‘ಸಂತೋಷದಿಂದ ಯೆಹೋವನ ಸೇವೆಮಾಡಲು’ ‘ಪರದೇಶದವರಿಗೆ’ ಸಹಾಯಮಾಡಿ
“ಯೆಹೋವನು ಪರದೇಶದವರನ್ನು ಕಾಪಾಡುತ್ತಾನೆ.”—ಕೀರ್ತ. 146:9.
1, 2. (ಎ) ನಮ್ಮ ಸಹೋದರ ಸಹೋದರಿಯರು ಯಾವ ಕಷ್ಟಗಳನ್ನು ಎದುರಿಸುತ್ತಿದ್ದಾರೆ? (ಬಿ) ಯಾವ ಪ್ರಶ್ನೆಗಳು ಏಳುತ್ತವೆ?
“ಬುರುಂಡಿಯಲ್ಲಿ ಅಂತರ್ಯುದ್ಧ ಶುರುವಾದಾಗ ನಾವು ಒಂದು ಸಮ್ಮೇಳನದಲ್ಲಿ ಇದ್ದೆವು. ಹೊರಗೆ ಜನ ಓಡುತ್ತಾ ಇರೋದು, ಗುಂಡು ಹಾರಿಸುತ್ತಾ ಇರೋದು ಕಾಣುತ್ತಾ ಇತ್ತು. ಕೆಲವು ವಸ್ತುಗಳನ್ನು ಮಾತ್ರ ತೆಗೆದುಕೊಂಡು ಅಪ್ಪಅಮ್ಮ ಮತ್ತು ನಾವು 11 ಜನ ಮಕ್ಕಳು ಪ್ರಾಣ ಉಳಿಸಿಕೊಳ್ಳಲು ಓಡಿದೆವು. 1,600ಕ್ಕಿಂತ ಹೆಚ್ಚು ಕಿ.ಮೀ. ದೂರ ಪ್ರಯಾಣ ಮಾಡಿದೆವು. ಕೊನೆಗೆ ನಮ್ಮ ಕುಟುಂಬದಲ್ಲಿ ಕೆಲವರು ಮಲಾವಿಯಲ್ಲಿರುವ ನಿರಾಶ್ರಿತರ ಶಿಬಿರಕ್ಕೆ ಹೋಗಿ ಮುಟ್ಟಿದರು. ಉಳಿದವರು ಎಲ್ಲೆಲ್ಲೊ ಚದರಿಹೋದೆವು” ಎನ್ನುತ್ತಾರೆ ಲೀಜ ಎಂಬ ಸಹೋದರ.
2 ಯುದ್ಧ, ಹಿಂಸಾಚಾರದಿಂದಾಗಿ ಲೋಕದಲ್ಲಿ 6 ಕೋಟಿ 50 ಲಕ್ಷ ಜನರು ಊರು ಬಿಟ್ಟು ಹೋಗಿ ನಿರಾಶ್ರಿತರಾಗಿದ್ದಾರೆ. ಇಲ್ಲಿಯವರೆಗೆ ಇಷ್ಟೊಂದು ನಿರಾಶ್ರಿತರು ಇರಲಿಲ್ಲ. * ಇವರಲ್ಲಿ ಸಾವಿರಾರು ಯೆಹೋವನ ಸಾಕ್ಷಿಗಳೂ ಇದ್ದಾರೆ. ಈ ಸಾಕ್ಷಿಗಳಲ್ಲಿ ಅನೇಕರು ಆಪ್ತರನ್ನು, ಸೊತ್ತುಗಳನ್ನು ಕಳಕೊಂಡಿದ್ದಾರೆ. ಇವರು ಇನ್ಯಾವ ಕಷ್ಟಗಳನ್ನು ಎದುರಿಸಿದ್ದಾರೆ? ಹೀಗೆ ಕಷ್ಟಪಡುತ್ತಿರುವ ನಮ್ಮ ಸಹೋದರ ಸಹೋದರಿಯರು ‘ಸಂತೋಷದಿಂದ ಯೆಹೋವನ ಸೇವೆಮಾಡಲು’ ನಾವು ಹೇಗೆ ಸಹಾಯ ಮಾಡಬಹುದು? (ಕೀರ್ತ. 100:2) ಯೆಹೋವನ ಬಗ್ಗೆ ತಿಳಿದಿಲ್ಲದ ನಿರಾಶ್ರಿತರಿಗೆ ನಾವು ಹೇಗೆ ಸಾರಬಹುದು?
ನಿರಾಶ್ರಿತರ ಜೀವನ
3. ಯೇಸು ಮತ್ತು ಅವನ ಶಿಷ್ಯರು ಯಾವ ಕಾರಣಕ್ಕಾಗಿ ನಿರಾಶ್ರಿತರಾದರು?
3 ಯೇಸುವನ್ನು ಕೊಲ್ಲಲು ರಾಜ ಹೆರೋದ ಹವಣಿಸುತ್ತಿದ್ದಾನೆ ಎಂದು ದೇವದೂತನು ಅವನ ಹೆತ್ತವರಿಗೆ ಎಚ್ಚರಿಸಿದಾಗ ಅವರು ಮಗುವಾಗಿದ್ದ ಯೇಸುವನ್ನು ಈಜಿಪ್ಟಿಗೆ ಕರೆದುಕೊಂಡು ಹೋದರು. ಹೆರೋದ ಸಾಯುವ ತನಕ ಅವರು ಅಲ್ಲಿ ನಿರಾಶ್ರಿತರಾಗಿ ಇರಬೇಕಾಯಿತು. (ಮತ್ತಾ. 2:13, 14, 19-21) ಕಾಲಾನಂತರ ಯೇಸುವಿನ ಶಿಷ್ಯರು ಹಿಂಸೆಯಿಂದಾಗಿ “ಯೂದಾಯ ಸಮಾರ್ಯಗಳಾದ್ಯಂತ ಚೆದರಿಹೋದರು.” (ಅ. ಕಾ. 8:1) ತನ್ನ ಶಿಷ್ಯರು ಹೀಗೆ ಮನೆ, ಊರನ್ನು ಬಿಟ್ಟು ಬೇರೆ ಕಡೆ ಹೋಗಬೇಕಾಗುತ್ತದೆ ಎಂದು ಯೇಸುವಿಗೆ ಮುಂಚೆಯೇ ಗೊತ್ತಿತ್ತು. ಅವನು ಹೇಳಿದ್ದು: “ಒಂದು ಊರಿನಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ ಇನ್ನೊಂದು ಊರಿಗೆ ಓಡಿಹೋಗಿರಿ.” (ಮತ್ತಾ. 10:23) ಕಾರಣ ಏನೇ ಆಗಿರಲಿ, ಸ್ವಂತ ಊರನ್ನು ಬಿಟ್ಟು ಹೋಗಿ ಬೇರೆ ಕಡೆ ವಾಸಿಸುವುದು ಸುಲಭವಲ್ಲ.
4, 5. (ಎ) ಬೇರೆ ಊರಿಗೆ ಓಡಿಹೋಗುತ್ತಿರುವಾಗ ನಿರಾಶ್ರಿತರು ಯಾವ ಅಪಾಯಗಳನ್ನು ಎದುರಿಸುತ್ತಾರೆ? (ಬಿ) ಶಿಬಿರದಲ್ಲಿ ಯಾವ ಅಪಾಯಗಳನ್ನು ಎದುರಿಸುತ್ತಾರೆ?
4 ಊರು ಬಿಟ್ಟು ಓಡಿಹೋಗುತ್ತಿರುವಾಗ ಅಥವಾ ನಿರಾಶ್ರಿತರ ಶಿಬಿರಗಳಲ್ಲಿ ಇರುವಾಗ ನಿರಾಶ್ರಿತರು ಅನೇಕ ಅಪಾಯಗಳನ್ನು ಎದುರಿಸುತ್ತಾರೆ. “ನಾವು ವಾರಗಟ್ಟಲೆ ನಡೆದೆವು. ದಾರಿಯಲ್ಲಿ ಎಷ್ಟೋ ಶವಗಳು ಬಿದ್ದಿರುವುದನ್ನು ನೋಡಿದೆವು” ಎಂದು ಲೀಜರವರ ತಮ್ಮನಾದ ಗ್ಯಾಡ್ ಹೇಳುತ್ತಾರೆ. “ನನಗಾಗ 12 ವರ್ಷ. ನಡೆದುನಡೆದು ಕಾಲು ಊದಿಕೊಂಡಿತ್ತು. ನನಗೆ ಮುಂದೆ ಹೆಜ್ಜೆ ಇಡಲು ಆಗದಿದ್ದಾಗ ‘ನನ್ನನ್ನು ಬಿಟ್ಟು ನೀವು ಹೋಗಿ’ ಎಂದು ಹೇಳಿದೆ. ಆದರೆ ನಾನು ಬಂಡಾಯಗಾರರ ಕೈಯಲ್ಲಿ ಸಿಕ್ಕಿ ಸಾಯಲು ಅಪ್ಪ ಬಿಡಲಿಲ್ಲ. ನನ್ನನ್ನು ಎತ್ತಿಕೊಂಡು ನಡೆದರು. ನಾವು ಬದುಕಿದ್ದೇ ದೊಡ್ಡ ವಿಷಯ. ದಿನಾ ಯೆಹೋವನಿಗೆ ಪ್ರಾರ್ಥನೆ ಮಾಡುತ್ತಾ, ಆತನ ಮೇಲೆ ಭರವಸೆ ಇಟ್ಟು ಮುಂದೆ ಸಾಗಿದೆವು. ದಾರಿ ಬದಿಯ ಮರಗಳಿಂದ ಮಾವಿನ ಹಣ್ಣುಗಳನ್ನು ತಿಂದು ಬದುಕಿದ ದಿನಗಳೂ ಇವೆ” ಎಂದು ಅವರು ಹೇಳುತ್ತಾರೆ.—ಫಿಲಿ. 4:12,13.
5 ಸಹೋದರ ಲೀಜ ಅವರ ಕುಟುಂಬದಲ್ಲಿ ಅನೇಕರು ವಿಶ್ವಸಂಸ್ಥೆಯ ನಿರಾಶ್ರಿತರ ಶಿಬಿರಗಳಲ್ಲಿ ತುಂಬ ವರ್ಷ ಇರಬೇಕಾಯಿತು. ಅನೇಕ ಅಪಾಯಗಳನ್ನು ಎದುರಿಸಬೇಕಾಯಿತು. ಈಗ ಸಂಚರಣ ಮೇಲ್ವಿಚಾರಕರಾಗಿರುವ ಲೀಜ ಹೇಳುವುದು: “ಶಿಬಿರದಲ್ಲಿದ್ದ ಎಷ್ಟೋ ಜನರಿಗೆ ಕೆಲಸ ಇರಲಿಲ್ಲ. ಹರಟೆ ಹೊಡೆಯುತ್ತಿದ್ದರು, ಕುಡಿಯುತ್ತಿದ್ದರು, ಜೂಜಾಡುತ್ತಿದ್ದರು, ಕದಿಯುತ್ತಿದ್ದರು, ಅನೈತಿಕತೆ ನಡೆಸುತ್ತಿದ್ದರು.” ಇಂಥ ಕೆಟ್ಟ ಸಹವಾಸದಿಂದ ದೂರ ಇರಬೇಕೆಂದರೆ ಸಾಕ್ಷಿಗಳು ಸಭೆಯ ಚಟುವಟಿಕೆಗಳಲ್ಲಿ ಮಗ್ನರಾಗಿರಬೇಕಿತ್ತು. (ಇಬ್ರಿ. 6:11, 12; 10:24, 25) ಅವರು ಸಮಯ ಹಾಳುಮಾಡದೆ ಸತ್ಯದಲ್ಲಿ ದೃಢವಾಗಿ ನಿಲ್ಲಲು ಬೇಕಾದ ವಿಷಯಗಳನ್ನು ಮಾಡಿದರು. ಅನೇಕರು ಪಯನೀಯರ್ ಸೇವೆ ಆರಂಭಿಸಿದರು. ತಮ್ಮ ಈ ಶಿಬಿರವಾಸ ಇಸ್ರಾಯೇಲ್ಯರ ಅರಣ್ಯವಾಸದ ಹಾಗೆಯೇ ಖಂಡಿತ ಕೊನೆಯಾಗಲಿಕ್ಕಿದೆ ಎಂಬ ಮಾತನ್ನು ಯಾವಾಗಲೂ ಮನಸ್ಸಿಗೆ ತಂದುಕೊಳ್ಳುತ್ತಿದ್ದರು. ಇದರಿಂದಾಗಿ ಆಶಾಭಾವನೆಯಿಂದ ಇದ್ದರು.—2 ಕೊರಿಂ. 4:18.
ನಿರಾಶ್ರಿತರಿಗೆ ಪ್ರೀತಿ ತೋರಿಸಿ
6, 7. (ಎ) ನಾವು ಏನು ಮಾಡುವಂತೆ “ದೇವರ ಪ್ರೀತಿ” ಪ್ರೇರಿಸುತ್ತದೆ? (ಬಿ) ಒಂದು ಉದಾಹರಣೆ ಕೊಡಿ.
6 “ದೇವರ ಪ್ರೀತಿಯು” ನಾವು ಸಹೋದರ ಸಹೋದರಿಯರಿಗೆ ಅದರಲ್ಲೂ ಅವರು ಕಷ್ಟದಲ್ಲಿರುವಾಗ ಪ್ರೀತಿ ತೋರಿಸುವಂತೆ ಪ್ರೇರಿಸುತ್ತದೆ. (1 ಯೋಹಾನ 3:17, 18 ಓದಿ.) ಒಂದನೇ ಶತಮಾನದ ಕ್ರೈಸ್ತರು ಇದನ್ನೇ ಮಾಡಿದರು. ಕ್ಷಾಮದಿಂದಾಗಿ ಯೂದಾಯದಲ್ಲಿದ್ದ ಕ್ರೈಸ್ತರಿಗೆ ಆಹಾರದ ಕೊರತೆಯಾದಾಗ ಅವರು ಸಹಾಯ ಮಾಡಿದರು. (ಅ. ಕಾ. 11:28, 29) ಕ್ರೈಸ್ತರು ಒಬ್ಬರಿಗೊಬ್ಬರು ಅತಿಥಿಸತ್ಕಾರ ಮಾಡಬೇಕೆಂದು ಅಪೊಸ್ತಲ ಪೌಲ ಮತ್ತು ಪೇತ್ರ ಕೂಡ ಪ್ರೋತ್ಸಾಹಿಸಿದರು. (ರೋಮ. 12:13; 1 ಪೇತ್ರ 4:9) ಅದೇ ರೀತಿ ಇಂದು ನಾವು, ಬೇರೆ ಸ್ಥಳದಿಂದ ಬಂದವರಿಗೆ ದಯೆ ತೋರಿಸಬೇಕು. ಅದರಲ್ಲೂ ಅಪಾಯದಲ್ಲಿರುವ ಅಥವಾ ತಮ್ಮ ನಂಬಿಕೆಯ ಕಾರಣ ಹಿಂಸೆಗೆ ಒಳಗಾಗಿರುವ ಸಹೋದರ ಸಹೋದರಿಯರಿಗೆ ನಾವು ದಯೆ ತೋರಿಸಲೇಬೇಕು!—ಜ್ಞಾನೋಕ್ತಿ 3:27 ಓದಿ. *
7 ಇತ್ತೀಚೆಗೆ ಯುಕ್ರೇನಿನ ಪೂರ್ವಭಾಗದಲ್ಲಿ ಯುದ್ಧ ಮತ್ತು ಹಿಂಸೆ ಆರಂಭವಾದಾಗ ಅಲ್ಲಿದ್ದ ಸಾವಿರಾರು ಯೆಹೋವನ ಸಾಕ್ಷಿಗಳು ತಮ್ಮ ಮನೆ, ಊರು ಬಿಟ್ಟು ಓಡಬೇಕಾಯಿತು. ಕೆಲವು ಸಾಕ್ಷಿಗಳು ತಮ್ಮ ಪ್ರಾಣವನ್ನೇ ಕಳಕೊಂಡರು. ಊರು ಬಿಟ್ಟು ಬಂದಿದ್ದ ಯೆಹೋವನ ಸಾಕ್ಷಿಗಳಿಗೆ ಯುಕ್ರೇನಿನ ಇತರ ಭಾಗಗಳಲ್ಲಿದ್ದ ಮತ್ತು ರಷ್ಯದಲ್ಲಿದ್ದ ಸಾಕ್ಷಿಗಳು ತಮ್ಮ ಮನೆಗಳಲ್ಲೇ ಆಶ್ರಯ ಕೊಟ್ಟರು. ಈ ರಾಷ್ಟ್ರಗಳ ಸಹೋದರ ಸಹೋದರಿಯರು ‘ಲೋಕದ ಭಾಗವಾಗದೆ’ ತಟಸ್ಥರಾಗಿದ್ದಾರೆ ಮತ್ತು “ದೇವರ ವಾಕ್ಯದ ಸುವಾರ್ತೆಯನ್ನು” ಹುರುಪಿನಿಂದ ಸಾರುತ್ತಿದ್ದಾರೆ.—ಯೋಹಾ. 15:19; ಅ. ಕಾ. 8:4.
ನಿರಾಶ್ರಿತರ ನಂಬಿಕೆ ಬಲಪಡಿಸಿ
8, 9. (ಎ) ಹೊಸ ದೇಶದಲ್ಲಿ ನಿರಾಶ್ರಿತರಿಗೆ ಯಾವ ಸವಾಲುಗಳು ಎದುರಾಗುತ್ತವೆ? (ಬಿ) ನಾವು ತಾಳ್ಮೆಯಿಂದ ಅವರಿಗೆ ಸಹಾಯ ಮಾಡಬೇಕು ಯಾಕೆ?
8 ಕೆಲವೊಮ್ಮೆ ನಿರಾಶ್ರಿತರು ತಮ್ಮ ದೇಶದಲ್ಲೇ ಬೇರೆ ಕಡೆಗೆ ಅಥವಾ ಹೊಸ ದೇಶಕ್ಕೆ ಹೋಗಿ ವಾಸಿಸಬೇಕಾಗುತ್ತದೆ. ಆ ದೇಶದ ಬಗ್ಗೆ ಅವರಿಗೇನೂ ಗೊತ್ತಿರಲಿಕ್ಕಿಲ್ಲ. ಅಲ್ಲಿನ ಸರ್ಕಾರ ಅವರಿಗೆ ಆಹಾರ, ಬಟ್ಟೆ, ವಾಸ ಇದಕ್ಕೆಲ್ಲ ವ್ಯವಸ್ಥೆಮಾಡಬಹುದು. ಆದರೂ ನಿರಾಶ್ರಿತರಿಗೆ ಕೆಲವು ಸವಾಲುಗಳು ಇರುತ್ತವೆ. ಉದಾಹರಣೆಗೆ, ಹೊಸ ರೀತಿಯ ಆಹಾರವನ್ನು ತಿನ್ನಲು ಕಲಿಯಬೇಕಾಗುತ್ತದೆ. ಉಷ್ಣ ಜಾಸ್ತಿಯಿರುವ ದೇಶದಿಂದ ಬಂದವರು ತಣ್ಣಗಿನ ಹವಾಮಾನವಿರುವ ದೇಶಗಳಲ್ಲಿ ಯಾವ ಉಡುಗೆ-ತೊಡುಗೆ ಹಾಕಬೇಕೆಂದು ಕಲಿಯಬೇಕಾಗುತ್ತದೆ. ಇನ್ನು ಕೆಲವರು ಗೃಹಬಳಕೆಯ ಆಧುನಿಕ ಉಪಕರಣಗಳನ್ನು ಬಳಸುವುದು ಹೇಗೆಂದು ಕಲಿಯಬೇಕಾಗುತ್ತದೆ.
9 ನಿರಾಶ್ರಿತರು ಹೊಸ ದೇಶದ ಜೀವನಶೈಲಿಗೆ ಹೊಂದಿಕೊಳ್ಳಲು ಕೆಲವೊಮ್ಮೆ ಸರ್ಕಾರಗಳು ಕೆಲವು ಯೋಜನೆಗಳನ್ನು ಮಾಡುತ್ತವೆ. ಆದರೆ ಕೆಲವು ತಿಂಗಳ ನಂತರ ಅವರ ಪಾಡಿಗೆ ಬಿಟ್ಟುಬಿಡುತ್ತವೆ. ಇದರಿಂದ ಅವರಿಗೆ ತುಂಬ ಕಷ್ಟವಾಗಬಹುದು. ಅವರು ಒಮ್ಮೆಗೆ ಏನೆಲ್ಲಾ ಕಲಿಯಬೇಕಾಗುತ್ತದೆ ಗೊತ್ತಾ? ಹೊಸ ಭಾಷೆ, ಹೊಸ ಪದ್ಧತಿಗಳು, ಬಿಲ್ ಮತ್ತು ತೆರಿಗೆ ಕಟ್ಟುವುದರ ಬಗ್ಗೆ, ಶಾಲೆಯ ಹಾಜರಿ, ಹೆತ್ತವರು ಮಕ್ಕಳಿಗೆ ಕೊಡುವ ಶಿಕ್ಷೆಯ ಬಗ್ಗೆಯೂ ಇರುವ ಕಾಯಿದೆಗಳನ್ನು ಕಲಿಯಬೇಕಾಗುತ್ತದೆ! ಇಂಥ ಸವಾಲುಗಳನ್ನು ನಿಭಾಯಿಸುತ್ತಿರುವ ನಮ್ಮ ಸಹೋದರ ಸಹೋದರಿಯರಿಗೆ ನೀವು ತಾಳ್ಮೆಯಿಂದ, ಗೌರವದಿಂದ ಸಹಾಯ ಮಾಡುವಿರಾ?—ಫಿಲಿ. 2:3, 4.
10. ನಾವಿರುವ ಸ್ಥಳಕ್ಕೆ ನಿರಾಶ್ರಿತರು ಬಂದಾಗ ಅವರ ನಂಬಿಕೆಯನ್ನು ನಾವು ಹೇಗೆ ಬಲಪಡಿಸಬಹುದು? (ಲೇಖನದ ಆರಂಭದ ಚಿತ್ರ ನೋಡಿ.)
10 ನಿರಾಶ್ರಿತರು ಯಾವ ಊರಿಗೆ ಬಂದಿರುತ್ತಾರೋ ಅಲ್ಲಿನ ಸಭೆಯನ್ನು ಸಂಪರ್ಕಿಸುವುದನ್ನು ಕೆಲವೊಮ್ಮೆ ಅಧಿಕಾರಿಗಳು ತಡೆಯುತ್ತಾರೆ. ನಿರಾಶ್ರಿತರಾಗಿರುವ ನಮ್ಮ ಸಹೋದರರು ಕೂಟಗಳಿಗೆ ಅಡ್ಡಿಯಾಗುವ ಕೆಲಸವನ್ನು ಮಾಡಲು ಒಪ್ಪದಿದ್ದರೆ ಸಹಾಯ ಕೊಡುವುದನ್ನು ನಿಲ್ಲಿಸುತ್ತೇವೆ ಅಥವಾ ಆ ದೇಶದಲ್ಲಿರಲು ಅನುಮತಿ ಕೊಡುವುದಿಲ್ಲ ಎಂದು ಕೆಲವು ಸರಕಾರಿ ಸಂಸ್ಥೆಗಳು ಹೆದರಿಸುತ್ತವೆ. ಹಾಗಾಗಿ ಕೆಲವರು ಭಯದಿಂದ, ಬೇರೆ ದಾರಿಯಿಲ್ಲದೆ ಅಂಥ ಕೆಲಸಕ್ಕೆ ಒಪ್ಪಿಕೊಳ್ಳುತ್ತಾರೆ. ಆದ್ದರಿಂದ ನಾವಿರುವ ದೇಶಕ್ಕೊ ಸ್ಥಳಕ್ಕೊ ನಿರಾಶ್ರಿತರು ಬಂದ ಕೂಡಲೇ ನಾವು ಅವರನ್ನು ಸಂಪರ್ಕಿಸಬೇಕು. ಅವರ ಕಾಳಜಿ ವಹಿಸಲು ನಾವಿದ್ದೇವೆ ಎಂದು ಭರವಸೆ ನೀಡಬೇಕು. ಇಂಥ ಕಾಳಜಿ ಮತ್ತು ಇತರ ಪ್ರಾಯೋಗಿಕ ಸಹಾಯ ನಿರಾಶ್ರಿತರ ನಂಬಿಕೆಯನ್ನು ಬಲಪಡಿಸುತ್ತದೆ.—ಜ್ಞಾನೋ. 12:25; 17:17.
ನಿರಾಶ್ರಿತರಿಗೆ ಪ್ರಾಯೋಗಿಕ ಸಹಾಯ ಕೊಡಿ
11. (ಎ) ಆರಂಭದಲ್ಲಿ ನಿರಾಶ್ರಿತರಿಗೆ ಯಾವುದರ ಅಗತ್ಯವಿರುತ್ತದೆ? (ಬಿ) ನಿರಾಶ್ರಿತರು ಹೇಗೆ ತಮ್ಮ ಕೃತಜ್ಞತೆ ತೋರಿಸಬಹುದು?
11 ಆರಂಭದಲ್ಲಿ ನಾವು ನಿರಾಶ್ರಿತ ಸಾಕ್ಷಿಗಳಿಗೆ ಊಟ, ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ಕೊಟ್ಟು ಸಹಾಯ ಮಾಡಬೇಕಾಗಬಹುದು. * ಚಿಕ್ಕಪುಟ್ಟ ಉಡುಗೊರೆಗಳನ್ನು ಕೊಟ್ಟರೆ ಸಹ ಅವರಿಗೆ ಸಂತೋಷವಾಗುತ್ತದೆ. ಉದಾಹರಣೆಗೆ ಅವರಿಗೆ ಸಾಬೂನು ಅಥವಾ ಟವಲ್ ಕೊಡಬಹುದು. ನಿರಾಶ್ರಿತರಾಗಿ ಬಂದವರು ತಮಗೆ ಅದು ಬೇಕು ಇದು ಬೇಕು ಎಂದು ಕೇಳಬಾರದು. ಬದಲಿಗೆ ಸ್ಥಳೀಯ ಸಭೆಯವರು ಏನು ಕೊಡುತ್ತಾರೊ ಅದಕ್ಕಾಗಿ ಕೃತಜ್ಞರಾಗಿರಬೇಕು. ಆಗ ಅದನ್ನು ಕೊಡುವವರಿಗೂ ಖುಷಿಯಾಗುತ್ತದೆ. ಸಮಯ ಹೋಗುತ್ತಾ ಹೋಗುತ್ತಾ ನಿರಾಶ್ರಿತರು ತಮ್ಮ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳಲು ಕಲಿಯಬೇಕು. ಇದರಿಂದ ಅವರ ಸ್ವಗೌರವ ಉಳಿಸಿಕೊಳ್ಳುತ್ತಾರೆ, ಸಹೋದರರ ಜೊತೆ ಒಳ್ಳೇ ಸಂಬಂಧವನ್ನೂ ಉಳಿಸಿಕೊಳ್ಳುತ್ತಾರೆ. (2 ಥೆಸ. 3:7-10) ನಿರಾಶ್ರಿತರು ಇದೆಲ್ಲ ಮಾಡಬೇಕಿದ್ದರೂ ಅವರಿಗೆ ಪ್ರಾಯೋಗಿಕ ಸಹಾಯ ನೀಡುವುದು ನಮ್ಮ ಕರ್ತವ್ಯ.
12, 13. (ಎ) ನಿರಾಶ್ರಿತರಿಗೆ ನಾವು ಹೇಗೆ ಪ್ರಾಯೋಗಿಕ ಸಹಾಯ ಕೊಡಬಹುದು? (ಬಿ) ಒಂದು ಸಭೆಯ ಹಿರಿಯರು ಏನು ಮಾಡಿದರು?
12 ನಿರಾಶ್ರಿತರಿಗೆ ಸಹಾಯ ಮಾಡಲು ನಮ್ಮ ಹತ್ತಿರ ತುಂಬ ಹಣ ಇರಬೇಕಾಗಿಲ್ಲ. ಅವರಿಗೆ ಮುಖ್ಯವಾಗಿ ಬೇಕಾಗಿರುವುದು ನಮ್ಮ ಪ್ರೀತಿ ಮತ್ತು ಸಮಯ. ಅದನ್ನು ಕೊಡುವುದು ಹೇಗೆ? ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವುದು ಹೇಗೆ ಅಥವಾ ಕಡಿಮೆ ಬೆಲೆಯಲ್ಲಿ ಒಳ್ಳೇ ಆಹಾರವನ್ನು ಎಲ್ಲಿ, ಹೇಗೆ ಖರೀದಿಸುವುದೆಂದು ಹೇಳಿಕೊಡಬಹುದು. ಅವರು ಸಣ್ಣಪುಟ್ಟ ಕೆಲಸ ಮಾಡಿ ಸಂಪಾದನೆ ಮಾಡಲು ಬೇಕಾದ ವಸ್ತುಗಳು ಎಲ್ಲಿ, ಹೇಗೆ ಸಿಗುತ್ತವೆಂದು ಹೇಳಿಕೊಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಹೊಸ ಸಭೆಯ ಚಟುವಟಿಕೆಗಳಲ್ಲಿ ಪೂರ್ಣವಾಗಿ ಒಳಗೂಡಲು ನಾವು ಸಹಾಯ ಮಾಡಬಹುದು. ಸಾಧ್ಯವಿದ್ದರೆ ಅವರನ್ನು ಕೂಟಗಳಿಗೆ ನಿಮ್ಮ ವಾಹನದಲ್ಲಿ ಕರಕೊಂಡು ಹೋಗಬಹುದು. ನಿಮ್ಮ ಸೇವಾಕ್ಷೇತ್ರದಲ್ಲಿನ ಜನರಿಗೆ ಹೇಗೆ ಸಾರಿದರೆ
ಚೆನ್ನಾಗಿರುತ್ತದೆಂದು ಕೂಡ ಕಲಿಸಬಹುದು. ಅವರ ಜೊತೆ ಸೇವೆಗೂ ಹೋಗಬಹುದು.13 ನಾಲ್ಕು ಮಂದಿ ಯುವ ನಿರಾಶ್ರಿತರು ಒಂದು ಸಭೆಗೆ ಬಂದಾಗ ಅಲ್ಲಿನ ಹಿರಿಯರು ಅವರಿಗೆ ಬೇಕಾದ ಸಹಾಯ ನೀಡಿದರು. ಕಾರ್ ಓಡಿಸುವುದು ಹೇಗೆ, ಕಂಪ್ಯೂಟರಲ್ಲಿ ಪತ್ರ ಟೈಪ್ ಮಾಡುವುದು ಹೇಗೆ, ಕೆಲಸಕ್ಕೆ ಅರ್ಜಿ ಹಾಕುವುದು ಹೇಗೆ ಎಂದು ಕಲಿಸಿಕೊಟ್ಟರು. ಯೆಹೋವನ ಸೇವೆಗೆ ಮೊದಲ ಸ್ಥಾನ ಕೊಡಲು ಸಾಧ್ಯವಾಗುವಂತೆ ತಮ್ಮ ಸಮಯವನ್ನು ಹೇಗೆ ಉಪಯೋಗಿಸುವುದು ಎಂದೂ ತೋರಿಸಿಕೊಟ್ಟರು. (ಗಲಾ. 6:10) ಆ ನಾಲ್ಕು ಮಂದಿ ಸ್ವಲ್ಪ ಸಮಯದಲ್ಲೇ ಪಯನೀಯರರಾದರು. ಹಿರಿಯರು ಕೊಟ್ಟ ಸಹಾಯದಿಂದ ಮತ್ತು ಯೆಹೋವನ ಸೇವೆಯಲ್ಲಿ ಅವರೇ ಒಳ್ಳೇ ಗುರಿಗಳನ್ನು ಇಟ್ಟದ್ದರಿಂದ ಪ್ರಗತಿ ಮಾಡಿದರು. ಅವರು ಸೈತಾನನ ಲೋಕದ ಹಿಂದೆ ಹೋಗಲಿಲ್ಲ.
14. (ಎ) ನಿರಾಶ್ರಿತರು ಯಾವ ಪ್ರಲೋಭನೆಯನ್ನು ಎದುರಿಸಿ ನಿಲ್ಲಬೇಕು? (ಬಿ) ಒಂದು ಉದಾಹರಣೆ ಕೊಡಿ.
14 ಯೆಹೋವನಿಗೆ ಮೊದಲ ಸ್ಥಾನ ಕೊಡದೆ ಹಣ, ವಸ್ತುಗಳ ಹಿಂದೆ ಬೀಳುವ ಪ್ರಲೋಭನೆ ಮತ್ತು ಒತ್ತಡ ಇತರ ಕ್ರೈಸ್ತರಿಗೆ ಬರುವಂತೆ ನಿರಾಶ್ರಿತರಿಗೂ ಬರುತ್ತದೆ. ಇದನ್ನು ಅವರು ಜಯಿಸಬೇಕು. * ಸಹೋದರ ಲೀಜ ಮತ್ತು ಅವರ ಒಡಹುಟ್ಟಿದವರು ಊರು ಬಿಟ್ಟು ಓಡಿಹೋಗುತ್ತಿರುವಾಗ ತಮ್ಮ ತಂದೆಯಿಂದ ನಂಬಿಕೆಯ ವಿಷಯದಲ್ಲಿ ಕಲಿತ ಪಾಠಗಳ ಬಗ್ಗೆ ಹೀಗೆ ಹೇಳುತ್ತಾರೆ: “ಬ್ಯಾಗಲ್ಲಿದ್ದ ಅಗತ್ಯವಿಲ್ಲದ ವಸ್ತುಗಳನ್ನು ಅಪ್ಪ ಒಂದೊಂದಾಗಿ ಎಸೆಯುತ್ತಾ ಬಂದರು. ಕೊನೆಗೆ ಖಾಲಿ ಬ್ಯಾಗನ್ನು ಹಿಡಿದು ನಗುತ್ತಾ ‘ನೋಡಿದ್ರಾ? ಅದೆಲ್ಲಾ ನಮಗೆ ಬೇಕಾಗಿಲ್ಲ’ ಎಂದರು.”—1 ತಿಮೊಥೆಯ 6:8 ಓದಿ.
ನಿರಾಶ್ರಿತರಿಗೆ ತುಂಬ ಅಗತ್ಯವಾಗಿರುವ ಸಹಾಯ
15, 16. (ಎ) ನಾವು ಹೇಗೆ ನಿರಾಶ್ರಿತರ ನಂಬಿಕೆಯನ್ನು ಬಲಪಡಿಸಬಹುದು? (ಬಿ) ಅವರ ಭಾವನೆಗಳನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬಹುದು?
15 ನಿರಾಶ್ರಿತರಿಗೆ ಊಟ, ಬಟ್ಟೆಯನ್ನು ಕೊಡುವುದು ಮುಖ್ಯ. ಆದರೆ ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ಬೈಬಲಿನಿಂದ ಉತ್ತೇಜನ ಕೊಡುವುದು ಅದಕ್ಕಿಂತ ಮುಖ್ಯ. (ಮತ್ತಾ. 4:4) ಹಿರಿಯರು ನಿರಾಶ್ರಿತರ ಭಾಷೆಯಲ್ಲಿ ಪ್ರಕಾಶನಗಳನ್ನು ತರಿಸಿ ಕೊಡಬಹುದು. ಅವರ ಭಾಷೆಯನ್ನಾಡುವ ಸಹೋದರರ ಪರಿಚಯ ಮಾಡಿಸಿಕೊಡಬಹುದು. ತಮಗೆ ಪರಿಚಯವಿದ್ದ ಜನ, ಊರನ್ನು ಬಿಟ್ಟುಬಂದಿರುವ ನಿರಾಶ್ರಿತರಿಗೆ ಇದು ಬಹಳ ಮುಖ್ಯ. ಅವರಿಗೆ ತಮ್ಮ ಕುಟುಂಬದ, ಊರಿನ, ಸಭೆಯ ನೆನಪು ಬಂದೇ ಬರುತ್ತದೆ. ಆದ್ದರಿಂದ ಈಗ ಜೊತೆ ಕ್ರೈಸ್ತರ ಮೂಲಕ ಯೆಹೋವನು ಅವರನ್ನು ಎಷ್ಟು ಪ್ರೀತಿಸುತ್ತಾನೆ ಮತ್ತು ದಯೆ ತೋರಿಸುತ್ತಾನೆಂದು ಗೊತ್ತಾಗಬೇಕು. ಜೊತೆ ಕ್ರೈಸ್ತರು ಇಂಥ ಪ್ರೀತಿ, ದಯೆ ತೋರಿಸದಿದ್ದರೆ ನಿರಾಶ್ರಿತರು ಯೆಹೋವನ ಆರಾಧಕರಲ್ಲದ ತಮ್ಮ ಊರಿನ, ಭಾಷೆಯ ಜನರ ಮೊರೆಹೋಗುತ್ತಾರೆ. (1 ಕೊರಿಂ. 15:33) ನಿರಾಶ್ರಿತ ಸಹೋದರರು ಕೂಡ ಸ್ಥಳೀಯ ಸಭೆಯ ಭಾಗವಾಗಿದ್ದಾರೆ ಎಂಬ ಭಾವನೆಯನ್ನು ನಾವು ಅವರಲ್ಲಿ ಮೂಡಿಸಬೇಕು. ಆಗ “ಪರದೇಶದವರನ್ನು ಕಾಪಾಡು”ವುದರಲ್ಲಿ ನಾವು ಯೆಹೋವನ ಜೊತೆ ಸೇರುತ್ತೇವೆ.—ಕೀರ್ತ. 146:9.
1 ಪೇತ್ರ 3:8) ಕೆಲವು ನಿರಾಶ್ರಿತರು ತಾವು ಅನುಭವಿಸಿದ ಹಿಂಸೆಯಿಂದಾಗಿ ಬೇರೆಯವರ ಜೊತೆ ಹೆಚ್ಚು ಬೆರೆಯುವುದಿಲ್ಲ. ತಮಗೆ ಕೊಡಲಾದ ಹಿಂಸೆಯ ಬಗ್ಗೆ ಮಾತಾಡಲು, ವಿಶೇಷವಾಗಿ ತಮ್ಮ ಮಕ್ಕಳ ಮುಂದೆ ಮಾತಾಡಲು ತುಂಬ ಮುಜುಗರಪಡುತ್ತಾರೆ. ಆದ್ದರಿಂದ ನಿಮ್ಮನ್ನೇ ಹೀಗೆ ಕೇಳಿಕೊಳ್ಳಿ: ‘ನಾನು ಅವರ ಸ್ಥಾನದಲ್ಲಿದ್ದರೆ ಬೇರೆಯವರು ನನ್ನ ಜೊತೆ ಹೇಗೆ ನಡಕೊಳ್ಳಬೇಕೆಂದು ಬಯಸುತ್ತೇನೆ?’—ಮತ್ತಾ. 7:12.
16 ಯೇಸುವಿನ ಕುಟುಂಬದವರು ತಮ್ಮ ಹಿಂಸೆಗೆ ಕಾರಣವಾದವರ ಆಳ್ವಿಕೆ ಕೊನೆಯಾಗುವ ತನಕ ಊರಿಗೆ ಹಿಂದೆ ಹೋಗಲು ಆಗಲಿಲ್ಲ. ಇಂಥದ್ದೇ ಕಾರಣಗಳಿಂದಾಗಿ ಇಂದಿರುವ ನಿರಾಶ್ರಿತರಿಗೂ ತಮ್ಮ ಊರಿಗೆ ವಾಪಸ್ಸು ಹೋಗಲು ಆಗುತ್ತಿಲ್ಲ. ಇನ್ನು ಕೆಲವರಿಗೆ ಹಿಂದೆ ಹೋಗಲು ಮನಸ್ಸಿರುವುದಿಲ್ಲ. ಅನೇಕ ಹೆತ್ತವರು ತಮ್ಮ ಊರಲ್ಲಿ ಕುಟುಂಬ ಸದಸ್ಯರ ಮೇಲೆ ಆದ ಅತ್ಯಾಚಾರ, ತಮ್ಮವರ ಕೊಲೆಯನ್ನು ನೋಡಿದ್ದರಿಂದ ತಮ್ಮ ಮಕ್ಕಳನ್ನು ಕರೆದುಕೊಂಡು ಹಿಂದೆ ಹೋಗಲು ಬಯಸುವುದಿಲ್ಲ ಎಂದು ಸಹೋದರ ಲೀಜ ಹೇಳುತ್ತಾರೆ. ನಾವು ನಮ್ಮ ಸಹೋದರರಿಗೆ ಸಹಾಯ ಮಾಡಬೇಕೆಂದರೆ ನಮ್ಮಲ್ಲಿ ‘ಅನುಕಂಪ, ಸಹೋದರ ಮಮತೆ, ಕೋಮಲವಾದ ಕನಿಕರ, ದೀನತೆ’ ಇರಬೇಕು. (ಸಾಕ್ಷಿಗಳಲ್ಲದ ನಿರಾಶ್ರಿತರಿಗೆ ಸಾರುವಾಗ
17. ನಿರಾಶ್ರಿತರಿಗೆ ನಮ್ಮ ಸಾರುವ ಕೆಲಸ ಹೇಗೆ ನೆಮ್ಮದಿ ತರುತ್ತಿದೆ?
17 ಸಾರುವ ಕೆಲಸದ ಮೇಲೆ ನಿರ್ಬಂಧವಿರುವ ದೇಶಗಳಿಂದಲೂ ಅನೇಕರು ಬೇರೆ ದೇಶಗಳಿಗೆ ನಿರಾಶ್ರಿತರಾಗಿ ಹೋಗುತ್ತಾರೆ. ಇಂಥ ಸಾವಿರಾರು ಜನರಿಗೆ ಯೆಹೋವನ ಸಾಕ್ಷಿಗಳು ಹುರುಪಿನಿಂದ ಸಾರುತ್ತಿದ್ದಾರೆ. ಹೀಗೆ ನಿರಾಶ್ರಿತರಿಗೆ ಮೊದಲ ಬಾರಿ ದೇವರ “ರಾಜ್ಯದ ವಾಕ್ಯವನ್ನು” ಕೇಳಿಸಿಕೊಳ್ಳುವ ಅವಕಾಶ ಸಿಕ್ಕಿದೆ. (ಮತ್ತಾ. 13:19, 23) “ಕಷ್ಟಪಡುತ್ತಿರುವ” ನಿರಾಶ್ರಿತರು ನಮ್ಮ ಕೂಟಗಳಿಂದ ಸಾಂತ್ವನ, ನೆಮ್ಮದಿ ಪಡೆಯುತ್ತಿದ್ದಾರೆ. “ದೇವರು ನಿಜವಾಗಿಯೂ ನಿಮ್ಮ ಮಧ್ಯೆ ಇದ್ದಾನೆ” ಎಂದು ನಮಗೆ ಹೇಳುತ್ತಿದ್ದಾರೆ.—ಮತ್ತಾ. 11:28-30; 1 ಕೊರಿಂ. 14:25.
18, 19. ನಿರಾಶ್ರಿತರಿಗೆ ಸಾರುವಾಗ ನಾವು ಹೇಗೆ ಜಾಣರಾಗಿರಬಹುದು?
18 ನಿರಾಶ್ರಿತರಿಗೆ ಸಾರುವಾಗ ಜಾಣರೂ “ಜಾಗರೂಕರೂ” ಆಗಿರಬೇಕು. (ಮತ್ತಾ. 10:16; ಜ್ಞಾನೋ. 22:3) ಅವರು ಮಾತಾಡುವಾಗ ತಾಳ್ಮೆಯಿಂದ ಕಿವಿಗೊಡಿ. ರಾಜಕೀಯ ವಿಷಯಗಳನ್ನು ಚರ್ಚಿಸಬೇಡಿ. ಶಾಖಾ ಕಚೇರಿಯ ಮತ್ತು ಸ್ಥಳೀಯ ಅಧಿಕಾರಿಗಳ ನಿರ್ದೇಶನಗಳನ್ನು ಪಾಲಿಸಿ. ಹೀಗೆ ನಿಮಗೆ ಮತ್ತು ಇತರರಿಗೆ ಅಪಾಯ ಆಗದಂತೆ ನೋಡಿಕೊಳ್ಳಬಹುದು. ನಿರಾಶ್ರಿತರ ಧರ್ಮ, ಸಂಸ್ಕೃತಿ ಬೇರೆ ಆಗಿರುವುದರಿಂದ ಅವರ ಭಾವನೆಗಳನ್ನು, ಅಭಿಪ್ರಾಯಗಳನ್ನು ತಿಳಿದುಕೊಳ್ಳಿ ಮತ್ತು ಗೌರವಿಸಿ. ಉದಾಹರಣೆಗೆ, ಕೆಲವು ದೇಶಗಳಲ್ಲಿ ಮಹಿಳೆಯರ ಉಡುಗೆ-ತೊಡುಗೆಯ ಬಗ್ಗೆ ತುಂಬ ಕಟ್ಟುನಿಟ್ಟು ಇರುತ್ತದೆ. ಹಾಗಾಗಿ ನಾವು ಅಂಥ ದೇಶಗಳ ನಿರಾಶ್ರಿತರಿಗೆ ಸಾರಲು ಹೋಗುವಾಗ ಅವರಿಗೆ ಮುಜುಗರವಾಗದಂಥ ರೀತಿಯಲ್ಲಿ ಬಟ್ಟೆ ಧರಿಸಿದರೆ ಒಳ್ಳೇದು.
19 ಕಷ್ಟದಲ್ಲಿರುವ ಜನರು ಯೆಹೋವನ ಸಾಕ್ಷಿಗಳಲ್ಲದಿದ್ದರೂ ನಾವು ಸಹಾಯ ಮಾಡುತ್ತೇವೆ. ಹೀಗೆ ಮಾಡಿದರೆ ಯೇಸುವಿನ ದೃಷ್ಟಾಂತದಲ್ಲಿರುವ ಸಮಾರ್ಯದವನನ್ನು ಅನುಕರಿಸುತ್ತೇವೆ. (ಲೂಕ 10:33-37) ನಿರಾಶ್ರಿತರಿಗೆ ಸುವಾರ್ತೆ ಸಾರುವುದೇ ನಾವು ಮಾಡುವ ದೊಡ್ಡ ಸಹಾಯ. ಹೀಗೆ ಅನೇಕರಿಗೆ ಸಹಾಯ ಮಾಡಿದ ಒಬ್ಬ ಹಿರಿಯನು ಹೇಳಿದ್ದು: “ಜನರನ್ನು ಮೊದಲ ಬಾರಿ ಭೇಟಿಯಾದಾಗಲೇ ನಾವು ಯೆಹೋವನ ಸಾಕ್ಷಿಗಳು, ನಮ್ಮ ಗುರಿ ಜನರಿಗೆ ಭೌತಿಕವಾಗಿ ಅಲ್ಲ ಆಧ್ಯಾತ್ಮಿಕವಾಗಿ ಸಹಾಯ ಮಾಡುವುದೇ ಆಗಿದೆಯೆಂದು ಹೇಳಿಬಿಡಬೇಕು. ಇಲ್ಲದಿದ್ದರೆ ಕೆಲವರು ಲಾಭ ಸಿಗುತ್ತದೆ ಎನ್ನುವ ಉದ್ದೇಶದಿಂದ ನಮ್ಮ ಜೊತೆ ಸಹವಾಸ ಮಾಡುತ್ತಾರೆ.”
ಸಂತೋಷ ತರುವ ಫಲಿತಾಂಶಗಳು
20, 21. (ಎ) ನಿರಾಶ್ರಿತರಿಗೆ ನಿಜವಾದ ಪ್ರೀತಿ ತೋರಿಸುವುದರಿಂದ ಯಾವ ಫಲಿತಾಂಶ ಸಿಗುತ್ತದೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?
20 ನಾವು ‘ಪರದೇಶದವರಿಗೆ’ ನಿಜವಾದ ಪ್ರೀತಿ ತೋರಿಸಿದರೆ ಒಳ್ಳೇ ಫಲಿತಾಂಶಗಳು ಸಿಗುತ್ತವೆ. ಎರಿಟ್ರೀಯದ ಒಬ್ಬ ಕ್ರೈಸ್ತ ಸಹೋದರಿಯ ಉದಾಹರಣೆ ತೆಗೆದುಕೊಳ್ಳಿ. ಅಲ್ಲಿದ್ದ ಹಿಂಸೆಯ ಕಾರಣ ಆಕೆಯ ಕುಟುಂಬ ಆ ದೇಶ ಬಿಡಬೇಕಾಗಿ ಬಂತು. ಅವರ ಮಕ್ಕಳಲ್ಲಿ ನಾಲ್ಕು ಮಂದಿ ಮರಳುಗಾಡಿನಲ್ಲಿ ಎಂಟು ದಿನ ಪ್ರಯಾಣ ಮಾಡಿದರು. ಪೂರ್ತಿ ಬಳಲಿಸಿದ ಈ ಪ್ರಯಾಣದ ನಂತರ ಅವರು ಸೂಡಾನ್ ದೇಶಕ್ಕೆ ಬಂದು ತಲಪಿದರು. ಆ ಸಹೋದರಿ ಹೇಳುವುದು: “ಅವರನ್ನು ಸಹೋದರರು ಸ್ವಂತ ಮನೆಯವರಂತೆ ನೋಡಿಕೊಂಡರು. ಊಟ-ಬಟ್ಟೆ ಕೊಟ್ಟರು, ಉಳಿಯಲಿಕ್ಕೆ ಏರ್ಪಾಡು ಮಾಡಿದರು, ಓಡಾಡಲಿಕ್ಕೆ ಬೇಕಾದ ಹಣವನ್ನೂ ಕೊಟ್ಟರು. ‘ನಾನು ಆರಾಧಿಸುವ ದೇವರನ್ನೇ ಇವರೂ ಆರಾಧಿಸುತ್ತಾರೆ’ ಎಂಬ ಒಂದೇ ಕಾರಣಕ್ಕೆ ಅಪರಿಚಿತನೊಬ್ಬನನ್ನು ಇವತ್ತು ಯಾರು ಮನೆಯೊಳಗೆ ಸೇರಿಸಿಕೊಳ್ಳುತ್ತಾರೆ ಹೇಳಿ? ಯೆಹೋವನ ಸಾಕ್ಷಿಗಳು ಮಾತ್ರ ಹಾಗೆ ಮಾಡುತ್ತಾರೆ!”—ಯೋಹಾನ 13:35 ಓದಿ.
21 ನಿರಾಶ್ರಿತ ಹೆತ್ತವರ ಜೊತೆ ಅವರ ಮಕ್ಕಳೂ ಬರುತ್ತಾರೆ. ಅವರು ಸಂತೋಷದಿಂದ ಯೆಹೋವನ ಸೇವೆಮಾಡಲು ನಾವೆಲ್ಲರೂ ಹೇಗೆ ಸಹಾಯ ಮಾಡಬಹುದು ಎಂದು ಮುಂದಿನ ಲೇಖನದಲ್ಲಿ ಚರ್ಚಿಸೋಣ.
^ ಪ್ಯಾರ. 2 ಈ ಲೇಖನದಲ್ಲಿ, ಯುದ್ಧ, ಹಿಂಸೆ ಅಥವಾ ನೈಸರ್ಗಿಕ ವಿಪತ್ತುಗಳ ಕಾರಣ ತಮ್ಮ ಮನೆ, ಊರನ್ನು ಬಿಟ್ಟು ಬೇರೆ ಕಡೆ ಹೋಗಿರುವವರನ್ನು “ನಿರಾಶ್ರಿತರು” ಎಂದು ಕರೆಯಲಾಗಿದೆ. ಇವರು ಬೇರೆ ದೇಶಗಳಿಗೊ ತಮ್ಮ ದೇಶದಲ್ಲೇ ಇರುವ ಬೇರೆ ಊರಿಗೊ ಆಶ್ರಯ ಹುಡುಕಿಕೊಂಡು ಹೋಗಿರಬಹುದು. ನಿರಾಶ್ರಿತರಿಗಾಗಿರುವ ವಿಶ್ವಸಂಸ್ಥೆಯ ಹೈ ಕಮಿಷನರ್ (ಯು.ಎನ್.ಏಚ್.ಸಿ.ಆರ್.) ಪ್ರಕಾರ ಜಗತ್ತಿನ 113 ಜನರಲ್ಲಿ ಒಬ್ಬರು ನಿರಾಶ್ರಿತರಾಗಿದ್ದಾರೆ.
^ ಪ್ಯಾರ. 6 ಅಕ್ಟೋಬರ್ 2016ರ ಕಾವಲಿನಬುರುಜು ಪುಟ 8-12ರಲ್ಲಿರುವ “ಅಪರಿಚಿತರಿಗೆ ದಯೆ ತೋರಿಸುವುದನ್ನು ಮರೆಯಬೇಡಿ” ಎಂಬ ಲೇಖನ ನೋಡಿ.
^ ಪ್ಯಾರ. 11 ಒಬ್ಬ ನಿರಾಶ್ರಿತನು ಬಂದ ಕೂಡಲೇ ಹಿರಿಯರು, ಸಂಘಟಿತರು ಪುಸ್ತಕದ ಅಧ್ಯಾಯ 8 ಪ್ಯಾರ 30ರಲ್ಲಿರುವ ನಿರ್ದೇಶನಗಳನ್ನು ಪಾಲಿಸಬೇಕು. ಆ ನಿರಾಶ್ರಿತನ ದೇಶದಲ್ಲಿರುವ ಸಭೆಯನ್ನು ಸಂಪರ್ಕಿಸಲು ಹಿರಿಯರು jw.org ಬಳಸಿ ತಮ್ಮ ದೇಶದ ಶಾಖಾ ಕಚೇರಿಗೆ ಪತ್ರ ಬರೆಯಬಹುದು. ಉತ್ತರ ಬರುವಷ್ಟರಲ್ಲಿ ಹಿರಿಯರು ಆ ವ್ಯಕ್ತಿಯ ಸಭೆ ಮತ್ತು ಸೇವೆ ಬಗ್ಗೆ ನಾಜೂಕಾಗಿ ಪ್ರಶ್ನೆಗಳನ್ನು ಕೇಳಿ ಅವರ ಆಧ್ಯಾತ್ಮಿಕತೆಯ ಬಗ್ಗೆ ತಿಳಿದುಕೊಳ್ಳಬಹುದು.
^ ಪ್ಯಾರ. 14 ಏಪ್ರಿಲ್ 15, 2014ರ ಕಾವಲಿನಬುರುಜುವಿನ ಪುಟ 17-26ರಲ್ಲಿರುವ “ಯಾರೂ ಇಬ್ಬರು ಯಜಮಾನರ ಸೇವೆಮಾಡಲಾರರು” ಮತ್ತು “ಧೈರ್ಯವಾಗಿರಿ—ಯೆಹೋವನು ನಿಮ್ಮ ಸಹಾಯಕನು!” ಎಂಬ ಲೇಖನಗಳನ್ನು ನೋಡಿ.