ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 10

ದೀಕ್ಷಾಸ್ನಾನ ಯಾಕೆ ತಗೊಬೇಕು?

ದೀಕ್ಷಾಸ್ನಾನ ಯಾಕೆ ತಗೊಬೇಕು?

“ದೀಕ್ಷಾಸ್ನಾನ ತಗೊಳ್ಳಿ.”​—ಅ. ಕಾ. 2:38.

ಗೀತೆ 29 ಸಮಗ್ರತೆಯ ಮಾರ್ಗದಲ್ಲಿ ನಡೆಯುವುದು

ಈ ಲೇಖನದಲ್ಲಿ ಏನಿದೆ? a

1-2. (ಎ) ದೀಕ್ಷಾಸ್ನಾನ ತಗೊಳ್ಳೋರಿಗೆ ಮತ್ತು ಅಲ್ಲಿ ಇರೋರಿಗೆ ಹೇಗನಿಸುತ್ತೆ? (ಬಿ) ದೀಕ್ಷಾಸ್ನಾನ ತಗೊಳ್ಳೋಕೆ ನೀವ್ಯಾಕೆ ಮನಸ್ಸು ಮಾಡಬೇಕು?

 ದೀಕ್ಷಾಸ್ನಾನ ತಗೊಳ್ಳೋಕೆ ರೆಡಿಯಾಗಿ ನಿಂತಿರೋ ಸಹೋದರ ಸಹೋದರಿಯನ್ನ ನೀವು ನೋಡಿದ್ದೀರಾ? ದೀಕ್ಷಾಸ್ನಾನ ತಗೊಳ್ಳೋ ಮುಂಚೆ ಭಾಷಣ ಕೊಡೋರು ಅವ್ರಿಗೆ 2 ಪ್ರಶ್ನೆ ಕೇಳ್ತಾರೆ. ಅದಕ್ಕೆ ಆ ಸಹೋದರ ಸಹೋದರಿಯರು ಮನಸಾರೆ ಜೋರಾಗಿ ಉತ್ರ ಕೊಡ್ತಾರೆ. ಆಗ ಅವರ ಫ್ರೆಂಡ್ಸ್‌ ಮತ್ತು ಮನೆಯವರು ತುಂಬಾ ಹೆಮ್ಮೆಯಿಂದ ಅವರನ್ನ ನೋಡ್ತಾ ಇರ್ತಾರೆ. ಅವರು ದೀಕ್ಷಾಸ್ನಾನ ತಗೊಂಡು ನೀರಿಂದ ಮೇಲೆ ಬರ್ತಾ ಇರುವಾಗ ಅವರ ಮುಖದಲ್ಲಿ ಸಂತೋಷ ಎದ್ದು ಕಾಣುತ್ತೆ. ಅವರ ಸುತ್ತ ನಿಂತಿರೋರೆಲ್ಲಾ ಜೋರಾಗಿ ಚಪ್ಪಾಳೆ ತಟ್ಟುತ್ತಾ ಇರ್ತಾರೆ. ಹೀಗೆ ಪ್ರತಿವಾರ ಸಾವಿರಾರು ಜನ್ರು ಯೆಹೋವನಿಗೆ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ತಗೊಳ್ತಾ ಇದ್ದಾರೆ.

2 ನೀವು ದೀಕ್ಷಾಸ್ನಾನ ತಗೊಳ್ಳೋಕೆ ಯೋಚ್ನೆ ಮಾಡ್ತಿದ್ದೀರಾ? ಹಾಗಿದ್ರೆ ಈ ಕೆಟ್ಟ ಲೋಕದಲ್ಲಿ ‘ಯೆಹೋವನನ್ನ ಹುಡುಕ್ತಿರೋ’ ಜನ್ರಲ್ಲಿ ನೀವು ಕೂಡ ಒಬ್ರಾಗಿದ್ದೀರ. (ಕೀರ್ತ. 14:1, 2) ಯೆಹೋವನಿಗೆ ನೀವು ತುಂಬಾ ಸ್ಪೆಷಲ್‌. ದೀಕ್ಷಾಸ್ನಾನ ತಗೊಬೇಕು ಅಂತ ಯೋಚಿಸ್ತಿರೋ ನೀವು ಯುವಕರಾಗಿರಲಿ ಅಥವಾ ನಿಮಗೆ ವಯಸ್ಸಾಗಿರಲಿ ಈ ಲೇಖನ ನಿಮಗೋಸ್ಕರನೇ. ಒಂದುವೇಳೆ ನಿಮಗೆ ದೀಕ್ಷಾಸ್ನಾನ ಆಗಿದ್ರೆ ಯೆಹೋವನ ಸೇವೆನ ಇನ್ನೂ ಜಾಸ್ತಿ ಮಾಡೋಕೆ ಈ ಲೇಖನ ನಿಮಗೆ ಸಹಾಯ ಮಾಡುತ್ತೆ. ಯೆಹೋವನ ಸೇವೆ ಮಾಡೋಕೆ ಎಷ್ಟೋ ಕಾರಣಗಳಿವೆ. ಅದ್ರಲ್ಲಿ 3 ಕಾರಣಗಳನ್ನ ಈಗ ನೋಡೋಣ.

ನೀವು ಸತ್ಯ ಮತ್ತು ನೀತಿಯನ್ನ ಪ್ರೀತಿಸೋದ್ರಿಂದ

ಯೆಹೋವನ ಹೆಸರು ಕೆಡಿಸೋಕೆ ಸೈತಾನ ಸಾವಿರಾರು ವರ್ಷಗಳಿಂದ ಪ್ರಯತ್ನ ಮಾಡ್ತಾನೇ ಇದ್ದಾನೆ (ಪ್ಯಾರ 3-4 ನೋಡಿ)

3. ಯೆಹೋವನ ಜನ್ರು ಸತ್ಯ ಮತ್ತು ನೀತಿನ ಯಾಕೆ ಪ್ರೀತಿಸ್ತಾರೆ? (ಕೀರ್ತನೆ 119:128, 163)

3 ಯೆಹೋವ ದೇವರು ತನ್ನ ಜನ್ರಿಗೆ ‘ಸತ್ಯವನ್ನ ಪ್ರೀತಿಸಿ’ ಅಂತ ಹೇಳಿದನು. (ಜೆಕ. 8:19) ಯೇಸು ತನ್ನ ಶಿಷ್ಯರಿಗೆ ನೀತಿಯನ್ನ ಹುಡುಕ್ತಾ ಇರಿ ಅಂತ ಹೇಳಿದನು. (ಮತ್ತಾ. 5:6) ಅಂದ್ರೆ ಇದರ ಅರ್ಥ ಯೆಹೋವ ನಮಗೆ ಯಾವುದು ನೀತಿ, ಯಾವುದು ಒಳ್ಳೇದು, ಯಾವುದು ಸತ್ಯ ಅಂತ ಹೇಳಿದ್ದಾನೋ ಅದನ್ನ ಮಾಡೋಕೆ ನಾವು ಆಸೆಯನ್ನ ಬೆಳೆಸ್ಕೊಬೇಕು. ನೀವು ಸತ್ಯ ಮತ್ತು ನೀತಿನ ಪ್ರೀತಿಸ್ತೀರಾ? ನೀವು ಪ್ರೀತಿಸ್ತೀರ ಅಂತ ನಮಗೆ ಗೊತ್ತು. ಅಷ್ಟೇ ಅಲ್ಲ, ನೀವು ಕೆಟ್ಟದನ್ನ, ಸುಳ್ಳನ್ನ ದ್ವೇಷಿಸ್ತೀರ. (ಕೀರ್ತನೆ 119:128, 163 ಓದಿ.) ಈ ಲೋಕವನ್ನ ಆಳ್ತಿರೋ ಸೈತಾನ ಸುಳ್ಳಿಗೆ ತಂದೆಯಾಗಿದ್ದಾನೆ. (ಯೋಹಾ. 8:44; 12:31) ಅವನು ಪವಿತ್ರವಾಗಿರೋ ಯೆಹೋವ ದೇವರ ಹೆಸರನ್ನ ಹಾಳು ಮಾಡ್ತಾ ಇದ್ದಾನೆ. ಅವನು ಏದೆನ್‌ ತೋಟದಲ್ಲೇ ದೇವರ ಬಗ್ಗೆ ಸುಳ್ಳು ಹೇಳಿದ. ದೇವರು ಸ್ವಾರ್ಥಿ, ಮನುಷ್ಯರಿಗೆ ಒಳ್ಳೇದು ಮಾಡಲ್ಲ. ಅವರನ್ನ ಚೆನ್ನಾಗಿ ನೋಡ್ಕೊಳಲ್ಲ ಅಂತೆಲ್ಲ ಸುಳ್ಳುಗಳನ್ನ ಹಬ್ಬಿಸಿದ್ದಾನೆ. (ಆದಿ. 3:1, 4, 5) ಇದನ್ನ ಜನ್ರ ತಲೆಯಲ್ಲಿ ತುಂಬಿಸೋದನ್ನ ಅವನು ಇನ್ನೂ ಬಿಟ್ಟಿಲ್ಲ. ಯಾರೆಲ್ಲಾ ‘ಸತ್ಯನ ಪ್ರೀತಿಸಲ್ವೋ’ ಅವರು ನೀತಿಗೆಟ್ಟ ಮತ್ತು ಕೆಟ್ಟ ಕೆಲಸಗಳನ್ನ ಮಾಡೋ ತರ ಮಾಡ್ತಾನೆ.​—ರೋಮ. 1:25-31.

4. ಯೆಹೋವ ‘ಸತ್ಯದ ದೇವರು’ ಅಂತ ಹೇಗೆ ತೋರಿಸ್ಕೊಟ್ಟಿದ್ದಾನೆ? (ಚಿತ್ರನೂ ನೋಡಿ.)

4 ಯೆಹೋವ ‘ಸತ್ಯದ ದೇವರು.’ ತನ್ನನ್ನ ಪ್ರೀತಿಸೋರಿಗೆ ಸತ್ಯ ಹೇಳ್ಕೊಡ್ತಾನೆ. (ಕೀರ್ತ. 31:5) ಹೀಗೆ ಅವರು ಸೈತಾನ ಹೇಳ್ಕೊಡ್ತಿರೋ ಸುಳ್ಳಿಗೆ ಮರುಳಾಗದೇ ಇರೋ ತರ ಸಹಾಯ ಮಾಡ್ತಿದ್ದಾನೆ. ಬೇರೆಯವರಿಗೆ ಮೋಸ ಮಾಡಬಾರದು, ಕೆಟ್ಟದು ಮಾಡಬಾರದು ಅಂತ ಕಲಿಸ್ತಿದ್ದಾನೆ. ಯೆಹೋವ ಹೇಳೋ ತರ ನಡ್ಕೊಳ್ತಾ ಇರೋದ್ರಿಂದ ಆತನ ಜನ್ರು ಗೌರವದಿಂದ, ನೆಮ್ಮದಿಯಿಂದ ಬದುಕ್ತಿದ್ದಾರೆ. (ಜ್ಞಾನೋ. 13:5, 6) ನೀವೂ ಯೆಹೋವನ ಬಗ್ಗೆ ಕಲ್ತು, ಬೈಬಲಲ್ಲಿ ಇರೋ ತರ ನಡ್ಕೊಳ್ತಾ ಇರೋದ್ರಿಂದ ನಿಮ್ಮ ಜೀವನದಲ್ಲೂ ಇದು ನಿಜ ಆಗಿದೆ ಅಲ್ವಾ? ಯೆಹೋವ ಹೇಳಿರೋದೆಲ್ಲ ನಮ್ಮ ಒಳ್ಳೇದಕ್ಕೇ ಅಂತ ನಿಮಗೆ ಈಗ ಅರ್ಥ ಆಗಿದೆ. (ಕೀರ್ತ. 77:13) ಇದ್ರಿಂದ ನೀವು ಇನ್ಮುಂದೆ ದೇವರ ಮಾತು ಕೇಳಬೇಕಂತ ನಿರ್ಧಾರ ಮಾಡಿದ್ದೀರ. (ಮತ್ತಾ. 6:33) ದೇವರ ಮೇಲೆ ಸೈತಾನ ಹಾಕಿರೋ ಆರೋಪ ಸುಳ್ಳು ಅಂತ ತೋರಿಸಬೇಕು ಅಂದ್ಕೊಂಡಿದ್ದೀರ. ಆದ್ರೆ ಅದನ್ನ ಹೇಗೆ ಮಾಡೋದು?

5. ಸತ್ಯ ಮತ್ತು ನೀತಿನ ನೀವು ಪ್ರೀತಿಸ್ತೀರ ಅಂತ ಹೇಗೆ ತೋರಿಸಿಕೊಡ್ತೀರಾ?

5 “ಯೆಹೋವನ ಬಗ್ಗೆ ಸೈತಾನ ಹೇಳಿರೋ ಸುಳ್ಳುಗಳನ್ನ ನಾನು ನಂಬಲ್ಲ. ಯೆಹೋವನಿಗೆ ಮಾತ್ರನೇ ನನ್ನನ್ನ ಆಳೋ ಹಕ್ಕಿದೆ. ಆತನು ಹೇಳೋ ಹಾಗೇ ಜೀವಿಸ್ತೀನಿ” ಅಂತ ನೀವು ನಿಮ್ಮ ಜೀವನದಲ್ಲಿ ತೋರಿಸಬಹುದು. ಹೇಗೆ? ಯೆಹೋವನಿಗೆ ಪ್ರಾರ್ಥನೆ ಮಾಡಿ ಸಮರ್ಪಿಸ್ಕೊಳ್ಳಿ, ದೀಕ್ಷಾಸ್ನಾನ ತಗೊಳ್ಳಿ. ಆಗ ನೀವು ತೋರಿಸ್ಕೊಡ್ತೀರ. ಸತ್ಯ ಮತ್ತು ನೀತಿ ಮೇಲೆ ಪ್ರೀತಿ ಜಾಸ್ತಿ ಆದಾಗ ನೀವೇ ದೀಕ್ಷಾಸ್ನಾನ ತಗೊಳ್ಳೋಕೆ ಮುಂದೆ ಬರ್ತೀರ.

ನೀವು ಯೇಸುನ ಪ್ರೀತಿಸೋದ್ರಿಂದ

6. ನೀವ್ಯಾಕೆ ಯೇಸುನ ಪ್ರೀತಿಸ್ತೀರಾ? (ಕೀರ್ತನೆ 45:4)

6 ನೀವ್ಯಾಕೆ ಯೇಸುನ ಪ್ರೀತಿಸ್ತೀರಾ? ಅದಕ್ಕೆ ಕಾರಣ ಕೀರ್ತನೆ 45:4ರಲ್ಲಿದೆ (ಓದಿ.) ಸತ್ಯ, ನೀತಿ ಮತ್ತು ದೀನತೆಯನ್ನ ಯೇಸು ತುಂಬಾ ಪ್ರೀತಿಸ್ತಾನೆ. ನೀವು ಸತ್ಯ ಮತ್ತು ನೀತಿನ ಪ್ರೀತಿಸ್ತೀರ ಅಂದ್ಮೇಲೆ ಯೇಸುವನ್ನೂ ಖಂಡಿತ ಪ್ರೀತಿಸ್ತೀರ. ಯೇಸು, ಸತ್ಯ ಮತ್ತು ನೀತಿಯ ಪರವಾಗಿ ಧೈರ್ಯದಿಂದ ನಿಂತನು. (ಯೋಹಾ. 18:37) ಅಷ್ಟೇ ಅಲ್ಲ, ದೀನತೆಯನ್ನೂ ತೋರಿಸಿದನು. ಹೇಗೆ?

7. ಯೇಸು ತೋರಿಸಿದ ದೀನತೆ ನಿಮಗೆ ಯಾಕೆ ಇಷ್ಟ?

7 ಯೇಸು ಹೇಗೆ ದೀನತೆ ತೋರಿಸಿದನು? ಯೇಸುನ ಜನ್ರು ಹೊಗಳುವಾಗ ಇದೆಲ್ಲಾ ಯೆಹೋವನಿಂದನೇ ಆಯ್ತು ಅಂತ ಹೇಳ್ತಿದ್ದನು. ಆ ಎಲ್ಲಾ ಹೊಗಳಿಕೆ ಯೆಹೋವನಿಗೆ ಸಿಗೋ ತರ ನಡ್ಕೊಂಡನು. (ಮಾರ್ಕ 10:17, 18; ಯೋಹಾ. 5:19) ಯೇಸು ತೋರಿಸಿದ ದೀನತೆ ಬಗ್ಗೆ ತಿಳ್ಕೊಂಡಾಗ ನಿಮಗೆ ಹೇಗೆ ಅನಿಸುತ್ತೆ? ಆತನ ತರ ಇರ್ಬೇಕು ಅಂತ ಅನಿಸುತ್ತೆ ಅಲ್ವಾ? ಆತನ ಮೇಲಿರೋ ಪ್ರೀತಿ ಇನ್ನೂ ಜಾಸ್ತಿ ಆಗುತ್ತೆ ಅಲ್ವಾ? ಯೇಸು ಯಾಕೆ ಅಷ್ಟು ದೀನತೆ ತೋರಿಸಿದನು? ಯಾಕಂದ್ರೆ ಆತನು ಯೆಹೋವನ ತರಾನೇ ದೀನನಾಗಿ ಇರೋಕೆ ಇಷ್ಟ ಪಟ್ಟನು.​—ಕೀರ್ತ. 18:35; ಇಬ್ರಿ. 1:3.

8. ಯೇಸು ನಮ್ಮ ರಾಜ ಆಗಿರೋದಕ್ಕೆ ನಾವ್ಯಾಕೆ ಖುಷಿ ಪಡ್ತೀವಿ?

8 ಯೇಸು ಒಬ್ಬ ಒಳ್ಳೇ ರಾಜ. ಆತನಷ್ಟು ಚೆನ್ನಾಗಿ ನಮ್ಮನ್ನ ಆಳೋಕೆ ಬೇರೆ ಯಾರಿಂದಾನೂ ಆಗಲ್ಲ. ಯಾಕಂದ್ರೆ ಯೆಹೋವನೇ ಆತನಿಗೆ ತರಬೇತಿ ಮತ್ತು ಅಧಿಕಾರ ಕೊಟ್ಟಿದ್ದಾನೆ. (ಯೆಶಾ. 50:4, 5) ಅಷ್ಟೇ ಅಲ್ಲ, ಯೇಸು ನಮ್ಮನ್ನ ತುಂಬಾ ಪ್ರೀತಿಸ್ತಾನೆ. ನಮಗೋಸ್ಕರ ತನ್ನ ಪ್ರಾಣನೇ ತ್ಯಾಗ ಮಾಡಿದ್ದಾನೆ. (ಯೋಹಾ. 13:1) ಹಾಗಾಗಿ ನಾವು ಕೂಡ ನಮ್ಮ ರಾಜನನ್ನ ಪ್ರೀತಿಸ್ತೀವಿ. ತನ್ನನ್ನ ಪ್ರೀತಿಸೋರನ್ನ ಯೇಸು, ಸ್ನೇಹಿತರು ಅಂತ ಕರೆದನು. ಅವರು ತನ್ನ ಆಜ್ಞೆಗಳನ್ನ ಪಾಲಿಸ್ತಾರೆ ಅಂತನೂ ಹೇಳಿದನು. (ಯೋಹಾ. 14:15; 15:14, 15) ಯೆಹೋವ ದೇವರ ಮಗನ ಫ್ರೆಂಡ್‌ ಅಂತ ಕರೆಸ್ಕೊಂಡಾಗ ನಮಗೆ ಎಷ್ಟು ಹೆಮ್ಮೆಯಾಗುತ್ತೆ ಅಲ್ವಾ?

9. ಯೇಸು ತರ ನಾವ್ಯಾಕೆ ದೀಕ್ಷಾಸ್ನಾನ ತಗೊಳ್ತೀವಿ?

9 ದೀಕ್ಷಾಸ್ನಾನ ತಗೊಳಿ ಅಂತ ಯೇಸು ಆಜ್ಞೆ ಕೊಟ್ಟಿದ್ದಷ್ಟೇ ಅಲ್ಲ, ತಾನೂ ದೀಕ್ಷಾಸ್ನಾನ ತಗೊಂಡು ನಮಗೆ ಮಾದರಿ ಇಟ್ಟನು. (ಮತ್ತಾ. 28:19, 20) ಆದ್ರೆ ಯೇಸು ತಗೊಂಡ ದೀಕ್ಷಾಸ್ನಾನಕ್ಕೂ ನಾವು ತಗೊಳ್ತಿರೋ ದೀಕ್ಷಾಸ್ನಾನಕ್ಕೂ ಕೆಲವು ವ್ಯತ್ಯಾಸಗಳಿವೆ, ಹೋಲಿಕೆಗಳೂ ಇವೆ. (“ ಯೇಸು ತಗೊಂಡಿರೋ ದೀಕ್ಷಾಸ್ನಾನಕ್ಕೂ ನಾವು ತಗೊಳ್ತಿರೋ ದೀಕ್ಷಾಸ್ನಾನಕ್ಕೂ ಏನ್‌ ವ್ಯತ್ಯಾಸ?” ಅನ್ನೋ ಚೌಕ ನೋಡಿ.) ದೇವರ ಇಷ್ಟವನ್ನ ಮಾಡ್ತೀನಿ ಅಂತ ತೋರಿಸೋಕೆ ಯೇಸು ದೀಕ್ಷಾಸ್ನಾನ ತಗೊಂಡನು. (ಇಬ್ರಿ. 10:7) ಅದೇ ತರ ನಾವು ಕೂಡ ಇನ್ಮೇಲೆ ಯೆಹೋವನ ಸೇವೆನೇ ನಮ್ಮ ಜೀವನದಲ್ಲಿ ಮುಖ್ಯ ಅಂತ ತೋರಿಸೋಕೆ ದೀಕ್ಷಾಸ್ನಾನ ತಗೊಳ್ತೀವಿ. ನಾವು ಇನ್ಮುಂದೆ ನಮಗೆ ಇಷ್ಟ ಬಂದ ಹಾಗಲ್ಲ, ಯೆಹೋವನಿಗೆ ಇಷ್ಟ ಆಗೋ ತರ ಜೀವಿಸ್ತೀವಿ ಅಂತ ತೋರಿಸ್ತೀವಿ. ಹೀಗೆ ನಮ್ಮ ಗುರು ಯೇಸು ಕ್ರಿಸ್ತನ ತರಾನೇ ನಡ್ಕೊಳ್ತೀವಿ.

10. ನಿಮಗೆ ಯೇಸು ಮೇಲಿರೋ ಪ್ರೀತಿ ದೀಕ್ಷಾಸ್ನಾನ ತಗೊಳ್ಳೋಕೆ ಸಹಾಯ ಮಾಡುತ್ತಾ?

10 ಯೆಹೋವ ತನ್ನ ಒಬ್ಬನೇ ಮಗ ಯೇಸುವನ್ನ ರಾಜನಾಗಿ ನೇಮಿಸಿದ್ದಾನೆ ಅಂತ ನೀವು ಒಪ್ಕೊಂಡ್ರಿ. ಯೇಸು ಯಾವಾಗ್ಲೂ ಯೆಹೋವನ ತರಾನೇ ದೀನತೆಯಿಂದ ನಡ್ಕೊಳ್ತಾನೆ ಅಂತ ಕಲಿತ್ರಿ. ಆತನು ಅಳ್ತಿದ್ದವರನ್ನ ಸಮಾಧಾನ ಮಾಡಿದನು, ಹಸಿದವ್ರಿಗೆ ಊಟ ಕೊಟ್ಟನು, ರೋಗಿಗಳನ್ನ ವಾಸಿ ಮಾಡಿದನು ಅಂತ ತಿಳ್ಕೊಂಡ್ರಿ. (ಮತ್ತಾ. 14:14-21) ಆತನು ನಮ್ಮ ನಾಯಕನಾಗಿ ಈಗ ಸಭೆಯನ್ನ ಹೇಗೆ ನಡೆಸ್ತಿದ್ದಾನೆ ಅಂತ ನಿಮಗೆ ಗೊತ್ತಿದೆ. (ಮತ್ತಾ. 23:10) ಅಷ್ಟೇ ಅಲ್ಲ, ದೇವರ ಆಳ್ವಿಕೆಯಲ್ಲಿ ರಾಜನಾಗಿ ನಮಗೋಸ್ಕರ ಇನ್ನು ಎಷ್ಟೋ ವಿಷ್ಯಗಳನ್ನ ಮಾಡ್ತಾನೆ ಅಂತ ನೀವು ಕಲಿತ್ರಿ. ನೀವು ಯೇಸುವನ್ನ ಪ್ರೀತಿಸ್ತೀರ ಅಂತ ಹೇಗೆ ತೋರಿಸ್ತೀರಾ? ಆತನ ತರಾನೇ ನಡ್ಕೊಂಡಾಗ ಅದನ್ನ ತೋರಿಸ್ತೀರ. (ಯೋಹಾ. 14:21) ಆತನ ತರ ನೀವು ಯೆಹೋವನಿಗೆ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ತಗೊಂಡಾಗ ಯೇಸುನ ಪ್ರೀತಿಸೋಕೆ ಶುರುಮಾಡ್ತೀರ.

ನೀವು ಯೆಹೋವ ದೇವರನ್ನ ಪ್ರೀತಿಸೋದ್ರಿಂದ

11. ದೀಕ್ಷಾಸ್ನಾನ ತಗೊಳ್ಳೋಕೆ ಮುಖ್ಯ ಕಾರಣ ಏನು?

11 ನೀವು ದೀಕ್ಷಾಸ್ನಾನ ತಗೊಳ್ಳೋಕೆ ಮುಖ್ಯ ಕಾರಣ ಏನು ಗೊತ್ತಾ? ಅದೇನು ಅಂತ ಯೇಸು ಹೇಳಿದ ಮಾತುಗಳಿಂದ ಗೊತ್ತಾಗುತ್ತೆ. ಆತನು “ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಮತ್ತು ಪೂರ್ಣ ಶಕ್ತಿಯಿಂದ ಪ್ರೀತಿಸಬೇಕು” ಅಂತ ಹೇಳಿದನು. (ಮಾರ್ಕ 12:30) ನೀವೂ ದೇವರನ್ನ ಇದೇ ತರ ಪ್ರೀತಿಸ್ತೀರ ಅಲ್ವಾ?

ನೀವು ಖುಷಿಯಾಗಿರೋಕೆ ಬೇಕಾದ ಎಲ್ಲವನ್ನ ಯೆಹೋವ ಕೊಟ್ಟಿದ್ದಾನೆ, ಮುಂದೆನೂ ಕೊಡ್ತಾನೆ (ಪ್ಯಾರ 12-13 ನೋಡಿ)

12. ನೀವು ಯೆಹೋವನನ್ನ ಯಾಕೆ ಪ್ರೀತಿಸ್ತೀರ? (ಚಿತ್ರನೂ ನೋಡಿ.)

12 ನಾವು ಯೆಹೋವನನ್ನ ಪ್ರೀತಿಸೋಕೆ ತುಂಬಾ ಕಾರಣಗಳಿವೆ. ಉದಾಹರಣೆಗೆ ಯೆಹೋವನೇ “ಜೀವದ ಮೂಲ.” ಅಂದ್ರೆ ನಮ್ಮನ್ನ ಸೃಷ್ಟಿಸಿದ್ದು ಆತನೇ. ಅಷ್ಟೇ ಅಲ್ಲ, ಆತನೇ ನಮಗೆ “ಎಲ್ಲ ಒಳ್ಳೆ ಬಹುಮಾನ, ಒಳ್ಳೆ ವರ” ಕೊಟ್ಟಿದ್ದಾನೆ. (ಕೀರ್ತ. 36:9; ಯಾಕೋ. 1:17) ನಮ್ಮ ಪ್ರೀತಿಯ ಅಪ್ಪ ಯೆಹೋವ ನಾವು ಖುಷಿಯಾಗಿರೋಕೆ ಬೇಕಾಗಿರೋದನ್ನೆಲ್ಲಾ ಕೊಟ್ಟಿದ್ದಾನೆ.

13. ಬಿಡುಗಡೆ ಬೆಲೆ ಯಾಕೆ ಒಂದು ಸ್ಪೆಷಲ್‌ ಗಿಫ್ಟ್‌ ಆಗಿದೆ?

13 ಯೆಹೋವ ಕೊಟ್ಟ ಬಿಡುಗಡೆ ಬೆಲೆ ಅನ್ನೋ ಗಿಫ್ಟನ್ನ ನಾವು ಯಾವುದಕ್ಕೂ ಹೋಲಿಸಕ್ಕಾಗಲ್ಲ. ನಾವು ಯಾಕೆ ಹಾಗೆ ಹೇಳಬಹುದು? ಯೆಹೋವ ಮತ್ತು ಯೇಸು ಮಧ್ಯ ಇದ್ದ ಸಂಬಂಧದ ಬಗ್ಗೆ ಸ್ವಲ್ಪ ಯೋಚ್ನೆ ಮಾಡಿ. “ನನ್ನ ಅಪ್ಪ ನನ್ನನ್ನ ತುಂಬ ಪ್ರೀತಿಸ್ತಾನೆ” ಮತ್ತು “ನಾನು ನನ್ನ ಅಪ್ಪನನ್ನ . . . ಪ್ರೀತಿಸ್ತೀನಿ” ಅಂತ ಯೇಸುನೇ ಹೇಳಿದನು. (ಯೋಹಾ. 10:17; 14:31) ಅವ್ರಿಬ್ರೂ ಕೋಟಿಗಟ್ಟಲೆ ವರ್ಷಗಳಿಂದ ಒಟ್ಟಿಗೆ ಇದ್ದವರು. ಹಾಗಾಗಿ, ಅವ್ರ ಮಧ್ಯ ತುಂಬ ಪ್ರೀತಿ ಇತ್ತು. (ಜ್ಞಾನೋ. 8:22, 23, 30) ಯೆಹೋವ ತನ್ನ ಮಗನನ್ನ ನಮಗೋಸ್ಕರ ಕಳಿಸ್ಕೊಟ್ಟನು. ಅಷ್ಟೇ ಅಲ್ಲ, ಚಿತ್ರಹಿಂಸೆ ಅನುಭವಿಸಿ ಸಾಯೋಕೂ ಬಿಟ್ಟನು. ಇದನ್ನೆಲ್ಲ ನೋಡುವಾಗ ಯೆಹೋವನಿಗೆ ಎಷ್ಟು ದುಃಖ ಆಗಿರಬೇಕಲ್ವಾ? ಆತನ ಹೃದಯಾನೇ ಹಿಂಡಿದ ತರ ಆಗಿರ್ಬೇಕು. ಇದನ್ನೆಲ್ಲಾ ಯಾಕೆ ಮಾಡಿದನು? ನಾವೆಲ್ರೂ ಅಂದ್ರೆ ನೀವು ಕೂಡ ಶಾಶ್ವತ ಜೀವ ಪಡಿಬೇಕು ಅಂತ ಇದನ್ನೆಲ್ಲ ಮಾಡಿದನು. (ಯೋಹಾ. 3:16; ಗಲಾ. 2:20) ಯೆಹೋವನನ್ನ ಪ್ರೀತಿಸೋಕೆ ಇದಕ್ಕಿಂತ ದೊಡ್ಡ ಕಾರಣ ಬೇಕಾ?

14. ನಿಮ್ಮ ಜೀವನದ ಗುರಿ ಏನಾಗಿರಬೇಕು?

14 ನೀವು ಯೆಹೋವನ ಬಗ್ಗೆ ತಿಳ್ಕೊಳ್ತಾ ತಿಳ್ಕೊಳ್ತಾ ಆತನ ಮೇಲೆ ಪ್ರೀತಿ ಬೆಳೆಸ್ಕೊಂಡ್ರಿ. ಇದ್ರಿಂದ ಆತನಿಗೆ ಇನ್ನೂ ಹತ್ರ ಆಗಬೇಕು ಅಂತ ನಿಮಗೆ ಅನಿಸ್ತಿದೆ. ನೀವು ಈಗಷ್ಟೇ ಅಲ್ಲ ಯಾವಾಗ್ಲೂ ಆತನ ಫ್ರೆಂಡ್‌ ಆಗಿರೋಕೆ ಆಗುತ್ತೆ. ಆತನ ಫ್ರೆಂಡ್‌ ಆಗಿರೋ ನೀವು ಆತನಿಗೆ ಸಂತೋಷ ಆಗೋ ತರ ಜೀವಿಸಬೇಕು ಅಂತ ಯೆಹೋವ ಇಷ್ಟಪಡ್ತಾನೆ. (ಜ್ಞಾನೋ. 23:15, 16) ನೀವು ಆತನಿಗೆ ಇಷ್ಟ ಆಗೋ ತರ ನಡ್ಕೊಂಡಾಗ ಆತನನ್ನ ಪ್ರೀತಿಸ್ತೀರ ಅಂತ ಗೊತ್ತಾಗುತ್ತೆ. (1 ಯೋಹಾ. 5:3) ಹಾಗಾಗಿ ಆತನಿಗೆ ಯಾವಾಗ್ಲೂ ಖುಷಿ ತರೋ ರೀತಿಯಲ್ಲಿ ನಡ್ಕೊಬೇಕು ಅನ್ನೋದೇ ನಿಮ್ಮ ಜೀವನದ ಗುರಿ ಆಗಿರಬೇಕು.

15. ಯೆಹೋವನ ಮೇಲೆ ಪ್ರೀತಿ ಇದೆ ಅಂತ ನೀವು ಹೇಗೆ ತೋರಿಸ್ತೀರ?

15 ಯೆಹೋವನ ಮೇಲೆ ನಿಮಗೆ ಪ್ರೀತಿ ಇದೆ ಅಂತ ಹೇಗೆ ತೋರಿಸ್ತೀರ? ಮೊದ್ಲು ನೀವು ಯೆಹೋವನಿಗೆ ಪ್ರಾರ್ಥನೆ ಮಾಡಿ ನಿಮ್ಮನ್ನ ಆತನಿಗೆ ಸಮರ್ಪಿಸ್ಕೊಳ್ಳಬೇಕು. (ಕೀರ್ತ. 40:8) ಆಮೇಲೆ, ಆ ಸಮರ್ಪಣೆ ಎಲ್ರಿಗೂ ಗೊತ್ತಾಗೋಕೆ ದೀಕ್ಷಾಸ್ನಾನ ತಗೊಬೇಕು. ಈ ಲೇಖನದಲ್ಲಿ ನೋಡಿದ ತರ, ಇದು ನಿಮ್ಮ ಜೀವನದಲ್ಲಿ ಒಂದು ದೊಡ್ಡ ತಿರುಗುಬಿಂದು ಆಗಿರುತ್ತೆ. ಒಂದು ಹೊಸ ಜೀವನ ಶುರುಮಾಡಿದ ತರ ಇರುತ್ತೆ. ಇನ್ಮೇಲೆ ಯೆಹೋವನಿಗೋಸ್ಕರನೇ ಜೀವಿಸ್ತೀರ. (ರೋಮ. 14:8; 1 ಪೇತ್ರ 4:1, 2) ಇದು ನೀವು ಜೀವನದಲ್ಲಿ ಮಾಡೋ ದೊಡ್ಡ ನಿರ್ಧಾರ. ಇದ್ರಿಂದ ನಿಮ್ಮ ಜೀವನದಲ್ಲಿ ನೀವು ಯಾವಾಗ್ಲೂ ಖುಷಿಯಾಗಿ ಇರ್ತೀರ. ಅದು ಹೇಗೆ?

16. ಕೀರ್ತನೆ 41:12ರಲ್ಲಿ ಹೇಳೋ ತರ ತನಗೋಸ್ಕರ ಸಮರ್ಪಿಸ್ಕೊಂಡವರನ್ನ ಯೆಹೋವ ಹೇಗೆ ನೋಡ್ಕೊಳ್ತಾನೆ?

16 ಯೆಹೋವ ತುಂಬಾ ಉದಾರಿ. ಆತನಿಗೆ ನೀವು ಏನೇ ಕೊಟ್ರೂ ಆತನು ಅದನ್ನ ನಿಮಗೆ 100 ಪಟ್ಟು ಜಾಸ್ತಿ ವಾಪಸ್‌ ಕೊಡ್ತಾನೆ. (ಮಾರ್ಕ 10:29, 30) ನೀವು ಖುಷಿಖುಷಿಯಾಗಿ ಇರೋ ತರ, ನಿಮ್ಮ ಜೀವನ ಸಾರ್ಥಕ ಆಗೋ ತರ, ಯಾವ ಕೊರತೆನೂ ಇಲ್ಲದೆ ಇರೋ ತರ ಆತನು ನಿಮ್ಮನ್ನ ನೋಡ್ಕೊಳ್ತಾನೆ. ನೀವು ದೀಕ್ಷಾಸ್ನಾನ ತಗೊಂಡಾಗ ನಿಮ್ಮ ಹೊಸ ಜೀವನದ ಪ್ರಯಾಣ ಶುರು ಆಗುತ್ತೆ. ಯೆಹೋವನ ಜೊತೆ ನೀವು ಮಾಡೋ ಈ ಪ್ರಯಾಣ ಯಾವತ್ತೂ ಕೊನೆಯಾಗಲ್ಲ. ಯೆಹೋವನ ಮೇಲೆ ನಿಮಗಿರೋ ಪ್ರೀತಿ ಬೆಳಿತಾ ಹೋಗುತ್ತೆ. ಅಷ್ಟೇ ಅಲ್ಲ, ಯೆಹೋವನ ತರ ನೀವು ಕೂಡ ಶಾಶ್ವತವಾಗಿ ಜೀವಿಸ್ತೀರ.​—ಕೀರ್ತನೆ 41:12 ಓದಿ.

17. ನಿಮ್ಮ ಹತ್ರ ಇರೋ ಯಾವುದನ್ನ ಯೆಹೋವನಿಗೆ ಕೊಡೋಕಾಗುತ್ತೆ?

17 ನೀವು ಸಮರ್ಪಣೆ ಮತ್ತು ದೀಕ್ಷಾಸ್ನಾನ ತಗೊಳ್ಳೋಕೆ ಮಾಡ್ತಿರೋ ಒಂದೊಂದು ಪ್ರಯತ್ನವನ್ನೂ ನೋಡುವಾಗ ಯೆಹೋವನಿಗೆ ತುಂಬಾ ಖುಷಿ ಆಗುತ್ತೆ. ನೀವು ಜೀವನದಲ್ಲಿ ಖುಷಿಯಾಗಿರೋಕೆ ಬೇಕಾಗಿರೋದನ್ನೆಲ್ಲಾ ಆತನು ನಿಮಗೆ ಕೊಟ್ಟಿದ್ದಾನೆ. ಆದ್ರೆ ಇಡೀ ವಿಶ್ವನ ಸೃಷ್ಟಿ ಮಾಡಿದ ಯೆಹೋವ ಇಷ್ಟ ಪಡೋ ಒಂದು ವಿಷ್ಯ ನಿಮ್ಮ ಹತ್ರ ಇದೆ. ಅದೇನು ಗೊತ್ತಾ? ನಿಯತ್ತಿಂದ ಆತನ ಸೇವೆ ಮಾಡಬೇಕು ಅನ್ನೋ ಸಿದ್ಧಮನಸ್ಸು. (ಯೋಬ 1:8; 41:11; ಜ್ಞಾನೋ. 27:11) ಅದನ್ನ ನೀವು ಆತನಿಗೆ ಕೊಟ್ಟಾಗ ನಿಮ್ಮ ಜೀವನಕ್ಕೆ ನಿಜವಾದ ಅರ್ಥ ಸಿಗುತ್ತೆ. ಅಷ್ಟೇ ಅಲ್ಲ, ಯೆಹೋವನ ಮೇಲೆ ನಿಮಗಿರೋ ಪ್ರೀತಿ ದೀಕ್ಷಾಸ್ನಾನ ತಗೊಬೇಕು ಅನ್ನೋ ಆಸೆಯನ್ನೂ ಜಾಸ್ತಿ ಮಾಡುತ್ತೆ.

ಇನ್ನೂ ಯಾಕೆ ಕಾಯ್ತಾ ಇದ್ದೀರಾ?

18. ನೀವು ಯಾವ ಪ್ರಶ್ನೆಗಳನ್ನ ಕೇಳ್ಕೊಬೇಕು?

18 ನೀವು ದೀಕ್ಷಾಸ್ನಾನ ತಗೊಳ್ತೀರಾ? ಈ ಪ್ರಶ್ನೆಗೆ ಉತ್ರ ನಿಮ್ಮ ಹತ್ರ ಮಾತ್ರ ಇದೆ. ಇನ್ನೂ ತಗೊಂಡಿಲ್ಲಾಂದ್ರೆ ‘ನಾನು ಇನ್ನೂ ಯಾಕೆ ಕಾಯ್ತಾ ಇದ್ದೀನಿ?’ ಅಂತ ನಿಮ್ಮನ್ನೇ ಕೇಳ್ಕೊಳ್ಳಿ. (ಅ. ಕಾ. 8:36) ಆಮೇಲೆ ದೀಕ್ಷಾಸ್ನಾನ ತಗೊಳ್ಳೋಕೆ ನಿಮಗಿರೋ 3 ಕಾರಣಗಳನ್ನ ನೆನಪಿಸ್ಕೊಳ್ಳಿ. (1) ನೀವು ಸತ್ಯ ಮತ್ತು ನೀತಿಯನ್ನ ಪ್ರೀತಿಸ್ತೀರ. ಹಾಗಾಗಿ ‘ಎಲ್ರೂ ಸತ್ಯವನ್ನೇ ಮಾತಾಡೋ, ಒಳ್ಳೆಯವರಾಗಿ ನಡ್ಕೊಳ್ಳೋ ಸಮಯಕ್ಕಾಗಿ ನಾನು ಕಾಯ್ತಾ ಇದ್ದೀನಾ?’ ಅಂತ ನಿಮ್ಮನ್ನೇ ಕೇಳ್ಕೊಳ್ಳಿ. (2) ಯೇಸು ಕ್ರಿಸ್ತನನ್ನ ನೀವು ಪ್ರೀತಿಸ್ತೀರ. ಹಾಗಾಗಿ ‘ಆತನೇ ನಮಗೆ ರಾಜನಾಗಿ ಬರ್ಬೇಕು, ಆತನ ತರ ನಡ್ಕೊಬೇಕು ಅನ್ನೋ ಆಸೆ ನನಗೆ ಇದ್ಯಾ?’ ಅಂತ ಕೇಳ್ಕೊಳ್ಳಿ. (3) ನೀವು ಯೆಹೋವನನ್ನ ಪ್ರೀತಿಸ್ತೀರ. ಹಾಗಾಗಿ ‘ಯೆಹೋವನ ಹೃದಯಕ್ಕೆ ಸಂತೋಷ ತರೋ ರೀತಿಯಲ್ಲಿ ನಾನು ನಡ್ಕೊಬೇಕು ಅನ್ನೋ ಆಸೆ ನನಗೆ ಇದ್ಯಾ?’ ಅಂತ ಕೇಳ್ಕೊಳ್ಳಿ. ಈ ಪ್ರಶ್ನೆಗಳಿಗೆ ನಿಮ್ಮ ಉತ್ರ ಹೌದು ಅಂದ್ಮೇಲೆ ದೀಕ್ಷಾಸ್ನಾನ ತಗೊಳ್ಳೋಕೆ ಇನ್ನೂ ಯಾಕೆ ಕಾಯ್ತಾ ಇದ್ದೀರಾ?​—ಅ. ಕಾ. 16:33.

19. ದೀಕ್ಷಾಸ್ನಾನ ತಗೊಳ್ಳೋಕೆ ಹಿಂದೆ ಮುಂದೆ ಯೋಚ್ನೆ ಮಾಡಬಾರದು ಯಾಕೆ? ವಿವರಿಸಿ. (ಯೋಹಾನ 4:34)

19 ದೀಕ್ಷಾಸ್ನಾನ ತಗೊಳ್ಳೋಕೆ ಹಿಂದೆ ಮುಂದೆ ನೋಡ್ತಿದ್ದೀರಾ? ಹಾಗಾದ್ರೆ ಯೇಸು ಹೇಳಿದ ಉದಾಹರಣೆ ನೋಡಿ. (ಯೋಹಾನ 4:34 ಓದಿ.) ದೇವರ ಇಷ್ಟ ಮಾಡೋದನ್ನ ಯೇಸು ಊಟಕ್ಕೆ ಹೋಲಿಸಿದನು. ಯಾಕೆ? ನಾವು ಊಟ ಮಾಡೋದು ಆರೋಗ್ಯವಾಗಿ ಇರೋಕೆ, ನಮ್ಮ ಒಳ್ಳೇದಕ್ಕೆ ಅಲ್ವಾ? ಅದೇ ತರ ಯೆಹೋವ ಹೇಳೋದೆಲ್ಲಾ ನಮ್ಮ ಒಳ್ಳೇದಕ್ಕೆ. ಆತನಿಗೆ ನಮ್ಮ ಮೇಲೆ ಪ್ರೀತಿ ಇರೋದ್ರಿಂದನೇ ದೀಕ್ಷಾಸ್ನಾನ ತಗೊಳಿ ಅಂತ ಹೇಳ್ತಾ ಇದ್ದಾನೆ. (ಅ. ಕಾ. 2:38) ಯೆಹೋವ ಹೇಳೋದನ್ನ ಮಾಡಿದ್ರೆ ನಾವು ಖಂಡಿತ ಖುಷಿಯಾಗಿ ಇರ್ತೀವಿ. ನಿಮ್ಮ ಮುಂದೆ ನಿಮಗೆ ಇಷ್ಟವಾದ ಊಟ ತಂದಿಟ್ರೆ ಅದನ್ನ ತಿನ್ನೋಕೆ ಹಿಂದೆ ಮುಂದೆ ನೋಡ್ತಿರಾ? ಇಲ್ಲ ಅಲ್ವಾ. ಹಾಗಾದ್ರೆ ದೀಕ್ಷಾಸ್ನಾನ ತಗೊಳ್ಳೋಕೆ ಯಾಕೆ ಹಿಂದೆ ಮುಂದೆ ನೋಡ್ತಿದ್ದೀರಾ?

20. ಮುಂದಿನ ಲೇಖನದಲ್ಲಿ ನಾವೇನು ಕಲಿತೀವಿ?

20 ‘ದೀಕ್ಷಾಸ್ನಾನ ತಗೊಳ್ಳೋಕೆ ನಾನು ಇನ್ನೂ ರೆಡಿ ಇಲ್ಲ’ ಅಂತ ತುಂಬಾ ಜನ ಹೇಳ್ತಾರೆ. ನಿಜ, ಯೆಹೋವನಿಗೆ ಸಮರ್ಪಿಸ್ಕೊಂಡು ದೀಕ್ಷಾಸ್ನಾನ ತಗೊಳ್ಳೋದು ಒಂದು ಚಿಕ್ಕ ವಿಷ್ಯ ಅಲ್ಲ. ಅದು ನಮ್ಮ ಜೀವನದಲ್ಲಿ ಮಾಡೋ ಒಂದು ದೊಡ್ಡ ನಿರ್ಧಾರ. ಅದಕ್ಕೆ ಚೆನ್ನಾಗಿ ಯೋಚ್ನೆ ಮಾಡಿ. ಯಾಕಂದ್ರೆ ಅದಕ್ಕೆ ಸಮಯ ಹಿಡಿಯುತ್ತೆ. ತಯಾರಿನೂ ಮಾಡಬೇಕಾಗುತ್ತೆ. ಏನೆಲ್ಲಾ ತಯಾರಿ ಮಾಡಬೇಕು ಅನ್ನೋದನ್ನ ಮುಂದಿನ ಲೇಖನದಲ್ಲಿ ಕಲಿಯೋಣ.

ಗೀತೆ 106 ಯೆಹೋವನ ಸ್ನೇಹವನ್ನು ಗಳಿಸುವುದು

a ಬೈಬಲ್‌ ಸ್ಟಡಿ ತಗೊಳ್ತಾ ಇರೋರು ದೀಕ್ಷಾಸ್ನಾನ ತಗೊಳ್ಳೋದು ತುಂಬಾ ಮುಖ್ಯ. ತುಂಬ ಜನ ಈ ನಿರ್ಧಾರ ಮಾಡಿದ್ದಾರೆ. ಯಾಕೆ? ಯಾಕಂದ್ರೆ ಪ್ರೀತಿ ಇರೋದ್ರಿಂದ. ಯಾರ ಮೇಲೆ? ಯಾವುದರ ಮೇಲೆ? ಅದನ್ನ ಈ ಲೇಖನದಲ್ಲಿ ನೋಡೋಣ. ಅಷ್ಟೇ ಅಲ್ಲ, ದೀಕ್ಷಾಸ್ನಾನ ತಗೊಂಡ್ರೆ ಏನೆಲ್ಲಾ ಆಶೀರ್ವಾದ ಸಿಗುತ್ತೆ ಅಂತನೂ ನೋಡೋಣ.