ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 19

ಯೆಹೋವನನ್ನು ಆರಾಧಿಸುವುದರಿಂದ ನಿಮ್ಮನ್ನ ಯಾವುದೂ ತಡೆಯದಿರಲಿ

ಯೆಹೋವನನ್ನು ಆರಾಧಿಸುವುದರಿಂದ ನಿಮ್ಮನ್ನ ಯಾವುದೂ ತಡೆಯದಿರಲಿ

“ನಿನ್ನ ನಿಯಮಗಳನ್ನ ಪ್ರೀತಿಸೋರಿಗೆ ಅಪಾರ ಶಾಂತಿ ಸಿಗುತ್ತೆ, ಯಾವುದೂ ಅವ್ರನ್ನ ಎಡವಿಸಲ್ಲ.”—ಕೀರ್ತ. 119:165.

ಗೀತೆ 32 ಸ್ಥಿರಚಿತ್ತರೂ ನಿಶ್ಚಲರೂ ಆಗಿರಿ!

ಕಿರುನೋಟ *

1-2. (ಎ) ಒಬ್ಬ ಲೇಖಕ ಏನು ಹೇಳಿದ್ದಾರೆ? (ಬಿ) ಈ ಲೇಖನದಲ್ಲಿ ನಾವೇನನ್ನ ಚರ್ಚಿಸ್ತೀವಿ?

ಇವತ್ತು ಹೆಚ್ಚಿನ ಜನ್ರು ಯೇಸುನ ನಂಬ್ತಾರೆ. ಆದ್ರೆ ಯೇಸು ಹೇಳಿದ ಎಲ್ಲಾ ವಿಷ್ಯಗಳನ್ನ ಒಪ್ಕೊಳಲ್ಲ. (2 ತಿಮೊ. 4:3, 4) ಒಬ್ಬ ಲೇಖಕ ಹೀಗೆ ಹೇಳ್ತಾರೆ: “ಈಗಿನ ಕಾಲದಲ್ಲೂ ಒಬ್ಬ ಯೇಸು ಇದ್ದಿದ್ರೆ, ಅದೇ ವಿಷ್ಯಗಳನ್ನ ಅವನು ಕಲಿಸಿದ್ರೂ ಎರಡು ಸಾವಿರ ವರ್ಷಗಳ ಹಿಂದೆ ಜನ ಹೇಗೆ ನಂಬಲಿಲ್ವೋ ಅದೇ ತರ ಈಗ್ಲೂ ನಂಬಲ್ಲ.”

2 ಒಂದನೇ ಶತಮಾನದಲ್ಲಿ ಯೇಸು ಕಲಿಸಿದ್ದ ವಿಷ್ಯಗಳನ್ನ ಅವನು ಮಾಡಿದ ಅದ್ಭುತಗಳನ್ನ ತುಂಬ ಜನ ನೋಡಿದ್ರು. ಆದ್ರೂ ಯೇಸುನೇ ಮೆಸ್ಸೀಯ ಅಂತ ಅವರು ನಂಬಲಿಲ್ಲ. ಯಾಕೆ ಅಂತ ನಾಲ್ಕು ಕಾರಣಗಳನ್ನ ಹಿಂದಿನ ಲೇಖನದಲ್ಲಿ ನೋಡಿದ್ವಿ. ಇನ್ನೂ ನಾಲ್ಕು ಕಾರಣಗಳನ್ನ ಈ ಲೇಖನದಲ್ಲಿ ನೋಡ್ತೀವಿ. ಜೊತೆಗೆ, ಇವತ್ತು ನಾವು ಹೇಳೋ ಸಂದೇಶನ ಜನ್ರು ಯಾಕೆ ಕೇಳಲ್ಲ ಮತ್ತು ನಾವು ನಂಬಿಕೆ ಕಳ್ಕೊಳ್ಳದೇ ಇರೋಕೆ ಏನು ಮಾಡಬೇಕು ಅಂತನೂ ನೋಡ್ತೀವಿ.

(1) ಯೇಸು ಭೇದಭಾವ ಮಾಡ್ತಾ ಇರ್ಲಿಲ್ಲ

ಯೇಸು ಭೇದಭಾವ ಮಾಡದೆ ಇದ್ದಿದ್ದನ್ನ ನೋಡಿ ತುಂಬ ಜನ ಯೇಸುನ ನಂಬಲಿಲ್ಲ. ಇವತ್ತು ಕೂಡ ಇದೇ ಕಾರಣಗಳು ಜನರನ್ನ ತಡೆಯುತ್ತಿರಬಹುದು. (ಪ್ಯಾರ 3 ನೋಡಿ) *

3. ಯೇಸು ಮಾಡ್ತಿದ್ದ ಯಾವ ವಿಷಯ ಕೆಲವರಿಗೆ ಇಷ್ಟ ಆಗ್ಲಿಲ್ಲ?

3 ಯೇಸು ಭೂಮಿಯಲ್ಲಿದ್ದಾಗ ಎಲ್ಲ ರೀತಿಯ ಜನ್ರ ಜೊತೆ ಬೆರೀತಿದ್ದ. ಅವನು ಶ್ರೀಮಂತರು ಮತ್ತು ಅಧಿಕಾರಿಗಳ ಜೊತೆ ಕೂತು ಊಟ ಮಾಡ್ತಿದ್ದ. ಜೊತೆಗೆ ಬಡವರು ಪಾಪದವರ ಜೊತೆನೂ ಸಮಯ ಕಳೀತಿದ್ದ. ಸಮಾಜದಲ್ಲಿ ಯಾರನ್ನ ‘ಪಾಪಿಗಳು’ ಅಂತ ಕರೀತಿದ್ರೋ ಅವ್ರನ್ನ ಕಂಡ್ರೆ ಯೇಸುಗೆ ತುಂಬ ಅನುಕಂಪ ಇತ್ತು. ಈ ತರ ಯೇಸು ನಡ್ಕೊಳ್ತಾ ಇದ್ದಿದ್ದು ಕೆಲವು ಅಹಂಕಾರಿಗಳಿಗೆ ಇಷ್ಟ ಆಗ್ಲಿಲ್ಲ. ಅದಕ್ಕೆ ಅವರು ಅವನ ಶಿಷ್ಯರ ಹತ್ರ ಹೋಗಿ “ನೀವು ತೆರಿಗೆ ವಸೂಲಿ ಮಾಡುವವರ ಜೊತೆ, ಪಾಪಿಗಳ ಜೊತೆ ಯಾಕೆ ಊಟಮಾಡ್ತೀರ?” ಅಂತ ಕೇಳಿದ್ರು. ಅದಕ್ಕೆ ಯೇಸು: “ಆರೋಗ್ಯವಾಗಿ ಇರೋರಿಗೆ ವೈದ್ಯ ಬೇಕಾಗಿಲ್ಲ, ರೋಗಿಗಳಿಗೆ ಬೇಕು. ನಾನು ನೀತಿವಂತರನ್ನಲ್ಲ, ಪಾಪಿಗಳನ್ನ ಕರಿಯೋಕೆ ಬಂದಿದ್ದೀನಿ” ಅಂತ ಹೇಳಿದನು.—ಲೂಕ 5:29-32.

4. ಪ್ರವಾದಿ ಯೆಶಾಯ ಹೇಳಿದ ಭವಿಷ್ಯವಾಣಿ ಪ್ರಕಾರ ಯೆಹೂದಿಗಳು ಮೆಸ್ಸೀಯನ ವಿಷಯದಲ್ಲಿ ಏನು ಅರ್ಥಮಾಡ್ಕೊಬೇಕಿತ್ತು?

4 ಇದರ ಬಗ್ಗೆ ಬೈಬಲಲ್ಲಿ ಏನಿದೆ? ಮೆಸ್ಸೀಯ ಬರೋ ತುಂಬ ಸಮಯದ ಮುಂಚೆನೇ ಪ್ರವಾದಿ ಯೆಶಾಯ ಲೋಕ ಮೆಸ್ಸೀಯನನ್ನ ಸ್ವೀಕರಿಸಲ್ಲ ಅಂತ ಭವಿಷ್ಯವಾಣಿ ನುಡಿದಿದ್ದ. ಆ ಭವಿಷ್ಯವಾಣಿ ಹೀಗಿತ್ತು: “ಅವನನ್ನ ತಿರಸ್ಕಾರದಿಂದ ನೋಡಲಾಯ್ತು, ಮನುಷ್ಯರು ಅವನನ್ನ ದೂರ ಮಾಡಿದ್ರು . . . ಅವನ ಮುಖವನ್ನ ನೋಡದೇ ಇರೋಕೆ ನಾವು ನಮ್ಮ ದೃಷ್ಟಿಯನ್ನ ತಿರುಗಿಸ್ಕೊಂಡ್ವಿ, ಅವನನ್ನ ತಿರಸ್ಕಾರದಿಂದ ಕಾಣಲಾಯ್ತು, ನಾವು ಅವನಿಗೆ ಕಿಂಚಿತ್ತೂ ಬೆಲೆ ಕೊಡಲಿಲ್ಲ.” (ಯೆಶಾ. 53:3) ಮೆಸ್ಸೀಯನನ್ನ ಮನುಷ್ಯರು ದೂರ ಮಾಡ್ತಾರೆ ಅಂತ ಆ ಭವಿಷ್ಯವಾಣಿಯಲ್ಲಿತ್ತು. ಅದೇ ತರ ಜನ ಯೇಸು ಜೊತೆ ನಡ್ಕೊಂಡಾಗ ಆ ಭವಿಷ್ಯವಾಣಿ ನೆರವೇರುತ್ತಿದೆ ಅಂತ ಆಗಿನ ಯೆಹೂದಿಗಳು ಅರ್ಥಮಾಡ್ಕೊಬೇಕಿತ್ತು.

5. ಯೆಹೋವನ ಜನರನ್ನ ಲೋಕದ ಜನ ಹೇಗೆ ನೋಡ್ತಾರೆ?

5 ಇವತ್ತೂ ಜನ ಹಾಗೇ ಇದ್ದಾರಾ? ಹೌದು, ಹಾಗೇ ಇದ್ದಾರೆ. ಇವತ್ತು ಹೆಚ್ಚಿನ ಧರ್ಮಗುರುಗಳು ಲೋಕದಲ್ಲಿ ಗಣ್ಯ ವ್ಯಕ್ತಿಗಳನ್ನ, ಶ್ರೀಮಂತರನ್ನ, ಲೋಕ ಯಾರನ್ನ ಬುದ್ಧಿವಂತರು ಅಂತ ಎಣಿಸುತ್ತೋ ಅಂತ ಜನರನ್ನ ತಮ್ಮ ಧರ್ಮದ ಸದಸ್ಯರನ್ನಾಗಿ ಸಂತೋಷದಿಂದ ಸ್ವೀಕರಿಸಿಕೊಳ್ತಾರೆ. ಅವರ ನಡತೆ, ಜೀವನರೀತಿ ದೇವರ ನೀತಿ ನಿಯಮಗಳಿಗೆ ವಿರುದ್ಧವಾಗಿದ್ರೂ ಪರ್ವಾಗಿಲ್ಲ, ಧರ್ಮಗುರುಗಳು ಅವರನ್ನ ಒಪ್ಕೊಳ್ತಾರೆ. ಆದ್ರೆ ಒಳ್ಳೇ ನಡತೆಯಿರೋ ಯೆಹೋವನ ಆರಾಧಕರನ್ನ ಈ ಧರ್ಮಗುರುಗಳು ಕೀಳಾಗಿ ನೋಡ್ತಾರೆ. ಯಾಕಂದ್ರೆ ಅವರಿಗೆ ಈ ಲೋಕದಲ್ಲಿ ಬೆಲೆಯಿಲ್ಲ. ಪೌಲ ಹೇಳಿದಂತೆ “ಈ ಲೋಕದ ದೃಷ್ಟಿಯಲ್ಲಿ ಕೀಳಾದ” ಜನರನ್ನೇ ದೇವರು ಆರಿಸ್ಕೊಳ್ತಾನೆ. (1 ಕೊರಿಂ. 1:26-29) ಅಂಥ ನಿಷ್ಠಾವಂತ ಸೇವಕರು ಯೆಹೋವನ ದೃಷ್ಟಿಯಲ್ಲಿ ತುಂಬ ಅಮೂಲ್ಯರಾಗಿದ್ದಾರೆ.

6. (ಎ) ಮತ್ತಾಯ 11:25, 26ರಲ್ಲಿ ಯೇಸು ಏನು ಹೇಳಿದ್ದಾನೆ? (ಬಿ) ಯೇಸುನ ನಾವು ಹೇಗೆ ಅನುಕರಿಸಬಹುದು?

6 ನಂಬಿಕೆ ಕಳ್ಕೊಳ್ಳದೇ ಇರೋಕೆ ಏನು ಮಾಡಬೇಕು? (ಮತ್ತಾಯ 11:25, 26 ಓದಿ.) ದೇವಜನರನ್ನ ಈ ಲೋಕ ಹೇಗೆ ನೋಡುತ್ತೋ ಹಾಗೆ ನಾವು ನೋಡಬಾರದು. ಯೆಹೋವ ತನ್ನ ಸೇವೆ ಮಾಡೋಕೆ ದೀನ ಜನರನ್ನ ಮಾತ್ರ ಬಳಸ್ತಾನೆ ಅನ್ನೋದನ್ನ ನಾವು ಒಪ್ಕೊಬೇಕು. (ಕೀರ್ತ. 138:6) ಅಷ್ಟೇ ಅಲ್ಲ, ಲೋಕದ ದೃಷ್ಟೀಲಿ ವಿದ್ಯಾವಂತರು ಬುದ್ಧಿವಂತರಲ್ಲದ ಜನರನ್ನ ಬಳಸಿ ಯೆಹೋವ ದೇವರು ಏನನ್ನೆಲ್ಲ ಸಾಧಿಸಿದ್ದಾನೆ ಅನ್ನೋದ್ರ ಬಗ್ಗೆನೂ ನಾವು ಚೆನ್ನಾಗಿ ಯೋಚಿಸಬೇಕು.

(2) ಯೇಸು ತಪ್ಪಾದ ಬೋಧನೆಗಳನ್ನು ಖಂಡಿಸಿದನು

7. (ಎ) ಯೇಸು ಫರಿಸಾಯರನ್ನ ಯಾಕೆ ಕಪಟಿಗಳು ಅಂತ ಕರೆದ? (ಬಿ) ಆಗ ಅವರಿಗೆ ಹೇಗೆ ಅನಿಸ್ತು?

7 ಧರ್ಮಗುರುಗಳು ಮಾಡಿದ್ದ ಸಂಪ್ರದಾಯವನ್ನು ಯೇಸು ಧೈರ್ಯವಾಗಿ ಖಂಡಿಸಿದನು. ಉದಾಹರಣೆಗೆ, ಯಾರಾದ್ರು ಸಂಪ್ರದಾಯದ ಪ್ರಕಾರ ಕೈ ತೊಳಿಲಿಲ್ಲ ಅಂದ್ರೆ ಫರಿಸಾಯರು ರೇಗಾಡ್ತಿದ್ರು. ಅದೇ ಯಾರಾದ್ರು ಅಪ್ಪ-ಅಮ್ಮನ್ನ ಸರಿಯಾಗಿ ನೋಡ್ಕೊಂಡಿಲ್ಲ ಅಂದ್ರೆ ಅವರು ಏನೂ ಹೇಳ್ತಿರಲಿಲ್ಲ, ಸುಮ್ನೆ ಇದ್ದುಬಿಡುತ್ತಿದ್ರು. ಅದಕ್ಕೆ ಯೇಸು ಫರಿಸಾಯರನ್ನ ಕಪಟಿಗಳು ಅಂತ ಕರೆದ. (ಮತ್ತಾ. 15:1-11) ಆ ಮಾತು ಕೇಳಿ ಯೇಸುವಿನ ಶಿಷ್ಯರಿಗೆ ಭಯ ಗಾಬರಿ ಆಯ್ತು. ಅವರು ಯೇಸು ಹತ್ರ ಬಂದು “ನೀನು ಹೇಳಿದ್ದನ್ನ ಕೇಳಿ ಫರಿಸಾಯರಿಗೆ ಕೋಪ ಬಂದಿದ್ದನ್ನ ನೋಡಿದ್ಯಾ?” ಅಂತ ಕೇಳಿದ್ರು. ಅದಕ್ಕೆ ಯೇಸು “ಸ್ವರ್ಗದಲ್ಲಿರೋ ನನ್ನ ತಂದೆ ನೆಡದ ಗಿಡಗಳನ್ನೆಲ್ಲ ಆತನು ಬೇರುಸಮೇತ ಕಿತ್ತುಹಾಕ್ತಾನೆ. ಅವರ ಬಗ್ಗೆ ತಲೆಕೆಡಿಸ್ಕೊಬೇಡಿ. ಅವ್ರೇ ಕುರುಡರು, ಅಂಥದ್ರಲ್ಲಿ ಅವರು ಇನ್ನೊಬ್ಬರಿಗೆ ದಾರಿ ತೋರಿಸ್ತಾರೆ. ಒಬ್ಬ ಕುರುಡ ಇನ್ನೊಬ್ಬ ಕುರುಡನಿಗೆ ದಾರಿತೋರಿಸಿದ್ರೆ ಇಬ್ರೂ ಗುಂಡಿಗೆ ಬೀಳ್ತಾರೆ” ಅಂತ ಹೇಳ್ದ. (ಮತ್ತಾ. 15:12-14) ಯೇಸು ಹೇಳಿದ್ದನ್ನ ಕೇಳಿ ಧರ್ಮಗುರುಗಳಿಗೆ ಪಿತ್ತ ನೆತ್ತಿಗೇರಿದ್ರೂ ಯೇಸು ಅಂತೂ ಅವರಿಗೆ ಭಯಪಟ್ಟು ಸತ್ಯ ಹೇಳೋದನ್ನ ನಿಲ್ಲಿಸಲಿಲ್ಲ.

8. ಕೆಲವು ಬೋಧನೆಗಳು ದೇವರಿಗೆ ಇಷ್ಟ ಆಗಲ್ಲ ಅಂತ ಯೇಸು ಜನ್ರಿಗೆ ಹೇಗೆ ಅರ್ಥಮಾಡಿಸಿದನು?

8 ಧರ್ಮಗುರುಗಳು ಬೋಧಿಸುತ್ತಿದ್ದ ಕೆಲವೊಂದು ವಿಷ್ಯಗಳು ತಪ್ಪು ಅಂತ ಯೇಸು ಖಂಡಿಸಿದನು. ಕೆಲವೊಂದು ನಂಬಿಕೆಗಳು ದೇವರಿಗೆ ಇಷ್ಟ ಆಗಲ್ಲ ಅಂತ ಯೇಸು ಹೇಳಿದನು. ಇದನ್ನ ಅವನು ಹೇಗೆ ಜನ್ರಿಗೆ ಅರ್ಥಮಾಡಿಸಿದನು? ಅವನು ಎರಡು ದಾರಿಗಳ ಬಗ್ಗೆ ತಿಳಿಸಿದನು. ಒಂದು, ವಿಶಾಲವಾದ ದಾರಿ ಅದ್ರಲ್ಲಿ ತುಂಬ ಜನ ಹೋಗ್ತಾರೆ. ಆದ್ರೆ ಅದು ನಾಶಕ್ಕೆ ನಡಿಸುತ್ತೆ. ಎರಡನೇದು ಇಕ್ಕಟ್ಟಾದ ದಾರಿ, ಅದ್ರಲ್ಲಿ ಸ್ವಲ್ಪ ಜನಾನೇ ಹೋಗೋದು. ಆದ್ರೆ ಅದು ಜೀವಕ್ಕೆ ನಡಿಸುತ್ತೆ ಅಂತ ವಿವರಿಸಿದನು. (ಮತ್ತಾ. 7:13, 14) ಅಷ್ಟೇ ಅಲ್ಲ, ಯೇಸು ತನ್ನ ಶಿಷ್ಯರಿಗೆ “ಎಚ್ಚರವಾಗಿರಿ. ಕುರಿವೇಷ ಹಾಕಿ ನಿಮ್ಮ ಹತ್ರ ಸುಳ್ಳು ಪ್ರವಾದಿಗಳು ಬರ್ತಾರೆ. ಅವರು ತುಂಬ ಹಸಿದಿರೋ ತೋಳಗಳ ತರ ನಿಮ್ಮನ್ನ ನುಂಗೋಕೆ ಕಾಯ್ತಿದ್ದಾರೆ. ಅವರು ಮಾಡೋ ಕೆಲಸಗಳಿಂದಾನೇ ನೀವು ಅವ್ರನ್ನ ಕಂಡುಹಿಡಿತೀರ” ಅಂತ ಹೇಳ್ದ. (ಮತ್ತಾ. 7:15-20) ಹೀಗೆ ಯೇಸು ಮುಂದಕ್ಕೆ ಕೆಲವರು ದೇವರ ಸೇವೆ ಮಾಡ್ತೀವಿ ಅಂತ ಹೇಳ್ಕೊಂಡು ಬರ್ತಾರೆ, ಆದ್ರೆ ಅವರಿಗೆ ನಿಜವಾದ ಭಕ್ತಿ ಇರಲ್ಲ ಅಂತ ಹೇಳಿದನು.

ಯೇಸು ಸುಳ್ಳು ನಂಬಿಕೆಗಳನ್ನ, ಸಂಪ್ರದಾಯಗಳನ್ನ ಖಂಡಿಸಿದ್ದನ್ನ ನೋಡಿ ತುಂಬ ಜನ ಯೇಸುನ ನಂಬಲಿಲ್ಲ. ಇವತ್ತು ಕೂಡ ಇದೇ ಕಾರಣಗಳು ಜನರನ್ನ ತಡೆಯುತ್ತಿರಬಹುದು. (ಪ್ಯಾರ 9 ನೋಡಿ) *

9. ಯಾವ ತಪ್ಪಾದ ಬೋಧನೆಗಳನ್ನ ಯೇಸು ಬಯಲಿಗೆಳೆದನು? ಉದಾಹರಣೆ ಕೊಡಿ.

9 ಇದರ ಬಗ್ಗೆ ಬೈಬಲಲ್ಲಿ ಏನಿದೆ? ಮೆಸ್ಸೀಯನಿಗೆ ದೇವರ ಆಲಯದ ಕಡೆಗೆ ಹುರುಪು ಹೊತ್ತಿ ಉರಿಯುತ್ತೆ ಅಂತ ಬೈಬಲಲ್ಲಿ ಭವಿಷ್ಯವಾಣಿ ಇತ್ತು. (ಕೀರ್ತ. 69:9; ಯೋಹಾ. 2:14-17) ಯೇಸುಗೆ ನಿಜವಾಗ್ಲೂ ಅಂಥ ಹುರುಪಿತ್ತು. ಅದಕ್ಕೆ ಧರ್ಮಗುರುಗಳು ಬೋಧಿಸುತ್ತಿದ್ದ ತಪ್ಪಾದ ಬೋಧನೆಗಳನ್ನ ಮತ್ತು ಸಂಪ್ರದಾಯಗಳನ್ನ ಖಂಡಿಸುತ್ತಿದ್ದನು. ಉದಾಹರಣೆಗೆ, ಆತ್ಮ ಅಮರ, ಒಬ್ಬ ವ್ಯಕ್ತಿ ಸತ್ತಮೇಲೆ ಬೇರೆ ಕಡೆ ಹೋಗಿ ಜೀವಿಸ್ತಾನೆ ಅಂತ ಫರಿಸಾಯರು ಕಲಿಸ್ತಿದ್ರು. ಆದ್ರೆ ಸತ್ತವರು ನಿದ್ದೆ ಮಾಡ್ತಿದ್ದಾರೆ ಅಂದ್ರೆ, ಸತ್ತವರು ಜಗತ್ತಲ್ಲಿ ಬೇರೆಲ್ಲೂ ಬದುಕಲ್ಲ ಅಂತ ಯೇಸು ಕಲಿಸಿದನು. (ಯೋಹಾ. 11:11) ಸತ್ತುಹೋದ ಜನರಿಗೆ ದೇವರು ಮತ್ತೆ ಜೀವ ಕೊಡಲ್ಲ ಅಂತ ಸದ್ದುಕಾಯರು ನಂಬ್ತಿದ್ರು. ಆದ್ರೆ ತನ್ನ ಸ್ನೇಹಿತ ಲಾಜರ ತೀರಿಹೋದಾಗ ದೇವ್ರ ಸಹಾಯದಿಂದ ಅವನಿಗೆ ಯೇಸು ಮತ್ತೆ ಜೀವ ಕೊಟ್ಟನು. (ಯೋಹಾ. 11:43, 44; ಅ. ಕಾ. 23:8) ಎಲ್ಲ ವಿಷ್ಯವನ್ನೂ ದೇವರು ಮೊದಲೇ ನಿರ್ಧಾರ ಮಾಡಿರುತ್ತಾನೆ ಅಂತ ಫರಿಸಾಯರು ಕಲಿಸ್ತಿದ್ರು. ಆದ್ರೆ ದೇವರನ್ನ ಆರಾಧಿಸಬೇಕಾ ಬೇಡ್ವಾ ಅನ್ನೋ ಆಯ್ಕೆ ಮಾಡೋ ಸ್ವಾತಂತ್ರ್ಯ ಮನುಷ್ಯರಿಗಿದೆ ಅಂತ ಯೇಸು ಕಲಿಸಿದನು.—ಮತ್ತಾ. 11:28.

10. ನಾವು ಕಲಿಸೋ ವಿಷ್ಯಗಳು ತುಂಬ ಜನರಿಗೆ ಯಾಕೆ ಇಷ್ಟ ಆಗಲ್ಲ?

10 ಇವತ್ತೂ ಜನ ಹಾಗೇ ಇದ್ದಾರಾ? ಹೌದು, ಹಾಗೇ ಇದ್ದಾರೆ. ಧರ್ಮಗುರುಗಳು ಕಲಿಸೋ ವಿಷ್ಯ ತಪ್ಪಾಗಿವೆ ಅಂತ ನಾವು ಬೈಬಲಿಂದ ಜನರಿಗೆ ತೋರಿಸಿದಾಗ ತುಂಬ ಜನ ಅದನ್ನ ಕೇಳಿಸ್ಕೊಳ್ಳೋಕೆ ಇಷ್ಟಪಡಲ್ಲ. ಧರ್ಮಗುರುಗಳು ತಮ್ಮ ಹಿಂಬಾಲಕರಿಗೆ ದೇವರು ಕೆಟ್ಟವರನ್ನ ನರಕದಲ್ಲಿ ಹಾಕಿ ಶಿಕ್ಷಿಸ್ತಾನೆ ಅಂತ ಬೋಧಿಸ್ತಾರೆ. ಇಂಥ ಬೋಧನೆಗಳನ್ನ ಕಲಿಸಿದ್ರೆ ಜನ ತಮ್ಮ ಹದ್ದುಬಸ್ತಲ್ಲಿ ಇರ್ತಾರೆ ಅನ್ನೋದು ಧರ್ಮಗುರುಗಳ ಲೆಕ್ಕಾಚಾರ. ಆದ್ರೆ ಯೆಹೋವನ ಆರಾಧಕರು ಆ ತರ ಅಲ್ಲ. ಯೆಹೋವ ಪ್ರೀತಿಯ ದೇವರು ಅಂತ ಅವರಿಗೆ ಗೊತ್ತು. ಇಂಥ ಬೋಧನೆಗಳೆಲ್ಲ ಸುಳ್ಳು ಅಂತ ಜನರಿಗೆ ಅರ್ಥಮಾಡಿಸ್ತಾರೆ. ಆತ್ಮ ಅಮರ ಅಂತನೂ ಧರ್ಮಗುರುಗಳು ಕಲಿಸ್ತಾರೆ. ಆದ್ರೆ ಒಬ್ಬ ವ್ಯಕ್ತಿ ಸತ್ತಮೇಲೆ ಅವನ ಆತ್ಮ ಬದುಕೋದಾದ್ರೆ, ಅವನಿಗೆ ಜೀವ ಕೊಟ್ಟು ಮತ್ತೆ ಎಬ್ಬಿಸೋ ಅಗತ್ಯ ಇಲ್ಲ. ಈ ಬೋಧನೆ ಸುಳ್ಳುಧರ್ಮದಿಂದ ಬಂದಿದೆ, ಬೈಬಲಲ್ಲಿ ಇಲ್ಲ ಅಂತ ನಾವು ಜನರಿಗೆ ಹೇಳ್ತೀವಿ. ದೇವರು ಮೊದಲೇ ವಿಧಿ ಅಥವಾ ಹಣೆಬರಹ ಬರೆದಿದ್ದಾನೆ ಅಂತ ತುಂಬ ಧರ್ಮಗಳು ಕಲಿಸುತ್ತೆ. ಆದ್ರೆ ನಾವು ದೇವರು ಮನುಷ್ಯನಿಗೆ ಆಯ್ಕೆ ಮಾಡೋ ಸ್ವಾತಂತ್ರ್ಯ ಕೊಟ್ಟಿದ್ದಾನೆ. ಮನುಷ್ಯ ದೇವರನ್ನ ಆರಾಧನೆ ಮಾಡೋ ಆಯ್ಕೆನೂ ಮಾಡಬಹುದು ಅಂತ ಕಲಿಸ್ತೀವಿ. ಇದನ್ನ ಕೇಳಿಸ್ಕೊಂಡಾಗ ಧರ್ಮಗುರುಗಳ ಪಿತ್ತ ನೆತ್ತಿಗೇರುತ್ತೆ.

11. ಯೋಹಾನ 8:45-47ರ ಪ್ರಕಾರ ದೇವರು ನಮ್ಮಿಂದ ಏನನ್ನ ಬಯಸ್ತಾನೆ?

11 ನಂಬಿಕೆ ಕಳ್ಕೊಳ್ಳದೇ ಇರೋಕೆ ಏನು ಮಾಡಬೇಕು? ನಾವು ಸತ್ಯನ ಪ್ರೀತಿಸೋದಾದ್ರೆ ದೇವರು ಹೇಳೋ ಮಾತನ್ನ ಒಪ್ಕೊಂಡು ಅದೇ ತರ ನಡೀತೀವಿ. (ಯೋಹಾನ 8:45-47 ಓದಿ.) ನಾವು ಸೈತಾನನ ತರ ಇರಲ್ಲ. ಅವನು ಸತ್ಯ ಬಿಟ್ಟು ಹೋದ. ಆದ್ರೆ ನಾವು ಬೈಬಲಲ್ಲಿ ಕಲೀತಾ ಇರೋ ವಿಷಯಗಳಿಗೆ ವಿರುದ್ಧವಾದ ಯಾವುದನ್ನೂ ಮಾಡಲ್ಲ. (ಯೋಹಾ. 8:44) “ಕೆಟ್ಟದನ್ನ ಅಸಹ್ಯವಾಗಿ ನೋಡಿ, ಒಳ್ಳೇದನ್ನ ಪ್ರೀತಿಸಿ” ಅಂತ ದೇವರು ಹೇಳಿದ್ದಾನೆ. ಯೇಸು ಅದನ್ನೇ ಮಾಡಿದನು. ನಾವೂ ಅದನ್ನೇ ಮಾಡೋಣ.—ರೋಮ. 12:9; ಇಬ್ರಿ. 1:9.

(3) ಯೇಸುಗೆ ಹಿಂಸೆ ಬಂತು

ಯೇಸು ಹಿಂಸಾಕಂಬದಲ್ಲಿ ತೀರಿಹೋಗಿದ್ದನ್ನ ನೋಡಿ ತುಂಬ ಜನ ಯೇಸುನ ನಂಬಲಿಲ್ಲ. ಇವತ್ತು ಕೂಡ ಇದೇ ಕಾರಣಗಳು ಜನರನ್ನ ತಡೆಯುತ್ತಿರಬಹುದು. (ಪ್ಯಾರ 12 ನೋಡಿ) *

12. ಯೆಹೂದ್ಯರಿಗೆ ಯೇಸುನೇ ಮೆಸ್ಸೀಯ ಅಂತ ನಂಬೋಕೆ ಯಾಕೆ ಕಷ್ಟ ಆಯ್ತು?

12 ಯೆಹೂದ್ಯರು ಯೇಸುನ ನಂಬದೇ ಇರೋಕೆ ಇನ್ನೊಂದು ಕಾರಣ ಏನಾಗಿತ್ತು? ಕಾರಣ ಏನಂತ ಪೌಲ ಹೀಗೆ ಹೇಳಿದ್ದಾನೆ: “ನಾವು ಕ್ರಿಸ್ತನು ಮರದ ಕಂಬದ ಮೇಲೆ ಸತ್ತ ಅಂತ ಸಾರ್ತಿವಿ. ಇದು ಯೆಹೂದ್ಯರಿಗೆ ಜೀರ್ಣ ಮಾಡ್ಕೊಳ್ಳೋಕೆ ಆಗದ ವಿಷ್ಯ.” (1 ಕೊರಿಂ. 1:23) ಯೇಸುನ ಕಂಬಕ್ಕೆ ಜಡಿದು ಕೊಂದದ್ರಿಂದ ಯೆಹೂದಿಗಳು ಅವನನ್ನ ಅಪರಾಧಿ ತರ, ಪಾಪಿ ತರ ನೋಡಿದ್ರು. ಅದಕ್ಕೆ ಅವರಿಗೆ ಯೇಸುನೇ ಮೆಸ್ಸೀಯ ಅಂತ ಒಪ್ಕೊಳ್ಳೋಕೆ ಕಷ್ಟ ಆಯ್ತು.—ಧರ್ಮೋ. 21:22, 23.

13. ಯೇಸುನ ನಂಬದಿದ್ದ ಯೆಹೂದ್ಯರು ಏನನ್ನ ಅರ್ಥ ಮಾಡ್ಕೊಬೇಕಿತ್ತು?

13 ಯೇಸುನ ನಂಬದಿದ್ದ ಯೆಹೂದ್ಯರು ಯೇಸು ನಿರಪರಾಧಿ, ಅವನ ಮೇಲೆ ಸುಳ್ಳಾರೋಪ ಹಾಕಲಾಗಿದೆ, ಅವನನ್ನ ಅನ್ಯಾಯವಾಗಿ ಹಿಂಸಿಸಲಾಗ್ತಿದೆ ಅನ್ನೋದನ್ನ ಅರ್ಥ ಮಾಡ್ಕೊಳ್ಳದೇ ಹೋದ್ರು. ಯೇಸುನ ವಿಚಾರಣೆ ಮಾಡೋರು ನ್ಯಾಯಕ್ಕೆ ಒಂಚೂರು ಬೆಲೆ ಕೊಡ್ಲಿಲ್ಲ. ಯೆಹೂದ್ಯರ ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಅವಸರವಸರವಾಗಿ ವಿಚಾರಣೆ ಮಾಡಿದ್ರು. ವಿಚಾರಣೆ ಮಾಡೋ ವಿಷ್ಯದಲ್ಲಿ ಅವರು ಕಾನೂನನ್ನ ಗಾಳಿಗೆ ತೂರಿದರು. (ಲೂಕ 22:54; ಯೋಹಾ. 18:24) ಯೇಸು ವಿರುದ್ಧ ಇರೋ ಆರೋಪಗಳನ್ನ, ಸಾಕ್ಷಿಗಳನ್ನ ವಿಚಾರಣೆ ಮಾಡೋವಾಗ ಆರೋಪ ಹಾಕಿದವರ ಪಕ್ಷ ವಹಿಸಿದ್ರು. ನ್ಯಾಯಾಧೀಶರೇ “ಯೇಸುನ ಸಾಯಿಸೋಕೆ ಆತನ ವಿರುದ್ಧ ಸುಳ್ಳು ಸಾಕ್ಷಿಗಾಗಿ ಹುಡುಕ್ತಿದ್ರು.” ಸುಳ್ಳುಸಾಕ್ಷಿ ಸಿಗದಿದ್ದಾಗ ಮುಖ್ಯ ಪುರೋಹಿತ ಯೇಸು ಬಾಯಿಂದಾನೇ ತಪ್ಪು ಬರಿಸಿ ಅವನನ್ನ ಸಿಕ್ಕಿಸಿಹಾಕೋಕೆ ಪ್ರಯತ್ನಿಸಿದ. ಇದೆಲ್ಲಾ ಕಾನೂನಿಗೆ ವಿರುದ್ಧವಾಗಿತ್ತು. (ಮತ್ತಾ. 26:59; ಮಾರ್ಕ 14:55-64) ಇವರ ಅನ್ಯಾಯ ಇಷ್ಟಕ್ಕೇ ನಿಲ್ಲಲಿಲ್ಲ. ಯೇಸು ಮರುಜೀವ ಪಡೆದು ಬಂದ ಮೇಲೂ ನ್ಯಾಯಾಧೀಶರು ಇನ್ನಷ್ಟು ಅನ್ಯಾಯ ಮಾಡಿದರು. ಯೇಸುವಿನ ಸಮಾಧಿ ಕಾಯ್ತಿದ್ದ ರೋಮನ್‌ “ಸೈನಿಕರಿಗೆ ಸಾಕಷ್ಟು ಬೆಳ್ಳಿ ನಾಣ್ಯ ಕೊಟ್ಟು” ಯೇಸುವಿನ ಸಮಾಧಿ ಖಾಲಿ ಆಗಿರೋದರ ಬಗ್ಗೆ ಸುಳ್ಳು ಕಥೆಗಳನ್ನು ಹಬ್ಬಿಸೋಕೆ ಹೇಳಿದ್ರು. —ಮತ್ತಾ. 28:11-15.

14. ಮೆಸ್ಸೀಯನ ಮರಣದ ಬಗ್ಗೆ ಭವಿಷ್ಯವಾಣಿ ಏನು ಹೇಳಿತ್ತು?

14 ಇದರ ಬಗ್ಗೆ ಬೈಬಲಲ್ಲಿ ಏನಿದೆ? ಮೆಸ್ಸೀಯನನ್ನ ಕೊಂದುಹಾಕ್ತಾರೆ ಅಂತ ತುಂಬ ಜನ ಅಂದ್ಕೊಂಡಿರಲಿಲ್ಲ. ಆದ್ರೆ ಭವಿಷ್ಯವಾಣಿ ಏನು ಹೇಳಿತ್ತು ನೋಡಿ. “ಅವನು ತನ್ನ ಪ್ರಾಣವನ್ನೇ ಧಾರೆಯೆರೆದು ಮರಣವನ್ನ ಅನುಭವಿಸಿದನು, ಅಪರಾಧಿಗಳಲ್ಲಿ ಒಬ್ಬನ ಹಾಗೆ ಅವನನ್ನೂ ಎಣಿಸಲಾಯ್ತು, ಅವನು ಅನೇಕರ ಪಾಪ ಹೊತ್ಕೊಂಡನು, ಅಪರಾಧಿಗಳಿಗಾಗಿ ಅವನು ಮಧ್ಯಸ್ತಿಕೆ ವಹಿಸಿದನು.” (ಯೆಶಾ. 53:12) ಯೆಹೂದ್ಯರು ಈ ಭವಿಷ್ಯವಾಣಿನ ಅರ್ಥ ಮಾಡಿಕೊಂಡಿದ್ದಿದ್ರೆ, ಯೇಸುನ ತಿರಸ್ಕರಿಸುತ್ತಾ ಇರಲಿಲ್ಲ.

15. ಜನರು ಯೆಹೋವನ ಸಾಕ್ಷಿಗಳನ್ನ ನಂಬದೆ ಇರೋಕೆ ಕಾರಣ ಏನು?

15 ಇವತ್ತೂ ಜನ ಹಾಗೇ ಇದ್ದಾರಾ? ಹೌದು, ಹಾಗೇ ಇದ್ದಾರೆ. ಯೇಸು ಕ್ರಿಸ್ತನ ವಿರುದ್ಧ ಸುಳ್ಳಾರೋಪ ಹಾಕಿ ಅನ್ಯಾಯವಾಗಿ ತೀರ್ಪು ಮಾಡಿದ ತರಾನೇ ಹಿಂದಿನಿಂದಲೂ ಯೆಹೋವನ ಸಾಕ್ಷಿಗಳ ಮೇಲೆ ಅನ್ಯಾಯ ನಡಿತಾ ಇದೆ. ಅದಕ್ಕೆ ಕೆಲವು ಉದಾಹರಣೆಗಳನ್ನ ನೋಡಿ. ಅಮೆರಿಕದಲ್ಲಿ 1930ರಿಂದ 1950ರ ಒಳಗೆ ಯೆಹೋವನ ಸಾಕ್ಷಿಗಳ ಆರಾಧನಾ ಸ್ವಾತಂತ್ರ್ಯಕ್ಕೆ ತಡೆ ಬಂತು. ಹಾಗಾಗಿ ಆ ಸಮಯದಲ್ಲಿ ಅನೇಕ ಕೇಸುಗಳು ನಡೀತು. ಆಗ ಕೆಲವು ನ್ಯಾಯಾಧೀಶರು ಭೇದಭಾವ ಮಾಡಿದ್ರು. ಯೆಹೋವನ ಸಾಕ್ಷಿಗಳ ವಿರುದ್ಧ ತೀರ್ಪು ಕೊಟ್ರು. ಕೆನಡಾದ ಕ್ವಿಬೆಕ್‌ನಲ್ಲಿ ಚರ್ಚ್‌ ಮತ್ತು ಸರ್ಕಾರ ಸೇರಿ ಯೆಹೋವನ ಸಾಕ್ಷಿಗಳ ಕೆಲಸಕ್ಕೆ ತಡೆ ತಂದ್ರು. ದೇವರ ಆಳ್ವಿಕೆ ಬಗ್ಗೆ ಜನರ ಹತ್ರ ಬರೀ ಮಾತಾಡಿದ್ದಕ್ಕೆ ಎಷ್ಟೋ ಪ್ರಚಾರಕರನ್ನ ಜೈಲಿಗೆ ಹಾಕಿದ್ರು. ಜರ್ಮನಿಯಲ್ಲಿ ನಾಜಿ಼ ಆಡಳಿತ ಇದ್ದಾಗ ತುಂಬಾ ಯುವ ಸಹೋದರರಿಗೆ ಸ್ವಲ್ಪನೂ ಕರುಣೆ ತೋರಿಸದೇ ಸರ್ಕಾರ ಮರಣ ಶಿಕ್ಷೆ ವಿಧಿಸಿತು. ಇತ್ತೀಚಿನ ವರ್ಷಗಳಲ್ಲಿ ರಷ್ಯಾದ ಸರ್ಕಾರ ಯೆಹೋವನ ಸಾಕ್ಷಿಗಳ ಸಾರೋ ಕೆಲಸದ ಮೇಲೆ ನಿಷೇಧ ತಂದಿದೆ. ಯೆಹೋವನ ಸಾಕ್ಷಿಗಳೆಲ್ಲಾ “ಉಗ್ರಗಾಮಿ ಚಟುವಟಿಕೆ ನಡೆಸ್ತಿದ್ದಾರೆ” ಅಂತ ತೀರ್ಪು ಮಾಡಿ ಅವರಲ್ಲಿ ತುಂಬ ಸಹೋದರ ಸಹೋದರಿಯರನ್ನ ಸರ್ಕಾರ ಜೈಲಿಗೆ ಹಾಕ್ತಿದೆ. ಅಷ್ಟೇ ಅಲ್ಲ, ರಷ್ಯನ್‌ ಭಾಷೆಯಲ್ಲಿರೋ ಪವಿತ್ರ ಗ್ರಂಥ ಹೊಸಲೋಕ ಭಾಷಾಂತರವನ್ನೂ ಅಲ್ಲಿ ಬ್ಯಾನ್‌ ಮಾಡಲಾಗಿದೆ. ಅದರಲ್ಲಿ ಯೆಹೋವ ಅನ್ನೋ ಹೆಸರಿರೋದ್ರಿಂದ ಅದನ್ನ “ಉಗ್ರಗಾಮಿಗಳ ಪುಸ್ತಕ” ಅಂತ ಹಣೆಪಟ್ಟಿ ಹಚ್ಚಲಾಗಿದೆ.

16. ಯೆಹೋವನ ಜನರ ಬಗ್ಗೆ ಸುಳ್ಳು ಕಥೆಗಳನ್ನ ಕೇಳಿಸ್ಕೊಂಡಾಗ ಅದನ್ನ ನಾವು ನಂಬಬಾರದು ಅನ್ನೋದಕ್ಕೆ 1 ಯೋಹಾನ 4:1 ಯಾವ ಕಾರಣ ಕೊಡುತ್ತೆ?

16 ನಂಬಿಕೆ ಕಳ್ಕೊಳ್ಳದೇ ಇರೋಕೆ ಏನು ಮಾಡಬೇಕು? ಒಂದು ವಿಷಯದ ಬಗ್ಗೆ ನಾವು ಮೊದಲು ಪೂರ್ತಿ ಸತ್ಯಾಂಶ ತಿಳ್ಕೊಬೇಕು. ಯೇಸು ಬೆಟ್ಟದ ಮೇಲೆ ಕೂತು ಭಾಷಣ ಕೊಡ್ತಿದ್ದಾಗ ತನ್ನ ಶಿಷ್ಯರ ಬಗ್ಗೆ “ಇಲ್ಲಸಲ್ಲದ ಸುಳ್ಳುಗಳನ್ನ” ಜನ ಹೇಳ್ತಾರೆ ಅಂತ ಮೊದ್ಲೇ ಹೇಳಿದ್ದನು. (ಮತ್ತಾ. 5:11) ಇಂಥ ಸುಳ್ಳುಗಳಿಗೆ ಸೈತಾನನೇ ಕಾರಣ. ಸತ್ಯವನ್ನ ಪ್ರೀತಿಸೋ ಜನರ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನ ಹಬ್ಬಿಸೋಕೆ ಅವನು ಜನರನ್ನ ಪ್ರೇರಿಸ್ತಾನೆ. (ಪ್ರಕ. 12:9, 10) ನಮ್ಮ ವಿರೋಧಗಳು ಹೇಳೋ ಇಂಥ ಸುಳ್ಳುಗಳನ್ನ ಕೇಳಿಸ್ಕೊಂಡಾಗ ನಾವು ತಲೆ ಕೆಡಿಸ್ಕೊಬಾರದು, ಭಯಪಡಬಾರದು ಮತ್ತು ನಂಬಿಕೆ ಕಳ್ಕೊಬಾರದು.1 ಯೋಹಾನ 4:1 ಓದಿ.

(4) ಯೇಸುಗೆ ದ್ರೋಹ ಮಾಡಿದ್ರು, ಬಿಟ್ಟುಹೋದ್ರು

ಯೇಸು ಯೂದ ದ್ರೋಹ ಬಗೆದಿದ್ದನ್ನ ನೋಡಿ ತುಂಬ ಜನ ಯೇಸುನ ನಂಬಲಿಲ್ಲ. ಇವತ್ತು ಕೂಡ ಇದೇ ಕಾರಣಗಳು ಜನರನ್ನ ತಡೆಯುತ್ತಿರಬಹುದು. (ಪ್ಯಾರ 17-18 ನೋಡಿ) *

17. ಯೇಸು ತೀರಿಹೋಗೋ ಮುಂಚೆ ನಡೆದ ಯಾವ ಘಟನೆಗಳು ಜನ ಅವನ ಮೇಲೆ ನಂಬಿಕೆ ಕಳ್ಕೊಳ್ಳುವಂತೆ ಮಾಡಿತು?

17 ಯೇಸು ತೀರಿ ಹೋಗೋ ಮುಂಚೆ ಅವನ ಒಬ್ಬ ಶಿಷ್ಯ ಅವನಿಗೆ ದ್ರೋಹ ಬಗೆದ. ಇನ್ನೊಬ್ಬ ಶಿಷ್ಯ, ಯೇಸು ಯಾರಂತನೇ ಗೊತ್ತಿಲ್ಲ ಅಂತ ಮೂರು ಸಲ ಹೇಳಿಬಿಟ್ಟ. ಉಳಿದ ಶಿಷ್ಯರೆಲ್ಲಾ ಅವನು ತೀರಿ ಹೋಗೋ ಹಿಂದಿನ ರಾತ್ರಿ ಅವನನ್ನ ಬಿಟ್ಟು ಓಡಿಹೋದ್ರು. (ಮತ್ತಾ. 26:14-16, 47, 56, 75) ಆಗ ಯೇಸುಗೆ ಆಶ್ಚರ್ಯ ಆಗ್ಲಿಲ್ಲ. ಯಾಕಂದ್ರೆ ಇದೆಲ್ಲಾ ಆಗುತ್ತೆ ಅಂತ ಅವನು ಮುಂಚೆನೇ ಭವಿಷ್ಯವಾಣಿ ಹೇಳಿದ್ದನು. (ಯೋಹಾ. 6:64; 13:21, 26, 38; 16:32) ಇದೆಲ್ಲ ನಡೆದಾಗ ಆತನ ಶಿಷ್ಯರಾಗೋದೇ ಬೇಡ ಅಂತ ಕೆಲವರು ಅಂದ್ಕೊಂಡಿರಬೇಕು. ‘ಯೇಸುವಿನ ಶಿಷ್ಯರೇ ಹೀಗೆ ಮಾಡಿದ್ದಾರೆ ಅಂದ್ಮೇಲೆ ಇಂಥವರ ಸಹವಾಸನೇ ಬೇಡಪ್ಪಾ’ ಅಂತ ಕೆಲವರು ತೀರ್ಮಾನ ಮಾಡಿರಬೇಕು.

18. ಯೇಸು ತೀರಿಹೋಗೋ ಮುಂಚೆ ಯಾವ್ಯಾವ ಭವಿಷ್ಯವಾಣಿಗಳು ನೆರವೇರಿದವು?

18 ಇದರ ಬಗ್ಗೆ ಬೈಬಲಲ್ಲಿ ಏನಿದೆ? ಯೇಸು ಭೂಮಿಗೆ ಬರೋಕೂ ನೂರಾರು ವರ್ಷಗಳ ಹಿಂದೆನೇ ಯೆಹೋವ ದೇವರು ಬೈಬಲಲ್ಲಿ 30 ಬೆಳ್ಳಿ ಶೆಕೆಲ್‌ಗೋಸ್ಕರ ಅಥವಾ ನಾಣ್ಯಗಳಿಗೋಸ್ಕರ ಮೆಸ್ಸೀಯನಿಗೆ ದ್ರೋಹ ಬಗೆಯಲಾಗುತ್ತೆ ಅಂತ ಬರೆಸಿದ್ದನು. (ಜೆಕ. 11:12, 13) ಯೇಸುವಿನ ಆಪ್ತ ಸ್ನೇಹಿತರಲ್ಲೇ ಒಬ್ಬ ಈ ತರ ದ್ರೋಹ ಮಾಡಲಿದ್ದನು. (ಕೀರ್ತ. 41:9) ಪ್ರವಾದಿ ಜೆಕರ್ಯ ಇನ್ನೊಂದು ಭವಿಷ್ಯವಾಣಿ ಬರೆದ: “ಕುರುಬನ ಮೇಲೆ ದಾಳಿ ಮಾಡಿ ಕುರಿಗಳು ಚದರಿಹೋಗೋ ತರ ಮಾಡು.” (ಜೆಕ. 13:7) ಈ ಭವಿಷ್ಯವಾಣಿಗಳೆಲ್ಲ ಯೇಸುವಿನ ವಿಷಯದಲ್ಲಿ ನೆರವೇರುತ್ತಾ ಇದ್ದಿದ್ದನ್ನ ನೋಡಿದಾಗ ಜನರಿಗೆ ಒಳ್ಳೆ ಮನಸ್ಸಿದ್ದಿದ್ರೆ ಅವರ ನಂಬಿಕೆ ಬಲವಾಗುತ್ತಿತ್ತೇ ಹೊರತು ಯೇಸು ಮೇಲೆ ಇರೋ ನಂಬಿಕೆ ಕಳಕೊಳ್ಳುತ್ತಿರಲಿಲ್ಲ.

19. ಒಳ್ಳೆ ಮನಸ್ಸಿರೋ ಜನರಿಗೆ ಏನು ಚೆನ್ನಾಗಿ ಗೊತ್ತು?

19 ಇವತ್ತೂ ಜನ ಹಾಗೇ ಇದ್ದಾರಾ? ಹೌದು, ಹಾಗೇ ಇದ್ದಾರೆ. ಇವತ್ತು ಹೆಚ್ಚಿನವರಿಗೆ ಪರಿಚಯ ಇರೋ ಸಾಕ್ಷಿಗಳೇ ಸತ್ಯ ಬಿಟ್ಟುಹೋಗಿದ್ದಾರೆ, ಧರ್ಮಭ್ರಷ್ಟರಾಗಿದ್ದಾರೆ, ಬೇರೆಯವರನ್ನ ದಾರಿತಪ್ಪಿಸುತ್ತಿದ್ದಾರೆ. ಅವರು ಯೆಹೋವನ ಸಾಕ್ಷಿಗಳ ಬಗ್ಗೆ ತಪ್ಪಾದ ವರದಿಗಳನ್ನ, ಸುಳ್ಳನ್ನ, ಸುಳ್ಳು ಕಥೆಯನ್ನ ನ್ಯೂಸ್‌ ಪೇಪರಲ್ಲಿ, ರೇಡಿಯೋನಲ್ಲಿ, ಟಿವಿಯಲ್ಲಿ, ಇಂಟರ್ನೆಟ್‌ನಲ್ಲಿ ಹಬ್ಬಿಸ್ತಿದ್ದಾರೆ. ಆದ್ರೆ ಒಳ್ಳೆ ಮನಸ್ಸಿರೋ ಜನ ಈ ಕಟ್ಟುಕತೆಗಳನ್ನ ನಂಬಲ್ಲ. ಯಾಕಂದ್ರೆ ಹೀಗಾಗುತ್ತೆ ಅಂತ ಬೈಬಲ್‌ ಮೊದಲೇ ತಿಳಿಸಿತ್ತು ಅಂತ ಅವರಿಗೆ ಚೆನ್ನಾಗಿ ಗೊತ್ತು.—ಮತ್ತಾ. 24:24; 2 ಪೇತ್ರ 2:18-22.

20. ಸತ್ಯ ಬಿಟ್ಟುಹೋದವರ ಮಾತು ಕೇಳಿ ನಾವು ದಾರಿ ತಪ್ಪಬಾರದು ಅಂದ್ರೆ ಏನು ಮಾಡ್ತಾ ಇರಬೇಕು? (2 ತಿಮೊತಿ 4:4, 5)

20 ನಂಬಿಕೆ ಕಳಕೊಳ್ಳದೆ ಇರೋಕೆ ನಾವು ಏನು ಮಾಡಬೇಕು? ತಪ್ಪದೇ ಬೈಬಲ್‌ ಓದಬೇಕು, ಯಾವಾಗ್ಲೂ ಪ್ರಾರ್ಥನೆ ಮಾಡಬೇಕು, ಯೆಹೋವ ನಮಗೆ ಕೊಟ್ಟಿರೋ ಕೆಲಸ ಮಾಡ್ತಾ ಬಿಝಿಯಾಗಿ ಇರಬೇಕು. ಆಗ ನಮ್ಮ ನಂಬಿಕೆ ಬಲ ಆಗುತ್ತೆ. (2 ತಿಮೊತಿ 4:4, 5 ಓದಿ.) ಅಷ್ಟೇ ಅಲ್ಲ, ಸಾಕ್ಷಿಗಳ ಬಗ್ಗೆ ತಪ್ಪಾದ ವರದಿ ಕೇಳಿಸ್ಕೊಂಡಾಗ ನಾವು ತಲೆಕೆಡಿಸಿಕೊಳ್ಳಲ್ಲ (ಯೆಶಾ. 28:16) ನಮಗೆ ಯೆಹೋವನ ಮೇಲೆ, ಬೈಬಲ್‌ ಮೇಲೆ, ನಮ್ಮ ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದ್ರೆ ಸತ್ಯ ಬಿಟ್ಟುಹೋದವರ ಮಾತನ್ನ ನಂಬಲ್ಲ.

21. ಇವತ್ತು ತುಂಬ ಜನ ಯಾವ ತೀರ್ಮಾನ ತಗೊಂಡಿದ್ದಾರೆ?

21 ಒಂದನೇ ಶತಮಾನದಲ್ಲಿ ತುಂಬ ಜನ ಯೇಸುನ ಮೆಸ್ಸೀಯ ಅಂತ ನಂಬಲಿಲ್ಲ ತಿರಸ್ಕರಿಸಿಬಿಟ್ರು. ಆದ್ರೆ ಇನ್ನೂ ತುಂಬ ಜನ ಯೇಸುನ ನಂಬಿದ್ರು. ಅವರಲ್ಲಿ ಯೆಹೂದಿ ಹಿರೀಸಭೆಯಲ್ಲಿ ಕಡಿಮೆಪಕ್ಷ ಒಬ್ಬ ಸದಸ್ಯ ಮತ್ತು ‘ಪುರೋಹಿತರಲ್ಲೂ ತುಂಬ ಜನ’ ಇದ್ರು. (ಅ. ಕಾ. 6:7; ಮತ್ತಾ. 27:57-60; ಮಾರ್ಕ 15:43) ಅದೇ ತರ ಇವತ್ತೂ ಲಕ್ಷಾಂತರ ಜನ ಯೇಸುವಿನ ಶಿಷ್ಯರಾಗೋಕೆ ತೀರ್ಮಾನ ಮಾಡಿದ್ದಾರೆ. ಯಾಕೆ? ಯಾಕಂದ್ರೆ ಬೈಬಲಲ್ಲಿರೋ ಸತ್ಯಗಳನ್ನ ಅವರು ತಿಳ್ಕೊಂಡಿದ್ದಾರೆ. ಆ ಸತ್ಯಗಳೆಲ್ಲ ಅವರಿಗೆ ತುಂಬ ಇಷ್ಟ ಆಗಿದೆ. ಹಾಗಾಗಿ “ನಿನ್ನ ನಿಯಮಗಳನ್ನ ಪ್ರೀತಿಸೋರಿಗೆ ಅಪಾರ ಶಾಂತಿ ಸಿಗುತ್ತೆ, ಯಾವುದೂ ಅವ್ರನ್ನ ಎಡವಿಸಲ್ಲ” ಅಂತ ಬೈಬಲ್‌ ಹೇಳಿರೋದು ಸೂಕ್ತವಾಗಿದೆ.—ಕೀರ್ತ. 119:165.

ಗೀತೆ 63 ಸದಾ ನಿಷ್ಠರು

^ ಪ್ಯಾರ. 5 ಯೇಸುವಿನ ಕಾಲದಲ್ಲಿ ಜನ ಯಾಕೆ ಅವನನ್ನ ನಂಬಲಿಲ್ಲ ಮತ್ತು ಇವತ್ತು ಯೆಹೋವನ ಸಾಕ್ಷಿಗಳು ಹೇಳೋ ಸಂದೇಶವನ್ನ ಜನ ಯಾಕೆ ಕೇಳಿಸ್ಕೊಳ್ಳಲ್ಲ ಅನ್ನೋದಕ್ಕಿರೋ ನಾಲ್ಕು ಕಾರಣಗಳನ್ನ ನಾವು ಹಿಂದಿನ ಲೇಖನದಲ್ಲಿ ಚರ್ಚಿಸಿದ್ವಿ. ಈ ಲೇಖನದಲ್ಲಿ ಅದಕ್ಕಿರೋ ಇನ್ನೂ ನಾಲ್ಕು ಕಾರಣಗಳನ್ನ ನೋಡ್ತೀವಿ. ಅಷ್ಟೇ ಅಲ್ಲ ಯೆಹೋವನನ್ನ ಪ್ರೀತಿಸುವವರು ಏನೇ ಆದ್ರೂ ಆತನ ಆರಾಧನೆಯನ್ನ ಯಾಕೆ ಬಿಟ್ಟುಬಿಡಲ್ಲ ಅಂತನೂ ನೋಡ್ತೀವಿ.

^ ಪ್ಯಾರ. 60 ಚಿತ್ರ ವಿವರಣೆ: ಯೇಸು ಮತ್ತಾಯ ಮತ್ತು ತೆರಿಗೆ ವಸೂಲಿಗಾರರ ಜೊತೆ ಊಟ ಮಾಡ್ತಿದ್ದಾನೆ.

^ ಪ್ಯಾರ. 62 ಚಿತ್ರ ವಿವರಣೆ: ಯೇಸು ದೇವಾಲಯದಿಂದ ವ್ಯಾಪಾರಿಗಳನ್ನ ಓಡಿಸ್ತಿದ್ದಾನೆ.

^ ಪ್ಯಾರ. 64 ಚಿತ್ರ ವಿವರಣೆ: ಯೇಸು ಹಿಂಸಾಕಂಬವನ್ನ ಹೊತ್ಕೊಂಡು ಹೋಗ್ತಿದ್ದಾನೆ.

^ ಪ್ಯಾರ. 66 ಚಿತ್ರ ವಿವರಣೆ: ಯೇಸು ಯೇಸುಗೆ ಯೂದ ಮುತ್ತು ಕೊಟ್ಟು ದ್ರೋಹ ಬಗೆಯುತ್ತಿದ್ದಾನೆ.