ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 11

ದೀಕ್ಷಾಸ್ನಾನ ತಗೊಳ್ಳೋಕೆ ನೀವು ರೆಡಿನಾ?

ದೀಕ್ಷಾಸ್ನಾನ ತಗೊಳ್ಳೋಕೆ ನೀವು ರೆಡಿನಾ?

“ನಾನ್ಯಾಕೆ ದೀಕ್ಷಾಸ್ನಾನ ತಗೊಳ್ಳಬಾರದು?”​—ಅ. ಕಾ. 8:36.

ಗೀತೆ 58 ಸಮರ್ಪಣೆಯ ಬಗ್ಗೆ ನನ್ನ ಪ್ರಾರ್ಥನೆ

ಈ ಲೇಖನದಲ್ಲಿ ಏನಿದೆ? a

ಬೇರೆಬೇರೆ ಜಾಗದಲ್ಲಿರೋ, ಬೇರೆಬೇರೆ ವಯಸ್ಸಿನವರು ದೀಕ್ಷಾಸ್ನಾನ ತಗೊಳ್ತಿದ್ದಾರೆ (ಪ್ಯಾರ 1-2 ನೋಡಿ)

1-2. ನಿಮಗೆ ಈಗ ದೀಕ್ಷಾಸ್ನಾನ ತಗೊಳ್ಳೋಕೆ ಆಗ್ತಿಲ್ಲ ಅಂದ್ರೆ ಯಾಕೆ ಬೇಜಾರ್‌ ಮಾಡ್ಕೊಬಾರದು? (ಮುಖಪುಟ ಚಿತ್ರ ನೋಡಿ.)

 ನಿಮಗೆ ದೀಕ್ಷಾಸ್ನಾನ ತಗೊಳ್ಳೋಕೆ ಇಷ್ಟ ಇದ್ಯಾ? ನೀವದಕ್ಕೆ ರೆಡಿ ಇದ್ದೀರಾ? ದೀಕ್ಷಾಸ್ನಾನ ತಗೊಳ್ಳೋಕೆ ನೀವು ರೆಡಿ ಇದ್ದೀರ ಅಂತ ನಿಮಗೆ ಮತ್ತು ನಿಮ್ಮ ಹಿರಿಯರಿಗೆ ಅನಿಸಿದ್ರೆ ತಡ ಮಾಡಬೇಡಿ. ಆದಷ್ಟು ಬೇಗ ತಗೊಳ್ಳಿ. ಆಗ ಯೆಹೋವನ ಸೇವೆ ಮಾಡ್ತಾ ನೀವು ಖುಷಿ ಖುಷಿಯಾಗಿ ಇರ್ತೀರ.

2 ಆದ್ರೆ ದೀಕ್ಷಾಸ್ನಾನ ತಗೊಳ್ಳೋಕೆ ಕೆಲವು ಬದಲಾವಣೆಗಳನ್ನ ಮಾಡ್ಕೊಬೇಕು ಅಂತ ನಿಮಗೆ ಅನಿಸಿದ್ರೆ ಅಥವಾ ಯಾರಾದ್ರೂ ನಿಮಗೆ ಹೇಳಿದ್ರೆ ಬೇಜಾರು ಮಾಡ್ಕೊಬೇಡಿ. ಬದಲಾವಣೆ ಮಾಡ್ಕೊಳ್ಳೋಕೆ ಪ್ರಯತ್ನ ಮಾಡಿ. ನಿಮಗೆ ವಯಸ್ಸಾಗಿರಲಿ ಅಥವಾ ನೀವು ಯುವಕರಾಗಿರಲಿ ಬದಲಾವಣೆಗಳನ್ನ ಮಾಡ್ಕೊಂಡು ಖಂಡಿತ ನಿಮ್ಮಿಂದ ಗುರಿ ಮುಟ್ಟೋಕೆ ಆಗುತ್ತೆ.

“ನಾನ್ಯಾಕೆ ದೀಕ್ಷಾಸ್ನಾನ ತಗೊಳ್ಳಬಾರದು?”

3. (ಎ) ಇಥಿಯೋಪ್ಯದ ಅಧಿಕಾರಿ ಫಿಲಿಪ್ಪನಿಗೆ ಏನು ಕೇಳಿದ? (ಬಿ) ಇದ್ರಿಂದ ಯಾವ ಪ್ರಶ್ನೆ ನಮ್ಮ ಮನಸ್ಸಿಗೆ ಬರುತ್ತೆ? (ಅಪೊಸ್ತಲರ ಕಾರ್ಯ 8:36, 38)

3 ಅಪೊಸ್ತಲರ ಕಾರ್ಯ 8:36, 38 ಓದಿ. ಇಥಿಯೋಪ್ಯದ ಅಧಿಕಾರಿ ಫಿಲಿಪ್ಪನ ಹತ್ರ, “ನಾನ್ಯಾಕೆ ದೀಕ್ಷಾಸ್ನಾನ ತಗೊಳ್ಳಬಾರದು” ಅಂತ ಕೇಳಿದ. ಇದ್ರಿಂದ ಆ ವ್ಯಕ್ತಿಗೆ ದೀಕ್ಷಾಸ್ನಾನ ತಗೊಬೇಕು ಅನ್ನೋ ಆಸೆ ಇತ್ತು ಅಂತ ಗೊತ್ತಾಗುತ್ತೆ. ಆದ್ರೆ ಅವನು ಅದನ್ನ ತಗೊಳ್ಳೋಕೆ ಏನು ಮಾಡಬೇಕೋ ಅದನ್ನ ಮಾಡಿದ್ನಾ?

ಇಥಿಯೋಪ್ಯದ ಅಧಿಕಾರಿಗೆ ಯೆಹೋವನ ಬಗ್ಗೆ ಇನ್ನೂ ಜಾಸ್ತಿ ತಿಳ್ಕೊಬೇಕು ಅನ್ನೋ ಆಸೆ ಇತ್ತು (ಪ್ಯಾರ 4 ನೋಡಿ)

4. ಇಥಿಯೋಪ್ಯದ ವ್ಯಕ್ತಿಗೆ ಯೆಹೋವನ ಬಗ್ಗೆ ಜಾಸ್ತಿ ಕಲಿಯೋ ಆಸೆ ಇತ್ತು ಅಂತ ನಮಗೆ ಹೇಗೆ ಗೊತ್ತು?

4 ಈ ಇಥಿಯೋಪ್ಯದ ವ್ಯಕ್ತಿ “ಆರಾಧನೆ ಮಾಡೋಕೆ ಯೆರೂಸಲೇಮಿಗೆ ಹೋಗಿದ್ದ.” (ಅ. ಕಾ. 8:27) ಅವನು ಹುಟ್ತಾನೇ ಒಬ್ಬ ಯೆಹೂದಿ ಆಗಿರಲಿಲ್ಲ. ಬೈಬಲಿನ ಹೀಬ್ರು ಪುಸ್ತಕಗಳನ್ನ ಓದಿ ಅವನು ಯೆಹೋವನ ಬಗ್ಗೆ ತಿಳ್ಕೊಂಡ. ಆಮೇಲೆ ಒಬ್ಬ ಯೆಹೂದಿ ಆದ. ಆದ್ರೆ ಅವನು ಯೆಹೋವ ದೇವರ ಬಗ್ಗೆ ಅಲ್ಪಸ್ವಲ್ಪ ತಿಳ್ಕೊಂಡು ಸುಮ್ಮನಾಗಿಬಿಡಲಿಲ್ಲ. ಅದು ಹೇಗೆ ಗೊತ್ತಾಗುತ್ತೆ? ಫಿಲಿಪ್ಪ ಅವನನ್ನ ದಾರಿಯಲ್ಲಿ ನೋಡ್ದಾಗ ಅವನು ಯೆಶಾಯನ ಸುರುಳಿನ ಓದ್ತಾ ಇದ್ದ. ಅಂದ್ರೆ ದೇವರ ಬಗ್ಗೆ ಆಳವಾದ ವಿಷ್ಯಗಳನ್ನ ತಿಳ್ಕೊಳ್ಳೋಕೆ ಪ್ರಯತ್ನ ಮಾಡ್ತಿದ್ದ. (ಅ. ಕಾ. 8:28) ಇದ್ರಿಂದ ಅವನಿಗೆ ಯೆಹೋವನ ಬಗ್ಗೆ ಇನ್ನೂ ಜಾಸ್ತಿ ಕಲಿಯೋಕೆ ಆಸೆ ಇತ್ತು ಅಂತ ಗೊತ್ತಾಗುತ್ತೆ.

5. ಇಥಿಯೋಪ್ಯದ ಅಧಿಕಾರಿ ಕಲೀತಾ ಇದ್ದಿದ್ದಷ್ಟೇ ಅಲ್ಲ ಇನ್ನೂ ಏನು ಮಾಡಿದ?

5 ಇಥಿಯೋಪ್ಯದ ಅಧಿಕಾರಿ ರಾಣಿ ಕಂದಾಕೆಯ ಅರಮನೆಯಲ್ಲಿ ಕೆಲಸ ಮಾಡ್ತಿದ್ದ. ಅವನು “ಎಲ್ಲ ಹಣ ವ್ಯವಹಾರಗಳನ್ನ ನೋಡ್ಕೊಳ್ತಿದ್ದ.” (ಅ. ಕಾ. 8:27) ಇದು ಒಂದು ದೊಡ್ಡ ಜವಾಬ್ದಾರಿ. ಇಷ್ಟೆಲ್ಲ ಕೆಲಸ ಇದ್ರೂ ಯೆಹೋವನನ್ನ ಆರಾಧಿಸೋಕೆ ಅವನು ಸಮಯ ಮಾಡ್ಕೊಂಡ. ಇಥಿಯೋಪ್ಯದಿಂದ ಯೆರೂಸಲೇಮಿಗೆ ಆರಾಧನೆ ಮಾಡೋಕೆ ಹೋಗ್ತಿದ್ದ. ಅಲ್ಲಿ ಹೋಗಿ ಬರೋಕೆ ಅವನಿಗೆ ತುಂಬಾ ಖರ್ಚು ಆಗ್ತಿತ್ತು ಮತ್ತು ತುಂಬಾ ಸಮಯ ಹಿಡಿತಿತ್ತು. ಆದ್ರೂ ಅವನು ಹೋಗಿ ಬರ್ತಿದ್ದ. ಇದ್ರಿಂದ ನಮಗೇನು ಗೊತ್ತಾಗುತ್ತೆ? ಆ ವ್ಯಕ್ತಿ ಯೆಹೋವನ ಬಗ್ಗೆ ಕಲೀತಾ ಇದ್ದಿದ್ದಷ್ಟೇ ಅಲ್ಲ, ಕಲ್ತಿದ್ದನ್ನ ಪಾಲಿಸಿದ ಅಂತ ಗೊತ್ತಾಗುತ್ತೆ.

6-7. ಇಥಿಯೋಪ್ಯದ ವ್ಯಕ್ತಿಗೆ ಯೆಹೋವನ ಮೇಲಿದ್ದ ಪ್ರೀತಿ ಹೇಗೆ ಜಾಸ್ತಿ ಆಯ್ತು?

6 ಇಥಿಯೋಪ್ಯದ ಅಧಿಕಾರಿ ಫಿಲಿಪ್ಪನಿಂದ ಯೇಸುನೇ ಮೆಸ್ಸೀಯ ಅಂತ ತಿಳ್ಕೊಂಡ. (ಅ. ಕಾ. 8:34, 35) ಈ ತರ ಇನ್ನೂ ಹೊಸ ಹೊಸ ವಿಷ್ಯಗಳನ್ನ ಕಲಿತ್ಕೊಂಡ. ತನಗೋಸ್ಕರ ಯೇಸು ಏನೆಲ್ಲಾ ಮಾಡಿದ್ದಾನೆ ಅಂತ ತಿಳ್ಕೊಂಡಾಗ ಆ ಅಧಿಕಾರಿಗೆ ತುಂಬಾ ಖುಷಿಯಾಗಿರಬೇಕು. ಆಗ ಅವನಿಗೆ ಯೆಹೋವ ಮತ್ತು ಯೇಸು ಮೇಲೆ ಇನ್ನೂ ಪ್ರೀತಿ ಜಾಸ್ತಿ ಆಯ್ತು. ‘ಒಬ್ಬ ಯೆಹೂದಿಯಾಗಿ ನಾನು ಯೆಹೋವನನ್ನ ಆರಾಧನೆ ಮಾಡ್ತಿದ್ದೀನಿ ಅಷ್ಟೇ ಸಾಕು’ ಅಂತ ಅವನು ಅಂದ್ಕೊಳ್ಳಲಿಲ್ಲ. ಬದಲಿಗೆ ಯೇಸುವಿನ ಶಿಷ್ಯನಾಗಬೇಕು ಅಂತ ನಿರ್ಧಾರ ಮಾಡಿದ. ಅದಕ್ಕೆ ಫಿಲಿಪ್ಪ ಅವನಿಗೆ ದೀಕ್ಷಾಸ್ನಾನ ಮಾಡಿಸಿದ.

7 ಇಥಿಯೋಪ್ಯದ ವ್ಯಕ್ತಿ ದೇವರ ಬಗ್ಗೆ ಕಲೀತಾ ಇದ್ದ. ಕಲ್ತಿದ್ದನ್ನ ಪಾಲಿಸ್ತಾ ಇದ್ದ. ಅಷ್ಟೇ ಅಲ್ಲ, ಅವನು ದೇವರ ಮೇಲಿರೋ ಪ್ರೀತಿನ ಜಾಸ್ತಿ ಮಾಡ್ಕೊಳ್ತಾ ಇದ್ದ. ಇದ್ರಿಂದ ಅವನಿಗೆ ದೀಕ್ಷಾಸ್ನಾನ ತಗೊಳ್ಳೋಕೆ ಆಯ್ತು. ನೀವೂ ಈ ಮೂರು ವಿಷ್ಯಗಳನ್ನ ಮಾಡಿದ್ರೆ ಇಥಿಯೋಪ್ಯದ ವ್ಯಕ್ತಿ ತರಾನೇ “ನಾನ್ಯಾಕೆ ದೀಕ್ಷಾಸ್ನಾನ ತಗೊಳ್ಳಬಾರದು” ಅಂತ ನಿಮಗೇ ಅನಿಸುತ್ತೆ. ಹಾಗಾಗಿ ಈ ಮೂರು ವಿಷ್ಯಗಳನ್ನ ಹೇಗೆ ಮಾಡೋದು ಅಂತ ಈಗ ನೋಡೋಣ.

ಕಲೀತಾ ಇರಿ

8. ಯೋಹಾನ 17:3ರಲ್ಲಿ ಹೇಳಿರೋ ತರ ನಾವು ಏನು ಮಾಡ್ತಾ ಇರಬೇಕು?

8 ಯೋಹಾನ 17:3 ಓದಿ. ಇಲ್ಲಿ ಯೇಸು ಹೇಳಿರೋ ಮಾತನ್ನ ಕೇಳಿಸ್ಕೊಂಡಾಗ ನಿಮಗೂ ಬೈಬಲ್‌ ಕಲಿಯೋ ಆಸೆ ಬಂತಾ? ತುಂಬಾ ಜನ್ರಿಗೆ ಹಾಗೇ ಅನಿಸಿದೆ. “ಒಬ್ಬನೇ ಸತ್ಯ ದೇವರಾಗಿರೋ” ಯೆಹೋವ ದೇವರ ಬಗ್ಗೆ ನಾವು ಯಾವಾಗ್ಲೂ ಕಲೀತಾ ಇರಬೇಕು ಅಂತ ಈ ವಚನದಿಂದ ಅರ್ಥ ಮಾಡ್ಕೊಳ್ತೀವಿ. (ಪ್ರಸಂ. 3:11) ಸತ್ಯ ದೇವರು ಮಾಡಿರೋ ಕೆಲಸವನ್ನ ಪೂರ್ತಿ ಅರ್ಥ ಮಾಡ್ಕೊಳ್ಳೋಕೆ ಯಾವಾಗ್ಲೂ ಪ್ರಯತ್ನ ಮಾಡ್ತಾನೇ ಇರಬೇಕು. ಹೀಗೆ ಮಾಡುವಾಗ ನಾವು ಯೆಹೋವನಿಗೆ ಹತ್ರ ಆಗ್ತೀವಿ.​—ಕೀರ್ತ. 73:28.

9. ಬೈಬಲಲ್ಲಿರೋ ಮೂಲ ಬೋಧನೆಗಳನ್ನ ತಿಳ್ಕೊಂಡ್ರಷ್ಟೇ ಸಾಕಾ?

9 ಅಪೊಸ್ತಲ ಪೌಲ ಇಬ್ರಿಯ ಕ್ರೈಸ್ತರಿಗೆ ಪತ್ರ ಬರೆದಾಗ ಯೆಹೋವನ ಬಗ್ಗೆ ನಾವು ‘ಮೊದಮೊದ್ಲು ಕಲಿತ ವಿಷಯಗಳನ್ನ’ ‘ಮೂಲ ಬೋಧನೆಗಳು’ ಅಂತ ಹೇಳಿದ. ಅದನ್ನ ಮಗು ಕುಡಿಯೋ ಹಾಲಿಗೆ ಹೋಲಿಸಿ ಮಾತಾಡಿದ. (ಇಬ್ರಿ. 5:12; 6:1) ಆದ್ರೆ ಮೊದಮೊದ್ಲು ಕಲಿತ ಬೋಧನೆಗಳೇ ಸಾಕು ಅಂತ ಹೇಳ್ದೆ, ದೇವರ ಬಗ್ಗೆ ಜಾಸ್ತಿ ತಿಳ್ಕೊಳ್ಳಿ ಅಂದ. ಹಾಗಾದ್ರೆ ಬೈಬಲಲ್ಲಿರೋ ಸತ್ಯಗಳನ್ನ ಇನ್ನೂ ಜಾಸ್ತಿ ತಿಳ್ಕೊಬೇಕು ಅನ್ನೋ ಹಸಿವನ್ನ ನೀವು ಬೆಳೆಸ್ಕೊಂಡಿದ್ದೀರಾ? ಯೆಹೋವನ ಬಗ್ಗೆ ಮತ್ತು ಆತನು ಮಾಡೋ ವಿಷ್ಯಗಳ ಬಗ್ಗೆ ಇನ್ನೂ ಜಾಸ್ತಿ ತಿಳ್ಕೊಳ್ತಾ ಇರಬೇಕು ಅನ್ನೋ ಆಸೆ ನಿಮಗಿದ್ಯಾ?

10. ಕೆಲವ್ರಿಗೆ ಓದೋದು ಅಂದ್ರೆ ಯಾಕೆ ಇಷ್ಟ ಆಗಲ್ಲ?

10 ಪುಸ್ತಕ ಹಿಡ್ಕೊಂಡು ಕೂತು ಓದೋದು ಅಂದ್ರೆ ತುಂಬ ಜನ್ರಿಗೆ ಇಷ್ಟ ಆಗಲ್ಲ. ನಿಮಗೂ ಕಷ್ಟ ಆಗುತ್ತಾ? ನೀವು ಸ್ಕೂಲಲ್ಲಿ ಇದ್ದಾಗ ಓದೋದು ಬರಿಯೋದು ಅಂದ್ರೆ ಇಷ್ಟ ಆಗ್ತಿತ್ತಾ ಅಥವಾ ಬುಕ್‌ ತೆಗೆದ ತಕ್ಷಣ ನಿದ್ದೆ ಬರ್ತಿತ್ತಾ? ಓದೋಕೆ ನಿಮಗಿಷ್ಟ ಇಲ್ಲಾಂದ್ರೆ ಬೇಜಾರ್‌ ಮಾಡ್ಕೊಬೇಡಿ. ಯೆಹೋವ ದೇವರು ನಿಮಗೆ ಸಹಾಯ ಮಾಡ್ತಾನೆ. ಯೆಹೋವನ ತರ ಹೇಳ್ಕೊಡೋಕೆ, ಕಲಿಸೋಕೆ ಬೇರೆ ಯಾರಿಂದಾನೂ ಆಗಲ್ಲ. ಆತನೇ ನಮಗೆ ಬೆಸ್ಟ್‌ ಟೀಚರ್‌.

11. ಯೆಹೋವ “ಮಹಾ ಬೋಧಕ” ಅಂತ ನಮಗೆ ಹೇಗೆ ತೋರಿಸ್ಕೊಟ್ಟಿದ್ದಾನೆ?

11 ಯೆಹೋವನನ್ನ “ಮಹಾ ಬೋಧಕ” ಅಂತ ಬೈಬಲ್‌ ಹೇಳುತ್ತೆ. ಆ ಮಾತು ನಿಜಾನೇ. (ಯೆಶಾ. 30:20, 21) ಯಾಕಂದ್ರೆ ಆತನು ನಮಗೆ ಪ್ರೀತಿಯಿಂದ, ತಾಳ್ಮೆಯಿಂದ ಅರ್ಥ ಆಗೋ ತರ ಕಲಿಸ್ಕೊಡ್ತಾನೆ. ನಮ್ಮಲ್ಲಿರೋ ಒಳ್ಳೇದನ್ನ ಆತನು ನೋಡ್ತಾನೆ. (ಕೀರ್ತ. 130:3) ಯೆಹೋವನೇ ನಮ್ಮನ್ನ, ನಮ್ಮ ಮೆದುಳನ್ನ ಸೃಷ್ಟಿ ಮಾಡಿರೋದು. (ಕೀರ್ತ. 139:14) ಹಾಗಾಗಿ ನಮ್ಮಿಂದ ಆಗದೇ ಇರೋದನ್ನ ಮಾಡಿ ಅಂತ ಆತನು ಯಾವತ್ತೂ ಹೇಳಲ್ಲ. ಹೊಸ ಹೊಸ ವಿಷ್ಯಗಳನ್ನ ಕಲಿಯೋ ಆಸೆಯನ್ನ ನಮ್ಮಲ್ಲಿಟ್ಟು ಸೃಷ್ಟಿ ಮಾಡಿದ್ದಾನೆ. ಆ ರೀತಿ ಕಲೀತಾ ಕಲೀತಾ ನಾವು ಯಾವಾಗ್ಲೂ ಖುಷಿ ಖುಷಿಯಾಗಿ ಇರಬೇಕು ಅನ್ನೋದೇ ಆತನ ಆಸೆ. ಹಾಗಾಗಿ ಬೈಬಲಲ್ಲಿರೋ ಸತ್ಯಗಳನ್ನ ತಿಳ್ಕೊಳೋಕೆ ನಾವು ‘ಹಸಿವು ಬೆಳೆಸ್ಕೊಳ್ಳಬೇಕು.’ (1 ಪೇತ್ರ 2:2) ಅದಕ್ಕೆ ಏನು ಮಾಡಬೇಕು? ಚಿಕ್ಕಚಿಕ್ಕ ಗುರಿಗಳನ್ನ ಇಡಿ. ದಿನಾ ಬೈಬಲ್‌ ಓದಿ ಅರ್ಥ ಮಾಡಿಕೊಳ್ಳೋಕೆ ಪ್ರಯತ್ನ ಮಾಡಿ. (ಯೆಹೋ. 1:8) ಆಗ ಯೆಹೋವ ನಿಮ್ಮನ್ನ ಆಶೀರ್ವದಿಸ್ತಾನೆ. ನೀವು ಖುಷಿ ಖುಷಿಯಾಗಿ ಓದ್ತೀರ, ಆತನ ಬಗ್ಗೆ ಇನ್ನೂ ಕಲಿತೀರ. ಹೀಗೆ ಆತನಿಗೆ ಹತ್ರ ಆಗ್ತೀರ.

12. ನಾವು ಯಾಕೆ ಯೇಸು ಬಗ್ಗೆ ಚೆನ್ನಾಗಿ ತಿಳ್ಕೊಬೇಕು?

12 ಯೇಸು ಬಗ್ಗೆ, ಆತನು ಮಾಡಿದ ಸೇವೆ ಬಗ್ಗೆ ದಿನಾಲೂ ಯೋಚ್ನೆ ಮಾಡಿ. ಈ ಕಷ್ಟದ ಸಮಯದಲ್ಲೂ ಖುಷಿ ಖುಷಿಯಾಗಿ ನಾವು ಯೆಹೋವನ ಸೇವೆ ಮಾಡಬೇಕಂದ್ರೆ ಯೇಸು ತರ ನಡ್ಕೊಬೇಕು. (1 ಪೇತ್ರ 2:21) ನಿಜ, ನಮಗೆ ತುಂಬಾ ಕಷ್ಟಗಳು ಬರುತ್ತೆ ಅಂತ ಯೇಸು ಮುಂಚೆನೇ ಹೇಳಿದ್ದನು. (ಲೂಕ 14:27, 28) ಆದ್ರೆ ಎಷ್ಟೇ ಕಷ್ಟ ಬಂದ್ರೂ ನಾವು ಯೆಹೋವನನ್ನ ಬಿಟ್ಟು ಹೋಗಲ್ಲ ಅಂತ ಆತನಿಗೆ ಚೆನ್ನಾಗಿ ಗೊತ್ತಿತ್ತು. (ಯೋಹಾ. 16:33) ಹಾಗಾಗಿ ನಾವು ಯೇಸು ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಣ. ಆತನ ತರ ಇರೋಕೆ ಯಾವಾಗ್ಲೂ ಪ್ರಯತ್ನ ಮಾಡ್ತಾ ಇರೋಣ.

13. ನೀವು ಯಾವುದಕ್ಕೋಸ್ಕರ ಪ್ರಾರ್ಥನೆ ಮಾಡಬಹುದು ಮತ್ತು ಯಾಕೆ?

13 ನಾವು ಯೆಹೋವನ ಬಗ್ಗೆ ತಿಳ್ಕೊಂಡ್ರೆ ಮಾತ್ರ ಸಾಕಾಗಲ್ಲ. ಯಾಕೆ? ಯಾಕಂದ್ರೆ ಆತನ ಬಗ್ಗೆ ಕಲೀತಾ ಕಲೀತಾ ನಮಗೆ ಆತನ ಮೇಲಿರೋ ಪ್ರೀತಿ, ನಂಬಿಕೆ ಜಾಸ್ತಿ ಆಗುತ್ತೆ. (1 ಕೊರಿಂ. 8:1-3) ನಮ್ಮ ನಂಬಿಕೆನ ಜಾಸ್ತಿ ಮಾಡ್ಕೊಳ್ಳೋಕೆ ಯೆಹೋವನಿಗೆ ಪ್ರಾರ್ಥನೆನೂ ಮಾಡಬಹುದು. (ಲೂಕ 17:5) ಆತನು ಖಂಡಿತ ನಮಗೆ ಸಹಾಯ ಮಾಡ್ತಾನೆ. ಈ ತರ ನಾವು ಯೆಹೋವನ ಬಗ್ಗೆ ಚೆನ್ನಾಗಿ ತಿಳ್ಕೊಂಡು ನಂಬಿಕೆ ಬೆಳೆಸ್ಕೊಂಡ್ರೆ ದೀಕ್ಷಾಸ್ನಾನ ತಗೊಳ್ಳೋ ಗುರಿಯನ್ನ ಮುಟ್ಟೋಕೆ ಆಗುತ್ತೆ.​—ಯಾಕೋ. 2:26.

ಕಲ್ತಿದ್ದನ್ನ ಜೀವನದಲ್ಲಿ ಪಾಲಿಸ್ತಾ ಇರಿ

ನೋಹ ಮತ್ತು ಅವನ ಮನೆಯವರು ಜಲಪ್ರಳಯಕ್ಕೆ ಮುಂಚೆನೇ ಯೆಹೋವ ಹೇಳಿದ್ದನ್ನ ಪಾಲಿಸಿದ್ರು (ಪ್ಯಾರ 14 ನೋಡಿ)

14. ಕಲ್ತಿದ್ದನ್ನ ಪಾಲಿಸೋದು ಮುಖ್ಯ ಅಂತ ಅಪೊಸ್ತಲ ಪೇತ್ರ ಹೇಗೆ ಅರ್ಥ ಮಾಡಿಸಿದ್ದಾನೆ? (ಚಿತ್ರನೂ ನೋಡಿ.)

14 ಯೇಸುವಿನ ಶಿಷ್ಯರು ಬರೀ ಕಲಿಯೋದಷ್ಟೇ ಅಲ್ಲ, ಕಲ್ತಿದ್ದನ್ನ ಪಾಲಿಸೋದು ಕೂಡ ತುಂಬ ಮುಖ್ಯ ಅಂತ ಅಪೊಸ್ತಲ ಪೇತ್ರ ಹೇಳಿದ್ದಾನೆ. ಇದನ್ನ ಅರ್ಥ ಮಾಡಿಸೋಕೆ ಅವನು ನೋಹನ ಉದಾಹರಣೆ ಕೊಟ್ಟ. ಯೆಹೋವ ದೇವರು ನೋಹನಿಗೆ ಕೆಟ್ಟ ಜನ್ರನ್ನ ನಾಶ ಮಾಡೋಕೆ ಜಲಪ್ರಳಯ ತರ್ತೀನಿ ಅಂತ ಹೇಳಿದನು. ಆ ಪ್ರಳಯದಿಂದ ತಮ್ಮ ಜೀವವನ್ನ ಕಾಪಾಡಿಕೊಳ್ಳೋಕೆ ನೋಹ ಮತ್ತು ಅವನ ಮನೆಯವರು ಈ ವಿಷ್ಯನ ತಿಳ್ಕೊಂಡ್ರಷ್ಟೇ ಸಾಕಾಗಿತ್ತಾ? ಅವರು ಇನ್ನೂ ಏನು ಮಾಡಿದ್ರು ಅಂತ ಪೇತ್ರ ಹೇಳಿದ. ‘ನೋಹ ಹಡಗನ್ನ ಕಟ್ತಿದ್ದ’ ಅಂತ ಅವನು ಬರೆದ. (1 ಪೇತ್ರ 3:20) ಇದ್ರಿಂದ ಏನು ಗೊತ್ತಾಗುತ್ತೆ. ನೋಹ ಮತ್ತು ಅವನ ಮನೆಯವರು ನಂಬಿಕೆ ಇಟ್ಟಿದ್ದಷ್ಟೇ ಅಲ್ಲ, ಅದನ್ನ ತೋರಿಸಿದ್ರು. (ಇಬ್ರಿ. 11:7) ಅವರು ನಂಬಿಕೆಯಿಂದ ಮಾಡಿದ ಈ ಕೆಲಸನ ಅಪೊಸ್ತಲ ಪೇತ್ರ ದೀಕ್ಷಾಸ್ನಾನಕ್ಕೆ ಹೋಲಿಸಿ ಮಾತಾಡಿದ್ದಾನೆ. “ಈ ಕಾಲದಲ್ಲಿ ದೀಕ್ಷಾಸ್ನಾನನೂ ಅದೇ ತರ ಇದೆ. ಅದು ಈಗ್ಲೂ ನಿಮ್ಮನ್ನ ಕಾಪಾಡ್ತಿದೆ” ಅಂತ ಅವನು ಬರೆದ. (1 ಪೇತ್ರ 3:21) ನೋಹ ಮತ್ತು ಅವನ ಮನೆಯವರು ಹಡಗು ಕಟ್ಟಿ ತಮ್ಮ ನಂಬಿಕೆ ಎಷ್ಟಿದೆ ಅಂತ ತೋರಿಸಿದ್ರು. ನೀವು ಕೂಡ ದೀಕ್ಷಾಸ್ನಾನ ತಗೊಂಡಾಗ ಅದು ನಿಮ್ಮ ನಂಬಿಕೆನ ತೋರಿಸುತ್ತೆ. ಹಡಗು ಕಟ್ಟೋದ್ರ ಹಿಂದೆ ತುಂಬ ಕೆಲಸ ಇರುತ್ತೆ. ಅದೇ ತರ ದೀಕ್ಷಾಸ್ನಾನ ತಗೊಳ್ಳೋಕೆ ನೀವೂ ಕೆಲವು ಕೆಲಸಗಳನ್ನ ಮಾಡಬೇಕಾಗುತ್ತೆ.

15. ನೀವು ಮನಸಾರೆ ಪಶ್ಚಾತ್ತಾಪ ಪಟ್ಟಿದ್ದೀರ ಅಂತ ಹೇಗೆ ತೋರಿಸ್ಕೊಡ್ತೀರಾ?

15 ಮೊದಲನೇದಾಗಿ, ನಾವು ಮನಸಾರೆ ಪಶ್ಚಾತ್ತಾಪ ಪಡಬೇಕು. ತಪ್ಪುಗಳನ್ನ ತಿದ್ಕೊಂಡು ಬದಲಾಗಬೇಕು. (ಅ. ಕಾ. 2:37, 38) ಯೆಹೋವ ದೇವರಿಗೆ ಇಷ್ಟ ಆಗದಿರೋ ಕೆಟ್ಟ ಅಭ್ಯಾಸಗಳು ಏನಾದ್ರೂ ನಿಮ್ಮಲ್ಲಿ ಇದ್ಯಾ? ಅನೈತಿಕ ಜೀವನ ಮಾಡೋದು, ತಂಬಾಕು ತಿನ್ನೋದು, ಸಿಗರೇಟ್‌ ಸೇದೋದು, ಕೆಟ್ಟ ಮಾತು ಆಡೋದನ್ನೆಲ್ಲ ನೀವು ಬಿಟ್ಟಿದ್ದೀರಾ? (1 ಕೊರಿಂ. 6:9, 10; 2 ಕೊರಿಂ. 7:1; ಎಫೆ. 4:29) ಇನ್ನೂ ಬಿಟ್ಟಿಲ್ಲಾಂದ್ರೆ, ಬಿಡೋಕೆ ಪ್ರಯತ್ನ ಮಾಡಿ. ನಿಮ್ಮ ಬೈಬಲ್‌ ಟೀಚರ್‌ ಹತ್ರ ಅಥವಾ ಹಿರಿಯರ ಹತ್ರ ಮಾತಾಡಿ. ಕೆಟ್ಟ ಅಭ್ಯಾಸಗಳನ್ನ ಬಿಡೋಕೆ ಅವರು ನಿಮಗೆ ಸಹಾಯ ಮಾಡ್ತಾರೆ. ನೀವು ಚಿಕ್ಕವರಾಗಿದ್ರೆ ಕೆಟ್ಟ ಅಭ್ಯಾಸ ಬಿಡೋಕೆ ಅಪ್ಪ ಅಮ್ಮ ಹತ್ರ ಸಹಾಯ ಕೇಳಿ. ಹೀಗೆ ಮಾಡಿದ್ರೆ ನೀವು ದೀಕ್ಷಾಸ್ನಾನ ತಗೊಳ್ಳೋಕೆ ರೆಡಿ ಆಗ್ತೀರ.

16. ಯೆಹೋವನನ್ನ ಖುಷಿ ಪಡಿಸೋಕೆ ಏನು ಮಾಡ್ತಾ ಇರಬೇಕು?

16 ನೀವು ಕೆಟ್ಟ ಅಭ್ಯಾಸಗಳನ್ನ ಬಿಡೋದ್ರ ಜೊತೆಗೆ ಯೆಹೋವನಿಗೆ ಇಷ್ಟ ಆಗೋ ವಿಷ್ಯಗಳನ್ನೂ ಮಾಡ್ತಾ ಇರಬೇಕು. ಉದಾಹರಣೆಗೆ ಕೂಟಗಳಿಗೆ ತಪ್ಪದೆ ಹೋಗಬೇಕು. ಅಲ್ಲಿ ಉತ್ರ ಹೇಳಬೇಕು. (ಇಬ್ರಿ. 10:24, 25) ಪ್ರಚಾರಕರಾದ ಮೇಲೆ ಜನ್ರಿಗೆ ಸಿಹಿಸುದ್ದಿ ಸಾರಬೇಕು. ಆಗ ಜನ್ರ ಜೀವ ಕಾಪಾಡೋ ಕೆಲಸ ಮಾಡ್ತಾ ಮಾಡ್ತಾ ನಿಮ್ಮ ಖುಷಿನೂ ಜಾಸ್ತಿ ಆಗುತ್ತೆ. (2 ತಿಮೊ. 4:5) ಕೂಟಗಳಿಗೆ ಹೋಗೋಕೆ, ಸಿಹಿಸುದ್ದಿ ಸಾರೋಕೆ ನಿಮ್ಮ ಅಪ್ಪ ಅಮ್ಮ ನಿಮಗೆ ಹೇಳ್ತಿದ್ದಾರಾ ಅಥವಾ ನೀವಾಗಿ ನೀವೇ ಮಾಡ್ತಿದ್ದೀರಾ ಅಂತ ಯೋಚ್ನೆ ಮಾಡಿ. ಇದನ್ನೆಲ್ಲಾ ನೀವಾಗೇ ಮಾಡ್ತಿದ್ರೆ ಯೆಹೋವನ ಮೇಲೆ ನಿಮಗೆ ನಂಬಿಕೆ ಇದೆ, ಆತನನ್ನ ನೀವು ತುಂಬ ಪ್ರೀತಿಸ್ತೀರ ಅಂತ ತೋರಿಸ್ತೀರ. ಅಷ್ಟೇ ಅಲ್ಲ, ಆತನು ನಿಮಗೋಸ್ಕರ ಮಾಡಿರೋ ಎಲ್ಲ ವಿಷ್ಯಗಳಿಗೂ ನೀವು ಆತನಿಗೆ ಥ್ಯಾಂಕ್ಸ್‌ ಹೇಳಿದ ತರ ಇರುತ್ತೆ. ಇವೆಲ್ಲಾ ನಿಮಗೆ ‘ದೇವರ ಮೇಲೆ ಭಕ್ತಿ ಇದೆ ಅಂತ ತೋರಿಸೋ ಕೆಲಸಗಳು.’ ಅಂದ್ರೆ ನೀವು ಯೆಹೋವನಿಗೆ ಕೊಡೋ ಗಿಫ್ಟ್‌ಗಳು. (2 ಪೇತ್ರ 3:11; ಇಬ್ರಿ. 13:15) ನೀವಾಗೇ ಯೆಹೋವ ದೇವರಿಗೆ ಗಿಫ್ಟ್‌ ಕೊಟ್ಟಾಗ ಆತನಿಗೆ ಹೇಗೆ ಅನಿಸುತ್ತೆ ಅಂತ ಸ್ವಲ್ಪ ಯೋಚ್ನೆ ಮಾಡಿ. (2 ಕೊರಿಂಥ 9:7 ಹೋಲಿಸಿ.) ಯೆಹೋವನೂ ಖುಷಿ ಪಡ್ತಾನೆ. ನೀವೂ ಖುಷಿಯಾಗಿ ಇರ್ತೀರ.

ಯೆಹೋವನ ಮೇಲೆ ಪ್ರೀತಿ ಜಾಸ್ತಿ ಮಾಡ್ಕೊಳ್ತಾ ಇರಿ

17-18. ದೀಕ್ಷಾಸ್ನಾನ ತಗೊಳ್ಳೋಕೆ ಯಾವ ಗುಣ ನಿಮಗೆ ಸಹಾಯ ಮಾಡುತ್ತೆ ಮತ್ತು ಯಾಕೆ? (ಜ್ಞಾನೋಕ್ತಿ 3:3-6)

17 ನೀವು ದೀಕ್ಷಾಸ್ನಾನ ತಗೊಳ್ಳೋಕೆ ಬದಲಾವಣೆಗಳನ್ನ ಮಾಡ್ತಿರುವಾಗ, ನಿಮಗೆ ಕೆಲವು ಕಷ್ಟಗಳು ಬರಬಹುದು. ಕೆಲವರು ನಿಮಗೆ ಅವಮಾನ ಮಾಡಬಹುದು, ವಿರೋಧಿಸಬಹುದು ಅಥವಾ ಹಿಂಸೆ ಕೊಡಬಹುದು. (2 ತಿಮೊ. 3:12) ನೀವು ಕೆಟ್ಟ ಅಭ್ಯಾಸಗಳನ್ನ ಬಿಡೋಕೆ ಪ್ರಯತ್ನ ಮಾಡ್ತಿರುವಾಗ ಕೆಲವೊಮ್ಮೆ ಸೋತು ಹೋಗಬಹುದು. ಆಗ ನಿಮಗೆ ಬೇಜಾರು ಆಗಬಹುದು. ‘ನನ್ನಿಂದ ಇದನ್ನೆಲ್ಲಾ ಬಿಡೋಕೆ ಆಗಲ್ವೇನೋ’ ಅಂತ ಅನಿಸಬಹುದು. ಆದ್ರೂ ನಮ್ಮ ಹೋರಾಟ ಬಿಟ್ಟುಕೊಡದೆ ಇರೋಕೆ ನಮಗೆ ಯಾವುದು ಸಹಾಯ ಮಾಡುತ್ತೆ? ಯೆಹೋವನ ಮೇಲಿರೋ ಪ್ರೀತಿನೇ.

18 ಯೆಹೋವನ ಮೇಲೆ ನಿಮಗಿರೋ ಪ್ರೀತಿ ತುಂಬಾ ವಿಶೇಷವಾದದ್ದು. (ಜ್ಞಾನೋಕ್ತಿ 3:3-6 ಓದಿ.) ಆ ಪ್ರೀತಿ ಇದ್ರೆ, ನಿಮಗೆ ಎಷ್ಟೇ ಕಷ್ಟ ಬಂದ್ರೂ ನೀವು ಯೆಹೋವನನ್ನ ಬಿಟ್ಟು ಹೋಗಲ್ಲ. ಯೆಹೋವ ದೇವರು ಕೂಡ ತನ್ನ ಜನ್ರಿಗೆ ಶಾಶ್ವತ ಪ್ರೀತಿ ತೋರಿಸ್ತಾನೆ ಅಂತ ಬೈಬಲ್‌ ಹೇಳುತ್ತೆ. ಅಂದ್ರೆ ಎಂಥಾ ಪರಿಸ್ಥಿತಿ ಬಂದ್ರೂ ಯೆಹೋವ ನಿಮ್ಮನ್ನ ಬಿಟ್ಟು ಹೋಗಲ್ಲ. ನಿಮ್ಮ ಜೊತೆನೇ ಇರ್ತಾನೆ. (ಕೀರ್ತ. 100:5) ಯೆಹೋವನ ಹತ್ರ ಇರೋ ಗುಣಗಳು ನಮ್ಮ ಹತ್ರನೂ ಇರೋದ್ರಿಂದ ನಾವು ಈ ತರ ಪ್ರೀತಿಯನ್ನ ತೋರಿಸೋಕೆ ಆಗುತ್ತೆ. (ಆದಿ. 1:26) ಹೇಗೆ?

ಯೆಹೋವ ನಿಮಗಾಗಿ ಮಾಡಿರೋ ವಿಷ್ಯಗಳಿಗೆ ದಿನಾ ಥ್ಯಾಂಕ್ಸ್‌ ಹೇಳಿ (ಪ್ಯಾರ 19 ನೋಡಿ) b

19. ಯೆಹೋವ ದೇವರ ಮೇಲಿರೋ ಪ್ರೀತಿ ಜಾಸ್ತಿ ಆಗಬೇಕು ಅಂದ್ರೆ ಏನು ಮಾಡಬೇಕು? (ಗಲಾತ್ಯ 2:20)

19 ಯೆಹೋವ ನಿಮಗೋಸ್ಕರ ಮಾಡಿರೋ ವಿಷ್ಯಗಳಿಗೆ ಥ್ಯಾಂಕ್ಸ್‌ ಹೇಳಿ. (1 ಥೆಸ. 5:18) ಪ್ರತಿದಿನ ಯೆಹೋವ ಹೇಗೆಲ್ಲಾ ಪ್ರೀತಿ ತೋರಿಸಿದ್ದಾನೆ ಅಂತ ಯೋಚ್ನೆ ಮಾಡಿ. ಚಿಕ್ಕಚಿಕ್ಕ ವಿಷ್ಯಗಳಲ್ಲೂ ಆತನು ಹೇಗೆ ಸಹಾಯ ಮಾಡಿದ್ದಾನೆ ಅನ್ನೋದನ್ನ ನೆನಸ್ಕೊಂಡು ಥ್ಯಾಂಕ್ಸ್‌ ಹೇಳಿ. ಯೆಹೋವ ತನ್ನನ್ನ ಎಷ್ಟು ಪ್ರೀತಿಸ್ತಾನೆ ಅಂತ ಅಪೊಸ್ತಲ ಪೌಲ ಅರ್ಥ ಮಾಡ್ಕೊಂಡ. (ಗಲಾತ್ಯ 2:20 ಓದಿ.) ನಾವು ಅದೇ ತರ ‘ಯೆಹೋವ ನನ್ನನ್ನ ಎಷ್ಟು ಪ್ರೀತಿಸ್ತಿದ್ದಾನೆ, ನನಗೋಸ್ಕರ ಆತನು ಏನೆಲ್ಲಾ ಮಾಡಿದ್ದಾನೆ’ ಅಂತ ಅರ್ಥ ಮಾಡ್ಕೊಬೇಕು. ಅಷ್ಟೇ ಅಲ್ಲ, ‘ನಾನು ಯೆಹೋವ ದೇವರನ್ನ ಪ್ರೀತಿಸ್ತಿದ್ದೀನಾ’ ಅಂತ ಯೋಚ್ನೆ ಮಾಡಬೇಕು. ನಾವು ಯೆಹೋವನನ್ನ ಪ್ರೀತಿಸಿದ್ರೆ ನಮಗೆ ಎಂಥ ಪರೀಕ್ಷೆಗಳು ಬಂದ್ರೂ ಅದನ್ನ ಗೆಲ್ಲೋಕಾಗುತ್ತೆ. ಎಂಥ ಕಷ್ಟ ಬಂದ್ರೂ ಅದನ್ನ ಸಹಿಸ್ಕೊಳ್ಳೋಕೆ ಆಗುತ್ತೆ. ಇದ್ರಿಂದ ಯೆಹೋವನಿಗೆ ಇಷ್ಟ ಆಗೋದನ್ನ ಪ್ರತಿದಿನ ಮಾಡ್ತಾ ಇರ್ತೀವಿ ಮತ್ತು ಯೆಹೋವ ದೇವರನ್ನ ಪ್ರೀತಿಸ್ತಾ ಇರ್ತೀವಿ.

20. (ಎ) ನೀವು ಯೆಹೋವನಿಗೆ ಸಮರ್ಪಿಸ್ಕೊಳ್ಳೋಕೆ ಏನು ಮಾಡಬೇಕು? (ಬಿ) ಇದನ್ನ ಮಾಡೋದು ಯಾಕಷ್ಟು ಮುಖ್ಯ?

20 ಯೆಹೋವನ ಮೇಲೆ ನಿಮಗೆ ಪ್ರೀತಿ ಜಾಸ್ತಿ ಆದಾಗ ಒಂದು ವಿಶೇಷ ಪ್ರಾರ್ಥನೆ ಮಾಡ್ತೀರ. ಆ ಪ್ರಾರ್ಥನೆಯಲ್ಲಿ ‘ನನ್ನನ್ನ ನಿನಗೆ ಸಮರ್ಪಿಸ್ಕೊಳ್ತೀನಿ’ ಅಂತ ಮಾತು ಕೊಡ್ತೀರ. ಈ ನಿರ್ಧಾರ ನಿಮ್ಮ ಜೀವನದಲ್ಲಿ ಮಾಡೋ ಬೇರೆ ಎಲ್ಲ ನಿರ್ಧಾರಗಳಿಗಿಂತ ತುಂಬಾ ಮುಖ್ಯ. ಯಾಕಂದ್ರೆ ನೀವು ಯೆಹೋವನಿಗೆ ಸಮರ್ಪಿಸ್ಕೊಂಡ ಮೇಲೆ ನಿಮಗೆ ಆತನ ಜೊತೆ ಶಾಶ್ವತ ಬಂಧ ಹುಟ್ಟುತ್ತೆ. ಆಗ ಜೀವನದಲ್ಲಿ ಸುಖ ದುಃಖ ಏನೇ ಬರಲಿ ನೀವು ಯೆಹೋವನನ್ನ ಬಿಟ್ಟು ಹೋಗಲ್ಲ. ಅಷ್ಟೇ ಅಲ್ಲ, ನೀವು ಒಂದು ಸಲ ಸಮರ್ಪಣೆ ಮಾಡ್ಕೊಂಡ ಮೇಲೆ ಅದನ್ನ ಮತ್ತೆ ಮತ್ತೆ ಮಾಡಬೇಕಾಗಿಲ್ಲ. ಯೆಹೋವನಿಗೆ ಸಮರ್ಪಿಸ್ಕೊಳ್ಳೋದ್ರಿಂದ ನೀವು ಖಂಡಿತ ಖುಷಿಯಾಗಿ ಇರ್ತೀರ. (ಕೀರ್ತ. 50:14) ಆದ್ರೆ ಸೈತಾನ ಯೆಹೋವ ಜೊತೆಗಿರೋ ನಿಮ್ಮ ಸಂಬಂಧನ ಹಾಳು ಮಾಡೋಕೆ ಪ್ರಯತ್ನ ಮಾಡ್ತಾನೇ ಇರ್ತಾನೆ. ಅವನು ನಿಮ್ಮನ್ನ ಗೆಲ್ಲೋಕೆ ಯಾವತ್ತೂ ಬಿಟ್ಟುಕೊಡಬೇಡಿ. (ಯೋಬ 27:5) ನೀವು ಯೆಹೋವನ ಮೇಲೆ ಪ್ರೀತಿ ಜಾಸ್ತಿ ಮಾಡ್ಕೊಳ್ತಾ ಇರಿ. ಆಗ ನೀವು ಯೆಹೋವನಿಗೆ ಕೊಟ್ಟ ಮಾತನ್ನ ಉಳಿಸ್ಕೊಳ್ತೀರ ಮತ್ತು ಆತನಿಗೆ ಹತ್ರ ಆಗ್ತೀರ.

21. ದೀಕ್ಷಾಸ್ನಾನ ಅನ್ನೋದು ಕೊನೆಯಲ್ಲ ಆರಂಭ ಅಂತ ಯಾಕೆ ಹೇಳ್ತೀವಿ?

21 ಸಮರ್ಪಣೆ ಮಾಡ್ಕೊಂಡ ಮೇಲೆ ದೀಕ್ಷಾಸ್ನಾನ ತಗೊಳ್ಳೋಕೆ ಏನು ಮಾಡಬೇಕು ಅಂತ ಹಿರಿಯರ ಹತ್ರ ಮಾತಾಡಿ. ನೀವು ಜೀವನಪೂರ್ತಿ ಆತನ ಸೇವೆ ಮಾಡಬೇಕು ಅಂತ ನಿರ್ಧಾರ ಮಾಡಿದ್ದೀರ. ಹಾಗಾಗಿ ಯೆಹೋವನ ಮೇಲೆ ನಿಮಗಿರೋ ಪ್ರೀತಿನ ಜಾಸ್ತಿ ಮಾಡ್ಕೊಳ್ಳೋಕೆ ಇವತ್ತಿಂದನೇ ಪ್ರಯತ್ನ ಮಾಡಿ. ಅದಕ್ಕಾಗಿ ಚಿಕ್ಕಚಿಕ್ಕ ಗುರಿಗಳನ್ನ ಇಡಿ. ಆಗ, ನೀವು ದೀಕ್ಷಾಸ್ನಾನ ತಗೊಳ್ಳೋಕೆ ರೆಡಿ ಆಗ್ತೀರ. ಆದ್ರೆ ದೀಕ್ಷಾಸ್ನಾನ ಅನ್ನೋದು ಯೆಹೋವನ ಜೊತೆ ನಿಮಗಿರೋ ಸಂಬಂಧಕ್ಕೆ ಆರಂಭ ಅಷ್ಟೇ. ಅದು ಕೊನೆ ಅಲ್ಲ. ಹಾಗಾಗಿ ದೀಕ್ಷಾಸ್ನಾನ ತಗೊಂಡ ಮೇಲೂ ಯೆಹೋವ ಮತ್ತು ಯೇಸು ಮೇಲೆ ಪ್ರೀತಿ ಜಾಸ್ತಿ ಮಾಡ್ಕೊಳ್ತಾ ಇರಿ.

ಗೀತೆ 89 ಯೆಹೋವನ ಸೌಹಾರ್ದಯುತ ಮನವಿ: “ನನ್ನ ಮಗನೇ, ವಿವೇಕಿಯಾಗಿರು”

a ನಾವು ಯಾಕೆ ದೀಕ್ಷಾಸ್ನಾನ ತಗೊಬೇಕು ಅಂತ ಹಿಂದಿನ ಲೇಖನದಲ್ಲಿ ನೋಡಿದ್ವಿ. ದೀಕ್ಷಾಸ್ನಾನ ತಗೊಳ್ಳೋಕೆ ನಾವು ಏನೆಲ್ಲ ಮಾಡಬೇಕು ಅಂತ ಈ ಲೇಖನದಲ್ಲಿ ಕಲಿಯೋಣ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಇಥಿಯೋಪ್ಯದ ಅಧಿಕಾರಿಯ ಉದಾಹರಣೆ ನಮಗೆ ಸಹಾಯ ಮಾಡುತ್ತೆ.

b ಚಿತ್ರ ವಿವರಣೆ: ಒಬ್ಬ ಯುವ ಸಹೋದರಿ ಯೆಹೋವ ತನಗಾಗಿ ಮಾಡಿರೋ ವಿಷ್ಯಗಳಿಗೆಲ್ಲಾ ಥ್ಯಾಂಕ್ಸ್‌ ಹೇಳ್ತಾ ಆತನಿಗೆ ಪ್ರಾರ್ಥನೆ ಮಾಡ್ತಿದ್ದಾರೆ.