ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ”

“ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ”

“ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ . . . ದೀಕ್ಷಾಸ್ನಾನ ಮಾಡಿಸಿ, ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ.” —ಮತ್ತಾ. 28:19, 20.

ಗೀತೆಗಳು: 47, 97

1, 2. ಮತ್ತಾಯ 24:14 ರಲ್ಲಿರುವ ಯೇಸುವಿನ ಮಾತುಗಳಿಂದಾಗಿ ಯಾವ ಪ್ರಶ್ನೆಗಳು ಏಳುತ್ತವೆ?

ದೇವರ ರಾಜ್ಯದ ಸುವಾರ್ತೆಯನ್ನು ಕಡೇ ದಿವಸಗಳಲ್ಲಿ ಎಲ್ಲ ಜನರಿಗೆ ಸಾರಲಾಗುವುದು ಎಂದು ಯೇಸು ಮುಂತಿಳಿಸಿದನು. (ಮತ್ತಾ. 24:14) ಯೆಹೋವನ ಸಾಕ್ಷಿಗಳಾದ ನಾವು ನಮ್ಮ ಸಾರುವ ಕೆಲಸಕ್ಕಾಗಿ ಲೋಕವ್ಯಾಪಕವಾಗಿ ಪ್ರಸಿದ್ಧರು. ನಾವು ಸಾರುವ ಸಂದೇಶವನ್ನು ಕೆಲವು ಜನರು ಇಷ್ಟಪಡುತ್ತಾರೆ, ಇನ್ನು ಕೆಲವರು ಇಷ್ಟಪಡುವುದಿಲ್ಲ. ಕೆಲವರು ಇಷ್ಟಪಡದಿದ್ದರೂ ನಾವು ಮಾಡುವ ಕೆಲಸಕ್ಕಾಗಿ ನಮ್ಮನ್ನು ಗೌರವಿಸುತ್ತಾರೆ. ಯೇಸು ಹೇಳಿದ ಸಾರುವ ಕೆಲಸವನ್ನು ಮಾಡುತ್ತಿರುವವರು ನಾವೇ ಎಂದು ಹೇಳುತ್ತೇವೆ. ಹಾಗೆ ಹೇಳಲು ನಮಗೆ ಹಕ್ಕು ಇದೆಯಾ? ಯೇಸು ಮುಂತಿಳಿಸಿದ ರೀತಿಯ ಸಾರುವ ಕೆಲಸವನ್ನೇ ನಾವು ಮಾಡುತ್ತಿದ್ದೇವೆಂದು ಹೇಗೆ ಖಚಿತವಾಗಿ ಹೇಳಬಹುದು?

2 ಅನೇಕ ಕ್ರೈಸ್ತ ಪಂಗಡಗಳು ಸಹ ಯೇಸುವಿನ ಶುಭ ಸಂದೇಶವನ್ನು ಸಾರುತ್ತಿದ್ದೇವೆಂದು ವಾದಿಸುತ್ತವೆ. ಆದರೆ ಅವರ ಅರ್ಥದಲ್ಲಿ ಸಾರುವ ಕೆಲಸ ಅಂದರೆ ಚರ್ಚ್‌ಗಳಲ್ಲಿ, ಟಿವಿ, ಇಂಟರ್‌ನೆಟ್‌ಗಳಲ್ಲಿ ಪ್ರಸಂಗಗಳನ್ನು ಕೊಡುವುದು ಅಥವಾ ಹೆಚ್ಚೆಂದರೆ ತಾವು ಯೇಸು ಬಗ್ಗೆ ಹೇಗೆ ಕಲಿತುಕೊಂಡೆವೆಂದು ಬೇರೆಯವರಿಗೆ ತಿಳಿಸುವುದು ಅಷ್ಟೇ. ಬಡಬಗ್ಗರಿಗೆ, ಅನಾಥರಿಗೆ ದಾನಧರ್ಮ ಮಾಡುವುದು, ಡಾಕ್ಟರ್‌ ಅಥವಾ ನರ್ಸ್‌ಗಳಾಗಿ ಜನಸೇವೆ ಮಾಡುವುದು, ಶಿಕ್ಷಕರಾಗಿ ವಿದ್ಯಾದಾನ ಮಾಡುವುದು ಇವೆಲ್ಲ ಕೂಡ ಸುವಾರ್ತೆ ಸಾರುವುದಾಗಿದೆ ಎಂದು ಇನ್ನೂ ಕೆಲವರು ನೆನಸುತ್ತಾರೆ. ಇದು ನಿಜವಾಗಿಯೂ ಯೇಸು ಹೇಳಿದ ಸಾರುವ ಕೆಲಸವೇ?

3. ಮತ್ತಾಯ 28:19, 20 ಕ್ಕನುಸಾರ ಯೇಸುವಿನ ಹಿಂಬಾಲಕರು ಯಾವ ನಾಲ್ಕು ವಿಷಯಗಳನ್ನು ಮಾಡಬೇಕು?

3 ಸಾರುವ ಕೆಲಸವೆಂದರೆ ಜನರು ಶಿಷ್ಯರ ಬಳಿಗೆ ಬರುವಂತೆ ಕಾಯಬೇಕೆಂದು ಯೇಸು ಹೇಳಿದನಾ? ಇಲ್ಲ! ಪುನರುತ್ಥಾನದ ಬಳಿಕ ಯೇಸು ನೂರಾರು ಹಿಂಬಾಲಕರಿಗೆ ಏನು ಹೇಳಿದನೆಂದು ಗಮನಿಸಿ: “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ . . . ದೀಕ್ಷಾಸ್ನಾನ ಮಾಡಿಸಿ, ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ.” (ಮತ್ತಾ. 28:19, 20) ಹಾಗಾಗಿ ಯೇಸುವಿನ ಹಿಂಬಾಲಕರಾದ ನಾವು ನಾಲ್ಕು ವಿಷಯಗಳನ್ನು ಮಾಡಬೇಕು. ಜನರನ್ನು ಶಿಷ್ಯರನ್ನಾಗಿ ಮಾಡಬೇಕು, ಅವರಿಗೆ ದೀಕ್ಷಾಸ್ನಾನ ಮಾಡಿಸಬೇಕು, ಅವರಿಗೆ ಬೋಧಿಸಬೇಕು. ಇದೆಲ್ಲದಕ್ಕಿಂತ ಮೊದಲು ಜನರ ಬಳಿ ಹೋಗಬೇಕು. ಬೈಬಲ್‌ ವಿದ್ವಾಂಸರೊಬ್ಬರು ಹೇಳಿದ್ದು: “‘ಹೊರಟುಹೋಗುವುದು’ ಪ್ರತಿಯೊಬ್ಬ ವಿಶ್ವಾಸಿ ಮಾಡಲೇಬೇಕಾದ ಕೆಲಸ. ರಸ್ತೆಯ ಆಚೆಯೇ ಆಗಲಿ ಸಾಗರದ ಆಚೆಯೇ ಆಗಲಿ ಅವನು ಸಾರಲು ಹೋಗಬೇಕು.”—ಮತ್ತಾ. 10:7; ಲೂಕ 10:3.

4. ‘ಮನುಷ್ಯರನ್ನು ಹಿಡಿಯುವ ಬೆಸ್ತರಾಗಲು’ ಏನು ಅಗತ್ಯ?

4 ಸಾರುವ ಈ ಕೆಲಸವನ್ನು ಶಿಷ್ಯರು ಒಬ್ಬೊಬ್ಬರಾಗಿ ಮಾಡಬೇಕೆಂದು ಯೇಸು ಹೇಳಿದನಾ? ಅಥವಾ ಒಂದು ಗುಂಪಾಗಿ ಸಂಘಟಿತ ರೀತಿಯಲ್ಲಿ ಮಾಡಬೇಕೆಂದು ಹೇಳಿದನಾ? ‘ಎಲ್ಲ ಜನಾಂಗಗಳಿಗೆ’ ಸಾರಲು ಒಬ್ಬ ವ್ಯಕ್ತಿಯಿಂದ ಸಾಧ್ಯವಿಲ್ಲ. ಆದ್ದರಿಂದ ಯೇಸುವಿನ ಶಿಷ್ಯರು ಒಂದು ಗುಂಪಾಗಿ ಸಂಘಟಿತರಾಗಿದ್ದು ಸಾರಬೇಕಿತ್ತು. ‘ಮನುಷ್ಯರನ್ನು ಹಿಡಿಯುವ ಬೆಸ್ತರು’ ಎಂದು ಯೇಸು ಹೇಳಿದಾಗ ಇದೇ ಅರ್ಥದಲ್ಲಿ ಹೇಳಿದನು. (ಮತ್ತಾಯ 4:18-22 ಓದಿ.) ಯೇಸು ಹೇಳಿದ ಮೀನು ಹಿಡಿಯುವಿಕೆಯು ಒಬ್ಬ ಬೆಸ್ತನು ತನ್ನ ಸ್ವಂತ ಗಾಳ ಮತ್ತು ಎರೆಯನ್ನು ಹಾಕಿ ಮೀನು ಸಿಕ್ಕಿಬೀಳುವ ವರೆಗೆ ಕಾಯುವುದಕ್ಕೆ ಸೂಚಿಸುವುದಿಲ್ಲ. ಬದಲಿಗೆ ಬಲೆಗಳನ್ನು ಬೀಸಿ ಮೀನು ಹಿಡಿಯುವುದಕ್ಕೆ ಸೂಚಿಸುತ್ತದೆ. ಇಂಥ ಮೀನುಗಾರಿಕೆಗೆ ಪರಿಶ್ರಮ ಮತ್ತು ಸಂಘಟಿತ ವಿಧಾನ ಬೇಕು. ಅಲ್ಲದೆ ಅನೇಕ ಜನರು ಕೂಡಿ ಕೆಲಸಮಾಡಬೇಕು.—ಲೂಕ 5:1-11.

5. ಯಾವ ನಾಲ್ಕು ಪ್ರಶ್ನೆಗಳಿಗೆ ನಾವು ಉತ್ತರ ಪಡೆಯಬೇಕು? ಏಕೆ?

5 ಯೇಸು ಮುಂತಿಳಿಸಿದಂತೆಯೇ ಇಂದು ಸುವಾರ್ತೆ ಸಾರುತ್ತಿರುವವರು ಯಾರೆಂದು ತಿಳಿಯಲು ಕೆಳಗಿನ ನಾಲ್ಕು ಪ್ರಶ್ನೆಗಳಿಗೆ ಉತ್ತರ ಪಡೆಯಬೇಕು.

  • ಯಾವ ಸಂದೇಶವನ್ನು ಸಾರಬೇಕು?

  • ಸಾರುವ ಉದ್ದೇಶ ಏನಾಗಿರಬೇಕು?

  • ಸಾರಲು ಯಾವ ವಿಧಾನಗಳನ್ನು ಬಳಸಬೇಕು?

  • ಎಷ್ಟು ವಿಸ್ತಾರವಾಗಿ ಮತ್ತು ಎಷ್ಟರ ತನಕ ಸಾರಬೇಕು?

ಈ ಪ್ರಶ್ನೆಗಳಿಗೆ ಉತ್ತರಗಳು ಇಂದು ಜೀವರಕ್ಷಕ ಕೆಲಸವನ್ನು ಮಾಡುತ್ತಿರುವವರು ನಿಜವಾಗಿಯೂ ಯಾರೆಂದು ಗುರುತಿಸಲು ಸಹಾಯಮಾಡುತ್ತವೆ ಮತ್ತು ಸಾರುತ್ತಾ ಇರಲು ನಮಗಿರುವ ಇಚ್ಛೆಯನ್ನು ಹೆಚ್ಚಿಸುತ್ತವೆ.—1 ತಿಮೊ. 4:16.

ಯಾವ ಸಂದೇಶ ಸಾರಬೇಕು?

6. ಯೆಹೋವನ ಸಾಕ್ಷಿಗಳು ಸರಿಯಾದ ಸಂದೇಶವನ್ನೇ ಸಾರುತ್ತಿದ್ದಾರೆಂಬ ದೃಢಭರವಸೆ ನಿಮಗೆ ಏಕಿದೆ?

6 ಲೂಕ 4:43 ಓದಿ. ಯೇಸು “ದೇವರ ರಾಜ್ಯದ ಸುವಾರ್ತೆಯನ್ನು” ಸಾರಿದನು. ತನ್ನ ಶಿಷ್ಯರು ಕೂಡ ಅದನ್ನೇ ಸಾರಬೇಕೆಂದು ಹೇಳಿದನು. ಈ ಸಂದೇಶವನ್ನು ಯಾರು ಎಲ್ಲರಿಗೆ ಸಾರುತ್ತಿದ್ದಾರೆ? ಯೆಹೋವನ ಸಾಕ್ಷಿಗಳು ಮಾತ್ರ! ನಮ್ಮನ್ನು ಇಷ್ಟಪಡದ ಕೆಲವರು ಸಹ ಅದನ್ನು ಒಪ್ಪಿಕೊಳ್ಳುತ್ತಾರೆ. ಉದಾಹರಣೆಗೆ, ಬೇರೆಬೇರೆ ದೇಶಗಳಲ್ಲಿ ವಾಸಿಸಿದ್ದ ಮಿಷನರಿ ಪಾದ್ರಿಯೊಬ್ಬನು ಆ ದೇಶಗಳಲ್ಲಿದ್ದ ಯೆಹೋವನ ಸಾಕ್ಷಿಗಳಿಗೆ ‘ನೀವು ಯಾವ ಸಂದೇಶ ಸಾರುತ್ತಿದ್ದೀರಿ?’ ಎಂದು ಕೇಳಿದ್ದನು. ಅವನು ಒಮ್ಮೆ ಒಬ್ಬ ಸಾಕ್ಷಿಗೆ ಹೀಗಂದನು: “ಅವರೆಷ್ಟು ದಡ್ಡರಾಗಿದ್ದರೆಂದರೆ ಎಲ್ಲರೂ ‘ದೇವರ ರಾಜ್ಯದ ಸುವಾರ್ತೆ’ ಎಂಬ ಒಂದೇ ಉತ್ತರ ಕೊಟ್ಟರು.” ನಿಜವೇನೆಂದರೆ ಆ ಪಾದ್ರಿಯ ಮಾತು ನಮ್ಮನ್ನು ದಡ್ಡರೆಂದು ತೋರಿಸುವುದಿಲ್ಲ ಬದಲಾಗಿ ನಿಜ ಕ್ರೈಸ್ತರಾಗಿರುವ ನಾವು ಸಾರುವುದರಲ್ಲಿ ಐಕ್ಯರೆಂದು ತೋರಿಸುತ್ತದೆ. (1 ಕೊರಿಂ. 1:10) ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂಬ ನಮ್ಮ ಪತ್ರಿಕೆಯ ಮುಖ್ಯ ಸಂದೇಶ ಸಹ ದೇವರ ರಾಜ್ಯವೇ ಆಗಿದೆ. ಈ ಪತ್ರಿಕೆಯ ಪ್ರತಿ ಸಂಚಿಕೆಯು 254 ಭಾಷೆಗಳಲ್ಲಿ ಲಭ್ಯ ಮತ್ತು ಸರಾಸರಿ 5 ಕೋಟಿ 90 ಲಕ್ಷ ಪ್ರತಿಗಳನ್ನು ಪ್ರಕಾಶಿಸಲಾಗುತ್ತದೆ. ಇದು ಈಗ ಇಡೀ ಲೋಕದಲ್ಲೇ ಅತಿ ಹೆಚ್ಚು ವ್ಯಾಪಕವಾಗಿ ವಿತರಣೆಯಾಗುತ್ತಿರುವ ಪತ್ರಿಕೆಯಾಗಿದೆ!

7. ಚರ್ಚ್‌ ಪಾದ್ರಿಗಳು ಸರಿಯಾದ ಸಂದೇಶ ಸಾರುವುದಿಲ್ಲವೆಂದು ನಮಗೆ ಹೇಗೆ ಗೊತ್ತು?

7 ಚರ್ಚ್‌ ಪಾದ್ರಿಗಳು ದೇವರ ರಾಜ್ಯದ ಬಗ್ಗೆ ಸಾರುವುದಿಲ್ಲ. ಒಂದುವೇಳೆ ಅದರ ಬಗ್ಗೆ ಮಾತಾಡಿದರೂ ‘ದೇವರ ರಾಜ್ಯ ಜನರ ಹೃದಯದಲ್ಲಿದೆ’ ಎಂದು ಹೆಚ್ಚಿನವರು ಹೇಳುತ್ತಾರೆ. (ಲೂಕ 17:21) ದೇವರ ರಾಜ್ಯವು ಸ್ವರ್ಗದಲ್ಲಿರುವ ಒಂದು ಸರ್ಕಾರವೆಂದಾಗಲಿ ಅದರ ಅರಸ ಯೇಸು ಎಂದಾಗಲಿ ಅವರು ಕಲಿಸುವುದಿಲ್ಲ. ಯೇಸುವಿನ ಬಗ್ಗೆ ಅವರು ಸಾಮಾನ್ಯವಾಗಿ ಮಾತಾಡುವುದು ಕ್ರಿಸ್ಮಸ್‌ ಅಥವಾ ಈಸ್ಟರ್‌ ಹಬ್ಬಗಳಲ್ಲಿ ಮಾತ್ರ. ದೇವರ ರಾಜ್ಯವು ಎಲ್ಲ ಮನುಷ್ಯರ ಸಮಸ್ಯೆಗಳನ್ನು ಬಗೆಹರಿಸುತ್ತದೆಂದು ಮತ್ತು ಭೂಮಿಯಿಂದ ಎಲ್ಲ ದುಷ್ಟತನವನ್ನು ಬೇಗನೆ ತೆಗೆದುಹಾಕಲಿದೆ ಎಂದು ಅವರು ವಿವರಿಸುವುದಿಲ್ಲ. (ಪ್ರಕ. 19:11-21) ದೇವರ ರಾಜ್ಯದ ಅರಸನಾಗಿ ಯೇಸು ಏನು ಮಾಡಲಿದ್ದಾನೆಂದು ಚರ್ಚು ಮುಖಂಡರಿಗೆ ಗೊತ್ತಿಲ್ಲ ಎನ್ನುವುದು ಸ್ಪಷ್ಟ. ಯೇಸುವಿನ ಸಂದೇಶ ಏನೆಂದೇ ಅವರಿಗೆ ಅರ್ಥವಾಗದ ಕಾರಣ ಅದನ್ನು ಯಾಕೆ ಸಾರಬೇಕು ಅನ್ನುವುದೂ ಅವರಿಗೆ ಅರ್ಥವಾಗುವುದಿಲ್ಲ.

ಉದ್ದೇಶ ಏನಾಗಿರಬೇಕು?

8. ಸಾರುವ ಕೆಲಸವನ್ನು ಯಾವ ತಪ್ಪು ಉದ್ದೇಶಕ್ಕಾಗಿ ಮಾಡಬಾರದು?

8 ಯೇಸುವಿನ ಶಿಷ್ಯರು ಹಣಮಾಡುವ ಉದ್ದೇಶದಿಂದ ಇಲ್ಲವೆ ಸುಂದರವಾದ ಭವ್ಯ ಕಟ್ಟಡಗಳನ್ನು ಕಟ್ಟುವ ಉದ್ದೇಶದಿಂದ ಸಾರಬಾರದು. “ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ” ಎಂದು ಯೇಸು ಹೇಳಿದನು. (ಮತ್ತಾ. 10:8) ಹಾಗಾಗಿ ಸಾರುವ ಕೆಲಸ ಒಂದು ವ್ಯಾಪಾರ ಆಗಿರಬಾರದು. (2 ಕೊರಿಂ. 2:17, ಪಾದಟಿಪ್ಪಣಿ) ಸಾರುವ ಕೆಲಸ ಮಾಡಲು ಸಂಬಳ ಕೇಳಬಾರದು. (ಅ. ಕಾರ್ಯಗಳು 20:33-35 ಓದಿ.) ಯೇಸುವಿನ ಈ ಸೂಚನೆ ತುಂಬ ಸ್ಪಷ್ಟವಾಗಿದ್ದರೂ ಅದನ್ನು ಕಡೆಗಣಿಸಿ ಹೆಚ್ಚಿನ ಚರ್ಚಿನವರು ತಮ್ಮ ಚರ್ಚುಗಳನ್ನು ನಡೆಸಲಿಕ್ಕಾಗಿ, ಪಾದ್ರಿಗಳಿಗೆ ಮತ್ತು ಬೇರೆ ಉದ್ಯೋಗಿಗಳಿಗೆ ಸಂಬಳ ಕೊಡಲಿಕ್ಕಾಗಿ ಹಣ ಕೂಡಿಸುತ್ತಾರೆ. ಹೀಗೆ ಮಾಡಿ ಚರ್ಚುಗಳ ಹೆಚ್ಚಿನ ಪಾದ್ರಿಗಳು ತುಂಬ ಶ್ರೀಮಂತರಾಗಿದ್ದಾರೆ.—ಪ್ರಕ. 17:4, 5.

9. ಯೆಹೋವನ ಸಾಕ್ಷಿಗಳಾದ ನಾವು ಸಾರುವ ಕೆಲಸವನ್ನು ಸರಿಯಾದ ಉದ್ದೇಶದಿಂದ ಮಾಡುತ್ತಿದ್ದೇವೆಂದು ಹೇಗೆ ಹೇಳಬಹುದು?

9 ಯೆಹೋವನ ಸಾಕ್ಷಿಗಳಾದ ನಾವು ರಾಜ್ಯ ಸಭಾಗೃಹಗಳಲ್ಲಿ ಇಲ್ಲವೆ ಅಧಿವೇಶನಗಳಲ್ಲಿ ಸಭಿಕರಿಂದ ಹಣವೆತ್ತುತ್ತೇವಾ? ಇಲ್ಲವೇ ಇಲ್ಲ! ನಮ್ಮ ಕೆಲಸ ನಡೆಯುವುದು ಸ್ವಯಂಪ್ರೇರಿತ ದಾನಗಳಿಂದ. (2 ಕೊರಿಂ. 9:7) ಆದರೂ ಕಳೆದ ವರ್ಷ ನಾವು ಸುವಾರ್ತೆ ಸಾರುವ ಕೆಲಸದಲ್ಲಿ ಹತ್ತಿರಹತ್ತಿರ 200 ಕೋಟಿ ತಾಸುಗಳನ್ನು ಕಳೆದಿದ್ದೇವೆ! ಪ್ರತಿ ತಿಂಗಳು 90 ಲಕ್ಷ ಬೈಬಲ್‌ ಅಧ್ಯಯನಗಳನ್ನು ನಡೆಸಿದ್ದೇವೆ! ನಮ್ಮ ಈ ಕೆಲಸಕ್ಕೆ ನಾವು ಸಂಬಳ ಪಡೆಯುವುದಿಲ್ಲ, ನಮ್ಮ ಸ್ವಂತ ಹಣ ಬಳಸಿ ಸಂತೋಷದಿಂದ ಅದನ್ನು ಮಾಡುತ್ತೇವೆ. ಯೆಹೋವನ ಸಾಕ್ಷಿಗಳ ಸಾರುವ ಕೆಲಸದ ಬಗ್ಗೆ ಒಬ್ಬ ಸಂಶೋಧಕ ಹೇಳಿದ್ದು: “ಅವರ ಮುಖ್ಯ ಗುರಿ ಸಾರುವುದು ಮತ್ತು ಕಲಿಸುವುದೇ ಆಗಿದೆ.” ಅವರಲ್ಲಿ ಪಾದ್ರಿಗಳೂ ಇಲ್ಲ ಸಂಬಳವನ್ನೂ ಕೊಡಬೇಕಾಗಿಲ್ಲ ಎಂದು ಆ ಸಂಶೋಧಕ ಹೇಳಿದ. ನಾವು ಹಣಕ್ಕಾಗಿ ಈ ಕೆಲಸ ಮಾಡುವುದಿಲ್ಲವಾದರೆ ಯಾವ ಉದ್ದೇಶಕ್ಕಾಗಿ ಅದನ್ನು ಮಾಡುತ್ತೇವೆ? ನಮಗೆ ಯೆಹೋವನ ಮೇಲೆ, ಜನರ ಮೇಲೆ ಪ್ರೀತಿ ಇರುವುದರಿಂದಲೇ ಸಂತೋಷದಿಂದ ಮನಸಾರೆ ಈ ಕೆಲಸಮಾಡುತ್ತೇವೆ. ನಮ್ಮ ಈ ಮನೋಭಾವವು ಕೀರ್ತನೆ 110:3 ರಲ್ಲಿರುವ (ಓದಿ) ಪ್ರವಾದನೆಯನ್ನು ನೆರವೇರಿಸುತ್ತದೆ.

ಯಾವ ವಿಧಾನಗಳನ್ನು ಬಳಸಬೇಕು?

ಜನರು ಎಲ್ಲೆಲ್ಲಿ ಸಿಗುತ್ತಾರೋ ಅಲ್ಲೆಲ್ಲ ಹೋಗಿ ನಾವು ಸಾರುತ್ತೇವೆ (ಪ್ಯಾರ 10 ನೋಡಿ)

10. ಸುವಾರ್ತೆ ಸಾರಲು ಯೇಸು ಮತ್ತು ಆತನ ಶಿಷ್ಯರು ಯಾವ ವಿಧಾನಗಳನ್ನು ಬಳಸಿದರು?

10 ಸುವಾರ್ತೆ ಸಾರಲು ಯೇಸು ಮತ್ತು ಆತನ ಶಿಷ್ಯರು ಯಾವ ವಿಧಾನಗಳನ್ನು ಬಳಸಿದರು? ಜನರು ಎಲ್ಲೆಲ್ಲಾ ಸಿಗುತ್ತಾರೋ ಅಲ್ಲೆಲ್ಲ ಹೋಗಿ ಸಾರಿದರು. ಉದಾಹರಣೆಗೆ, ಬೀದಿಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಸಾರಿದರು. ಮನೆಯಿಂದ ಮನೆಗೂ ಹೋಗಿ ಸುವಾರ್ತೆ ತಿಳಿಸಿದರು. (ಮತ್ತಾ. 10:11; ಲೂಕ 8:1; ಅ. ಕಾ. 5:42; 20:20) ಮನೆಮನೆಗೆ ಹೋಗಿ ಸಾರುವುದು ಸುವಾರ್ತೆಯನ್ನು ಎಲ್ಲ ವಿಧದ ಜನರಿಗೆ ತಲುಪಿಸುವ ಒಂದು ಸಂಘಟಿತ ವಿಧಾನವಾಗಿತ್ತು.

11, 12. ಸುವಾರ್ತೆ ಸಾರುವುದರಲ್ಲಿ ಚರ್ಚಿನವರು ಮತ್ತು ಯೆಹೋವನ ಸಾಕ್ಷಿಗಳು ಮಾಡುವ ಪ್ರಯತ್ನದ ಮಧ್ಯೆ ಇರುವ ವ್ಯತ್ಯಾಸ ತಿಳಿಸಿ.

11 ಯೇಸು ಸುವಾರ್ತೆ ಸಾರಿದಂತೆ ಇಂದು ಚರ್ಚ್‌ ಸದಸ್ಯರು ಸುವಾರ್ತೆ ಸಾರುತ್ತಾರಾ? ಪಾದ್ರಿಗಳು ಸಾಮಾನ್ಯವಾಗಿ ಚರ್ಚ್‌ ಸದಸ್ಯರಿಗೆ ಒಂದು ಪ್ರಸಂಗ ಕೊಟ್ಟುಬಿಡುತ್ತಾರೆ ಅಷ್ಟೇ. ಅದಕ್ಕಾಗಿ ಸಂಬಳ ಪಡೆಯುತ್ತಾರೆ. ಅವರು ಹೊಸ ಶಿಷ್ಯರನ್ನು ಮಾಡುವುದಿಲ್ಲ. ಬದಲಿಗೆ ಈಗಾಗಲೇ ಇರುವ ಚರ್ಚ್‌ ಸದಸ್ಯರನ್ನೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ತಮ್ಮ ಸದಸ್ಯರನ್ನು ಸಾರುವಂತೆ ಪ್ರೋತ್ಸಾಹಿಸಲು ಪ್ರಯತ್ನಿಸಿದ್ದಾರೆ ನಿಜ. ಉದಾಹರಣೆಗೆ, 2001 ರಲ್ಲಿ ಪೋಪ್‌ ಎರಡನೇ ಜಾನ್‌ ಪಾಲ್‌ ಒಂದು ಪತ್ರದ ಮೂಲಕ ಚರ್ಚ್‌ ಸದಸ್ಯರನ್ನು ಸುವಾರ್ತೆ ಸಾರಲು ಉತ್ತೇಜಿಸಿದರು. “ಸಾರದಿದ್ದರೆ ನನ್ನ ಗತಿಯನ್ನು ಏನು ಹೇಳಲಿ” ಎಂದು ಹೇಳಿದ ಅಪೊಸ್ತಲ ಪೌಲನಲ್ಲಿದ್ದ ಅದೇ ಹುರುಪು ಅವರಲ್ಲಿ ಇರಬೇಕೆಂದು ಹೇಳಿದರು. ಈ ಸಾರುವಿಕೆಯನ್ನು ತರಬೇತಿ ಹೊಂದಿದ ಕೆಲವರು ಮಾತ್ರವೇ ಅಲ್ಲ ಚರ್ಚಿನ ಎಲ್ಲ ಸದಸ್ಯರು ಮಾಡಬೇಕೆಂದೂ ಪೋಪ್‌ ಹೇಳಿದರು. ಆದರೆ ಅವರ ಮಾತನ್ನು ಪಾಲಿಸಿದ್ದು ಸ್ವಲ್ಪ ಜನ ಮಾತ್ರ.

12 ಯೆಹೋವನ ಸಾಕ್ಷಿಗಳ ಕುರಿತೇನು? ಯೇಸು 1914 ರಿಂದ ರಾಜನಾಗಿ ಆಳುತ್ತಿದ್ದಾನೆಂದು ಸಾರುತ್ತಿರುವವರು ಅವರು ಮಾತ್ರ. ಅವರು ಯೇಸುವಿನ ಮಾತಿಗೆ ವಿಧೇಯರಾಗಿ ಸಾರುವ ಕೆಲಸಕ್ಕೆ ತಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡುತ್ತಾರೆ. (ಮಾರ್ಕ 13:10) ಯೆಹೋವನ ಸಾಕ್ಷಿಗಳು ಸಾರುವುದನ್ನು ಅತ್ಯಂತ ಪ್ರಾಮುಖ್ಯ ಕೆಲಸವಾಗಿ ಕಾಣುತ್ತಾರೆ ಎಂದು ಕ್ರೈಸ್ತ ಗುಂಪುಗಳ ಬಗ್ಗೆ ತಿಳಿಸುವ ಒಂದು ಪುಸ್ತಕ (ಪಿಲರ್ಸ್‌ ಆಫ್‌ ಫೇತ್‌—ಅಮೆರಿಕನ್‌ ಕಾಂಗ್ರಿಗೇಷನ್ಸ್‌ ಆ್ಯಂಡ್‌ ದೇರ್‌ ಪಾರ್ಟ್‌ನರ್ಸ್‌) ಹೇಳಿತು. ಹಸಿದವರನ್ನು, ಒಂಟಿಗರನ್ನು, ಅಸ್ವಸ್ಥರನ್ನು ಭೇಟಿಯಾದರೆ ಸಾಕ್ಷಿಗಳು ಖಂಡಿತ ಅವರಿಗೆ ಸಹಾಯ ಮಾಡುತ್ತಾರೆ, ಆದರೆ ಲೋಕದ ಅಂತ್ಯ ಮತ್ತು ರಕ್ಷಣೆಯ ಕುರಿತು ಅವರಿಗೆ ತಿಳಿಸುವುದನ್ನು ಮರೆಯುವುದಿಲ್ಲ, ಏಕೆಂದರೆ ಇದೇ ಸಾಕ್ಷಿಗಳ ಮುಖ್ಯ ಗುರಿ ಎಂದು ಸಹ ಆ ಪುಸ್ತಕ ಹೇಳಿತು. ನಿಜ, ಯೆಹೋವನ ಸಾಕ್ಷಿಗಳು ಯೇಸು ಮತ್ತು ಆತನ ಶಿಷ್ಯರು ಬಳಸಿದ ವಿಧಾನಗಳನ್ನು ಬಳಸಿ ಆ ಸಂದೇಶವನ್ನು ಸಾರುತ್ತಾ ಇದ್ದಾರೆ.

ಎಷ್ಟು ವಿಸ್ತಾರವಾಗಿ ಮತ್ತು ಎಷ್ಟರ ತನಕ?

13. ಸಾರುವ ಕೆಲಸವನ್ನು ಎಷ್ಟು ವಿಸ್ತಾರವಾಗಿ ನಡೆಸಬೇಕು?

13 “ನಿವಾಸಿತ ಭೂಮಿಯಾದ್ಯಂತ” ತನ್ನ ಹಿಂಬಾಲಕರು ಸುವಾರ್ತೆ ಸಾರುವರು ಮತ್ತು ಬೋಧಿಸುವರೆಂದು ಯೇಸು ಹೇಳಿದನು. “ಎಲ್ಲ ಜನಾಂಗಗಳ” ಜನರನ್ನು ಶಿಷ್ಯರನ್ನಾಗಿ ಮಾಡಬೇಕೆಂದು ಆತನು ಆಜ್ಞೆ ಕೊಟ್ಟನು. (ಮತ್ತಾ. 24:14; 28:19, 20) ಇದರರ್ಥ ನಾವು ಸುವಾರ್ತೆಯನ್ನು ಲೋಕವ್ಯಾಪಕವಾಗಿ ಸಾರಬೇಕು.

14, 15. ಸಾರುವ ಕೆಲಸದ ವಿಸ್ತಾರದ ಕುರಿತು ಯೇಸು ನುಡಿದ ಪ್ರವಾದನೆಯನ್ನು ಯೆಹೋವನ ಸಾಕ್ಷಿಗಳು ಹೇಗೆ ನೆರವೇರಿಸಿದ್ದಾರೆ? (ಲೇಖನದ ಆರಂಭದ ಚಿತ್ರ ನೋಡಿ.)

14 ಭೂಮಿಯಾದ್ಯಂತ ಸುವಾರ್ತೆ ಸಾರಲಾಗುವುದೆಂದು ಯೇಸು ನುಡಿದ ಪ್ರವಾದನೆಯನ್ನು ಯೆಹೋವನ ಸಾಕ್ಷಿಗಳು ಮಾತ್ರ ನೆರವೇರಿಸಿದ್ದಾರೆ. ನಾವು ಏಕೆ ಹಾಗೆ ಹೇಳುತ್ತೇವೆ? ಅಮೆರಿಕದಲ್ಲಿರುವ ಕ್ರೈಸ್ತ ಪಂಗಡಗಳಲ್ಲಿ ಸುಮಾರು 6 ಲಕ್ಷ ಪಾದ್ರಿಗಳಿದ್ದಾರೆ. ಆದರೆ ಆ ದೇಶದಲ್ಲಿ ಸುವಾರ್ತೆ ಸಾರುತ್ತಿರುವ ಯೆಹೋವನ ಸಾಕ್ಷಿಗಳ ಸಂಖ್ಯೆ ಸುಮಾರು 12 ಲಕ್ಷ! ಪ್ರಪಂಚದೆಲ್ಲೆಡೆ ಸುಮಾರು 4 ಲಕ್ಷ ಕ್ಯಾಥೊಲಿಕ್‌ ಪಾದ್ರಿಗಳಿದ್ದಾರೆ. ಆದರೆ 80 ಲಕ್ಷಕ್ಕಿಂತ ಹೆಚ್ಚು ಯೆಹೋವನ ಸಾಕ್ಷಿಗಳು 240 ದೇಶಗಳಲ್ಲಿ ಸುವಾರ್ತೆ ಸಾರುತ್ತಿದ್ದಾರೆ! ಇದರಿಂದ ಸುವಾರ್ತೆಯನ್ನು ಲೋಕವ್ಯಾಪಕವಾಗಿ ಸಾರುತ್ತಿರುವುದು ಯೆಹೋವನ ಸಾಕ್ಷಿಗಳು ಮಾತ್ರ ಎಂದು ಸ್ಪಷ್ಟವಾಗುತ್ತದೆ. ಇದು ಯೆಹೋವನಿಗೆ ಸ್ತುತಿ, ಮಹಿಮೆಯನ್ನು ತರುತ್ತದೆ.—ಕೀರ್ತ. 34:1; 51:15.

15 ಅಂತ್ಯ ಬರುವುದಕ್ಕೆ ಮುಂಚೆ ಸಾಧ್ಯವಾದಷ್ಟು ಹೆಚ್ಚು ಜನರಿಗೆ ಸುವಾರ್ತೆಯನ್ನು ತಿಳಿಸುವುದೇ ಯೆಹೋವನ ಸಾಕ್ಷಿಗಳಾದ ನಮ್ಮ ಗುರಿ. ಇದಕ್ಕೆಂದೇ ನಾವು ಬೈಬಲ್‌ ಸಾಹಿತ್ಯವನ್ನು ಭಾಷಾಂತರಿಸಿ ಪ್ರಕಟಿಸುತ್ತೇವೆ. ಈ ವಿಷಯದಲ್ಲೂ ನಾವು ಚರ್ಚುಗಳಿಗಿಂತ ಭಿನ್ನರು. ಕೋಟ್ಯಂತರ ಪುಸ್ತಕ, ಪತ್ರಿಕೆ, ಕರಪತ್ರಗಳನ್ನು, ಅಧಿವೇಶನ ಮತ್ತು ಸ್ಮರಣೆಯ ಆಮಂತ್ರಣ ಪತ್ರಗಳನ್ನು ಜನರಿಗೆ ಉಚಿತವಾಗಿ ಹಂಚಿದ್ದೇವೆ. ನಮ್ಮ ಪ್ರಕಾಶನಗಳು 700ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಲಭ್ಯ. ಮಾತ್ರವಲ್ಲ ನೂತನ ಲೋಕ ಭಾಷಾಂತರ ಬೈಬಲನ್ನು 130ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ 20 ಕೋಟಿಗಿಂತಲೂ ಹೆಚ್ಚು ಪ್ರತಿಗಳನ್ನು ಪ್ರಕಟಿಸಿದ್ದೇವೆ. ಕಳೆದ ವರ್ಷವೊಂದರಲ್ಲೇ ನಾವು ಪ್ರಕಟಿಸಿದ ಬೈಬಲ್‌ ಆಧರಿತ ಸಾಹಿತ್ಯದ ಸಂಖ್ಯೆ ಸುಮಾರು 450 ಕೋಟಿ! ನಮ್ಮ ವೆಬ್‌ಸೈಟ್‌ನಲ್ಲಿ 750ಕ್ಕೂ ಹೆಚ್ಚು ಭಾಷೆಗಳಲ್ಲಿ ಮಾಹಿತಿಯಿದೆ. ಇಷ್ಟು ವಿಸ್ತಾರವಾದ ಕೆಲಸವನ್ನು ಬೇರೆ ಯಾರೂ ಮಾಡುತ್ತಿಲ್ಲ!

16. ಯೆಹೋವನ ಸಾಕ್ಷಿಗಳಿಗೆ ಪವಿತ್ರಾತ್ಮದ ಸಹಾಯ ಇದೆಯೆಂದು ಏಕೆ ಹೇಳಸಾಧ್ಯ?

16 ಸಾರುವ ಕೆಲಸ ಎಷ್ಟರ ತನಕ ಮುಂದುವರಿಯಲಿದೆ? ಅಂತ್ಯವು ಬರುವ ತನಕ ಎಂದು ಯೇಸು ಹೇಳಿದನು. ಯೆಹೋವನ ಸಾಕ್ಷಿಗಳಾದ ನಾವು ಸಾರುವ ಕೆಲಸವನ್ನು ಈ ಕಡೇ ದಿವಸಗಳಲ್ಲೆಲ್ಲ ಮುಂದುವರಿಸಲು ಸಾಧ್ಯವಾಗಿದೆ. ಏಕೆ? ಯೆಹೋವನು ನಮಗೆ ಪವಿತ್ರಾತ್ಮದ ಸಹಾಯ ಕೊಟ್ಟಿರುವುದರಿಂದಲೇ. (ಅ. ಕಾ. 1:8; 1 ಪೇತ್ರ 4:14) ಸೇವೆಯಲ್ಲಿ ನಮಗೆ ಸಿಗುವ ಕೆಲವು ಜನರು “ನಮಗೂ ಪವಿತ್ರಾತ್ಮ ಇದೆ” ಎಂದು ಹೇಳಬಹುದು. ಆದರೆ ಈ ಕಡೇ ದಿವಸಗಳಲ್ಲಿ ಯೆಹೋವನ ಸಾಕ್ಷಿಗಳು ಮಾಡುತ್ತಿರುವ ಕೆಲಸವನ್ನು ಮಾಡಲು ಅವರಿಂದ ಆಗಿದೆಯಾ? ಕೆಲವು ಕ್ರೈಸ್ತ ಪಂಗಡಗಳು ನಮ್ಮಂತೆ ಸಾರಲು ಪ್ರಯತ್ನಿಸಿವೆ ಆದರೆ ಅವುಗಳಿಗೆ ಯಶಸ್ಸು ಸಿಕ್ಕಿಲ್ಲ. ಇನ್ನು ಕೆಲವರಿಗೆ ಸಾರಲು ಮನಸ್ಸಿದೆ ಆದರೆ ಸ್ವಲ್ಪ ಸಮಯ ಅದನ್ನು ಮಾಡಿ ನಂತರ ನಿಲ್ಲಿಸಿಬಿಡುತ್ತಾರೆ. ಮತ್ತೂ ಕೆಲವರು ಮನೆಮನೆಗೆ ಹೋಗಿ ಸಾರುತ್ತಾರೆ, ಆದರೆ ದೇವರ ರಾಜ್ಯದ ಕುರಿತು ಒಂದು ಮಾತೂ ಹೇಳುವುದಿಲ್ಲ. ಹಾಗಾಗಿ ಯೇಸು ಆರಂಭಿಸಿದ ಕೆಲಸವನ್ನು ಅವರು ಮಾಡುತ್ತಿಲ್ಲ.

ಇಂದು ನಿಜಕ್ಕೂ ಯಾರು ಸುವಾರ್ತೆ ಸಾರುತ್ತಿದ್ದಾರೆ?

17, 18. (ಎ) ಇಂದು ರಾಜ್ಯದ ಸುವಾರ್ತೆ ಸಾರುತ್ತಿರುವುದು ಯೆಹೋವನ ಸಾಕ್ಷಿಗಳು ಮಾತ್ರ ಎಂದು ನಾವೇಕೆ ನಿಶ್ಚಯದಿಂದ ಹೇಳಬಹುದು? (ಬಿ) ಈ ಕೆಲಸದಲ್ಲಿ ಮುಂದುವರಿಯಲು ನಮಗೆ ಏಕೆ ಸಾಧ್ಯವಾಗುತ್ತಿದೆ?

17 ಹಾಗಾದರೆ ಇಂದು ದೇವರ ರಾಜ್ಯದ ಸುವಾರ್ತೆಯನ್ನು ಯಾರು ಸಾರುತ್ತಿದ್ದಾರೆ? ಯೆಹೋವನ ಸಾಕ್ಷಿಗಳು ಮಾತ್ರ! ನಾವೇಕೆ ಅಷ್ಟು ನಿಶ್ಚಯದಿಂದ ಹೇಳಬಹುದು? ಏಕೆಂದರೆ ನಾವು ಸರಿಯಾದ ಸಂದೇಶವನ್ನು ಅಂದರೆ ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಿದ್ದೇವೆ. ಸರಿಯಾದ ವಿಧಾನಗಳನ್ನು ಬಳಸುತ್ತಿದ್ದೇವೆ ಅಂದರೆ ಜನರ ಬಳಿ ನಾವು ಹೋಗುತ್ತಿದ್ದೇವೆ. ಸರಿಯಾದ ಉದ್ದೇಶದಿಂದ ಸಾರುತ್ತಿದ್ದೇವೆ ಅಂದರೆ ಯೆಹೋವನನ್ನು, ಜನರನ್ನು ಪ್ರೀತಿಸುವುದರಿಂದ ಈ ಕೆಲಸ ಮಾಡುತ್ತಿದ್ದೇವೆ. ನಮ್ಮ ಸಾರುವ ಕೆಲಸ ತುಂಬ ವಿಸ್ತಾರವಾಗಿಯೂ ನಡೆಯುತ್ತಿದೆ ಏಕೆಂದರೆ ನಾವು ಎಲ್ಲ ದೇಶಗಳ ಮತ್ತು ಭಾಷೆಗಳ ಜನರಿಗೆ ಸಾರುತ್ತಿದ್ದೇವೆ. ಅಂತ್ಯ ಬರುವ ತನಕವೂ ನಾವು ರಾಜ್ಯದ ಸುವಾರ್ತೆಯನ್ನು ಸಾರುವುದನ್ನು ಮುಂದುವರಿಸಲಿದ್ದೇವೆ!

18 ಯೆಹೋವನ ಜನರು ಈ ಕಡೇ ದಿವಸಗಳಲ್ಲಿ ಸುವಾರ್ತೆ ಸಾರಲಿಕ್ಕಾಗಿ ಮಾಡುತ್ತಿರುವ ಅದ್ಭುತ ಕೆಲಸವು ನಿಜವಾಗಿಯೂ ವಿಸ್ಮಯಹುಟ್ಟಿಸುತ್ತದೆ. ಆದರೆ ಇಷ್ಟೊಂದು ಕೆಲಸವನ್ನು ಮಾಡಲು ನಮಗೆ ಏಕೆ ಸಾಧ್ಯವಾಗುತ್ತಿದೆ? “ಏಕೆಂದರೆ ತನ್ನ ಸುಸಂತೋಷದಿಂದ ನೀವು ಉದ್ದೇಶಿಸಿ ಕ್ರಿಯೆಗೈಯುವಂತೆ ನಿಮ್ಮಲ್ಲಿ ಕಾರ್ಯನಡಿಸುವಾತನು ದೇವರೇ ಆಗಿದ್ದಾನೆ” ಎಂದು ಅಪೊಸ್ತಲ ಪೌಲನು ವಿವರಿಸುತ್ತಾನೆ. (ಫಿಲಿ. 2:13) ನಮ್ಮಿಂದ ಸಾಧ್ಯವಾದಷ್ಟು ಹೆಚ್ಚು ಮಟ್ಟಿಗೆ ಸುವಾರ್ತೆ ಸಾರುತ್ತಾ ಇರಲಿಕ್ಕಾಗಿ ನಮಗೆ ಬೇಕಾದ ಬಲವನ್ನು ಯೆಹೋವನು ಕೊಡುತ್ತಾ ಇರಲಿ!—2 ತಿಮೊ. 4:5.