ್ಕಿದ ಮೇಲೆ ನಾನು 1959​ರ ಮಾರ್ಚ್‌ ತಿಂಗಳಲ್ಲಿ ಪರಾಗ್ವೆ ದೇಶಕ್ಕೆ ಹೋದೆ. ಅಸುನಸಿಯೊನ್‌ನಲ್ಲಿದ್ದ ಒಂದು ಮಿಷನರಿ ಮನೆಗೆ ನನ್ನನ್ನು ಕಳುಹಿಸಲಾಯಿತು. ಅಲ್ಲಿ ಇನ್ನೊಬ್ಬ ಪಯನೀಯರ್‌ ಸಹೋದರಿ ಜೊತೆ ಸೇವೆ ಮಾಡಿದೆ.

ಸ್ವಲ್ಪ ಸಮಯದಲ್ಲೇ, ಮಿಷನರಿಯಾಗಿದ್ದ ವಾಲ್ಟರ್‌ ಬ್ರೈಟನ್ನು ಭೇಟಿಯಾದೆ. ಅವರು 30​ನೇ ಗಿಲ್ಯಡ್‌ ಶಾಲೆಯ ಪದವೀಧರರಾಗಿದ್ದರು. ನಾವಿಬ್ಬರೂ ಮದುವೆ ಮಾಡಿಕೊಂಡೆವು. ಜೀವನದಲ್ಲಿ ಬಂದಂಥ ಸವಾಲುಗಳನ್ನು ಜೊತೆಜೊತೆಯಾಗಿ ಎದುರಿಸಿದೆವು. ನಮ್ಮಿಂದ ನಿಭಾಯಿಸಲಾಗದಂಥ ಸಮಸ್ಯೆಗಳು ಬಂದಾಗೆಲ್ಲ ಯೆಶಾಯ 41:10​ರಲ್ಲಿ ಯೆಹೋವ ದೇವರು ಕೊಟ್ಟಂಥ ಮಾತನ್ನು ಓದುತ್ತಿದ್ದೆವು. ಅದು ಹೇಳುವುದು: “ನೀನಂತು ಹೆದರಬೇಡ, ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ.” ನಾವು ಎಲ್ಲಿಯವರೆಗೂ ದೇವರಿಗೆ ನಂಬಿಗಸ್ತರಾಗಿ, ಆತನ ರಾಜ್ಯಕ್ಕೆ ಮೊದಲ ಸ್ಥಾನ ಕೊಡುತ್ತೇವೋ ಅಲ್ಲಿಯವರೆಗೂ ದೇವರು ಖಂಡಿತ ನಮ್ಮ ಕೈಬಿಡಲ್ಲ ಎಂಬ ಆಶ್ವಾಸನೆಯನ್ನು ಈ ವಚನ ನಮಗೆ ಕೊಡುತ್ತಿತ್ತು.

ಸ್ವಲ್ಪ ಸಮಯದ ನಂತರ, ನಮ್ಮನ್ನು ಬ್ರಸಿಲ್‌ ಗಡಿಪ್ರದೇಶದ ಹತ್ತಿರವಿದ್ದ ಒಂದು ಸ್ಥಳಕ್ಕೆ ನೇಮಿಸಲಾಯಿತು. ಅಲ್ಲಿದ್ದ ಪಾದ್ರಿಗಳು ಕೆಲವು ಯುವಕರನ್ನು ಮಿಷನರಿ ಮನೆಗೆ ಕಲ್ಲುಗಳನ್ನು ಎಸೆಯುವಂತೆ ಪ್ರೇರೇಪಿಸಿದರು. ಆ ಮನೆಯೂ ಒಳ್ಳೆಯ ಸ್ಥಿತಿಯಲ್ಲಿರಲಿಲ್ಲ. ಪೊಲೀಸ್‌ ಮುಖ್ಯ ಅಧಿಕಾರಿಯೊಬ್ಬರಿಗೆ ವಾಲ್ಟರ್‌ ಬೈಬಲ್‌ ಅಧ್ಯಯನ ಆರಂಭಿಸಿದರು. ಒಂದು ವಾರದ ಮಟ್ಟಿಗೆ ಪೊಲೀಸರು ನಮ್ಮ ಮನೆಗೆ ಕಾವಲಾಗಿರಲು ಏರ್ಪಾಡು ಮಾಡಿ, ಇನ್ಯಾರೂ ತೊಂದರೆ ಕೊಡದ ಹಾಗೆ ಅವರು ನೋಡಿಕೊಂಡರು. ಅದಾದ ನಂತರ, ಬ್ರಸಿಲ್‌ನ ಗಡಿಪ್ರದೇಶದ ಆಚೆ ಇದ್ದ ಒಂದು ಒಳ್ಳೆಯ ವಸತಿಗೆ ನಾವು ಸ್ಥಳಾಂತರಿಸಿದೆವು. ಇದರಿಂದ ಪರಾಗ್ವೆ ಮತ್ತು ಬ್ರಸಿಲ್‌ ಎರಡು ಕಡೆಯಲ್ಲೂ ಕೂಟಗಳನ್ನು ನಡೆಸಲು ಸಾಧ್ಯವಾಯಿತು. ಆ ನೇಮಕದಿಂದ ನಾವು ವಾಪಸ್‌ ಬರುವಾಗ ಅಲ್ಲಿ ಎರಡು ಪುಟ್ಟ ಸಭೆಗಳಿದ್ದವು.

ಪರಾಗ್ವೆಯ ಅಸುನಸಿಯೊನ್‌ನಲ್ಲಿ ಮಿಷನರಿಗಳಾಗಿ ಸೇವೆ ಮಾಡುತ್ತಿದ್ದಾಗ ನನ್ನ ಪತಿ ವಾಲ್ಟರ್‌ ಜೊತೆ

ಯೆಹೋವನು ಯಾವತ್ತೂ ನನ್ನ ಕೈಬಿಡಲಿಲ್ಲ

ನನಗೆ ಮಕ್ಕಳು ಆಗಲ್ಲ ಅಂತ ಡಾಕ್ಟರ್‌ ಹೇಳಿದ್ದರು. ಆದರೆ 1962​ರಲ್ಲಿ ನಾನು ಗರ್ಭಿಣಿ ಆಗಿದ್ದೇನೆ ಅಂತ ಗೊತ್ತಾಯಿತು! ಫ್ಲಾರಿಡಾದ ಹಾಲಿವುಡ್‌ನಲ್ಲಿ ವಾಲ್ಟರ್‌ ಕುಟುಂಬಕ್ಕೆ ಹತ್ತಿರ ಮನೆ ಮಾಡಿಕೊಂಡೆವು. ಕುಟುಂಬ ನೋಡಿಕೊಳ್ಳುವ ಜವಾಬ್ದಾರಿ ಇದ್ದದರಿಂದ ತುಂಬ ವರ್ಷಗಳು ನಾನೂ ವಾಲ್ಟರ್‌ ಪಯನೀಯರ್‌ ಸೇವೆ ಮಾಡಲಿಕ್ಕೆ ಆಗಲಿಲ್ಲ. ಆದರೂ ದೇವರ ರಾಜ್ಯಕ್ಕೆ ಪ್ರಾಮುಖ್ಯತೆ ಕೊಡುವುದನ್ನು ಮುಂದುವರಿಸಿದೆವು.—ಮತ್ತಾ. 6:33.

1962​ರ ನವೆಂಬರ್‌ನಲ್ಲಿ ಫ್ಲಾರಿಡಾಗೆ ನಾವು ಬಂದಾಗ ಅಲ್ಲಿ ನಡೆಯುತ್ತಿದ್ದದ್ದನ್ನು ನೋಡಿ ನಮಗೆ ಆಶ್ಚರ್ಯ ಆಯಿತು. ಅಲ್ಲಿದ್ದ ಜನರಿಗೆ ಕಪ್ಪು ಜನ, ಬಿಳಿ ಜನ ಒಟ್ಟಿಗೆ ಕೂಟಗಳಿಗೆ ಸೇರಿಬರುವುದು ಇಷ್ಟ ಇರಲಿಲ್ಲ. ಕಪ್ಪು ಜನರೇ ಬೇರೆ ಕಡೆ, ಬಿಳಿ ಜನರೇ ಬೇರೆ ಕಡೆ ಸುವಾರ್ತೆ ಸಾರುತ್ತಿದ್ದರು. ಆದರೆ ಯೆಹೋವನು ಯಾವತ್ತೂ ವರ್ಣಭೇದ ಮಾಡುವವನಲ್ಲ. ಹಾಗಾಗಿ ಸಭೆಯಲ್ಲಿ ಎಲ್ಲ ರೀತಿಯ ಜನರು ಒಟ್ಟು ಸೇರಿ ಬರುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಈ ಏರ್ಪಾಡಿನ ಹಿಂದೆ ಯೆಹೋವನ ಹಸ್ತ ಖಂಡಿತ ಇತ್ತು. ಏಕೆಂದರೆ ಈಗ ಆ ಸ್ಥಳದಲ್ಲಿ ಹತ್ತಾರು ಸಭೆಗಳಿವೆ.

ದುಃಖಕರವಾಗಿ ವಾಲ್ಟರ್‌ ಮಿದುಳು ಕ್ಯಾನ್ಸರ್‌ನಿಂದಾಗಿ 2015​ರಲ್ಲಿ ತೀರಿಕೊಂಡರು. ನಾನೂ ಅವರೂ 55 ವರ್ಷ ಸುಖವಾಗಿ ಸಂಸಾರ ಮಾಡಿದೆವು. ಒಳ್ಳೇ ಗಂಡ ಅವರು. ಯೆಹೋವ ದೇವರನ್ನು ತುಂಬ ಪ್ರೀತಿಸುತ್ತಿದ್ದರು, ಅನೇಕ ಸಹೋದರರಿಗೆ ಸಹಾಯ ಮಾಡಿದ್ದರು. ಅವರಿಗೆ ಪುನರುತ್ಥಾನವಾಗಿ ಒಳ್ಳೇ ಆರೋಗ್ಯದಿಂದ ಬರುವುದನ್ನು ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ.—ಅ. ಕಾ. 24:15.

40 ವರ್ಷದಿಂದ ನಾನು ಪೂರ್ಣ ಸಮಯದ ಸೇವೆಯಲ್ಲಿರುವುದು ನನಗೆ ತುಂಬ ಸಂತೋಷ ತಂದಿದೆ. ಅನೇಕ ಆಶೀರ್ವಾದಗಳನ್ನೂ ಪಡೆದುಕೊಂಡಿದ್ದೇನೆ. ಉದಾಹರಣೆಗೆ, ವಾಲ್ಟರ್‌ ಮತ್ತು ನಾನು ನಮ್ಮ ಬೈಬಲ್‌ ವಿದ್ಯಾರ್ಥಿಗಳಲ್ಲಿ ಸುಮಾರು 136 ಜನರು ದೀಕ್ಷಾಸ್ನಾನ ತೆಗೆದುಕೊಳ್ಳಲು ಸಹಾಯ ಮಾಡಿದ್ದೇವೆ. ಆದರೆ ಇದೆಲ್ಲ ಸುಲಭ ಇರಲಿಲ್ಲ, ಅನೇಕ ಸವಾಲುಗಳೂ ಇದ್ದವು. ಇಂಥ ಸವಾಲುಗಳು ನಮ್ಮ ಮತ್ತು ದೇವರ ಮಧ್ಯೆ ಅಂತರ ತರುವಂತೆ ನಾವು ಬಿಡಲಿಲ್ಲ. ಬದಲಿಗೆ ಆತನೊಂದಿಗೆ ಇನ್ನೂ ಆಪ್ತ ಸಂಬಂಧ ಬೆಳೆಸಿಕೊಂಡೆವು. ಸರಿಯಾದ ಸಮಯದಲ್ಲಿ, ಸರಿಯಾದ ವಿಧದಲ್ಲಿ ಆತನೇ ಆ ಸಮಸ್ಯೆಗಳನ್ನು ಸರಿಪಡಿಸುತ್ತಾನೆ ಅಂತ ನಂಬಿದೆವು. ನಮ್ಮ ನಂಬಿಕೆಯನ್ನು ಆತನು ಸುಳ್ಳು ಮಾಡಲಿಲ್ಲ!—2 ತಿಮೊ. 4:16, 17.

ವಾಲ್ಟರ್‌ ನನಗೆ ತುಂಬ ನೆನಪಾಗುತ್ತಾರೆ. ಆದರೆ ಅವರ ಯೋಚನೆಯಲ್ಲೇ ಮುಳುಗಿ ಹೋಗದಿರಲು ಪಯನೀಯರ್‌ ಸೇವೆ ನನಗೆ ಸಹಾಯ ಮಾಡಿದೆ. ಇತರರಿಗೆ ಬೋಧಿಸುವಾಗ ಅದರಲ್ಲೂ ಪುನರುತ್ಥಾನದ ಬಗ್ಗೆ ಬೋಧಿಸುವಾಗ ನನಗೇ ಪ್ರಯೋಜನವಾಗಿದೆ. ಯೆಹೋವನು ಇನ್ನೂ ಎಷ್ಟೋ ಹೆಚ್ಚು ವಿಧಗಳಲ್ಲಿ ನನ್ನ ಕೈಬಿಡದೆ ಕಾಪಾಡಿದ್ದಾನೆ. ನಾನೀಗ ಹೇಳಿರುವುದು ತುಂಬ ಕಡಿಮೆನೇ. ಕೊಟ್ಟ ಮಾತಿಗೆ ತಕ್ಕಂತೆ ಆತನು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾನೆ, ಬಲಪಡಿಸಿದ್ದಾನೆ. ನನ್ನನ್ನು ತನ್ನ ನೀತಿಯ ‘ಬಲಗೈಯಿಂದ’ ಹಿಡಿದಿದ್ದಾನೆ.—ಯೆಶಾ. 41:10.