ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 11

ಯೆಹೋವನ ಮಾತು ಕೇಳಿ

ಯೆಹೋವನ ಮಾತು ಕೇಳಿ

“ಇವನು ಪ್ರಿಯನಾಗಿರುವ ನನ್ನ ಮಗನು, . . . ಇವನ ಮಾತಿಗೆ ಕಿವಿಗೊಡಿರಿ.”—ಮತ್ತಾ. 17:5.

ಗೀತೆ 120 ಆಲಿಸಿ, ಪಾಲಿಸಿ, ಹರಸಲ್ಪಡಿ

ಕಿರುನೋಟ *

1-2. (ಎ) ಯೆಹೋವನು ಮಾನವರ ಜೊತೆ ಹೇಗೆ ಮಾತಾಡಿದ್ದಾನೆ? (ಬಿ) ಈ ಲೇಖನದಲ್ಲಿ ಏನನ್ನು ಚರ್ಚೆ ಮಾಡಲಿದ್ದೇವೆ?

ಯೆಹೋವನಿಗೆ ನಮ್ಮ ಜೊತೆ ಮಾತಾಡಲು ತುಂಬ ಇಷ್ಟ. ಹಿಂದಿನ ಕಾಲದಲ್ಲಿ ಆತನು ಹೇಳಲು ಬಯಸಿದ ವಿಷಯಗಳನ್ನು ತನ್ನ ಪ್ರವಾದಿಗಳು, ದೇವದೂತರು ಮತ್ತು ತನ್ನ ಮಗನಾದ ಯೇಸು ಕ್ರಿಸ್ತನ ಮೂಲಕ ತಿಳಿಸಿದನು. (ಆಮೋ. 3:7; ಗಲಾ. 3:19; ಪ್ರಕ. 1:1) ಇಂದು ಆತನು ತನ್ನ ವಾಕ್ಯವಾದ ಬೈಬಲಿನ ಮೂಲಕ ನಮ್ಮ ಜೊತೆ ಮಾತಾಡುತ್ತಾನೆ. ಆತನು ಒಂದು ವಿಷಯದ ಬಗ್ಗೆ ಹೇಗೆ ಯೋಚಿಸುತ್ತಾನೆ ಮತ್ತು ಒಂದು ವಿಷಯವನ್ನು ಒಂದು ನಿರ್ದಿಷ್ಟ ವಿಧದಲ್ಲಿ ಯಾಕೆ ಮಾಡುತ್ತಾನೆ ಎಂದು ಅರ್ಥಮಾಡಿಕೊಳ್ಳಲು ಬೈಬಲ್‌ ಸಹಾಯ ಮಾಡುತ್ತದೆ.

2 ಯೇಸು ಭೂಮಿಯಲ್ಲಿದ್ದಾಗ ಯೆಹೋವನು ಮೂರು ಸಲ ಸ್ವರ್ಗದಿಂದ ಮಾತಾಡಿದನು. ಆ ಮೂರು ಸಂದರ್ಭದಲ್ಲಿ ಆತನು ಏನು ಹೇಳಿದನು, ಆತನು ಏನು ಹೇಳಿದನೋ ಅದರಿಂದ ನಾವೇನು ಕಲಿಯಬಹುದು ಮತ್ತು ಆತನು ಹೇಳಿದ ಮಾತಿನಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು ಎಂದು ನೋಡೋಣ.

“ನೀನು ಪ್ರಿಯನಾಗಿರುವ ನನ್ನ ಮಗನು”

3. (ಎ) ಮಾರ್ಕ 1:9-11​ರಲ್ಲಿ ಇರುವಂತೆ, ಯೇಸು ದೀಕ್ಷಾಸ್ನಾನ ತಗೊಂಡಾಗ ಯೆಹೋವನು ಏನು ಹೇಳಿದನು? (ಬಿ) ಆ ಮಾತುಗಳಿಂದ ಯಾವ ಮೂರು ಅಂಶಗಳು ಗೊತ್ತಾಗುತ್ತೆ?

3 ಮಾರ್ಕ 1:9-11​ರಲ್ಲಿ ಯೆಹೋವನು ಸ್ವರ್ಗದಿಂದ ಮಾತಾಡಿದ ಮೊದಲನೇ ಸಂದರ್ಭದ ಬಗ್ಗೆ ಬರೆಯಲಾಗಿದೆ. (ಓದಿ.) “ನೀನು ಪ್ರಿಯನಾಗಿರುವ ನನ್ನ ಮಗನು; ನಾನು ನಿನ್ನನ್ನು ಮೆಚ್ಚಿದ್ದೇನೆ” ಎಂದು ಯೆಹೋವನು ಹೇಳಿದನು. ಯೆಹೋವನು ತನ್ನನ್ನು ಪ್ರೀತಿಸುತ್ತಾನೆ ಮತ್ತು ತನ್ನಲ್ಲಿ ನಂಬಿಕೆ ಇಟ್ಟಿದ್ದಾನೆ ಎಂದು ಕೇಳಿದಾಗ ಯೇಸುವಿಗೆ ಎಷ್ಟು ಖುಷಿಯಾಗಿರಬೇಕಲ್ವಾ? ಯೆಹೋವನ ಮಾತುಗಳಿಂದ ಯೇಸುವಿನ ಬಗ್ಗೆ ಮೂರು ಮುಖ್ಯ ಅಂಶಗಳು ಗೊತ್ತಾಗುತ್ತದೆ. ಮೊದಲನೇದು, ಯೇಸು ದೇವರ ಮಗ. ಎರಡನೇದು, ಯೆಹೋವನು ತನ್ನ ಮಗನನ್ನು ಪ್ರೀತಿಸುತ್ತಾನೆ. ಮೂರನೇದು, ಯೆಹೋವನು ತನ್ನ ಮಗನನ್ನು ಮೆಚ್ಚಿದ್ದಾನೆ. ಒಂದೊಂದಾಗಿ ಈ ಅಂಶಗಳ ಬಗ್ಗೆ ಚೆನ್ನಾಗಿ ತಿಳುಕೊಳ್ಳೋಣ.

4. ಯೇಸು ದೀಕ್ಷಾಸ್ನಾನ ಪಡಕೊಂಡಾಗ ಹೇಗೆ ಒಂದು ಹೊಸ ವಿಧದಲ್ಲಿ ದೇವರ ಮಗನಾದನು?

4 “ನೀನು . . . ನನ್ನ ಮಗನು.” ಈ ಮಾತುಗಳನ್ನು ಹೇಳುವ ಮೂಲಕ ತನ್ನ ಮತ್ತು ತನ್ನ ಪ್ರಿಯ ಪುತ್ರನಾದ ಯೇಸುವಿನ ಮಧ್ಯೆ ಒಂದು ಹೊಸ ಸಂಬಂಧ ಉಂಟಾಯಿತೆಂದು ಯೆಹೋವನು ಹೇಳಿದನು. ಯೇಸು ಭೂಮಿಗೆ ಬರುವ ಮುಂಚೆನೇ ದೇವರ ಮಗನಾಗಿದ್ದನು. ದೀಕ್ಷಾಸ್ನಾನ ಪಡಕೊಂಡಾಗ ಆತನನ್ನು ಪವಿತ್ರಾತ್ಮದಿಂದ ಅಭಿಷೇಕಿಸಲಾಯಿತು. ಅಭಿಷೇಕಗೊಂಡ ತನ್ನ ಮಗ ಸ್ವರ್ಗಕ್ಕೆ ವಾಪಸ್‌ ಹೋಗಿ ರಾಜನಾಗಲು ಮತ್ತು ಮಹಾ ಯಾಜಕನಾಗಲು ಈಗ ದಾರಿ ತೆರೆಯಿತು ಎಂದು ದೇವರು ಇದರ ಮೂಲಕ ಸೂಚಿಸಿದನು. (ಲೂಕ 1:31-33; ಇಬ್ರಿ. 1:8, 9; 2:17) ಆದ್ದರಿಂದ ಯೇಸು ದೀಕ್ಷಾಸ್ನಾನ ತಗೊಂಡಾಗ “ನೀನು . . . ನನ್ನ ಮಗನು” ಎಂದು ಯೆಹೋವನು ಹೇಳಿದ್ದು ಸೂಕ್ತವಾಗಿತ್ತು.—ಲೂಕ 3:22.

ನಮಗೆ ಶ್ಲಾಘನೆ ಪ್ರೋತ್ಸಾಹ ಸಿಕ್ಕಿದಾಗ ಹೆಚ್ಚು ಸೇವೆ ಮಾಡುತ್ತೇವೆ (ಪ್ಯಾರ 5 ನೋಡಿ) *

5. ನಾವು ಯೆಹೋವನ ತರ ಹೇಗೆ ಪ್ರೀತಿ ತೋರಿಸಬಹುದು ಮತ್ತು ಶ್ಲಾಘಿಸಬಹುದು?

5 ‘ನೀನು ಪ್ರಿಯನು.’ ಪ್ರೀತಿ ಮತ್ತು ಮೆಚ್ಚುಗೆ ತೋರಿಸುವುದರಲ್ಲಿ ಯೆಹೋವನು ಉತ್ತಮ ಮಾದರಿ ಇಟ್ಟಿದ್ದಾನೆ. (ಯೋಹಾ. 5:20) ಅದೇ ರೀತಿ ನಾವು ಸಹ ಬೇರೆಯವರನ್ನು ಪ್ರೋತ್ಸಾಹಿಸಲು ಅವಕಾಶಗಳಿಗಾಗಿ ಹುಡುಕಬೇಕು. ನಾವು ಪ್ರೀತಿಸುವ ಒಬ್ಬ ವ್ಯಕ್ತಿ ನಮಗೆ ಪ್ರೀತಿ ತೋರಿಸಿದಾಗ ಅಥವಾ ನಾವು ಮಾಡಿದ ಒಳ್ಳೇ ಕೆಲಸಕ್ಕೆ ನಮ್ಮನ್ನು ಶ್ಲಾಘಿಸಿದಾಗ ನಮ್ಮ ಹೃದಯ ಹೂವಿನಂತೆ ಅರಳುತ್ತೆ. ಆದ್ದರಿಂದ ನಮ್ಮ ಸಭೆಯಲ್ಲಿರುವ ಸಹೋದರ-ಸಹೋದರಿಯರಿಗೆ ಮತ್ತು ನಮ್ಮ ಕುಟುಂಬದ ಸದಸ್ಯರಿಗೆ ಸಹ ನಾವು ಪ್ರೀತಿ ತೋರಿಸಬೇಕು, ಪ್ರೋತ್ಸಾಹಿಸಬೇಕು. ನಾವು ಒಬ್ಬರನ್ನು ಶ್ಲಾಘಿಸಿದಾಗ ಅವರ ನಂಬಿಕೆ ಬಲವಾಗುತ್ತದೆ ಮತ್ತು ಅವರು ಯೆಹೋವನ ಸೇವೆಯನ್ನು ನಂಬಿಗಸ್ತಿಕೆಯಿಂದ ಮಾಡಿಕೊಂಡು ಹೋಗಲು ಹೊಸ ಬಲ ಸಿಗುತ್ತದೆ. ಹೆತ್ತವರು ಮುಖ್ಯವಾಗಿ ತಮ್ಮ ಮಕ್ಕಳನ್ನು ಶ್ಲಾಘಿಸಬೇಕು. ಹೆತ್ತವರು ತಮ್ಮ ಮಕ್ಕಳು ಮಾಡುವ ಒಳ್ಳೇ ವಿಷಯಗಳಿಗೆ ಅವರನ್ನು ಶ್ಲಾಘಿಸುವಾಗ ಮತ್ತು ಪ್ರೀತಿ ತೋರಿಸುವಾಗ ಮಕ್ಕಳು ತುಂಬ ಚೆನ್ನಾಗಿ ಬೆಳೆಯುತ್ತಾರೆ.

6. ಯೇಸು ಕ್ರಿಸ್ತನನ್ನು ಪೂರ್ತಿ ನಂಬಲು ನಮಗೆ ಯಾವ ಕಾರಣ ಇದೆ?

6 “ಇವನನ್ನು ನಾನು ಮೆಚ್ಚಿದ್ದೇನೆ.” ತನ್ನ ಮಗ ತನ್ನ ಚಿತ್ತದಂತೆ ಖಂಡಿತ ನಡಕೊಳ್ಳುತ್ತಾನೆ ಅನ್ನುವ ಭರವಸೆ ಯೆಹೋವನಿಗಿತ್ತು ಎಂದು ಆ ಮಾತುಗಳಿಂದ ಗೊತ್ತಾಗುತ್ತದೆ. ಯೆಹೋವನಿಗೆ ತನ್ನ ಮಗನಲ್ಲಿ ಅಷ್ಟೊಂದು ಭರವಸೆ ಇದೆ. ಅದೇ ರೀತಿ ನಾವು ಕೂಡ ಯೇಸುವನ್ನು ಪೂರ್ತಿಯಾಗಿ ನಂಬಬೇಕು. ಯೆಹೋವನು ಮಾತು ಕೊಟ್ಟಿರುವ ಎಲ್ಲಾ ವಿಷಯಗಳನ್ನು ಯೇಸು ಖಂಡಿತ ನೆರವೇರಿಸುತ್ತಾನೆ ಎಂಬ ಭರವಸೆ ಇಡಬೇಕು. (2 ಕೊರಿಂ. 1:20) ನಾವು ಯೇಸುವಿನ ಮಾದರಿಯ ಬಗ್ಗೆ ಧ್ಯಾನಿಸುವಾಗ, ಆತನಿಂದ ಇನ್ನಷ್ಟು ಕಲಿಯಬೇಕು ಮತ್ತು ಆತನ ಹೆಜ್ಜೆಜಾಡನ್ನು ಚಾಚೂತಪ್ಪದೆ ಅನುಸರಿಸಬೇಕು ಎಂದು ಅನಿಸುತ್ತದೆ. ನಾವೆಲ್ಲರೂ ಒಂದು ಗುಂಪಾಗಿ ಇದನ್ನು ಖಂಡಿತ ಮಾಡುತ್ತೇವೆ ಅನ್ನುವ ಭರವಸೆ ಯೆಹೋವನಿಗಿದೆ.—1 ಪೇತ್ರ 2:21.

“ಇವನ ಮಾತಿಗೆ ಕಿವಿಗೊಡಿ”

7. (ಎ) ಮತ್ತಾಯ 17:1-5ಕ್ಕನುಸಾರ, ಯೆಹೋವನು ಯಾವಾಗ ಸ್ವರ್ಗದಿಂದ ಮಾತಾಡಿದನು? (ಬಿ) ಆತನು ಏನು ಹೇಳಿದನು?

7 ಮತ್ತಾಯ 17:1-5 ಓದಿ. ಯೇಸು ‘ರೂಪಾಂತರಗೊಂಡಾಗ’ ಯೆಹೋವನು ಎರಡನೇ ಸಲ ಸ್ವರ್ಗದಿಂದ ಮಾತಾಡಿದನು. ಯೇಸು ತನ್ನ ಜೊತೆ ಪೇತ್ರ, ಯಾಕೋಬ ಮತ್ತು ಯೋಹಾನನನ್ನು ಎತ್ತರವಾದ ಒಂದು ಬೆಟ್ಟಕ್ಕೆ ಕರಕೊಂಡು ಹೋದನು. ಅಲ್ಲಿ ಅವರು ಅಸಾಧಾರಣವಾದ ಒಂದು ದರ್ಶನ ನೋಡಿದರು. ಯೇಸುವಿನ ಮುಖ ಮತ್ತು ಬಟ್ಟೆ ಸೂರ್ಯನಂತೆ ಪ್ರಕಾಶಿಸಿತು. ಮೋಶೆ ಮತ್ತು ಎಲೀಯನಂತೆ ತೋರಿದ ಇಬ್ಬರು ವ್ಯಕ್ತಿಗಳು ಕಾಣಿಸಿಕೊಂಡು ಯೇಸುವಿನ ಜೊತೆ ಆತನ ಮರಣ ಮತ್ತು ಪುನರುತ್ಥಾನದ ಬಗ್ಗೆ ಮಾತಾಡಿದರು. ಯೇಸುವಿನ ಜೊತೆ ಬೆಟ್ಟಕ್ಕೆ ಹೋದ ಮೂವರು ಅಪೊಸ್ತಲರಿಗೆ ‘ತುಂಬ ನಿದ್ದೆಹತ್ತಿತ್ತು.’ ಆದರೆ ಆಮೇಲೆ ಅವರಿಗೆ ಸಂಪೂರ್ಣ ಎಚ್ಚರ ಆದಾಗ ಈ ಅದ್ಭುತ ದರ್ಶನವನ್ನು ನೋಡಿದರು. (ಲೂಕ 9:29-32) ನಂತರ ಕಾಂತಿಯುಳ್ಳ ಮೋಡ ಅವರನ್ನು ಕವಿಯಿತು ಮತ್ತು ಆ ಮೋಡದಿಂದ ದೇವರ ಸ್ವರ ಅವರಿಗೆ ಕೇಳಿಸಿತು! ಯೇಸುವಿನ ದೀಕ್ಷಾಸ್ನಾನದ ಸಮಯದಲ್ಲಿ ಹೇಳಿದಂತೆಯೇ ಯೆಹೋವನು “ಇವನು ಪ್ರಿಯನಾಗಿರುವ ನನ್ನ ಮಗನು, ಇವನನ್ನು ನಾನು ಮೆಚ್ಚಿದ್ದೇನೆ” ಎಂದು ಹೇಳಿ ತನ್ನ ಮಗನ ಮೇಲಿದ್ದ ಪ್ರೀತಿ ಮತ್ತು ಮೆಚ್ಚುಗೆಯನ್ನು ತೋರಿಸಿದನು. ಆದರೆ ಈ ಸಲ ಒಂದು ವಾಕ್ಯವನ್ನು ಕೂಡಿಸಿ ಹೇಳಿದನು. “ಇವನ ಮಾತಿಗೆ ಕಿವಿಗೊಡಿ” ಅಂದನು.

8. ಯೇಸು ಮತ್ತು ಆತನ ಶಿಷ್ಯರ ಮೇಲೆ ರೂಪಾಂತರ ದರ್ಶನ ಯಾವ ಪ್ರಭಾವ ಬೀರಿತು?

8 ಈ ದರ್ಶನ ಯೇಸು ದೇವರ ರಾಜ್ಯದ ರಾಜನಾದಾಗ ಆತನಿಗೆ ಸಿಗಲಿದ್ದ ಮಹಿಮೆ ಮತ್ತು ಅಧಿಕಾರಕ್ಕೆ ಮುನ್ನೋಟ ಕೊಟ್ಟಂತೆ ಇತ್ತು. ಇದರಿಂದ ಯೇಸುವಿಗೆ ತುಂಬ ಪ್ರೋತ್ಸಾಹ ಸಿಕ್ಕಿತು. ಆತನು ಅನುಭವಿಸಲಿದ್ದ ಕಷ್ಟಗಳು ಮತ್ತು ಹಿಂಸಾತ್ಮಕ ಮರಣಕ್ಕೆ ಇದು ಆತನನ್ನು ಸಿದ್ಧಪಡಿಸಿತು. ಈ ದರ್ಶನ ಯೇಸುವಿನ ಶಿಷ್ಯರ ನಂಬಿಕೆಯನ್ನೂ ಬಲಪಡಿಸಿತು. ಮುಂದೆ ಅವರು ಎದುರಿಸಲಿಕ್ಕಿದ್ದ ಕಷ್ಟಗಳು ಮತ್ತು ಮಾಡಲಿಕ್ಕಿದ್ದ ಸೇವೆಗಾಗಿ ಅವರನ್ನು ಸಿದ್ಧಪಡಿಸಿತು. ಈ ರೂಪಾಂತರ ದರ್ಶನವನ್ನು ನೋಡಿ 30 ವರ್ಷಗಳಾದ ಮೇಲೆ ಅಪೊಸ್ತಲ ಪೇತ್ರನು ಅದರ ಬಗ್ಗೆ ಮಾತಾಡಿದನು. ಆತನ ಮನಸ್ಸಲ್ಲಿ ಅದು ಹಚ್ಚಹಸುರಾಗಿತ್ತು ಎಂದು ಇದರಿಂದ ಗೊತ್ತಾಗುತ್ತದೆ.—2 ಪೇತ್ರ 1:16-18.

9. ಯೇಸು ತನ್ನ ಶಿಷ್ಯರಿಗೆ ಯಾವ ಪ್ರಾಯೋಗಿಕ ಸಲಹೆಗಳನ್ನು ಕೊಟ್ಟನು?

9 “ಇವನ ಮಾತಿಗೆ ಕಿವಿಗೊಡಿ.” ದೇವರು ಹೇಳಿದ ಈ ಮಾತಿನಿಂದ ನಾವು ಯೇಸುವಿನ ಮಾತನ್ನು ಕೇಳಿಸಿಕೊಂಡು ಅದರಂತೆ ನಡೆಯಬೇಕೆಂದು ಸ್ಪಷ್ಟವಾಗುತ್ತದೆ. ಯೇಸು ಭೂಮಿಯಲ್ಲಿದ್ದಾಗ ಏನು ಹೇಳಿದನು? ನಾವು ಕೇಳಿಸಿಕೊಳ್ಳಬೇಕಾದ ಅನೇಕ ಒಳ್ಳೇ ವಿಷಯಗಳನ್ನು ಹೇಳಿದನು. ಉದಾಹರಣೆಗೆ, ಸುವಾರ್ತೆಯನ್ನು ಹೇಗೆ ಸಾರಬೇಕೆಂದು ತನ್ನ ಹಿಂಬಾಲಕರಿಗೆ ಪ್ರೀತಿಯಿಂದ ಕಲಿಸಿಕೊಟ್ಟನು. (ಮತ್ತಾ. 28:19, 20) ಸದಾ ಎಚ್ಚರವಾಗಿರಬೇಕೆಂದು ಪುನಃ ಪುನಃ ಹೇಳಿದನು. (ಮತ್ತಾ. 24:42) ಶ್ರಮಪಡಬೇಕೆಂದು, ಪ್ರಯತ್ನ ಬಿಟ್ಟುಬಿಡಬಾರದೆಂದು ಸಹ ಪ್ರೋತ್ಸಾಹಿಸಿದನು. (ಲೂಕ 13:24) ತನ್ನ ಹಿಂಬಾಲಕರು ಒಬ್ಬರನ್ನೊಬ್ಬರು ಪ್ರೀತಿಸಬೇಕು, ಐಕ್ಯವಾಗಿರಬೇಕು, ತನ್ನ ಆಜ್ಞೆಗಳನ್ನು ಪಾಲಿಸಬೇಕೆಂದು ಒತ್ತಿಹೇಳಿದನು. (ಯೋಹಾ. 15:10, 12, 13) ಯೇಸು ಕೊಟ್ಟ ಸಲಹೆಗಳೆಲ್ಲಾ ತುಂಬ ಪ್ರಾಯೋಗಿಕವಾಗಿತ್ತು. ಆತನ ಮಾತುಗಳಿಗೆ ಇವತ್ತು ಸಹ ಅಷ್ಟೇ ಬೆಲೆ ಇದೆ.

10-11. ನಾವು ಯೇಸುವಿನ ಸ್ವರಕ್ಕೆ ಕಿವಿಗೊಡುತ್ತಿದ್ದೇವೆ ಎಂದು ಹೇಗೆ ತೋರಿಸಬಹುದು?

10 “ಸತ್ಯದ ಪಕ್ಷದಲ್ಲಿರುವ ಎಲ್ಲರೂ ನನ್ನ ಸ್ವರಕ್ಕೆ ಕಿವಿಗೊಡುತ್ತಾರೆ” ಎಂದು ಯೇಸು ಹೇಳಿದನು. (ಯೋಹಾ. 18:37) ನಾವು ‘ಒಬ್ಬರನ್ನೊಬ್ಬರು ಸಹಿಸಿಕೊಂಡು ಉದಾರವಾಗಿ ಕ್ಷಮಿಸಿದರೆ’ ನಾವು ಆತನ ಸ್ವರಕ್ಕೆ ಕಿವಿಗೊಡುತ್ತಿದ್ದೇವೆ ಎಂದರ್ಥ. (ಕೊಲೊ. 3:13; ಲೂಕ 17:3, 4) ನಾವು ಹುರುಪಿನಿಂದ ಸುವಾರ್ತೆ ಸಾರುವ ಮೂಲಕ ಸಹ ಆತನ ಸ್ವರಕ್ಕೆ ಕಿವಿಗೊಡುತ್ತಿದ್ದೇವೆ ಎಂದು ತೋರಿಸಿಕೊಡುತ್ತೇವೆ. “ಅನುಕೂಲವಾದ ಸಮಯದಲ್ಲಿಯೂ ತೊಂದರೆಯ ಸಮಯದಲ್ಲಿಯೂ” ಸುವಾರ್ತೆ ಸಾರಲು ಮುಂದೆ ಬರುತ್ತೇವೆ.—2 ತಿಮೊ. 4:2.

11 “ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ” ಎಂದು ಯೇಸು ಹೇಳಿದನು. (ಯೋಹಾ. 10:27) ಕ್ರಿಸ್ತನ ಹಿಂಬಾಲಕರು ಆತನ ಸ್ವರಕ್ಕೆ ಕಿವಿಗೊಡುತ್ತಾರೆ ಎಂದು ಅದನ್ನು ಕೇಳಿಸಿಕೊಳ್ಳುವ ಮೂಲಕ ಮಾತ್ರ ಅಲ್ಲ ಅದರಂತೆ ನಡೆಯುವ ಮೂಲಕವೂ ತೋರಿಸುತ್ತಾರೆ. ‘ಜೀವನದ ಚಿಂತೆಗಳು’ ತಮ್ಮನ್ನು ದಾರಿತಪ್ಪಿಸಲು ಅವರು ಬಿಡಲ್ಲ. (ಲೂಕ 21:34) ಯೇಸುವಿನ ಆಜ್ಞೆಗಳನ್ನು ಪಾಲಿಸುವುದನ್ನು ಜೀವನದ ಮುಖ್ಯ ಗುರಿಯಾಗಿ ಮಾಡಿಕೊಳ್ಳುತ್ತಾರೆ. ಏನೇ ಕಷ್ಟ ಬಂದರೂ ಅದನ್ನು ಬಿಟ್ಟುಕೊಡಲ್ಲ. ನಮ್ಮ ಸಹೋದರ-ಸಹೋದರಿಯರಲ್ಲಿ ಅನೇಕರು ತುಂಬ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಉದಾಹರಣೆಗೆ, ವಿರೋಧಿಗಳ ಅಟ್ಟಹಾಸವನ್ನು ತಾಳಿಕೊಳ್ಳಬೇಕಾಗುತ್ತದೆ, ಬಡತನದ ಬೇಗೆಯಲ್ಲಿ ಬೇಯಬೇಕಾಗುತ್ತದೆ, ನೈಸರ್ಗಿಕ ವಿಪತ್ತುಗಳಿಂದ ತತ್ತರಿಸಬೇಕಾಗುತ್ತದೆ. ಅದೇನೇ ಆದರೂ ಅವರು ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಲು ಪಣತೊಟ್ಟಿದ್ದಾರೆ. ಇಂಥವರಿಗೆ ಯೇಸು “ನನ್ನ ಆಜ್ಞೆಗಳನ್ನು ಹೊಂದಿದ್ದು ಅವುಗಳನ್ನು ಕೈಕೊಳ್ಳುವವನೇ ನನ್ನನ್ನು ಪ್ರೀತಿಸುವವನಾಗಿದ್ದಾನೆ. ನನ್ನನ್ನು ಪ್ರೀತಿಸುವವನು ತಂದೆಯಿಂದ ಪ್ರೀತಿಸಲ್ಪಡುವನು” ಎಂಬ ಆಶ್ವಾಸನೆ ಕೊಡುತ್ತಾನೆ.—ಯೋಹಾ. 14:21.

ಆಧ್ಯಾತ್ಮಿಕ ವಿಷಯಗಳಿಗೆ ಗಮನ ಕೊಡಲು ಸೇವೆ ಸಹಾಯ ಮಾಡುತ್ತದೆ (ಪ್ಯಾರ 12 ನೋಡಿ) *

12. ನಾವು ಯೇಸುವಿನ ಸ್ವರಕ್ಕೆ ಕಿವಿಗೊಡುತ್ತೇವೆ ಎಂದು ತೋರಿಸುವ ಇನ್ನೊಂದು ವಿಧ ಯಾವುದು?

12 ನಾವು ಯೇಸುವಿನ ಸ್ವರಕ್ಕೆ ಕಿವಿಗೊಡುತ್ತೇವೆ ಎಂದು ತೋರಿಸಲು ಇನ್ನೊಂದು ವಿಧ ಸಹ ಇದೆ. ಮುಂದೆ ನಿಂತು ನಮ್ಮನ್ನು ನಡೆಸಲು ಯೇಸು ಯಾರನ್ನು ನೇಮಿಸಿದ್ದಾನೋ ಅವರಿಗೆ ನಾವು ಸಹಕಾರ ಕೊಡಬೇಕು. (ಇಬ್ರಿ. 13:7, 17) ಯೆಹೋವನ ಸಂಘಟನೆ ಇತ್ತೀಚೆಗೆ ಅನೇಕ ಬದಲಾವಣೆಗಳನ್ನು ಮಾಡಿದೆ. ಉದಾಹರಣೆಗೆ, ಸೇವೆಯಲ್ಲಿ ಉಪಯೋಗಿಸಲು ಹೊಸ ಸಾಧನಗಳು ಮತ್ತು ವಿಧಾನಗಳನ್ನು ಪರಿಚಯಿಸಿದೆ. ನಮ್ಮ ಮಧ್ಯವಾರದ ಕೂಟವನ್ನು ನಡೆಸುವ ವಿಧಾನವನ್ನು ಬದಲಾಯಿಸಿದೆ. ನಮ್ಮ ರಾಜ್ಯ ಸಭಾಗೃಹಗಳನ್ನು ಕಟ್ಟುವ, ನವೀಕರಿಸುವ ಮತ್ತು ಒಳ್ಳೇ ಸ್ಥಿತಿಯಲ್ಲಿಡುವ ವಿಧಾನಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಸಂಘಟನೆ ತುಂಬ ಆಲೋಚನೆ ಮಾಡಿ ಪ್ರೀತಿಯಿಂದ ಮಾಡಿರುವ ಈ ಎಲ್ಲಾ ಬದಲಾವಣೆಗಳನ್ನು ನಾವು ತುಂಬ ಮೆಚ್ಚುತ್ತೇವೆ ಅಲ್ವಾ? ಸಂಘಟನೆ ಸರಿಯಾದ ಸಮಯಕ್ಕೆ ಕೊಡುವ ಎಲ್ಲಾ ನಿರ್ದೇಶನಗಳನ್ನು ಪಾಲಿಸಲು ನಾವು ಹಾಕುವ ಪ್ರಯತ್ನವನ್ನು ಯೆಹೋವನು ಖಂಡಿತ ಆಶೀರ್ವದಿಸುತ್ತಾನೆ.

13. ಯೇಸುವಿನ ಸ್ವರಕ್ಕೆ ಕಿವಿಗೊಡುವುದರಿಂದ ಯಾವ ಪ್ರಯೋಜನಗಳು ಸಿಗುತ್ತವೆ?

13 ಯೇಸು ಕಲಿಸಿದ ಪ್ರತಿಯೊಂದು ವಿಷಯದಿಂದ ನಾವು ಪ್ರಯೋಜನ ಪಡೆಯುತ್ತೇವೆ. ತನ್ನ ಬೋಧನೆಗಳಿಂದ ಶಿಷ್ಯರಿಗೆ ಚೈತನ್ಯ ಸಿಗುತ್ತದೆ ಎಂದು ಯೇಸು ಮಾತು ಕೊಟ್ಟನು. ಆತನು ಹೇಳಿದ್ದು: “ನೀವು ನಿಮ್ಮ ಪ್ರಾಣಗಳಿಗೆ ಚೈತನ್ಯವನ್ನು ಪಡೆದುಕೊಳ್ಳುವಿರಿ. ಏಕೆಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ.” (ಮತ್ತಾ. 11:28-30) ದೇವರ ವಾಕ್ಯದ ಭಾಗವಾಗಿರುವ ನಾಲ್ಕು ಸುವಾರ್ತಾ ವೃತ್ತಾಂತಗಳಲ್ಲಿ ಯೇಸುವಿನ ಜೀವನ ಮತ್ತು ಸೇವೆಯ ಬಗ್ಗೆ ದಾಖಲೆ ಇದೆ. ಇದನ್ನು ಓದುವಾಗ ನಮಗೆ ಚೈತನ್ಯ ಸಿಗುತ್ತದೆ, ಆಧ್ಯಾತ್ಮಿಕವಾಗಿ ಕಾಲೂರಿ ನಿಲ್ಲಲು ಸಹಾಯವಾಗುತ್ತದೆ ಮತ್ತು ತುಂಬ ವಿವೇಕ ಸಿಗುತ್ತದೆ. (ಕೀರ್ತ. 19:7; 23:3) ಆದ್ದರಿಂದ “ದೇವರ ವಾಕ್ಯವನ್ನು ಕೇಳಿಸಿಕೊಳ್ಳುತ್ತಿದ್ದು ಅದರಂತೆ ನಡೆಯುತ್ತಿರುವವರೇ ಸಂತೋಷಿತರು” ಎಂದು ಯೇಸು ಹೇಳಿದನು.—ಲೂಕ 11:28.

‘ನಾನು ನನ್ನ ಹೆಸರನ್ನು ಮಹಿಮೆಪಡಿಸುವೆ’

14-15. (ಎ) ಯೋಹಾನ 12:27, 28​ರಲ್ಲಿ ದಾಖಲಾಗಿರುವ ಮಾತುಗಳನ್ನು ಯೆಹೋವನು ಯಾವಾಗ ಮಾತಾಡಿದನು? (ಬಿ) ಯೆಹೋವನ ಮಾತುಗಳಿಂದ ಯೇಸುವಿಗೆ ಸಾಂತ್ವನ ಮತ್ತು ಬಲ ಸಿಕ್ಕಿರುತ್ತದೆ ಎಂದು ಹೇಗೆ ಹೇಳಬಹುದು?

14 ಯೋಹಾನ 12:27, 28 ಓದಿ. ಯೆಹೋವನು ಸ್ವರ್ಗದಿಂದ ಮಾತಾಡಿದ ಮೂರನೇ ಸಂದರ್ಭವನ್ನು ಯೋಹಾನನ ಸುವಾರ್ತಾ ಪುಸ್ತಕ ದಾಖಲಿಸುತ್ತದೆ. ಯೇಸು ಸಾಯುವುದಕ್ಕೆ ಕೆಲವು ದಿನಗಳ ಮುಂಚೆ ಇದು ನಡೆಯಿತು. ಪಸ್ಕಹಬ್ಬವನ್ನು ಕೊನೇ ಸಾರಿ ಆಚರಿಸಲು ಯೇಸು ಯೆರೂಸಲೇಮಿಗೆ ಬಂದಿದ್ದನು. ಆಗ ‘ನಾನು ಕಳವಳಗೊಂಡಿದ್ದೇನೆ’ ಅಂದನು. ನಂತರ “ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸು” ಎಂದು ಪ್ರಾರ್ಥಿಸಿದನು. ಅದಕ್ಕೆ ಆತನ ತಂದೆ “ಮಹಿಮೆಪಡಿಸಿದ್ದೇನೆ ಮತ್ತು ಪುನಃ ಮಹಿಮೆಪಡಿಸುವೆನು” ಎಂದು ಸ್ವರ್ಗದಿಂದ ಹೇಳಿದನು.

15 ಯೆಹೋವನಿಗೆ ನಂಬಿಗಸ್ತನಾಗಿ ಉಳಿಯುವ ದೊಡ್ಡ ಜವಾಬ್ದಾರಿ ಯೇಸುವಿನ ಮೇಲೆ ಇದ್ದದರಿಂದ ಆತನು ಕಳವಳಗೊಂಡನು. ತನಗೆ ಚಿತ್ರಹಿಂಸೆ ಕೊಟ್ಟು ಅಮಾನವೀಯ ರೀತಿಯಲ್ಲಿ ಕೊಲ್ಲಲಾಗುತ್ತದೆ ಎಂದು ಯೇಸುವಿಗೆ ಗೊತ್ತಿತ್ತು. (ಮತ್ತಾ. 26:38) ಇದೆಲ್ಲಕ್ಕಿಂತ ಮುಖ್ಯವಾಗಿ ಯೇಸು ತನ್ನ ತಂದೆಯ ಹೆಸರನ್ನು ಮಹಿಮೆಪಡಿಸಲು ಬಯಸಿದನು. ಯೇಸುವಿನ ಮೇಲೆ ದೇವದೂಷಣೆ ಮಾಡಿದ್ದಾನೆ ಎಂಬ ಆರೋಪ ಹಾಕಲಾಯಿತು. ಹಾಗಾದರೆ ತನ್ನ ಮರಣ ದೇವರ ಹೆಸರಿಗೆ ಕಳಂಕ ತರುತ್ತದೆ ಎಂಬ ಚಿಂತೆ ಆತನನ್ನು ಕಾಡಿತು. ಇದೆಲ್ಲಾ ಒಳಗೊಳಗೆ ಯೇಸುವನ್ನು ಕಿತ್ತುತಿನ್ನುತ್ತಿದ್ದಾಗ ಯೆಹೋವನ ಮಾತುಗಳನ್ನು ಕೇಳಿಸಿಕೊಂಡನು. ಇದರಿಂದ ಆತನಿಗೆ ಎಷ್ಟು ಧೈರ್ಯ ಸಿಕ್ಕಿರಬೇಕಲ್ವಾ? ಯೆಹೋವನ ಹೆಸರಿಗೆ ಖಂಡಿತ ಮಹಿಮೆ ಸಿಗುತ್ತದೆ ಎಂದು ಆತನಿಗೆ ಗೊತ್ತಾಗಿ ಸಮಾಧಾನ ಆಗಿರಬೇಕು. ತನ್ನ ತಂದೆಯ ಮಾತುಗಳಿಂದ ಯೇಸುವಿಗೆ ತುಂಬ ಸಾಂತ್ವನ ಸಿಕ್ಕಿರುತ್ತದೆ. ಅಷ್ಟೇ ಅಲ್ಲ ಮುಂದೆ ಏನೇ ಆದರೂ ಅದನ್ನು ತಾಳಿಕೊಳ್ಳಲು ಹೊಸ ಬಲ ಸಿಕ್ಕಿರುತ್ತದೆ. ಯೆಹೋವ ಮಾತಾಡಿದಾಗ ಅದನ್ನು ಅರ್ಥಮಾಡಿಕೊಂಡ ವ್ಯಕ್ತಿ ಬರೀ ಯೇಸು ಮಾತ್ರವೇ ಆಗಿರಬಹುದು. ಆದರೆ ನಾವೆಲ್ಲರೂ ಓದಿ ಪ್ರಯೋಜನ ಪಡೆಯುವಂತೆ ಯೆಹೋವನು ಆ ಮಾತುಗಳನ್ನು ನಮಗೋಸ್ಕರ ಬೈಬಲಲ್ಲಿ ಬರೆಸಿಟ್ಟಿದ್ದಾನೆ.—ಯೋಹಾ. 12:29, 30.

ಯೆಹೋವನು ತನ್ನ ಹೆಸರನ್ನು ಮಹಿಮೆಪಡಿಸುವನು ಮತ್ತು ತನ್ನ ಜನರನ್ನು ಬಿಡುಗಡೆ ಮಾಡುವನು (ಪ್ಯಾರ 16 ನೋಡಿ) *

16. ಯೆಹೋವನ ಹೆಸರಿಗೆ ಕಳಂಕ ಬರಬಹುದು ಎಂಬ ಚಿಂತೆ ನಮಗೆ ಯಾವಾಗ ಆಗಬಹುದು?

16 ನಮಗೆ ಕೂಡ ಕೆಲವೊಂದು ವಿಷಯಗಳು ಆದಾಗ ಯೆಹೋವನ ಹೆಸರಿಗೆ ಕಳಂಕ ಆಗುವುದರ ಬಗ್ಗೆ ಚಿಂತೆ ಆಗಬಹುದು. ಉದಾಹರಣೆಗೆ, ಯೇಸುವಿನಂತೆ ನಮಗೆ ಅನ್ಯಾಯ ಆಗಬಹುದು. ಅಥವಾ ನಮ್ಮನ್ನು ವಿರೋಧಿಸುವವರು ನಮ್ಮ ಬಗ್ಗೆ ಸುಳ್ಳುಸುದ್ದಿ ಹಬ್ಬಿಸುವಾಗ ನಿದ್ದೆಗೆಡಬಹುದು. ಈ ಸುದ್ದಿಗಳಿಂದ ಯೆಹೋವನ ಹೆಸರಿಗೆ ಮತ್ತು ಸಂಘಟನೆಗೆ ಕೆಟ್ಟ ಹೆಸರು ಬರಬಹುದು ಎಂದು ಚಿಂತೆ ಆಗಬಹುದು. ಇಂಥ ಸಮಯಗಳಲ್ಲಿ ಯೋಹಾನ 12:27, 28​ರಲ್ಲಿ ಯೆಹೋವನು ಹೇಳಿದ ಮಾತಿನಿಂದ ನಮಗೆ ತುಂಬ ಸಮಾಧಾನ ಆಗುತ್ತದೆ. ಏನಾಗಿಬಿಡುತ್ತದೋ ಏನೋ ಎಂದು ನಾವು ತುಂಬ ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ‘ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಮ್ಮ ಹೃದಯಗಳನ್ನೂ ನಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.’ (ಫಿಲಿ. 4:6, 7) ಯೆಹೋವನು ತನ್ನ ಹೆಸರನ್ನು ಮಹಿಮೆಪಡಿಸಲು ಏನು ಮಾಡಬೇಕೋ ಅದನ್ನು ಖಂಡಿತ ಮಾಡುತ್ತಾನೆ. ತನ್ನ ನಂಬಿಗಸ್ತ ಸೇವಕರ ಮೇಲೆ ಸೈತಾನ ಮತ್ತು ಈ ಲೋಕ ಏನೇ ಕಷ್ಟ ನೋವನ್ನು ತರಲಿ ಅದನ್ನು ಆತನು ತನ್ನ ರಾಜ್ಯದ ಮೂಲಕ ಸರಿ ಮಾಡಿಬಿಡುತ್ತಾನೆ.—ಕೀರ್ತ. 94:22, 23; ಯೆಶಾ. 65:17.

ಯೆಹೋವನ ಮಾತನ್ನು ಕೇಳಿ ಪ್ರಯೋಜನ ಪಡೆಯಿರಿ

17. ಯೆಶಾಯ 30:21​ರಲ್ಲಿ ಇರುವಂತೆ, ಯೆಹೋವನು ಇಂದು ನಮ್ಮ ಜೊತೆ ಹೇಗೆ ಮಾತಾಡುತ್ತಾನೆ?

17 ಯೆಹೋವನು ಈಗಲೂ ಸಹ ನಮ್ಮ ಜೊತೆ ಮಾತಾಡುತ್ತಾ ಇದ್ದಾನೆ. (ಯೆಶಾಯ 30:21 ಓದಿ.) ದೇವರು ನಮ್ಮ ಜೊತೆ ಸ್ವರ್ಗದಿಂದ ನೇರವಾಗಿ ಮಾತಾಡಲ್ಲ ನಿಜ. ಆದರೆ ಆತನು ತನ್ನ ವಾಕ್ಯವಾದ ಬೈಬಲಿನ ಮೂಲಕ ನಮ್ಮ ಜೊತೆ ಮಾತಾಡುತ್ತಾನೆ, ಮಾರ್ಗದರ್ಶಿಸುತ್ತಾನೆ. ‘ನಂಬಿಗಸ್ತ ಮನೆವಾರ್ತೆಯವನ’ ಮೂಲಕ ನಮಗೆ ಆಧ್ಯಾತ್ಮಿಕ ಆಹಾರ ಸಿಗಲು ಬೇಕಾದ ಏರ್ಪಾಡನ್ನು ಸಹ ಮಾಡಿದ್ದಾನೆ. (ಲೂಕ 12:42) ನಮಗೆ ಮುದ್ರಿತ ರೂಪದಲ್ಲಿ, ಆನ್‌ಲೈನ್‌ನಲ್ಲಿ, ವಿಡಿಯೋ ಮತ್ತು ಆಡಿಯೋ ರೂಪದಲ್ಲಿ ಎಷ್ಟೊಂದು ಆಧ್ಯಾತ್ಮಿಕ ಆಹಾರ ಸಿಗುತ್ತದೆ ಅಲ್ವಾ?

18. ಯೆಹೋವನ ಮಾತುಗಳಿಂದ ಹೇಗೆ ನಮ್ಮ ನಂಬಿಕೆ ಬಲವಾಗುತ್ತದೆ ಮತ್ತು ಧೈರ್ಯ ಸಿಗುತ್ತದೆ?

18 ಯೇಸು ಭೂಮಿಯಲ್ಲಿದ್ದಾಗ ಯೆಹೋವನು ಹೇಳಿದ ಮಾತುಗಳನ್ನು ನಾವು ಯಾವಾಗಲೂ ಮನಸ್ಸಲ್ಲಿಡೋಣ. ಯೆಹೋವನೇ ಸ್ವತಃ ಹೇಳಿದ ಮಾತುಗಳಿಂದ ಯಾವುದೇ ವಿಷಯ ಆತನ ಕೈಮೀರಿ ಹೋಗಲ್ಲ ಎಂಬ ಆಶ್ವಾಸನೆ ಸಿಗುತ್ತದೆ. ಸೈತಾನ ಮತ್ತು ಅವನ ದುಷ್ಟ ಲೋಕ ನಮ್ಮ ಮೇಲೆ ಏನೇ ಅವಾಂತರ ತಂದರೂ ಅದನ್ನು ಸಂಪೂರ್ಣವಾಗಿ ಸರಿಮಾಡುವ ಶಕ್ತಿ ಯೆಹೋವನಿಗಿದೆ ಅನ್ನುವುದನ್ನು ಮರೆಯದೆ ಇರೋಣ. ಏನೇ ಆದರೂ ಯೆಹೋವನ ಮಾತನ್ನು ಕೇಳಿ ನಡೆಯುತ್ತೇವೆ ಎಂದು ದೃಢತೀರ್ಮಾನ ಮಾಡೋಣ. ಆಗ ಏನೇ ಸಮಸ್ಯೆ ಬಂದರೂ ಅದನ್ನು ನಾವು ಧೈರ್ಯದಿಂದ ಎದುರಿಸಿ ಗೆಲ್ಲುತ್ತೇವೆ. ಬೈಬಲ್‌ ಹೇಳುವುದು: “ನೀವು ದೇವರ ಚಿತ್ತವನ್ನು ಮಾಡಿದ ಬಳಿಕ ವಾಗ್ದಾನದ ನೆರವೇರಿಕೆಯನ್ನು ಹೊಂದಬೇಕಾದರೆ ನಿಮಗೆ ತಾಳ್ಮೆಯ ಅಗತ್ಯವಿದೆ.”—ಇಬ್ರಿ. 10:36.

ಗೀತೆ 22 “ಯೆಹೋವ ನನಗೆ ಕುರುಬನು”

^ ಪ್ಯಾರ. 5 ಯೇಸು ಭೂಮಿಯಲ್ಲಿದ್ದಾಗ ಯೆಹೋವನು ಮೂರು ಸಲ ಸ್ವರ್ಗದಿಂದ ಮಾತಾಡಿದನು. ಹೀಗೆ ಮಾತಾಡಿದ ಒಂದು ಸಂದರ್ಭದಲ್ಲಿ ಆತನು ಯೇಸುವಿನ ಶಿಷ್ಯರಿಗೆ, ತನ್ನ ಮಗನ ಮಾತನ್ನು ಕೇಳುವಂತೆ ಹೇಳಿದನು. ಇಂದು ಯೆಹೋವನು ತನ್ನ ವಾಕ್ಯದ ಮೂಲಕ ನಮ್ಮ ಜೊತೆ ಮಾತಾಡುತ್ತಾನೆ, ಅದರಲ್ಲಿ ಯೇಸುವಿನ ಬೋಧನೆಗಳೂ ಸೇರಿವೆ. ಅಷ್ಟೇ ಅಲ್ಲ, ತನ್ನ ಸಂಘಟನೆಯ ಮೂಲಕನೂ ನಮ್ಮ ಜೊತೆ ಮಾತಾಡುತ್ತಾನೆ. ಯೆಹೋವ ಮತ್ತು ಯೇಸುವಿನ ಮಾತನ್ನು ಕೇಳುವುದರಿಂದ ನಮಗೆ ಯಾವ ಪ್ರಯೋಜನ ಸಿಗುತ್ತದೆ ಎಂದು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.

^ ಪ್ಯಾರ. 52 ಚಿತ್ರ ವಿವರಣೆ ಪುಟ: ಒಬ್ಬ ಸಹಾಯಕ ಸೇವಕ ರಾಜ್ಯ ಸಭಾಗೃಹವನ್ನು ಶುಚಿಮಾಡುತ್ತಿರುವುದನ್ನು ಮತ್ತು ಸಾಹಿತ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದನ್ನು ಒಬ್ಬ ಹಿರಿಯ ನೋಡಿ ಹೃತ್ಪೂರ್ವಕವಾಗಿ ಶ್ಲಾಘಿಸುತ್ತಾರೆ.

^ ಪ್ಯಾರ. 54 ಚಿತ್ರ ವಿವರಣೆ ಪುಟ: ಸಿಯೆರಾ ಲಿಯೋನ್‌ನಲ್ಲಿ ಒಬ್ಬ ಸಾಕ್ಷಿ ದಂಪತಿ ಒಬ್ಬ ಮೀನುಗಾರನಿಗೆ ಕೂಟದ ಆಮಂತ್ರಣ ಪತ್ರ ನೀಡುತ್ತಿದ್ದಾರೆ.

^ ಪ್ಯಾರ. 56 ಚಿತ್ರ ವಿವರಣೆ ಪುಟ: ನಮ್ಮ ಕೆಲಸ ನಿರ್ಬಂಧವಾಗಿರುವ ಒಂದು ದೇಶದಲ್ಲಿ ಸಾಕ್ಷಿಗಳು ಮನೆಯಲ್ಲಿ ಕೂಟ ನಡೆಸುತ್ತಿದ್ದಾರೆ. ಜನರ ಗಮನ ಬರದೆ ಇರಲಿಕ್ಕಾಗಿ ಮಾಮೂಲಿ ಬಟ್ಟೆಗಳನ್ನು ಹಾಕಿದ್ದಾರೆ.