ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 19

ಅಂತ್ಯಕಾಲದ “ಉತ್ತರ ರಾಜ”

ಅಂತ್ಯಕಾಲದ “ಉತ್ತರ ರಾಜ”

‘ಅಂತ್ಯಕಾಲದಲ್ಲಿ ದಕ್ಷಿಣರಾಜನು ಉತ್ತರರಾಜನ ಮೇಲೆ ಬೀಳುವನು.’—ದಾನಿ. 11:40.

ಗೀತೆ 133 ನಿನ್ನ ವಿಮೋಚನೆಗಾಗಿ ದೇವರನ್ನು ಆಶ್ರಯಿಸು

ಕಿರುನೋಟ *

1. ಬೈಬಲ್‌ನಿಂದ ನಾವು ಏನನ್ನ ತಿಳುಕೊಳ್ಳಬಹುದು?

ಇನ್ನು ಸ್ವಲ್ಪದರಲ್ಲೇ ಯೆಹೋವನ ಜನ್ರಿಗೆ ಏನಾಗುತ್ತೆ ಅಂತ ನಾವು ತಿಳ್ಕೋಬಹುದು. ಯಾಕೆಂದ್ರೆ ಮುಂದೆ ಯಾವೆಲ್ಲಾ ಘಟನೆಗಳು ನಡೆಯುತ್ತವೆ ಅಂತ ಬೈಬಲ್‌ ನಮ್ಗೆ ತಿಳಿಸುತ್ತೆ. ಅದ್ರಲ್ಲಿರೋ ಒಂದು ಪ್ರವಾದನೆ, ಈ ಭೂಮಿಯಲ್ಲಿರೋ ಹೆಚ್ಚಿನ ಶಕ್ತಿಶಾಲಿ ಸರ್ಕಾರಗಳು ಏನು ಮಾಡುತ್ತವೆ ಅಂತ ತಿಳಿಸುತ್ತೆ. ಈ ಪ್ರವಾದನೆ ದಾನಿಯೇಲ ಪುಸ್ತಕದ 11 ನೇ ಅಧ್ಯಾಯದಲ್ಲಿದೆ. ಅದು ಇಬ್ಬರು ರಾಜರು ಒಬ್ಬರಿಗೊಬ್ಬರು ಹೋರಾಡೋದರ ಬಗ್ಗೆ ವಿವರಿಸುತ್ತೆ. ಆ ರಾಜರನ್ನು ಉತ್ತರ ರಾಜ ಮತ್ತು ದಕ್ಷಿಣ ರಾಜ ಅಂತ ಕರೆಯಲಾಗಿದೆ. ಈ ಪ್ರವಾದನೆಯಲ್ಲಿರೋ ಹಲವಾರು ಘಟನೆಗಳು ಈಗಾಗ್ಲೇ ನೆರವೇರಿವೆ. ಹಾಗಾಗಿ ಉಳಿದ ಘಟನೆಗಳು ಖಂಡಿತ ನೆರವೇರುತ್ತವೆ.

2. ದಾನಿಯೇಲನ ಪ್ರವಾದನೆಯನ್ನು ಅಧ್ಯಯನ ಮಾಡುವಾಗ ಯಾವ ವಿಷ್ಯಗಳನ್ನ ಮನಸ್ಸಿನಲ್ಲಿಡಬೇಕು ಮತ್ತು ಆದಿಕಾಂಡ 3:15; ಪ್ರಕಟನೆ 11:7 ಮತ್ತು 12:17 ಇದ್ರ ಬಗ್ಗೆ ಏನು ತಿಳಿಸುತ್ತೆ?

2 ದಾನಿಯೇಲ ಪುಸ್ತಕದ 11 ನೇ ಅಧ್ಯಾಯದಲ್ಲಿರೋ ಪ್ರವಾದನೆ ಬಗ್ಗೆ ತಿಳುಕೊಳ್ಳಬೇಕಂದ್ರೆ ನಾವು ಎರಡು ವಿಷ್ಯಗಳನ್ನ ಮನಸ್ಸಿನಲ್ಲಿಡಬೇಕು. ಒಂದೇನಂದ್ರೆ ಆ ಪ್ರವಾದನೆ ಲೋಕದಲ್ಲಿದ್ದ ಎಲ್ಲಾ ಸರಕಾರಗಳ ಬಗ್ಗೆ ಅಲ್ಲ, ದೇವಜನರಿದ್ದಂಥ ಪ್ರದೇಶವನ್ನು ಆಳಿದ ಅಥ್ವಾ ಅವ್ರ ಮೇಲೆ ಆಕ್ರಮಣ ಮಾಡಿದ ರಾಜರ ಮತ್ತು ಸರಕಾರಗಳ ಬಗ್ಗೆ ಮಾತ್ರ ತಿಳಿಸುತ್ತೆ ಅಂತ ಮನಸ್ಸಲ್ಲಿಡಬೇಕು. ಲೋಕದ ಜನ್ರಿಗೆ ಹೋಲಿಸಿದರೆ ದೇವಜನ್ರು ತುಂಬ ಕಡಿಮೆ. ಆದ್ರೂ ಆ ಸರಕಾರಗಳು ಯಾಕೆ ದೇವಜನರಿಗೇ ತೊಂದ್ರೆ ಕೊಡುತ್ತವೆ? ಯಾಕೆಂದರೆ ಯೆಹೋವನ ಮತ್ತು ಯೇಸುವಿನ ಸೇವೆ ಮಾಡುವ ಜನರನ್ನು ಸಂಪೂರ್ಣವಾಗಿ ನಾಶಮಾಡುವುದೇ ಸೈತಾನ ಮತ್ತು ಅವನ ಬೆಂಬಲಿಗರ ಮುಖ್ಯ ಗುರಿ. (ಆದಿಕಾಂಡ 3:15 ಮತ್ತು ಪ್ರಕಟನೆ 11:7; 12:17 ಓದಿ.) ನಾವು ಮನಸ್ಸಲ್ಲಿಡಬೇಕಾದ ಇನ್ನೊಂದು ವಿಷ್ಯ ಏನಂದ್ರೆ, ದಾನಿಯೇಲ ಬರೆದ ಪ್ರವಾದನೆಗೂ ಬೈಬಲಲ್ಲಿರೋ ಬೇರೆ ಪ್ರವಾದನೆಗಳಿಗೂ ಹೊಂದಿಕೆಯಿರಬೇಕು. ಅಂದ್ರೆ ದಾನಿಯೇಲನ ಪ್ರವಾದನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಬೈಬಲಲ್ಲಿರೋ ಬೇರೆ ವಚನಗಳನ್ನು ಹೋಲಿಸಿ ನೋಡಬೇಕು.

3. ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ನಾವು ಏನನ್ನು ಚರ್ಚಿಸಲಿದ್ದೇವೆ?

3 ಈ ಅಂಶಗಳನ್ನು ಮನಸ್ಸಲ್ಲಿಟ್ಟು ನಾವೀಗ ದಾನಿಯೇಲ 11:25-39 ನ್ನು ಚರ್ಚಿಸೋಣ. ಇಸವಿ 1870 ರಿಂದ 1991 ರವರೆಗೂ ಯಾರು ದಕ್ಷಿಣ ರಾಜ ಮತ್ತು ಉತ್ತರ ರಾಜ ಆಗಿದ್ದರು ಅಂತ ನೋಡಲಿದ್ದೇವೆ. ಅಷ್ಟೇ ಅಲ್ಲ, ಈ ಪ್ರವಾದನೆಯನ್ನು ನಾವು ಹಿಂದೆ ಅರ್ಥಮಾಡಿಕೊಂಡಿದ್ರಲ್ಲಿ ಈಗ ಚಿಕ್ಕ ಬದಲಾವಣೆ ಮಾಡಿಕೊಳ್ಳಬೇಕು ಅಂತನೂ ನೋಡಲಿದ್ದೇವೆ. ಮುಂದಿನ ಲೇಖನದಲ್ಲಿ, ದಾನಿಯೇಲ 11:40–12:1 ನ್ನು ಚರ್ಚಿಸಲಿದ್ದೇವೆ ಮತ್ತು ಆ ವಚನಗಳಲ್ಲಿರೋ ಪ್ರವಾದನೆಯು 1991 ರಿಂದ ಅರ್ಮಗೆದ್ದೋನ್‌ ಯುದ್ಧದವರೆಗಿನ ಸಮಯದ ಬಗ್ಗೆ ಏನನ್ನು ತಿಳಿಸುತ್ತೆ ಅನ್ನೋದನ್ನ ಅರ್ಥಮಾಡಿಕೊಳ್ತೇವೆ. ನೀವು ಈ ಎರಡೂ ಲೇಖನಗಳನ್ನು ಅಧ್ಯಯನ ಮಾಡುವಾಗ “ಅಂತ್ಯಕಾಲದಲ್ಲಿ ಕಿಡಿಕಾರೋ ರಾಜರು” ಎಂಬ ಚಾರ್ಟನ್ನು ನೋಡಿ. ಈಗ ನಾವು ಮೊದ್ಲು ಆ ಪ್ರವಾದನೆಯಲ್ಲಿರುವ ಇಬ್ಬರು ರಾಜರು ಯಾರು ಅನ್ನೋದನ್ನು ತಿಳಿದುಕೊಳ್ಳೋಣ.

ಉತ್ತರ ರಾಜ ಮತ್ತು ದಕ್ಷಿಣ ರಾಜ

4. ಉತ್ತರ ರಾಜ ಮತ್ತು ದಕ್ಷಿಣ ರಾಜ ಯಾರು ಅಂತ ತಿಳುಕೊಳ್ಳೋದಕ್ಕೆ ಯಾವ ಮೂರು ವಿಷಯಗಳು ನಮಗೆ ಸಹಾಯ ಮಾಡುತ್ತವೆ?

4 ಮೊದ್ಲು, ಇಸ್ರಾಯೇಲಿನ ಉತ್ತರ ದಿಕ್ಕಿನಲ್ಲಿದ್ದ ರಾಜರನ್ನು “ಉತ್ತರ ರಾಜ” ಮತ್ತು ದಕ್ಷಿಣ ದಿಕ್ಕಿನಲ್ಲಿದ್ದ ರಾಜರನ್ನು “ದಕ್ಷಿಣ ರಾಜ” ಎಂದು ಸೂಚಿಸಲಾಗುತ್ತಿತ್ತು. ಯಾಕೆ? ದಾನಿಯೇಲನಿಗೆ ಸಂದೇಶ ತಿಳಿಸಲು ಬಂದ ದೇವದೂತನು ಏನು ಹೇಳಿದ ಅಂತ ಗಮನಿಸಿ: “ಅಂತ್ಯಕಾಲದಲ್ಲಿ ನಿನ್ನ ಜನರಿಗಾಗುವ [ದೇವಜನರಿಗಾಗುವ] ಗತಿಯನ್ನು ನಿನಗೆ ತಿಳಿಸುವದಕ್ಕೋಸ್ಕರ ಬಂದೆನು.” (ದಾನಿ. 10:14) ಕ್ರಿ.ಶ. 33 ರ ಪಂಚಾಶತ್ತಮದವರೆಗೂ ಇಸ್ರಾಯೇಲ್ಯರು ದೇವಜನರಾಗಿದ್ದರು. ಆದರೆ ಅಂದಿನಿಂದ ಯೇಸುವಿನ ನಂಬಿಗಸ್ತ ಶಿಷ್ಯರೇ ತನ್ನ ಜನರಾಗಿದ್ದಾರೆ ಅಂತ ಯೆಹೋವನು ಸ್ಪಷ್ಟೀಕರಿಸಿದನು. ಆದ್ರಿಂದ ದಾನಿಯೇಲ 11 ನೇ ಅಧ್ಯಾಯದಲ್ಲಿರೋ ಪ್ರವಾದನೆಯು ಹೆಚ್ಚಾಗಿ ಕ್ರಿಸ್ತನ ಶಿಷ್ಯರ ಬಗ್ಗೆ ತಿಳಿಸುತ್ತೆ ಹೊರತು ಇಸ್ರಾಯೇಲ್‌ ಜನಾಂಗದ ಬಗ್ಗೆ ಅಲ್ಲ. (ಅ. ಕಾ. 2:1-4; ರೋಮ. 9:6-8; ಗಲಾ. 6:15, 16) ಅಷ್ಟೇ ಅಲ್ಲ, ಕಾಲ ಬದಲಾದಂತೆ ಬೇರೆ ಬೇರೆ ಸರಕಾರಗಳು ಉತ್ತರ ರಾಜ ಮತ್ತು ದಕ್ಷಿಣ ರಾಜ ಆಗಿವೆ. ಆದ್ರೆ ಈ ಇಬ್ಬರು ರಾಜರಲ್ಲಿ ಕೆಲವೊಂದು ವಿಷಯಗಳು ಸಾಮಾನ್ಯವಾಗಿವೆ. ಒಂದನೇದಾಗಿ, ಈ ರಾಜರು ದೇವಜನರು ಜೀವಿಸಿದ ಪ್ರದೇಶದಲ್ಲಿ ಆಳ್ವಿಕೆ ಮಾಡಿದರು ಅಥವಾ ಅವರ ಮೇಲೆ ದಾಳಿಮಾಡಿದರು. ಎರಡನೇದಾಗಿ, ಯೆಹೋವನ ಮೇಲಿನ ದ್ವೇಷವನ್ನು ಅವ್ರು ಯೆಹೋವನ ಜನ್ರ ಜೊತೆ ನಡಕೊಂಡ ವಿಧದಿಂದ ತೋರಿಸಿಕೊಟ್ಟರು. ಮೂರನೇದಾಗಿ, ಈ ಇಬ್ಬರು ರಾಜರು ಅಧಿಕಾರಕ್ಕೋಸ್ಕರ ಒಬ್ಬರಿಗೊಬ್ಬರು ಹೋರಾಡಿದರು.

5. ಇಸವಿ 100 ರಿಂದ 1870 ರವರೆಗೂ ಉತ್ತರ ರಾಜ ಮತ್ತು ದಕ್ಷಿಣ ರಾಜ ಇದ್ರಾ? ವಿವರಿಸಿ.

5 ಎರಡನೇ ಶತಮಾನ ಆರಂಭವಾಗಿ ಸ್ವಲ್ಪದರಲ್ಲೇ ಕ್ರೈಸ್ತ ಸಭೆಯೊಳಗೆ ಸುಳ್ಳು ಕ್ರೈಸ್ತರು ನುಸುಳಿದರು. ಅವರು ಸುಳ್ಳು ಬೋಧನೆಗಳನ್ನು ಕಲಿಸೋಕೆ ಶುರು ಮಾಡಿದ್ರು ಮತ್ತು ದೇವರ ವಾಕ್ಯದಲ್ಲಿರೋ ಸತ್ಯನ ಮುಚ್ಚಿ ಹಾಕಿದ್ರು. ಅಲ್ಲಿಂದ ಹಿಡಿದು 1870 ನೇ ಇಸವಿಯವರೆಗೆ ದೇವರನ್ನು ಆರಾಧಿಸುತ್ತಿದ್ದ ಒಂದು ಸಂಘಟಿತ ಗುಂಪು ಇರಲಿಲ್ಲ. ಹೊಲದಲ್ಲಿ ಬೆಳೆಯೋ ಕಳೆ ಥರ ಸುಳ್ಳು ಕ್ರೈಸ್ತರು ಹೆಚ್ಚಾದರು. ಇದರಿಂದಾಗಿ ಸತ್ಯ ಕ್ರೈಸ್ತರು ಯಾರು ಅಂತ ತಿಳುಕೊಳ್ಳೋಕೆ ತುಂಬ ಕಷ್ಟ ಆಯ್ತು. (ಮತ್ತಾ. 13:36-43) ಈ ಅಂಶ ತುಂಬ ಪ್ರಾಮುಖ್ಯ ಯಾಕೆ? ಯಾಕೆಂದರೆ 100 ನೇ ಇಸವಿಯಿಂದ 1870 ನೇ ಇಸವಿಯವರೆಗೂ ಆಳಿದ ಯಾವುದೇ ಸರಕಾರ ಅಥ್ವಾ ಅಧಿಕಾರಿ ಉತ್ತರ ರಾಜ ಮತ್ತು ದಕ್ಷಿಣ ರಾಜ ಆಗೋಕೆ ಸಾಧ್ಯವಿಲ್ಲ ಅಂತ ಇದು ತೋರಿಸಿಕೊಡುತ್ತೆ. ಆ ರಾಜರು ದಾಳಿ ಮಾಡೋಕೆ ದೇವಜನರ ಒಂದು ಸಂಘಟಿತ ಗುಂಪು ಆಗ ಇರಲಿಲ್ಲ. * ಆದರೆ 1870 ರ ನಂತರ ಉತ್ತರ ರಾಜ ಮತ್ತು ದಕ್ಷಿಣ ರಾಜ ಮತ್ತೆ ಕಾಣಿಸಿಕೊಂಡಿರೋ ಸಾಧ್ಯತೆ ಇದೆ. ಯಾಕೆ ಹಾಗೆ ಹೇಳಬಹುದು?

6. ದೇವಜನರು ಮತ್ತೆ ಗುಂಪಾಗಿ ಸಂಘಟಿತರಾಗೋಕೆ ಶುರು ಮಾಡಿದ್ದು ಯಾವಾಗ? ವಿವರಿಸಿ.

6 ಇಸವಿ 1870 ರಿಂದ ದೇವಜನರು ಒಂದು ಗುಂಪಾಗಿ ಸೇರೋಕೆ ಶುರು ಮಾಡಿದರು. ಆ ವರ್ಷದಲ್ಲಿ ಸಹೋದರ ಚಾರ್ಲ್ಸ್‌ ಟಿ. ರಸಲ್‌ ಮತ್ತವರ ಸಂಗಡಿಗರು ಬೈಬಲನ್ನು ಅಧ್ಯಯನ ಮಾಡೋಕೆ ಆರಂಭಿಸಿದ್ರು. ಸಹೋದರ ರಸಲ್‌ ಮತ್ತು ಅವರ ಸ್ನೇಹಿತರು ಮೆಸ್ಸೀಯ ರಾಜ್ಯ ಸ್ಥಾಪನೆ ಆಗೋಕೂ ಮುಂಚೆ ‘ದಾರಿಯನ್ನು ಸಿದ್ಧಮಾಡುವ’ ದೂತನ ಪಾತ್ರ ವಹಿಸಿದರು. (ಮಲಾ. 3:1) ಹೀಗೆ ಪುನಃ, ಯೆಹೋವನನ್ನು ಸರಿಯಾದ ರೀತಿಯಲ್ಲಿ ಆರಾಧಿಸುವ ಒಂದು ಗುಂಪು ಸ್ಥಾಪನೆಯಾಯಿತು. ಈ ಸಮಯದಲ್ಲಿ ಯಾವುದಾದರೂ ಸರಕಾರ ದೇವಜನ್ರಿಗೆ ಹಿಂಸೆ ಕೊಡ್ತಾ? ಅದನ್ನು ಈಗ ನೋಡೋಣ.

ದಕ್ಷಿಣ ರಾಜ ಯಾರು?

7. ಇಸವಿ 1917 ರವರೆಗೆ ಯಾವುದು ದಕ್ಷಿಣ ರಾಜ ಆಗಿತ್ತು?

7 ಇಸವಿ 1870 ರಷ್ಟಕ್ಕೆ ಬ್ರಿಟನ್‌ ತನ್ನ ದೊಡ್ಡ ಸಾಮ್ರಾಜ್ಯವನ್ನು ಭೂಮಿಯಾದ್ಯಂತ ಕಟ್ಟಿಕೊಂಡಿತ್ತು ಮತ್ತು ಅದಕ್ಕಿದ್ದಷ್ಟು ಮಿಲಿಟರಿ ಶಕ್ತಿ ಬೇರೆ ಯಾವ ದೇಶಕ್ಕೂ ಇರಲಿಲ್ಲ. ದಾನಿಯೇಲನ ಇನ್ನೊಂದು ಪ್ರವಾದನೆ ಒಂದು ಚಿಕ್ಕ ಕೊಂಬು ಬೇರೆ ಮೂರು ಕೊಂಬುಗಳನ್ನು ಸೋಲಿಸಿದ್ದರ ಬಗ್ಗೆ ತಿಳಿಸುತ್ತೆ. ಆ ಚಿಕ್ಕ ಕೊಂಬು ಬ್ರಿಟನ್‌ ಅನ್ನು ಸೂಚಿಸುತ್ತದೆ ಮತ್ತು ಬೇರೆ ಮೂರು ಕೊಂಬುಗಳು ಫ್ರಾನ್ಸ್‌, ಸ್ಪೇನ್‌ ಮತ್ತು ನೆದರ್‌ಲ್ಯಾಂಡನ್ನು ಸೂಚಿಸುತ್ತವೆ. (ದಾನಿ. 7:7, 8) 1917 ರವರೆಗೆ ಬ್ರಿಟನ್‌ ದಕ್ಷಿಣ ರಾಜ ಆಗಿತ್ತು. ಅದೇ ಸಮಯದಲ್ಲಿ ಅಮೆರಿಕ ವಿಶ್ವದಲ್ಲೇ ಅತ್ಯಂತ ಶ್ರೀಮಂತ ದೇಶವಾಯ್ತು ಮತ್ತು ಬ್ರಿಟನಿನ ಮಿತ್ರರಾಷ್ಟ್ರವಾಯ್ತು.

8. ಕಡೇ ದಿವಸಗಳಲ್ಲಿ ದಕ್ಷಿಣ ರಾಜ ಯಾರಾಗಿದ್ದಾರೆ?

8 ಮೊದಲನೇ ಮಹಾಯುದ್ಧದಲ್ಲಿ ಅಮೆರಿಕ ಮತ್ತು ಬ್ರಿಟನ್‌ ಎರಡೂ ಒಟ್ಟಾಗಿ ಸೇರಿ ಯುದ್ಧ ಮಾಡಿದವು ಮತ್ತು ಬಲಶಾಲಿ ರಾಷ್ಟ್ರಗಳಾದವು. ಆ ಸಮಯದಲ್ಲಿಯೇ ಅವರೆಡೂ ರಾಷ್ಟ್ರಗಳು ಸೇರಿ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿಯಾಗಿ ಪರಿಣಮಿಸಿದವು. ದಾನಿಯೇಲನು ಮುಂತಿಳಿಸಿದಂತೆ ಈ ರಾಜನಿಗೆ ‘ಅತ್ಯಧಿಕ ಬಲವುಳ್ಳ ಮಹಾಸೈನ್ಯವಿತ್ತು.’ (ದಾನಿ. 11:25) ಕಡೇ ದಿವಸಗಳಲ್ಲಿ ಆ್ಯಂಗ್ಲೋ-ಅಮೆರಿಕನ್‌ ಲೋಕಶಕ್ತಿಯೇ ದಕ್ಷಿಣ ರಾಜನಾಗಿದೆ. * ಹಾಗಾದರೆ ಉತ್ತರ ರಾಜ ಯಾರು?

ಉತ್ತರ ರಾಜ ಯಾರು?

9. ಹೊಸ ಉತ್ತರ ರಾಜ ಯಾವಾಗ ಕಾಣಿಸಿಕೊಂಡನು ಮತ್ತು ದಾನಿಯೇಲ 11:25 ರಲ್ಲಿರುವ ಪ್ರವಾದನೆ ಹೇಗೆ ನೆರವೇರಿತು?

9 ಇಸವಿ 1871 ರಲ್ಲಿ ಅಂದರೆ ರಸಲ್‌ ಮತ್ತವರ ಸಂಗಡಿಗರು ಬೈಬಲ್‌ ಅಧ್ಯಯನ ಮಾಡೋಕೆ ಶುರು ಮಾಡಿದ ನಂತರದ ವರ್ಷದಲ್ಲಿ ಹೊಸ ಉತ್ತರ ರಾಜ ಕಾಣಿಸಿಕೊಂಡನು. ಅದು ಜರ್ಮನಿ ಆಗಿತ್ತು. ಆ ವರ್ಷದಲ್ಲಿ ಒಟೋ ವಾನ್‌ ಬಿಸ್ಮಾರ್ಕ್‌ ಎಂಬವನು ಕೆಲವು ಪ್ರಾಂತ್ಯಗಳನ್ನು ಒಟ್ಟುಗೂಡಿಸಿದನು, ಆ ಪ್ರಾಂತ್ಯಗಳೆಲ್ಲ ಸೇರಿ ಜರ್ಮನ್‌ ಸಾಮ್ರಾಜ್ಯ ಹುಟ್ಟಿಕೊಂಡಿತು. ಪ್ರಷ್ಯನ್‌ ರಾಜನಾದ ಮೊದಲನೇ ವಿಲ್‌ಹೆಲ್ಮ್‌ ಅದರ ಸಾಮ್ರಾಟನಾದನು ಮತ್ತು ಅವನು ಬಿಸ್ಮಾರ್ಕನನ್ನು ಆ ಸರಕಾರದ ಮೊದಲನೇ ಅಧ್ಯಕ್ಷನಾಗಿ (ಚಾನ್ಸಲರ್‌) ನೇಮಿಸಿದನು. * ಇದರ ನಂತರ ಹಲವು ದಶಕಗಳವರೆಗೂ ಜರ್ಮನಿಯು ಆಫ್ರಿಕಾದ ಮತ್ತು ಪೆಸಿಫಿಕ್‌ ಸಾಗರದ ಕೆಲವು ರಾಷ್ಟ್ರಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿತು ಮತ್ತು ಬ್ರಿಟನ್‌ಗಿಂತ ಬಲಶಾಲಿ ರಾಷ್ಟ್ರವಾಗೋಕೆ ಪ್ರಯತ್ನಿಸಿತು. (ದಾನಿಯೇಲ 11:25 ಓದಿ.) ಅದಕ್ಕಿದ್ದ ಮಿಲಿಟರಿ ಶಕ್ತಿ ಹೆಚ್ಚು ಕಡಿಮೆ ಬ್ರಿಟನ್‌ಗಿದ್ದ ಮಿಲಿಟರಿ ಶಕ್ತಿಯಷ್ಟೇ ಇತ್ತು ಮತ್ತು ಅದರ ನೌಕಾಸೇನೆ ಇಡೀ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿತ್ತು. ಮೊದಲನೇ ಮಹಾಯುದ್ಧದಲ್ಲಿ ತನ್ನ ಶತ್ರುಗಳ ವಿರುದ್ಧ ಹೋರಾಡೋಕೆ ಜರ್ಮನಿ ಈ ಮಿಲಿಟರಿ ಶಕ್ತಿ ಬಳಸಿತು.

10. ದಾನಿಯೇಲ 11:25ಬಿ, 26 ಹೇಗೆ ನೆರವೇರಿತು?

10 ದಾನಿಯೇಲನು ಜರ್ಮನ್‌ ಸಾಮ್ರಾಜ್ಯಕ್ಕೆ ಮತ್ತು ಅದು ಕಟ್ಟಿಕೊಂಡ ಮಿಲಿಟರಿ ಶಕ್ತಿಗೆ ಮುಂದೆ ಏನಾಗುತ್ತೆ ಅಂತನೂ ತಿಳಿಸಿದ್ದಾನೆ. ಆ ಪ್ರವಾದನೆ ಉತ್ತರ ರಾಜ “ನಿಲ್ಲಲಾರನು” ಅಂತ ತಿಳಿಸುತ್ತೆ. ಯಾಕೆ? ಯಾಕೆಂದರೆ “ಅವನು ಸೋಲುವ ಹಾಗೆ ಕುಯುಕ್ತಿಗಳನ್ನು ಕಲ್ಪಿಸುವರು, ಅವನ ಮೃಷ್ಟಾನ್ನವನ್ನು ತಿನ್ನುವವರೇ ಅವನನ್ನು ಭಂಗಪಡಿಸುವರು” ಅಂತ ಅದು ಹೇಳುತ್ತೆ. (ದಾನಿ. 11:25ಬಿ, 26ಎ) ದಾನಿಯೇಲನ ಕಾಲದಲ್ಲಿ ‘ರಾಜನ ಭೋಜನ ಪದಾರ್ಥವನ್ನು’ ‘ರಾಜನ ಸನ್ನಿಧಿಸೇವಕರಾಗಿ’ ಕೆಲಸ ಮಾಡುತ್ತಿದ್ದ ಉನ್ನತ ಅಧಿಕಾರಿಗಳು ತಿನ್ನುತ್ತಿದ್ದರು. (ದಾನಿ. 1:5) ಹಾಗಾದರೆ ಈ ಪ್ರವಾದನೆಯಲ್ಲಿ ಮೃಷ್ಟಾನ್ನ ತಿನ್ನುವವರು ಯಾರಾಗಿದ್ದರು? ಜರ್ಮನ್‌ ಸರಕಾರದಲ್ಲಿ ರಾಜನ ಜೊತೆ ನಿಕಟವಾಗಿ ಕೆಲಸಮಾಡುತ್ತಿದ್ದ ಅಧಿಕಾರಿಗಳು ಮತ್ತು ಮಿಲಿಟರಿ ಅಧಿಕಾರಿಗಳೇ ಮೃಷ್ಟಾನ್ನ ತಿನ್ನುವವರಾಗಿದ್ದರು. ಈ ಪ್ರಭಾವಶಾಲಿ ವ್ಯಕ್ತಿಗಳಿಂದಾಗಿ ರಾಜನು ತನ್ನ ಅಧಿಕಾರ ಕಳಕೊಂಡನು ಮತ್ತು ಜರ್ಮನಿಯಲ್ಲಿ ಒಂದು ಹೊಸ ಸರಕಾರ ಪ್ರಾರಂಭವಾಯಿತು. * ಈ ಪ್ರವಾದನೆ, ದಕ್ಷಿಣ ರಾಜನ ವಿರುದ್ಧ ಹೋರಾಡುವ ಉತ್ತರ ರಾಜನಿಗೆ ಏನಾಗುತ್ತೆ ಅನ್ನೋದರ ಬಗ್ಗೆನೂ ಹೀಗೆ ತಿಳಿಸುತ್ತೆ: ಉತ್ತರ ರಾಜನ ಸೈನ್ಯವು ಕೊಚ್ಚಿ ಹೋಗುತ್ತೆ ಮತ್ತು “ಬಹು ಜನರು ಹತರಾಗಿ ಬೀಳುವರು.” (ದಾನಿ. 11:26ಬಿ) ಪ್ರವಾದನೆಯಲ್ಲಿ ತಿಳಿಸಿದಂತೆ ಮೊದಲನೇ ಮಹಾಯುದ್ಧದಲ್ಲಿ, ಜರ್ಮನ್‌ ಸೈನ್ಯವು ಕೊಚ್ಚಿ ಹೋಯ್ತು ಮತ್ತು ಅನೇಕರು ಸತ್ತರು. ಮಾನವ ಇತಿಹಾಸದಲ್ಲೇ ಅಷ್ಟರ ತನಕ ನಡೆದ ಯುದ್ಧಗಳಿಗಿಂತ ಈ ಯುದ್ಧದಲ್ಲಿ ಸತ್ತವರ ಸಂಖ್ಯೆ ತುಂಬ ಹೆಚ್ಚಾಗಿತ್ತು.

11. ಉತ್ತರ ರಾಜ ಮತ್ತು ದಕ್ಷಿಣ ರಾಜ ಏನು ಮಾಡಿದರು?

11 ಮೊದಲನೇ ಮಹಾಯುದ್ಧಕ್ಕೂ ಮುಂಚೆ ಏನೆಲ್ಲ ನಡೆಯುತ್ತೆ ಅಂತ ದಾನಿಯೇಲ 11:27, 28 ತಿಳಿಸುತ್ತೆ. ಅದು ಹೇಳೋದು, ಉತ್ತರ ರಾಜ ಮತ್ತು ದಕ್ಷಿಣ ರಾಜ ‘ಸಹಪಂಕ್ತಿಯಲ್ಲಿ ಸುಳ್ಳುಸುಳ್ಳು ಮಾತಾಡಿಕೊಳ್ಳುವರು.’ ಅಷ್ಟೇ ಅಲ್ಲ, ‘ಉತ್ತರ ರಾಜನು ಬಹು ಆಸ್ತಿಯನ್ನು ಕೊಳ್ಳೆ ಹೊಡೆಯುವನು’ ಅಂತನೂ ಹೇಳುತ್ತೆ. ಇಲ್ಲಿ ಹೇಳಿರೋ ಥರನೇ ಎಲ್ಲ ವಿಷಯ ನಡೆಯಿತು. ಜರ್ಮನಿ ಮತ್ತು ಬ್ರಿಟನ್‌ ಒಬ್ಬರಿಗೊಬ್ಬರು ಶಾಂತಿಯಿಂದ ಇರೋಣ ಅಂತ ಮಾತಾಡಿಕೊಂಡವು. ಆದರೆ 1914 ರಲ್ಲಿ ಅವು ಒಂದಕ್ಕೊಂದು ಯುದ್ಧ ಮಾಡಿ ತಾವು ಮಾತಾಡಿಕೊಂಡಿದ್ದು ಸುಳ್ಳು ಅಂತ ತೋರಿಸಿಕೊಟ್ಟವು. ಅಷ್ಟೇ ಅಲ್ಲ, 1914 ರಷ್ಟಕ್ಕೆ ಜರ್ಮನಿ ಅತ್ಯಂತ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದರೆ ದಕ್ಷಿಣ ರಾಜನ ಜೊತೆ ಹೋರಾಡಿ ಜರ್ಮನಿ ಸೋತೋಯ್ತು. ಹೀಗೆ ದಾನಿಯೇಲ 11:29 ಮತ್ತು 30 ನೇ ವಚನದ ಮೊದಲ ಭಾಗ ನೆರವೇರಿತು.

ದೇವಜನರ ವಿರುದ್ಧ ಇಬ್ಬರು ರಾಜರ ಯುದ್ಧ

12. ಮೊದಲನೇ ಮಹಾಯುದ್ಧದಲ್ಲಿ ಉತ್ತರ ರಾಜ ಮತ್ತು ದಕ್ಷಿಣ ರಾಜ ಏನು ಮಾಡಿದರು?

12 ಇಸವಿ 1914 ರಿಂದ ಇಬ್ಬರು ರಾಜರು ಒಬ್ಬರಿಗೊಬ್ಬರು ಯುದ್ಧ ಮಾಡೋದನ್ನು ಮುಂದುವರಿಸಿದ್ರು ಮತ್ತು ದೇವಜನರ ಮೇಲೂ ಆಕ್ರಮಣ ಮಾಡಿದ್ರು. ಉದಾಹರಣೆಗೆ, ಮೊದಲನೇ ಮಹಾಯುದ್ಧದಲ್ಲಿ ದೇವರ ಸೇವಕರು ಯುದ್ಧದಲ್ಲಿ ಭಾಗವಹಿಸೋಕೆ ಒಪ್ಪದಿದ್ದ ಕಾರಣ ಅವರನ್ನು ಜರ್ಮನ್‌ ಸರಕಾರ ಮತ್ತು ಬ್ರಿಟನ್‌ ಸರಕಾರ ತುಂಬ ಹಿಂಸಿಸಿದವು. ಜೊತೆಗೆ ಪ್ರಕಟನೆ 11:7-10 ರಲ್ಲಿರುವ ಪ್ರವಾದನೆಯಂತೆ, ಅಮೆರಿಕ ಸರಕಾರವು ಸುವಾರ್ತೆ ಸಾರುವುದರಲ್ಲಿ ಮುಂದಾಳತ್ವ ವಹಿಸುತ್ತಿದ್ದವರನ್ನು ಬಂಧಿಸಿತು. ಹೀಗೆ ಆ ಪ್ರವಾದನೆ ನೆರವೇರಿತು.

13. ಇಸವಿ 1930 ರ ನಂತರ ಮತ್ತು ಎರಡನೇ ಮಹಾಯುದ್ಧದ ಸಮಯದಲ್ಲಿ ಉತ್ತರ ರಾಜ ಏನು ಮಾಡಿದನು?

13 ಇಸವಿ 1933 ರಿಂದ ಅದರಲ್ಲೂ ಎರಡನೇ ಮಹಾಯುದ್ಧದ ಸಮ್ಯದಲ್ಲಿ ಉತ್ತರ ರಾಜ ಒಂಚೂರು ಕರುಣೆ ತೋರಿಸದೆ ತುಂಬ ಕ್ರೂರವಾಗಿ ದೇವಜನರನ್ನು ಹಿಂಸಿಸಿದನು. ಜರ್ಮನಿಯ ಮೇಲೆ ನಾಜಿ ಪಕ್ಷ ತನ್ನ ಹಿಡಿತವನ್ನು ಸಾಧಿಸಿದ ಮೇಲೆ ಹಿಟ್ಲರ್‌ ಮತ್ತವನ ಹಿಂಬಾಲಕರು ದೇವಜನರ ಕೆಲಸವನ್ನು ನಿಷೇಧಿಸಿದರು. ಈ ವಿರೋಧಿಗಳು ಹೆಚ್ಚುಕಡಿಮೆ 1,500 ದೇವಜನ್ರನ್ನು ಕೊಂದರು ಮತ್ತು ಸಾವಿರಾರು ದೇವಜನರನ್ನು ಸೆರೆ ಶಿಬಿರಕ್ಕೆ ದೊಬ್ಬಿದರು. ಹೀಗೆ ಉತ್ತರ ರಾಜನ ವಿಷ್ಯದಲ್ಲಿ ದಾನಿಯೇಲನು ತಿಳಿಸಿದ್ದು ನಿಜ ಆಯ್ತು. ಉತ್ತರ ರಾಜನು ‘ಪವಿತ್ರಾಲಯವನ್ನು ಹೊಲೆಗೆಡಿಸಿ ನಿತ್ಯಹೋಮವನ್ನು ನೀಗಿಸಿದನು.’ ಅಂದ್ರೆ ಸಾರುವ ಕೆಲಸ ನಿಷೇಧಿಸಿ ಯೆಹೋವನ ಹೆಸ್ರಿಗೆ ಬಹಿರಂಗ ಸ್ತುತಿಸಲ್ಲದಂತೆ ತಡೆದನು. (ದಾನಿ. 11:30ಬಿ, 31ಎ) ಜರ್ಮನಿಯ ನಾಯಕನಾಗಿದ್ದ ಹಿಟ್ಲರನು ಆ ದೇಶದಲ್ಲಿದ್ದ ಎಲ್ಲ ದೇವಜನರನ್ನು ಕೊಂದುಹಾಕುತ್ತೇನೆ ಅಂತನೂ ಪ್ರತಿಜ್ಞೆ ಮಾಡಿದ್ದನು.

ಹೊಸ ಉತ್ತರ ರಾಜ

14. ಎರಡನೇ ಮಹಾಯುದ್ಧ ಆದ ಮೇಲೆ ಯಾರು ಉತ್ತರ ರಾಜ ಆದರು? ವಿವರಿಸಿ.

14 ಎರಡನೇ ಮಹಾಯುದ್ಧ ಆದ ಮೇಲೆ ಸೋವಿಯತ್‌ ಒಕ್ಕೂಟದ * ಕಮ್ಯೂನಿಸ್ಟ್‌ ಸರಕಾರ ಉತ್ತರ ರಾಜ ಆಯಿತು. ಅದು ಈ ಹಿಂದೆ ಜರ್ಮನಿಗೆ ಸೇರಿದ್ದ ವಿಸ್ತಾರವಾದ ಕ್ಷೇತ್ರವನ್ನು ಆಳಲಿಕ್ಕೆ ಆರಂಭಿಸ್ತು. ನಾಜಿ ಸರ್ಕಾರದಂತೆ ಸೋವಿಯತ್‌ ಒಕ್ಕೂಟ ಸಹ, ದೇಶಕ್ಕಿಂತ ಹೆಚ್ಚಾಗಿ ಸತ್ಯ ದೇವರ ಆರಾಧನೆಗೆ ಪ್ರಥಮ ಸ್ಥಾನ ಕೊಡುತ್ತಿದ್ದವರನ್ನು ತುಂಬ ಹಿಂಸಿಸಿತು.

15. ಎರಡನೇ ಮಹಾಯುದ್ಧ ಮುಗಿದ ನಂತರ ಉತ್ತರ ರಾಜ ಏನು ಮಾಡಿದನು?

15 ಎರಡನೇ ಮಹಾಯುದ್ಧ ಮುಗಿದ ನಂತರ ಹೊಸ ಉತ್ತರ ರಾಜ ಅಂದರೆ ಸೋವಿಯತ್‌ ಒಕ್ಕೂಟ ಮತ್ತದರ ಮಿತ್ರ ರಾಷ್ಟ್ರಗಳು ದೇವಜನರ ಮೇಲೆ ಆಕ್ರಮಣ ಮಾಡಿದವು. ದೇವಜನರಿಗೆ ಬಂದ ಹಿಂಸೆಯನ್ನು ಪ್ರಕಟನೆ 12:15-17 ಒಂದು ‘ನದಿಗೆ’ ಹೋಲಿಸುತ್ತದೆ. ಆ ಪ್ರವಾದನೆಯಲ್ಲಿರುವಂತೆ ಉತ್ತರ ರಾಜ ಸಾರುವ ಕೆಲಸವನ್ನು ನಿಷೇಧಿಸಿದನು ಮತ್ತು ಸಾವಿರಾರು ಯೆಹೋವನ ಜನರನ್ನು ಸೈಬೀರಿಯಾಕ್ಕೆ ಗಡೀಪಾರು ಮಾಡಿಬಿಟ್ಟನು. ಹಾಗಾಗಿ ಈ ಕಡೇ ದಿವಸಗಳಲ್ಲಿ ಉತ್ತರ ರಾಜನ ಪಾತ್ರವನ್ನು ನಿರ್ವಹಿಸುತ್ತಿರೋ ಸರ್ಕಾರಗಳು ದೇವಜನರ ಮೇಲೆ ಹೆಚ್ಚೆಚ್ಚು ಹಿಂಸೆ ತರೋದನ್ನು ಮುಂದುವರಿಸುತ್ತಿವೆ. ಆದರೆ ನಮ್ಮ ಕೆಲಸವನ್ನು ನಿಲ್ಲಿಸೋದಕ್ಕೆ ಅವುಗಳ ಕೈಯಿಂದ ಸಾಧ್ಯವಾಗಿಲ್ಲ. *

16. ದಾನಿಯೇಲ 11:37-39 ರಲ್ಲಿರೋ ಮಾತನ್ನು ಸೋವಿಯತ್‌ ಒಕ್ಕೂಟವು ಹೇಗೆ ನೆರವೇರಿಸಿತು?

16 ದಾನಿಯೇಲ 11:37-39 ಓದಿ. ಇಲ್ಲಿ ತಿಳಿಸಿರುವಂತೆ ಉತ್ತರ ರಾಜ ‘ತನ್ನ ಪಿತೃಗಳ ದೇವರುಗಳನ್ನು ಲಕ್ಷಿಸಲಿಲ್ಲ.’ ಅದು ಹೇಗೆ? ಸೋವಿಯತ್‌ ಒಕ್ಕೂಟಕ್ಕೆ ಧರ್ಮವನ್ನೇ ಸಂಪೂರ್ಣವಾಗಿ ನಿರ್ಮೂಲ ಮಾಡಬೇಕೆಂಬ ಉದ್ದೇಶ ಇತ್ತು. ಈ ನಿಟ್ಟಿನಲ್ಲಿ ಅದು, ಎಷ್ಟೋ ವರ್ಷಗಳಿಂದ ಇದ್ದ ಧಾರ್ಮಿಕ ಸಂಘಟನೆಗಳ ಅಧಿಕಾರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿತು. ಉದಾಹರಣೆಗೆ 1918 ರಲ್ಲಿ ಸೋವಿಯತ್‌ ಸರ್ಕಾರ ಶಾಲೆ ಮತ್ತು ಧರ್ಮದ ಕುರಿತು ಒಂದು ಆಜ್ಞೆ ಹೊರಡಿಸಿತು. ಇದ್ರಿಂದ ಶಾಲೆಗಳಲ್ಲಿ ದೇವರಿಲ್ಲ ಎಂಬ ನಾಸ್ತಿಕವಾದವನ್ನು ಕಲಿಸುವುದಕ್ಕೆ ಶುರುಮಾಡಿದ್ರು. ಉತ್ತರ ರಾಜ ಹೇಗೆ ‘ದುರ್ಗಾಭಿಮಾನಿ ದೇವರನ್ನು ಘನಪಡಿಸಿದನು’ ಅಂದರೆ ತನ್ನ ಶಕ್ತಿಯನ್ನು ಹೇಗೆ ಬಲಪಡಿಸಿಕೊಂಡನು? ಸೋವಿಯತ್‌ ಒಕ್ಕೂಟವು ಮಿಲಿಟರಿ ಸೇನೆಯನ್ನು ಕಟ್ಟಲು ಮತ್ತು ಸಾವಿರಾರು ನ್ಯೂಕ್ಲಿಯರ್‌ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಹಣವನ್ನು ನೀರಿನಂತೆ ಖರ್ಚುಮಾಡಿತು. ಅಂತೂ ಕೊನೆಗೆ, ಉತ್ತರ ರಾಜ ಮತ್ತು ದಕ್ಷಿಣ ರಾಜ ಕೋಟಿಗಟ್ಟಲೆ ಜನರನ್ನು ಸಾಯಿಸುವಷ್ಟು ಶಸ್ತ್ರಾಸ್ತ್ರಗಳನ್ನು ಒಟ್ಟುಗೂಡಿಸಿಕೊಂಡ್ರು!

ಇಬ್ಬರು ಶತ್ರುಗಳು ಒಂದಾದರು!

17. ‘ಹಾಳು ಮಾಡುವ ಅಸಹ್ಯ ವಸ್ತು’ ಯಾವುದಾಗಿದೆ?

17 ಒಂದು ಪ್ರಾಮುಖ್ಯವಾದ ವಿಷಯದಲ್ಲಿ ಉತ್ತರ ರಾಜ ಮತ್ತು ದಕ್ಷಿಣ ರಾಜ ಒಂದಾದರು. ಅವರು ‘ಹಾಳು ಮಾಡುವ ಅಸಹ್ಯವಸ್ತುವನ್ನು ಪ್ರತಿಷ್ಠಿಸಿದರು.’ (ದಾನಿ. 11:31) ವಿಶ್ವಸಂಸ್ಥೆಯೇ ಆ ‘ಅಸಹ್ಯವಸ್ತುವಾಗಿದೆ.’

18. ವಿಶ್ವಸಂಸ್ಥೆಯನ್ನು ಯಾಕೆ ಅಸಹ್ಯವಸ್ತು ಅಂತ ಕರೆಯಲಾಗಿದೆ?

18 ವಿಶ್ವಸಂಸ್ಥೆಯನ್ನು ಯಾಕೆ ‘ಹಾಳು ಮಾಡುವ ಅಸಹ್ಯವಸ್ತು’ ಎಂದು ಕರೆಯಲಾಗಿದೆ? ಯಾಕೆಂದರೆ ಅದು ಇಡೀ ಲೋಕಕ್ಕೆ ಶಾಂತಿಯನ್ನು ತರ್ತೀನಿ ಅಂತ ಹೇಳಿಕೊಳ್ಳುತ್ತೆ. ಆದರೆ ಇಡೀ ಲೋಕಕ್ಕೆ ಶಾಂತಿ ತರೋಕೆ ಆಗೋದು ದೇವರ ರಾಜ್ಯಕ್ಕೆ ಮಾತ್ರ. ಅಷ್ಟೇ ಅಲ್ಲ, ಆ ಅಸಹ್ಯವಸ್ತು “ಹಾಳು ಮಾಡುತ್ತೆ” ಅಂತ ಕೂಡ ಪ್ರವಾದನೆ ಹೇಳುತ್ತೆ. ಯಾಕೆಂದರೆ ಈ ಲೋಕದಲ್ಲಿರುವ ಎಲ್ಲ ಸುಳ್ಳು ಧರ್ಮಗಳನ್ನು ದಾಳಿ ಮಾಡಿ ಸಂಪೂರ್ಣವಾಗಿ ನಾಶಮಾಡುವುದರಲ್ಲಿ ವಿಶ್ವಸಂಸ್ಥೆ ಮಹತ್ವದ ಪಾತ್ರವನ್ನು ನಿರ್ವಹಿಸಲಿದೆ.—“ಅಂತ್ಯಕಾಲದಲ್ಲಿ ಕಿಡಿಕಾರೋ ರಾಜರು” ಎಂಬ ಚಾರ್ಟನ್ನು ನೋಡಿ.

ಈ ಇತಿಹಾಸದ ಬಗ್ಗೆ ನಾವ್ಯಾಕೆ ತಿಳುಕೊಳ್ಳಬೇಕು?

19-20. (ಎ) ನಾವ್ಯಾಕೆ ಈ ಇತಿಹಾಸದ ತಿಳಿದುಕೊಳ್ಳಬೇಕು? (ಬಿ) ಮುಂದಿನ ಲೇಖನದಲ್ಲಿ ಯಾವ ಪ್ರಶ್ನೆಗೆ ಉತ್ತರ ತಿಳಿಯಲಿದ್ದೇವೆ?

19 ಈ ಇತಿಹಾಸದ ಬಗ್ಗೆ ನಾವು ಯಾಕೆ ತಿಳುಕೊಳ್ಳಬೇಕು ಅಂದ್ರೆ ಉತ್ತರ ರಾಜ ಮತ್ತು ದಕ್ಷಿಣ ರಾಜನ ಬಗ್ಗೆ ಇರುವ ಪ್ರವಾದನೆ 1870 ರಿಂದ 1991 ರವರೆಗೆ ನೆರವೇರಿದೆ. ಹಾಗಾಗಿ ಆ ಪ್ರವಾದನೆಯ ಉಳಿದ ಘಟನೆಗಳು ಸಹ ಖಂಡಿತ ನೆರವೇರುತ್ತವೆ ಅಂತ ನಾವು ನಂಬಬಹುದು.

20 ಇಸವಿ 1991 ರಲ್ಲಿ ಸೋವಿಯತ್‌ ಒಕ್ಕೂಟ ಬಿದ್ದು ಹೋಯಿತು. ಹಾಗಾದರೆ ಈಗ ಉತ್ತರ ರಾಜ ಯಾರು? ಈ ಪ್ರಶ್ನೆಗೆ ಮುಂದಿನ ಲೇಖನದಲ್ಲಿ ಉತ್ತರ ಇದೆ.

ಗೀತೆ 135 ಕಡೇ ವರೆಗೆ ತಾಳಿಕೊಳ್ಳುವುದು

^ ಪ್ಯಾರ. 5 “ಉತ್ತರ ರಾಜ” ಮತ್ತು “ದಕ್ಷಿಣ ರಾಜ” ಬಗ್ಗೆ ಇರುವ ದಾನಿಯೇಲನ ಪ್ರವಾದನೆ ನೆರವೇರುತ್ತಿದೆ ಅನ್ನೋದಕ್ಕಿರೋ ಆಧಾರಗಳು ನಮ್ಮ ಕಣ್ಮುಂದೆ ಇವೆ. ಇವು ನಿಜವಾಗ್ಲೂ ನೆರವೇರುತ್ತಿವೆ ಅಂತ ಹೇಗೆ ಹೇಳಬಹುದು ಮತ್ತು ಈ ಪ್ರವಾದನೆಯ ವಿವರಗಳ ಬಗ್ಗೆ ನಾವ್ಯಾಕೆ ತಿಳ್ಕೋಬೇಕು?

^ ಪ್ಯಾರ. 5 ಈ ಕಾರಣದಿಂದಾಗಿ ಇನ್ನು ಮುಂದಕ್ಕೆ ರೋಮನ್‌ ಸಾಮ್ರಾಟನಾದ ಔರೇಲಿಯನ್‌ ಅನ್ನು (ಕ್ರಿ.ಶ. 270-275) “ಉತ್ತರ ರಾಜ” ಎಂದು ಅಥ್ವಾ ರಾಣಿ ಸೆನೋಬಿಯಳನ್ನು (ಕ್ರಿ.ಶ. 267-272) “ದಕ್ಷಿಣ ರಾಜ” ಎಂದು ಕರೆಯುವುದು ಸೂಕ್ತವಾಗಿರೋದಿಲ್ಲ. ಇದರಿಂದಾಗಿ ದಾನಿಯೇಲ ಪ್ರವಾದನೆಗೆ ಗಮನಕೊಡಿರಿ! ಎಂಬ ಪುಸ್ತಕದಲ್ಲಿರುವ ಅಧ್ಯಾಯ 13 ಮತ್ತು 14 ರಲ್ಲಿರುವ ವಿವರಣೆ ಬದಲಾಗುತ್ತೆ.

^ ಪ್ಯಾರ. 9 ಎರಡನೇ ಕೈಸರ್‌ ವಿಲ್‌ಹೆಲ್ಮ್‌ನು 1890 ರಲ್ಲಿ ಬಿಸ್ಮಾರ್ಕ್‌ನ ಅಧಿಕಾರವನ್ನು ಕಿತ್ತುಕೊಂಡನು.

^ ಪ್ಯಾರ. 10 ಆ ಅಧಿಕಾರಿಗಳು ಜರ್ಮನ್‌ ಸರ್ಕಾರ ಪತನವಾಗುವುದಕ್ಕೆ ಅನೇಕ ವಿಷ್ಯಗಳನ್ನು ಮಾಡಿದರು. ಉದಾಹರಣೆಗೆ, ಅವರು ಕೈಸರ್‌ಗೆ ಬೆಂಬಲ ಕೊಡೋದನ್ನು ಬಿಟ್ಟುಬಿಟ್ಟರು. ಯುದ್ಧದ ಬಗ್ಗೆ ಇದ್ದ ರಹಸ್ಯ ಮಾಹಿತಿಗಳನ್ನು ಬೇರೆಯವರಿಗೆ ತಿಳಿಸಿದರು ಮತ್ತು ರಾಜ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಒತ್ತಾಯಿಸಿದರು.

^ ಪ್ಯಾರ. 14 ಏಷ್ಯಾ ಮತ್ತು ಯುರೋಪಿನ ಹಲವಾರು ನಾಡುಗಳು ಸೇರಿ ಹುಟ್ಟಿಕೊಂಡ ಸಾಮ್ರಾಜ್ಯವೇ ಸೋವಿಯತ್‌ ಒಕ್ಕೂಟವಾಗಿದ್ದು, ಇದ್ರ ರಾಜಧಾನಿ ಮಾಸ್ಕೋ ಆಗಿದೆ.

^ ಪ್ಯಾರ. 15 ಇಸವಿ 1991 ರಲ್ಲಿ ಸೋವಿಯತ್‌ ಒಕ್ಕೂಟವು ಬಿದ್ದು ಹೋಯಿತು. ಆಗ ದಾನಿಯೇಲ 11:34 ರಲ್ಲಿ ತಿಳಿಸಿರುವಂತೆ ಉತ್ತರ ರಾಜನ ಕೆಳಗಿದ್ದ ಕ್ರೈಸ್ತರಿಗೆ ಸ್ವಲ್ಪ ಸಮಯಕ್ಕಾದರೂ ಹಿಂಸೆಯಿಂದ ಮುಕ್ತಿ ಸಿಕ್ಕಿತು.