ವಾಚಕರಿಂದ ಪ್ರಶ್ನೆಗಳು
ರೂತ್‌ನ ಮದುವೆಯಾದ್ರೆ ತನ್ನ ಆಸ್ತಿ “ನಷ್ಟ ಆಗುತ್ತೆ” ಅಂತ ಅವಳ “ಹತ್ರದ ಸಂಬಂಧಿ” ಯಾಕೆ ಹೇಳಿದ? (ರೂತ್ 4:1, 6, ಪಾದಟಿಪ್ಪಣಿ)
ಹಿಂದಿನ ಕಾಲದಲ್ಲಿ ಒಬ್ಬ ಇಸ್ರಾಯೇಲ್ಯ ವ್ಯಕ್ತಿ ಮಕ್ಕಳಾಗೋ ಮುಂಚೆನೇ ತೀರಿಹೋದ್ರೆ, ಅವನ ಆಸ್ತಿಯೆಲ್ಲಾ ಯಾರಿಗೆ ಸೇರ್ತಿತ್ತು? ಅವನ ವಂಶದಲ್ಲಿ ಅವನ ಹೆಸ್ರು ಉಳಿಬೇಕಂದ್ರೆ ಏನ್ ಮಾಡಬೇಕಿತ್ತು? ಮೋಶೆಯ ನಿಯಮ ಪುಸ್ತಕದಲ್ಲಿ ಅದ್ರ ಬಗ್ಗೆ ಏನ್ ಹೇಳಿತ್ತು ಅಂತ ಈಗ ನೋಡೋಣ.
ಒಬ್ಬ ವ್ಯಕ್ತಿ ಮಕ್ಕಳಾಗೋ ಮುಂಚೆ ತೀರಿಹೋದ ಅಂತ ಅಂದ್ಕೊಳ್ಳಿ. ಅಥವಾ ಅವನು ತುಂಬ ಬಡವನಾಗಿದ್ರಿಂದ ತನ್ನ ಜಮೀನನ್ನ ಮಾರಿಬಿಟ್ಟ ಅಂತ ಅಂದ್ಕೊಳ್ಳಿ. ಅವನ ಜಮೀನನ್ನ ಅವನ ಹತ್ರದ ಸಂಬಂಧಿ ಅಥವಾ ಅವನ ಅಣ್ಣ ತಮ್ಮಂದಿರಲ್ಲಿ ಯಾರಾದ್ರೂ ಒಬ್ರು ಕಾಸು ಕೊಟ್ಟು ತಗೊಬಹುದಿತ್ತು. ಆಗ ಆ ಜಮೀನು ಕೈ ಬಿಟ್ಟು ಹೋಗ್ತಾ ಇರಲಿಲ್ಲ. ಅದು ಆ ಮನೆತನದವ್ರ ಹತ್ರನೇ ಇರ್ತಿತ್ತು.—ಯಾಜ. 25:23-28; ಅರ. 27:8-11.
ತೀರಿಹೋದವನ ಹೆಸ್ರನ್ನ ಉಳಿಸ್ಕೊಬೇಕು ಅಂದ್ರೆ ಏನ್ ಮಾಡಬೇಕಿತ್ತು? ಅವನ ಒಡಹುಟ್ಟಿದವ್ರಲ್ಲಿ ಯಾರಾದ್ರು ಅವನ ಹೆಂಡತಿನ ಮದುವೆ ಆಗಬೇಕಿತ್ತು. ಅವ್ರಿಗೆ ಮಗುವಾದಾಗ ತೀರಿಹೋದವನ ಆಸ್ತಿ ಮತ್ತು ಹೆಸ್ರು ಉಳಿತಿತ್ತು. ಇದು ವಿಧವೆಯಾಗಿದ್ದ ಹೆಂಗಸಿಗೆ ಪ್ರೀತಿ ತೋರಿಸೋ ಒಂದು ಏರ್ಪಾಡಾಗಿತ್ತು. ಈ ತರದ ನಿಯಮ ಇದ್ದಿದ್ರಿಂದಾನೇ ರೂತ್‌ಗೆ ಮತ್ತೆ ಮದುವೆ ಆಯ್ತು.—ಧರ್ಮೋ. 25:5-7; ಮತ್ತಾ. 22:23-28.
ನೊವೊಮಿ ಎಲೀಮೆಲೆಕ ಅನ್ನೋ ವ್ಯಕ್ತಿನ ಮದುವೆ ಆಗಿದ್ದಳು. ಸ್ವಲ್ಪ ವರ್ಷ ಆದ್ಮೇಲೆ ಎಲೀಮೆಲೆಕ ಮತ್ತು ಅವನ ಇಬ್ರು ಗಂಡು ಮಕ್ಕಳು ತೀರಿಹೋದ್ರು. ಈಗ ಆ ಕುಟುಂಬನ ನೋಡ್ಕೊಳ್ಳೋಕೆ ಯಾರೂ ಇರಲಿಲ್ಲ. (ರೂತ್ 1:1-5) ಆಗ ನೊವೊಮಿ ರೂತ್ ಜೊತೆ ಯೆಹೂದಕ್ಕೆ ವಾಪಸ್ ಬಂದಳು. ಅಲ್ಲಿ ಎಲೀಮೆಲೆಕನ ಹತ್ರದ ಸಂಬಂಧಿ ಒಬ್ಬ ಇದ್ದ. ಅವನ ಹೆಸ್ರು ಬೋವಜ. ಅವನಿಗೆ ಎಲೀಮೆಲೆಕನ ಆಸ್ತಿನ ಬಿಡಿಸ್ಕೊಳ್ಳೋ ಹಕ್ಕಿತ್ತು. (ರೂತ್ 2:1, 19, 20; 3:1-4) ‘ನಮ್ಮ ಜಮೀನನ್ನ ಬಿಡಿಸ್ಕೊಳ್ಳೋಕೆ ಅವನಿಗೆ ಹೇಳು’ ಅಂತ ನೊವೊಮಿ ರೂತ್‌ಗೆ ಹೇಳಿದಳು. ಆದ್ರೆ ಎಲೀಮೆಲೆಕನಿಗೆ ಬೋವಜನಿಗಿಂತ “ಹತ್ರದ ಸಂಬಂಧಿ” ಒಬ್ಬ ಇದ್ದ. ಎಲೀಮೆಲೆಕನ ಜಮೀನನ್ನ ಬಿಡಿಸ್ಕೊಳ್ಳೋ ಹಕ್ಕು ಮೊದ್ಲು ಆ ಸಂಬಂಧಿಕನಿಗೆ ಇತ್ತು. ಇದು ಬೋವಜನಿಗೆ ಗೊತ್ತಿತ್ತು.—ರೂತ್ 3:9, 12, 13.
ಮೊದ್ಲು “ಆ ಹತ್ರದ ಸಂಬಂಧಿ” ಜಮೀನನ್ನ ಬಿಡಿಸ್ಕೊಳ್ಳೋಕೆ ಒಪ್ಕೊಂಡ. (ರೂತ್ 4:1-4) ‘ನೊವೊಮಿಗೆ ವಯಸ್ಸಾಗಿದೆ, ಹೇಗಿದ್ರೂ ಅವಳಿಗೆ ಮಕ್ಕಳಾಗಲ್ಲ. ಹಾಗಾಗಿ ನಾನು ಆ ಜಮೀನನ್ನ ಕಾಸು ಕೊಟ್ಟು ತಗೊಂಡ್ರೂ ಅದು ನನ್ನ ಹೆಸ್ರಲ್ಲೇ ಉಳಿಯುತ್ತೆ. ಅದು ನನಗೆ ಲಾಭಾನೇ’ ಅಂತ ಅಂದ್ಕೊಂಡ.
ಆದ್ರೆ ಆಮೇಲೆ ರೂತ್‌ನ ಮದುವೆ ಆಗಬೇಕು ಅಂತ ಆ ವ್ಯಕ್ತಿಗೆ ಗೊತ್ತಾದಾಗ ಅವನು “ನನ್ನಿಂದಾಗಲ್ಲ. ಬಿಡಿಸ್ಕೊಂಡ್ರೆ ನನ್ನ ಆಸ್ತಿ ನಷ್ಟ ಆಗುತ್ತೆ” ಅಂತ ಹೇಳಿಬಿಟ್ಟ. (ರೂತ್ 4:5, 6, ಪಾದಟಿಪ್ಪಣಿ) ಅವನು ಯಾಕೆ ಮನಸ್ಸು ಬದಲಾಯಿಸಿದ?
ಹೇಗಿದ್ರೂ ರೂತ್‌ನ ಯಾರು ಮದುವೆ ಆಗ್ತಾರೋ ಅವ್ರಿಗೆ ಹುಟ್ಟೋ ಮಗುಗೆ ಎಲೀಮೆಲೆಕನ ಜಮೀನು ಸಿಗ್ತಿತ್ತು. ಅಂದಮೇಲೆ ಆ ಹತ್ರದ ಸಂಬಂಧಿಯ “ಆಸ್ತಿ” ಹೇಗೆ “ನಷ್ಟ” ಆಗ್ತಿತ್ತು? ಇದಕ್ಕೆ ಕಾರಣ ಏನು ಅಂತ ಬೈಬಲಲ್ಲಿ ಕೊಟ್ಟಿಲ್ಲ. ಆದ್ರೆ ಬಹುಶಃ ಅವನು ಈ ರೀತಿ ಯೋಚ್ನೆ ಮಾಡಿರಬಹುದು.
ಒಂದು, ರೂತ್‌ಗೂ ತನಗೂ ಮಗು ಆದ್ರೆ ಎಲೀಮೆಲೆಕನ ಜಮೀನು ಆ ಮಗುಗೆ ಸೇರುತ್ತೆ. ಆದ್ರಿಂದ ಈಗ ‘ನಾನು ಕಾಸು ಕೊಟ್ಟು ತಗೊಂಡ್ರೂ ಅದು ನನಗೆ ನಷ್ಟಾನೇ’ ಅಂತ ಯೋಚ್ನೆ ಮಾಡಿರಬಹುದು.
ಎರಡು, ರೂತ್ ಮತ್ತು ನೊವೊಮಿನ ನೋಡ್ಕೊಳ್ಳೋ ಜವಾಬ್ದಾರಿ ‘ನನ್ನ ತಲೆ ಮೇಲೆನೇ ಬಂದುಬಿಡುತ್ತೆ’ ಅಂತ ಯೋಚಿಸಿರಬಹುದು.
ಮೂರು, ಒಂದುವೇಳೆ ಅವನಿಗೆ ಈಗಾಗ್ಲೇ ಮಕ್ಕಳಿದ್ರೆ, ಆ ಮಕ್ಕಳ ಜೊತೆ ಮುಂದೆ ತನಗೂ ರೂತ್‌ಗೂ ಹುಟ್ಟೋ ಮಕ್ಕಳಿಗೆ ತನ್ನ ಆಸ್ತಿ ಹಂಚಬೇಕಾಗುತ್ತೆ ಅಂತ ಅವನು ಅಂದ್ಕೊಂಡಿರಬಹುದು.
ನಾಲ್ಕು, ಒಂದುವೇಳೆ ಅವನಿಗೆ ಮಕ್ಕಳಿಲ್ಲಾಂದ್ರೆ, ತನಗೂ ರೂತ್‌ಗೂ ಹುಟ್ಟೋ ಮಗುಗೆ ತನ್ನ ಆಸ್ತಿನೂ ಹೋಗಿಬಿಡುತ್ತೆ ಅಂತ ಅವನು ಯೋಚಿಸಿರಬಹುದು. ಅಂದ್ರೆ ಎಲೀಮೆಲೆಕನ ಹೆಸ್ರು ಉಳಿಸೋ ಮಕ್ಕಳಿಗೆ ತನ್ನ ಆಸ್ತಿ ಹೋಗಿಬಿಡುತ್ತೆ ಅಂತ ಅವನು ಅಂದ್ಕೊಂಡಿರಬೇಕು. ನೊವೊಮಿಗೆ ಸಹಾಯ ಮಾಡೋಕೆ ಹೋಗಿ ತನ್ನ ಆಸ್ತಿನ ಕಳ್ಕೊಳ್ಳೋಕೆ ಅವನಿಗೆ ಇಷ್ಟ ಇರಲಿಲ್ಲ. ಅದಕ್ಕೆ ಅವನು ಆ ಜಮೀನನ್ನ ಬಿಡಿಸ್ಕೊಳ್ಳಲಿಲ್ಲ. ಅದನ್ನ ಬಿಡಿಸ್ಕೊಳ್ಳೋಕೆ ಬೋವಜನಿಗೆ ಹೇಳಿದ. ಬೋವಜ ಒಪ್ಕೊಂಡ. ಯಾಕಂದ್ರೆ ಆ ಆಸ್ತಿ ‘ತೀರಿಹೋದವನ ವಂಶದ ಹೆಸ್ರಲ್ಲೇ ಇರಬೇಕು’ ಅಂತ ಬೋವಜ ಆಸೆ ಪಟ್ಟ.—ರೂತ್ 4:10.
ಆ ಹತ್ರದ ಸಂಬಂಧಿಗೆ ತನ್ನ ಆಸ್ತಿ ಮತ್ತು ಹೆಸ್ರನ್ನ ಉಳಿಸ್ಕೊಬೇಕು ಅನ್ನೋದಷ್ಟೇ ಮನಸ್ಸಲ್ಲಿತ್ತು. ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡೋ ಅವಕಾಶ ಅವನಿಗಿತ್ತು. ಆದ್ರೆ ಅವನು ಸ್ವಾರ್ಥಿಯಾಗಿದ್ರಿಂದ ಅದನ್ನ ಮಾಡಲಿಲ್ಲ. ಅವನು ತನ್ನ ಹೆಸ್ರನ್ನ ಉಳಿಸ್ಕೊಬೇಕು ಅಂತ ಇಷ್ಟೆಲ್ಲಾ ಮಾಡಿದ. ಆದ್ರೆ ಕೊನೆಗೂ ಅವನ ಹೆಸ್ರು ಉಳಿಲೇ ಇಲ್ಲ. ಅವನ ಹೆಸ್ರೇನು ಅಂತ ಈಗ ಯಾರಿಗೂ ಗೊತ್ತೇ ಇಲ್ಲ. ಬೋವಜನಿಗೆ ಮೆಸ್ಸೀಯನಾದ ಯೇಸು ಕ್ರಿಸ್ತನ ಪೂರ್ವಜನಾಗೋ ಅವಕಾಶ ಸಿಕ್ತು. ಆ ಹತ್ರದ ಸಂಬಂಧಿ ಬೋವಜನಿಗೆ ಸಿಕ್ಕಿದ ಈ ವಿಶೇಷ ಸುಯೋಗ ಕಳ್ಕೊಂಡ.—ಮತ್ತಾ. 1:5; ಲೂಕ 3:23, 32.