ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 22

ಹೇಗೆ ಅಧ್ಯಯನ ಮಾಡಬೇಕು?

ಹೇಗೆ ಅಧ್ಯಯನ ಮಾಡಬೇಕು?

‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿರಿ.’ —ಫಿಲಿ. 1:10.

ಗೀತೆ 70 ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿರಿ’

ಕಿರುನೋಟ *

1. ಕೆಲವರಿಗೆ ಅಧ್ಯಯನ ಮಾಡಲು ಯಾಕೆ ಕಷ್ಟ ಆಗಬಹುದು?

ಇವತ್ತು ಜೀವನ ಮಾಡುವುದು ಅಷ್ಟು ಸುಲಭ ಅಲ್ಲ. ಜೀವನ ಮಾಡಕ್ಕೆ ಬೇಕಾದ ದುಡ್ಡನ್ನು ಸಂಪಾದಿಸಲು ತುಂಬ ಕಷ್ಟಪಡಬೇಕಾಗುತ್ತದೆ. ಮನೆಗೆ ಬೇಕಾದದ್ದನ್ನು ತಂದುಹಾಕಲು ನಮ್ಮ ಅನೇಕ ಸಹೋದರರು ತುಂಬ ತಾಸು ಕೆಲಸ ಮಾಡಬೇಕಾಗುತ್ತದೆ. ಇನ್ನೆಷ್ಟೋ ಸಹೋದರರಿಗೆ ಕೆಲಸಕ್ಕೆ ಹೋಗಿ-ಬರಕ್ಕೆನೇ ತುಂಬ ತಾಸು ಹಿಡಿಯುತ್ತದೆ. ನಮ್ಮ ಸಹೋದರರಲ್ಲಿ ಎಷ್ಟೋ ಮಂದಿ ದೈಹಿಕವಾಗಿ ದಣಿಸುವಂಥ ಕೆಲಸ ಮಾಡುತ್ತಾರೆ. ಕೆಲಸಕ್ಕೆ ಹೋಗಿ ಬರುವಷ್ಟರಲ್ಲಿ ಈ ಸಹೋದರ-ಸಹೋದರಿಯರು ಸೋತು-ಸುಣ್ಣ ಆಗಿರುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಅವರು ಅಧ್ಯಯನ ಮಾಡಬೇಕೆಂದು ನೆನಸುವುದು ದೂರದ ಮಾತಾಗಿಬಿಡುತ್ತದೆ.

2. ನೀವು ಯಾವಾಗ ಅಧ್ಯಯನ ಮಾಡುತ್ತೀರಿ?

2 ನಮಗೆ ಕಷ್ಟ ಆದರೂ ದೇವರ ವಾಕ್ಯವನ್ನು ಮತ್ತು ನಮ್ಮ ಸಂಘಟನೆಯಿಂದ ಸಿಗುವ ಕ್ರೈಸ್ತ ಪ್ರಕಾಶನಗಳನ್ನು ಅಧ್ಯಯನ ಮಾಡಲು ಸಮಯ ತಗೊಳ್ಳಲೇಬೇಕು. ಇದನ್ನು ಮಾಡಿದಾಗಲೇ ಯೆಹೋವನೊಟ್ಟಿಗಿರುವ ನಮ್ಮ ಸಂಬಂಧ ಬಲವಾಗುತ್ತದೆ ಮತ್ತು ನಮಗೆ ನಿತ್ಯಜೀವ ಸಿಗುತ್ತದೆ. (1 ತಿಮೊ. 4:15, 16) ಕೆಲವರು ಬೆಳಗ್ಗೆ ಬೇಗ ಎದ್ದು ಅಧ್ಯಯನ ಮಾಡುತ್ತಾರೆ. ಯಾಕೆಂದರೆ ಆಗ ಸದ್ದು-ಗದ್ದಲ ಇರಲ್ಲ ಮತ್ತು ನಿದ್ದೆ ಮಾಡಿ ಸುಸ್ತೆಲ್ಲಾ ಹೋಗಿರುತ್ತದೆ. ಬೇರೆಯವರು ರಾತ್ರಿ ಮಲಗುವ ಮುಂಚೆ ಅಧ್ಯಯನ ಮಾಡುತ್ತಾರೆ. ಯಾಕೆಂದರೆ ಆಗ ಪ್ರಶಾಂತವಾಗಿರುತ್ತದೆ ಮತ್ತು ಓದಿದ್ದರ ಬಗ್ಗೆ ಧ್ಯಾನಿಸಲು ಚೆನ್ನಾಗಿರುತ್ತದೆ.

3-4. ನಮಗೆ ಸಂಘಟನೆಯಿಂದ ಸಿಗುತ್ತಿದ್ದ ಯಾವ ವಿಷಯಗಳನ್ನು ಕಮ್ಮಿ ಮಾಡಲಾಗಿದೆ? ಯಾಕೆ?

3 ಅಧ್ಯಯನ ಮಾಡಲು ಸಮಯ ಮಾಡಿಕೊಳ್ಳಬೇಕು ಅಂತ ನಿಮಗೂ ಅನಿಸುತ್ತಿರಬಹುದು. ಆದರೆ ಏನನ್ನು ಅಧ್ಯಯನ ಮಾಡಬೇಕು? ‘ಓದಕ್ಕೆ ಎಷ್ಟೋ ಇದೆ. ಎಲ್ಲಾನೂ ಓದಕ್ಕೆ ನನ್ನಿಂದ ಆಗುತ್ತಿಲ್ಲ’ ಎಂದು ನೀವು ಹೇಳಬಹುದು. ಕೆಲವರು ಆಧ್ಯಾತ್ಮಿಕ ಆಹಾರ ಅಂತ ಸಿಗುವ ಎಲ್ಲಾ ಪ್ರಕಾಶನಗಳಿಂದ ಮತ್ತು ವಿಡಿಯೋಗಳಿಂದ ಪೂರ್ತಿ ಪ್ರಯೋಜನ ಪಡೆಯುತ್ತಾರೆ. ಆದರೆ ನಮ್ಮ ಸಹೋದರರಲ್ಲಿ ಹೆಚ್ಚಿನವರಿಗೆ ಎಲ್ಲ ಪ್ರಕಾಶನಗಳಿಂದ ಪ್ರಯೋಜನ ಪಡೆಯಲು ಸಮಯ ಸಾಕಾಗುತ್ತಿಲ್ಲ. ಆಡಳಿತ ಮಂಡಲಿಗೆ ಇದು ಗೊತ್ತು. ಹಾಗಾಗಿ ಮುದ್ರಿತ ರೂಪದಲ್ಲಿ ಮತ್ತು ನಮ್ಮ ವೆಬ್‌ಸೈಟ್‌ಗಳಲ್ಲಿ ಸಿಗುವ ಮಾಹಿತಿಯನ್ನು ಕಡಿಮೆ ಮಾಡಬೇಕೆಂದು ಆಡಳಿತ ಮಂಡಲಿ ಇತ್ತೀಚೆಗೆ ತೀರ್ಮಾನಿಸಿತು.

4 ಉದಾಹರಣೆಗೆ, ನಮ್ಮ ವೆಬ್‌ಸೈಟ್‌ನಲ್ಲಿ ಮತ್ತು JW ಪ್ರಸಾರದಲ್ಲಿ ಅನೇಕ ಆಸಕ್ತಿಕರ ಅನುಭವಗಳು ಬರುವುದರಿಂದ ನಮ್ಮ ವರ್ಷ ಪುಸ್ತಕವನ್ನು ನಿಲ್ಲಿಸಲಾಯಿತು. ಸಾರ್ವಜನಿಕರಿಗೆ ಕೊಡುವ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಈಗ ವರ್ಷಕ್ಕೆ ಮೂರು-ಮೂರು ಮಾತ್ರ ಬರುತ್ತವೆ. ನಾವು ಆಧ್ಯಾತ್ಮಿಕ ವಿಷಯಗಳನ್ನು ಬಿಟ್ಟು ಬೇರೆ ವಿಷಯಗಳಿಗೆ ಹೆಚ್ಚು ಸಮಯ ಕೊಡಲಿಕ್ಕಾಗಿ ಈ ಬದಲಾವಣೆಗಳನ್ನು ಮಾಡಲಾಗಿಲ್ಲ. ‘ಹೆಚ್ಚು ಪ್ರಮುಖವಾದ ವಿಷಯಗಳಿಗೆ’ ನಾವು ಹೆಚ್ಚು ಗಮನ ಕೊಡಬೇಕೆಂದು ಮಾಡಲಾಗಿದೆ. (ಫಿಲಿ. 1:10) ಯಾವುದು ಹೆಚ್ಚು ಪ್ರಾಮುಖ್ಯವೆಂದು ತೀರ್ಮಾನಿಸುವುದು ಹೇಗೆ? ವೈಯಕ್ತಿಕ ಬೈಬಲ್‌ ಅಧ್ಯಯನದಿಂದ ನೀವು ಹೇಗೆ ಪೂರ್ತಿ ಪ್ರಯೋಜನ ಪಡೆಯಬಹುದು? ಬನ್ನಿ ನೋಡೋಣ.

ಮುಖ್ಯವಾಗಿ ಯಾವುದನ್ನು ಅಧ್ಯಯನ ಮಾಡಬೇಕು?

5-6. ನಾವು ಮುಖ್ಯವಾಗಿ ಯಾವ ಪ್ರಕಾಶನಗಳನ್ನು ಅಧ್ಯಯನ ಮಾಡಬೇಕು?

5 ನಾವು ಮುಖ್ಯವಾಗಿ ಯಾವುದನ್ನು ಅಧ್ಯಯನ ಮಾಡಬೇಕು? ನಾವು ಪ್ರತಿ ದಿನ ದೇವರ ವಾಕ್ಯವನ್ನು ಅಧ್ಯಯನ ಮಾಡಲು ಸಮಯ ತಗೊಳ್ಳುವುದು ಮುಖ್ಯ. ಲೋಕವ್ಯಾಪಕವಾಗಿ ನಾವೆಲ್ಲರೂ ಪ್ರತಿ ವಾರ ಬೈಬಲಿಂದ ಓದಬೇಕಾಗಿರುವ ಅಧ್ಯಾಯಗಳನ್ನು ಆಡಳಿತ ಮಂಡಲಿ ಕಡಿಮೆ ಮಾಡಿದೆ. ಇದರಿಂದಾಗಿ ನಾವು ಓದಿದ ವಿಷಯದ ಬಗ್ಗೆ ಧ್ಯಾನಿಸಲು ಮತ್ತು ಹೆಚ್ಚಿನ ಸಂಶೋಧನೆ ಮಾಡಲು ಸಮಯ ಸಿಗುತ್ತದೆ. ನಾವು ಪ್ರತಿ ವಾರ ಓದಬೇಕಾಗಿರುವ ಅಧ್ಯಾಯಗಳನ್ನು ಬರೀ ಓದಿ ಮುಗಿಸದೆ, ಓದಿದ ವಿಷಯ ನಮ್ಮ ಮನಸ್ಸಿಗೆ ಹೋಗಲು ಬಿಡಬೇಕು. ಆಗ ನಾವು ಯೆಹೋವನಿಗೆ ಇನ್ನಷ್ಟು ಹತ್ತಿರವಾಗುತ್ತೇವೆ.—ಕೀರ್ತ. 19:14.

6 ನಾವು ಇನ್ನು ಯಾವುದನ್ನು ಜಾಗ್ರತೆಯಿಂದ ಅಧ್ಯಯನ ಮಾಡಬೇಕು? ಕಾವಲಿನಬುರುಜು ಅಧ್ಯಯನಕ್ಕೆ ಮತ್ತು ಸಭಾ ಬೈಬಲ್‌ ಅಧ್ಯಯನಕ್ಕೆ ಚೆನ್ನಾಗಿ ತಯಾರಿ ಮಾಡಬೇಕು. ಮಧ್ಯ-ವಾರದ ಕೂಟಕ್ಕಾಗಿರುವ ಬೇರೆ ಮಾಹಿತಿಯನ್ನು ಸಹ ತಯಾರಿ ಮಾಡಬೇಕು. ಸಾರ್ವಜನಿಕರಿಗಾಗಿರುವ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಸಂಚಿಕೆ ಬಂದಾಗ ಅದನ್ನೂ ಓದಬೇಕು.

7. ನಮ್ಮ ವೆಬ್‌ಸೈಟಲ್ಲಿ ಮತ್ತು JW ಪ್ರಸಾರದಲ್ಲಿ ಬರುವ ಎಲ್ಲಾ ಮಾಹಿತಿಯನ್ನು ಓದಲು ಅಥವಾ ನೋಡಲು ಆಗಿಲ್ಲವಾದರೆ ಬೇಜಾರಾಗಬೇಕಾ?

7 ‘ಆಯ್ತು. ಆದರೆ ನಮ್ಮ ವೆಬ್‌ಸೈಟಲ್ಲಿ ಮತ್ತು JW ಪ್ರಸಾರದಲ್ಲಿ ತುಂಬ ವಿಷಯಗಳು ಬರುತ್ತದೆ. ಅದನ್ನು ಯಾವಾಗಪ್ಪಾ ಓದುವುದು ಅಥವಾ ನೋಡುವುದು?’ ಅಂತ ನೀವು ಕೇಳಬಹುದು. ಒಂದು ಉದಾಹರಣೆ ನೋಡಿ: ನೀವು ಒಂದು ಹೋಟೆಲ್‌ಗೆ ಹೋಗಿದ್ದೀರಿ. ಅಲ್ಲಿ ಬಗೆಬಗೆಯ ಊಟ ಸಿದ್ಧವಾಗಿದೆ. ನೀವು ಅಲ್ಲಿರುವ ಎಲ್ಲಾ ಊಟವನ್ನು ತಿನ್ನಲು ಆಗುತ್ತದಾ? ಇಲ್ಲ. ಕೆಲವು ಐಟಮ್ಸನ್ನು ಆರಿಸಿಕೊಂಡು ತಿಂತೀರಿ. ಅದೇ ರೀತಿ, ನಮ್ಮ ವೆಬ್‌ಸೈಟ್‌ಗಳಲ್ಲಿ ಸಿಗುವ ಎಲ್ಲಾ ಮಾಹಿತಿಯನ್ನು ನೀವು ಓದಲು ಅಥವಾ ನೋಡಲು ಆಗುತ್ತಿಲ್ಲವಾದರೆ ಚಿಂತೆ ಮಾಡಬೇಡಿ. ನಿಮ್ಮಿಂದ ಎಷ್ಟಾಗುತ್ತೋ ಅಷ್ಟನ್ನು ಓದಿ ಅಥವಾ ನೋಡಿ. ಹೇಗೆ ಅಧ್ಯಯನ ಮಾಡಬೇಕು ಮತ್ತು ಅದರಿಂದ ಹೇಗೆ ಪೂರ್ತಿ ಪ್ರಯೋಜನ ಪಡೆಯಬಹುದು ಅಂತ ಈಗ ನೋಡೋಣ.

ಅಧ್ಯಯನ ಅಂದರೆ ಪ್ರಯತ್ನ

8. (ಎ) ಕಾವಲಿನಬುರುಜು ಅಧ್ಯಯನಕ್ಕೆ ನಾವು ಹೇಗೆ ತಯಾರಿ ಮಾಡಬಹುದು? (ಬಿ) ಹೀಗೆ ಮಾಡುವುದರಿಂದ ಏನು ಪ್ರಯೋಜನ ಸಿಗುತ್ತದೆ?

8 ಅಧ್ಯಯನ ಮಾಡುವುದು ಅಂದರೆ ಓದುತ್ತಿರುವ ವಿಷಯದ ಮೇಲೆ ಗಮನ ಕೇಂದ್ರೀಕರಿಸಬೇಕು ಮತ್ತು ಅದರಿಂದ ಏನಾದರೂ ಕಲಿಯಲು ಪ್ರಯತ್ನಿಸಬೇಕು. ಮಾಹಿತಿಯನ್ನು ಬರೀ ಮೇಲು-ಮೇಲೆ ಓದುತ್ತಾ ಉತ್ತರಗಳಿಗೆ ಅಡಿಗೆರೆ ಹಾಕುವುದು ಅಧ್ಯಯನ ಆಗಲ್ಲ. ಉದಾಹರಣೆಗೆ, ಕಾವಲಿನಬುರುಜು ಅಧ್ಯಯನಕ್ಕೆ ನೀವು ತಯಾರಾಗಬೇಕು ಅಂತ ಇಟ್ಟುಕೊಳ್ಳಿ. ಮೊದಲು ಲೇಖನದ ಆರಂಭದಲ್ಲಿ ಕೊಡಲಾಗಿರುವ ಕಿರುನೋಟಕ್ಕೆ ಗಮನ ಕೊಡಿ. ನಂತರ ಲೇಖನದ ಶೀರ್ಷಿಕೆ, ಉಪ-ಶೀರ್ಷಿಕೆಗಳು ಮತ್ತು ಪುನರವಲೋಕನ ಮಾಡಲು ಕೊಟ್ಟಿರುವ ಪ್ರಶ್ನೆಗಳು ಏನೆಂದು ನೋಡಿ, ಅದರ ಬಗ್ಗೆ ಸ್ವಲ್ಪ ಯೋಚಿಸಿ. ಆಮೇಲೆ ಲೇಖನವನ್ನು ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಸಾಮಾನ್ಯವಾಗಿ ಪ್ರತಿ ಪ್ಯಾರದ ಮೊದಲನೇ ವಾಕ್ಯ ಆ ಪ್ಯಾರದಲ್ಲಿ ಏನಿದೆ ಅಂತ ಹೇಳುತ್ತದೆ. ಅದಕ್ಕೆ ಗಮನ ಕೊಡಿ. ಉಪ-ಶೀರ್ಷಿಕೆಗೆ ಹಾಗೂ ಲೇಖನದ ಮುಖ್ಯ ವಿಷಯಕ್ಕೆ ಪ್ರತಿ ಪ್ಯಾರ ಹೇಗೆ ಸಂಬಂಧಿಸಿದೆ ಎಂದು ಯೋಚಿಸಿ. ನಿಮಗೆ ಪರಿಚಯವಿಲ್ಲದ ಪದಗಳನ್ನು ಮತ್ತು ನೀವು ಹೆಚ್ಚು ಸಂಶೋಧನೆ ಮಾಡಿ ತಿಳುಕೊಳ್ಳಲು ಬಯಸುವ ಅಂಶಗಳನ್ನು ಗುರುತಿಸಿ.

9. (ಎ) ಕಾವಲಿನಬುರುಜು ಅಧ್ಯಯನಕ್ಕೆ ತಯಾರಿ ಮಾಡುವಾಗ ಯಾಕೆ ವಚನಗಳಿಗೆ ವಿಶೇಷ ಗಮನ ಕೊಡಬೇಕು? (ಬಿ) ಇದನ್ನು ಹೇಗೆ ಮಾಡುವುದು? (ಸಿ) ಯೆಹೋಶುವ 1:8​ಕ್ಕನುಸಾರ, ಲೇಖನದಲ್ಲಿರುವ ವಚನಗಳನ್ನು ಓದಿದರೆ ಸಾಕಾ?

9 ನಿಜ ಹೇಳಬೇಕೆಂದರೆ, ಕಾವಲಿನಬುರುಜು ಅಧ್ಯಯನ ಬೈಬಲಿನ ಅಧ್ಯಯನ ಆಗಿದೆ. ಹಾಗಾಗಿ ಅಧ್ಯಯನ ಲೇಖನದಲ್ಲಿ ಕೊಟ್ಟಿರುವ ವಚನಗಳಿಗೆ ಗಮನ ಕೊಡಿ. ಅದರಲ್ಲೂ “ಓದಿ” ಎಂದು ಕೊಟ್ಟಿರುವ ವಚನಗಳಿಗೆ ವಿಶೇಷ ಗಮನ ಕೊಡಿ. ಪ್ಯಾರದಲ್ಲಿರುವ ಮುಖ್ಯ ವಿಚಾರಕ್ಕೂ ಕೊಟ್ಟಿರುವ ವಚನದಲ್ಲಿರುವ ಪದಗಳಿಗೂ ಅಥವಾ ವಾಕ್ಯಗಳಿಗೂ ಏನು ಸಂಬಂಧ ಎಂದು ನೋಡಿ. ಅಷ್ಟೇ ಅಲ್ಲ, ನೀವು ಓದುವ ವಚನಗಳ ಬಗ್ಗೆ ಧ್ಯಾನಿಸಲು ಸಮಯ ತಗೊಳ್ಳಿ. ವಚನದಲ್ಲಿರುವ ವಿಷಯಗಳನ್ನು ನಿಮ್ಮ ಜೀವನದಲ್ಲಿ ಹೇಗೆ ಅನ್ವಯಿಸಿಕೊಳ್ಳಬಹುದೆಂದು ಯೋಚಿಸಿ.—ಯೆಹೋಶುವ 1:8 ಓದಿ.

ಹೆತ್ತವರೇ, ಹೇಗೆ ಅಧ್ಯಯನ ಮಾಡಬೇಕೆಂದು ನಿಮ್ಮ ಮಕ್ಕಳಿಗೆ ಕಲಿಸಿ (ಪ್ಯಾರ 10 ನೋಡಿ) *

10. ಇಬ್ರಿಯ 5:14 ಹೇಳುವ ಪ್ರಕಾರ, ಕುಟುಂಬ ಆರಾಧನೆಯ ಸಮಯದಲ್ಲಿ ಹೆತ್ತವರು ಮಕ್ಕಳಿಗೆ ಅಧ್ಯಯನ ಮತ್ತು ಸಂಶೋಧನೆ ಮಾಡಲು ಯಾಕೆ ಕಲಿಸಬೇಕು?

10 ಕುಟುಂಬ ಆರಾಧನೆಯನ್ನು ಮಕ್ಕಳಿಗೆ ಹಿಡಿಸುವ ರೀತಿ ನಡೆಸಬೇಕೆಂಬ ಆಸೆ ಹೆತ್ತವರಿಗೆ ಇರುತ್ತದೆ. ಇದು ತಪ್ಪಲ್ಲ. ಆದರೆ ಪ್ರತಿ ವಾರ ಏನಾದರೂ ಆಸಕ್ತಿಕರವಾಗಿ ಮಾಡಬೇಕೆಂದು ಯೋಚಿಸುವ ಅವಶ್ಯಕತೆ ಇಲ್ಲ. ಕುಟುಂಬ ಆರಾಧನೆಯಲ್ಲಿ JW ಪ್ರಸಾರದಲ್ಲಿ ಪ್ರತಿ ತಿಂಗಳು ಬರುವ ಕಾರ್ಯಕ್ರಮವನ್ನು ನೋಡಬಹುದು, ನೋಹನ ನಾವೆಯ ಕಿರುಮಾದರಿಯನ್ನು ಕಟ್ಟಬಹುದು. ಇಂಥ ವಿಷಯಗಳು ಮಕ್ಕಳಿಗೆ ಇಷ್ಟವಾಗುತ್ತದೆ. ಆದರೆ ಅವರು ಹೇಗೆ ಅಧ್ಯಯನ ಮಾಡಬೇಕೆಂದು ಕಲಿಯುವುದು ಸಹ ಮುಖ್ಯ. ಕೂಟಗಳಿಗೆ ಹೇಗೆ ತಯಾರಿ ಮಾಡಬೇಕು ಅಥವಾ ಶಾಲೆಯಲ್ಲಿ ಎದುರಾಗಿರುವ ಸವಾಲನ್ನು ನಿಭಾಯಿಸಲು ಹೇಗೆ ಸಂಶೋಧನೆ ಮಾಡಬೇಕೆಂದು ಮಕ್ಕಳು ಕಲಿಯಬೇಕು. (ಇಬ್ರಿಯ 5:14 ಓದಿ.) ಮಕ್ಕಳು ಮನೆಯಲ್ಲಿ ಕೆಲವು ವಿಷಯಗಳ ಬಗ್ಗೆ ಅಧ್ಯಯನ ಮಾಡಲು ಕಲಿತರೆ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ಹೆಚ್ಚು ಗಮನ ಕೊಡಲು ಕಲಿಯುತ್ತಾರೆ. ಇಂಥ ಕೂಟಗಳಲ್ಲಿ ಯಾವಾಗಲೂ ವಿಡಿಯೋಗಳು ಇರಲಿಕ್ಕಿಲ್ಲ. ಎಷ್ಟೊತ್ತು ಅಧ್ಯಯನ ಮಾಡಬೇಕು ಎಂಬುದು ಮಕ್ಕಳ ವಯಸ್ಸು ಮತ್ತು ವ್ಯಕ್ತಿತ್ವದ ಮೇಲೆ ಹೊಂದಿಕೊಂಡಿದೆ.

11. ನಾವು ನಮ್ಮ ಬೈಬಲ್‌ ವಿದ್ಯಾರ್ಥಿಗಳಿಗೆ ವೈಯಕ್ತಿಕ ಅಧ್ಯಯನ ಮಾಡಲು ಕಲಿಸುವುದು ಯಾಕೆ ಪ್ರಾಮುಖ್ಯ?

11 ನಮ್ಮ ಬೈಬಲ್‌ ವಿದ್ಯಾರ್ಥಿಗಳು ಸಹ ಹೇಗೆ ಅಧ್ಯಯನ ಮಾಡಬೇಕೆಂದು ಕಲಿಯಬೇಕು. ಅವರು ಹೊಸದಾಗಿ ಸತ್ಯ ಕಲಿಯುತ್ತಿರುವಾಗ, ಬೈಬಲ್‌ ಅಧ್ಯಯನಕ್ಕೆ ಅಥವಾ ಕೂಟಗಳಿಗೆ ತಯಾರಾಗಲು ಉತ್ತರಗಳಿಗೆ ಅಡಿಗೆರೆ ಹಾಕಿದ್ದರೆ ನಮಗೆ ತುಂಬ ಖುಷಿಯಾಗುತ್ತದೆ. ಆದರೆ ನಾವು ನಮ್ಮ ವಿದ್ಯಾರ್ಥಿಗಳಿಗೆ ಸಂಶೋಧನೆ ಮಾಡುವುದು ಹೇಗೆ, ಅವರಾಗಿಯೇ ಅಧ್ಯಯನ ಮಾಡುವುದು ಹೇಗೆ ಎಂದು ಸಹ ಕಲಿಸಬೇಕು. ಆಗ ಏನಾದರೂ ಸಮಸ್ಯೆ ಎದುರಾದರೆ ಅವರು ತಕ್ಷಣ ಸಭೆಯಲ್ಲಿರುವವರ ಸಲಹೆ ಪಡೆಯಲು ಹೋಗಲ್ಲ. ನಮ್ಮ ಪ್ರಕಾಶನಗಳಲ್ಲಿ ತಾವೇ ಸ್ವತಃ ಸಂಶೋಧನೆ ಮಾಡಿ ಅದರಿಂದ ಸಲಹೆಗಳನ್ನು ಪಡೆದು ಅನ್ವಯಿಸಿಕೊಳ್ಳುತ್ತಾರೆ.

ಒಂದು ಗುರಿ ಇರಲಿ

12. ಅಧ್ಯಯನ ಮಾಡಲು ನಮಗೆ ಯಾವ ಗುರಿಗಳು ಇರಬೇಕು?

12 ನಿಮಗೆ ಅಧ್ಯಯನ ಮಾಡಲು ಇಷ್ಟ ಇಲ್ಲ ಅಂದರೆ ‘ನಾನು ಯಾವತ್ತೂ ಅಧ್ಯಯನವನ್ನು ಆನಂದಿಸಲ್ಲ’ ಎಂದು ನಿಮಗೆ ಅನಿಸಬಹುದು. ಆದರೆ ಅಧ್ಯಯನವನ್ನು ಆನಂದಿಸಲು ಸಾಧ್ಯ. ಆರಂಭದಲ್ಲಿ ಸ್ವಲ್ಪ ಸಮಯ ಕೂತು ಅಧ್ಯಯನ ಮಾಡಿ. ಹೋಗುತ್ತಾ-ಹೋಗುತ್ತಾ ಅಧ್ಯಯನ ಮಾಡಲು ಹೆಚ್ಚು ಸಮಯ ತಗೊಳ್ಳಿ. ಮನಸ್ಸಲ್ಲಿ ಒಂದು ಗುರಿ ಇರಲಿ. ಯೆಹೋವನಿಗೆ ಹತ್ತಿರ ಆಗುವುದೇ ಮೊಟ್ಟಮೊದಲ ಗುರಿ ಆಗಿರಬೇಕು. ಕೆಲವೊಮ್ಮೆ ಯಾರಾದರೂ ಕೇಳಿದ ಪ್ರಶ್ನೆಗೆ ಉತ್ತರ ಕಂಡುಹಿಡಿಯುವ ಗುರಿಯನ್ನು ಅಥವಾ ನಾವು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಹೆಚ್ಚು ಸಂಶೋಧನೆ ಮಾಡುವ ಗುರಿಯನ್ನು ಇಡಬಹುದು.

13. (ಎ) ಶಾಲೆಯಲ್ಲಿ ಓದುತ್ತಿರುವ ಮಕ್ಕಳು ತಮ್ಮ ನಂಬಿಕೆಗಳ ಬಗ್ಗೆ ಮಾತಾಡಲು ಏನೇನು ಮಾಡಬೇಕು? (ಬಿ) ಕೊಲೊಸ್ಸೆ 4:6​ರಲ್ಲಿರುವ ಸಲಹೆಯನ್ನು ನೀವು ಹೇಗೆ ಅನ್ವಯಿಸಿಕೊಳ್ಳಬಹುದು?

13 ಒಂದು ಉದಾಹರಣೆ ನೋಡೋಣ. ನೀವಿನ್ನೂ ಶಾಲೆಯಲ್ಲಿ ಓದುತ್ತಿದ್ದೀರಾ? ಹಾಗಾದರೆ ನಿಮ್ಮ ಜೊತೆ ಓದುವ ಮಕ್ಕಳು ಹುಟ್ಟುಹಬ್ಬ ಆಚರಿಸುವುದನ್ನು ನೋಡಿರುತ್ತೀರಿ. ನೀವು ಯಾಕೆ ಹುಟ್ಟುಹಬ್ಬ ಮಾಡಲ್ಲ ಅಥವಾ ಬೇರೆಯವರು ಮಾಡುವಾಗ ನೀವು ಯಾಕೆ ಅದರಲ್ಲಿ ಭಾಗವಹಿಸಲ್ಲ ಎಂದು ಬೈಬಲಿಂದ ವಿವರಿಸಬೇಕು ಅಂತ ನಿಮಗೆ ಅನಿಸಿರುತ್ತದೆ. ಆದರೆ ಏನು ಹೇಳುವುದು, ಹೇಗೆ ಹೇಳುವುದು ಅಂತ ಗೊತ್ತಾಗದೇ ಸುಮ್ಮನೇ ಇರುತ್ತೀರಿ. ಇದು ಸಂಶೋಧನೆ ಮಾಡಲು ಒಂದು ಒಳ್ಳೇ ಅವಕಾಶ. ಎರಡು ಗುರಿಗಳನ್ನು ಮನಸ್ಸಲ್ಲಿಟ್ಟು ಸಂಶೋಧನೆ ಮಾಡಬಹುದು: (1) ಹುಟ್ಟುಹಬ್ಬ ಮಾಡುವುದು ದೇವರಿಗೆ ಇಷ್ಟ ಆಗಲ್ಲ ಅಂತ ನಿಮಗೆ ನೀವೇ ಮನವರಿಕೆ ಮಾಡಿಕೊಳ್ಳುವುದು ಮತ್ತು (2) ನೀವು ನಂಬುವ ವಿಷಯವನ್ನು ಬೇರೆಯವರಿಗೆ ಚೆನ್ನಾಗಿ ವಿವರಿಸಲು ಕಲಿಯುವುದು. (ಮತ್ತಾ. 14:6-11; 1 ಪೇತ್ರ 3:15) ಮೊದಲು ನೀವು ಯೋಚಿಸಬೇಕಾದ ಪ್ರಶ್ನೆ ಏನೆಂದರೆ, ‘ಹುಟ್ಟುಹಬ್ಬ ಮಾಡಬೇಕು ಅನ್ನುವುದಕ್ಕೆ ನನ್ನ ಜೊತೆ ಓದುವ ಮಕ್ಕಳು ಯಾವ ಕಾರಣ ಕೊಡುತ್ತಾರೆ?’ ಆಮೇಲೆ ಈ ವಿಷಯದ ಬಗ್ಗೆ ನಮ್ಮ ಪ್ರಕಾಶನಗಳು ಏನು ಹೇಳುತ್ತವೆ ಎಂದು ಸಂಶೋಧನೆ ಮಾಡಿ. ಆಗ ನಿಮ್ಮ ನಂಬಿಕೆಗಳ ಬಗ್ಗೆ ಮಾತಾಡುವುದು ಅಷ್ಟೊಂದು ಕಷ್ಟ ಅಲ್ಲ ಅಂತ ನಿಮಗೆ ಅನಿಸುತ್ತದೆ. ಹೆಚ್ಚಾಗಿ ಜನರು ‘ಎಲ್ಲರೂ ಹುಟ್ಟುಹಬ್ಬ ಮಾಡುತ್ತಾರೆ, ನಾನೂ ಮಾಡುತ್ತೇನೆ’ ಅಂತ ಮಾಡುತ್ತಿರುತ್ತಾರೆ. ಸಂಶೋಧನೆ ಮಾಡುವಾಗ ನಿಮಗೆ ಒಂದೆರಡು ಅಂಶಗಳು ಸಿಕ್ಕಿದರೂ ಸಾಕು, ಯಾರಾದರೂ ನಿಜವಾಗಲೂ ತಿಳುಕೊಳ್ಳಲು ಬಯಸಿದರೆ ಅವರಿಗೆ ವಿವರಿಸಲು ಸಾಧ್ಯವಾಗುತ್ತದೆ.—ಕೊಲೊಸ್ಸೆ 4:6 ಓದಿ.

ಹೆಚ್ಚು ಕಲೀಬೇಕೆಂಬ ಆಸೆ ಇರಲಿ

14-16. (ಎ) ಒಂದು ಬೈಬಲ್‌ ಪುಸ್ತಕದ ಬಗ್ಗೆ ಹೆಚ್ಚು ತಿಳುಕೊಳ್ಳಲು ಏನು ಮಾಡಬೇಕು? (ಬಿ) ಪ್ಯಾರದಲ್ಲಿ ಕೊಟ್ಟಿರುವ ವಚನಗಳನ್ನು ಉಪಯೋಗಿಸುತ್ತಾ, ಆಮೋಸ ಪುಸ್ತಕದ ಬಗ್ಗೆ ಹೇಗೆ ಹೆಚ್ಚು ಮಾಹಿತಿ ಪಡೆಯಬಹುದೆಂದು ವಿವರಿಸಿ. ( “ಬೈಬಲ್‌ ದಾಖಲೆಯನ್ನು ಕಣ್ಮುಂದೆ ತನ್ನಿ” ಎಂಬ ಚೌಕ ಸಹ ನೋಡಿ.)

14 ಒಂದು ಕೂಟದಲ್ಲಿ ನಾವು ಹೀಬ್ರು ಶಾಸ್ತ್ರಗ್ರಂಥದ ಕೊನೆಯಲ್ಲಿ ಬರುವ ಸಣ್ಣ ಪ್ರವಾದನಾ ಪುಸ್ತಕಗಳಲ್ಲಿ (ಹೋಶೇಯ – ಮಲಾಕಿಯ) ಒಂದು ಪುಸ್ತಕವನ್ನು ಓದಲಿಕ್ಕಿದ್ದೇವೆ ಎಂದು ನೆನಸಿ. ಬಹುಶಃ ಆ ಪುಸ್ತಕವನ್ನು ಬರೆದ ವ್ಯಕ್ತಿಯ ಬಗ್ಗೆ ನಿಮಗೆ ಹೆಚ್ಚು ಗೊತ್ತಿಲ್ಲ ಅಂತನೂ ನೆನಸಿ. ಮೊದಲು ಆ ವ್ಯಕ್ತಿ ಏನು ಬರೆದನು ಅಂತ ತಿಳುಕೊಳ್ಳುವ ಆಸೆಯನ್ನು ಹೆಚ್ಚಿಸಿಕೊಳ್ಳಬೇಕು. ಇದನ್ನು ಹೇಗೆ ಮಾಡಬಹುದು?

15 ಈ ಪ್ರಶ್ನೆಗಳ ಬಗ್ಗೆ ಯೋಚಿಸಿ: ‘ಈ ಪುಸ್ತಕವನ್ನು ಬರೆದ ವ್ಯಕ್ತಿಯ ಬಗ್ಗೆ ನನಗೆ ಏನು ಗೊತ್ತು? ಆತನು ಯಾರು, ಎಲ್ಲಿಯವನು, ಏನು ಕೆಲಸ ಮಾಡುತ್ತಿದ್ದನು?’ ನಾವು ಈ ವಿಷಯಗಳನ್ನು ತಿಳುಕೊಂಡಾಗ ಆತನು ಯಾಕೆ ಕೆಲವೊಂದು ಪದಗಳನ್ನು ಬಳಸಿದ್ದಾನೆ, ಯಾಕೆ ಇಂತಿಂಥ ದೃಷ್ಟಾಂತಗಳನ್ನು ಉಪಯೋಗಿಸಿದ್ದಾನೆ ಎಂದು ಅರ್ಥ ಆಗುತ್ತದೆ. ಆ ವ್ಯಕ್ತಿ ಬರೆದ ಪುಸ್ತಕವನ್ನು ಓದುವಾಗ ಆತನ ವ್ಯಕ್ತಿತ್ವವನ್ನು ತೋರಿಸಿಕೊಡುವ ಪದಗಳಿಗೆ ಗಮನ ಕೊಡಿ.

16 ಆಮೇಲೆ ಈ ಪುಸ್ತಕವನ್ನು ಯಾವಾಗ ಬರೆಯಲಾಯಿತು ಎಂದು ತಿಳುಕೊಳ್ಳಲು ಪ್ರಯತ್ನಿಸಿ. ಇದನ್ನು ತಿಳುಕೊಳ್ಳುವುದು ಸುಲಭ. ಯಾಕೆಂದರೆ ಇದನ್ನು ನೂತನ ಲೋಕ ಭಾಷಾಂತರ (ಇಂಗ್ಲಿಷ್‌) ಬೈಬಲಿನ ಪುಟ 1662-1663​ರಲ್ಲಿ ಇರುವ ಬೈಬಲ್‌ ಪುಸ್ತಕಗಳ ಪಟ್ಟಿಯಲ್ಲಿ ಕೊಡಲಾಗಿರುತ್ತದೆ. ಬೈಬಲಿನ ಅಧ್ಯಯನ ಕೈಪಿಡಿಯ ಪುಟ 14-17​ರಲ್ಲಿ ಕೊಟ್ಟಿರುವ ಚಾರ್ಟನ್ನು ನೋಡಿದರೂ ಸಹಾಯ ಆಗುತ್ತದೆ. ಅದರಲ್ಲಿ ಪ್ರವಾದಿಗಳು ಮತ್ತು ರಾಜರ ಬಗ್ಗೆ ತಿಳಿಸಲಾಗಿದೆ. ನೀವು ಬೈಬಲಿನಲ್ಲಿ ಓದುತ್ತಿರುವ ಪುಸ್ತಕದಲ್ಲಿ ಪ್ರವಾದನೆಗಳು ಇರುವುದರಿಂದ, ಈ ಪುಸ್ತಕವನ್ನು ಬರೆದಾಗ ಸನ್ನಿವೇಶ ಹೇಗಿತ್ತು ಅಂತ ತಿಳುಕೊಳ್ಳುವುದು ಒಳ್ಳೇದು. ಜನರಲ್ಲಿದ್ದ ಯಾವ ಕೆಟ್ಟ ಗುಣಗಳನ್ನು ಅಥವಾ ಅವರು ಮಾಡುತ್ತಿದ್ದ ಯಾವ ಕೆಟ್ಟ ವಿಷಯಗಳನ್ನು ಪ್ರವಾದಿ ತಿದ್ದಲು ಪ್ರಯತ್ನಿಸಿದನು ಎಂದು ನೋಡಿ. ಈ ಪುಸ್ತಕವನ್ನು ಬರೆದ ಸಮಯದಲ್ಲಿ ಬೇರೆ ಯಾರು ಸಹ ಜೀವಿಸಿದ್ದರು? ಈ ಎಲ್ಲಾ ವಿಷಯ ತಿಳುಕೊಳ್ಳಬೇಕಾದರೆ ನೀವು ಬೈಬಲಿನ ಬೇರೆ ಪುಸ್ತಕಗಳನ್ನೂ ನೋಡಬೇಕಾಗುತ್ತದೆ. ಉದಾಹರಣೆಗೆ, ಪ್ರವಾದಿ ಆಮೋಸನ ಕಾಲದಲ್ಲಿ ಸನ್ನಿವೇಶ ಹೇಗಿತ್ತು ಅಂತ ತಿಳುಕೊಳ್ಳಲು 2​ನೇ ಅರಸು ಮತ್ತು 2​ನೇ ಪೂರ್ವಕಾಲವೃತ್ತಾಂತ ನೋಡಿದರೆ ಸಹಾಯ ಆಗುತ್ತದೆ. ಆಮೋಸ 1:1​ರ ಅಡ್ಡ ಉಲ್ಲೇಖಗಳಲ್ಲಿ (ಕ್ರಾಸ್‌ ರೆಫೆರೆನ್ಸ್‌) ಈ ಎರಡು ಪುಸ್ತಕಗಳಿಗೆ ಸೂಚಿಸಲಾಗಿದೆ. ಹೋಶೇಯನ ಪುಸ್ತಕವನ್ನು ಓದುವುದರಿಂದ ಸಹ ನಿಮಗೆ ಪ್ರಯೋಜನ ಸಿಗುತ್ತದೆ. ಯಾಕೆಂದರೆ ಪ್ರವಾದಿ ಹೋಶೇಯನು ಆಮೋಸನು ಜೀವಿಸಿದ ಅದೇ ಸಮಯದಲ್ಲಿ ಜೀವಿಸಿದ್ದನು. ಈ ಎಲ್ಲಾ ಮಾಹಿತಿ ಪ್ರವಾದಿ ಆಮೋಸನು ಜೀವಿಸಿದಾಗ ಸನ್ನಿವೇಶ ಹೇಗಿತ್ತು ಅಂತ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.—2 ಅರ. 14:25-28; 2 ಪೂರ್ವ. 26:1-15; ಹೋಶೇ. 1:1-11; ಆಮೋ. 1:1.

ಚಿಕ್ಕ-ಚಿಕ್ಕ ಅಂಶಗಳಿಗೂ ಗಮನ ಕೊಡಿ

17-18. ಚಿಕ್ಕ-ಚಿಕ್ಕ ಅಂಶಗಳಿಗೂ ಗಮನ ಕೊಟ್ಟರೆ ವೈಯಕ್ತಿಕ ಬೈಬಲ್‌ ಅಧ್ಯಯನ ಆಸಕ್ತಿಕರವಾಗಿರುತ್ತದಾ? (ಪ್ಯಾರದಲ್ಲಿರುವ ಒಂದು ಉದಾಹರಣೆ ಕೊಡಿ ಅಥವಾ ನೀವೇ ಒಂದು ಉದಾಹರಣೆ ಕೊಡಿ.)

17 ನೀವು ಬೈಬಲನ್ನು ಓದುವಾಗ ಹೊಸ ಅಂಶ ಏನಾದರೂ ಸಿಗುತ್ತಾ ಅಂತ ಓದುವುದು ಕೂಡ ಒಳ್ಳೇದು. ಒಂದು ಉದಾಹರಣೆ ನೋಡಿ. ನೀವು ಜೆಕರ್ಯ 12​ನೇ ಅಧ್ಯಾಯ ಓದುತ್ತಿದ್ದೀರಿ ಅಂತ ನೆನಸಿ. ಇದರಲ್ಲಿ ಮೆಸ್ಸೀಯನ ಮರಣದ ಪ್ರವಾದನೆ ನುಡಿಯಲಾಗಿದೆ. (ಜೆಕ. 12:10) ಮೆಸ್ಸೀಯನು ಸತ್ತಾಗ “ನಾತಾನ ವಂಶದ ಕುಟುಂಬವು” ತುಂಬ ದುಃಖಿಸುತ್ತದೆ ಎಂದು 12​ನೇ ವಚನದಲ್ಲಿ ಕೊಡಲಾಗಿದೆ. ಅದನ್ನು ಸುಮ್ಮನೆ ಓದಿ ಮುಂದೆ ಹೋಗುವ ಬದಲು, ‘ನಾತಾನ ವಂಶಕ್ಕೂ ಮೆಸ್ಸೀಯನಿಗೂ ಏನು ಸಂಬಂಧ? ಹೆಚ್ಚು ಮಾಹಿತಿ ಏನಾದರೂ ಸಿಗಬಹುದಾ?’ ಎಂದು ಯೋಚಿಸಿ. ಸ್ವಲ್ಪ “ಜಾಸೂಸಿ” ಕೆಲಸ ಮಾಡಿ. ಜೆಕರ್ಯ 12:12​ಕ್ಕೆ ಒಂದು ಅಡ್ಡ ಉಲ್ಲೇಖ 2 ಸಮುವೇಲ 5:14 ಆಗಿದೆ. ಇದರಲ್ಲಿ ನಾತಾನನು ರಾಜ ದಾವೀದನ ಮಗ ಎಂಬ ವಿವರ ಇದೆ. ಎರಡನೇ ಅಡ್ಡ ಉಲ್ಲೇಖ ಲೂಕ 3:31. ಇದರಲ್ಲಿ ನಾತಾನ ಯೇಸುವಿನ ತಾಯಿಯಾದ ಮರಿಯಳ ಪೂರ್ವಜ ಎಂದು ಗೊತ್ತಾಗುತ್ತದೆ. (ಆಗಸ್ಟ್‌ 2017​ರ ಕಾವಲಿನಬುರುಜುವಿನ ಪುಟ 32, ಪ್ಯಾರ 4 ನೋಡಿ.) ತುಂಬ ಆಸಕ್ತಿಕರವಾಗಿ ಇದೆ ಅಲ್ವಾ? ಯೇಸು ದಾವೀದನ ವಂಶದಲ್ಲಿ ಬರುತ್ತಾನೆ ಅಂತ ನಿಮಗೆ ಗೊತ್ತಿತ್ತು. (ಮತ್ತಾ. 22:42) ಆದರೆ ದಾವೀದನಿಗೆ 20ಕ್ಕಿಂತ ಹೆಚ್ಚು ಗಂಡುಮಕ್ಕಳಿದ್ದರು. ಯೇಸು ತೀರಿಕೊಂಡಾಗ ನಾತಾನನ ವಂಶ ದುಃಖಿಸುತ್ತದೆ ಅಂತ ಹೇಳುವ ಮೂಲಕ ಮೆಸ್ಸೀಯನು ಯಾರ ಕುಟುಂಬದಲ್ಲಿ ಬರುತ್ತಾನೆ ಅಂತ ಪ್ರವಾದಿ ಜೆಕರ್ಯನು ತೋರಿಸಿದ್ದಾನೆ. ಈ ಪಾಯಿಂಟ್‌ ತುಂಬ ಚೆನ್ನಾಗಿದೆ ಅಲ್ವಾ!

18 ಇನ್ನೊಂದು ಉದಾಹರಣೆ ನೋಡಿ. ಲೂಕ 1​ನೇ ಅಧ್ಯಾಯದಲ್ಲಿ ನಾವು ಓದುವಂತೆ, ಗಬ್ರಿಯೇಲ ದೇವದೂತನು ಮರಿಯಳಿಗೆ ಕಾಣಿಸಿಕೊಂಡು ಆಕೆಗೆ ಹುಟ್ಟಲಿರುವ ಮಗನ ಬಗ್ಗೆ ಏನು ಹೇಳಿದನು? “ಅವನು ಮಹಾಪುರುಷನಾಗಿ ಮಹೋನ್ನತನ ಪುತ್ರನೆಂದು ಕರೆಯಲ್ಪಡುವನು; ಯೆಹೋವ ದೇವರು ಅವನ ತಂದೆಯಾದ ದಾವೀದನ ಸಿಂಹಾಸನವನ್ನು ಅವನಿಗೆ ಕೊಡುವನು ಮತ್ತು ಅವನು ಯಾಕೋಬನ ಮನೆತನದ ಮೇಲೆ ಸದಾಕಾಲಕ್ಕೂ ರಾಜನಾಗಿ ಆಳುವನು” ಎಂದನು. (ಲೂಕ 1:32, 33) ಗಬ್ರಿಯೇಲನು ಹೇಳಿದ ಸಂದೇಶದ ಮೊದಲನೇ ಭಾಗಕ್ಕೆ ಮಾತ್ರ ನಾವು ಹೆಚ್ಚಾಗಿ ಗಮನ ಕೊಟ್ಟಿರಬಹುದು. ಅಂದರೆ ಆತನು “ಮಹೋನ್ನತನ ಪುತ್ರನೆಂದು ಕರೆಯಲ್ಪಡುವನು” ಅನ್ನುವ ಭಾಗಕ್ಕೆ ಗಮನ ಕೊಟ್ಟಿರಬಹುದು. ಆದರೆ ಯೇಸು “ರಾಜನಾಗಿ ಆಳುವನು” ಎಂದು ಸಹ ಗಬ್ರಿಯೇಲ ಹೇಳಿದನು. ಈ ಮಾತನ್ನು ಕೇಳಿಸಿಕೊಂಡಾಗ ಮರಿಯಳ ಮನಸ್ಸಿಗೆ ಯಾವ ವಿಚಾರ ಬಂದಿರಬಹುದು ಎಂದು ನಾವು ಯೋಚಿಸಬೇಕು. ಯೇಸು ರಾಜ ಹೆರೋದನ ಜಾಗದಲ್ಲಿ ಅಥವಾ ಹೆರೋದನ ನಂತರ ಬರುವ ರಾಜರ ಜಾಗದಲ್ಲಿ ಇಸ್ರಾಯೇಲನ್ನು ಆಳಲಿದ್ದಾನೆ ಅಂತ ಅಂದುಕೊಂಡಳಾ? ಒಂದುವೇಳೆ ಇದು ಸತ್ಯವಾದರೆ ಮರಿಯ ರಾಜಮಾತೆ ಆಗುತ್ತಿದ್ದಳು ಮತ್ತು ಆಕೆಯ ಇಡೀ ಕುಟುಂಬ ಅರಮನೆಯಲ್ಲಿ ವಾಸಿಸಲು ಹೋಗಬೇಕಾಗಿತ್ತು. ಆದರೆ ಆಕೆ ಗಬ್ರಿಯೇಲನ ಜೊತೆ ಇದರ ಬಗ್ಗೆ ಮಾತಾಡಿದಳು ಎಂದು ಬೈಬಲ್‌ ಹೇಳುವುದಿಲ್ಲ. ಆಮೇಲೆ ಕೂಡ ಯೇಸುವಿನ ಇಬ್ಬರು ಶಿಷ್ಯರು ಕೇಳಿದಂತೆ ಆಕೆ ದೇವರ ರಾಜ್ಯದಲ್ಲಿ ತನಗೆ ವಿಶೇಷ ಸ್ಥಾನ ಸಿಗಬೇಕೆಂದು ಕೇಳಿದಳೆಂದು ಬೈಬಲಿನಲ್ಲಿ ಎಲ್ಲೂ ಇಲ್ಲ. (ಮತ್ತಾ. 20:20-23) ಇದರಿಂದ ಮರಿಯ ತುಂಬ ದೀನತೆ ಇದ್ದ ಸ್ತ್ರೀ ಎಂದು ಗೊತ್ತಾಗುತ್ತದೆ.

19-20. ಯಾಕೋಬ 1:22-25 ಮತ್ತು 4:8​ರಲ್ಲಿ ತಿಳಿಸಿರುವಂತೆ, ಅಧ್ಯಯನ ಮಾಡುವಾಗ ನಮ್ಮ ಮನಸ್ಸಲ್ಲಿ ಯಾವ ಗುರಿಗಳು ಇರಬೇಕು?

19 ದೇವರ ವಾಕ್ಯವನ್ನು ಮತ್ತು ನಮ್ಮ ಕ್ರೈಸ್ತ ಪ್ರಕಾಶನಗಳನ್ನು ಅಧ್ಯಯನ ಮಾಡಲು ನಮಗಿರುವ ಮುಖ್ಯ ಗುರಿ ಏನೆಂದು ಮರೆಯಬೇಡಿ. ಅದು ಯೆಹೋವನ ಸಮೀಪಕ್ಕೆ ಹೋಗುವುದೇ. ಅಧ್ಯಯನ ಮಾಡುವಾಗ ನಾವು ಯಾವ ರೀತಿಯ ವ್ಯಕ್ತಿ ಆಗಿದ್ದೇವೆ ಮತ್ತು ದೇವರು ಮೆಚ್ಚುವಂಥ ವ್ಯಕ್ತಿಯಾಗಲು ಏನು ಮಾಡಬೇಕು ಅನ್ನುವ ಗುರಿ ಸಹ ಮನಸ್ಸಲ್ಲಿರಲಿ. (ಯಾಕೋಬ 1:22-25; 4:8 ಓದಿ.) ಹಾಗಾಗಿ ನಾವು ಅಧ್ಯಯನ ಮಾಡಲು ಕೂತುಕೊಂಡಾಗೆಲ್ಲಾ ಯೆಹೋವನ ಪವಿತ್ರಾತ್ಮದ ಸಹಾಯಕ್ಕಾಗಿ ಕೇಳಿಕೊಳ್ಳಬೇಕು. ನಾವು ಅಧ್ಯಯನ ಮಾಡಲಿರುವ ಮಾಹಿತಿಯಿಂದ ಪೂರ್ತಿ ಪ್ರಯೋಜನ ಪಡೆಯಲು ಮತ್ತು ನಾವು ಯಾವ ಬದಲಾವಣೆಗಳನ್ನು ಮಾಡಬೇಕೆಂದು ಸ್ಪಷ್ಟವಾಗಿ ನೋಡಲು ಸಹಾಯ ಮಾಡುವಂತೆ ಕೇಳಬೇಕು.

20 ನಾವೆಲ್ಲರೂ ಕೀರ್ತನೆಗಾರನು ತಿಳಿಸಿದ ದೇವಭಕ್ತನಂತೆ ಇರೋಣ. ‘ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವರಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರೋಣ. ಇದರಿಂದ ನಮ್ಮ ಕಾರ್ಯವೆಲ್ಲಾ ಸಫಲವಾಗುತ್ತದೆ.’—ಕೀರ್ತ. 1:2, 3.

ಗೀತೆ 69 ನಿನ್ನ ಮಾರ್ಗಗಳನ್ನು ನನಗೆ ತಿಳಿಸು

^ ಪ್ಯಾರ. 5 ನಾವು ನೋಡಲು, ಓದಲು ಮತ್ತು ಅಧ್ಯಯನ ಮಾಡಲು ಯೆಹೋವನು ತುಂಬ ವಿಷಯಗಳನ್ನು ಕೊಟ್ಟಿದ್ದಾನೆ. ಏನನ್ನು ಅಧ್ಯಯನ ಮಾಡಬೇಕೆಂದು ತೀರ್ಮಾನಿಸಲು ಈ ಲೇಖನ ನಿಮಗೆ ಸಹಾಯ ಮಾಡುತ್ತದೆ. ಅಧ್ಯಯನದಿಂದ ನೀವು ಸಂಪೂರ್ಣ ಪ್ರಯೋಜನ ಪಡೆಯಲು ಕೆಲವು ಪ್ರಾಯೋಗಿಕ ಸಲಹೆಗಳು ಸಹ ನಿಮಗೆ ಈ ಲೇಖನದಿಂದ ಸಿಗಲಿದೆ.

^ ಪ್ಯಾರ. 61 ಚಿತ್ರ ವಿವರಣೆ: ಕಾವಲಿನಬುರುಜು ಅಧ್ಯಯನಕ್ಕೆ ಹೇಗೆ ತಯಾರಿ ಮಾಡಬೇಕೆಂದು ಹೆತ್ತವರು ತಮ್ಮ ಮಕ್ಕಳಿಗೆ ಕಲಿಸುತ್ತಿದ್ದಾರೆ.

^ ಪ್ಯಾರ. 63 ಚಿತ್ರ ವಿವರಣೆ: ಒಬ್ಬ ಸಹೋದರ ಬೈಬಲಿನ ಒಂದು ಪುಸ್ತಕವನ್ನು ಬರೆದ ಆಮೋಸನ ಬಗ್ಗೆ ಸಂಶೋಧನೆ ಮಾಡುತ್ತಿದ್ದಾನೆ. ಆಮೋಸನ ಬಗ್ಗೆ ಓದುವಾಗ ಒಂದೊಂದು ದೃಶ್ಯವನ್ನೂ ಮನಸ್ಸಲ್ಲೇ ಚಿತ್ರಿಸಿಕೊಳ್ಳುತ್ತಾ ಧ್ಯಾನಿಸುತ್ತಿದ್ದಾನೆ.