ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 21

‘ಈ ಲೋಕದ ವಿವೇಕವನ್ನು’ ನಂಬಿ ಮೋಸ ಹೋಗಬೇಡಿ

‘ಈ ಲೋಕದ ವಿವೇಕವನ್ನು’ ನಂಬಿ ಮೋಸ ಹೋಗಬೇಡಿ

“ಈ ಲೋಕದ ವಿವೇಕವು ದೇವರ ಮುಂದೆ ಹುಚ್ಚುತನವಾಗಿದೆ.” —1 ಕೊರಿಂ. 3:19.

ಗೀತೆ 37 ಶಾಸ್ತ್ರಗ್ರಂಥ ದೇವರಿಂದ ಪ್ರೇರಿತವಾಗಿದೆ

ಕಿರುನೋಟ *

1. ದೇವರ ವಾಕ್ಯದಿಂದ ನಮಗೇನು ಪ್ರಯೋಜನ ಇದೆ?

ಯೆಹೋವನು ನಮ್ಮ ಮಹಾನ್‌ ಬೋಧಕ. (ಯೆಶಾ. 30:20, 21) ಹಾಗಾಗಿ ನಾವು ಎಂಥ ಸಮಸ್ಯೆಯನ್ನೂ ಜಯಿಸಬಹುದು. ದೇವರ ವಾಕ್ಯಕ್ಕೆ ನಮ್ಮನ್ನು ‘ಪೂರ್ಣಸಮರ್ಥರಾಗಿ’ ಮತ್ತು ‘ಸಕಲ ಸತ್ಕಾರ್ಯಕ್ಕೂ ಸನ್ನದ್ಧರನ್ನಾಗಿ’ ಮಾಡುವ ಶಕ್ತಿಯಿದೆ. (2 ತಿಮೊ. 3:17) ನಾವು ದೇವರ ವಾಕ್ಯವನ್ನು ಪಾಲಿಸಿ ಜೀವನ ನಡೆಸಿದರೆ ಈ ಲೋಕದ ವಿವೇಕವನ್ನು ಪಡೆದ ಬುದ್ಧಿವಂತರಿಗಿಂತ ವಿವೇಕಿಗಳಾಗುತ್ತೇವೆ.—1 ಕೊರಿಂ. 3:19; ಕೀರ್ತ. 119:97-100.

2. ನಾವು ಈ ಲೇಖನದಲ್ಲಿ ಏನನ್ನು ಕಲಿಯಲಿದ್ದೇವೆ?

2 ಕೆಲವೊಮ್ಮೆ ಈ ಲೋಕದ ವಿವೇಕ ನಮಗೆ ಆಕರ್ಷಕವಾಗಿ ಕಾಣಬಹುದು. ಹಾಗಾಗಿ ಈ ಲೋಕದವರಂತೆ ನಡೆಯದಿರಲು ನಾವು ತುಂಬ ಕಷ್ಟಪಡಬೇಕಾಗುತ್ತದೆ. ಬೈಬಲ್‌ ನಮಗೆ ‘ಎಚ್ಚರವಾಗಿರಿ! ಮನುಷ್ಯರ ಸಂಪ್ರದಾಯಕ್ಕೆ ಅನುಸಾರವಾಗಿ ಇರುವ ತತ್ತ್ವಜ್ಞಾನ ಮತ್ತು ನಿರರ್ಥಕವಾದ ಮೋಸಕರ ಮಾತುಗಳ ಮೂಲಕ ಯಾವನಾದರೂ ನಿಮ್ಮನ್ನು ತನ್ನ ಬೇಟೆಯೋಪಾದಿ ಹಿಡಿದುಕೊಂಡು ಹೋಗಬಹುದು’ ಎಂದು ಹೇಳುತ್ತದೆ. (ಕೊಲೊ. 2:8) ಹಾಗಾಗಿ ನಾವು ಈ ಲೇಖನದಲ್ಲಿ ಎರಡು ‘ನಿರರ್ಥಕವಾದ ಮೋಸಕರ ಮಾತುಗಳ’ ಬಗ್ಗೆ ನೋಡಲಿದ್ದೇವೆ. ಈ ಎರಡು ಸುಳ್ಳುಗಳು ಹೇಗೆ ಜನಪ್ರಿಯವಾದವು ಎಂದೂ ನೋಡೋಣ. ಇವುಗಳಿಂದ ದೇವರ ವಿವೇಕ ಈ ಲೋಕದ ವಿವೇಕಕ್ಕಿಂತ ಹೇಗೆ ಮೇಲಾಗಿದೆ ಎಂದು ತಿಳಿದುಕೊಳ್ಳಲಿದ್ದೇವೆ.

ನೈತಿಕತೆಯ ಬಗ್ಗೆ ಈ ಲೋಕಕ್ಕಿರುವ ನೋಟ

3-4. ಇಪ್ಪತ್ತನೇ ಶತಮಾನದ ಆರಂಭದಲ್ಲಿ, ಅಮೆರಿಕದಲ್ಲಿ ಜನರಿಗೆ ನೈತಿಕತೆಯ ಬಗ್ಗೆ ಇದ್ದ ನೋಟ ಹೇಗೆ ಬದಲಾಯಿತು?

3 ಇಪ್ಪತ್ತನೇ ಶತಮಾನದ ಆರಂಭದಲ್ಲಿ ಅಮೆರಿಕದಲ್ಲಿ ನೈತಿಕತೆಯ ಬಗ್ಗೆ ಜನರಿಗಿರುವ ನೋಟ ‘ಬರುತ್ತಾ ಬರುತ್ತಾ ರಾಯನ ಕುದುರೆ ಕತ್ತೆಯಾಯಿತು’ ಅನ್ನುವ ರೀತಿ ಆಗಿಹೋಯಿತು. ಇದಕ್ಕೆ ಮುಂಚೆ ಅನೇಕರು ಸೆಕ್ಸ್‌ ಅನ್ನೋದು ಮದುವೆ ಆದವರ ನಡುವೆ ಮಾತ್ರ ಇರಬೇಕು ಮತ್ತು ಬೇರೆಯವರ ಮುಂದೆ ಹೇಳಿಕೊಳ್ಳುವ ವಿಷಯ ಅಲ್ಲ ಅಂತ ನೆನಸುತ್ತಿದ್ದರು. ಆದರೆ ಮುಂದೆ ಈ ಮಟ್ಟಗಳು ಕುಸಿದುಹೋದವು ಮತ್ತು ‘ಏನು ಬೇಕಾದ್ರೂ ಮಾಡಬಹುದು’ ಅನ್ನುವ ಮನೋಭಾವ ಹಬ್ಬಲು ಆರಂಭಿಸಿತು.

4 ಇದರಿಂದಾಗಿ 1920 ರ ದಶಕವನ್ನು “ಇಪ್ಪತ್ತರ ಘರ್ಜನೆ” ಎಂದು ಕರೆಯುತ್ತಿದ್ದರು. ಈ ಸಮಯದಲ್ಲಿ ಸಮಾಜದಲ್ಲಿ ಅನೇಕ ಬದಲಾವಣೆಗಳು ಆದವು. “ಆಗ ಇದ್ದ ಸಿನಿಮಾಗಳು, ನಾಟಕಗಳು, ಹಾಡುಗಳು, ಕಾದಂಬರಿಗಳು ಮತ್ತು ಜಾಹೀರಾತುಗಳು ಲೈಂಗಿಕತೆಯನ್ನು ಹೆಚ್ಚು ತೋರಿಸಲು ಆರಂಭಿಸಿತು” ಎಂದು ಒಬ್ಬ ಸಂಶೋಧಕರು ಹೇಳುತ್ತಾರೆ. ಆ ದಶಕದಲ್ಲಿ ಜನರು ಡ್ಯಾನ್ಸ್‌ ಮಾಡುತ್ತಿದ್ದ ರೀತಿ ಲೈಂಗಿಕವಾಗಿ ಉದ್ರೇಕಿಸುವಂತೆ ಇತ್ತು ಹಾಗೂ ಜನರು ಹಾಕುತ್ತಿದ್ದ ಬಟ್ಟೆ ಅಸಭ್ಯವಾಗಿ ಇತ್ತು. ಅಂತ್ಯಕಾಲದ ಬಗ್ಗೆ ಬೈಬಲ್‌ ಮುಂತಿಳಿಸಿದಂತೆ ಅನೇಕ ಜನರು ‘ಭೋಗಗಳನ್ನೇ ಪ್ರೀತಿಸುವವರಾಗಿ’ ಬದಲಾದರು.—2 ತಿಮೊ. 3:4.

ಲೈಂಗಿಕತೆ ಬಗ್ಗೆ ಲೋಕಕ್ಕಿರುವ ಕೀಳ್ಮಟ್ಟದ ನೋಟವು ಯೆಹೋವನ ಜನರ ಮೇಲೆ ಪ್ರಭಾವ ಬೀರಿಲ್ಲ (ಪ್ಯಾರ 5 ನೋಡಿ) *

5. 1960 ರ ದಶಕದಿಂದ ನೈತಿಕತೆಯ ಬಗ್ಗೆ ಜನರಿಗಿರುವ ನೋಟ ಹೇಗೆ ಬದಲಾಗಿದೆ?

5 ಮದುವೆಯಾಗದೇ ಒಟ್ಟಿಗೆ ಜೀವಿಸುವುದು, ಸಲಿಂಗಕಾಮ ಮತ್ತು ವಿಚ್ಛೇದನ 1960 ರ ದಶಕದಿಂದ ತುಂಬ ಹೆಚ್ಚಾಯಿತು. ಆಗ ಇದ್ದ ಮನೋರಂಜನೆ ಕೂಡ ಸೆಕ್ಸನ್ನು ಇನ್ನೂ ಮುಕ್ತವಾಗಿ ತೋರಿಸುತ್ತಿತ್ತು. ನೈತಿಕ ಮಟ್ಟಗಳು ಇಷ್ಟು ಕೆಳಮಟ್ಟಕ್ಕೆ ಇಳಿದದ್ದರಿಂದ ಏನಾಗಿದೆ? ಒಬ್ಬ ಲೇಖಕಿ ಹೇಳುವಂತೆ, ಜನರು ನೈತಿಕ ಮಟ್ಟಗಳನ್ನು ಗಾಳಿಗೆ ತೂರಿ ಹೇಗೆ ಬೇಕೋ ಹಾಗೆ ಜೀವನ ಮಾಡುತ್ತಿರುವುದರಿಂದ ತುಂಬ ಕಷ್ಟಗಳು ಎದುರಾಗಿವೆ. ಕುಟುಂಬಗಳು ಒಡೆದುಹೋಗಿವೆ, ಅಪ್ಪ ಅಥವಾ ಅಮ್ಮ ಕುಟುಂಬವನ್ನು ಬಿಟ್ಟುಹೋಗಿದ್ದಾರೆ, ಭಾವನಾತ್ಮಕವಾಗಿ ಜನ ನೋವು ತಿನ್ನುತ್ತಿದ್ದಾರೆ, ಅಶ್ಲೀಲ ಸಾಹಿತ್ಯ ನೋಡುವ ಚಟಕ್ಕೆ ಒಳಗಾಗಿದ್ದಾರೆ ಮತ್ತು ಇನ್ನೆಷ್ಟೋ ನೋವು ತಂದುಕೊಂಡಿದ್ದಾರೆ. ಇನ್ನೊಂದು ಕೆಟ್ಟ ಪರಿಣಾಮ ಏನೆಂದರೆ, ಇಂದು ಏಡ್ಸ್‌ನಂಥ ಕಾಯಿಲೆಗಳು ಹೆಚ್ಚಾಗಿವೆ. ಈ ಲೋಕದ ವಿವೇಕ ಮೂರ್ಖತನವಾಗಿದೆ ಅನ್ನುವುದಕ್ಕೆ ಇದೆಲ್ಲಾ ಸಾಕ್ಷಿ.—2 ಪೇತ್ರ 2:19.

6. ಜನರು ಸೆಕ್ಸ್‌ ಬಗ್ಗೆ ಯಾವ ನೋಟ ಬೆಳೆಸಿಕೊಳ್ಳಬೇಕು ಅಂತ ಸೈತಾನ ನೆನಸುತ್ತಾನೆ? ವಿವರಿಸಿ.

6 ಜನರು ಸೆಕ್ಸ್‌ ಬಗ್ಗೆ ತಪ್ಪಾದ ನೋಟ ಬೆಳೆಸಿಕೊಳ್ಳಬೇಕು ಅನ್ನುವುದೇ ಸೈತಾನನ ಆಸೆ. ದೇವರು ಕೊಟ್ಟಿರುವ ಈ ಉಡುಗೊರೆಯನ್ನು ಜನರು ದುರ್ಬಳಕೆ ಮಾಡುವ ಮೂಲಕ ವಿವಾಹವನ್ನು ತುಚ್ಛ ಮಾಡುವಾಗ ಸೈತಾನನಿಗೆ ತುಂಬ ಖುಷಿಯಾಗುತ್ತದೆ. (ಎಫೆ. 2:2) ಮದುವೆಯಾಗಿ ಮಕ್ಕಳನ್ನು ಪಡಕೊಳ್ಳುವುದು ದೇವರು ಮಾಡಿರುವ ಏರ್ಪಾಡು. ಆದರೆ ಜನ ಅನೈತಿಕತೆಯಲ್ಲಿ ಒಳಗೂಡಿದರೆ, ಈ ಏರ್ಪಾಡಿಗೆ ಒಂಚೂರು ಬೆಲೆ ಕೊಡಲ್ಲ ಎಂದು ತೋರಿಸಿಕೊಡುತ್ತಾರೆ. ಇಂಥವರು ದೇವರ ರಾಜ್ಯದಲ್ಲಿ ಇರಲ್ಲ.—1 ಕೊರಿಂ. 6:9, 10.

ನೈತಿಕತೆಯ ಬಗ್ಗೆ ದೇವರಿಗಿರುವ ನೋಟ

7-8. ಲೈಂಗಿಕತೆಯ ಬಗ್ಗೆ ಬೈಬಲಲ್ಲಿರುವ ನೋಟ ಯಾಕೆ ಉತ್ತಮವಾಗಿದೆ?

7 ಯಾರು ಈ ಲೋಕದ ವಿವೇಕದ ಪ್ರಕಾರ ಜೀವಿಸುತ್ತಿದ್ದಾರೋ ಅವರು ಬೈಬಲಿನ ನೈತಿಕ ಮಟ್ಟಗಳನ್ನು ‘ಓಬೀರಾಯನ ಕಾಲದ್ದು, ಇವತ್ತಿಗಲ್ಲ’ ಎಂದು ಗೇಲಿ ಮಾಡುತ್ತಾರೆ. ಅಂಥ ಜನ ಹೀಗೆ ಕೇಳಬಹುದು: ‘ದೇವರು ನಮಗೆ ಲೈಂಗಿಕ ಆಸೆ ಕೊಟ್ಟುಬಿಟ್ಟು, ಆಮೇಲೆ ಅದನ್ನು ತೀರಿಸಿಕೊಳ್ಳಬಾರದು ಅಂತ ಯಾಕಪ್ಪಾ ಹೇಳುತ್ತಾನೆ?’ ಯಾವ ಸಮಯದಲ್ಲಿ ಏನೇ ಆಸೆ ಬಂದರೂ ಅದನ್ನು ತಕ್ಷಣ ತೀರಿಸಿಕೊಳ್ಳಬೇಕು ಅಂತ ಅವರು ತಪ್ಪಾಗಿ ಯೋಚಿಸುವುದರಿಂದ ಈ ಪ್ರಶ್ನೆ ಕೇಳುತ್ತಾರೆ. ಆದರೆ ಬೈಬಲ್‌ ಹೇಳುವುದೇ ಬೇರೆ. ಏನೇ ತಪ್ಪಾದ ಆಸೆ ಬಂದರೂ ಅದನ್ನು ತೀರಿಸಿಕೊಳ್ಳಲು ಹೋಗುವ ಬದಲು ನಮ್ಮ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ನಮಗಿದೆ ಎಂದು ಬೈಬಲ್‌ ಹೇಳುತ್ತದೆ. (ಕೊಲೊ. 3:5) ಜೊತೆಗೆ ನಮ್ಮಲ್ಲಿರುವ ಲೈಂಗಿಕ ಆಸೆಗಳನ್ನು ಪೂರೈಸಿಕೊಳ್ಳಲು ಮದುವೆ ಎಂಬ ಏರ್ಪಾಡನ್ನು ಮಾಡಿ ಯೆಹೋವನು ನಮ್ಮನ್ನು ಗೌರವಿಸಿದ್ದಾನೆ. (1 ಕೊರಿಂ. 7:8, 9) ಆ ಏರ್ಪಾಡಿನೊಳಗೆ ಗಂಡ-ಹೆಂಡತಿ ಲೈಂಗಿಕತೆಯನ್ನು ಆನಂದಿಸಬಹುದು. ಆದರೆ ಲೈಂಗಿಕ ಅನೈಕತಿಕತೆ ನಡೆಸುವುದರಿಂದ ತುಂಬ ವಿಷಾದಪಡಬೇಕಾಗುತ್ತದೆ, ನೋವು ತಿನ್ನಬೇಕಾಗುತ್ತದೆ.

8 ಲೈಂಗಿಕತೆಯ ಬಗ್ಗೆ ಸರಿಯಾದ ನೋಟ ಇಟ್ಟುಕೊಳ್ಳಲು ಬೈಬಲ್‌ ಸಹಾಯ ಮಾಡುತ್ತದೆ. ಲೈಂಗಿಕತೆಯಿಂದ ಸಂತೋಷ ಸಿಗುತ್ತದೆ ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 5:18, 19) ಆದರೆ “ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರತೆಯಲ್ಲಿಯೂ ಗೌರವದಲ್ಲಿಯೂ ತನ್ನ ಸ್ವಂತ ದೇಹವನ್ನು ಸ್ವಾಧೀನದಲ್ಲಿ ಇಟ್ಟುಕೊಳ್ಳುವುದು ಹೇಗೆಂಬುದನ್ನು ತಿಳಿದವನಾಗಿರಬೇಕು. ದೇವರನ್ನರಿಯದ ಅನ್ಯಜನಾಂಗಗಳವರಲ್ಲಿ ಇರುವಂತೆ ದುರಾಶೆಭರಿತ ಕಾಮಾಭಿಲಾಷೆಯನ್ನು ಹೊಂದಿರಬಾರದು” ಎಂದು ಹೇಳುತ್ತದೆ.—1 ಥೆಸ. 4:4, 5.

9. (ಎ) ಇಪ್ಪತ್ತನೇ ಶತಮಾನದ ಆರಂಭದಲ್ಲಿದ್ದ ಯೆಹೋವನ ಜನರಿಗೆ ದೇವರ ವಾಕ್ಯದ ವಿವೇಕದ ಪ್ರಕಾರ ಜೀವಿಸಲು ಹೇಗೆ ಉತ್ತೇಜನ ಸಿಕ್ಕಿತು? (ಬಿ) 1 ಯೋಹಾನ 2:15, 16 ರಲ್ಲಿ ಯಾವ ಸಲಹೆ ಇದೆ? (ಸಿ)  ರೋಮನ್ನರಿಗೆ 1:24-27 ರಲ್ಲಿ ಕೊಟ್ಟಿರುವಂತೆ, ಯಾವ ವಿಷಯಗಳಿಂದ ನಾವು ದೂರ ಇರಬೇಕು?

9  ಇಪ್ಪತ್ತನೇ ಶತಮಾನದ ಆರಂಭದಲ್ಲಿದ್ದ ಯೆಹೋವನ ಜನರು ‘ಸಂಪೂರ್ಣ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡ’ ಜನರ ತರ ಮೋಸಹೋಗಲಿಲ್ಲ. (ಎಫೆ. 4:19) ಅವರು ಯೆಹೋವನ ಮಟ್ಟಗಳಿಗೆ ಅನುಸಾರ ಜೀವಿಸಲು ಆದಷ್ಟು ಪ್ರಯತ್ನಿಸಿದರು. ಮೇ 15, 1926 ರ ಕಾವಲಿನ ಬುರುಜು ಹೀಗೆ ಹೇಳಿತ್ತು: “ಒಬ್ಬ ಪುರುಷ ಅಥವಾ ಸ್ತ್ರೀ ತನ್ನ ಯೋಚನೆ ಮತ್ತು ನಡತೆಯಲ್ಲಿ ನಿಷ್ಕಂಳಕವಾಗಿ, ಶುದ್ಧವಾಗಿ ಇರಬೇಕು. ಮುಖ್ಯವಾಗಿ ವಿರುದ್ಧ ಲಿಂಗದ ವ್ಯಕ್ತಿಯ ವಿಷಯದಲ್ಲಿ ಹೀಗಿರಬೇಕು.” ತಮ್ಮ ಸುತ್ತಮುತ್ತ ಇದ್ದ ಜನ ಹೇಗೇ ಇದ್ದರೂ ಯೆಹೋವನ ಜನರು ದೇವರ ವಾಕ್ಯದಲ್ಲಿರುವ ಉನ್ನತ ವಿವೇಕದ ಪ್ರಕಾರ ಜೀವಿಸಿದರು. (1 ಯೋಹಾನ 2:15, 16 ಓದಿ.) ದೇವರು ತನ್ನ ವಾಕ್ಯವನ್ನು ಕೊಟ್ಟಿರುವುದಕ್ಕೆ ನಾವು ಎಷ್ಟು ಕೃತಜ್ಞತೆ ಹೇಳಿದರೂ ಸಾಲದು! ಅಷ್ಟೇ ಅಲ್ಲ, ನೈತಿಕತೆಯ ಬಗ್ಗೆ ಈ ಲೋಕಕ್ಕಿರುವ ನೋಟವನ್ನು ಬೆಳೆಸಿಕೊಳ್ಳದಿರಲು ಯೆಹೋವನು ತಕ್ಕ ಸಮಯಕ್ಕೆ ಸೂಕ್ತ ಆಧ್ಯಾತ್ಮಿಕ ಆಹಾರವನ್ನು ಕೊಡುತ್ತಿರುವುದಕ್ಕೂ ನಾವು ಆಭಾರಿ. *ರೋಮನ್ನರಿಗೆ 1:24-27 ಓದಿ.

ಸ್ವಪ್ರೇಮದ ಬಗ್ಗೆ ಲೋಕಕ್ಕಿರುವ ನೋಟ

10-11. ಕಡೇ ದಿನಗಳಲ್ಲಿ ಏನಾಗುತ್ತೆ ಎಂದು ಬೈಬಲ್‌ ಎಚ್ಚರಿಕೆ ನೀಡಿತ್ತು?

10 ಕಡೇ ದಿನಗಳಲ್ಲಿ ‘ಜನರು ಸ್ವಪ್ರೇಮಿಗಳಾಗುತ್ತಾರೆ’ ಎಂದು ಬೈಬಲ್‌ ಎಚ್ಚರಿಕೆ ನೀಡಿತ್ತು. (2 ತಿಮೊ. 3:1, 2) ಹಾಗಾಗಿ ಇಂದು ಜನರು ಸ್ವಾರ್ಥಿಗಳಾಗಿರುವುದನ್ನು ನೋಡುವಾಗ ನಮಗೆ ಆಶ್ಚರ್ಯ ಆಗಲ್ಲ. ಒಂದು ಎನ್‌ಸೈಕ್ಲೊಪೀಡಿಯ ಹೇಳುವಂತೆ, 1970 ರಲ್ಲಿ “ಸ್ವ-ಸಹಾಯಕ್ಕಾಗಿದ್ದ ಪುಸ್ತಕಗಳು ತುಂಬ ಜಾಸ್ತಿ ಆಯಿತು.” ಇಂಥ ಕೆಲವು ಪುಸ್ತಕಗಳು ‘ನೋಡಿ ಸ್ವಾಮಿ ನಾವಿರುವುದೇ ಹೀಗೆ’ ಅಂತ ತಾವು ಹೇಗೇ ಇದ್ದರೂ ಅದರ ಬಗ್ಗೆ ಹೆಮ್ಮೆಪಡುವಂತೆ ಪ್ರೋತ್ಸಾಹಿಸಿದವು. ಉದಾಹರಣೆಗೆ, ಇಂಥ ಒಂದು ಪುಸ್ತಕದಲ್ಲಿ ಈ ಹೇಳಿಕೆ ಇತ್ತು: “ತುಂಬ ಸುಂದರ, ರೋಮಾಂಚಕ, ಸಮರ್ಥ ವ್ಯಕ್ತಿಯನ್ನು ಪ್ರೀತಿಸಿ. ಅದು ಬೇರೆ ಯಾರೂ ಅಲ್ಲ, ನೀವೇ.” ಒಬ್ಬ ವ್ಯಕ್ತಿ ತನ್ನದೇ ಆದ ಧರ್ಮ ಮಾಡಿಕೊಳ್ಳಬೇಕೆಂದು ಆ ಪುಸ್ತಕ ಹೇಳಿತು. ಅಂದರೆ ಏನು ಮಾಡಬೇಕು, ಯಾವುದು ಸರಿ-ತಪ್ಪು ಎಂದು ಆ ವ್ಯಕ್ತಿ ತನ್ನ ಸ್ವಂತ ಮನಸ್ಸಾಕ್ಷಿಗನುಸಾರ ತೀರ್ಮಾನಿಸಬೇಕು. ತನಗೆ ಯಾವುದು ಅನುಕೂಲವಾಗಿದೆಯೋ ಅದನ್ನು ಮಾಡಬೇಕು.

11 ಇದನ್ನು ಎಲ್ಲೋ ಕೇಳಿದ ಹಾಗೆ ಇದೆಯಾ? ಸೈತಾನನು ಹವ್ವಳಿಗೆ ಇದನ್ನೇ ಹೇಳಿದ. ಅವನು ಹವ್ವಳಿಗೆ ‘ನೀನು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವಳಾಗುತ್ತೀಯ’ ಎಂದ. (ಆದಿ. 3:5) ಇಂದು ಅನೇಕ ಜನರು ತಮ್ಮನ್ನು ತಾವು ಎಷ್ಟರ ಮಟ್ಟಿಗೆ ಹೆಚ್ಚಿಸಿಕೊಳ್ಳುತ್ತಾರೆಂದರೆ, ತಮಗೆ ಯಾವುದು ಸರಿ ಯಾವುದು ತಪ್ಪು ಅಂತ ಯಾರೂ ಹೇಳೋ ಅವಶ್ಯಕತೆ ಇಲ್ಲ, ದೇವರು ಸಹ ಹೇಳಬೇಕಾಗಿಲ್ಲ ಅಂತ ಯೋಚಿಸುತ್ತಾರೆ. ಮದುವೆಯ ವಿಷಯದಲ್ಲಿ ಜನರಿಗಿರುವ ಮನೋಭಾವದಲ್ಲಿ ಇದು ಮುಖ್ಯವಾಗಿ ಎದ್ದುಕಾಣುತ್ತಿದೆ.

ಒಬ್ಬ ಕ್ರೈಸ್ತನು ಬೇರೆಯವರ ಅಗತ್ಯಗಳಿಗೆ, ಅದರಲ್ಲೂ ತನ್ನ ಬಾಳ ಸಂಗಾತಿಯ ಅಗತ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾನೆ (ಪ್ಯಾರ 12 ನೋಡಿ) *

12. ಮದುವೆ ಬಗ್ಗೆ ಲೋಕಕ್ಕೆ ಯಾವ ನೋಟ ಇದೆ?

12 ಗಂಡ-ಹೆಂಡತಿ ಒಬ್ಬರಿಗೊಬ್ಬರು ಗೌರವ ತೋರಿಸಬೇಕು ಮತ್ತು ಮದುವೆಯಾದಾಗ ಒಬ್ಬರಿಗೊಬ್ಬರು ಕೊಟ್ಟ ಮಾತನ್ನು ಮುರಿಯಬಾರದು ಎಂದು ಬೈಬಲ್‌ ಹೇಳುತ್ತದೆ. “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು” ಎಂದು ಹೇಳುವ ಮೂಲಕ ಗಂಡ-ಹೆಂಡತಿ ಯಾವಾಗಲೂ ಜೊತೆಯಾಗಿ ಬಾಳಬೇಕು ಎಂದು ಅದು ಉತ್ತೇಜಿಸುತ್ತದೆ. (ಆದಿ. 2:24) ಆದರೆ ಈ ಲೋಕ, ಗಂಡ ತನಗೇನು ಬೇಕೋ ಅದನ್ನು ನೋಡಿಕೊಳ್ಳಬೇಕು, ಹೆಂಡತಿ ತನಗೇನು ಬೇಕೋ ಅದನ್ನು ನೋಡಿಕೊಳ್ಳಬೇಕು ಎಂದು ಉತ್ತೇಜಿಸುತ್ತದೆ. ವಿಚ್ಛೇದನದ ಬಗ್ಗೆ ಇರುವ ಒಂದು ಪುಸ್ತಕದಲ್ಲಿ ಹೀಗೆ ತಿಳಿಸಲಾಗಿದೆ: “ಮದುವೆ ಆಗುವಾಗ ಒಬ್ಬರಿಗೊಬ್ಬರು ಕೊಡುವ ಮಾತಲ್ಲಿರುವ ಪದಗಳನ್ನು ಇಂದು ಅನೇಕ ಜನರು ಸ್ವಲ್ಪ ಬದಲಾಯಿಸಿಕೊಂಡಿದ್ದಾರೆ. ‘ತಾವು ಜೀವಿಸುವಷ್ಟು ಕಾಲ’ ಅಂತ ಹೇಳುವ ಬದಲು ‘ತಾವು ಪ್ರೀತಿಸುವಷ್ಟು ಕಾಲ’ ಪತಿ-ಪತ್ನಿಯಾಗಿ ಇರೋಣ ಅಂತ ಹೇಳುತ್ತಾರೆ.” ಮದುವೆ ಅನ್ನುವುದು ಶಾಶ್ವತ ಬಂಧವಲ್ಲ ಅಂತ ಜನರು ನೆನಸುತ್ತಿರುವುದರಿಂದ ಕುಟುಂಬಗಳು ಒಡೆದುಹೋಗುತ್ತಿವೆ, ಅನೇಕರು ಹೇಳಕ್ಕಾಗದಿರುವಷ್ಟು ಭಾವನಾತ್ಮಕವಾಗಿ ನೊಂದಿದ್ದಾರೆ. ಇದೆಲ್ಲ ನೋಡುವಾಗ ಮದುವೆ ಬಗ್ಗೆ ಲೋಕಕ್ಕಿರುವ ನೋಟ ಎಷ್ಟು ಮೂರ್ಖತನವಾಗಿದೆ ಎಂದು ಚೆನ್ನಾಗಿ ಗೊತ್ತಾಗುತ್ತೆ.

13. ಯೆಹೋವನಿಗೆ ಅಹಂಕಾರಿಗಳನ್ನು ಕಂಡರೆ ಅಸಹ್ಯ ಅನಿಸಲು ಒಂದು ಕಾರಣ ಏನು?

13 “ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋ. 16:5) ಯೆಹೋವನಿಗೆ ಯಾಕೆ ಅಹಂಕಾರಿಗಳನ್ನು ಕಂಡರೆ ಅಸಹ್ಯ ಅನಿಸುತ್ತದೆ? ಯಾಕೆಂದರೆ ಅವರು ಸಹ ಸೈತಾನನಂತೆ ತಾವೇ ಎಲ್ಲರಿಗಿಂತ ಹೆಚ್ಚು ಎಂಬ ಅಹಂಕಾರದ ಮನೋಭಾವವನ್ನು ತೋರಿಸುತ್ತಿದ್ದಾರೆ. ಸೈತಾನನಿಗೆ ಅಹಂಕಾರ ಎಷ್ಟರ ಮಟ್ಟಿಗೆ ತಲೆಗೇರಿತ್ತೆಂದರೆ ‘ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸು’ ಎಂದು ಯೇಸುವಿಗೇ ಹೇಳಿದನು! ಯಾರನ್ನು ಉಪಯೋಗಿಸಿ ದೇವರು ಎಲ್ಲವನ್ನು ಸೃಷ್ಟಿಮಾಡಿದನೋ ಆ ಯೇಸುವಿಗೇ ಹೇಳಿದನು! (ಮತ್ತಾ. 4:8, 9; ಕೊಲೊ. 1:15, 16) ತಮ್ಮ ಬಗ್ಗೆ ತಾವೇ ಹೆಚ್ಚು ಪ್ರಾಮುಖ್ಯತೆ ಕೊಡುವವರು ದೇವರ ದೃಷ್ಟಿಯಲ್ಲಿ ಮೂರ್ಖರು ಆಗಿದ್ದಾರೆ.

ಸ್ವಪ್ರೇಮದ ಬಗ್ಗೆ ದೇವರಿಗಿರುವ ನೋಟ

14. ನಮ್ಮ ಬಗ್ಗೆ ನಾವು ಸರಿಯಾದ ನೋಟ ಇಟ್ಟುಕೊಳ್ಳಲು ರೋಮನ್ನರಿಗೆ 12:3 ಹೇಗೆ ಸಹಾಯ ಮಾಡುತ್ತದೆ?

14 ನಮ್ಮ ಬಗ್ಗೆ ನಾವು ಸರಿಯಾದ ನೋಟ ಇಟ್ಟುಕೊಳ್ಳಲು ಬೈಬಲ್‌ ಸಹಾಯ ಮಾಡುತ್ತದೆ. ನಮ್ಮನ್ನು ನಾವು ಸ್ವಲ್ಪಮಟ್ಟಿಗೆ ಪ್ರೀತಿಸುವುದು ತಪ್ಪಲ್ಲ ಎಂದು ಬೈಬಲ್‌ ಹೇಳುತ್ತದೆ. “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂದು ಯೇಸು ಹೇಳಿದ್ದನ್ನು ಗಮನಿಸಿ. ಅದರರ್ಥ ನಮ್ಮ ಅಗತ್ಯಗಳಿಗೆ ನಾವು ಎಷ್ಟು ಬೇಕೋ ಅಷ್ಟು ಗಮನ ಕೊಡಬೇಕು ಎಂದಾಗಿದೆ. (ಮತ್ತಾ. 19:19) ಆದರೆ ಬೇರೆಯವರಿಗಿಂತ ನಾವೇ ಶ್ರೇಷ್ಠ ಅಥವಾ ಹೆಚ್ಚು ಎಂಬ ಮನೋಭಾವ ನಮಗೆ ಇರಬಾರದು ಎಂದು ಬೈಬಲ್‌ ಕಲಿಸುತ್ತದೆ. ಬದಲಿಗೆ ಅದು ಹೇಳುವುದು: “ಕಲಹಶೀಲ ಮನೋಭಾವದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ದೀನಮನಸ್ಸಿನಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸಿರಿ.”—ಫಿಲಿ. 2:3; ರೋಮನ್ನರಿಗೆ 12:3 ಓದಿ.

15. ಸ್ವಪ್ರೇಮದ ಬಗ್ಗೆ ಬೈಬಲ್‌ ಕೊಡುವ ಸಲಹೆ ಯಾಕೆ ಉತ್ತಮ?

15 ಈ ಲೋಕದಲ್ಲಿ ಬುದ್ಧಿವಂತರು ಅಂತ ಅನಿಸಿಕೊಂಡಿರುವ ಅನೇಕರು ಸ್ವಪ್ರೇಮದ ಬಗ್ಗೆ ಬೈಬಲ್‌ ಕೊಡುವ ಸಲಹೆಯನ್ನು ಹಂಗಿಸುತ್ತಾರೆ. ಅವರ ಪ್ರಕಾರ, ನಾವು ಒಂದುವೇಳೆ ಬೇರೆಯವರನ್ನು ನಮಗಿಂತ ಶ್ರೇಷ್ಠರು ಅಂತ ಭಾವಿಸಿದರೆ ನಾವು ‘ಬಕ್ರಾ’ ಅಂತ ಜನ ಅಂದುಕೊಳ್ಳುತ್ತಾರೆ ಅಥವಾ ನಮ್ಮನ್ನು ಅವರು ಬಳಸಿಕೊಳ್ಳುತ್ತಾರೆ. ಸ್ವಪ್ರೇಮಕ್ಕೆ ತುಂಬಾನೇ ಕುಮ್ಮಕ್ಕು ಕೊಡುತ್ತಿರುವ ಈ ಲೋಕದ ಪರಿಸ್ಥಿತಿ ಇವತ್ತು ಏನಾಗಿದೆ? ನಿಮಗೆ ಏನನಿಸುತ್ತದೆ? ಸ್ವಾರ್ಥಿಗಳು ನೆಮ್ಮದಿಯಿಂದ ಇದ್ದಾರಾ? ಅವರ ಕುಟುಂಬದಲ್ಲಿ ಸಂತೋಷ ಇದೆಯಾ? ಅವರಿಗೆ ನಿಜ ಸ್ನೇಹಿತರು ಇದ್ದಾರಾ? ಅವರಿಗೆ ಯೆಹೋವನೊಟ್ಟಿಗೆ ಒಳ್ಳೇ ಸಂಬಂಧ ಇದೆಯಾ? ಇದನ್ನೆಲ್ಲಾ ನೋಡುವಾಗ ಯಾವುದು ಉತ್ತಮ ಅಂತ ನಿಮಗನಿಸುತ್ತದೆ? ಲೋಕದ ವಿವೇಕನಾ ಅಥವಾ ದೇವರ ವಾಕ್ಯದಲ್ಲಿರುವ ವಿವೇಕನಾ?

16-17. ನಾವು ಯಾವುದಕ್ಕಾಗಿ ಯೆಹೋವನಿಗೆ ಆಭಾರಿಗಳು? ಯಾಕೆ?

16 ಲೋಕದಲ್ಲಿ ಬುದ್ಧಿವಂತರು ಅಂತ ಅನಿಸಿಕೊಂಡವರು ಹೇಳಿದಂತೆ ಜನ ನಡೆದರೆ ಅವರ ಪರಿಸ್ಥಿತಿ ಹೇಗಿರುತ್ತೆ? ದಾರಿತಪ್ಪಿ ಹೋದ ಒಬ್ಬ ಪ್ರವಾಸಿ ಸರಿಯಾದ ದಾರಿ ಯಾವುದು ಎಂದು ತನ್ನ ಹಾಗೆ ದಾರಿತಪ್ಪಿದ ಇನ್ನೊಬ್ಬ ಪ್ರವಾಸಿಯ ಹತ್ತಿರ ಕೇಳಿದ ಹಾಗೆ ಇರುತ್ತೆ. ಯೇಸು ತನ್ನ ಕಾಲದಲ್ಲಿ ಬುದ್ಧಿವಂತರು ಅನಿಸಿಕೊಂಡವರ ಬಗ್ಗೆ ಹೀಗಂದನು: “ಅವರು ಕುರುಡ ಮಾರ್ಗದರ್ಶಕರು. ಒಬ್ಬ ಕುರುಡನು ಮತ್ತೊಬ್ಬ ಕುರುಡನಿಗೆ ದಾರಿತೋರಿಸುವಲ್ಲಿ ಅವರಿಬ್ಬರೂ ಹೊಂಡದಲ್ಲಿ ಬೀಳುವರು.” (ಮತ್ತಾ. 15:14) ನಿಜವಾಗಲೂ, ಈ ಲೋಕದ ವಿವೇಕ ದೇವರ ವಿವೇಕದ ಮುಂದೆ ಮೂರ್ಖತನವಾಗಿದೆ.

ಯೆಹೋವನ ಸೇವಕರಿಗೆ ಆತನ ಸೇವೆಯಲ್ಲಿ ಕಳೆದ ಸಮಯವನ್ನು ನೋಡುವಾಗ ತೃಪ್ತಿ ಸಿಗುತ್ತದೆ (ಪ್ಯಾರ 17 ನೋಡಿ) *

17 ಬೈಬಲಲ್ಲಿರುವ ವಿವೇಕ ತುಂಬಿದ ಮಾತುಗಳು ಯಾವಾಗಲೂ ‘ಬೋಧಿಸುವುದಕ್ಕೂ ಖಂಡಿಸುವುದಕ್ಕೂ ವಿಷಯಗಳನ್ನು ಸರಿಪಡಿಸುವುದಕ್ಕೂ ನೀತಿಯಲ್ಲಿ ಶಿಸ್ತುಗೊಳಿಸುವುದಕ್ಕೂ ಉಪಯುಕ್ತವಾಗಿವೆ.’ (2 ತಿಮೊ. 3:16) ತನ್ನ ಸಂಘಟನೆಯ ಮೂಲಕ ಈ ಲೋಕದ ಮೂರ್ಖತನದಿಂದ ನಮ್ಮನ್ನು ಕಾಪಾಡುತ್ತಿರುವುದಕ್ಕೆ ನಾವು ಯೆಹೋವನಿಗೆ ಎಷ್ಟು ಆಭಾರಿ! (ಎಫೆ. 4:14) ಆತನ ವಾಕ್ಯದ ಪ್ರಕಾರ ಜೀವಿಸಲು ನಮಗೆ ಆಧ್ಯಾತ್ಮಿಕ ಆಹಾರ ಕೊಡುತ್ತಿದ್ದಾನೆ. ಬೈಬಲಿಂದ ಸಿಗುವ ವಿವೇಕದಲ್ಲಿ ಯಾವುದೇ ಲೋಪ-ದೋಷ ಇಲ್ಲ. ಇದರ ಮಾರ್ಗದರ್ಶನ ನಮಗೆ ಸಿಗುತ್ತಾ ಇರುವುದು ಒಂದು ದೊಡ್ಡ ಸುಯೋಗ!

ಗೀತೆ 65 “ಇದೇ ಮಾರ್ಗ”

^ ಪ್ಯಾರ. 5 ಯೆಹೋವನೊಬ್ಬನಿಗೇ ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸಲು ಸಾಧ್ಯ ಎಂದು ಈ ಲೇಖನ ತೋರಿಸಿಕೊಡುತ್ತೆ. ಲೋಕದ ವಿವೇಕದ ಪ್ರಕಾರ ಜೀವಿಸಿದರೆ ಸಮಸ್ಯೆ ಎದುರಾಗುತ್ತೆ, ಆದರೆ ದೇವರ ವಿವೇಕದ ಪ್ರಕಾರ ಜೀವಿಸಿದರೆ ಪ್ರಯೋಜನ ಸಿಗುತ್ತೆ ಎಂದೂ ಈ ಲೇಖನದಲ್ಲಿ ನೋಡಲಿದ್ದೇವೆ.

^ ಪ್ಯಾರ. 9 ಉದಾಹರಣೆಗೆ, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು (ಇಂಗ್ಲಿಷ್‌) ಸಂಪುಟ 1, ಅಧ್ಯಾ. 24,25,26 ಮತ್ತು ಸಂಪುಟ 2 ಅಧ್ಯಾ. 4-5 ಮತ್ತು ಯುವಜನರ 10 ಪ್ರಶ್ನೆಗಳಿಗೆ ಉತ್ತರ ಕಿರುಹೊತ್ತಗೆಯ ಪ್ರಶ್ನೆ 7 ನ್ನು ನೋಡಿ.

^ ಪ್ಯಾರ. 50 ಚಿತ್ರ ವಿವರಣೆ: ಒಬ್ಬ ಕ್ರೈಸ್ತ ದಂಪತಿಯ ಜೀವನದ ಕೆಲವು ಗಳಿಗೆಗಳು. ಸಹೋದರ ಮತ್ತು ಅವರ ಪತ್ನಿ 1960 ರ ದಶಕದಲ್ಲಿ ಸುವಾರ್ತೆ ಸಾರುತ್ತಿದ್ದಾರೆ.

^ ಪ್ಯಾರ. 52 ಚಿತ್ರ ವಿವರಣೆ: 1980 ರ ದಶಕದಲ್ಲಿ ಆ ಸಹೋದರ ಹುಷಾರಿಲ್ಲದ ತನ್ನ ಪತ್ನಿಯನ್ನು ನೋಡಿಕೊಳ್ಳುತ್ತಿದ್ದಾರೆ. ಇದನ್ನು ಅವರ ಪುಟ್ಟ ಮಗಳು ನೋಡುತ್ತಿದ್ದಾಳೆ.

^ ಪ್ಯಾರ. 54 ಚಿತ್ರ ವಿವರಣೆ: ಇಂದು ಆ ದಂಪತಿ ಯೆಹೋವನ ಸೇವೆಯಲ್ಲಿ ಕಳೆದ ಸವಿನೆನಪುಗಳನ್ನು ಖುಷಿಯಿಂದ ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಮಗಳು ಮತ್ತು ಅವಳ ಕುಟುಂಬ ಅಪ್ಪ-ಅಮ್ಮನೊಟ್ಟಿಗೆ ಸಂತೋಷಿಸುತ್ತಿದ್ದಾರೆ.