ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆತ್ತವರೇ, ದೀಕ್ಷಾಸ್ನಾನ ಪಡೆಯಲು ನಿಮ್ಮ ಮಕ್ಕಳಿಗೆ ಸಹಾಯ ಮಾಡುತ್ತಿದ್ದೀರಾ?

ಹೆತ್ತವರೇ, ದೀಕ್ಷಾಸ್ನಾನ ಪಡೆಯಲು ನಿಮ್ಮ ಮಕ್ಕಳಿಗೆ ಸಹಾಯ ಮಾಡುತ್ತಿದ್ದೀರಾ?

“ನೀನೇಕೆ ತಡಮಾಡುತ್ತಿದ್ದೀ? ಏಳು, ದೀಕ್ಷಾಸ್ನಾನ ಮಾಡಿಸಿಕೊ.”—ಅ. ಕಾ. 22:16.

ಗೀತೆಗಳು: 59, 89

1. ತಮ್ಮ ಮಕ್ಕಳು ದೀಕ್ಷಾಸ್ನಾನ ಪಡೆಯುವುದಕ್ಕಿಂತ ಮುಂಚೆ ಕ್ರೈಸ್ತ ಹೆತ್ತವರು ಯಾವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತಾರೆ?

‘ನಾನು ದೀಕ್ಷಾಸ್ನಾನ ತೆಗೆದುಕೊಳ್ಳಲು ಇಷ್ಟಪಡುತ್ತೇನೆ ಎಂದು ಅಪ್ಪಅಮ್ಮನಿಗೆ ಅನೇಕ ತಿಂಗಳಿಂದ ಹೇಳುತ್ತಾ ಇದ್ದೆ. ಆದ್ದರಿಂದ ಅವರು ಅದರ ಕುರಿತು ನನ್ನೊಂದಿಗೆ ಆಗಾಗ ಮಾತಾಡುತ್ತಿದ್ದರು. ಇದು ಎಷ್ಟು ಗಂಭೀರವಾದ ತೀರ್ಮಾನ ಅನ್ನುವುದು ನನಗೆ ಅರ್ಥವಾಗಿದೆಯಾ ಎಂದು ತಿಳಿದುಕೊಳ್ಳಲು ಬಯಸಿದರು. ಕೊನೆಗೆ 1934​ರ ಡಿಸೆಂಬರ್‌ 31​ರಂದು ನನ್ನ ಜೀವನದ ಆ ಮಹತ್ವಪೂರ್ಣ ಗಳಿಗೆ ಬಂತು.’ ಬ್ಲಾಸಮ್‌ ಬ್ರಾಂಟ್‌ ಎಂಬ ಸಹೋದರಿ ದೀಕ್ಷಾಸ್ನಾನ ಪಡೆಯಲು ಬಯಸಿದಾಗ ಏನಾಯಿತೆಂದು ತಿಳಿಸಿದ ಮಾತುಗಳಿವು. ಇಂದು ಕೂಡ ಒಳ್ಳೇ ತೀರ್ಮಾನಗಳನ್ನು ಮಾಡಲು ಹೆತ್ತವರು ಮಕ್ಕಳಿಗೆ ಸಹಾಯ ಮಾಡುತ್ತಾರೆ. ವಿನಾಕಾರಣ ಮಕ್ಕಳ ದೀಕ್ಷಾಸ್ನಾನವನ್ನು ಮುಂದೂಡುವುದಾದರೆ ಯೆಹೋವನೊಂದಿಗೆ ಅವರಿಗಿರುವ ಸಂಬಂಧ ಹಾಳಾಗುವ ಸಾಧ್ಯತೆ ಇದೆ. (ಯಾಕೋ. 4:17) ಆದರೂ ತಮ್ಮ ಮಕ್ಕಳು ದೀಕ್ಷಾಸ್ನಾನ ಪಡೆಯುವುದಕ್ಕೆ ಮುಂಚೆ ಅವರು ಯೇಸುವಿನ ಶಿಷ್ಯರಾಗಲು ಸಿದ್ಧರಾಗಿದ್ದಾರಾ ಎಂದು ಜಾಣ್ಮೆಯುಳ್ಳ ಹೆತ್ತವರು ಖಚಿತಪಡಿಸಿಕೊಳ್ಳುತ್ತಾರೆ.

2. (ಎ) ಕೆಲವು ಸಂಚರಣ ಮೇಲ್ವಿಚಾರಕರು ಯಾವ ವಿಷಯವನ್ನು ಗಮನಿಸಿದ್ದಾರೆ? (ಬಿ) ಈ ಲೇಖನದಲ್ಲಿ ಏನು ಚರ್ಚಿಸಲಿದ್ದೇವೆ?

2 ಇಪ್ಪತ್ತರ ಆಸುಪಾಸಿನ ಎಷ್ಟೋ ಯುವಜನರು ಸತ್ಯದಲ್ಲೇ ಬೆಳೆದಿದ್ದರೂ ಇನ್ನೂ ದೀಕ್ಷಾಸ್ನಾನ ತೆಗೆದುಕೊಂಡಿಲ್ಲ ಅನ್ನುವ ವಿಷಯವನ್ನು ಕೆಲವು ಸಂಚರಣ ಮೇಲ್ವಿಚಾರಕರು ಗಮನಿಸಿದ್ದಾರೆ. ಈ ಮಕ್ಕಳು ಕೂಟಗಳಿಗೆ, ಸೇವೆಗೆ ಹೋಗುತ್ತಾರೆ. ತಾವು ಯೆಹೋವನ ಸಾಕ್ಷಿಗಳು ಎಂದು ಅವರಿಗೆ ಅನಿಸುತ್ತದೆ. ಆದರೂ ಅವರು ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡಕೊಂಡಿಲ್ಲ. ಕಾರಣ ಏನಿರಬಹುದು? ಈ ಮಕ್ಕಳು ದೀಕ್ಷಾಸ್ನಾನ ತೆಗೆದುಕೊಳ್ಳಲು ಸಿದ್ಧರಾಗಿಲ್ಲ ಎಂದು ಕೆಲವೊಮ್ಮೆ ಹೆತ್ತವರಿಗೇ ಅನಿಸಿದೆ. ಹೆತ್ತವರಿಗೆ ಯಾಕೆ ಹೀಗೆ ಅನಿಸುತ್ತದೆ ಎಂಬುದಕ್ಕೆ ನಾಲ್ಕು ಕಾರಣ ಇರಬಹುದು. ಇದನ್ನು ಈ ಲೇಖನದಲ್ಲಿ ಒಂದೊಂದಾಗಿ ಚರ್ಚಿಸೋಣ.

ಇನ್ನೂ ಚಿಕ್ಕ ವಯಸ್ಸು

3. ಬ್ಲಾಸಮ್‌ ಅವರ ಹೆತ್ತವರಿಗೆ ಯಾವ ಚಿಂತೆ ಇತ್ತು?

3 ಮೊದಲನೇ ಪ್ಯಾರದಲ್ಲಿ ತಿಳಿಸಲಾದ ಬ್ಲಾಸಮ್‌ ಅವರ ಹೆತ್ತವರಿಗೆ ಇದೇ ಚಿಂತೆ ಇತ್ತು. ತಮ್ಮ ಮಗಳಿಗೆ, ದೀಕ್ಷಾಸ್ನಾನ ಅಂದರೆ ಏನು ಮತ್ತು ಅದು ಎಷ್ಟು ಗಂಭೀರವಾಗಿದೆ ಎಂದು ಅರ್ಥಮಾಡಿಕೊಳ್ಳುವಷ್ಟು ವಯಸ್ಸಾಗಿಲ್ಲ ಎಂದವರು ನೆನಸಿದರು. ಇಂದಿರುವ ಹೆತ್ತವರು ತಮ್ಮ ಮಗ ಅಥವಾ ಮಗಳು ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಳ್ಳಲು ಸಿದ್ಧರಾಗಿದ್ದಾರಾ ಎಂದು ಹೇಗೆ ತಿಳಿದುಕೊಳ್ಳಬಹುದು?

4. ಮತ್ತಾಯ 28:19, 20​ರಲ್ಲಿರುವ ಯೇಸುವಿನ ಆಜ್ಞೆ ಇಂದು ಹೆತ್ತವರಿಗೆ ಹೇಗೆ ಸಹಾಯ ಮಾಡಬಹುದು?

4 ಮತ್ತಾಯ 28:19, 20 ಓದಿ. ಇಷ್ಟು ವಯಸ್ಸಿಗೇ ದೀಕ್ಷಾಸ್ನಾನ ಪಡೆದುಕೊಳ್ಳಬೇಕೆಂದು ಬೈಬಲ್‌ ಹೇಳುವುದಿಲ್ಲ. ಆದರೆ ಶಿಷ್ಯರನ್ನಾಗಿ ಮಾಡುವುದೆಂದರೆ ಏನೆಂದು ಹೆತ್ತವರು ಗಂಭೀರವಾಗಿ ಯೋಚಿಸಬೇಕು. ಮತ್ತಾಯ 28:19​ರಲ್ಲಿ “ಶಿಷ್ಯರನ್ನಾಗಿ ಮಾಡಿರಿ” ಎಂದು ಭಾಷಾಂತರವಾಗಿರುವ ಗ್ರೀಕ್‌ ಪದದ ಅರ್ಥ ಏನೆಂದರೆ, ಒಬ್ಬ ವ್ಯಕ್ತಿಯನ್ನು ವಿದ್ಯಾರ್ಥಿಯಾಗಿ ಅಥವಾ ಶಿಷ್ಯನಾಗಿ ಮಾಡುವ ಉದ್ದೇಶದಿಂದ ಅವನಿಗೆ ಕಲಿಸುವುದು. ಒಬ್ಬ ಶಿಷ್ಯನು ಯೇಸು ಏನು ಕಲಿಸಿದನೋ ಅದನ್ನು ಅರ್ಥಮಾಡಿಕೊಂಡು ಅದರಂತೆ ಜೀವಿಸಲು ಬಯಸುತ್ತಾನೆ. ತಮ್ಮ ಮಕ್ಕಳು ಯೆಹೋವನಿಗೆ ಸಮರ್ಪಿಸಿಕೊಂಡು ಯೇಸುವಿನ ಶಿಷ್ಯರಾಗಬೇಕೆಂಬ ಗುರಿ ಹೆತ್ತವರಿಗಿರಬೇಕು. ಮಕ್ಕಳು ಹುಟ್ಟಿದಾಗಿನಿಂದಲೇ ವಿಷಯಗಳನ್ನು ಕಲಿಸುವ ಮೂಲಕ ಆ ಗುರಿಯನ್ನು ಮುಟ್ಟಲು ಹೆತ್ತವರು ಪ್ರಯತ್ನಿಸುತ್ತಾರೆ. ಇದರರ್ಥ ಶಿಶುಗಳಿಗೆ ದೀಕ್ಷಾಸ್ನಾನ ಮಾಡಿಸಬೇಕು ಎಂದಲ್ಲ. ಹಾಗಿದ್ದರೂ ಚಿಕ್ಕ ಮಕ್ಕಳು ಸಹ ಬೈಬಲ್‌ ಸತ್ಯವನ್ನು ಅರ್ಥಮಾಡಿಕೊಂಡು ಅದನ್ನು ಮಾನ್ಯಮಾಡಲು ಸಾಧ್ಯ ಎಂದು ಬೈಬಲ್‌ ಹೇಳುತ್ತದೆ.

5, 6. (ಎ) ತಿಮೊಥೆಯನ ಬಗ್ಗೆ ಬೈಬಲ್‌ ಹೇಳುವ ವಿಷಯದಿಂದ ಅವನ ದೀಕ್ಷಾಸ್ನಾನದ ಬಗ್ಗೆ ಏನು ಗೊತ್ತಾಗುತ್ತದೆ? (ಬಿ) ಜಾಣ್ಮೆಯುಳ್ಳ ಹೆತ್ತವರು ತಮ್ಮ ಮಕ್ಕಳಿಗೆ ಸಹಾಯ ಮಾಡಬಹುದಾದ ಅತ್ಯುತ್ತಮ ವಿಧ ಯಾವುದು?

5 ತಿಮೊಥೆಯನು ಚಿಕ್ಕ ಪ್ರಾಯದಲ್ಲೇ ಯೇಸುವಿನ ಶಿಷ್ಯನಾಗಿ ಸೇವೆ ಮಾಡಲು ಆರಂಭಿಸಿದನು. ಅವನು “ಶೈಶವದಿಂದಲೇ” ಅಂದರೆ ಚಿಕ್ಕ ಮಗುವಾಗಿದ್ದ ಸಮಯದಿಂದಲೇ ದೇವರ ವಾಕ್ಯದಲ್ಲಿರುವ ಸತ್ಯಗಳನ್ನು ಕಲಿತನೆಂದು ಅಪೊಸ್ತಲ ಪೌಲನು ಹೇಳಿದನು. ತಿಮೊಥೆಯನ ತಂದೆ ಯೆಹೋವನ ಆರಾಧಕನಾಗಿರಲಿಲ್ಲ. ಆದರೆ ಅವನ ತಾಯಿ ಮತ್ತು ಅಜ್ಜಿಯು ತಿಮೊಥೆಯನಿಗೆ ದೇವರ ವಾಕ್ಯದಲ್ಲಿರುವ ವಿಷಯಗಳನ್ನು ಕಲಿಸಿದರು. ಇದರಿಂದಾಗಿ ಅವನು ಬಲವಾದ ನಂಬಿಕೆ ಬೆಳೆಸಿಕೊಂಡನು. (2 ತಿಮೊ. 1:5; 3:14, 15) ಅವನಿಗೆ ಹೆಚ್ಚುಕಡಿಮೆ 20 ವಯಸ್ಸು ಇದ್ದಾಗ ಸಭೆಯಲ್ಲಿ ವಿಶೇಷ ಸುಯೋಗಗಳನ್ನೂ ಪಡೆಯಲು ಅರ್ಹನಾದನು.—ಅ. ಕಾ. 16:1-3.

6 ಐದು ಬೆರಳು ಒಂದೇ ತರ ಇರುವುದಿಲ್ಲ. ಹಾಗೆಯೇ ಎಲ್ಲಾ ಮಕ್ಕಳು ಒಂದೇ ತರ ಇರುವುದಿಲ್ಲ. ಎಲ್ಲರಿಗೂ ಒಂದೇ ವಯಸ್ಸಿಗೆ ಆಧ್ಯಾತ್ಮಿಕ ಪ್ರೌಢತೆ ಬಂದುಬಿಡುವುದಿಲ್ಲ. ಕೆಲವು ಮಕ್ಕಳು ಸತ್ಯವನ್ನು ಅರ್ಥಮಾಡಿಕೊಂಡು ಚಿಕ್ಕ ಪ್ರಾಯದಲ್ಲೇ ದೀಕ್ಷಾಸ್ನಾನ ತೆಗೆದುಕೊಳ್ಳಲು ಮುಂದೆ ಬರುತ್ತಾರೆ. ಬೇರೆ ಮಕ್ಕಳಿಗೆ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ. ಆದ್ದರಿಂದ ಜಾಣ್ಮೆಯುಳ್ಳ ಹೆತ್ತವರು ದೀಕ್ಷಾಸ್ನಾನ ತೆಗೆದುಕೊಳ್ಳುವಂತೆ ತಮ್ಮ ಮಕ್ಕಳ ಮೇಲೆ ಒತ್ತಡ ಹಾಕುವುದಿಲ್ಲ, ಬದಲಿಗೆ ಅವರ ಸಾಮರ್ಥ್ಯಕ್ಕನುಸಾರ ಪ್ರಗತಿ ಮಾಡಲು ಬಿಡುತ್ತಾರೆ. ತಮ್ಮ ಮಕ್ಕಳು ಜ್ಞಾನೋಕ್ತಿ 27:11​ನ್ನು ಅನ್ವಯಿಸುವಾಗ ಹೆತ್ತವರಿಗೆ ತುಂಬ ಸಂತೋಷವಾಗುತ್ತದೆ. (ಓದಿ.) ಆದರೂ ಮಕ್ಕಳನ್ನು ಶಿಷ್ಯರನ್ನಾಗಿ ಮಾಡಬೇಕೆಂಬ ಗುರಿಯನ್ನು ಅವರು ಯಾವತ್ತೂ ಮರೆತುಬಿಡಬಾರದು. ಈಗ ಮುಂದಿನ ವಿಷಯಕ್ಕೆ ಹೋಗೋಣ. ನಿಮ್ಮ ಮಕ್ಕಳು ದೇವರಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ತೆಗೆದುಕೊಳ್ಳುವಷ್ಟು ಬೈಬಲ್‌ ಜ್ಞಾನ ಪಡೆದಿದ್ದಾರಾ?

ಕಲಿಯಲು ಇನ್ನೂ ಸಾಕಷ್ಟಿದೆ

7. ಒಬ್ಬ ವ್ಯಕ್ತಿ ದೀಕ್ಷಾಸ್ನಾನಕ್ಕೆ ಅರ್ಹನಾಗಲು ಬೈಬಲಿನ ಬಗ್ಗೆ ಸಂಪೂರ್ಣವಾಗಿ ತಿಳಿದಿರಬೇಕಾ? ವಿವರಿಸಿ.

7 ಹೆತ್ತವರು ಮಕ್ಕಳಿಗೆ ಸತ್ಯ ಚೆನ್ನಾಗಿ ಅರ್ಥವಾಗುವಂತೆ ಕಲಿಸುತ್ತಾರೆ. ಸತ್ಯದ ಈ ಜ್ಞಾನವು ದೇವರಿಗೆ ಸಮರ್ಪಣೆ ಮಾಡಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡುತ್ತದೆ. ಆದರೆ ಅವರು ದೀಕ್ಷಾಸ್ನಾನಕ್ಕೆ ಅರ್ಹರಾಗಲು ಬೈಬಲ್‌ ಬಗ್ಗೆ ಸಂಪೂರ್ಣವಾಗಿ ತಿಳಿದಿರಬೇಕು ಅಂದೇನಿಲ್ಲ. ಯಾಕೆಂದರೆ ಕ್ರಿಸ್ತನ ಪ್ರತಿಯೊಬ್ಬ ಶಿಷ್ಯನು ದೀಕ್ಷಾಸ್ನಾನ ಪಡಕೊಂಡ ಮೇಲೂ ಬೈಬಲ್‌ ಬಗ್ಗೆ ಹೆಚ್ಚನ್ನು ಕಲಿಯುತ್ತಾ ಇರಬೇಕು. (ಕೊಲೊಸ್ಸೆ 1:9, 10 ಓದಿ.) ಹಾಗಾದರೆ ಒಬ್ಬ ವ್ಯಕ್ತಿ ಬೈಬಲಿನ ಬಗ್ಗೆ ಎಷ್ಟು ತಿಳಿದಿದ್ದರೆ ದೀಕ್ಷಾಸ್ನಾನ ಪಡೆಯಲು ಅರ್ಹನಾಗುತ್ತಾನೆ?

8, 9. ಫಿಲಿಪ್ಪಿಯಲ್ಲಿದ್ದ ಸೆರೆಮನೆಯ ಅಧಿಕಾರಿಯ ಅನುಭವದಿಂದ ನಾವೇನು ಕಲಿಯಬಹುದು?

8 ಹಿಂದಿನ ಕಾಲದ ಒಂದು ಕುಟುಂಬದ ಅನುಭವದಿಂದ ಇಂದಿರುವ ಹೆತ್ತವರು ಒಂದು ವಿಷಯವನ್ನು ಕಲಿಯಬಹುದು. (ಅ. ಕಾ. 16:25-33) ಕ್ರಿ.ಶ. 50​ರಲ್ಲಿ ಪೌಲನು ತನ್ನ ಎರಡನೇ ಮಿಷನರಿ ಪ್ರಯಾಣ ಮಾಡುತ್ತಿದ್ದಾಗ ಫಿಲಿಪ್ಪಿಗೆ ಬಂದನು. ಅಲ್ಲಿ ಅವನ ಮೇಲೆ ಮತ್ತು ಸೀಲನ ಮೇಲೆ ಸುಳ್ಳಾರೋಪ ಹಾಕಿ ದಸ್ತಗಿರಿ ಮಾಡಿ ಜೈಲಿಗೆ ಹಾಕಲಾಯಿತು. ಅವತ್ತಿನ ರಾತ್ರಿ ಒಂದು ದೊಡ್ಡ ಭೂಕಂಪವಾಗಿ ಸೆರೆಮನೆಯ ಬಾಗಿಲುಗಳೆಲ್ಲಾ ತೆರೆದುಕೊಂಡವು. ಕೈದಿಗಳೆಲ್ಲಾ ತಪ್ಪಿಸಿಕೊಂಡರು ಎಂದು ನೆನಸಿ ಸೆರೆಮನೆಯ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದನು. ಆದರೆ ಪೌಲನು ಅವನನ್ನು ತಡೆದನು. ನಂತರ ಪೌಲಸೀಲರು ಸೆರೆಮನೆಯ ಅಧಿಕಾರಿ ಮತ್ತವನ ಕುಟುಂಬಕ್ಕೆ ಯೇಸುವಿನ ಕುರಿತ ಸತ್ಯವನ್ನು ಕಲಿಸಿದರು. ಆ ಕುಟುಂಬದವರೆಲ್ಲ ಯೇಸು ಬಗ್ಗೆ ಕಲಿತ ವಿಷಯಗಳಲ್ಲಿ ನಂಬಿಕೆ ಇಟ್ಟರು. ಯೇಸುವಿನ ಮಾತಿನಂತೆ ನಡೆಯುವುದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡ ಕೂಡಲೆ ಅವರು ದೀಕ್ಷಾಸ್ನಾನ ಪಡಕೊಂಡರು. ಅವರ ಅನುಭವದಿಂದ ನಾವೇನು ಕಲಿಯಬಹುದು?

9 ಸೆರೆಮನೆಯ ಅಧಿಕಾರಿ ನಿವೃತ್ತ ರೋಮನ್‌ ಸೈನಿಕನಾಗಿದ್ದಿರಬಹುದು. ಅವನಿಗೆ ದೇವರ ವಾಕ್ಯದ ಬಗ್ಗೆ ಗೊತ್ತಿರಲಿಲ್ಲ. ಅವನು ಕ್ರೈಸ್ತನಾಗಬೇಕಾದರೆ ಬೈಬಲಿನ ಮೂಲಭೂತ ಸತ್ಯಗಳನ್ನು ಕಲಿಯಬೇಕಿತ್ತು, ಯೆಹೋವನು ತನ್ನ ಸೇವಕರಿಂದ ಏನು ಅಪೇಕ್ಷಿಸುತ್ತಾನೆ ಎಂದು ತಿಳಿದುಕೊಳ್ಳಬೇಕಿತ್ತು ಮತ್ತು ಯೇಸುವಿನ ಬೋಧನೆಗಳಂತೆ ನಡೆಯಲು ದೃಢತೀರ್ಮಾನ ಮಾಡಬೇಕಿತ್ತು. ಅವನು ಸ್ವಲ್ಪ ಸಮಯದಲ್ಲಿ ಕಲಿತ ವಿಷಯಗಳೇ ದೀಕ್ಷಾಸ್ನಾನಕ್ಕಾಗಿ ಕೇಳಿಕೊಳ್ಳುವಂತೆ ಅವನನ್ನು ಉತ್ತೇಜಿಸಿತು. ಅವನು ದೀಕ್ಷಾಸ್ನಾನ ಪಡಕೊಂಡ ಮೇಲೆ ಇನ್ನೆಷ್ಟೋ ವಿಷಯಗಳನ್ನು ಖಂಡಿತ ಕಲಿತಿರುತ್ತಾನೆ. ಆದ್ದರಿಂದ ನಿಮ್ಮ ಮಕ್ಕಳು ಬೈಬಲಿನ ಮೂಲಭೂತ ಜ್ಞಾನ ಪಡೆದುಕೊಂಡು, ದೀಕ್ಷಾಸ್ನಾನ ಪಡೆಯಲು ತಮಗಿಷ್ಟ ಎಂದು ನಿಮಗೆ ಹೇಳಿದಾಗ ನೀವೇನು ಮಾಡಬಹುದು? ಹಿರಿಯರ ಹತ್ತಿರ ಮಾತಾಡುವಂತೆ ಹೇಳಿ. ನಿಮ್ಮ ಮಕ್ಕಳು ದೀಕ್ಷಾಸ್ನಾನ ಪಡೆಯಲು ಅರ್ಹತೆ ಹೊಂದಿದ್ದಾರಾ ಎಂದು ಹಿರಿಯರು ತೀರ್ಮಾನಿಸುತ್ತಾರೆ. * ದೀಕ್ಷಾಸ್ನಾನ ಪಡೆದಿರುವ ಎಲ್ಲಾ ಕ್ರೈಸ್ತರಂತೆಯೇ ನಿಮ್ಮ ಮಕ್ಕಳು ಸಹ ಯೆಹೋವನ ಬಗ್ಗೆ ತಮ್ಮ ಜೀವ ಇರುವ ವರೆಗೂ ಅಥವಾ ಯುಗಯುಗಾಂತರಕ್ಕೂ ಕಲಿಯುತ್ತಾ ಇರುವರು.—ರೋಮ. 11:33, 34.

ವಿದ್ಯಾಭ್ಯಾಸದ ಕಡೆ ಸ್ವಲ್ಪ ಗಮನಕೊಡಲಿ

10, 11. (ಎ) ಕೆಲವು ಹೆತ್ತವರು ಏನು ನೆನಸುತ್ತಾರೆ? (ಬಿ) ಹೆತ್ತವರು ಯಾವುದಕ್ಕೆ ಮೊದಲ ಸ್ಥಾನ ಕೊಡಬೇಕು?

10 ತಮ್ಮ ಮಕ್ಕಳು ಸ್ವಲ್ಪ ಹೆಚ್ಚು ಓದಿ ಒಂದು ಒಳ್ಳೇ ಕೆಲಸ ಸಿಕ್ಕಿದ ಮೇಲೆ ದೀಕ್ಷಾಸ್ನಾನ ಪಡೆಯುವುದು ಒಳ್ಳೇದು ಎಂದು ಕೆಲವು ಹೆತ್ತವರು ನೆನಸುತ್ತಾರೆ. ಮಕ್ಕಳು ಜೀವನ ಚೆನ್ನಾಗಿರಬೇಕು ಅನ್ನುವ ಉದ್ದೇಶದಿಂದಲೇ ಹೆತ್ತವರು ಹೀಗೆ ಯೋಚಿಸುತ್ತಿರಬಹುದು. ಆದರೆ ಅವರು ತಮ್ಮನ್ನೇ ಹೀಗೆ ಕೇಳಿಕೊಳ್ಳಬೇಕು: ‘ಇದರಿಂದ ನನ್ನ ಮಗ ಅಥವಾ ಮಗಳು ಜೀವನದಲ್ಲಿ ನಿಜವಾಗಲೂ ಸಂತೋಷವಾಗಿರುತ್ತಾರಾ? ಇದು ಬೈಬಲಲ್ಲಿ ನಾವು ಕಲಿಯುವ ವಿಷಯಕ್ಕೆ ಹೊಂದಿಕೆಯಲ್ಲಿದೆಯಾ? ನಾವು ನಮ್ಮ ಜೀವನವನ್ನು ಹೇಗೆ ಉಪಯೋಗಿಸಬೇಕೆಂದು ಯೆಹೋವನು ಬಯಸುತ್ತಾನೆ?’—ಪ್ರಸಂಗಿ 12:1 ಓದಿ.

11 ಈ ಲೋಕ ಮತ್ತು ಅದರಲ್ಲಿರುವ ವಿಷಯಗಳು ಯೆಹೋವನಿಗೆ ಏನಿಷ್ಟಾನೋ, ಆತನೇನು ಯೋಚಿಸುತ್ತಾನೋ ಅದಕ್ಕೆ ವಿರುದ್ಧವಾಗಿವೆ ಅನ್ನುವುದನ್ನು ನಾವು ನೆನಪಿನಲ್ಲಿಡಬೇಕು. (ಯಾಕೋ. 4:7, 8; 1 ಯೋಹಾ. 2:15-17; 5:19) ಮಕ್ಕಳಿಗೆ ಯೆಹೋವನೊಂದಿಗೆ ಆಪ್ತ ಸಂಬಂಧ ಇದ್ದರೆ ಸೈತಾನನಿಂದ, ಈ ಲೋಕದಿಂದ ಮತ್ತು ಈ ಲೋಕದ ಕೆಟ್ಟ ಯೋಚನಾ ರೀತಿಯಿಂದ ಅವರಿಗೆ ಸಂರಕ್ಷಣೆ ಸಿಗುತ್ತದೆ. ಹೆತ್ತವರು ವಿದ್ಯಾಭ್ಯಾಸ ಮತ್ತು ಒಳ್ಳೇ ಕೆಲಸಕ್ಕೆ ಮೊದಲ ಸ್ಥಾನ ಕೊಟ್ಟರೆ, ಮಕ್ಕಳು ಸಹ ಯೆಹೋವನೊಂದಿಗಿರುವ ಸಂಬಂಧಕ್ಕಿಂತ ಈ ಲೋಕದಲ್ಲಿರುವ ವಿಷಯಗಳು ಹೆಚ್ಚು ಪ್ರಾಮುಖ್ಯ ಎಂದು ನೆನಸಬಹುದು. ಇದು ಅಪಾಯಕಾರಿ. ನಿಜ ಸಂತೋಷ ಯಾವುದರಿಂದ ಸಿಗುತ್ತದೆ ಎಂದು ಈ ಲೋಕ ನಿಮ್ಮ ಮಕ್ಕಳಿಗೆ ಕಲಿಸಿಕೊಡುವಂತೆ ಪ್ರೀತಿಯ ಹೆತ್ತವರಾದ ನೀವು ಬಿಡುತ್ತೀರಾ? ಯೆಹೋವನಿಗೆ ನಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡುವುದರಿಂದ ಮಾತ್ರ ನಿಜವಾದ ಸಂತೋಷ ಸಿಗುತ್ತದೆ.—ಕೀರ್ತನೆ 1:2, 3 ಓದಿ.

ಏನಾದರೂ ತಪ್ಪು ಮಾಡಿಬಿಡಬಹುದು

12. ಕೆಲವು ಹೆತ್ತವರು ತಮ್ಮ ಮಕ್ಕಳ ದೀಕ್ಷಾಸ್ನಾನವನ್ನು ಮುಂದೂಡಲು ಕಾರಣವೇನು?

12 ತನ್ನ ಮಗಳು ದೀಕ್ಷಾಸ್ನಾನ ಪಡೆಯುವುದು ಯಾಕೆ ಇಷ್ಟವಿರಲಿಲ್ಲ ಎಂದು ಒಬ್ಬ ತಾಯಿ ವಿವರಿಸುತ್ತಾ ಹೇಳಿದ್ದು: “ಇದಕ್ಕೆ ಮುಖ್ಯ ಕಾರಣ ಬಹಿಷ್ಕಾರದ ಏರ್ಪಾಡೆಂದು ಹೇಳಲು ನನಗೆ ನಾಚಿಕೆ ಆಗುತ್ತದೆ.” ಈ ಸಹೋದರಿಯಂತೆ, ತಮ್ಮ ಮಕ್ಕಳಿಗೆ ಹುಡುಗಾಟದ ಪ್ರಾಯ ದಾಟುವ ವರೆಗೆ ಅವರು ದೀಕ್ಷಾಸ್ನಾನ ಪಡೆದುಕೊಳ್ಳದೆ ಇರುವುದು ಒಳ್ಳೇದು ಎಂದು ಕೆಲವು ಹೆತ್ತವರು ನೆನಸುತ್ತಾರೆ. (ಆದಿ. 8:21; ಜ್ಞಾನೋ. 22:15) ‘ನನ್ನ ಮಗ ಅಥವಾ ಮಗಳಿಗೆ ದೀಕ್ಷಾಸ್ನಾನ ಆಗಿಲ್ಲದ ಕಾರಣ ಅವರನ್ನು ಬಹಿಷ್ಕಾರ ಮಾಡಲು ಸಾಧ್ಯವಿಲ್ಲ’ ಎಂದು ಈ ಹೆತ್ತವರು ನೆನಸಬಹುದು. ಈ ರೀತಿ ಯೋಚಿಸುವುದು ಯಾಕೆ ತಪ್ಪು?—ಯಾಕೋ. 1:22.

13. ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡೆದಿಲ್ಲವಾದರೆ ಅವನು ಯೆಹೋವನಿಗೆ ಲೆಕ್ಕ ಕೊಡಬೇಕಾಗಿಲ್ಲ ಎಂದು ಅರ್ಥನಾ? ವಿವರಿಸಿ.

13 ಮಕ್ಕಳು ಯೆಹೋವನಿಗೆ ಸಮರ್ಪಣೆ ಮಾಡಿಕೊಳ್ಳಲು ಸಿದ್ಧರಾಗಿರುವುದಕ್ಕಿಂತ ಮುಂಚೆಯೇ ಅವರು ದೀಕ್ಷಾಸ್ನಾನ ತೆಗೆದುಕೊಳ್ಳಬೇಕೆಂದು ಹೆತ್ತವರು ಬಯಸುವುದಿಲ್ಲ ನಿಜ. ಆದರೆ ಮಕ್ಕಳು ದೀಕ್ಷಾಸ್ನಾನ ತೆಗೆದುಕೊಳ್ಳುವ ವರೆಗೆ ಅವರೇನೇ ಮಾಡಿದರೂ ಯೆಹೋವನಿಗೆ ಲೆಕ್ಕ ಕೊಡಬೇಕಾಗಿಲ್ಲ ಎಂದು ನೆನಸುವುದು ತಪ್ಪು. ಯೆಹೋವನ ದೃಷ್ಟಿಯಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ತಿಳುಕೊಂಡಾಗಿಂದಲೇ ಮಕ್ಕಳು ದೇವರಿಗೆ ಲೆಕ್ಕ ಕೊಡಬೇಕಾಗುತ್ತದೆ. (ಯಾಕೋಬ 4:17 ಓದಿ.) ಜಾಣ್ಮೆಯುಳ್ಳ ಹೆತ್ತವರು ಮಕ್ಕಳು ದೀಕ್ಷಾಸ್ನಾನ ತೆಗೆದುಕೊಳ್ಳುವುದನ್ನು ತಡೆಯುವುದಿಲ್ಲ. ಮಕ್ಕಳು ತುಂಬ ಚಿಕ್ಕವರಾಗಿರುವ ಸಮಯದಿಂದಲೇ ಯೆಹೋವನು ಯಾವುದನ್ನು ಸರಿ ಅನ್ನುತ್ತಾನೋ ಅದನ್ನು ಇಷ್ಟಪಡಲು ಮತ್ತು ಆತನು ತಪ್ಪೆಂದು ಹೇಳುವುದನ್ನು ದ್ವೇಷಿಸಲು ಕಲಿಸುತ್ತಾರೆ. (ಲೂಕ 6:40) ನಿಮ್ಮ ಮಕ್ಕಳು ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳುವಾಗ ಗಂಭೀರವಾದ ಪಾಪ ಮಾಡುವುದಿಲ್ಲ. ಯಾಕೆಂದರೆ ಯೆಹೋವನಿಗೆ ಇಷ್ಟವಾಗುವುದನ್ನೇ ಮಾಡಲು ಅವರು ಬಯಸುತ್ತಾರೆ.—ಯೆಶಾ. 35:8.

ಬೇರೆಯವರು ಕೊಡಬಹುದಾದ ಸಹಾಯ

14. ಹೆತ್ತವರಿಗೆ ಹಿರಿಯರು ಹೇಗೆ ಸಹಾಯ ಮಾಡಬಹುದು?

14 ಯೆಹೋವನ ಸೇವೆಯಲ್ಲಿ ಇಡಬಹುದಾದ ಗುರಿಗಳ ಬಗ್ಗೆ ಹಿರಿಯರು ಮಕ್ಕಳೊಂದಿಗೆ ಸಕಾರಾತ್ಮಕವಾಗಿ ಮಾತಾಡುವಾಗ ಹೆತ್ತವರಿಗೆ ಸಹಾಯವಾಗುತ್ತದೆ. ಒಬ್ಬ ಸಹೋದರಿಗೆ ಆರು ವರ್ಷ ಇದ್ದಾಗ ಸಹೋದರ ರಸಲ್‌ ಅವರೊಂದಿಗೆ ಮಾತಾಡಿದ್ದರ ಬಗ್ಗೆ ಹೇಳುತ್ತಾರೆ. “ನನ್ನ ಆಧ್ಯಾತ್ಮಿಕ ಗುರಿಗಳೇನು ಎಂದು ತಿಳಿದುಕೊಳ್ಳಲು ಅವರು ನನ್ನ ಜೊತೆ 15 ನಿಮಿಷ ಮಾತಾಡಿದರು.” ಫಲಿತಾಂಶ? ಆ ಸಹೋದರಿ ಮುಂದೆ ಪಯನೀಯರ್‌ ಆದರು. 70 ವರ್ಷ ಪಯನೀಯರ್‌ ಸೇವೆ ಮಾಡಿದರು! ಸಕಾರಾತ್ಮಕವಾದ ಮಾತುಗಳು ಮತ್ತು ಪ್ರೋತ್ಸಾಹ ಒಬ್ಬರ ಇಡೀ ಜೀವನದ ಮೇಲೆ ಪ್ರಭಾವ ಬೀರುತ್ತದೆ ಅನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. (ಜ್ಞಾನೋ. 25:11) ರಾಜ್ಯ ಸಭಾಗೃಹದಲ್ಲಿ ನಡೆಯುವ ಕೆಲಸಗಳಲ್ಲಿ ಕೈಜೋಡಿಸುವಂತೆ ಸಹ ಹಿರಿಯರು ಹೆತ್ತವರನ್ನು ಮತ್ತು ಮಕ್ಕಳನ್ನು ಕರೆಯಬಹುದು. ಮಕ್ಕಳ ವಯಸ್ಸು ಮತ್ತು ಸಾಮರ್ಥ್ಯಕ್ಕನುಸಾರ ಅವರಿಗೆ ಕೆಲಸಗಳನ್ನು ಕೊಡಬಹುದು.

15. ಸಭೆಯಲ್ಲಿರುವ ಬೇರೆಯವರು ಹೇಗೆ ಯುವಜನರಿಗೆ ಸಹಾಯ ಮಾಡಬಹುದು?

15 ಸಭೆಯಲ್ಲಿರುವ ಬೇರೆಯವರು ಹೇಗೆ ಮಕ್ಕಳಿಗೆ ಸಹಾಯ ಮಾಡಬಹುದು? ವೈಯಕ್ತಿಕ ಆಸಕ್ತಿ ತೋರಿಸುವ ಮೂಲಕ ಇದನ್ನು ಮಾಡಬಹುದು. ಉದಾಹರಣೆಗೆ, ಆಧ್ಯಾತ್ಮಿಕವಾಗಿ ಪ್ರಗತಿ ಮಾಡುತ್ತಿರುವ ಲಕ್ಷಣಗಳು ಯುವಜನರಲ್ಲಿ ಕಂಡುಬಂದ ಕೂಡಲೆ ಅಂಥ ವಿಷಯಗಳಿಗೆ ಗಮನ ಕೊಡಬೇಕು. ಒಬ್ಬ ಹುಡುಗ ಅಥವಾ ಹುಡುಗಿ ಕೂಟದಲ್ಲಿ ಒಂದು ಒಳ್ಳೇ ಉತ್ತರ ಕೊಟ್ಟಿರಬಹುದು ಅಥವಾ ಮಧ್ಯವಾರದ ಕೂಟದಲ್ಲಿ ಒಂದು ಭಾಗವನ್ನು ನಿರ್ವಹಿಸಿರಬಹುದು. ಶಾಲೆಯಲ್ಲಿ ಸಾಕ್ಷಿ ಕೊಟ್ಟಿರಬಹುದು ಅಥವಾ ಪ್ರಲೋಭನೆ ಬಂದಾಗ ಅದನ್ನು ಎದುರಿಸಿ ನಿಂತಿರಬಹುದು. ಇಂಥ ವಿಷಯಗಳು ನಿಮ್ಮ ಗಮನಕ್ಕೆ ಬಂದ ಕೂಡಲೆ ಮಕ್ಕಳನ್ನು ಶ್ಲಾಘಿಸಲು ಮರೆಯಬೇಡಿ. ಕೂಟದ ಮುಂಚೆ ಮತ್ತು ನಂತರ ಅವರೊಂದಿಗೆ ಮಾತಾಡಲು ಸಮಯ ಮಾಡಿಕೊಳ್ಳಿ. ನಾವಿದನ್ನು ಮಾಡಿದರೆ ಮಕ್ಕಳಿಗೂ ತಾವು “ಮಹಾಸಭೆಯ” ಭಾಗವಾಗಿದ್ದೇವೆ ಎಂದು ಅನಿಸುತ್ತದೆ. (ಕೀರ್ತ. 35:18) ಆದರೆ ನಾವು ವೈಯಕ್ತಿಕ ಆಸಕ್ತಿ ತೋರಿಸುವಾಗ ಯೋಗ್ಯವಾದ ರೀತಿಯಲ್ಲಿ ನಡಕೊಳ್ಳಬೇಕು.

ದೀಕ್ಷಾಸ್ನಾನದ ವರೆಗೆ ಪ್ರಗತಿ ಮಾಡಲು ಸಹಾಯ ಮಾಡಿ

16, 17. (ಎ) ಮಕ್ಕಳು ದೀಕ್ಷಾಸ್ನಾನ ಪಡೆಯುವುದು ಯಾಕೆ ಪ್ರಾಮುಖ್ಯ? (ಬಿ) ಕ್ರೈಸ್ತ ಹೆತ್ತವರಿಗೆ ಯಾವ ಸಂತೋಷ ಸಿಗಬಹುದು? (ಲೇಖನದ ಆರಂಭದ ಚಿತ್ರ ನೋಡಿ.)

16 ಯೆಹೋವನನ್ನು ಪ್ರೀತಿಸಲು ಮಕ್ಕಳಿಗೆ ಕಲಿಸುವುದು ಹೆತ್ತವರಿಗಿರುವ ಒಂದು ಮಹಾನ್‌ ಸುಯೋಗ. (ಕೀರ್ತ. 127:3; ಎಫೆ. 6:4) ಇಸ್ರಾಯೇಲಿನಲ್ಲಿ ಮಕ್ಕಳು ಹುಟ್ಟುವಾಗಲೇ ಯೆಹೋವನಿಗೆ ಸಮರ್ಪಿತರಾಗಿರುತ್ತಿದ್ದರು. ಆದರೆ ನಮ್ಮ ಮಕ್ಕಳು ಹಾಗೆ ಸಮರ್ಪಿತರಾಗಿಲ್ಲ. ಅಷ್ಟೇ ಅಲ್ಲ, ಹೆತ್ತವರು ಯೆಹೋವನನ್ನು ಮತ್ತು ಸತ್ಯವನ್ನು ಪ್ರೀತಿಸುತ್ತಾರೆ ಎಂದ ಮಾತ್ರಕ್ಕೆ ಮಕ್ಕಳೂ ಪ್ರೀತಿಸುತ್ತಾರೆ ಎಂದರ್ಥವಲ್ಲ. ತಮ್ಮ ಮಕ್ಕಳನ್ನು ಕ್ರಿಸ್ತನ ಶಿಷ್ಯನಾಗಿ ಮಾಡಲು, ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ತೆಗೆದುಕೊಳ್ಳಲು ಅವರು ಹುಟ್ಟಿದಾಗಿಂದಲೇ ಸಹಾಯ ಮಾಡಬೇಕು ಎಂಬುದನ್ನು ಹೆತ್ತವರು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಇದಕ್ಕಿಂತ ದೊಡ್ಡ ವಿಷಯ ಇರಲು ಸಾಧ್ಯನಾ? ಒಬ್ಬ ವ್ಯಕ್ತಿ ಸಮರ್ಪಣೆ ಮಾಡಿಕೊಂಡು ದೀಕ್ಷಾಸ್ನಾನ ಪಡೆದು ಯೆಹೋವನಿಗೆ ನಂಬಿಗಸ್ತ ಸೇವೆ ಮಾಡಿದರೆ ಮಹಾ ಸಂಕಟದಿಂದ ಪಾರಾಗುತ್ತಾನೆ.—ಮತ್ತಾ. 24:13.

ತಮ್ಮ ಮಗುವನ್ನು ಕ್ರಿಸ್ತನ ಶಿಷ್ಯನಾಗಿ ಮಾಡುವ ಗುರಿ ಹೆತ್ತವರಿಗೆ ಇರಬೇಕು (ಪ್ಯಾರ 16, 17 ನೋಡಿ)

17 ಬ್ಲಾಸಮ್‌ ಬ್ರಾಂಟ್‌ ದೀಕ್ಷಾಸ್ನಾನ ಪಡೆಯಲು ಇಷ್ಟಪಟ್ಟಾಗ ಅವರ ಹೆತ್ತವರು ತಮ್ಮ ಮಗಳು ಅದಕ್ಕೆ ಸಿದ್ಧವಾಗಿದ್ದಾಳಾ ಎಂದು ಖಚಿತಪಡಿಸಿಕೊಳ್ಳಲು ಬಯಸಿದರು. ಅವರಿಗೆ ಇದು ಖಚಿತವಾದಾಗ ಬ್ಲಾಸಮ್‌ ತೆಗೆದುಕೊಂಡ ತೀರ್ಮಾನವನ್ನು ಬೆಂಬಲಿಸಿದರು. ಬ್ಲಾಸಮ್‌ ದೀಕ್ಷಾಸ್ನಾನ ಪಡೆಯುವುದಕ್ಕೆ ಹಿಂದಿನ ರಾತ್ರಿ ಅವರ ತಂದೆ ಏನು ಮಾಡಿದರೆಂದು ತಿಳಿಸುತ್ತಾರೆ: ‘ಅಪ್ಪ ನಮ್ಮೆಲ್ಲರನ್ನು ಮೊಣಕಾಲೂರುವಂತೆ ಹೇಳಿ ಒಂದು ಪ್ರಾರ್ಥನೆ ಮಾಡಿದರು. ತನ್ನ ಮುದ್ದು ಮಗಳು ಯೆಹೋವನಿಗೆ ತನ್ನ ಜೀವನವನ್ನು ಸಮರ್ಪಿಸಿಕೊಳ್ಳಲು ತೆಗೆದುಕೊಂಡಿರುವ ತೀರ್ಮಾನ ನೋಡಿ ತನಗೆ ತುಂಬ ಸಂತೋಷವಾಗಿದೆ ಎಂದು ತಿಳಿಸಿದರು.’ ಇದಾಗಿ 60 ವರ್ಷಗಳಾದರೂ ಬ್ಲಾಸಮ್‌ ‘ಅದೆಷ್ಟೇ ಯುಗಗಳೇ ಸಾಗಿದರೂ ನಾನು ಆ ರಾತ್ರಿಯನ್ನು ಮರೆಯಲ್ಲ!’ ಎಂದು ನೆನಪಿಸಿಕೊಳ್ಳುತ್ತಾರೆ. ಹೆತ್ತವರೇ, ನಿಮ್ಮ ಮಕ್ಕಳೂ ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯುವುದನ್ನು ನೋಡುವ ಸಂತೋಷ, ಸಂತೃಪ್ತಿ ನಿಮಗೂ ಸಿಗಲಿ!

^ ಪ್ಯಾರ. 9 ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್‌) ಸಂಪುಟ 2​ರ ಪುಟ 304-310​ರಲ್ಲಿರುವ ಮಾಹಿತಿಯನ್ನು ಹೆತ್ತವರು ಮಕ್ಕಳೊಂದಿಗೆ ಚರ್ಚಿಸಿದರೆ ಸಹಾಯವಾಗುತ್ತದೆ. ಏಪ್ರಿಲ್‌ 2011​ರ ನಮ್ಮ ರಾಜ್ಯ ಸೇವೆಯ ಪುಟ 2​ರಲ್ಲಿರುವ “ಪ್ರಶ್ನಾ ಚೌಕ”ವನ್ನು ಸಹ ನೋಡಿ.