ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 21

ದೇವರ ಉಡುಗೊರೆಗಳಿಗೆ ನೀವು ಕೃತಜ್ಞರಾ?

ದೇವರ ಉಡುಗೊರೆಗಳಿಗೆ ನೀವು ಕೃತಜ್ಞರಾ?

“ಯೆಹೋವನೇ, ನನ್ನ ದೇವರೇ, . . . ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ.”—ಕೀರ್ತ. 40:5.

ಗೀತೆ 110 ದೇವರ ಅದ್ಭುತಕಾರ್ಯಗಳು

ಕಿರುನೋಟ *

1-2. (ಎ) ಕೀರ್ತನೆ 40:5 ತಿಳಿಸುವಂತೆ ಯೆಹೋವನು ನಮ್ಗೆ ಯಾವೆಲ್ಲ ಉಡುಗೊರೆಗಳನ್ನು ಕೊಟ್ಟಿದ್ದಾನೆ? (ಬಿ) ಈ ಉಡುಗೊರೆಗಳ ಬಗ್ಗೆ ನಾವ್ಯಾಕೆ ಚರ್ಚಿಸಲಿದ್ದೇವೆ?

ಯೆಹೋವ ಧಾರಾಳವಾಗಿ ಕೊಡೋ ದೇವ್ರು. ಆತ ನಮಗೋಸ್ಕರ ಕೊಟ್ಟಿರೋ ಉಡುಗೊರೆಗಳ ಬಗ್ಗೆ ಯೋಚಿಸಿ: ಈ ಸುಂದರ ಭೂಮಿ, ನಮ್ಮ ಅದ್ಭುತ ಮೆದುಳು ಮತ್ತು ಯೆಹೋವನ ಅಮೂಲ್ಯ ವಾಕ್ಯ ಬೈಬಲ್‌. ಯೆಹೋವ ಈ ಮೂರು ಉಡುಗೊರೆಗಳನ್ನು ಕೊಟ್ಟಿರೋದ್ರಿಂದನೇ ನಮ್ಗೆ ಇರೋಕೆ ಸ್ಥಳ ಇದೆ, ಯೋಚಿಸೋ ಮಾತಾಡೋ ಸಾಮರ್ಥ್ಯ ಇದೆ. ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರನೂ ಸಿಕ್ಕಿವೆ.—ಕೀರ್ತನೆ 40:5 ಓದಿ.

2 ಈ ಲೇಖನದಲ್ಲಿ ಆ ಮೂರು ಉಡುಗೊರೆಗಳ ಬಗ್ಗೆ ಚರ್ಚಿಸಲಿದ್ದೇವೆ. ಅವುಗಳ ಬಗ್ಗೆ ಹೆಚ್ಚೆಚ್ಚು ಧ್ಯಾನಿಸ್ತಾ ಇದ್ರೆ ಅವುಗಳನ್ನು ಇನ್ನೂ ಅಮೂಲ್ಯವಾಗಿ ಕಾಣ್ತೇವೆ. ನಮ್ಮ ಪ್ರೀತಿಯ ಸೃಷ್ಟಿಕರ್ತ ಯೆಹೋವನನ್ನು ಮೆಚ್ಚಿಸಬೇಕೆಂಬ ಬಯಕೆನೂ ಹೆಚ್ಚಾಗುತ್ತೆ. (ಪ್ರಕ. 4:11) ವಿಕಾಸವಾದವೇ ಸರಿ ಅಂತ ನಂಬಿರೋ ಜನ್ರ ಹತ್ರ ದೇವರಿದ್ದಾನೆ ಅಂತ ಕಾರಣ ಕೊಟ್ಟು ಮಾತಾಡೋಕೆ ನಾವು ತಯಾರಾಗ್ತೇವೆ.

ಸರಿಸಾಟಿಯಿಲ್ಲದ ಗ್ರಹ

3. ಬೇರೆಲ್ಲಾ ಗ್ರಹಗಳಿಗಿಂತ ಭೂಮಿ ಯಾಕೆ ವಿಶೇಷವಾಗಿದೆ?

3 ದೇವ್ರು ಭೂಮಿಯನ್ನು ಸೃಷ್ಟಿಸಿರೋ ರೀತಿನೇ ಆತನಿಗೆಷ್ಟು ವಿವೇಕ ಇದೆ ಅನ್ನೋದನ್ನು ತೋರಿಸುತ್ತೆ. (ರೋಮ. 1:20; ಇಬ್ರಿ. 3:4) ಭೂಮಿ ತರಾನೇ ಬೇರೆ ಗ್ರಹಗಳೂ ಸೂರ್ಯನ ಸುತ್ತ ಸುತ್ತುತ್ತವೆ. ಆದ್ರೆ ಭೂಮಿ ಮೇಲೆ ಮಾತ್ರನೇ ಮಾನವರು ಜೀವಿಸೋಕೆ ಸಾಧ್ಯವಾಗುವಂಥ ಸೂಕ್ತ ವಾತಾವರಣ ಇದೆ.

4. ಮಾನವ ನಿರ್ಮಿತ ದೋಣಿಗಿಂತ ಭೂಮಿ ತುಂಬ ಅತ್ಯುತ್ತಮವಾಗಿದೆ ಅಂತ ಯಾಕೆ ಹೇಳ್ಬಹುದು?

4 ವಿಶಾಲ ಸಮುದ್ರದಂತಿರೋ ಅಂತರಿಕ್ಷದಲ್ಲಿ ಭೂಮಿ ಒಂದು ಚಿಕ್ಕ ದೋಣಿಯಂತೆ ಇದೆ. ಆದ್ರೆ ಜನ್ರಿಂದ ತುಂಬಿರುವ ಒಂದು ಮಾನವ ನಿರ್ಮಿತ ದೋಣಿಗೂ ಭೂಮಿಗೂ ತುಂಬ ವ್ಯತ್ಯಾಸಗಳಿವೆ. ಉದಾಹರಣೆಗೆ, ದೋಣಿಯಲ್ಲಿರೋವ್ರು ತಮಗೆ ಬೇಕಾದ ಆಮ್ಲಜನಕ, ಆಹಾರ ಮತ್ತು ನೀರನ್ನು ತಾವಾಗೇ ಉತ್ಪಾದಿಸಬೇಕಾದಲ್ಲಿ ಹಾಗೂ ಯಾವುದೇ ತ್ಯಾಜ್ಯವಸ್ತುಗಳನ್ನು ದೋಣಿಯಿಂದ ಎಸೆಯಲಾರದ ಪರಿಸ್ಥಿತಿ ಇದ್ದಲ್ಲಿ ಅವ್ರು ಎಷ್ಟು ಸಮಯ ಬದುಕುಳಿಯೋಕೆ ಆಗುತ್ತೆ? ಖಂಡಿತ ಅವ್ರೆಲ್ಲಾ ಬೇಗ ಸತ್ತುಹೋಗ್ತಾರೆ. ಆದ್ರೆ ಭೂಮಿ ಹಾಗಿಲ್ಲ. ಅದು ಕೋಟ್ಯಾನುಕೋಟಿ ಜೀವಿಗಳನ್ನು ಪೋಷಿಸುತ್ತಿದೆ. ನಮ್ಗೆ ಬೇಕಾದ ಆಮ್ಲಜನಕ, ಆಹಾರ ಮತ್ತು ನೀರನ್ನು ಅದು ಉತ್ಪಾದಿಸುತ್ತದೆ ಹಾಗೂ ಈ ಅವಶ್ಯಕ ವಿಷ್ಯಗಳ ಕೊರತೆ ಯಾವತ್ತಿಗೂ ಬರಲ್ಲ. ತ್ಯಾಜ್ಯವಸ್ತುಗಳೆಲ್ಲಾ ಭೂಮಿಯಲ್ಲೇ ಇದ್ದರೂ ಭೂಮಿ ಸುಂದರವಾಗಿ ಮತ್ತು ಜೀವಿಸೋಕೆ ಯೋಗ್ಯವಾದ ಸ್ಥಳವಾಗಿಯೇ ಇದೆ. ಅದು ಹೇಗೆ ಸಾಧ್ಯ? ಯೆಹೋವನು ಭೂಮಿನಾ ಹೇಗೆ ವಿನ್ಯಾಸ ಮಾಡಿದ್ದಾನೆಂದ್ರೆ, ಭೂಮಿಗೆ ತ್ಯಾಜ್ಯವನ್ನು ಪುನಃ ಉಪಯೋಗ ವಸ್ತುಗಳಾಗಿ ಪರಿವರ್ತಿಸೋ ಸಾಮರ್ಥ್ಯ ಇದೆ. ನಾವೀಗ ಯೆಹೋವನು ಅದ್ಭುತವಾಗಿ ವಿನ್ಯಾಸ ಮಾಡಿರೋ ಆಮ್ಲಜನಕ ಚಕ್ರ ಮತ್ತು ಜಲಚಕ್ರದ ಬಗ್ಗೆ ಚರ್ಚಿಸೋಣ.

5. ಆಮ್ಲಜನಕ ಚಕ್ರ ಅಂದರೇನು? ಮತ್ತು ಈ ಚಕ್ರದಿಂದ ನಾವೇನನ್ನು ನಂಬಬಹುದು?

5 ಜೀವಿಗಳು ಬದುಕಬೇಕೆಂದರೆ ಆಮ್ಲಜನಕ ಬೇಕು. ಪ್ರತಿವರ್ಷ ಹತ್ತು ಸಾವಿರ ಕೋಟಿ ಟನ್‌ಗಳಷ್ಟು ಆಮ್ಲಜನಕವನ್ನು ಜೀವಿಗಳು ಸೇವಿಸುತ್ತವೆ ಅಂತ ಅಂದಾಜು ಮಾಡಲಾಗಿದೆ. ಇದೇ ಜೀವಿಗಳು ತ್ಯಾಜ್ಯ ಅನಿಲವಾದ ಇಂಗಾಲದ ಡೈ ಆಕ್ಸೈಡನ್ನು ಹೊರಹಾಕುತ್ತವೆ. ಆದ್ರೂ ಯಾವತ್ತಿಗೂ, ಆಮ್ಲಜನಕ ಖಾಲಿಯಾಗೋದಿಲ್ಲ ಮತ್ತು ವಾತಾವರಣದಲ್ಲಿ ಬರೀ ಇಂಗಾಲದ ಡೈ ಆಕ್ಸೈಡ್‌ ತುಂಬಿಕೊಳ್ಳೋದಿಲ್ಲ. ಯಾಕಂದ್ರೆ ಯೆಹೋವನು ಸೃಷ್ಟಿಸಿರೋ ದೊಡ್ಡ ಮರಗಳಿಂದ ಹಿಡಿದು ಪುಟ್ಟ ಪಾಚಿಗಳು ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಂಡು ಆಮ್ಲಜನಕವನ್ನು ಹೊರಹಾಕುತ್ತವೆ. ಈ ಕ್ರಿಯೆಯಿಂದಾಗಿ ನಮಗೆ ಉಸಿರಾಡೋಕೆ ಆಮ್ಲಜನಕ ಸಿಗ್ತಿದೆ. ಹಾಗಾಗಿ ‘ದೇವರು ಎಲ್ಲ ಮನುಷ್ಯರಿಗೆ ಜೀವವನ್ನೂ ಶ್ವಾಸವನ್ನೂ ಕೊಟ್ಟಿದ್ದಾನೆ’ ಅಂತ ಅಪೊಸ್ತಲರ ಕಾರ್ಯಗಳು 17:24, 25 ರೋ ಮಾತನ್ನು ನಾವು ಕಣ್ಮುಚ್ಚಿ ನಂಬಬಹುದು.

6. ಜಲಚಕ್ರ ಅಂದರೇನು? ಇದ್ರಿಂದ ನಮ್ಗೆ ಏನು ಗೊತ್ತಾಗುತ್ತೆ? ( ಜಲಚಕ್ರ—ಯೆಹೋವನ ಉಡುಗೊರೆ ಎಂಬ ಚೌಕವನ್ನೂ ನೋಡಿ.)

6 ಭೂಮಿ ಸೂರ್ಯನಿಂದ ಸರಿಯಾದ ದೂರದಲ್ಲಿ ಇರೋದ್ರಿಂದ ನೀರನ್ನು ದ್ರವದ ರೂಪದಲ್ಲಿಡುವಂಥ ತಾಪಮಾನ ಅದಕ್ಕಿದೆ. ಒಂದುವೇಳೆ ಭೂಮಿ ಸೂರ್ಯನಿಗೆ ಈಗಿರೋದಕ್ಕಿಂತ ಸ್ವಲ್ಪ ಹತ್ತಿರ ಇದ್ದಿದ್ರೂ ನೀರೆಲ್ಲ ಆವಿಯಾಗ್ತಿಗ್ತು ಮತ್ತು ತಾಪಮಾನ ಏರುತ್ತಿತ್ತು. ಯಾವ ಜೀವಿಗಳು ಉಳಿಯುತ್ತಿರಲಿಲ್ಲ. ಒಂದುವೇಳೆ ಭೂಮಿ ಸೂರ್ಯನಿಗೆ ಈಗಿರೋದಕ್ಕಿಂತ ಸ್ವಲ್ಪ ದೂರ ಇದ್ದಿದ್ರೂ ನೀರೆಲ್ಲ ಹಿಮಗಟ್ಟಿ ಹೋಗ್ತಿತ್ತು ಮತ್ತು ಅದೊಂದು ದೊಡ್ಡ ಹಿಮದ ಚೆಂಡಿನ ತರ ಇರ್ತಿತ್ತು. ಯೆಹೋವನು ಭೂಮಿಯನ್ನು ಸೂರ್ಯನಿಂದ ಸರಿಯಾದ ದೂರದಲ್ಲಿ ಇಟ್ಟಿರೋದ್ರಿಂದ ಭೂಮಿಯಲ್ಲಿರೋ ಜಲಚಕ್ರ ಜೀವಿಗಳನ್ನು ಪೋಷಿಸುತ್ತಿದೆ. ಸೂರ್ಯ ಸಮುದ್ರದಲ್ಲಿರುವ ಮತ್ತು ಭೂಮಿ ಮೇಲಿರೋ ನೀರನ್ನು ಬಿಸಿ ಮಾಡುತ್ತೆ, ನಂತರ ಆ ನೀರು ಆವಿಯಾಗಿ ಮೋಡಗಳಾಗುತ್ತವೆ. ಪ್ರತಿವರ್ಷ ಸೂರ್ಯ, ಭೂಮಿಯಲ್ಲಿರೋ ಎಲ್ಲಾ ಸರೋವರಗಳ ನೀರಿಗಿಂತ ಹೆಚ್ಚಿನ ನೀರನ್ನು ಆವಿ ಮಾಡುತ್ತೆ. ಆವಿಯಾದ ನೀರು ವಾತಾವರಣದಲ್ಲಿ ಸುಮಾರು ಹತ್ತು ದಿನಗಳಿದ್ದು ಆಮೇಲೆ ಮಳೆ ರೂಪದಲ್ಲೋ ಹಿಮದ ರೂಪದಲ್ಲೋ ಭೂಮಿಗೆ ಬೀಳುತ್ತೆ. ಈ ನೀರು ಕೊನೆಗೆ ಸಮುದ್ರಕ್ಕೋ ಅಥ್ವಾ ಜಲಾಶಯಗಳಿಗೋ ಹರಿದು ಹೋಗುತ್ತೆ. ಈ ಜಲಚಕ್ರದ ಕ್ರಿಯೆ ಮುಂದುವರಿಯುತ್ತೆ. ಯೆಹೋವನು ವಿನ್ಯಾಸಿಸಿರೋ ಈ ಜಲಚಕ್ರದಿಂದ ಭೂಮಿ ಮೇಲೆ ಯಾವಾಗಲೂ ನೀರು ಇರುತ್ತೆ. ಇದ್ರಿಂದ ಆತನಿಗೆ ವಿವೇಕ ಇದೆ, ಶಕ್ತಿ ಇದೆ ಅಂತ ಗೊತ್ತಾಗುತ್ತೆ.—ಯೋಬ 36:27, 28; ಪ್ರಸಂ. 1:7.

7. ಕೀರ್ತನೆ 115:16 ರಲ್ಲಿ ತಿಳಿಸಿರುವ ಯೆಹೋವನ ಉಡುಗೊರೆಗೆ ನಾವು ಹೇಗೆಲ್ಲಾ ಕೃತಜ್ಞತೆ ತೋರಿಸಬಹುದು?

7 ಈ ಅಮೋಘ ಭೂಗ್ರಹ ಮತ್ತು ಅದರಲ್ಲಿ ದೇವ್ರು ನಮಗಾಗಿ ಇಟ್ಟಿರೋ ವಿಷ್ಯಗಳಿಗೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು? (ಕೀರ್ತನೆ 115:16 ಓದಿ.) ಮೊದಲ್ನೇದಾಗಿ, ಯೆಹೋವನು ಸೃಷ್ಟಿ ಮಾಡಿರೋ ವಿಷ್ಯಗಳ ಬಗ್ಗೆ ಧ್ಯಾನಿಸಬೇಕು. ಆಗ ಆತನು ನಮ್ಗೆ ಪ್ರತಿ ದಿನ ಕೊಡ್ತಿರೋ ಉಡುಗೊರೆಗಳಿಗಾಗಿ ಕೃತಜ್ಞತೆ ಹೇಳಲು ಮನಸ್ಸಾಗುತ್ತೆ. ಅಷ್ಟೇ ಅಲ್ಲ, ನಾವಿರುವ ಸ್ಥಳವನ್ನು ನಮ್ಮಿಂದಾದಷ್ಟು ಶುದ್ಧವಾಗಿ ಇಟ್ಟುಕೊಳ್ಳಬೇಕು. ಹೀಗೆ ಭೂಮಿ ನಮ್ಗೆ ತುಂಬ ಅಮೂಲ್ಯ ಅಂತ ತೋರಿಸಿಕೊಡ್ತೇವೆ.

ಅದ್ಭುತ ಮೆದುಳು

8. ನಮ್ಮ ಮೆದುಳನ್ನು ತುಂಬ ಅದ್ಭುತವಾಗಿ ವಿನ್ಯಾಸಿಸಲಾಗಿದೆ ಅಂತ ಯಾಕೆ ಹೇಳಬಹುದು?

8 ಮಾನವನ ಮೆದುಳು ಒಂದು ಅದ್ಭುತ ವಿನ್ಯಾಸ. ತಾಯಿಯ ಗರ್ಭದಲ್ಲೇ ಮೆದುಳು ತುಂಬ ವ್ಯವಸ್ಥಿತವಾಗಿ ರಚನೆಯಾಗುತ್ತೆ. ಒಂದು ನಿಮಿಷಕ್ಕೆ ಸಾವಿರಾರು ನರಕೋಶಗಳು ಉತ್ಪತ್ತಿಯಾಗಿ ವಂಶವಾಹಿ ಮಾಹಿತಿ ಪ್ರಕಾರನೇ ಮೆದುಳು ವಿನ್ಯಾಸವಾಗುತ್ತೆ. ಸಂಶೋಧಕರ ಪ್ರಕಾರ ವಯಸ್ಕರ ಮೆದುಳಿನಲ್ಲಿ ಸುಮಾರು 10,000 ಕೋಟಿ ವಿಶೇಷ ನರಕೋಶ ಇರುತ್ತವೆ. ಇವನ್ನು ನ್ಯೂರಾನ್‌ ಅಂತ ಕರೆಯಲಾಗುತ್ತೆ. ಈ ಕೋಶಗಳು ಒಟ್ಟುಗೂಡಿ ಸುಮಾರು ಒಂದೂವರೆ ಕೆ.ಜಿ.ಯಷ್ಟು (1.5 ಕೆ.ಜಿ.) ತೂಕದ ನಮ್ಮ ಮೆದುಳನ್ನು ರಚಿಸಿವೆ. ನಮ್ಮ ಮೆದುಳಿಗಿರುವ ಕೆಲವು ಅದ್ಭುತ ಸಾಮರ್ಥ್ಯಗಳ ಬಗ್ಗೆ ಈಗ ನೋಡೋಣ.

9. ಮಾತಾಡುವ ಸಾಮರ್ಥ್ಯ ದೇವರಿಂದ ಸಿಕ್ಕ ಉಡುಗೊರೆ ಅನ್ನೋದಕ್ಕೆ ಏನು ಆಧಾರ ಇದೆ?

9 ಮಾತಾಡುವ ಸಾಮರ್ಥ್ಯವೂ ಒಂದು ಅದ್ಭುತನೇ. ನಾವು ಮಾತಾಡಿದಾಗ ಏನಾಗುತ್ತೆ ಗೊತ್ತಾ? ಪ್ರತಿಯೊಂದು ಪದ ಉಚ್ಚರಿಸುವಾಗ ನಾಲಿಗೆ, ಗಂಟಲು, ತುಟಿ, ದವಡೆ ಮತ್ತು ಎದೆಯ ಸುಮಾರು 100 ಸ್ನಾಯುಗಳು ಒಂದಕ್ಕೊಂದು ಸಹಕರಿಸಿ ಕೆಲ್ಸ ಮಾಡುವಂತೆ ಮೆದುಳು ನೋಡಿಕೊಳ್ಳುತ್ತೆ. ಪದ ಸ್ಪಷ್ಟವಾಗಿ ಉಚ್ಚಾರಣೆ ಆಗಬೇಕಂದ್ರೆ ಆ ಎಲ್ಲಾ ಸ್ನಾಯುಗಳು ತಕ್ಕ ಸಮ್ಯದಲ್ಲಿ ತಕ್ಕ ರೀತಿಯಲ್ಲಿ ಕೆಲ್ಸ ಮಾಡ್ಬೇಕು. ಬೇರೆ ಬೇರೆ ಭಾಷೆ ಮಾತಾಡುವ ಸಾಮರ್ಥ್ಯದ ಬಗ್ಗೆ 2019 ರಲ್ಲಿ ಪ್ರಕಟವಾದ ಅಧ್ಯಯನದಿಂದ ಒಂದು ವಿಷ್ಯ ಗೊತ್ತಾಯ್ತು. ಅದೇನಂದ್ರೆ, ಈಗಷ್ಟೇ ಹುಟ್ಟಿರುವ ಮಗು ಪ್ರತಿಯೊಂದು ಪದವನ್ನು ಗುರುತಿಸಿ ಅದಕ್ಕೆ ಸ್ಪಂದಿಸುತ್ತಂತೆ. ಈ ಅಧ್ಯಯನದಿಂದ, ನಮ್ಗೆ ಹುಟ್ಟಿನಿಂದಲೇ ಭಾಷೆಗಳನ್ನು ಗುರುತಿಸಿ ಅವನ್ನು ಕಲಿಯೋ ಸಾಮರ್ಥ್ಯ ಇದೆ ಎಂಬ ಅನೇಕ ಸಂಶೋಧಕರ ನಂಬಿಕೆ ನಿಜವೆಂದು ಸ್ಪಷ್ಟವಾಗಿದೆ. ನಿಶ್ಚಯವಾಗಿ, ಮಾತಾಡುವ ಸಾಮರ್ಥ್ಯ ದೇವರಿಂದ ಸಿಕ್ಕ ಉಡುಗೊರೆ!—ವಿಮೋ. 4:11.

10. ದೇವರಿಂದ ನಮ್ಗೆ ಮಾತಾಡುವ ಉಡುಗೊರೆ ಸಿಕ್ಕಿರೋದಕ್ಕೆ ನಾವು ಕೃತಜ್ಞರಾಗಿದ್ದೇವೆಂದು ಹೇಗೆ ತೋರಿಸಬಹುದು?

10 ಮಾತಾಡುವ ಉಡುಗೊರೆ ಸಿಕ್ಕಿರೋದಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸ್ಬಹುದು? ವಿಕಾಸವಾದ ನಂಬುವ ಜನರ ಹತ್ತಿರ ದೇವರೇ ಎಲ್ಲವನ್ನೂ ಸೃಷ್ಟಿಮಾಡಿದ್ದಾನೆ ಅಂತ ನಾವ್ಯಾಕೆ ನಂಬುತ್ತೇವೆಂದು ವಿವರಿಸಬೇಕು. (ಕೀರ್ತ. 9:1; 1 ಪೇತ್ರ 3:15) ವಿಕಾಸವಾದವೇ ಸರಿ ಅಂತ ಸಮರ್ಥಿಸೋ ಜನ್ರು ಈ ಭೂಮಿ ಮತ್ತು ಇದರಲ್ಲಿರೋ ಜೀವಸಂಕುಲ ಆಕಸ್ಮಿಕವಾಗಿ ಬಂತು ಅಂತ ಹೇಳ್ತಾರೆ. ಅಂಥವರ ಹತ್ರ ನಾವು ಬೈಬಲನ್ನು ಮತ್ತು ಈ ಲೇಖನದಲ್ಲಿ ಚರ್ಚಿಸಿದ ಕೆಲವು ಅಂಶಗಳನ್ನು ಉಪಯೋಗಿಸಿ ನಮ್ಮ ಸ್ವರ್ಗೀಯ ತಂದೆ ಪರ ಮಾತಾಡ್ಬಹುದು. ಅಷ್ಟೇ ಅಲ್ಲ ಇದ್ರ ಬಗ್ಗೆ ಆಸಕ್ತಿ ತೋರಿಸೋವ್ರ ಹತ್ರ ಯೆಹೋವನೇ ಸ್ವರ್ಗ ಮತ್ತು ಭೂಮಿಯ ಸೃಷ್ಟಿಕರ್ತನಾಗಿದ್ದಾನೆ ಅನ್ನೋದನ್ನ ನಾವ್ಯಾಕೆ ಒಪ್ಪುತ್ತೇವೆಂದು ವಿವರಿಸಬಹುದು.—ಕೀರ್ತ. 102:25; ಯೆಶಾ. 40:25, 26.

11. ನಮ್ಮ ಮೆದುಳು ಅದ್ಭುತವಾಗಿದೆ ಅನ್ನೋದಕ್ಕೆ ಒಂದು ಕಾರಣ ಏನು?

11 ನೆನಪಿನ ಶಕ್ತಿನೂ ಒಂದು ಅದ್ಭುತನೇ. ಹಿಂದೆ ಒಬ್ಬ ಬರಹಗಾರ, ಮಾನವನ ಮೆದುಳಿಗೆ ಸುಮಾರು 2 ಕೋಟಿ ಪುಸ್ತಕಗಳಲ್ಲಿರುವ ಮಾಹಿತಿಯನ್ನು ನೆನಪಿಟ್ಟುಕೊಳ್ಳುವಷ್ಟು ಸಾಮರ್ಥ್ಯ ಇದೆ ಅಂತ ಅಂದಾಜು ಮಾಡಿದ್ದನು. ಆದ್ರೆ ಅದಕ್ಕಿಂತ ಹೆಚ್ಚಿನ ಮಾಹಿತಿಯನ್ನು ನಾವು ನೆನಪಿಟ್ಟುಕೊಳ್ಳಬಹುದು ಅನ್ನೋದು ಈಗ ಕಂಡುಬಂದಿದೆ. ನೆನಪಿನ ಶಕ್ತಿಯಿಂದಾಗಿ ನಮ್ಗೆ ಯಾವ ವಿಶೇಷ ಸಾಮರ್ಥ್ಯ ಇದೆ?

12. ಯಾವ ವಿಷ್ಯದಲ್ಲಿ ನಾವು ಪ್ರಾಣಿಗಳಿಗಿಂತ ಭಿನ್ನರಾಗಿದ್ದೇವೆ? ವಿವರಿಸಿ.

12 ಹಿಂದೆ ನಮಗಾದ ಅನುಭವಗಳನ್ನು ನೆನಪಲ್ಲಿಟ್ಟುಕೊಂಡು ನೀತಿ ಪಾಠಗಳನ್ನು ಕಲಿಯೋ ಸಾಮರ್ಥ್ಯ ನಮಗಿದೆ. ಈ ಸಾಮರ್ಥ್ಯ ಮನುಷ್ಯರಿಗೆ ಬಿಟ್ಟು ಭೂಮಿಯಲ್ಲಿರೋ ಬೇರೆ ಯಾವ ಪ್ರಾಣಿಗಳಿಗೂ ಇಲ್ಲ. ಈ ಸಾಮರ್ಥ್ಯ ನಮಗಿರೋದ್ರಿಂದ ನಮ್ಮ ಯೋಚನೆಗಳಲ್ಲಿ, ಜೀವಿಸೋ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು ಮತ್ತು ಉತ್ತಮ ವ್ಯಕ್ತಿಗಳಾಗಬಹುದು. (1 ಕೊರಿಂ. 6:9-11; ಕೊಲೊ. 3:9, 10) ಸರಿ ಮತ್ತು ತಪ್ಪುಗಳ ಮಧ್ಯೆ ಇರೋ ವ್ಯತ್ಯಾಸಗಳನ್ನು ಕಂಡುಹಿಡಿಯುವಂತೆ ನಮ್ಮ ಮನಸ್ಸಾಕ್ಷಿಗೂ ತರಬೇತಿ ಕೊಡಬಹುದು. (ಇಬ್ರಿ. 5:14) ಪ್ರೀತಿ, ಅನುಕಂಪ ಮತ್ತು ಕರುಣೆ ತೋರಿಸುವುದಕ್ಕೂ ನಾವು ಕಲಿಯಬಹುದು. ಯೆಹೋವನ ನ್ಯಾಯವನ್ನು ಅನುಕರಿಸೋಕೆ ಪ್ರಯತ್ನಿಸಬಹುದು.

13. ಕೀರ್ತನೆ 77:11, 12 ರಲ್ಲಿರುವಂತೆ ನೆನಪಿನ ಶಕ್ತಿ ಎಂಬ ಉಡುಗೊರೆಯನ್ನು ನಾವು ಹೇಗೆ ಉಪಯೋಗಿಸಿಕೊಳ್ಬೇಕು?

13 ನೆನಪಿನ ಶಕ್ತಿ ಎಂಬ ಉಡುಗೊರೆ ಸಿಕ್ಕಿರೋದಕ್ಕೆ ನಾವು ಕೃತಜ್ಞರಾಗಿದ್ದೇವೆ ಅಂತ ಹೇಗೆ ತೋರಿಸಿಕೊಡಬಹುದು? ಈ ಹಿಂದೆ ಯೆಹೋವನು ನಮ್ಗೆ ಹೇಗೆಲ್ಲಾ ಸಹಾಯ ಮಾಡಿದ್ದಾನೆ, ನಮ್ಮನ್ನು ಸಂತೈಸಿದ್ದಾನೆ ಅನ್ನೋದನ್ನು ನೆನಪಿಟ್ಟುಕೊಳ್ಳಬೇಕು. ಆಗ ಮುಂದೆನೂ ಆತ ನಮ್ಗೆ ಸಹಾಯ ಮಾಡುತ್ತಾನೆಂಬ ಭರವಸೆ ಇನ್ನೂ ದೃಢವಾಗುತ್ತೆ. (ಕೀರ್ತನೆ 77:11, 12 ಓದಿ; 78:4, 7) ಬೇರೆಯವ್ರು ಮಾಡಿರೋ ಒಳ್ಳೇ ವಿಷ್ಯಗಳನ್ನು ನೆನಪಿಸಿಕೊಂಡು ನಾವದಕ್ಕೂ ಕೃತಜ್ಞರಾಗಿರಬೇಕು. ಯಾರಲ್ಲಿ ಕೃತಜ್ಞತಾ ಮನೋಭಾವ ಇರುತ್ತೋ ಅವ್ರು ಬಹುಶಃ ಎಲ್ರಿಗಿಂತ ಸಂತೋಷವಾಗಿರುತ್ತಾರೆ ಅಂತ ಸಂಶೋಧಕರು ಕಂಡುಹಿಡಿದಿದ್ದಾರೆ. ಯೆಹೋವನು ಕೆಲವೊಂದು ವಿಷ್ಯಗಳನ್ನು ಮರೆತುಬಿಡೋಕೆ ಇಷ್ಟಪಡ್ತಾನೆ. ಇದನ್ನೇ ನಾವೂ ಮಾಡ್ಬೇಕು. ಉದಾಹರಣೆಗೆ, ಯೆಹೋವನಿಗೆ ಪರಿಪೂರ್ಣ ನೆನಪಿನ ಶಕ್ತಿ ಇದ್ರೂ ನಾವು ಪಶ್ಚಾತ್ತಾಪಪಟ್ಟಾಗ ಆತನು ನಮ್ಮ ತಪ್ಪುಗಳನ್ನು ಕ್ಷಮಿಸಿ, ಅವನ್ನು ಮರೆತುಬಿಡ್ತಾನೆ. (ಕೀರ್ತ. 25:7; 130:3, 4) ಅಷ್ಟೇ ಅಲ್ಲ, ನಮಗೆ ಯಾರಾದ್ರೂ ನೋವು ಮಾಡಿದಾಗ ನಾವು ಅವರ ತಪ್ಪನ್ನು ಕ್ಷಮಿಸಿ, ಮರೆತುಬಿಡಬೇಕು ಅಂತ ಯೆಹೋವನು ಬಯಸ್ತಾನೆ.—ಮತ್ತಾ. 6:14; ಲೂಕ 17:3, 4.

ನಮ್ಮ ಮೆದುಳನ್ನು ಯೆಹೋವನಿಗೆ ಮಹಿಮೆ ತರೋಕೆ ಉಪಯೋಗಿಸಬೇಕು. ಆಗ ಆ ಉಡುಗೊರೆಗೆ ನಾವು ಕೃತಜ್ಞರಾಗಿದ್ದೇವೆಂದು ತೋರಿಸಿಕೊಡ್ತೇವೆ (ಪ್ಯಾರ 14 ನೋಡಿ) *

14. ಅದ್ಭುತ ಉಡುಗೊರೆಯಾದ ಮೆದುಳು ಸಿಕ್ಕಿರೋದಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು?

14 ನಮ್ಗೆ ಮೆದುಳನ್ನು ಉಡುಗೊರೆಯಾಗಿ ಕೊಟ್ಟಿರೋವವನಿಗೆ ನಾವು ಇನ್ನೊಂದು ರೀತಿಯಲ್ಲೂ ಕೃತಜ್ಞತೆ ತೋರಿಸಬಹುದು. ಹೇಗಂದ್ರೆ, ನಮ್ಮ ಬುದ್ಧಿಶಕ್ತಿಯನ್ನು ಆತನಿಗೆ ಮಹಿಮೆ ಸಲ್ಲಿಸೋದಕ್ಕೆ ಉಪಯೋಗಿಸ್ಬೇಕು. ಕೆಲವ್ರು ಸ್ವಾರ್ಥ ಉದ್ದೇಶಕ್ಕಾಗಿ ತಮ್ಮ ಮೆದುಳನ್ನು ಉಪಯೋಗಿಸ್ತಾರೆ. ಅಂದ್ರೆ ಯಾವುದು ಸರಿ ಯಾವುದು ತಪ್ಪು ಅನ್ನೋ ವಿಷ್ಯದಲ್ಲಿ ತಮ್ಮದೇ ಆದ ನೀತಿ ನಿಯಮಗಳನ್ನು ಇಟ್ಟುಕೊಳ್ತಾರೆ. ಆದ್ರೆ ನಮಗೆ ಸರಿ ಅಂತ ಅನಿಸೋದನ್ನು ಮಾಡೋದಕ್ಕಿಂತ ಯೆಹೋವನ ನೀತಿ ನಿಯಮಗಳ ಪ್ರಕಾರ ನಡಕೊಳ್ಳೋದು ಒಳ್ಳೇದು. ಯಾಕೆಂದ್ರೆ ಆತನು ನಮ್ಮ ಸೃಷ್ಟಿಕರ್ತ. (ರೋಮ. 12:1, 2) ಯೆಹೋವನ ನೀತಿನಿಯಮಗಳಿಗೆ ತಕ್ಕಂತೆ ನಡಕೊಂಡಾಗ ನಮ್ಮ ಜೀವನದಲ್ಲಿ ಶಾಂತಿ ಇರುತ್ತೆ. (ಯೆಶಾ. 48:17, 18) ಅಷ್ಟೇ ಅಲ್ಲ ನಮ್ಮ ಸೃಷ್ಟಿಕರ್ತನು, ತಂದೆಯೂ ಆದ ಯೆಹೋವನಿಗೆ ಮಹಿಮೆ ತರುತ್ತೇವೆ ಮತ್ತು ಆತನು ನಮ್ಮ ಬಗ್ಗೆ ಹೆಮ್ಮೆಪಡುವಂತೆ ನಡಕೊಳ್ಳುತ್ತೇವೆ. ಯೆಹೋವನೂ ನಮ್ಮಿಂದ ಬಯಸೋದು ಇದನ್ನೇ.—ಜ್ಞಾನೋ. 27:11.

ಅಮೂಲ್ಯ ಉಡುಗೊರೆಯಾದ ಬೈಬಲ್‌

15. ಯೆಹೋವನಿಗೆ ಮನುಷ್ಯರ ಮೇಲೆ ಪ್ರೀತಿ ಇದೆ ಅನ್ನೋದು ಬೈಬಲ್‌ ಎಂಬ ಉಡುಗೊರೆಯಿಂದ ಹೇಗೆ ಗೊತ್ತಾಗುತ್ತೆ?

15 ಬೈಬಲ್‌ ದೇವರಿಂದ ಸಿಕ್ಕಿರುವ ಪ್ರೀತಿಯ ಉಡುಗೊರೆ. ಆತನಿಗೆ ನಮ್ಮ ಮೇಲೆ ಪ್ರೀತಿ ಇರುವ ಕಾರಣ ನಮಗಾಗಿ ಬೈಬಲನ್ನು ಬರೆಯುವಂತೆ ಭೂಮಿಯಲ್ಲಿದ್ದ ಕೆಲವು ಮನುಷ್ಯರನ್ನು ಪ್ರೇರಿಸಿದನು. ‘ಮನುಷ್ಯರು ಹೇಗೆ ಅಸ್ತಿತ್ವಕ್ಕೆ ಬಂದರು? ಜೀವನಕ್ಕೆ ಏನು ಉದ್ದೇಶ ಇದೆ? ಮುಂದೆ ಏನಾಗುತ್ತೆ?’ ಎಂಬಂಥ ಪ್ರಾಮುಖ್ಯ ಪ್ರಶ್ನೆಗಳಿಗೆ ಯೆಹೋವನು ಬೈಬಲ್‌ ಮೂಲಕ ಉತ್ತರ ಕೊಡ್ತಾನೆ. ತನ್ನೆಲ್ಲಾ ಮಕ್ಕಳು ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳುಕೊಳ್ಳಬೇಕು ಅನ್ನೋದೇ ಯೆಹೋವನ ಆಸೆ. ಹಾಗಾಗಿ ಶತಮಾನಗಳುದ್ದಕ್ಕೂ ಬೈಬಲನ್ನು ಬೇರೆ ಬೇರೆ ಭಾಷೆಗಳಲ್ಲಿ ಭಾಷಾಂತರ ಮಾಡೋದಕ್ಕೆ ಅನೇಕರನ್ನು ಪ್ರೇರಿಸಿದ್ದಾನೆ. ಇಂದು ಸಂಪೂರ್ಣ ಬೈಬಲ್‌ ಅಥವಾ ಅದರ ಭಾಗಗಳು ಸುಮಾರು 3,000 ಭಾಷೆಗಳಲ್ಲಿ ಲಭ್ಯವಿದೆ! ಇತಿಹಾಸದಲ್ಲೇ ಬೈಬಲಿನಷ್ಟು ಬೇರೆ ಯಾವ ಪುಸ್ತಕಗಳು ಭಾಷಾಂತರವೂ ಆಗಿಲ್ಲ, ವಿತರಣೆಯೂ ಆಗಿಲ್ಲ. ಜನ್ರು ಎಲ್ಲೇ ಇರಲಿ, ಯಾವುದೇ ಭಾಷೆ ಮಾತಾಡಲಿ ಅವ್ರಲ್ಲಿ ಅನೇಕರಿಗೆ ತಮ್ಮ ಮಾತೃಭಾಷೆಯಲ್ಲಿ ಬೈಬಲ್‌ ಸಂದೇಶವನ್ನು ತಿಳುಕೊಳ್ಳುವ ಅವಕಾಶ ಸಿಕ್ಕಿದೆ.—“ ಆಫ್ರಿಕಾದ ಭಾಷೆಗಳಲ್ಲಿ ಬೈಬಲ್‌ ಲಭ್ಯವಾದ ವಿಧ” ಎಂಬ ಚೌಕ ನೋಡಿ.

16. ನಾವು ಬೈಬಲನ್ನು ತುಂಬ ಮಾನ್ಯ ಮಾಡುತ್ತೇವೆಂದು ಮತ್ತಾಯ 28:19, 20 ರ ಆಧರಿತವಾಗಿ ಹೇಗೆ ತೋರಿಸಿಕೊಡ್ಬಹುದು?

16 ನಾವು ಬೈಬಲನ್ನು ಪ್ರತಿದಿನ ಓದಿ, ಅದ್ರ ಬಗ್ಗೆ ಧ್ಯಾನಿಸಿ, ಅದ್ರಲ್ಲಿರೋದನ್ನು ನಮ್ಮಿಂದಾದಷ್ಟು ಅನ್ವಯಿಸೋಕೆ ಪ್ರಯತ್ನಿಸಿದ್ರೆ ಬೈಬಲನ್ನು ತುಂಬ ಮಾನ್ಯ ಮಾಡುತ್ತೇವೆಂದು ತೋರಿಸಿಕೊಡುತ್ತೇವೆ. ಅಷ್ಟೇ ಅಲ್ಲ, ಬೈಬಲ್‌ ಏನನ್ನು ಕಲಿಸುತ್ತದೆ ಅನ್ನೋದ್ರ ಬಗ್ಗೆ ಆದಷ್ಟು ಹೆಚ್ಚು ಜನ್ರಿಗೆ ತಿಳಿಸ್ಬೇಕು.—ಕೀರ್ತ. 1:1-3; ಮತ್ತಾ. 24:14; ಮತ್ತಾಯ 28:19, 20 ಓದಿ.

17. ಈ ಲೇಖನದಲ್ಲಿ ನಾವು ಯಾವ ಉಡುಗೊರೆಗಳ ಬಗ್ಗೆ ಚರ್ಚಿಸಿದೆವು ಮತ್ತು ಮುಂದಿನ ಲೇಖನದಲ್ಲಿ ಯಾವುದರ ಬಗ್ಗೆ ಚರ್ಚಿಸಲಿದ್ದೇವೆ?

17 ಈ ಲೇಖನದಲ್ಲಿ ದೇವ್ರು ಕೊಟ್ಟಿರೋ ಉಡುಗೊರೆಗಳಾದ ಸುಂದರ ಭೂಮಿ, ಅದ್ಭುತವಾಗಿ ರಚನೆಯಾಗಿರೋ ನಮ್ಮ ಮೆದುಳು ಮತ್ತು ದೇವರ ಪ್ರೇರಿತ ವಾಕ್ಯವಾದ ಬೈಬಲ್‌ ಬಗ್ಗೆ ಚರ್ಚಿಸಿದೆವು. ಆದ್ರೆ ಯೆಹೋವನು ನಮ್ಮ ಕಣ್ಣಿಗೆ ಕಾಣದ ಉಡುಗೊರೆಗಳನ್ನೂ ಕೊಟ್ಟಿದ್ದಾನೆ. ಕಣ್ಣಿಗೆ ಕಾಣದ ಈ ಸಂಪತ್ತುಗಳ ಬಗ್ಗೆ ನಾವು ಮುಂದಿನ ಲೇಖನದಲ್ಲಿ ಚರ್ಚಿಸಲಿದ್ದೇವೆ.

ಗೀತೆ 112 ಮಹಾ ದೇವರಾದ ಯೆಹೋವನು

^ ಪ್ಯಾರ. 5 ಯೆಹೋವನ ಮೇಲೆ ಮತ್ತು ಆತನು ಕೊಟ್ಟಿರೋ ಮೂರು ಉಡುಗೊರೆಗಳ ಮೇಲೆ ಕೃತಜ್ಞತೆ ಬೆಳೆಸಿಕೊಳ್ಳೋಕೆ ಈ ಲೇಖನ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ, ದೇವರಿದ್ದಾನಾ ಅಂತ ಸಂಶಯಪಡುವವ್ರ ಹತ್ರ ಆತನಿದ್ದಾನೆ ಅಂತ ಕಾರಣ ಕೊಟ್ಟು ಮಾತಾಡೋಕೆ ಇದು ಸಹಾಯ ಮಾಡುತ್ತೆ.

^ ಪ್ಯಾರ. 64 ಚಿತ್ರ ವಿವರಣೆ: ಒಬ್ಬ ಸಹೋದರಿ ವಲಸೆ ಬಂದಿರೋ ಜನ್ರಿಗೆ ದೇವರ ವಾಕ್ಯದ ಸತ್ಯಗಳನ್ನು ಕಲಿಸೋದಕ್ಕಾಗಿ ವಿದೇಶೀ ಭಾಷೆ ಕಲಿಯುತ್ತಿದ್ದಾಳೆ.