ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ತಾಳ್ಮೆಯಿಂದ ಫಲವನ್ನು ಕೊಡುತ್ತಾ” ಇರುವವರನ್ನು ಯೆಹೋವನು ಪ್ರೀತಿಸುತ್ತಾನೆ

“ತಾಳ್ಮೆಯಿಂದ ಫಲವನ್ನು ಕೊಡುತ್ತಾ” ಇರುವವರನ್ನು ಯೆಹೋವನು ಪ್ರೀತಿಸುತ್ತಾನೆ

“ಕೆಲವರು . . . ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ; ಇವರೇ ಒಳ್ಳೆಯ ನೆಲದಲ್ಲಿ ಬಿದ್ದ ಬೀಜವಾಗಿದ್ದಾರೆ.”—ಲೂಕ 8:15.

ಗೀತೆಗಳು: 98, 101

1, 2. (ಎ) ಜನರು ಚೆನ್ನಾಗಿ ಪ್ರತಿಕ್ರಿಯಿಸದ ಸೇವಾಕ್ಷೇತ್ರದಲ್ಲಿ ಸಾರುವ ನಂಬಿಗಸ್ತ ಸಹೋದರ ಸಹೋದರಿಯರ ಮಾದರಿ ನಮ್ಮನ್ನು ಹೇಗೆ ಪ್ರೋತ್ಸಾಹಿಸುತ್ತದೆ? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ಯೇಸು ತನ್ನ “ಸ್ವಂತ ಪ್ರದೇಶದಲ್ಲಿ” ಸಾರುವುದರ ಬಗ್ಗೆ ಏನು ಹೇಳಿದನು? (ಪಾದಟಿಪ್ಪಣಿ ನೋಡಿ.)

ಸರ್ಜೋ ಮತ್ತು ಓಲಿಂಡ ಎಂಬ ದಂಪತಿ ಅಮೆರಿಕದಲ್ಲಿ ಪಯನೀಯರ್‌ ಸೇವೆ ಮಾಡುತ್ತಿದ್ದಾರೆ. ಅವರಿಗೆ 80 ವಯಸ್ಸು ದಾಟಿದೆ. ಅವರಿಗೆ ಕಾಲು ನೋವು ಇರುವುದರಿಂದ ನಡೆಯುವುದಕ್ಕೆ ತುಂಬ ಕಷ್ಟ. ಆದರೂ ಅವರಿರುವ ಪಟ್ಟಣದ ಬಸ್‌ ನಿಲ್ದಾಣಕ್ಕೆ ಬೆಳಗ್ಗೆ 7 ಗಂಟೆಗೆ ನಡಕೊಂಡು ಬರುತ್ತಾರೆ. ಬಸ್‌ ನಿಲ್ದಾಣದ ಹತ್ತಿರ ಹೋಗುತ್ತಾ ಬರುತ್ತಾ ಇರುವವರಿಗೆ ನಮ್ಮ ಪ್ರಕಾಶನಗಳನ್ನು ಕೊಡುತ್ತಾರೆ. ಇದನ್ನು ಸುಮಾರು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಅನೇಕ ಜನರು ಅವರನ್ನು ನೋಡಿಯೂ ನೋಡದ ಹಾಗೆ ಹೋಗುತ್ತಾರೆ. ಆದರೂ ಈ ದಂಪತಿ ತಮ್ಮನ್ನು ನೋಡುವವರಿಗೆ ಮುಗುಳ್ನಗೆ ಬೀರುತ್ತಾ ಅಲ್ಲೇ ಇರುತ್ತಾರೆ. ಮಧ್ಯಾಹ್ನ ಆಗುತ್ತಿದ್ದ ಹಾಗೆ ನಿಧಾನವಾಗಿ ನಡೆದು ಮನೆಗೆ ಹೋಗುತ್ತಾರೆ. ಮರುದಿನ ಬೆಳಗ್ಗೆ 7 ಗಂಟೆಗೆ ಪುನಃ ಬಸ್‌ ನಿಲ್ದಾಣಕ್ಕೆ ಬರುತ್ತಾರೆ. ಹೀಗೆ ವಾರದಲ್ಲಿ ಆರು ದಿನ ಸಾಕ್ಷಿ ನೀಡುತ್ತಾರೆ.

2 ಈ ದಂಪತಿಯಂತೆ ಎಷ್ಟೋ ಸಹೋದರ ಸಹೋದರಿಯರು ತುಂಬ ವರ್ಷಗಳಿಂದ ತಮ್ಮತಮ್ಮ ಊರಲ್ಲಿ ಸುವಾರ್ತೆ ಸಾರುತ್ತಿದ್ದಾರೆ. ಜನರು ಕಿವಿಗೊಡದಿದ್ದರೂ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ. ಬಹುಶಃ ನೀವೂ ಇಂಥ ಸೇವಾಕ್ಷೇತ್ರದಲ್ಲಿ ಸಾರುತ್ತಿರಬಹುದು. ಹೀಗಿದ್ದರೂ ನೀವು ತಾಳಿಕೊಳ್ಳುತ್ತಾ ಸಾರುವ ಕೆಲಸವನ್ನು ಎಡೆಬಿಡದೆ ಮಾಡುತ್ತಿರುವುದಕ್ಕಾಗಿ ನಾವು ನಿಮ್ಮನ್ನು ಶ್ಲಾಘಿಸುತ್ತೇವೆ. * ನಿಮ್ಮ ಮಾದರಿ ತುಂಬ ವರ್ಷಗಳಿಂದ ಸೇವೆ ಮಾಡಿರುವ ಸಹೋದರ ಸಹೋದರಿಯರನ್ನು ಕೂಡ ಪ್ರೋತ್ಸಾಹಿಸುತ್ತದೆ. ಕೆಲವು ಸರ್ಕಿಟ್‌ ಮೇಲ್ವಿಚಾರಕರು ಹೀಗೆ ಹೇಳಿದ್ದಾರೆ: “ನಂಬಿಗಸ್ತ ಸಹೋದರ ಸಹೋದರಿಯರ ಜೊತೆ ಸೇವೆ ಮಾಡುವಾಗ ನನಗೆ ಅವರಿಂದ ಬಲ ಸಿಗುತ್ತದೆ.” “ಅವರ ನಂಬಿಗಸ್ತ ಸೇವೆಯನ್ನು ನೋಡಿ ನನಗೆ ನನ್ನ ಸೇವೆಯನ್ನು ಮುಂದುವರಿಸಲು, ಧೈರ್ಯದಿಂದ ಸಾರಲು ಪ್ರೋತ್ಸಾಹ ಸಿಕ್ಕಿದೆ.” “ಅವರ ಮಾದರಿ ನೋಡಿದರೆ ನನ್ನಲ್ಲಿ ಹೊಸ ಚೈತನ್ಯ ಮೂಡುತ್ತೆ.”

3. ಯಾವ ಮೂರು ಪ್ರಶ್ನೆಗಳ ಬಗ್ಗೆ ಚರ್ಚಿಸಲಿದ್ದೇವೆ? ಯಾಕೆ?

3 ಈ ಲೇಖನದಲ್ಲಿ ನಾವು ಮುಂದಿನ ಮೂರು ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ: ನಮಗೆ ಯಾಕೆ ಕೆಲವೊಮ್ಮೆ ನಿರುತ್ಸಾಹ ಆಗಬಹುದು? ಫಲ ಕೊಡುವುದು ಅಂದರೇನು? ತಾಳ್ಮೆಯಿಂದ ಫಲ ಕೊಡುತ್ತಾ ಇರಲು ನಮಗೆ ಯಾವುದು ಸಹಾಯ ಮಾಡುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಂಡರೆ ಯೇಸು ನಮಗೆ ಕೊಟ್ಟ ಸಾರುವ ಕೆಲಸವನ್ನು ಮಾಡುತ್ತಾ ಇರಲು ಪ್ರೋತ್ಸಾಹ ಸಿಗುತ್ತದೆ.

ನಮಗೆ ಯಾಕೆ ನಿರುತ್ಸಾಹ ಆಗಬಹುದು?

4. (ಎ) ಅನೇಕ ಯೆಹೂದ್ಯರು ಸುವಾರ್ತೆಯನ್ನು ಕೇಳದಿದ್ದಾಗ ಪೌಲನಿಗೆ ಹೇಗನಿಸಿತು? (ಬಿ) ಅವನಿಗೆ ಯಾಕೆ ಹಾಗನಿಸಿತು?

4 ನಿಮ್ಮ ಸೇವಾಕ್ಷೇತ್ರದಲ್ಲಿರುವ ಜನರಿಗೆ ದೇವರ ರಾಜ್ಯದ ಸಂದೇಶವನ್ನು ಕೇಳಿಸಿಕೊಳ್ಳುವ ಮನಸ್ಸಿಲ್ಲದೇ ಇರುವುದನ್ನು ನೋಡಿ ನಿಮಗೆ ನಿರುತ್ಸಾಹ ಆಗಿದೆಯಾ? ನಿರುತ್ಸಾಹ ಆಗಿದ್ದರೆ ಅಪೊಸ್ತಲ ಪೌಲನಿಗೆ ಹೇಗನಿಸಿತ್ತು ಎನ್ನುವುದನ್ನು ನೀವು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಅವನು 30 ವರ್ಷ ಸುವಾರ್ತೆ ಸಾರಿದನು. ಕ್ರೈಸ್ತರಾಗಲು ಅನೇಕರಿಗೆ ಸಹಾಯ ಮಾಡಿದನು. (ಅ. ಕಾ. 14:21; 2 ಕೊರಿಂ. 3:2, 3) ಆದರೆ ಯೆಹೂದ್ಯರಲ್ಲಿ ಕೆಲವರಿಗೆ ಮಾತ್ರ ಸಹಾಯ ಮಾಡಲು ಸಾಧ್ಯವಾಯಿತು. ಹೆಚ್ಚಿನ ಯೆಹೂದ್ಯರು ಸುವಾರ್ತೆಯನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಕೆಲವರಂತೂ ಅವನನ್ನು ಹಿಂಸಿಸಿದರು. (ಅ. ಕಾ. 14:19; 17:1, 4, 5, 13) ಜನರ ಇಂಥ ಪ್ರತಿಕ್ರಿಯೆಯಿಂದ ಅವನಿಗೆ ಹೇಗನಿಸಿತು? ಅವನು ಹೇಳಿದ್ದು: “ನನ್ನ ಹೃದಯದಲ್ಲಿ ಅತಿಯಾದ ದುಃಖವೂ ನಿರಂತರವಾದ ವೇದನೆಯೂ ಇದೆ.” (ರೋಮ. 9:1-3) ಅವನಿಗೆ ಯಾಕೆ ದುಃಖವಾಯಿತು? ಯಾಕೆಂದರೆ ಅವನಿಗೆ ಸಾರುವ ಕೆಲಸವೆಂದರೆ ತುಂಬ ಇಷ್ಟವಿತ್ತು, ಜನರ ಮೇಲೆಯೂ ತುಂಬ ಪ್ರೀತಿ ಇತ್ತು. ಅವನಿಗೆ ಯೆಹೂದ್ಯರ ಮೇಲೆ ಕಾಳಜಿ ಇತ್ತು. ಆದ್ದರಿಂದ ಅವರು ದೇವರ ಕರುಣೆಯನ್ನು ತಿರಸ್ಕರಿಸಿದಾಗ ಅವನಿಗೆ ದುಃಖವಾಯಿತು.

5. (ಎ) ಸಾರುವಂತೆ ನಮ್ಮನ್ನು ಯಾವುದು ಪ್ರೇರಿಸುತ್ತದೆ? (ಬಿ) ನಮಗೆ ಕೆಲವೊಮ್ಮೆ ನಿರುತ್ಸಾಹ ಆಗುವುದು ಸಹಜ ಯಾಕೆ?

5 ಪೌಲನಂತೆ ನಮಗೂ ಜನರ ಮೇಲೆ ಕಾಳಜಿ ಇರುವುದರಿಂದ ಮತ್ತು ಸಹಾಯ ಮಾಡಲು ಮನಸ್ಸಿರುವುದರಿಂದ ನಾವು ಅವರಿಗೆ ಸಾರುತ್ತೇವೆ. (ಮತ್ತಾ. 22:39; 1 ಕೊರಿಂ. 11:1) ಯೆಹೋವನನ್ನು ಆರಾಧಿಸಲು ನಿರ್ಣಯಿಸುವವರಿಗೆ ತುಂಬ ಆಶೀರ್ವಾದಗಳು ಸಿಗುತ್ತವೆ ಎಂದು ನಾವು ನಮ್ಮ ಸ್ವಂತ ಅನುಭವದಿಂದ ತಿಳಿದುಕೊಂಡಿದ್ದೇವೆ. ಇಂಥ ಆಶೀರ್ವಾದಗಳನ್ನು ಬೇರೆ ಜನರೂ ಪಡಕೊಳ್ಳಬೇಕೆಂದು ಬಯಸುತ್ತೇವೆ. ಆದ್ದರಿಂದ ಯೆಹೋವನ ಬಗ್ಗೆ ಮತ್ತು ಮಾನವಕುಲಕ್ಕಾಗಿ ಆತನಿಗಿರುವ ಉದ್ದೇಶದ ಬಗ್ಗೆ ಸತ್ಯವನ್ನು ಕಲಿಯುವಂತೆ ನಾವು ಅವರನ್ನು ಪ್ರೋತ್ಸಾಹಿಸುತ್ತೇವೆ. ಇದು ಹೇಗಿದೆಯೆಂದರೆ, ನಾವು ಒಂದು ಸುಂದರವಾದ ಉಡುಗೊರೆಯನ್ನು ತೆಗೆದುಕೊಂಡು ಜನರ ಹತ್ತಿರ ಹೋಗಿ ‘ದಯವಿಟ್ಟು ಇದನ್ನು ತೆಗೆದುಕೊಳ್ಳಿ’ ಎಂದು ಬೇಡಿಕೊಳ್ಳುವಂತೆ ಇದೆ. ಆದರೆ ಜನರು ಆ ಉಡುಗೊರೆಯನ್ನು ಬೇಡವೆಂದಾಗ ಪೌಲನಂತೆ ನಮಗೂ “ಹೃದಯದಲ್ಲಿ ಅತಿಯಾದ ದುಃಖ” ಆಗುವುದು ಸಹಜ. ಇದು ನಮ್ಮ ನಂಬಿಕೆಯ ಕೊರತೆಯನ್ನು ಸೂಚಿಸುವುದಿಲ್ಲ, ಬದಲಿಗೆ ಜನರ ಮೇಲೆ ನಮಗಿರುವ ಪ್ರೀತಿಯನ್ನು ಸೂಚಿಸುತ್ತದೆ. ಆದ್ದರಿಂದ ನಮಗೆ ಕೆಲವೊಮ್ಮೆ ನಿರುತ್ಸಾಹವಾದರೂ ಸಾರುವುದನ್ನು ಮುಂದುವರಿಸುತ್ತೇವೆ. 25 ವರ್ಷಗಳಿಂದ ಪಯನೀಯರ್‌ ಸೇವೆ ಮಾಡುತ್ತಿರುವ ಎಲೇನಾ ಹೇಳುವ ಮಾತನ್ನು ನೀವೂ ಒಪ್ಪಿಕೊಳ್ಳುತ್ತೀರಿ. ಅವರು ಹೇಳುವುದು: “ಸುವಾರ್ತೆ ಸಾರಲು ನನಗೆ ಕಷ್ಟವಾಗುತ್ತದೆ, ಆದರೆ ಇದನ್ನು ಬಿಟ್ಟು ಬೇರೆ ಯಾವ ಕೆಲಸ ಮಾಡಲೂ ಇಷ್ಟ ಇಲ್ಲ.”

ಫಲ ಕೊಡುವುದು ಅಂದರೇನು?

6. ನಾವು ಯಾವ ಪ್ರಶ್ನೆಗೆ ಉತ್ತರ ತಿಳಿಯಲಿದ್ದೇವೆ?

6 ನಾವು ಎಂಥ ಕ್ಷೇತ್ರದಲ್ಲಿ ಸಾರಿದರೂ ಫಲ ಕೊಡಲು ಸಾಧ್ಯ ಎಂದು ಹೇಗೆ ಹೇಳಬಹುದು? ಪ್ರಾಮುಖ್ಯವಾದ ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಲಿಕ್ಕಾಗಿ ನಾವು ‘ಫಲ ಕೊಡುವವರಾಗಿ’ ಇರಬೇಕು ಎಂದು ಒತ್ತಿಹೇಳುವ ಯೇಸುವಿನ ಎರಡು ದೃಷ್ಟಾಂತಗಳ ಬಗ್ಗೆ ಚರ್ಚಿಸೋಣ. (ಮತ್ತಾ. 13:23) ಮೊದಲನೇ ದೃಷ್ಟಾಂತ ದ್ರಾಕ್ಷಿಯ ಬಳ್ಳಿ.

7. (ಎ) ಈ ದೃಷ್ಟಾಂತದಲ್ಲಿ “ವ್ಯವಸಾಯಗಾರ,” “ದ್ರಾಕ್ಷಿಯ ಬಳ್ಳಿ” ಮತ್ತು “ಕೊಂಬೆಗಳು” ಯಾರನ್ನು ಸೂಚಿಸುತ್ತವೆ? (ಬಿ) ನಾವಿನ್ನೂ ಯಾವ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಬೇಕಿದೆ?

7 ಯೋಹಾನ 15:1-5, 8 ಓದಿ. ಈ ದೃಷ್ಟಾಂತದಲ್ಲಿ ಯೆಹೋವನೇ “ವ್ಯವಸಾಯಗಾರ,” ಯೇಸುವೇ “ದ್ರಾಕ್ಷಿಯ ಬಳ್ಳಿ” ಮತ್ತು ತನ್ನ ಶಿಷ್ಯರೇ “ಕೊಂಬೆಗಳು” ಎಂದು ಯೇಸು ವಿವರಿಸಿದನು. * ನಂತರ ಆತನು ಶಿಷ್ಯರಿಗೆ ಹೀಗೆ ಹೇಳಿದನು: “ನೀವು ಬಹಳ ಫಲವನ್ನು ಕೊಡುತ್ತಾ ನನ್ನ ಶಿಷ್ಯರೆಂಬುದನ್ನು ರುಜುಪಡಿಸುತ್ತಾ ಇರುವಲ್ಲಿ, ನನ್ನ ತಂದೆಯು ಮಹಿಮೆಗೊಳಿಸಲ್ಪಡುತ್ತಾನೆ.” ಹಾಗಾದರೆ ಫಲ ಕೊಡುವುದು ಎನ್ನುವುದರ ಅರ್ಥವೇನು? ಯೇಸು ಈ ದೃಷ್ಟಾಂತದಲ್ಲಿ ಫಲ ಯಾವುದು ಎಂದು ನಿರ್ದಿಷ್ಟವಾಗಿ ಹೇಳಲಿಲ್ಲ. ಆದರೆ ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಲು ಒಂದು ಸುಳಿವು ಕೊಟ್ಟಿದ್ದಾನೆ.

8. (ಎ) ಯೇಸುವಿನ ದೃಷ್ಟಾಂತದಲ್ಲಿರುವಂತೆ ‘ಫಲ ಕೊಡುವುದರ’ ಅರ್ಥ ಶಿಷ್ಯರನ್ನಾಗಿ ಮಾಡುವುದಲ್ಲ ಎಂದು ಹೇಗೆ ಹೇಳಬಹುದು? (ಬಿ) ಯೆಹೋವನು ನಮ್ಮಿಂದ ಆಗದೇ ಇರುವುದನ್ನು ಕೇಳುತ್ತಾನಾ?

8 “ನನ್ನಲ್ಲಿದ್ದುಕೊಂಡು ಫಲವನ್ನು ಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ” ಎಂದು ಯೇಸು ತನ್ನ ತಂದೆಯ ಬಗ್ಗೆ ಹೇಳಿದನು. ಇದರರ್ಥ ನಾವು ಫಲ ಕೊಟ್ಟರೆ ಮಾತ್ರ ಯೆಹೋವನ ಸೇವಕರಾಗಿರಲು ಸಾಧ್ಯ. (ಮತ್ತಾ. 13:23; 21:43) ಹಾಗಾದರೆ ಈ ದೃಷ್ಟಾಂತದಲ್ಲಿ, ಫಲ ಕೊಡುವುದು ಅಂದರೆ ಶಿಷ್ಯರನ್ನಾಗಿ ಮಾಡುವುದು ಆಗಿರಲು ಸಾಧ್ಯವಿಲ್ಲ. (ಮತ್ತಾ. 28:19) ಒಂದುವೇಳೆ ಹಾಗಿರುತ್ತಿದ್ದರೆ, ಒಬ್ಬ ವ್ಯಕ್ತಿಯನ್ನೂ ಯೇಸುವಿನ ಶಿಷ್ಯನಾಗಿ ಮಾಡಲು ಸಾಧ್ಯವಾಗಿಲ್ಲದ ನಂಬಿಗಸ್ತ ಸಾಕ್ಷಿಗಳು ಫಲ ಕೊಡದಿರುವ ಕೊಂಬೆಗಳು ಆಗುತ್ತಾರೆ. ಆದರೆ ಇದು ಸತ್ಯ ಅಲ್ಲ. ಯಾಕೆಂದರೆ ನಾವು ಯಾರನ್ನೂ ಒತ್ತಾಯದಿಂದ ಯೇಸುವಿನ ಶಿಷ್ಯರಾಗಿ ಮಾಡಕ್ಕಾಗಲ್ಲ. ಯೆಹೋವನು ತುಂಬ ಪ್ರೀತಿ ಇರುವ ದೇವರು. ಆತನು ಯಾವತ್ತೂ ನಮ್ಮಿಂದ ಆಗದಿರುವ ಕೆಲಸವನ್ನು ಮಾಡಲು ಹೇಳುವುದಿಲ್ಲ. ನಮ್ಮಿಂದ ಸಾಧ್ಯವಿರುವುದನ್ನು ಮಾತ್ರವೇ ಕೇಳುತ್ತಾನೆ.—ಧರ್ಮೋ. 30:11-14.

9. (ಎ) ಫಲ ಕೊಡುವುದು ಅಂದರೇನು? (ಬಿ) ನಾವೀಗ ಯಾವ ದೃಷ್ಟಾಂತದ ಬಗ್ಗೆ ಚರ್ಚಿಸಲಿದ್ದೇವೆ?

9 ಹಾಗಾದರೆ ಫಲ ಕೊಡುವುದು ಅಂದರೇನು? ಇದು ನಮ್ಮೆಲ್ಲರಿಗೂ ಸಾಧ್ಯವಾಗುವ ಒಂದು ವಿಷಯ. ಯೆಹೋವನು ತನ್ನ ಎಲ್ಲ ಸೇವಕರಿಗೆ ಯಾವ ಕೆಲಸ ಕೊಟ್ಟಿದ್ದಾನೆ? ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಕೆಲಸ ಕೊಟ್ಟಿದ್ದಾನೆ. * (ಮತ್ತಾ. 24:14) ಫಲ ಕೊಡುವುದು ಅಂದರೆ ಸಾರುವುದು ಎನ್ನುವುದನ್ನು ಯೇಸುವಿನ ಇನ್ನೊಂದು ದೃಷ್ಟಾಂತ ಸ್ಪಷ್ಟಪಡಿಸುತ್ತದೆ. ಅದು ಬೀಜ ಬಿತ್ತುವವನ ದೃಷ್ಟಾಂತ. ಅದರ ಬಗ್ಗೆ ಈಗ ಚರ್ಚಿಸೋಣ.

10. (ಎ) ಯೇಸುವಿನ ದೃಷ್ಟಾಂತದಲ್ಲಿ ಬೀಜ ಮತ್ತು ನೆಲ ಅಂದರೇನು? (ಬಿ) ಒಂದು ಗೋದಿ ಗಿಡ ಕೊಡುವ ಫಲವೇನು?

10 ಲೂಕ 8:5-8, 11-15 ಓದಿ. ಯೇಸು ಬೀಜ ಬಿತ್ತುವವನ ದೃಷ್ಟಾಂತದಲ್ಲಿ ಬೀಜವು “ದೇವರ ವಾಕ್ಯ” ಅಥವಾ ದೇವರ ರಾಜ್ಯದ ಸಂದೇಶವಾಗಿದೆ ಎಂದು ವಿವರಿಸಿದನು. ನೆಲ ಒಬ್ಬ ವ್ಯಕ್ತಿಯ ಹೃದಯ. ಒಳ್ಳೇ ನೆಲದಲ್ಲಿ ಬಿದ್ದ ಬೀಜ ಬೇರುಬಿಟ್ಟು, ಮೊಳಕೆಯೊಡೆದು ಗಿಡವಾಗಿ ಬೆಳೆಯುತ್ತದೆ. ಆಮೇಲೆ, ಆ ಗಿಡ ‘ನೂರರಷ್ಟು ಫಲ ಕೊಡುತ್ತದೆ.’ ಇದು ಒಂದು ಗೋದಿಯ ಗಿಡ ಎಂದಿಟ್ಟುಕೊಳ್ಳಿ. ಅದು ಯಾವ ಫಲ ಕೊಡುತ್ತದೆ? ಚಿಕ್ಕಚಿಕ್ಕ ಗೋದಿ ಗಿಡಗಳನ್ನು ಕೊಡುತ್ತದಾ? ಇಲ್ಲ, ಬೀಜಗಳನ್ನು ಕೊಡುತ್ತದೆ. ಈ ಬೀಜಗಳು ಮುಂದೆ ಗೋದಿ ಗಿಡಗಳಾಗುತ್ತವೆ. ಈ ದೃಷ್ಟಾಂತದಲ್ಲಿ ಒಂದು ಬೀಜ 100 ಬೀಜಗಳನ್ನು ಫಲವಾಗಿ ಕೊಡುತ್ತದೆ. ಇದು ನಮ್ಮ ಸಾರುವ ಕೆಲಸಕ್ಕೆ ಹೇಗೆ ಅನ್ವಯವಾಗುತ್ತದೆ?

ನಾವು ಹೇಗೆ “ತಾಳ್ಮೆಯಿಂದ ಫಲ ಕೊಡುತ್ತಾ” ಇರಬಹುದು? (ಪ್ಯಾರ 11 ನೋಡಿ)

11. (ಎ) ಬೀಜ ಬಿತ್ತುವವನ ದೃಷ್ಟಾಂತವನ್ನು ನಮ್ಮ ಸೇವೆಗೆ ಹೇಗೆ ಹೋಲಿಸಬಹುದು? (ಬಿ) ನಾವು ಹೊಸ ಬೀಜಗಳನ್ನು ಫಲವಾಗಿ ಕೊಡುತ್ತೇವೆ ಹೇಗೆ?

11 ದೇವರ ರಾಜ್ಯದ ಬಗ್ಗೆ ನಮ್ಮ ಹೆತ್ತವರು ಅಥವಾ ಬೇರೆ ಸಾಕ್ಷಿಗಳು ನಮಗೆ ಮೊದಲ ಸಲ ಹೇಳಿದಾಗ ಅವರು ಒಳ್ಳೇ ನೆಲದಲ್ಲಿ ಬೀಜ ಬಿತ್ತಿದಂತೆ ಇತ್ತು. ಅವರು ಹೇಳಿದ ವಿಷಯವನ್ನು ನಾವು ಸ್ವೀಕರಿಸಿದಾಗ ಅವರಿಗೆ ತುಂಬ ಸಂತೋಷವಾಯಿತು. ನಮ್ಮಲ್ಲಿ ಬಿತ್ತಲಾದ ಬೀಜ ಗಿಡವಾಗಿ ಫಲ ಕೊಡುವಷ್ಟರ ಮಟ್ಟಿಗೆ ಬೆಳೆಯಿತು. ಹಿಂದಿನ ಪ್ಯಾರದಲ್ಲಿ ನೋಡಿದಂತೆ ಒಂದು ಗೋದಿ ಗಿಡ ಹೊಸ ಗಿಡಗಳನ್ನಲ್ಲ ಬೀಜಗಳನ್ನು ಕೊಡುವಂತೆಯೇ, ನಾವು ಹೊಸ ಶಿಷ್ಯರನ್ನಲ್ಲ ಹೊಸ ಬೀಜಗಳನ್ನು ಫಲವಾಗಿ ಕೊಡುತ್ತೇವೆ. * ಹೇಗೆ? ನಾವು ಬೇರೆಯವರಿಗೆ ದೇವರ ರಾಜ್ಯದ ಬಗ್ಗೆ ಹೇಳಿದಾಗೆಲ್ಲ ನಮ್ಮ ಹೃದಯದಲ್ಲಿ ಬಿತ್ತಲಾಗಿರುವ ಬೀಜವನ್ನು ಬಹುಪಟ್ಟು ಮಾಡಿ ಬೇರೆಯವರ ಹೃದಯದಲ್ಲಿ ಬಿತ್ತುತ್ತೇವೆ. (ಲೂಕ 6:45; 8:1) ನಾವು ಎಷ್ಟರ ತನಕ ದೇವರ ರಾಜ್ಯದ ಬಗ್ಗೆ ಸಾರುತ್ತಾ ಇರುತ್ತೇವೋ ಅಷ್ಟರ ತನಕ ‘ತಾಳ್ಮೆಯಿಂದ ಫಲ ಕೊಡುತ್ತಾ’ ಇರುತ್ತೇವೆ.

12. (ಎ) ದ್ರಾಕ್ಷಿಯ ಬಳ್ಳಿ ಮತ್ತು ಬೀಜ ಬಿತ್ತುವವನ ದೃಷ್ಟಾಂತಗಳಿಂದ ನಾವೇನು ಕಲಿತೆವು? (ಬಿ) ಈ ದೃಷ್ಟಾಂತಗಳಿಂದ ಕಲಿತ ಪಾಠಗಳು ನಿಮ್ಮ ಮೇಲೆ ಯಾವ ಪ್ರಭಾವ ಬೀರಿವೆ?

12 ದ್ರಾಕ್ಷಿಯ ಬಳ್ಳಿ ಮತ್ತು ಬೀಜ ಬಿತ್ತುವವನ ದೃಷ್ಟಾಂತಗಳಿಂದ ನಾವೇನು ಕಲಿತೆವು? ನಾವು ‘ಫಲ ಕೊಡುವುದು’ ಜನರು ನಮ್ಮ ಸಂದೇಶವನ್ನು ಕೇಳುವುದರ ಮೇಲೆ ಹೊಂದಿಕೊಂಡಿಲ್ಲ, ಬದಲಿಗೆ ನಾವು ಸಾರುತ್ತಾ ಇರುವುದರ ಮೇಲೆ ಹೊಂದಿಕೊಂಡಿದೆ ಎಂದು ಕಲಿತೆವು. ಇದೇ ತರದ ಒಂದು ವಿಷಯವನ್ನು ಪೌಲ ವಿವರಿಸಿದನು. ಅವನು ಹೇಳಿದ್ದು: “ಪ್ರತಿಯೊಬ್ಬನಿಗೆ ಅವನವನ ಸ್ವಂತ ಶ್ರಮಕ್ಕನುಸಾರ ಸ್ವಂತ ಪ್ರತಿಫಲ ದೊರೆಯುವುದು.” (1 ಕೊರಿಂ. 3:8) ಯೆಹೋವನು ನಾವು ಮಾಡುತ್ತಿರುವ ಕೆಲಸವನ್ನು ನೋಡಿ ನಮಗೆ ಪ್ರತಿಫಲ ಕೊಡುತ್ತಾನೆ, ನಮ್ಮ ಕೆಲಸದಿಂದ ಸಿಗುವ ಫಲಿತಾಂಶಗಳನ್ನು ನೋಡಿ ಅಲ್ಲ. 20 ವರ್ಷಗಳಿಂದ ಪಯನೀಯರ್‌ ಸೇವೆ ಮಾಡುತ್ತಿರುವ ಮಟಿಲ್ಡ ಹೀಗೆ ಹೇಳುತ್ತಾರೆ: “ಯೆಹೋವ ದೇವರು ನಾವು ಮಾಡುವ ಪ್ರಯತ್ನಗಳನ್ನು ನೋಡಿ ಪ್ರತಿಫಲ ಕೊಡುತ್ತಾನೆ ಅನ್ನೋ ವಿಷಯ ನನಗೆ ತುಂಬ ಸಂತೋಷ ಕೊಡುತ್ತದೆ.”

ನಾವು ಹೇಗೆ ತಾಳ್ಮೆಯಿಂದ ಫಲ ಕೊಡುತ್ತಾ ಇರಬಹುದು?

13, 14. ರೋಮನ್ನರಿಗೆ 10:1, 2​ರಲ್ಲಿ ತಾನು ಸಾರುತ್ತಾ ಇರುವುದಕ್ಕೆ ಪೌಲನು ಯಾವ ಕಾರಣಗಳನ್ನು ಕೊಟ್ಟಿದ್ದಾನೆ?

13 “ತಾಳ್ಮೆಯಿಂದ ಫಲವನ್ನು ಕೊಡುತ್ತಾ” ಇರಲು ನಮಗೆ ಯಾವುದು ಸಹಾಯ ಮಾಡುತ್ತದೆ? ಪೌಲನ ಉದಾಹರಣೆಯನ್ನು ಮತ್ತೊಮ್ಮೆ ಗಮನಿಸೋಣ. ಯೆಹೂದ್ಯರು ದೇವರ ರಾಜ್ಯದ ಸಂದೇಶವನ್ನು ಕೇಳದಿದ್ದಾಗ ಅವನಿಗೆ ನಿರುತ್ಸಾಹ ಆಯಿತು. ಆದರೆ ಅವರಿಗೆ ಸಾರುವುದನ್ನು ಅವನು ನಿಲ್ಲಿಸಲಿಲ್ಲ. ಆ ಯೆಹೂದ್ಯರ ಬಗ್ಗೆ ಅವನಿಗೆ ಯಾವ ಭಾವನೆಗಳಿದ್ದವು ಎಂದು ರೋಮನ್ನರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾನೆ. ಅವನು ಹೇಳಿದ್ದು: “ಅವರು ರಕ್ಷಣೆ ಹೊಂದಬೇಕೆಂಬುದೇ ನನ್ನ ಹೃದಯದ ಸದಿಚ್ಛೆಯೂ ದೇವರಿಗೆ ನಾನು ಮಾಡುವ ಯಾಚನೆಯೂ ಆಗಿದೆ. ಅವರಿಗೆ ದೇವರ ವಿಷಯದಲ್ಲಿ ಹುರುಪಿದೆ ಎಂದು ನಾನು ಸಾಕ್ಷಿನೀಡುತ್ತೇನೆ; ಆದರೆ ಅವರ ಹುರುಪು ನಿಷ್ಕೃಷ್ಟ ಜ್ಞಾನಕ್ಕನುಸಾರವಾದುದಲ್ಲ.” (ರೋಮ. 10:1, 2) ಪೌಲನು ಯೆಹೂದ್ಯರಿಗೆ ಯಾಕೆ ಸಾರುತ್ತಾ ಇದ್ದನು?

14 ಮೊದಲನೇ ಕಾರಣ, “ನನ್ನ ಹೃದಯದ ಸದಿಚ್ಛೆ” ಅಂದರೆ ಒಳ್ಳೇ ಉದ್ದೇಶದಿಂದಲೇ ಯೆಹೂದ್ಯರಿಗೆ ಸಾರಿದೆ ಎಂದು ಹೇಳಿದನು. ಅವರು ರಕ್ಷಣೆ ಪಡೆಯಬೇಕು ಎಂದು ಅವನು ಬಯಸಿದನು. (ರೋಮ. 11:13, 14) ಎರಡನೇ ಕಾರಣ, “ದೇವರಿಗೆ ನಾನು ಮಾಡುವ ಯಾಚನೆ” ಅಂದನು. ದೇವರ ರಾಜ್ಯದ ಸಂದೇಶವನ್ನು ಸ್ವೀಕರಿಸಲು ಪ್ರತಿಯೊಬ್ಬ ಯೆಹೂದ್ಯನಿಗೂ ಸಹಾಯ ಮಾಡು ಎಂದು ಅವನು ದೇವರನ್ನು ಬೇಡಿಕೊಂಡನು. ಮೂರನೇ ಕಾರಣ, “ಅವರಿಗೆ ದೇವರ ವಿಷಯದಲ್ಲಿ ಹುರುಪಿದೆ” ಎಂದು ಹೇಳಿದನು. ಅವನು ಜನರಲ್ಲಿರುವ ಒಳ್ಳೇದನ್ನು ನೋಡಿದನು ಮತ್ತು ಅವರು ಮುಂದೆ ಯೆಹೋವನ ಆರಾಧಕರಾಗುವ ಸಾಧ್ಯತೆ ಇದೆ ಎಂದು ಅರ್ಥಮಾಡಿಕೊಂಡನು. ಆ ಹುರುಪಿನ ಯೆಹೂದ್ಯರು ತನ್ನ ಹಾಗೆ ಮುಂದೆ ಯೇಸುವಿನ ಹುರುಪಿನ ಶಿಷ್ಯರಾಗಬಹುದು ಎಂದು ಅವನಿಗೆ ಗೊತ್ತಿತ್ತು.

15. ನಾವು ಪೌಲನನ್ನು ಹೇಗೆ ಅನುಕರಿಸಬಹುದು? ಉದಾಹರಣೆಗಳನ್ನು ಕೊಡಿ.

15 ನಾವು ಪೌಲನನ್ನು ಹೇಗೆ ಅನುಕರಿಸಬಹುದು? ಮೊದಲನೇದಾಗಿ, “ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ” ಇರುವ ಜನರನ್ನು ಹುಡುಕುವ ಆಸೆಯನ್ನು ನಾವು ಬೆಳೆಸಿಕೊಳ್ಳಬೇಕು. ಎರಡನೇದಾಗಿ, ನಾವು ಸಾರುವಾಗ ಒಳ್ಳೇ ಹೃದಯದ ಜನರು ಸುವಾರ್ತೆಗೆ ಕಿವಿಗೊಡಲಿ ಎಂದು ಯೆಹೋವನ ಹತ್ತಿರ ಬೇಡಿಕೊಳ್ಳಬೇಕು. (ಅ. ಕಾ. 13:48; 16:14) ಇದನ್ನೇ 30 ವರ್ಷಗಳಿಂದ ಪಯನೀಯರ್‌ ಸೇವೆ ಮಾಡುತ್ತಿರುವ ಸಿಲ್ವಾನ ಎಂಬ ಸಹೋದರಿ ಮಾಡುತ್ತಿದ್ದಾರೆ. ಅವರು ಹೇಳುವುದು: “ನನ್ನ ಸೇವಾಕ್ಷೇತ್ರದಲ್ಲಿ ಒಂದು ಮನೆ ಹತ್ತಿರ ಹೋಗೋ ಮುಂಚೆ ಯೆಹೋವನಿಗೆ ಪ್ರಾರ್ಥಿಸುತ್ತೇನೆ. ಸಕಾರಾತ್ಮಕ ಮನೋಭಾವ ಕೊಡಪ್ಪಾ ಎಂದು ಬೇಡಿಕೊಳ್ಳುತ್ತೇನೆ.” ಸುವಾರ್ತೆಯನ್ನು ಕೇಳುವ ಮನಸ್ಸಿರುವಂಥ ಜನರ ಹತ್ತಿರ ದೇವದೂತರು ನಮ್ಮನ್ನು ಕರೆದುಕೊಂಡು ಹೋಗಲಿ ಎಂದು ಸಹ ನಾವು ಪ್ರಾರ್ಥಿಸಬೇಕು. (ಮತ್ತಾ. 10:11-13; ಪ್ರಕ. 14:6) 30ಕ್ಕೂ ಹೆಚ್ಚು ವರ್ಷಗಳಿಂದ ಪಯನೀಯರ್‌ ಸೇವೆ ಮಾಡುತ್ತಿರುವ ರಾಬರ್ಟ್‌ ಹೀಗೆ ಹೇಳುತ್ತಾರೆ: “ಮನೆಯವರ ಜೀವನದಲ್ಲಿ ಏನು ನಡೆಯುತ್ತಿದೆ ಅಂತ ಗೊತ್ತಿರುವ ದೇವದೂತರ ಜೊತೆ ಸೇವೆ ಮಾಡುವುದನ್ನು ನೆನಸಿಕೊಂಡರೆ ಮೈಜುಂ ಎನ್ನುತ್ತದೆ.” ಮೂರನೇದಾಗಿ, ಜನರಲ್ಲಿರುವ ಒಳ್ಳೇದನ್ನು ನೋಡಬೇಕು ಮತ್ತು ಅವರು ಮುಂದೆ ಯೆಹೋವನ ಆರಾಧಕರಾಗುವ ಸಾಧ್ಯತೆ ಇದೆ ಎನ್ನುವುದನ್ನು ಮನಸ್ಸಲ್ಲಿಡಬೇಕು. 50 ವರ್ಷಗಳ ಹಿಂದೆ ದೀಕ್ಷಾಸ್ನಾನ ಪಡಕೊಂಡ ಕಾರ್ಲ್‌ ಎಂಬ ಹಿರಿಯರು ಹೇಳುವುದು: “ಒಬ್ಬ ವ್ಯಕ್ತಿಗೆ ನಾನು ಹೇಳುವುದನ್ನು ಕೇಳುವ ಮನಸ್ಸಿದೆ ಅಂತ ತಿಳಿದುಕೊಳ್ಳಲು ಒಂದು ಚಿಕ್ಕ ಸೂಚನೆ ಏನಾದರೂ ಸಿಗುತ್ತಾ ಅಂತ ನೋಡುತ್ತಾ ಇರುತ್ತೇನೆ. ಬಹುಶಃ ಅದು ಒಂದು ನಗು ಇರಬಹುದು, ದಯಾಭರಿತ ನೋಟ ಇರಬಹುದು ಅಥವಾ ಪ್ರಾಮಾಣಿಕವಾಗಿ ಕೇಳುವ ಪ್ರಶ್ನೆ ಇರಬಹುದು.” ಇದನ್ನೆಲ್ಲ ನಾವು ಮಾಡುವುದಾದರೆ ಪೌಲನಂತೆ ನಾವೂ “ತಾಳ್ಮೆಯಿಂದ ಫಲ ಕೊಡುತ್ತಾ” ಇರಬಹುದು.

“ಕೈದೆಗೆಯಬೇಡ”

16, 17. (ಎ) ನಾವು ಪ್ರಸಂಗಿ 11:6​ರಿಂದ ಏನು ಕಲಿಯುತ್ತೇವೆ? (ಬಿ) ನಮ್ಮನ್ನು ಗಮನಿಸುವ ಜನರ ಮೇಲೆ ನಮ್ಮ ಸಾರುವ ಕೆಲಸ ಯಾವ ಪ್ರಭಾವ ಬೀರುತ್ತದೆ?

16 ಜನರು ನಮ್ಮ ಸಂದೇಶವನ್ನು ಕೇಳುತ್ತಿಲ್ಲ ಎಂದು ನಮಗೆ ಅನಿಸಿದರೂ ನಾವು ಮಾಡುವ ಸಾರುವ ಕೆಲಸ ಜನರ ಮೇಲೆ ಖಂಡಿತ ಪ್ರಭಾವ ಬೀರುತ್ತದೆ ಎನ್ನುವುದನ್ನು ಮರೆಯಬಾರದು. (ಪ್ರಸಂಗಿ 11:6 ಓದಿ.) ಜನರು ನಮ್ಮನ್ನು ಗಮನಿಸುತ್ತಾ ಇರುತ್ತಾರೆ. ನಾವು ನೀಟಾಗಿ ಬಟ್ಟೆ ಧರಿಸಿರುವುದನ್ನು, ಸ್ನೇಹಭಾವದಿಂದ ಸೌಜನ್ಯದಿಂದ ಮಾತಾಡುವುದನ್ನು ಗಮನಿಸುತ್ತಾರೆ. ಇದು ಅವರ ಮೇಲೆ ಪ್ರಭಾವ ಬೀರಬಹುದು. ನಮ್ಮ ಬಗ್ಗೆ ಒಳ್ಳೇ ಅಭಿಪ್ರಾಯ ಇಲ್ಲದಿದ್ದ ಜನರು ಕೂಡ ಮುಂದೆ ತಮ್ಮ ಅಭಿಪ್ರಾಯ ಬದಲಾಯಿಸಿಕೊಳ್ಳಬಹುದು. ಸರ್ಜೋ ಮತ್ತು ಓಲಿಂಡ ದಂಪತಿಗೆ ಈ ಅನುಭವ ಆಯಿತು.

17 ಸರ್ಜೋ ಹೇಳುವುದು: “ನಮಗೆ ಹುಷಾರಿಲ್ಲದೆ ಇದ್ದಾಗ ಸ್ವಲ್ಪ ದಿನ ಬಸ್‌ ನಿಲ್ದಾಣದ ಹತ್ತಿರ ಸಾರಲು ಹೋಗಲಿಲ್ಲ. ಹುಷಾರಾದ ಮೇಲೆ ಹೋದಾಗ ಒಬ್ಬ ವ್ಯಕ್ತಿ ‘ಏನಾಯ್ತು? ನಿಮ್ಮನ್ನು ಸ್ವಲ್ಪ ದಿನ ನೋಡಿಲ್ವಲ್ಲಾ’ ಅಂತ ಹೇಳಿದ.” ಓಲಿಂಡ ಹೇಳುವುದು: “ಬಸ್‌ ಚಾಲಕರು ನಮಗೆ ಕೈಯಾಡಿಸಿದರು, ಕೆಲವು ಚಾಲಕರಂತೂ ‘ತುಂಬ ಒಳ್ಳೇ ಕೆಲಸ ಮಾಡುತ್ತಾ ಇದ್ದೀರಿ’ ಅಂತ ಕೂತಲ್ಲಿಂದಲೇ ಕೂಗಿ ಹೇಳಿದರು. ಪತ್ರಿಕೆಗಳನ್ನೂ ತೆಗೆದುಕೊಂಡರು.” ಒಬ್ಬ ವ್ಯಕ್ತಿ ಈ ದಂಪತಿಯ ಹತ್ತಿರ ಬಂದು ಹೂಗುಚ್ಛ ಕೊಟ್ಟು ಅವರು ಮಾಡುತ್ತಿರುವ ಕೆಲಸಕ್ಕೆ ಧನ್ಯವಾದ ಹೇಳಿದಾಗ ಅವರಿಗೆ ತುಂಬ ಆಶ್ಚರ್ಯ ಆಯಿತು.

18. ನೀವು “ತಾಳ್ಮೆಯಿಂದ ಫಲ ಕೊಡುತ್ತಾ” ಇರಲು ಯಾಕೆ ತೀರ್ಮಾನ ಮಾಡಿದ್ದೀರಿ?

18 ನೀವು ಎಷ್ಟರ ವರೆಗೆ ಸಾರುವ ಕೆಲಸದಿಂದ ‘ಕೈದೆಗೆಯದೆ’ ಇರುತ್ತೀರೋ ಅಷ್ಟರ ವರೆಗೆ “ಎಲ್ಲ ಜನಾಂಗಗಳಿಗೆ ಸಾಕ್ಷಿ” ನೀಡುವುದರಲ್ಲಿ ನಿಮಗೊಂದು ಪಾಲು ಇರುತ್ತದೆ. (ಮತ್ತಾ. 24:14) ಎಲ್ಲಕ್ಕಿಂತ ಮುಖ್ಯವಾಗಿ ನಿಮಗೆ ಎಲ್ಲಿಲ್ಲದ ಸಂತೋಷ ಇರುತ್ತದೆ. ಯಾಕೆಂದರೆ ನೀವು ಯೆಹೋವನ ಮನಸ್ಸನ್ನು ಸಂತೋಷಪಡಿಸುತ್ತೀರಿ. “ತಾಳ್ಮೆಯಿಂದ ಫಲ ಕೊಡುತ್ತಾ” ಇರುವವರನ್ನು ಆತನು ತುಂಬ ಪ್ರೀತಿಸುತ್ತಾನೆ!

^ ಪ್ಯಾರ. 2 ಯೇಸುವಿಗೆ ತನ್ನ “ಸ್ವಂತ ಪ್ರದೇಶದಲ್ಲಿ” ಸಾರಲು ಕಷ್ಟವಾಗಿತ್ತು ಎಂದು ಹೇಳಿದ್ದನು. ಇದನ್ನು ಆತನ ಸೇವೆ ಬಗ್ಗೆ ಇರುವ ನಾಲ್ಕು ಸುವಾರ್ತಾ ಪುಸ್ತಕಗಳಲ್ಲೂ ತಿಳಿಸಲಾಗಿದೆ.—ಮತ್ತಾ. 13:57; ಮಾರ್ಕ 6:4; ಲೂಕ 4:24; ಯೋಹಾ. 4:44.

^ ಪ್ಯಾರ. 7 ಈ ದೃಷ್ಟಾಂತದಲ್ಲಿರುವ ಕೊಂಬೆಗಳು ಸ್ವರ್ಗಕ್ಕೆ ಹೋಗಲಿರುವ ಕ್ರೈಸ್ತರನ್ನು ಸೂಚಿಸುತ್ತವೆ. ಆದರೂ ದೇವರ ಎಲ್ಲ ಸೇವಕರು ಈ ದೃಷ್ಟಾಂತದಿಂದ ಕೆಲವು ಪಾಠಗಳನ್ನು ಕಲಿಯಬಹುದು.

^ ಪ್ಯಾರ. 9 ‘ಫಲ ಕೊಡುವುದು’ ಎನ್ನುವುದು ‘ಪವಿತ್ರಾತ್ಮದಿಂದ ಉಂಟಾಗುವ ಫಲವನ್ನೂ’ ಸೂಚಿಸುತ್ತದೆ. ಆದರೆ ಈ ಲೇಖನ ಮತ್ತು ಮುಂದಿನ ಲೇಖನ “ತುಟಿಗಳ ಫಲ” ಅಂದರೆ ದೇವರ ರಾಜ್ಯದ ಬಗ್ಗೆ ಸಾರುವುದರ ಬಗ್ಗೆ ಚರ್ಚಿಸುತ್ತದೆ.—ಗಲಾ. 5:22, 23; ಇಬ್ರಿ. 13:15.

^ ಪ್ಯಾರ. 11 ಯೇಸು ಬೇರೆ ಕಡೆಗಳಲ್ಲಿ, ಬೀಜ ಬಿತ್ತುವುದನ್ನು ಮತ್ತು ಕೊಯ್ಯುವುದನ್ನು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ಹೋಲಿಸಿ ಮಾತಾಡಿದ್ದಾನೆ.—ಮತ್ತಾ. 9:37; ಯೋಹಾ. 4:35-38.