ಅಧ್ಯಯನ ಲೇಖನ 10
ಬೈಬಲ್ ವಿದ್ಯಾರ್ಥಿಗೆ ಸಭೆಯಲ್ಲಿರೋ ಎಲ್ಲರೂ ಹೇಗೆ ಸಹಾಯ ಮಾಡಬಹುದು?
‘ಪ್ರತಿಯೊಂದು ಅಂಗ ಅದ್ರ ಕೆಲಸವನ್ನ ಸರಿಯಾಗಿ ಮಾಡಿದ್ರೆ ಇಡೀ ದೇಹ ಚೆನ್ನಾಗಿ ಬೆಳೆಯುತ್ತೆ.’—ಎಫೆ. 4:16.
ಗೀತೆ 118 ಒಬ್ಬರನ್ನೊಬ್ಬರು ಸ್ವಾಗತಿಸಿರಿ
ಕಿರುನೋಟ *
1-2. ಒಬ್ಬ ಬೈಬಲ್ ವಿದ್ಯಾರ್ಥಿ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಳ್ಳಲು ಯಾರು ಸಹಾಯ ಮಾಡಬೇಕು?
ಫಿಜಿ ದೇಶದಲ್ಲಿರೋ ಏಮಿ ಹೀಗೆ ಹೇಳ್ತಾರೆ: “ನನಗೆ ಬೈಬಲಲ್ಲಿ ಕಲಿಯುತ್ತಿದ್ದ ವಿಷಯಗಳೆಲ್ಲಾ ಇಷ್ಟ ಆಗ್ತಿತ್ತು. ಅದ್ರಲ್ಲಿ ಇರೋದೆಲ್ಲಾ ಸತ್ಯ ಅಂತನೂ ಗೊತ್ತಿತ್ತು. ಆದ್ರೆ ಬೇರೆ ಸಹೋದರ ಸಹೋದರಿಯರ ಪರಿಚಯ ಆಗಿ ಅವ್ರ ಜೊತೆ ಸಮಯ ಕಳೆದ ಮೇಲೆನೇ ನಾನು ಜೀವನದಲ್ಲಿ ಬದಲಾವಣೆಗಳನ್ನ ಮಾಡ್ಕೊಂಡೆ, ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಂಡೆ.” ಏಮಿಯ ಈ ಮಾತುಗಳಿಂದ ಒಂದು ಸತ್ಯಾಂಶ ಗೊತ್ತಾಗುತ್ತೆ. ಅದೇನಂದ್ರೆ ಒಬ್ಬ ಬೈಬಲ್ ವಿದ್ಯಾರ್ಥಿ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಳ್ಳಬೇಕಂದ್ರೆ ಸಭೆಯಲ್ಲಿರೋ ಎಲ್ಲರ ಸಹಾಯ ಬೇಕು.
2 ಹೊಸಬರು ಸತ್ಯಕ್ಕೆ ಬರಬೇಕಂದ್ರೆ ಸಭೆಯಲ್ಲಿರೋ ಪ್ರತಿಯೊಬ್ಬರು ಸಹಾಯ ಮಾಡಬೇಕು. (ಎಫೆ. 4:16) ವನುವಾಟು ದೇಶದಲ್ಲಿರೋ ಪಯನೀಯರ್ ಸಹೋದರಿ ಲೆಲಾನಿ ಹೀಗೆ ಹೇಳ್ತಾರೆ: “ಇಡೀ ಊರು ಸೇರಿ ಒಂದು ಮಗುವನ್ನ ಬೆಳೆಸುತ್ತೆ ಅನ್ನೋ ಮಾತಿದೆ. ಆ ಮಾತನ್ನ ಜನರನ್ನು ಶಿಷ್ಯರನ್ನಾಗಿ ಮಾಡೋ ಕೆಲಸಕ್ಕೂ ಹೋಲಿಸಬಹುದು. ಒಬ್ಬರು ಸತ್ಯಕ್ಕೆ ಬರೋಕೆ ಇಡೀ ಸಭೆನೇ ಸಹಾಯ ಮಾಡಬೇಕು.” ಒಂದು ಮಗು ಬೆಳೆದು ಜವಾಬ್ದಾರಿಯುತ ವ್ಯಕ್ತಿ ಆಗುವುದರಲ್ಲಿ ಅವನ ಕುಟುಂಬ ಸದಸ್ಯರ, ಸ್ನೇಹಿತರ, ಶಿಕ್ಷಕರ ಹೀಗೆ ಎಲ್ಲರ ಪಾತ್ರನೂ ಇರುತ್ತೆ. ಅವರು ಅವನಿಗೆ ಜೀವನದ ಮುಖ್ಯ ಪಾಠಗಳನ್ನ ಕಲಿಸ್ತಾರೆ ಮತ್ತು ಧೈರ್ಯ ತುಂಬ್ತಾರೆ. ಅದೇ ತರ ಒಬ್ಬ ಬೈಬಲ್ ವಿದ್ಯಾರ್ಥಿ ಪ್ರಗತಿ ಮಾಡಿ ದೀಕ್ಷಾಸ್ನಾನ ತಗೊಳ್ಳುವುದರಲ್ಲಿ ಪ್ರತಿಯೊಬ್ಬ ಪ್ರಚಾರಕರ ಪಾತ್ರನೂ ಇರಬೇಕು. ಅವರು ಅವನಿಗೆ ಸಲಹೆ ಕೊಡಬಹುದು, ಧೈರ್ಯ ತುಂಬಬಹುದು, ಒಳ್ಳೇ ಮಾದರಿ ಇಡಬಹುದು.—ಜ್ಞಾನೋ. 15:22.
3. ಆ್ಯನ, ಡೋರಿನ್ ಮತ್ತು ಲೆಲಾನಿಯ ಮಾತುಗಳಿಂದ ಏನು ಗೊತ್ತಾಗುತ್ತೆ?
3 ಬೈಬಲ್ ವಿದ್ಯಾರ್ಥಿಗೆ ಸಭೆಯವರು ಸಹಾಯ ಮಾಡಲು ಮುಂದೆ ಬಂದರೆ ಆ ವಿದ್ಯಾರ್ಥಿಗೆ ಸ್ಟಡಿ ಮಾಡುತ್ತಿರುವವರು ಖುಷಿ ಪಡಬೇಕು. ಯಾಕೆ? ಮಾಲ್ಡೋವ ದೇಶದಲ್ಲಿರೋ ವಿಶೇಷ ಪಯನೀಯರ್ ಸಹೋದರಿ ಆ್ಯನ ಏನು ಹೇಳ್ತಾರೆ ಗಮನಿಸಿ: “ಒಬ್ಬ ಬೈಬಲ್ ವಿದ್ಯಾರ್ಥಿ ಪ್ರಗತಿ ಮಾಡಬೇಕಂದ್ರೆ ಅವನಿಗೆ ತುಂಬ ಸಹಾಯ ಮಾಡಬೇಕಾಗುತ್ತೆ. ಆ ಎಲ್ಲಾ ಸಹಾಯವನ್ನ ಅವನಿಗೆ ಸ್ಟಡಿ ಮಾಡುತ್ತಿರೋ ಒಬ್ಬರಿಂದನೇ ಪೂರೈಸೋಕೆ ಯೋಹಾ. 13:35.
ಆಗಲ್ಲ.” ಅದೇ ದೇಶದಲ್ಲಿರೋ ಇನ್ನೊಬ್ಬ ವಿಶೇಷ ಪಯನೀಯರ್ ಸಹೋದರ ಡೋರಿನ್ ಹೀಗೆ ಹೇಳ್ತಾರೆ: “ಕೆಲವೊಮ್ಮೆ ನನ್ನ ಜೊತೆ ಸ್ಟಡಿಗೆ ಬಂದ ಪ್ರಚಾರಕರು ಹೇಳೋ ವಿಷಯ ವಿದ್ಯಾರ್ಥಿಯ ಹೃದಯಕ್ಕೆ ನಾಟುತ್ತೆ, ಆ ವಿಷಯ ನಂಗೆ ಯಾವತ್ತೂ ಹೊಳೆದೇ ಇರಲ್ಲ.” ಸಹೋದರಿ ಲೆಲಾನಿ ಇನ್ನೊಂದು ಕಾರಣ ಕೊಡ್ತಾರೆ: “ಬೇರೆ ಸಹೋದರ ಸಹೋದರಿಯರು ವಿದ್ಯಾರ್ಥಿಗೆ ಪ್ರೀತಿ ಕಾಳಜಿ ತೋರಿಸೋದ್ರಿಂದ ನಾವು ಯೆಹೋವನ ಜನ ಅಂತ ವಿದ್ಯಾರ್ಥಿ ಗುರುತಿಸೋಕೆ ಆಗುತ್ತೆ.”—4. ಈ ಲೇಖನದಲ್ಲಿ ನಾವೇನನ್ನು ಚರ್ಚಿಸ್ತೇವೆ?
4 ಆದ್ರೆ ‘ಬೇರೆಯವ್ರ ವಿದ್ಯಾರ್ಥಿ ಪ್ರಗತಿ ಮಾಡೋಕೆ ನಾನು ಹೇಗಪ್ಪಾ ಸಹಾಯ ಮಾಡಲಿ?’ ಅಂತ ನೀವು ಯೋಚಿಸಬಹುದು. ಅದಕ್ಕೇ ನಾವೀಗ, ಬೇರೆಯವರು ನಮ್ಮನ್ನು ಅವರ ಸ್ಟಡಿಗೆ ಕರೆದಾಗ ನಾವೇನು ಮಾಡಬೇಕು ಮತ್ತು ಅವ್ರ ವಿದ್ಯಾರ್ಥಿಗಳು ಕೂಟಕ್ಕೆ ಬಂದಾಗ ಏನು ಮಾಡಬೇಕು ಅಂತ ನೋಡೋಣ. ಅದ್ರ ಜೊತೆಗೆ, ಬೈಬಲ್ ವಿದ್ಯಾರ್ಥಿಗಳು ದೀಕ್ಷಾಸ್ನಾನ ತಗೊಳ್ಳುವಷ್ಟು ಪ್ರಗತಿ ಮಾಡಲು ಹಿರಿಯರು ಹೇಗೆ ಸಹಾಯ ಮಾಡಬಹುದು ಅಂತ ನೋಡೋಣ.
ನಿಮ್ಮನ್ನ ಬೈಬಲ್ ಸ್ಟಡಿಗೆ ಕರೆದರೆ . . .
5. ಬೇರೆಯವರು ನಿಮ್ಮನ್ನ ಅವ್ರ ಸ್ಟಡಿಗೆ ಕರೆದಾಗ ನಿಮ್ಮ ಜವಾಬ್ದಾರಿ ಏನು?
5 ಒಬ್ಬ ಬೈಬಲ್ ವಿದ್ಯಾರ್ಥಿಗೆ ಬೈಬಲ್ ಸತ್ಯವನ್ನು ಚೆನ್ನಾಗಿ ಅರ್ಥ ಮಾಡಿಸೋ ಜವಾಬ್ದಾರಿ ಮುಖ್ಯವಾಗಿ ಇರೋದು ಅವ್ರಿಗೆ ಸ್ಟಡಿ ಮಾಡುತ್ತಿರೋ ಸಹೋದರ ಅಥ್ವಾ ಸಹೋದರಿಯದ್ದೇ. ಆದ್ರೂ ನಿಮ್ಮನ್ನ ಅವ್ರ ಸ್ಟಡಿಗೆ ಕರೆದರೆ ನೀವು ಅವರಿಗೆ ಒಳ್ಳೇ ಸಹಾಯಕರಾಗಿರಬೇಕು. (ಪ್ರಸಂ. 4:9, 10) ಬೈಬಲ್ ಸ್ಟಡಿ ನಡೆಯುವಾಗ ನೀವು ಒಳ್ಳೇ ಸಹಾಯಕ ಆಗಿರಬೇಕಂದ್ರೆ ಏನೇನು ಮಾಡಬೇಕು?
6. ನೀವು ಬೇರೆಯವರ ಸ್ಟಡಿಗೆ ಹೋಗೋದಾದ್ರೆ ಜ್ಞಾನೋಕ್ತಿ 20:18 ರಲ್ಲಿರೋ ತತ್ವವನ್ನ ಹೇಗೆ ಅನ್ವಯಿಸಬಹುದು?
6 ಮುಂಚೆನೇ ತಯಾರಿ ಮಾಡಿ. ಮೊದಲು ಸ್ಟಡಿ ಮಾಡುವವ್ರ ಹತ್ತಿರ ಬೈಬಲ್ ವಿದ್ಯಾರ್ಥಿಯ ಬಗ್ಗೆ ಕೇಳಿ ತಿಳುಕೊಳ್ಳಿ. (ಜ್ಞಾನೋಕ್ತಿ 20:18 ಓದಿ.) ವಿದ್ಯಾರ್ಥಿ ಬಗ್ಗೆ ಈ ಪ್ರಶ್ನೆಗಳನ್ನ ಕೇಳಬಹುದು: “ನಿಮ್ಮ ವಿದ್ಯಾರ್ಥಿಯ ವಯಸ್ಸೆಷ್ಟು? ಅವರು ಏನು ನಂಬ್ತಾರೆ? ಅವ್ರ ಮನೆಯಲ್ಲಿ ಯಾರೆಲ್ಲಾ ಇದ್ದಾರೆ? ಸ್ಟಡಿಯಲ್ಲಿ ಎಷ್ಟನೇ ಅಧ್ಯಾಯ ಚರ್ಚೆ ಮಾಡ್ತಿದ್ದೀರಾ? ಯಾವ ವಿಷಯವನ್ನ ಅವ್ರ ಮನಸ್ಸಿಗೆ ನಾಟಿಸಬೇಕು ಅಂತಿದ್ದೀರಾ? ಸ್ಟಡಿಯಲ್ಲಿ ನಾನೇನು ಮಾಡಬೇಕು ಏನು ಮಾಡಬಾರದು? ಏನು ಹೇಳಬೇಕು ಏನು ಹೇಳಬಾರದು? ಅವ್ರಿಗೆ ನಾನು ಹೇಗೆ ಪ್ರೋತ್ಸಾಹ ಕೊಡಬಹುದು?” ನೀವು ಹೀಗೆ ಕೇಳಿದಾಗ ವಿದ್ಯಾರ್ಥಿಗೆ ಸಹಾಯ ಆಗುವಂಥ ವಿಷಯಗಳನ್ನ ಖಂಡಿತ ಅವರು ನಿಮಗೆ ಹೇಳ್ತಾರೆ. ಆದ್ರೆ ಗುಟ್ಟಾಗಿ ಇಡಬೇಕಾದ ವಿಷಯಗಳನ್ನ ಹೇಳಲ್ಲ. ಜಾಯ್ ಅನ್ನೋ ಮಿಷನರಿ ಸಹೋದರಿ ತನ್ನ ಸ್ಟಡಿಗೆ ಬರುವವರ ಹತ್ತಿರ ವಿದ್ಯಾರ್ಥಿ ಬಗ್ಗೆ ಕೆಲವೊಂದು ವಿಷಯಗಳನ್ನ ಮುಂಚೆನೇ ಹೇಳ್ತಾರೆ. ಅವರು ಹೇಳೋದು: “ಈ ರೀತಿ ನನ್ನ ಬೈಬಲ್ ವಿದ್ಯಾರ್ಥಿ ಬಗ್ಗೆ ಕೆಲವು ವಿಷಯಗಳನ್ನ ಹೇಳೋದ್ರಿಂದ ನನ್ನ ಜೊತೆ ಸ್ಟಡಿಗೆ ಬರುವವರು ವಿದ್ಯಾರ್ಥಿ ಬಗ್ಗೆ ಆಸಕ್ತಿ ತೋರಿಸ್ತಾರೆ. ಅಷ್ಟೇ ಅಲ್ಲ ಸ್ಟಡಿ ನಡಿತಿರುವಾಗ ಯಾವ ವಿಷಯ ಹೇಳಬಹುದು ಅಂತ ತಿಳುಕೊಳ್ತಾರೆ.”
7. ಬೇರೆಯವರ ಸ್ಟಡಿಗೆ ಹೋಗುವಾಗ ಯಾಕೆ ತಯಾರಿ ಮಾಡ್ಕೊಂಡು ಹೋಗಬೇಕು?
7 ನೀವು ಬೇರೆಯವರ ಸ್ಟಡಿಗೆ ಹೋಗುವಾಗ ಸ್ಟಡಿಯಲ್ಲಿ ಚರ್ಚೆ ಮಾಡೋ ಅಧ್ಯಾಯವನ್ನ ತಯಾರಿ ಮಾಡ್ಕೊಂಡು ಹೋಗಿ. (ಎಜ್ರ 7:10) ಸಹೋದರ ಡೋರಿನ್ ಹೀಗೆ ಹೇಳ್ತಾರೆ: “ನನ್ನ ಜೊತೆ ಸ್ಟಡಿಗೆ ಬರುವವರು ತಯಾರಿ ಮಾಡ್ಕೊಂಡು ಬಂದ್ರೆ ನನಗೆ ತುಂಬ ಖುಷಿ ಆಗುತ್ತೆ. ಯಾಕಂದ್ರೆ ಆಗ ಮಾತ್ರನೇ ವಿದ್ಯಾರ್ಥಿಗೆ ಪ್ರಯೋಜನ ಆಗುವಂಥ ವಿಷಯಗಳನ್ನ ಹೇಳೋಕೆ ಆಗೋದು.” ಅಷ್ಟೇ ಅಲ್ಲ, ಸ್ಟಡಿ ಮಾಡುವವರು ಮತ್ತು ಅವರ ಜೊತೆ ಹೋಗೋ ನೀವು ಹೀಗೆ ಇಬ್ಬರೂ ಚೆನ್ನಾಗಿ ತಯಾರಿ ಮಾಡಿದ್ರೆ ವಿದ್ಯಾರ್ಥಿಗೆ ಒಳ್ಳೇ ಮಾದರಿಯಾಗಿರುತ್ತೆ. ಬೇರೆಯವರ ಸ್ಟಡಿಗೆ ಹೋಗುವಾಗ ಚೆನ್ನಾಗಿ ತಯಾರಿ ಮಾಡೋಕೆ ಆಗದಿದ್ರೂ ಮುಖ್ಯ ವಿಷಯವನ್ನಾದರೂ ನೋಡ್ಕೊಂಡು ಹೋಗಿ.
8. ವಿದ್ಯಾರ್ಥಿಗೆ ಪ್ರಯೋಜನ ಆಗೋ ತರ ಪ್ರಾರ್ಥನೆ ಮಾಡಬೇಕಂದ್ರೆ ಏನು ಮಾಡಬೇಕು?
8 ಬೈಬಲ್ ಸ್ಟಡಿಯಲ್ಲಿ ಪ್ರಾರ್ಥನೆ ಕೂಡ ಒಂದು ಪ್ರಾಮುಖ್ಯ ಭಾಗ. ಹಾಗಾಗಿ ಸ್ಟಡಿ ಮಾಡುವವ್ರು ನಿಮ್ಮ ಹತ್ರ ಪ್ರಾರ್ಥಿಸೋಕೆ ಕೇಳೋದಾದ್ರೆ ಪ್ರಾರ್ಥನೆಯಲ್ಲಿ ಏನು ಹೇಳಬೇಕು ಅಂತ ಮೊದಲೇ ಯೋಚಿಸಿ. ಆಗ ನಿಮ್ಮ ಪ್ರಾರ್ಥನೆಯಿಂದ ವಿದ್ಯಾರ್ಥಿಗೆ ಪ್ರಯೋಜನ ಆಗುತ್ತೆ. (ಕೀರ್ತ. 141:2) ಜಪಾನ್‌ನಲ್ಲಿರೋ ಸಹೋದರಿ ಹ್ಯಾನಿ ಸತ್ಯ ಕಲಿಯುತ್ತಿದ್ದಾಗ ಅವಳ ಟೀಚರ್ ಜೊತೆ ಬರುತ್ತಿದ್ದ ಒಬ್ಬ ಸಹೋದರಿ ಮಾಡ್ತಿದ್ದ ಪ್ರಾರ್ಥನೆಯನ್ನ ಅವಳು ಈಗಲೂ ನೆನಪಿಸಿಕೊಳ್ತಾಳೆ. ಅವಳು ಹೀಗೆ ಹೇಳ್ತಾಳೆ: “ಆ ಸಹೋದರಿಗೆ ಯೆಹೋವನ ಜೊತೆ ಆಪ್ತ ಸ್ನೇಹ ಇದೆ ಅನ್ನೋದು ಅವರ ಪ್ರಾರ್ಥನೆಯಿಂದ ಗೊತ್ತಾಗ್ತಿತ್ತು. ನನಗೂ ಅವರ ತರಾನೇ ಆಗಬೇಕು ಅಂತ ಆಸೆ ಆಗ್ತಿತ್ತು. ಪ್ರಾರ್ಥನೆಯಲ್ಲಿ ನನಗೋಸ್ಕರನೂ ಅವರು ಬೇಡಿಕೊಳ್ಳುತ್ತಿದ್ರು. ಆಗ ಅವ್ರಿಗೆ ನಾನಂದ್ರೂ ತುಂಬ ಪ್ರೀತಿ ಅಂತ ಅರ್ಥ ಆಗ್ತಿತ್ತು.”
9. ಯಾಕೋಬ 1:19 ರ ಪ್ರಕಾರ ಸ್ಟಡಿ ನಡೆಯುವಾಗ ಜೊತೆಗಾರ ಏನು ಮಾಡಬೇಕು?
9 ಸ್ಟಡಿ ಮಾಡುವವ್ರಿಗೆ ಸಾಥ್ ಕೊಡಿ. ನೈಜೀರಿಯದಲ್ಲಿ ವಿಶೇಷ ಪಯನೀಯರ್ ಆಗಿರೋ ಒಮಾಮುಯೋವಿ ಹೀಗೆ ಹೇಳ್ತಾಳೆ: “ಒಬ್ಬ ಒಳ್ಳೇ ಜೊತೆಗಾರ ಸ್ಟಡಿ ಮಾಡುವಾಗ ಚೆನ್ನಾಗಿ ಕೇಳಿಸಿಕೊಳ್ತಾರೆ. ಯಾಕಂದ್ರೆ ಕಲಿಸೋ ಜವಾಬ್ದಾರಿ ಮುಖ್ಯವಾಗಿ ಸ್ಟಡಿ ಮಾಡುವವ್ರಿಗೆ ಇದೆ ಅಂತ ಅರ್ಥ ಮಾಡಿಕೊಳ್ತಾರೆ. ಸ್ಟಡಿ ನಡೆಯುವಾಗ ಅವ್ರು ಜಾಸ್ತಿ ಮಾತಾಡಲ್ಲ. ಅಗತ್ಯ ಇದ್ದಾಗ ವಿದ್ಯಾರ್ಥಿಗೆ ಪ್ರಯೋಜನ ಆಗುವಂಥ ವಿಷಯಗಳನ್ನ ಹೇಳ್ತಾರೆ.” ಸ್ಟಡಿಯಲ್ಲಿ ಯಾವಾಗ ಮಾತಾಡಬೇಕು, ಏನು ಮಾತಾಡಬೇಕು ಅಂತ ಹೇಗೆ ಗೊತ್ತು ಮಾಡಿಕೊಳ್ತೀರಾ? (ಜ್ಞಾನೋ. 25:11) ಟೀಚರ್ ಮತ್ತು ವಿದ್ಯಾರ್ಥಿ ಮಾತಾಡುವಾಗ ಗಮನ ಕೊಟ್ಟು ಕೇಳಿಸಿಕೊಳ್ಳಿ. (ಯಾಕೋಬ 1:19 ಓದಿ.) ಆಗ ಮಾತ್ರ ಯಾವಾಗ ಏನು ಹೇಳಬೇಕು ಅಂತ ಗೊತ್ತಾಗುತ್ತೆ. ಆದ್ರೆ ಒಂದು ಮಾತು. ಏನಾದ್ರೂ ಹೇಳೋ ಮುಂಚೆ ಚೆನ್ನಾಗಿ ಯೋಚನೆ ಮಾಡಿ ಹೇಳಬೇಕು. ಉದಾಹರಣೆಗೆ, ಸ್ಟಡಿ ಮಾಡುವವ್ರು ಒಂದು ವಿಷಯವನ್ನ ವಿವರಿಸುತ್ತಿರುವಾಗ ಮಧ್ಯ ಬಾಯಿ ಹಾಕಬಾರದು, ನೀವೇ ಜಾಸ್ತಿ ಮಾತಾಡಬಾರದು, ಸಂಬಂಧ ಪಡದಿರೋ ವಿಷಯವನ್ನ ಹೇಳಬಾರದು. ಆದ್ರೆ ಒಂದು ವಿಷಯವನ್ನ ವಿದ್ಯಾರ್ಥಿಗೆ ಅರ್ಥ ಮಾಡಿಸೋಕೆ ಚುಟುಕಾಗಿ ವಿವರಿಸಬಹುದು, ಉದಾಹರಣೆ ಕೊಡಬಹುದು ಅಥವಾ ಪ್ರಶ್ನೆ ಕೇಳಬಹುದು. ಕೆಲವೊಮ್ಮೆ ನಿಮಗೆ ಸ್ಟಡಿಯಲ್ಲಿ ಏನೂ ಹೇಳೋಕೆ ಆಗದಿರಬಹುದು. ಬೇಜಾರು ಮಾಡ್ಕೊಬೇಡಿ. ವಿದ್ಯಾರ್ಥಿ ಬಗ್ಗೆ ಒಳ್ಳೇ ಮಾತುಗಳನ್ನ ಆಡಿ, ಹೊಗಳಿ, ಪ್ರೋತ್ಸಾಹಿಸಿ. ಇದ್ರಿಂದ ಅವರು ಪ್ರಗತಿ ಮಾಡೋಕೆ ಸಹಾಯ ಆಗುತ್ತೆ.
10. ನಿಮ್ಮ ಅನುಭವದಿಂದ ಬೈಬಲ್ ವಿದ್ಯಾರ್ಥಿಗೆ ಹೇಗೆ ಸಹಾಯ ಆಗಬಹುದು?
10 ನಿಮ್ಮ ಅನುಭವ ಹಂಚಿಕೊಳ್ಳಿ. ವಿದ್ಯಾರ್ಥಿಗೆ ಪ್ರಯೋಜನ ಆಗುತ್ತೆ ಅನಿಸೋದಾದ್ರೆ ನೀವು ಹೇಗೆ ಸತ್ಯಕ್ಕೆ ಬಂದ್ರಿ, ಯಾವ ಸವಾಲನ್ನ ಜಯಿಸಿದ್ರೆ ಅಥ್ವಾ ಯೆಹೋವ ನಿಮಗೆ ಹೇಗೆ ಸಹಾಯ ಮಾಡಿದ್ದಾನೆ ಅನ್ನೋದನ್ನ ಚುಟುಕಾಗಿ ಹೇಳಿ. (ಕೀರ್ತ. 78:4, 7) ಯಾಕಂದ್ರೆ ನಿಮ್ಮ ಅನುಭವದಿಂದ ವಿದ್ಯಾರ್ಥಿಯ ನಂಬಿಕೆ ಬಲ ಆಗಬಹುದು ಅಥ್ವಾ ದೀಕ್ಷಾಸ್ನಾನ ತಗೊಳ್ಳುವಷ್ಟು ಪ್ರಗತಿ ಮಾಡೋಕೆ ಉತ್ತೇಜನನೂ ಸಿಗಬಹುದು. ಅವನಿಗೆ ಎದುರಾಗಿರೋ ಸವಾಲನ್ನು ಜಯಿಸೋಕೂ ನಿಮ್ಮ ಅನುಭವ ಸಹಾಯ ಮಾಡಬಹುದು. (1 ಪೇತ್ರ 5:9) ಬ್ರೆಜಿ಼ಲ್‌ನಲ್ಲಿರೋ ಗ್ಯಾಬ್ರಿಯೇಲ್ ಅನ್ನೋ ಪಯನೀಯರ್ ಸಹೋದರನ ಉದಾಹರಣೆ ನೋಡಿ. ಅವರು ಸತ್ಯ ಕಲಿಯುವಾಗ ಬೇರೆಯವರ ಅನುಭವದಿಂದ ತುಂಬ ಪ್ರಯೋಜನ ಪಡಕೊಂಡ್ರು. ಅದರ ಬಗ್ಗೆ ಹೀಗೆ ಹೇಳ್ತಾರೆ: “ಬೇರೆ ಸಹೋದರರ ಅನುಭವಗಳನ್ನ ಕೇಳಿಸಿಕೊಂಡಾಗ, ನಮಗೆ ಎದುರಾಗೋ ಸವಾಲುಗಳು ಯೆಹೋವ ದೇವ್ರಿಗೆ ಗೊತ್ತಾಗುತ್ತೆ ಅಂತ ನಾನು ತಿಳುಕೊಂಡೆ. ಅವ್ರೆಲ್ಲಾ ಆ ಸವಾಲುಗಳನ್ನ ಜಯಿಸಿದ್ದಾರೆ ಅಂದಮೇಲೆ ನನಗೂ ಜಯಿಸೋಕೆ ಆಗುತ್ತೆ ಅಂತ ಧೈರ್ಯ ಬಂತು.”
ಬೈಬಲ್ ವಿದ್ಯಾರ್ಥಿ ಕೂಟಗಳಿಗೆ ಬರೋಕೆ ಶುರುಮಾಡಿದ್ರೆ . . .
11-12. ವಿದ್ಯಾರ್ಥಿಗಳು ಕೂಟಕ್ಕೆ ಬಂದಾಗ ನಾವು ಯಾಕೆ ಅವರನ್ನ ಪ್ರೀತಿಯಿಂದ ಮಾತಾಡಿಸಬೇಕು?
11 ಒಬ್ಬ ಬೈಬಲ್ ವಿದ್ಯಾರ್ಥಿ ದೀಕ್ಷಾಸ್ನಾನ ತಗೊಳ್ಳುವಷ್ಟು ಪ್ರಗತಿ ಮಾಡಬೇಕಂದ್ರೆ ಅವನು ತಪ್ಪದೇ ಕೂಟಗಳಿಗೆ ಬರಬೇಕು ಮತ್ತು ಅವುಗಳಿಂದ ಪ್ರಯೋಜನ ಪಡ್ಕೊಬೇಕು. (ಇಬ್ರಿ. 10:24, 25) ಮೊದಲನೇ ಸಲ ಬೈಬಲ್ ವಿದ್ಯಾರ್ಥಿಯನ್ನ ಅವನಿಗೆ ಸ್ಟಡಿ ಮಾಡುತ್ತಿರುವವರೇ ಕರೆಯೋದಾದ್ರೂ ಸಭೆಯಲ್ಲಿರೋ ನಾವೆಲ್ರೂ ಅವನು ತಪ್ಪದೇ ಕೂಟಗಳಿಗೆ ಹಾಜರಾಗೋಕೆ ಉತ್ತೇಜನ ಕೊಡಬಹುದು. ಇದನ್ನ ಹೇಗೆಲ್ಲಾ ಮಾಡಬಹುದು ಅಂತ ಈಗ ನೋಡೋಣ.
12 ವಿದ್ಯಾರ್ಥಿಯನ್ನ ಪ್ರೀತಿಯಿಂದ ಮಾತಾಡಿಸಿ. (ರೋಮ. 15:7) ಹೊಸದಾಗಿ ಬಂದ ವಿದ್ಯಾರ್ಥಿಯನ್ನ ನಾವು ಹೋಗಿ ಮಾತಾಡಿಸಿದ್ರೆ ಅವನು ತಪ್ಪದೇ ಕೂಟಗಳಿಗೆ ಹಾಜರಾಗೋಕೆ ಮನಸ್ಸು ಮಾಡಬಹುದು. ಅವನನ್ನ ಪ್ರೀತಿಯಿಂದ ವಂದಿಸಬೇಕು. ಬೇರೆಯವ್ರಿಗೆ ಪರಿಚಯ ಮಾಡಿಸಬೇಕು. ಆದ್ರೆ ಅವನಿಗೆ ಮುಜುಗರ ಆಗದಿರೋ ತರ ನೋಡಿಕೊಳ್ಳಿ. ‘ಅವನಿಗೆ ಬೈಬಲ್ ಸ್ಟಡಿ ಮಾಡುವವರು ನೋಡಿಕೊಳ್ತಾರೆ’ ಅಂತ ಅಂದುಕೊಳ್ಳಬೇಡಿ. ಯಾಕಂದ್ರೆ ಅವನ ಟೀಚರ್ ತಡವಾಗಿ ಬರಬಹುದು ಅಥ್ವಾ ಅವ್ರಿಗೆ ಸಭಾಗೃಹದಲ್ಲಿ ಬೇರೆ ಜವಾಬ್ದಾರಿ ಇರಬಹುದು. ವಿದ್ಯಾರ್ಥಿ ಮಾತಾಡುವಾಗ ಗಮನಕೊಟ್ಟು ಕೇಳಿಸಿಕೊಳ್ಳಿ. ಅವ್ರ ಬಗ್ಗೆ ಕಾಳಜಿ ವಹಿಸಿ. ನೀವು ಈ ರೀತಿ ಪ್ರೀತಿಯಿಂದ ನಡಕೊಂಡ್ರೆ ವಿದ್ಯಾರ್ಥಿಗೆ ಏನು ಪ್ರಯೋಜನ ಆಗುತ್ತೆ? ಕೆಲವು ವರ್ಷಗಳ ಹಿಂದಷ್ಟೇ ದೀಕ್ಷಾಸ್ನಾನ ತಗೊಂಡು ಈಗ ಸಹಾಯಕ ಸೇವಕನಾಗಿ ಸೇವೆ ಮಾಡುತ್ತಿರೋ ಸಹೋದರ ಡಿಮಿಟ್ರೀ ಅನುಭವ ನೋಡಿ. ಅವ್ರು ಮೊದಲನೇ ಸಲ ಕೂಟಕ್ಕೆ ಹೋಗಿದ್ದನ್ನ ನೆನಪಿಸಿಕೊಳ್ತಾ ಹೀಗೆ ಹೇಳ್ತಾರೆ: “ನಾನು ರಾಜ್ಯ ಸಭಾಗೃಹದ ಹೊರಗೆ ಸುಮ್ಮನೆ ನಿಂತಿದ್ದೆ. ಒಬ್ಬ ಸಹೋದರ ನನ್ನನ್ನು ನೋಡಿ ಒಳಗೆ ಕರಕೊಂಡು ಹೋದ್ರು. ತುಂಬ ಜನ ಬಂದು ನನ್ನ ಹತ್ರ ಮಾತಾಡಿದ್ರು. ತುಂಬ ಆಶ್ಚರ್ಯ ಆಯ್ತು. ನನಗೆ ಎಷ್ಟು ಇಷ್ಟ ಆಯ್ತು ಅಂದ್ರೆ ‘ಈ ತರ ಕೂಟಗಳು ದಿನಾ ಇರಬಾರದಾ?’ ಅಂತ ಅನಿಸ್ತು. ಇಂಥ ಅನುಭವ ನನಗೆ ಹಿಂದೆ ಯಾವತ್ತೂ ಆಗಿರಲಿಲ್ಲ.”
13. ನೀವು ಒಳ್ಳೇ ರೀತಿ ನಡಕೊಂಡ್ರೆ ವಿದ್ಯಾರ್ಥಿಗಳಿಗೆ ಯಾವುದರ ಮೇಲೆ ನಂಬಿಕೆ ಬರುತ್ತೆ?
13 ಒಳ್ಳೇ ಮಾದರಿಯಾಗಿರಿ. ನೀವು ಒಳ್ಳೇ ರೀತಿ ನಡಕೊಂಡ್ರೆ ಬೈಬಲ್ ವಿದ್ಯಾರ್ಥಿಗಳು ನೀವು ನಿಜ ಕ್ರೈಸ್ತರು ಅಂತ ಗುರುತಿಸ್ತಾರೆ. (ಮತ್ತಾ. 5:16) ಮಾಲ್ಡೋವದಲ್ಲಿ ಪಯನೀಯರ್ ಆಗಿ ಸೇವೆ ಮಾಡುತ್ತಿರೋ ವಿಟಾಲಿ ಏನು ಹೇಳ್ತಾರೆ ಗಮನಿಸಿ: “ನಾನು ಸಭೆಯಲ್ಲಿರುವವ್ರ ಜೀವನ ಹೇಗಿದೆ, ಅವರ ಯೋಚನೆ ಏನು, ಅವರು ಹೇಗೆ ನಡಕೊಳ್ತಾರೆ ಅನ್ನೋದನ್ನೆಲ್ಲಾ ಗಮನಿಸಿದೆ. ಆಗ ಯೆಹೋವನ ಸಾಕ್ಷಿಗಳೇ ಸತ್ಯ ಧರ್ಮದವರು ಅಂತ ಪೂರ್ತಿ ನಂಬೋಕೆ ಆಯ್ತು.”
14. ನಿಮ್ಮನ್ನು ನೋಡಿ ಬೈಬಲ್ ವಿದ್ಯಾರ್ಥಿ ಪ್ರಗತಿ ಮಾಡೋಕೆ ಸಾಧ್ಯನಾ? ವಿವರಿಸಿ.
14 ಒಬ್ಬ ವಿದ್ಯಾರ್ಥಿ ದೀಕ್ಷಾಸ್ನಾನ ಪಡ್ಕೊಬೇಕಂದ್ರೆ ಕಲಿತದ್ದನ್ನು ತನ್ನ ಜೀವನದಲ್ಲಿ ಅನ್ವಯಿಸಬೇಕು. ಇದನ್ನ ಮಾಡೋಕೆ ಅವನಿಗೆ ಕೆಲವೊಮ್ಮೆ ಕಷ್ಟ ಆಗಬಹುದು. ಆದ್ರೆ ಬೈಬಲ್ ತತ್ವವನ್ನ ಅನ್ವಯಿಸಿ ನೀವು ಪ್ರಯೋಜನ ಪಡಕೊಳ್ಳೋದನ್ನ ಗಮನಿಸಿದಾಗ ಎಷ್ಟೇ ಕಷ್ಟ ಆದ್ರೂ ಬೈಬಲ್ ತತ್ವಗಳನ್ನ ಅನ್ವಯಿಸೋಕೆ ಅವನಿಗೆ ಉತ್ತೇಜನ ಸಿಗುತ್ತೆ. (1 ಕೊರಿಂ. 11:1) ಈ ಹಿಂದೆ ತಿಳಿಸಿದ ಸಹೋದರಿ ಹ್ಯಾನಿ ಅನುಭವ ನೋಡಿ. ಅವಳು ಹೇಳೋದು: “ಬೈಬಲಿಂದ ನಾನು ಏನು ಕಲಿತಾ ಇದ್ದೆನೋ ಸಭೆಯಲ್ಲಿರುವವರು ಅದನ್ನೇ ಮಾಡ್ತಿದ್ರು. ಹೇಗೆ ಪ್ರೋತ್ಸಾಹಿಸಬೇಕು, ಕ್ಷಮಿಸಬೇಕು, ಪ್ರೀತಿಸಬೇಕು ಅನ್ನೋದನ್ನ ಅವರನ್ನ ನೋಡಿ ನಾನು ಕಲಿತೆ. ಅವರು ಯಾವಾಗಲೂ ಬೇರೆಯವ್ರ ಬಗ್ಗೆ ಒಳ್ಳೇದನ್ನೇ ಹೇಳ್ತಿದ್ರು. ಅವರನ್ನು ನೋಡಿದಾಗ ನಾನೂ ಅವರ ತರ ಇರಬೇಕು ಅಂತ ಅನಿಸ್ತು.”
15. ಜ್ಞಾನೋಕ್ತಿ 27:17 ರ ಪ್ರಕಾರ ವಿದ್ಯಾರ್ಥಿಯ ಜೊತೆ ಸ್ನೇಹ ಬೆಳೆಸಿಕೊಳ್ಳೋದು ಯಾಕೆ ಮುಖ್ಯ?
15 ವಿದ್ಯಾರ್ಥಿ ಜೊತೆ ಸ್ನೇಹ ಬೆಳೆಸಿಕೊಳ್ಳಿ. ವಿದ್ಯಾರ್ಥಿ ಕೂಟಗಳಿಗೆ ಬರೋದನ್ನು ಮುಂದುವರಿಸುವಾಗ ಅವರ ಬಗ್ಗೆ ಹೆಚ್ಚು ತಿಳುಕೊಳ್ಳೋಕೆ ಪ್ರಯತ್ನಿಸಿ. (ಫಿಲಿ. 2:4) ಅವರ ಜೊತೆ ಮಾತಾಡುವಾಗ ತೀರ ಖಾಸಗಿ ವಿಷಯಗಳನ್ನ ಕೇಳೋಕೆ ಹೋಗಬೇಡಿ. ಅವರು ಈಗಾಗಲೇ ಏನಾದ್ರೂ ಬದಲಾವಣೆ ಮಾಡಿಕೊಂಡಿದ್ರೆ ಅದರ ಬಗ್ಗೆ ಮಾತಾಡಿ, ಅವರನ್ನ ಹೊಗಳಿ. ಅವರ ಸ್ಟಡಿ ಹೇಗೆ ನಡೆಯುತ್ತಾ ಇದೆ ಅಂತ ಕೇಳಿ. ಕುಟುಂಬದ ಬಗ್ಗೆ, ಕೆಲಸದ ಬಗ್ಗೆ ವಿಚಾರಿಸಿ. ಇಂಥ ಮಾತುಕಥೆಯಿಂದ ನಿಮ್ಮಿಬ್ಬರ ಮಧ್ಯ ಸ್ನೇಹ ಬೆಳೆಯುತ್ತೆ. ಆಗ ಆ ವಿದ್ಯಾರ್ಥಿ ದೀಕ್ಷಾಸ್ನಾನ ತಗೊಳ್ಳುವಷ್ಟು ಪ್ರಗತಿ ಮಾಡೋಕೆ ನಿಮ್ಮಿಂದ ಸಹಾಯ ಮಾಡೋಕಾಗುತ್ತೆ. (ಜ್ಞಾನೋಕ್ತಿ 27:17 ಓದಿ.) ಕೂಟಕ್ಕೆ ಹೋಗೋಕೆ ಶುರು ಮಾಡಿದಾಗ ಆದ ಅನುಭವದ ಬಗ್ಗೆ ಹ್ಯಾನಿ ವಿವರಿಸುತ್ತಾ ಹೀಗೆ ಹೇಳ್ತಾಳೆ: “ಸಭೆಯಲ್ಲಿ ತುಂಬ ಜನ ಫ್ರೆಂಡ್ಸ್ ಆದ್ರು. ‘ಯಾವಾಗ ನಾನು ಕೂಟಕ್ಕೆ ಹೋಗ್ತಿನೋ? ಅವರನ್ನೆಲ್ಲಾ ನೋಡ್ತೀನೋ?’ ಅಂತ ಕಾಯ್ತಾ ಇರುತ್ತಿದ್ದೆ. ಸುಸ್ತಾದರೂ ಕೂಟಗಳಿಗೆ ಹೋಗ್ತಿದ್ದೆ. ನನಗೆ ನನ್ನ ಹೊಸ ಸ್ನೇಹಿತರ ಜೊತೆ ಇರೋಕೆ ಇಷ್ಟ ಆಗ್ತಿತ್ತು. ಯಾರು ಯೆಹೋವನ ಆರಾಧನೆ ಮಾಡುತ್ತಿರಲಿಲ್ಲವೋ ಅಂಥವರ ಸ್ನೇಹ ಬಿಟ್ಟುಬಿಡೋಕೆ ಇದು ಸಹಾಯ ಮಾಡ್ತು. ನಾನು ಯೆಹೋವ ದೇವರಿಗೆ, ಸಹೋದರ ಸಹೋದರಿಯರಿಗೆ ಇನ್ನೂ ಆಪ್ತಳಾಗಬೇಕು ಅಂತ ಆಸೆಪಟ್ಟೆ. ಕೊನೆಗೆ ದೀಕ್ಷಾಸ್ನಾನ ತಗೊಳ್ಳೋಕೆ ನಿರ್ಧಾರ ಮಾಡಿದೆ.” ಈಗ ಹ್ಯಾನಿ ರೆಗ್ಯುಲರ್ ಪಯನೀಯರ್ ಆಗಿ ಸೇವೆ ಮಾಡ್ತಿದ್ದಾಳೆ!
16. ಬೈಬಲ್ ವಿದ್ಯಾರ್ಥಿಗೆ ತಾನೂ ಸಭೆಯ ಭಾಗವಾಗಿದ್ದೇನೆ ಅನ್ನೋ ಅನಿಸಿಕೆ ಬರಬೇಕಂದ್ರೆ ನಾವು ಇನ್ನೂ ಏನು ಮಾಡಬೇಕು?
16 ವಿದ್ಯಾರ್ಥಿ ಪ್ರಗತಿ ಮಾಡುತ್ತಾ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾ ಹೋದಂತೆ ಪ್ರೀತಿಯಿಂದ ಅವರಿಗೆ ಅತಿಥಿ ಸತ್ಕಾರ ಮಾಡಿ. (ಇಬ್ರಿ. 13:2) ಆಗ ಅವರಿಗೂ ‘ನಾನೂ ಸಭೆಯ ಭಾಗ’ ಅಂತ ಅನಿಸುತ್ತೆ. ಮಾಲ್ಡೋವದಲ್ಲಿ ಸೇವೆ ಮಾಡ್ತಿರೋ ಡೆನಿಸ್ ಅನ್ನೋ ಸಹೋದರ ಸತ್ಯ ಕಲಿಯುತ್ತಿದ್ದ ದಿನಗಳನ್ನ ನೆನಪಿಸಿಕೊಂಡು ಹೀಗೆ ಹೇಳ್ತಾರೆ: “ನನ್ನನ್ನು, ನನ್ನ ಹೆಂಡ್ತಿಯನ್ನು ಸಹೋದರ ಸಹೋದರಿಯರು ತುಂಬ ಸಲ ಅವ್ರ ಮನೆಗೆ ಕರೆಯುತ್ತಿದ್ರು. ಯೆಹೋವ ಅವ್ರಿಗೆ ಹೇಗೆ ಸಹಾಯ ಮಾಡಿದ್ದಾನೆ ಅಂತ ತಮ್ಮ ಅನುಭವ ಹೇಳುತ್ತಿದ್ರು. ಇದ್ರಿಂದ ನಮಗೆ ತುಂಬ ಪ್ರೋತ್ಸಾಹ ಸಿಗ್ತಿತ್ತು. ಅಷ್ಟೇ ಅಲ್ಲ, ಯೆಹೋವ ದೇವರನ್ನೇ ಆರಾಧನೆ ಮಾಡಬೇಕು ಅಂತ ತೀರ್ಮಾನ ಮಾಡೋಕೆ ಸಹಾಯ ಆಯ್ತು. ಯೆಹೋವನ ಆರಾಧನೆ ಮಾಡಿದ್ರೆ ಜೀವನ ಚೆನ್ನಾಗಿರುತ್ತೆ ಅಂತ ಪೂರ್ತಿ ನಂಬಿಕೆನೂ ಬಂತು.” ವಿದ್ಯಾರ್ಥಿ ಪ್ರಗತಿ ಮಾಡಿ ಪ್ರಚಾರಕನಾದ್ರೆ ಅವನನ್ನು ನಿಮ್ಮ ಜೊತೆ ಸೇವೆಗೆ ಕರಕೊಂಡು ಹೋಗಿ. ಬ್ರೆಜಿ಼ಲ್‌ನಲ್ಲಿರೋ ಡಿಯಾಗೋ ಹೀಗೆ ಹೇಳ್ತಾರೆ: “ತುಂಬ ಸಹೋದರರು ನನ್ನನ್ನು ಸೇವೆಗೆ ಕರಕೊಂಡು ಹೋಗ್ತಿದ್ರು. ಆಗ ಅವರ ಬಗ್ಗೆ ನನಗೆ ಇನ್ನೂ ಚೆನ್ನಾಗಿ ತಿಳುಕೊಳ್ಳೋಕೆ ಆಗ್ತಿತ್ತು. ತುಂಬ ವಿಷಯಗಳನ್ನೂ ಕಲಿತೆ. ಯೆಹೋವ ಮತ್ತು ಯೇಸು ಜೊತೆ ಇನ್ನೂ ಆಪ್ತ ಸಂಬಂಧ ಬೆಳೆಸಿಕೊಳ್ಳೋಕೂ ಸಾಧ್ಯವಾಯ್ತು.”
ಹಿರಿಯರು ಹೇಗೆ ಸಹಾಯ ಮಾಡಬಹುದು?
17. ಬೈಬಲ್ ವಿದ್ಯಾರ್ಥಿಗಳಿಗೆ ಹಿರಿಯರು ಹೇಗೆ ಸಹಾಯ ಮಾಡಬಹುದು?
17 ಬೈಬಲ್ ವಿದ್ಯಾರ್ಥಿಗಳಿಗೆ ಸಮಯ ಕೊಡಿ. ಹಿರಿಯರೇ, ನೀವು ಪ್ರೀತಿ, ಕಾಳಜಿ ತೋರಿಸುವುದಾದ್ರೆ ಬೈಬಲ್ ವಿದ್ಯಾರ್ಥಿಗಳಿಗೆ
ಪ್ರಗತಿ ಮಾಡೋಕೆ ಸಹಾಯ ಆಗುತ್ತೆ. ವಿದ್ಯಾರ್ಥಿಗಳು ಕೂಟಕ್ಕೆ ಬಂದಾಗ ಅವರ ಹತ್ರ ತಪ್ಪದೇ ಮಾತಾಡ್ತೀರಾ? ನೀವು ಅವರ ಹೆಸರನ್ನ ನೆನಪಿಟ್ಟುಕೊಂಡ್ರೆ ನಿಮಗೆ ಅವರ ಮೇಲೆ ಎಷ್ಟು ಕಾಳಜಿ ಇದೆ ಅಂತ ಅವ್ರಿಗೆ ಅರ್ಥ ಆಗುತ್ತೆ. ಅವರು ಉತ್ತರ ಕೊಡೋಕೆ ಪ್ರಯತ್ನಿಸುವಾಗ ಅವರ ಹೆಸರು ಹೇಳಿ ಕರೆದರಂತೂ ತುಂಬ ಖುಷಿ ಆಗುತ್ತೆ. ಪ್ರಚಾರಕರ ಜೊತೆ ಅವರ ಸ್ಟಡಿಗೆ ಆಗಾಗ ಹೋಗೋಕೆ ನೀವು ಸಮಯ ಮಾಡಿಕೊಳ್ಳೋಕೆ ಆಗುತ್ತಾ? ಇದ್ರಿಂದ ಆ ವಿದ್ಯಾರ್ಥಿಗೆ ತುಂಬ ಸಹಾಯ ಆಗಬಹುದು. ನೈಜೀರಿಯದಲ್ಲಿರೋ ಜ್ಯಾಕಿ ಅನ್ನೋ ಪಯನೀಯರ್ ಸಹೋದರ ಹೀಗೆ ಹೇಳ್ತಾರೆ: “ನನ್ನ ಜೊತೆ ಬೈಬಲ್ ಸ್ಟಡಿಗೆ ನಮ್ಮ ಸಭೆಯ ಹಿರಿಯರು ಬಂದಿದ್ದಾರೆ ಅಂತ ಹೇಳಿದಾಗ ತುಂಬ ವಿದ್ಯಾರ್ಥಿಗಳು ಆಶ್ಚರ್ಯ ಪಡ್ತಾರೆ. ಒಬ್ಬ ಬೈಬಲ್ ವಿದ್ಯಾರ್ಥಿ ‘ನಮ್ಮ ಮನೆಗೆ ನಮ್ಮ ಪಾಸ್ಟರ್ ಬರೋದೇ ಇಲ್ಲ. ಅವರು ಬರೀ ಶ್ರೀಮಂತರ ಮನೆಗೆ, ದುಡ್ಡು ಕೊಡುವವರ ಮನೆಗೇ ಹೋಗೋದು’ ಅಂತ ಹೇಳಿದನು.” ಈಗ ಆ ವಿದ್ಯಾರ್ಥಿ ಕೂಟಗಳಿಗೆ ಬರುತ್ತಿದ್ದಾನೆ.18. ಅಪೊಸ್ತಲರ ಕಾರ್ಯ 20:28 ರಲ್ಲಿ ಕೊಟ್ಟಿರೋ ಜವಾಬ್ದಾರಿಯನ್ನು ಹಿರಿಯರು ಹೇಗೆ ನಿಭಾಯಿಸಬೇಕು?
18 ಬೈಬಲ್ ಕಲಿಸುವವ್ರಿಗೆ ತರಬೇತಿ ಕೊಡಿ, ಅವ್ರನ್ನು ಪ್ರೋತ್ಸಾಹಿಸಿ. ಹಿರಿಯರೇ, ಪ್ರಚಾರಕರು ಚೆನ್ನಾಗಿ ಸಿಹಿಸುದ್ದಿ ಸಾರೋಕೆ, ಬೈಬಲ್ ಸ್ಟಡಿ ಮಾಡೋಕೆ ನೀವು ಸಹಾಯ ಮಾಡಬೇಕು. ಆ ದೊಡ್ಡ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. (ಅಪೊಸ್ತಲರ ಕಾರ್ಯ 20:28 ಓದಿ.) ಒಂದುವೇಳೆ ಒಬ್ಬರ ಸ್ಟಡಿಗೆ ನೀವು ಹೋದಾಗ ನಿಮ್ಮ ಮುಂದೆ ಸ್ಟಡಿ ಮಾಡೋಕೆ ಅವರು ನಾಚಿಕೊಂಡ್ರೆ ನೀವೇ ಸ್ಟಡಿ ಮಾಡಿ. ಸಹೋದರ ಜ್ಯಾಕಿ ಹೀಗೆ ಹೇಳ್ತಾರೆ: “ಹಿರಿಯರು ನನ್ನ ಬೈಬಲ್ ವಿದ್ಯಾರ್ಥಿಗಳ ಬಗ್ಗೆ ಆಗಾಗ ವಿಚಾರಿಸ್ತಾ ಇರುತ್ತಾರೆ. ಸ್ಟಡಿ ಮಾಡೋಕೆ ನನಗೆ ಕಷ್ಟವಾದ್ರೆ ಒಳ್ಳೇ ಸಲಹೆಗಳನ್ನ ಕೊಡ್ತಾರೆ.” ಬೈಬಲ್ ಸ್ಟಡಿ ಮಾಡುವವ್ರಿಗೆ ಹಿರಿಯರು ಉತ್ತೇಜನ ಕೊಡ್ತಾ ಇರಬೇಕು. ಅವರನ್ನು ಹೊಗಳುತ್ತಾ ಇರಬೇಕು. ಆಗ ಪ್ರಚಾರಕರು ಸೇವೆಯನ್ನ ಸಂತೋಷದಿಂದ ಮಾಡೋಕೆ ಸಹಾಯ ಆಗುತ್ತೆ. (1 ಥೆಸ. 5:11) ಜ್ಯಾಕಿ ಹೀಗೆ ಹೇಳ್ತಾರೆ: “ಹಿರಿಯರು ನನಗೆ ಪ್ರೋತ್ಸಾಹ ಕೊಟ್ಟಾಗ, ನಾನು ಮಾಡೋ ಸೇವೆ ಬಗ್ಗೆ ಮೆಚ್ಚಿಕೊಂಡಾಗ ತುಂಬ ಖುಷಿ ಆಗುತ್ತೆ. ಅವರ ಮಾತುಗಳು ಸುಡೋ ಬಿಸಿಲಲ್ಲಿ ದಣಿದಿದ್ದಾಗ ತಂಪಾದ ನೀರು ಸಿಕ್ಕಿದ ತರ ಇರುತ್ತೆ. ಅವರು ಆಡೋ ಒಳ್ಳೇ ಮಾತುಗಳಿಂದ ನನಗೆ ಧೈರ್ಯ ಸಿಗುತ್ತೆ, ನಾನು ಚೆನ್ನಾಗಿ ಬೈಬಲ್ ಸ್ಟಡಿ ಮಾಡ್ತಾ ಇದ್ದೀನಿ ಅಂತ ಸಂತೋಷ ಆಗುತ್ತೆ.”—ಜ್ಞಾನೋ. 25:25.
19. ನಮ್ಮೆಲ್ಲರಿಗೂ ಯಾವುದರಿಂದ ಖುಷಿ ಸಿಗುತ್ತೆ?
19 ಸದ್ಯಕ್ಕೆ ನಾವು ಯಾರಿಗೂ ಸ್ಟಡಿ ಮಾಡದಿದ್ರೂ ಬೇರೆಯವರ ವಿದ್ಯಾರ್ಥಿಗಳು ದೀಕ್ಷಾಸ್ನಾನ ತಗೊಳ್ಳುವಷ್ಟು ಪ್ರಗತಿ ಮಾಡೋಕೆ ನಮ್ಮ ಕೈಲಿಂದ ಆಗೋ ಸಹಾಯ ಮಾಡಬಹುದು. ಬೇರೆಯವರು ನಮ್ಮನ್ನು ಸ್ಟಡಿಗೆ ಕರೆದಾಗ ಚೆನ್ನಾಗಿ ತಯಾರಿ ಮಾಡಿಕೊಂಡು ಹೋಗೋಣ. ಆದ್ರೆ ನಾವೇ ಹೆಚ್ಚು ಮಾತಾಡೋದು ಬೇಡ. ವಿದ್ಯಾರ್ಥಿಗಳು ಕೂಟಗಳಿಗೆ ಬರೋಕೆ ಶುರು ಮಾಡಿದಾಗ ಅವರ ಸ್ನೇಹ ಬೆಳೆಸಿಕೊಳ್ಳೋಣ ಮತ್ತು ಅವ್ರಿಗೆ ಒಳ್ಳೇ ಮಾದರಿ ಆಗಿರೋಣ. ಹಿರಿಯರು ವಿದ್ಯಾರ್ಥಿಗಳಿಗೆ ಮತ್ತು ಬೈಬಲ್ ಕಲಿಸುವವ್ರಿಗೆ ಉತ್ತೇಜನ ಕೊಡಬೇಕು. ಹೇಗಂದ್ರೆ ವಿದ್ಯಾರ್ಥಿಗಳಿಗೋಸ್ಕರ ಸಮಯ ಮಾಡಿಕೊಳ್ಳಬೇಕು ಮತ್ತು ಬೈಬಲ್ ಕಲಿಸುವವ್ರಿಗೆ ತರಬೇತಿ ಕೊಡಬೇಕು, ಅವ್ರ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಆಡಬೇಕು. ಒಬ್ಬ ವ್ಯಕ್ತಿ ಯೆಹೋವನನ್ನು ಪ್ರೀತಿಸಿ, ಆತನನ್ನು ಆರಾಧಿಸೋಕೆ ನಾವು ಒಂದು ಚಿಕ್ಕ ಸಹಾಯ ಮಾಡಿದ್ರೂ ಅದ್ರಿಂದ ನಮಗೆ ತುಂಬ ಖುಷಿ ಸಿಗುತ್ತೆ. ಅದ್ರಲ್ಲಿ ಸಂಶಯನೇ ಬೇಡ.
ಗೀತೆ 139 ದೃಢವಾಗಿ ನಿಲ್ಲಲು ಅವರಿಗೆ ಕಲಿಸಿ
^ ಪ್ಯಾರ. 5 ಸದ್ಯಕ್ಕೆ ನಮ್ಮಲ್ಲಿ ಪ್ರತಿಯೊಬ್ಬರಿಗೂ ಬೈಬಲ್ ಸ್ಟಡಿ ಇಲ್ಲದಿರಬಹುದು. ಆದ್ರೆ ಬೇರೆಯವರ ಬೈಬಲ್ ವಿದ್ಯಾರ್ಥಿ ದೀಕ್ಷಾಸ್ನಾನ ತಗೊಳ್ಳುವಷ್ಟು ಪ್ರಗತಿ ಮಾಡಲು ನಾವೆಲ್ಲರೂ ಸಹಾಯ ಮಾಡಬಹುದು. ವಿದ್ಯಾರ್ಥಿ ಆ ಗುರಿ ಮುಟ್ಟಲು ನಮ್ಮಲ್ಲಿ ಪ್ರತಿಯೊಬ್ಬರೂ ಹೇಗೆ ಸಹಾಯ ಮಾಡಬಹುದು ಅಂತ ಈ ಲೇಖನದಲ್ಲಿ ನೋಡೋಣ.