ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 14

“ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ”

“ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ”

“ನಿಮ್ಮ ಮಧ್ಯ ಪ್ರೀತಿ ಇದ್ರೆ ಮಾತ್ರ ನೀವು ನನ್ನ ಶಿಷ್ಯರು ಅಂತ ಎಲ್ರಿಗೂ ಗೊತ್ತಾಗುತ್ತೆ.”​—ಯೋಹಾ. 13:35.

ಗೀತೆ 72 ಪ್ರೀತಿಯ ಗುಣವನ್ನು ಬೆಳೆಸುವುದು

ಈ ಲೇಖನದಲ್ಲಿ ಏನಿದೆ? a

ಯೆಹೋವನ ಜನ್ರು ತೋರಿಸಿರೋ ಪ್ರೀತಿನ ನೋಡಿ ಬೇರೆಯವ್ರಿಗೆ ಹೇಗನಿಸಿದೆ? (ಪ್ಯಾರ 1 ನೋಡಿ)

1. ಹೊಸದಾಗಿ ನಮ್ಮ ರಾಜ್ಯ ಸಭಾಗೃಹಕ್ಕೆ ಬಂದವ್ರಿಗೆ ಏನು ಇಷ್ಟ ಆಗುತ್ತೆ? (ಚಿತ್ರನೂ ನೋಡಿ.)

 ಒಬ್ಬ ದಂಪತಿ ಮೊದಲನೇ ಸಲ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಬಂದಿದ್ದಾರೆ. ಅವ್ರನ್ನ ಅಲ್ಲಿರೋ ಸಹೋದರ ಸಹೋದರಿಯರು ಪ್ರೀತಿಯಿಂದ ಸ್ವಾಗತಿಸ್ತಿದ್ದಾರೆ, ಎಲ್ರೂ ನಗುನಗುತ್ತಾ ಮಾತಾಡ್ತಿದ್ದಾರೆ. ಇದನ್ನ ನೋಡಿದಾಗ ಆ ದಂಪತಿಗೆ ಹೇಗೆ ಅನಿಸ್ತು? ಅವರು ಆ ಕೂಟ ಮುಗಿಸಿ ಮನೆಗೆ ಹೋಗುವಾಗ ಹೆಂಡತಿ ಗಂಡನಿಗೆ ‘ಇಂಥ ಒಳ್ಳೇ ಜನ್ರನ್ನ ನಾನೆಲ್ಲೂ ನೋಡೇ ಇಲ್ಲ. ನಂಗೆ ಅಲ್ಲೇ ಇರಬೇಕು ಅಂತ ಅನಿಸ್ತಿತ್ತು. ತುಂಬ ಖುಷಿಯಾಗ್ತಿತ್ತು’ ಅಂತ ಹೇಳಿದ್ರು.

2. ಕೆಲವರು ಯಾಕೆ ಯೆಹೋವನಿಂದ ದೂರ ಹೋಗಿದ್ದಾರೆ?

2 ನಮಗೆ ಬೇರೆಲ್ಲೂ ಸಿಗದೆ ಇರೋ ಪ್ರೀತಿನ ನಮ್ಮ ಸಭೆಯಲ್ಲಿರೋ ಸಹೋದರ ಸಹೋದರಿಯರು ತೋರಿಸ್ತಾರೆ. ಆದ್ರೆ ಯಾರೂ ಪರಿಪೂರ್ಣರಲ್ಲ, ಚಿಕ್ಕ ಪುಟ್ಟ ತಪ್ಪುಗಳನ್ನ ಮಾಡ್ತಾರೆ. (1 ಯೋಹಾ. 1:8) ಕೆಲವೊಮ್ಮೆ ನಾವು ಸಹೋದರ ಸಹೋದರಿಯರ ಬಗ್ಗೆ ಜಾಸ್ತಿ ತಿಳ್ಕೊಂಡಾಗ ಅವ್ರ ತಪ್ಪುಗಳು ಕೂಡ ನಮಗೆ ಕಾಣುತ್ತೆ. (ರೋಮ. 3:23) ಆದ್ರೆ ದುಃಖ ತರೋ ವಿಷ್ಯ ಏನಂದ್ರೆ ಬೇರೆಯವ್ರ ತಪ್ಪುಗಳನ್ನ ನೋಡಿ ಕೆಲವರು ಯೆಹೋವನಿಂದ ದೂರ ಹೋಗಿದ್ದಾರೆ.

3. ಯೇಸುವಿನ ಶಿಷ್ಯರು ಯಾರು ಅಂತ ಜನ ಹೇಗೆ ತಿಳ್ಕೊಳ್ತಾರೆ? (ಯೋಹಾನ 13:34, 35)

3 ಈ ಲೇಖನದ ಮುಖ್ಯ ವಚನವನ್ನ ಇನ್ನೊಂದು ಸಲ ನೋಡಿ. (ಯೋಹಾನ 13:34, 35 ಓದಿ.) ಯೇಸುವಿನ ಶಿಷ್ಯರನ್ನ ಜನ ಹೇಗೆ ಗುರುತಿಸ್ತಾರೆ? ಅವ್ರಲ್ಲಿರೋ ಪರಿಪೂರ್ಣತೆಯನ್ನಲ್ಲ, ಪ್ರೀತಿಯನ್ನ ನೋಡಿ ಗುರುತಿಸ್ತಾರೆ. ಅಷ್ಟೇ ಅಲ್ಲ ಯೇಸು, ‘ಪ್ರೀತಿ ಇದ್ರೆ ನೀವು ನನ್ನ ಶಿಷ್ಯರು ಅಂತ ನಿಮಗೆ ಗೊತ್ತಾಗುತ್ತೆ’ ಅಂತ ಹೇಳಲಿಲ್ಲ, “ಎಲ್ರಿಗೂ ಗೊತ್ತಾಗುತ್ತೆ” ಅಂತ ಹೇಳಿದನು. ಅಂದ್ರೆ ಇದ್ರ ಅರ್ಥ ನಾವು ಒಬ್ರಿಗೊಬ್ರು ಪ್ರಾಣ ಕೊಡೋಷ್ಟರ ಮಟ್ಟಿಗೆ ಪ್ರೀತಿ ತೋರಿಸಿದ್ರೆ ಯೇಸುವಿನ ನಿಜವಾದ ಶಿಷ್ಯರು ನಾವೇ ಅಂತ ಬೇರೆಯವ್ರಿಗೂ ಗೊತ್ತಾಗುತ್ತೆ ಅಂತ ಆತನು ಹೇಳಿದನು.

4. ಯೆಹೋವನ ಸಾಕ್ಷಿಗಳ ಬಗ್ಗೆ ಕೆಲವ್ರ ಮನಸ್ಸಿಗೆ ಯಾವ ಪ್ರಶ್ನೆಗಳು ಬರುತ್ತೆ?

4 ಯೆಹೋವನನ್ನ ಆರಾಧಿಸದೆ ಇರೋ ಜನ್ರ ಮನಸ್ಸಿಗೆ ಈ ಪ್ರಶ್ನೆಗಳು ಬರಬಹುದು: ‘ಇವರು ಪ್ರೀತಿಯಿಂದ ನಡ್ಕೊಳ್ತಾ ಇದ್ದಾರೆ ಅಂದ ತಕ್ಷಣ ಇವ್ರೇ ಯೇಸುವಿನ ನಿಜವಾದ ಶಿಷ್ಯರು ಅಂತ ನಾವು ಹೇಗೆ ಹೇಳಕ್ಕಾಗುತ್ತೆ? ಯೇಸು ತನ್ನ ಅಪೊಸ್ತಲರಿಗೆ ಹೇಗೆ ಪ್ರೀತಿ ತೋರಿಸಿದನು? ಯೇಸು ತರ ಹೇಗೆ ಪ್ರೀತಿ ತೋರಿಸಕ್ಕಾಗುತ್ತೆ?’ ಈ ಪ್ರಶ್ನೆಗಳ ಬಗ್ಗೆ ನಾವು ಚೆನ್ನಾಗಿ ಯೋಚ್ನೆ ಮಾಡಬೇಕು. ಆಗ ನಾವು ಸಹೋದರ ಸಹೋದರಿಯರಿಗೆ ಮನಸಾರೆ ಪ್ರೀತಿ ತೋರಿಸ್ತೀವಿ. ಅವರು ತಪ್ಪು ಮಾಡಿದ್ರೂ ಮನಸ್ಸು ನೋಯಿಸಿದ್ರೂ ಪ್ರೀತಿಯಿಂದ ನಡ್ಕೊಳ್ತಾನೇ ಇರ್ತೀವಿ.​—ಎಫೆ. 5:2.

ಯೇಸುವಿನ ಶಿಷ್ಯರನ್ನ ಗುರುತಿಸೋಕೆ ಪ್ರೀತಿನೇ ಯಾಕೆ ಮುಖ್ಯ?

5. ಯೋಹಾನ 15:12, 13ರಲ್ಲಿ ಯೇಸು ಹೇಳಿದ ಪ್ರೀತಿಯ ವಿಶೇಷತೆ ಏನು?

5 ತನ್ನ ಶಿಷ್ಯರು ತೋರಿಸೋ ಪ್ರೀತಿ ತುಂಬ ವಿಶೇಷವಾಗಿರುತ್ತೆ ಅಂತ ಯೇಸು ಹೇಳಿದನು. (ಯೋಹಾನ 15:12, 13 ಓದಿ.) ಆತನು ಏನು ಹೇಳಿದನು ಅಂತ ನೋಡಿ. “ನಾನು ನಿಮ್ಮನ್ನ ಪ್ರೀತಿಸಿದ ಹಾಗೆ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು” ಅಂದನು. ಇದ್ರ ಅರ್ಥ ನಾವು ಸ್ವತ್ಯಾಗದ ಪ್ರೀತಿನ ತೋರಿಸ್ತೀವಿ. ಅಂದ್ರೆ ನಮ್ಮ ಸಹೋದರ ಸಹೋದರಿಯರಿಗೋಸ್ಕರ ನಮ್ಮ ಪ್ರಾಣ ಕೊಡೋಕೂ ರೆಡಿ ಇರ್ತೀವಿ ಅಂತ ಯೇಸು ಇಲ್ಲಿ ಹೇಳ್ತಿದ್ದಾನೆ. b

6. ಪ್ರೀತಿ ತೋರಿಸೋದು ಎಷ್ಟು ಮುಖ್ಯ ಅಂತ ಬೈಬಲ್‌ ಹೇಳುತ್ತೆ?

6 ಪ್ರೀತಿ ತೋರಿಸೋದು ತುಂಬ ಮುಖ್ಯ ಅಂತ ಬೈಬಲ್‌ ಕಲಿಸುತ್ತೆ. ಉದಾಹರಣೆಗೆ, “ದೇವರು ಪ್ರೀತಿಯಾಗಿದ್ದಾನೆ.” (1 ಯೋಹಾ. 4:8) “ನೀನು ನಿನ್ನನ್ನ ಪ್ರೀತಿಸೋ ತರ ಬೇರೆಯವ್ರನ್ನೂ ಪ್ರೀತಿಸಬೇಕು.” (ಮತ್ತಾ. 22:39) “ಪ್ರೀತಿ ಇರೋ ವ್ಯಕ್ತಿ ಯಾವಾಗ್ಲೂ ಬೇರೆಯವ್ರ ತಪ್ಪುಗಳನ್ನ ಕ್ಷಮಿಸ್ತಾನೆ.” (1 ಪೇತ್ರ 4:8) “ಪ್ರೀತಿ ಯಾವತ್ತೂ ಸೋತು ಹೋಗಲ್ಲ.” (1 ಕೊರಿಂ. 13:8) ಇಂಥ ವಚನಗಳು ತುಂಬ ಜನ್ರಿಗೆ ಇಷ್ಟ. ನಾವು ಪ್ರೀತಿ ಬೆಳೆಸ್ಕೊಬೇಕು ಮತ್ತು ಬೇರೆಯವ್ರಿಗೆ ತೋರಿಸ್ತಾ ಇರಬೇಕು ಅಂತ ಈ ವಚನಗಳಿಂದ ನಮಗೆ ಗೊತ್ತಾಗುತ್ತೆ.

7. ಜನ್ರು ಪ್ರೀತಿಯಿಂದ, ಒಗ್ಗಟ್ಟಿಂದ ಇರೋ ತರ ಸೈತಾನನಿಂದ ಯಾಕೆ ಮಾಡೋಕೆ ಆಗಲ್ಲ?

7 ‘ಸತ್ಯ ಧರ್ಮವನ್ನ ಕಂಡುಹಿಡಿಯೋದು ಹೇಗೆ? ಎಲ್ಲಾ ಧರ್ಮಗಳು ತಾವು ಹೇಳ್ತಿರೋದೇ ಸತ್ಯ ಅಂತ ಹೇಳ್ಕೊಳ್ತವೆ. ಆದ್ರೆ ಒಂದೊಂದು ಧರ್ಮ ದೇವರ ಬಗ್ಗೆ ಒಂದೊಂದು ತರ ಕಲಿಸ್ತಾ ಇದೆ’ ಅಂತ ತುಂಬ ಜನ ಹೇಳ್ತಾರೆ. ಯಾಕಂದ್ರೆ ಸೈತಾನ ಇವತ್ತು ತುಂಬ ಸುಳ್ಳು ಧರ್ಮಗಳನ್ನ ಶುರು ಮಾಡಿಬಿಟ್ಟಿದ್ದಾನೆ. ಅದಕ್ಕೆ ಸತ್ಯ ಧರ್ಮ ಯಾವುದು ಅಂತ ಜನ್ರಿಗೆ ಕಂಡುಹಿಡಿಯೋಕೆ ಕಷ್ಟ ಆಗಿಬಿಟ್ಟಿದೆ. ಲೋಕದಲ್ಲಿ ಇರೋ ಜನ್ರೆಲ್ಲ ಒಗ್ಗಟ್ಟಾಗಿ ಪ್ರೀತಿಯಿಂದ ಇರೋ ಸಂಘಟನೆಯನ್ನ ಸೈತಾನನಿಗೆ ಮಾಡೋಕೆ ಆಗಲ್ಲ. ಆದ್ರೆ ಇದನ್ನ ಯೆಹೋವನಿಂದ ಮಾತ್ರನೇ ಮಾಡೋಕೆ ಆಗೋದು. ಯಾಕಂದ್ರೆ, ನಿಜವಾದ ಪ್ರೀತಿ ಆತನಿಂದನೇ ಬಂದಿದೆ. ಪವಿತ್ರಶಕ್ತಿ ಮತ್ತು ದೇವರ ಆಶೀರ್ವಾದ ಇದ್ರೆನೇ ಜನ್ರು ಪ್ರೀತಿಯಿಂದ ಒಗ್ಗಟ್ಟಾಗಿ ಇರೋಕೆ ಆಗುತ್ತೆ. (1 ಯೋಹಾ. 4:7) ಅದಕ್ಕೇ ಯೇಸು, ತನ್ನ ಶಿಷ್ಯರು ನಿಸ್ವಾರ್ಥ ಪ್ರೀತಿಯನ್ನ ತೋರಿಸ್ತಾರೆ ಅಂತ ಹೇಳಿದನು.

8-9. ಯೆಹೋವನ ಸಾಕ್ಷಿಗಳು ಪ್ರೀತಿಯಿಂದ ನಡ್ಕೊಳ್ಳೋದನ್ನ ನೋಡುವಾಗ ಜನ್ರಿಗೆ ಹೇಗನಿಸಿದೆ?

8 ಯೇಸು ಹೇಳಿದ ಹಾಗೆ ಆತನ ಶಿಷ್ಯರು ಅಂದ್ರೆ ಯೆಹೋವನ ಸಾಕ್ಷಿಗಳು ಒಬ್ರಿಗೊಬ್ರು ಪ್ರೀತಿ ತೋರಿಸ್ತಾ ಇದ್ದಾರೆ. ಅದನ್ನ ಕಣ್ಣಾರೆ ನೋಡಿದ ಸಹೋದರ ಇಯನ್‌ ಏನು ಹೇಳ್ತಾರೆ ನೋಡಿ. ಅವರು ಮೊದಲನೇ ಸಲ ಅಧಿವೇಶನಕ್ಕೆ ಹಾಜರಾದ್ರು. ಅದು ಅವ್ರ ಮನೆ ಹತ್ರ ಇದ್ದ ಒಂದು ಸ್ಟೇಡಿಯಂನಲ್ಲಿ ನಡೀತು. ಕೆಲವು ತಿಂಗಳುಗಳ ಹಿಂದೆ ಇವರು ಈ ಕ್ರೀಡಾಂಗಣದಲ್ಲಿ ಒಂದು ಪಂದ್ಯ ನೋಡೋಕೆ ಹೋಗಿದ್ರು. ಆದ್ರೆ ಅವರು ನಮ್ಮ ಅಧಿವೇಶನದ ಬಗ್ಗೆ ಏನು ಹೇಳ್ತಾರೆ ನೋಡಿ. “ಇದಕ್ಕೆ ಮುಂಚೆ ಎಷ್ಟೋ ಸಲ ಈ ಕ್ರೀಡಾಂಗಣದಲ್ಲಿ ಬೇರೆಬೇರೆ ಕಾರ್ಯಕ್ರಮಕ್ಕೆ ನಾನು ಬಂದಿದ್ದೀನಿ. ಆದ್ರೆ ಯಾವುದೇ ಜಗಳ ಗಲಾಟೆ ಇಲ್ಲದೇ ನೀಟಾಗಿ ನಡೆಯೋ ಕಾರ್ಯಕ್ರಮನ ನಾನು ನೋಡಿದ್ದೇ ಇಲ್ಲ. ಯೆಹೋವನ ಸಾಕ್ಷಿಗಳು ತುಂಬ ಸಭ್ಯವಾಗಿ ನೀಟಾಗಿ ಡ್ರೆಸ್‌ ಹಾಕೊಂಡಿದ್ರು. ಅವ್ರ ಮಕ್ಕಳು ಕೂಡ ಗಲಾಟೆ ಮಾಡದೆ, ಚೇಷ್ಟೆ ಮಾಡದೆ ಭಾಷಣ ಕೇಳಿಸ್ಕೊಳ್ತಾ ಕೂತ್ಕೊಂಡಿದ್ರು. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿರೋ ಜನ್ರು ತುಂಬ ಶಾಂತಿಯಿಂದ ನೆಮ್ಮದಿಯಿಂದ ಇದ್ರು. ನಾನೂ ಅವ್ರ ತರಾನೇ ಇರಬೇಕು ಅಂತ ಆಸೆ ಪಡ್ತಿದ್ದೆ. ಅವತ್ತು ನಾನು ಭಾಷಣದಲ್ಲಿ ಏನು ಕೇಳಿದೆ ಅನ್ನೋದು ನನಗೆ ನೆನಪಿಲ್ಲ. ಆದ್ರೆ, ಯೆಹೋವನ ಸಾಕ್ಷಿಗಳು ತೋರಿಸಿದ ಪ್ರೀತಿ ನಂಗಿನ್ನೂ ನೆನಪಿದೆ” c ಅಂತ ಅವರು ಹೇಳ್ತಾರೆ. ಯೆಹೋವನ ಸಾಕ್ಷಿಗಳು ಈ ತರ ನಡ್ಕೊಳ್ಳೋಕೆ ಏನು ಕಾರಣ? ಅವ್ರಿಗೆ ಸಹೋದರ ಸಹೋದರಿಯರ ಮೇಲೆ ಪ್ರೀತಿ ಮತ್ತು ಗೌರವನೇ.

9 ಸಹೋದರ ಜಾನ್‌ಗೆ ಕೂಡ ಮೊದಲನೇ ಸಲ ನಮ್ಮ ಕೂಟಗಳಿಗೆ ಬಂದಾಗ ಹೀಗೇ ಅನಿಸ್ತು. ‘ಅಲ್ಲಿ ಇದ್ದವ್ರೆಲ್ಲಾ ನನಗೆ ತುಂಬ ದಿನಗಳಿಂದ ಪರಿಚಯ ಇರೋರ ತರ ನಡ್ಕೊಂಡ್ರು. ಸ್ನೇಹಿತರ ತರ ಮಾತಾಡಿದ್ರು. ಇವ್ರೆಲ್ಲಾ ದೇವರ ಮಕ್ಕಳು ಅಂತ ನನಗೆ ಅನಿಸ್ತು. ಕೊನೆಗೂ ಸತ್ಯ ಧರ್ಮ ಯಾವುದು ಅಂತ ನಂಗೆ ಗೊತ್ತಾಯ್ತು’ d ಅಂತ ಜಾನ್‌ ಹೇಳ್ತಾರೆ. ಎಷ್ಟೋ ಜನ್ರಿಗೆ ಯೆಹೋವನ ಸಾಕ್ಷಿಗಳ ಕೂಟಕ್ಕೆ ಮೊದಲನೇ ಸಲ ಬಂದಾಗ ಇವ್ರೇ ನಿಜ ಕ್ರೈಸ್ತರು ಅಂತ ಅನಿಸಿದೆ.

10. ನಾವು ಯಾವಾಗ ಇನ್ನೂ ಜಾಸ್ತಿ ಪ್ರೀತಿ ತೋರಿಸಬೇಕು? (ಪಾದಟಿಪ್ಪಣಿನೂ ನೋಡಿ.)

10 ನಾವು ಈಗಾಗ್ಲೇ ನೋಡಿದ ಹಾಗೆ ನಮ್ಮ ಸಹೋದರ ಸಹೋದರಿಯರು ಯಾರೂ ಪರಿಪೂರ್ಣರಲ್ಲ. ಕೆಲವೊಮ್ಮ ಅವ್ರ ಮಾತಲ್ಲಿ ನಮ್ಮ ಮನಸ್ಸು ನೋಯಿಸಿಬಿಡ್ತಾರೆ ಅಥವಾ ನಮಗೆ ಬೇಜಾರಾಗೋ ತರ ನಡ್ಕೊಬಿಡ್ತಾರೆ. e (ಯಾಕೋ. 3:2) ಆದ್ರೆ ಅಂಥ ಸಂದರ್ಭದಲ್ಲೇ ನಾವು ಇನ್ನೂ ಜಾಸ್ತಿ ಪ್ರೀತಿ ತೋರಿಸಬೇಕು. ಇದಕ್ಕೆ ಯೇಸು ನಮಗೆ ಒಳ್ಳೇ ಮಾದರಿ ಆಗಿದ್ದಾನೆ. ಅವನು ತೋರಿಸಿದ ಪ್ರೀತಿಯಿಂದ ನಾವೇನು ಕಲಿಬಹುದು ಅಂತ ಈಗ ನೋಡೋಣ.​—ಯೋಹಾ. 13:15.

ಯೇಸು ಅಪೊಸ್ತಲರಿಗೆ ಹೇಗೆ ಪ್ರೀತಿ ತೋರಿಸಿದನು?

ಅಪೊಸ್ತಲರು ತಪ್ಪು ಮಾಡಿದಾಗ್ಲೂ ಯೇಸು ಅವ್ರ ಜೊತೆ ಪ್ರೀತಿಯಿಂದ ನಡ್ಕೊಂಡನು (ಪ್ಯಾರ 11-13 ನೋಡಿ)

11. ಒಂದು ಸಲ ಯಾಕೋಬ ಮತ್ತು ಯೋಹಾನ ಏನು ಮಾಡಿದ್ರು? (ಚಿತ್ರನೂ ನೋಡಿ.)

11 ತನ್ನ ಶಿಷ್ಯರು ಯಾವತ್ತೂ ತಪ್ಪು ಮಾಡಲ್ಲ ಅಂತ ಯೇಸು ನೆನಸಲಿಲ್ಲ. ಕೆಲವು ಸಲ ಅವರು ತಪ್ಪುಗಳನ್ನ ಮಾಡಿದಾಗ ಅವ್ರನ್ನ ಪ್ರೀತಿಯಿಂದ ತಿದ್ದಿದನು. ಅವರು ಬದಲಾಗೋಕೆ, ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಸಹಾಯ ಮಾಡಿದನು. ಯೇಸು ರಾಜ ಆದಾಗ ಅವನ ಅಕ್ಕಪಕ್ಕದಲ್ಲಿ ಕೂತ್ಕೊಳ್ಳೋಕೆ ಯಾಕೋಬ ಮತ್ತು ಯೋಹಾನ ಆಸೆಪಟ್ರು. ಇದ್ರ ಬಗ್ಗೆ ಯೇಸು ಹತ್ರ ಮಾತಾಡೋಕೆ ಅಮ್ಮನನ್ನ ಕಳಿಸಿದ್ರು. (ಮತ್ತಾ. 20:20, 21) ಆ ಇಬ್ರು ಶಿಷ್ಯರು ತಾವು ಎಲ್ರಿಗಿಂತ ಸ್ಪೆಷಲ್‌, ತಮಗೆ ವಿಶೇಷ ಸ್ಥಾನ ಬೇಕು ಅಂತ ನೆನಸಿದ್ರು.​—ಜ್ಞಾನೋ. 16:18.

12. ಯಾಕೋಬ ಮತ್ತು ಯೋಹಾನ ಮಾತ್ರ ತಪ್ಪು ಮಾಡಿದ್ರಾ? ವಿವರಿಸಿ.

12 ಇಲ್ಲಿ ಯಾಕೋಬ ಮತ್ತು ಯೋಹಾನ ಮಾತ್ರ ಅಲ್ಲ, ಬೇರೆ ಅಪೊಸ್ತಲರು ಕೂಡ ತಪ್ಪು ಮಾಡಿದ್ರು. ಹೇಗೆ? ಯಾಕೋಬ ಮತ್ತು ಯೋಹಾನ ಈ ತರ ಆಸೆಪಟ್ಟಿದ್ದು ಉಳಿದ ಹತ್ತು ಶಿಷ್ಯರಿಗೆ ಗೊತ್ತಾದಾಗ “ಅವ್ರಿಗೆ ಈ ಇಬ್ಬರ ಮೇಲೆ ತುಂಬ ಕೋಪ ಬಂತು” ಅಂತ ಬೈಬಲ್‌ ಹೇಳುತ್ತೆ. (ಮತ್ತಾ. 20:24) ಅವ್ರೆಲ್ಲಾ ಯಾಕೋಬ ಮತ್ತು ಯೋಹಾನನ ಮೇಲೆ ಕೋಪ ಮಾಡ್ಕೊಂಡು ಜಗಳ ಮಾಡಿರ್ತಾರೆ. “ನಿಮ್ಮನ್ನ ನೀವು ಏನ್‌ ಅಂದ್ಕೊಂಡಿದ್ದೀರ? ನೀವಿಬ್ರೇನಾ ಯೇಸು ಜೊತೆ ಕೆಲಸ ಮಾಡಿರೋದು? ನಾವೂ ಕಷ್ಟ ಪಟ್ಟು ಕೆಲಸ ಮಾಡಿದ್ದೀವಿ. ಆ ತರ ಹೋಗಿ ಕೇಳೋಕೆ ಎಷ್ಟು ಧೈರ್ಯ ನಿಮಗೆ?” ಅಂತ ಬೈದಿರಬಹುದು. ಅದೇನೇ ಆಗಿರಲಿ ಅವರು ಹೀಗೆ ಕೋಪ ಮಾಡ್ಕೊಂಡಿದ್ರಿಂದ ತಮ್ಮ ಮಧ್ಯ ಇದ್ದ ಪ್ರೀತಿ ಮತ್ತು ಒಗ್ಗಟ್ಟನ್ನ ಹಾಳು ಮಾಡ್ಕೊಂಡ್ರು.

13. ಅಪೊಸ್ತಲರು ತಪ್ಪು ಮಾಡಿದಾಗ ಯೇಸು ಅವ್ರ ಜೊತೆ ಹೇಗೆ ನಡ್ಕೊಂಡನು? (ಮತ್ತಾಯ 20:25-28)

13 ಈ ಸಂದರ್ಭದಲ್ಲಿ ಯೇಸು ಹೇಗೆ ನಡ್ಕೊಂಡನು? ಆತನು ಬೇರೆಯವ್ರ ತರ ಕೋಪ ಮಾಡ್ಕೊಳ್ಳಿಲ್ಲ. ಇವ್ರನ್ನೆಲ್ಲಾ ಬಿಟ್ಟು ಇವ್ರಿಗಿಂತ ದೀನತೆ ಇರೋ, ಪ್ರೀತಿಯಿಂದ ನಡ್ಕೊಳ್ಳೋ ಬೇರೆಯವ್ರನ್ನ ಅಪೊಸ್ತಲರಾಗಿ ಮಾಡ್ಕೊಳ್ತೀನಿ ಅಂತ ಆತನು ಅಂದ್ಕೊಳ್ಳಿಲ್ಲ. ಬದಲಿಗೆ ಅವ್ರನ್ನ ತಿದ್ದಿದನು. (ಮತ್ತಾಯ 20:25-28 ಓದಿ.) ಅವ್ರಿಗೆ ಸರಿಯಾಗಿ ಇರೋದನ್ನ ಮಾಡಬೇಕು ಅನ್ನೋ ಆಸೆ ಇದೆ ಅಂತ ಆತನಿಗೆ ಚೆನ್ನಾಗಿ ಗೊತ್ತಿತ್ತು. ಶಿಷ್ಯರು ತಮ್ಮಲ್ಲಿ ಯಾರು ದೊಡ್ಡವರು ಅಂತ ವಾದ ಮಾಡ್ತಾ ಇದ್ದಿದ್ದು ಇದು ಮೊದಲನೇ ಸಲ ಅಲ್ಲ. ಇದಾದ್ಮೇಲೂ ಆಗಾಗ ಅವರು ಈ ತರ ವಾದ ಮಾಡ್ತಾನೇ ಇದ್ರು. ಆದ್ರೆ ಒಂದೊಂದು ಸಲಾನೂ ಯೇಸು ಅವ್ರನ್ನ ಪ್ರೀತಿಯಿಂದ ತಿದ್ದುತ್ತಾ ಇದ್ದನು.​—ಮಾರ್ಕ 9:34; ಲೂಕ 22:24.

14. ಯೇಸುವಿನ ಅಪೊಸ್ತಲರು ಎಂಥ ಜನ್ರ ಮಧ್ಯ ಬೆಳೆದಿದ್ರು?

14 ತನ್ನ ಶಿಷ್ಯರು ಎಂಥ ಜನ್ರ ಜೊತೆ ಬೆಳೆದು ಬಂದಿದ್ದಾರೆ ಅಂತ ಯೇಸುಗೆ ಚೆನ್ನಾಗಿ ಗೊತ್ತಿತ್ತು. (ಯೋಹಾ. 2:24, 25) ಆಗಿನ ಕಾಲದ ಯೆಹೂದಿ ಪಂಡಿತರು ಮತ್ತು ಫರಿಸಾಯರು ಒಳ್ಳೆ ಸ್ಥಾನಮಾನದಲ್ಲಿ ಇರೋದು ತುಂಬ ಮುಖ್ಯ ಅಂತ ಜನ್ರಿಗೆ ಕಲಿಸ್ತಿದ್ರು. (ಮತ್ತಾ. 23:6; ಏಪ್ರಿಲ್‌ 1, 2010ರ ಕಾವಲಿನಬುರುಜುವಿನ ಪುಟ 16-18ರಲ್ಲಿರೋ “ಯೆಹೂದ್ಯರ ಸಭಾಮಂದಿರ ಯೇಸು ಮತ್ತು ಆತನ ಶಿಷ್ಯರು ಸಾರಿದ ಸ್ಥಳ” ಅನ್ನೋ ಲೇಖನ ಹೋಲಿಸಿ.) ತಾವು ಬೇರೆಯವ್ರಿಗಿಂತ ಶ್ರೇಷ್ಠರು ಅನ್ನೋ ತರ ನಡ್ಕೊಳ್ತಿದ್ರು. f (ಲೂಕ 18:9-12) ಅದಕ್ಕೇ ಅಪೊಸ್ತಲರು ‘ತಮ್ಮಲ್ಲಿ ಯಾರು ದೊಡ್ಡವರು’ ಅಂತ ವಾದ ಮಾಡ್ತಿದ್ದಾರೆ ಅಂತ ಯೇಸು ಅರ್ಥ ಮಾಡ್ಕೊಂಡನು. (ಜ್ಞಾನೋ. 19:11) ತನ್ನ ಶಿಷ್ಯರು ಯಾವತ್ತೂ ತಪ್ಪೇ ಮಾಡಲ್ಲ ಅಂತ ಯೇಸು ಅಂದ್ಕೊಳ್ಳಿಲ್ಲ. ಅವರು ತಪ್ಪು ಮಾಡಿದಾಗ ಕೋಪ ಮಾಡ್ಕೊಳ್ಳಿಲ್ಲ. ತಾಳ್ಮೆ ತೋರಿಸಿದನು. ಅವ್ರಿಗೆ ಒಳ್ಳೆ ಮನಸ್ಸಿದೆ ಅಂತ ಅರ್ಥ ಮಾಡ್ಕೊಂಡನು. ಅವ್ರಲ್ಲಿರೋ ಅಹಂಕಾರನೆಲ್ಲಾ ತೆಗೆದು ಪ್ರೀತಿಯಿಂದ ನಡ್ಕೊಳ್ಳೋಕೆ ಸಹಾಯ ಮಾಡಿದನು.

ಯೇಸು ತರ ಇರೋಕೆ ನಾವೇನು ಮಾಡಬೇಕು?

15. ಅಪೊಸ್ತಲರ ಮಧ್ಯ ಆದ ಜಗಳದಿಂದ ನಾವೇನು ಕಲಿಬಹುದು?

15 ಅಪೊಸ್ತಲರ ಮಧ್ಯ ಆದ ಜಗಳದಿಂದ ನಾವೇನು ಕಲಿಬಹುದು? ಯಾಕೋಬ ಮತ್ತು ಯೋಹಾನ ವಿಶೇಷ ಸ್ಥಾನಕ್ಕೆ ಆಸೆ ಪಡಬಾರದಿತ್ತು ನಿಜ. ಆದ್ರೆ ಅಲ್ಲಿರೋ ಬೇರೆ ಅಪೊಸ್ತಲರು ಅವ್ರ ಮೇಲೆ ಕೋಪ ಮಾಡ್ಕೊಂಡು ತಮ್ಮ ಮಧ್ಯ ಇದ್ದ ಒಗ್ಗಟ್ಟನ್ನ ಹಾಳು ಮಾಡ್ಕೊಂಡಿದ್ದು ಕೂಡ ತಪ್ಪಾಗಿತ್ತು. ಆದ್ರೆ ಯೇಸು ಅವ್ರ ತರ ನಡ್ಕೊಳ್ಳಿಲ್ಲ. ತನ್ನ 12 ಅಪೊಸ್ತಲರನ್ನೂ ಪ್ರೀತಿಯಿಂದ ತಿದ್ದಿದನು. ಇದ್ರಿಂದ ನಮಗೇನು ಪಾಠ? ಬೇರೆಯವರು ನಮ್ಮ ಮನಸ್ಸನ್ನ ನೋಯಿಸ್ತಾರೆ ನಿಜ, ಆದ್ರೆ ಆಗ ನಾವೇನು ಮಾಡ್ತೀವಿ ಅನ್ನೋದನ್ನ ಗಮನಿಸಬೇಕು. ಉದಾಹರಣೆಗೆ ಒಬ್ಬ ವ್ಯಕ್ತಿ ನಮ್ಮ ಮನಸ್ಸನ್ನ ನೋಯಿಸಿದಾಗ ಈ ಪ್ರಶ್ನೆಗಳನ್ನ ನಾವು ಕೇಳ್ಕೊಬೇಕು: “ನನಗ್ಯಾಕೆ ಅಷ್ಟು ಕೋಪ ಬಂತು? ಇದರರ್ಥ ನಾನೇನಾದ್ರೂ ಸರಿ ಮಾಡ್ಕೊಬೇಕು ಅಂತನಾ? ಬೇರೆ ಯಾವುದೋ ಟೆನ್ಶನ್‌ನಿಂದ ಅವರು ನನ್ನ ಹತ್ರ ಹಾಗೆ ನಡ್ಕೊಂಡ್ರಾ? ನನ್ನ ಕೋಪ ನ್ಯಾಯವಾಗೇ ಇದ್ರೂನೂ ಅವ್ರನ್ನ ಪ್ರೀತಿಯಿಂದ ಕ್ಷಮಿಸಬಹುದಿತ್ತಾ?” ಅಂತ ಕೇಳ್ಕೊಬೇಕು. ಹೀಗೆ ನಾವು ಯಾವಾಗ್ಲೂ ಬೇರೆಯವ್ರ ಜೊತೆ ಪ್ರೀತಿಯಿಂದ ನಡ್ಕೊಂಡಾಗ ಯೇಸುವಿನ ನಿಜ ಶಿಷ್ಯರು ಅಂತ ತೋರಿಸ್ಕೊಡ್ತೀವಿ.

16. ಯೇಸುವಿಂದ ನಾವು ಇನ್ನೇನು ಕಲಿಬಹುದು?

16 ನಾವು ನಮ್ಮ ಸಹೋದರ ಸಹೋದರಿಯರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಪ್ರಯತ್ನ ಮಾಡಬೇಕು ಅಂತ ಯೇಸುವಿನ ಮಾದರಿಯಿಂದ ತಿಳ್ಕೊಳ್ತೀವಿ. (ಜ್ಞಾನೋ. 20:5) ಯೇಸುಗೆ ಬೇರೆಯವ್ರ ಮನಸ್ಸಲ್ಲಿ ಏನಿದೆ ಅಂತ ತಿಳ್ಕೊಳ್ಳೋ ಸಾಮರ್ಥ್ಯ ಇತ್ತು. ಆ ಸಾಮರ್ಥ್ಯ ನಮಗಿಲ್ಲ. ಆದ್ರೂ ಬೇರೆಯವರು ತಪ್ಪು ಮಾಡಿದಾಗ ನಾವು ಅವ್ರ ಮೇಲೆ ಕೋಪ ಮಾಡ್ಕೊಳ್ಳದೆ ಅವ್ರ ಜೊತೆ ತಾಳ್ಮೆಯಿಂದ ನಡ್ಕೊಳ್ಳೋಕೆ ಆಗುತ್ತೆ. (ಎಫೆ. 4:1, 2; 1 ಪೇತ್ರ 3:8) ನಾವು ಅವ್ರ ಬಗ್ಗೆ ಚೆನ್ನಾಗಿ ತಿಳ್ಕೊಂಡ್ರೆ ನಮಗೆ ಇದನ್ನ ಮಾಡೋಕೆ ಇನ್ನೂ ಸುಲಭ ಆಗುತ್ತೆ. ಇದನ್ನ ಅರ್ಥ ಮಾಡ್ಕೊಳ್ಳೋಕೆ ಒಂದು ಅನುಭವ ನೋಡೋಣ.

17. ಸಹೋದರ ಸಹೋದರಿಯರ ಬಗ್ಗೆ ತಿಳ್ಕೊಳ್ಳೋದ್ರಿಂದ ಏನು ಪ್ರಯೋಜನ?

17 ಪೂರ್ವ ಆಫ್ರಿಕಾದಲ್ಲಿ ಸರ್ಕಿಟ್‌ ಮೇಲ್ವಿಚಾರಕರಾಗಿ ಒಬ್ಬ ಸಹೋದರ ಸೇವೆ ಮಾಡ್ತಿದ್ರು. ಅವ್ರಿಗೆ ಅಲ್ಲಿದ್ದ ಒಬ್ಬ ಸಹೋದರನ ಸ್ವಭಾವ ಇಷ್ಟ ಆಗ್ತಿರಲಿಲ್ಲ. ಆ ಸಹೋದರ ತುಂಬ ಒರಟು ಸ್ವಭಾವದವನು, ಬೇರೆಯವ್ರ ಹತ್ರ ಪ್ರೀತಿಯಿಂದ ನಡ್ಕೊಳ್ತಿಲ್ಲ ಅಂತ ಆ ಮೇಲ್ವಿಚಾರಕನಿಗೆ ಅನಿಸ್ತಿತ್ತು. ಆಗ ಆ ಸರ್ಕಿಟ್‌ ಮೇಲ್ವಿಚಾರಕರು ಏನು ಮಾಡಿದ್ರು? ‘ನಾನು ಅವ್ರ ಹತ್ರ ಮಾತಾಡೋದನ್ನ ಬಿಟ್ಟುಬಿಡಲಿಲ್ಲ. ಅವ್ರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಪ್ರಯತ್ನ ಮಾಡಿದೆ’ ಅಂತ ಅವರು ಹೇಳ್ತಾರೆ. ಹೀಗೆ ಮಾಡಿದ್ರಿಂದ ಸರ್ಕಿಟ್‌ ಮೇಲ್ವಿಚಾರಕನಿಗೆ ಈ ಸಹೋದರನ ಬಗ್ಗೆ ತುಂಬ ವಿಷ್ಯ ಗೊತ್ತಾಯ್ತು. “ಅವರು ಬೆಳೆದು ಬಂದ ರೀತಿಯಿಂದ ಅವರ ಸ್ವಭಾವ ಹೀಗಾಗಿದೆ ಅಂತ ಅವರು ಅರ್ಥ ಮಾಡ್ಕೊಂಡ್ರು. ಆ ಸಹೋದರ ಬದಲಾವಣೆ ಮಾಡ್ಕೊಳ್ಳೋಕೆ ಎಷ್ಟು ಕಷ್ಟ ಪಡ್ತಿದ್ದಾರೆ, ಜನ್ರ ಜೊತೆ ಬೆರಿಯೋಕೆ ಏನೆಲ್ಲಾ ಪ್ರಯತ್ನ ಹಾಕಿದ್ದಾರೆ ಅಂತ ನಾನು ತಿಳ್ಕೊಂಡೆ. ಆಗ ನನಗೆ ಅವ್ರ ಮೇಲಿರೋ ಗೌರವ ಜಾಸ್ತಿ ಆಯ್ತು. ಅವರು ನನಗೆ ಒಳ್ಳೇ ಫ್ರೆಂಡ್‌ ಆದ್ರು” ಅಂತ ಆ ಸರ್ಕಿಟ್‌ ಮೇಲ್ವಿಚಾರಕ ಹೇಳ್ತಾರೆ. ಇದ್ರಿಂದ ನಮಗೇನು ಗೊತ್ತಾಗುತ್ತೆ? ನಮ್ಮ ಸಹೋದರ ಸಹೋದರಿಯರ ಬಗ್ಗೆ ನಾವು ಚೆನ್ನಾಗಿ ತಿಳ್ಕೊಂಡಾಗ ಅವ್ರಿಗೆ ಪ್ರೀತಿ ತೋರಿಸೋಕೆ ಸುಲಭ ಆಗುತ್ತೆ.

18. ಬೇರೆಯವರು ನಿಮ್ಮ ಮನಸ್ಸನ್ನ ನೋಯಿಸಿದಾಗ, ನೀವು ಯಾವ ಪ್ರಶ್ನೆಗಳನ್ನ ಕೇಳ್ಕೊಬೇಕು? (ಜ್ಞಾನೋಕ್ತಿ 26:20)

18 ಕೆಲವೊಂದು ಸಲ ನಮ್ಮ ಮನಸ್ಸಿಗೆ ನೋವು ಮಾಡಿರೋ ಸಹೋದರ ಅಥವಾ ಸಹೋದರಿ ಹತ್ರ ಹೋಗಿ ಮಾತಾಡಬೇಕು ಅಂತ ನಮಗೆ ಅನಿಸುತ್ತೆ. ಆಗ ನಾವು ಕೆಲವು ಪ್ರಶ್ನೆಗಳನ್ನ ಕೇಳ್ಕೊಬೇಕು. ‘ನನಗೆ ಎಲ್ಲಾ ವಿಷ್ಯನೂ ಗೊತ್ತಿದ್ಯಾ?’ (ಜ್ಞಾನೋ. 18:13) ‘ಅವರು ಬೇಕುಬೇಕು ಅಂತಾನೇ ಹೀಗೆ ಮಾಡಿದ್ರಾ?’ (ಪ್ರಸಂ. 7:20) ‘ನಾನು ಯಾವತ್ತಾದ್ರೂ ಈ ತರ ತಪ್ಪು ಮಾಡಿದ್ದೀನಾ?’ (ಪ್ರಸಂ. 7:21, 22) ‘ನಾನು ಅವ್ರ ಹತ್ರ ಹೋಗಿ ಮಾತಾಡಿದ್ರೆ ಸಮಸ್ಯೆ ಸರಿ ಹೋಗುತ್ತಾ ಅಥವಾ ಇನ್ನೂ ದೊಡ್ಡದಾಗುತ್ತಾ?’ (ಜ್ಞಾನೋಕ್ತಿ 26:20 ಓದಿ.) ಈ ತರ ಪ್ರಶ್ನೆಗಳನ್ನ ಕೇಳ್ಕೊಂಡಾಗ ಅವರು ಮಾಡಿದ ತಪ್ಪನ್ನ ಮನಸ್ಸಲ್ಲಿ ಇಟ್ಕೊಳ್ಳದೇ ಕ್ಷಮಿಸೋಕೆ ಸುಲಭ ಆಗುತ್ತೆ.

19. ನಾವೆಲ್ಲಾ ಏನು ಮಾಡೋಣ?

19 ಯೆಹೋವನ ಸಾಕ್ಷಿಗಳೇ ಯೇಸು ಕ್ರಿಸ್ತನ ನಿಜ ಶಿಷ್ಯರು ಅಂತ ನಾವು ತೋರಿಸ್ತಾ ಇದ್ದೀವಿ. ಆತನ ತರ ನಾವು ನಮ್ಮ ಸಹೋದರರಿಗೆ ನಿಸ್ವಾರ್ಥ ಪ್ರೀತಿಯನ್ನ ತೋರಿಸ್ತಿದ್ದೀವಿ. ಸಹೋದರ ಸಹೋದರಿಯರು ತಪ್ಪು ಮಾಡಿದಾಗ್ಲೂ ಅವ್ರ ಮೇಲಿರೋ ಪ್ರೀತಿ ಕಮ್ಮಿ ಆಗಲ್ಲ. ನಾವು ಹೀಗೆ ಪ್ರೀತಿ ತೋರಿಸೋದನ್ನ ಎಷ್ಟೋ ಜನ ಗಮನಿಸಿ ‘ಇದೇ ಸತ್ಯ ಧರ್ಮ’ ಅಂತ ಅರ್ಥ ಮಾಡ್ಕೊಳ್ತಾರೆ. ಅಷ್ಟೇ ಅಲ್ಲ, ಪ್ರೀತಿಯ ದೇವರಾದ ಯೆಹೋವನನ್ನ ಆರಾಧಿಸೋಕೆ ಮುಂದೆ ಬರ್ತಾರೆ. ಹಾಗಾಗಿ ಯೇಸುವಿನ ನಿಜ ಶಿಷ್ಯರಾದ ನಾವು ಈ ಪ್ರೀತಿಯನ್ನ ಯಾವಾಗ್ಲೂ ತೋರಿಸ್ತಾ ಇರೋಣ.

ಗೀತೆ 84 “ನನಗೆ ಮನಸ್ಸುಂಟು”

a ನಾವು ಪ್ರೀತಿಯಿಂದ ನಡ್ಕೊಳ್ಳೋದನ್ನ ನೋಡಿ ಎಷ್ಟೋ ಜನ, ಯೆಹೋವನ ಬಗ್ಗೆ ಕಲಿಯೋಕೆ ಶುರು ಮಾಡಿದ್ದಾರೆ. ಆದ್ರೆ ನಾವ್ಯಾರೂ ಪರಿಪೂರ್ಣರಲ್ಲ, ನಾವೂ ತಪ್ಪು ಮಾಡ್ತೀವಿ. ನಮ್ಮ ಸಹೋದರ ಸಹೋದರಿಯರೂ ತಪ್ಪು ಮಾಡ್ತಾರೆ. ಅಂಥ ಸಮಯದಲ್ಲಿ ಅವ್ರ ಜೊತೆ ಪ್ರೀತಿಯಿಂದ ನಡ್ಕೊಳ್ಳೋಕೆ ನಮಗೆ ಕಷ್ಟ ಆಗಬಹುದು. ಆದ್ರೂ ನಾವು ಯಾಕೆ ಪ್ರೀತಿಯಿಂದ ನಡ್ಕೊಬೇಕು? ಆಗ ಯೇಸು ಕ್ರಿಸ್ತನ ತರ ನಾವು ನಡ್ಕೊಳ್ಳೋದು ಹೇಗೆ? ಅದನ್ನ ಈ ಲೇಖನದಲ್ಲಿ ನೋಡೋಣ.

c ನವೆಂಬರ್‌ 1, 2012ರ ಕಾವಲಿನಬುರುಜುವಿನ ಪುಟ 13-14ರಲ್ಲಿರೋ “ಕೊನೆಗೂ ನನ್ನ ಜೀವನಕ್ಕೆ ಒಂದು ಅರ್ಥ ಸಿಕ್ತು” (ಇಂಗ್ಲಿಷ್‌) ಅನ್ನೋ ಲೇಖನ ನೋಡಿ.

d ಮೇ 1, 2012ರ ಕಾವಲಿನಬುರುಜುವಿನ ಪುಟ 18-19ರಲ್ಲಿರೋ “ನನ್ನ ಜೀವನ ಚೆನ್ನಾಗೇ ಇದೆ ಅಂತ ಅಂದ್ಕೊಂಡಿದ್ದೆ” (ಇಂಗ್ಲಿಷ್‌) ಅನ್ನೋ ಲೇಖನ ನೋಡಿ.

e ಒಂದನೇ ಕೊರಿಂಥ 6:9, 10ರಲ್ಲಿ ಹೇಳಿರೋ ತರ ದೊಡ್ಡ ತಪ್ಪುಗಳನ್ನ ಯಾರಾದ್ರು ಮಾಡಿದ್ರೆ, ಹಿರಿಯರು ಅವರಿಗೆ ಸಹಾಯ ಮಾಡ್ತಾರೆ. ಅಂಥ ದೊಡ್ಡ ತಪ್ಪುಗಳ ಬಗ್ಗೆ ಈ ಲೇಖನದಲ್ಲಿ ಮಾತಾಡ್ತಿಲ್ಲ.

f ಒಬ್ಬ ಯೆಹೂದಿ ಧರ್ಮದ ಗುರು ಏನು ಹೇಳಿದ ಅಂತ ನೋಡಿ: “ಈ ಲೋಕದಲ್ಲಿ ಅಬ್ರಹಾಮನ ತರ ಬರೀ 30 ಜನ ನೀತಿವಂತರು ಇದ್ದಾರೆ ಅಂತ ಅಂದ್ಕೊಳ್ಳಿ. ಅವ್ರಲ್ಲಿ ನಾನು ನನ್ನ ಮಗ ಇರ್ತೀವಿ. 10 ಜನ ಇದ್ರೆ ಅವ್ರಲ್ಲೂ ನಾನು ನನ್ನ ಮಗ ಇರ್ತೀವಿ. 5 ಜನ ಇದ್ರೆ ಅವ್ರಲ್ಲೂ ನಾನು ನನ್ನ ಮಗ ಇರ್ತೀವಿ. ಒಂದುವೇಳೆ ಇಬ್ರೇ ಇದ್ರೆ ಅದು ನಾನು ನನ್ನ ಮಗ. ಬರೀ ಒಬ್ಬರೇ ಇದ್ರೆ ಅದು ನಾನೇ.”