ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವಜನರೇ, ಪಿಶಾಚನ ವಿರುದ್ಧ ದೃಢವಾಗಿ ನಿಲ್ಲಿ

ಯುವಜನರೇ, ಪಿಶಾಚನ ವಿರುದ್ಧ ದೃಢವಾಗಿ ನಿಲ್ಲಿ

“ಪಿಶಾಚನ ತಂತ್ರೋಪಾಯಗಳ ವಿರುದ್ಧ ದೃಢರಾಗಿ ನಿಲ್ಲಲು ಶಕ್ತರಾಗುವಂತೆ ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಳ್ಳಿರಿ.” —ಎಫೆ. 6:11.

ಗೀತೆಗಳು: 139, 55

1, 2. (ಎ) ಇಂದು ಯುವಜನರು ಸೈತಾನನ ಮತ್ತು ದೆವ್ವಗಳ ವಿರುದ್ಧ ಹೋರಾಡಿ ಗೆಲ್ಲಲು ಹೇಗೆ ಸಾಧ್ಯವಾಗುತ್ತಿದೆ? (ಲೇಖನದ ಆರಂಭದ ಚಿತ್ರ ನೋಡಿ.) (ಬಿ) ನಾವು ಏನು ಚರ್ಚಿಸಲಿದ್ದೇವೆ?

ಅಪೊಸ್ತಲ ಪೌಲನು ಕ್ರೈಸ್ತರನ್ನು ಸೈನಿಕರಿಗೆ ಹೋಲಿಸಿದ್ದಾನೆ. ಸೈನಿಕರಂತೆ ನಾವು ಒಂದು ಯುದ್ಧದಲ್ಲಿ ಭಾಗಿಯಾಗಿದ್ದೇವೆ. ನಾವು ಹೋರಾಡುತ್ತಿರುವುದು ಮನುಷ್ಯರ ವಿರುದ್ಧವಲ್ಲ, ಸೈತಾನ ಮತ್ತು ದೆವ್ವಗಳ ವಿರುದ್ಧ. ಇವರು ಸಾವಿರಾರು ವರ್ಷಗಳಿಂದ ಈ ಯುದ್ಧದಲ್ಲಿ ಪಳಗಿರುವ ಸೈನಿಕರು. ಹಾಗಾದರೆ ನಾವು, ಅದರಲ್ಲೂ ಯುವಜನರು ಈ ಯುದ್ಧದಲ್ಲಿ ಸೋಲುವುದೇ ಹೆಚ್ಚು ಎಂದು ಅನಿಸಬಹುದು. ಆದರೂ ಯುವಜನರು ಇಷ್ಟು ಶಕ್ತಿಶಾಲಿಯಾದ ಸೈನ್ಯದ ವಿರುದ್ಧ ಹೋರಾಡಿ ಗೆಲ್ಲಲು ಸಾಧ್ಯನಾ? ಖಂಡಿತ ಸಾಧ್ಯ. ಇಂದು ಎಷ್ಟೋ ಯುವಜನರು ಗೆಲ್ಲುತ್ತಿದ್ದಾರೆ! ಹೇಗೆ? ಅವರಿಗೆ ಯೆಹೋವನಿಂದ ಬಲ ಸಿಗುತ್ತಿದೆ. ಅಷ್ಟೇ ಅಲ್ಲ, ಚೆನ್ನಾಗಿ ತರಬೇತಿ ಪಡೆದ ಸೈನಿಕರಂತೆ ಅವರು ‘ದೇವರು ದಯಪಾಲಿಸುವ ಸಂಪೂರ್ಣ ರಕ್ಷಾಕವಚವನ್ನು ಧರಿಸಿಕೊಂಡು’ ಯುದ್ಧಕ್ಕೆ ತಯಾರಾಗಿದ್ದಾರೆ.—ಎಫೆಸ 6:10-12 ಓದಿ.

2 ಪೌಲ ಈ ಉದಾಹರಣೆಯನ್ನು ಕೊಟ್ಟಾಗ ಅವನ ಮನಸ್ಸಲ್ಲಿ ರೋಮನ್‌ ಸೈನಿಕರು ಹಾಕುತ್ತಿದ್ದ ರಕ್ಷಾಕವಚ ಇದ್ದಿರಬೇಕು. (ಅ. ಕಾ. 28:16) ಇದು ತುಂಬ ಒಳ್ಳೇ ಉದಾಹರಣೆ. ಈ ಲೇಖನದಲ್ಲಿ ನಾವು ಈ ಉದಾಹರಣೆಯ ಬಗ್ಗೆ ಚರ್ಚಿಸಲಿದ್ದೇವೆ. ಆಧ್ಯಾತ್ಮಿಕ ರಕ್ಷಾಕವಚದ ಪ್ರತಿಯೊಂದು ಭಾಗವನ್ನು ಹಾಕಿಕೊಳ್ಳುವುದರಿಂದ ಕೆಲವು ಯುವಜನರು ಎದುರಿಸಿದ ಸವಾಲುಗಳೇನು ಮತ್ತು ಅವರಿಗೆ ಸಿಕ್ಕಿರುವ ಪ್ರಯೋಜನಗಳೇನು ಎಂದು ನೋಡಲಿದ್ದೇವೆ.

ರಕ್ಷಾಕವಚದ ಪ್ರತಿಯೊಂದು ಭಾಗವನ್ನೂ ಹಾಕಿಕೊಂಡಿದ್ದೀರಾ?

ಸತ್ಯವೆಂಬ ಸೊಂಟಪಟ್ಟಿ

3, 4. ಬೈಬಲಿನಲ್ಲಿರುವ ಸತ್ಯ ಹೇಗೆ ರೋಮನ್‌ ಸೈನಿಕರ ಸೊಂಟಪಟ್ಟಿಯಂತೆ ಇದೆ?

3 ಎಫೆಸ 6:14 ಓದಿ. ರೋಮನ್‌ ಸೈನಿಕರು ಹಾಕಿಕೊಳ್ಳುತ್ತಿದ್ದ ಸೊಂಟಪಟ್ಟಿಯನ್ನು ಅಥವಾ ಬೆಲ್ಟನ್ನು ಲೋಹದಿಂದ ಮಾಡಲಾಗುತ್ತಿತ್ತು. ಅದು ಸೈನಿಕರ ಸೊಂಟವನ್ನು ಕಾಪಾಡುತ್ತಿತ್ತು ಮತ್ತು ಅವರು ಹಾಕಿಕೊಳ್ಳುತ್ತಿದ್ದ ಭಾರವಾದ ಎದೆಕವಚ ಜಾರದಂತೆ ನೋಡಿಕೊಳ್ಳುತ್ತಿತ್ತು. ಕೆಲವು ಸೊಂಟಪಟ್ಟಿಗಳಲ್ಲಿ ಸೈನಿಕರು ತಮ್ಮ ಖಡ್ಗ ಮತ್ತು ಚಿಕ್ಕ ಕತ್ತಿಯನ್ನು ಸಿಕ್ಕಿಸುತ್ತಿದ್ದರು. ಸೈನಿಕರು ಸೊಂಟಪಟ್ಟಿಯನ್ನು ಬಿಗಿಯಾಗಿ ಕಟ್ಟಿಕೊಂಡು ಯುದ್ಧಕ್ಕೆ ಹೋಗಿ ಧೈರ್ಯವಾಗಿ ನಿಂತು ಹೋರಾಡಬಹುದಿತ್ತು.

4 ಇಂಥ ಒಂದು ಸೊಂಟಪಟ್ಟಿಯಂತೆ ದೇವರ ವಾಕ್ಯದಿಂದ ನಾವು ಕಲಿತಿರುವ ಸತ್ಯಗಳು ನಮ್ಮನ್ನು ಸುಳ್ಳು ಬೋಧನೆಗಳಿಂದ ಕಾಪಾಡುತ್ತವೆ. (ಯೋಹಾ. 8:31, 32; 1 ಯೋಹಾ. 4:1) ದೇವರ ವಾಕ್ಯದಲ್ಲಿರುವ ಸತ್ಯಗಳನ್ನು ನಾವು ಹೆಚ್ಚೆಚ್ಚು ಪ್ರೀತಿಸಿದಂತೆ ದೇವರ ಮಟ್ಟಗಳಿಗೆ ತಕ್ಕಂತೆ ಜೀವಿಸಲು ಅಂದರೆ “ಎದೆಕವಚವನ್ನು” ಹಾಕಿಕೊಂಡಿರಲು ಸುಲಭವಾಗುತ್ತದೆ. (ಕೀರ್ತ. 111:7, 8; 1 ಯೋಹಾ. 5:3) ಅಷ್ಟೇ ಅಲ್ಲ, ಈ ಸತ್ಯಗಳನ್ನು ನಾವು ಚೆನ್ನಾಗಿ ಅರ್ಥಮಾಡಿಕೊಂಡರೆ ಅವುಗಳನ್ನು ವಿರೋಧಿಸುವವರ ಹತ್ತಿರ ಧೈರ್ಯವಾಗಿ ಮಾತಾಡಬಹುದು.—1 ಪೇತ್ರ 3:15.

5. ನಾವು ಯಾಕೆ ಯಾವಾಗಲೂ ಸತ್ಯವನ್ನೇ ಹೇಳಬೇಕು?

5 ದೇವರ ವಾಕ್ಯದ ಸತ್ಯಗಳು ನಮಗೆ ತುಂಬ ಮುಖ್ಯವಾಗಿರುವುದರಿಂದ ನಾವು ಬೈಬಲ್‌ ಹೇಳುವುದನ್ನು ಪಾಲಿಸುತ್ತೇವೆ ಮತ್ತು ಯಾವಾಗಲೂ ಸತ್ಯವನ್ನೇ ಹೇಳುತ್ತೇವೆ. ಸುಳ್ಳು ಅನ್ನುವುದು ಸೈತಾನನ ಕೈಯಲ್ಲಿರುವ ಬಲವಾದ ಆಯುಧ. ಇದನ್ನು ಬಳಸಿ ಅವನು ತನ್ನ ಕುತಂತ್ರಗಳನ್ನು ಸಾಧಿಸಿಕೊಳ್ಳುತ್ತಾನೆ. ಸುಳ್ಳು ಹೇಳುವುದರಿಂದ ಅದನ್ನು ಹೇಳುವ ವ್ಯಕ್ತಿಗೂ ಹಾನಿಯಾಗುತ್ತದೆ ಮತ್ತು ಅದನ್ನು ನಂಬುವ ವ್ಯಕ್ತಿಗೂ ಹಾನಿಯಾಗುತ್ತದೆ. (ಯೋಹಾ. 8:44) ಆದ್ದರಿಂದ ನಾವು ಅಪರಿಪೂರ್ಣರಾಗಿದ್ದರೂ ಸುಳ್ಳು ಹೇಳದೇ ಇರಲು ನಮ್ಮಿಂದಾದ ಎಲ್ಲ ಪ್ರಯತ್ನ ಮಾಡುತ್ತೇವೆ. (ಎಫೆ. 4:25) ಆದರೆ ಸುಳ್ಳು ಹೇಳದೇ ಇರಲು ಕೆಲವೊಮ್ಮೆ ಕಷ್ಟವಾಗಬಹುದು. 18 ವಯಸ್ಸಿನ ಅಬೀಗೈಲ್‌ ಹೇಳುವುದು: “ಸುಳ್ಳು ಹೇಳಿ ಒಂದು ದೊಡ್ಡ ಸಮಸ್ಯೆಯಿಂದ ತಪ್ಪಿಸಿಕೊಳ್ಳಕ್ಕಾದರೆ ಸತ್ಯ ಹೇಳುವುದಕ್ಕಿಂತ ಸುಳ್ಳು ಹೇಳುವುದೇ ಒಳ್ಳೇದು ಅಂತ ಕೆಲವೊಮ್ಮೆ ಅನಿಸುತ್ತೆ.” ಆದರೂ ಅವಳು ಯಾವಾಗಲೂ ಸತ್ಯವನ್ನೇ ಹೇಳಲು ಪ್ರಯತ್ನಿಸುತ್ತಾಳೆ. ಯಾಕೆ? “ಸತ್ಯ ಹೇಳಿದಾಗ ನನಗೆ ಯೆಹೋವನ ಮುಂದೆ ಶುದ್ಧ ಮನಸ್ಸಾಕ್ಷಿ ಇರುತ್ತೆ. ನನ್ನ ಹೆತ್ತವರು, ಸ್ನೇಹಿತರು ನನ್ನನ್ನು ನಂಬುತ್ತಾರೆ” ಎಂದು ಅಬೀಗೈಲ್‌ ಹೇಳುತ್ತಾಳೆ. 23 ವಯಸ್ಸಿನ ವಿಕ್ಟೋರಿಯ ಹೇಳುವುದು: “ನಾವು ಸತ್ಯವನ್ನೇ ಮಾತಾಡಿದರೆ, ಬೈಬಲಿನಲ್ಲಿ ನಾವು ಕಲಿತಿರೋ ವಿಷಯಗಳ ಪ್ರಕಾರ ನಡಕೊಂಡರೆ ಬೇರೆಯವರು ನಮ್ಮನ್ನು ಗೇಲಿ ಮಾಡಬಹುದು. ತೊಂದರೆನೂ ಕೊಡಬಹುದು. ಆದರೆ ಸತ್ಯ ಹೇಳುವುದರಿಂದ ಯಾವಾಗಲೂ ಪ್ರಯೋಜನ ಇದೆ. ಅದನ್ನು ಬೇರೆ ಯಾವುದಕ್ಕೂ ಹೋಲಿಸಕ್ಕಾಗಲ್ಲ. ನಮಗೆ ಆತ್ಮವಿಶ್ವಾಸ ಇರುತ್ತೆ, ಯೆಹೋವನಿಗೆ ಇನ್ನೂ ಹತ್ತಿರವಾಗುತ್ತೇವೆ ಮತ್ತು ನಮ್ಮನ್ನು ಪ್ರೀತಿಸುವ ಜನರಿಗೆ ನಮ್ಮ ಮೇಲೆ ಗೌರವ ಇರುತ್ತೆ.” ಸತ್ಯವೆಂಬ ಸೊಂಟಪಟ್ಟಿಯನ್ನು ಯಾವಾಗಲೂ ಹಾಕಿಕೊಂಡಿರುವುದು ಎಷ್ಟು ಮುಖ್ಯ ಎಂದು ನೀವೇ ನೋಡಿದಿರಿ ಅಲ್ವಾ?

ಸತ್ಯವೆಂಬ ಸೊಂಟಪಟ್ಟಿ (ಪ್ಯಾರ 3-5 ನೋಡಿ)

“ನೀತಿಯ ಎದೆಕವಚ”

6, 7. ಯೆಹೋವನ ನೀತಿಯ ಮಟ್ಟಗಳನ್ನು ಯಾಕೆ ಎದೆಕವಚಕ್ಕೆ ಹೋಲಿಸಲಾಗಿದೆ?

6 ರೋಮನ್‌ ಸೈನಿಕರ ಎದೆಕವಚವನ್ನು ಹೆಚ್ಚಾಗಿ ಕಬ್ಬಿಣದ ತಗಡುಗಳಿಂದ ಮಾಡಲಾಗುತ್ತಿತ್ತು. ಈ ತಗಡುಗಳು ಅವರ ಎದೆಭಾಗದ ಸುತ್ತ ಬರುವಂತೆ ಜೋಡಿಸಲಾಗಿತ್ತು. ಇವುಗಳ ಅಂಚಿನಲ್ಲಿ ಕೊಂಡಿಗಳು ಮತ್ತು ಬಕಲ್‌ಗಳು ಇದ್ದವು. ಇವುಗಳಿಗೆ ಚರ್ಮದ ತುಂಡುಗಳನ್ನು ಹಾಕಿ ಎದೆಕವಚವನ್ನು ಕಟ್ಟುತ್ತಿದ್ದರು. ಸೈನಿಕರ ತೋಳಿನ ಭಾಗಕ್ಕೆ ಹೆಚ್ಚಿನ ಲೋಹದ ತಗಡುಗಳನ್ನು ಸೇರಿಸಲಾಗುತ್ತಿತ್ತು. ಇವನ್ನೂ ಚರ್ಮದ ತುಂಡುಗಳಿಂದ ಕಟ್ಟಲಾಗುತ್ತಿತ್ತು. ಎದೆಕವಚ ಹಾಕಿಕೊಂಡಾಗ ಒಬ್ಬ ಸೈನಿಕ ಬೇಕಾದ ಕಡೆ ಆರಾಮವಾಗಿ ತಿರುಗಲು ಆಗುತ್ತಿರಲಿಲ್ಲ. ಕಬ್ಬಿಣದ ತಗಡುಗಳು ಜಾರಿಕೊಂಡಿದೆಯಾ ಎಂದು ಅವನು ಆಗಾಗ ನೋಡಬೇಕಿತ್ತು. ಹೀಗಿದ್ದರೂ ಎದೆಕವಚ ಹಾಕಿಕೊಂಡರೆ ಅದು ಅವನ ಹೃದಯ ಮತ್ತು ಬೇರೆ ಅಂಗಗಳನ್ನು ಖಡ್ಗದ ಏಟಿನಿಂದ ಮತ್ತು ಹಾರಿಬರುತ್ತಿರುವ ಬಾಣದಿಂದ ರಕ್ಷಿಸುತ್ತಿತ್ತು.

7 ಯೆಹೋವನ ನೀತಿಯ ಮಟ್ಟಗಳನ್ನು ಎದೆಕವಚಕ್ಕೆ ಹೋಲಿಸಬಹುದು. ಈ ಮಟ್ಟಗಳು ನಮ್ಮ “ಹೃದಯ” ಅಂದರೆ ನಮ್ಮ ವ್ಯಕ್ತಿತ್ವವನ್ನು ಕಾಪಾಡುತ್ತವೆ. (ಜ್ಞಾನೋ. 4:23) ಒಬ್ಬ ಸೈನಿಕ ಕಬ್ಬಿಣದಿಂದ ಮಾಡಿದ್ದ ಎದೆಕವಚವನ್ನು ಹಾಕಿಕೊಳ್ಳುತ್ತಿದ್ದ. ಅದಕ್ಕಿಂತ ಕಡಿಮೆ ಗುಣಮಟ್ಟದ ಲೋಹದಿಂದ ಮಾಡಿದ ಎದೆಕವಚವನ್ನು ಹಾಕಿಕೊಳ್ಳುತ್ತಿರಲಿಲ್ಲ. ಅದೇ ರೀತಿ, ಯಾವುದು ಸರಿ ಎಂದು ತಿಳಿಸುವ ಯೆಹೋವನ ಮಟ್ಟಗಳನ್ನೇ ನಾವು ಪಾಲಿಸುತ್ತೇವೆ. ಅದರ ಬದಲಿಗೆ ನಮಗೆ ಯಾವುದು ಸರಿ ಎಂದು ಅನಿಸುತ್ತದೋ ಅದನ್ನು ಮಾಡಲ್ಲ. ನಮ್ಮ ಹೃದಯವನ್ನು ನಾವೇ ಕಾಪಾಡಿಕೊಳ್ಳುವಷ್ಟು ಬುದ್ಧಿವಂತರಲ್ಲ. (ಜ್ಞಾನೋ. 3:5, 6) ಆದ್ದರಿಂದ ನಾವು ಹಾಕಿಕೊಂಡಿರುವ “ಎದೆಕವಚ” ನಮ್ಮ ಹೃದಯವನ್ನು ಕಾಪಾಡುತ್ತಿದೆಯಾ ಎಂದು ಆಗಾಗ ಪರೀಕ್ಷಿಸುತ್ತಾ ಇರಬೇಕು.

8. ನಾವು ಯಾಕೆ ಯೆಹೋವನ ಮಟ್ಟಗಳಿಗೆ ತಕ್ಕಂತೆ ನಡೆಯಬೇಕು?

8 ಯೆಹೋವನ ಮಟ್ಟಗಳು ನಿಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತವೆ ಅಥವಾ ನಿಮ್ಮಿಷ್ಟದಂತೆ ಮಾಡುವುದನ್ನು ತಡೆಯುತ್ತದೆ ಎಂದು ನಿಮಗೆ ಅನಿಸಿದೆಯಾ? 21 ವಯಸ್ಸಿನ ಡ್ಯಾನಿಯೆಲ್‌ ಹೇಳುವುದನ್ನು ಕೇಳಿ: “ನಾನು ಬೈಬಲ್‌ ಮಟ್ಟಗಳಿಗೆ ತಕ್ಕಂತೆ ನಡೆಯುವುದನ್ನು ನೋಡಿ ನನ್ನ ಶಿಕ್ಷಕರು, ನನ್ನ ಜೊತೆ ಓದುವ ಮಕ್ಕಳು ನನ್ನನ್ನು ಗೇಲಿ ಮಾಡುತ್ತಿದ್ದರು. ಆಗ ನಾನು ಧೈರ್ಯ ಕಳಕೊಂಡುಬಿಟ್ಟೆ, ಮನಸ್ಸಿಗಾದ ನೋವನ್ನು ಸ್ವಲ್ಪ ಸಮಯ ಮರೆಯಕ್ಕಾಗಲಿಲ್ಲ.” ಅದರಿಂದ ಅವನು ಹೇಗೆ ಚೇತರಿಸಿಕೊಂಡ? ಅವನು ಹೇಳುವುದು: “ಸಮಯ ಹೋದ ಹಾಗೆ ಯೆಹೋವನ ಮಟ್ಟಗಳಿಗೆ ತಕ್ಕಂತೆ ನಡಕೊಂಡರೆ ಎಷ್ಟು ಪ್ರಯೋಜನ ಸಿಗುತ್ತೆ ಅಂತ ನನಗೆ ಅರ್ಥ ಆಯಿತು. ನನ್ನ ಕೆಲವು ‘ಫ್ರೆಂಡ್ಸ್‌’ ಡ್ರಗ್ಸ್‌ ತೆಗೆದುಕೊಳ್ಳೋಕೆ ಶುರುಮಾಡಿದ್ದರು. ಇನ್ನು ಕೆಲವರು ಕಾಲೇಜಿಗೆ ಬರೋದನ್ನು ಅರ್ಧದಲ್ಲೇ ನಿಲ್ಲಿಸಿಬಿಟ್ಟರು. ಅವರ ಜೀವನ ಇಷ್ಟು ಹಾಳಾಗಿದ್ದನ್ನು ನೋಡಿ ನನಗೆ ಬೇಜಾರಾಯಿತು. ಯೆಹೋವ ದೇವರು ಹೇಳುವುದು ಯಾವಾಗಲೂ ನಮ್ಮ ಒಳ್ಳೇದಕ್ಕೇ.” 15 ವರ್ಷದ ಮ್ಯಾಡಿಸನ್‌ ಎಂಬ ಹುಡುಗಿ ಹೇಳುವುದು: “ನನ್ನ ವಯಸ್ಸಿನ ಮಕ್ಕಳು ಯಾವುದನ್ನು ಮಜಾ ಅಂದುಕೊಳ್ಳುತ್ತಾರೋ ಅದನ್ನು ಮಾಡದೆ ಯೆಹೋವನ ಮಟ್ಟಗಳ ಪ್ರಕಾರ ಜೀವಿಸುವುದು ಕಷ್ಟಾನೇ.” ಆಗ ಅವಳು ಏನು ಮಾಡುತ್ತಾಳೆ? “ನಾನೊಬ್ಬ ಯೆಹೋವನ ಸಾಕ್ಷಿ ಅನ್ನುವುದನ್ನು ಮತ್ತು ಒಂದು ಪ್ರಲೋಭನೆ ಬಂದರೆ ಅದು ಸೈತಾನ ನನ್ನ ಮೇಲೆ ಮಾಡುತ್ತಿರೋ ದಾಳಿ ಅನ್ನುವುದನ್ನು ನೆನಪಿಸಿಕೊಳ್ಳುತ್ತೇನೆ. ಆ ದಾಳಿಯ ವಿರುದ್ಧ ಹೋರಾಡಿ ಜಯಿಸಿದಾಗ ನನಗೇ ನನ್ನ ಬಗ್ಗೆ ಖುಷಿಯಾಗುತ್ತೆ” ಎಂದು ಹೇಳುತ್ತಾಳೆ.

ನೀತಿಯ ಎದೆಕವಚ (ಪ್ಯಾರ 6-8 ನೋಡಿ)

‘ಶಾಂತಿಯ ಸುವಾರ್ತೆಯನ್ನು ಸಾರಲು ನಿಮ್ಮ ಪಾದಗಳು ಸಿದ್ಧವಾಗಿರಲಿ’

9-11. (ಎ) ಕ್ರೈಸ್ತರು ಯಾವ ಸಾಂಕೇತಿಕ ಪಾದರಕ್ಷೆ ಹಾಕಿಕೊಳ್ಳುತ್ತಾರೆ? (ಬಿ) ನಾವು ಯಾವುದೇ ಭಯ, ಹಿಂಜರಿಕೆ ಇಲ್ಲದೆ ಸಾರಲು ನಮಗೆ ಯಾವುದು ಸಹಾಯ ಮಾಡುತ್ತದೆ?

9 ಎಫೆಸ 6:15 ಓದಿ. ರೋಮನ್‌ ಸೈನಿಕರು ಪಾದರಕ್ಷೆ ಹಾಕಿಕೊಂಡರೆ ಅವರು ಯುದ್ಧಕ್ಕೆ ಸಿದ್ಧರಿದ್ದಾರೆ ಎಂದು ತೋರಿಸುತ್ತಿತ್ತು. ಅವರ ಪಾದರಕ್ಷೆಗಳನ್ನು ಪೂರ್ತಿಯಾಗಿ ಚರ್ಮದಿಂದ ಮಾಡಲಾಗುತ್ತಿತ್ತು. ಪಾದದ ಕೆಳಗಿದ್ದ ಗಡುಸಾದ ಭಾಗಕ್ಕೆ ಚರ್ಮದ ಪಟ್ಟಿಗಳನ್ನು ಜಡಿಯಲಾಗುತ್ತಿತ್ತು. ಹಾಗಾಗಿ ಅವು ತುಂಬ ಗಟ್ಟಿಯಾಗಿರುತ್ತಿದ್ದವು. ಆದರೂ ಆರಾಮವಾಗಿ ನಡೆಯಬಹುದಿತ್ತು. ಇದರಿಂದಾಗಿ ಜಾರಿಬೀಳುತ್ತಾರೆ ಅನ್ನುವ ಭಯ ಇಲ್ಲದೆ ಸೈನಿಕರು ನಡೆಯಬಹುದಿತ್ತು.

10 ರೋಮನ್‌ ಸೈನಿಕರು ಪಾದರಕ್ಷೆ ಹಾಕಿಕೊಂಡು ಯುದ್ಧಕ್ಕೆ ಹೋಗುತ್ತಿದ್ದರು. ಆದರೆ ನಾವು ಸಾಂಕೇತಿಕ ಪಾದರಕ್ಷೆ ಹಾಕಿಕೊಂಡು ‘ಶಾಂತಿಯ ಸಂದೇಶವನ್ನು’ ಸಾರುವುದಕ್ಕೆ ಹೋಗುತ್ತೇವೆ. (ಯೆಶಾ. 52:7; ರೋಮ. 10:15) ಆದರೂ ಸಾರಲು ಕೆಲವೊಮ್ಮೆ ನಾವು ಧೈರ್ಯ ತಂದುಕೊಳ್ಳಬೇಕಾಗುತ್ತದೆ. 20 ವರ್ಷದ ಬೋ ಹೇಳುವುದು: “ನನ್ನ ಕ್ಲಾಸಲ್ಲಿರುವ ಮಕ್ಕಳಿಗೆ ಸಾಕ್ಷಿಕೊಡಲು ನನಗೆ ಭಯ ಆಗುತ್ತಿತ್ತು. ಇದಕ್ಕೆ ಕಾರಣ ನನ್ನ ನಾಚಿಕೆ ಸ್ವಭಾವ ಅಂತ ಅನಿಸುತ್ತೆ. ಆದರೆ ಈಗ ಅದನ್ನು ನೆನಸಿಕೊಂಡರೆ ನಾನ್ಯಾಕೆ ಭಯಪಟ್ಟುಕೊಂಡೆ ಅಂತ ಅನಿಸುತ್ತದೆ. ಈಗ ನನ್ನ ವಯಸ್ಸಿನವರಿಗೆ ನಾನು ಧೈರ್ಯವಾಗಿ ಸಾಕ್ಷಿ ಕೊಡುತ್ತೇನೆ.”

11 ಮೊದಲೇ ತಯಾರಿ ಮಾಡಿಕೊಂಡರೆ ಸಾಕ್ಷಿಕೊಡಲು ಸುಲಭವಾಗುತ್ತೆ ಎಂದು ಅನೇಕ ಯುವಜನರು ಅರ್ಥಮಾಡಿಕೊಂಡಿದ್ದಾರೆ. ನೀವು ಹೇಗೆ ತಯಾರಿ ಮಾಡಬಹುದು? 16 ವರ್ಷದ ಜೂಲಿಯ ಹೇಳುವುದು: “ನನ್ನ ಸ್ಕೂಲ್‌ ಬ್ಯಾಗಲ್ಲಿ ಯಾವಾಗಲೂ ಪತ್ರಿಕೆಗಳನ್ನು ಇಟ್ಟುಕೊಳ್ಳುತ್ತೇನೆ. ನನ್ನ ಕ್ಲಾಸಲ್ಲಿರೋ ಮಕ್ಕಳು ತಮ್ಮ ಅಭಿಪ್ರಾಯಗಳನ್ನು, ಧಾರ್ಮಿಕ ನಂಬಿಕೆಗಳನ್ನು ಹೇಳುವಾಗ ಚೆನ್ನಾಗಿ ಕೇಳಿಸಿಕೊಳ್ಳುತ್ತೇನೆ. ಆಮೇಲೆ ಅವರಿಗೆ ಹೇಗೆ ಸಹಾಯ ಮಾಡಬಹುದು ಅಂತ ಯೋಚಿಸುತ್ತೇನೆ. ಹೀಗೆ ತಯಾರಿ ಮಾಡುವುದರಿಂದ ಅವರಿಗೆ ಪ್ರಯೋಜನವಾಗುವ ವಿಷಯಗಳನ್ನೇ ಮಾತಾಡಲು ಆಗುತ್ತದೆ.” 23 ವರ್ಷದ ಮಕೆನ್ಸೀ ಹೇಳುವುದು: “ಸಹಪಾಠಿಗಳು ಮಾತಾಡುವಾಗ ಚೆನ್ನಾಗಿ ಕೇಳಿಸಿಕೊಂಡರೆ ಅವರ ಮನಸ್ಸಲ್ಲಿ ಏನಿದೆ, ಅವರು ಯಾವ ಸವಾಲು ಎದುರಿಸುತ್ತಿದ್ದಾರೆ ಅಂತ ಗೊತ್ತಾಗುತ್ತೆ. ನಾನು ಏನು ಮಾಡುತ್ತೇನೆ ಅಂದರೆ ಯುವಜನರಿಗೋಸ್ಕರ ನಮ್ಮ ಸಂಘಟನೆ ತಯಾರಿಸಿರುವ ಪ್ರಕಾಶನಗಳನ್ನು ಮೊದಲೇ ಓದುತ್ತೇನೆ. ಆಮೇಲೆ ಬೈಬಲಲ್ಲಿ ಅಥವಾ jw.orgನಲ್ಲಿ ಅವರಿಗೆ ಸಹಾಯ ಆಗುವ ವಿಷಯದ ಕಡೆಗೆ ಅವರ ಗಮನ ಸೆಳೆಯುತ್ತೇನೆ.” ನಾವು ಸಾರಲು ಚೆನ್ನಾಗಿ ತಯಾರಿಸುವುದು ಕಾಲಿಗೆ ಸರಿಯಾದ ಪಾದರಕ್ಷೆಯನ್ನು ಹಾಕಿಕೊಂಡಂತೆ ಇದೆ.

ಸಿದ್ಧವಾಗಿರುವ ಪಾದರಕ್ಷೆ (ಪ್ಯಾರ 9-11 ನೋಡಿ)

“ನಂಬಿಕೆಯೆಂಬ ದೊಡ್ಡ ಗುರಾಣಿ”

12, 13. ಸೈತಾನನ ಕೆಲವು ‘ಅಗ್ನಿಬಾಣಗಳು’ ಯಾವುವು?

12 ಎಫೆಸ 6:16 ಓದಿ. ರೋಮನ್‌ ಸೈನಿಕರು ಆಯತಾಕಾರದ ದೊಡ್ಡ ಗುರಾಣಿ ಹಿಡಿದುಕೊಳ್ಳುತ್ತಿದ್ದರು. ಅದು ಅವರ ಭುಜದಿಂದ ಮೊಣಕಾಲಿನವರೆಗೆ ಬರುತ್ತಿತ್ತು. ಖಡ್ಗದ ಏಟಿನಿಂದ ಮತ್ತು ಈಟಿ, ಬಾಣಗಳ ದಾಳಿಯಿಂದ ಕಾಪಾಡುತ್ತಿತ್ತು.

13 ಸೈತಾನ ನಿಮ್ಮ ಮೇಲೆ ಯಾವ ‘ಅಗ್ನಿಬಾಣಗಳನ್ನು’ ಹೊಡೆಯಬಹುದು? ಅವನು ಯೆಹೋವನ ಬಗ್ಗೆ ಕೆಲವು ಸುಳ್ಳುಗಳನ್ನು ನಿಮ್ಮ ಮೇಲೆ ಬಾಣಗಳಾಗಿ ಬಿಡಬಹುದು. ಯೆಹೋವನು ನಿಮ್ಮನ್ನು ಪ್ರೀತಿಸಲ್ಲ ಮತ್ತು ಆತನಿಗೆ ನಿಮ್ಮ ಬಗ್ಗೆ ಕಾಳಜಿ ಇಲ್ಲ ಎಂದು ನೀವು ನೆನಸಬೇಕು ಅನ್ನುವುದೇ ಅವನ ಆಸೆ. ಈಡ ಎಂಬ 19 ವರ್ಷದ ಹುಡುಗಿ ಹೇಳುವುದು: “ಯೆಹೋವ ದೇವರು ನನ್ನನ್ನು ದೂರ ಮಾಡಿಬಿಟ್ಟಿದ್ದಾನೆ, ನನ್ನ ಸ್ನೇಹಿತನಾಗಿ ಇರೋಕೆ ಆತನಿಗೆ ಇಷ್ಟ ಇಲ್ಲ ಅಂತ ಎಷ್ಟೋ ಸಲ ಅನಿಸಿದೆ.” ಹೀಗನಿಸಿದಾಗೆಲ್ಲ ಅವಳು ಏನು ಮಾಡುತ್ತಾಳೆ? “ಕೂಟಗಳು ನನ್ನ ನಂಬಿಕೆಯನ್ನು ತುಂಬ ತುಂಬ ಹೆಚ್ಚಿಸುತ್ತೆ. ಮುಂಚೆಯೆಲ್ಲಾ ಕೂಟಕ್ಕೆ ಹೋದರೆ ಸುಮ್ಮನೆ ಕೂತುಕೊಳ್ಳುತ್ತಿದ್ದೆ, ಕೈಯೆತ್ತಿ ಉತ್ತರನೇ ಕೊಡುತ್ತಿರಲಿಲ್ಲ. ನಾನು ಹೇಳೋದನ್ನು ಯಾರಿಗೂ ಕೇಳಿಸಿಕೊಳ್ಳಲು ಇಷ್ಟ ಇಲ್ಲವೇನೋ ಅಂತ ಅನಿಸುತ್ತಿತ್ತು. ಆದರೆ ಈಗ ಹಾಗಲ್ಲ. ಕೂಟಗಳಿಗೆ ತಯಾರಿ ಮಾಡುತ್ತೇನೆ, ಎರಡು ಮೂರು ಉತ್ತರಗಳನ್ನು ಕೊಡಲು ಪ್ರಯತ್ನಿಸುತ್ತೇನೆ. ಇದು ಸ್ವಲ್ಪ ಕಷ್ಟವಾದರೂ ಪ್ರಯತ್ನ ಮಾಡುತ್ತೇನೆ. ಆಮೇಲೆ ನನಗೆ ತುಂಬ ಖುಷಿಯಾಗುತ್ತೆ. ಸಹೋದರ ಸಹೋದರಿಯರಂತೂ ನನಗೆ ತುಂಬ ಪ್ರೋತ್ಸಾಹ ಕೊಡುತ್ತಾರೆ. ಕೂಟ ಮುಗಿಸಿ ಬರುವಾಗ ಯೆಹೋವ ದೇವರು ನನ್ನನ್ನು ಪ್ರೀತಿಸುತ್ತಾನೆ ಅಂತ ಭರವಸೆಯಿಂದ ವಾಪಸ್ಸು ಬರುತ್ತೇನೆ.”

14. ನಾವು ಈಡ ಅನುಭವದಿಂದ ಏನು ಕಲಿಯಬಹುದು?

14 ರೋಮನ್‌ ಸೈನಿಕರ ಗುರಾಣಿ ದೊಡ್ಡದೂ ಆಗಲ್ಲ ಚಿಕ್ಕದೂ ಆಗಲ್ಲ, ಇದ್ದ ಹಾಗೆಯೇ ಇರುತ್ತದೆ. ಆದರೆ ನಮ್ಮ ನಂಬಿಕೆ ಹಾಗಲ್ಲ. ಇದು ನಮಗೆ ಈಡಳ ಅನುಭವದಿಂದ ಗೊತ್ತಾಗುತ್ತದೆ. ನಮ್ಮ ನಂಬಿಕೆ ಜಾಸ್ತಿ ಆಗಬಹುದು ಅಥವಾ ಕಡಿಮೆ ಆಗಬಹುದು, ಬಲವಾಗಬಹುದು ಅಥವಾ ದುರ್ಬಲ ಆಗಬಹುದು. ಇದೆಲ್ಲ ನಮ್ಮ ಕೈಯಲ್ಲಿದೆ. (ಮತ್ತಾ. 14:31; 2 ಥೆಸ. 1:3) “ನಂಬಿಕೆಯೆಂಬ ದೊಡ್ಡ ಗುರಾಣಿ” ನಮ್ಮನ್ನು ಕಾಪಾಡಬೇಕಾದರೆ ನಮ್ಮ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು, ಬಲಪಡಿಸಬೇಕು.

ನಂಬಿಕೆಯೆಂಬ ದೊಡ್ಡ ಗುರಾಣಿ (ಪ್ಯಾರ 12-14 ನೋಡಿ)

“ರಕ್ಷಣೆಯ ಶಿರಸ್ತ್ರಾಣ”

15, 16. ನಮ್ಮ ನಿರೀಕ್ಷೆ ಹೇಗೆ ಶಿರಸ್ತ್ರಾಣದಂತಿದೆ?

15 ಎಫೆಸ 6:17 ಓದಿ. ರೋಮನ್‌ ಸೈನಿಕರು ತಮ್ಮ ತಲೆ, ಕತ್ತು ಮತ್ತು ಮುಖವನ್ನು ಕಾಪಾಡಿಕೊಳ್ಳಲು ಶಿರಸ್ತ್ರಾಣವನ್ನು ಹಾಕಿಕೊಳ್ಳುತ್ತಿದ್ದರು. ಅದನ್ನು ಕೈಯಲ್ಲಿ ಹಿಡಿದುಕೊಳ್ಳಲು ಅದರಲ್ಲಿ ಕೆಲವೊಮ್ಮೆ ಹಿಡಿಕೆಯೂ ಇರುತ್ತಿತ್ತು.

16 ಸೈನಿಕನ ಮೆದುಳನ್ನು ಶಿರಸ್ತ್ರಾಣ ಕಾಪಾಡುತ್ತಿದ್ದಂತೆ ನಮ್ಮ ಯೋಚನೆಗಳನ್ನು “ರಕ್ಷಣೆಯ ನಿರೀಕ್ಷೆ” ಕಾಪಾಡುತ್ತದೆ. (1 ಥೆಸ. 5:8; ಜ್ಞಾನೋ. 3:21) ದೇವರ ವಾಗ್ದಾನಗಳ ಮೇಲೆ ಮನಸ್ಸಿಡಲು ಮತ್ತು ಸಮಸ್ಯೆಗಳಿಂದಾಗಿ ನಿರುತ್ಸಾಹಗೊಳ್ಳದಿರಲು ನಿರೀಕ್ಷೆ ಸಹಾಯ ಮಾಡುತ್ತದೆ. (ಕೀರ್ತ. 27:1, 14; ಅ. ಕಾ. 24:15) ಆದರೆ ನಿರೀಕ್ಷೆ ನಮ್ಮನ್ನು ಕಾಪಾಡಬೇಕೆಂದರೆ ಅದು ನಮಗೆ ನೈಜವಾಗಿರಬೇಕು. ನಮ್ಮ ‘ಶಿರಸ್ತ್ರಾಣವನ್ನು’ ತಲೆಗೆ ಹಾಕಿಕೊಂಡಿರಬೇಕು, ಅದನ್ನು ಕೈಯಲ್ಲಿ ಹಿಡುಕೊಂಡಿರಬಾರದು!

17, 18. (ಎ) ನಾವು ನಮ್ಮ ಶಿರಸ್ತ್ರಾಣವನ್ನು ತೆಗೆದುಬಿಡುವಂತೆ ಸೈತಾನ ಹೇಗೆ ಪ್ರಚೋದಿಸುತ್ತಾನೆ? (ಬಿ) ಸೈತಾನನ ಕುತಂತ್ರಗಳಿಗೆ ಬಲಿಯಾಗಿಲ್ಲ ಎಂದು ನಾವು ಹೇಗೆ ತೋರಿಸಬಹುದು?

17 ನಾವು ನಮ್ಮ ಶಿರಸ್ತ್ರಾಣವನ್ನು ತೆಗೆದುಬಿಡುವಂತೆ ಸೈತಾನ ಹೇಗೆ ಪ್ರಚೋದಿಸುತ್ತಾನೆ? ಅವನು ಯೇಸುವಿಗೆ ಏನು ಮಾಡಿದ ಎಂದು ಯೋಚಿಸೋಣ. ಯೇಸು ಮಾನವಕುಲದ ರಾಜನಾಗುತ್ತಾನೆ ಎಂದು ಸೈತಾನನಿಗೆ ಗೊತ್ತಿತ್ತು. ಆದರೆ ರಾಜನಾಗುವುದಕ್ಕೆ ಮುಂಚೆ ಆತನು ಕಷ್ಟ-ನೋವು ಅನುಭವಿಸಿ ಜನರಿಗೋಸ್ಕರ ಪ್ರಾಣ ಕೊಡಬೇಕಾಗಿತ್ತು. ಆಮೇಲೆ ಯೆಹೋವನು ನಿಗದಿಮಾಡಿದ ಸಮಯ ಬರುವವರೆಗೆ ಕಾಯಬೇಕಿತ್ತು. ಆ ಸಮಯ ಬರುವುದಕ್ಕಿಂತ ಮುಂಚೆನೇ ರಾಜನಾಗುವ ಅವಕಾಶವನ್ನು ಸೈತಾನ ಯೇಸುವಿಗೆ ಕೊಟ್ಟನು. ತನ್ನನ್ನು ಯೇಸು ಒಂದೇ ಒಂದು ಸಾರಿ ಆರಾಧನೆ ಮಾಡಿದರೆ ಸಾಕು, ತಕ್ಷಣ ಇಡೀ ಲೋಕದ ಅಧಿಪತಿಯಾಗಿ ಮಾಡುತ್ತೇನೆ ಎಂದು ಸೈತಾನ ಹೇಳಿದನು. (ಲೂಕ 4:5-7) ಯೆಹೋವನು ನಮಗೆ ಕೊಟ್ಟಿರುವ ವಾಗ್ದಾನದ ಬಗ್ಗೆಯೂ ಸೈತಾನನಿಗೆ ಗೊತ್ತು. ಯೆಹೋವನು ಮುಂದೆ ಹೊಸ ಲೋಕದಲ್ಲಿ ಅನೇಕ ಆಶೀರ್ವಾದಗಳನ್ನು ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದಾನೆ. ಆದರೆ ನಾವು ಆ ಆಶೀರ್ವಾದಗಳನ್ನು ಪಡಕೊಳ್ಳಬೇಕಾದರೆ ಸ್ವಲ್ಪ ಕಾಯಬೇಕಾಗಿದೆ. ಇದರ ಮಧ್ಯದಲ್ಲಿ ನಮಗೆ ತುಂಬ ಸಮಸ್ಯೆಗಳು ಬರಬಹುದು. ಹಾಗಾಗಿ ಸೈತಾನನು ನಾವೀಗ ಆರಾಮವಾಗಿ ಜೀವಿಸುವ ಅವಕಾಶವನ್ನು ನಮ್ಮ ಮುಂದೆ ಇಡುತ್ತಾನೆ. ನಾವು ನಮ್ಮ ಸುಖ-ಸೌಕರ್ಯವನ್ನು ಮೊದಲ ಸ್ಥಾನದಲ್ಲಿ ಇಟ್ಟು ದೇವರ ರಾಜ್ಯಕ್ಕೆ ಎರಡನೇ ಸ್ಥಾನ ಕೊಡಬೇಕು ಎಂದು ಸೈತಾನ ಬಯಸುತ್ತಾನೆ.—ಮತ್ತಾ. 6:31-33.

18 ಅನೇಕ ಯುವ ಕ್ರೈಸ್ತರು ಸೈತಾನನ ಕುತಂತ್ರಗಳಿಗೆ ಬಲಿಯಾಗಿಲ್ಲ. 20 ವರ್ಷದ ಕಿಯಾನ ಹೇಳುವುದು: “ದೇವರ ರಾಜ್ಯ ಮಾತ್ರ ನಮಗಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ.” ಅವಳಿಗಿರುವ ಈ ನಿರೀಕ್ಷೆ ಅವಳ ಯೋಚನೆಗಳನ್ನು ಮತ್ತು ಜೀವನ ರೀತಿಯನ್ನು ಹೇಗೆ ಪ್ರಭಾವಿಸಿದೆ? ಈ ಲೋಕದಲ್ಲಿರುವ ವಿಷಯಗಳು ತಾತ್ಕಾಲಿಕ ಅನ್ನುವುದನ್ನು ನೆನಪಿಸಿಕೊಳ್ಳಲು ಈ ನಿರೀಕ್ಷೆ ಅವಳಿಗೆ ಸಹಾಯ ಮಾಡುತ್ತದೆ. ದೊಡ್ಡ ಉದ್ಯೋಗ ಕಂಡುಕೊಂಡು ದುಡ್ಡಿನ ಹಿಂದೆ ಬೀಳುವ ಬದಲು ಅವಳು ತನ್ನ ಸಮಯ, ಶಕ್ತಿಯನ್ನೆಲ್ಲಾ ಯೆಹೋವನ ಸೇವೆಗೆ ಬಳಸುತ್ತಿದ್ದಾಳೆ.

ರಕ್ಷಣೆಯ ಶಿರಸ್ತ್ರಾಣ (ಪ್ಯಾರ 15-18 ನೋಡಿ)

ದೇವರ ವಾಕ್ಯವೆಂಬ “ಪವಿತ್ರಾತ್ಮದ ಕತ್ತಿ”

19, 20. ಬೈಬಲ್‌ ಬಳಸುವುದರಲ್ಲಿ ನೀವು ಹೇಗೆ ನಿಪುಣರಾಗಬಹುದು?

19 ರೋಮನ್‌ ಸೈನಿಕರು ಬಳಸುತ್ತಿದ್ದ ಖಡ್ಗ ಸುಮಾರು 50 ಸೆಂಟಿಮೀಟರ್‌ನಷ್ಟು (20 ಇಂಚು) ಉದ್ದ ಇತ್ತು. ಅವರು ಪ್ರತಿ ದಿನ ಅಭ್ಯಾಸ ಮಾಡುವ ಮೂಲಕ ಖಡ್ಗವನ್ನು ಬಳಸುವುದರಲ್ಲಿ ತುಂಬ ನಿಪುಣರಾಗಿದ್ದರು.

20 ಅಪೊಸ್ತಲ ಪೌಲನು ದೇವರ ವಾಕ್ಯವನ್ನು ಕತ್ತಿ ಅಥವಾ ಖಡ್ಗಕ್ಕೆ ಹೋಲಿಸಿದನು. ಇದನ್ನು ಯೆಹೋವನು ನಮಗೆ ಕೊಟ್ಟಿದ್ದಾನೆ. ಆದರೆ ನಮ್ಮ ನಂಬಿಕೆಗಳ ಬಗ್ಗೆ ಬೇರೆಯವರಿಗೆ ವಿವರಿಸಲು ಮತ್ತು ನಾವು ಯೋಚಿಸುವ ರೀತಿಯಲ್ಲಿ ಹೊಂದಾಣಿಕೆಗಳನ್ನು ಮಾಡಿಕೊಳ್ಳಲು ಬೈಬಲನ್ನು ಚೆನ್ನಾಗಿ ಬಳಸುವುದು ಹೇಗೆ ಎಂದು ನಾವು ಕಲಿಯಬೇಕು. (2 ಕೊರಿಂ. 10:4, 5; 2 ತಿಮೊ. 2:15) ಬೈಬಲನ್ನು ಬಳಸುವುದರಲ್ಲಿ ನೀವು ಹೇಗೆ ನಿಪುಣರಾಗಬಹುದು? 21 ವರ್ಷದ ಸೆಬಾಸ್ಟಿಯನ್‌ ಹೇಳುವುದು: “ನಾನು ಬೈಬಲ್‌ ಓದುವಾಗ ಪ್ರತಿ ಅಧ್ಯಾಯದಿಂದ ಒಂದೊಂದು ವಚನವನ್ನು ಬರೆದಿಡುತ್ತೇನೆ. ಹೀಗೆ ನನಗಿಷ್ಟವಾದ ವಚನಗಳ ಪಟ್ಟಿಯನ್ನು ಸಿದ್ಧಮಾಡುತ್ತಿದ್ದೇನೆ.” ಇದನ್ನು ಮಾಡುವುದರಿಂದ ಯೆಹೋವನು ಹೇಗೆ ಯೋಚನೆ ಮಾಡುತ್ತಾನೆ ಅನ್ನುವುದನ್ನು ಅರ್ಥಮಾಡಿಕೊಳ್ಳಲು ಅವನಿಗೆ ಸಹಾಯವಾಗಿದೆ. ಡ್ಯಾನಿಯೆಲ್‌ ಹೇಳುವುದು: “ಬೈಬಲ್‌ ಓದುವಾಗ ನನಗೆ ಸೇವೆಯಲ್ಲಿ ಸಹಾಯ ಆಗುವ ವಚನಗಳನ್ನು ಬರೆದಿಡುತ್ತೇನೆ. ಬೈಬಲ್‌ ಮೇಲೆ ನಮಗಿರುವ ಪ್ರೀತಿಯನ್ನು ನೋಡಿ ಜನರು ಸುವಾರ್ತೆಯನ್ನು ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ. ಆಗ ಅವರಿಗೆ ಸಹಾಯ ಮಾಡಲು ಮನಸ್ಸಾಗುತ್ತದೆ.”

ಪವಿತ್ರಾತ್ಮದ ಕತ್ತಿ (ಪ್ಯಾರ 19-20 ನೋಡಿ)

21. ನಾವು ಯಾಕೆ ಸೈತಾನನಿಗೆ ಮತ್ತು ದೆವ್ವಗಳಿಗೆ ಭಯಪಡಬೇಕಾಗಿಲ್ಲ?

21 ನಾವು ಸೈತಾನನಿಗಾಗಲಿ ದೆವ್ವಗಳಿಗಾಗಲಿ ಭಯಪಡಬೇಕಾಗಿಲ್ಲ ಎಂದು ಈ ಲೇಖನದಲ್ಲಿ ಯುವಜನರ ಉದಾಹರಣೆಗಳಿಂದ ಕಲಿತೆವು. ಸೈತಾನ ಮತ್ತು ದೆವ್ವಗಳಿಗೆ ಶಕ್ತಿ ಇದೆ ಅನ್ನುವುದು ನಿಜನೇ, ಆದರೆ ಅವರಿಗೆ ಯೆಹೋವನಿಗಿಂತ ಹೆಚ್ಚಿನ ಶಕ್ತಿ ಇಲ್ಲ. ಅವರು ಶಾಶ್ವತವಾಗಿ ಇರುವುದಿಲ್ಲ. ಅವರನ್ನು ಬಂಧಿಸಲಾಗುತ್ತದೆ. ಕ್ರಿಸ್ತನ ಸಾವಿರ ವರ್ಷದ ಆಳಿಕೆಯ ಸಮಯದಲ್ಲಿ ಅವರು ಯಾರಿಗೂ ಹಾನಿ ಮಾಡಕ್ಕಾಗಲ್ಲ. ಕೊನೆಯಲ್ಲಿ ಅವರು ಹೇಳಹೆಸರಿಲ್ಲದೆ ಹೋಗುತ್ತಾರೆ. (ಪ್ರಕ. 20:1-3, 7-10) ನಮಗೆ ನಮ್ಮ ವೈರಿಯ ಬಗ್ಗೆ, ಅವನ ಕುತಂತ್ರಗಳ ಬಗ್ಗೆ, ಅವನ ಉದ್ದೇಶದ ಬಗ್ಗೆ ಚೆನ್ನಾಗಿ ಗೊತ್ತು. ಯೆಹೋವನ ಸಹಾಯದಿಂದ ನಾವು ಸೈತಾನನ ವಿರುದ್ಧ ದೃಢವಾಗಿ ನಿಲ್ಲಬಹುದು!