ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಸ್ತು—ಯೆಹೋವನ ಪ್ರೀತಿಯ ರುಜುವಾತು

ಶಿಸ್ತು—ಯೆಹೋವನ ಪ್ರೀತಿಯ ರುಜುವಾತು

“ಯೆಹೋವನು ಯಾರನ್ನು ಪ್ರೀತಿಸುತ್ತಾನೋ ಅವರಿಗೇ ಶಿಸ್ತನ್ನು ನೀಡುತ್ತಾನೆ.”—ಇಬ್ರಿ. 12:6.

ಗೀತೆಗಳು: 125, 117

1. ಬೈಬಲಿನಲ್ಲಿ ಶಿಸ್ತು ಎಂಬ ಪದವನ್ನು ಯಾವ ಅರ್ಥದಲ್ಲಿ ಉಪಯೋಗಿಸಲಾಗಿದೆ?

“ಶಿಸ್ತು” ಎಂಬ ಪದವನ್ನು ಕೇಳಿದ ಕೂಡಲೆ ನಿಮ್ಮ ಮನಸ್ಸಿಗೆ ಏನು ಬರುತ್ತದೆ? ಅನೇಕರು ಶಿಕ್ಷೆ ಎಂದು ಯೋಚಿಸುತ್ತಾರೆ. ಆದರೆ ಶಿಸ್ತು ಅನ್ನುವುದು ಶಿಕ್ಷೆ ಮಾತ್ರ ಆಗಿರುವುದಿಲ್ಲ. ಬೈಬಲಿನಲ್ಲಿ “ಶಿಕ್ಷೆ” ಎಂದು ಭಾಷಾಂತರವಾಗಿರುವ ಪದವನ್ನು “ಶಿಸ್ತು” “ಉಪದೇಶ” ಎಂದು ಸಹ ಭಾಷಾಂತರಿಸಬಹುದು. ಇಂಥ ಶಿಸ್ತು ನಮಗೆ ಒಳ್ಳೇದು. ದೇವರು ನಮ್ಮನ್ನು ಪ್ರೀತಿಸುವುದರಿಂದ ಮತ್ತು ನಾವು ಸದಾಕಾಲ ಸುಖವಾಗಿ ಬಾಳಬೇಕೆಂದು ಆತನು ಇಷ್ಟಪಡುವುದರಿಂದ ನಮಗೆ ಶಿಸ್ತು ಕೊಡುತ್ತಾನೆ. (ಇಬ್ರಿ. 12:6) ಆದ್ದರಿಂದಲೇ ಬೈಬಲು ಶಿಸ್ತನ್ನು ಜ್ಞಾನ, ವಿವೇಕ, ಪ್ರೀತಿ ಮತ್ತು ಜೀವದೊಂದಿಗೆ ಸೇರಿಸಿ ಮಾತಾಡುತ್ತದೆ. (ಜ್ಞಾನೋ. 1:2-7; 4:11-13) ದೇವರು ಕೊಡುವ ಶಿಸ್ತಿನಲ್ಲಿ ಕೆಲವೊಮ್ಮೆ ಶಿಕ್ಷೆ ಕೂಡ ಒಳಗೂಡಿರುತ್ತದೆ. ಆದರೆ ಆತನು ಇದನ್ನೆಂದೂ ಕ್ರೂರವಾಗಿ, ನಮಗೆ ಹಾನಿ ತರುವ ರೀತಿಯಲ್ಲಿ ಕೊಡುವುದಿಲ್ಲ. “ಶಿಸ್ತು” ಎಂಬ ಪದಕ್ಕೆ ಮುಖ್ಯವಾಗಿ ಶಿಕ್ಷಣ ಎಂಬ ಅರ್ಥ ಇದೆ. ಇದು ಒಬ್ಬ ತಂದೆ ತನ್ನ ಮುದ್ದು ಮಗನನ್ನು ಬೆಳೆಸುವಾಗ ಕೊಡುವ ಉಪದೇಶದ ತರ ಇರುತ್ತದೆ.

2, 3. ಶಿಸ್ತಿನಲ್ಲಿ ಬುದ್ಧಿ ಹೇಳುವುದು ಮತ್ತು ಶಿಕ್ಷೆ ಕೊಡುವುದು ಕೂಡ ಹೇಗೆ ಸೇರಿರಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

2 ಈ ಉದಾಹರಣೆ ಬಗ್ಗೆ ಯೋಚಿಸಿ. ಜಾನಿ ಎಂಬ ಹುಡುಗ ಮನೆಯ ಒಳಗೆ ಆಟ ಆಡುತ್ತಿದ್ದ. ಆಗ ಅವನ ಅಮ್ಮ “ಜಾನಿ, ಮನೆ ಒಳಗೆ ಬಾಲಲ್ಲಿ ಆಟ ಆಡಬಾರ್ದು ಅಂತ ನಿನಗೆ ಗೊತ್ತು ತಾನೆ. ಏನಾದರೂ ಬಿದ್ದು ಒಡೆದುಹೋಗಬಹುದು” ಎಂದರು. ಜಾನಿ ಅಮ್ಮನ ಮಾತನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಒಂದು ವಾಸ್‌ಗೆ ಬಾಲ್‌ ತಾಗಿ ಕೆಳಗೆ ಬಿದ್ದು ಒಡೆದುಹೋಯಿತು. ಅಮ್ಮ ಜಾನಿಗೆ ಯಾವ ಶಿಸ್ತು ಕೊಟ್ಟರು? ಅವರು ಮೊದಲು ಬುದ್ಧಿಹೇಳಿದರು. ಅವನು ಮಾಡಿದ್ದು ಯಾಕೆ ತಪ್ಪು ಎಂದು ಅವನಿಗೆ ಅರ್ಥಮಾಡಿಸಿದರು. ಅಪ್ಪಅಮ್ಮನ ಮಾತು ಕೇಳುವುದು ಒಳ್ಳೇದು, ಅದೆಷ್ಟು ಪ್ರಾಮುಖ್ಯ ಹಾಗೂ ಅವರು ಹೇಳುವ ವಿಷಯಗಳು ಅವನ ಕೈಯಲ್ಲಿ ಮಾಡಕ್ಕಾಗದೇ ಇರುವಂಥ ವಿಷಯಗಳಲ್ಲ ಎಂದು ವಿವರಿಸಿದರು. ಆಮೇಲೆ ಜಾನಿ ಪಾಠ ಕಲಿಯಬೇಕೆಂಬ ಉದ್ದೇಶದಿಂದ ಅವನಿಗೆ ಒಂದು ಶಿಕ್ಷೆಯನ್ನೂ ಕೊಟ್ಟರು. ಅದೇನೆಂದರೆ ಸ್ವಲ್ಪ ಸಮಯದ ವರೆಗೆ ಅವನಿಗೆ ಬಾಲನ್ನು ಕೊಡಲಿಲ್ಲ. ಇದರಿಂದ ಜಾನಿಗೆ ಕಷ್ಟ ಆಯಿತು. ಆದರೆ ಅಪ್ಪಅಮ್ಮನ ಮಾತು ಕೇಳದೇ ಹೋದರೆ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ಅವನು ಅರ್ಥಮಾಡಿಕೊಂಡನು.

3 ಕ್ರೈಸ್ತರಾಗಿರುವ ನಾವು ದೇವರ ಮನೆವಾರ್ತೆಯ ಭಾಗವಾಗಿದ್ದೇವೆ. (1 ತಿಮೊ. 3:15) ನಮ್ಮ ತಂದೆಯಾದ ಯೆಹೋವನಿಗೆ ಯಾವುದು ಸರಿ, ಯಾವುದು ತಪ್ಪು ಎಂದು ತೀರ್ಮಾನಿಸುವ ಹಕ್ಕಿದೆ ಮತ್ತು ನಾವು ತಪ್ಪು ಮಾಡಿದರೆ ಶಿಕ್ಷಿಸುವ ಅಧಿಕಾರವೂ ಇದೆ. ನಮ್ಮ ವರ್ತನೆಯಿಂದ ಕೆಟ್ಟ ಪರಿಣಾಮಗಳು ಉಂಟಾದರೆ, ಯೆಹೋವನ ಮಾತಿಗೆ ಕಿವಿಗೊಡುವುದು ಎಷ್ಟು ಪ್ರಾಮುಖ್ಯ ಎಂದು ಅರ್ಥವಾಗುತ್ತದೆ. ಇದು ಕೂಡ ಯೆಹೋವನು ಪ್ರೀತಿಯಿಂದ ಶಿಸ್ತು ಕೊಡುವ ಒಂದು ವಿಧವಾಗಿದೆ. (ಗಲಾ. 6:7) ದೇವರು ನಮ್ಮನ್ನು ತುಂಬ ಪ್ರೀತಿಸುತ್ತಾನೆ ಮತ್ತು ನಾವು ಕಷ್ಟಪಡುವುದು ಆತನಿಗೆ ಇಷ್ಟವಾಗಲ್ಲ.—1 ಪೇತ್ರ 5:6, 7.

4. (ಎ) ನಾವು ಬೇರೆಯವರಿಗೆ ಹೇಗೆ ತರಬೇತಿ ಕೊಡಬೇಕೆಂದು ಯೆಹೋವನು ಬಯಸುತ್ತಾನೆ? (ಬಿ) ನಾವು ಈ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

4 ಬೈಬಲಿನ ಮೇಲೆ ಆಧರಿಸಿ ನಿಮ್ಮ ಮಕ್ಕಳಿಗೆ ಅಥವಾ ಬೈಬಲ್‌ ವಿದ್ಯಾರ್ಥಿಗೆ ಶಿಸ್ತು ಕೊಟ್ಟರೆ ಅವರು ಮುಂದೆ ಕ್ರಿಸ್ತನ ಹಿಂಬಾಲಕರಾಗಲು ಸಾಧ್ಯವಾಗುತ್ತದೆ. ಯಾವುದು ಸರಿ ಎಂದು ನಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ಕಲಿಸಲು ನಾವು ಬೈಬಲನ್ನು ಉಪಯೋಗಿಸುತ್ತೇವೆ. ಹೀಗೆ ಅವರು ‘ಯೇಸು ಆಜ್ಞಾಪಿಸಿದ ಎಲ್ಲ ವಿಷಯಗಳನ್ನು’ ಅರ್ಥಮಾಡಿಕೊಂಡು ಅದರಂತೆ ನಡೆಯಲು ಸಾಧ್ಯವಾಗುತ್ತದೆ. (ಮತ್ತಾ. 28:19, 20; 2 ತಿಮೊ. 3:16) ನಾವು ಈ ರೀತಿ ತರಬೇತಿ ಕೊಡಬೇಕೆಂದು ಯೆಹೋವನು ಬಯಸುತ್ತಾನೆ. ಇದರಿಂದ ನಮ್ಮ ವಿದ್ಯಾರ್ಥಿಗಳು ತರಬೇತಿ ಹೊಂದಿ ಬೇರೆಯವರಿಗೂ ಕಲಿಸಲು ತಯಾರಾಗುತ್ತಾರೆ. (ತೀತ 2:11-14 ಓದಿ.) ಈಗ ನಾವು ಮೂರು ಪ್ರಾಮುಖ್ಯ ಪ್ರಶ್ನೆಗಳನ್ನು ಚರ್ಚಿಸೋಣ: (1) ದೇವರು ಕೊಡುವ ಶಿಸ್ತು ಆತನ ಪ್ರೀತಿಯ ರುಜುವಾತಾಗಿದೆ ಹೇಗೆ? (2) ದೇವರಿಂದ ಶಿಸ್ತು ಪಡೆದುಕೊಂಡವರ ಉದಾಹರಣೆಯಿಂದ ನಾವೇನು ಕಲಿಯಬಹುದು? (3) ಯೆಹೋವನು ಮತ್ತು ಆತನ ಮಗನು ಶಿಸ್ತು ಕೊಡುವ ವಿಧವನ್ನು ನಾವು ಹೇಗೆ ಅನುಕರಿಸಬಹುದು?

ದೇವರು ಪ್ರೀತಿಯಿಂದ ಶಿಸ್ತು ಕೊಡುತ್ತಾನೆ

5. ಯೆಹೋವನಿಗೆ ನಮ್ಮ ಮೇಲೆ ಪ್ರೀತಿ ಇರುವುದರಿಂದಲೇ ಶಿಸ್ತು ಕೊಡುತ್ತಾನೆಂದು ಹೇಗೆ ಹೇಳಬಹುದು?

5 ಯೆಹೋವನು ನಮ್ಮನ್ನು ಪ್ರೀತಿಸುವುದರಿಂದ ನಮ್ಮನ್ನು ತಿದ್ದುತ್ತಾನೆ, ಉಪದೇಶಿಸುತ್ತಾನೆ ಮತ್ತು ತರಬೇತಿ ಕೊಡುತ್ತಾನೆ. ನಾವು ಆತನಿಗೆ ಹತ್ತಿರವಾಗಿದ್ದು ನಿತ್ಯಜೀವ ಪಡೆಯಬೇಕೆಂದು ಬಯಸುತ್ತಾನೆ. (1 ಯೋಹಾ. 4:16) ಆತನು ನಮಗೆ ಯಾವತ್ತೂ ಅವಮಾನ ಮಾಡಲ್ಲ ಅಥವಾ ನಮ್ಮಲ್ಲಿ ಅಯೋಗ್ಯರು ಎಂಬ ಭಾವನೆ ಹುಟ್ಟಿಸಲ್ಲ. (ಜ್ಞಾನೋ. 12:18) ಯೆಹೋವನು ನಮ್ಮಲ್ಲಿರುವ ಒಳ್ಳೇ ಗುಣಗಳ ಕಡೆ ಗಮನ ಕೊಡುತ್ತಾನೆ ಮತ್ತು ನಮ್ಮ ಇಚ್ಛಾಸ್ವಾತಂತ್ರ್ಯವನ್ನು ಉಪಯೋಗಿಸಲು ಬಿಡುತ್ತಾನೆ. ನೀವು ಬೈಬಲಿನಿಂದ, ನಮ್ಮ ಪ್ರಕಾಶನಗಳಿಂದ, ಹೆತ್ತವರಿಂದ ಅಥವಾ ಹಿರಿಯರಿಂದ ಪಡೆಯುವ ಶಿಸ್ತಿನಲ್ಲಿ ದೇವರ ಪ್ರೀತಿಯ ರುಜುವಾತನ್ನು ನೋಡುತ್ತೀರಾ? ನಾವೇನಾದರೂ ತಪ್ಪು ಮಾಡಿದ್ದೇವೆ ಎಂದು ನಮಗೆ ಗೊತ್ತಾಗುವ ಮೊದಲೇ ಹಿರಿಯರು ಪ್ರೀತಿಯಿಂದ ಮತ್ತು ಸೌಮ್ಯಭಾವದಿಂದ ನಮ್ಮನ್ನು ತಿದ್ದಲು ಪ್ರಯತ್ನಿಸುತ್ತಾರೆ. ಹೀಗೆ ಯೆಹೋವನು ನಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ಅವರು ಅನುಕರಿಸುತ್ತಾರೆ.—ಗಲಾ. 6:1.

6. ಶಿಸ್ತು ಸಿಕ್ಕಿದ ವ್ಯಕ್ತಿ ಸುಯೋಗಗಳನ್ನು ಕಳೆದುಕೊಳ್ಳುವುದಾದರೂ ಅದು ಹೇಗೆ ದೇವರ ಪ್ರೀತಿಯ ರುಜುವಾತಾಗಿರಲು ಸಾಧ್ಯ?

6 ಕೆಲವೊಮ್ಮೆ ಶಿಸ್ತಿನಲ್ಲಿ ಬುದ್ಧಿ-ಉಪದೇಶ ಕೊಡುವುದಕ್ಕಿಂತ ಹೆಚ್ಚಿನದ್ದು ಒಳಗೂಡಿರುತ್ತದೆ. ಯಾರಾದರೂ ಗಂಭೀರ ಪಾಪ ಮಾಡಿದರೆ ಸಭೆಯಲ್ಲಿ ಅವರು ಕೆಲವು ಸುಯೋಗಗಳನ್ನು ಕಳೆದುಕೊಳ್ಳಬಹುದು. ಇದು ಕೂಡ ದೇವರ ಪ್ರೀತಿಯ ರುಜುವಾತಾಗಿದೆ. ಉದಾಹರಣೆಗೆ, ಬೈಬಲ್‌ ಅಧ್ಯಯನ ಮಾಡಲು, ಧ್ಯಾನಿಸಲು ಮತ್ತು ಪ್ರಾರ್ಥಿಸಲು ಹೆಚ್ಚು ಸಮಯ ಮಾಡುವುದು ಎಷ್ಟು ಪ್ರಾಮುಖ್ಯ ಎಂದು ಆ ವ್ಯಕ್ತಿ ಅರ್ಥಮಾಡಿಕೊಳ್ಳಲು ಶಿಸ್ತು ಸಹಾಯ ಮಾಡಬಹುದು. ಈ ವಿಷಯಗಳನ್ನು ಮಾಡಿದರೆ ಯೆಹೋವನೊಂದಿಗಿರುವ ಸಂಬಂಧ ಬಲವಾಗುತ್ತದೆ. (ಕೀರ್ತ. 19:7) ಸಮಯ ಹೋದಂತೆ ಕಳೆದುಕೊಂಡ ಸುಯೋಗಗಳನ್ನೂ ಪಡಕೊಳ್ಳಬಹುದು. ಒಬ್ಬ ವ್ಯಕ್ತಿಯನ್ನು ಬಹಿಷ್ಕಾರ ಮಾಡಲಾದರೂ ಅದು ಯೆಹೋವನ ಪ್ರೀತಿಯನ್ನು ತೋರಿಸುತ್ತದೆ. ಹೇಗೆಂದರೆ ಇದರಿಂದ ಸಭೆಯನ್ನು ಕೆಟ್ಟ ಪ್ರಭಾವಗಳಿಂದ ಸಂರಕ್ಷಿಸಲು ಸಾಧ್ಯವಾಗುತ್ತದೆ. (1 ಕೊರಿಂ. 5:6, 7, 11) ಯೆಹೋವನು ಕೊಡುವ ಶಿಸ್ತು ಯಾವಾಗಲೂ ನ್ಯಾಯವಾಗಿರುವುದರಿಂದ ಬಹಿಷ್ಕಾರವಾದ ವ್ಯಕ್ತಿ ತಾನು ಮಾಡಿದ್ದು ತಪ್ಪು ಎಂದು ಅರ್ಥಮಾಡಿಕೊಳ್ಳುತ್ತಾನೆ. ಇದನ್ನು ಅರ್ಥಮಾಡಿಕೊಂಡ ವ್ಯಕ್ತಿ ತನ್ನನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತಾನೆ.—ಅ. ಕಾ. 3:19.

ಯೆಹೋವನ ಶಿಸ್ತಿನಿಂದ ಪ್ರಯೋಜನ ಇದೆ

7. (ಎ) ಶೆಬ್ನನು ಯಾರು? (ಬಿ) ಅವನಲ್ಲಿ ಯಾವ ಕೆಟ್ಟ ಗುಣ ಬೆಳೆಯಿತು?

7 ಶಿಸ್ತು ಎಷ್ಟು ಮುಖ್ಯ ಎಂದು ಅರ್ಥಮಾಡಿಕೊಳ್ಳಲು ಯೆಹೋವನಿಂದ ಶಿಸ್ತನ್ನು ಪಡೆದ ಇಬ್ಬರ ಉದಾಹರಣೆಯನ್ನು ಚರ್ಚಿಸೋಣ. ಇದರಲ್ಲಿ ಒಬ್ಬನು ರಾಜ ಹಿಜ್ಕೀಯನ ಕಾಲದಲ್ಲಿ ಜೀವಿಸಿದ್ದ ಇಸ್ರಾಯೇಲ್ಯನಾದ ಶೆಬ್ನ. ಇನ್ನೊಬ್ಬರು ನಮ್ಮ ಕಾಲದ ಒಬ್ಬ ಸಹೋದರ ಗ್ರೇಹಮ್‌. ಶೆಬ್ನನು ರಾಜ ಹಿಜ್ಕೀಯನ ‘ಅರಮನೆಯ ಮೇಲ್ವಿಚಾರಕನಾಗಿದ್ದ.’ ಅವನಿಗೆ ತುಂಬ ಅಧಿಕಾರ ಇತ್ತು. (ಯೆಶಾ. 22:15) ಆದರೆ ಶೆಬ್ನ ಮುಂದೆ ಅಹಂಕಾರಿಯಾದನು. ತಾನೊಬ್ಬ ದೊಡ್ಡ ವ್ಯಕ್ತಿ ಎಂದು ಬೇರೆಯವರು ನೋಡಬೇಕೆಂದು ಬಯಸಿದನು. ತನಗೇ ಅಂತ ದುಬಾರಿಯಾದ ಗೋರಿಯನ್ನು ಮಾಡಿಸಿಕೊಂಡನು ಮತ್ತು ‘ವೈಭವಯುತ ರಥಗಳಲ್ಲಿ’ ಓಡಾಡುತ್ತಿದ್ದನು.—ಯೆಶಾ. 22:16-18.

ನಾವು ದೀನರಾಗಿದ್ದು ನಮ್ಮ ಮನೋಭಾವವನ್ನು ಬದಲಾಯಿಸಿಕೊಂಡರೆ ದೇವರು ಆಶೀರ್ವದಿಸುತ್ತಾನೆ (ಪ್ಯಾರ 8-10 ನೋಡಿ)

8. (ಎ) ಯೆಹೋವನು ಶೆಬ್ನನಿಗೆ ಯಾವ ಶಿಸ್ತು ಕೊಟ್ಟನು? (ಬಿ) ಇದರಿಂದ ಅವನಿಗೆ ಪ್ರಯೋಜನವಾಯಿತು ಎಂದು ಹೇಗೆ ಹೇಳಬಹುದು?

8 ಶೆಬ್ನನು ದೊಡ್ಡ ಹೆಸರು ಮಾಡಿಕೊಳ್ಳಲು ಪ್ರಯತ್ನಿಸಿದ್ದರಿಂದ ದೇವರು ಅವನ ಸ್ಥಾನವನ್ನು ಎಲ್ಯಾಕೀಮ ಎಂಬ ವ್ಯಕ್ತಿಗೆ ಕೊಟ್ಟನು. (ಯೆಶಾ. 22:19-21) ಆ ಸಮಯದಲ್ಲಿ, ಅಶ್ಶೂರದ ರಾಜನಾದ ಸನ್ಹೇರೀಬನು ಯೆರೂಸಲೇಮಿನ ಮೇಲೆ ದಾಳಿಮಾಡಲು ಯೋಚಿಸುತ್ತಿದ್ದನು. ಸ್ವಲ್ಪ ಸಮಯದ ನಂತರ ಸನ್ಹೇರೀಬನು ಕೆಲವು ಅಧಿಕಾರಿಗಳನ್ನು ಒಂದು ದೊಡ್ಡ ಸೈನ್ಯದೊಂದಿಗೆ ಕಳುಹಿಸಿ ಯೆಹೂದ್ಯರನ್ನು ಹೆದರಿಸಲು ಮತ್ತು ರಾಜ ಹಿಜ್ಕೀಯನನ್ನು ಶರಣಾಗುವಂತೆ ಮಾಡಲು ಪ್ರಯತ್ನಿಸಿದನು. (2 ಅರ. 18:17-25) ಹಿಜ್ಕೀಯನು ಆ ಅಧಿಕಾರಿಗಳ ಹತ್ತಿರ ಮಾತಾಡಲು ಎಲ್ಯಾಕೀಮ ಮತ್ತು ಇನ್ನಿಬ್ಬರು ಪುರುಷರನ್ನು ಕಳುಹಿಸಿದನು. ಇವರಲ್ಲಿ ಒಬ್ಬನು ಶೆಬ್ನ. ಅವನೀಗ ಕಾರ್ಯದರ್ಶಿಯಾಗಿದ್ದ. ಶೆಬ್ನ ದೀನತೆ ಕಲಿತಿದ್ದನು ಮತ್ತು ತನ್ನ ಬಗ್ಗೆ ಯೋಚಿಸುತ್ತಾ ಕೊರಗುತ್ತಿರಲಿಲ್ಲ ಎಂದು ಇದರಿಂದ ಗೊತ್ತಾಗುತ್ತದೆ. ಮೊದಲಿದ್ದ ಸ್ಥಾನಕ್ಕಿಂತ ಚಿಕ್ಕ ಸ್ಥಾನವನ್ನು ಸ್ವೀಕರಿಸಿದ್ದನು. ನಾವು ಶೆಬ್ನನಿಗಾದ ವಿಷಯದಿಂದ ಮೂರು ವಿಷಯಗಳನ್ನು ಕಲಿಯಬಹುದು.

9-11. (ಎ) ಶೆಬ್ನನಿಗಾದ ಅನುಭವದಿಂದ ನಾವೇನು ಕಲಿಯಬಹುದು? (ಬಿ) ಯೆಹೋವನು ಶೆಬ್ನನೊಂದಿಗೆ ನಡಕೊಂಡ ವಿಧದ ಬಗ್ಗೆ ನಿಮಗೆ ಹೇಗನಿಸುತ್ತದೆ?

9 ಮೊದಲನೇದಾಗಿ, “ಗರ್ವದಿಂದ ಭಂಗ; ಉಬ್ಬಿನಿಂದ ದೊಬ್ಬು” ಎನ್ನುವ ಮಾತಿನಂತೆ ಶೆಬ್ನ ಅಹಂಕಾರ ತೋರಿಸಿದ್ದರಿಂದ ತನ್ನ ಸ್ಥಾನವನ್ನು ಕಳಕೊಂಡನು. (ಜ್ಞಾನೋ. 16:18) ನಮಗೆ ಸಭೆಯಲ್ಲಿ ವಿಶೇಷ ಸುಯೋಗಗಳು ಇರಬಹುದು ಮತ್ತು ಬೇರೆಯವರು ನಮ್ಮನ್ನು ದೊಡ್ಡ ವ್ಯಕ್ತಿ ತರ ನೋಡಬಹುದು. ಇಂಥ ಸಮಯದಲ್ಲಿ ನಾವು ದೀನರಾಗಿರುತ್ತೇವಾ? ನಮ್ಮಲ್ಲಿರುವ ಯಾವುದೇ ಸಾಮರ್ಥ್ಯ ಮತ್ತು ನಾವು ಸಾಧಿಸಿರುವ ಯಾವುದೇ ವಿಷಯ ಯೆಹೋವನ ಸಹಾಯವಿಲ್ಲದೆ ಆಗಲಿಲ್ಲ ಎಂದು ನಾವು ಸದಾ ಮನಸ್ಸಿನಲ್ಲಿ ಇಡುತ್ತೇವಾ? (1 ಕೊರಿಂ. 4:7) ಅಪೊಸ್ತಲ ಪೌಲನು ಎಚ್ಚರಿಸಿದ್ದು: “ನಾನು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಹೇಳುವುದೇನೆಂದರೆ, ನಿಮ್ಮಲ್ಲಿ ಯಾವನೂ ತನ್ನ ಕುರಿತು ಅಗತ್ಯಕ್ಕಿಂತ ಹೆಚ್ಚಾಗಿ ಭಾವಿಸಿಕೊಳ್ಳಬಾರದು; . . . ಸ್ವಸ್ಥಬುದ್ಧಿಯುಳ್ಳವನಾಗಿರುವಂತೆ ಭಾವಿಸಿಕೊಳ್ಳಬೇಕು.”—ರೋಮ. 12:3.

10 ಎರಡನೇದಾಗಿ, ಯೆಹೋವನು ಶೆಬ್ನನಿಗೆ ಕೊಟ್ಟ ಬಲವಾದ ತಿದ್ದುಪಾಟಿನಿಂದ ಅವನು ಬದಲಾಗುತ್ತಾನೆ ಎಂಬ ನಂಬಿಕೆ ಯೆಹೋವನಿಗೆ ಇದ್ದಿರಬೇಕು ಎಂದು ತೋರುತ್ತದೆ. (ಜ್ಞಾನೋ. 3:11, 12) ಒಂದು ವಿಶೇಷ ಸುಯೋಗವನ್ನು ಕಳೆದುಕೊಂಡಿರುವವರಿಗೆ ಇದರಲ್ಲಿ ಒಂದು ಪಾಠವಿದೆ. ನಡೆದ ವಿಷಯದ ಬಗ್ಗೆ ಕೋಪತಾಪಪಡುವ ಬದಲು ಯೆಹೋವನಿಗೆ ತಮ್ಮಿಂದ ಏನು ಮಾಡಲು ಸಾಧ್ಯವೋ ಅದನ್ನು ಚೆನ್ನಾಗಿ ಮಾಡಿಕೊಂಡು ಹೋಗಬಹುದು. ತಮಗೆ ಸಿಕ್ಕಿದ ಶಿಸ್ತನ್ನು ಯೆಹೋವನ ಪ್ರೀತಿಯ ಪುರಾವೆಯಾಗಿ ನೋಡಬಹುದು. ದೀನರಾಗಿ ಉಳಿದರೆ ಯೆಹೋವನು ಖಂಡಿತ ಆಶೀರ್ವದಿಸುತ್ತಾನೆ ಅನ್ನುವುದನ್ನು ಮರೆಯಬಾರದು. (1 ಪೇತ್ರ 5:6, 7 ಓದಿ.) ಪ್ರೀತಿಯಿಂದ ಶಿಸ್ತು ಕೊಡುವ ಮೂಲಕ ಯೆಹೋವನು ನಮ್ಮನ್ನು ರೂಪಿಸಲು ಪ್ರಯತ್ನಿಸುತ್ತಾನೆ. ನಾವು ದೀನರಾಗಿದ್ದು ಯೆಹೋವನು ನಮ್ಮನ್ನು ರೂಪಿಸುವಂತೆ ಬಿಟ್ಟುಕೊಡೋಣವೇ?

11 ಮೂರನೇದಾಗಿ, ಯೆಹೋವನು ಶೆಬ್ನನೊಂದಿಗೆ ನಡಕೊಂಡ ವಿಧದಿಂದ ಒಂದು ಪ್ರಾಮುಖ್ಯ ಪಾಠವನ್ನು ನಾವು ಕಲಿಯಬಹುದು. ಯೆಹೋವನು ಶಿಸ್ತು ಕೊಡುವ ವಿಧವನ್ನು ನೋಡುವಾಗ ಆತನು ಪಾಪವನ್ನು ದ್ವೇಷಿಸುತ್ತಾನೆ ಹೊರತು ಪಾಪ ಮಾಡಿದವನನ್ನು ದ್ವೇಷಿಸುವುದಿಲ್ಲ ಎಂದು ಗೊತ್ತಾಗುತ್ತದೆ. ಆತನು ಜನರಲ್ಲಿರುವ ಒಳ್ಳೇ ವಿಷಯಗಳನ್ನು ನೋಡುತ್ತಾನೆ. ನೀವು ಹೆತ್ತವರಾಗಿರುವಲ್ಲಿ ಅಥವಾ ಹಿರಿಯರಾಗಿರುವಲ್ಲಿ, ಯೆಹೋವನು ಶಿಸ್ತು ಕೊಡುವ ವಿಧವನ್ನು ಅನುಕರಿಸುವಿರಾ?—ಯೂದ 22, 23.

12-14. (ಎ) ಯೆಹೋವನಿಂದ ಶಿಸ್ತು ಸಿಕ್ಕಿದಾಗ ಕೆಲವರು ಹೇಗೆ ಪ್ರತಿಕ್ರಿಯಿಸುತ್ತಾರೆ? (ಬಿ) ಒಬ್ಬ ಸಹೋದರನು ತನ್ನ ಮನೋಭಾವವನ್ನು ಬದಲಾಯಿಸಿಕೊಳ್ಳಲು ದೇವರ ವಾಕ್ಯ ಹೇಗೆ ಸಹಾಯ ಮಾಡಿತು ಮತ್ತು ಅದರ ಫಲಿತಾಂಶ ಏನಾಗಿತ್ತು?

12 ಕೆಲವರಿಗೆ ಶಿಸ್ತು ಸಿಕ್ಕಿದಾಗ ಅವರು ಮನಸ್ಸಿಗೆ ತುಂಬ ನೋವು ಮಾಡಿಕೊಂಡು ದೇವರಿಂದ ಮತ್ತು ಸಭೆಯಿಂದ ದೂರಹೋಗುತ್ತಾರೆ ಅನ್ನುವುದು ದುಃಖದ ವಿಷಯ. (ಇಬ್ರಿ. 3:12, 13) ಹಾಗಾದರೆ ಇಂಥವರ ವಿಷಯದಲ್ಲಿ ಏನೂ ಮಾಡಕ್ಕಾಗಲ್ಲ ಅಂತನಾ? ಇಲ್ಲ. ಗ್ರೇಹಮ್‌ ಅವರ ಉದಾಹರಣೆ ನೋಡಿ. ಅವರಿಗೆ ಬಹಿಷ್ಕಾರವಾಗಿತ್ತು, ನಂತರ ಪುನಃಸ್ಥಾಪಿಸಲಾಯಿತು. ಆದರೆ ಪುನಃಸ್ಥಾಪಿಸಿದ ಮೇಲೆ ಅವರು ಸೇವೆಗೆ ಹೋಗುವುದನ್ನು, ಕೂಟಗಳಿಗೆ ಬರುವುದನ್ನು ಬಿಟ್ಟುಬಿಟ್ಟರು. ಒಬ್ಬ ಹಿರಿಯನು ಗ್ರೇಹಮ್‌ ಅವರ ಜೊತೆ ಸ್ನೇಹ ಮಾಡಿಕೊಳ್ಳಲು ಪ್ರಯತ್ನಿಸಿದರು. ಸಮಯಾನಂತರ ಗ್ರೇಹಮ್‌ ಈ ಹಿರಿಯನ ಹತ್ತಿರ ತನಗೆ ಬೈಬಲ್‌ ಅಧ್ಯಯನ ಮಾಡುವಂತೆ ಕೇಳಿಕೊಂಡರು.

13 ಆ ಹಿರಿಯನು ಹೇಳುವುದು: “ಗ್ರೇಹಮ್‌ಗೆ ಸ್ವಲ್ಪ ಅಹಂ ಇತ್ತು. ಅವರನ್ನು ಬಹಿಷ್ಕಾರ ಮಾಡಿದ ಹಿರಿಯರ ಮೇಲೆ ನಕಾರಾತ್ಮಕ ಭಾವನೆ ಇತ್ತು. ಆದ್ದರಿಂದ ನಾವು ಕೆಲವು ವಾರಗಳ ವರೆಗೆ ಅಧ್ಯಯನಕ್ಕೆಂದು ಸೇರಿಬಂದಾಗ ಅಹಂಕಾರ ಮತ್ತು ಅದರ ಪರಿಣಾಮಗಳ ಬಗ್ಗೆ ಮಾತಾಡುವ ವಚನಗಳನ್ನು ಚರ್ಚಿಸಿದೆವು. ಗ್ರೇಹಮ್‌ ದೇವರ ವಾಕ್ಯದ ಕನ್ನಡಿಯಲ್ಲಿ ತನ್ನನ್ನೇ ಸ್ಪಷ್ಟವಾಗಿ ನೋಡಲು ಇದರಿಂದ ಸಾಧ್ಯವಾಯಿತು. ಅವರಿಗೆ ಕಂಡ ಆ ಮುಖ ಅವರಿಗೇ ಇಷ್ಟವಾಗಲಿಲ್ಲ. ಆಮೇಲೆ ಅದ್ಭುತನೇ ಆಗಿಹೋಯಿತು! ತನ್ನ ದೃಷ್ಟಿಯನ್ನು ಅಹಂಕಾರ ಎಂಬ ‘ದಿಮ್ಮಿ’ ಮರೆಮಾಡಿತ್ತೆಂದು ಅವರು ಒಪ್ಪಿಕೊಂಡರು. ಹಿರಿಯರ ಬಗ್ಗೆ ನಕಾರಾತ್ಮಕ ಭಾವನೆ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ಅರ್ಥಮಾಡಿಕೊಂಡು ಬೇಗ ಬದಲಾವಣೆ ಮಾಡಿಕೊಂಡರು. ಕ್ರೈಸ್ತ ಕೂಟಗಳಿಗೆ ತಪ್ಪದೆ ಬರಲು ಮತ್ತು ದೇವರ ವಾಕ್ಯವನ್ನು ಶ್ರದ್ಧೆಯಿಂದ ಅಧ್ಯಯನ ಮಾಡಲು ಆರಂಭಿಸಿದರು. ದಿನಾ ಪ್ರಾರ್ಥನೆ ಮಾಡುವ ರೂಢಿಯನ್ನೂ ಬೆಳೆಸಿಕೊಂಡರು. ಕುಟುಂಬದ ತಲೆಯಾಗಿ ತನ್ನ ಜವಾಬ್ದಾರಿಗಳನ್ನೂ ಚೆನ್ನಾಗಿ ನಿರ್ವಹಿಸಲು ಆರಂಭಿಸಿದರು. ಇದರಿಂದ ಅವರ ಹೆಂಡತಿ ಮಕ್ಕಳಿಗೆ ತುಂಬ ಸಂತೋಷವಾಯಿತು.”—ಲೂಕ 6:41, 42; ಯಾಕೋ. 1:23-25.

14 ಆ ಹಿರಿಯನು ಮುಂದುವರಿಸುವುದು: “ಒಂದು ದಿನ ಗ್ರೇಹಮ್‌ ಹೇಳಿದ ವಿಷಯ ನನ್ನ ಮನಸ್ಪರ್ಶಿಸಿತು. ‘ನನಗೆ ಎಷ್ಟೋ ವರ್ಷಗಳಿಂದ ಸತ್ಯ ಗೊತ್ತು, ನಾನು ಪಯನೀಯರ್‌ ಆಗಿಯೂ ಸೇವೆ ಮಾಡಿದ್ದೇನೆ. ಆದರೆ ಯೆಹೋವ ದೇವರನ್ನು ನಿಜವಾಗಲೂ ಪ್ರೀತಿಸುತ್ತಿರುವುದು ಈಗಲೇ’ ಎಂದರು.” ಸ್ವಲ್ಪ ಸಮಯದಲ್ಲೇ ಗ್ರೇಹಮ್‌ಗೆ ಕೂಟಗಳಲ್ಲಿ ಉತ್ತರ ಹೇಳುವವರಿಗೆ ಮೈಕನ್ನು ಕೊಡುವ ನೇಮಕ ಸಿಕ್ಕಿತು. ಇದನ್ನು ಅವರು ಖುಷಿಯಿಂದ ಮಾಡಿದರು. ಆ ಹಿರಿಯನು ಹೇಳಿದ್ದು: “ಒಬ್ಬ ವ್ಯಕ್ತಿ ಶಿಸ್ತನ್ನು ಸ್ವೀಕರಿಸಿ ದೇವರ ಮುಂದೆ ತನ್ನನ್ನು ತಗ್ಗಿಸಿಕೊಂಡರೆ ಎಷ್ಟೋ ಆಶೀರ್ವಾದ ಸಿಗುತ್ತೆ ಎಂದು ಅವರ ಅನುಭವದಿಂದ ಕಲಿತೆ.”

ದೇವರನ್ನು ಮತ್ತು ಕ್ರಿಸ್ತನನ್ನು ಅನುಕರಿಸಿ

15. ನಾವು ಬೇರೆಯವರಿಗೆ ಕೊಡುವ ಶಿಸ್ತು ಕೆಲಸ ಮಾಡಬೇಕಾದರೆ ನಾವು ಹೇಗೆ ನಡಕೊಳ್ಳಬೇಕು?

15 ನಾವು ಒಳ್ಳೇ ಶಿಕ್ಷಕರಾಗಬೇಕಾದರೆ ಮೊದಲು ಒಳ್ಳೇ ವಿದ್ಯಾರ್ಥಿಗಳಾಗಿರಬೇಕು. (1 ತಿಮೊ. 4:15, 16) ಅದೇ ರೀತಿ, ಬೇರೆಯವರಿಗೆ ಶಿಸ್ತು ಕೊಡುವ ಸ್ಥಾನದಲ್ಲಿ ಯೆಹೋವನು ನಿಮ್ಮನ್ನು ಇಟ್ಟಿರುವುದಾದರೆ ನೀವು ಸ್ವತಃ ದೀನರಾಗಿರಬೇಕು ಮತ್ತು ಜೀವನದಲ್ಲಿ ಯೆಹೋವನು ನಿಮ್ಮನ್ನು ಮಾರ್ಗದರ್ಶಿಸಲು ಬಿಡಬೇಕು. ನೀವು ದೀನರಾಗಿರುವುದನ್ನು ಬೇರೆಯವರು ನೋಡುವಾಗ ಅವರಿಗೆ ನಿಮ್ಮ ಮೇಲೆ ಗೌರವ ಬರುತ್ತದೆ ಮತ್ತು ನೀವು ಕೊಡುವಂಥ ಬುದ್ಧಿ ಉಪದೇಶವನ್ನು ಸ್ವೀಕರಿಸಲು ಅವರಿಗೆ ಸುಲಭವಾಗುತ್ತದೆ. ಯೇಸು ಈ ವಿಷಯದಲ್ಲಿ ಯಾವ ಮಾದರಿ ಇಟ್ಟಿದ್ದಾನೆ?

16. ಶಿಸ್ತು ಕೊಡುವ ವಿಷಯದಲ್ಲಿ ಮತ್ತು ಬೋಧನೆ ಮಾಡುವ ವಿಷಯದಲ್ಲಿ ನಾವು ಯೇಸುವಿನಿಂದ ಏನು ಕಲಿಯಬಹುದು?

16 ಯೇಸು ಯಾವಾಗಲೂ ತನ್ನ ತಂದೆಯಾದ ಯೆಹೋವನ ಮಾತಿನಂತೆ ನಡೆದನು. ಇದನ್ನು ಮಾಡುವುದು ತುಂಬ ಕಷ್ಟವಾಗಿದ್ದ ಸಮಯದಲ್ಲೂ ವಿಧೇಯತೆ ತೋರಿಸಿದನು. (ಮತ್ತಾ. 26:39) ತಾನು ಬೋಧಿಸುತ್ತಿದ್ದ ವಿಷಯಗಳು ಮತ್ತು ತನ್ನಲ್ಲಿದ್ದ ಜ್ಞಾನವಿವೇಕ ಎಲ್ಲಾ ತನ್ನ ತಂದೆಯಿಂದ ಬಂದದ್ದು ಎಂದು ಕೇಳುಗರಿಗೆ ಯಾವಾಗಲೂ ಹೇಳುತ್ತಿದ್ದನು. (ಯೋಹಾ. 5:19, 30) ಯೇಸು ದೀನನಾಗಿದ್ದನು ಮತ್ತು ವಿಧೇಯತೆ ತೋರಿಸುತ್ತಿದ್ದನು. ಇದರಿಂದ ಅವನು ಅನುಕಂಪ ತುಂಬಿದ ಬೋಧಕನಾದನು. ನಿರ್ಮಲ ಮನಸ್ಸಿನ ವ್ಯಕ್ತಿಗಳಿಗೆ ಅವನ ಜೊತೆ ಇರುವುದೆಂದರೆ ತುಂಬ ಇಷ್ಟವಾಗುತ್ತಿತ್ತು. (ಲೂಕ 4:22 ಓದಿ.) ಯೇಸುವಿನ ಕನಿಕರದ ಮಾತುಗಳು ನಿರುತ್ಸಾಹಗೊಂಡು ಬಲಹೀನವಾಗಿದ್ದ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡಿತು. (ಮತ್ತಾ. 12:20) ತಮ್ಮಲ್ಲಿ ಯಾರು ದೊಡ್ಡವರು ಎಂದು ವಾದಿಸುತ್ತಿದ್ದ ಅಪೊಸ್ತಲರ ಮೇಲೆ ಯೇಸು ಕೋಪಗೊಳ್ಳುವ ಸಾಧ್ಯತೆಯಿತ್ತು. ಆದರೆ ಅವನು ಅವರನ್ನು ಪ್ರೀತಿ-ದಯೆಯಿಂದ ತಿದ್ದಲು ಪ್ರಯತ್ನಿಸಿದನು.—ಮಾರ್ಕ 9:33-37; ಲೂಕ 22:24-27.

17. ಹಿರಿಯರು ಯಾವ ಗುಣಗಳನ್ನು ಬೆಳೆಸಿಕೊಂಡರೆ ಸಭೆಯವರನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗುತ್ತದೆ?

17 ಹಿರಿಯರು ಬೈಬಲ್‌ ತತ್ವಗಳ ಮೇಲಾಧರಿಸಿ ಶಿಸ್ತು ಕೊಡುವಾಗೆಲ್ಲಾ ಯೇಸುವನ್ನು ಅನುಕರಿಸುವುದು ಒಳ್ಳೇದು. ಹೀಗೆ ಅವರು ದೇವರಿಂದ ಮತ್ತು ಕ್ರಿಸ್ತನಿಂದ ಮಾರ್ಗದರ್ಶಿಸಲ್ಪಡಲು ಬಯಸುತ್ತೇವೆ ಎಂದು ತೋರಿಸಿಕೊಡುತ್ತಾರೆ. ಈ ಸಂಬಂಧವಾಗಿ ಅಪೊಸ್ತಲ ಪೇತ್ರನು ಹೀಗೆ ಬರೆದನು: “ನಿಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸಿರಿ; ನಿರ್ಬಂಧದಿಂದಲ್ಲ, ಇಚ್ಛಾಪೂರ್ವಕವಾಗಿ ಮಾಡಿರಿ; ಅಪ್ರಾಮಾಣಿಕ ಲಾಭದ ಮೇಲಣ ಪ್ರೀತಿಯಿಂದಲ್ಲ, ಸಿದ್ಧಮನಸ್ಸಿನಿಂದ ಮಾಡಿರಿ. ದೇವರ ಸೊತ್ತಾಗಿರುವವರ ಮೇಲೆ ದೊರೆತನ ಮಾಡುವವರಾಗಿರದೆ ಮಂದೆಗೆ ಮಾದರಿಗಳಾಗಿರಿ.” (1 ಪೇತ್ರ 5:2-4) ದೇವರಿಗೆ ಮತ್ತು ಕ್ರಿಸ್ತನಿಗೆ ತಮ್ಮನ್ನು ಸಂತೋಷದಿಂದ ಅಧೀನಪಡಿಸಿಕೊಳ್ಳುವ ಹಿರಿಯರು ಪ್ರಯೋಜನ ಪಡೆಯುತ್ತಾರೆ ಮತ್ತು ಇಂಥ ಹಿರಿಯರ ಆರೈಕೆಯ ಕೆಳಗಿರುವ ವ್ಯಕ್ತಿಗಳು ಸಹ ಸಂತೋಷವಾಗಿರುತ್ತಾರೆ.—ಯೆಶಾ. 32:1, 2, 17, 18.

18. (ಎ) ಹೆತ್ತವರು ಏನು ಮಾಡಬೇಕೆಂದು ಯೆಹೋವನು ಬಯಸುತ್ತಾನೆ? (ಬಿ) ದೇವರು ಹೆತ್ತವರಿಗೆ ಹೇಗೆ ಸಹಾಯ ಮಾಡುತ್ತಾನೆ?

18 ಮಕ್ಕಳಿಗೆ ಶಿಸ್ತು ಮತ್ತು ತರಬೇತಿ ಕೊಡುವ ವಿಷಯದಲ್ಲೇನು? ಯೆಹೋವನು ಕುಟುಂಬದ ತಲೆಗಳಿಗೆ ಹೀಗೆ ಹೇಳಿದ್ದಾನೆ: “ತಂದೆಗಳೇ, ನಿಮ್ಮ ಮಕ್ಕಳಿಗೆ ಕಿರಿಕಿರಿ ಉಂಟುಮಾಡುವವರಾಗಿರದೆ, ಅವರನ್ನು ಯೆಹೋವನ ಶಿಸ್ತಿನಲ್ಲಿಯೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿಯೂ ಬೆಳೆಸುತ್ತಾ ಬನ್ನಿರಿ.” (ಎಫೆ. 6:4) ತರಬೇತಿ ಮತ್ತು ಶಿಸ್ತನ್ನು ಕೊಡಲೇಬೇಕಾ? ಜ್ಞಾನೋಕ್ತಿ 19:18​ರಲ್ಲಿ ಹೀಗೆ ಹೇಳುತ್ತದೆ: “ಇನ್ನೂ ನಿರೀಕ್ಷೆ ಇರುವಾಗಲೇ ನಿನ್ನ ಮಗನನ್ನು ಶಿಕ್ಷಿಸು; ಅವನ ಮರಣಕ್ಕೆ ಕಾರಣನಾಗದಿರು.” (ಪವಿತ್ರ ಗ್ರಂಥ ಭಾಷಾಂತರ) ಮಕ್ಕಳಿಗೆ ಶಿಸ್ತು ಕೊಡುವ ಜವಾಬ್ದಾರಿಯನ್ನು ಯೆಹೋವನು ಹೆತ್ತವರಿಗೆ ಕೊಟ್ಟಿದ್ದಾನೆ. ಅವರಿದನ್ನು ಮಾಡದೇ ಹೋದರೆ ಯೆಹೋವನಿಗೆ ಲೆಕ್ಕ ಕೊಡಬೇಕು. (1 ಸಮು. 3:12-14) ಹೆತ್ತವರು ಸಹಾಯಕ್ಕಾಗಿ ಪ್ರಾರ್ಥಿಸಿದಾಗ ಮತ್ತು ದೇವರ ವಾಕ್ಯ ಹಾಗೂ ಪವಿತ್ರಾತ್ಮದ ಮೇಲೆ ಹೊಂದಿಕೊಂಡಾಗ ಅವರಿಗೆ ಬೇಕಾದ ವಿವೇಕ ಮತ್ತು ಶಕ್ತಿಯನ್ನು ಯೆಹೋವನು ಕೊಡುತ್ತಾನೆ.—ಯಾಕೋಬ 1:5 ಓದಿ.

ಸದಾ ಶಾಂತಿಯಿಂದ ಬದುಕಲು ಕಲಿಯಿರಿ

19, 20. (ಎ) ದೇವರು ಕೊಡುವ ಶಿಸ್ತನ್ನು ಸ್ವೀಕರಿಸುವಾಗ ಯಾವ ಆಶೀರ್ವಾದಗಳು ಸಿಗುತ್ತವೆ? (ಬಿ) ಮುಂದಿನ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

19 ನಾವು ಯೆಹೋವನಿಂದ ಶಿಸ್ತನ್ನು ಪಡೆದು, ಆತನು ಮತ್ತು ಯೇಸು ಕೊಡುವ ರೀತಿಯಲ್ಲಿ ಶಿಸ್ತನ್ನು ಕೊಟ್ಟರೆ ಅನೇಕಾನೇಕ ಆಶೀರ್ವಾದಗಳನ್ನು ಪಡೆಯುತ್ತೇವೆ. ನಮ್ಮ ಮನೆಗಳಲ್ಲಿ ಸಭೆಗಳಲ್ಲಿ ಶಾಂತಿ ಇರುತ್ತದೆ ಮತ್ತು ನಮ್ಮನ್ನು ಪ್ರೀತಿಸುವವರು, ಮಾನ್ಯಮಾಡುವವರು ಇದ್ದಾರೆ ಎಂಬ ಭಾವನೆ ಎಲ್ಲರಲ್ಲೂ ಮೂಡುತ್ತದೆ. ಇದು ಸುರಕ್ಷಿತ ಭಾವನೆಯನ್ನೂ ಕೊಡುತ್ತದೆ. ಇದು ನಾವು ಭವಿಷ್ಯದಲ್ಲಿ ಆನಂದಿಸಲಿಕ್ಕಿರುವ ಅಪಾರ ಶಾಂತಿ ಮತ್ತು ಸಂತೋಷದ ತುಣುಕಷ್ಟೇ. (ಕೀರ್ತ. 72:7) ಶಾಂತಿ ಐಕ್ಯತೆ ಇರುವ ಒಂದು ಕುಟುಂಬವಾಗಿ ಸದಾಕಾಲ ಬಾಳಲು ಯೆಹೋವನು ನಮಗೆ ಶಿಸ್ತು ಕೊಟ್ಟು ಸಿದ್ಧಪಡಿಸುತ್ತಿದ್ದಾನೆ. ಇಂಥ ಆದರ್ಶ ಕುಟುಂಬದ ತಂದೆ ಯೆಹೋವನೇ ಆಗಿರುತ್ತಾನೆ. (ಯೆಶಾಯ 11:9 ಓದಿ.) ನಾವಿದನ್ನು ಮನಸ್ಸಲ್ಲಿ ಇಟ್ಟುಕೊಂಡರೆ ಶಿಸ್ತನ್ನು ನೋಡಿ ಮೂಗು ಮುರಿಯಲ್ಲ. ದೇವರು ಇದರ ಮೂಲಕ ನಮ್ಮ ಮೇಲಿರುವ ಪ್ರೀತಿಯನ್ನು ತೋರಿಸುತ್ತಿದ್ದಾನೆ ಎಂದು ಅರ್ಥಮಾಡಿಕೊಳ್ಳುತ್ತೇವೆ.

20 ಕುಟುಂಬದಲ್ಲಿ ಮತ್ತು ಸಭೆಯಲ್ಲಿ ಶಿಸ್ತು ಕೊಡುವುದರ ಬಗ್ಗೆ ನಾವು ಹೆಚ್ಚನ್ನು ಮುಂದಿನ ಲೇಖನದಲ್ಲಿ ಕಲಿಯಲಿದ್ದೇವೆ. ನಮಗೆ ನಾವೇ ಶಿಸ್ತು ಕೊಡುವುದು ಹೇಗೆ ಎಂದು ಸಹ ನೋಡಲಿದ್ದೇವೆ. ಯಾವುದೇ ಶಿಸ್ತಿಗಿಂತ ತುಂಬ ನೋವು ತರುವಂಥ ಒಂದು ವಿಷಯವನ್ನು ಹೇಗೆ ತಪ್ಪಿಸಬಹುದು ಅನ್ನುವುದರ ಬಗ್ಗೆ ಕೂಡ ಚರ್ಚೆ ಮಾಡಲಿದ್ದೇವೆ.