ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 13

ಮಕ್ಕಳಿಗೆ ಸೃಷ್ಟಿ ತೋರಿಸಿ ಯೆಹೋವನ ಬಗ್ಗೆ ಕಲಿಸಿ

ಮಕ್ಕಳಿಗೆ ಸೃಷ್ಟಿ ತೋರಿಸಿ ಯೆಹೋವನ ಬಗ್ಗೆ ಕಲಿಸಿ

“[ಇವನ್ನೆಲ್ಲ] ಸೃಷ್ಟಿ ಮಾಡಿದವರು ಯಾರು?”​—ಯೆಶಾ. 40:26.

ಗೀತೆ 15 ಸೃಷ್ಟಿಯು ಯೆಹೋವನ ಮಹಿಮೆಯನ್ನು ತಿಳಿಸುತ್ತದೆ

ಈ ಲೇಖನದಲ್ಲಿ ಏನಿದೆ? a

1. ಅಪ್ಪಅಮ್ಮಂದಿರ ಆಸೆ ಏನು?

 ಅಪ್ಪಅಮ್ಮಂದಿರೇ, ನಿಮ್ಮ ಮಕ್ಕಳು ಯೆಹೋವನ ಬಗ್ಗೆ ಕಲಿಬೇಕು, ಅವರು ಆತನನ್ನ ಪ್ರೀತಿಸಬೇಕು ಅಂತ ಆಸೆ ಪಡ್ತೀರ. ಆದ್ರೆ ನಮಗ್ಯಾರಿಗೂ ದೇವರನ್ನ ನೋಡಕ್ಕಾಗಲ್ಲ. ಅಂದ್ಮೇಲೆ ನಿಮ್ಮ ಮಕ್ಕಳು ಆತನನ್ನ ಒಬ್ಬ ನಿಜವಾದ ವ್ಯಕ್ತಿ ತರ ನೋಡೋಕೆ ಹೇಗೆ ಕಲಿಸ್ತೀರಾ? ಆತನಿಗೆ ಹತ್ರ ಆಗೋಕೆ ಹೇಗೆ ಸಹಾಯ ಮಾಡ್ತೀರಾ?​—ಯಾಕೋ. 4:8

2. ಅಪ್ಪಅಮ್ಮಂದಿರು ಮಕ್ಕಳಿಗೆ ಯೆಹೋವನ ಗುಣಗಳ ಬಗ್ಗೆ ಹೇಗೆ ಕಲಿಸಬಹುದು?

2 ಯೆಹೋವನ ಬಗ್ಗೆ ಕಲಿಸೋಕೆ ಅಪ್ಪಅಮ್ಮಂದಿರು ತಮ್ಮ ಮಕ್ಕಳ ಜೊತೆ ಬೈಬಲ್‌ ಓದ್ತಾರೆ. ಹೀಗೆ ಮಕ್ಕಳು ಯೆಹೋವನಿಗೆ ಹತ್ರ ಆಗೋಕೆ ಸಹಾಯ ಮಾಡ್ತಾರೆ. (2 ತಿಮೊ. 3:14-17) ಆದ್ರೆ ಯೆಹೋವನ ಬಗ್ಗೆ ಕಲಿಸೋಕೆ ಇನ್ನೊಂದು ವಿಧಾನ ಕೂಡ ಇದೆ ಅಂತ ಬೈಬಲ್‌ ಹೇಳುತ್ತೆ. ಅದು ಜ್ಞಾನೋಕ್ತಿ ಪುಸ್ತಕದಲ್ಲಿದೆ. ಅಲ್ಲಿ ಒಬ್ಬ ತಂದೆ, ತನ್ನ ಮಗನಿಗೆ ಸೃಷ್ಟಿಯಲ್ಲಿ ಕಾಣೋ ಯೆಹೋವನ ಗುಣಗಳನ್ನ ಅರ್ಥ ಮಾಡ್ಕೊ ಅಂತ ಹೇಳ್ತಾನೆ. (ಜ್ಞಾನೋ. 3:19-21) ಅಪ್ಪಅಮ್ಮಂದಿರು ಮಕ್ಕಳಿಗೆ ಸೃಷ್ಟಿಯನ್ನ ತೋರಿಸ್ತಾ ಯೆಹೋವನ ಬಗ್ಗೆ ಕಲಿಸೋ ಕೆಲವು ವಿಧಾನಗಳನ್ನ ಈಗ ನೋಡೋಣ.

ಸೃಷ್ಟಿಯಿಂದ ಮಕ್ಕಳಿಗೆ ಕಲಿಸೋದು ಹೇಗೆ?

3. ಅಪ್ಪಅಮ್ಮಂದಿರು ಮಕ್ಕಳಿಗೆ ಯಾವಾಗ ಕಲಿಸಬಹುದು?

3 “ಕಣ್ಣಿಗೆ ಕಾಣದಿರೋ ದೇವರ ಗುಣಗಳನ್ನ ಸೃಷ್ಟಿ ಆದಾಗಿಂದ ನಮಗೆ ಸ್ಪಷ್ಟವಾಗಿ ನೋಡೋಕೆ ಆಗ್ತಿದೆ” ಅಂತ ಬೈಬಲ್‌ ಹೇಳುತ್ತೆ. (ರೋಮ. 1:20) ಹೆತ್ತವರೇ, ನೀವು ನಿಮ್ಮ ಮಕ್ಕಳನ್ನ ಹೊರಗೆ ಕರ್ಕೊಂಡು ಹೋಗಬೇಕು, ಅವ್ರ ಜೊತೆ ಸಮಯ ಕಳಿಬೇಕು ಅಂತ ಆಸೆ ಪಡ್ತೀರ ಅಲ್ವಾ? ಹಾಗೆ ಹೋದಾಗ ಸೃಷ್ಟಿಯನ್ನ ತೋರಿಸ್ತಾ ಯೆಹೋವನ ಅದ್ಭುತ ಗುಣಗಳ ಬಗ್ಗೆ ನಿಮ್ಮ ಮಕ್ಕಳಿಗೆ ಕಲಿಸಬಹುದು. ಯೇಸು ಇದನ್ನ ಹೇಗೆ ಮಾಡಿದನು ಅಂತ ಈಗ ನೋಡೋಣ.

4. ಯೇಸು ಸೃಷ್ಟಿಯನ್ನ ತೋರಿಸ್ತಾ ತನ್ನ ಶಿಷ್ಯರಿಗೆ ಹೇಗೆ ಕಲಿಸಿದನು? (ಲೂಕ 12:24, 27-30)

4 ಯೇಸು ಸೃಷ್ಟಿಯನ್ನ ತೋರಿಸ್ತಾ ಜನ್ರಿಗೆ ಕಲಿಸ್ತಿದ್ದನು. ಒಂದು ಸಲ ತನ್ನ ಶಿಷ್ಯರಿಗೆ ಕಾಗೆಗಳನ್ನ, ಲಿಲಿ ಹೂಗಳನ್ನ ನೋಡಿ ಅಂತ ಹೇಳಿದನು. (ಲೂಕ 12:24, 27-30 ಓದಿ.) ಯೇಸು ಬೇರೆ ಯಾವುದಾದ್ರೂ ಪ್ರಾಣಿ ಅಥವಾ ಗಿಡದ ಬಗ್ಗೆ ಮಾತಾಡಬಹುದಿತ್ತು. ಆದ್ರೆ ಯಾಕೆ ಆತನು ಈ ಉದಾಹರಣೆಗಳನ್ನೇ ಹೇಳಿದನು? ಯಾಕಂದ್ರೆ ಶಿಷ್ಯರಿಗೆ ಅವುಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಅವುಗಳನ್ನ ಅವರು ದಿನಾ ನೋಡ್ತಿದ್ರು. ಯೇಸು ಈ ಉದಾಹರಣೆಗಳನ್ನ ಹೇಳ್ತಾ ಯಾವ ಮುಖ್ಯವಾದ ಪಾಠಗಳನ್ನ ಕಲಿಸಿದನು? ಯೆಹೋವ ಧಾರಾಳವಾಗಿ ಕೊಡ್ತಾನೆ, ಪ್ರೀತಿಯಿಂದ ನೋಡ್ಕೊಳ್ತಾನೆ ಅಂತ ಶಿಷ್ಯರಿಗೆ ಕಲಿಸಿದನು. ಕಾಗೆ ಮತ್ತು ಲಿಲಿ ಹೂಗಳನ್ನ ನೋಡ್ಕೊಳ್ಳೋ ಯೆಹೋವ ದೇವರು ತನ್ನನ್ನ ಆರಾಧಿಸೋ ಜನ್ರಿಗೆ ಬೇಕಾದ ಊಟ, ಬಟ್ಟೆಯನ್ನ ಕೊಡ್ತಾನೆ ಅಂತ ಅವರು ಅರ್ಥ ಮಾಡ್ಕೊಂಡ್ರು.

5. ಸೃಷ್ಟಿಯಿಂದ ಯೆಹೋವನ ಬಗ್ಗೆ ಕಲಿಸೋಕೆ ಅಪ್ಪಅಮ್ಮಂದಿರು ಏನು ಮಾಡಬೇಕು?

5 ನೀವು ಯೇಸು ತರ ನಿಮ್ಮ ಮಕ್ಕಳಿಗೆ ಹೇಗೆ ಕಲಿಸಬಹುದು? ನಿಮಗೆ ಇಷ್ಟ ಇರೋ ಪ್ರಾಣಿ ಅಥವಾ ಗಿಡದ ಬಗ್ಗೆ ಅವ್ರ ಹತ್ರ ಮಾತಾಡಬಹುದು. ಅದ್ರಿಂದ ನೀವು ಯೆಹೋವನ ಬಗ್ಗೆ ಏನು ಕಲಿತ್ಕೊಂಡ್ರಿ ಅಂತನೂ ಹೇಳಬಹುದು. ನೀವು ನಿಮ್ಮ ಮಕ್ಕಳ ಹತ್ರ “ನಿನಗೆ ಯಾವ ಪ್ರಾಣಿ ಅಂದ್ರೆ ಇಷ್ಟ, ಯಾವ ಗಿಡ ಇಷ್ಟ?” ಅಂತ ಕೇಳಿನೋಡಿ. ಅದ್ರಿಂದ ಯೆಹೋವ ದೇವರ ಯಾವ ಗುಣದ ಬಗ್ಗೆ ತಿಳ್ಕೊಬಹುದು ಅಂತ ವಿವರಿಸಿ. ಈ ತರ ಹೇಳ್ಕೊಡುವಾಗ ಇನ್ನೂ ಜಾಸ್ತಿ ತಿಳ್ಕೊಬೇಕು ಅನ್ನೋ ಆಸೆ ಅವ್ರಿಗೆ ಬರುತ್ತೆ.

6. ಕ್ರಿಸ್ಟಫರ್‌ ಅವ್ರ ತಾಯಿಯಿಂದ ನಾವೇನು ಕಲಿತೀವಿ?

6 ಸೃಷ್ಟಿಯನ್ನ ತೋರಿಸ್ತಾ ಮಕ್ಕಳಿಗೆ ಕಲಿಸುವಾಗ ಅವುಗಳ ಬಗ್ಗೆ ಓದಿ, ಸಂಶೋಧನೆ ಮಾಡಿನೇ ಕಲಿಸಬೇಕಾ? ಹಾಗೇನಿಲ್ಲ. ಯೇಸು ಕಲಿಸುವಾಗ ಕಾಗೆ ಏನು ತಿನ್ನುತ್ತೆ, ಲಿಲಿ ಹೂಗಳು ಹೇಗೆ ಬೆಳೆಯುತ್ತೆ ಅಂತೆಲ್ಲಾ ಹೇಳಲಿಲ್ಲ. ಅದೇ ತರ ಮಕ್ಕಳಿಗೆ ಸೃಷ್ಟಿ ಬಗ್ಗೆ ಸರಳವಾಗಿ ವಿವರಿಸಿದ್ರೆ ಅಥವಾ ಚಿಕ್ಕ ಪ್ರಶ್ನೆಗಳನ್ನ ಕೇಳಿದ್ರೆ ಸಾಕು ಅವರು ಚೆನ್ನಾಗಿ ಅರ್ಥ ಮಾಡ್ಕೊಳ್ತಾರೆ. ಇನ್ನು ಕೆಲವೊಮ್ಮೆ ಅದ್ರ ಬಗ್ಗೆ ಜಾಸ್ತಿ ತಿಳ್ಕೊಬೇಕು ಅಂತ ಮಕ್ಕಳಿಗೆ ಅನಿಸಿದ್ರೆ ನೀವು ವಿವರಿಸಬೇಕಾಗುತ್ತೆ. ಸಹೋದರ ಕ್ರಿಸ್ಟಫರ್‌ಗೆ ಚಿಕ್ಕವಯಸ್ಸಲ್ಲಿ ಅವ್ರ ಅಮ್ಮ ಹೇಗೆಲ್ಲಾ ಕಲಿಸ್ತಿದ್ರು ಅಂತ ನೆನಪಿಸ್ಕೊಳ್ತಾ ಏನು ಹೇಳ್ತಾರೆ ನೋಡಿ. “ನಮ್ಮಮ್ಮ ಸುತ್ತಮುತ್ತ ಇದ್ದ ಸೃಷ್ಟಿನ ತೋರಿಸ್ತಾ ಚಿಕ್ಕಚಿಕ್ಕ ವಿಷ್ಯಗಳನ್ನ ಕಲಿಸ್ತಿದ್ರು. ಬೆಟ್ಟಗಳನ್ನ ತೋರಿಸ್ತಾ ‘ಇದು ಎಷ್ಟು ದೊಡ್ಡದಾಗಿದೆ, ಎಷ್ಟು ಸುಂದರವಾಗಿದೆ. ಯೆಹೋವ ಇದನ್ನೆಲ್ಲ ಎಷ್ಟು ಚೆನ್ನಾಗಿ ಸೃಷ್ಟಿ ಮಾಡಿದ್ದಾನಲ್ಲಾ!’ ಅಂತ ಹೇಳ್ತಿದ್ರು. ನಾವು ಬೀಚ್‌ಗೆ ಹೋದಾಗೆಲ್ಲ ದೊಡ್ಡದೊಡ್ಡ ಅಲೆಗಳನ್ನ ನೋಡ್ತಿದ್ವಿ. ಆಗ ‘ಯೆಹೋವನಿಗೆ ಎಷ್ಟು ಶಕ್ತಿ ಇರಬೇಕಲ್ವಾ’ ಅಂತ ಅಮ್ಮ ನಮ್ಮನ್ನ ಕೇಳ್ತಿದ್ರು. ಈ ರೀತಿ ಅವರು ಕಲಿಸಿದ ಚಿಕ್ಕಚಿಕ್ಕ ವಿಷ್ಯಗಳು ಈಗ್ಲೂ ನಮ್ಮ ಮನಸ್ಸಲ್ಲಿ ಉಳ್ಕೊಂಡಿದೆ.”

7. ಸೃಷ್ಟಿಯಿಂದ ಯೆಹೋವನ ಬಗ್ಗೆ ಮಕ್ಕಳಿಗೆ ಹೇಗೆ ಕಲಿಸ್ತೀರ?

7 ನಿಮ್ಮ ಮಕ್ಕಳು ದೊಡ್ಡವರಾಗ್ತಾ ಹೋದ ಹಾಗೆ ಸೃಷ್ಟಿಯನ್ನ ನೋಡಿ ಯೆಹೋವನ ಗುಣಗಳನ್ನ ತಿಳ್ಕೊಳ್ಳೋದು ಹೇಗೆ ಅಂತ ಅವ್ರಿಗೆ ಕಲಿಸಿ. ಸೃಷ್ಟಿಯನ್ನ ತೋರಿಸ್ತಾ ‘ಇದ್ರಲ್ಲಿ ಯೆಹೋವನ ಯಾವ ಗುಣ ನಿನಗೆ ಕಾಣುತ್ತೆ?’ ಅಂತ ಕೇಳಿ. ಅವರು ಉತ್ರ ಕೊಟ್ಟಾಗ ‘ನನ್ನ ಮಕ್ಕಳಿಗೆ ಇಷ್ಟೆಲ್ಲಾ ಗೊತ್ತಿದ್ಯಾ, ಇಷ್ಟೆಲ್ಲಾ ಅರ್ಥ ಮಾಡ್ಕೊಂಡಿದ್ದಾರಾ!’ ಅಂತ ನಿಮಗೇ ಆಶ್ಚರ್ಯ ಆಗುತ್ತೆ.​—ಮತ್ತಾ. 21:16.

ನಿಮ್ಮ ಮಕ್ಕಳಿಗೆ ಸೃಷ್ಟಿಯಿಂದ ಯಾವಾಗೆಲ್ಲಾ ಕಲಿಸಬಹುದು?

8. “ದಾರೀಲಿ ನಡಿವಾಗ” ಇಸ್ರಾಯೇಲ್ಯರು ಏನು ಮಾಡಬೇಕಿತ್ತು?

8 ಇಸ್ರಾಯೇಲ್ಯರು ತಮ್ಮ ಮಕ್ಕಳಿಗೆ ಯೆಹೋವನ ನಿಯಮಗಳನ್ನ ಕಲಿಸ್ತಿದ್ರು. ‘ದಾರೀಲಿ ನಡಿವಾಗ್ಲೂ’ ಮಕ್ಕಳಿಗೆ ಕಲಿಸಿ ಅಂತ ಯೆಹೋವ ಹೇಳಿದ್ದನು. (ಧರ್ಮೋ. 11:19) ಸಾಮಾನ್ಯವಾಗಿ ಇಸ್ರಾಯೇಲ್ಯರು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಹೋಗ್ತಿದ್ದಾಗ ಬೇರೆಬೇರೆ ಪ್ರಾಣಿಗಳನ್ನ, ಪಕ್ಷಿಗಳನ್ನ, ಹೂಗಳನ್ನ ನೋಡ್ತಿದ್ರು. ಆಗ ಅವುಗಳನ್ನ ತೋರಿಸ್ತಾ ಅಪ್ಪಅಮ್ಮಂದಿರು ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸ್ತಿದ್ರು. ಹಾಗಾದ್ರೆ ಹೆತ್ತವರೇ, ನೀವು ಸೃಷ್ಟಿಯನ್ನ ತೋರಿಸ್ತಾ ನಿಮ್ಮ ಮಕ್ಕಳಿಗೆ ಕಲಿಸೋಕೆ ಆಗುತ್ತೆ. ಕೆಲವರು ಏನು ಮಾಡಿದ್ದಾರೆ ಅಂತ ನೋಡೋಣ.

9. ಪುನೀತ ಮತ್ತು ಕಾಟ್ಯಾ ಅವ್ರಿಂದ ನಾವೇನು ಕಲಿತೀವಿ?

9 ಭಾರತದ ಒಂದು ದೊಡ್ಡ ನಗರದಲ್ಲಿ ವಾಸ ಮಾಡ್ತಿರೋ ಪುನೀತ ಅನ್ನೋ ಸಹೋದರಿ ಏನು ಹೇಳ್ತಾರೆ ನೋಡಿ. “ನಮ್ಮ ಮಕ್ಕಳು ಹುಟ್ಟಿ ಬೆಳೆದಿದ್ದು ಸಿಟಿಯಲ್ಲಿ. ಆದ್ರಿಂದ ಎಲ್ಲಾ ಕಡೆ ಜನ ತುಂಬಿರೋ ರಸ್ತೆಗಳು, ಟ್ರಾಫಿಕ್ಕೇ ಕಾಣುತ್ತೆ. ಹಾಗಾಗಿ ನಾವು ನಮ್ಮೂರಿಗೆ ಹೋಗುವಾಗೆಲ್ಲ ಯೆಹೋವನ ಸೃಷ್ಟಿಯನ್ನ ತೋರಿಸ್ತಾ ಆತನ ಬಗ್ಗೆ ಕಲಿಸ್ತೀವಿ.” ಅಪ್ಪಅಮ್ಮಂದಿರೇ, ನಿಮ್ಮ ಮಕ್ಕಳು ನಿಮ್ಮ ಜೊತೆಯಿದ್ದು ಪ್ರಕೃತಿ ಸೌಂದರ್ಯವನ್ನ ನೋಡಿದ ಕ್ಷಣಗಳನ್ನ ಯಾವತ್ತೂ ಮರಿಯಲ್ಲ. ಮಾಲ್ಡೋವದಲ್ಲಿರೋ ಸಹೋದರಿ ಕಾಟ್ಯಾ ಏನು ಹೇಳ್ತಾರೆ ನೋಡಿ. “ನಾನು ಚಿಕ್ಕವಳಿದ್ದಾಗ ಅಪ್ಪಅಮ್ಮ ನನ್ನನ್ನ ಆಗಾಗ ಹಳ್ಳಿಗೆ ಕರ್ಕೊಂಡು ಹೋಗ್ತಿದ್ರು. ಅದನ್ನ ನಾನು ಯಾವತ್ತೂ ಮರಿಯಕ್ಕಾಗಲ್ಲ. ಆ ರೀತಿ ಹೋದಾಗೆಲ್ಲ ಸೃಷ್ಟಿಯನ್ನ ತೋರಿಸ್ತಿದ್ರು. ಒಂದೊಂದು ಸೃಷ್ಟಿಯಲ್ಲೂ ಯೆಹೋವನ ಯಾವ ಗುಣ ಕಾಣಿಸುತ್ತೆ ಅಂತ ಹೇಳ್ತಿದ್ರು.”

ನೀವು ಸಿಟಿಯಲ್ಲಿ ಇದ್ರೂ ಸೃಷ್ಟಿಯಿಂದ ಯೆಹೋವನ ಬಗ್ಗೆ ನಿಮ್ಮ ಮಕ್ಕಳಿಗೆ ಕಲಿಸಬಹುದು (ಪ್ಯಾರ 10 ನೋಡಿ)

10. ಬೇರೆ ಜಾಗಗಳಿಗೆ ಮಕ್ಕಳನ್ನ ಕರ್ಕೊಂಡು ಹೋಗೋಕೆ ಕಷ್ಟ ಆಗ್ತಿದ್ರೆ ಏನು ಮಾಡಬಹುದು? (“ ಮಕ್ಕಳಿಗೆ ಕಲಿಸುವಾಗ . . . ” ಅನ್ನೋ ಚೌಕ ನೋಡಿ.)

10 ನೀವು ಬೇರೆ ಊರುಗಳಿಗೆ ಹೋಗೋಕೆ ಆಗಲಿಲ್ಲಾಂದ್ರೆ ಏನು ಮಾಡೋದು? ಭಾರತದಲ್ಲಿರೋ ಅಮೋಲ್‌ ಅನ್ನೋ ಸಹೋದರ ಏನು ಹೇಳ್ತಾರೆ ಅಂದ್ರೆ “ನಾನಿರೋ ಕಡೆ ಸಾಮಾನ್ಯವಾಗಿ ಅಪ್ಪಅಮ್ಮಂದಿರು ತುಂಬ ಹೊತ್ತು ದುಡಿಲೇಬೇಕು. ಅಷ್ಟೇ ಅಲ್ಲ, ಹಳ್ಳಿಗಳಿಗೆ ಹೋಗಬೇಕು ಅಂದ್ರೆ ತುಂಬ ಖರ್ಚಾಗುತ್ತೆ. ಆದ್ರೆ ನಮ್ಮ ಮನೆ ಹತ್ರ ಇರೋ ಪಾರ್ಕ್‌ ಅಥವಾ ಟೆರೆಸ್‌ ಮೇಲೆ ಹೋದ್ರೆನೇ ಯೆಹೋವ ಸೃಷ್ಟಿ ಮಾಡಿರೋ ಎಷ್ಟೋ ವಿಷ್ಯಗಳನ್ನ ನೋಡೋಕಾಗುತ್ತೆ. ಈ ತರನೂ ಆತನ ಗುಣಗಳ ಬಗ್ಗೆ ಕಲಿಸಬಹುದು.” ಅಪ್ಪಅಮ್ಮಂದಿರೇ, ನಿಮ್ಮ ಸುತ್ತಮುತ್ತ ಇರೋದನ್ನೆಲ್ಲ ಚೆನ್ನಾಗಿ ಗಮನಿಸಿ. (ಕೀರ್ತ. 104:24) ಉದಾಹರಣೆಗೆ ಹಕ್ಕಿಗಳು, ಕ್ರಿಮಿಕೀಟಗಳು, ಗಿಡಗಳು ಈ ತರ ಎಷ್ಟೋ ವಿಷ್ಯಗಳಿವೆ. ಇವುಗಳನ್ನ ತೋರಿಸ್ತಾ ನಿಮ್ಮ ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸೋಕೆ ಆಗುತ್ತೆ. ಜರ್ಮನಿಯಲ್ಲಿರೋ ಕರೀನಾ ಅನ್ನೋ ಸಹೋದರಿ ಏನು ಹೇಳ್ತಾರಂದ್ರೆ, “ನಮ್ಮ ಅಮ್ಮಾಗೆ ಹೂಗಳು ಅಂದ್ರೆ ಪಂಚಪ್ರಾಣ. ಚಿಕ್ಕವಯಸ್ಸಲ್ಲಿ ನನ್ನನ್ನ ಹೊರಗಡೆ ಕರ್ಕೊಂಡು ಹೋಗ್ತಾ ಇದ್ದಾಗೆಲ್ಲಾ ಸುಂದರವಾದ ಹೂಗಳನ್ನ ತೋರಿಸ್ತಿದ್ರು.” ಹೆತ್ತವರೇ, ನಮ್ಮ ಸಂಘಟನೆ ಸೃಷ್ಟಿ ಬಗ್ಗೆ ತಿಳ್ಕೊಳ್ಳೋಕೆ ಎಷ್ಟೋ ಪತ್ರಿಕೆಗಳನ್ನ, ವಿಡಿಯೋಗಳನ್ನ ಕೊಟ್ಟಿದೆ. ಅವುಗಳಿಂದ ನೀವು ನಿಮ್ಮ ಮಕ್ಕಳಿಗೆ ಕಲಿಸಬಹುದು. ನೀವು ಎಂಥ ಪರಿಸ್ಥಿತಿಯಲ್ಲಿದ್ರೂ ನಿಮ್ಮ ಮಕ್ಕಳಿಗೆ ಸೃಷ್ಟಿಯಿಂದ ಯೆಹೋವನ ಬಗ್ಗೆ ಕಲಿಸೋಕೆ ಆಗುತ್ತೆ. ಹಾಗಾದ್ರೆ ನಾವೀಗ ಸೃಷ್ಟಿಯಲ್ಲಿ ಕಾಣಿಸೋ ಯೆಹೋವನ ಕೆಲವು ಗುಣಗಳ ಬಗ್ಗೆ ನೋಡೋಣ.

‘ಕಣ್ಣಿಗೆ ಕಾಣದಿರೋ ಯೆಹೋವನ ಗುಣಗಳನ್ನ ಸ್ಪಷ್ಟವಾಗಿ ನೋಡೋಕೆ ಆಗುತ್ತೆ’

11. ಮಕ್ಕಳು ಯೆಹೋವನ ಪ್ರೀತಿಯನ್ನ ಅರ್ಥ ಮಾಡ್ಕೊಳ್ಳೋಕೆ ಹೆತ್ತವರು ಏನು ಮಾಡಬೇಕು?

11 ಯೆಹೋವ ನಮ್ಮನ್ನ ಎಷ್ಟು ಪ್ರೀತಿಸ್ತಾನೆ ಅಂತ ಮಕ್ಕಳಿಗೆ ಅರ್ಥ ಮಾಡಿಸಬೇಕು. ಅದಕ್ಕೆ ಪ್ರಾಣಿಗಳು ತಮ್ಮ ಮರಿಗಳನ್ನ ಎಷ್ಟು ಚೆನ್ನಾಗಿ, ಹುಷಾರಾಗಿ ನೋಡ್ಕೊಳ್ಳುತ್ತೆ ಅಂತ ಹೇಳಬಹುದು. (ಮತ್ತಾ. 23:37) ಸೃಷ್ಟಿಯಲ್ಲಿ ನಿಮಗೆ ಇಷ್ಟ ಆದ ವಿಷ್ಯಗಳನ್ನೂ ಹೇಳ್ತಾ ನಿಮ್ಮ ಮಕ್ಕಳಿಗೆ ಕಲಿಸಬಹುದು. ಸಹೋದರಿ ಕರೀನಾ ಏನು ಹೇಳ್ತಾರಂದ್ರೆ, “ವಾಕಿಂಗ್‌ ಹೋಗುವಾಗೆಲ್ಲ ಅಮ್ಮ ನಂಗೆ ಬೇರೆಬೇರೆ ರೀತಿಯ ಹೂಗಳನ್ನ ತೋರಿಸ್ತಿದ್ರು. ‘ಯೆಹೋವನಿಗೆ ನಮ್ಮ ಮೇಲೆ ಪ್ರೀತಿ ಇರೋದ್ರಿಂದಾನೇ ಇಷ್ಟು ವಿಧವಿಧವಾದ ಅಂದವಾದ ಹೂಗಳನ್ನ ಸೃಷ್ಟಿಮಾಡಿದ್ದಾರೆ’ ಅಂತ ಹೇಳ್ತಿದ್ರು. ನಾನು ಈಗಲೂ ಬೇರೆಬೇರೆ ರೀತಿಯ ಹೂಗಳನ್ನ ನೋಡ್ತೀನಿ. ಅವುಗಳ ಬಣ್ಣ ಮತ್ತು ಅಂದವನ್ನ ನೋಡುವಾಗ ನನಗೆ ಯೆಹೋವನ ಪ್ರೀತಿ ನೆನಪಾಗುತ್ತೆ.”

ಯೆಹೋವ ನಮ್ಮ ದೇಹವನ್ನ ಅದ್ಭುತವಾಗಿ ಸೃಷ್ಟಿ ಮಾಡಿರೋದನ್ನ ತೋರಿಸಿ ಆತನ ವಿವೇಕದ ಬಗ್ಗೆ ಮಕ್ಕಳಿಗೆ ಹೇಳ್ಕೊಡಬಹುದು (ಪ್ಯಾರ 12 ನೋಡಿ)

12. ಯೆಹೋವನ ವಿವೇಕದ ಬಗ್ಗೆ ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಅರ್ಥ ಮಾಡಿಸಬಹುದು? (ಕೀರ್ತನೆ 139:14) (ಚಿತ್ರನೂ ನೋಡಿ.)

12 ನಿಮ್ಮ ಮಕ್ಕಳಿಗೆ ಯೆಹೋವನ ವಿವೇಕದ ಬಗ್ಗೆ ಕಲಿಸಬೇಕು. ಆತನು ನಮ್ಮೆಲ್ರಿಗಿಂತ ತುಂಬ ವಿವೇಕಿ ಅನ್ನೋದನ್ನ ಅರ್ಥ ಮಾಡಿಸಬೇಕು. (ರೋಮ. 11:33) ಉದಾಹರಣೆಗೆ, ನೀರು ಆವಿಯಾಗಿ ಮೋಡ ಆಗುತ್ತೆ. ಮೋಡಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುತ್ತೆ. ಇದೆಲ್ಲಾ ದೊಡ್ಡ ಅದ್ಭುತ ಅಂತ ಅವ್ರಿಗೆ ಹೇಳಿ. (ಯೋಬ 38:36, 37) ಯೆಹೋವ ನಮ್ಮ ದೇಹವನ್ನ ಅದ್ಭುತವಾಗಿ ಸೃಷ್ಟಿ ಮಾಡಿದ್ದಾನೆ ಅಂತನೂ ಹೇಳಿ. (ಕೀರ್ತನೆ 139:14 ಓದಿ.) ಇದನ್ನ ಸಹೋದರ ವ್ಲಾಡಿಮೀರ್‌ ತಮ್ಮ ಮಗನಿಗೆ ಅರ್ಥ ಮಾಡಿಸೋಕೆ ಏನು ಮಾಡಿದ್ರು ನೋಡಿ. “ಒಂದಿನ ನನ್‌ ಮಗ ಸೈಕಲ್‌ ಓಡಿಸ್ತಿದ್ದಾಗ ಬಿದ್ದು ಗಾಯ ಮಾಡ್ಕೊಂಡುಬಿಟ್ಟ. ಸ್ವಲ್ಪ ದಿನ ಆದ್ಮೇಲೆ ವಾಸಿ ಆಯ್ತು. ಆಗ ನಾನೂ ನನ್ನ ಹೆಂಡತಿ ಅವನ ಹತ್ರ ಮಾತಾಡ್ತಾ ‘ಜೀವಕೋಶಗಳು ತನ್ನಿಂದ ತಾನೇ ಸರಿ ಆಗೋ ತರ ಯೆಹೋವ ದೇವರು ಸೃಷ್ಟಿ ಮಾಡಿದ್ದಾರೆ. ಮನುಷ್ಯರು ಮಾಡಿರೋ ಯಾವುದಾದ್ರೂ ವಸ್ತು ತನ್ನನ್ನ ತಾನೇ ಸರಿ ಮಾಡ್ಕೊಳ್ಳುತ್ತಾ? ಉದಾಹರಣೆಗೆ ಕಾರ್‌ ಆ್ಯಕ್ಸಿಡೆಂಟ್‌ ಆದ್ರೆ ಸ್ವಲ್ಪ ದಿನ ಆದ್ಮೇಲೆ ಕಾರ್‌ ತನ್ನನ್ನ ತಾನೇ ಸರಿ ಮಾಡ್ಕೊಳುತ್ತಾ?’ ಅಂತ ಕೇಳಿದ್ವಿ. ಹೀಗೆ ಯೆಹೋವನಿಗೆ ಎಷ್ಟು ವಿವೇಕ ಇದೆ ಅಂತ ಅರ್ಥ ಮಾಡಿಸಿದ್ವಿ.”

13. ಯೆಹೋವನಿಗೆ ಎಷ್ಟು ಶಕ್ತಿ ಇದೆ ಅಂತ ಮಕ್ಕಳಿಗೆ ಅರ್ಥ ಮಾಡಿಸೋಕೆ ಅಪ್ಪಅಮ್ಮಂದಿರು ಏನು ಮಾಡಬೇಕು? (ಯೆಶಾಯ 40:26)

13 ಯೆಹೋವ ನಮಗೆ “ನಿಮ್ಮ ಕಣ್ಣುಗಳನ್ನ ಮೇಲೆತ್ತಿ, ಆಕಾಶದ ಕಡೆ ನೋಡಿ” ಅಂತ ಹೇಳ್ತಿದ್ದಾನೆ. ಅಲ್ಲಿರೋ ನಕ್ಷತ್ರಗಳನ್ನ ನೋಡಿದಾಗ ಯೆಹೋವನಿಗೆ ಎಷ್ಟು ಶಕ್ತಿ ಇದೆ ಅಂತ ಅರ್ಥ ಮಾಡ್ಕೊಳ್ತೀವಿ. (ಯೆಶಾಯ 40:26 ಓದಿ.) ಹೆತ್ತವರೇ, ನಿಮ್ಮ ಮಕ್ಕಳಿಗೆ ಇದ್ರ ಬಗ್ಗೆ ಯೋಚ್ನೆ ಮಾಡೋಕೆ ಸಹಾಯ ಮಾಡಿ. ತೈವಾನ್‌ನಲ್ಲಿರೋ ಸಹೋದರಿ ಶಿಯಂಗ್‌-ಶಿಯಂಗ್‌ ತಮ್ಮ ಬಾಲ್ಯದ ಬಗ್ಗೆ ಹೇಳ್ತಾ “ಒಂದು ಸಲ ನನ್ನ ಫ್ರೆಂಡ್ಸ್‌ ನನಗೆ ಯೆಹೋವನಿಗೆ ಇಷ್ಟ ಇಲ್ಲದಿರೋ ವಿಷ್ಯಗಳನ್ನ ಮಾಡೋಕೆ ಒತ್ತಾಯ ಮಾಡ್ತಿದ್ರು. ಆಗ ನಾನು ತುಂಬ ಬೇಜಾರಲ್ಲಿದ್ದೆ. ಯೆಹೋವನಿಗೆ ನಿಯತ್ತಾಗಿ ಇರೋಕೆ ಆಗಲ್ವೇನೋ ಅಂತ ಅನಿಸ್ತಿತ್ತು. ಆಗ ಅಮ್ಮ ನನ್ನನ್ನ ಊರಾಚೆ ಇರೋ ಬೆಟ್ಟಕ್ಕೆ ಕರ್ಕೊಂಡು ಹೋದ್ರು. ಅಲ್ಲಿ ರಾತ್ರಿ ಹೊತ್ತಲ್ಲಿ ಆಕಾಶ ತುಂಬ ಚೆನ್ನಾಗಿ ಕಾಣಿಸುತ್ತೆ. ಅಮ್ಮ ನಕ್ಷತ್ರಗಳನ್ನ ತೋರಿಸಿ ‘ಇದನ್ನೆಲ್ಲ ಸೃಷ್ಟಿ ಮಾಡಿರೋ ಯೆಹೋವ ದೇವರಿಗೆ ಎಷ್ಟು ಶಕ್ತಿ ಇದೆ ಅಲ್ವಾ’ ಅಂದ್ರು. ‘ನೀನು ನಿಯತ್ತಾಗಿರೋಕೆ ನಿನಗೆ ಬೇಕಾದ ಶಕ್ತಿ, ಬಲವನ್ನ ಯೆಹೋವ ಕೊಟ್ಟೇ ಕೊಡ್ತಾನೆ, ಭಯಪಡಬೇಡ’ ಅಂತ ಧೈರ್ಯ ಹೇಳಿದ್ರು. ಅವತ್ತು ಆಕಾಶದ ಕಡೆ ನೋಡಿದಾಗಿಂದ ನನಗೆ ಯೆಹೋವನ ಬಗ್ಗೆ ಜಾಸ್ತಿ ತಿಳ್ಕೊಬೇಕು, ಆತನಿಗೆ ನಿಯತ್ತಾಗಿ ಇರಬೇಕು ಅನ್ನೋ ಆಸೆ ಜಾಸ್ತಿ ಆಯ್ತು.”

14. ಯೆಹೋವ ಖುಷಿಯಾಗಿರೋ ದೇವರು ಅಂತ ಮಕ್ಕಳಿಗೆ ಅರ್ಥ ಮಾಡಿಸೋಕೆ ಹೆತ್ತವರು ಏನು ಮಾಡಬೇಕು?

14 ಯೆಹೋವ ಖುಷಿಯಾಗಿರೋ ದೇವರು. ನಾವು ಯಾವಾಗ್ಲೂ ಸಂತೋಷವಾಗಿರಬೇಕು ಅಂತ ಆತನು ಆಸೆ ಪಡ್ತಾನೆ. ತುಂಬ ಪ್ರಾಣಿಗಳು, ಪಕ್ಷಿಗಳು ಮತ್ತು ಮೀನುಗಳು ಆಟ ಆಡ್ತವೆ ಅಂತ ವಿಜ್ಞಾನಿಗಳು ಹೇಳ್ತಾರೆ. (ಯೋಬ 40:20) ಪ್ರಾಣಿಗಳು ಆಟ ಆಡೋದನ್ನ ನೋಡಿ ನಿಮ್ಮ ಮಕ್ಕಳು ನಕ್ಕಿದ್ದು ನಿಮಗೆ ನೆನಪಿದ್ಯಾ? ಒಂದು ಬೆಕ್ಕು ದಾರದ ಉಂಡೆ ಇಟ್ಕೊಂಡು ಆಡ್ತಿರೋದನ್ನ ಅಥವಾ ಎರಡು ಚಿಕ್ಕ ನಾಯಿಮರಿಗಳು ಕಚ್ಚಾಡ್ಕೊಂಡು ಉರುಳಾಡೋದನ್ನ ನೋಡಿರಬಹುದು. ಪ್ರಾಣಿಗಳ ಈ ತುಂಟತನ ನೋಡಿ ನಿಮ್ಮ ಮಕ್ಕಳು ನಗುವಾಗ ‘ಇದನ್ನೆಲ್ಲ ಸೃಷ್ಟಿ ಮಾಡಿರೋ ದೇವರು ಯಾವಾಗ್ಲೂ ಖುಷಿಯಾಗಿ ಇರ್ತಾನೆ, ನಾವೂ ಖುಷಿಖುಷಿಯಾಗಿ ಇರಬೇಕು ಅಂತ ಇಷ್ಟ ಪಡ್ತಾನೆ’ ಅಂತ ಅವ್ರಿಗೆ ಹೇಳ್ಕೊಡಿ.​—1 ತಿಮೊ. 1:11.

ಕುಟುಂಬದಲ್ಲಿ ಎಲ್ರೂ ಸೃಷ್ಟಿ ನೋಡಿ ಖುಷಿಪಡಿ

ಪಾರ್ಕ್‌ ಅಥವಾ ಬೇರೆ ಜಾಗಕ್ಕೆ ಕರ್ಕೊಂಡು ಹೋದಾಗ ಮಕ್ಕಳು ಮನಸ್ಸುಬಿಚ್ಚಿ ಮಾತಾಡ್ತಾರೆ (ಪ್ಯಾರ 15 ನೋಡಿ)

15. ಮಕ್ಕಳು ಮನಸ್ಸುಬಿಚ್ಚಿ ಮಾತಾಡೋಕೆ ಅಪ್ಪಅಮ್ಮಂದಿರು ಏನು ಮಾಡಬಹುದು? (ಜ್ಞಾನೋಕ್ತಿ 20:5) (ಚಿತ್ರನೂ ನೋಡಿ.)

15 ಮಕ್ಕಳು ನಮ್ಮ ಹತ್ರ ಎಲ್ಲಾನೂ ಬಾಯಿಬಿಟ್ಟು ಹೇಳ್ಕೊಳ್ಳಲ್ಲ. ಅವ್ರಿಗಿರೋ ಕಷ್ಟಗಳನ್ನ ‘ನಮ್ಮ ಹತ್ರ ಹೇಳ್ಕೊಳ್ಳೋದೇ ಇಲ್ಲ’ ಅಂತ ತುಂಬ ಹೆತ್ತವರು ಹೇಳ್ತಾರೆ. ನಿಮಗೂ ಹಾಗನಿಸಿದ್ಯಾ? ಹಾಗಿದ್ರೆ ನಿಮ್ಮ ಮಕ್ಕಳ ಮನಸ್ಸಲ್ಲಿ ಇರೋದನ್ನ ಹೊರಗೆ ತೆಗೆಯೋಕೆ ಪ್ರಯತ್ನ ಮಾಡಬೇಕು. (ಜ್ಞಾನೋಕ್ತಿ 20:5 ಓದಿ.) ಕೆಲವು ಹೆತ್ತವರು ತಮ್ಮ ಮಕ್ಕಳನ್ನ ಪಾರ್ಕ್‌ ಅಥವಾ ಬೇರೆ ಎಲ್ಲಿಗಾದ್ರೂ ಕರ್ಕೊಂಡು ಹೋದಾಗ ಅವ್ರ ಮನಸ್ಸಲ್ಲಿ ಇರೋದನ್ನೆಲ್ಲ ಮಾತಾಡ್ತಾರೆ. ಯಾಕಂದ್ರೆ ಈ ರೀತಿ ಹೋದಾಗ ಅವರು ಮನಸ್ಸುಬಿಚ್ಚಿ ಮಾತಾಡೋಕೆ ಯಾವ ತಡೆನೂ ಇರಲ್ಲ, ಅಪಕರ್ಷಣೆಗಳೂ ಇರಲ್ಲ ಅಂತ ಹೇಳ್ತಾರೆ. ತೈವಾನ್‌ನಲ್ಲಿರೋ ಸಹೋದರ ಮಸಹಿಕೋ ಏನು ಹೇಳ್ತಾರಂದ್ರೆ, “ನಾವು ಮಕ್ಕಳ ಜೊತೆ ಬೀಚ್‌ಗೆ ಅಥವಾ ಬೆಟ್ಟಕ್ಕೆ ಹೋದಾಗ ಖುಷಿಖುಷಿಯಾಗಿ ಇರ್ತೀವಿ. ಅದ್ರಿಂದ ಒಬ್ರಿಗೊಬ್ರು ಮನಸ್ಸುಬಿಚ್ಚಿ ಮಾತಾಡೋಕೆ ತುಂಬ ಸುಲಭ ಆಗುತ್ತೆ. ಹೀಗೆ ನಾವು ಮಕ್ಕಳನ್ನ ಚೆನ್ನಾಗಿ ಅರ್ಥ ಮಾಡ್ಕೊಳ್ತೀವಿ.” ಸಹೋದರಿ ಕಾಟ್ಯಾ ಏನು ಹೇಳ್ತಾರಂದ್ರೆ, “ನಾನು ಸ್ಕೂಲ್‌ ಮುಗಿಸಿ ಬಂದಾಗ ನಮ್ಮಮ್ಮ ಪಾರ್ಕ್‌ಗೆ ಕರ್ಕೊಂಡು ಹೋಗ್ತಿದ್ರು. ಅಲ್ಲಿ ತುಂಬ ಶಾಂತವಾಗಿ ಇರ್ತಿತ್ತು. ನಾನು ಅಮ್ಮ ಹತ್ರ ಮನಸ್ಸುಬಿಚ್ಚಿ ಮಾತಾಡ್ತಿದ್ದೆ, ಸ್ಕೂಲ್‌ನಲ್ಲಿ ಏನೆಲ್ಲಾ ನಡಿತೋ ಅದನ್ನೆಲ್ಲ ಹೇಳ್ಕೊಳ್ತಿದ್ದೆ.”

16. ಕುಟುಂಬದಲ್ಲಿ ಎಲ್ರೂ ಯೆಹೋವ ಮಾಡಿರೋ ಸೃಷ್ಟಿಯನ್ನ ಆನಂದಿಸೋಕೆ ಏನು ಮಾಡಬಹುದು?

16 ಅಪ್ಪಅಮ್ಮ-ಮಕ್ಕಳು ಎಲ್ರೂ ಪ್ರಕೃತಿನ ನೋಡಿ ಖುಷಿಪಡ್ತಾ ಒಂದಾಗಿ ಇರಬೇಕು ಅಂತ ಯೆಹೋವ ಆಸೆಪಡ್ತಾನೆ. ಅದಕ್ಕೇ “ನಗೋಕೆ ಒಂದು ಸಮಯ,” “ಕುಣಿದಾಡೋಕೆ ಒಂದು ಸಮಯ” ಇದೆ ಅಂತ ಬೈಬಲ್‌ ಹೇಳುತ್ತೆ. (ಪ್ರಸಂ. 3:1, 4) ನಾವು ಖುಷಿಖುಷಿಯಾಗಿ ಇರಬೇಕು ಅಂತಾನೇ ಯೆಹೋವ ಎಷ್ಟೋ ವಿಷ್ಯಗಳನ್ನ ಸೃಷ್ಟಿ ಮಾಡಿದ್ದಾನೆ. ಕೆಲವರು ಪ್ರಕೃತಿಯ ಸೊಬಗನ್ನ ನೋಡೋಕೆ ಕುಟುಂಬ ಸಮೇತ ಹಳ್ಳಿಗಳಿಗೆ, ಬೆಟ್ಟಗಳಿಗೆ ಅಥವಾ ಬೀಚ್‌ಗೆ ಹೋಗ್ತಾರೆ. ಕೆಲವು ಮಕ್ಕಳು ಪಾರ್ಕ್‌ನಲ್ಲಿ ಆಟ ಆಡೋಕೆ ಮತ್ತು ಪ್ರಾಣಿಗಳನ್ನ ನೋಡೋಕೆ, ಕೆರೆಯಲ್ಲಿ ಅಥವಾ ನದಿಯಲ್ಲಿ ಈಜಾಡೋಕೆ ಇಷ್ಟ ಪಡ್ತಾರೆ. ನಮ್ಮ ಮನಸ್ಸನ್ನ ರಂಜಿಸೋಕೆ, ನಮ್ಮನ್ನ ಖುಷಿಯಾಗಿ ಇಡೋಕೆ ಯೆಹೋವ ನಮಗೇನೂ ಕಮ್ಮಿ ಮಾಡಿಲ್ಲ ಅಲ್ವಾ!

17. ಯೆಹೋವ ಮಾಡಿರೋ ಸೃಷ್ಟಿಯನ್ನ ನೋಡಿ ಖುಷಿಪಡೋಕೆ ಮಕ್ಕಳಿಗೆ ಈಗ್ಲೇ ಯಾಕೆ ಕಲಿಸಬೇಕು?

17 ದೇವರ ಹೊಸ ಲೋಕದಲ್ಲಿ ಹೆತ್ತವರು-ಮಕ್ಕಳು ಎಲ್ರೂ ಯೆಹೋವ ಮಾಡಿರೋ ಸೃಷ್ಟಿಯನ್ನ ನೋಡ್ತಾ ಇನ್ನೂ ಜಾಸ್ತಿ ಖುಷಿಪಡ್ತಾರೆ. ಆಗ ಪ್ರಾಣಿಗಳನ್ನ ನೋಡಿ ನಾವು ಭಯಪಡಲ್ಲ. ನಮ್ಮನ್ನ ನೋಡಿ ಅವು ಕೂಡ ಭಯಪಡಲ್ಲ. (ಯೆಶಾ. 11:6-9) ಯೆಹೋವ ಮಾಡಿರೋ ಒಂದೊಂದನ್ನೂ ನೋಡ್ತಾ ಶಾಶ್ವತವಾಗಿ ಖುಷಿಯಾಗಿ ಇರ್ತೀವಿ. (ಕೀರ್ತ. 22:26) ಹಾಗಂತ ಹೊಸ ಲೋಕ ಬರೋ ತನಕ ನಿಮ್ಮ ಮಕ್ಕಳು ಕಾಯಬೇಕು ಅಂತೇನಿಲ್ಲ. ಈಗ್ಲೂ ಸೃಷ್ಟಿಯನ್ನ ತೋರಿಸ್ತಾ ನೀವು ನಿಮ್ಮ ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸಬಹುದು. ಆಗ ನಿಮ್ಮ ಮಕ್ಕಳೂ ಕೂಡ ರಾಜ ದಾವೀದನ ತರ ಏನು ಹೇಳ್ತಾರೆ ಗೊತ್ತಾ? “ಯೆಹೋವನೇ, . . . ನಿನ್ನ ಕೆಲಸಗಳಿಗೆ ಸರಿಸಾಟಿ ಇಲ್ಲ” ಅಂತ ಹೇಳ್ತಾರೆ.​—ಕೀರ್ತ. 86:8.

ಗೀತೆ 88 ಮಕ್ಕಳು​—ದೇವರು ಕೊಡುವ ಹೊಣೆಗಾರಿಕೆ

a ಅಪ್ಪಅಮ್ಮ ಜೊತೆ ಸೃಷ್ಟಿಯನ್ನ ನೋಡಿ ಆನಂದಿಸಿದ ಕ್ಷಣಗಳು ನಿಮಗೆ ನೆನಪಿರಬಹುದು. ಅವರು ಅದನ್ನ ತೋರಿಸಿ ಯೆಹೋವನ ಬಗ್ಗೆ ಕಲಿಸಿರಬಹುದು. ನೀವೂ ಕೂಡ ನಿಮ್ಮ ಮಕ್ಕಳಿಗೆ ಸೃಷ್ಟಿ ತೋರಿಸ್ತಾ ಯೆಹೋವನ ಗುಣಗಳ ಬಗ್ಗೆ ಕಲಿಸಬಹುದು. ಹೇಗೆ ಅಂತ ಈ ಲೇಖನದಲ್ಲಿ ನೋಡೋಣ.