ಅಧ್ಯಯನ ಲೇಖನ 11
ಕಷ್ಟ ತಾಳಿಕೊಳ್ಳೋಕೆ ಬೈಬಲ್ ನಿಮಗೆ ಹೇಗೆ ಸಹಾಯ ಮಾಡುತ್ತೆ?
“ತಾಳಿಕೊಳ್ಳೋಕೆ ಮತ್ತು ಸಾಂತ್ವನ ಪಡಿಯೋಕೆ ನಮಗೆ ಸಹಾಯ ಮಾಡೋ ದೇವರು ಕ್ರಿಸ್ತ ಯೇಸುವಿನ ಮನಸ್ಸನ್ನ ನಿಮಗೆ ಕೊಡ್ಲಿ.”—ರೋಮ. 15:5.
ಗೀತೆ 113 ದೇವರ ವಾಕ್ಯಕ್ಕಾಗಿ ಕೃತಜ್ಞರು
ಕಿರುನೋಟ *
1. ಯೆಹೋವನ ಜನ್ರಿಗೆ ಯಾವ ತರದ ಕಷ್ಟಗಳು ಬರುತ್ತೆ?
ಈಗ ನೀವು ಯಾವುದಾದ್ರೂ ಕಷ್ಟದಲ್ಲಿ ಸಿಲುಕಿದ್ದೀರಾ? ನೋವಲ್ಲಿದ್ದೀರಾ? ನಿಮ್ಮ ಸಭೆಯಲ್ಲಿ ಇರುವವರು ನಿಮ್ಮನ್ನು ನೋಯಿಸಿರಬಹುದು. (ಯಾಕೋ. 3:2) ಅಥವಾ ನಿಮ್ಮ ಜೊತೆ ಕೆಲಸದವರು, ಕ್ಲಾಸ್‌ಮೇಟ್‌ಗಳು ನೀವು ಯೆಹೋವನ ಆರಾಧನೆ ಮಾಡ್ತಾ ಇರೋದಕ್ಕೆ ನಿಮ್ಮನ್ನು ಗೇಲಿ ಮಾಡ್ತಾ ಇರಬಹುದು. (1 ಪೇತ್ರ 4:3, 4) ಅಥವಾ ನಿಮ್ಮ ಕುಟುಂಬದವರು ನೀವು ಕೂಟಕ್ಕೆ ಹೋಗಬಾರದು, ಸೇವೆಗೆ ಹೋಗಬಾರದು ಅಂತ ಒತ್ತಡ ಹಾಕ್ತಾ ಇರಬಹುದು. (ಮತ್ತಾ. 10:35, 36) ಇಂಥ ಕಷ್ಟಗಳು ಬರುವಾಗ ನಿಜವಾಗ್ಲೂ ತುಂಬ ನೋವಾಗುತ್ತೆ. ಯೆಹೋವನ ಆರಾಧನೆ ಮಾಡೋದೇ ಬೇಡ, ಬಿಟ್ಟುಬಿಡೋಣ ಅಂತನೂ ಕೆಲವೊಮ್ಮೆ ಅನಿಸಬಹುದು. ಆದ್ರೆ ಇಂಥ ಸನ್ನಿವೇಶಗಳು ಬಂದಾಗ ಒಳ್ಳೇ ತೀರ್ಮಾನಗಳನ್ನು ಮಾಡೋಕೆ ಬೇಕಾದ ವಿವೇಕವನ್ನು ಮತ್ತು ಕಷ್ಟ ತಾಳಿಕೊಳ್ಳೋಕೆ ಬೇಕಾದ ಶಕ್ತಿಯನ್ನು ಯೆಹೋವ ದೇವರು ಕೊಡ್ತಾನೆ ಅನ್ನೋದನ್ನು ಮರಿಬೇಡಿ.
2. ಬೈಬಲ್ ಓದೋದ್ರಿಂದ ಯಾವ ಪ್ರಯೋಜನ ಸಿಗುತ್ತೆ ಅಂತ ರೋಮನ್ನರಿಗೆ 15:4 ಹೇಳುತ್ತೆ?
2 ನಮ್ಮಂಥ ಅಪರಿಪೂರ್ಣ ಜನ್ರಿಗೆ ಕಷ್ಟಗಳು ಬಂದಾಗ ಅವರು ಅದನ್ನು ಹೇಗೆ ತಾಳಿಕೊಂಡರು ಅನ್ನೋದರ ಬಗ್ಗೆ ಬೈಬಲಲ್ಲಿದೆ. ಅವರನ್ನು ನೋಡಿ ನಾವು ಕಲಿಬೇಕು ಅಂತ ಯೆಹೋವ ದೇವರು ಅದನ್ನ ವಿವರವಾಗಿ ಬರೆಸಿಟ್ಟಿದ್ದಾನೆ. ಅದನ್ನೇ ರೋಮನ್ನರಿಗೆ 15:4 ರಲ್ಲಿ (ಓದಿ) ದೇವರು ಅಪೊಸ್ತಲ ಪೌಲನ ಕೈಯಿಂದ ಬರೆಸಿದ್ದಾನೆ. ಈ ಉದಾಹರಣೆಗಳನ್ನು ಓದಿದ್ರೆ ನಮ್ಮ ಮನಸ್ಸಿಗೆ ನೆಮ್ಮದಿ, ಧೈರ್ಯ ಸಿಗುತ್ತೆ. ಆ ಉದಾಹರಣೆಗಳನ್ನು ಬೈಬಲಿಂದ ಓದೋದು ಮಾತ್ರ ಅಲ್ಲ ಅದು ನಮ್ಮ ಯೋಚನೆಯನ್ನು ಬದಲಾಯಿಸೋಕೆ ಮತ್ತು ಮನಸ್ಸನ್ನು ಮುಟ್ಟೋಕೆ ಬಿಟ್ಟುಕೊಡಬೇಕು. ಒಂದು ಕಷ್ಟ ಬಂದಾಗ ಅದನ್ನು ತಾಳಿಕೊಳ್ಳೋಕೆ ಏನು ಮಾಡಬೇಕು ಅಂತ ತಿಳುಕೊಳ್ಳೋದು ಹೇಗೆ? 4 ಹಂತಗಳಿರೋ ಈ ವಿಧಾನವನ್ನು ಮಾಡಿನೋಡಿ. (1) ಪ್ರಾರ್ಥಿಸಿ, (2) ಕಲ್ಪಿಸಿಕೊಳ್ಳಿ, (3) ಧ್ಯಾನಿಸಿ, (4) ಅನ್ವಯಿಸಿ. ನಾವೀಗ ಇದನ್ನು ಒಂದೊಂದಾಗಿ ಚರ್ಚಿಸೋಣ. * ಆಮೇಲೆ ಈ ವಿಧಾನವನ್ನೇ ಬಳಸಿ ರಾಜ ದಾವೀದನ ಮತ್ತು ಅಪೊಸ್ತಲ ಪೌಲನ ಜೀವನದಲ್ಲಿ ನಡೆದ ಒಂದೊಂದು ಘಟನೆಯನ್ನು ಅಧ್ಯಯನ ಮಾಡೋಣ.
3. (ಎ) ಬೈಬಲ್ ಓದುವ ಮುಂಚೆ ಏನು ಮಾಡಬೇಕು? (ಬಿ) ಯಾಕೆ ಹಾಗೆ ಮಾಡಬೇಕು?
3 (1) ಪ್ರಾರ್ಥಿಸಿ. ಬೈಬಲ್ ಓದುವ ಮುಂಚೆ ಯೆಹೋವನಿಗೆ ಪ್ರಾರ್ಥನೆ ಮಾಡಿ. ಓದುವ ವಿಷ್ಯದಿಂದ ಪ್ರಯೋಜನ ಸಿಗೋ ತರ ಮಾಡಪ್ಪಾ ಅಂತ ಬೇಡಿಕೊಳ್ಳಿ. ಉದಾಹರಣೆಗೆ ನಿಮಗಿರೋ ಸಮಸ್ಯೆಯನ್ನು ಬಗೆಹರಿಸೋಕೆ ಏನು ಮಾಡಬೇಕು ಅಂತ ತಿಳಿಸೋ ತತ್ವಗಳನ್ನು ಕಂಡುಹಿಡಿಯೋಕೆ ಸಹಾಯ ಮಾಡಪ್ಪಾ ಅಂತ ದೇವರ ಹತ್ರ ಬೇಡಿಕೊಳ್ಳಿ.—4. ನೀವು ಬೈಬಲಲ್ಲಿ ಓದುತ್ತಿರುವ ಘಟನೆ ನಿಮ್ಮ ಕಣ್ಮುಂದೆ ಬರಬೇಕಂದ್ರೆ ಏನು ಮಾಡಬೇಕು?
4 (2) ಕಲ್ಪಿಸಿಕೊಳ್ಳಿ. ಒಂದು ಘಟನೆಯನ್ನು ಕಲ್ಪಿಸಿಕೊಳ್ಳೋ ಅದ್ಭುತ ಸಾಮರ್ಥ್ಯವನ್ನು ಯೆಹೋವ ನಮಗೆ ಕೊಟ್ಟಿದ್ದಾನೆ. ನಾವು ಬೈಬಲಲ್ಲಿ ಓದುತ್ತಿರುವ ಘಟನೆಗಳು ನಮ್ಮ ಕಣ್ಮುಂದೆ ಬರಬೇಕಂದ್ರೆ ಅಲ್ಲಿ ಏನೇನು ನಡೀತಿದೆ ಅನ್ನೋದನ್ನು ಚಿತ್ರಿಸಿಕೊಳ್ಳಬೇಕು. ಯಾವ ವ್ಯಕ್ತಿ ಬಗ್ಗೆ ಓದುತ್ತಾ ಇದ್ದೀರೋ ಅವರ ಸ್ಥಾನದಲ್ಲಿ ನಿಮ್ಮನ್ನೇ ಕಲ್ಪಿಸಿಕೊಳ್ಳಬೇಕು. ಆ ವ್ಯಕ್ತಿ ಏನನ್ನು ನೋಡುತ್ತಿದ್ದಾನೋ ಅದನ್ನು ಚಿತ್ರಿಸಿಕೊಳ್ಳೋಕೆ, ಅವನಿಗೆ ಏನು ಅನಿಸುತ್ತಿದೆಯೋ ಅದನ್ನು ಅರ್ಥ ಮಾಡಿಕೊಳ್ಳೋಕೆ ಪ್ರಯತ್ನಿಸಬೇಕು.
5. (ಎ) ಧ್ಯಾನಿಸೋದು ಅಂದರೇನು? (ಬಿ) ಒಂದು ವಿಷ್ಯವನ್ನು ಧ್ಯಾನಿಸಬೇಕಂದ್ರೆ ನಾವು ಏನು ಮಾಡಬೇಕು?
5 (3) ಧ್ಯಾನಿಸಿ. ಧ್ಯಾನಿಸೋದು ಅಂದ್ರೆ ಓದಿದ ವಿಷ್ಯದ ಬಗ್ಗೆ ಮತ್ತು ಅದನ್ನು ಹೇಗೆ ಅನ್ವಯಿಸಿಕೊಳ್ಳಬೇಕು ಅನ್ನೋದರ ಬಗ್ಗೆ ಚೆನ್ನಾಗಿ ಯೋಚನೆ ಮಾಡೋದು ಅಂತ ಅರ್ಥ. ಓದಿದ್ದನ್ನು ಧ್ಯಾನಿಸೋದ್ರಿಂದ ಒಂದು ವಿಷ್ಯಕ್ಕೂ ಇನ್ನೊಂದು ವಿಷ್ಯಕ್ಕೂ ಏನು ಸಂಬಂಧ ಅಂತ ಗೊತ್ತಾಗುತ್ತೆ. ಆ ವಿಷ್ಯ ಇನ್ನೂ ಚೆನ್ನಾಗಿ ಅರ್ಥ ಆಗುತ್ತೆ. ಬೈಬಲಿಂದ ಒಂದು ವಿಷ್ಯ ಓದಿದ ಮೇಲೆ ಧ್ಯಾನ ಮಾಡದೇ ಇದ್ರೆ ಅದು ಹೇಗಿರುತ್ತೆ? ಒಂದು ಅಡಿಗೆ ಮಾಡೋಕೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ತೆಗೆದಿಟ್ಟುಕೊಂಡು ಅಡಿಗೆ ಮಾಡದಿರೋ ಹಾಗಿರುತ್ತೆ. ಅದೇ ನೀವು ಧ್ಯಾನ ಮಾಡಿದ್ರೆ ರೆಡಿ ಮಾಡಿಕೊಂಡಿರೋ ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ ರುಚಿಯಾದ ಅಡಿಗೆ ಮಾಡಿ ತಿಂದ ಹಾಗಿರುತ್ತೆ. ಒಂದು ವಿಷ್ಯವನ್ನು ಧ್ಯಾನಿಸಬೇಕಂದ್ರೆ ಇಂಥ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ‘ಈ ಘಟನೆಯಲ್ಲಿರೋ ಮುಖ್ಯ ವ್ಯಕ್ತಿ ತನ್ನ ಸಮಸ್ಯೆ ಬಗೆಹರಿಸಿಕೊಳ್ಳೋಕೆ ಏನು ಮಾಡಿದ? ಯೆಹೋವ ದೇವರು ಅವನಿಗೆ ಹೇಗೆ ಸಹಾಯ ಮಾಡಿದನು? ನನಗಿರೋ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಕೆ ಈ ವ್ಯಕ್ತಿಯಿಂದ ನಾನೇನು ಕಲಿಬಹುದು?’
6. ಕಲಿತದ್ದನ್ನು ನಾವು ಯಾಕೆ ಅನ್ವಯಿಸಿಕೊಳ್ಳಬೇಕು?
6 (4) ಅನ್ವಯಿಸಿ. ನಾವು ಬೈಬಲಿಂದ ಓದಿದ್ದನ್ನು ಅನ್ವಯಿಸದೇ ಹೋದ್ರೆ ಮರಳಿನ ಮೇಲೆ ಮನೆ ಕಟ್ಟಿದ ವ್ಯಕ್ತಿ ತರ ಇರುತ್ತೇವೆ ಅಂತ ಯೇಸು ಹೇಳಿದನು. ಆ ವ್ಯಕ್ತಿ ತುಂಬ ಕಷ್ಟಪಟ್ಟು ಮನೆ ಕಟ್ತಾನೆ, ಆದ್ರೆ ಅವನ ಪ್ರಯತ್ನವೆಲ್ಲಾ ವ್ಯರ್ಥ ಆಗುತ್ತೆ. ಯಾಕಂದ್ರೆ ಅವನು ಮರಳಿನ ಮೇಲೆ ಮನೆ ಕಟ್ಟಿದ್ರಿಂದ ಬಿರುಗಾಳಿ ಬಂದ್ರೆ ಅಥವಾ ನೆರೆ ಬಂದ್ರೆ ಅವನ ಮನೆ ಕುಸಿದು ನೆಲಸಮ ಆಗುತ್ತೆ. (ಮತ್ತಾ. 7:24-27) ಅದೇ ತರ ನಾವು ಬೈಬಲ್ ಓದೋ ಮುಂಚೆ ಪ್ರಾರ್ಥನೆ ಮಾಡಿ, ಓದುವಾಗ ಕಲ್ಪನೆ ಮಾಡಿಕೊಂಡು, ಆಮೇಲೆ ಧ್ಯಾನಿಸಿ ಕೊನೆಗೆ ಅದನ್ನು ಅನ್ವಯಿಸಿಕೊಳ್ಳದೇ ಹೋದ್ರೆ ನಮ್ಮ ಪ್ರಯತ್ನ ಕೂಡ ವ್ಯರ್ಥ ಆಗುತ್ತೆ. ಹಿಂಸೆ ಅಥವಾ ಕಷ್ಟ ಬಂದಾಗ ಅದನ್ನು ತಾಳಿಕೊಳ್ಳೋಕೆ ಬೇಕಾದ ನಂಬಿಕೆ ನಮಗೆ ಇರಲ್ಲ. ಅದೇ ನಾವು ಓದಿದ್ದನ್ನು ಅನ್ವಯಿಸಿದ್ರೆ ಜೀವನದಲ್ಲಿ ಒಳ್ಳೇ ನಿರ್ಧಾರಗಳನ್ನು ಮಾಡ್ತೇವೆ, ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತೆ ಮತ್ತು ಏನೇ ಬಂದ್ರೂ ನಮ್ಮ ನಂಬಿಕೆ ಕಳಕೊಳ್ಳಲ್ಲ. (ಯೆಶಾ. 48:17, 18) ಈ 4 ಹಂತಗಳನ್ನು ಬಳಸಿ ರಾಜ ದಾವೀದನ ಜೀವನದಲ್ಲಿ ನಡೆದ ಒಂದು ಘಟನೆ ಬಗ್ಗೆ ಅಧ್ಯಯನ ಮಾಡೋಣ. ಅದ್ರಿಂದ ನಾವೇನು ಕಲಿಬಹುದು ಅಂತ ನೋಡೋಣ.
ರಾಜ ದಾವೀದನಿಂದ ಕಲಿಯೋ ಪಾಠ
7. ಬೈಬಲಲ್ಲಿರೋ ಯಾರ ಉದಾಹರಣೆ ಬಗ್ಗೆ ನಾವೀಗ ನೋಡ್ತೇವೆ?
7 ನಿಮ್ಮ ಸ್ನೇಹಿತರೋ ಕುಟುಂಬದ ಸದಸ್ಯರೋ ನಿಮಗೆ ನಂಬಿಕೆದ್ರೋಹ ಮಾಡಿದ್ದಾರಾ? ಹಾಗಿದ್ರೆ ರಾಜ ದಾವೀದನ ಜೀವನದಲ್ಲಿ ಆದ ಒಂದು ಘಟನೆ ಬಗ್ಗೆ ನೋಡೋಣ. ಅವನ ಮಗ ಅಬ್ಷಾಲೋಮ ಅವನಿಗೆ ಮೋಸ ಮಾಡಿದ ಮತ್ತು ಅವನ ರಾಜ್ಯ ಕಿತ್ತುಕೊಳ್ಳೋಕೆ ಪ್ರಯತ್ನಿಸಿದ. (2 ಸಮು. 15:5-14, 31; 18:6-14) ಈ ಘಟನೆಯಿಂದ ನಾವೇನು ಕಲಿಬಹುದು ಅಂತ ಈಗ ನೋಡೋಣ.
8. ಯೆಹೋವನ ಸಹಾಯ ಪಡಕೊಳ್ಳೋಕೆ ನೀವೇನು ಮಾಡಬಹುದು?
8 (1) ಪ್ರಾರ್ಥಿಸಿ. ದಾವೀದನ ಈ ಅನುಭವವನ್ನು ಮನಸ್ಸಲ್ಲಿಟ್ಟು ನಿಮಗಾಗಿರೋ ನೋವನ್ನು ಯೆಹೋವನ ಹತ್ರ ಪ್ರಾರ್ಥನೆಯಲ್ಲಿ ಮುಕ್ತವಾಗಿ ಹೇಳಿಕೊಳ್ಳಿ. (ಕೀರ್ತ. 6:6-9) ಆಮೇಲೆ ಆ ನೋವಿಂದ ಹೊರಗೆ ಬರೋಕೆ ಸಹಾಯ ಮಾಡುವಂಥ ತತ್ವಗಳನ್ನು ತೋರಿಸಿಕೊಡಪ್ಪಾ ಅಂತನೂ ಯೆಹೋವನ ಹತ್ರ ಬೇಡಿಕೊಳ್ಳಿ.
9. ದಾವೀದ ಮತ್ತು ಅಬ್ಷಾಲೋಮನ ಮಧ್ಯ ನಡೆದ ಘಟನೆಗಳನ್ನು ಚುಟುಕಾಗಿ ವಿವರಿಸಿ.
9 (2) ಕಲ್ಪಿಸಿಕೊಳ್ಳಿ. ದಾವೀದ ಮತ್ತು ಅವನ ಮಗ ಅಬ್ಷಾಲೋಮನ ಮಧ್ಯ ನಡೆದ ಘಟನೆಯನ್ನು ಕಣ್ಮುಂದೆ ತರೋಕೆ ಪ್ರಯತ್ನಿಸಿ. ದಾವೀದನಿಗೆ ಆದ ಕಷ್ಟವನ್ನು ಕೂಡ ಚಿತ್ರಿಸಿಕೊಳ್ಳಿ. ಅಬ್ಷಾಲೋಮ ಜನ್ರನ್ನು ತನ್ನ ಬಲೆಗೆ ಬೀಳಿಸೋಕೆ ವರ್ಷಾನುಗಟ್ಟಲೆ ಪ್ರಯತ್ನಿಸ್ತಾನೆ. (2 ಸಮು. 15:7) ಅವನು ಸರಿಯಾದ ಸಮಯ ಬರೋ ತನಕ ಕಾದು ಇಸ್ರಾಯೇಲ್ ದೇಶದಲ್ಲೆಲ್ಲ ಗೂಢಚಾರರನ್ನು ಕಳಿಸಿ ಜನ್ರು ತನ್ನನ್ನು ರಾಜನಾಗಿ ಒಪ್ಪಿಕೊಳ್ಳೋ ತರ ಮಾಡ್ತಾನೆ. ಅಷ್ಟೇ ಅಲ್ಲ ದಾವೀದನ ಆಪ್ತ ಸ್ನೇಹಿತ ಮತ್ತು ಸಲಹೆಗಾರನಾದ ಅಹೀತೋಫೆಲನನ್ನು ಸಹ ತನ್ನ ಬುಟ್ಟಿಗೆ ಹಾಕಿಕೊಳ್ತಾನೆ. ಅಬ್ಷಾಲೋಮ ತನ್ನನ್ನೇ ರಾಜನಾಗಿ ಘೋಷಿಸಿಕೊಳ್ತಾನೆ. ಆಮೇಲೆ ದಾವೀದನನ್ನು ಹಿಡಿದು ಕೊಲ್ಲೋಕೆ ಸಂಚು ಮಾಡ್ತಾನೆ. ಆ ಸಮಯದಲ್ಲಿ ದಾವೀದನಿಗೆ ತುಂಬ ಹುಷಾರಿಲ್ಲದೆ ಇದ್ದಿರಬಹುದು. (ಕೀರ್ತ. 41:1-9) ದಾವೀದನಿಗೆ ಅಬ್ಷಾಲೋಮನ ಈ ಸಂಚಿನ ಬಗ್ಗೆ ಗೊತ್ತಾಗುತ್ತೆ. ಆಗ ಅವನು ಯೆರೂಸಲೇಮಿಂದ ಓಡಿಹೋಗ್ತಾನೆ. ಕೊನೆಗೆ ಅಬ್ಷಾಲೋಮನ ಸೈನ್ಯದವರು ದಾವೀದನ ಸೈನ್ಯದ ವಿರುದ್ಧ ಯುದ್ಧಕ್ಕೆ ಬರುತ್ತಾರೆ. ಅವರು ಅಬ್ಷಾಲೋಮನ ಕಡೆಯವರನ್ನು ಸೋಲಿಸ್ತಾರೆ ಮತ್ತು ಅಬ್ಷಾಲೋಮನನ್ನು ಕೊಲ್ತಾರೆ.
10. ದಾವೀದ ಏನು ಮಾಡಬಹುದಿತ್ತು?
10 ಇದೆಲ್ಲ ನಡಿವಾಗ ದಾವೀದನಿಗೆ ಹೇಗನಿಸಿರಬೇಕು ಅಂತ ಚಿತ್ರಿಸಿಕೊಳ್ಳಿ. ಅವನು ಅಬ್ಷಾಲೋಮನನ್ನು ತುಂಬ ಪ್ರೀತಿಸ್ತಿದ್ದ. ಅಹೀತೋಫೆಲನನ್ನು ತುಂಬ ನಂಬಿದ್ದ. ಇಷ್ಟು ಆಪ್ತರಾಗಿದ್ದವರೇ ಅವನಿಗೆ ಮೋಸ ಮಾಡಿದ್ರು, ಅವನ ಮನಸ್ಸಿಗೆ ತುಂಬ ನೋವು ಮಾಡಿದ್ರು. ಕೊಲ್ಲೋಕೂ ನೋಡಿದ್ರು. ಆಗ ದಾವೀದ ‘ನನ್ನ ಬೇರೆ ಸ್ನೇಹಿತರು ಕೂಡ ಅಬ್ಷಾಲೋಮನ ಕಡೆಗೆ ಹೋಗಿಬಿಟ್ಟಿದ್ದಾರೆ, ನಾನು ಯಾರನ್ನೂ ನಂಬಬಾರದು’ ಅಂತ ಅಂದುಕೊಳ್ಳಬಹುದಿತ್ತು. ಅಥವಾ ತನ್ನ ಬಗ್ಗೆ ಮಾತ್ರ ಯೋಚಿಸಬಹುದಿತ್ತು ಮತ್ತು ಅವನೊಬ್ಬನೇ ಆ ದೇಶ ಬಿಟ್ಟು ಓಡಿಹೋಗಬಹುದಿತ್ತು. ಅಥವಾ ಇನ್ನು ತನ್ನ ಕೈಯಲ್ಲಿ ಆಗಲ್ಲ ಅಂತ ಕೈಚೆಲ್ಲಿ ಕೂರಬಹುದಿತ್ತು. ಆದ್ರೆ ದಾವೀದ ಇದ್ಯಾವುದನ್ನೂ ಮಾಡಲಿಲ್ಲ. ಬದಲಿಗೆ ತನಗೆ ಬಂದ ಕಷ್ಟವನ್ನು ಮೆಟ್ಟಿ ನಿಂತ. ಅವನಿಂದ ಇದು ಹೇಗೆ ಸಾಧ್ಯ ಆಯ್ತು? ಬನ್ನಿ ನೋಡೋಣ.
11. ಈ ಕಷ್ಟದ ಸನ್ನಿವೇಶದಲ್ಲಿ ದಾವೀದ ಏನು ಮಾಡಿದ?
11 (3) ಧ್ಯಾನಿಸಿ. ಈ ಉದಾಹರಣೆಯಿಂದ ಯಾವ ತತ್ವಗಳನ್ನು ಕಲಿಬಹುದು? ‘ದಾವೀದ ತನ್ನ ಸಮಸ್ಯೆ ಬಗೆಹರಿಸಿಕೊಳ್ಳೋಕೆ ಏನು ಮಾಡಿದ?’ ಅಂತ ಯೋಚಿಸಿ. ಕಷ್ಟ ಬಂದಾಗ ಅವನು ಗಾಬರಿ ಪಡಲಿಲ್ಲ. ದುಡುಕಿ ತಪ್ಪಾದ ತೀರ್ಮಾನಗಳನ್ನೂ ತಗೊಳ್ಳಲಿಲ್ಲ. ಅಥವಾ ಭಯಪಟ್ಟು ಸೋಲು ಒಪ್ಪಿಕೊಳ್ಳಲಿಲ್ಲ. ಬದಲಿಗೆ ಯೆಹೋವನ ಸಹಾಯ ಕೇಳಿದ. ಸ್ನೇಹಿತರ ಸಹಾಯನೂ ಕೇಳಿದ. ಏನು ಮಾಡಬೇಕು ಅಂತ ನಿರ್ಧಾರ ತಗೊಂಡ ಮೇಲೆ ತಕ್ಷಣ ಅದರ ತರಾನೇ ಮಾಡಿದ. ಬೇರೆಯವರು ಮೋಸ ಮಾಡಿದಾಗ ದಾವೀದನಿಗೆ ತುಂಬ ಬೇಜಾರಾಯ್ತು ನಿಜ. ಆದ್ರೆ ‘ಇನ್ಯಾರನ್ನೂ ನಂಬಬಾರದಪ್ಪಾ’ ಅಂತ ಅವನು ಅಂದುಕೊಳ್ಳಲಿಲ್ಲ. ಅಥವಾ ಅವರ ಮೇಲೆ ದ್ವೇಷನೂ ಬೆಳೆಸಿಕೊಳ್ಳಲಿಲ್ಲ. ಬದಲಿಗೆ ಯೆಹೋವನ ಮೇಲೆ ಭರವಸೆ ಇಟ್ಟ. ತನ್ನ ಸ್ನೇಹಿತರನ್ನೂ ನಂಬಿದ.
12. ದಾವೀದನಿಗೆ ಯೆಹೋವ ಹೇಗೆ ಸಹಾಯ ಮಾಡಿದನು?
12 ಯೆಹೋವ ದಾವೀದನಿಗೆ ಹೇಗೆ ಸಹಾಯ ಮಾಡಿದನು? ಇದರ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಿದ್ರೆ ದಾವೀದನಿಗೆ ಆ ಕಷ್ಟ ತಾಳಿಕೊಳ್ಳೋಕೆ ಬೇಕಾದ ಬಲ ಕೊಟ್ಟನು ಅಂತ ಗೊತ್ತಾಗುತ್ತೆ. (ಕೀರ್ತ. 3:1-8; ಮೇಲ್ಬರಹ) ದಾವೀದ ಮಾಡಿದ ನಿರ್ಧಾರಗಳನ್ನು ಯೆಹೋವ ದೇವರು ಆಶೀರ್ವದಿಸಿದನು ಮತ್ತು ದಾವೀದನ ಸ್ನೇಹಿತರು ಅವನ ಪರವಾಗಿ ಯುದ್ಧಕ್ಕೆ ಹೋದಾಗ ಅವರಿಗೂ ಸಹಾಯ ಮಾಡಿದನು.
13. ಯಾರಾದರೂ ನಮಗೆ ಬೇಜಾರ್ ಮಾಡಿದ್ರೆ ದಾವೀದನ ತರ ನಾವೇನು ಮಾಡಬಹುದು? (ಮತ್ತಾಯ 18:15-17)
13 (4) ಅನ್ವಯಿಸಿ. ‘ನಾನು ಹೇಗೆ ದಾವೀದನನ್ನು ಅನುಕರಿಸಬಹುದು’ ಅಂತ ಯೋಚಿಸಿ. ಸಮಸ್ಯೆಯನ್ನು ಬಗೆಹರಿಸೋಕೆ ತಕ್ಷಣ ಕೆಲವು ಹೆಜ್ಜೆಗಳನ್ನು ತಗೊಳ್ಳಿ. ಯಾವ ತರದ ಸಮಸ್ಯೆ ಅಂತ ನೋಡಿಕೊಂಡು ಮತ್ತಾಯ 18 ನೇ ಅಧ್ಯಾಯದಲ್ಲಿ ಯೇಸು ಹೇಳಿರೋ ಹೆಜ್ಜೆಗಳನ್ನು ಪಾಲಿಸಿ ಅಥವಾ ಆ ಸಲಹೆಯಲ್ಲಿರೋ ತತ್ವವನ್ನು ಅನ್ವಯಿಸಿ. (ಮತ್ತಾಯ 18:15-17 ಓದಿ.) ಆದ್ರೆ ದುಡುಕಿ ತೀರ್ಮಾನ ತಗೊಳ್ಳೋಕೆ ಹೋಗಬೇಡಿ. ಅದ್ರಲ್ಲೂ ನಿಮಗೆ ಬೇಜಾರ್ ಆಗಿದ್ದಾಗಲೋ ಕೋಪದಲ್ಲಿ ಇದ್ದಾಗಲೋ ತೀರ್ಮಾನ ತಗೊಳ್ಳೋಕೆ ಹೋಗಲೇ ಬೇಡಿ. ಸಮಾಧಾನವಾಗಿ ಯೋಚಿಸೋಕೆ, ಸರಿಯಾದ ತೀರ್ಮಾನ ತಗೊಳ್ಳೋಕೆ ಯೆಹೋವನ ಸಹಾಯ ಕೇಳಿ. ನಿಮ್ಮ ಸ್ನೇಹಿತರ ಮೇಲೆ ನಂಬಿಕೆ ಕಳಕೊಂಡು ಅವರಿಂದ ದೂರ ಆಗಬೇಡಿ. ಅವರು ಕೊಡೋ ಸಹಾಯವನ್ನು ಸ್ವೀಕರಿಸಿ. (ಜ್ಞಾನೋ. 17:17) ಎಲ್ಲಕ್ಕಿಂತ ಮುಖ್ಯವಾಗಿ ಬೈಬಲಲ್ಲಿ ಯೆಹೋವ ಕೊಟ್ಟಿರೋ ಸಲಹೆ ಪಾಲಿಸಿ.—ಜ್ಞಾನೋ. 3:5, 6.
ಪೌಲನಿಂದ ಕಲಿಯೋ ಪಾಠ
14. ನೀವು ಯಾವ ಸನ್ನಿವೇಶದಲ್ಲಿದ್ರೆ 2 ತಿಮೊತಿ 1:12-16 ಮತ್ತು 4:6-11, 17-22 ನ್ನು ಓದಿ ಪ್ರೋತ್ಸಾಹ ಪಡಕೊಳ್ಳಬಹುದು?
14 ನೀವು ಯೆಹೋವನ ಆರಾಧನೆ ಮಾಡೋದು ನಿಮ್ಮ ಕುಟುಂಬದವರಿಗೆ ಇಷ್ಟ ಇಲ್ವಾ? ಅವರು ನಿಮಗೆ ತೊಂದರೆ ಕೊಡ್ತಾ ಇದ್ದಾರಾ? ಅಥವಾ ನೀವಿರೋ ದೇಶದಲ್ಲಿ ಯೆಹೋವನ ಸಾಕ್ಷಿಗಳ ಕೆಲಸಗಳಿಗೆ ನಿರ್ಬಂಧ ಹಾಕಲಾಗಿದ್ಯಾ? ಅಥವಾ ಅವರನ್ನು ಪೂರ್ತಿ ಬ್ಯಾನ್ ಮಾಡಿಬಿಟ್ಟಿದ್ದಾರಾ? ಹಾಗಿದ್ರೆ 2 ತಿಮೊತಿ 1:12-16 ಮತ್ತು 4:6-11, 17-22 ನೇ ವಚನಗಳನ್ನು ಓದಿ. * ನಿಮಗೆ ಪ್ರೋತ್ಸಾಹ ಸಿಗುತ್ತೆ. ಈ ವಚನಗಳನ್ನು ಪೌಲ ಜೈಲಲ್ಲಿ ಇದ್ದಾಗ ಬರೆದ.
15. ಪ್ರಾರ್ಥನೆಯಲ್ಲಿ ಯೆಹೋವನ ಹತ್ರ ಏನೆಲ್ಲಾ ಹೇಳಿಕೊಳ್ಳಬಹುದು?
15 (1) ಪ್ರಾರ್ಥಿಸಿ. ಈ ವಚನಗಳನ್ನು ಓದುವ ಮುಂಚೆ ನಿಮಗಿರೋ ಸಮಸ್ಯೆ ಬಗ್ಗೆ ಹೇಗನಿಸ್ತಿದೆ ಅಂತ ಯೆಹೋವನ ಹತ್ರ ಪ್ರಾರ್ಥನೆಯಲ್ಲಿ ಮುಕ್ತವಾಗಿ ಹೇಳಿಕೊಳ್ಳಿ. ನಂತರ ನಿಮಗಿರೋ ಕಷ್ಟಗಳನ್ನು ತಾಳಿಕೊಳ್ಳೋಕೆ ಸಹಾಯ ಮಾಡುವಂಥ ತತ್ವಗಳನ್ನು ತೋರಿಸಿಕೊಡಪ್ಪಾ ಅಂತ ಬೇಡಿಕೊಳ್ಳಿ.
16. ಪೌಲನ ಸನ್ನಿವೇಶವನ್ನು ಚುಟುಕಾಗಿ ವಿವರಿಸಿ.
16 (2) ಕಲ್ಪಿಸಿಕೊಳ್ಳಿ. ನಿಮ್ಮನ್ನೇ ಪೌಲನ ಜಾಗದಲ್ಲಿ ಚಿತ್ರಿಸಿಕೊಳ್ಳಿ. ಅವನು ರೋಮಿನ ಜೈಲಲ್ಲಿ ಇದ್ದಾನೆ. ಕಬ್ಬಿಣದ ಸರಪಳಿಯಿಂದ ಅವನನ್ನು ಬಂಧಿಸಿದ್ದಾರೆ. ಈ ಮುಂಚೆನೂ ಅವನು ಜೈಲಲ್ಲಿದ್ದ. ಆದ್ರೆ ಈ ಸಲ ತನಗೆ ಮರಣದಂಡನೆ ಗ್ಯಾರಂಟಿ ಅಂತ ಅವನಿಗೆ ಗೊತ್ತಾಗಿದೆ. ಅವನ ಜೊತೆ ಇದ್ದ ಕೆಲವರು ಅವನನ್ನು ಬಿಟ್ಟು ಹೋಗಿದ್ದಾರೆ. ದೇಹದಲ್ಲಿ ಒಂಚೂರೂ ಶಕ್ತಿ ಇಲ್ಲದೆ ಸೋತು ಹೋಗಿದ್ದಾನೆ.—2 ತಿಮೊ. 1:15.
17. ಪೌಲ ಏನು ಮಾಡಬಹುದಿತ್ತು?
17 ಪೌಲ ಹಿಂದೆ ಆಗಿಹೋಗಿದ್ದರ ಬಗ್ಗೆ ನೆನಸಿ ಬೇಜಾರ್ ಮಾಡಿಕೊಳ್ಳಬಹುದಿತ್ತು. ತಾನು ಕ್ರೈಸ್ತನಾಗದೆ ಇದ್ದಿದ್ರೆ ಜೈಲಲ್ಲಿರೋ ಪರಿಸ್ಥಿತಿ ಬರುತ್ತಿರಲಿಲ್ಲ ಅಂತ ಯೋಚಿಸಬಹುದಿತ್ತು. ತನ್ನನ್ನು ಬಿಟ್ಟುಹೋದ ಏಷ್ಯಾದ ಜನ್ರ ಬಗ್ಗೆ ಕೋಪನೂ ಮಾಡಿಕೊಳ್ಳಬಹುದಿತ್ತು. ‘ಇನ್ಮುಂದೆ ನನ್ನ ಸ್ನೇಹಿತರಲ್ಲಿ ಯಾರನ್ನೂ ನಂಬಬಾರದು’ ಅಂತನೂ ಯೋಚಿಸಬಹುದಿತ್ತು. ಆದ್ರೆ ಪೌಲ ಇದ್ಯಾವುದನ್ನೂ ಮಾಡಲಿಲ್ಲ. ಬದಲಿಗೆ ತನ್ನ ಸ್ನೇಹಿತರು ತನ್ನ ಜೊತೆ ಇರುತ್ತಾರೆ, ಯೆಹೋವ ತನಗೆ ಬಹುಮಾನ ಕೊಟ್ಟೇ ಕೊಡ್ತಾನೆ ಅಂತ ನಂಬಿದ. ಯಾಕೆ?
18. ಈ ಕಷ್ಟದ ಸನ್ನಿವೇಶದಲ್ಲಿ ಪೌಲ ಏನು ಮಾಡಿದ?
18 (3) ಧ್ಯಾನಿಸಿ. ‘ತನ್ನ ಸಮಸ್ಯೆ ಬಗೆಹರಿಸೋಕೆ ಪೌಲ ಏನು ಮಾಡಿದ?’ ಅಂತ ಯೋಚಿಸಿ. ಅವನ ಸಾವಿನ ಸಮಯ ತುಂಬ ಹತ್ರ ಇತ್ತು. ಅದರ ಬಗ್ಗೆನೇ ಅವನು ಯೋಚಿಸ್ತಾ ಕೂರಲಿಲ್ಲ. ಬದಲಿಗೆ ಯೆಹೋವನ ಹೆಸರಿಗೆ ಮಹಿಮೆ ತರೋದರ ಬಗ್ಗೆನೇ ಯೋಚಿಸ್ತಿದ್ದ. ಅಷ್ಟೇ ಅಲ್ಲ ಬೇರೆಯವರಿಗೆ ಹೇಗೆ ಧೈರ್ಯ ಕೊಡಬಹುದು ಅಂತ ಯೋಚಿಸಿದ. ತಪ್ಪದೆ ಯೆಹೋವನಿಗೆ ಪ್ರಾರ್ಥನೆ ಮಾಡ್ತಿದ್ದ. ಆತನ ಮೇಲೆ ಭರವಸೆ ಇಟ್ಟ. (2 ತಿಮೊ. 1:3) ತನ್ನನ್ನು ಬಿಟ್ಟು ಹೋದ ಸಹೋದರರ ಬಗ್ಗೆ ಯೋಚನೆ ಮಾಡಿ ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ತನ್ನ ಜೊತೆ ನಿಷ್ಠೆಯಿಂದ ಇದ್ದ ಮತ್ತು ಸಹಾಯ ಮಾಡಿದ ಸಹೋದರರನ್ನು ನೆನಸಿಕೊಂಡ. ಅದರ ಜೊತೆಗೆ ಪವಿತ್ರ ಗ್ರಂಥವನ್ನು ತಪ್ಪದೆ ಓದುತ್ತಿದ್ದ. (2 ತಿಮೊ. 3:16, 17; 4:13) ಎಲ್ಲಕ್ಕಿಂತ ಮುಖ್ಯವಾಗಿ ಪೌಲನಿಗೆ ಯೆಹೋವ ಮತ್ತು ಯೇಸು ಇಬ್ಬರೂ ತನ್ನನ್ನು ಪ್ರೀತಿಸ್ತಾರೆ ಅನ್ನೋ ಪೂರ್ತಿ ನಂಬಿಕೆ ಇತ್ತು. ಅವನು ನಂಬಿದಂತೆ ಅವರಿಬ್ಬರೂ ಅವನ ಕೈಬಿಡಲಿಲ್ಲ. ಅವನು ಮಾಡಿದ ಸೇವೆಗೆ ಅವರು ಬಹುಮಾನ ಕೊಟ್ಟೇ ಕೊಡ್ತಾರೆ.
19. ಯೆಹೋವ ಪೌಲನಿಗೆ ಹೇಗೆ ಸಹಾಯ ಮಾಡಿದನು?
19 ಕ್ರೈಸ್ತನಾದ್ರೆ ಕೆಲವು ಕಷ್ಟಗಳನ್ನು ತಾಳಿಕೊಳ್ಳಬೇಕಾಗುತ್ತೆ ಅಂತ ಪೌಲನಿಗೆ ಯೆಹೋವ ಮೊದಲೇ ಹೇಳಿದ್ದನು. (ಅ. ಕಾ. 21:11-13) ಆದ್ರೆ ಯೆಹೋವ ಪೌಲನ ಕೈಬಿಡಲಿಲ್ಲ, ಅವನಿಗೆ ಸಹಾಯ ಮಾಡಿದನು. ಹೇಗೆ? ಪೌಲನ ಪ್ರಾರ್ಥನೆಗಳಿಗೆ ಉತ್ತರ ಕೊಟ್ಟನು. ಅವನಿಗೆ ಬೇಕಾದ ಶಕ್ತಿಯನ್ನೂ ಕೊಟ್ಟನು. (2 ತಿಮೊ. 4:17) ಪೌಲ ಯಾವುದಕ್ಕಾಗಿ ಇಷ್ಟು ಕಷ್ಟಪಟ್ಟನೋ ಆ ಬಹುಮಾನ ಸಿಕ್ಕೇ ಸಿಗುತ್ತೆ ಅಂತ ಯೆಹೋವ ಅವನಿಗೆ ಆಶ್ವಾಸನೆ ಕೊಟ್ಟನು. ಅಷ್ಟೇ ಅಲ್ಲ ಪೌಲನ ನಿಷ್ಠಾವಂತ ಸ್ನೇಹಿತರು ಅವನಿಗೆ ಬೇಕಾದ ಸಹಾಯ ಮಾಡುವಂತೆ ಕೂಡ ಯೆಹೋವ ಅವರನ್ನು ಪ್ರೇರಿಸಿದನು.
20. (ಎ) ರೋಮನ್ನರಿಗೆ 8:38, 39 ರ ಪ್ರಕಾರ ಪೌಲ ಕಷ್ಟಗಳನ್ನು ಯಾಕೆ ತಾಳಿಕೊಂಡ? (ಬಿ) ನಾವು ಹೇಗೆ ಪೌಲನನ್ನು ಅನುಕರಿಸಬಹುದು?
20 (4) ಅನ್ವಯಿಸಿ. ‘ನಾನು ಪೌಲನನ್ನು ಹೇಗೆ ಅನುಕರಿಸಬಹುದು?’ ಅಂತ ಯೋಚಿಸಿ. ನಾವು ಯೆಹೋವನ ಆರಾಧನೆ ಮಾಡೋದ್ರಿಂದ ನಮಗೆ ಹಿಂಸೆ ಬಂದೇ ಬರುತ್ತೆ ಅಂತ ಪೌಲನ ತರ ಮನಸ್ಸಲ್ಲಿಡಿ. (ಮಾರ್ಕ 10:29, 30) ಸಮಸ್ಯೆ ಇದ್ದಾಗಲೂ ನಾವು ಯೆಹೋವನಿಗೆ ನಂಬಿಗಸ್ತರಾಗಿ ಇರಬೇಕಂದ್ರೆ ಆತನಿಗೆ ಪ್ರಾರ್ಥನೆ ಮಾಡ್ತಾ ಇರಬೇಕು ಮತ್ತು ತಪ್ಪದೆ ಬೈಬಲನ್ನ ಓದಿ ಅಧ್ಯಯನ ಮಾಡ್ತಾ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಜೀವನದಲ್ಲಿ ಯೆಹೋವನಿಗೆ ಮಹಿಮೆ ತರೋದೇ ಮುಖ್ಯವಾಗಿ ಇರಬೇಕು. ಯೆಹೋವ ಯಾವತ್ತೂ ನಮ್ಮ ಕೈಬಿಡಲ್ಲ ಮತ್ತು ಆತ ತೋರಿಸೋ ಪ್ರೀತಿಯಿಂದ ನಮ್ಮನ್ನು ದೂರ ಮಾಡೋಕೆ ಯಾರಿಂದಲೂ ಯಾವುದರಿಂದಲೂ ಆಗಲ್ಲ ಅನ್ನೋ ನಂಬಿಕೆ ನಮಗೆ ಇರಬೇಕು.—ರೋಮನ್ನರಿಗೆ 8:38, 39 ಓದಿ; ಇಬ್ರಿ. 13:5, 6.
ಬೈಬಲಲ್ಲಿರೋ ಬೇರೆಯವರ ಉದಾಹರಣೆಯಿಂದನೂ ಕಲಿರಿ
21. ತಮಗಿದ್ದ ಅಡ್ಡಿತಡೆ ಜಯಿಸೋಕೆ ಅಯಾ ಮತ್ತು ಹೆಕ್ಟರ್‌ಗೆ ಯಾರ ಉದಾಹರಣೆಗಳು ಸಹಾಯ ಮಾಡಿತು?
21 ನಮಗೆ ಏನೇ ಕಷ್ಟ ಬಂದ್ರೂ ಅದನ್ನ ತಾಳಿಕೊಳ್ಳೋಕೆ ಬೈಬಲಲ್ಲಿರೋ ವ್ಯಕ್ತಿಗಳ ಉದಾಹರಣೆಗಳು ಸಹಾಯ ಮಾಡುತ್ತೆ. ಉದಾಹರಣೆಗೆ ಜಪಾನಿನಲ್ಲಿರೋ ಅಯಾ ಅನ್ನೋ ಪಯನೀಯರ್
ಸಹೋದರಿಗೆ ಸಾರ್ವಜನಿಕ ಸಾಕ್ಷಿಕಾರ್ಯ ಮಾಡೋಕೆ ಭಯ ಆಗ್ತಿತ್ತು. ಆ ಭಯವನ್ನು ಮೆಟ್ಟಿನಿಲ್ಲೋಕೆ ಯೋನನ ಕಥೆ ಅವಳಿಗೆ ಸಹಾಯ ಮಾಡಿತು. ಇಂಡೊನೇಶಿಯದಲ್ಲಿರೋ ಯುವ ಸಹೋದರ ಹೆಕ್ಟರ್‌ನ ಅಪ್ಪ-ಅಮ್ಮ ಯೆಹೋವನನ್ನು ಆರಾಧಿಸ್ತಾ ಇರಲಿಲ್ಲ. ಯೆಹೋವನ ಬಗ್ಗೆ ಕಲಿತು ಆತನ ಆರಾಧನೆ ಮಾಡೋಕೆ ರೂತಳ ಉದಾಹರಣೆ ಹೆಕ್ಟರ್‌ಗೆ ಸಹಾಯ ಮಾಡಿತು.22. ಬೈಬಲ್ ಉದಾಹರಣೆಗಳಿರೋ ಡ್ರಾಮಾಗಳಿಂದ ಅಥವಾ “ಅವರ ನಂಬಿಕೆಯನ್ನು ಅನುಕರಿಸಿ” ಅನ್ನೋ ಲೇಖನ ಸರಣಿಯಿಂದ ನಾವು ಹೇಗೆ ಪ್ರಯೋಜನ ಪಡಕೊಳ್ಳಬಹುದು?
22 ನಿಮಗೆ ಸಹಾಯ ಆಗುವಂಥ ಬೈಬಲ್ ಉದಾಹರಣೆಗಳು ಎಲ್ಲಿ ಸಿಗುತ್ತೆ? ಬೈಬಲ್ ಘಟನೆಗಳನ್ನು ಕಣ್ಮುಂದೆ ತರುವಂಥ ಅನೇಕ ವಿಡಿಯೋ ಮತ್ತು ಆಡಿಯೋ ಡ್ರಾಮಾಗಳಿವೆ. “ಅವರ ನಂಬಿಕೆಯನ್ನು ಅನುಕರಿಸಿ” ಅನ್ನೋ ಸರಣಿ ಲೇಖನ ಇದೆ. * ಚೆನ್ನಾಗಿ ಸಂಶೋಧನೆ ಮಾಡಿರುವಂಥ ಈ ವಿಷ್ಯಗಳನ್ನು ನೋಡುವ, ಕೇಳಿಸಿಕೊಳ್ಳುವ, ಓದುವ ಮುಂಚೆ ಯೆಹೋವನಿಗೆ ಪ್ರಾರ್ಥನೆ ಮಾಡಿ. ಇವುಗಳಲ್ಲಿ ನಿಮಗೆ ಅನ್ವಯ ಆಗುವಂಥ ಪಾಠಗಳನ್ನು ಕಲಿಯೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನ ಹತ್ರ ಬೇಡಿಕೊಳ್ಳಿ. ಯಾರ ಬಗ್ಗೆ ಓದುತ್ತಿದ್ದೀರೋ ಆ ವ್ಯಕ್ತಿಯ ಸ್ಥಾನದಲ್ಲಿ ನಿಮ್ಮನ್ನು ಚಿತ್ರಿಸಿಕೊಳ್ಳಿ. ಯೆಹೋವನ ಈ ನಂಬಿಗಸ್ತ ಸೇವಕರು ಏನು ಮಾಡಿದ್ರು ಮತ್ತು ಅವರಿಗಿದ್ದ ಕಷ್ಟಗಳಿಂದ ಹೊರಗೆ ಬರೋಕೆ ಯೆಹೋವ ಅವರಿಗೆ ಹೇಗೆ ಸಹಾಯ ಮಾಡಿದನು ಅನ್ನೋದನ್ನು ಧ್ಯಾನಿಸಿ. ನಂತ್ರ ಈ ಉದಾಹರಣೆಗಳಿಂದ ಕಲಿತ ಪಾಠವನ್ನು ನಿಮ್ಮ ಸನ್ನಿವೇಶಕ್ಕೆ ಅನ್ವಯಿಸಿಕೊಳ್ಳಿ. ಈಗಾಗಲೇ ಯೆಹೋವ ನಿಮಗೆ ಮಾಡಿರೋ ಸಹಾಯಕ್ಕೆ ಆತನಿಗೆ ಥ್ಯಾಂಕ್ಸ್ ಹೇಳಿ. ಬೇರೆಯವರಿಗೂ ಪ್ರೋತ್ಸಾಹ ಕೊಟ್ಟು ಸಹಾಯ ಮಾಡಿ ಯೆಹೋವನ ಋಣ ತೀರಿಸೋಣ.
23. ಯೆಶಾಯ 41:10, 13 ರ ಪ್ರಕಾರ ಯೆಹೋವ ಏನು ಮಾಡ್ತೇನೆ ಅಂತ ಮಾತು ಕೊಟ್ಟಿದ್ದಾನೆ?
23 ಈ ಲೋಕ ಸೈತಾನನ ಕೈಯಲ್ಲಿ ಇರೋದ್ರಿಂದ ಜೀವನ ಮಾಡೋದು ಅಷ್ಟು ಸುಲಭ ಅಲ್ಲ. ಕೆಲವೊಮ್ಮೆ ಏನು ಮಾಡಬೇಕು ಅಂತಾನೇ ಗೊತ್ತಾಗಲ್ಲ. (2 ತಿಮೊ. 3:1) ಆದ್ರೆ ನಾವು ಗಾಬರಿ ಪಡೋ ಅಥವಾ ಭಯ ಪಡೋ ಅಗತ್ಯ ಇಲ್ಲ. ನಾವು ಪಡುತ್ತಿರೋ ಕಷ್ಟಗಳ ಬಗ್ಗೆ ಯೆಹೋವನಿಗೆ ಚೆನ್ನಾಗಿ ಗೊತ್ತು. ಆತ ತನ್ನ ಬಲಗೈಯಿಂದ ನಮ್ಮನ್ನು ಹಿಡಿದು ತಾಳಿಕೊಳ್ಳೋಕೆ ಸಹಾಯ ಮಾಡ್ತೇನೆ ಅಂತ ಮಾತು ಕೊಟ್ಟಿದ್ದಾನೆ. (ಯೆಶಾಯ 41:10, 13 ಓದಿ.) ಆತನ ಸಹಾಯ ಇದ್ದೇ ಇರುತ್ತೆ ಅನ್ನೋ ಪೂರ್ತಿ ಭರವಸೆಯಿಂದ ಬೈಬಲಿಂದ ಬಲ ಪಡಕೊಳ್ಳೋಣ ಮತ್ತು ಏನೇ ಕಷ್ಟ ಬಂದ್ರೂ ಅದನ್ನು ತಾಳಿಕೊಳ್ಳೋಣ.
ಗೀತೆ 114 ದೇವರ ಸ್ವಂತ ಗ್ರಂಥ—ಒಂದು ನಿಧಿ
^ ಪ್ಯಾರ. 5 ಯೆಹೋವ ದೇವರು ತನ್ನ ಸೇವಕರನ್ನು ಪ್ರೀತಿಸ್ತಾನೆ ಮತ್ತು ಅವರಿಗೆ ಕಷ್ಟ ಬಂದಾಗ ತಾಳಿಕೊಳ್ಳೋಕೆ ಸಹಾಯ ಮಾಡ್ತಾನೆ ಅನ್ನೋದು ಬೈಬಲಲ್ಲಿರೋ ಅನೇಕ ಉದಾಹರಣೆಗಳಿಂದ ಗೊತ್ತಾಗುತ್ತೆ. ನಾವು ಬೈಬಲನ್ನು ಅಧ್ಯಯನ ಮಾಡುವಾಗ ಅದ್ರಿಂದ ಪ್ರಯೋಜನ ಪಡಕೊಳ್ಳುವ ಒಂದು ವಿಧಾನದ ಬಗ್ಗೆ ಈ ಲೇಖನದಲ್ಲಿ ಚರ್ಚಿಸ್ತೇವೆ.
^ ಪ್ಯಾರ. 2 ಬೈಬಲನ್ನು ಓದಿ ಅಧ್ಯಯನ ಮಾಡೋ ಒಂದು ವಿಧಾನವನ್ನು ಈ ಲೇಖನದಲ್ಲಿ ಕೊಡಲಾಗಿದೆ. ಇನ್ನೂ ಹೇಗೆಲ್ಲ ಅಧ್ಯಯನ ಮಾಡಬಹುದು ಅನ್ನೋದರ ಬಗ್ಗೆ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನದಲ್ಲಿ ಇದೆ. ಅದು “ಬೈಬಲ್” ಅನ್ನೋ ವಿಭಾಗದಲ್ಲಿ “ಬೈಬಲನ್ನು ಓದಿ ಅರ್ಥಮಾಡಿಕೊಳ್ಳುವುದು” ಅನ್ನೋ ವಿಷ್ಯದ ಕೆಳಗೆ ಇದೆ.
^ ಪ್ಯಾರ. 14 ಈ ವಚನಗಳನ್ನು ಸಭೆಯಲ್ಲಿ ಕಾವಲಿನಬುರುಜು ಚರ್ಚೆ ನಡಿವಾಗ ಓದಬೇಡಿ.
^ ಪ್ಯಾರ. 22 jw.orgನಲ್ಲಿರೋ ಬೈಬಲ್ ಬೋಧನೆಗಳು > ದೇವರ ಮೇಲೆ ನಂಬಿಕೆ > “ಅವರ ನಂಬಿಕೆಯನ್ನ ಅನುಕರಿಸಿ—ಬೈಬಲಿನ ಸ್ತ್ರೀ-ಪುರುಷರು” ನೋಡಿ.