ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಸ್ತನ್ನು ಸ್ವೀಕರಿಸಿ ವಿವೇಕಿಗಳಾಗಿ

ಶಿಸ್ತನ್ನು ಸ್ವೀಕರಿಸಿ ವಿವೇಕಿಗಳಾಗಿ

“ಮಕ್ಕಳಿರಾ, . . . ಉಪದೇಶವನ್ನು ಕೇಳಿರಿ, ಅದನ್ನು ಬಿಡದೆ ಜ್ಞಾನವಂತರಾಗಿರಿ.”—ಜ್ಞಾನೋ. 8:32, 33.

ಗೀತೆಗಳು: 64, 120

1. (ಎ) ನಾವು ವಿವೇಕವನ್ನು ಪಡೆದುಕೊಳ್ಳುವ ಒಂದು ವಿಧ ಯಾವುದು? (ಬಿ) ಇದು ನಮಗೆ ಹೇಗೆ ಸಹಾಯ ಮಾಡುತ್ತದೆ?

ಯೆಹೋವನು ವಿವೇಕದ ಮೂಲನು. ಆತನು ಈ ವಿವೇಕವನ್ನು ಬೇರೆಯವರಿಗೂ ಉದಾರವಾಗಿ ಕೊಡುತ್ತಾನೆ. ಯಾಕೋಬ 1:5 ಹೇಳುತ್ತದೆ: “ನಿಮ್ಮಲ್ಲಿ ಯಾವನಿಗಾದರೂ ವಿವೇಕದ ಕೊರತೆಯಿರುವಲ್ಲಿ ಅವನು ದೇವರನ್ನು ಕೇಳಿಕೊಳ್ಳುತ್ತಾ ಇರಲಿ, ಆಗ . . . ದೇವರು ಎಲ್ಲರಿಗೆ ಉದಾರವಾಗಿಯೂ ಹಂಗಿಸದೆಯೂ ಕೊಡುವವನಾಗಿದ್ದಾನೆ.” ನಾವು ಯೆಹೋವನಿಂದ ವಿವೇಕವನ್ನು ಪಡೆದುಕೊಳ್ಳುವ ಒಂದು ವಿಧ ಆತನು ಕೊಡುವ ಶಿಸ್ತನ್ನು ಸ್ವೀಕರಿಸುವುದೇ ಆಗಿದೆ. ಇದು ತಪ್ಪುಮಾಡದಂತೆ ನಮ್ಮನ್ನು ತಡೆಯುತ್ತದೆ ಮತ್ತು ಯೆಹೋವನಿಗೆ ಹತ್ತಿರವಾಗಿರಲೂ ಸಹಾಯ ಮಾಡುತ್ತದೆ. (ಜ್ಞಾನೋ. 2:10-12) ಅಷ್ಟೇ ಅಲ್ಲ ಇದರಿಂದ ನಮಗೆ ನಿತ್ಯಜೀವ ಕೂಡ ಸಿಗುತ್ತದೆ.—ಯೂದ 21.

2. ದೇವರು ಕೊಡುವ ಶಿಸ್ತನ್ನು ಸ್ವೀಕರಿಸಲು ನಮಗೆ ಯಾವುದು ಸಹಾಯ ಮಾಡುತ್ತದೆ?

2 ನಾವು ಅಪರಿಪೂರ್ಣರು ಆಗಿರುವುದರಿಂದಾಗಿ ಅಥವಾ ನಾವು ಬೆಳೆದು ಬಂದಿರುವ ರೀತಿಯಿಂದಾಗಿ ಕೆಲವೊಮ್ಮೆ ಶಿಸ್ತನ್ನು ಸ್ವೀಕರಿಸಲು, ಶಿಸ್ತಿನಿಂದ ನಮಗೆ ಒಳ್ಳೇದಾಗುತ್ತದೆ ಎಂದು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಆದರೆ ದೇವರು ಕೊಡುವ ಶಿಸ್ತಿನಿಂದ ಸಿಗುವ ಪ್ರಯೋಜನಗಳನ್ನು ನಾವು ಅನುಭವಿಸಿದಾಗ ಆತನಿಗೆ ನಮ್ಮ ಮೇಲೆ ಎಷ್ಟು ಪ್ರೀತಿ ಇದೆ ಅನ್ನುವುದು ಅರ್ಥವಾಗುತ್ತದೆ. ಜ್ಞಾನೋಕ್ತಿ 3:11, 12 ಹೇಳುವುದು: “ಮಗನೇ, ಯೆಹೋವನ ಶಿಕ್ಷೆಯನ್ನು ತಾತ್ಸಾರಮಾಡಬೇಡ.” ಯಾಕೆಂದರೆ “ಯೆಹೋವನು ತಾನು ಪ್ರೀತಿಸುವವನನ್ನೇ ಗದರಿಸುತ್ತಾನೆ.” ನಮಗೆ ಒಳ್ಳೇದಾಗಬೇಕು ಎಂದು ಆತನು ಬಯಸುತ್ತಾನೆ ಅನ್ನುವುದನ್ನು ಯಾವತ್ತೂ ಮರೆಯದಿರೋಣ. (ಇಬ್ರಿಯ 12:5-11 ಓದಿ.) ಆತನಿಗೆ ನಮ್ಮ ಬಗ್ಗೆ ಚೆನ್ನಾಗಿ ಗೊತ್ತಿರುವುದರಿಂದ ಯಾವಾಗಲೂ ಸೂಕ್ತವಾದ ಮತ್ತು ಸರಿಯಾದ ಪ್ರಮಾಣದಲ್ಲೇ ಶಿಸ್ತು ಕೊಡುತ್ತಾನೆ. ಈ ಲೇಖನದಲ್ಲಿ ಶಿಸ್ತಿನ ನಾಲ್ಕು ಅಂಶಗಳ ಬಗ್ಗೆ ನಾವು ಚರ್ಚಿಸಲಿದ್ದೇವೆ: (1) ಸ್ವಶಿಸ್ತನ್ನು ಹೇಗೆ ಬೆಳೆಸಿಕೊಳ್ಳಬಹುದು? (2) ಹೆತ್ತವರು ಮಕ್ಕಳಿಗೆ ಹೇಗೆ ಶಿಸ್ತು ಕೊಡಬೇಕು? (3) ಸಭೆಯಿಂದ ಸಿಗುವ ಶಿಸ್ತಿನಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು? (4) ಶಿಸ್ತಿಗಿಂತ ತುಂಬ ನೋವು ತರುವ ವಿಷಯ ಯಾವುದು?

ನಮ್ಮಲ್ಲಿ ಸ್ವಶಿಸ್ತು ಇದ್ದರೆ ವಿವೇಕ ಇದೆ ಎಂದರ್ಥ

3. ಮಕ್ಕಳು ಸ್ವಶಿಸ್ತನ್ನು ಹೇಗೆ ಬೆಳೆಸಿಕೊಳ್ಳುತ್ತಾರೆಂದು ಉದಾಹರಣೆ ಕೊಟ್ಟು ವಿವರಿಸಿ.

3 ನಮ್ಮಲ್ಲಿ ಸ್ವಶಿಸ್ತು ಇದ್ದರೆ ನಮ್ಮ ನಡತೆ ಮತ್ತು ಯೋಚನೆಯನ್ನು ನಿಯಂತ್ರಣದಲ್ಲಿ ಇಡುತ್ತೇವೆ. ಇದು ಹುಟ್ಟಿನಿಂದಲೇ ಬರುವುದಿಲ್ಲ. ಆದ್ದರಿಂದ ನಾವಿದನ್ನು ಕಲಿಯಬೇಕು. ಉದಾಹರಣೆಗೆ, ಮಕ್ಕಳು ಸೈಕಲ್‌ ಕಲಿಯುವಾಗ ಬೀಳದೇ ಇರುವ ಹಾಗೆ ಅಪ್ಪ ಸೈಕಲನ್ನು ಹಿಡುಕೊಳ್ಳುತ್ತಾರೆ. ಆದರೆ ಮಕ್ಕಳು ಸೈಕಲ್‌ ಓಡಿಸಲು ಸ್ವಲ್ಪ ಕಲಿತಾಗ ಸೈಕಲನ್ನು ಸ್ವಲ್ಪ ದೂರ ಬಿಟ್ಟುನೋಡಿ, ಬೀಳುವ ತರ ಇದ್ದರೆ ಮತ್ತೆ ಹಿಡುಕೊಳ್ಳುತ್ತಾರೆ. ಆದರೆ ಮಕ್ಕಳು ಇನ್ನು ಬೀಳಲ್ಲ ಎಂದು ಗೊತ್ತಾದಾಗ ಪೂರ್ತಿ ಬಿಟ್ಟುಬಿಡುತ್ತಾರೆ. ಅದೇ ರೀತಿ ಹೆತ್ತವರು ಮಕ್ಕಳನ್ನು “ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ” ತಾಳ್ಮೆಯಿಂದ ಬೆಳೆಸುವಾಗ ಮಕ್ಕಳು ಸ್ವಶಿಸ್ತು ಮತ್ತು ವಿವೇಕವನ್ನು ಬೆಳೆಸಿಕೊಳ್ಳುತ್ತಾರೆ.—ಎಫೆ. 6:4.

4, 5. (ಎ) ಸ್ವಶಿಸ್ತು ‘ಹೊಸ ವ್ಯಕ್ತಿತ್ವದ’ ಒಂದು ಮುಖ್ಯ ಭಾಗವಾಗಿದೆ ಹೇಗೆ? (ಬಿ) ನಮ್ಮಿಂದ ಏನಾದರೂ ತಪ್ಪಾದರೆ ಯಾಕೆ ನಿರುತ್ಸಾಹಗೊಳ್ಳಬಾರದು?

4 ಮಕ್ಕಳ ವಿಷಯದಲ್ಲಿ ಮಾತ್ರವಲ್ಲ ಯೆಹೋವನ ಬಗ್ಗೆ ಕಲಿಯುವ ದೊಡ್ಡವರ ವಿಷಯದಲ್ಲೂ ಇದು ಸತ್ಯ. ಅವರು ಸ್ವಲ್ಪ ಮಟ್ಟಿಗೆ ಸ್ವಶಿಸ್ತನ್ನು ಬೆಳೆಸಿಕೊಂಡಿರಬಹುದು. ಆದರೆ ಅವರಿನ್ನೂ ಪ್ರೌಢ ಕ್ರೈಸ್ತರಾಗಿರಲ್ಲ. ಅವರು “ಹೊಸ ವ್ಯಕ್ತಿತ್ವವನ್ನು” ಬೆಳೆಸಿಕೊಳ್ಳುತ್ತಾ ಹೋದ ಹಾಗೆ ಮತ್ತು ಕ್ರಿಸ್ತನಂತೆ ಆಗಲು ಪ್ರಯತ್ನಿಸುತ್ತಾ ಇರುವಾಗ ಪ್ರೌಢ ಕ್ರೈಸ್ತರಾಗುತ್ತಾರೆ. (ಎಫೆ. 4:23, 24) “ನಾವು ಭಕ್ತಿಹೀನತೆಯನ್ನೂ ಲೌಕಿಕ ಆಶೆಗಳನ್ನೂ ವಿಸರ್ಜಿಸಿ ಈ ಸದ್ಯದ ವಿಷಯಗಳ ವ್ಯವಸ್ಥೆಯಲ್ಲಿ ಸ್ವಸ್ಥಬುದ್ಧಿಯಿಂದಲೂ ನೀತಿಯಿಂದಲೂ ದೇವಭಕ್ತಿಯಿಂದಲೂ” ಜೀವಿಸಲು ಸ್ವಶಿಸ್ತು ನಮಗೆ ಸಹಾಯ ಮಾಡುತ್ತದೆ.—ತೀತ 2:12.

5 ಆದರೆ ನಾವು ಅಪರಿಪೂರ್ಣರು ಆಗಿರುವುದರಿಂದ ಕೆಲವೊಮ್ಮೆ ತಪ್ಪು ಮಾಡಿಬಿಡುತ್ತೇವೆ. (ಪ್ರಸಂ. 7:20) ಹೀಗೆ ನಮ್ಮಿಂದ ತಪ್ಪಾದರೆ ನಮ್ಮಲ್ಲಿ ಅಗತ್ಯವಿರುವಷ್ಟು ಸ್ವಶಿಸ್ತು ಇಲ್ಲ ಅಥವಾ ಸ್ವಶಿಸ್ತು ಇಲ್ಲವೇ ಇಲ್ಲ ಎಂದು ಅರ್ಥನಾ? ಹಾಗೇನಿಲ್ಲ. “ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು” ಎಂದು ಜ್ಞಾನೋಕ್ತಿ 24:16 ಹೇಳುತ್ತದೆ. “ಮತ್ತೆ ಏಳಲು” ನಮಗೆ ಯಾವುದು ಸಹಾಯ ಮಾಡುತ್ತದೆ? ನಮ್ಮ ಸ್ವಂತ ಶಕ್ತಿ ಅಲ್ಲ, ದೇವರ ಪವಿತ್ರಾತ್ಮ ಸಹಾಯ ಮಾಡುತ್ತದೆ. (ಫಿಲಿಪ್ಪಿ 4:13 ಓದಿ.) ಸ್ವನಿಯಂತ್ರಣ ಪವಿತ್ರಾತ್ಮದ ಫಲದ ಒಂದು ಅಂಶ. ಸ್ವನಿಯಂತ್ರಣ ಮತ್ತು ಸ್ವಶಿಸ್ತು ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ.

6. ನಾವು ದೇವರ ವಾಕ್ಯದ ಒಳ್ಳೇ ವಿದ್ಯಾರ್ಥಿಗಳಾಗುವುದು ಹೇಗೆ? (ಲೇಖನದ ಆರಂಭದ ಚಿತ್ರ ನೋಡಿ.)

6 ಪ್ರಾರ್ಥನೆ, ಬೈಬಲ್‌ ಅಧ್ಯಯನ ಮತ್ತು ಓದಿದ್ದನ್ನು ಧ್ಯಾನಿಸುವುದು ಕೂಡ ನಮಗೆ ಸ್ವಶಿಸ್ತನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಬೈಬಲನ್ನು ಓದುವುದು ಮತ್ತು ಅಧ್ಯಯನ ಮಾಡುವುದು ಬೋರು, ಕಷ್ಟ ಎಂದು ನಿಮಗೆ ಅನಿಸಿದೆಯಾ? ಹಾಗಿದ್ದರೆ ಯೆಹೋವನಿಗೆ ಪ್ರಾರ್ಥನೆಯಲ್ಲಿ ನಿಮ್ಮ ಅನಿಸಿಕೆಗಳನ್ನು ಹೇಳಿಕೊಳ್ಳಿ. ಬೈಬಲನ್ನು ಓದುವ “ಹಂಬಲವನ್ನು” ಬೆಳೆಸಿಕೊಳ್ಳಲು ಆತನು ನಿಮಗೆ ಸಹಾಯ ಮಾಡುತ್ತಾನೆ. (1 ಪೇತ್ರ 2:2) ಬೈಬಲ್‌ ಅಧ್ಯಯನ ಮಾಡಲು ಬೇಕಾದ ಸ್ವಶಿಸ್ತನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತಾನೆ. ಒಮ್ಮೆಗೆ ತುಂಬ ಹೊತ್ತು ಕೂತು ಓದುವ ಬದಲು ಕೆಲವು ನಿಮಿಷ ಕೂತು ಓದಲು ಆರಂಭಿಸಿ. ಹೋಗುತ್ತಾ ಹೋಗುತ್ತಾ ಬೈಬಲ್‌ ಅಧ್ಯಯನ ಮಾಡುವುದು ನಿಮಗೆ ಸುಲಭವಾಗುತ್ತದೆ. ಮಾತ್ರವಲ್ಲ ನೀವದನ್ನು ಆನಂದಿಸುತ್ತೀರಿ. ಯೆಹೋವನ ಬಗ್ಗೆ ಬೈಬಲಿನಲ್ಲಿ ಇರುವ ಅಮೂಲ್ಯವಾದ ವಿಷಯಗಳ ಬಗ್ಗೆ ಪ್ರಶಾಂತವಾದ ಜಾಗದಲ್ಲಿ ಕೂತು ಧ್ಯಾನಿಸುವುದು ಕೂಡ ನಿಮಗೆ ತುಂಬ ಇಷ್ಟವಾಗುತ್ತದೆ.—1 ತಿಮೊ. 4:15.

7. ಯೆಹೋವನ ಸೇವೆಯಲ್ಲಿ ಗುರಿಗಳನ್ನು ಮುಟ್ಟಲು ಸ್ವಶಿಸ್ತು ಹೇಗೆ ಸಹಾಯ ಮಾಡುತ್ತದೆ?

7 ಯೆಹೋವನ ಸೇವೆಯಲ್ಲಿ ಗುರಿಗಳನ್ನು ಮುಟ್ಟಲು ಕೂಡ ಸ್ವಶಿಸ್ತು ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ಒಬ್ಬ ಸಹೋದರನಿಗೆ ಸೇವೆಯಲ್ಲಿ ತನ್ನ ಹುರುಪು ಕಡಿಮೆ ಆಗುತ್ತಿದೆ ಎಂದು ಅನಿಸಿದಾಗ ಅವರು ಪಯನೀಯರ್‌ ಆಗುವ ಗುರಿ ಇಟ್ಟರು. ನಮ್ಮ ಪತ್ರಿಕೆಗಳಲ್ಲಿ ಪಯನೀಯರ್‌ ಸೇವೆ ಬಗ್ಗೆ ಬಂದ ಲೇಖನಗಳನ್ನು ಓದಿದರು ಮತ್ತು ಅದರ ಬಗ್ಗೆ ಪ್ರಾರ್ಥಿಸಿದರು. ಇದರಿಂದ ಅವರಿಗೆ ಯೆಹೋವನೊಂದಿಗಿದ್ದ ಸಂಬಂಧ ಬಲವಾಯಿತು. ಅವರಿಗೆ ಸಾಧ್ಯವಾದಾಗೆಲ್ಲ ಸಹಾಯಕ ಪಯನೀಯರ್‌ ಸೇವೆಯನ್ನೂ ಮಾಡಿದರು. ಇದರ ಫಲಿತಾಂಶವೇನು? ಎಷ್ಟೇ ಅಡೆತಡೆ ಬಂದರೂ ಗುರಿ ಮುಟ್ಟುವುದಕ್ಕೆ ಪೂರ್ತಿ ಗಮನಕೊಟ್ಟರು. ಸ್ವಲ್ಪ ಸಮಯದ ನಂತರ ಅವರು ಪಯನೀಯರ್‌ ಆದರು.

ಮಕ್ಕಳನ್ನು ಯೆಹೋವನ ಶಿಸ್ತಿನಲ್ಲಿ ಬೆಳೆಸಿ

ಮಕ್ಕಳಿಗೆ ಸರಿ ಯಾವುದು ತಪ್ಪು ಯಾವುದು ಎಂದು ಗೊತ್ತಿರುವುದಿಲ್ಲ; ಆದ್ದರಿಂದ ಅವರಿಗೆ ತರಬೇತಿ ಕೊಡಬೇಕು (ಪ್ಯಾರ 8 ನೋಡಿ)

8-10. (ಎ) ಮಕ್ಕಳನ್ನು ಯೆಹೋವನ ಸೇವಕರಾಗಿ ಮಾಡಲು ಹೆತ್ತವರಿಗೆ ಯಾವುದು ಸಹಾಯ ಮಾಡುತ್ತದೆ? (ಬಿ) ಒಂದು ಉದಾಹರಣೆ ಕೊಡಿ.

8 ಮಕ್ಕಳನ್ನು “ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ” ಬೆಳೆಸುವ ಜವಾಬ್ದಾರಿಯನ್ನು ದೇವರು ಹೆತ್ತವರಿಗೆ ಕೊಟ್ಟಿದ್ದಾನೆ. (ಎಫೆ. 6:4) ಇಂದಿನ ಲೋಕದಲ್ಲಿ ಈ ಜವಾಬ್ದಾರಿಯನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. (2 ತಿಮೊ. 3:1-5) ಮಕ್ಕಳು ಹುಟ್ಟಿದಾಗಲೇ ಅವರಿಗೆ ಸರಿ ಯಾವುದು ತಪ್ಪು ಯಾವುದು ಎಂಬ ತಿಳುವಳಿಕೆ ಇರಲ್ಲ. ಅವರ ಮನಸ್ಸಾಕ್ಷಿ ತರಬೇತಿ ಪಡೆದಿರಲ್ಲ. ಆದ್ದರಿಂದ ಮಕ್ಕಳ ಮನಸ್ಸಾಕ್ಷಿಯನ್ನು ತರಬೇತಿಗೊಳಿಸಲು ಅವರಿಗೆ ಶಿಸ್ತು ಬೇಕು. (ರೋಮ. 2:14, 15) ಒಬ್ಬ ಬೈಬಲ್‌ ವಿದ್ವಾಂಸರು ವಿವರಿಸುವ ಪ್ರಕಾರ, “ಶಿಸ್ತು” ಎಂದು ಭಾಷಾಂತರವಾಗಿರುವ ಗ್ರೀಕ್‌ ಪದಕ್ಕೆ “ಮಗುವಿನ ಅಭಿವೃದ್ಧಿ” ಅಥವಾ ಒಂದು ಮಗುವನ್ನು ಜವಾಬ್ದಾರಿಯುತ ವ್ಯಕ್ತಿಯಾಗಿ ಬೆಳೆಸುವುದು ಎಂಬ ಅರ್ಥ ಕೂಡ ಇದೆ.

9 ಹೆತ್ತವರು ಮಕ್ಕಳಿಗೆ ಪ್ರೀತಿಯಿಂದ ಶಿಸ್ತು ಕೊಡುವಾಗ, ತಮಗೆ ಯಾವುದೇ ಹಾನಿಯಾಗಬಾರದು ಎಂದು ಅಪ್ಪಅಮ್ಮ ಶಿಸ್ತು ಕೊಡುತ್ತಿದ್ದಾರೆ ಎಂದು ಮಕ್ಕಳು ಅರ್ಥಮಾಡಿಕೊಳ್ಳುತ್ತಾರೆ. ಸ್ವಾತಂತ್ರ್ಯಕ್ಕೆ ಒಂದು ಮಿತಿ ಇದೆ ಮತ್ತು ಜೀವನದಲ್ಲಿ ಏನೇ ಮಾಡಿದರೂ ಅದರ ಪರಿಣಾಮಗಳನ್ನು ಎದುರಿಸಬೇಕು ಎಂದು ಮಕ್ಕಳಿಗೆ ಗೊತ್ತಾಗುತ್ತದೆ. ಆದ್ದರಿಂದ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳನ್ನು ಯೆಹೋವನ ವಿವೇಕದ ಮೇಲಾಧರಿಸಿ ಬೆಳೆಸುವುದು ತುಂಬ ಮುಖ್ಯ. ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ವಿಚಾರ ಸ್ಥಳದಿಂದ ಸ್ಥಳಕ್ಕೆ ಬೇರೆ ಬೇರೆ ಇರುತ್ತದೆ ಮತ್ತು ಇದು ಬದಲಾಗುತ್ತಾ ಇರುತ್ತದೆ. ಆದರೆ ದೇವರ ಮಾತಿಗೆ ಕಿವಿಗೊಡುವ ಹೆತ್ತವರು ಮಕ್ಕಳನ್ನು ಹೇಗೆ ಬೆಳೆಸಬೇಕೆಂದು ತಾವೇ ತಲೆ ಓಡಿಸಿ ತಿಳುಕೊಳ್ಳುವ ಅಥವಾ ತಮ್ಮ ಸ್ವಂತ ಅನುಭವದ ಮೇಲೆ ಹೊಂದಿಕೊಳ್ಳುವ ಅಥವಾ ಬೇರೆ ಮಾನವರ ಸಲಹೆಗಳ ಮೇಲೆ ಹೊಂದಿಕೊಳ್ಳುವ ಆವಶ್ಯಕತೆ ಇಲ್ಲ.

10 ನೋಹನ ಉದಾಹರಣೆ ತೆಗೆದುಕೊಳ್ಳಿ. ನಾವೆ ಕಟ್ಟುವಂತೆ ಯೆಹೋವನು ನೋಹನಿಗೆ ಹೇಳಿದಾಗ, ಅವನಿಗೆ ಅದರ ಆಳ-ಅರಿವು ಒಂದೂ ಗೊತ್ತಿರಲಿಲ್ಲ. ಆದ್ದರಿಂದ ಅವನು ಯೆಹೋವನ ಮೇಲೆ ಪೂರ್ತಿ ಅವಲಂಬಿಸಿದನು. ಯೆಹೋವನು “ಅಪ್ಪಣೆಕೊಟ್ಟ ಪ್ರಕಾರವೇ” ನೋಹ ಎಲ್ಲವನ್ನೂ ಮಾಡಿದನು ಎಂದು ಬೈಬಲ್‌ ಹೇಳುತ್ತದೆ. (ಆದಿ. 6:22) ಇದರ ಫಲಿತಾಂಶ ಏನಾಗಿತ್ತು? ನಾವೆಯಿಂದಾಗಿ ನೋಹ ಮತ್ತವನ ಕುಟುಂಬ ಜೀವಂತ ಉಳಿಯಿತು. ನೋಹ ತಂದೆಯಾಗಿ ಸಹ ತನ್ನ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದನು. ಹೇಗೆ? ದೇವರ ವಿವೇಕದ ಮೇಲೆ ಹೊಂದಿಕೊಂಡು ಇದನ್ನು ಮಾಡಿದನು. ತನ್ನ ಮಕ್ಕಳಿಗೆ ಒಳ್ಳೇ ಬುದ್ಧಿ ಕಲಿಸಿದನು, ಒಳ್ಳೇ ಮಾದರಿ ಇಟ್ಟನು. ಜಲಪ್ರಳಯಕ್ಕೆ ಮುಂಚೆ ದುಷ್ಟತನ ತುಂಬಿಕೊಂಡಿದ್ದ ಆ ಸಮಯದಲ್ಲಿ ಇದನ್ನು ಮಾಡುವುದು ಸುಲಭದ ವಿಷಯವಾಗಿರಲಿಲ್ಲ.—ಆದಿ. 6:5.

11. ಹೆತ್ತವರು ಹೇಗೆ ಮಕ್ಕಳಿಗೆ ಒಳ್ಳೇ ಮಾದರಿ ಇಡಬಹುದು?

11 ನೀವೊಬ್ಬ ಹೆತ್ತವರಾಗಿರುವಲ್ಲಿ ದೇವರು “ಅಪ್ಪಣೆಕೊಟ್ಟ ಪ್ರಕಾರವೇ” ಹೇಗೆ ಮಾಡಬಹುದು? ಯೆಹೋವನ ಮಾತಿಗೆ ಕಿವಿಗೊಡಿ. ಮಕ್ಕಳನ್ನು ಬೆಳೆಸುವ ವಿಷಯದಲ್ಲಿ ಆತನು ತನ್ನ ವಾಕ್ಯ ಮತ್ತು ಸಂಘಟನೆಯ ಮೂಲಕ ಕೊಡುವ ನಿರ್ದೇಶನಗಳನ್ನು ಪಾಲಿಸಿ. ನೀವಿದನ್ನು ಮಾಡಿದ್ದಕ್ಕಾಗಿ ಮುಂದೆ ನಿಮ್ಮ ಮಕ್ಕಳು ನಿಮಗೆ ಕೃತಜ್ಞತೆ ಹೇಳಬಹುದು. ಒಬ್ಬ ಸಹೋದರನು ಬರೆದದ್ದು: “ನನ್ನ ಹೆತ್ತವರು ನನ್ನನ್ನು ಬೆಳೆಸಿದ ವಿಧಕ್ಕಾಗಿ ನಾನು ತುಂಬ ಕೃತಜ್ಞನಾಗಿದ್ದೇನೆ. ನನ್ನ ಹೃದಯಕ್ಕೆ ನಾಟುವಂತೆ ವಿಷಯಗಳನ್ನು ಕಲಿಸುತ್ತಿದ್ದರು. ನಾನು ಆಧ್ಯಾತ್ಮಿಕವಾಗಿ ಇಷ್ಟೊಂದು ಪ್ರಗತಿ ಮಾಡಲು ಅವರೇ ಕಾರಣ.” ಹೆತ್ತವರು ಮಕ್ಕಳಿಗೆ ಒಳ್ಳೇ ವಿಷಯಗಳನ್ನು ಕಲಿಸಲು ಇಷ್ಟೆಲ್ಲಾ ಮಾಡಿದ ಮೇಲೂ ಅವರ ಮಕ್ಕಳು ಯೆಹೋವನನ್ನು ಬಿಟ್ಟುಹೋಗಬಹುದು. ಆದರೆ ಮಕ್ಕಳ ಹೃದಯದಲ್ಲಿ ಸತ್ಯವನ್ನು ಬೇರೂರಿಸಲು ತಮ್ಮಿಂದಾದ ಎಲ್ಲ ಪ್ರಯತ್ನ ಮಾಡಿದ ಹೆತ್ತವರಿಗೆ ದೋಷಿಭಾವನೆ ಇರುವುದಿಲ್ಲ. ಮುಂದೊಂದು ದಿನ ತಮ್ಮ ಮಗ ಅಥವಾ ಮಗಳು ಪುನಃ ಯೆಹೋವನ ಬಳಿ ಬರಬಹುದು ಎಂದು ನಂಬುತ್ತಾರೆ.

12, 13. (ಎ) ಮಕ್ಕಳಿಗೆ ಬಹಿಷ್ಕಾರವಾದರೆ ಹೆತ್ತವರು ಹೇಗೆ ದೇವರಿಗೆ ವಿಧೇಯತೆ ತೋರಿಸಬಹುದು? (ಬಿ) ವಿಧೇಯತೆ ತೋರಿಸಿದ್ದರಿಂದ ಒಂದು ಕುಟುಂಬಕ್ಕೆ ಯಾವ ಪ್ರಯೋಜನ ಸಿಕ್ಕಿತು?

12 ಮಕ್ಕಳಿಗೆ ಬಹಿಷ್ಕಾರವಾದಾಗ ಕೆಲವು ಹೆತ್ತವರು ವಿಧೇಯತೆಯ ವಿಷಯದಲ್ಲಿ ದೊಡ್ಡ ಪರೀಕ್ಷೆಯನ್ನು ಎದುರಿಸುತ್ತಾರೆ. ಒಬ್ಬ ಸಹೋದರಿಯ ಮಗಳಿಗೆ ಬಹಿಷ್ಕಾರವಾದ ಮೇಲೆ ಅವಳು ಮನೆಬಿಟ್ಟು ಹೋದಳು. “ನನ್ನ ಮಗಳು ಮತ್ತು ಮೊಮ್ಮಗಳ ಜೊತೆ ಸಮಯ ಕಳೆಯಬೇಕೆಂದು ನನಗೆ ಆಸೆ ಆಗುತ್ತಿತ್ತು. ಅದಕ್ಕೇನಾದರೂ ನೆಪ ಸಿಗಬಹುದಾ ಎಂದು ನಮ್ಮ ಪ್ರಕಾಶನಗಳಲ್ಲಿ ಹುಡುಕುತ್ತಿದ್ದೆ” ಎಂದು ಆ ಸಹೋದರಿ ಒಪ್ಪಿಕೊಳ್ಳುತ್ತಾರೆ. “ಆದರೆ ನನ್ನ ಗಂಡ ನನಗೆ ಸಹಾಯ ಮಾಡಿದರು. ನಮ್ಮ ಮಗಳು ನಮ್ಮ ಕೈಬಿಟ್ಟು ಹೋದಳು. ಇನ್ನು ನಾವು ಅವಳ ವಿಷಯದಲ್ಲಿ ತಲೆಹಾಕಬಾರದು ಎಂದು ಅರ್ಥಮಾಡಿಸಿದರು” ಎನ್ನುತ್ತಾರೆ.

13 ಕೆಲವು ವರ್ಷಗಳಾದ ಮೇಲೆ ಅವರ ಮಗಳನ್ನು ಪುನಃಸ್ಥಾಪಿಸಲಾಯಿತು. ಆ ಸಹೋದರಿ ಹೇಳುವುದು: “ಈಗ ಅವಳು ನನಗೆ ದಿನಾ ಫೋನ್‌ ಮಾಡುತ್ತಾಳೆ, ಮೆಸೆಜ್‌ ಮಾಡುತ್ತಾಳೆ. ನಾವು ದೇವರು ಹೇಳಿದಂತೆ ನಡಕೊಂಡದ್ದರಿಂದ ಅವಳಿಗೆ ನನ್ನ ಮೇಲೆ ಮತ್ತು ನನ್ನ ಗಂಡನ ಮೇಲೆ ತುಂಬ ಗೌರವ ಇದೆ. ಈಗ ಅವಳೊಟ್ಟಿಗೆ ನಮ್ಮ ಸಂಬಂಧ ತುಂಬ ಚೆನ್ನಾಗಿದೆ.” ನಿಮ್ಮ ಮಗನಿಗೆ ಅಥವಾ ಮಗಳಿಗೆ ಬಹಿಷ್ಕಾರವಾಗಿದ್ದರೆ ನೀವು ನಿಮ್ಮ ‘ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸೆ’ ಇಡುವಿರಾ? ‘ಸ್ವಬುದ್ಧಿಯನ್ನು ಆಧಾರಮಾಡಿಕೊಂಡಿಲ್ಲ’ ಎಂದು ತೋರಿಸುವಿರಾ? (ಜ್ಞಾನೋ. 3:5, 6) ಯೆಹೋವನು ಕೊಡುವ ಶಿಸ್ತಿನಿಂದ ಆತನು ಎಷ್ಟು ವಿವೇಕಿ ಮತ್ತು ಆತನು ನಮ್ಮನ್ನು ಎಷ್ಟು ಪ್ರೀತಿಸುತ್ತಾನೆ ಎಂದು ಗೊತ್ತಾಗುತ್ತದೆ ಅನ್ನುವುದನ್ನು ನೆನಪಿಡಿ. ಆತನು ಎಲ್ಲಾ ಮಾನವರಿಗೋಸ್ಕರ ತನ್ನ ಮಗನನ್ನು ಕೊಟ್ಟನು ಅನ್ನುವುದನ್ನು ಮರೆಯಬೇಡಿ. ಇದರಲ್ಲಿ ನಿಮ್ಮ ಮಗ ಅಥವಾ ಮಗಳು ಸಹ ಸೇರಿದ್ದಾರೆ. ಎಲ್ಲರೂ ನಿತ್ಯಜೀವ ಪಡೆಯಬೇಕೆಂಬುದೇ ಯೆಹೋವನ ಬಯಕೆ. (2 ಪೇತ್ರ 3:9 ಓದಿ.) ಆದ್ದರಿಂದ ಹೆತ್ತವರೇ, ಯೆಹೋವನು ಕೊಡುವ ಶಿಸ್ತು ಮತ್ತು ಮಾರ್ಗದರ್ಶನದಲ್ಲಿ ನಂಬಿಕೆ ಇಡಿ. ನಿಮಗೆ ಕಷ್ಟವಾದರೂ ಆ ನಂಬಿಕೆಯನ್ನು ಬಿಡಬೇಡಿ. ಯೆಹೋವನ ಶಿಸ್ತು ಕೆಲಸಮಾಡಲು ಬಿಡಿ.

ಸಭೆಯಲ್ಲಿ ಶಿಸ್ತು

14. ‘ನಂಬಿಗಸ್ತ ಮನೆವಾರ್ತೆಯವನು’ ಕೊಡುವ ಯೆಹೋವನ ಬುದ್ಧಿ ಉಪದೇಶದಿಂದ ನಾವು ಹೇಗೆ ಪ್ರಯೋಜನ ಪಡೆಯುತ್ತೇವೆ?

14 ಕ್ರೈಸ್ತ ಸಭೆಯ ಮೂಲಕ ನಮ್ಮನ್ನು ಪರಾಮರಿಸಿ, ಸಂರಕ್ಷಿಸಿ, ಉಪದೇಶಿಸುತ್ತೇನೆ ಎಂದು ಯೆಹೋವನು ಮಾತು ಕೊಟ್ಟಿದ್ದಾನೆ. ಆತನಿದನ್ನು ಅನೇಕ ವಿಧಗಳಲ್ಲಿ ಮಾಡುತ್ತಾನೆ. ಉದಾಹರಣೆಗೆ, ಆತನು ಸಭೆಗಳನ್ನು ತನ್ನ ಮಗನಾದ ಯೇಸುವಿನ ಕೈಗೆ ಒಪ್ಪಿಸಿದ್ದಾನೆ. ಈ ಮಗನು ನಮಗೆ ಆಧ್ಯಾತ್ಮಿಕ ಆಹಾರ ಕೊಡಲಿಕ್ಕಾಗಿ ‘ನಂಬಿಗಸ್ತ ಮನೆವಾರ್ತೆಯವನನ್ನು’ ನೇಮಿಸಿದ್ದಾನೆ. (ಲೂಕ 12:42) ಈ “ಮನೆವಾರ್ತೆಯವನು” ನಮಗೆ ಬೇಕಾಗಿರುವ ಬುದ್ಧಿ ಉಪದೇಶ ಮತ್ತು ಶಿಸ್ತನ್ನು ನೀಡುತ್ತಾನೆ. ನೀವು ಒಂದು ಭಾಷಣ ಕೇಳಿಸಿಕೊಂಡ ಮೇಲೆ ಅಥವಾ ನಮ್ಮ ಪ್ರಕಾಶನಗಳಲ್ಲಿ ಒಂದು ಲೇಖನ ಓದಿದ ಮೇಲೆ ಜೀವನದಲ್ಲಿ ಏನಾದರೂ ಬದಲಾವಣೆ ಮಾಡಿಕೊಂಡದ್ದು ನಿಮಗೆ ನೆನಪಾಗಬಹುದು. ಆ ಬದಲಾವಣೆಗಳನ್ನು ಮಾಡಿಕೊಂಡದ್ದಕ್ಕಾಗಿ ನೀವು ಸಂತೋಷಪಡಬೇಕು. ಯಾಕೆಂದರೆ ಯೆಹೋವನು ಈ ರೀತಿ ನಿಮಗೆ ಬೇಕಾದ ಶಿಸ್ತನ್ನು ಕೊಟ್ಟು ನಿಮ್ಮನ್ನು ರೂಪಿಸುತ್ತಿದ್ದಾನೆ.—ಜ್ಞಾನೋ. 2:1-5.

15, 16. (ಎ) ಹಿರಿಯರಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು? (ಬಿ) ಹಿರಿಯರು ಮಾಡುವ ಕೆಲಸವನ್ನು ನಾವು ಹೇಗೆ ಸುಲಭ ಮಾಡಿಕೊಡಬಹುದು?

15 ಸಭೆಯನ್ನು ಪ್ರೀತಿಯಿಂದ ಪರಾಮರಿಸಲು ಕ್ರಿಸ್ತನು ಹಿರಿಯರನ್ನೂ ಕೊಟ್ಟಿದ್ದಾನೆ. ಬೈಬಲ್‌ ಈ ಹಿರಿಯರನ್ನು ‘ಮನುಷ್ಯರಲ್ಲಿ ದಾನಗಳು’ ಎಂದು ಕರೆಯುತ್ತದೆ. (ಎಫೆ. 4:8, 11-13) ಹಿರಿಯರಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು? ನಾವು ಅವರ ನಂಬಿಕೆ ಮತ್ತು ಒಳ್ಳೇ ಮಾದರಿಯನ್ನು ಅನುಕರಿಸಬೇಕು. ಅವರು ಬೈಬಲಿನಿಂದ ಕೊಡುವ ಸಲಹೆಯನ್ನೂ ಪಾಲಿಸಬೇಕು. (ಇಬ್ರಿಯ 13:7, 17 ಓದಿ.) ಹಿರಿಯರು ನಮ್ಮನ್ನು ಪ್ರೀತಿಸುತ್ತಾರೆ. ನಾವು ಯೆಹೋವನ ಹತ್ತಿರಕ್ಕೆ ಬರಬೇಕೆಂದು ಬಯಸುತ್ತಾರೆ. ನಾವು ಕೂಟಗಳಿಗೆ ಹೋಗುತ್ತಿಲ್ಲ ಅಥವಾ ನಮ್ಮ ಹುರುಪು ಕಡಿಮೆಯಾಗಿದೆ ಎಂದು ಗೊತ್ತಾದರೆ ಅವರು ತಕ್ಷಣ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ನಮಗೇನಾದರೂ ಹೇಳುವುದಕ್ಕಿದ್ದರೆ ಅವರು ಅದನ್ನು ಕೇಳಿಸಿಕೊಳ್ಳುತ್ತಾರೆ. ನಂತರ ಪ್ರೀತಿಯಿಂದ ಪ್ರೋತ್ಸಾಹಿಸಿ ಸೂಕ್ತವಾದ ಸಲಹೆಗಳನ್ನು ಬೈಬಲಿನಿಂದ ಕೊಡುತ್ತಾರೆ. ಅವರು ಕೊಡುವ ಸಹಾಯದಲ್ಲಿ ನಿಮಗೆ ಯೆಹೋವನ ಪ್ರೀತಿಯನ್ನು ನೋಡಲು ಸಾಧ್ಯವಾಗುತ್ತದಾ?

16 ಬುದ್ಧಿವಾದ ಹೇಳುವುದು ಹಿರಿಯರಿಗೆ ಸುಲಭವಾದ ವಿಷಯ ಅಲ್ಲ. ರಾಜ ದಾವೀದನು ಗಂಭೀರವಾದ ಪಾಪವನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಮೇಲೆ ಅದರ ಬಗ್ಗೆ ರಾಜನ ಹತ್ತಿರ ಮಾತಾಡಲು ಪ್ರವಾದಿ ನಾತಾನನಿಗೆ ಎಷ್ಟು ಕಷ್ಟವಾಗಿರಬೇಕು ಯೋಚಿಸಿ. (2 ಸಮು. 12:1-14) ಹನ್ನೆರಡು ಮಂದಿ ಅಪೊಸ್ತಲರಲ್ಲಿ ಒಬ್ಬನಾಗಿದ್ದ ಪೇತ್ರನು ಯೆಹೂದ್ಯರಲ್ಲದ ಕ್ರೈಸ್ತರಿಗೆ ಪಕ್ಷಪಾತ ತೋರಿಸಿದಾಗ ಅವನು ಮಾಡುತ್ತಿದ್ದದ್ದು ತಪ್ಪೆಂದು ಹೇಳಲು ಅಪೊಸ್ತಲ ಪೌಲನಿಗೆ ಎಷ್ಟು ಕಷ್ಟವಾಗಿರಬೇಕೆಂದು ಯೋಚಿಸಿ. ಇದನ್ನು ಮಾಡಲು ಪೌಲನಿಗೆ ಧೈರ್ಯ ಬೇಕಿತ್ತು. (ಗಲಾ. 2:11-14) ಹಾಗಾದರೆ ಹಿರಿಯರು ಮಾಡುವ ಕೆಲಸವನ್ನು ನೀವು ಹೇಗೆ ಸುಲಭ ಮಾಡಿಕೊಡಬಹುದು? ದೀನರಾಗಿರಿ, ಅವರು ನಿಮ್ಮ ಹತ್ತಿರ ಆರಾಮವಾಗಿ ಮಾತಾಡಲು ಅವಕಾಶ ಮಾಡಿಕೊಡಿ, ಕೃತಜ್ಞತೆ ತೋರಿಸಿ. ಅವರು ಕೊಡುವ ಸಹಾಯದಲ್ಲಿ ಯೆಹೋವನ ಪ್ರೀತಿಯನ್ನು ನೋಡಲು ಕಲಿಯಿರಿ. ಇದರಿಂದ ನಿಮಗೇ ಪ್ರಯೋಜನ ಆಗುತ್ತದೆ ಮತ್ತು ಹಿರಿಯರಿಗೂ ಅವರ ಕರ್ತವ್ಯವನ್ನು ಸಂತೋಷದಿಂದ ಮಾಡಲು ಸಾಧ್ಯವಾಗುತ್ತದೆ.

17. ಒಬ್ಬ ಸಹೋದರಿಗೆ ಹಿರಿಯರು ಪ್ರೀತಿಯಿಂದ ಹೇಗೆ ಸಹಾಯ ಮಾಡಿದರು?

17 ಒಬ್ಬ ಸಹೋದರಿಗೆ ಹಿಂದೆ ತನ್ನ ಜೀವನದಲ್ಲಿ ಅನುಭವಿಸಿದ ವಿಷಯಗಳಿಂದಾಗಿ ಯೆಹೋವ ದೇವರನ್ನು ಪ್ರೀತಿಸಲು ಕಷ್ಟವಾಯಿತು. ಅವಳನ್ನು ಖಿನ್ನತೆ ಕಾಡಲು ಆರಂಭಿಸಿತು. ಅವಳು ಹೇಳುವುದು: “ಹಿರಿಯರ ಹತ್ತಿರ ಹೇಳಿಕೊಳ್ಳಬೇಕು ಅಂತ ನನಗೆ ಗೊತ್ತಿತ್ತು. ನನಗೆ ಕೋಪ ಬರುವ ತರ ಅವರು ನನ್ನ ಹತ್ತಿರ ನಡಕೊಳ್ಳಲಿಲ್ಲ, ನನ್ನನ್ನು ಟೀಕಿಸಲಿಲ್ಲ. ಯಾವಾಗಲೂ ಪ್ರೋತ್ಸಾಹಿಸುತ್ತಿದ್ದರು, ಬಲಪಡಿಸುತ್ತಿದ್ದರು. ಪ್ರತಿ ವಾರ ಕೂಟಗಳಾದ ಮೇಲೆ ಅವರಿಗೆ ಎಷ್ಟೇ ಕೆಲಸವಿದ್ದರೂ ಅವರಲ್ಲಿ ಒಬ್ಬರಾದರೂ ನಾನು ಹೇಗಿದ್ದೇನೆ ಎಂದು ಕೇಳುತ್ತಿದ್ದರು. ನನ್ನ ಹಿಂದಿನ ಜೀವನ ನೆನಸಿಕೊಂಡು ನಾನು ದೇವರ ಪ್ರೀತಿಯನ್ನು ಪಡೆಯಲು ಅರ್ಹಳಲ್ಲ ಎಂದು ಅನಿಸುತ್ತಿತ್ತು. ಆದರೆ ಯೆಹೋವ ದೇವರು ಸಭೆಯ ಮೂಲಕ ಮತ್ತು ಹಿರಿಯರ ಮೂಲಕ ‘ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಪುನಃ ಪುನಃ ತೋರಿಸಿಕೊಟ್ಟನು. ನಾನು ಯಾವತ್ತೂ ಆತನ ಮನಸ್ಸಿಗೆ ನೋವು ತರುವ ರೀತಿ ನಡಕೊಳ್ಳಬಾರದೆಂದು ಪ್ರಾರ್ಥಿಸುತ್ತೇನೆ.”

ಶಿಸ್ತಿಗಿಂತ ನೋವು ತರುವ ವಿಷಯ

18, 19. (ಎ) ಶಿಸ್ತಿನಿಂದ ಸಿಗುವ ನೋವಿಗಿಂತ ಹೆಚ್ಚು ನೋವನ್ನು ಯಾವುದು ಕೊಡುತ್ತದೆ? (ಬಿ) ಉದಾಹರಣೆ ಕೊಡಿ.

18 ನಮಗೆ ಶಿಸ್ತು ಸಿಕ್ಕಿದಾಗ ನೋವಾಗಬಹುದು. ಆದರೆ ಶಿಸ್ತನ್ನು ತಳ್ಳಿಹಾಕುವುದರಿಂದ ಅನುಭವಿಸಬೇಕಾಗಿರುವ ನೋವು ಅದಕ್ಕಿಂತ ಹೆಚ್ಚು. (ಇಬ್ರಿ. 12:11) ಕಾಯಿನ ಮತ್ತು ಚಿದ್ಕೀಯನ ಕೆಟ್ಟ ಉದಾಹರಣೆಯಿಂದ ನಾವು ಪಾಠ ಕಲಿಯಬಹುದು. ಕಾಯಿನ ತನ್ನ ತಮ್ಮನನ್ನು ದ್ವೇಷಿಸುತ್ತಿದ್ದಾನೆ ಮತ್ತು ಕೊಲ್ಲಬೇಕೆಂದಿದ್ದಾನೆ ಎಂದು ದೇವರಿಗೆ ಗೊತ್ತಾದಾಗ, “ಯಾಕೆ ಕೋಪಿಸಿಕೊಂಡಿ? ನಿನ್ನ ತಲೆ ಯಾಕೆ ಬೊಗ್ಗಿತು? ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ; ಅಲ್ಲದಿದ್ದರೆ ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು; ಆದರೂ ನೀನು ಅದನ್ನು ವಶಮಾಡಿಕೊಳ್ಳಬೇಕು” ಎಂದನು. (ಆದಿ. 4:6,7) ಯೆಹೋವ ದೇವರು ಕೊಟ್ಟ ಶಿಸ್ತನ್ನು ಕಾಯಿನ ತಳ್ಳಿಹಾಕಿ ತಮ್ಮನನ್ನು ಕೊಂದುಹಾಕಿದನು. ನಂತರ ‘ಮಾಡಿದ್ದುಣ್ಣೋ ಮಾರಾಯ’ ಅನ್ನುವ ರೀತಿ ಅವನ ಜೀವನವಿಡೀ ತೊಂದರೆ ಅನುಭವಿಸಿದನು. (ಆದಿ. 4:11, 12) ಕಾಯಿನ ದೇವರ ಮಾತಿಗೆ ಕಿವಿಗೊಟ್ಟಿದ್ದರೆ ಇಷ್ಟು ನೋವು ತಿನ್ನುವ ಆವಶ್ಯಕತೆ ಇರಲಿಲ್ಲ.

19 ಚಿದ್ಕೀಯ ಒಬ್ಬ ದುರ್ಬಲ ದುಷ್ಟ ರಾಜನಾಗಿದ್ದ. ಅವನ ಆಳ್ವಿಕೆಯ ಸಮಯದಲ್ಲಿ ಯೆರೂಸಲೇಮಿನ ಪರಿಸ್ಥಿತಿ ಶೋಚನೀಯವಾಗಿತ್ತು. ಚಿದ್ಕೀಯ ಬದಲಾಗಬೇಕೆಂದು ಪ್ರವಾದಿಯಾದ ಯೆರೆಮೀಯ ಎಷ್ಟು ಸಾರಿ ಹೇಳಿದರೂ ರಾಜ ಆ ಶಿಸ್ತನ್ನು ಸ್ವೀಕರಿಸಲಿಲ್ಲ. ಇದರ ಪರಿಣಾಮ ಘೋರವಾಗಿತ್ತು. (ಯೆರೆ. 52:8-11) ನಾವಿಂಥ ನೋವನ್ನು ಅನುಭವಿಸಬೇಕೆಂದು ಯೆಹೋವನು ಬಯಸುವುದಿಲ್ಲ.—ಯೆಶಾಯ 48:17, 18 ಓದಿ.

20. (ಎ) ಶಿಸ್ತನ್ನು ತಳ್ಳಿಹಾಕುವವರಿಗೆ ಏನಾಗುತ್ತದೆ? (ಬಿ) ಶಿಸ್ತನ್ನು ಸ್ವೀಕರಿಸುವವರಿಗೆ ಏನು ಸಿಗುತ್ತದೆ?

20 ಇಂದು ತುಂಬ ಜನರು ದೇವರು ಕೊಡುವ ಶಿಸ್ತನ್ನು ತಮಾಷೆ ಮಾಡಿ ತಳ್ಳಿಹಾಕುತ್ತಾರೆ. ಆದರೆ ದೇವರು ಕೊಡುವ ಶಿಸ್ತನ್ನು ತಳ್ಳಿಹಾಕುವವರು ಘೋರವಾದ ಪರಿಣಾಮಗಳನ್ನು ಅನುಭವಿಸುವ ಸಮಯ ಹತ್ತಿರವಾಗುತ್ತಿದೆ. (ಜ್ಞಾನೋ. 1:24-31) ಆದ್ದರಿಂದ ನಾವು ಶಿಸ್ತನ್ನು ಸ್ವೀಕರಿಸಿ ವಿವೇಕಿಗಳಾಗೋಣ. ಜ್ಞಾನೋಕ್ತಿ 4:13 ಕೊಡುವ ಸಲಹೆಯನ್ನು ಮರೆಯಬೇಡಿ. ಅದು ಹೇಳುವುದು: “ಸದುಪದೇಶವನ್ನು ಹಿಡಿ, ಸಡಿಲಬಿಡಬೇಡ; ಅದನ್ನು ಕಾಪಾಡಿಕೋ, ಅದೇ ನಿನ್ನ ಜೀವ.”