ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಪ್ರೀತಿ ತಣ್ಣಗಾಗದಂತೆ ನೋಡಿಕೊಳ್ಳಿ

ನಿಮ್ಮ ಪ್ರೀತಿ ತಣ್ಣಗಾಗದಂತೆ ನೋಡಿಕೊಳ್ಳಿ

“ಅನ್ಯಾಯವು ಹೆಚ್ಚಾಗುವುದರಿಂದ ಬಹುಜನರ ಪ್ರೀತಿಯು ತಣ್ಣಗಾಗಿಹೋಗುವುದು.” —ಮತ್ತಾ. 24:12.

ಗೀತೆಗಳು: 60, 135

1, 2. (ಎ) ಮತ್ತಾಯ 24:12 ರಲ್ಲಿರುವ ಯೇಸುವಿನ ಮಾತು ಮೊದಲನೇ ಶತಮಾನದಲ್ಲಿ ಯಾರಿಗೆ ಅನ್ವಯಿಸಿತು? (ಬಿ) ಆ ಕಾಲದಲ್ಲಿದ್ದ ಹೆಚ್ಚಿನ ಕ್ರೈಸ್ತರ ಪ್ರೀತಿ ಬಲವಾಗಿತ್ತೆಂದು ಅಪೊಸ್ತಲರ ಕಾರ್ಯಗಳು ಪುಸ್ತಕ ಹೇಗೆ ತೋರಿಸಿಕೊಡುತ್ತದೆ? (ಲೇಖನದ ಆರಂಭದ ಚಿತ್ರ ನೋಡಿ.)

ಯೇಸು ಭೂಮಿಯಲ್ಲಿದ್ದಾಗ ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯ’ ಸೂಚನೆಯನ್ನು ಕೊಟ್ಟನು. ಅವನು ಮುಂತಿಳಿಸಿದ ವಿಷಯಗಳಲ್ಲಿ, “ಬಹುಜನರ ಪ್ರೀತಿಯು ತಣ್ಣಗಾಗಿಹೋಗುವುದು” ಎಂಬ ವಿಚಾರವೂ ಇತ್ತು. (ಮತ್ತಾ. 24:3, 12) ಮೊದಲನೇ ಶತಮಾನದಲ್ಲಿದ್ದ ಯೆಹೂದ್ಯರ ವಿಷಯದಲ್ಲಿ ಹೀಗೆ ಆಗಿತ್ತು. ತಾವು ದೇವಜನರೆಂದು ಹೇಳಿಕೊಂಡರೂ ದೇವರ ಮೇಲೆ ಅವರಿಗಿದ್ದ ಪ್ರೀತಿ ತಣ್ಣಗಾಗುವಂತೆ ಬಿಟ್ಟಿದ್ದರು.

2 ಆದರೆ ಆ ಸಮಯದಲ್ಲಿದ್ದ ಕ್ರೈಸ್ತರು ಯೆಹೂದ್ಯರಂತೆ ಇರಲಿಲ್ಲ. “ಯೇಸುವಿನ ಕುರಿತಾದ ಸುವಾರ್ತೆಯನ್ನು” ಹುರುಪಿನಿಂದ ಸಾರುತ್ತಾ, ತಮಗೆ ದೇವರ ಮೇಲೆ, ಜೊತೆ ಆರಾಧಕರ ಮೇಲೆ ಮತ್ತು ಇನ್ನೂ ಸತ್ಯ ಕಲಿತಿಲ್ಲದ ವ್ಯಕ್ತಿಗಳ ಮೇಲೆ ಪ್ರೀತಿಯಿದೆ ಎಂದು ತೋರಿಸಿದರು. ದೇವರ ಮೇಲೆ ತಮಗಿದ್ದ ಪ್ರೀತಿಯನ್ನು ಬಲವಾಗಿ ಇಟ್ಟುಕೊಂಡರು. (ಅ. ಕಾ. 2:44-47; 5:42) ಆದರೆ ದುಃಖಕರವಾಗಿ ಆ ಕ್ರೈಸ್ತರಲ್ಲೇ ಕೆಲವರ ಪ್ರೀತಿ ತಣ್ಣಗಾಗಿ ಹೋಗಿತ್ತು. ಅದು ನಮಗೆ ಹೇಗೆ ಗೊತ್ತು?

3. ಕೆಲವು ಕ್ರೈಸ್ತರ ಪ್ರೀತಿ ತಣ್ಣಗಾಗಿ ಹೋಗಲು ಕಾರಣ ಏನಿರಬಹುದು?

3 ಎಫೆಸದಲ್ಲಿದ್ದ ಕ್ರೈಸ್ತರಿಗೆ ಯೇಸು ಹೀಗಂದನು: ‘ಮೊದಲು ನಿಮಗಿದ್ದ ಪ್ರೀತಿಯನ್ನು ನೀವು ಬಿಟ್ಟುಬಿಟ್ಟಿದ್ದೀರಿ.’ (ಪ್ರಕ. 2:4) ಯಾಕೆ ಹೀಗಾಗಿರಬಹುದು? ಎಫೆಸ ಒಂದು ಶ್ರೀಮಂತ ಪಟ್ಟಣವಾಗಿತ್ತು. ಅಲ್ಲಿದ್ದ ಜನರು ಮೂರು ಹೊತ್ತೂ ತಮ್ಮ ಸುಖಸೌಕರ್ಯದ ಬಗ್ಗೆ ಯೋಚಿಸುತ್ತಿದ್ದರು. ತುಂಬ ಅನೈತಿಕ ಜೀವನ ನಡೆಸುತ್ತಿದ್ದರು. ದೇವರ ನಿಯಮಗಳಿಗೆ ಕಿಂಚಿತ್ತೂ ಬೆಲೆ ಕೊಡುತ್ತಿರಲಿಲ್ಲ. ತಾವು ಹೇಗೆ ಮಜಾ ಮಾಡಬಹುದು ಎಂದು ಯೋಚಿಸುತ್ತಿದ್ದರೇ ಹೊರತು ದೇವರಿಗೆ ಮತ್ತು ಬೇರೆಯವರಿಗೆ ಪ್ರೀತಿ ತೋರಿಸಬೇಕು ಎಂಬುದರ ಬಗ್ಗೆ ಯೋಚನೆ ಮಾಡಲಿಲ್ಲ. ಇಂಥ ಸ್ವಾರ್ಥ ಜನರ ಪ್ರಭಾವದಿಂದಾಗಿ ಕೆಲವು ಕ್ರೈಸ್ತರ ಪ್ರೀತಿ ತಣ್ಣಗಾಗಿ ಹೋಗಿರಬೇಕು.—ಎಫೆ. 2:2, 3.

4. (ಎ) ನಮ್ಮ ಕಾಲದಲ್ಲಿ ಪ್ರೀತಿ ಹೇಗೆ ತಣ್ಣಗಾಗಿ ಹೋಗಿದೆ? (ಬಿ) ಯಾವ ಮೂರು ಕ್ಷೇತ್ರಗಳಲ್ಲಿ ನಮ್ಮ ಪ್ರೀತಿಯನ್ನು ಬಲವಾಗಿ ಇಟ್ಟುಕೊಳ್ಳಬೇಕು?

4 ಅನೇಕರ ಪ್ರೀತಿ ತಣ್ಣಗಾಗಿ ಹೋಗುತ್ತದೆ ಎಂಬ ಯೇಸುವಿನ ಮಾತು ಇಂದು ಸಹ ಅನ್ವಯಿಸುತ್ತದೆ. ಜನರಿಗೆ ದೇವರ ಮೇಲಿರುವ ಪ್ರೀತಿ ತಣ್ಣಗಾಗಿ ಹೋಗುತ್ತಾ ಇದೆ. ತಮಗಿರುವ ಸಮಸ್ಯೆಗಳನ್ನು ದೇವರಲ್ಲ ಮಾನವ ಸಂಘಟನೆಗಳು ತೆಗೆದುಹಾಕುತ್ತವೆ ಎಂದು ಲಕ್ಷಾಂತರ ಜನರು ನೆನಸುತ್ತಾರೆ. ಎಫೆಸ ಸಭೆಯಲ್ಲಾದಂತೆ ಇಂದೂ ಯೆಹೋವನ ಆರಾಧಕರ ಪ್ರೀತಿ ತಣ್ಣಗಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಮೂರು ಕ್ಷೇತ್ರಗಳಲ್ಲಿ ನಮ್ಮ ಪ್ರೀತಿಯನ್ನು ಹೇಗೆ ಬಲವಾಗಿಟ್ಟುಕೊಳ್ಳುವುದು ಎಂದು ಚರ್ಚಿಸೋಣ. (1) ಯೆಹೋವನ ಮೇಲೆ ಪ್ರೀತಿ. (2) ಬೈಬಲ್‌ ಸತ್ಯದ ಮೇಲೆ ಪ್ರೀತಿ. (3) ಸಹೋದರರ ಮೇಲೆ ಪ್ರೀತಿ.

ಯೆಹೋವನ ಮೇಲೆ ಪ್ರೀತಿ

5. ನಾವು ಯಾಕೆ ದೇವರನ್ನು ಪ್ರೀತಿಸಬೇಕು?

5 ನಾವು ಎಲ್ಲಕ್ಕಿಂತ ಹೆಚ್ಚಾಗಿ ಯಾರನ್ನು ಪ್ರೀತಿಸಬೇಕು? “‘ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.’ ಇದೇ ಅತಿ ದೊಡ್ಡದಾದ ಮತ್ತು ಮೊದಲನೆಯ ಆಜ್ಞೆಯಾಗಿದೆ” ಎಂದು ಯೇಸು ಹೇಳಿದನು. (ಮತ್ತಾ. 22:37, 38) ನಮಗೆ ದೇವರ ಮೇಲೆ ಪ್ರೀತಿ ಇದ್ದರೆ ಆತನ ಆಜ್ಞೆಗಳನ್ನು ಪಾಲಿಸುತ್ತೇವೆ, ಕಷ್ಟಗಳನ್ನು ತಾಳಿಕೊಳ್ಳುತ್ತೇವೆ, ಕೆಟ್ಟದ್ದನ್ನು ದ್ವೇಷಿಸುತ್ತೇವೆ. (ಕೀರ್ತನೆ 97:10 ಓದಿ.) ಆದರೆ ಸೈತಾನ ಮತ್ತು ಅವನ ಲೋಕ ದೇವರ ಮೇಲೆ ನಮಗಿರುವ ಪ್ರೀತಿಯನ್ನು ಕಡಿಮೆಮಾಡಿ ಅಳಿಸಿಹಾಕಲು ಪ್ರಯತ್ನಿಸುತ್ತವೆ.

6. ದೇವರ ಮೇಲೆ ಪ್ರೀತಿ ಇಲ್ಲದ ಜನರು ಏನು ಮಾಡುತ್ತಾರೆ?

6 ಈ ಲೋಕದ ಜನರಿಗೆ ಯಾರನ್ನು ಪ್ರೀತಿಸಬೇಕು, ಯಾವುದನ್ನು ಪ್ರೀತಿಸಬೇಕು ಅನ್ನುವ ವಿಷಯದಲ್ಲಿ ತಪ್ಪಾದ ದೃಷ್ಟಿಕೋನ ಇದೆ. ದೇವರನ್ನು ಪ್ರೀತಿಸುವ ಬದಲು ತಮ್ಮನ್ನೇ ಪ್ರೀತಿಸುತ್ತಾರೆ. (2 ತಿಮೊ. 3:2) ಅವರ ಎಲ್ಲಾ ಗಮನ “ಶರೀರದಾಶೆ, ಕಣ್ಣಿನಾಶೆ ಮತ್ತು ಜೀವನೈಶ್ವರ್ಯದ ಆಡಂಬರ ಪ್ರದರ್ಶನ” ಇವುಗಳ ಮೇಲೆ ಇದೆ. (1 ಯೋಹಾ. 2:16) ಆದರೆ ನಾವು ನಮ್ಮ ಆಸೆ-ಆಕಾಂಕ್ಷೆಗಳ ಮೇಲೆಯೇ ಮನಸ್ಸಿಟ್ಟರೆ ಏನಾಗುತ್ತದೆ ಎಂದು ಅಪೊಸ್ತಲ ಪೌಲನು ಎಚ್ಚರಿಸಿದನು. “ಶರೀರಭಾವಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ಮನಸ್ಸಿಡುವುದು ಮರಣದ ಅರ್ಥದಲ್ಲಿದೆ” ಎಂದು ಹೇಳಿದನು. ಯಾಕೆಂದರೆ ಹೀಗೆ ಮಾಡುವವರು ದೇವರ ವೈರಿಗಳಾಗುತ್ತಾರೆ. (ರೋಮ. 8:6, 7) ದುಡ್ಡು ಮಾಡುವುದರಲ್ಲಿ ಅಥವಾ ಲೈಂಗಿಕ ಆಸೆಗಳನ್ನು ಪೂರೈಸುವುದರಲ್ಲೇ ಇಡೀ ಜೀವನವನ್ನು ಕಳೆಯುವ ಜನರಿಗೆ ಕೊನೆಗೆ ಸಿಗುವುದು ಬರೀ ನಿರಾಶೆ ಅಷ್ಟೆ.—1 ಕೊರಿಂ. 6:18; 1 ತಿಮೊ. 6:9, 10.

7. ಇಂದು ಕ್ರೈಸ್ತರ ಮೇಲೆ ಯಾವ ಅಪಾಯಕಾರಿ ವಿಚಾರಗಳು ಪ್ರಭಾವ ಬೀರಬಹುದು?

7 ದೇವರೇ ಇಲ್ಲ ಅಂತ ಹೇಳುವ ನಾಸ್ತಿಕರು, ದೇವರ ಅಸ್ತಿತ್ವದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿಲ್ಲ ಎನ್ನುವ ಆಜ್ಞೇಯತಾವಾದಿಗಳು ಮತ್ತು ವಿಕಾಸವಾದವನ್ನು ನಂಬುವವರು ಬೇರೆಯವರಿಗೆ ದೇವರ ಮೇಲಿರುವ ಪ್ರೀತಿ, ನಂಬಿಕೆಯನ್ನು ಅಳಿಸಿಹಾಕಲು ಪ್ರಯತ್ನಿಸುತ್ತಾರೆ. ದಡ್ಡರು, ವಿದ್ಯಾಭ್ಯಾಸ ಇಲ್ಲದವರು ಮಾತ್ರ ಸೃಷ್ಟಿಕರ್ತನಿದ್ದಾನೆಂದು ನಂಬುತ್ತಾರೆ ಎನ್ನುವುದು ಅವರ ಅಭಿಪ್ರಾಯ. ಇನ್ನು ಎಷ್ಟೋ ಜನರು ತಮ್ಮನ್ನು ಸೃಷ್ಟಿಮಾಡಿದ ದೇವರಿಗಿಂತ ವಿಜ್ಞಾನಿಗಳಿಗೆ ಹೆಚ್ಚು ಮಾನ್ಯತೆ ಕೊಡುತ್ತಾರೆ. (ರೋಮ. 1:25) ಇಂಥ ವಿಚಾರಗಳು ಕ್ರೈಸ್ತರ ಮೇಲೂ ಪ್ರಭಾವ ಬೀರಬಹುದು. ಹೀಗಾದರೆ ಯೆಹೋವನೊಂದಿಗಿರುವ ನಮ್ಮ ಸಂಬಂಧ ದುರ್ಬಲವಾಗುತ್ತದೆ, ಪ್ರೀತಿಯೂ ತಣ್ಣಗಾಗಿ ಹೋಗುತ್ತದೆ.—ಇಬ್ರಿ. 3:12.

8. (ಎ) ಯೆಹೋವನ ಜನರಿಗೆ ಯಾವಾಗೆಲ್ಲ ನಿರುತ್ಸಾಹ ಆಗಬಹುದು? (ಬಿ) ಕೀರ್ತನೆ 136 ರಿಂದ ನಮಗೆ ಯಾವ ಸಾಂತ್ವನ ಸಿಗುತ್ತದೆ?

8 ನಾವು ಸೈತಾನನ ದುಷ್ಟ ಲೋಕದಲ್ಲಿ ಜೀವಿಸುತ್ತಿರುವುದರಿಂದ ನಿರುತ್ಸಾಹ ಆಗಲು ಅನೇಕ ಕಾರಣಗಳಿವೆ. (1 ಯೋಹಾ. 5:19) ಉದಾಹರಣೆಗೆ, ನಮಗೆ ವಯಸ್ಸಾಗುತ್ತಿರಬಹುದು, ಆರೋಗ್ಯ ಹಾಳಾಗಿರಬಹುದು, ಹಣಕಾಸಿನ ತೊಂದರೆ ಇರಬಹುದು. ಅಥವಾ ಒಂದು ವಿಷಯವನ್ನು ನಾವು ಬಯಸಿದಷ್ಟು ಒಳ್ಳೇದಾಗಿ ಮಾಡಲು ಆಗುತ್ತಿಲ್ಲ ಅಂತ ದುಃಖ ಆಗುತ್ತಿರಬಹುದು. ಜೀವನದಲ್ಲಿ ನಾವು ನೆನಸಿದಂತೆ ನಡೆಯದಿದ್ದಾಗ ನಮಗೆ ಬೇಸರ ಆಗಿರಬಹುದು. ಆದರೆ ನಾವು ತೀರ ನಿರುತ್ಸಾಹಗೊಂಡರೆ ನಮ್ಮ ನಂಬಿಕೆ ದುರ್ಬಲವಾಗಿ ದೇವರ ಮೇಲಿರುವ ಪ್ರೀತಿ ಕೂಡ ತಣ್ಣಗಾಗುವ ಸಾಧ್ಯತೆ ಇದೆ. ನಾವು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುತ್ತಿರಲಿ, ಯೆಹೋವನು ನಮ್ಮ ಕೈಬಿಟ್ಟಿದ್ದಾನೆ ಎಂದು ನೆನಸಬಾರದು. “ನಾವು ದೀನಾವಸ್ಥೆಯಲ್ಲಿದ್ದಾಗ ನಮ್ಮನ್ನು ನೆನಪು ಮಾಡಿಕೊಂಡನು; ಆತನ ಕೃಪೆಯು ಶಾಶ್ವತವಾದದ್ದು” ಎಂದು ಕೀರ್ತನೆ 136:23 ರಲ್ಲಿರುವ ಮಾತುಗಳನ್ನು ನೆನಪು ಮಾಡಿಕೊಳ್ಳಿ. ಇದರಿಂದ ನಮಗೆ ಸಾಂತ್ವನ ಸಿಗುತ್ತದೆ. ಯೆಹೋವನು “ನನ್ನ ಮೊರೆಯನ್ನು ಕೇಳುವವನು” ಎಂಬ ಭರವಸೆ ನಮಗಿರಬೇಕು. ಆತನು ಖಂಡಿತ ಸಹಾಯ ಮಾಡುತ್ತಾನೆ.—ಕೀರ್ತ. 116:1; 136:24-26.

9. ದೇವರ ಮೇಲಿರುವ ಪ್ರೀತಿ ತಣ್ಣಗಾಗದಂತೆ ನೋಡಿಕೊಳ್ಳಲು ಪೌಲನಿಗೆ ಯಾವುದು ಸಹಾಯ ಮಾಡಿತು?

9 ಅಪೊಸ್ತಲ ಪೌಲನು ದೇವರು ತನಗೆ ಹೇಗೆಲ್ಲಾ ಬೆಂಬಲ ನೀಡಿದನೆಂದು ಗಾಢವಾಗಿ ಯೋಚಿಸಿದನು. ಇದರಿಂದ ಅವನಿಗೆ ಬಲ ಸಿಕ್ಕಿತು. “ಯೆಹೋವನು ನನ್ನ ಸಹಾಯಕನು; ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಬಲ್ಲನು?” ಎಂದವನು ಹೇಳಿದನು. (ಇಬ್ರಿ. 13:6) ಪೌಲನು ಯೆಹೋವನಲ್ಲಿ ಪೂರ್ಣ ಭರವಸೆ ಇಟ್ಟಿದ್ದರಿಂದ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ನಿಭಾಯಿಸಲು ಅವನಿಗೆ ಸಾಧ್ಯವಾಯಿತು. ಹಾಗಾಗಿ ಕಷ್ಟದ ಸನ್ನಿವೇಶಗಳು ಬಂದರೂ ಅವನು ಕುಗ್ಗಿಹೋಗಲಿಲ್ಲ. ಸೆರೆಮನೆಯಲ್ಲಿದ್ದಾಗಲೂ ಸಭೆಗಳನ್ನು ಪ್ರೋತ್ಸಾಹಿಸಲು ಪತ್ರಗಳನ್ನು ಬರೆದನು. (ಎಫೆ. 4:1; ಫಿಲಿ. 1:7; ಫಿಲೆ. 1) ಅದೇನೇ ಸಮಸ್ಯೆ ಬಂದರೂ ಯೆಹೋವನ ಮೇಲಿರುವ ಪ್ರೀತಿ ತಣ್ಣಗಾಗುವಂತೆ ಅವನು ಬಿಡಲಿಲ್ಲ. ಯೆಹೋವನು ‘ಸಕಲ ಸಾಂತ್ವನದ ದೇವರು. ನಮ್ಮ ಎಲ್ಲ ಸಂಕಟಗಳಲ್ಲಿ ಆತನು ನಮ್ಮನ್ನು ಸಾಂತ್ವನಗೊಳಿಸುತ್ತಾನೆ’ ಎಂಬ ಭರವಸೆ ಅವನಿಗಿತ್ತು. (2 ಕೊರಿಂ. 1:3, 4) ನಾವು ಪೌಲನನ್ನು ಹೇಗೆ ಅನುಕರಿಸಬಹುದು?

ಯೆಹೋವನ ಮೇಲೆ ಪ್ರೀತಿ ಇದೆಯೆಂದು ತೋರಿಸಿ (ಪ್ಯಾರ 10 ನೋಡಿ)

10. ಯೆಹೋವನ ಮೇಲೆ ನಮಗಿರುವ ಪ್ರೀತಿ ಕಡಿಮೆಯಾಗದಂತೆ ನೋಡಿಕೊಳ್ಳಲು ಏನು ಮಾಡಬೇಕು?

10 ದೇವರ ಮೇಲಿರುವ ಪ್ರೀತಿ ಕಡಿಮೆಯಾಗದಂತೆ ನೋಡಿಕೊಳ್ಳಲು ನಾವು ಪೌಲನು ಹೇಳಿದಂತೆ “ಎಡೆಬಿಡದೆ ಪ್ರಾರ್ಥನೆ” ಮಾಡಬೇಕು. “ಪಟ್ಟುಹಿಡಿದು ಪ್ರಾರ್ಥಿಸಿರಿ” ಎಂದು ಸಹ ಅವನು ಪ್ರೋತ್ಸಾಹಿಸಿದ್ದಾನೆ. (1 ಥೆಸ. 5:17; ರೋಮ. 12:12) ಪ್ರಾರ್ಥನೆಯಿಂದ ನಾವು ದೇವರಿಗೆ ಹೇಗೆ ಹತ್ತಿರವಾಗುತ್ತೇವೆ? ನಾವು ಪ್ರಾರ್ಥಿಸುವಾಗ ದೇವರೊಂದಿಗೆ ಮಾತಾಡುತ್ತೇವೆ. ಇದರಿಂದ ನಮ್ಮ ಮತ್ತು ದೇವರ ಮಧ್ಯೆ ಒಳ್ಳೇ ಸಂಬಂಧ ಬೆಳೆಯುತ್ತದೆ. (ಕೀರ್ತ. 86:3) ನಾವು ನಮ್ಮ ಸ್ವರ್ಗೀಯ ತಂದೆಗೆ ನಮ್ಮ ಮನದಾಳದ ಅನಿಸಿಕೆಗಳನ್ನು ಹೇಳುವಾಗ, ಭಾವನೆಗಳನ್ನು ಹಂಚಿಕೊಳ್ಳುವಾಗ ಆತನಿಗೆ ಹತ್ತಿರವಾಗುತ್ತೇವೆ. (ಕೀರ್ತ. 65:2) ಆತನು ನಮ್ಮ ಪ್ರಾರ್ಥನೆಗಳಿಗೆ ಹೇಗೆ ಉತ್ತರ ಕೊಡುತ್ತಾನೆ ಎಂದು ನಾವು ಗಮನಿಸಬೇಕು. ಹೀಗೆ ಗಮನಿಸುವಾಗ ಆತನ ಮೇಲೆ ನಮಗಿರುವ ಪ್ರೀತಿ ಹೆಚ್ಚಾಗುತ್ತದೆ. “ಯೆಹೋವನಿಗೆ . . . ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ” ಎಂಬ ಭರವಸೆ ನಮ್ಮಲ್ಲಿ ಹೆಚ್ಚುತ್ತದೆ. (ಕೀರ್ತ. 145:18) ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ, ಬೆಂಬಲಿಸುತ್ತಾನೆ ಎಂಬ ಭರವಸೆ ನಮಗಿದ್ದರೆ ಈಗ ಇರುವ ಮತ್ತು ಭವಿಷ್ಯತ್ತಿನಲ್ಲಿ ಬರುವ ಯಾವುದೇ ಸಮಸ್ಯೆ ನಿಭಾಯಿಸಲು ಸಾಧ್ಯವಾಗುತ್ತದೆ.

ಬೈಬಲ್‌ ಸತ್ಯದ ಮೇಲೆ ಪ್ರೀತಿ

11, 12. ನಾವು ಬೈಬಲ್‌ ಸತ್ಯಕ್ಕಾಗಿರುವ ಪ್ರೀತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು?

11 ಕ್ರೈಸ್ತರಾಗಿರುವ ನಾವು ಸತ್ಯವನ್ನು ಪ್ರೀತಿಸುತ್ತೇವೆ. ಈ ಸತ್ಯ ದೇವರ ವಾಕ್ಯದಲ್ಲಿದೆ. ಯೇಸು ತನ್ನ ತಂದೆಗೆ “ನಿನ್ನ ವಾಕ್ಯವೇ ಸತ್ಯ” ಎಂದು ಹೇಳಿದನು. (ಯೋಹಾ. 17:17) ಬೈಬಲಿನಲ್ಲಿರುವ ಸತ್ಯವನ್ನು ನಾವು ಪ್ರೀತಿಸಬೇಕಾದರೆ, ಬೈಬಲಲ್ಲಿ ಏನಿದೆ ಎಂದು ತಿಳಿದುಕೊಳ್ಳಬೇಕು. (ಕೊಲೊ. 1:10) ಆದರೆ ಇಷ್ಟು ಮಾತ್ರ ಸಾಕಾಗಲ್ಲ. ನಾವು ಇನ್ನೂ ಏನು ಮಾಡಬೇಕೆಂದು ಅರ್ಥಮಾಡಿಕೊಳ್ಳಲು 119ನೇ ಕೀರ್ತನೆಯನ್ನು ಬರೆದ ವ್ಯಕ್ತಿ ಸಹಾಯ ಮಾಡುತ್ತಾನೆ. (ಕೀರ್ತನೆ 119:97-100 ಓದಿ.) ನಾವು ಬೈಬಲಿನಲ್ಲಿ ಏನು ಓದುತ್ತೇವೋ ಅದರ ಬಗ್ಗೆ ಧ್ಯಾನಿಸಲು ದಿನಾಲೂ ಸಮಯ ಮಾಡಿಕೊಳ್ಳಬೇಕು. ಬೈಬಲಿನಲ್ಲಿರುವ ಸತ್ಯವನ್ನು ನಮ್ಮ ಜೀವನದಲ್ಲಿ ಅನ್ವಯಿಸುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಧ್ಯಾನಿಸುವಾಗ, ಅದರ ಮೇಲಿರುವ ಪ್ರೀತಿ ಹೆಚ್ಚಾಗುತ್ತದೆ.

12 “ನಿನ್ನ ನುಡಿಗಳು ನನ್ನ ನಾಲಿಗೆಗೆ ಎಷ್ಟೋ ರುಚಿಯಾಗಿವೆ; ಅವು ನನ್ನ ಬಾಯಿಗೆ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ” ಎಂದೂ ಕೀರ್ತನೆಗಾರನು ಹೇಳಿದ್ದಾನೆ. (ಕೀರ್ತ. 119:103) ದೇವರ ಸಂಘಟನೆ ತಯಾರಿಸುವ ಬೈಬಲಾಧಾರಿತ ಸಾಹಿತ್ಯ ರುಚಿಕರ ಆಹಾರದಂತೆ ಇದೆ. ನಮಗೆ ಇಷ್ಟವಾದ ಆಹಾರ ಸಿಕ್ಕಿದಾಗ ನಾವು ಆರಾಮವಾಗಿ ಕೂತು ಒಂದೊಂದೇ ತುತ್ತನ್ನು ಸವಿಯುತ್ತಾ ಆನಂದಿಸುತ್ತೇವೆ. ನಾವು ಅಧ್ಯಯನ ಮಾಡುವಾಗಲೂ ಇದನ್ನೇ ಮಾಡಬೇಕು. ಆಗ ನಮಗೆ ಸತ್ಯದ ಮಾತುಗಳು ಮನಸ್ಸಿಗೆ ಒಪ್ಪುತ್ತವೆ, ಅದನ್ನು ಆನಂದಿಸುತ್ತೇವೆ. ಇದರಿಂದ ನಾವು ಓದಿದ್ದನ್ನು ನೆನಪಿಟ್ಟುಕೊಳ್ಳಲು ಮತ್ತು ಅದನ್ನು ಬಳಸಿ ಬೇರೆಯವರಿಗೆ ಸಹಾಯ ಮಾಡಲು ಆಗುತ್ತದೆ.—ಪ್ರಸಂ. 12:10.

13. (ಎ) ದೇವರ ಮಾತುಗಳನ್ನು ಪ್ರೀತಿಸಲು ಯೆರೆಮೀಯನಿಗೆ ಯಾವುದು ಸಹಾಯ ಮಾಡಿತು? (ಬಿ) ಅದು ಅವನ ಮೇಲೆ ಯಾವ ಪರಿಣಾಮ ಬೀರಿತು?

13 ಪ್ರವಾದಿ ಯೆರೆಮೀಯನಿಗೆ ದೇವರ ಮಾತುಗಳೆಂದರೆ ತುಂಬ ಪ್ರೀತಿ ಇತ್ತು. “ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ ಹೃದಯಾನಂದವೂ ಆದವು; ಸೇನಾಧೀಶ್ವರನಾದ ದೇವರೇ, ಯೆಹೋವನೇ, ನಾನು ನಿನ್ನ ಹೆಸರಿನವನಲ್ಲವೆ!” ಎಂದು ಅವನು ಹೇಳಿದನು. (ಯೆರೆ. 15:16) ದೇವರ ಅಮೂಲ್ಯವಾದ ಮಾತುಗಳ ಬಗ್ಗೆ ಯೆರೆಮೀಯ ಆಳವಾಗಿ ಯೋಚಿಸಿದ್ದರಿಂದ ಅವುಗಳ ಮೇಲೆ ಆ ಪ್ರೀತಿ ಬೆಳೆಯಿತು. ಇದರ ಪರಿಣಾಮ? ಯೆಹೋವನ ಪ್ರತಿನಿಧಿಯಾಗಿ ಆತನ ಸಂದೇಶವನ್ನು ಸಾರುವುದು ಒಂದು ಸುಯೋಗ ಎಂದು ಎಣಿಸಿದನು. ನಮಗೆ ಬೈಬಲ್‌ ಸತ್ಯದ ಮೇಲೆ ಪ್ರೀತಿ ಇದ್ದರೆ, ಯೆಹೋವನ ಸಾಕ್ಷಿಯಾಗಿರುವುದು ಮತ್ತು ಈ ಕಡೇ ದಿವಸಗಳಲ್ಲಿ ರಾಜ್ಯದ ಕುರಿತು ಸಾರುವುದು ಮಹಾ ಸುಯೋಗ ಎಂದು ಅರ್ಥಮಾಡಿಕೊಳ್ಳುತ್ತೇವೆ.

ಬೈಬಲ್‌ ಸತ್ಯದ ಮೇಲೆ ಪ್ರೀತಿ ಇದೆಯೆಂದು ತೋರಿಸಿ (ಪ್ಯಾರ 14 ನೋಡಿ)

14. ಬೈಬಲ್‌ ಸತ್ಯಕ್ಕಾಗಿರುವ ಪ್ರೀತಿಯನ್ನು ಹೆಚ್ಚಿಸಿಕೊಳ್ಳಲು ಇನ್ನೇನು ಮಾಡಬೇಕು?

14 ಬೈಬಲ್‌ ಸತ್ಯಕ್ಕಾಗಿರುವ ನಮ್ಮ ಪ್ರೀತಿ ಹೆಚ್ಚಾಗಲು ಇನ್ನು ಯಾವುದು ಸಹಾಯ ಮಾಡುತ್ತದೆ? ನಾವು ಸಭಾ ಕೂಟಗಳಿಗೆ ತಪ್ಪದೆ ಹೋಗಬೇಕು. ಕೂಟಗಳಲ್ಲಿ ನಮಗೆ ಯೆಹೋವನು ಕಲಿಸುತ್ತಿದ್ದಾನೆ. ನಾವು ಆತನಿಂದ ಕಲಿಯುವ ಒಂದು ಮುಖ್ಯ ವಿಧಾನ ಪ್ರತಿ ವಾರ ಕಾವಲಿನಬುರುಜು ಪತ್ರಿಕೆ ಬಳಸಿ ಮಾಡುವ ಬೈಬಲ್‌ ಅಧ್ಯಯನ. ನಾವು ಈ ಕೂಟದಿಂದ ಪೂರ್ಣ ಪ್ರಯೋಜನ ಪಡೆಯಬೇಕಾದರೆ ಮುಂಚಿತವಾಗಿಯೇ ತಯಾರಿ ಮಾಡಬೇಕು. ಉದಾಹರಣೆಗೆ, ಕೊಡಲಾಗಿರುವ ಪ್ರತಿಯೊಂದು ವಚನವನ್ನು ಬೈಬಲಿನಲ್ಲಿ ತೆಗೆದು ನೋಡಬಹುದು. ಕಾವಲಿನಬುರುಜು ಪತ್ರಿಕೆ ನಮ್ಮ ವೆಬ್‌ಸೈಟ್‌ನಲ್ಲಿ ಮತ್ತು JW ಲೈಬ್ರರಿ ಆ್ಯಪ್‌ನಲ್ಲಿ ಅನೇಕ ಭಾಷೆಗಳಲ್ಲಿ ಸಿಗುತ್ತದೆ. ಆದ್ದರಿಂದ ಇಂದು ಅನೇಕರು ಅದನ್ನು ನಮ್ಮ ವೆಬ್‌ಸೈಟ್‌ನಿಂದ ನೇರವಾಗಿ ಓದುತ್ತಾರೆ ಅಥವಾ ಡೌನ್‌ಲೋಡ್‌ ಮಾಡಿ ಓದುತ್ತಾರೆ. ಈ ರೀತಿಯ ಎಲೆಕ್ಟ್ರಾನಿಕ್‌ ವಿಧಾನಗಳನ್ನು ಬಳಸುವಾಗ ಕೊಡಲಾಗಿರುವ ವಚನಗಳನ್ನು ಸುಲಭವಾಗಿ ನೋಡಲಿಕ್ಕಾಗುತ್ತದೆ. ನಾವು ಯಾವುದೇ ವಿಧಾನವನ್ನು ಬಳಸುತ್ತಿರಲಿ, ವಚನಗಳನ್ನು ಗಮನಕೊಟ್ಟು ಓದಿ ಧ್ಯಾನಿಸುವಾಗ ಬೈಬಲ್‌ ಸತ್ಯಕ್ಕಾಗಿರುವ ಪ್ರೀತಿ ಹೆಚ್ಚಾಗುತ್ತದೆ.—ಕೀರ್ತನೆ 1:2 ಓದಿ.

ನಮ್ಮ ಸಹೋದರರ ಮೇಲೆ ಪ್ರೀತಿ

15, 16. (ಎ) ಯೋಹಾನ 13:34, 35​ಕ್ಕನುಸಾರ ಯೇಸು ಯಾವ ಆಜ್ಞೆಯನ್ನು ಕೊಟ್ಟನು? (ಬಿ) ದೇವರ ಮೇಲೆ ಮತ್ತು ಬೈಬಲಿನ ಮೇಲಿರುವ ಪ್ರೀತಿಗೂ ಸಹೋದರರನ್ನು ಪ್ರೀತಿಸುವುದಕ್ಕೂ ಯಾವ ಸಂಬಂಧವಿದೆ?

15 ಯೇಸು ಭೂಮಿಯ ಮೇಲಿದ್ದ ಕೊನೆಯ ರಾತ್ರಿಯಂದು ತನ್ನ ಶಿಷ್ಯರಿಗೆ, “ನಾನು ನಿಮಗೆ ಒಂದು ಹೊಸ ಆಜ್ಞೆಯನ್ನು ಕೊಡುತ್ತೇನೆ; ಅದೇನೆಂದರೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಿಮ್ಮ ಮಧ್ಯೆ ಪ್ರೀತಿಯಿರುವುದಾದರೆ ನೀವು ನನ್ನ ಶಿಷ್ಯರೆಂದು ಎಲ್ಲರೂ ತಿಳಿದುಕೊಳ್ಳುವರು” ಎಂದು ಹೇಳಿದನು.—ಯೋಹಾ. 13:34, 35.

16 ನಮ್ಮ ಸಹೋದರ ಸಹೋದರಿಯರನ್ನು ಪ್ರೀತಿಸುವುದಕ್ಕೂ ಯೆಹೋವನನ್ನು ಪ್ರೀತಿಸುವುದಕ್ಕೂ ಸಂಬಂಧವಿದೆ. ನಮಗೆ ದೇವರ ಮೇಲೆ ಪ್ರೀತಿ ಇಲ್ಲದಿದ್ದರೆ, ನಮ್ಮ ಸಹೋದರರನ್ನು ಪ್ರೀತಿಸಲು ಸಾಧ್ಯವಿಲ್ಲ. ನಮ್ಮ ಸಹೋದರರನ್ನು ಪ್ರೀತಿಸದೆ ಹೋದರೆ, ನಾವು ದೇವರನ್ನು ಪ್ರೀತಿಸಲು ಸಾಧ್ಯವಿಲ್ಲ. “ತಾನು ನೋಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ನೋಡಿರದ ದೇವರನ್ನು ಪ್ರೀತಿಸಲಾರನು” ಎಂದು ಅಪೊಸ್ತಲ ಯೋಹಾನನು ಬರೆದಿದ್ದಾನೆ. (1 ಯೋಹಾ. 4:20) ಯೆಹೋವನನ್ನು ಮತ್ತು ನಮ್ಮ ಸಹೋದರರನ್ನು ಪ್ರೀತಿಸುವುದಕ್ಕೂ ಬೈಬಲನ್ನು ಪ್ರೀತಿಸುವುದಕ್ಕೂ ಸಹ ಸಂಬಂಧವಿದೆ. ಹೇಗೆ? ನಾವು ಬೈಬಲಿನಲ್ಲಿರುವ ಸತ್ಯವನ್ನು ಪ್ರೀತಿಸುವುದಾದರೆ, ದೇವರನ್ನು ಮತ್ತು ನಮ್ಮ ಸಹೋದರರನ್ನು ಪ್ರೀತಿಸಬೇಕೆಂದು ಅದರಲ್ಲಿರುವ ಆಜ್ಞೆಗಳನ್ನು ಖಂಡಿತ ಪಾಲಿಸುತ್ತೇವೆ.—1 ಪೇತ್ರ 1:22; 1 ಯೋಹಾ. 4:21.

ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದೆಯೆಂದು ತೋರಿಸಿ (ಪ್ಯಾರ 17 ನೋಡಿ)

17. ನಾವು ಪ್ರೀತಿ ತೋರಿಸಬಹುದಾದ ಕೆಲವು ವಿಧಗಳನ್ನು ತಿಳಿಸಿ.

17 ಒಂದನೇ ಥೆಸಲೊನೀಕ 4:9, 10 ಓದಿ. ನಮ್ಮ ಸಭೆಯಲ್ಲಿರುವವರಿಗೆ ನಾವು ಯಾವ ಪ್ರಾಯೋಗಿಕ ವಿಧಗಳಲ್ಲಿ ಸಹಾಯ ಮಾಡಬಹುದು? ಒಬ್ಬ ವೃದ್ಧ ಸಹೋದರ ಅಥವಾ ಸಹೋದರಿಗೆ ಕೂಟಗಳಿಗೆ ಹೋಗಿ ಬರಲು ಸಹಾಯ ಬೇಕಾಗಿರಬಹುದು. ಒಬ್ಬ ವಿಧವೆಯ ಮನೆಯಲ್ಲಿ ಏನಾದರೂ ರಿಪೇರಿ ಕೆಲಸ ಮಾಡಲಿಕ್ಕಿರಬಹುದು. (ಯಾಕೋ. 1:27) ನಿರುತ್ಸಾಹಗೊಂಡಿರುವ, ಖಿನ್ನರಾಗಿರುವ ಅಥವಾ ಬೇರೆ ಸಮಸ್ಯೆಗಳನ್ನು ಎದುರಿಸುತ್ತಿರುವ ನಮ್ಮ ಸಹೋದರ ಸಹೋದರಿಯರಿಗೆ ನಮ್ಮ ಗಮನ, ಪ್ರೋತ್ಸಾಹ, ಸಾಂತ್ವನ ಬೇಕಿರುತ್ತದೆ. (ಜ್ಞಾನೋ. 12:25; ಕೊಲೊ. 4:11) ಆದ್ದರಿಂದ “ನಂಬಿಕೆಯಲ್ಲಿ ನಮ್ಮ ಸಂಬಂಧಿಕರಂತಿರುವ” ಇಂಥವರನ್ನು ಪ್ರೀತಿಸುತ್ತೇವೆ ಎಂದು ನಮ್ಮ ಮಾತು ಮತ್ತು ಕ್ರಿಯೆಯಿಂದ ತೋರಿಸಬೇಕು.—ಗಲಾ. 6:10.

18. ನಮ್ಮ ಸಹೋದರರೊಂದಿಗಿನ ಮನಸ್ತಾಪಗಳನ್ನು ಸರಿಪಡಿಸಿಕೊಳ್ಳಲು ಯಾವುದು ಸಹಾಯ ಮಾಡುತ್ತದೆ?

18 ಈ ದುಷ್ಟ ಲೋಕದ “ಕಡೇ ದಿವಸಗಳಲ್ಲಿ” ಅನೇಕರು ಸ್ವಾರ್ಥಿಗಳಾಗಿರುತ್ತಾರೆ, ಅತ್ಯಾಸೆಪಡುತ್ತಾರೆ ಎಂದು ಬೈಬಲ್‌ ಹೇಳುತ್ತದೆ. (2 ತಿಮೊ. 3:1, 2) ಆದರೆ ಕ್ರೈಸ್ತರಾಗಿರುವ ನಾವು ಯೆಹೋವನ ಮೇಲೆ, ಆತನ ವಾಕ್ಯದ ಮೇಲೆ ಮತ್ತು ನಮ್ಮ ಸಹೋದರ ಸಹೋದರಿಯರ ಮೇಲೆ ಪ್ರೀತಿ ಹೆಚ್ಚಿಸಲು ಪ್ರಯತ್ನಿಸಬೇಕು. ನಮ್ಮಲ್ಲಿರುವ ಅಪರಿಪೂರ್ಣತೆಯಿಂದಾಗಿ ಕೆಲವೊಮ್ಮೆ ಏನಾದರೂ ಮನಸ್ತಾಪ ಆಗಬಹುದು. ಆದರೆ ನಾವು ಒಬ್ಬರನ್ನೊಬ್ಬರು ಪ್ರೀತಿಸುವುದರಿಂದ ಸಾಧ್ಯವಾದಷ್ಟು ಬೇಗನೆ, ದಯೆಯಿಂದ ಆ ಮನಸ್ತಾಪಗಳನ್ನು ಸರಿಪಡಿಸಿಕೊಳ್ಳುತ್ತೇವೆ. (ಎಫೆ. 4:32; ಕೊಲೊ. 3:14) ನಮ್ಮಲ್ಲಿರುವ ಪ್ರೀತಿ ಯಾವತ್ತೂ ತಣ್ಣಗಾಗದಂತೆ ನೋಡಿಕೊಳ್ಳೋಣ. ಯೆಹೋವ, ಆತನ ವಾಕ್ಯ ಮತ್ತು ನಮ್ಮ ಸಹೋದರರನ್ನು ಹೃದಯದಾಳದಿಂದ ಹೆಚ್ಚೆಚ್ಚು ಪ್ರೀತಿಸುತ್ತಾ ಇರೋಣ!